Friday, February 15, 2013

||ಶ್ರೀ ಗುರು ಚರಿತ್ರೆ - ಹದಿನೈದನೆಯ ಅಧ್ಯಾಯ||

"ಅಯ್ಯಾ, ಶಿಷ್ಯಶಿಖಾಮಣಿ, ನೀನು ಹೇಳುತ್ತಿರುವುದು ಧರ್ಮಯುಕ್ತವಾಗಿದೆ. ಗುರು ಚರಣಗಳಲ್ಲಿ ನಿನ್ನ ಮನಸ್ಸು ಧೃಢವಾಗಿ ನಿಂತಿದೆ. ಶ್ರೀಗುರುವು ರಹಸ್ಯವಾಗಿರಲು ಕಾರಣವನ್ನು ಹೇಳುತ್ತೇನೆ. ಕೇಳು. ಶ್ರೀಗುರುವಿನ ಮಹಿಮೆ ಲೋಕದಲ್ಲಿ ಪ್ರಖ್ಯಾತವಾಗಿದ್ದರಿಂದ ಬಹಳ ಜನ ದೂರದೂರಗಳಿಂದ ಅವರ ದರ್ಶನಕ್ಕಾಗಿ ಬರುತ್ತಿದ್ದರು. ಕಲಿಯುಗವಾದದ್ದರಿಂದ, ಸಾಧುಗಳು, ಸಾಧುಗಳಲ್ಲದವರು, ಧೂರ್ತರು ಮುಂತಾದ ಬಹಳ ಜನ ಶಿಷ್ಯರಾಗುತ್ತೇವೆಂದು ಅವರಲ್ಲಿಗೆ ಬರುತ್ತಿದ್ದರು. ಪರಶುರಾಮನು ಕ್ಷತ್ರಿಯರನ್ನೆಲ್ಲ ಸಂಹಾರ ಮಾಡಿ ಗೆದ್ದ ಭೂಮಿಯನ್ನೆಲ್ಲಾ ಬ್ರಾಹ್ಮಣರಿಗೆ ದಾನಮಾಡಿ ತಾನು ಲವಣ ಸಮುದ್ರದ ಪಶ್ಚಿಮ ತೀರ ಸೇರಿದನು. ಅಲ್ಲಿ ತಪಸ್ಸು ಮಾಡುತ್ತಿರುವಾಗ ಅಲ್ಲಿಯೂ ಕೂಡ ಮತ್ತೆ ಕೆಲವರು ಬಂದು ಅವನನ್ನು ಯಾಚಿಸಲಾರಂಭಿಸಿದರು. ಅಷ್ಟೇ ಅಲ್ಲ ಕೆಲವರು, "ಈ ಭೂಮಿಯನ್ನೆಲ್ಲಾ ನಮಗೆ ಕೊಟ್ಟುಬಿಟ್ಟಮೇಲೆ, ನಮಗೆ ಕೊಟ್ಟ ಭೂಮಿಯಲ್ಲಿ ನೀವು ಇರುವುದು ಸಮಂಜಸವಲ್ಲ" ಎಂದೂ ಹೇಳಿದರು. ಅದರಿಂದ ಭಾರ್ಗವನು ಸಹ್ಯಪರ್ವತದ ದಕ್ಷಿಣಕ್ಕಿರುವ ಕೊಂಕಣವೆಂದು ಕರೆಯುವ ಪ್ರದೇಶವನ್ನು ಬಿಟ್ಟು, ಯಾಚಕರಿಂದ ತಪ್ಪಿಸಿಕೊಳ್ಳಲು ಸಮುದ್ರದ ಒಳಗೆ ರಹಸ್ಯವಾಗಿ ನಿಂತನು. ಅದರಂತೆಯೇ ಶ್ರೀಗುರುವು ಕೂಡಾ ಈ ಜನಗಳು ಕೇಳುವ ಅನೇಕ ವರಗಳು ಸಾಧುವಲ್ಲ ಎಂದು ಯೋಚಿಸಿ ರಹಸ್ಯವಾಗಿರಲು ನಿರ್ಧರಿಸಿದರು. ಶ್ರೀಗುರುವು ಜಗದ್ವ್ಯಾಪಕನು. ಕೇಳಿದ ವರದಾನ ಸಮರ್ಥನಾದರೂ, ಅನಿತ್ಯವಾದ ವರಗಳಿಂದ ಪ್ರಯೋಜನವಿಲ್ಲ ಎಂದು ಯೋಚಿಸಿ, ತನ್ನದೇ ಮಾಯೆಯಿಂದ ಅದೃಶ್ಯನಾಗಲು ನಿರ್ಧರಿಸಿದನು.

ಹಾಗೆ ನಿರ್ಧಾರಮಾಡಿ, ಒಂದು ದಿನ ಶ್ರೀಗುರುವು, ತನ್ನ ಶಿಷ್ಯರೆಲ್ಲರನ್ನೂ ಕರೆದು, "ನೀವೆಲ್ಲರೂ ತೀರ್ಥಯಾತ್ರೆಗಳಿಗೆ ಹೊರಡಿ. ಮತ್ತೆ ನಿಮಗೆ ಶ್ರೀಶೈಲದಲ್ಲಿ ನಮ್ಮ ದರ್ಶನವಾಗುತ್ತದೆ" ಎಂದರು. ಶಿಷ್ಯರೆಲ್ಲರೂ, ಶ್ರೀಗುರುವಿನ ಚರಣಗಳನ್ನು ಹಿಡಿದು, "ಹೇ ಕೃಪಾನಿಧಿ, ಗುರುರಾಯ, ನಮ್ಮನ್ನೇಕೆ ಹೀಗೆ ಉಪೇಕ್ಷಿಸುತ್ತಿದ್ದೀರಿ? ನಿಮ್ಮ ಪಾದ ದರ್ಶನವೇ ನಮಗೆ ಸರ್ವತೀರ್ಥ ದರ್ಶನವಲ್ಲವೇ? ನಿಮ್ಮ ಚರಣಗಳನ್ನು ಬಿಟ್ಟು ನಾವು ಇನ್ನೆಲ್ಲಿಗೆ ಹೋಗಬೇಕೋ ನಮಗೆ ತಿಳಿಯದು. ಶ್ರೀಗುರುವಿನ ಪಾದಗಳಲ್ಲಿ ಸರ್ವತೀರ್ಥಗಳೂ ಇವೆ ಎಂಬುದು ಶೃತಿವಾಕ್ಯವಲ್ಲವೇ? ಸರ್ವ ಶಾಸ್ತ್ರಗಳ ಸಿದ್ಧಾಂತವೂ ಅದೇ ಅಲ್ಲವೇ? ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡುತ್ತಾರೆಯೇ? ಕಲ್ಪವೃಕ್ಷವನ್ನು ಬಿಟ್ಟು ದೂರದ ಮುಳ್ಳುಗಿಡಕ್ಕೆ ಕೈನೀಡುತ್ತಾರೆಯೇ?" ಎಂದು ಕಳಕಳಿಯಿಂದ ಕೇಳಿದರು.

ಅದಕ್ಕೆ ಶ್ರೀಗುರುವು, "ಶಿಷ್ಯರೇ, ನಾವು ಸನ್ಯಾಸಿಗಳು. ಒಂದೇಸ್ಥಳದಲ್ಲಿ ಐದು ದಿನಗಳಿಗಿಂತ ಹೆಚ್ಚುಕಾಲ ನಿಲ್ಲಬಾರದು. ಸನ್ಯಾಸಾಶ್ರಮವನ್ನು ಸ್ವೀಕರಿಸಿ ಭೂಲೋಕದಲ್ಲಿನ ತೀರ್ಥಗಳನ್ನೆಲ್ಲಾ ದರ್ಶಿಸಬೇಕು. ಹಾಗೆ ಮಾಡುವುದರಿಂದ ನಿಮ್ಮ ಚಿತ್ತವು ಸ್ಥಿರವಾಗಿ, ಏಕಾಂತ ವಾಸವೂ ಪ್ರಶಸ್ತವಾಗುತ್ತದೆ. ನನ್ನ ಮಾತನ್ನು ಕೇಳಿ, ನಿಮ್ಮ ಆಶ್ರಮ ಧರ್ಮವನ್ನು ಪಾಲಿಸಿ. ತೀರ್ಥ ಸ್ನಾನಗಳನ್ನು ಮಾಡಿ ಶುದ್ಧರಾಗಿ, ಮತ್ತೆ ನನ್ನನ್ನು ಸೇರಿಕೊಳ್ಳಿ. ಬಹುಧಾನ್ಯ ಸಂವತ್ಸರದಲ್ಲಿ ಶ್ರೀಶೈಲವನ್ನು ಸೇರಿ ಅಲ್ಲಿ ನನ್ನ ದರ್ಶನ ಮಾಡಿಕೊಳ್ಳಿ" ಎಂದರು. ಶಿಷ್ಯರು ಧೃಢಮನಸ್ಕರಾಗಿ, ಅವರ ಆದೇಶವನ್ನು ಸ್ವೀಕರಿಸಿ, ದೈನ್ಯಭಾವದಿಂದ ಶ್ರೀಗುರುವನ್ನು, "ಸ್ವಾಮಿ, ನಿಮ್ಮ ಮಾತುಗಳೇ ನಮಗೆ ಪ್ರಮಾಣ. ಈ ಭೂತಲದಲ್ಲಿರುವ ತೀರ್ಥಗಳನ್ನು ದರ್ಶಿಸಿ ಕೃತಾರ್ಥರಾಗುತ್ತೇವೆ. ಗುರು ವಾಕ್ಯವನ್ನು ಉಲ್ಲಂಘಿಸಿದವನು ರೌರವನರಕವನ್ನು ಸೇರುತ್ತಾನೆಯಲ್ಲವೇ? ಅಂತಹವನಿಗೆ ಯಮಲೋಕವೇ ಮನೆಯಾಗುವುದು. ಹೇ ಗುರುಸಾರ್ವಭೌಮ, ಯಾವಯಾವ ತೀರ್ಥಗಳನ್ನು ನಾವು ಸಂದರ್ಶಿಸಬೇಕು ಎಂಬುದನ್ನು ಹೇಳಿ. ನೀವು ಅಪ್ಪಣೆ ಕೊಟ್ಟ ಹಾಗೆ ನಾವು ನಡೆದುಕೊಳ್ಳುತ್ತೇವೆ. ನಿಮ್ಮ ಮಾತೇ ನಮಗೆ ಸರ್ವಸಿದ್ಧಿಗಳನ್ನು ತಂದುಕೊಡುವುದು" ಎಂದು ಬೇಡಿಕೊಂಡರು. ಅವರ ಮಾತುಗಳಿಂದ ಪ್ರಸನ್ನನಾದ ಶ್ರೀಗುರುವು ಯಾವ ರೀತಿಯಲ್ಲಿ ತೀರ್ಥಯಾತ್ರೆಗಳನ್ನು ಮಾಡಬೇಕು ಎಂಬುದನ್ನು ವಿಸ್ತಾರವಾಗಿ ತಿಳಿಸಿದರು.

"ಈ ಬ್ರಹ್ಮಾಂಡದಲ್ಲಿ ವಿಶೇಷವಾದ, ಪ್ರಸಿದ್ಧವಾದ ತೀರ್ಥರಾಜನು ಕಾಶಿಕ್ಷೇತ್ರವು. ಅಲ್ಲಿಗೆ ಹೋಗಿ ಶುಭಪ್ರದವಾದ, ಭಾಗೀರಥಿಯ ಸೇವೆ ಮಾಡಿ. ಭಾಗೀರಥಿ ತೀರ್ಥಯಾತ್ರೆ (ತಟಯಾತ್ರೆ) ಅರವತ್ತು ಯೋಜನಗಳ ವಿಸ್ತೀರ್ಣವಾದ ಪವಿತ್ರ ಪ್ರದೇಶ. ಅರವತ್ತು ಪಾಪಗಳು ಪರಿಹಾರವಾಗುತ್ತವೆ. ಗಂಗಾ ದ್ವಾರವು ಅದರ ಎರಡರಷ್ಟು ಫಲವನ್ನು ಕೊಡುವುದು. ಯಮುನಾ ತಟಯಾತ್ರೆ ಇಪ್ಪತ್ತು ಯೋಜನಗಳುಳ್ಳದ್ದು. ಅದರಿಂದ ಇಪ್ಪತ್ತು ಪಾಪಗಳು ಪರಿಹಾರಗೊಳ್ಳುತ್ತವೆ. ಮಹಾಗಂಗ ಎನ್ನಿಸಿಕೊಳ್ಳುವ ಸರಸ್ವತಿ, ಕುಮಾರಿಯಾಗಿ, ಭೂಮಿಯಲ್ಲಿ ಅಂತರ್ವಾಹಿನಿಯಾಗಿದ್ದಾಳೆ. ಇಪತ್ತನಾಲ್ಕು ಯೋಜನಗಳಿಂದ ಇಪ್ಪತ್ತನಾಲ್ಕು ಪಾಪಗಳನ್ನು ನಾಶಮಾಡಬಲ್ಲಳು. ತೀರ್ಥಕ್ಷೇತ್ರಗಳು ಎಷ್ಟು ಯೋಜನಗಳೋ ಅಷ್ಟು ಪಾಪಗಳು ಪರಿಹರಿಸಲ್ಪಡುತ್ತವೆ. ಪಿತೃತ್ವ, ಯಜ್ಞಫಲ, ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗುತ್ತದೆ.

ವರುಣ, ಕುಶಾವರ್ತ, ಶತದ್ರು, ವಿಪಾಶಕ, ಶರಾವತಿ, ವಿತಸ್ತ, ಅಸಿಕ್ನಿ, ಮರುಧ್ವದ, ಮಧುಮತಿ, ಪಯಸ್ಥಿತ, ಘೃತವತಿ ಎನ್ನುವ ನದೀತೀರಗಳ ಯಾತ್ರೆಯು ಶುಭಪ್ರದವು. ಭೂಮಂಡಲದಲ್ಲಿ ದೇವನದಿ ಎಂದು ಪ್ರಖ್ಯಾತವಾದ ನದಿತಟಯಾತ್ರೆ ಹದಿನೈದು ಯೋಜನಗಳಷ್ಟು ವಿಸ್ತಾರವಾಗಿದೆ. ಇದು ಪಂಚದಶ ಪಾಪಗಳನ್ನು ಹೋಗಲಾಡಿಸುತ್ತದೆ. ಚಂದ್ರಭಾಗ, ರೇವತಿ, ಸರಯು, ಗೋಮತಿ, ವೇದಿಕ, ಕೌಶಿಕ, ನಿತ್ಯಜಲ, ಮಂದಾಕಿನಿ, ಸಹಸ್ರವಕ್ತ್ರ, ಪೂರ್ಣ, ಬಾಹುದ ಎನ್ನುವ ನದಿಗಳು ಹದಿನಾರು ಯೋಜನಗಳ ವಿಸ್ತಾರವುಳ್ಳದ್ದು. ಅವುಗಳ ಸಂಗಮ ಸ್ಥಾನದಲ್ಲಿ ಸ್ನಾನವು ಬಹು ಪುಣ್ಯ ಫಲವು. ನದಿ ಸಂಗಮದಲ್ಲಿ ಮಾಡಿದ ಸ್ನಾನಕ್ಕೆ ತ್ರಿವೇಣಿ ಸ್ನಾನಫಲ ಉಂಟಾಗುತ್ತದೆ. ವೈರೋಚಿನಿ, ಉತ್ತಮ ತೀರ್ಥವಾದ ಪುಷ್ಕರ, ಫಲ್ಗುನದಿ, ಗಯಾ ಕ್ಷೇತ್ರಗಳು ಬಹು ಫಲದಾಯಕವಾದದ್ದು. ಬದರಿನಾರಾಯಣ, ಅಲಕನಂದ, ಅತಿ ಪುಣ್ಯ ಪ್ರದವಾದವು. ಕುರುಕ್ಷೇತ್ರ, ಶ್ರೀಶೈಲ, ಅನಂತ, ಸೇತು ಬಂಧದಲ್ಲಿ ರಾಮೇಶ್ವರ, ಶ್ರೀರಂಗ, ಪದ್ಮನಾಭ, ನೈಮಿಶಾರಣ್ಯ, ಮನೋಹರವಾದ ಪುರುಷೋತ್ತಮ ತೀರ್ಥಗಳು. ಸೇವೆ ಮಾಡ ತಕ್ಕಂಥ ಕ್ಷೇತ್ರಗಳು. ಮಹಾಲಯತೀರ್ಥ ಪಿತೃಗಳಿಗೆ ತೃಪ್ತಿದಾಯಕವು. ಅಲ್ಲಿ ಸ್ನಾನ ಮಾಡುವುದರಿಂದ ಹನ್ನೆರಡು ತಲೆಮಾರಿನವರು ಸ್ವರ್ಗವನ್ನು ಸೇರಿಕೊಳ್ಳುತ್ತಾರೆ. ಕೇದಾರ, ಕೋಟಿರುದ್ರ, ನರ್ಮದ ಮಹಾಫಲದಾಯಕವಾದವು. ಮಾತೃಕೇಶ, ಕುಬ್ಜತೀರ್ಥ, ಕೋಕಾಮುಖಿ, ಪ್ರಸಾದತೀರ್ಥ, ವಿಜಯತೀರ್ಥ, ಚಂದ್ರತೀರ್ಥ, ಗೋಕರ್ಣ, ಶಂಖಕರ್ಣ, ಈ ಸ್ಥಳಗಳಲ್ಲಿ ಮಾಡಿದ ಸ್ನಾನವು ಮನೋಹರವು.

ಅಯೋಧ್ಯ, ಮಧುರ, ಮಾಯ, ದ್ವಾರವತಿ, ಕಂಚಿ, ಪುರಿ, ಸಾಲಗ್ರಾಮ, ಶಬಲ ಗ್ರಾಮಗಳು ಮುಕ್ತಿದಾಯಕಗಳು. ಗೋದಾವರಿ ತೀರಯಾತ್ರೆ ಆರು ಯೋಜನಗಳ ವಿಸ್ತೀರ್ಣವುಳ್ಳದ್ದು. ಅದು ಅನಂತ ಫಲವನ್ನು ಕೊಡುವಂತಹುದು. ವಾಜಪೇಯ ಯಾಗಪಲವನ್ನು ಕೊಡುವಂತಹುದು. ಗೋದಾವರಿ ತಟಯಾತ್ರೆಯನ್ನು ಮೂರುಸಲ ಮಾಡಿದವರು ಸರ್ವಪಾಪಗಳಿಂದ ಮುಕ್ತಿಪಡೆದು ಜ್ಞಾನಿಗಳಾಗುತ್ತಾರೆ. ಭೀಮೇಶ್ವರ, ಪಂಜರ ಎನ್ನುವ ಎರಡು ಸಂಗಮ ಸ್ಥಾನಗಳು ಪ್ರಯಾಗಕ್ಕೆ ಸಮನಾದವು. ಕುಶ ತರ್ಪಣ ತೀರ್ಥ ದ್ವಾದಶ ಯೋಜನ ಪರಿಮಿತವಾದದ್ದೆಂದು ಪ್ರಸಿದ್ಧಿ. ಇದು ಗೋದಾವರಿ ಸಮುದ್ರ ಸಂಗಮ ಸ್ಥಾನ. ಮುವ್ವತ್ತಾರು ಪಾಪಗಳ ಪರಿಹಾರಕವು. ಪೂರ್ಣಾನದಿ ತಟಯಾತ್ರೆ ಮುವ್ವತ್ತು ಯೋಜನಗಳ ಪ್ರಮಾಣವಿರುವುದು. ಮುವ್ವತ್ತು ಪಾಪಗಳನ್ನು ಹೊರಗಟ್ಟಿ ಪುಣ್ಯವನ್ನು ನೀಡುತ್ತದೆ. ಕೃಷ್ಣವೇಣಿ ಹದಿನೈದು ಪಾಪಗಳನ್ನು ನಾಶಮಾಡುತ್ತದೆ. ತುಂಗಭದ್ರಾ ಯಾತ್ರೆ ಇಪ್ಪತ್ತು ಪಾಪಗಳನ್ನು ನಾಶಮಾಡುತ್ತದೆ. ಪವಿತ್ರವಾದ ಪಂಪಾ ಸರಸ್ಸಿನ ಮಹಿಮೆ ಅನಂತವಾದದ್ದು. ಹಾಗೆಯೇ ಎರಡೂ ಹರಿಹರ ಕ್ಷೇತ್ರಗಳು ಸರ್ವಪಾಪ ಪರಿಹಾರಕಗಳು. ಭೀಮಾ ತಟಯಾತ್ರೆ ಮಾಡಿದವರಿಗೆ ಹತ್ತು ಪಾಪಗಳು ನಿವಾರಣೆಯಾಗಿ, ಪುಣ್ಯ ಲಭ್ಯವಾಗುತ್ತದೆ. ಪಾಂಡುರಂಗ, ಮಾತುಲಿಂಗ, ಗಂಧರ್ವಪುರಗಳಲ್ಲಿ ಅನೇಕ ತೀರ್ಥಗಳಿವೆ. ಅಲ್ಲಿ ದೇವತೆಗಳು ಜನರ ಕೋರಿಕೆಗಳನ್ನು ತೀರಿಸುತ್ತಾರೆ. ಭೀಮಾ ಅಮರಜಾ ನದಿಗಳ ಸಂಗಮದಲ್ಲಿ ಕೋಟಿತೀರ್ಥವಿದೆ. ಅಲ್ಲಿ ಕಲ್ಪವೃಕ್ಷಕ್ಕ್ಕೆ ಸಮಾನವಾದ ಅಶ್ವತ್ಥ ವೃಕ್ಷವಿದೆ. ಅದು ಸರ್ವಕಾಮದಾಯಕ. ಆ ಅಶ್ವತ್ಥದ ಎದುರಿಗೆ ನೃಸಿಂಹ ತೀರ್ಥವಿದೆ. ಅದಕ್ಕೆ ಉತ್ತರದಲ್ಲಿನ ಪ್ರದೇಶ ಕಾಶಿ-ವಾರಣಾಸಿಗಳಿಗೆ ಸಮಾನವಾದ ಪಾಪಹರವಾದ ಪ್ರದೇಶ. ಅದರ ಪೂರ್ವದಲ್ಲಿ ಪರಮ ಪಾವನವಾದ ಪಾಪವಿನಾಶ ತೀರ್ಥವಿದೆ. ಅದೂ ಸರ್ವಪಾಪಹಾರಿಣಿ.

ಚಕ್ರತೀರ್ಥದಲ್ಲಿ ದೇವ ನಾಯಕನಾದ ಕೇಶವನಿದ್ದಾನೆ. ಆ ನಂತರ ಕೋಟಿತೀರ್ಥ ಮನ್ಮಥತೀರ್ಥಗಳಿವೆ. ಕಲ್ಲೇಶ್ವರನಿರುವ ಸ್ಥಳ ಸಾಕ್ಷಾತ್ತು ಗೋಕರ್ಣವೇ ಎನ್ನುತ್ತಾರೆ. ಗಂಧರ್ವಪುರ ಸಿದ್ಧಭೂಮಿ. ಅದಕ್ಕೆ ಸಮಾನವಾದದ್ದು ಯಾವುದೂ ಇಲ್ಲ. ಅಲ್ಲಿ ಅನುಷ್ಠಾನ ಮಾಡಿದವರಿಗೆ ಬಹು ಶೀಘ್ರವಾಗಿ ಇಷ್ಟ ಸಿದ್ಧಿಯಾಗುವುದು. ಕಲ್ಪವೃಕ್ಷವಿರುವೆಡೆಯಲ್ಲಿ ಏನುತಾನೇ ಸಿದ್ಧಿಯಾಗುವುದಿಲ್ಲ? ಕಾಕಿಣಿ ಸಂಗಮವು ಅತ್ಯಂತ ಪುಣ್ಯಫಲದಾಯಕವು. ಅದು ಪ್ರಯಾಗ ಸಂಗಮಕ್ಕೆ ಸಮಾನವಾದುದು. ಹಾಗೆಯೇ ಭೀಮಾನದಿಯೂ ಮಹಾಫಲದಾಯಕವಾದದ್ದು. ತುಂಗಭದ್ರೆಯು ವರದಾಯಿನಿ. ಈ ನದಿಯ ಸಂಗಮಸ್ಥಳವೂ ಬಹು ಫಲಗಳನ್ನು ನೀಡುವಂತಹುದು. ಮಲಾಪಹಾ ಸಂಗಮವು ನೂರುಜನ್ಮಗಳ ಪಾಪವನ್ನು ನಾಶಮಾಡಬಲ್ಲದು. ನಿವೃತ್ತಿ ಸಂಗಮವು ಬ್ರಹ್ಮಹತ್ಯೆಯಂತಹ ಪಾಪವನ್ನು ನಿವಾರಿಸುವಂತಹುದು. ಶಿಷ್ಯರೇ, ಪ್ರೀತಿ, ಭಕ್ತಿ, ಶ್ರದ್ಧೆಗಳಿಂದ ಈ ತೀರ್ಥಗಳೆಲ್ಲವನ್ನೂ ದರ್ಶಿಸಿ. ಪಾಪಗಳೆಲ್ಲವೂ ನಾಶವಾಗುವುವು.

ಬೃಹಸ್ಪತಿ ಸಿಂಹರಾಶಿಯಲ್ಲಿದ್ದಾಗ ಗಂಗೆ ಗೋದಾವರಿಯಲ್ಲಿ ಒಂದುವರ್ಷಕಾಲ ಇರುತ್ತಾಳೆ. ಗುರುವು ಕನ್ಯಾರಾಶಿಯಲ್ಲಿರುವಾಗ ತುಂಗಭದ್ರೆಯಲ್ಲಿ ಗಂಗೆಯಿರುತ್ತಾಳೆ. ಬೃಹಸ್ಪತಿಯು ಕರ್ಕಾಟಕದಲ್ಲಿರುವಾಗ ಗಂಗೆ ಮಲಾಪಹಾ ನದಿಯಲ್ಲಿರುತ್ತಾಳೆ. ಆ ಸಮಯದಲ್ಲಿ ಮಲಾಪಹಾ ನದಿಯಲ್ಲಿ ಸ್ನಾನಮಾಡಿದವರಿಗೆ ಬ್ರಹ್ಮಹತ್ಯಾದಿ ಪಾಪಗಳೂ ತೊಲಗಿಹೋಗುತ್ತವೆ. ಭೀಮಾ ಕೃಷ್ಣಾ ಸಂಗಮದಲ್ಲಿ ಸ್ನಾನಮಾಡಿದವನು ಶುದ್ಧನಾಗಿ ಅರವತ್ತು ಜನ್ಮಗಳಲ್ಲಿ ಸದ್ಬ್ರಾಹ್ಮಣ ವಂಶದಲ್ಲಿಯೇ ಹುಟ್ಟುತ್ತಾನೆ. ತುಂಗಭದ್ರಾ ಸಂಗಮವು ಅದಕ್ಕೆ ಮೂರರಷ್ಟು ಪುಣ್ಯವನ್ನು ಕೊಡುವುದು. ನಿವೃತ್ತಿ ಸಂಗಮವು ನಾಲ್ಕರಷ್ಟುಫಲ ನೀಡುವುದು. ಪಾತಾಳಗಂಗ ಸ್ನಾನ, ಮಲ್ಲಿಕಾರ್ಜುನ ದರ್ಶನ ಆರರಷ್ಟು ಪುಣ್ಯ ನೀಡಿ ಪುನರ್ಜನ್ಮವಿಲ್ಲದಂತೆ ಮಾಡುವುದು. ಯುಗಾಲಯವು ಎರಡರಷ್ಟು ಪುಣ್ಯದಾಯಕವು. ಕಾವೇರಿ ಸಾಗರ ಸಂಗಮ, ಕೃಷ್ಣಾ ಸಮುದ್ರ ಸಂಗಮ ಅದರ ಹದಿನೈದರಷ್ಟು ಪುಣ್ಯಫಲವನ್ನು ಕೊಡುವುದು.

ಮಹಾನದಿ, ತಾಮ್ರಪರ್ಣಿಗಳಲ್ಲಿ ಸ್ನಾನಮಾಡುವವರಿಗೆ ಮಹಾಪುಣ್ಯವು ಲಭಿಸುತ್ತದೆ. ಕೃತಮಾಲಾ ನದಿ ಸರ್ವಪಾಪ ಪರಿಹಾರಕವಾದದ್ದು. ಪಯಸ್ವಿನಿ ನದಿ ಭವನಾಶಿನಿ. ಸಮುದ್ರಸ್ಕಂದ ದರ್ಶನವು ಸಕಲ ಪಾಪನಾಶಕವು. ಶೇಷಾದ್ರಿ, ಶ್ರೀರಂಗನಾಥ, ಪದ್ಮನಾಭ, ಶ್ರೀಮಂತನಾದ ಅನಂತ, ಮಲ್ಲಿಕಾರ್ಜುನ ಪೂಜ್ಯರು. ಕುಂಭಕೋಣವು, ಸಮಸ್ತ ತೀರ್ಥಗಳಿಗೂ ಸಮಾನವಾದ ಪುಣ್ಯಪ್ರದಾಯಿನಿ. ಕನ್ಯಾಕುಮಾರಿಯಲ್ಲಿ, ಮತ್ಸ್ಯತೀರ್ಥಗಳಲ್ಲಿ ಮಾಡಿದ ಸ್ನಾನ ಭವತಾರಿಣಿ. ಪಕ್ಷಿತೀರ್ಥ, ರಾಮೇಶ್ವರ, ಧನುಷ್ಕೋಟಿ, ರಂಗನಾಥನ ಸಮೀಪದಲ್ಲಿನ ಕಾವೇರಿತೀರ್ಥ, ಉತ್ತಮವಾದ ಪುರುಷೋತ್ತಮ ತೀರ್ಥ, ಚಂದ್ರಕುಂಡ, ಮಹಾಲಕ್ಷ್ಮೀಪುರಗಳು ಹೆಸರಾದವು. ಕರವೀರಪುರವು ದಕ್ಷಿಣ ಕಾಶಿಯೇ! ಕೃಷ್ಣಾನದಿ ಉದ್ಭವವಾದ ಪ್ರದೇಶದಲ್ಲಿರುವ ಮಹಾಬಲೇಶ್ವರನು ಶ್ರೇಷ್ಠನಾದವನು. ಕೃಷ್ಣಾತೀರದಲ್ಲಿ ಪವಿತ್ರವಾದ ರಾಮೇಶ್ವರ ಸ್ನಾನ ಪುಣ್ಯಪ್ರದವು. ನೃಸಿಂಹ ದೇವನಿರುವ ಕೋಲ್ಹಾ ಗ್ರಾಮವು ಮಹಾ ಪುಣ್ಯಪ್ರದವಾದದ್ದು ಆ ನೃಸಿಂಹನು ಸದಾಶಿವನೇ! ಪ್ರತ್ಯಕ್ಷವಾಗಿ ಕಾಣಬರುವ ಈಶ್ವರನು. ಕೃಷ್ಣಾತೀರದಲ್ಲಿ ಭಿಲ್ಲವಟಿಯಲ್ಲಿ ಭುವನೇಶ್ವರಿ ಎನ್ನುವ ಶಕ್ತಿರೂಪಿಣಿ ಇದ್ದಾಳೆ. ಅಲ್ಲಿ ತಪವನ್ನಾಚರಿಸಿದವರು ಈಶ್ವರ ಕಳೆಯನ್ನು ಹೊಂದುತ್ತಾರೆ. ಅದಕ್ಕೆ ಮುಂದೆ ವರುಣಾ ಸಂಗಮವಿದೆ. ಅದು ಪಾಪಘ್ನವಾದದ್ದು. ಅಲ್ಲಿ ಮಾಡಿದ ಸ್ನಾನ ಮಾತ್ರದಿಂದಲೇ ಮಾರ್ಕಂಡೇಯ ಸಮಾನತ್ವ ಉಂಟಾಗುತ್ತದೆ. ಆದ್ದರಿಂದ ಆ ಪ್ರದೇಶವನ್ನು ತಪ್ಪದೇ ದರ್ಶನ ಮಾಡಿ.

ಕೃಷ್ಣಾತೀರದಲ್ಲಿ ಅತ್ಯುತ್ತಮವಾದ ಋಷ್ಯಾಶ್ರಮ ಒಂದಿದೆ. ಅಲ್ಲಿ ಕೃಷ್ಣಾನದಿಯಲ್ಲಿ ಸ್ನಾನ ಮಾಡುವವರು ಜ್ಞಾನಿಗಳಾಗುವುದರಲ್ಲಿ ಎಂತಹ ಸಂಶಯವೂ ಇಲ್ಲ. ಅಮರಪುರ ಕೃಷ್ಣವೇಣಿ ನದಿಗಳ ಸಂಗಮ ಸ್ಥಳ. ಪಂಚನದೀ ಸಂಗಮ ಸ್ಥಳವೆಂದು ಪ್ರಸಿದ್ಧಿಯಾಗಿದೆ. ಮಾಘ ಮಾಸದಲ್ಲಿ ಅಲ್ಲಿ ಸ್ನಾನ ಮಾಡಿದರೆ ಪ್ರಯಾಗದಲ್ಲಿ ಮಾಡಿದ ಸ್ನಾನಕ್ಕೂ ಮಿಂಚಿದ ಪುಣ್ಯ ಲಭಿಸುತ್ತದೆ. ಅದು ನಿತ್ಯ ಸತ್ಯ! ಅಲ್ಲಿ ಅನೇಕ ಮುನಿಗಳು ತಪಸ್ಸು ಮಾಡಿ ಸಿದ್ಧಿ ಪಡೆದರು. ಆ ಕ್ಷೇತ್ರಕ್ಕೆ ಸಮನಾದದ್ದು ಬೇರೊಂದಿಲ್ಲ. ಅಲ್ಲಿ ಸರ್ವ ತೀರ್ಥಗಳೂ ಇವೆ ಎಂದು ಪ್ರಖ್ಯಾತಿ. ಅಲ್ಲಿ ಮೂರು ದಿನಗಳು ಅನುಷ್ಠಾನ ಮಾಡಿದವನು ಸರ್ವಾಭೀಷ್ಟಗಳನ್ನೂ ಸಿದ್ಧಿಸಿಕೊಂಡು, ಶೀಘ್ರವಾಗಿ ಪರಮಾರ್ಥವನ್ನು ಪಡೆಯುತ್ತಾನೆ. ನಂತರ ಇರುವ ಯುಗಾಲಯವೆಂಬ ತೀರ್ಥವು ದರ್ಶನ ಮಾತ್ರದಿಂದಲೇ ಮುಕ್ತಿಯನ್ನು ಕೊಡುವುದು. ಅದಾದ ಮೇಲೆ ಶೂರ್ಪಾಲಯ ತೀರ್ಥ. ಇದು ಪರಮ ಪಾವನವಾದದ್ದು. ವಿಶ್ವಾಮಿತ್ರನ ಆಶ್ರಮಕ್ಕೆ ಸಮಾನವಾದ ಮಲಾಪಹಾರ ತೀರ್ಥವು. ಕೃಷ್ಣಾ ಸಂಗಮದಿಂದಾಗಿ ಸರ್ವದೋಷ ಪರಿಹಾರಿಣಿ. ಕಪಿಲಮಹರ್ಷಿ ಸಾಕ್ಷಾದ್ವಿಷ್ಣುವೇ! ಆ ಮುನಿಯ ಆಶ್ರಮವು ಮಹಾತೀರ್ಥವು. ಅಲ್ಲಿ ಕೃಷ್ಣಾ ನದಿ ಉತ್ತರ ವಾಹಿನಿಯಾಗಿದೆ. ಆ ಮಹಾತೀರ್ಥದಲ್ಲಿ ಒಂದುಸಲ ಮಾಡಿದ ಜಪವು ಕೋಟಿ ಜಪದ ಫಲವನ್ನು ನೀಡುತ್ತದೆ. ಅಲ್ಲಿಂದ ಮುಂದೆ ಕೇದಾರೇಶ್ವರ ತೀರ್ಥವಿದೆ.

ನಂತರ ಪೀಠಾಪುರವಿದೆ. ಅದು ಸನಾತನವಾದ ದತ್ತಾತ್ತ್ರೇಯಸ್ವಾಮಿಯ ಶಾಶ್ವತ ನೆಲೆ. ಆ ನಂತರ ಪ್ರಸಿದ್ಧವಾದ ಮಹಾತೀರ್ಥ ಮಣಿಗಿರಿ. ಆಲಿ ಸಪ್ತರ್ಷಿಗಳು ನಿರ್ಮಲರಾಗಿ ತಪವನ್ನಾಚರಿಸಿ ಧನ್ಯರಾದರು. ಮಹಾ ಪುಣ್ಯದಾಯಕವಾದ ಋಷಭಾದ್ರಿಯೂ ಕಲ್ಯಾಣನಗರವೂ ಇವೆ. ಕಲ್ಯಾಣ ನಗರದಲ್ಲಿರುವ ತೀರ್ಥವನ್ನು ಸೇವಿಸುವವನು ಪುನರ್ಜನ್ಮ ರಹಿತನಾಗುತ್ತಾನೆ. ಅಹೋಬಲ ದರ್ಶನದಿಂದ ಮಾನವರು ಅರವತ್ತು ಯಜ್ಞಗಳನ್ನು ಮಾಡಿದ ಪುಣ್ಯಫಲವನ್ನು ಪಡೆಯುತ್ತಾರೆ. ಶ್ರೀರಂಗ ದರ್ಶನದಿಂದಲೂ ಸಹ ಮಾನವರಿಗೆ ಪುನರ್ಜನ್ಮವಿರುವುದಿಲ್ಲ.

ಶಿಷ್ಯರೇ, ನಾನು ಹೇಳಿದ ಸರ್ವ ತೀರ್ಥಗಳನ್ನೂ ವಿಧ್ಯುಕ್ತವಾಗಿ ಸೇವಿಸಿರಿ. ನದಿ ರಜಸ್ವಲೆಯಾಗಿರುವಾಗ ಅದರಲ್ಲಿ ಸ್ನಾನ ಮಾಡುವುದು ದೋಷಕರವು. ರವಿ ಕರ್ಕಾಟಕ ಸಂಕ್ರಾಂತಿಯಿಂದ ಎರಡು ತಿಂಗಳು ನದಿಸ್ನಾನಗಳನ್ನು ಬಿಟ್ಟುಬಿಡಬೇಕು. ನದೀ ತೀರದಲ್ಲಿ ವಾಸಿಸುವವರಿಗೆ ಮಾತ್ರ ಈ ದೋಷವಿರುವುದಿಲ್ಲ ಎಂಬುದು ವಿಶೇಷ. ಮಳೆಗಾಲದಲ್ಲಿ ಸರ್ವನದಿಗಳೂ ರಜಸ್ವಲೆಯರಾಗೇ ಇರುತ್ತವೆ. ರಜೋದೋಷವು ಉಂಟಾದಾಗ ಮೂರುದಿನ ನದಿಗಳಲ್ಲಿ ಸ್ನಾನಾದಿಗಳು ಮಾಡುವುದನ್ನು ಬಿಟ್ಟುಬಿಡಬೇಕು. ಭಾಗೀರಥಿ, ಚಂದ್ರಭಾಗ, ಸಿಂಧು, ಗೌತಮಿ, ಸರಯು, ನರ್ಮದ, ನದಿಗಳಿಗೆ ರಜೋದೋಷವು ಬಂದಾಗಲೂ ಮೂರುದಿನ ಸ್ನಾನಾದಿಗಳು ನಿಷಿದ್ಧ. ಗ್ರೀಷ್ಮ ಋತುವು ಮುಗಿದನಂತರ ಸರ್ವ ನದಿಗಳೂ ಹತ್ತು ದಿನಗಳ ಕಾಲ ರಜಸ್ವಲೆಯಾಗಿರುತ್ತವೆ. ವಾಪಿ ಕೂಪ ತಟಾಕಾದಿಗಳು ಸರ್ವ ಕಾಲದಲ್ಲೂ ರಜಸ್ವಲ್ವೆಗಳೇ! ಹೊಸನೀರು ಬಂದಾಗ ನದಿಗಳು ರಜಸ್ವಲೆಯರೆಂದು ತಿಳಿಯಬೇಕು. ಆಗ ಸ್ನಾನಾದಿಗಳನ್ನು ಮಾಡುವುದು, ಮುಂಚೆಯೇ ಹೇಳಿದಂತೆ, ಮಹಾದೋಷ. ಆದ್ದರಿಂದ ಆ ಕಾಲದಲ್ಲಿ ನದಿಗಳನ್ನು ಬಿಡಬೇಕು. ಅಂತಹ ಸಮಯದಲ್ಲಿ ತೀರ್ಥ ದರ್ಶನವಾದರೆ, ವಿಧ್ಯುಕ್ತವಾಗಿ ಸ್ನಾನ ಕ್ಷೌರ ಉಪವಾಸಗಳನ್ನು ಆಚರಿಸಬೇಕು" ಎಂದು ಶ್ರೀಗುರುವು ಅವರಿಗೆ ವಿವರಿಸಿ, ಹೊರಡಲು ಅಪ್ಪಣೆ ಕೊಟ್ಟರು. ಶಿಷ್ಯರೆಲ್ಲರೂ, ಗುರುವಚನಗಳನ್ನು ಮನಸ್ಸಿನಲ್ಲಿಟ್ಟು, ಅವರಿಗೆ ನಮಸ್ಕರಿಸಿ, ತೀರ್ಥಯಾತ್ರೆಗಳಿಗೆ ಹೊರಟರು. ಶ್ರೀಗುರುವು ಮಾತ್ರ ಅಲ್ಲಿಯೇ ರಹಸ್ಯವಾಗಿ ನಿಂತರು. ಶ್ರೀಗುರುವಿನ ಸೇವೆಗೆಂದು ನಾನು ಅವರ ಜೊತೆಯಲ್ಲಿಯೇ ಇದ್ದೆ" ಎಂದು ಸಿದ್ಧಮುನಿ ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಹದಿನೈದನೆಯ ಅಧ್ಯಾಯ ಮುಗಿಯಿತು.



No comments:

Post a Comment