Wednesday, February 20, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತನಾಲ್ಕನೆಯ ಅಧ್ಯಾಯ||

ನಾಮಧಾರಕ, "ಸ್ವಾಮಿ, ಅಲ್ಲಿ ನಡೆದ ಘಟನೆ ಏನು? ಕೃಪೆಯಿಟ್ಟು ವಿಸ್ತಾರವಾಗಿ ಹೇಳಿ" ಎಂದು ಕಾತರನಾಗಿ ಕೇಳಿದನು.

ಅದಕ್ಕೆ ಸಿದ್ಧಮುನಿ, "ಕುಮಸಿಯಲ್ಲಿದ್ದ ತ್ರಿವಿಕ್ರಮ ಭಾರತಿ ಶ್ರೀಗುರುವನ್ನು ನಿಂದಿಸುತ್ತಿದ್ದಾನೆಂದು ರಾಜನಿಗೆ ತಿಳಿಯಿತು. ಅವನು ಆ ವಿಷಯವನ್ನು ಶ್ರೀಗುರುವಿಗೂ ಹೇಳಿ, ಅವರನ್ನು ಕುಮಸಿಗೆ ಕರೆದು ಕೊಂಡು ಹೋಗಲು ನಿರ್ಧರಿಸಿದನು. ಅವನ ನಿರ್ಧಾರದಂತೆ, ಶ್ರೀಗುರುವಿನ ಅನುಮತಿ ಪಡೆದು, ಆ ರಾಜ ಅಶ್ವ, ಗಜ, ಪದಾತಿಗಳಿಂದ ಕೂಡಿದ ಸೈನ್ಯದೊಡನೆ, ಶ್ರೀಗುರುವನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕೂಡಿಸಿ, ಕರೆದು ಕೊಂಡು ಕುಮಸಿಗೆ ಹೊರಟನು.

ಪ್ರತಿ ದಿನವೂ ನೃಸಿಂಹ ಸ್ವಾಮಿಯ ಮಾನಸಪೂಜೆ ಮಾಡಿಕೊಳ್ಳುತ್ತಿದ್ದ ತ್ರಿವಿಕ್ರಮ ಭಾರತಿಗೆ, ಶ್ರೀಗುರುವು ಕುಮಸಿಗೆ ಹೊರಟ ದಿನ, ಎಂದಿನಂತೆ ಅವನ ಮಾನಸ ಪೂಜೆಯಲ್ಲಿ ನೃಸಿಂಹ ಸ್ವಾಮಿಯ ದರ್ಶನವಾಗಲಿಲ್ಲ. ಅದರಿಂದ ಅವನು ವಿಚಲಿತ ಮನಸ್ಕನಾಗಿ, "ಹೇ ನೃಸಿಂಹ, ಬಹಳ ಕಾಲದಿಂದ ನಿನ್ನನ್ನು ಆರಾಧಿಸುತ್ತಿರುವ ನನ್ನನ್ನು ಇಂದು ಏಕೆ ಉಪೇಕ್ಷಿಸುತ್ತಿದ್ದೀಯೆ? ನನ್ನ ತಪಸ್ಸೆಲ್ಲವೂ ವ್ಯರ್ಥವಾಯಿತು. ಈಗ ನಾನೇನು ಮಾಡಲಿ?" ಎಂದು ಆರ್ತನಾಗಿ ಬೇಡಿಕೊಳ್ಳುತ್ತಿದ್ದ ಅವನ ಮನೋ ಚಕ್ಷುಗಳಿಗೆ, ನೃಸಿಂಹನ ಬದಲು ಶ್ರೀಗುರುವು ಕಾಣಿಸಿ ಕೊಂಡರು. ಅದರಿಂದ ಆಶ್ಚರ್ಯಗೊಂಡ ಅವನು, ತಕ್ಷಣವೇ ಎಚ್ಚರಗೊಂಡು, ದಂಡ ಧಾರಿಯಾಗಿ ಕುಮಸಿಗೆ ಬರುತ್ತಿದ್ದ ಶ್ರೀಗುರುವಿನ ಬಳಿಗೆ ಹೋಗಿ ಅವರಿಗೆ ನಮಸ್ಕರಿಸಿದನು. ಅವನು ನಮಸ್ಕರಿಸಿ ಏಳುತ್ತಿದ್ದಂತೆಯೇ ಅವನಿಗೆ ಶ್ರೀಗುರುವಿನೊಡನೆ ಬಂದಿದ್ದ ಪರಿವಾರವೆಲ್ಲವೂ ಶ್ರೀಗುರುವಿನ ರೂಪದಲ್ಲೇ ಕಾಣಿಸಿದರು. ಆ ಗುರು ರೂಪಿಗಳ ಸಮೂಹದಲ್ಲಿ ನಿಜವಾದ ಶ್ರೀಗುರುವು ಯಾರು ಎಂಬುದನ್ನು ತಿಳಿಯಲಾರದೇ ಹೋದ ತ್ರಿವಿಕ್ರಮ ಭಾರತಿ, ಮತ್ತೆ ದಂಡ ಪ್ರಣಾಮ ಮಾಡಿ, "ಹೇ ಸ್ವಾಮಿ, ಬ್ರಹ್ಮ, ವಿಷ್ಣು, ಮಹೇಶ್ವರ ರೂಪನಾದ ಜಗದ್ಗುರುವೇ, ಮಾಯೆ ಎಂಬ ಅಂಧಕಾರದಲ್ಲಿ ಮುಳುಗಿದ ನಾನು ನಿಮ್ಮನ್ನು ತಿಳಿಯಲಾರದೇ ಹೋದೆ. ನೀವು ಸರ್ವವ್ಯಾಪಕರು. ನೃಸಿಂಹನೇ ನಿಮ್ಮ ರೂಪದಲ್ಲಿದ್ದಾನೆ. ಇಲ್ಲಿ ಎಲ್ಲರಲ್ಲೂ ನೀವೇ ಕಾಣುತ್ತಿರುವಾಗ ನಾನು ಯಾರಿಗೆಂದು ಶರಣಾಗಲಿ? ನೀವೇ ತ್ರಿಮೂರ್ತಿ ಸ್ವರೂಪನೆಂದು ಅರಿಯಲಾರದೇ ಹೋದೆ. ನನ್ನಲ್ಲಿ ದಯೆತೋರಿ ನಿಮ್ಮ ನಿಜರೂಪವನ್ನು ತೋರಿಸುವ ಕೃಪೆಮಾಡಿ. ಇಷ್ಟು ಕಾಲದಿಂದ ನಾನು ಮಾಡಿದ ತಪಸ್ಸು ಇಂದು ಫಲವಾಯಿತು. ಹೇ ವಿಶ್ವೋದ್ಧಾರಕ, ನನ್ನನ್ನು ಉದ್ಧರಿಸಲೆಂದೇ ಮಾನವ ರೂಪದಲ್ಲಿದ್ದುಕೊಂಡೂ, ನೀವು ನಿಮ್ಮ ವಿಶ್ವ ರೂಪವನ್ನು ತೋರಿಸಿದಿರಿ" ಎಂದು ಸ್ತುತಿಸುತ್ತಾ, ಕಳಕಳಿಯಿಂದ ಬೇಡಿಕೊಂಡನು.

ಅವನ ಸ್ತುತಿಯಿಂದ ಪ್ರಸನ್ನನಾದ ಶ್ರೀಗುರುವು, ಅವನಿಗೆ ತಮ್ಮ ನಿಜರೂಪದಿಂದ ದರ್ಶನ ಕೊಟ್ಟು, "ಅಯ್ಯಾ, ನಮ್ಮನ್ನು ಡಾಂಭಿಕರೆಂದು ನಿಂದಿಸುತ್ತಿದ್ದೀಯೇಕೆ? ಅದನ್ನು ಕೇಳ ಬೇಕೆಂದೇ ನಾವು ಇಲ್ಲಿಗೆ ಬಂದೆವು. ನೀನು ನೃಸಿಂಹನ ಪೂಜೆ ಮಾಡುತ್ತಿದ್ದೀಯೆ. ಡಂಭವೆಂದರೆ ಏನು ಎಂಬುದನ್ನು ನಮಗೆ ವಿಸ್ತರಿಸಿ ಹೇಳು" ಎಂದರು. ಅದಕ್ಕೆ ತ್ರಿವಿಕ್ರಮ ಭಾರತಿ ಮತ್ತೆ ಶ್ರೀಗುರುವಿನ ಪಾದಗಳಿಗೆ ನಮಸ್ಕರಿಸಿ, "ಸ್ವಾಮಿ, ನಾನೊಬ್ಬ ಅಜ್ಞಾನಿ. ನನ್ನನ್ನು ಕ್ಷಮಿಸಿ. ಅಜ್ಞಾನಾಂಧಕಾರದಲ್ಲಿ ಮುಳುಗಿರುವ ನಾನು, ಹಗಲು ಕುರುಡಾದ ಗೂಬೆಯಂತೆ, ನಿಮ್ಮನ್ನು ತಿಳಿಯಲಾರದೇ ಹೋದೆ. ನನ್ನ ಅಪರಾಧವನ್ನು ಮನ್ನಿಸಿ, ನನ್ನನ್ನು ರಕ್ಷಿಸಿ, ಕಾಪಾಡಿ. ಪೂರ್ವ ಕೃತ ಕರ್ಮಫಲಗಳೆಂಬ ಭ್ರಮೆಯಲ್ಲಿ ಸಿಲುಕಿ ಒದ್ದಾಡುತ್ತಿರುವ ನಾನು, ನಿಮ್ಮ ನಿಜ ಸ್ವರೂಪವನ್ನು ಅರಿಯಲಾರದೇ ಹೋದೆ. ಕೃಪಾ ಸಾಗರ, ಜ್ಞಾನವೆಂಬ ನಾವೆಯಲ್ಲಿ ಕೂಡಿಸಿ, ಕೃಪೆಯೆಂಬ ಗಾಳಿಯನ್ನು ಬೀಸಿ, ನನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸಿ, ಸೇರ ಬೇಕಾದ ಗುರಿಯನ್ನು ಮುಟ್ಟುವಂತೆ ಮಾಡಿ. ಹೇ ದಯಾನಿಧಿ, ನಿಮ್ಮ ಕೃಪೆಯಿದ್ದವನು ಹೇಗೆತಾನೇ ದೀನನಾಗಬಲ್ಲ? ಅಂತಹವನಲ್ಲಿ ದೈನ್ಯ, ದುಃಖಗಳು ಹೇಗೆ ತಾನೇ ಇರಬಲ್ಲವು? ಅಂದು ಶ್ರೀ ಕೃಷ್ಣ ಅರ್ಜುನನಿಗೆ ವಿಶ್ವರೂಪವನ್ನು ತೋರಿಸಿದಂತೆ, ಇಂದು ನೀವು ನನಗೆ ನಿಮ್ಮ ವಿಶ್ವರೂಪದ ದರ್ಶನ ಮಾಡಿಸಿದಿರಿ. ಭಕ್ತವತ್ಸಲ, ನಿಮ್ಮ ಮಹಿಮೆ ಅಪಾರವಾದುದು. ಹೇ ಜಗದ್ಗುರು, ಜಯವಾಗಲಿ, ಜಯವಾಗಲಿ. ನೃಸಿಂಹ ಸರಸ್ವತಿಯ ರೂಪದಲ್ಲಿ ಬಂದಿರುವ ನೀವು ಆ ತ್ರಿಮೂರ್ತ್ಯವತಾರರೇ! ನೀವೇ ನನ್ನ ಆರಾಧ್ಯದೈವ ನೃಸಿಂಹಸ್ವಾಮಿ! ನಿಮ್ಮ ಪಾದ ದರ್ಶನದಿಂದ ಇಂದು ನಾನು ಕೃತಾರ್ಥನಾದೆ. ವಿದುರನ ಮನೆಗೆ ಶ್ರೀಕೃಷ್ಣ ಹೋದಂತೆ, ಭಕ್ತವತ್ಸಲರಾದ ನೀವೇ ನನ್ನ ಬಳಿಗೆ ಬಂದಿರಿ. ನಿಮ್ಮ ಅನಂತವಾದ ಮಹಿಮೆಯನ್ನು ನನ್ನಂತಹ ಪಾಮರ ಹೇಗೆ ಬಣ್ಣಿಸಬಲ್ಲ?" ಎಂದು ಅನೇಕ ರೀತಿಗಳಲ್ಲಿ ಶ್ರೀಗುರುವಿನ ಸ್ತೋತ್ರ ಮಾಡಿದನು. ಅವನ ಸ್ತೋತ್ರದಿಂದ ಸಂಪ್ರೀತರಾದ ಶ್ರೀಗುರುವು, "ತ್ರಿವಿಕ್ರಮ, ನಿನ್ನ ಭಕ್ತಿಗೆ ಮೆಚ್ಚಿದೆ. ನೀನು ಇಲ್ಲಿಯೇ ನೃಸಿಂಹನ ಪೂಜೆಯಲ್ಲಿ ನಿರತನಾಗಿರು. ನಿನಗೆ ಪುನರ್ಜನ್ಮವಿಲ್ಲದ ಸದ್ಗತಿಯುಂಟಾಗುತ್ತದೆ. ಆ ಪರಮಾತ್ಮನಲ್ಲಿ ಲೀನವಾಗುತ್ತೀಯೆ" ಎಂದು ಆಶೀರ್ವದಿಸಿ, ತಮ್ಮ ಸ್ವಸ್ಥಾನಕ್ಕೆ ಹಿಂತಿರುಗಿದರು.

ನಾಮಧಾರಕ, ಶ್ರೀಗುರುವಿನ ಮಹಿಮೆಗಳು ಅಪರಿಮಿತವಾದವು. ಇಲ್ಲಿ ಮಾನುಷ ರೂಪದಲ್ಲಿರುವ ಶ್ರೀಗುರುವನ್ನು ತ್ರಿಮೂರ್ತಿಗಳ ಅವತಾರ ರೂಪಿಯಲ್ಲವೆಂದು ಅಲ್ಲಗಳೆದವರು, ಏಳೇಳು ಜನ್ಮಗಳಲ್ಲೂ ರೌರವಾದಿ ನರಕಗಳಲ್ಲಿ ಬಿದ್ದು ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಗುರುವೇ ಬ್ರಹ್ಮ, ವಿಷ್ಣು, ಮಹೇಶ್ವರ. ಅದರಿಂದಲೇ ಶ್ರೀಗುರುವಿನ ಪಾದಗಳನ್ನು ಆಶ್ರಯಿಸಿದವರು ತ್ರಿಮೂರ್ತಿಗಳ ಅನುಗ್ರಹವನ್ನು ಪಡೆಯುತ್ತಾರೆ. ಶ್ರೀಗುರು ಕಥೆಗಳೆನ್ನುವ ಅಮೃತವನ್ನು ಸೂಸುವ ಅರವಂಟಿಗೆಗಳಿಂದ ಅಮೃತಪಾನ ಮಾಡಿ, ತರಿಸಿ" ಎಂದು ಹೇಳಿದರು. 

ಇಲ್ಲಿಗೆ ಇಪ್ಪತ್ತನಾಲ್ಕನೆಯ ಅಧ್ಯಾಯ ಮುಗಿಯಿತು. 

||ಜ್ಞಾನಕಾಂ ಸಮಾಪ್ತಿ||



No comments:

Post a Comment