Sunday, February 17, 2013

||ಶ್ರೀ ಗುರು ಚರಿತ್ರೆ - ಹದಿನೆಂಟನೆಯ ಅಧ್ಯಾಯ||

"ಸ್ವಾಮಿ, ಸಿದ್ಧಮುನಿ, ಭವಾರ್ಣವ ತಾರಕ, ಗುರುಪಾದಾಂಬುಜ ಧ್ಯಾನವನ್ನು ಎಷ್ಟು ಮಾಡಿದರೂ ತೃಪ್ತಿಯಾಗುವುದಿಲ್ಲ. ಎಂದು ನಾಮಧಾರಕನು ಭಕ್ತಿ, ನಮ್ರತೆಗಳಿಂದ ಸಿದ್ಧಮುನಿಯ ಪಾದಗಳಿಗೆರಗಿದನು. ಸಿದ್ಧಮುನಿಯು ಗುರುಚರಿತ್ರೆಯನ್ನು ಮುಂದುವರೆಸಿದರು.

"ಅಯ್ಯಾ, ಶಿಷ್ಯ ಶಿಖಾಮಣಿ, ಶ್ರೀಗುರುಚರಣಗಳಲ್ಲಿ ನೀನು ಲೀನನಾಗಿದ್ದೀಯೆ. ನಿನ್ನ ಪ್ರಶ್ನೆಗಳಿಂದ ನನ್ನ ಮನಸ್ಸು ಗುರುವಿನಲ್ಲಿ ಮತ್ತಷ್ಟು ಸ್ಥಿರವಾಯಿತು. ಭಿಲ್ಲವಟಿಯಲ್ಲಿ ನಡೆದ ಗುರುಲೀಲೆಯನ್ನು ಹೇಳಿದೆನಲ್ಲವೇ? ಮುಂದಿನ ಚರಿತ್ರೆಯನ್ನು ಹೇಳುತ್ತೇನೆ. ಕೇಳು. ಶ್ರೀಗುರುವು ಆಲ್ಲಿ ಅದೃಶ್ಯರೂಪನಾಗಿ ನೆಲೆಗೊಂಡು, ಅಲ್ಲಿಂದ ಮುಂದಕ್ಕೆ ಹೊರಟನು. ವರುಣ ಸಂಗಮಕ್ಕೆ ಹೋಗಿ, ಅಲ್ಲಿ ದಕ್ಷಿಣ ಕಾಶಿಯೆಂದು ಪ್ರಸಿದ್ಧವಾದ ತೀರ್ಥವನ್ನು ಸೇರಿದನು. ಹೀಗೆ ಕೃಷ್ಣಾತೀರ ತೀರ್ಥಗಳನ್ನು ಪಾವನಗೊಳಿಸುತ್ತಾ, ಕೃಷ್ಣಾ ಪಂಚನದೀ ಸಂಗಮದಲ್ಲಿ ಹನ್ನೆರಡು ವರ್ಷ ನಿಂತನು. ಅದು ಪ್ರಯಾಗಕ್ಕೆ ಸಮಾನವಾದ ಸಂಗಮ ಕ್ಷೇತ್ರ. ಕಾಶಿಕ್ಷೇತ್ರಕ್ಕೆ ಸಮಾನವಾದ ತೀರ್ಥ. ಆ ಪವಿತ್ರ ಸ್ಥಳದಲ್ಲಿ ಅನೇಕ ತೀರ್ಥಗಳು ಇವೆ. ಅದರಿಂದಲೇ ಶ್ರೀಗುರುವು ಅಲ್ಲಿ ನಿಂತನು. ಪುರಾಣಗಳಲ್ಲಿಯೂ ಆ ಸ್ಥಳ ಪಂಚಗಂಗಾ ತೀರವೆಂದು ಪ್ರಸಿದ್ಧವಾಗಿದೆ. ಅಲ್ಲಿ ಶಿವ, ಭದ್ರ, ಭೋಗವತಿ, ಕುಂಭಿ, ಸರಸ್ವತಿ ಎನ್ನುವ ಐದು ನದಿಗಳು ಬಂದು ಕೃಷ್ಣಾ ನದಿಯೊಡನೆ ಸೇರುತ್ತವೆ. ಅದರಿಂದಲೇ ಅದು ಪ್ರಯಾಗಕ್ಕಿಂತಲೂ ಅಧಿಕ ಪುಣ್ಯಪ್ರದವಾದ ಸ್ಥಳ ಎಂದು ಹೇಳಲ್ಪಟ್ಟಿದೆ. ಅದರ ಪೂರ್ವದಲ್ಲಿ ಅಮರಪುರವೆಂಬ ಊರೊಂದಿದೆ. ಅದು ದಕ್ಷಿಣ ಪ್ರಯಾಗ ಎಂದು ಪ್ರಸಿದ್ಧಗೊಂಡ ಮನೋಹರವಾದ ಕ್ಷೇತ್ರ. ಕಲ್ಪವೃಕ್ಷವೆಂದೇ ಹೇಳುವ ಔದುಂಬರವೃಕ್ಷ, ಅಮರೇಶ್ವರ ಇರುವ ಆ ಸ್ಥಳವು ಷಟ್ಕಾಲ ತೀರ್ಥವೆಂದು ಪ್ರಖ್ಯಾತವಾಗಿದೆ. ಪಂಚನದಿಗಳೊಡನೆ ಮಿಲನವಾದ ಕೃಷ್ಣಾನದಿಯು ಗಂಗಾನದಿಗೆ ಸಮಾನವಾದದ್ದು. ಅಮರೇಶ್ವರನ ಸನ್ನಿಧಿಯಲ್ಲಿ ಅರವತ್ತನಾಲ್ಕು ಯೋಗಿನಿಯರಿದ್ದಾರೆ. ಅಂತಹ ಶಕ್ತಿ ತೀರ್ಥವು ಲೋಕಪಾವನೆಯೆಂಬುದು ಅನ್ವರ್ಥವಾಗಿದೆ. ಸುಂದರವಾದ ಅಮರೇಶ್ವರ ಲಿಂಗದಲ್ಲಿ ವಿಶ್ವನಾಥನೇ ಇದ್ದಾನೆ. ಈ ಪವಿತ್ರ ಸ್ಥಳದಲ್ಲಿ ಮಾನವನು ಅಮರತ್ವ ಪಡೆದು ಸಾಕ್ಷಾತ್ ಪರಬ್ರಹ್ಮನೇ ಆಗಬಹುದು. ಈ ಪುಣ್ಯ ಸ್ಥಳದಲ್ಲಿ ಒಂದುಸಲ ಸ್ನಾನ ಮಾಡಿದರೆ ಬರುವ ಪುಣ್ಯ, ಪ್ರಯಾಗದಲ್ಲಿ ತ್ರಿಕರಣ ಶುದ್ಧಿಯಾಗಿ ಮಾಡಿದ ಒಂದು ಮಾಘ ಸ್ನಾನದಿಂದ ಬರುವ ಪುಣ್ಯದ ನೂರರಷ್ಟು ಅಧಿಕ. ಅಲ್ಲಿರುವ ಅಮರೇಶ್ವರ ಸಾಕ್ಷಾತ್ ಪರಬ್ರಹ್ಮನೇ! ಅದರಿಂದಲೇ ಅಲ್ಲಿ ಕೋಟಿ ತೀರ್ಥಗಳು ಇವೆ.

ವೇಣಿ ಸಹಿತವಾದ ಕೃಷ್ಣೆ, ದಕ್ಷಿಣ ವಾಹಿನಿಯಾಗಿ ಅಲ್ಲಿದ್ದಾಳೆ. ಕೃಷ್ಣವೇಣಿ ತೀರದಲ್ಲಿರುವ ಅಷ್ಟ ತೀರ್ಥಗಳು ಪ್ರಸಿದ್ಧವಾದವು. ಅಲ್ಲಿಂದ ಉತ್ತರಕ್ಕೆ ಹೋದರೆ ಅಲ್ಲಿ ಕೃಷ್ಣೆ ಪಶ್ಚಿಮ ವಾಹಿನಿಯಾಗಿದ್ದಾಳೆ. ಅಲ್ಲಿರುವ ಶುಕ್ಲತೀರ್ಥ ಬ್ರಹ್ಮಹತ್ಯಾ ಪಾಪವನ್ನೂ ನಾಶಪಡಿಸುತ್ತದೆ. ಔದುಂಬರವೃಕ್ಷ ಸಮೀಪದಲ್ಲಿ ಮನೋಹರವಾದ ತೀರ್ಥಗಳಿವೆ. ಅವು ಒಂದರಿಂದ ಇನ್ನೊಂದು ಒಂದು ಧನು ದೂರದಲ್ಲಿವೆ. ಅವುಗಳಲ್ಲಿ ಮೊದಲನೆಯದು ಪಾಪವಿನಾಶ ತೀರ್ಥ. ಎರಡನೆಯದು ಕಾಮ್ಯ ತೀರ್ಥ. ಮೂರನೆಯದು ವರದ ತೀರ್ಥ. ಅಮರೇಶ್ವರ ಸನ್ನಿಧಿಯಲ್ಲಿರುವುದರಿಂದ ಅದು ಅತಿ ಶ್ರೇಷ್ಠವಾದದ್ದು. ಷಟ್ಕಾಲ ಸಂಗಮದಲ್ಲಿ ಶಕ್ತಿ ತೀರ್ಥ, ಅಮರ ತೀರ್ಥ, ಕೋಟಿ ತೀರ್ಥಗಳೆನ್ನುವ ಮೂರುತೀರ್ಥಗಳಿವೆ. ತ್ರಿಮೂರ್ತಿ ಸ್ವರೂಪನಾದ ಶ್ರೀಗುರುವು ಅಲ್ಲಿ ಹನ್ನೆರಡು ವರ್ಷ ನೆಲೆಸಿದ್ದನು. ಕೃಷ್ಣ ವೇಣಿ ಪಂಚನದಿಗಳು ಇವು ಏಳೂ ಸೇರಿ ಒಂದಾಗುವ ತೀರ್ಥ ಸ್ಥಾನದ ಮಹಿಮೆಯನ್ನು ಏನೆಂದು ವರ್ಣಿಸಲಿ? ಅಲ್ಲಿ ಸ್ನಾನ ಮಾತ್ರದಿಂದಲೇ ಬ್ರಹ್ಮಹತ್ಯಾದಿ ಪಾಪಗಳೂ ನಶಿಸಿಹೋಗುತ್ತವೆ. ಆ ಸ್ಥಳವು ಸಕಲ ಅಭೀಷ್ಟ ಸಿದ್ಧಿಪ್ರದವಾದ ಸ್ಥಳ. ಉಪಮೆ ಇಲ್ಲದ್ದು. ದರ್ಶನ ಮಾತ್ರದಿಂದಲೇ ಕಾರ್ಯ ಸಿದ್ಧಿಯಾಗುವ ಆ ತೀರ್ಥದಲ್ಲಿ ಸ್ನಾನ ಮಾಡಿದರೆ ಉಂಟಾಗುವ ಫಲವೇನು ಎಂಬುದನ್ನು ಹೇಳಲು ಅಸಾಧ್ಯ. ಗುಪ್ತರೂಪದಲ್ಲಿ ನೆಲೆಸಿದ್ದ ಶ್ರೀಗುರುವು ಅಲ್ಲಿ ತನ್ನ ಭಕ್ತರಿಗೆ ತಾರಕನಾಗಿದ್ದನು. ಅಲ್ಲಿನ ತೀರ್ಥಗಳ ಮಹಿಮೆಯನ್ನು ಪ್ರಕಟಗೊಳಿಸಲು ಶ್ರೀಗುರುವು ಅಲ್ಲಿ ನೆಲೆಸಿದರು. ಅಲ್ಲಿದ್ದಾಗ ಶ್ರೀಗುರುವು ಪ್ರತಿದಿನವೂ ಅಮರಪುರಕ್ಕೆ ಭಿಕ್ಷಾರ್ಥಿಯಾಗಿ ಹೋಗುತ್ತಿದ್ದರು. ಅಲ್ಲಿ ವೈದಿಕನಾದ ಬ್ರಾಹ್ಮಣನೊಬ್ಬನಿದ್ದನು. ಅವನು ಬಡವ. ಭಿಕ್ಷೆಮಾಡುತ್ತಾ, ಸ್ವಕರ್ಮ ನಿರತನಾಗಿ ಅವನು ಅಲ್ಲಿನ ಜನರಲ್ಲಿ ಮಾನ್ಯನಾಗಿದ್ದನು. ಅವನ ಹೆಂಡತಿ ಪತಿಯೇ ದೈವವೆಂದು ಭಾವಿಸಿ ಪತಿ ಸೇವೆಯಲ್ಲಿ ನಿರತಳಾಗಿದ್ದಳು. ಅವರ ಮನೆಯ ಅಂಗಳದಲ್ಲಿ ಚಪ್ಪರದ ಅವರೇಕಾಯಿಯ ಬಳ್ಳಿಯೊಂದು ಸೊಂಪಾಗಿ ಬೆಳೆದು ಹೂವು ಕಾಯಿಗಳಿಂದ ತುಂಬಿತ್ತು. ಭಿಕ್ಷೆ ದೊರೆಯದಿದ್ದ ದಿನ ಅವರು ಅ ಬಳ್ಳಿಯಿಂದ ಕಾಯಿಗಳನ್ನು ಕಿತ್ತು ತಮ್ಮ ಆಹಾರಕ್ಕಾಗಿ ಉಪಯೋಗಿಸುತ್ತಿದ್ದರು. ಹಾಗೆ ಬಡವನಾದರೂ ಆ ಬ್ರಾಹ್ಮಣ ಪ್ರತಿದಿನವೂ ಪಂಚಯಜ್ಞಗಳನ್ನು ಮಾಡುತ್ತಾ, ಅತಿಥಿಪೂಜೆ ಮಾಡುತ್ತಾ ಜೀವನ ಸಾಗಿಸುತ್ತಿದ್ದನು.

ಹೀಗಿರಲಾಗಿ, ಒಂದು ದಿನ ಶ್ರೀಗುರುವು ಅವರ ಮನೆಗೆ ಭಿಕ್ಷಾರ್ಥಿಯಾಗಿ ಬಂದನು. ಆ ಬ್ರಾಹ್ಮಣ ಶ್ರೀಗುರುವನ್ನು ಆದರದಿಂದ ಒಳಕ್ಕೆ ಕರೆದುಕೊಂಡು ಹೋಗಿ ಅವರನ್ನು ಯಥಾಶಕ್ತಿ ಪೂಜೋಪಚಾರಗಳಿಂದ ಸಂತುಷ್ಟಗೊಳಿಸಿದನು. ಆ ದಿನ ಅವನಿಗೆ ಎಲ್ಲೂ ಭಿಕ್ಷೆ ದೊರೆಯದಿದ್ದುದರಿಂದ ಅವನು ಶ್ರೀಗುರುವಿಗೆ ತಮ್ಮ ಮನೆಯಲ್ಲಿ ಬೆಳೆದಿದ್ದ ಚಪ್ಪರದ ಅವರೆಕಾಯಿಯ ಪಲ್ಯ ಮಾಡಿ ಶ್ರದ್ಧಾ ಭಕ್ತಿಗಳಿಂದ ಅದನ್ನೆ ಶ್ರೀಗುರುವಿಗೆ ಅರ್ಪಿಸಿದನು. ಅದರಿಂದಲೇ ಸಂತುಷ್ಟರಾದ ಶ್ರೀಗುರುವು, "ನಿನ್ನ ಆತಿಥ್ಯದಿಂದ ನಮಗೆ ಸಂತೋಷವಾಗಿದೆ. ಇಂದಿನಿಂದ ನಿನ್ನ ದಾರಿದ್ರ್ಯ ತೀರಿತು" ಎಂದು ಹೇಳಿ, ಹೊರಗೆ ಹೋಗುತ್ತಾ ಅವನ ಮನೆಯಲ್ಲಿ ಅಷ್ಟು ಸೊಂಪಾಗಿ ಬೆಳೆದಿದ್ದ ಆ ಬಳ್ಳಿಯನ್ನು ಕಿತ್ತುಹಾಕಿ, ತುಳಿದು ಹೊರಟು ಹೋದರು. ಶ್ರೀಗುರುವಿನ ಆ ಕಾರ್ಯವನ್ನು ನೋಡಿ, ಅವನ ಹೆಂಡತಿ, ದುಃಖಿಸುತ್ತಾ, "ಅಯ್ಯೋ. ನಾವು ಶ್ರೀಗುರುವಿಗೆ ಏನು ಅನ್ಯಾಯಮಾಡಿದೆವು? ನಮ್ಮದು ಎಂತಹ ದುರಾದೃಷ್ಟ. ನಾವೇನು ಅಪಕಾರ ಮಾಡಿದೆವು ಅವರಿಗೆ? ಆ ಬಳ್ಳಿಯನ್ನು ಕಿತ್ತುಹಾಕಿ ನಮ್ಮ ಆಹಾರವನ್ನೇ ಹಾಳುಮಾಡಿದರಲ್ಲ?" ಎಂದು ಗೋಳಾಡಿದಳು.

ಅವಳ ಅಳುವನ್ನು ಕಂಡ ಆ ಬ್ರಾಹ್ಮಣ, "ನಮಗೆ ಅಶ್ರೇಯಸ್ಸನ್ನು ತರುವ ಈ ಕೋಪವನ್ನು ಬಿಡು. ನಮ್ಮ ಪ್ರಾರಬ್ಧವೇ ದೊಡ್ಡದು. ಜಗತ್ತೆಲ್ಲವೂ ಪರಮೇಶ್ವರಾಧೀನ. ಈಶ್ವರನ ಇಚ್ಚೆಯಿಂದಲೇ ಎಲ್ಲವೂ ನಡೆಯುತ್ತದೆ. ಅವನು ಮೊದಲು ಆಹಾರವನ್ನು ಸೃಷ್ಟಿಮಾಡಿ ನಂತರವೇ ಜೀವರಾಶಿಗಳನ್ನು ಸೃಷ್ಟಿಸಿದ. ಅವನಿಗೆ ಯಾವ ತರಹೆಯ ಬೇಧಗಳೂ ಇಲ್ಲ. ಎಲ್ಲರಲ್ಲೂ ಸಮ ದೃಷ್ಟಿಯುಳ್ಳವನು. ಅವರವರ ಪೂರ್ವ ಕರ್ಮಾನುಸಾರವಾಗಿ ಈ ಜನ್ಮದಲ್ಲಿ ಮಾನವರಿಗೆ ಜೀವನೋಪಾಯವನ್ನು ಕಲ್ಪಿಸುತ್ತಾನೆ. ಹಿಂದಿನ ಜನ್ಮಗಳಲ್ಲಿ ಮಾಡಿದ ಸುಕೃತ ದುಷ್ಕೃತ ಕರ್ಮಫಲಗಳನ್ನು ಈ ಜನ್ಮದಲ್ಲಿ ಅನುಭವಿಸಬೇಕಾದದ್ದೇ! ಆದರೆ ಮೂರ್ಖರು ಅದು ತಾವು ಮಾಡಿದ ಕರ್ಮಫಲಗಳೆಂದು ಭಾವಿಸುವುದಿಲ್ಲ. ಸುಖವಾಗಲೀ ದುಃಖವಾಗಲೀ ತನ್ನ ಕರ್ಮಫಲದಿಂದಲೇ ಲಭಿಸುವುದು. ನೀನು ಬಂದಿದ್ದ ಯತಿಯಲ್ಲಿ ದೋಷವನ್ನೆಣಿಸುತ್ತಾ, ನಮ್ಮ ಕರ್ಮಫಲವನ್ನು ಕಾಣುತ್ತಿಲ್ಲ. ಆ ಗುರುವು ನಮ್ಮನ್ನು ಕಾಪಾಡಲೆಂದೇ ನಮ್ಮ ಮನೆಯಲ್ಲಿ ಭಿಕ್ಷೆಯನ್ನು ತೆಗೆದು ಕೊಂಡು ನಮ್ಮ ದಾರಿದ್ರ್ಯವನ್ನು ಹರಿಸಿದರು. ನನ್ನದು, ನನಗೆ ಎನ್ನುವ ಮೋಹವನ್ನು ಬಿಡಿಸಿದ ಆ ಯತಿ ನಮ್ಮ ಪ್ರಭುವೇ!" ಎಂದು ಹೇಳಿ ತನ್ನ ಹೆಂಡತಿಯನ್ನು ಸಮಾಧಾನಗೊಳಿಸಿ, ಯತಿ ಕಿತ್ತುಹಾಕಿದ್ದ ಆ ಬಳ್ಳಿಯನ್ನು ಮತ್ತೆ ನೆಡಲು ಉದ್ಯುಕ್ತನಾದನು.

ಹಾಗೆ ಅವನು ಬಳ್ಳಿಯನ್ನು ನೆಡಲು ಅಗೆಯುತ್ತಿದ್ದಾಗ ಆ ಜಾಗದಲ್ಲಿ ಅವನಿಗೆ ಧನತುಂಬಿದ್ದ ಘಟವೊಂದು ಕಾಣಿಸಿತು. ಅವನು ಪರಮಾನಂದದಿಂದ ಅದನ್ನು ತೆಗೆದು ತನ್ನ ಹೆಂಡತಿಗೆ ತೋರಿಸಿ, "ಈ ವಿಚಿತ್ರವನ್ನು ನೋಡು. ನಮ್ಮಲ್ಲಿ ಪ್ರಸನ್ನನಾದ ಆ ಯತೀಶ್ವರ ನಮ್ಮನ್ನು ಆಶೀರ್ವದಿಸಿ, ಈ ಧನಕುಂಭವನ್ನು ಅನುಗ್ರಹಿಸಿದರು. ಅವರು ಈ ಬಳ್ಳಿಯನ್ನು ಕಿತ್ತು ಹಾಕಿದ್ದರಿಂದಲೇ ಈ ಘಟವು ನಮಗೆ ದೊರೆಯಿತು. ಆ ಯೋಗಿ ಪುಂಗವ ಮಾನವ ಮಾತ್ರನಲ್ಲ. ಸಾಕ್ಷಾತ್ ಪರಮೇಶ್ವರನೇ! ನಮ್ಮ ದೈನ್ಯವನ್ನು ಪರಿಹರಿಸಲೆಂದೇ ಆತ ನಮ್ಮ ಮನೆಗೆ ದಯಮಾಡಿಸಿದರು. ನಡೆ. ನಾವು ಹೋಗಿ ಆತನ ದರ್ಶನಮಾಡಿ ಬರೋಣ" ಎಂದು ಹೇಳಿ ಅವಳೊಡನೆ ಶ್ರೀಗುರುವಿನ ದರ್ಶನಕ್ಕೆಂದು ಅವರಿದ್ದ ಸಂಗಮ ಸ್ಥಳಕ್ಕೆ ಹೋದನು. ಅಲ್ಲಿ ಶ್ರೀಗುರುವನ್ನು ಕಂಡು ತನ್ನ ಮನೆಯಲ್ಲಿ ನಡೆದದ್ದನ್ನೆಲ್ಲ ಅವರಿಗೆ ವಿಶದವಾಗಿ ನಿವೇದಿಸಿಕೊಂಡನು.

ಶ್ರೀಗುರುವು ಅವನನ್ನು ನೋಡಿ, "ಈ ವಿಷಯವನ್ನು ನೀನು ಯಾರಲ್ಲೂ ಹೇಳಬೇಡ. ಹೇಳಿದರೆ ಬಂದಿರುವ ಲಕ್ಷ್ಮಿ ನಿನ್ನ ಮನೆಯನ್ನು ಬಿಟ್ಟು ಹೋಗುತ್ತಾಳೆ. ಇನ್ನು ಮುಂದೆ ನಿನ್ನ ವಂಶದಲ್ಲಿ ಲಕ್ಷ್ಮಿ ಅಚಂಚಲೆಯಾಗಿ ನಿಂತಿರುತ್ತಾಳೆ. ನನ್ನ ಅನುಗ್ರಹದಿಂದ ನೀನು ಪುತ್ರಪೌತ್ರಾದಿಗಳಿಂದ ಕೂಡಿ ಸುಖ ಸಂತೋಷಗಳಿಂದ ಜೀವನಮಾಡು. ನಿನ್ನ ಕುಲ ವೃದ್ಧಿಯಾಗುತ್ತದೆ" ಎಂದು ಹೇಳಿ ಆ ಬ್ರಾಹ್ಮಣನನ್ನು ಅಶೀರ್ವದಿಸಿದರು. ವರಪಡೆದ ಆ ಬ್ರಾಹ್ಮಣ ಗುರುವಿನ ಅನುಮತಿ ಪಡೆದು ತನ್ನ ಮನೆಗೆ ಹಿಂತಿರುಗಿದನು. "ಗುರುದೃಷ್ಟಿಯಿಂದ ದೈನ್ಯವು ನಾಶವಾಗುತ್ತದೆ. ಗುರುಕೃಪೆಯನ್ನು ಪಡೆದವನು ದೀನ ಹೇಗಾಗುತ್ತಾನೆ? ಅಂತಹವನು ಎಲ್ಲರಿಗೂ ಪೂಜ್ಯನಾಗಿ, ಇಹ ಪರಗಳಲ್ಲಿ ಸೌಖ್ಯವನ್ನು ಹೊಂದುತ್ತಾನೆ. ಅವನ ಮನೆಯಲ್ಲಿ ಅಷ್ಟೈಶ್ವರ್ಯಗಳು ಸದಾ ನಾಟ್ಯವಾಡುತ್ತಿರುತ್ತವೆ. ಶ್ರೀಗುರು ಮಹಿಮೆ ಅಂತಹುದು! ಆದ್ದರಿಂದ, ನಾಮಧಾರಕ, ನೀನು ಸದಾ ಮನಸ್ಸಿನಲ್ಲಿ ಗುರುಭಜನೆ ಮಾಡುತ್ತಿರು. ಕಾಮಧೇನುವೇ ನಿನ್ನ ಮನೆಗೆ ಬರುತ್ತದೆ" ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಹದಿನೆಂಟನೆಯ ಅಧ್ಯಾಯ ಮುಗಿಯಿತು. 



No comments:

Post a Comment