Sunday, February 17, 2013

||ಶ್ರೀ ಗುರು ಚರಿತ್ರೆ - ಹದಿನೇಳನೆಯ ಅಧ್ಯಾಯ||

ಸಿದ್ಧಮುನಿಯು ನಾಮಧಾರಕನಿಗೆ ಮತ್ತೆ, "ನಿನಗೆ ಗುರು ಪಾದಗಳಲ್ಲಿ ಧೃಢಭಕ್ತಿಯುಂಟಾಗಿದೆ. ಗುರು ಕಥೆಗಳಲ್ಲಿ ನೀನು ತೋರಿಸುತ್ತಿರುವ ಅಭಿರುಚಿ ನಿನ್ನ ಗುರು ಭಕ್ತಿಯನ್ನು ತೋರಿಸುತ್ತಿದೆ. ಕಾಮಧೇನುವಿನಂತೆ ಕೋರಿದ್ದನ್ನು ಕೊಡುವ ಗುರುಚರಿತ್ರೆಯನ್ನು ಆಲಿಸು.

ಕೃಷ್ಣಾನದಿಯ ಪಶ್ಚಿಮ ತೀರದಲ್ಲಿರುವ ಭುವನೇಶ್ವರಿಯಲ್ಲಿ ಶ್ರೀಗುರುವು ರಹಸ್ಯವಾಗಿ ನಿಂತರು. ಆ ಸ್ಥಳವು ಔದುಂಬರ ವೃಕ್ಷಮೂಲವು. ಕಲ್ಪವೃಕ್ಷ ಸಮಾನವಾದ ಪರಿಶುದ್ಧ ಪ್ರದೇಶವದು. ಶ್ರೀಗುರುವು ಅಲ್ಲಿ ಅನುಷ್ಠಾನ ಪರರಾಗಿ ಚಾತುರ್ಮಾಸ್ಯ ವ್ರತವನ್ನು ಅಚರಿಸಿದರು. ಶ್ರೀಗುರುವು ಆ ಪ್ರದೇಶದಲ್ಲಿ ನಿಂತಿದ್ದರಿಂದ ಅದರ ಮಹಿಮೆ ಅಧಿಕವಾಯಿತು" ಎಂದು ಹೇಳಿದ ಸಿದ್ಧಮುನಿಯ ಮಾತನ್ನು ಕೇಳಿ, ನಾಮಧಾರಕ, "ಸ್ವಾಮಿ, ಪರಮಾತ್ಮನೇ ಆದ ಶ್ರೀಗುರುವು ಅಲ್ಲಿ ರಹಸ್ಯವಾಗಿ ಏಕೆ ನಿಂತರು? ಶ್ರೀಗುರುವಿಗೆ ತಪೋನುಷ್ಠಾನ, ಭಿಕ್ಷೆಗಳೇತಕ್ಕೆ?" ಎಂದು ಕೇಳಿದನು.

ಅದಕ್ಕೆ ಸಿದ್ಧಮುನಿ, "ಮಗು, ನಾಮಧಾರಕ, ಈಶ್ವರ ಭಿಕ್ಷೆ ಬೇಡಿದನು. ದತ್ತಾತ್ತ್ರೇಯರು ತಪವನ್ನಾಚರಿಸಿದರು. ಭಕ್ತಾನುಗ್ರಹಕ್ಕಾಗಿ ತ್ರಿಮೂರ್ತ್ಯವತಾರ ಧರಿಸಿ, ಭಿಕ್ಷುರೂಪದಲ್ಲಿ ತೀರ್ಥಯಾತ್ರೆಗಳನ್ನು ಮಾಡುತ್ತಾ, ಭಿಕ್ಷೆ ಬೇಡಿದರು. ಅವೆಲ್ಲವೂ ಕೇವಲ ಭಕ್ತರಿಗೆ ಬೋಧಿಸುವುದಕ್ಕಾಗಿಯೇ! ಕಾಲವಶವಾಗಿ ತೀರ್ಥಗಳೆಲ್ಲಾ ಗುಪ್ತವಾಗಿ ಹೋದವು. ಅವನ್ನು ಮತ್ತೆ ಭಕ್ತಾನುಕೂಲಕ್ಕಾಗಿ ಶ್ರೀಗುರುವು ವ್ಯಕ್ತಗೊಳಿಸಿದನು. ಶ್ರೀಗುರುವು ನಮಗೆ ಉಪಕಾರ ಮಾಡಲೆಂದು ಸ್ವಯಂ ಗುಪ್ತವಾಗಿ ತೀರ್ಥಯಾತ್ರೆಗಳನ್ನು ಮಾಡಿದರು. ದುಷ್ಟರಿಂದ ದೂರವಿರಲು ಅವರು ಗುಪ್ತರಾಗಿದ್ದಾರೆಯೇ ಹೊರತು ಭಕ್ತರ ವಾಂಛೆಗಳನ್ನು ನೆರವೇರಿಸುತ್ತಲೇ ಇದ್ದಾರೆ. ಅವರು ಅಲ್ಲಿ ಹಾಗಿರಲು ನಡೆದ ಒಂದು ವಿಚಿತ್ರವನ್ನು ಹೇಳುತ್ತೇನೆ ಕೇಳು. ಅದರಿಂದ ಶ್ರೀಗುರುವಿನ ಮಹಿಮೆ ಮತ್ತೆ ಭೂಮಿಯಲ್ಲಿ ಪ್ರಕಟಗೊಂಡಿತು.

ಕರವೀರವೆಂಬ ಊರಿನಲ್ಲಿ ಕಣ್ವ ಶಾಖೀಯನಾದ ಸಕಲವಿದ್ಯಾ ಪಾರಂಗತನಾದ ಉತ್ತಮ ಚರಿತನಾದ ಬ್ರಾಹ್ಮಣನೊಬ್ಬನಿದ್ದನು. ಅವನಿಗೊಬ್ಬ ಮಗನಾದನು. ಆದರೆ ವಿಧಿವಶಾತ್ ಅವನಿಗೆ ಹುಟ್ಟಿದ ಮಗ ಮಂದಮತಿ. ಅವನಿನ್ನೂ ಸಣ್ಣವನಾಗಿದ್ದಾಗಲೇ ಆ ಬ್ರಾಹ್ಮಣನು ಮರಣಿಸಿದನು. ಹುಡುಗನಿಗೆ ಏಳು ವರ್ಷವಾದಾಗ ಆ ಊರಿನ ಬ್ರಾಹ್ಮಣರು ಅವನಿಗೆ ಉಪನಯನ ಮಾಡಿದರು. ಆ ಹುಡುಗನಿಗೆ ಸ್ನಾನ, ಸಂಧ್ಯಾವಂದನೆ, ಗಾಯತ್ರಿಜಪ ಮುಂತಾದುವುಗಳಲ್ಲಿ ಆಸ್ತೆ ಇರಲಿಲ್ಲ. ಹಾಗಾಗಿ ಅವನು ವೇದಾಧ್ಯಯನವನ್ನೂ ಮಾಡಲಿಲ್ಲ. ಅವನೊಬ್ಬ ಓದಿದ್ದನ್ನು ತಕ್ಷಣವೇ ಮರೆಯುತ್ತಿದ್ದ ಮಹಾ ಮೂರ್ಖ. ಆ ಊರಿನ ವಿದ್ವಾಂಸರು ಆ ಮೂರ್ಖನನ್ನು, "ವಿದ್ವಾಂಸನಾದ ಬ್ರಾಹ್ಮಣನೊಬ್ಬನಿಗೆ ಮಗನಾಗಿ ಹುಟ್ಟಿದರೂ ಮೂರ್ಖನಾದೆ. ನಿನ್ನ ತಂದೆ ವೇದ ಶಾಸ್ತ್ರ ಪುರಾಣಗಳನ್ನೆಲ್ಲಾ ಬಲ್ಲ ಜ್ಞಾನಿಯಾಗಿದ್ದನು. ಅವನಿಗೆ ಕಲ್ಲುಬಂಡೆಯಂತಹ ನೀನು ಹೇಗೆ ಜನಿಸಿದೆ? ನಿನ್ನ ಹುಟ್ಟು ವ್ಯರ್ಥ. ನಿನ್ನ ತಂದೆಯ ಹೆಸರು, ಕೀರ್ತಿ ನಿನ್ನಿಂದ ಕಲಂಕಿತವಾಯಿತು. ಕಲ್ಲು ಕಟ್ಟಿಕೊಂಡು ನೀರಿನಲ್ಲಿ ಮುಳುಗಿ ಸಾಯಿ. ಯಾವುದಾದರೂ ಕೆರೆಯೋ ಭಾವಿಯೋ ನೋಡಿ ಅದರಲ್ಲಿ ಹೋಗಿ ಬೀಳು. ಇಲ್ಲಿ ಹಂದಿಯಂತೆ ಏಕೆ ಬಾಳುತ್ತಿರುವೆ? ವಿದ್ಯೆಯುಳ್ಳವನು ಮನುಷ್ಯರಲ್ಲಿ ಅಧಿಕನೆನಿಸುತ್ತಾನೆ. ವಿದ್ಯಾವಿಹೀನನು ವಯಸ್ಸಿನಲ್ಲಿ ದೊಡ್ಡವನಾದರೂ ಪೂಜಿತನಾಗುವುದಿಲ್ಲ. ವಿದ್ಯಾವಂತನು ವಯಸ್ಸಿನಲ್ಲಿ ಸಣ್ಣವನಾದರೂ ಎಲ್ಲರೂ ಅವನನ್ನು ಗೌರವಿಸುತ್ತಾರೆ. ಒಡಹುಟ್ಟಿದವರಿಲ್ಲದವರಿಗೆ ವಿದ್ಯೆಯೇ ಸಹೋದರ. ಎಲ್ಲಕಡೆಗಳಲ್ಲೂ ವಿದ್ವಾಂಸನು ಗೌರವಿಸಲ್ಪಡುತ್ತಾನೆ. ರಾಜರೂ ಕೂಡಾ ವಿದ್ವಾಂಸರನ್ನು ಆದರದಿಂದ ಕಂಡು ಪೂಜಿಸುತ್ತಾರೆ. ಅಧನನಿಗೆ ವಿದ್ಯೆಯೇ ಮಹಾಧನ. ಅದರಿಂದಲೇ ವಿದ್ಯಾರ್ಜನೆ ಮಾಡಬೇಕು. ವಿದ್ಯೆಯಿಲ್ಲದವನು ಪಶು ಸಮಾನನು" ಏಂದು ಅವನಿಗೆ ಬುದ್ಧಿ ಮಾತುಗಳನ್ನು ಹೇಳಿದರು.

ಅವರ ಮಾತುಗಳನ್ನು ಕೇಳಿದ ಆ ಹುಡುಗ, ಅವರಿಗೆ ನಮಸ್ಕರಿಸಿ, "ಅಯ್ಯಾ, ನೀವು ಹೇಳುವುದೆಲ್ಲ ನಿಜವೇ! ವಿದ್ಯಾವಂತನು ಪ್ರಶಸ್ತಿ ಪಡೆಯುತ್ತಾನೆ. ನಾನು ಹಿಂದಿನ ಜನ್ಮಗಳಲ್ಲಿ ವಿದ್ಯಾದಾನ ಮಾಡಲಿಲ್ಲ. ಅದರಿಂದಲೇ ಈಗ ನನಗೆ ವಿದ್ಯೆ ಹತ್ತುತ್ತಿಲ್ಲ. ನಾನೇನು ಮಾಡಲಿ? ನೀವೇ ಕೃಪೆಮಾಡಿ ನನ್ನನ್ನು ಉದ್ಧರಿಸಿ. ವಿದ್ಯೆ ಕಲಿಯಲು ಯಾವುದಾದರೂ ಉಪಾಯವನ್ನು ಹೇಳಿ" ಎಂದು ಕೇಳಿಕೊಂಡನು. ಅದಕ್ಕೆ ಆ ಬ್ರಾಹಣರು, "ನಿನಗಿನ್ನು ಈ ಜನ್ಮದಲ್ಲಿ ವಿದ್ಯೆ ಲಭಿಸುವುದಿಲ್ಲ. ಮುಂದಿನ ಜನ್ಮದಲ್ಲಿಯಾದರೂ ವಿದ್ಯಾವಂತನಾಗಲು ಕೃಷಿ ಮಾಡು. ವಿದ್ಯೆಯಿಲ್ಲದ ನೀನು ಪಶು ಸಮಾನನು. ಭಿಕ್ಷೆಯೆತ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತಾ ನೀನು ಕುಲನಾಶಕನಾಗಿದ್ದೀಯೆ. ವಿದ್ವಾಂಸನ ಮಗನಾಗಿಯೂ ನೀನು ಮತಿಹೀನನಾಗಿದ್ದೀಯೆ" ಎಂದು ನಿಂದಿಸಿದರು. ಆ ಬ್ರಾಹ್ಮಣರ ನಿಂದೆಗಳನ್ನು ಕೇಳಿದ ಅವನಿಗೆ ಒಂದು ತರಹೆಯ ವೈರಾಗ್ಯವುಂಟಾಗಿ, ಹತ್ತಿರದಲ್ಲೇ ಇದ್ದ ಅರಣ್ಯಕ್ಕೆ ಹೋದನು.

ಅಲ್ಲಿಗೆ ಹೋಗಿ, "ನನ್ನನ್ನೆಲ್ಲರೂ ದೂಷಿಸುತ್ತಿದ್ದಾರೆ. ಇನ್ನು ನಾನು ಪ್ರಾಣದಿಂದಿದ್ದೇನು ಪ್ರಯೋಜನ? ನನಗಿಂತಲೂ ನಾಯಿ ಜನ್ಮ ಒಳ್ಳೆಯದು. ಇನ್ನು ಈ ಜೀವನ ಸಾಕು" ಎಂದು ಆಲೋಚಿಸುತ್ತಾ, ಭಿಲ್ಲವಟಿಯನ್ನು ಸೇರಿ, ದೈವವಶಾತ್ ಕೃಷ್ಣಾ ನದಿಯ ಪೂರ್ವ ತೀರದಲ್ಲಿರುವ ಭುವನೇಶ್ವರಿಯ ಗುಡಿಗೆ ಹೋದನು. ಅಲ್ಲಿ ದೇವಿಯ ದರ್ಶನ ಮಾಡಿ, ಪ್ರಾಯೋಪವೇಶ ಮಾಡಲು ನಿರ್ಧರಿಸಿ ಕೂತನು. ಹೀಗೆ ನಿರ್ವಿಣ್ಣ ಮನಸ್ಕನಾದ ಅವನು ಮೂರು ದಿನ ಉಪವಾಸ ಮಾಡುತ್ತಾ ಜಗನ್ಮಾತೆಯನ್ನು ಧ್ಯಾನಿಸುತ್ತಿದ್ದನು. ದೇವಿಯು ಅವನಿಗೆ ಸ್ವಪ್ನ ದರ್ಶನವನ್ನೂ ಕೊಡಲಿಲ್ಲ ಎಂಬ ದುಃಖದಿಂದ, ದೇವಿ ನನ್ನನ್ನು ಉಪೇಕ್ಷಿಸುತ್ತಿದ್ದಾಳೆ ಎಂದು ಆಗ್ರಹಗೊಂಡು, ತನ್ನ ನಾಲಗೆಯನ್ನು ಕತ್ತರಿಸಿ ದೇವಿಯ ಪಾದಗಳಲ್ಲಿಟ್ಟು, "ಅಮ್ಮಾ, ಇನ್ನೂ ನೀನು ನನ್ನನ್ನು ಅನುಗ್ರಹಿಸದಿದ್ದರೆ, ನಾನು ನಾಳೆ ನನ್ನ ತಲೆಯನ್ನು ಕತ್ತರಿಸಿ ನಿನಗೆ ಒಪ್ಪಿಸುತ್ತೇನೆ" ಎಂದು ಘೋರವಾದ ಹರಕೆಯನ್ನು ಮಾಡಿದನು. ಹಾಗೆ ದೃಢವಾದ ಮನಸ್ಸಿನಿಂದ ತನ್ನ ತಲೆಯನ್ನೂ ಅರ್ಪಿಸಲು ಸಿದ್ಧನಾದ ಅವನಿಗೆ ದೇವಿ ಪ್ರತ್ಯಕ್ಷಳಾಗಿ, "ಅಯ್ಯಾ ಬಾಲಕ, ಅನವಶ್ಯಕವಾಗಿ ನನ್ನ ಮೇಲೆ ಏಕೆ ಕೋಪಗೊಳ್ಳುತ್ತೀಯೆ? ನದಿಯ ಪಶ್ಚಿಮ ತೀರದಲ್ಲಿ, ಔದುಂಬರ ವೃಕ್ಷದ ಛಾಯೆಯಲ್ಲಿ ಒಬ್ಬ ಯತಿಯಿದ್ದಾನೆ. ನೀನು ಅವನ ಬಳಿಗೆ ಹೋಗು. ತಪಸ್ಸು ಮಾಡುತ್ತಿರುವ ಆ ಯತಿ ಸಾಕ್ಷಾತ್ತು ಈಶ್ವರನ ಅವತಾರವೇ! ಅವನು ನಿನ್ನ ಇಚ್ಚೆಯನ್ನು ಪೂರೈಸುತ್ತಾನೆ" ಎಂದು ಹೇಳಿದಳು. ಅದರಿಂದ ಸಂತೋಷಗೊಂಡ ಆ ಹುಡುಗ ತಕ್ಷಣವೇ ದೇವಿ ಹೇಳಿದ ಜಾಗಕ್ಕೆ ಹೋಗಿ, ಅಲ್ಲಿ ನೆಲೆಸಿದ್ದ ಶ್ರೀಗುರುವಿನ ದರ್ಶನ ಮಾಡಿ ಅವರನ್ನು ಮನಸ್ಸಿನಲ್ಲಿಯೇ ಸ್ತುತಿಸಿದನು. ಅವನ ಸ್ತುತಿಯಿಂದ ಸಂತುಷ್ಟರಾದ ಶ್ರೀಗುರುವು, ಅವನಿಗೆ ಸಾಂತ್ವನದ ಮಾತುಗಳನ್ನು ಹೇಳುತ್ತಾ ಅವನ ತಲೆಯ ಮೇಲೆ ಕೈಯಿಟ್ಟು ಅನುಗ್ರಹಿಸಿದರು. ತಕ್ಷಣವೇ ಕತ್ತರಿಸಿಕೊಂಡಿದ್ದ ಅವನ ನಾಲಗೆ ಬಂದುದಲ್ಲದೆ, ಅವನು ಸಕಲ ವಿದ್ಯಾ ಪಾರಂಗತನೂ ಆದನು. ಹಾಗೆ ಆ ಮಂದಮತಿ ಮಹಾಜ್ಞಾನಿಯಾಗಿ ಪರಿವರ್ತಿತನಾದನು. ಗುರು ಸ್ಪರ್ಶ ಮಾತ್ರದಿಂದಲೇ ಆ ಮೂಢ ವಿದ್ವಾಂಸನಾದನು. ನಾಮಧಾರಕ, ನೋಡಿದೆಯಾ ಶ್ರೀಗುರುವಿನ ಮಹಿಮೆಯನ್ನು! ಅದನ್ನು ಅರಿತವರಾರು? ಆ ಗುರುವಿಗೇ ಅದು ಗೊತ್ತು" ಎಂದು ಸಿದ್ಧರು ತಾವು ಕಂಡ ವಿಚಿತ್ರ ವಿಶೇಷವನ್ನು ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಹದಿನೇಳನೆಯ ಅಧ್ಯಾಯ ಮುಗಿಯಿತು.



No comments:

Post a Comment