Monday, February 11, 2013

||ಶ್ರೀ ಗುರು ಚರಿತ್ರೆ - ಹನ್ನೊಂದನೆಯ ಅಧ್ಯಾಯ||

"ಸ್ವಾಮಿ, ಶ್ರೀಪಾದರು ತಮ್ಮ ಮುಂದಿನ ಅವತಾರ ಎಲ್ಲಿ ಮಾಡಿದರು? ಆ ಅವತಾರದ ವಿಶೇಷಗಳೇನು? ಆ ಅವತಾರದಲ್ಲಿ ಅವರೇನು ಮಾಡಿದರು? ಎಂಬುದನ್ನು ದಯವಿಟ್ಟು ವಿಸ್ತಾರವಾಗಿ ತಿಳಿಸಿ" ಎಂದು ನಾಮಧಾರಕನು ಕೇಳಲು, ಸಿದ್ಧಮುನಿ ಹೇಳಿದರು. "ಮಗು, ಶ್ರೀಪಾದರು, ಹಿಂದೆ, ತಾವು ಅಂಬಿಕೆಗೆ ವರಕೊಟ್ಟಿದ್ದಂತೆ ಅವಳ ಮರುಜನ್ಮದಲ್ಲಿ ಅವಳಿಗೆ ಮಗನಾಗಿ ಜನಿಸಿದರು. ಅಂಬಿಕ, ಗುರೂಪದೇಶವನ್ನು ಪಾಲಿಸುತ್ತಾ, ಶ್ರದ್ಧಾಭಕ್ತಿಗಳಿಂದ ಮಾಡಿದ ಪ್ರದೋಷಪೂಜೆಗಳಿಂದ ವಿಶ್ವೇಶ್ವರನನ್ನು ಅರ್ಚಿಸುತ್ತಾ, ಮರಣಹೊಂದಿದವಳಾಗಿ, ತನ್ನ ಮರುಜನ್ಮದಲ್ಲಿ ಉತ್ತರದೇಶದಲ್ಲಿ ಕಾರಂಜಿನಗರದಲ್ಲಿ, ವಾಜಸನೇಯ ಬ್ರಾಹ್ಮಣನೊಬ್ಬನಿಗೆ ಮಗಳಾಗಿ ಜನಿಸಿದಳು. ಅವಳ ತಂದೆ ಅವಳಿಗೆ ವಿಧ್ಯುಕ್ತವಾಗಿ ಜಾತಕರ್ಮಗಳನ್ನು ಮಾಡಿ, ಅಂಬ ಎಂಬ ಹೆಸರಿಟ್ಟನು. ತಂದೆತಾಯಿಗಳ ಪ್ರೀತಿಪಾತ್ರಳಾಗಿ ದೊಡ್ಡವಳಾದ ಆಕೆಯನ್ನು, ಅವಳ ತಂದೆ, ಶಿವಪೂಜಾನಿರತನಾದ ಮಾಧವ ಎಂಬ ಬ್ರಾಹ್ಮಣನಿಗೆ, ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟನು. ಅವಳ ಗಂಡನ ಮನೆಯಲ್ಲಿ ಕೂಡಾ ಎಲ್ಲರೂ ಸದಾಚಾರಸಂಪನ್ನರು. ಆ ಸಾಧ್ವಿ, ತನ್ನ ಪೂರ್ವಜನ್ಮ ಸಂಸ್ಕಾರಗಳಿಂದ, ಈ ಜನ್ಮದಲ್ಲೂ ಈಶ್ವರೋಪಾಸನೆಯಲ್ಲಿ ನಿರತಳಾಗಿದ್ದಳು. ಆ ದಂಪತಿಗಳು ಪ್ರದೋಷಕಾಲದಲ್ಲಿ ಶ್ರದ್ಧಾಭಕ್ತಿಗಳಿಂದ, ನಿಯಮಬದ್ಧರಾಗಿ, ನಿರಂತರವಾಗಿ ಶಿವಪೂಜೆಯನ್ನು ಮಾಡುತ್ತಿದ್ದರು. ಶನಿತ್ರಯೋದಶಿಯ ದಿನ ಶಿವನನ್ನು ವಿಶೇಷಪೂಜೆಗಳಿಂದ ಅರ್ಚಿಸುತ್ತಿದ್ದರು.

ಹೀಗೆ ೧೬ವರ್ಷಗಳು ಕಳೆದ ಬಳಿಕ ಅಂಬ ಗರ್ಭಧರಿಸಿದಳು. ಪುಂಸವನಾದಿಗಳನ್ನು ಯಥಾಕಾಲದಲ್ಲಿ ನಡೆಸಿದ ಅವಳ ಗಂಡ ಮಾಧವ, ಅವಳ ಲಕ್ಷಣಗಳನ್ನು ಈಕ್ಷಿಸಿ, ಅವಳಿಗೆ ಜ್ಞಾನೋಪದೇಶಮಾಡಿದ. ಸೀಮಂತಕಾಲದಲ್ಲಿ ಅವಳು ಕೊಟ್ಟ ಬಾಗಿನಗಳನ್ನು ಸ್ವೀಕರಿಸಿದ ಸುವಾಸಿನಿಯರು ಆಕೆಗೆ ಆರತಿ ಮಾಡಿ ಅಶೀರ್ವದಿಸಿದರು. ಒಂಭತ್ತು ತಿಂಗಳು ತುಂಬಿದ ಅಂಬ ಒಂದು ಶುಭ ಮುಹೂರ್ತದಲ್ಲಿ, ಗಂಡು ಮಗುವೊಂದಕ್ಕೆ ಜನ್ಮ ನೀಡಿದಳು. ಮಗನನ್ನು ಕಂಡ ಮಾಧವನ ಮನಸ್ಸು ಸಂತಸಗೊಂಡಿತು. ತನ್ನ ಅವತಾರವನ್ನು ಗುರುತಿಸುವುದಕ್ಕೋ ಎಂಬಂತೆ ಆ ಮಗುವು ಹುಟ್ಟುತ್ತಲೇ ಅಳುವುದಕ್ಕೆ ಬದಲು ಪ್ರಣವೋಚ್ಚಾರಣೆ ಮಾಡಿತು. ಅದನ್ನು ಕಂಡವರೂ, ಕೇಳಿದವರೂ ಆಶ್ಚರ್ಯಪಟ್ಟರು. ಜಾತಕರ್ಮಾದಿಗಳನ್ನು ಮಾಡಿದ ಮೇಲೆ, ಜ್ಯೋತಿಷ್ಕರು ಅವನ ಜನ್ಮಕುಂಡಲಿಯನ್ನು ನೋಡಿ, "ಈ ಹುಡುಗನ ಜಾತಕ ಬಹಳ ವಿಶೇಷವಾಗಿದೆ. ಇವನು ಗುರುಗಳಿಗೆ ಗುರುವಾಗುತ್ತಾನೆ. ಇವನ ಅನುಗ್ರಹ ಪಡೆದವನು ವಿಶ್ವವಂದ್ಯನಾಗುತ್ತಾನೆ. ಇವನ ಮಾತು ವೇದವಾಕ್ಯವಾಗುತ್ತದೆ. ಇವನ ಪಾದವು ಚಿಂತಾಮಣಿ ಸದೃಶವಾದದ್ದು. ಇವನ ಇರುವಿಕೆಯಿಂದ ದೇಶದಲ್ಲಿ ಸಮೃದ್ಧಿಯಿರುತ್ತದೆ. ಅಯ್ಯಾ, ಮಾಧವ, ಇವನು ನೆಲೆಸಿರುವ ಮನೆಯಲ್ಲಿ ನವನಿಧಿಗಳೂ ಲಾಸ್ಯವಾಡುತ್ತವೆ. ಇವನು ಗೃಹಸ್ಥನಾಗುವುದಿಲ್ಲ. ತ್ರಿಭುವನ ಪೂಜಿತನಾಗಿ ತನ್ನ ದೃಷ್ಟಿಯಿಂದಲೇ ಪತಿತರನ್ನು ಪುನೀತರನ್ನಾಗಿ ಮಾಡುತ್ತಾನೆ. ಇವನು ನಿಶ್ಚಯವಾಗಿಯೂ ಪರಮೇಶ್ವರನ ಅವತಾರವೇ!" ಎಂದು ಭವಿಷ್ಯ ನುಡಿದರು. ಅವರು ಮುಂದುವರೆದು, "ಅಷ್ಟೇಅಲ್ಲ. ಈತನ ಅನುಗ್ರಹದಿಂದ ಕಲಿಕಾಲಭಯಗಳೂ ಉಪಸಂಹರಿಸಲ್ಪಡುತ್ತವೆ. ನಿಮ್ಮ ಕೋರಿಕೆಗಳೆಲ್ಲವೂ ಅಪ್ರಯತ್ನವಾಗಿ ಸಿದ್ಧಿಯಾಗುತ್ತವೆ. ಮನೆಗೆ ಬಂದಿರುವ ಈ ಸುಪುತ್ರನನ್ನು ಜಾಗ್ರತೆಯಿಂದ ಬೆಳೆಸು" ಎಂದೂ ಹೇಳಿದರು. ಅದನ್ನು ಕೇಳಿದ ಆ ಬಾಲಕನ ಮಾತಾಪಿತೃಗಳು ಅತ್ಯಂತ ಸಂತೋಷಗೊಂಡು ಅಂತಹ ಭವಿಷ್ಯವನ್ನು ನುಡಿದ ಬ್ರಾಹ್ಮಣೋತ್ತಮರಿಗೆ ಯೋಗ್ಯವಾದ ಸತ್ಕಾರವನ್ನು ಮಾಡಿದರು. ಅವರೆಲ್ಲರೂ ಆ ಮಗುವಿಗೆ ಅಶೀರ್ವಾದಗಳನ್ನು ಮಾಡಿ ಹೊರಟು ಹೋದರು.

ಆ ದಂಪತಿಗಳು, ಮಗುವನ್ನು ಬಹು ಜಾಗ್ರತೆಯಿಂದ ಕಾಪಾಡುತ್ತಿದ್ದರು. ಹುಟ್ಟುತ್ತಲೇ ಪ್ರಣವೋಚ್ಚಾರಣೆ ಮಾಡಿತು ಎಂಬ ವಾರ್ತೆ ಊರೆಲ್ಲಾ ಹರಡಿ, ಆ ಮಗುವನ್ನು ನೋಡಲು ಜನ ಗುಂಪುಗುಂಪಾಗಿ ಮಾಧವನ ಮನೆಗೆ ಬರುತ್ತಿದ್ದರು. ಜನರ ದೃಷ್ಟಿ ತಗುಲಿ ಆ ಮಗುವಿಗೆ ತೊಂದರೆಯಾಗುವುದೇನೋ ಎಂದು, ಅಂಬ ಮಗುವನ್ನು ಯಾರಿಗೂ ತೋರಿಸುತ್ತಿರಲಿಲ್ಲ. ಆದರೂ ಅಂಬ ಮಗುವಿಗೆ ಆಗಾಗ ದೃಷ್ಟಿ ನಿವಾರಣೆ ಮಾಡುತ್ತಿದ್ದಳು. ಮಂತ್ರಿಸಿದ ತಾಯಿತವನ್ನು ಕಟ್ಟಿದರು. ಪರಮಾತ್ಮನ ಅವತಾರವಾದ ಆ ಮಗುವಿಗೆ ದೃಷ್ಟಿ ತಗುಲುವುದೆಂದರೇನು? ಆದರೂ ಆ ತಾಯಿತಂದೆಗಳು ಲೋಕರೀತಿಯನ್ನನುಸರಿಸಿ ಮಗುವನ್ನು ಹಾಗೆ ಕಾಪಾಡುತ್ತಿದ್ದರು. ಸಕಾಲದಲ್ಲಿ ಮಾಧವನು ನಾಮಕರಣ ಮಾಡಿ, ಜನರ ತಾಪ ದೈನ್ಯಗಳನ್ನು ಹರಿಸುವವನಾಗಲಿ ಎಂಬ ಇಚ್ಛೆಯಿಂದ, ಆ ಮಗುವಿಗೆ "ನರಹರಿ" ಎಂದು ಹೆಸರಿಟ್ಟನು.

ಮಹಾಪ್ರೀತಿಯಿಂದ ಮಗುವನ್ನು ಸಾಕುತ್ತಿದ್ದ ಅಂಬ, ಮಗುವಿಗೆ ಸ್ತನ್ಯ ಸಾಕಾಗುವುದಿಲ್ಲವೇನೊ ಎಂದು ಸಂದೇಹಪಟ್ಟು, ದಾದಿಯೊಬ್ಬಳನ್ನು ನೇಮಿಸಬೇಕೆಂದು ಮಾಧವನನ್ನು ಕೋರಿದಳು. ಆ ಮಾತು ಕೇಳಿಸಿಕೊಂಡ ಆ ಶಿಶುವು, ತನ್ನ ಚಿನ್ನಾರಿ ಕೈಗಳಿಂದ ತಾಯಿಯ ಸ್ತನಗಳನ್ನು ಸ್ಪರ್ಶಿಸಿದನು. ಆ ಸ್ಪರ್ಶಮಾತ್ರದಿಂದಲೇ ತಾಯಿಯ ಸ್ತನಗಳಿಂದ ಹನ್ನೆರಡು ಧಾರೆಗಳಲ್ಲಿ ಮಧುವಿನಂತಹ ಕ್ಷೀರ ಸುರಿಯಲು ಆರಂಭವಾಯಿತು. ಆ ಹಾಲು ಭೂಮಿಯಮೇಲೆ ಬೀಳುತ್ತಿದ್ದಂತೆಯೇ ಆ ತಾಯಿ ದೃಷ್ಟಿದೋಷದ ಭಯದಿಂದ, ಮಗುವನ್ನು ಉಡಿಯಲ್ಲಿ ತೆಗೆದುಕೊಂಡು ಅದಕ್ಕೆ ಹಾಲೂಡಿಸಲು ಪ್ರಾರಂಭಿಸಿದಳು. ಆ ಮಗುವು ತಾಯಿಯ ತೊಡೆಯ ಮೇಲೆ ಮಲಗದೆ ಸದಾ ನೆಲದಮೇಲೆ ಮಲಗಿ ಆಡುತ್ತಿತ್ತು. ಹೀಗೆ ಬೆಳೆಯುತ್ತಿದ್ದ ಆ ಮಗು, ಮಾತನಾಡುವ ವಯಸ್ಸು ಬಂದರೂ, ಓಂಕಾರವೊಂದನ್ನು ಬಿಟ್ಟು ಮತ್ತಾವ ಮಾತನ್ನೂ ಆಡಲಿಲ್ಲ. ತಂದೆತಾಯಿಗಳು ಇದರಿಂದ ಬಹಳ ಖಿನ್ನರಾಗಿ ಎಷ್ಟೇ ಪ್ರಯತ್ನಮಾಡಿದರೂ ಆ ಮಗುವು, ಅವರ ಮಾತುಗಳನ್ನು ಕೇಳಿಸಿಕೊಂಡು ಓಂಕಾರವನ್ನು ಹೇಳುತ್ತಿತ್ತೇ ಹೊರತು, ಮತ್ತಾವ ಮಾತನ್ನೂ ಆಡುತ್ತಿರಲಿಲ್ಲ. ಇವನು ಮೂಗನಾಗಿಹೋಗುತ್ತಾನೇನೋ ಎಂಬ ಭಯ ತಂದೆತಾಯಿಗಳನ್ನು ಕಾಡಿತು. ಇದಕ್ಕೆ ಕಾರಣವೇನಿರಬಹುದೆಂದು ಜ್ಯೋತಿಷಿಗಳನ್ನು ಕೇಳಲು ಅವರು, "ಕುಲದೇವತೆಯ ಪೂಜೆ ಮಾಡಿ, ಶನಿವಾರ ಭಾನುವಾರಗಳಲ್ಲಿ ಅಶ್ವತ್ಥದ ಎಲೆಯಮೇಲೆ ಊಟ ಮಾಡಿಸಿ" ಎಂದರು. ಕೆಲವರು ಅವನನ್ನು ಹೆಸರಿಟ್ಟು ಕರೆದು ಮಾತನಾಡಿಸಿ ಎಂದರು. ಯಾರು ಏನು ಹೇಳಿದರೂ ಆ ತಂದೆತಾಯಿಗಳು ಅದನ್ನೆಲ್ಲಾ ಮಾಡುತ್ತಿದ್ದರು. ಅದೆಲ್ಲವನ್ನೂ ಕೇಳಿಸಿಕೊಂಡ ನರಹರಿ ಮಾತ್ರ ಏನೂ ಹೇಳದೆ ಪ್ರಣವೋಚ್ಚಾರ ಮಾಡುತ್ತಿದ್ದನು. ಅದನ್ನು ಕೇಳಿದವರೆಲ್ಲ ಆಶ್ಚರ್ಯಪಟ್ಟು, "ಇವನು ಕಿವುಡನಲ್ಲ. ಎಲ್ಲರೂ ಹೇಳಿದ್ದನ್ನು ಕೇಳಿಸಿಕೊಂಡರೂ ಮಾತನಾಡುತ್ತಿಲ್ಲ. ಅದಕ್ಕೆ ಕಾರಣವೇನೋ ತಿಳಿಯುತ್ತಿಲ್ಲ" ಎಂದರು. ಈ ರೀತಿಯಲ್ಲಿ ಆ ಹುಡುಗನಿಗೆ ಏಳು ವರ್ಷವಾಯಿತು. ಆದರೂ ಮಾತನಾಡದೇ ಇದ್ದ ಆ ಬಾಲಕನನ್ನು ಕಂಡು ಆ ಜನನಿಜನಕರು, "ಇದು ನಮ್ಮ ದುರದೃಷ್ಟ. ಈ ಮೂಕ ಬಾಲಕ ಉಪನಯನಯೋಗ್ಯನಾಗಿದ್ದಾನೆ. ಆದರೆ ಅವನಿಗೆ ಹೇಗೆ ಮುಂಜಿಮಾಡುವುದು?" ಎಂದು ಯೋಚಿಸುತ್ತಾ, ಬ್ರಾಹ್ಮಣ ಪಂಡಿತರನ್ನು ಕೇಳಿದರು. ಅವರು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದಾನಾದ್ದರಿಂದ ಎಂಟುವರ್ಷವಾದ ಮೇಲೆ ಮುಂಜಿಮಾಡಿ ಎಂದು ಹೇಳಿದರು. ಈ ಮೂಕ ಬಾಲಕನಿಗೆ ಬ್ರಹ್ಮೋಪದೇಶ ಮಾಡುವುದು ಹೇಗೆ ಎಂದು ಅಂಬ ಮಾಧವರು ಚಿಂತಿಸುತ್ತಿದ್ದರು. "ಮಹಾದೇವನನ್ನು ಆರಾಧಿಸಿದೆವು. ವಿಶೇಷವಾಗಿ ತ್ರಯೋದಶಿಯಂದು ಶಿವಪೂಜಾವ್ರತ ಮಾಡಿದೆವು. ಅವೆಲ್ಲವೂ ವ್ಯರ್ಥವಾಯಿತೇ? ಸುಗುಣನಾದ ಮಗನಾಗುತ್ತಾನೆಂದು ಶಿವ ಅನುಗ್ರಹಿಸಿದ್ದನು. ಆದರೆ ಈ ಬಾಲಕ ಮಾತೇ ಆಡುವುದಿಲ್ಲ. ಈಗೇನು ಮಾಡಬೇಕು? ನಾವು ಈ ಬಾಲಕನೊಬ್ಬನೇ ನಮಗೆ ಆಸರೆ ಎಂದು ನಂಬಿ, ಬೇರೆ ಏನನ್ನೂ ಕಾಣಲಿಲ್ಲ. ಇವನು ನಮ್ಮನ್ನು ವೃದ್ಧಾಪ್ಯದಲ್ಲಿ ಹೇಗೆ ರಕ್ಷಿಸುತ್ತಾನೆ? ಇವನು ಹೀಗಾಗಿರುವುದರಿಂದ ನಮ್ಮ ಕೋರಿಕೆಗಳು ತೀರಲಿಲ್ಲ. ಶನಿತ್ರಯೋದಶಿಯಂದು ಅರ್ಚಿಸಲ್ಪಟ್ಟ ಆ ಶಿವ ನಮಗೆ ಇಂತಹ ವರವನ್ನು ಕೊಟ್ಟನೇ?" ಎಂದು ನಾನಾಪ್ರಕಾರವಾಗಿ ದುಃಖಿಸುತ್ತಿದ್ದ, ಆ ತಂದೆತಾಯಿಗಳನ್ನು ಆ ಪಶುಬಾಲಕ ಸಮೀಪಿಸಿ, ಅವರನ್ನು ಸಂಜ್ಞೆಗಳಿಂದ ಸಮಾಧಾನಪಡಿಸಿದನು. ಆದರೂ ತಾಯಿಯಾದ ಅಂಬ ಇನ್ನೂ ದುಃಖಿಸುತ್ತಿರಲು, ಆ ಬಾಲಕ ಒಂದು ಲೋಹದ ತುಂಡನ್ನು ತಂದು ಅದನ್ನು ಸ್ಪರ್ಶಮಾತ್ರದಿಂದಲೇ ಚಿನ್ನವನ್ನಾಗಿ ಮಾಡಿ, ತಾಯಿಗೆ ಕೊಟ್ಟ. ಅದನ್ನು ಕಂಡ ಅಂಬ ಆಶ್ಚರ್ಯಪಟ್ಟು, ತನ್ನ ಗಂಡನನ್ನು ಕರೆದು ಆ ಚಿನ್ನದ ತುಂಡನ್ನು ತೋರಿಸಿದಳು. ಅವರು ಇನ್ನೊಂದು ಚೂರು ಲೋಹವನ್ನು ತಂದು ಅವನ ಕೈಲಿಟ್ಟರು. ಅದು ಕೂಡಾ ಚಿನ್ನವಾಯಿತು. ಹೀಗೆ ಮನೆಯಲ್ಲಿ ಸ್ವರ್ಣಾಭಿವೃದ್ಧಿಯನ್ನು ಕಂಡ ಅವರು, ಆ ಬಾಲಕ ಅವತಾರಪುರುಷನೆಂದು ಅವನಲ್ಲಿ ಹೆಚ್ಚಿನ ವಿಶ್ವಾಸ ತೋರಿದರು. ಆ ಬಾಲಕನನ್ನು ತಬ್ಬಿಕೊಂಡು ಅಂಬ, "ತಂದೆ, ನರಹರಿ, ನೀನು ದಯಾಳು. ಕುಲದೀಪಕ. ನಮಗೆ ಸಕಲ ಸುಖಗಳನ್ನೂ ಕೊಟ್ಟಿದ್ದೀಯೆ. ಆದರೂ ನಿನ್ನ ಈ ಮೌನಕ್ಕೆ ಕಾರಣವೇನು? ಮಾಯಾಮೋಹಿತರಾಗಿ, ಅಜ್ಞಾನವೆಂಬ ಕತ್ತಲೆಯಲ್ಲಿ ಬಿದ್ದಿರುವ ನಮ್ಮ ಕೋರಿಕೆಯನ್ನು ಮನ್ನಿಸಿ, ನಿನ್ನ ಅಮೃತತುಲ್ಯವಾದ ಮಾತುಗಳಿಂದ ನಮ್ಮನ್ನು ಸಂತೋಷಗೊಳಿಸು" ಎಂದು ಪ್ರಾರ್ಥಿಸಿದಳು. ಅದಕ್ಕೆ ನರಹರಿ, "ಮೌಂಜಿ ಬಂಧನ ಉಪವೀತಧಾರಣೆಗಳಾದ ಮೇಲೆ ನಿನ್ನೊಡನೆಯೇ ಮೊದಲ ಮಾತು ಆಡುತ್ತೇನೆ" ಎಂದು ತಾಯಿಗೆ ಸಂಜ್ಞಾಪೂರ್ವಕವಾಗಿ ತಿಳಿಸಿದನು.

ತಕ್ಷಣವೇ ಮಾಧವ ವಿದ್ವಾಂಸರಾದ ಜ್ಯೋತಿಷ್ಕರನ್ನು ಕರೆಸಿ, ಆ ಹುಡುಗನ ಉಪನಯನ ಮುಹೂರ್ತವನ್ನು ನಿಶ್ಚಯಮಾಡಿದನು. ಎಲ್ಲ ಏರ್ಪಾಡುಗಳನ್ನೂ ಮಾಡಿಕೊಂಡು, ಬಂಧುಬಾಂಧವರನ್ನೆಲ್ಲಾ ಆಹ್ವಾನಿಸಿ, ಬ್ರಾಹ್ಮಣೋತ್ತರಮನ್ನು ಕರೆಸಿ, ಮಂಟಪಾದಿಗಳನ್ನು ನಿರ್ಮಿಸಿ, ಎಲ್ಲವನ್ನೂ ಸಿದ್ಧಪಡಿಸಿದನು. ನೆಂಟರಿಷ್ಟರೆಲ್ಲರೂ ಸೇರಿದರು. ಮಾಡಿದ್ದ ಏರ್ಪಾಡುಗಳನ್ನು ಕಂಡು ಎಲ್ಲರೂ ಸಂತೋಷಗೊಂಡರು. ಅಷ್ಟೊಂದು ಅದ್ಧೂರಿಯಾಗಿ ಎಲ್ಲವನ್ನೂ ಮಾಡುತ್ತಿರುವ ಮಾಧವನನ್ನು ಕಂಡ ಆ ಊರಿನ ಜನ, "ಹುಡುಗ ಮೂಕನಲ್ಲವೇ? ಅವನ ತಂದೆ ಭ್ರಾಂತಿಯಿಂದ ಇಷ್ಟೆಲ್ಲಾ ಖರ್ಚು ವ್ಯರ್ಥವಾಗಿ ಮಾಡುತ್ತಿದ್ದಾನೆ. ಅವನ ಮಗ ಬ್ರಹ್ಮೋಪದೇಶವನ್ನು ಹೇಗೆ ಪಡೆಯಬಲ್ಲ? ಅವನ ತಂದೆ ಅವನಿಗೆ ಸಾವಿತ್ರಿ ಮಂತ್ರವನ್ನು ಹೇಗೆ ಉಪದೇಶಿಸಬಲ್ಲ?" ಎಂದು ನಾನಾವಿಧವಾಗಿ ಮಾತನಾಡಿಕೊಳ್ಳುತ್ತಿದ್ದರು. ಕೆಲವರು, "ಅವನಿಗೆ ಮಂತ್ರೋಪದೇಶವಾದರೆಷ್ಟು ಬಿಟ್ಟರೆಷ್ಟು? ಅದರಿಂದ ನಮಗೇನಾಗಬೇಕಾಗಿದೆ? ನಮಗೆ ಮೃಷ್ಟಾನ್ನ ಭೋಜನ, ದಾನ ದಕ್ಷಿಣೆಗಳು ಹೇರಳವಾಗಿ ಸಿಕ್ಕುವುದಲ್ಲವೇ? ಅಷ್ಟೇ ಸಾಕು" ಎನ್ನುತ್ತಿದ್ದರು. ಹೀಗೆ ಅಲ್ಲಿ ಸೇರಿದ್ದ ಅನೇಕರು ಅನೇಕ ರೀತಿಯಾಗಿ ಮಾತನಾಡಿಕೊಳ್ಳುತ್ತಿದ್ದರು. ಆದರೆ, "ಈ ಬಾಲಕ ದೈವಾಂಶಸಂಭೂತನು" ಎಂಬ ಸದ್ಬುದ್ಧಿಯಿಂದ ಅವನ ತಂದೆ ತಾಯಿಗಳು, ಶಾಸ್ತ್ರೋಕ್ತವಾಗಿ ಎಲ್ಲ ವಿಧಿಗಳನ್ನೂ ಮುಗಿಸಿದರು. ನಂತರ, ಅವನ ತಂದೆ ವಟುವನ್ನು, ತಾಯಿಯೊಡನೆ ಭೋಜನ ಮಾಡೆಂದು ಹೇಳಿದನು. ತಂದೆಯ ಮಾತಿನಂತೆ, ವಟುವು ತಾಯಿಯೊಡನೆ ಭೋಜನ ಮುಗಿಸಿ, ತಾಯಿಯ ಆಣತಿಯಂತೆ ಮೌಂಜಿಧಾರಣೆ ಮಾಡಿ, ಮತ್ತೆ ತಂದೆಯ ಬಳಿಗೆ ಬಳಿಗೆ ಬಂದನು. ಸುಮುಹೂರ್ತದಲ್ಲಿ ಯಥಾವಿಧಿಯಾಗಿ ಉಪವೀತ ಧಾರಣೆ ಮಾಡಿ, ಮಂತ್ರೋಪದೇಶದ ಮೂಲಕ ಮೌಂಜಿಯನ್ನು ಕಟಿಯಲ್ಲಿ ಬಂಧಿಸಿದನು. ವಟುವು ಗಾಯತ್ರಿ ಉಪದೇಶವನ್ನು ಪಡೆದರೂ, ಮಂತ್ರವನ್ನು ಮೌನವಾಗಿ ಜಪಿಸಿದನೇ ಹೊರತು, ಒಂದು ಮಾತೂ ಅವನ ಬಾಯಿಂದ ಈಚೆಗೆ ಬರಲಿಲ್ಲ.

ತಾಯಿ, ಭಿಕ್ಷೆಯೊಡನೆ ಬಂದು, ಮಗನ ಮಾತುಗಳನ್ನು ಕೇಳುವ ಆಸೆಯಿಂದ, ಅವನನ್ನು ಅಶೀರ್ವದಿಸಿ, ಮೊದಲ ಭಿಕ್ಷೆಯನ್ನು ನೀಡಿದಳು. ಅದನ್ನು ಸ್ವೀಕರಿಸಿ, ವಟುವು, "ಅಗ್ನಿಮೀಳೇ....ಎಂದು ಪ್ರಾರಂಭಿಸಿ, ಋಗ್ವೇದವನ್ನು ಹೇಳಿದನು. ಮತ್ತೆ ತಾಯಿ ಎರಡನೆಯ ಭಿಕ್ಷೆ ನೀಡುತ್ತಲೂ, ಅವನು "ಇಷೇತ್ವಾ.....ಎಂದು ಪ್ರಾರಂಭಿಸಿ, ಯಜುರ್ವೇದವನ್ನು ಹೇಳಿದನು. ಅದನ್ನು ಕೇಳಿ ಜನರೆಲ್ಲಾ ಬೆರಗಾಗಿಹೋದರು. ತಾಯಿ ಮೂರನೆಯ ಭಿಕ್ಷೆ ಕೊಡಲು, ಅವನು "ಅಗ್ನ ಆಯಾಹಿ....ಎಂದು ಪ್ರಾರಂಭಿಸಿ ವೇದಪ್ರವರ್ತಕನಂತೆ ಸಾಮವೇದ ಗಾನಮಾಡಿದನು. ಆ ಸಮಾರಂಭದಲ್ಲಿ ನೆರೆದಿದ್ದ ಜನರೆಲ್ಲಾ, ಮೂಕವಿಸ್ಮಿತರಾಗಿ, "ಈ ಮೂಗ ಹೇಗೆ ವೇದಗಳನ್ನು ಹೇಳಿದನು?" ಎಂದು ದಂಗಾಗಿ ಹೋದರು."ಇವನು ನಿಜವಾಗಿಯೂ ಪರಮಾತ್ಮನೇ! ದೇವರ ಅವತಾರವೇ! ನರನಲ್ಲ. ಜಗದ್ಗುರುವು" ಎಂದು ಭಾವಿಸಿ, ಎಲ್ಲರೂ ಅವನಿಗೆ ನಮಸ್ಕರಿಸಿದರು. ಮಾಧವನು ಬಹಳ ಸಂತುಷ್ಟನಾದನು.

ವಟುವಾದ ನರಹರಿ ತಾಯಿಯ ಬಳಿಗೆ ಹೋಗಿ, ’ಅಮ್ಮ, ನೀನು ನನಗೆ ಭಿಕ್ಷೆಯನ್ನು ಗ್ರಹಿಸು ಎಂದು ಆಜ್ಞೆ ಕೊಟ್ಟೆ. ನಿನ್ನಮಾತು ಅಸತ್ಯವಾಗಬಾರದು. ನನಗೆ ಅನುಮತಿ ಕೊಡು. ನಾನು ಭಿಕ್ಷುವಾಗಿ, ಬ್ರಹ್ಮಚಾರಿಯಾಗಿ, ಗೃಹಸ್ಥರ ಮನೆಗಳಲ್ಲಿ ಭಿಕ್ಷೆಯೆತ್ತುತ್ತಾ, ವೇದಾಂತನಿರತನಾಗಿ ಲೋಕಾನುಗ್ರಹಕ್ಕಾಗಿ ಲೋಕಸಂಚಾರ ಮಾಡುತ್ತೇನೆ" ಎಂದನು. ಅದನ್ನು ಕೇಳಿದ ಅಂಬ, ದುಃಖದಿಂದ ಮೂರ್ಛಿತಳಾಗಿ ಕೆಳಗೆ ಬಿದ್ದಳು. ಒಂದುಕ್ಷಣಕಾಲ ಮೃತಪ್ರಾಯಳಾಗಿ ಕಂಡ ಅವಳು ಎದ್ದು, ಬಹು ದುಃಖದಿಂದ ಕಣ್ಣೀರು ಸುರಿಸುತ್ತಾ, ಮಗನನ್ನು ಮತ್ತೆ ಮತ್ತೆ ನೋಡುತ್ತಾ, "ಮಗು, ನೀನು ವೃದ್ಧಾಪ್ಯದಲ್ಲಿ ನಮ್ಮನ್ನು ರಕ್ಷಿಸುತ್ತೀಯೆ ಎಂದು ಬಹಳ ಆಸೆಯಿಂದಿದ್ದ ನಮ್ಮ ಆಸೆಯಲ್ಲ ಚೂರುಚೂರಾಗಿ ಹೋಯಿತು. ನೀನು ನಿನ್ನ ಶೈಶವದಲ್ಲಿ ಮೌನಿಯಾಗಿ ಒಂದು ಮಾತೂ ಆಡಲಿಲ್ಲ. ಇದುವರೆಗೂ ನಿನ್ನ ಮಾತುಗಳನ್ನೇ ಕೇಳಿರಲಿಲ್ಲ. ಈಗ ಮಾತನಾಡಿ ನಮಗೆ ಅಮೃತವನ್ನು ಕುಡಿಸಿದೆ. ನನ್ನ ಈಶ್ವರಪೂಜೆಯೆಲ್ಲಾ ಸಫಲವಾಯಿತು ಎಂದುಕೊಳ್ಳುತ್ತಿರುವಾಗಲೇ ನಿನ್ನಿಂದ ನಾನು ಕೇಳುತ್ತಿರುವುದೇನು?" ಎಂದು ಮುಂತಾಗಿ ಪ್ರಲಾಪಿಸುತ್ತಾ ಕೇಳಿದಳು.

ಆಗ ನರಹರಿ ತನ್ನ ತಾಯಿಯನ್ನು ಸಮಾಧಾನಗೊಳಿಸಲು, "ಅಮ್ಮಾ, ನನ್ನ ಮಾತು ಕೇಳು. ಬ್ರಹ್ಮಜ್ಞಾನಿಯಾದ ನೀನು ಹೀಗೆ ದುಃಖಿಸಬಾರದು. ಧರ್ಮ ರಕ್ಷಣೆಗಾಗಿ ನಾನು ಭೂಮಿಯಲ್ಲಿ ಅವತರಿಸಿದ್ದೇನೆ. ನಿನಗೆ ಇನ್ನೂ ನಾಲ್ಕು ಪುತ್ರರು ಜನಿಸುತ್ತಾರೆ. ಅವರೆಲ್ಲರೂ ನಿಮ್ಮ ಸೇವೆಯಲ್ಲಿರುತ್ತಾರೆ. ಹಿಂದಿನ ಜನ್ಮದಲ್ಲಿ ನೀನು ಶ್ರದ್ಧಾಭಕ್ತಿಗಳಿಂದ ಶಿವಪೂಜೆಯನ್ನು ಮಾಡಿದ್ದೀಯೆ" ಎಂದು ಆಕೆಯ ತಲೆಯಮೇಲೆ ಕೈಯಿಟ್ಟನು. ಆ ಕರಸ್ಪರ್ಶದಿಂದ ಆಕೆಗೆ ಪೂರ್ವಜನ್ಮ ಸ್ಮೃತಿಗೆ ಬಂದು, ಆ ಜನ್ಮದಲ್ಲಿ ನಡೆದ ವಿಷಯವೆಲ್ಲಾ ಗೋಚರವಾಯಿತು. ತನ್ನ ಮಗನೇ ಹಿಂದಿನ ಶ್ರೀಪಾದ ಶ್ರೀವಲ್ಲಭರೆಂದು ಆಕೆ ಗುರುತಿಸಿ, ಅವನ ಪಾದಾಭಿವಂದನೆ ಮಾಡಿದಳು. ನರಹರಿ ತಾಯಿಯನ್ನು ಹಿಡಿದು ಮೇಲಕ್ಕೆಬ್ಬಿಸಿ, "ಅಮ್ಮಾ ನನ್ನ ಮಾತು ಕೇಳು. ಈ ವಿಷಯವನ್ನು ರಹಸ್ಯವಾಗಿಡು. ನಾನು ಈ ಸಂಸಾರದಲ್ಲಿ ಇರುವುದಿಲ್ಲ. ನನ್ನನ್ನು ಸನ್ಯಾಸಿಯೆಂದು ತಿಳಿದುಕೋ. ಆದ್ದರಿಂದ ನಾನು ತೀರ್ಥಯಾತ್ರೆಗೆ ಹೋಗಲು ಅನುಮತಿ ಕೊಡು" ಎಂದು ಹೇಳಿದನು.

ಸ್ವಲ್ಪಕಾಲ ಮೌನವಾಗಿದ್ದ ಅಂಬ, "ನೀನು ನಮ್ಮನ್ನು ಬಿಟ್ಟು ಹೊರಟುಹೋದರೆ ನಾನು ಮಗನಿಲ್ಲದವಳಾಗುತ್ತೇನೆ. ಮಗನಿಲ್ಲದೆ ನಾನು ಹೇಗೆ ಜೀವಿಸಲಿ? ನಿನಗಿದು ಧರ್ಮವಲ್ಲ. ಬಾಲ್ಯದಿಂದಲೇ ತಪೋವೃತ್ತಿ ಧರ್ಮವೆಂದು ಹೇಗೆ ಹೇಳುತ್ತೀಯೆ? ಗುರುಕುಲದಲ್ಲಿ ಬ್ರಹ್ಮಚರ್ಯೆ ಮಾಡುವುದೇ ನಿನ್ನ ಧರ್ಮ. ಹನ್ನೆರಡು ವರ್ಷ ಬ್ರಹ್ಮಚಾರಿಯಾಗಿದ್ದು ಆ ನಂತರ ಗೃಹಸ್ಥನಾಗಿ, ಪುಣ್ಯಕಾರ್ಯಗಳನ್ನೆಸಗಬೇಕು. ಗೃಹಸ್ಥಾಶ್ರಮವು ಬಹಳ ಮುಖ್ಯವಾದದ್ದು. ಅದರ ಆಚರಣೆಯಿಂದಲೇ ನರನು ಮುಂದಿನ ಆಶ್ರಮಗಳಿಗೆ ಸಮರ್ಥನಾಗುತ್ತಾನೆ. ಅದಾದನಂತರ ಈಷಣತ್ರಯಗಳನ್ನು ಬಿಟ್ಟು ಪರಿವ್ರಾಜಕನಾಗಬೇಕು. ಅದು ಧರ್ಮ. ಋಷಿಋಣ ತೀರಿಸಲು ವೇದಾಧ್ಯಯನ. ಆಮೇಲೆ ಅನುರೂಪಳಾದ ಕನ್ಯೆಯನ್ನು ವಿವಾಹವಾಗಿ. ಗೃಹಸ್ಥನಾಗಿ, ಪುತ್ರವಂತನಾಗಿ, ಪಿತೃಋಣವನ್ನು ತೀರಿಸಿ, ಯಜ್ಞ ಯಾಗಾದಿಗಳನ್ನು ಮಾಡಿ ಸನ್ಯಾಸಿಯಾಗಬೇಕು. ಬುದ್ಧಿವಂತನಾದವನು ಹಾಗೆ ಮಾಡದೆ ಮೊದಲೇ ಸನ್ಯಾಸಿಯಾದರೆ ಪತನವಾಗುತ್ತಾನೆ. ಇಂದ್ರಿಯವಾಸನೆಗಳು ತೃಪ್ತಿಗೊಂಡಮೇಲೆ ಸನ್ಯಾಸಿಯಾಗಬೇಕು" ಎಂದು ಹೇಳಿದಳು. ಅದನ್ನು ಕೇಳಿ ಶ್ರೀಗುರುವು ನಗುತ್ತಾ ಅವಳಿಗೆ ತತ್ತ್ವೋಪದೇಶ ಮಾಡಿದನು. 

ಇಲ್ಲಿಗೆ ಹನ್ನೊಂದನೆಯ ಅಧ್ಯಾಯ ಮುಗಿಯಿತು.



No comments:

Post a Comment