Friday, February 8, 2013

||ಶ್ರೀ ಗುರು ಚರಿತ್ರೆ - ಆರನೆಯ ಅಧ್ಯಾಯ||

"ಅಜ್ಞಾನ ತಿಮಿರವನ್ನು ಹೊಡೆದೋಡಿಸುವ ಗುರುಸತ್ತಮ, ಸಿದ್ಧಪುರುಷ, ಆರಂಭದಿಂದ ಗುರುಪೀಠವನ್ನು ಕುರಿತು ಹೇಳಿದೆ. ಈ ಪೀಠದಲ್ಲಿ ಅವತರಿಸಿದ ತ್ರಿಮೂರ್ತಿಸ್ವರೂಪನು ಭೂಮಿಯೆಲ್ಲವನ್ನೂ ಏಕೆ ಪರ್ಯಟನೆ ಮಾಡಿದನು? ವಿಶೇಷವಾಗಿ ಗೋಕರ್ಣಕ್ಷೇತ್ರವನ್ನು ಸೇರಿದ್ದೇಕೆ? ಪವಿತ್ರವಾದ ಅನೇಕ ತೀರ್ಥಪ್ರದೇಶಗಳಿದ್ದರೂ, ಅವೆಲ್ಲವನ್ನೂ ಬಿಟ್ಟು ಶ್ರೀಪಾದ ಶ್ರೀವಲ್ಲಭರು ಗೋಕರ್ಣ ಕ್ಷೇತ್ರವನ್ನೇಕೆ ಆರಿಸಿಕೊಂಡರು? ಎಂಬುದನ್ನು ವಿವರವಾಗಿ ತಿಳಿಸಿ." ಎಂದು ನಾಮಧಾರಕನು ವಿನಯವಾಗಿ ಕೇಳಿಕೊಂಡನು. 

ಅದಕ್ಕೆ ಸಿದ್ಧರು ಹೇಳಿದರು. "ನಾಮಧಾರಕ, ಆನಂದಕರವಾದ ಶ್ರೀ ಗುರುಚರಿತ್ರೆಯನ್ನು ಕೇಳು. ಅದನ್ನು ಹೇಳುವುದರಿಂದ ನನಗೂ ಸಹ ಆ ಸ್ವಾಮಿಯ ಲೀಲಾಸ್ಫೂರ್ತಿ ಲಾಭವು ದೊರೆಯುತ್ತದೆ. ಆ ಪ್ರಭುವು ತಾನೇ ತ್ರಿಮೂರ್ತಿಸ್ವರೂಪನಾದರೂ, ತೀರ್ಥಕ್ಷೇತ್ರಗಳ ಮಾಹಾತ್ಮ್ಯೆಯನ್ನು ಪ್ರಕಟಿಸುವುದಕ್ಕೆ ತೀರ್ಥಸ್ಥಳಗಳ ಪರ್ಯಟನೆ ಮಾಡಿದನು. ಭಕ್ತೋದ್ಧರಣಕ್ಕಾಗಿ, ವಿಶೇಷವಾಗಿ ಶಂಕರರೂಪದಲ್ಲಿ ಭಕ್ತರಿಗೆ ಉಪದೇಶನೀಡುತ್ತಾ, ಯಾತ್ರೆಮಾಡುತ್ತಾ ಗೋಕರ್ಣ ಕ್ಷೇತ್ರವನ್ನು ಸೇರಿದನು. ಗೋಕರ್ಣ ಮಹಿಮೆ ಲೋಕದಲ್ಲಿ ಸಾಟಿಯಿಲ್ಲದ್ದು. ಅದನ್ನು ಹೇಳುತ್ತೇನೆ. ಸಾವಧಾನಚಿತ್ತನಾಗಿ ಕೇಳು. 

ಗೋಕರ್ಣಕ್ಷೇತ್ರದಲ್ಲಿ ಬಹಳಜನ ಭಕ್ತರು ವರಗಳನ್ನು ಹೊಂದಿದವರಾದರು. ಅಲ್ಲಿ ಸದಾಶಿವನೇ ಸಾಕ್ಷಾತ್ತಾಗಿ ನೆಲಸಿದ್ದಾನಾಗಿ ಅದು ಬಹಳ ಅಪೂರ್ವವಾದ ಸ್ಥಳ. ಮಹಾಬಲೇಶ್ವರ ಲಿಂಗವು ಸ್ವಯಂಭುವಾದ ಶಿವನೇ! ಗಣಪತಿಯು ಶ್ರೀ ಮಹಾವಿಷ್ಣುವಿನ ಆಜ್ಞೆಯಂತೆ ಅದನ್ನು ಪ್ರತಿಷ್ಠಾಪಿಸಿದನು. ಆ ಮಹಾಬಲೇಶ್ವರನು ಸರ್ವಕಾಮದನು. ಪುಲಸ್ತ್ಯ ಬ್ರಹ್ಮನ ಮಗಳಾದ ಕೈಕಸಿ ಭಕ್ತಪರಾಯಣೆಯಾಗಿ ಸದಾ ಶಿವಪೂಜಾ ತತ್ಪರಳಾಗಿದ್ದಳು. ಶಿವಲಿಂಗಾರ್ಚನೆ ಮಾಡದೆ ಆಕೆ ಅನ್ನವನ್ನು ಮುಟ್ಟುತ್ತಿರಲಿಲ್ಲ. ಒಂದು ದಿನ ಅಕೆಗೆ ಶಿವಾರ್ಚನೆಗೆ ಶಿವಲಿಂಗವು ಸಿಕ್ಕಲಿಲ್ಲ. ತನ್ನ ದಿನನಿತ್ಯದ ವ್ರತ ಭಂಗವಾಗಬಾರದೆಂದು ಆಕೆ ಮೃತ್ತಿಕಾ ಲಿಂಗವನ್ನು ಮಾಡಿ ಏಕಾಗ್ರಮನಸ್ಕಳಾಗಿ, ಪರಮಭಕ್ತಿಯಿಂದ ಆ ಲಿಂಗವನ್ನು ಆರಾಧಿಸುತ್ತಿದ್ದಳು. ಆ ಸಮಯದಲ್ಲಿ ಆಕೆಯ ಮಗ ಲೋಕಕಂಟಕನಾದ ರಾವಣನು ತಾಯಿಯನ್ನು ಕಾಣಲು ಬಂದನು. ಅವನು ಅತಿಕೄರನಾದ ದಶಾನನನು. ಶಿವಲಿಂಗಾಪೂಜಾತತ್ಪರಳಾದ ತಾಯಿಯನ್ನು ಕಂಡು, ಪ್ರಣಾಮಮಾಡಿ, "ಅಮ್ಮಾ ನೀನು ಮಾಡುತ್ತಿರುವುದೇನು? ಸರ್ವಸಿದ್ಧಿಗಳು ನನ್ನ ಕೈವಶವಾಗಿರುವಾಗ ಈ ಮೃತ್ತಿಕಾಲಿಂಗವನ್ನು ಪೂಜಿಸುತ್ತಿರುವುದು ನನ್ನ ದೌರ್ಭಾಗ್ಯ. ಆದರೂ ಈ ಪೂಜೆಯಿಂದ ಬರುವ ಫಲವಾದರೂ ಏನು?" ಎಂದು ಕೇಳಿದನು. ಅದಕ್ಕೆ ಆಕೆ, "ತಂದೆ, ಈ ಪೂಜೆಯಿಂದ ಕೈಲಾಸಪದವಿ ದೊರೆಯುತ್ತದೆ." ಎಂದಳು. ಅದಕ್ಕೆ ರಾವಣನು " ನಿನ್ನ ಪ್ರಯಾಸವೆಲ್ಲ ವ್ಯರ್ಥ. ಕ್ಷಣ ಮಾತ್ರದಲ್ಲಿ ನಿನಗೆ ಕೈಲಾಸವನ್ನೇ ತಂದುಕೊಡುತ್ತೇನೆ. ಲಂಕಾಪುರಿಯಲ್ಲೇ ಶಿವ-ಪಾರ್ವತಿ ಸಹಿತವಾದ ಕೈಲಾಸವನ್ನು ಪ್ರತಿಷ್ಠಾಪಿಸುತ್ತೇನೆ. ನನ್ನ ಮಾತು ಸುಳ್ಳಲ್ಲ. ಶೀಘ್ರದಲ್ಲೇ ನೀನು ದಿನವೂ ಇಲ್ಲೇ ಶಿವನ ಪೂಜೆ ಮಾಡಿಕೊಳ್ಳಬಹುದು. ಈ ಮೃತ್ತಿಕಾಲಿಂಗವೇಕೆ?" ಎಂದು ಹೇಳಿ ಅಲ್ಲಿಂದ ಹೊರಟನು. 

ಅತಿವೇಗದಿಂದ ರಾವಣನು ಕೈಲಾಸವನ್ನು ಸೇರಿ ತನ್ನ ಇಪ್ಪತ್ತು ಕೈಗಳಿಂದ ಆ ಧವಳಗಿರಿಯನ್ನು ಎತ್ತಲುಪಕ್ರಮಿಸಿದನು. ಆ ಮಹಾಬಲನು ಕೈಲಾಸವನ್ನು ಸಡಲಿಸಿ, ಗಿರಿಯ ಕೆಳಗೆ ತನ್ನ ಹತ್ತು ತಲೆಗಳನ್ನೂ ಇಟ್ಟು, ಕೈಗಳನ್ನು ತೊಡೆಯಮೇಲೆ ಊರಿ, ಗಿರಿಯನ್ನು ಎತ್ತುತ್ತಿರಲು, ಅವನ ಆ ಪ್ರಯತ್ನದಿಂದ ಕ್ಷಣಕಾಲದಲ್ಲಿ ಸಪ್ತ ಪಾತಾಳಗಳೂ ಕಂಪಿಸಿಹೋದವು. ಶೇಷನು ಚಕಿತನಾದನು. ಅಕಸ್ಮಾತ್ತಾಗಿ ಉಂಟಾದ ಚಲನದಿಂದ ಆದಿಕೂರ್ಮಕ್ಕೆ ಸಂದೇಹವುಂಟಾಯಿತು. ದೇವಗಣಗಳೆಲ್ಲಾ ಭಯಭೀತರಾದರು. ಅಮರಾವತಿ ಅಲ್ಲಾಡಿಹೋಯಿತು. ಸಪ್ತ ಊರ್ಧ್ವಲೋಕಗಳೂ, ಗಿರಿಕಾನನಗಳಿಂದ ಕೂಡಿದ ಭೂಮಂಡಲವೂ, ಮೇರು ಪರ್ವತಗಳೂ, ಪ್ರಳಯ ಬಂದಿತೇನೋ ಎಂದು ಭೀತಗೊಂಡವು. ಕೈಲಾಸದಲ್ಲಿ ಶಿವಗಣಗಳು ಭಯಪೀಡಿತರಾದರು. ಭಯಕಂಪಿತಳಾದ ಪಾರ್ವತಿ ಶಂಕರನಿಗೆ ಶರಣಾಗಿ, ಅವನನ್ನು ಆಲಂಗಿಸಿ, "ಕೈಲಾಸವು ಬಿದ್ದುಹೋಗುತ್ತಿದೆಯೇನೋ ಎನ್ನಿಸುತ್ತಿದೆ. ಆಕಸ್ಮಿಕವಾಗಿ ಸಭಾಗೃಹಗಳೆಲ್ಲವೂ ಕಂಪಿಸುತ್ತಿರುವುದಕ್ಕೆ ಕಾರಣವೇನು? ಸರ್ವವೂ ಅಲ್ಲಾಡಿಹೋಗುತ್ತಿರುವಾಗ ನೀವು ಮಾತ್ರ ನಿಶ್ಚಲರಾಗಿ ಹೇಗೆ ಕೂತಿದ್ದೀರಿ? ಇದಕ್ಕೆ ಏನೂ ಪ್ರತಿಕ್ರಿಯೆ ಮಾಡುವುದಿಲ್ಲವೇ?" ಎಂದು ಅವನ ಪಾದಗಳನ್ನು ಹಿಡಿದಳು.

ಶಂಕರನು ಆಕೆಯನ್ನು ನೋಡಿ, "ಗಿರಿಜಾ, ನನ್ನ ಭಕ್ತ ರಾವಣನ ಕ್ರೀಡೆಯಿದು. ಚಿಂತಿಸಬೇಕಾದ ಅವಶ್ಯಕತೆಯಿಲ್ಲ." ಎಂದು ಹೇಳಲು, ಪಾರ್ವತಿ, "ಹೇ ಪ್ರಭು, ಸುರಗಣಗಳನ್ನು ರಕ್ಷಿಸಿ." ಎಂದು ಮೊರೆಯಿಟ್ಟಳು. ಶಂಕರನು, ತನ್ನ ಎಡಕೈಯಿಂದ, ರಾವಣನೆತ್ತುತ್ತಿದ್ದ ಕೈಲಾಸವನ್ನು ಒತ್ತಿಹಿಡಿದನು. ಕೈಲಾಸದ ಕೆಳಗಿದ್ದ ರಾವಣನು ಆರ್ತನಾಗಿ, "ಶರಣಾಗತ ರಕ್ಷಕ, ಪಿನಾಕಪಾಣಿ, ಶರಣು ಬಂದಿದ್ದೇನೆ. ಶರಣಾಗತನಾದವನ ಸಾವು ನಿನಗೆ ಸಮ್ಮತವೇ?" ಎಂದು ಸ್ತುತಿಪೂರ್ವಕವಾಗಿ ಬೇಡಿಕೊಳ್ಳಲು, ಭಕ್ತವತ್ಸಲನಾದ ಶಂಕರನು, ಅಧೋಗತನಾಗಿದ್ದ ಆ ರಾವಣನನ್ನು ದಯಾಹೃದಯನಾಗಿ ಬಿಡುಗಡೆ ಮಾಡಿದನು. ಹಾಗೆ ಬಿಡುಗಡೆ ಹೊಂದಿದ ರಾವಣ, ಸುಸ್ವರದಿಂದ, ರಾಗಯುಕ್ತವಾಗಿ, ಶಂಕರನನ್ನು ಕುರಿತು ಗಾನಮಾಡಿದನು. ಅವನ ಭಕ್ತಿಗಾನಕ್ಕೆ ಪ್ರಸನ್ನನಾದ ಶಿವನು, ತನ್ನ ನಿಜರೂಪದಿಂದ ಆ ರಾಕ್ಷಸನಿಗೆ ಪ್ರತ್ಯಕ್ಷನಾಗಿ, "ನಿನ್ನ ಗಾನಕ್ಕೆ ನಾನು ಪ್ರಸನ್ನನಾಗಿದ್ದೇನೆ. ನಿನಗೆ ಬೇಕಾದ ವರವನ್ನು ಕೇಳಿಕೊ. ಕೊಡುತ್ತೇನೆ." ಎಂದನು. ಅದಕ್ಕೆ ರಾವಣನು, "ಸ್ವಾಮಿ, ಲಕ್ಷ್ಮಿ ನನ್ನ ಮನೆಯಲ್ಲಿ ದಾಸಿಯಾಗಿರುವಾಗ ನಾನು ನಿನ್ನನ್ನು ಪ್ರಾರ್ಥಿಸಿಕೊಳ್ಳುವುದಾದರೂ ಏನಿದೆ? ಅಷ್ಟಸಿದ್ಧಿಗಳು ನನ್ನ ಅಪ್ಪಣೆಗಾಗಿ ಕಾಯುತ್ತಾ ನಿಂತಿದ್ದಾರೆ. ನವ ನಿಧಿಗಳು ನನ್ನ ಮನೆಯಲ್ಲಿ ಬಿದ್ದಿವೆ. ಹೇ ಸದಾಶಿವ, ಚತುರಾನನು ನನ್ನ ವಶವರ್ತಿಯಾಗಿದ್ದಾನೆ. ಮೂವ್ವತ್ತು ಕೋಟಿ ಬೃಂದಾರಕರೂ ನನ್ನ ಸೇವಕರೇ ಅಲ್ಲವೆ? ಆಶ್ರಯವನ್ನೇ ನಾಶಮಾಡುವ ವಹ್ನಿ ನನ್ನಲ್ಲಿ ವಸ್ತ್ರಕ್ಷಾಳನ ಮಾಡಲು ನಿಯುಕ್ತನಾಗಿದ್ದಾನೆ. ಯಮರಾಜನೂ ನನ್ನ ಮಾತಿನಂತೆಯೇ ತನ್ನ ಕಾರ್ಯವನ್ನು ನಿರ್ವಹಿಸುತ್ತಾನೆ. ನನ್ನ ಸೋದರ ಕುಂಭಕರ್ಣ. ನನ್ನ ಕುಮಾರ ಇಂದ್ರನನ್ನೇ ಗೆದ್ದವನು. ನನ್ನ ನಿವಾಸ ಸುರರಿಗೆ ದುರ್ಗಮವಾದ ಅಂಬುಧಿಯಲ್ಲಿದೆ. ಕಾಮಧೇನು ನನ್ನ ಮನೆಯಲ್ಲಿ ನೆಲೆಗೊಂಡಿದೆ. ಸಹಸ್ರ ಕೋಟಿ ವರ್ಷಗಳ ಆಯುಸ್ಸುಳ್ಳ ನನ್ನಂತಹವನು ಇನ್ನಾರಿದ್ದಾರೆ? ಈಶ್ವರ ನಿನಗೆ ಇದೆಲ್ಲವೂ ತಿಳಿದೇ ಇದೆ. ಕೊಡುವುದಾದರೆ ನಿನ್ನ ಕೈಲಾಸವನ್ನು ಕೊಡು. ನನ್ನ ತಾಯಿ ನಿತ್ಯವೂ ನಿನ್ನನ್ನು ಪೂಜಿಸುವ ವ್ರತವನ್ನು ಮಾಡುತ್ತಿದ್ದಾಳೆ. ಹೇ, ದಾತಾ, ನನ್ನ ಮನೋರಥವನ್ನು ನೆರವೇರಿಸು." ಎಂದನು. 

ಅದಕ್ಕೆ ಶಿವನು, "ಅಯ್ಯಾ, ಕೈಲಾಸದಿಂದ ನಿನಗೆ ಅಗಬೇಕಾದ್ದೇನು? ದುರ್ಲಭವಾದ ನನ್ನ ಆತ್ಮಲಿಂಗವನ್ನೇ ಕೊಡುತ್ತೇನೆ. ನನ್ನ ಪ್ರಾಣಲಿಂಗಾರ್ಚನೆಯಿಂದ ನಿನ್ನ ಯಾವುದೇ ಮನೋವಾಂಛನೆಗಳೂ ತಕ್ಷಣವೇ ಪೂರಯಿಸಲ್ಪಡುತ್ತವೆ. ರುದ್ರಾಭಿಷೇಕಪೂರ್ವಕವಾಗಿ ತ್ರಿಸಂಧ್ಯೆಗಳಲ್ಲೂ ನನ್ನ ಪೂಜೆಮಾಡಬೇಕು. ಷಡಕ್ಷರ ಮಂತ್ರದಿಂದ ಅಷ್ಟೋತ್ತರ ಜಪ ಮಾಡಬೇಕು. ಹೀಗೆ ಮೂರು ವರ್ಷಗಳು ಪೂಜೆಮಾಡಿದರೆ ಸರ್ವಕಾಮಗಳೂ ನೆರವೇರಿ, ನನ್ನ ಸ್ವರೂಪವನ್ನೇ ಪಡೆಯುತ್ತೀಯೆ. ಈ ಪ್ರಾಣಲಿಂಗಸನ್ನಿಧಿಯಲ್ಲಿರುವವನಿಗೆ ಮೃತ್ಯುಭಯವಿರುವುದಿಲ್ಲ. ಆತ್ಮಲಿಂಗ ದರ್ಶನದಿಂದಲೇ ಸರ್ವ ದೋಷಗಳೂ ನಿವಾರಣೆಯಾಗುವುವು. ಇದನ್ನು ತೆಗೆದುಕೋ. ಆದರೆ ಲಂಕೆಯನ್ನು ಸೇರುವವರೆಗೂ ಇದನ್ನು ಭೂಮಿಯಮೇಲೆ ಇಡಬಾರದು. ಮೂರು ವರ್ಷಗಳು ನಾನು ಹೇಳಿದ ರೀತಿಯಲ್ಲಿ ತಪ್ಪದೇ ಪೂಜಿಸುವುದರಿಂದ ನೀನೇ ಈಶ್ವರನಾಗುತ್ತೀಯೆ. ನಿನ್ನ ಪುರವೇ ಕೈಲಾಸವಾಗುತ್ತದೆ." ಎಂದು ಹೇಳಿ, ಅ ಪರಮಶಿವನು ತನ್ನ ಆತ್ಮಲಿಂಗವನ್ನು ಕೊಟ್ಟು ಅನುಗ್ರಹಿಸಿದನು. ರಾವಣನು ಆ ಲಿಂಗವನ್ನು ಪಡೆದು, ಶಂಕರನಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ, ಲಂಕಾಗಮನೋದ್ಯುಕ್ತನಾದನು.

ಈ ಸಂಗತಿಯನ್ನೆಲ್ಲಾ ತಿಳಿದ ನಾರದ ಮಹರ್ಷಿ ಇದೆಲ್ಲವೂ ಅಸಮಂಜಸವೆಂದರಿತು, ತಕ್ಷಣವೇ ದೇವೇಂದ್ರನ ಬಳಿಗೆ ಹೋಗಿ, ದೇವೇಂದ್ರನನ್ನು ಕಂಡು, "ದೇವರಾಜ, ಇದೇನು ಸುಮ್ಮನೇ ಕುಳಿತಿದ್ದೀಯೆ? ನಿನ್ನ ಅಮರತ್ವ ಸಂಪದಗಳನ್ನೆಲ್ಲಾ ರಾವಣನು ಅಪಹರಿಸಿಕೊಂಡು ಹೋದನು. ಪರಮೇಶ್ವರನ ಪ್ರಾಣಲಿಂಗವನ್ನು ಪಡೆದು, ಲಂಕೇಶ್ವರನು ಚಿರಾಯುವಾಗುವುದೇ ಅಲ್ಲದೆ, ಪರಮಶಿವನಿಗೆ ಸಮಾನನಾಗುತ್ತಾನೆ. ಮೂರುವರ್ಷಗಳ ಆತ್ಮಲಿಂಗಪೂಜೆಯಿಂದ ನನ್ನ ಸಮಾನನೇ ಆಗಬಲ್ಲೆ ಎಂದು ಶಂಕರನು ರಾವಣನನ್ನು ಅನುಗ್ರಹಿಸಿದನು. ಅಷ್ಟೇಅಲ್ಲ. ಲಂಕೆಯೇ ಕೈಲಾಸವಾಗುತ್ತದೆ ಎಂದೂ ಹೇಳಿದ್ದಾನೆ. ರಾವಣನಿಗೆ ಮೃತ್ಯುಭಯವಿರುವುದಿಲ್ಲವಂತೆ! ಹೀಗೆ ಶಂಭುವರಲಬ್ಧನಾಗಿ ರಾವಣನು ಲಂಕೆಗೆ ಹೊರಟಿದ್ದಾನೆ. ಹೀಗಾದರೆ ಲಂಕೆಯಲ್ಲಿ ನೀವೆಲ್ಲರೂ ರಾವಣನ ಸೇವೆಯಲ್ಲಿ ಸದಾ ನಿರತರಾಗಿರಬೇಕಾದದ್ದೇ! ರಂಭೆ ಊರ್ವಶಿಯೇ ಮುಂತಾದ ಅಪ್ಸರಸೆಯರೂ ಅವನ ಸೇವೆಮಾಡಿಕೊಂಡಿರಬೇಕಾದದ್ದೇ!" ಎಂದು ಹೇಳಿದನು.

ನಾರದನ ಮಾತುಗಳನು ಕೇಳಿ ಇಂದ್ರನೊಡನೆ ದೇವತೆಗಳೂ ನಡುಗಿಹೋದರು. ಇಂದ್ರನು ನಾರದನಿಗೆ ನಮಸ್ಕರಿಸಿ "ಈಗ ಏನು ಮಾಡಬೇಕು?" ಎಂದು ಪ್ರಶ್ನಿಸಿದನು. ಅದಕ್ಕೆ ನಾರದ, "ಬ್ರಹ್ಮನಿಗೆ ಶರಣಾಗು. ಆತನು ಏನಾದರೂ ಉಪಾಯವನ್ನು ಸೂಚಿಸುತ್ತಾನೆ. ಆತನೇ ಸೃಷ್ಟಿಕರ್ತನಲ್ಲವೇ?" ಎಂದನು. ನಾರದನ ಸಲಹೆಯಂತೆ ನಾರದನೊಡನೆ, ದೇವತೆಗಳನ್ನು ಹಿಂದಿಟ್ಟುಕೊಂಡು, ತಕ್ಷಣವೇ ಬ್ರಹ್ಮನ ಬಳಿಗೆ ಹೋಗಿ, ನಾರದನು ಹೇಳಿದ ವಿಷಯವನ್ನೆಲ್ಲಾ, ಬಿನ್ನವಿಸಿಕೊಂಡನು. ಬ್ರಹ್ಮ, "ತಕ್ಷಣವೇ ನೀನು ವೈಕುಂಠಕ್ಕೆ ಹೋಗಿ ದೈತ್ಯಾರಿಯನ್ನು ಕಾಣು. ಅವನು ಏನಾದರೂ ಉಪಾಯವನ್ನು ಮಾಡಿಯೇ ಮಾಡುತ್ತಾನೆ. ತಡಮಾಡಬೇಡ." ಎಂದು ಹೇಳಿ, ತಾನೇ ದೇವೇಂದ್ರನ ಜೊತೆಯಲ್ಲಿ ಹೊರಟು, ಮಹಾವಿಷ್ಣುವನ್ನು ಸೇರಿ, ತಮಗೆ ಬಂದಿರುವ ಆಪತ್ತನ್ನು ವಿವರಿಸಿ, "ಹೇನಾರಾಯಣ, ತಕ್ಷಣವೇ ಇದಕ್ಕೇನಾದರೂ ಪ್ರತೀಕಾರ ಮಾಡಬೇಕು. ಇಲ್ಲದಿದ್ದರೆ ಆ ಮಹಾ ಸಂಕಟ ನಮ್ಮೆಲ್ಲರಿಗೂ ತಟ್ಟುತ್ತದೆ. ಮುವ್ವತ್ತುಮೂರು ಕೋಟಿ ದೇವತೆಗಳೂ ರಾವಣನ ಬಂಧನದಲ್ಲಿರಬೇಕಾಗುತ್ತದೆ. ಅವರನ್ನು ಬಿಡಿಸಲು ನೀನು ಭೂಮಿಯಲ್ಲಿ ಮತ್ತೆ ಅವತರಿಸಬೇಕಾಗುತ್ತದೆ. ಆ ದುಷ್ಟ, ಈಶ್ವರನ ಪ್ರಾಣಲಿಂಗವನ್ನು ತೆಗೆದುಕೊಂಡುಹೋಗಿದ್ದಾನೆ. ಪ್ರಾಣಲಿಂಗಾರ್ಚನೆಯಿಂದ ಅವನೇ ಈಶ್ವರನಾಗುತ್ತಾನೆ! ಹೇ ಶ್ರೀಹರಿ, ತಕ್ಷಣವೆ ಇದಕ್ಕೇನಾದರೂ ಪ್ರತಿಚರ್ಯೆ ನಡೆಸದಿದ್ದಲ್ಲಿ ಆ ರಾಕ್ಷಸನ ಸಂಹಾರ ದುಸ್ತರವಾಗುತ್ತದೆ." ಎಂದನು.

ಬ್ರಹ್ಮನ ಮಾತುಗಳನ್ನು ಕೇಳಿ ವಿಷ್ಣುವು ಕ್ರೋಧಗೊಂಡು, ತಕ್ಷಣವೇ ಕೈಲಾಸಕ್ಕೆ ಹೋಗಿ, ಶಂಕರನನ್ನು ಕಂಡು, "ಆ ದುರುಳನಿಗೆ ನಿನ್ನ ಪ್ರಾಣಲಿಂಗವನ್ನೇಕೆ ಕೊಟ್ಟೆ? ಅವನು ಬಲವಂತನಾಗಿ ದೇವತೆಗಳನ್ನೆಲ್ಲ ಬಂಧನದಲ್ಲಿಟ್ಟು ತನ್ನ ಸೇವಕರನ್ನಾಗಿ ಮಾಡಿಕೊಳ್ಳುತ್ತಾನೆ. ಅಲ್ಲಿಂದ ದೇವತೆಗಳಿಗೆ ಮುಕ್ತಿಯೆಲ್ಲಿಯದು? ಹಾವಿಗೆ ಹಾಲೆರೆದಂತೆ ಆ ದುರಾಚಾರಿಗೆ ನೀನು ವರವನ್ನು ಕೊಟ್ಟೆ. ಅವನು ಅಸುರತ್ವದಿಂದ ಅಮರತ್ವ ಪಡೆದು ದೇವತೆಗಳ ಸ್ವರ್ಗಭಾಗ್ಯವನ್ನು ಕಸಿದುಕೊಳ್ಳುತ್ತಾನೆ." ಎಂದನು. ಅದಕ್ಕೆ ಶಂಕರನು, "ಅಯ್ಯಾ, ವಿಷ್ಣು, ಅವನ ಭಕ್ತಿಗೆ ಮೋಹಗೊಂಡು ಸಂತುಷ್ಟನಾಗಿ ಅವನಿಗೆ ಪ್ರಾಣಲಿಂಗವನ್ನು ಕೊಟ್ಟೆ. ಅವನು ತನ್ನ ಶಿರಸ್ಸನ್ನು ಛೇದಿಸಿ, ವೀಣೆಯನ್ನು ಮಾಡಿ, ನನ್ನ ಸ್ತುತಿ ಮಾಡಿದನು. ಆ ಸುಸ್ವರ ಸ್ತೋತ್ರಗಾನವು ಬಹುಹಿತವಾಗಿ, ಸಾಮಗಾನದಂತೆ ಕಿವಿಗೆ ಮಂಜುಲವಾಗಿತ್ತು. ಅವನ ಗಾನದಿಂದ ಮೋಹಾವಿಷ್ಟನಾದ ನಾನು ಅವನು ಪಾರ್ವತಿಯನ್ನು ಕೇಳಿದ್ದರೆ ಅವಳನ್ನೇ ಕೊಟ್ಟುಬಿಡುತ್ತಿದ್ದೆ." ಎಂದನು. "ಹೇ ಉಮಾಕಾಂತ, ನೀನು ಹೀಗೆ ಇಂತಹ ದುರ್ಲಭವಾದ ವರಗಳನ್ನು ಯೋಚನೆಯಿಲ್ಲದೆ ಕೊಟ್ಟುಬಿಡುತ್ತೀಯೆ. ವರವನ್ನು ಪಡೆದವರು ಅದರಿಂದ ಮತ್ತರಾಗಿ, ಇನ್ನೂ ದುಷ್ಟರಾಗಿ, ದುರ್ದರ್ಷರಾಗಿ ದೇವ ಬ್ರಾಹ್ಮಣರನ್ನು ಪೀಡಿಸುತ್ತಾರೆ. ಅವರನ್ನು ಸಂಹರಿಸಲು ನಾನು ಮತ್ತೆ ಮತ್ತೆ ಅವತರಿಸಬೇಕಾಗುತ್ತದೆ. ನೀನು ಅ ರಾವಣನಿಗೆ ಪ್ರಾಣಲಿಂಗವನ್ನು ಕೊಟ್ಟು ಎಷ್ಟು ಹೊತ್ತಾಯಿತು? ಅವನು ಈ ವೇಳೆಗೆ ಲಂಕೆಯನ್ನು ಸೇರಿರುವ ಸಾಧ್ಯತೆಯಿದೆಯೇ?" ಎಂದು ಕೇಳಿದನು. ಅದಕ್ಕೆ ಶಂಕರನು, "ಪಂಚನಾಡಿಮಿಡಿತ ಸಮಯವಾಗಿದೆ." ಎಂದುತ್ತರಕೊಟ್ಟನು.

ಶಿವನ ಮಾತನ್ನು ಕೇಳಿದ ವಿಷ್ಣುವು, ತಕ್ಷಣವೇ ಸೂರ್ಯನಿಗೆ ಭೂಲೋಕದಿಂದ ಮರೆಯಾಗುವಂತೆ ಕಟ್ಟುಮಾಡಿ, ನಾರದನನ್ನು ಕರೆದು, "ದೇವರ್ಷಿ, ಇನ್ನೂ ಅವನು ತನ್ನ ಮನೆಗೆ ಸೇರಿರುವುದಿಲ್ಲವೆಂದುಕೊಂಡಿದ್ದೇನೆ. ತಕ್ಷಣವೇ ನೀನು ಮನೋವೇಗದಲ್ಲಿ ಹೊರಟು ರಾವಣನು ಪ್ರಾಣಲಿಂಗವನ್ನು ಲಂಕೆಗೆ ಸೇರಿಸದಂತೆ ಮಾರ್ಗದಲ್ಲಿ ಅವನ ಗಮನಕ್ಕೆ ತಡೆಯನ್ನುಂಟುಮಾಡು. ಸೂರ್ಯನು ಅದೃಶ್ಯನಾಗಿರುವುದರಿಂದ ರಾವಣನು ತನ್ನ ಸಂಧ್ಯಾವಂದನೆಯನ್ನು ಪ್ರಾರಂಭಿಸಬೇಕು. ಆ ಸಮಯದಲ್ಲಿ ಅವನಿಗೆ ವಿಘ್ನವುಂಟಾಗುವಂತೆ ಮಾಡಬೇಕು." ಎಂದನು. ಅದನ್ನು ಕೇಳಿದ ನಾರದ, ವಿಷ್ಣುವಿನ ಆಜ್ಞೆಯಂತೆ, ಮನೋವೇಗದಲ್ಲಿ ಹೊರಟು ಲಂಕಾಪುರಿಯ ಮಾರ್ಗದಲ್ಲಿ ಹೊರಟಿದ್ದ ರಾವಣನನ್ನು ಸೇರಿಕೊಂಡನು.

ವಿಷ್ಣುವು ವಿಘ್ನನಾಯಕನನ್ನು ಸ್ಮರಿಸಲು, ಗಣಪತಿ ಅಲ್ಲಿಗೆ ಬಂದನು. ಅವನನ್ನು ಕಂಡು ವಿಷ್ಣುವು, "ಗಣಪತಿ, ರಾವಣನು ನಿನ್ನನ್ನು ಉಪೇಕ್ಷಿಸಿದ್ದಾನೆ. ನಿನಗೆ ಸುರರೂ ನಮಸ್ಕರಿಸುತ್ತಾರೆ. ಅವರ ಮನೋರಥಗಳು ನೆರವೇರುತ್ತವೆ. ಆದರೆ ನಿನಗೆ ನಿವೇದನೆಮಾಡದೆಯೇ ರಾವಣನು ಶಿವನನ್ನು ಮೋಹಗೊಳ್ಳುವಂತೆ ಮಾಡಿ ಅವನ ಪ್ರಾಣಲಿಂಗವನ್ನು ಅಪಹರಿಸಿದ್ದಾನೆ. ಅದರಿಂದ ನೀನು ರಾವಣನನ್ನು ವಂಚಿಸಬೇಕು. ಬಾಲವೇಷಧಾರಿಯಾಗಿ ಹೋಗಿ ಅವನನ್ನು ಯಾವುದಾದರೊಂದು ರೀತಿಯಲ್ಲಿ ವಂಚಿಸು. ಆ ರಾವಣನು ಸೂರ್ಯಾಸ್ತಸಮಯದಲ್ಲಿ ತಪ್ಪದೇ ಸಂಧ್ಯೆಯನ್ನು ಆಚರಿಸುತ್ತಾನೆ. ನಾರದಮುನಿ ಈಗಾಗಲೇ ಅವನನ್ನು ಕಾಣಲು ಹೊರಟಿದ್ದಾನೆ. ಶಿವಾಜ್ಞೆಯಂತೆ ರಾವಣನು ಪ್ರಾಣಲಿಂಗವನ್ನು ಯಾವುದೇ ಕಾರಣಕ್ಕೂ ನೆಲದಮೇಲೆ ಇಡುವುದಿಲ್ಲ. ನೀನು ಬಾಲಕನಾಗಿ ಅಲ್ಲಿಗೆ ಹೋಗಿ, ಅವನ ಶಿಷ್ಯನಂತೆ ನಟಿಸಿ, ಅವನ ವಿಶ್ವಾಸ ಗಳಿಸಿ, ಸಂಧ್ಯಾಸಮಯದಲ್ಲಿ ನಿನ್ನಲ್ಲಿ ವಿಶ್ವಾಸವಿಟ್ಟು ಅವನು ಪ್ರಾಣಲಿಂಗವನ್ನು ನಿನ್ನ ಕೈಲಿಡುವಂತೆ ಮಾಡು. ಅವನು ಲಿಂಗವನ್ನು ನಿನ್ನ ಕೈಲಿಟ್ಟ ತಕ್ಷಣವೇ ಅದನ್ನು ಭೂಮಿಯ ಮೇಲೆ ಇಟ್ಟುಬಿಡು. ಅದು ಅಲ್ಲಿಯೇ ಶಾಶ್ವತವಾಗಿ ನೆಲೆಯಾಗುವುದು. ಇದೆಲ್ಲವನ್ನೂ ಕಪಟದಿಂದಲೇ ಸಾಧಿಸಬೇಕು. ದುಷ್ಟರನ್ನು, ಕಪಟಿಗಳನ್ನು ಕಪಟದಿಂದಲೇ ಜಯಿಸಬೇಕಲ್ಲವೇ?" ಎಂದು ಆದೇಶ ಕೊಟ್ಟನು. ವಿಘ್ನೇಶ್ವರನು, "ನನಗೆ ಮಾರ್ಗದಲ್ಲಿ ತಿನ್ನಲು ಏನಾದರೂ ಬೇಕು." ಏಂದು ಕೇಳಲು, ವಿಷ್ಣುವು ಐದು ಕಡುಬು, ಹಾಲು, ತೆಂಗಿನಕಾಯಿ, ಕಬ್ಬಿನ ಜಲ್ಲೆಗಳು, ದಾಳಿಂಬರೆ ಹಣ್ಣು, ತುಪ್ಪದ ಲಾಡು, ಬೇಯಿಸಿದ ಕಳ್ಳೆಕಾಯಿ, ಸಕ್ಕರೆ ಮುಂತಾದವುಗಳನ್ನು ಭಕ್ಷ್ಯಗಳಾಗಿ ವಿನಾಯಕನಿಗೆ ಕೊಟ್ಟು, ತಕ್ಷಣವೇ ಹೊರಡುವಂತೆ ಹೇಳಲು, ಅವನು ವಟುವೇಷಧಾರಿಯಾಗಿ ಮಾರ್ಗದಲ್ಲಿ ತನಗೆ ಕೊಟ್ಟಿದ್ದ ಭಕ್ಷ್ಯಗಳನ್ನು ತಿನ್ನುತ್ತಾ ಹೊರಟನು. 

ಅಷ್ಟರಲ್ಲಿ ನಾರದನು ಮನೋವೇಗದಲ್ಲಿ ಹೊರಟು ರಾವಣನಿಗಿಂತ ಮುಂದೆ ಹೋಗಿ, ಹಿಂತಿರುಗಿ ಬರುತ್ತಾ ಅವನಿಗೆ ಎದುರಾದನು. ದಶಮುಖನು ನಾರದನನ್ನು ಕಂಡು, "ಬ್ರಹ್ಮರ್ಷಿ, ಕೈಲಾಸಪರ್ವತಕ್ಕೆ ಹೋಗಿದ್ದೆ. ಪರಮಶಿವನು ನನ್ನಲ್ಲಿ ಪ್ರಸನ್ನನಾಗಿ ನನಗೆ ತನ್ನ ಆತ್ಮಲಿಂಗವನ್ನೇ ಪ್ರಸಾದಿಸಿದನು. ಅದು ನನಗೆ ಕಾಮಪ್ರದವು. ಅದರ ಜೊತೆಗೆ ನನಗೆ ಇನ್ನೂ ವರಗಳನ್ನು ಕೊಟ್ಟನು." ಎಂದು ಹೇಳಿದನು. ಕಲಹಪ್ರಿಯನಾದ ನಾರದ, "ಲಂಕೇಶ್ವರ, ನಿನಗೆ ದೈವದೊಲುಮೆ ಆಯಿತು. ನೀನು ಸಂಪಾದಿಸಿದ ಆತ್ಮಲಿಂಗವು ಮೃತ್ಯುಂಜಯವಾದದ್ದು. ಅದನ್ನು ಇದಕ್ಕೆ ಮುಂಚೆ ನಾನು ನೋಡಿದ್ದೆ. ಅದನ್ನು ತೋರಿಸು. ಅದನ್ನು ಪರೀಕ್ಷೆಮಾಡಿ ಅದರ ಲಕ್ಷಣಗಳನ್ನು ನಿನಗೆ ವಿವರಿಸುತ್ತೇನೆ." ಎಂದನು. ನಾರದನ ಮಾತುಗಳಿಂದ ಸಂದೇಹಗೊಂಡ ರಾವಣನು, ಅದಕ್ಕೆ ಮುಚ್ಚಿದ್ದ ಬಟ್ಟೆಯನ್ನು ಪಕ್ಕಕ್ಕೆ ಸರಿಸಿ, ದೂರದಿಂದಲೇ ಅದನ್ನು ನಾರದನಿಗೆ ತೋರಿಸಿದನು. ರಾವಣನ ಸಂದೇಹವನ್ನು ಅರಿತ ನಾರದ, ಮೆಲ್ಲಗೆ ರಾವಣನನ್ನು ಕುಳಿತುಕೊಳ್ಳುವಂತೆ ಮಾಡಿ, "ಲಿಂಗಮಹಿಮೆಯನ್ನು ಹೇಳುತ್ತೇನೆ. ಕಿವಿಗೊಟ್ಟು ಕೇಳು." ಎಂದು ಹೀಗೆ ಹೇಳಿದನು. 

ಪ್ರಾಣಲಿಂಗ ಮಹಿಮೆ 

ಒಂದಾನೊಂದುಸಲ ಕಾಲಾಗ್ನಿ ಸದೃಶವಾದ ಮೃಗವೊಂದು ಮಹಿಷಮುಖವುಳ್ಳ ಮೃಗಗಳನ್ನೆಲ್ಲಾ ಭಕ್ಷಿಸುತ್ತಾ ವನದಲ್ಲಿ ಓಡಾಡುತ್ತಿತ್ತು. ಬ್ರಹ್ಮ, ವಿಷ್ಣು, ಮಹೇಶ್ವರರು ಆ ವನದಲ್ಲಿ, ಅದೇಸಮಯದಲ್ಲಿ ಬೇಟೆಗೆಂದು ಬಂದಿದ್ದರು. ತ್ರಿಮೂರ್ತಿಗಳು ಆ ಮೃಗವನ್ನು ಬೇಟೆಯಾಡಿ ವಧಿಸಿ, ಅದರ ಮಾಂಸವನ್ನು ಭಕ್ಷಿಸಿದರು. ಆ ಮೃಗಕ್ಕೆ ಮೂರು ಕೊಂಬುಗಳಿದ್ದವು. ಆ ಕೊಂಬುಗಳ ಮೂಲದಲ್ಲಿ ಮೂರು ಲಿಂಗಗಳಿದ್ದವು. ಆ ಲಿಂಗಗಳು ಪ್ರಾಣಲಿಂಗಗಳು. ಒಬ್ಬೊಬ್ಬರು ಒಂದೊಂದರ ಹಾಗೆ, ಆ ಮೂವರೂ, ಆ ಲಿಂಗಗಳನ್ನು ಹಂಚಿಕೊಂಡರು. ರಾವಣ, ಆ ಲಿಂಗಗಳ ಮಹಿಮೆಯನ್ನು ಕೇಳು. ಮೂರು ವರ್ಷಗಳು ಏಕಾಗ್ರಚಿತ್ತನಾಗಿ ಆ ಲಿಂಗವನ್ನು ಪೂಜಿಸಿದವನಿಗೆ ಶಿವನು ವರದಾತನಾಗುತ್ತಾನೆ. ಆ ಲಿಂಗವಿರುವೆಡೆಯಲ್ಲೇ ಕೈಲಾಸವಿರುವುದು ಎಂಬುದರಲ್ಲಿ ಸಂದೇಹವೇ ಇಲ್ಲ. ತ್ರಿಮೂರ್ತಿಗಳು ಆ ಲಿಂಗ ಧಾರಣದಿಂದಲೇ ಮಹಿಮಾನ್ವಿತರಾಗಿದ್ದಾರೆ. ಅಷ್ಟೇಅಲ್ಲ. ಅದರ ಮಹಿಮೆ ಇನ್ನೂ ಬಹಳವಿದೆ. ಸಾವಧಾನಚಿತ್ತನಾಗಿ ಕೇಳು." ಎಂದು ನಾರದ ಹೇಳುತ್ತಿರುವಾಗ, ರಾವಣನು, "ನನಗೆ ಈಗ ಅದನ್ನು ಕೇಳಲು ವೇಳೆಯಿಲ್ಲ. ತ್ವರೆಯಾಗಿ ನಾನು ಲಂಕೆಯನ್ನು ಸೇರಿಕೊಳ್ಳಬೇಕು." ಎಂದನು. ಅದಕ್ಕೆ ನಾರದ, "ಅಯ್ಯಾ, ಬ್ರಾಹ್ಮಣರಿಗೆ ಸಂಧ್ಯಾವಂದನೆಯ ಕಾಲ ಸಮೀಪಿಸಿದೆ. ನೀನು ವೇದಪಾರಂಗತನು. ಸತ್ಕರ್ಮಗಳ ವೇಳಾತಿಕ್ರಮವನ್ನು ಹೇಗೆ ಮಾಡಬಲ್ಲೆ? ಮಾರ್ಗ ಮಧ್ಯದಲ್ಲಿ ಸಂಧ್ಯಾಕಾಲ ಬಂದರೆ ಸಂಧ್ಯಾವಂದನೆ ಆಚರಿಸದಿದ್ದರೆ ಕರ್ತವ್ಯಲೋಪವಾಗುತ್ತದೆಯಲ್ಲವೇ? ನಾನು ಸಂಧ್ಯೆಯನ್ನು ಆಚರಿಸಲೆಂದೇ ಇಲ್ಲಿ ನಿಂತೆ." ಎಂದು ಹೇಳಿ, ನಾರದನು ಅವನನ್ನು ನದೀ ತೀರಕ್ಕೆ ಕರೆದುಕೊಂಡು ಹೋದನು.

ಬ್ರಹ್ಮಚಾರಿಯ ವೇಷ ಧರಿಸಿದ್ದ ಗಣೇಶ, ಅಲ್ಲಿ ಸಮಿತ್ತುಗಳನ್ನು ಕತ್ತರಿಸುತ್ತಾ ನಿಂತಿದ್ದನು. "ಸಂಧ್ಯೆಯನ್ನು ಆಚರಿಸದಿದ್ದರೆ ವ್ರತಭಂಗವಾಗುವುದು. ಆದರೆ ಸಂಧ್ಯೆ ಆಚರಿಸುವ ಕಾಲದಲ್ಲಿ ಲಿಂಗವನ್ನು ಕೈಲಿ ಹಿಡಿದಿರಲು ಸಾಧ್ಯವಿಲ್ಲ. ಈ ಲಿಂಗವನ್ನು ಭೂಮಿಯಮೇಲೆ ಇಡುವಹಾಗಿಲ್ಲ. ಹಾಗಾದರೆ ಸಂಧ್ಯಾಚರಣೆಯ ಕಾಲದಲ್ಲಿ ಏನು ಮಾಡಬೇಕು?" ಎಂಬ ತೊಳಲಾಟದಲ್ಲಿ ಸಿಕ್ಕಿಬಿದ್ದಿದ್ದ ರಾವಣ, ಸಮೀಪದಲ್ಲಿ ಸಮಿತ್ತುಗಳನ್ನು ಕತ್ತರಿಸುತ್ತಾ ನಿಂತಿದ್ದ, ಕಪಟ ಬ್ರಹ್ಮಚಾರಿಯಾದ ಗಣಪತಿಯನ್ನು ಕಂಡನು. ಅವನನ್ನು ಕಂಡ ರಾವಣ, "ಈ ಬಾಲಬ್ರಹ್ಮಚಾರಿ ಸುಂದರನು. ಅವನನ್ನು ಕೇಳಿ ನೋಡೋಣ. ಅವನು ವಟುವಲ್ಲವೇ? ವಿಶ್ವಾಸಘಾತುಕನಾಗಿರಲಾರ. ಅವನ ಕೈಯಲ್ಲಿ ಈ ಲಿಂಗವನ್ನಿಟ್ಟು ಸಂಧ್ಯೆಯನ್ನು ಆಚರಿಸುತ್ತೇನೆ." ಎಂದು ಯೋಚಿಸಿ, ಆ ವಟುವಿನ ಸಮೀಪಕ್ಕೆ ಹೋದನು.

ಆ ಕಪಟ ಬ್ರಹ್ಮಚಾರಿ, ರಾವಣನನ್ನು ಕಂಡು ಹೆದರಿದವನಂತೆ ನಟಿಸುತ್ತಾ, ಅಲ್ಲಿಂದ ಓಡಿಹೋಗಲು ಯತ್ನಿಸಿದನು. ರಾವಣ ಅವನಿಗೆ ಅಭಯ ಕೊಟ್ಟು, "ನೀನಾರು? ನಿನ್ನ ತಂದೆತಾಯಿಗಳು ಯಾರು? ನಿನ್ನ ವಂಶ ಯಾವುದು?" ಎಂದು ಪ್ರಶ್ನೆ ಮಾಡಿದನು. ಆ ಬ್ರಹ್ಮಚಾರಿ, "ನೀನೇಕೆ ಇವನ್ನೆಲ್ಲಾ ಕೇಳುತ್ತಿದ್ದೀಯೆ ಎಂಬುದನ್ನು ಮೊದಲು ಹೇಳು. ನನ್ನ ತಾಯಿತಂದೆಗಳು ಯಾರಾದರೆ ನಿನಗೇನು? ಅವರೇನು ನಿನಗೆ ಋಣಗ್ರಸ್ತರೇ?" ಎಂದು ಮರು ಪ್ರಶ್ನೆ ಮಾಡಿದನು. ರಾವಣನು, ನಗುತ್ತಾ, ಸ್ನೇಹದಿಂದ ಅವನ ಕೈಹಿಡಿದು, " ಮಗು, ನಿನ್ನಲ್ಲಿ ಪ್ರೇಮದಿಂದ ಕೇಳುತ್ತಿದ್ದೇನೆ. ಹೇಳುವುದಿಲ್ಲವೇ?" ಎಂದು ಲಾಲಿಸಿ ಕೇಳಲು, ಆ ವಟುವು, "ನನ್ನ ತಂದೆ ಒಬ್ಬ ಮಹಾತ್ಮ. ರುದ್ರಾಕ್ಷ ಭೂಷಿತ, ಭಸ್ಮಲಿಪ್ತ ದೇಹದಿಂದ ಕೂಡಿದ ಜಟಾಧಾರಿ. ಅವನನ್ನು ಶಂಕರ ಎನ್ನುತ್ತಾರೆ. ಭಿಕ್ಷೆಗಾಗಿ ಅವನು ಹಗಲುರಾತ್ರಿ ಭೂಮಿಯಮೇಲೆ ಸಂಚರಿಸುತ್ತಿರುತ್ತಾನೆ. ನನ್ನ ತಾಯಿ ಉಮಾದೇವಿಯೆಂದು ಪ್ರಸಿದ್ಧಳಾದವಳು. ನಾನೊಬ್ಬ ಸಣ್ಣ ಬಾಲಕ. ನಿನ್ನನ್ನು ಕಂಡರೆ ನನಗೆ ಭಯವಾಗುತ್ತಿದೆ. ನನಗೆ ಧೈರ್ಯವಿಲ್ಲ. ನನ್ನ ಕೈಬಿಡು. ನಾನು ಹೋಗಬೇಕು." ಎಂದು ನುಡಿದ ಗಣೇಶನ ಮಾತುಗಳನ್ನು ಕೇಳಿ ರಾವಣ, ಅವನೊಬ್ಬ ದರಿದ್ರ ಬ್ರಾಹ್ಮಣನ ಮಗ ಎಂದುಕೊಂಡು, "ನಿನ್ನ ತಂದೆ ದರಿದ್ರನಲ್ಲವೆ? ನಿನಗೇನು ಸುಖವಿದೆ? ನನ್ನ ಲಂಕಾಪುರಿ ಚಿನ್ನದಿಂದ ಮಾಡಲ್ಪಟ್ಟಿದೆ. ಅಲ್ಲಿ ನೀನು ದೇವತಾರ್ಚನೆ ಮಾಡಿಕೊಂಡಿರು. ನೀನು ಕೇಳಿದ್ದೆಲ್ಲವನ್ನೂ ಕೊಡುತ್ತೇನೆ. ನನ್ನೊಡನೆ ಬಂದು ಅಲ್ಲಿ ಸುಖವಾಗಿರಬಹುದು." ಎಂದನು. ಅದಕ್ಕೆ ವಿಘ್ನೇಶ್ವರ, "ಅಯ್ಯಯ್ಯೋ! ನಾನು ಲಂಕೆಗೆ ಬರುವುದಿಲ್ಲ. ಅಲ್ಲಿ ಮನುಷ್ಯ ಭಕ್ಷಕರಾದ ರಾಕ್ಷಸರಿದ್ದಾರೆ. ಅವರು ನನ್ನನ್ನು ತಿಂದುಹಾಕುತ್ತಾರೆ. ನನ್ನ ಕೈಬಿಡು. ನನಗೆ ಹಸಿವೆಯಾಗುತ್ತಿದೆ. ನಾನು ಮನೆಗೆ ಹೋಗುತ್ತೇನೆ." ಎಂದು ಅಳುಮುಖ ಮಾಡಿಕೊಂಡು ಹೇಳಿದನು. ಆದರೂ, ರಾವಣ ಅವನನ್ನು ಹೇಗೋ ಮಾಡಿ ಒಪ್ಪಿಸಿ, "ನಾನು ಸಂಧ್ಯೆಯಾಚರಿಸಿ ಬರುತ್ತೇನೆ. ಅಲ್ಲಿಯವರೆಗೂ ಈ ಲಿಂಗವನ್ನು ಕೈಯಲ್ಲಿ ಹಿಡಿದುಕೊಂಡಿರು." ಎಂದು ಪ್ರಾರ್ಥಿಸಿಕೊಂಡನು. ಅದಕ್ಕೆ ಆ ವಟು, "ನಾನು ಸಣ್ಣವನು. ಈ ಭಾರವಾದ ಲಿಂಗವನ್ನು ನನಗೆ ಹೊರುವ ಶಕ್ತಿಯಿಲ್ಲ. ಈ ಲಿಂಗವನ್ನು ನಾನು ಹಿಡಿಯುವುದಿಲ್ಲ. ನನ್ನ ಕೈಬಿಡು. ನಾನು ಹೋಗುತ್ತೇನೆ." ಎಂದು ಮತ್ತೆ ಮತ್ತೆ ಹೇಳಿದನು. ರಾವಣನು ಇನ್ನೊಮ್ಮೆ ಮತ್ತೊಮ್ಮೆ ಆ ಕಪಟವಟುವನ್ನು ಪ್ರಾರ್ಥಿಸಿಕೊಂಡು, ಅವನ ಕೈಲಿ ಆ ಪ್ರಾಣಲಿಂಗವನ್ನಿಟ್ಟು, ಸಂಧ್ಯೆಯಾಚರಿಸಲು ಹೊರಟನು. ಆಗ ಮತ್ತೆ ಆ ವಟುವು, " ಅಯ್ಯಾ, ನನ್ನ ಕೈಲಿ ಇದನ್ನು ಹೊರಲು ಶಕ್ತಿಯಿರುವವರೆಗೂ ನಾನು ಇಟ್ಟುಕೊಂಡಿರುತ್ತೇನೆ. ನನ್ನ ಕೈಯಲ್ಲಿ ಇನ್ನು ಸಾಧ್ಯವಿಲ್ಲ ಎಂದಾದರೆ ನಿನ್ನನ್ನು ಮೂರು ಸಲ ಕರೆಯುತ್ತೇನೆ. ನೀನು ಅಷ್ಟರಲ್ಲಿ ಬರದಿದ್ದರೆ ಇದನ್ನು ನಾನು ಭೂಮಿಯ ಮೇಲೆ ಇಟ್ಟುಬಿಡುತ್ತೇನೆ." ಎಂದು ಎಚ್ಚರಿಕೆ ಹೇಳಿ ಆ ಪ್ರಾಣಲಿಂಗವನ್ನು ತೆಗೆದುಕೊಂಡು ಅದನ್ನು ಕೈಯಲ್ಲಿ ಹಿಡಿದು ನಿಂತನು. ಅದೇ ಸಮಯಕ್ಕೆ ದೇವತೆಗಳೆಲ್ಲರೂ ಆಕಾಶದಲ್ಲಿ ಮುಂದಾಗುವುದನ್ನು ನೋಡಲು ಬಂದು ನಿಂತರು. ಆ ವಟುವೇಷಧಾರಿ ಗಣಪತಿಯು, ರಾವಣನು ಅರ್ಘ್ಯ ಕೊಡುತ್ತಿರುವ ಸಮಯವನ್ನು ಕಾದುಕೊಂಡಿದ್ದು, ಆ ಸಮಯಕ್ಕೆ ಸರಿಯಾಗಿ, "ಇನ್ನು ಈ ಲಿಂಗವನ್ನು ನನ್ನ ಕೈಯಲ್ಲಿ ಹಿಡಿದುಕೊಂಡಿರಲು ಸಾಧ್ಯವಿಲ್ಲ. ಬೇಗ ಬಾ." ಎಂದು ರಾವಣನನ್ನು ಕರೆದನು. ರಾವಣನು ಕೈಸನ್ನೆಯಿಂದ ಅವನಿಗೆ "ಅರ್ಘ್ಯವನ್ನು ಮುಗಿಸಿ ಇನ್ನೊಂದು ಕ್ಷಣದಲ್ಲೇ ಬಂದು ಬಿಡುತ್ತೇನೆ. ಸ್ವಲ್ಪ ತಾಳು." ಎಂದು ಸೂಚಿಸಿದನು. ಇನ್ನೊಂದು ಕ್ಷಣದಲ್ಲಿ ಗಣಪತಿಯು, ಅವನನ್ನು ಮೂರುಸಲ ಕರೆದು, "ಭಾರ ಸಹಿಸಲಾಗುತ್ತಿಲ್ಲ. ಬೇಗ ಬಾ." ಎಂದು ಮತ್ತೆ ಕರೆದನು. ಮೂರುಸಲ ಹಾಗೆ ಕರೆದರೂ ರಾವಣ ಬರಲಿಲ್ಲವಾಗಿ, ಆಕಾಶದಲ್ಲಿ ದೇವತೆಗಳೆಲ್ಲರೂ ಸಾಕ್ಷಿಗಳಾಗಿ ನೋಡುತ್ತಿರುವಂತೆಯೇ, ವಿಘ್ನೇಶ್ವರ, ಮಹಾವಿಷ್ಣುವನ್ನು ಸ್ಮರಿಸಿಕೊಳ್ಳುತ್ತಾ, ಆ ಲಿಂಗವನ್ನು ಭೂಮಿಯಮೇಲೆ ಇಟ್ಟುಬಿಟ್ಟನು. ಅದನ್ನು ಕಂಡ ದೇವತೆಗಳೆಲ್ಲರೂ ಬಹಳ ಸಂತುಷ್ಟರಾಗಿ ಪುಷ್ಪವೃಷ್ಟಿ ಮಾಡಿದರು. ಅರ್ಘ್ಯಪ್ರದಾನ ಮುಗಿಸಿ ದಶಮುಖನು ತ್ವರೆಯಾಗಿ ಅಲ್ಲಿಗೆ ಬಂದು, ಆ ಬಾಲಕನು ಪ್ರಾಣಲಿಂಗವನ್ನು ಭೂಮಿಯಮೇಲೆ ಇಟ್ಟುಬಿಟ್ಟಿರುವುದನ್ನು ಕಂಡು ಕ್ರುದ್ಧನಾಗಿ, ಆ ಮಾಯಾ ಬಾಲಕನನ್ನು ಕುರಿತು, "ಹೇ ವಿಶ್ವಾಸಘಾತುಕ, ಡಾಂಭಿಕ, ಕಪಟಿ, ವಂಚಕ, ಮೂರ್ಖ. ಬುದ್ಧಿಪೂರ್ವಕವಾಗಿಯೇ ನೀನು ಈ ಲಿಂಗವನ್ನು ಭೂಮಿಯಮೇಲೆ ಇಟ್ಟಿದ್ದೀಯೆ." ಎಂದು ಬೈಯುತ್ತಾ, ಅವನನ್ನು ಹೊಡೆದನು. ಆ ವೇಷಧಾರಿ ಬಾಲಕ ಅಳುವವನಂತೆ ನಟಿಸುತ್ತಾ, "ನಾನು ನಿರಪರಾಧಿ. ಅಶಕ್ತ. ನನ್ನನ್ನು ಹೊಡೆದಿದ್ದೀಯೆ. ನಮ್ಮ ತಂದೆಗೆ ಹೇಳುತ್ತೇನೆ." ಎನ್ನುತ್ತಾ ಅಲ್ಲಿಂದ ಹೊರಟು ಹೋದನು.

ರಾವಣನು ಭೂಮಿಯಮೇಲಿದ್ದ ಆ ಲಿಂಗವನ್ನು ತನ್ನ ಕೈಗಳಿಂದ ಎತ್ತಲು ಪ್ರಯತ್ನಿಸಿದನು. ಆದರೆ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಪ್ರಯತ್ನ ಮಾಡಿದರೂ, ಅವನಿಗೆ ಆ ಲಿಂಗವನ್ನು ಕದಲಿಸಲಾಗಲಿಲ್ಲ. ಅವನ ಪ್ರಯತ್ನಗಳಿಂದ ಭೂಮಿ ಅಲ್ಲಾಡಿತೇ ಹೊರತು ಆ ಲಿಂಗ ಮಾತ್ರ ಸ್ವಲ್ಪವೂ ಅಲ್ಲಾಡಲಿಲ್ಲ. ರಾವಣ ಕ್ಷೀಣಬಲನಾಗಿ, ಲಿಂಗ ಮಹಾಬಲವಾಯಿತು. ಅದರಿಂದಲೇ ಆ ಲಿಂಗಕ್ಕೆ ಮಹಾಬಲೇಶ್ವರ ಎಂಬ ಹೆಸರಾಯಿತು. ಲಿಂಗವನ್ನು ರಾವಣ ಹಿಡಿದು ಅಲುಗಾಡಿಸುವಾಗ ಅದು ಗೋಕರ್ಣದ ಆಕಾರವನ್ನು ಪಡೆಯಿತು. ಅದರಿಂದ ಆ ಕ್ಷೇತ್ರಕ್ಕೆ ಗೋಕರ್ಣ ಎಂಬ ಹೆಸರು ಬಂತು. ಮುಂದೆ ಲಂಕಾಧೀಶ್ವರ ಅಲ್ಲಿಯೆ ತಪಸ್ಸು ಮಾಡಿ ವರಗಳನ್ನು ಪಡೆದನು. ಅಂದಿನಿಂದ ಸಕಲ ದೇವತೆಗಳಿಗೂ ಅದು ವಾಸಸ್ಥಾನವಾಯಿತು.

ಸ್ಕಾಂದ ಪುರಾಣದಲ್ಲಿ ಗೋಕರ್ಣ ಕ್ಷೇತ್ರ ಅದ್ಭುತ ಮಹಿಮೆಯುಳ್ಳದ್ದು ಎಂದು ಹೇಳಲ್ಪಟ್ಟಿದೆ. 

ಇಲ್ಲಿಗೆ ಆರನೆಯ ಅಧ್ಯಾಯ ಮುಗಿಯಿತು.


No comments:

Post a Comment