ಸಿದ್ಧಮುನಿಯು "ಪರಮೇಶ್ವರನೇ ತನ್ನ ಮಾನವ ಭಕ್ತರನ್ನು ಉದ್ಧರಿಸಲು ಅವತಾರ ಮಾಡುತ್ತಿರುತ್ತಾನೆ. ಭಗವಂತನು ನಾನಾರೂಪನು. ಅಂಬರೀಷನನ್ನು ರಕ್ಷಿಸಲು ದಶ ಅವತಾರಗಳನ್ನು ಧರಿಸಿದನು. ಮತ್ಸ್ಯ, ಕೂರ್ಮ, ನರಸಿಂಹಾವತಾರಗಳನ್ನು, ಕುಬ್ಜಯಾಚಕನಾಗಿ ವಾಮನಾವತಾರವನ್ನು, ವಿಪ್ರನಾದರೂ ಕ್ಷತ್ರಿಯಾಂತಕನಾದ ಪರಶುರಾಮಾವತಾರವನ್ನು, ದಶರಥಪುತ್ರನಾಗಿ, ರಾಜಭೂಷಣನಾಗಿ ರಾಮಾವತಾರವನ್ನು, ರಾಜನಾಗಿ ಜನಿಸಿದರೂ ಗೋಪಗೃಹದಲ್ಲಿ ಗೋರಕ್ಷಕನಾಗಿ ಕೃಷ್ಣಾವತಾರವನ್ನು, ವಸ್ತ್ರವಿಹೀನನಾಗಿ ಬುದ್ಧಧರ್ಮವನ್ನು ಪ್ರಸರಿಸಿದ ಬುದ್ಧಾವತಾರವನ್ನು ಧರಿಸಿದನು. ಮುಂದೆ ಯುಗಾಂತರದಲ್ಲಿ ಅಶ್ವವಾಹನ, ಮ್ಲೇಚ್ಛಹಂತಕನಾಗಿ ಕಲ್ಕ್ಯಾವತಾರವನ್ನು ಧರಿಸುತ್ತಾನೆ. ಇದೆಲ್ಲದರ ಜೊತೆಗೆ ಇನ್ನೂ ಅನೇಕ ವೇಷಗಳನ್ನು ಯುಗಯುಗಗಳಲ್ಲೂ ಧರಿಸಿ ಹೃಷೀಕೇಶನು ಸಾಧುಜನ ರಕ್ಷಣೆ, ದುಷ್ಟಜನ ಸಂಹಾರಕ್ಕಾಗಿ ಅವತರಿಸುತ್ತಲೇ ಇರುತ್ತಾನೆ.
ದ್ವಾಪರಾಂತ್ಯದಲ್ಲಿ ಕಲಿವ್ಯಾಪ್ತಿಯಾಗಲು ವಿಪ್ರರು ಅಜ್ಞಾನದಿಂದ ತುಂಬಿ, ದುರಾಚಾರಿಗಳಾಗಿ, ಕಲಿದೋಷದೂಷಿತರಾಗಿರಲು, ಭೂತಲದಲ್ಲಿ ಭಕ್ತ ರಕ್ಷಣೆಗಾಗಿ ಗುರುನಾಥನವತರಿಸಿದನು. ಭಗೀರಥನು ಪಿತೃಜನೋದ್ಧಾರಕ್ಕಾಗಿ ಗಂಗೆಯನ್ನು ಭೂಮಿಗೆ ತಂದಹಾಗೆ, ವಿಪ್ರಸ್ತ್ರೀಯ ಭಕ್ತಿಯಿಂದ ದತ್ತಾವತಾರವಾಯಿತು. ಆಕೆಗೆ ದತ್ತಾತ್ತ್ರೇಯನು ಮಗನಾಗಿ ಜನಿಸಿದನು. ಅದೂ ಒಂದು ವಿಚಿತ್ರವೇ!
ಪೂರ್ವದೇಶದಲ್ಲಿ ಪೀಠಾಪುರ ಎಂಬ ಊರಿನಲ್ಲಿ ಕುಲೀನನಾದ ಬ್ರಾಹ್ಮಣನೊಬ್ಬನಿದ್ದನು. ಆಪಸ್ಥಂಭಶಾಖೀಯನಾದ ಅವನು ರಾಜು ಎಂಬ ನಾಮಾಂಕಿತದಿಂದ ತನ್ನ ಧರ್ಮಕರ್ಮಗಳನ್ನು ತಪ್ಪದೇ ಆಚರಿಸುತ್ತಿದ್ದನು. ಆತನ ಭಾರ್ಯೆ ಸುಮತಿ. ಸದಾಚಾರ ತತ್ಪರಳಾದ ಪತಿವ್ರತೆ. ಅತಿಥಿಅಭ್ಯಾಗತರನ್ನು ಪ್ರತಿದಿನವೂ ಸತ್ಪ್ರವರ್ತನೆಯಿಂದ ಅರ್ಚಿಸುತ್ತಾ, ಸುಶೀಲಗುಣಸಂಪನ್ನೆಯಾಗಿ, ಪತಿಸೇವಪರಾಯಣಳಾಗಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಳು.
ಹೀಗಿರುವಾಗ ಒಂದುದಿನ, ದತ್ತಾತ್ತ್ರೇಯಸ್ವಾಮಿ ಅತಿಥಿರೂಪದಲ್ಲಿ ಆ ಪತಿವ್ರತೆಯಾದ ಸುಮತಿಯ ಮನೆಗೆ ಬಂದನು. ಅಂದು ಅವರ ಮನೆಯಲ್ಲಿ ಪಿತೃಶ್ರಾದ್ಧ. ಪಿತೃಸ್ಥಾನೀಯನಾದ ವಿಪ್ರಭೋಜನಕ್ಕೆ ಮುಂಚೆಯೇ ಆ ಸತೀಮಣಿ ಅತಿಥಿ ರೂಪದಲ್ಲಿ ಬಂದಿದ್ದ ದತ್ತನಿಗೆ ಭಿಕ್ಷೆಯಿತ್ತಳು. ಭಕ್ತಪ್ರಿಯನಾದ ದತ್ತನು, ಅದರಿಂದ ಪ್ರಸನ್ನನಾಗಿ, ಆಕೆಗೆ ತ್ರಿಗುಣಾತ್ಮಕವಾದ ತನ್ನ ತಾರಕ ಸ್ವರೂಪವನ್ನು ತೋರಿಸಿದನು. ಅದರಿಂದ ಪುಳಕಿತಗೊಂಡ ಸುಮತಿಯು ವಿನಯ ವಿಧೇಯತೆಗಳಿಂದ ತುಂಬಿ ಭಕ್ತಿಯಿಂದ ದತ್ತನ ಪಾದಗಳಿಗೆ ನಮಸ್ಕರಿಸಿ ಅವನಲ್ಲಿ ಶರಣಾದಳು. ಆಕೆಯ ಚರ್ಯೆಯಿಂದ ಸಂಪ್ರೀತನಾದ ದತ್ತಾತ್ತ್ರೇಯಸ್ವಾಮಿ ಆಕೆಯನ್ನು ವರ ಕೇಳಿಕೊಳ್ಳುವಂತೆ ಅನುಜ್ಞೆ ಕೊಟ್ಟನು. ಆ ಬ್ರಾಹ್ಮಣ ಪತ್ನಿ ಮತ್ತೆ ದತ್ತನಿಗೆ ನಮಸ್ಕರಿಸಿ, ವಿನಮ್ರಳಾಗಿ, ಜಗದೀಶ್ವರನನ್ನು ಈ ರೀತಿ ಪ್ರಾರ್ಥಿಸಿದಳು. "ಹೇ ಜಗನ್ನಾಥ, ಅನಂತ, ನೀನೇ ವಿಶ್ವೇಶ್ವರ. ವಿಶ್ವಕರ್ತ. ಭವತಾರಕ. ನೀನು ನನ್ನಲ್ಲಿ ಪ್ರಸನ್ನನಾಗಿ ನನ್ನ ಅಭೀಷ್ಟವನ್ನು ನೆರವೇರಿಸು. ಹೇ ಕೃಪಾಳು, ಎಲ್ಲದರಲ್ಲೂ ನೀನೇ ಇದ್ದೀಯೆಂದು ಪುರಾಣಾದಿಗಳಲ್ಲಿ ಪ್ರಸಿದ್ಧವಾಗಿದೆ. ದಯಾಭ್ಧಿ, ಭಕ್ತವತ್ಸಲ, ನಿನ್ನ ಕೀರ್ತಿಯನ್ನು ಬಣ್ಣಿಸಲು ಯಾರಿಗೆ ಸಾಧ್ಯ? ನಿನ್ನ ಮಾತುಗಳು ಎಂದಿಗೂ ವೃಥಾ ಆಗುವುದಿಲ್ಲ. ಧೃವನಿಗೆ ಅಚಂಚಲ ಶಾಶ್ವತ ಪದವಿಯನ್ನು ಕೊಟ್ಟ ದೇವದೇವನು ನೀನು. ವಿಭೀಷಣನಿಗೆ ಆಚಂದ್ರಾರ್ಕವಾದ ರಾಜ್ಯವನ್ನು ದಯಪಾಲಿಸಿದವನು ನೀನು. ಭಕ್ತರನ್ನು ಕಾಪಾಡಲು ಸದಾ ಭೂಮಿಯಲ್ಲಿ ಅವತರಿಸುತ್ತಿರುತ್ತೀಯೆ. ಚತುರ್ದಶ ಭುವನಗಳಲ್ಲೂ ನಿನ್ನ ಬಿರುದಾವಳಿಗಳು ಪ್ರಸರಿಸಿವೆ. ಹೇ ದೇವರಾಜ, ಕೃಪಾನಿಧಿ, ವಾಸನೆಗಳೆಂಬ ಕಾನನವನ್ನು ದಹಿಸುವವನು ನೀನು. ಹೇ ನಾರಾಯಣ, ಅನಾಥನಾಥ, ನನಗೆ ವರವನ್ನು ಕೊಡುವುದಾದರೆ ನನ್ನ ಮನೋವಾಸನೆಗಳನ್ನು ಸದಾ ನಿನ್ನ ನಾಮವೇ ಆವರಿಸಿರಲಿ. ಜಗತ್ತಿಗೇ ಜೀವಾಧಾರ ನೀನು. ನಿನ್ನನ್ನೆ ನಂಬಿ ನಿನ್ನ ಚರಣಗಳನ್ನು ಹಿಡಿದಿದ್ದೇನೆ." ಎಂದು ಅವನ ಪಾದಗಳಲ್ಲಿ ಶಿರವನ್ನಿಟ್ಟಳು.
ಆ ಪತಿವ್ರತೆಯ ಸ್ತೋತ್ರವನ್ನು ಆಲಿಸಿ ಸಂತುಷ್ಟನಾದ ಅತ್ರಿತನಯನಾದ ದತ್ತಾತ್ತ್ರೇಯನು ದಯಾಪೂರ್ಣನಾಗಿ, ಆಕೆಯ ಭುಜಗಳನ್ನು ಹಿಡಿದು ಮೇಲಕ್ಕೆಬ್ಬಿಸಿ, "ಅಮ್ಮಾ" ಎಂದು ಕರೆದನು. ಆ ಕರೆಯನ್ನು ಕೇಳಿದ ಆ ಸಾಧ್ವಿ, "ದೇವ, ನೀನು ನನ್ನನ್ನು "ಅಮ್ಮಾ" ಎಂದು ಕರೆದ ಮಾತು ನನ್ನಲ್ಲಿ ಸಿದ್ಧಿಯಾಗಲಿ. ನನಗೆ ಅನೇಕ ಪುತ್ರರು ಜನಿಸಿದರೂ, ಇಬ್ಬರು ಮಾತ್ರವೇ ಉಳಿದಿದ್ದಾರೆ. ಅವರಲ್ಲೊಬ್ಬ ಕುರುಡ, ಇನ್ನೊಬ್ಬ ಕುಂಟನಾಗಿ, ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಯೋಗ್ಯನಾದ ಮಗನೊಬ್ಬ ಹುಟ್ಟಲಿಲ್ಲವೆಂಬ ಕೊರಗು ಕಾಡುತ್ತಿದೆ. ಸತ್ಪುತ್ರನಿಲ್ಲದ ಜನ್ಮ ನಿಷ್ಫಲವೇ ಎಂದುಕೊಳ್ಳುತ್ತೇನೆ. ಆಯುಷ್ಮಂತ, ಜ್ಞಾನವಂತ, ಶ್ರೀಮಂತ, ಜಗದ್ವಂದ್ಯನಾದ ನಿನ್ನಂತಹ ಪುತ್ರನೊಬ್ಬನಾದರೂ ನನ್ನ ಜನ್ಮ ಸಾಫಲ್ಯವಾಗುತ್ತದೆ." ಎಂಂದು ಬೇಡಿಕೊಂಡ ಸುಮತಿಯ ಮಾತುಗಳನ್ನು ಕೇಳಿದ ಭಗವಂತನಾದ ದತ್ತಾತ್ತ್ರೇಯನು ಪ್ರಸನ್ನನಾಗಿ, " ಅಮ್ಮಾ, ಸಾಧ್ವಿ, ನಿನಗೆ ನನ್ನ ಸದೃಶನಾದ ಪುತ್ರ ನಿನ್ನ ಕುಲದಲ್ಲಿ ಹುಟ್ಟಿ ಕುಲೋದ್ಧಾರಮಾಡಿ, ಜಗದ್ವಿಖ್ಯಾತನಾಗುತ್ತಾನೆ. ಆದರೆ ಅವನ ಮಾತುಗಳನ್ನು ನೀನು ಪರಿಪಾಲಿಸಬೇಕು. ಇಲ್ಲದಿದ್ದರೆ ಅವನು ನಿಮ್ಮ ಹತ್ತಿರ ನಿಲ್ಲುವುದಿಲ್ಲ. ಜ್ಞಾನ ಮಾರ್ಗ ಬೋಧಿಸಿ ನಿಮ್ಮ ದೈನ್ಯ ತಾಪಗಳನ್ನು ಪರಿಹರಿಸುತ್ತಾನೆ. " ಎಂದು ಹೇಳಿ ದತ್ತ ಸ್ವಾಮಿಯು ಅಂತರ್ಧಾನನಾದನು.
ಆ ಸ್ವಾಮಿಯ ರೂಪವನ್ನು ಮತ್ತೆ ಮತ್ತೆ ಸ್ಮರಿಸುತ್ತಾ, ಆಶ್ಚರ್ಯಚಕಿತಳಾದ ಸುಮತಿ, ಒಳಗೆ ಬಂದು ತನ್ನ ಗಂಡನಿಗೆ ನಡೆದ ವಿಷಯವನ್ನೆಲ್ಲಾ, ತಾನು ಅವನನ್ನು ಕೇಳದೆ ಬಿಕ್ಷೆಯನ್ನು ನೀಡಿದ್ದನ್ನೂ, ವಿಸ್ತಾರವಾಗಿ ನಿವೇದಿಸಿದಳು. ಅದನ್ನು ಕೇಳಿ ಬಹು ಸಂತುಷ್ಟನಾದ ಅವನು, ಬಂದಿದ್ದ ಅತಿಥಿ ದತ್ತಸ್ವಾಮಿಯೆಂಬುದನ್ನು ಅರಿತು, "ಮಧ್ಯಾಹ್ನ ಸಮಯದಲ್ಲಿ ದ್ವಿಜಗೃಹಕ್ಕೆ ದತ್ತಸ್ವಾಮಿ ಅತಿಥಿಯಾಗಿ ಬರುತ್ತಾನೆ. ಬಹುಮುಖನಾಗಿ ಬರುವ ಆ ದತ್ತಸ್ವಾಮಿಗೆ ವಿಮುಖರಾಗದೆ ಭಿಕ್ಷೆ ನೀಡಬೇಕು. ಮಾಹುರ, ಕರವೀರ, ಪಾಂಚಾಲೇಶ್ವರಗಳು ದತ್ತ ದೇವನ ವಾಸಸ್ಥಾನಗಳು. ಆತ ಭಿಕ್ಷು ರೂಪದಲ್ಲಿ ಪ್ರತಿದಿನವೂ ಸಂಚರಿಸುತ್ತಿರುತ್ತಾನೆ. ನಾನಾ ರೂಪಗಳಲ್ಲಿ ಪರ್ಯಟನೆ ಮಾಡುತ್ತಿರುತ್ತಾನೆ. ನನ್ನನ್ನು ಕೇಳದೆಯೇ ನೀನು ಭಿಕ್ಷೆ ನೀಡಿದ್ದು ಬಹಳ ಒಳ್ಳೆಯದಾಯಿತು." ಎಂದನು. ಮತ್ತೆ ಸುಮತಿ, "ನಾಥ, ನನ್ನ ಅಪರಾಧವನ್ನು ಮನ್ನಿಸಿ. ನಾನು ಭಗವಂತನಿಗೆ ಶ್ರಾದ್ಧೀಯಾನ್ನವನ್ನು ಶ್ರಾದ್ಧಕ್ಕೆ ಮುಂಚೆಯೇ ನೀಡಿದೆ." ಎಂದಳು. ಅವಳ ಮಾತನ್ನು ಕೇಳಿದ ರಾಜು ನೀನು ಬಹಳ ಒಳ್ಳೆಯ ಕೆಲಸವನ್ನೇ ಮಾಡಿದೆ. ನಮ್ಮ ಪಿತೃಗಳೆಲ್ಲಾ ತೃಪ್ತರಾದರು. ಅದರಲ್ಲಿ ಸಂದೇಹವೇ ಇಲ್ಲ. ಪಿತೃಗಳನ್ನುದ್ದೇಶಿಸಿ ಕರ್ಮಗಳನ್ನು ಮಾಡಿ, ಶ್ರೀ ವಿಷ್ಣುವಿಗೆ ಶ್ರಾದ್ಧೀಯಾನ್ನವನ್ನು ಸಮರ್ಪಿಸುತ್ತೇವೆ. ಆ ವಿಷ್ಣುವೇ ದತ್ತ ರೂಪದಲ್ಲಿ ಸಾಕ್ಷಾತ್ಕರಿಸಿ ಭಿಕ್ಷೆಯಾಗಿ ಗ್ರಹಿಸಿದ್ದಾನೆ. ಅದರಿಂದ ನಮ್ಮ ಪಿತೃಗಳು ಕೃತಾರ್ಥರಾಗಿ, ತೃಪ್ತರಾದ ಅವರು ಸ್ವರ್ಗದಲ್ಲಿ ಬಹಳ ಕಾಲ ಇರುತ್ತಾರೆ. ನೀನು ಸಾಕ್ಷಾತ್ಭಗವಂತನ ತ್ರಿಮೂರ್ತಿರೂಪನಾದ ದತ್ತಸ್ವಾಮಿಯನ್ನು ಅರ್ಚಿಸಿದ್ದೀಯೆ. ನಿನಗೆ ಇಂತಹ ವರವು ಲಭಿಸಿದ್ದರಿಂದ ನಿನ್ನ ಮಾತಾಪಿತರು ಧನ್ಯರಾದರು. ನಿನಗೆ ದತ್ತ ಸದೃಶನಾದ ಪುತ್ರನು ಸಂಭವಿಸುವುದರಲ್ಲಿ ಯಾವ ಸಂದೇಹವೂ ಇಲ್ಲ." ಎಂದು ಸುಮತಿಗೆ ಹೇಳಿದನು.
ಇಂತಹ ನಿಶ್ಚಲಮನಸ್ಸಿನಿಂದ ಆ ದಂಪತಿಗಳು ಇರುತ್ತಿರಲು, ಆ ಸಾಧ್ವಿ ಗರ್ಭವತಿಯಾದಳು. ನವಮಾಸಗಳು ತುಂಬಿದಮೇಲೆ ಒಂದು ಶುಭ ಮುಹೂರ್ತದಲ್ಲಿ ಆಕೆ ಗಂಡುಮಗುವಿಗೆ ಜನ್ಮಕೊಟ್ಟಳು. ಆನಂದ ಭರಿತನಾದ ಆಕೆಯ ಗಂಡ ರಾಜು, ಸ್ನಾನಾದಿಗಳನ್ನು ಮುಗಿಸಿಕೊಂಡು, ಜಾತಕರ್ಮಾದಿಗಳನ್ನು ಮಾಡಿದನು. ಜ್ಯೋತಿಷ್ಯ ನಿಪುಣರು ಬಂದು ಆ ಬಾಲಕನ ಜನ್ಮ ಲಗ್ನವನ್ನು ಪರಿಶೀಲಿಸಿ, ಅವನು ಬಹುಮಾನ್ಯನಾದ ತಪಸ್ವಿಯಾಗಿ, ದೀಕ್ಷಾದಾತನಾದ ಜಗದ್ಗುರುವಾಗುತ್ತಾನೆ ಎಂದು ನುಡಿದರು. ತಂದೆತಾಯಿಗಳು "ಶ್ರೀಗುರುವಿನ ವರಪ್ರಸಾದದಿಂದ ಈ ಫಲ ಲಭ್ಯವಾಯಿತು. ನಮ್ಮ ಪಿತೃಗಳು ಉದ್ಧಾರವಾದರು" ಎಂದು ಸಂತಸಗೊಂಡರು.
ಬಾಲಕನ ಪಾದಗಳಲ್ಲಿ ಶ್ರೀ ಚಿಹ್ನೆಗಳಿದ್ದುದರಿಂದ ಹನ್ನೆರಡನೆಯ ದಿನ ನಾಮಕರಣ ಮಾಡಿ ’ಶ್ರೀಪಾದ’ನೆಂದು ಹೆಸರಿಟ್ಟರು. ಆ ಬಾಲಕ ಭಕ್ತೋದ್ಧಾರನಾದ ತ್ರಿಮೂರ್ತಿಯೇ! ಅವನು ವಿದ್ಯೆಗಳಲ್ಲಿ, ಸುಗುಣಗಳಲ್ಲಿ, ಬುದ್ಧಿಯಲ್ಲಿ ಸಮಸಮನಾಗಿ ಬೆಳೆಯುತ್ತಿದ್ದನು. ಎಂಟನೆಯ ವರ್ಷವಾಗುತ್ತಲೂ ತಂದೆ ಅವನಿಗೆ ಉಪನಯನ ಮಾಡಿದನು. ಬ್ರಹ್ಮಚರ್ಯ ವಿಧಾನದಂತೆ ಯಥಾವಿದಿಯಾಗಿ, ವಟುವಾದ ಆ ಬಾಲಕ, ಸಾಂಗೋಪಾಂಗವಾಗಿ, ವೇದಗಳನ್ನೂ, ಸರ್ವಶಾಸ್ತ್ರಗಳನ್ನೂ, ಸ್ವೀಕರಿಸಿದನು. ಆ ವಟುವಿಗಿದ್ದ ಗ್ರಹಣ ಶಕ್ತಿಯನ್ನು ಕಂಡು ಸೇರಿದ್ದವರೆಲ್ಲರೂ ಆಶ್ಚರ್ಯಗೊಂಡು ಅವನು ಸಾಕ್ಷಾತ್ ಪರಮೇಶ್ವರನೇ ಎಂದು ನುಡಿದರು. ಆಚಾರ ವ್ಯವಹಾರಗಳು, ಯತಾರ್ಥವಾಗಿ ಮಾಡಬೇಕಾದ ಪ್ರಾಯಶ್ಚಿತ್ತಗಳು, ವೇದಾಂತ ಭಾಷ್ಯಾರ್ಥ, ವೇದಾರ್ಥಗಳನ್ನು ಶ್ರೀಗುರುವು ಭ್ರಮೆ ಪ್ರಮಾದಗಳಿಲ್ಲದಂತೆ ಹೇಳುತ್ತಿದ್ದನು. ಹೀಗೆ ಲೀಲಾ ಮಾನುಷವಿಗ್ರಹನಾಗಿ ಸರ್ವವಿದ್ಯಾಪರಾಯಣನಾದ ಬಾಲಕನಿಗೆ ವಿವಾಹ ವಯಸ್ಸು ಬಂತು. ಅವನಿಗೆ ವಿವಾಹ ಮಾಡಬೇಕೆಂದು ಅವನ ಮಾತಾಪಿತರು ಯೋಚಿಸಿದರು. ಅವರನ್ನು ವಾರಿಸುತ್ತಾ, ಶ್ರೀಪಾದನು "ಮಾನುಷ ಸ್ತ್ರೀಯ ಉದ್ವಾಹನೆಗೆ ನನ್ನ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ವೈರಾಗ್ಯವೇ ನನ್ನ ಹೆಂಡತಿ. ಆಕೆಯೊಡನೆ ನಾನು ವಿವಾಹವಾಗಬೇಕೆಂದು ನಿಶ್ಚಯಿಸಿಕೊಂಡಿದ್ದೇನೆ. ಬೇರೆ ಯಾವ ಸ್ತ್ರೀಯೂ ನನಗೆ ಸರಿಹೋಗುವುದಿಲ್ಲ. ಸೌಂದರ್ಯವತಿಯಾದ ಯೋಗಶ್ರೀಯನ್ನು ನಾನು ವರಿಸಬೇಕು. ಆಕೆಯನ್ನು ಬಿಟ್ಟು ಮಿಕ್ಕ ಸ್ತ್ರೀಯರೆಲ್ಲರೂ ನನಗೆ ಮಾತೃಸಮಾನರು. ನಾನು ತಾಪಸಿ. ಬ್ರಹ್ಮಚಾರಿ. ಪ್ರವೃತ್ತಿಮುಖಕ್ಕೆ ವಿಮುಖನು. ಯೋಗಶ್ರೀಯನ್ನಲ್ಲದೆ ನಾನು ಇನ್ನಾರನ್ನೂ ಮನಸ್ಸಿನಲ್ಲೂ ಆಸೆಪಡುವುದಿಲ್ಲ. ನಾನು ಶ್ರೀವಲ್ಲಭನು. ಶ್ರೀಪಾದನು. ತತ್ತ್ವವೇತ್ತನಾಗಿ ಕೃತಾರ್ಥನಾದೆ. ನಿವೃತ್ತಿ ಮಾರ್ಗದಲ್ಲೇ ನಡೆಯತಕ್ಕವನು." ಎಂದು ಜ್ಞಾನೋಪದೇಶ ಮಾಡಿದನು.
ಅತ್ರಿಪುತ್ರನಾದ ದತ್ತಾತ್ತ್ರೇಯನ ಮಾತುಗಳನ್ನು ಸ್ಮರಿಸಿಕೊಂಡು, ಶ್ರೀಪಾದನ ಹೃದಯವನ್ನು ಅರಿತು, ಶ್ರೀಪಾದನ ಮಾತುಗಳ ಉಲ್ಲಂಘನೆ ಮಾಡಿದರೆ ಮಹಾ ವಿಪತ್ತು ಉಂಟಾಗಬಹುದೆಂದು ಭಾವಿಸಿದ ಆ ತಂದೆತಾಯಿಗಳು, ತಮ್ಮ ದುಃಖವನ್ನು ಶ್ರೀಪಾದನಲ್ಲಿ ಬಿನ್ನವಿಸಿಕೊಂಡರು. "ನಿನ್ನ ಮನಸ್ಸಿಗೆ ಅದೇ ಸಂತೋಷವಾದರೆ ಹಾಗೇ ಆಗಲಿ. ಎಂದು ಸಾದರವಾಗಿ ಹೇಳಿ, "ಈ ಶ್ರೀದತ್ತನು ನಮ್ಮ ಮಗನಲ್ಲ. ಪರಮಪುರುಷನಾದ ಆ ದತ್ತನೇ!" ಎಂದು ನಿಶ್ಚಯಿಸಿಕೊಂಡರು. ನಂತರದಲ್ಲಿ ಅವನ ತಾಯಿ ಮಗನ ಮುಂದೆ ನಿಂತು, "ಕುಮಾರ, ನಮ್ಮ ಆಸೆಯನ್ನು ನಿಷ್ಫಲಮಾಡಬೇಡ. ನೀನೇ ನಮ್ಮ ಪಾಲಕ." ಎಂದು ಹೇಳುತ್ತಾ, ವ್ಯಾಕುಲಳಾಗಿ ಕಣ್ಣಿರು ಸುರಿಸುತ್ತಾ, ಪುತ್ರ ಸ್ನೇಹದಿಂದ ಕೂಡಿ, ಗಾಳಿಯ ಹೊಡೆತಕ್ಕೆ ಸಿಕ್ಕಿದ ಬಾಳೆಯಗಿಡದಂತೆ ಮೂರ್ಛಿತಳಾಗಿ ಕೆಳಗೆ ಬಿದ್ದಳು. ಹಾಗೆ ಬಿದ್ದ ತಾಯಿಯನ್ನು ಶ್ರೀಪಾದ ಹಿಡಿದೆತ್ತಿ, ಸಮಾಧಾನಪಡಿಸಿ, ಕಣ್ಣಿರೊರೆಸಿ ಹೇಳಿದನು.. "ಅಮ್ಮಾ, ಚಿಂತಿಸಬೇಡ. ನಿನಗಿಷ್ಟವಾದ ವರವನ್ನು ಕೇಳಿಕೋ. ಕೊಡುತ್ತೇನೆ. ಸ್ಥಿರಚಿತ್ತಳಾಗಿ ಸುಖವಾಗಿರು." ಅವನ ಮಾತನ್ನು ಕೇಳಿದ ಸುಮತಿ, "ತಂದೆ, ನಿನ್ನನ್ನು ನೋಡುತ್ತಾ ನನ್ನ ಸರ್ವದುಃಖಗಳನ್ನು ಮರೆತಿದ್ದೆ. ವೃದ್ಧಾಪ್ಯದಲ್ಲಿ ದೈನ್ಯವನ್ನು ಪರಿಹರಿಸಿ ನಮ್ಮನ್ನು ರಕ್ಷಿಸುತ್ತೀಯೆ ಎಂದುಕೊಂಡಿದ್ದೆ. ನಾವಿಬ್ಬರೂ ವೃದ್ಧರು. ಇರುವ ಇಬ್ಬರು ಮಕ್ಕಳಲ್ಲಿ ಒಬ್ಬ ಕುರುಡ. ಇನ್ನೊಬ್ಬ ಕುಂಟ. ನೀನು ಸನ್ಯಾಸಿಯಾದರೆ ನಮ್ಮನ್ನು ರಕ್ಷಿಸುವವರು ಯಾರು?" ಎಂದಳು. ಅದನ್ನು ಕೇಳಿದ ಶ್ರೀಪಾದ ತನ್ನ ಇಬ್ಬರು ಅಣ್ಣಂದಿರ ಕಡೆ ತನ್ನ ಅಮೃತದೃಷ್ಟಿಯನ್ನು ಹರಿಸಿದನು. ತಕ್ಷಣವೇ ಅವರಿಬ್ಬರೂ ಸಂಪೂರ್ಣ ಸ್ವಸ್ಥರಾಗಿ, ಕುಂಟು ಕುರುಡುಗಳನ್ನು ಕಳೆದುಕೊಂಡು ಆರೋಗ್ಯವಂತರಾದರು. ಚಿಂತಾಮಣಿಯ ಸ್ಪರ್ಶದಿಂದ ಕಬ್ಬಿಣವು ಬಂಗಾರವಾದಂತೆ, ಆ ಮಹಾತ್ಮನ ದೃಷ್ಟಿ ತಾಕುತ್ತಲೇ ಅವರಿಬ್ಬರೂ ವೇದಶಾಸ್ತ್ರಗಳಲ್ಲಿ ಪ್ರವೀಣರಾಗಿ, ಯೋಗ್ಯವಂತರಾದರು. ಶ್ರೀಪಾದರ ಅನುಗ್ರಹದಿಂದ ಕೃತಾರ್ಥರಾದೆವೆಂದು ಅವನಲ್ಲಿ ಬಿನ್ನವಿಸಿಕೊಂಡರು.
ಆ ಸೋದರರಿಬ್ಬರನ್ನೂ ಆದರದಿಂದ ನೋಡಿ ಶ್ರೀಪಾದರು, "ನನ್ನ ಅನುಗ್ರಹದಿಂದ ಇವರು ಪುತ್ರಪೌತ್ರವಂತರಾಗಿ, ಧನಧಾನ್ಯಗಳಿಂದ ಕೂಡಿ, ವರ್ಧಮಾನರಾಗಿ,. ಜನನಿಜನಕರಿಗೆ ಇಹಪರಸೌಖ್ಯಗಳನ್ನು ಪ್ರಾಪ್ತಿಮಾಡಿಕೊಟ್ಟು, ಕೃತಾರ್ಥರಾಗಿ, ಕೈವಲ್ಯವನ್ನು ಪಡೆಯುತ್ತಾರೆ," ಎಂದು ತಾಯಿಯ ಕಡೆ ನೋಡಿ ಹೇಳಿದರು. ಮತ್ತೆ ತಾಯಿಗೆ, "ಅಮ್ಮಾ, ಈಪುತ್ರರಿಬ್ಬರೊಡನೆ ಕೂಡಿ ಉತ್ತಮ ಸುಖಗಳನ್ನು ಅನುಭವಿಸು. ಇವರಿಬ್ಬರೂ ಶತಾಯುಷಿಗಳಾಗಿ, ಪುತ್ರಪೌತ್ರರಿಂದ ಕೂಡಿರುವುದನ್ನು ನೀನು ನಿನ್ನ ಕಣ್ಣಾರ ನೋಡುತ್ತೀಯೆ. ಚಿಂತಿಸಬೇಡ. ಇವರ ವಂಶದವರಲ್ಲಿ ಸಂಪತ್ತು ಅಚಂಚಲವಾಗಿ, ಶಾಶ್ವತವಾಗಿ ಇರುತ್ತದೆ. ವೇದ ವೇದಾಂಗ ಶಾಸ್ತ್ರ ಪರಿಣತರು ಇವರ ವಂಶದಲ್ಲಿ ಜನಿಸುತ್ತಾರೆ. ಅದರಿಂದ, ಅಮ್ಮಾ, ನೀನು ನನ್ನನ್ನು ಆದರಿಸಿ ನನಗೆ ಅನುಜ್ಞೆ ಕೊಡು. ನನ್ನ ಮಾತನ್ನು ತಿರಸ್ಕರಿಸಬೇಡ. ಸಾಧುಪುರುಷರಿಗೆ ದೀಕ್ಷೆ ಕೊಡಲು ನಾನು ನಿವೃತ್ತಿಮಾರ್ಗದಲ್ಲಿ ಸಂಚರಿಸಬೇಕಾಗಿದೆ." ಎಂದು ಹೇಳಿ, ಶ್ರೀಪಾದರು ತಾಯಿಗೆ ನಮಸ್ಕರಿಸಿದರು.
ತಾಯಿಯ ಅನುಮತಿ ಪಡೆದು ತಕ್ಷಣವೇ ಭಕ್ತಿಭಾವಗಳಿಂದಕೂಡಿದ ಶ್ರೀಪಾದರು ಅದೃಶ್ಯರಾಗಿ ಕಾಶಿನಗರವನ್ನು ಸೇರಿದರು. ಆ ಲೀಲಾ ವಿಹಾರಿಯಾದ ಭಗವಂತನು ಅಲ್ಲಿಂದ ಬದರಿಕಾಶ್ರಮವನ್ನು ಸೇರಿ, ಅಲ್ಲಿ ನಾರಾಯಣ ಅಂಶನಾದ ನರನನ್ನು ದರ್ಶಿಸಿದರು. ಕಾರಣಜನ್ಮನಾದ ಶ್ರೀಗುರುವು, ಸ್ವಭಕ್ತರಿಗೆ ದೀಕ್ಷೆಕೊಡಲು, ಅಲ್ಲಿಂದ ಹೊರಟು, ಪರ್ಯಟನ ಮಾಡುತ್ತಾ ಗೋಕರ್ಣ ಕ್ಷೇತ್ರವನ್ನು ಸೇರಿದರು.
||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಸಿದ್ಧನಾಮಧಾರಕ ಸಂವಾದೇ ಪೀಠಾಪುರೇ ಶ್ರೀಪಾದಾವತಾರೋ ನಾಮ ಪಂಚಮೋಧ್ಯಾಯಃ ಸಂಪೂರ್ಣಂ||
No comments:
Post a Comment