Tuesday, February 19, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತೆರಡನೆಯ ಅಧ್ಯಾಯ||

ನಾಮಧಾರಕನು ಮತ್ತೆ ಸಿದ್ಧಮುನಿಗೆ ನಮಸ್ಕರಿಸಿ, ಕೈಜೋಡಿಸಿ, ವಿನಮ್ರನಾಗಿ, "ಯೋಗೀಶ್ವರ, ನನ್ನ ಅಜ್ಞಾನಾಂಧಕಾರವನ್ನು ತೊಲಗಿಸಿದ ಜ್ಯೋತಿಯು ನೀವೇ. ನಿಮ್ಮ ಪಾದ ಸ್ಪರ್ಶದಿಂದಲೇ ನನಗೆ ಜ್ಞಾನೋದಯವಾಯಿತು. ಹೇ ಸಿದ್ಧಪುರುಷ, ಕಾಮಧೇನುವಿನಂತಹ ಗುರುಚರಿತ್ರೆಯನ್ನು ವಿಸ್ತರಿಸಿ ಹೇಳಿದಿರಿ. ಆದರೂ ನನಗೆ ತೃಪ್ತಿಯಾಗಲಿಲ್ಲ. ಇನ್ನೂ ಇನ್ನೂ ಕೇಳಬೇಕೆನಿಸುತ್ತಿದೆ. ಶ್ರೀಗುರುವು ಗಂಧರ್ವಪುರವನ್ನು ಸೇರಿದರು ಎಂದು ಹೇಳಿದಿರಿ. ಅವರು ಅಲ್ಲಿ ನಡೆಸಿದ ಲೀಲಾ ವಿಶೇಷಗಳನ್ನು ವಿಸ್ತಾರವಾಗಿ ಹೇಳುವ ಕೃಪೆಮಾಡಿ" ಎಂದು ಪ್ರಾರ್ಥಿಸಿದನು.

ಅದಕ್ಕೆ ಸಿದ್ಧಮುನಿಯು, "ನಾಮಧಾರಕ, ನಿನಗೆ ಗುರುಕೃಪೆಯಾಯಿತು. ಶ್ರೀಗುರುವಿನ ಚರಿತ್ರೆಯನ್ನು ಹೇಳಲು ನನಗೂ ಬಹಳ ಸಂತಸವೇ! ಅನಂತ ಮಹಿಮೆಯುಳ್ಳ ಈ ಗುರುಚರಿತ್ರೆಯು ಅಪಾರವಾದದ್ದು. ಶ್ರೀಗುರುವು ಗಂಧರ್ವ ಪುರದಲ್ಲಿ ಗುಪ್ತರೂಪಿಗಳಾಗಿ ನಿಂತರೆಂದು ಹೇಳಿದ್ದೆನಲ್ಲವೆ? ಅಲ್ಲಿ ನಡೆದ ಪ್ರಸಂಗವೊಂದನ್ನು ತಿಳಿಸುತ್ತೇನೆ. ಸಮಾಧಾನ ಚಿತ್ತನಾಗಿ ಕೇಳು.

ಉತ್ತರ ವಾಹಿನಿಯಾಗಿರುವ, ಭೀಮಾ-ಅಮರಜಾ ನದಿಗಳ ಆ ಸಂಗಮ ಪ್ರದೇಶ ಪ್ರಯಾಗಕ್ಕೆ ಸಮಾನವಾದ ತೀರ್ಥಕ್ಷೇತ್ರ. ಅದು ಅಶ್ವತ್ಥ ವೃಕ್ಷಗಳಿಂದ ಕೂಡಿದ್ದು, ಅದರ ಮಹಿಮೆ ಅಪಾರವಾದದ್ದು. ಅಲ್ಲಿ ಎಂಟು ತೀರ್ಥಗಳಿವೆ. ಶ್ರೀಗುರುವು ಅಲ್ಲಿ ಭಕ್ತೋದ್ಧಾರಕನಾಗಿ, ತೀರ್ಥ ಮಹಿಮೆಯನ್ನು ಪ್ರಕಟಗೊಳಿಸಲು ನಿಂತರು. ಶ್ರೀಗುರುವಿನ ಪಾದಗಳೇ ಸಕಲ ತೀರ್ಥಗಳು ಎಂಬ ವೇದ ವಚನ ನಿಜವಾದರೆ ತೀರ್ಥ ಕ್ಷೇತ್ರಗಳ ಉಪಯೋಗವೇನು ಎಂದು ಕೇಳಬಹುದು. ಶ್ರೀಗುರುವು ಭಕ್ತ ಜನರ ಉದ್ಧಾರಕ್ಕೆಂದೇ ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ. ಪ್ರಜ್ವಲಿಸುವ ಸೂರ್ಯ ಗುಪ್ತನಾಗಿರಲು ಸಾಧ್ಯವೇ? ಗಂಧರ್ವ ಪುರದಲ್ಲಿ ಗುಪ್ತ ರೂಪದಲ್ಲಿದ್ದ ಶ್ರೀಗುರುವು ಪ್ರತ್ಯಕ್ಷಗೊಳ್ಳಲು ಕಾರಣವೇನು ಎಂದು ಹೇಳುತ್ತೇನೆ ಕೇಳು.

ಶ್ರೀಗುರುವು ಪ್ರತಿದಿನ ಊರೊಳಕ್ಕೆ ಮಧ್ಯಾನ್ಹ ಸಮಯದಲ್ಲಿ ಭಿಕ್ಷೆಗೆಂದು ಹೋಗುತ್ತಿದ್ದರು. ಗಂಧರ್ವ ಪುರದಲ್ಲಿ ಅನೇಕ ಬ್ರಾಹ್ಮಣರ ಮನೆಗಳುಂಟು. ಅವರಲ್ಲಿ ಬಡವನಾದ ಬ್ರಾಹ್ಮಣನೊಬ್ಬನಿದ್ದ. ಅವನ ಮನೆಯಲ್ಲಿ ಮುದಿಯಾದ ಗೊಡ್ಡೆಮ್ಮೆಯೊಂದಿತ್ತು. ಅದರ ಹಲ್ಲುಗಳು ಬಿದ್ದುಹೋಗಿದ್ದವು. ಊರಿನ ಜನ ಅದನ್ನು ಮರಳು ಹೊರುವುದಕ್ಕೆಂದು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆ ಬ್ರಾಹ್ಮಣ ದಂಪತಿಗಳು ಅದರಿಂದ ಬಂದ ಬಾಡಿಗೆಯ ಹಣದಿಂದಲೂ, ಬ್ರಾಹ್ಮಣನು ತಂದ ಭಿಕ್ಷೆಯಿಂದಲೂ ಜೀವನ ಸಾಗಿಸುತ್ತಿದ್ದರು.

ಶ್ರೀಗುರುವು ಆಗಾಗ ಆ ಬಡ ಬ್ರಾಹ್ಮಣನ ಮನೆಗೂ ಭಿಕ್ಷೆಗೆಂದು ಹೋಗುತ್ತಿದ್ದರು. ಆಗೆಲ್ಲಾ, ಇತರ ಬ್ರಾಹ್ಮಣರು, "ಶ್ರೀಗುರುವು ಆ ದರಿದ್ರನ ಮನೆಗೆ ಏಕೆ ಭಿಕ್ಷೆಗೆ ಹೋಗುತ್ತಾರೆ? ಅಲ್ಲಿ ಅವರಿಗೆ ಏನು ಸಿಗುತ್ತದೆ? ನಾವು ಶ್ರೋತ್ರೀಯರು. ನಮ್ಮ ಮನೆಗಳಲ್ಲಿ ನಿತ್ಯವೂ ಷಡ್ರಸೋಪವೇತವಾದ ಮೃಷ್ಟಾನ್ನ ಸಿಗುತ್ತದೆ. ನಮ್ಮನ್ನು ಬಿಟ್ಟು ಅವನ ಮನೆಗೆ ಹೋಗುವುದಾದರೂ ಏತಕ್ಕೆ? " ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು.

ಶ್ರೀ ಕೃಷ್ಣ ದುರ್ಯೋಧನ ರಾಜಭೊಜನವನ್ನೇ ನೀಡಿದರೂ, ಅದನ್ನು ಬಿಟ್ಟು ವಿದುರನ ಮನೆಗೆ ಹೋದನಲ್ಲವೇ? ಹಾಗೇ ಶ್ರೀಗುರುವು ಸಾತ್ವಿಕ ಬುದ್ಧಿಯುಳ್ಳವರಲ್ಲಿ ಅತಿಶಯ ಪ್ರೀತಿಯಿಟ್ಟಿದ್ದರೇ ಹೊರತು ಧನ ಮದದಿಂದ ಕೂಡಿದವರಲ್ಲಲ್ಲ. ಕ್ಷಣ ಮಾತ್ರದಲ್ಲಿ ಅಧನನನ್ನು ಧನಿಕನನ್ನಾಗಿ ಮಾಡಬಲ್ಲ ಅವರಿಗೆ ಧನ ಮದಾಂಧಕಾರಿಗಳಿಂದ ಆಗಬೇಕಾದ್ದೇನು? ಬ್ರಹ್ಮಲಿಪಿಯನ್ನೇ ಬದಲಿಸಬಲ್ಲ ಅವರಿಗೆ ಅಸಾಧ್ಯವಾದದ್ದೇನೂ ಇಲ್ಲ. ಅವರಿಗೆ ಭಿಕ್ಷೆಯನ್ನಿತ್ತ ಜನ ಪುಣ್ಯವಂತರೇ!

ಒಂದುದಿನ ಆ ಬಡ ಬ್ರಾಹ್ಮಣನ ಗೊಡ್ಡೆಮ್ಮೆಯನ್ನು ಯಾರೂ ಬಾಡಿಗೆಗೆ ಕರೆದುಕೊಂಡು ಹೋಗಲಿಲ್ಲ. ಆಗ ಬೇಸಗೆಯ ಕಾಲ. ಮಧ್ಯಾಹ್ನ ಪ್ರಖರವಾದ ಬಿಸಿಲು ತಲೆಯಮೇಲೆ ಸುಡುತ್ತಿತ್ತು. ಅಂದು ಶ್ರೀಗುರುವು ಆ ಬಡವನ ಮನೆಗೆ ಭಿಕ್ಷಕ್ಕೆಂದು ಹೋದರು. ಬ್ರಾಹ್ಮಣನ ಹೆಂಡತಿ ಅವರನ್ನು ಆದರದಿಂದ ಸ್ವಾಗತಿಸಿ, ಪೀಠವನ್ನಿತ್ತು ಕುಳಿತು ಕೊಳ್ಳಲು ಹೇಳಿ, "ನನ್ನ ಗಂಡ ಭಿಕ್ಷೆಗೆಂದು ಊರೊಳಕ್ಕೆ ಹೋಗಿದ್ದಾರೆ. ಇನ್ನೇನು ಬರುವ ಸಮಯವಾಯಿತು. ಅಲ್ಲಿಯವರೆಗೂ ವಿಶ್ರಮಿಸಿಕೊಳ್ಳಿ" ಎಂದು ವಿನಮ್ರಳಾಗಿ ಹೇಳಿದಳು. ಅದಕ್ಕೆ ಶ್ರೀಗುರುವು, "ನಿನ್ನ ಗಂಡ ಬರಲು ಇನ್ನೂ ಎಷ್ಟು ಹೊತ್ತಾಗುತ್ತದೆಯೋ? ನಮಗೆ ಭಿಕ್ಷಾನ್ನವೇ ಆಗಬೇಕೆಂದೇನೂ ಇಲ್ಲ. ನಿಮ್ಮ ಮನೆಯ ಬಾಗಿಲಿನಲ್ಲಿರುವ ಎಮ್ಮೆಯಿಂದ ಸ್ವಲ್ಪ ಹಾಲು ಕರೆದು ಕೊಟ್ಟರೂ ಸಾಕು" ಎಂದು ನಗುತ್ತಾ ಹೇಳಿದರು. ಅದಕ್ಕೆ ಆಕೆ, ವಿನಯದಿಂದ, "ಸ್ವಾಮಿ, ಆ ಎಮ್ಮೆ ಮುದಿಯಾಗಿದೆ. ಗೊಡ್ಡು. ಭೂಮಿ ಉಳುವುದಕ್ಕೆಂದು ಉಪಯೋಗಿಸುತ್ತಿದ್ದ ಅದನ್ನು ಈಗ ಮರಳು ಹೊರುವುದಕ್ಕೆಂದು ಊರಿನವರು ಕರೆದು ಕೊಂಡು ಹೋಗುತ್ತಾರೆ. ಹೇ, ಯತೀಶ್ವರ, ಅದರಿಂದ ಬರುವ ಬಾಡಿಗೆಯಿಂದ ನಾವು ಜೀವನ ನಡೆಸುತ್ತಿದ್ದೇವೆ" ಎಂದು ಹೇಳಿದಳು. ಅದಕ್ಕೆ ಶ್ರೀಗುರುವು, "ನನ್ನಲ್ಲಿ ನೀನು ಅಸತ್ಯವಾಡಬಾರದು. ಈಗಲೇ ಆ ಎಮ್ಮೆಯಿಂದ ಹಾಲು ಕರೆದು ನನಗೆ ಕೊಡು" ಎಂದರು. ಅವರ ಮಾತುಗಳನ್ನು ಕೇಳಿದ ಆ ವನಿತೆ, ನಿಜವೇನೋ ಅವರಿಗೆ ತಿಳಿಯಲಿ ಎಂದು ಯೋಚನೆ ಮಾಡುತ್ತಾ, ಪಾತ್ರೆ ಹಿಡಿದು ಹಾಲು ಕರೆಯಲು ಆರಂಭಿಸಿದಳು.

ಚಮತ್ಕಾರವೋ ಎಂಬಂತೆ ಆ ಗೊಡ್ಡೆಮ್ಮೆ ಎರಡು ಪಾತ್ರೆಗಳ ತುಂಬಾ ಹಾಲು ಕೊಟ್ಟಿತು. ಆಶ್ಚರ್ಯಗೊಂಡ ಅವಳು, "ಆಹಾ, ಈ ಯತಿ ಈಶ್ವರನೇ!" ಎಂದು ಕೊಳ್ಳುತ್ತಾ, ಮನೆಯೊಳಕ್ಕೆ ಹೋಗಿ ಹಾಲನ್ನು ಕಾಯಿಸಿ, ಅದನ್ನು ಶ್ರೀಗುರುವಿಗೆ ಭಿಕ್ಷೆಯಾಗಿ ನೀಡಲು ಹೋಗುವಷ್ಟರಲ್ಲಿ, ಶ್ರೀಗುರುವು ಮತ್ತೊಮ್ಮೆ, "ಅಮ್ಮಾ, ತಡ ಮಾಡಬೇಡ. ನಮಗೆ ಸಂಗಮಕ್ಕೆ ತ್ವರೆಯಾಗಿ ಹಿಂತಿರುಗ ಬೇಕಾಗಿದೆ" ಎಂದರು. ತಡ ಮಾಡದೆ ಅವಳು ಕಾಯಿಸಿದ ಹಾಲನ್ನು ತಂದು ಶ್ರೀಗುರುವಿಗೆ ಭಿಕ್ಷೆಯಾಗಿ ಅರ್ಪಿಸಿದಳು. ಶ್ರೀಗುರುವು ಅದನ್ನು ಸ್ವೀಕರಿಸಿ, ಬಹಳ ಸಂತೋಷಗೊಂಡು, "ನಿಮ್ಮ ಮನೆಯಲ್ಲಿ ಲಕ್ಷ್ಮಿ, ಅಖಂಡವಾಗಿ, ನಿರಂತರವಾಗಿ ನೆಲೆಸಲಿ. ನೀವು ಪುತ್ರ ಪೌತ್ರರಿಂದ ಕೂಡಿ, ಸಕಲ ಸಂಪದಗಳನ್ನು ಪಡೆದು, ಸುಖವಾಗಿ ಬಾಳಿ" ಎಂದು ಆಶೀರ್ವದಿಸಿ, ಸಂಗಮಕ್ಕೆ ಹಿಂತಿರುಗಿದರು.

ಭಿಕ್ಷೆಯಿಂದ ಹಿಂತಿರುಗಿದ ಬ್ರಾಹ್ಮಣನಿಗೆ ಅವನ ಹೆಂಡತಿ ನಡೆದ ವಿಷಯವನ್ನೆಲ್ಲಾ ಹೇಳಿದಳು. ಅವಳ ಮಾತುಗಳನ್ನು ಕೇಳಿ ಆಶ್ಚರ್ಯಗೊಂಡ ಆ ಬ್ರಾಹ್ಮಣ, "ಇದು ಬಹಳ ಆಶ್ಚರ್ಯಕರವಾದ ವಿಷಯವೇ! ಸಾಮಾನ್ಯರಂತೆ ಕಾಣುತ್ತಿರುವ ಆ ಸನ್ಯಾಸಿ ನಿಜವಾಗಲೂ ಪರಮಾತ್ಮನೇ!" ಎಂದು ಹೇಳಿ, ತನ್ನ ಹೆಂಡತಿಯೊಡನೆ ಶ್ರೀಗುರುವಿನ ದರ್ಶನಕ್ಕೆ ಹೋದನು. ಭಕ್ತಿಯಿಂದ ಶ್ರೀಗುರುವಿಗೆ ಸ್ತೋತ್ರಾದಿ ಪೂಜೆಗಳನ್ನು ಭಕ್ತಿಯಿಂದ ಅರ್ಪಿಸಿದನು. ಸಂತುಷ್ಟರಾದ ಶ್ರೀಗುರುವು ಅವರನ್ನು ಮತ್ತೊಮ್ಮೆ ಹರಸಿದರು. ಗುರುವಿನಿಂದ ಅನುಗ್ರಹೀತರಾದ ಅವರಿಬ್ಬರೂ ತಮ್ಮ ಮನೆಗೆ ಹಿಂತಿರುಗಿದರು. ಕಾಲಾನಂತರದಲ್ಲಿ ಅವರು ಸಂಪದ್ಭರಿತರಾಗಿ, ಸುಸಂತಾನವನ್ನು ಪಡೆದು, ಪೂರ್ಣಾಯುಷಿಗಳಾಗಿ, ಸುಖವಾಗಿ ಜೀವನ ಮಾಡಿದರು.

ಕೇಳಿದೆಯಾ ನಾಮಧಾರಕ, ಗುರುಕೃಪೆಯೆನ್ನುವುದು ಎಂತಹುದು ಎಂದು! ಶ್ರೀಗುರುವಿನ ದಯೆಯಿದ್ದರೆ ದೈನ್ಯವೆನ್ನುವುದು ಎಲ್ಲಿರುತ್ತದೆ?" ಎಂದು ಹೇಳಿದರು. 

ಇಲ್ಲಿಗೆ ಇಪ್ಪತ್ತೆರಡನೆಯ ಅಧ್ಯಾಯ ಮುಗಿಯಿತು.






No comments:

Post a Comment