Wednesday, February 20, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತೈದನೆಯ ಅಧ್ಯಾಯ||

||ಕರ್ಮ ಕಾಂಡ||

"ಹೇ ಯೋಗಿರಾಜ, ಸಿದ್ಧಮುನಿ, ಸದ್ಗುರುವು ಇಲ್ಲಿ ಅವತರಿಸಿದ್ದರೂ, ಜ್ಞಾನಿಗಳಿಗೆ ಮಾತ್ರ ತನ್ನ ನಿಜ ರೂಪದಲ್ಲಿ ಕಾಣಿಸಿ ಕೊಳ್ಳುತ್ತಾನೆ. ಸಾಮಾನ್ಯರಿಗೆ ಮನುಷ್ಯ ಮಾತ್ರನಾಗಿಯೇ ಕಾಣಿಸಿ ಕೊಳ್ಳುತ್ತಾನೆ. ಶ್ರೀಗುರುವು ತ್ರಿವಿಕ್ರಮನಿಗೆ ಪ್ರತ್ಯಕ್ಷ ದರ್ಶನವನ್ನು ಕೊಟ್ಟ ನಂತರ ನಡೆದ ವಿಷಯಗಳನ್ನು ಸವಿಸ್ತಾರವಾಗಿ ಹೇಳಿ" ಎಂದು ನಾಮಧಾರಕನು ಕೇಳಿದನು. ಅದಕ್ಕೆ ಸಿದ್ಧಮುನಿ, "ಶ್ರೀಗುರು ಲೀಲೆಗಳೆನ್ನುವುದು ಎಲ್ಲವೂ ನನಗೂ ತಿಳಿಯದ ವಿಷಯವೇ! ನನಗೆ ತಿಳಿದ ಮಟ್ಟಿಗೆ ಹೇಳುತ್ತೇನೆ. ಸಾವಧಾನವಾಗಿ ಕೇಳು.

ವೈಢೂರ್ಯ ನಗರವೆಂಬಲ್ಲಿ ಒಬ್ಬ ಯವನ ರಾಜನಿದ್ದನು. ಅವನು ಬ್ರಹ್ಮದ್ವೇಷಿ. ಜೀವ ಹಿಂಸೆ ಮಾಡುವವನು. ‘ವೇದಾರ್ಥಗಳನ್ನು ಹೇಳುವವರು ನನಗೆ ಅತ್ಯಂತ ಪ್ರೀತಿಪಾತ್ರರು’ ಎಂದು ಸದಾ ಹೇಳುತ್ತಿದ್ದ ಅವನು, ಬ್ರಾಹ್ಮಣರನ್ನು ಬಲಾತ್ಕಾರವಾಗಿ ತನ್ನ ಬಳಿಗೆ ಕರೆಸಿ, ಅವರು ಶ್ರುತಿಗಳನ್ನು ಅವನೆದುರಿಗೆ ಓದುವಂತೆ ಆಜ್ಞೆ ಮಾಡುತ್ತಿದ್ದನು. ವೇದ ಶಾಸ್ತ್ರಗಳನ್ನು ಬಲ್ಲವರು ಅವನ ಮುಂದೆ ವೇದಗಳನ್ನು ಓದಲಿಚ್ಚಿಸದೆ ತಾವು ಮಂದ ಬುದ್ಧಿಗಳು, ತಮಗೇನೂ ತಿಳಿಯದು ಎಂದು ಹೇಳುತ್ತಿದ್ದರು. ಆದರೆ ಧನದಾಸೆಯಿಂದ ಹಲವರು ಅವನ ಮುಂದೆ ವೇದ ಪಠನ ಮಾಡುತ್ತಿದ್ದರು. ಆ ಯವನ ರಾಜ ಅಂತಹವರಿಂದ ಯಜ್ಞ ಕಾಂಡವನ್ನು ಓದಿಸಿ ಅದರ ಅರ್ಥವನ್ನು ಕೇಳಿ ತಿಳಿದು ಕೊಂಡು, ‘ಯಜ್ಞಯಾಗಾದಿಗಳನ್ನು ಮಾಡುವವರು ಪ್ರಾಣಿಹಿಂಸೆ ಮಾಡುತ್ತಾರೆ. ಮತ್ತೆ ನಮ್ಮನ್ನು ಏಕೆ ಪಶು ಹಿಂಸಕರೆಂದು ನಿಂದಿಸುತ್ತಾರೆ?’ ಎಂದು ವೇದ ಶಾಸ್ತ್ರಗಳನ್ನು ಅವಹೇಳನ ಮಾಡುತ್ತಾ, ತನ್ನೆದುರಿಗೆ ವೇದಗಳನ್ನು ಪಠಿಸಿದವರಿಗೆ ಧನ ಕನಕಗಳನ್ನು ಕೊಟ್ಟು ಆದರಿಸುತ್ತಿದ್ದನು.

ಒಂದು ದಿನ, ವೇದ ಶಾಸ್ತ್ರ ನಿಪುಣರೆಂದು ಹೇಳಿಕೊಂಡ ಇಬ್ಬರು ಬ್ರಾಹ್ಮಣರು ಅವನ ಬಳಿಗೆ ಬಂದು, ತಮ್ಮ ಪ್ರಶಂಸೆಯನ್ನು ತಾವೇ ಮಾಡಿಕೊಳ್ಳುತ್ತಾ, "ನಾವು ಮೂರು ವೇದಗಳನ್ನು ಆಳವಾಗಿ ಅಭ್ಯಾಸಮಾಡಿದ್ದೇವೆ. ವೇದ ಶಾಸ್ತ್ರಗಳನ್ನು ಅರಿತವರಲ್ಲಿ ನಮ್ಮನ್ನು ಮೀರಿಸಿದವರಿಲ್ಲ. ವೇದ ವಾದಗಳಲ್ಲಿ ನಮ್ಮನ್ನು ಸೋಲಿಸಿದವರಿಲ್ಲ. ನಮ್ಮೊಡನೆ ವಾದ ಮಾಡಿ ಸೋತವರೆಲ್ಲರೂ ನಮಗೆ ಜಯಪತ್ರಗಳನ್ನು ನೀಡಿದ್ದಾರೆ. ನಿಮ್ಮ ದೇಶದಲ್ಲಿ ನಮ್ಮೊಡನೆ ವಾದ ಮಾಡುವ ಅರ್ಹತೆಯುಳ್ಳವರು ಯಾರಾದರೂ ಇದ್ದರೆ ಅವರೊಡನೆ ವಾದಕ್ಕೆ ಏರ್ಪಡಿಸು" ಎಂದು ಅಹಂಕಾರದಿಂದ ತುಂಬಿ ಹೇಳಿದರು. ಅವರ ಮಾತಿನಿಂದ ಸಂತೋಷಗೊಂಡ ಆ ಯವನ ರಾಜ, ಊರಿನಲ್ಲಿ ವೇದ ಶಾಸ್ತ್ರಗಳನ್ನು ತಿಳಿದವರೆಲ್ಲರೂ ಬರಬೇಕೆಂದು ಡಂಗುರ ಹೊಡೆಸಿದನು. ಅದರಂತೆ ಬಂದವರೆಲ್ಲರನ್ನೂ ಒಂದು ಕಡೆ ಸೇರಿಸಿ, "ನಿಮ್ಮಲ್ಲಿ ಯಾರಾದರೂ ಈ ಇಬ್ಬರು ಬ್ರಾಹ್ಮಣರೊಡನೆ ವಾದ ಮಾಡಿ ಅವರನ್ನು ಸೋಲಿಸಿದರೆ ವಿಫುಲವಾದ ಧನವನ್ನು ಕೊಡುತ್ತೇನೆ" ಎಂದು ಹೇಳಿದನು. ಅಲ್ಲಿ ಸೇರಿದ್ದ ಬ್ರಾಹ್ಮಣರು ಯಾರೂ ವಾದ ಮಾಡಲು ಇಚ್ಛಿಸದೆ, "ಹೇ ರಾಜ ನಮ್ಮಲ್ಲಿ ಯಾರಿಗೂ ಅಂತಹ ಯೋಗ್ಯತೆ ಇಲ್ಲ. ಇವರಿಬ್ಬರೂ ನಮಗಿಂತ ಶ್ರೇಷ್ಠರು. ಅವರಿಗೆ ಅದನ್ನು ತಿಳಿಸಿ ಅವರಿಗೆ ತಕ್ಕ ಸನ್ಮಾನವನ್ನು ಮಾಡು" ಎಂದು ಹೇಳಿ, ಆ ದ್ವಿಜರಿಗೆ ಜಯಪತ್ರ ಕೊಟ್ಟರು. ಆ ಯವನರಾಜ ಅವರನ್ನು ಆನೆಯ ಮೇಲೆ ಕೂಡಿಸಿ, ವಾದ್ಯ ಘೋಷಗಳೊಡನೆ ಅವರನ್ನು ಊರಿನಲ್ಲಿ ಮೆರವಣಿಗೆ ಮಾಡಿಸಿದನು. ಆ ರಾಜ, "ಈ ಊರಿನಲ್ಲಿರುವ ಬ್ರಾಹ್ಮಣರೆಲ್ಲರಿಗೂ ಇವರು ರಾಜರು, ಇವರಿಗೆ ನಾನು ರಾಜ" ಎಂದು ಊರಿನಲ್ಲಿ ಪ್ರಕಟಿಸಿದನು. ಅದರಿಂದ ಇನ್ನಷ್ಟು ಮತ್ತರಾದ ಆ ಬ್ರಾಹ್ಮಣರಿಬ್ಬರೂ ಊರಿನಲ್ಲಿದ್ದ ಮಿಕ್ಕ ಬ್ರಾಹ್ಮಣರೆಲ್ಲರನ್ನು ಅವಹೇಳನ ಮಾಡುತ್ತಾ ತಾವೇ ಆ ಊರಿನ ರಾಜರೋ ಎಂಬಂತೆ ವರ್ತಿಸುತ್ತಿದ್ದರು. ಹಾಗೆ ಮದಿಸಿದ ಆನೆಗಳಂತೆ ವರ್ತಿಸುತ್ತಿದ್ದ ಅವರಿಬ್ಬರೂ ಒಂದಿ ದಿನ ರಾಜನಿಗೆ, "ಇಲ್ಲಿ ನಮ್ಮೊಡನೆ ವಾದಿಸುವವರು ಯಾರೂ ಕಾಣುವುದಿಲ್ಲ. ನಾವೇನೆಂದು ಎಲ್ಲ ಕಡೆಯೂ ಪ್ರಖ್ಯಾತವಾಗಿದೆ. ನೀವು ಅನುಮತಿಸಿದರೆ, ನಾವು ಇತರ ರಾಜ್ಯಗಳಲ್ಲಿ ಪಯಣಿಸುತ್ತಾ, ಅಲ್ಲಿನವರೊಡನೆ ವಾದ ಮಾಡಿ ಅವರನ್ನು ಸೋಲಿಸಿ ಜಯಪತ್ರಗಳನ್ನು ತರುತ್ತೇವೆ" ಎಂದು ಹೇಳಿದರು. ಅವರ ಮಾತಿನಿಂದ ಸಂತಸಗೊಂಡ ರಾಜ, "ಹಾಗೇ ಆಗಲಿ. ನಿಮ್ಮಿಚ್ಚೆಯಂತೆ ಹೋಗಿ ಜಯಪತ್ರಗಳನ್ನು ತನ್ನಿ" ಎಂದು ಹೇಳಿ ಅವರನ್ನು ಆನೆಯ ಅಂಬಾರಿಯಲ್ಲಿ ಕೂಡಿಸಿ ಕಳುಹಿಸಿದನು. ಅವರು ಹಾಗೆ ಊರಿಂದೂರಿಗೆ ತಮ್ಮೊಡನೆ ವಾದ ಮಾಡುವವರನ್ನು ಹುಡುಕುತ್ತಾ ಹೊರಟು ದಕ್ಷಿಣದಲ್ಲಿರುವ ಕುಮಸಿ ಎಂಬ ಊರನ್ನು ಸೇರಿದರು. ಅಲ್ಲಿ ತ್ರಿವಿಕ್ರಮನೆಂಬ ವೇದ ಶಾಸ್ತ್ರಗಳನ್ನು ಅರಿತವನೊಬ್ಬನಿದ್ದಾನೆಂದು ಅವರಿಗೆ ತಿಳಿದುಬಂತು.

ಆ ಗರ್ವಗಂಧಿ ಬ್ರಾಹ್ಮಣರು ತ್ರಿವಿಕ್ರಮನನ್ನು ಕಂಡು, "ಅಯ್ಯಾ, ನೀವು ತ್ರಿವೇದಗಳನ್ನು ಬಲ್ಲವರೆಂದು ಎಲ್ಲರೂ ಹೇಳುತ್ತಿದ್ದಾರೆ. ನೀವು ವೇದಗಳನ್ನು ಬಲ್ಲವರೇ ಆದರೆ ನಮ್ಮೊಡನೆ ವಾದ ಮಾಡಿ. ಇಲ್ಲದಿದ್ದರೆ ನಮಗೆ ಜಯಪತ್ರವನ್ನಾದರೂ ನೀಡಿ" ಎಂದರು. ಅದಕ್ಕೆ ತ್ರಿವಿಕ್ರಮನು, "ಅಯ್ಯಾ, ನಾನೊಬ್ಬ ಮೂಢ. ವೇದಗಳನ್ನು ಅರಿತವನಲ್ಲ. ವೇದ ಶಾಸ್ತ್ರಗಳನ್ನು ಅರಿತವನಾಗಿದ್ದರೆ ಈ ಕಾಡಿನಲ್ಲೇಕೆ ವಾಸ ಮಾಡುತ್ತಿದ್ದೆ? ನಾನೂ ನಿಮ್ಮಂತೆ ರಾಜರಿಂದ ಪೂಜಿತನಾಗಿ ಭೋಗ ಭಾಗ್ಯಗಳನ್ನು ಅನುಭವಿಸುತ್ತಿದ್ದೆ. ನಾನೊಬ್ಬ ತಾಪಸಿ. ಇಲ್ಲಿ ತಪಸ್ಸು ಮಾಡುತ್ತಾ, ಭಿಕ್ಷೆ ಮಾಡಿಕೊಂಡು ಜೀವಿಸುತ್ತಿದ್ದೇನೆ. ನಿಮ್ಮೊಡನೆ ವಾದ ಮಾಡಲು ನಾನು ಸಮರ್ಥನಲ್ಲ. ನಿಮ್ಮಂತಹ ವಿದ್ವಾಂಸರೊಡನೆ ನನಗೆ ವಾದಗಳೇತಕ್ಕೆ? ಜಯಾಪಜಯಗಳಿಂದ ನನಗಾಗಬೇಕಾದ್ದೇನು?" ಎಂದನು. ಆದರೆ ಆ ಅಹಂಕಾರಿಗಳು ಅವನ ಮಾತಿಗೆ ಇಂಬು ಕೊಡದೆ, "ದೇಶಗಳನ್ನೆಲ್ಲಾ ಸುತ್ತಾಡಿದರೂ ನಮ್ಮೊಡನೆ ವಾದ ಮಾಡುವವರು ಒಬ್ಬರೂ ಸಿಕ್ಕಲಿಲ್ಲ. ನಾವು ಪಡೆದಿರುವ ಈ ಜಯಪತ್ರಗಳನ್ನು ನೋಡು. ನೀನು ನಮ್ಮೊಡನೆ ವಾದ ಮಾಡು. ಇಲ್ಲವೇ ನಮಗೆ ಜಯಪತ್ರ ಬರೆದು ಕೊಡು" ಎಂದು ಮತ್ತೆ ಗರ್ವದಿಂದ ಹೇಳಿದರು. ತ್ರಿವಿಕ್ರಮನು ತನ್ನ ಮನಸ್ಸಿನಲ್ಲಿ, "ಇವರಿಬ್ಬರೂ ಮದಾಂಧರು. ಬೇರೆಯವರನ್ನು ಅವಮಾನಿಸುವ ಅಹಂಕಾರಿಗಳು. ಇವರಿಗೆ ಸರಿಯಾಗಿ ಬುದ್ಧಿ ಹೇಳಲು ಗಂಧರ್ವ ಪುರದಲ್ಲಿರುವ ಶ್ರೀಗುರುವೇ ಸರಿಯಾದವರು. ಇವರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ" ಎಂದು ಯೋಚಿಸಿ, "ಅಯ್ಯಾ, ನನಗೆ ಗಂಧರ್ವ ಪುರದಲ್ಲಿ ಗುರುಗಳೊಬ್ಬರಿದ್ದಾರೆ. ಅಲ್ಲಿಗೆ ಹೋಗೋಣ ಬನ್ನಿ. ಅವರ ಅಪ್ಪಣೆ ಪಡೆದು ನಿಮ್ಮೊಡನೆ ವಾದವೋ ಇಲ್ಲ ಜಯಪತ್ರವೋ ಕೊಡುತ್ತೇನೆ" ಎಂದು ಹೇಳಿ ಅವರಿಬ್ಬರನ್ನೂ ಕರೆದು ಕೊಂಡು ಶ್ರೀಗುರುವಿದ್ದ ಸ್ಥಳಕ್ಕೆ ಹೊರಟನು. ಆ ಮದಾಂಧರಿಬ್ಬರೂ ಆನೆ ಅಂಬಾರಿಯಲ್ಲಿ ಕೂತು ನಡೆದು ಹೋಗುತ್ತಿದ್ದ ತ್ರಿವಿಕ್ರಮನ ಹಿಂದೆ ಹೊರಟರು. ಗುರು ಸನ್ನಿಧಾನಕ್ಕೆ ಹೇಗೆ ಹೋಗಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಅವರಿಬ್ಬರೂ ಹಾಗೆ ತಮ್ಮ ಮೃತ್ಯುವನ್ನು ತಾವೇ ಆಹ್ವಾನಿಸಿಕೊಂಡರು.

ಗಂಧರ್ವ ಪುರವನ್ನು ಸೇರಿ, ಅವರೆಲ್ಲರೂ ಶ್ರೀಗುರುವಾದ ನೃಸಿಂಹ ಸರಸ್ವತಿಗಳ ಬಳಿಗೆ ಹೋದರು. ತ್ರಿವಿಕ್ರಮನು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, "ಗುರುವರ, ಭಕ್ತವತ್ಸಲ. ಭವಾರ್ಣವ ತಾರಕ, ಜಯವಾಗಲಿ. ಜಯವಾಗಲಿ. ನಿಮ್ಮನ್ನು ಈಶ್ವರನೆಂದು ತಿಳಿಯದವನು ಅಧೋಗತಿಗೆ ಹೋಗುತ್ತಾನೆ" ಮುಂತಾಗಿ ಶ್ರೀಗುರುವನ್ನು ಸ್ತೋತ್ರ ಮಾಡುತ್ತಾ, ಅಶ್ರು ಪೂರ್ಣನಾಗಿ ಮತ್ತೆ ಮತ್ತೆ ನಮಸ್ಕರಿಸಿದನು. ನಮಸ್ಕರಿಸಿದ ಅವನನ್ನು ಶ್ರೀಗುರುವು ಎಬ್ಬಿಸಿ, "ಯತೀಶ್ವರ, ನೀನು ಈಗ ಇಲ್ಲಿಗೆ ಬಂದ ಕಾರಣವೇನು? ಏನು ನಿನ್ನ ಇಚ್ಚೆ?’ ಎಂದು ಕೇಳಿದರು. ಅದಕ್ಕೆ ತ್ರಿವಿಕ್ರಮನು, "ಸ್ವಾಮಿ, ಗರ್ವಿತರಾದ ಇಬ್ಬರು ಬ್ರಾಹ್ಮಣರು ನನ್ನ ಬಳಿಗೆ ಬಂದು, ನಾವು ವೇದ ಶಾಸ್ತ್ರ ಪುರಾಣಗಳನ್ನು ಆದ್ಯಂತವಾಗಿ ಬಲ್ಲವರು. ವಾದಾಭಿಲಾಷಿಗಳು. ಚತುರ್ವೇದ ಪಂಡಿತರು. ಜ್ಞಾನಿಗಳು" ಎಂದು ತಮ್ಮ ಪ್ರಶಂಸೆಯನ್ನು ತಾವೇ ಮಾಡಿ ಕೊಳ್ಳುತ್ತಾ, "ನಮ್ಮ್ನೊಡನೆ ವಾದ ಮಾಡು. ಇಲ್ಲವೇ ಜಯಪತ್ರವನ್ನು ಕೊಡು" ಎಂದು ಬಲಾತ್ಕಾರ ಮಾಡುತ್ತಿದ್ದಾರೆ. ಅವರಿಗೆ ಎಷ್ಟು ತಿಳಿಯ ಹೇಳಿದರೂ, ಅವರು ಅದನ್ನು ಗಣನೆಗೆ ತಂದುಕೊಳ್ಳದೆ ಗರ್ವಿತರಾಗಿ ಮಾತನಾಡುತ್ತಿದ್ದಾರೆ. ಅವರಿಗೆ ನಾನು, ‘ನಮ್ಮ ಗುರುಗಳ ಬಳಿಗೆ ಹೋಗೋಣ. ಅವರು ಅಪ್ಪಣೆ ಕೊಟ್ಟಂತೆ ನಾನು ಮಾಡುತ್ತೇನೆ’ ಎಂದು ಹೇಳಿ ಅವರನ್ನು ಇಲ್ಲಿಗೆ ಕರೆತಂದಿದ್ದೇನೆ" ಎಂದು ಹೇಳಿದನು. ಅವನ ಮಾತನ್ನು ಕೇಳಿದ ಶ್ರೀಗುರುವು, ಆ ಬ್ರಾಹ್ಮಣರನ್ನು ಕರೆದು, "ಅಯ್ಯಾ, ವಾದ ವಿವಾದಗಳಿಂದ ನಿಮಗಾಗುವ ಫಲವೇನು? ಇತರ ಬ್ರಾಹ್ಮಣರನ್ನು ಪರಾಭವಗೊಳಿಸಿ ಅವಮಾನಿಸುವುದರಿಂದ ನಿಮಗುಂಟಾಗುವ ಲಾಭವೇನು? ನಮಗೆ ಜಯಾಪಜಯಗಳು ಎರಡೂ ಸಮಾನವೇ! ನಾವು ತಾಪಸಿಗಳು. ನಮ್ಮನ್ನು ಜಯಿಸಿ ನಿಮಗೆ ದೊರೆಯುವ ಪುರುಷಾರ್ಥವೇನು?" ಎಂದು ಕೇಳಿದರು. ಅದಕ್ಕೆ ಅ ಬ್ರಾಹ್ಮಣರು, "ಅಯ್ಯಾ, ಸನ್ಯಾಸಿ, ನಾವು ದೇಶ ದೇಶಗಳನ್ನು ಸುತ್ತುತ್ತಾ, ವಾದಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಇದುವರೆಗೂ ನಮ್ಮನ್ನು ಜಯಿಸಿದವರು ಒಬ್ಬರೂ ಇಲ್ಲ. ವಾದ ಮಾಡದವರು ನಮಗೆ ಜಯಪತ್ರಗಳನ್ನು ನೀಡಿದ್ದಾರೆ. ಹಾಗೆ ಇವನೂ ಕೂಡ ನಮಗೆ ಜಯಪತ್ರವನ್ನು ಕೊಡದೆ, ನಮ್ಮನ್ನು ಇಲ್ಲಿಗೇಕೆ ಕರೆತಂದ? ನಾವು ಚತುರ್ವೇದ ಪಾರಂಗತರು. ನಿಮ್ಮಿಬ್ಬರಲ್ಲಿ ಯಾರಾದರೊಬ್ಬರು ನಮ್ಮೊಡನೆ ವಾದಮಾಡಿ, ಇಲ್ಲವೇ ಜಯಪತ್ರವನ್ನು ಕೊಡಿ"" ಎಂದು ಮದೋನ್ಮತ್ತರಾಗಿ ಹೇಳಿದರು.

ಅದಕ್ಕೆ ಶ್ರೀಗುರುವು, "ಅಯ್ಯಾ, ನಿಮಗೆ ಇಷ್ಟೊಂದು ಗರ್ವವಿರಬಾರದು. ಗರ್ವದಿಂದಲೇ ರಾಕ್ಷಸರು ಹತರಾದರು. ಗರ್ವಿತನಾದ ಬಲಿಯ ಪಾಡೇನಾಯಿತು ಎಂಬುದು ನಿಮಗೆ ತಿಳಿಯದೇ? ಬಾಣಾಸುರನ ಗತಿಯೇನಾಯಿತು ಎಂದು ಗೊತ್ತಿಲ್ಲವೇ? ಗರ್ವೋನ್ಮತ್ತನಾದ ರಾವಣನ ಗತಿ ಏನಾಯಿತು ಎಂದು ಅರಿಯರೇ? ಸಂಪೂರ್ಣವಾಗಿ ವೇದಗಳನ್ನು ಬಲ್ಲವರಾರು? ಬ್ರಹ್ಮಾದಿಗಳಿಗೇ ಈಗಲೂ ವೇದಗಳು ಏನು ಎನ್ನುವುದು ತಿಳಿಯದು. ವೇದಗಳು ಅನಂತವಾದವು. ಅದನ್ನು ಆದ್ಯಂತವಾಗಿ ಬಲ್ಲವರು ಯಾರೂ ಇಲ್ಲ. ನೀವು ವೃಥಾ ಗರ್ವಪಡುತ್ತಿದ್ದೀರಿ. ಇದು ನಿಮಗೆ ಒಳ್ಳೆಯದಲ್ಲ. ವೇದಗಳು ಅನಂತವಾಗಿರುವಾಗ ನೀವು ಚತುರ್ವೇದಗಳನ್ನು ಬಲ್ಲ ಪರಿಣತರೆಂದು ಹೇಳಿಕೊಳ್ಳುವುದು ಎಷ್ಟು ಸಮಂಜಸ?" ಎಂದು ಕೇಳಲು, ಆ ಗರ್ವಗಂಧಿಗಳು, "ನಾವು ನಾಲ್ಕೂ ವೇದಗಳನ್ನು ಸಾಂಗೋಪಾಂಗವಾಗಿ ಅಭ್ಯಾಸಮಾಡಿದ್ದೇವೆ" ಎಂದು ಉನ್ಮತ್ತರಾಗಿ ಹೇಳಿದರು. ಆಗ ಶ್ರೀಗುರುವು, ಅವರಿಗೆ ಚತುರ್ವೇದಗಳ ವಿಸ್ತಾರವನ್ನು ತಿಳಿಯಹೇಳಿದರು. 

ಇಲ್ಲಿಗೆ ಇಪ್ಪತ್ತೈದನೆಯ ಅಧ್ಯಾಯ ಮುಗಿಯಿತು.




No comments:

Post a Comment