Sunday, February 17, 2013

||ಶ್ರೀ ಗುರು ಚರಿತ್ರೆ - ಹತ್ತೊಂಭತ್ತನೆಯ ಅಧ್ಯಾಯ||

ಉತ್ತಮ ಶಿಷ್ಯನಾದ ನಾಮಧಾರಕನು ಸಿದ್ಧರ ಚರಣಗಳಲ್ಲಿ ನಮಿಸಿ, "ಯೋಗಿರಾಜ ಜಯವಾಗಲಿ. ನೀವು ಭಕ್ತ ಜನ ತಾರಕರು. ಭವಸಾಗರ ದಾಟಿಸುವವರು. ನನ್ನನ್ನು ಎಚ್ಚರಿಸಲೆಂದೇ ನನಗೆ ಗುರುಲೀಲೆಗಳೆಂಬ ಅಮೃತವನ್ನು ಕುಡಿಸಿದಿರಿ. ಹೇ ಸ್ವಾಮಿ, ದಯೆಯಿಟ್ಟು ನನಗೆ ಮುಂದಿನ ಗುರುಕಥೆಗಳನ್ನು ಹೇಳಿ" ಎಂದು ಪ್ರಾರ್ಥಿಸಿದನು.

ಅವನ ಮಾತಿಗೆ ಸಂತೋಷಪಟ್ಟ ಸಿದ್ಧಮುನಿಯು, ಗುರು ಮಹಿಮಾ ವೃತ್ತಾಂತಗಳನ್ನು ಹೇಳಲು ಆರಂಭಿಸಿದರು. "ಪ್ರಿಯ ಶಿಷ್ಯ ನಾಮಧಾರಕ, ಮುಂದಿನ ಗುರುಚರಿತ್ರೆಯನ್ನು ಹೇಳುತ್ತೇನೆ. ಸಮಾಧಾನ ಚಿತ್ತನಾಗಿ ಕೇಳು. ಔದುಂಬರ ವೃಕ್ಷದ ಕೆಳಗೆ ಶ್ರೀಗುರುವು ನಿವಾಸ ಮಾಡಿದರು" ಎನ್ನುತ್ತಲೇ, ನಾಮಧಾರಕನು, "ಅನೇಕ ಪುಣ್ಯ ವೃಕ್ಷಗಳು ಇರಲು ಶ್ರೀಗುರುವು ಅದೇಕೆ ಔದುಂಬರ ವೃಕ್ಷವನ್ನೇ ಆರಿಸಿಕೊಂಡರು? ವೇದ ಶಾಸ್ತ್ರ ಪುರಾಣಾದಿಗಳಲ್ಲಿ ಅಶ್ವತ್ಥವೃಕ್ಷವು ಬಹು ಪ್ರಸಿದ್ಧವಾದುದಲ್ಲವೇ? ಶ್ರೀಗುರುವಿಗೆ ಔದುಂಬರ ವೃಕ್ಷದಲ್ಲಿ ಅಷ್ಟೊಂದು ಆಸಕ್ತಿ ಹೇಗೆ ಉಂಟಾಯಿತು? ಅದಕ್ಕೆ ಕಾರಣವೇನು?" ಎಂದು ಕೇಳಿದನು.

ಅದಕ್ಕೆ ಸಿದ್ಧರು, "ನಾಮಧಾರಕ, ನೀನು ಕೇಳಿದ ಪ್ರಶ್ನೆಗೆ ಉತ್ತರ ಹೇಳುತ್ತೇನೆ ಕೇಳು. ಹಿರಣ್ಯಕಶಿಪುವನ್ನು ಸಂಹರಿಸಲು ನೃಸಿಂಹಸ್ವಾಮಿ ಈ ಔದುಂಬರದಲ್ಲಿಯೇ ಅವತರಿಸಿದನು. ಹಾಗೆ ಕ್ರುದ್ಧನಾಗಿ ಅವತರಿಸಿದ ವಿಷ್ಣು ಹಿರಣ್ಯಕಶಿಪುವಿನ ಉದರವನ್ನು ತನ್ನ ಉಗುರುಗಳಿಂದ ಬಗೆದು ಅವನ ಕರುಳು ತೆಗೆದು ಮಾಲೆಯಂತೆ ಕೊರಳಲ್ಲಿ ಧರಿಸಿ, ನಾರದ ಕಶ್ಯಪ ಪ್ರಹ್ಲಾದಾದಿ ಭಕ್ತರ ಮಾತುಗಳನ್ನು ಸತ್ಯಗೊಳಿಸಿದನು. ಆ ರಾಕ್ಷಸನ ಹೊಟ್ಟೆ ಅಗೆದು ಕರುಳು ಈಚೆ ತೆಗೆದಾಗ, ಅವನ ಹೊಟ್ಟೆಯಲ್ಲಿದ್ದ ಕಾಲಕೂಟದಂತಹ ವಿಷವು, ನೃಸಿಂಹ ಸ್ವಾಮಿಯ ಉಗುರುಗಳಿಗೆ ಅಂಟಿಕೊಂಡು, ಸಹಿಸಲಸಾಧ್ಯವಾದಂತಹ ಉರಿ ಉಂಟಾಯಿತು. ಆ ವೇದನೆಯನ್ನು ತಡೆಯಲಾರದ ನೃಸಿಂಹಸ್ವಾಮಿಯ ತಾಪವನ್ನು ಶಾಂತಗೊಳಿಸಲು, ಶ್ರೀ ಮಹಾಲಕ್ಷ್ಮಿ, ಔದುಂಬರದ ಹಣ್ಣುಗಳನ್ನು ತಂದು ಅವನ ಉಗುರುಗಳಿಗೆ ಹಚ್ಚಿದಳು. ತಕ್ಷಣವೇ ವಿಷದಿಂದುಂಟಾದ ಉರಿಯು ಶಮನವಾಗಿ, ನೃಸಿಂಹಸ್ವಾಮಿಗೆ ಶಾಂತಿಯುಂಟಾಯಿತು. ಶಾಂತನಾದ ಆ ಉಗ್ರನೃಸಿಂಹನು, ಶ್ರೀಲಕ್ಷ್ಮಿಯನ್ನು ಆಲಂಗಿಸಿ, ಸಂತುಷ್ಟನಾದನು. ಆಗ ಆ ದೇವದಂಪತಿಗಳು, ವಿಷದ ಉಗ್ರತೆಯನ್ನು ಶಾಂತಗೊಳಿಸಿದ ಔದುಂಬರಕ್ಕೆ, "ಎಲೈ ಔದುಂಬರವೇ, ಕಲ್ಪವೃಕ್ಷದಂತೆ ಸದಾ ಫಲಭರಿತವಾಗಿರು. ನಿನ್ನನ್ನು ಶ್ರದ್ಧಾ ಭಕ್ತಿಗಳಿಂದ ಸೇವಿಸುವವರ ಇಷ್ಟಾರ್ಥ ಸಿದ್ಧಿಯಾಗಲಿ, ಅವರ ಪಾಪಗಳೂ ಕ್ಷಯವಾಗಲಿ. ನಿನ್ನ ದರ್ಶನದಿಂದಲೇ ವಿಷದ ತೀವ್ರತೆ ಶಮನವಾಗುತ್ತದೆ. ನಿನ್ನ ನಿಜವಾದ ಭಕ್ತರು ಸದಾ ಶಾಂತಿ ಸಂತೋಷಗಳಿಂದ ಆರೋಗ್ಯವಂತರಾಗಿ ಜೀವಿಸುತ್ತಾರೆ. ನಿಷ್ಠೆಯಿಂದ ನಿನ್ನನ್ನು ಸೇವಿಸುವವರು ಪುತ್ರವಂತರಾಗುತ್ತಾರೆ. ದೀನರು ಶ್ರೀಮಂತರಾಗುತ್ತಾರೆ. ನಿನ್ನ ಛಾಯೆಯಲ್ಲಿ ಸ್ನಾನವನ್ನಾಚರಿಸಿದವರು ಭಾಗೀರಥಿಯಲ್ಲಿ ಸ್ನಾನ ಮಾಡಿದ ಫಲವನ್ನು ಪಡೆಯುತ್ತಾರೆ. ನಿನ್ನ ನೆರಳಿನಲ್ಲಿ ಜಪತಪಗಳನ್ನಾಚರಿಸಿದವರು ಅನಂತವಾದ ಫಲಗಳನ್ನು ಪಡೆಯುತ್ತಾರೆ. ಶ್ರದ್ಧಾ ಭಕ್ತಿಗಳಿಂದ ನಿನ್ನನ್ನು ಪೂಜಿಸಿದವರು ಬ್ರಹ್ಮಹತ್ಯಾದಿ ಪಾಪಗಳಿಂದಲೂ ಮುಕ್ತರಾಗುತ್ತಾರೆ. ಸುಸಂಕಲ್ಪರಾಗಿ ನಿನ್ನನ್ನು ನಂಬಿ ಪೂಜಿಸಿ ಭಜಿಸುವವರ ಇಷ್ಟಕಾಮ್ಯಗಳು ಪೂರ್ಣವಾಗುತ್ತವೆ. ಲಕ್ಷ್ಮಿದೇವಿ ಸಹಿತನಾದ ನಾನು ಮಿಕ್ಕ ದೇವತೆಗಳೊಡನೆ ನಿನ್ನಲ್ಲಿ ನೆಲಸಿರುತ್ತೇನೆ" ಎಂದು ಅನೇಕ ವರಗಳನ್ನಿತ್ತರು. ಆದ್ದರಿಂದಲೇ ಕಲಿಯುಗದಲ್ಲಿ ಔದುಂಬರ ವೃಕ್ಷವು ಕಲ್ಪವೃಕ್ಷಕ್ಕೆ ಸಮಾನವಾದದ್ದು. ಅದೇ ಕಾರಣದಿಂದಲೇ ಶ್ರೀಗುರುವು ಕೂಡಾ ಔದುಂಬರದ ನೆರಳಿನಲ್ಲಿ ನೆಲಸಿದರು. ಶ್ರೀಗುರುವು ನೆಲೆಸಿದ್ದುದರಿಂದ ಅದು ಸರ್ವ ಕಾಮಫಲಪ್ರದವಾಯಿತು.

ತ್ರಿಮೂರ್ತ್ಯವತಾರವಾದ ಶ್ರೀಗುರುವು ಮಾನವ ರೂಪದಲ್ಲಿ ಅಲ್ಲಿ ಗುಪ್ತರಾಗಿ ನೆಲೆಸಿದ್ದಾಗ, ಪ್ರತಿದಿನವೂ ಅಲ್ಲಿಗೆ ಅರವತ್ತನಾಲ್ಕು ಯೋಗಿನಿಯರು ಅಮರೇಶ್ವರದಿಂದ ಬಂದು ಶ್ರೀಗುರುವನ್ನು ಪೂಜಿಸಿಕೊಳ್ಳುತ್ತಿದ್ದರು. ಅವರು ಶ್ರೀಗುರುವನ್ನು ತಮ್ಮ ಧಾಮಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಸರ್ವೋಪಚಾರಗಳಿಂಡ ಪೂಜೆ ಮಾಡಿ, ಭಿಕ್ಷೆ ನೀಡುತ್ತಿದ್ದರು. ಭಿಕ್ಷೆಯನ್ನು ಮುಗಿಸಿ ಶ್ರೀಗುರುವು ತನ್ನ ಆಶ್ರಯವಾದ ಔದುಂಬರ ಮೂಲಕ್ಕೆ ಹಿಂತಿರುಗುತ್ತಿದ್ದರು. ಆ ಊರಿನಲ್ಲಿದ್ದ ವಿಪ್ರರು, ಔದುಂಬರದ ಮೂಲದಲ್ಲಿ ನೆಲೆಸಿರುವ ಯತಿಯು ತಮ್ಮಲ್ಲಿ ಯಾರ ಮನೆಗೂ ಭಿಕ್ಷಕ್ಕೆ ಬರದೆ ಇರುವುದನ್ನು ಗಮನಿಸಿ, "ಈ ಯತಿಯು ಭಿಕ್ಷೆಗೆಂದು ಊರಿನೊಳಕ್ಕೆ ಬರುತ್ತಿಲ್ಲ. ಆ ಕಾಡಿನಲ್ಲಿ ಊಟವಿಲ್ಲದೆ ಹೇಗೆ ಇರುತ್ತಾರೆ?" ಎಂದು ಯೋಚಿಸುತ್ತಾ, ಅವರನ್ನು ಗಮನಿಸಿ, ಅವರು ಹೇಗೆ ಭಿಕ್ಷೆ ಮಾಡುತ್ತಿದ್ದಾರೆ ಎಂಬುದನ್ನು ತಮಗೆ ತಿಳಿಸುವಂತೆ ಒಬ್ಬ ಬ್ರಾಹ್ಮಣನನ್ನು ನೇಮಿಸಿದರು. ಗುರುವಿನ ಚರ್ಯೆಗಳನ್ನು ಗಮನಿಸುತ್ತಿದ್ದ ಅವನಿಗೆ ಮಧ್ಯಾಹ್ನ ಸಮಯದಲ್ಲಿ ಬಹಳ ಭಯವಾಗುತ್ತಿತ್ತು. ಶ್ರೀಗುರುವಿನ ಅಂತರಂಗ ಚರ್ಯೆಗಳನ್ನು ಪರೀಕ್ಷೆ ಮಾಡುವುದು, ಅವನಿಗೆ ಮೃತ್ಯು ಭಯವನ್ನುಂಟುಮಾಡುತ್ತಿತ್ತು. ಅದರಿಂದ ಅವನು ಭೀತನಾಗಿ, ತನಗೇನಾಗುವುದೋ ಎಂದು ಹೆದರಿ, ಊರನ್ನೇ ಬಿಟ್ಟು ಓಡಿಹೋದನು.

ಒಂದು ದಿನ ಅಲ್ಲಿ ಹೊಲ ಕಾಯುತ್ತಿದ್ದ, ಗಂಗಾನುಜನೆಂಬುವವನೊಬ್ಬನು, ನದಿ ಮಧ್ಯದಿಂದ ಯೋಗಿನಿಯರು ಬರುವುದನ್ನು ಕಂಡನು. ಆ ದಿವ್ಯ ಸ್ತ್ರೀಯರು ಜಲ ಮಧ್ಯದಲ್ಲಿ ದಾರಿ ಮಾಡಿಕೊಂಡು ಬರುವುದನ್ನು ಕಂಡ ಅವನಿಗೆ ಆಶ್ಚರ್ಯವಾಗಿ ಅವರನ್ನೇ ಗಮನಿಸುತ್ತಾ ನಿಂತನು. ಅವರು ನದಿಯಿಂದ ಈಚೆಗೆ ಬಂದು ನೇರವಾಗಿ ಶ್ರೀಗುರುವಿದ್ದ ಔದುಂಬರದ ಬಳಿಗೆ ಹೋಗಿ, ಅಲ್ಲಿ ಶ್ರೀಗುರುವಿಗೆ ಪೂಜೆ ಅರ್ಪಿಸಿ, ಅವರನ್ನು ಕರೆದುಕೊಂಡು ಮತ್ತೆ ತಾವು ಬಂದ ದಾರಿಯಲ್ಲಿಯೇ ಹೋದರು. ಸ್ವಲ್ಪ ಕಾಲವಾದ ಮೇಲೆ ಅವನು ಶ್ರೀಗುರುವು ಹಿಂತಿರುಗಿ ಬಂದು ಯಥಾ ಪ್ರಕಾರವಾಗಿ ಔದುಂಬರ ಮೂಲದಲ್ಲಿ ಕುಳಿತುದನ್ನು ಕಂಡನು. ಮಾರನೆಯ ದಿನವೂ ಅ ಯೋಗಿನಿಯರು ಬಂದು ಶ್ರೀಗುರುವನ್ನು ಕರೆದುಕೊಂಡು ಹೋದರು. ಕುತೂಹಲಗೊಂಡ ಗಂಗಾನುಜನೂ ಅವರನ್ನು ಹಿಂಬಾಲಿಸಿ ಹೋದನು. ಆ ಯೋಗಿನಿಯರು ಗುರುವನ್ನು ಒಂದು ರತ್ನ ಖಚಿತವಾದ ಗೋಪುರಗಳಿಂದ ಕೂಡಿದ ಪುರದೊಳಕ್ಕೆ ಕರೆದುಕೊಂಡು ಹೋದರು. ಅಮರಾವತಿಯಂತೆ ಕಂಗೊಳಿಸುತ್ತಿದ್ದ ಆ ಪುರದಲ್ಲಿ ಶ್ರೀಗುರುವಿಗೆ ನೀರಾಜನಾದಿಗಳನ್ನು ಕೊಟ್ಟು, ರತ್ನ ಸಿಂಹಾಸನದ ಮೇಲೆ ಕೂಡಿಸಿ, ಷೋಡಶೋಪಚಾರ ಪೂಜೆಗಳನ್ನು ಮಾಡಿ ಭಿಕ್ಷೆಯನ್ನು ಕೊಟ್ಟರು. ಶ್ರೀಗುರುವು ಅವರಿತ್ತ ಭಿಕ್ಷೆಯನ್ನು ಸ್ವೀಕರಿಸಿ, ಅಲ್ಲಿಂದ ಹಿಂತಿರುಗಿ, ಔದುಂಬರ ವೃಕ್ಷ ಮೂಲಕ್ಕೆ ಹಿಂತಿರುಗಿದರು. ದಾರಿಯಲ್ಲಿ ಅವರು ಗಂಗಾನುಜನನ್ನು ನೋಡಿ, "ನೀನೇಕೆ ಇಲ್ಲಿಗೆ ಬಂದೆ?" ಎಂದು ಕೇಳಿದರು. ಅವನು ಹೆದರಿ, "ಸ್ವಾಮಿ ನನ್ನ ಹೆಸರು ಗಂಗಾನುಜ. ಕುತೂಹಲದಿಂದ ಏನು ನಡೆಯುತ್ತಿದೆ ಎಂದು ನೋಡಲು ನಿಮ್ಮ ಹಿಂದೆ ಬಂದೆ. ನನ್ನ ತಪ್ಪನ್ನು ಕ್ಷಮಿಸಿ. ನೀವು ನಿಜವಾಗಿಯೂ ಆ ಪಾರ್ವತೀ ಪತಿಯೇ! ನನ್ನ ಈ ಅಪರಾಧವನ್ನು ಕ್ಷಮಿಸಿ, ನನ್ನನ್ನು ಉದ್ಧರಿಸಿ" ಎಂದು ದೀನನಾಗಿ ಬೇಡಿಕೊಂಡನು. ಅವನ ಮಾತಿಗೆ ಶ್ರೀಗುರುವು, "ಗಂಗಾನುಜ, ಇಂದಿಗೆ ನಿನ್ನ ದಾರಿದ್ರ್ಯವೆಲ್ಲಾ ನಾಶವಾಯಿತು. ನೀನು ಕೋರಿದ್ದು ನಿನಗೆ ಲಭಿಸುತ್ತದೆ. ಆದರೆ ನೀನು ಇಲ್ಲಿ ನೋಡಿದ್ದನ್ನು ಯಾರಿಗೂ ಹೇಳಬೇಡ. ಹೇಳಿದರೆ ನಿನಗೆ ಸಾವು ಬರುತ್ತದೆ. ನಾನಿಲ್ಲಿರುವವರೆಗೂ ಅದು ಯಾರಿಗೂ ತಿಳಿಯಬಾರದು. ನನ್ನ ಅನುಗ್ರಹದಿಂದ ನೀನು ಸದ್ಗತಿಯನ್ನು ಪಡೆಯುತ್ತೀಯೆ" ಎಂದು ಹೇಳಿ, ಅವರು ಔದುಂಬರವನ್ನು ಸೇರಿದರು. ಗಂಗಾನುಜನೂ ಅವರನ್ನು ಹಿಂಬಾಲಿಸಿ ಹೊರಟು, ಅವರ ಅನುಮತಿಯನ್ನು ಪಡೆದು ತನ್ನ ಮನೆಗೆ ಹೋದನು. ಗುರುವಿನ ಅನುಗ್ರಹದಿಂದ ಅವನಿಗೆ ಹೊಲದಲ್ಲಿ ನಿಧಿಯೊಂದು ದೊರೆಯಿತು. ಅಂದಿನಿಂದ ಅವನು ತನ್ನ ಹೆಂಡತಿಯೊಡನೆ ಪ್ರತಿ ದಿನವೂ ಶ್ರೀಗುರುವಿನ ಸನ್ನಿಧಾನಕ್ಕೆ ಬಂದು ಅವರ ಸೇವೆ ಮಾಡುತ್ತಾ ಆನಂದದಿಂದಿದ್ದನು.

ಒಂದುಸಲ, ಗಂಗಾನುಜ, ಮಾಘಮಾಸದ ಹುಣ್ಣಿಮೆಯಂದು, ಶ್ರೀಗುರುವಿನ ಬಳಿಗೆ ಬಂದು, ನಮಸ್ಕರಿಸಿ, "ಹೇ ಸದ್ಗುರು, ಮಾಘಮಾಸದಲ್ಲಿ ಪ್ರಯಾಗ, ಕಾಶಿ ಕ್ಷೇತ್ರಗಳಲ್ಲಿ ಸ್ನಾನ ಮಾಡಿದರೆ ಮಹಾ ಪುಣ್ಯವುಂಟಾಗುವುದೆಂದು ಊರಿನಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದರು. ಪ್ರಯಾಗ ಕಾಶಿ ಕ್ಷೇತ್ರಗಳು ಎಲ್ಲಿವೆ? ಅಲ್ಲಿ ಸ್ನಾನ ಮಾಡುವುದರಿಂದ ಬರುವ ಫಲವೇನು? ಎಂಬುದು ನನಗೆ ತಿಳಿಯದು. ದಯೆಯಿಟ್ಟು ಅದನ್ನು ನನಗೆ ತಿಳಿಯುವಂತೆ ಹೇಳಿ" ಎಂದು ಕೇಳಿಕೊಂಡನು. "ತ್ರಿಸ್ಥಲಿ ಎಂದು ಕರೆಯಲ್ಪಡುವ ಪ್ರಯಾಗ, ಕಾಶಿ, ಗಯ ಎಂಬುವು ಬಹಳ ಪುಣ್ಯಪ್ರದವಾದ ಕ್ಷೇತ್ರಗಳು. ಇಲ್ಲಿ ಕೃಷ್ಣಾ ಪಂಚ ನದಿಸಂಗಮವೇ ಪ್ರಯಾಗ. ಯುಗಾಲಯವೇ ಕಾಶಿ. ಕೊಲ್ಹಾಪುರವೇ ಗಯಾ. ದಕ್ಷಿಣದಲ್ಲಿ ಇವು ಮೂರೂ ಬಹು ಪುಣ್ಯದಾಯಿಗಳು. ತ್ರಿಸ್ಥಲಿಯನ್ನು ನೀನು ನೋಡಬೇಕೆಂದರೆ ನಿನಗೆ ತೋರಿಸುತ್ತೇನೆ" ಎಂದು ಹೇಳಿ ಗಂಗಾನುಜನನ್ನು ತಮ್ಮ ಪಾದುಕೆಗಳನ್ನು ಹಿಡಿದುಕೊಳ್ಳಲು ಹೇಳಿ, ವ್ಯಾಘ್ರ ಚರ್ಮಾಸೀನರಾದ ಶ್ರೀಗುರುವು ಅವನನ್ನು ಬೆಳಗ್ಗೆ ಪ್ರಯಾಗಕ್ಕೆ ಕರೆದುಕೊಂಡು ಹೋಗಿ, ಅಲ್ಲಿಸ್ನಾನಾದಿಗಳನ್ನು ಆಚರಿಸಿ, ಮಧ್ಯಾಹ್ನದಲ್ಲಿ ಕಾಶಿಯಲ್ಲಿ ವಿಶ್ವೇಶ್ವರನ ದರ್ಶನ ಮಾಡಿ, ಅಲ್ಲಿಂದ ಗಯಾ ಕ್ಷೇತ್ರಕ್ಕೆ ಹೋಗಿ, ಸಾಯಂಕಾಲದ ವೇಳೆಗೆ ಮತ್ತೆ ತಮ್ಮ ಸ್ವಸ್ಥಾನಕ್ಕೆ ಕರೆದುಕೊಂಡು ಬಂದರು. ಗುರುವಿನ ಅನುಗ್ರಹದಿಂದ ಗಂಗಾನುಜ ತ್ರಿಸ್ಥಲಿ ದರ್ಶನಮಾಡಿ, ವಿಸ್ಮಿತನಾಗಿ, ಸಂತೋಷಗೊಂಡನು.

ಈ ಘಟನೆಯಿಂದ ಗುಪ್ತವಾಗಿದ್ದ ತಮ್ಮ ಇರುವಿಕೆಯು ಪ್ರಕಟಗೊಂಡಿತು ಎಂದು ಭಾವಿಸಿ ಶ್ರೀಗುರುವು ತಾವು ಇನ್ನು ಆ ಪ್ರದೇಶದಲ್ಲಿ ನಿಲ್ಲಬಾರದು ಎಂದುಕೊಂಡು, ತಾವಿದ್ದ ಸ್ಥಾನ ಮಹಿಮೆಯನ್ನು ಪ್ರಕಟಗೊಳಿಸಿ, ಅಮರೇಶ್ವರಸ್ವಾಮಿ ಸನ್ನಿಧಿಯನ್ನು ಬಿಟ್ಟು ಹೋಗಲು ನಿಶ್ಚಯಿಸಿದರು. ಅದನ್ನು ತಿಳಿದ ಯೋಗಿನಿಯರು ಶ್ರೀಗುರುವಿನ ಬಳಿಗೆ ಬಂದು, "ಸ್ವಾಮಿ, ನಮ್ಮನ್ನು ಬಿಟ್ಟು ಹೇಗೆ ಹೋಗುತ್ತಿದ್ದೀರಿ? ಈ ರೀತಿ ನಮ್ಮನ್ನು ಉಪೇಕ್ಷಿಸುವುದು ನಿಮಗೆ ತರವೇ? ನೀವು ನಮ್ಮನ್ನು ಬಿಟ್ಟು ಹೋಗಲು ನಾವು ಒಪ್ಪುವುದಿಲ್ಲ" ಎಂದು ದೀನರಾಗಿ ಬೇಡಿಕೊಳ್ಳಲು, ಭಕ್ತವತ್ಸಲನಾದ ಶ್ರೀಗುರುವು, "ಈ ಔದುಂಬರ ವೃಕ್ಷ ಮೂಲದಲ್ಲಿ ನಾವು ಸದಾ ನೆಲಸಿರುತ್ತೇವೆ. ಆದರೆ ಪ್ರಕಟವಾಗಿಯಲ್ಲ. ನೀವೂ ಇಲ್ಲೇ ನೆಲೆಯಾಗಿ. ಇಲ್ಲಿ ಅನ್ನಪೂರ್ಣೆಯೂ ನೆಲಸಿರುತ್ತಾಳೆ. ಅಮರಪುರಕ್ಕೆ ಪಶ್ಚಿಮದಲ್ಲಿರುವ ಈ ಔದುಂಬರವೇ ನಮ್ಮ ನಿವಾಸ ಸ್ಥಾನವು. ಈ ಸ್ಥಳ ಸಕಲರಿಗೂ ಪೂಜ್ಯ ಸ್ಥಾನವಾಗುತ್ತದೆ. ನೀವೆಲ್ಲರೂ ಇಷ್ಟಾರ್ಥ ಪೂರಯಿಸುವವರಾಗುತ್ತೀರಿ. ನಿಮ್ಮನ್ನೂ, ಈ ಔದುಂಬರದ ಮೂಲದಲ್ಲಿ ಇರುವ ಪಾದುಕೆಗಳನ್ನೂ ಪೂಜಿಸಿದ ಜನರಿಗೆ ಅವರ ಕೋರಿಕೆಗಳು ಸಿದ್ಧಿಸುತ್ತವೆ. ಇಲ್ಲಿ ಬ್ರಾಹ್ಮಣರ ಆರಾಧನೆ ಮಾಡುವವರ ಕಾಮಿತಾರ್ಥಗಳು ನೆರವೇರುತ್ತವೆ. ಪಾಪನಾಶಿನಿ, ಕಾಮ್ಯತೀರ್ಥ, ಸಿದ್ಧತೀರ್ಥಗಳಲ್ಲಿ ಸ್ನಾನ ಮಾಡಿ, ಈ ಔದುಂಬರ ವೃಕ್ಷ ಸಹಿತ ನಮಗೆ ಏಳುಸಲ ಅಭಿಷೇಕ ಮಾಡಿದರೆ ವಯಸ್ಸಾದ ಬಂಜೆಯೂ ಪುತ್ರವತಿಯಾಗುತ್ತಾಳೆ. ಈ ಪ್ರದೇಶದಲ್ಲಿ ಸ್ನಾನವಾಚರಿಸಿದ ಮಾತ್ರಕ್ಕೇ ಬ್ರಹ್ಮ ಹತ್ಯಾದಿ ಪಾಪಗಳೂ ನಾಶವಾಗುತ್ತವೆ. ಗ್ರಹಣ ಸಮಯದಲ್ಲಿ ಇಲ್ಲಿ ಸ್ನಾನ ಮಾಡುವವರಿಗೆ ಅಶ್ವಮೇಧಯಾಗ ಮಾಡಿದರೆ ಉಂಟಾಗುವ ಫಲಕ್ಕಿಂತಲೂ ಅಧಿಕವಾದ ಫಲವುಂಟಾಗುತ್ತದೆ. ಅಮಾವಾಸ್ಯೆ ವ್ಯತಿಪಾತ ಯೋಗದಂತಹ ಪರ್ವದಿನಗಳಲ್ಲಿ ಇಲ್ಲಿ ಸ್ನಾನ ಮಾಡಿದರೆ ಸಾವಿರ ಗೋವುಗಳನ್ನು ದಾನ ಮಾಡಿದ ಫಲ ಉಂಟಾಗುತ್ತದೆ. ಇಲ್ಲಿ ಒಬ್ಬ ಬ್ರಾಹ್ಮಣನಿಗೆ ಭೋಜನವಿಟ್ಟರೆ ಕೋಟಿ ಬ್ರಾಹ್ಮಣರಿಗೆ ಊಟವಿಟ್ಟ ಫಲ ದೊರಕುವುದು. ಔದುಂಬರದ ಮೂಲದಲ್ಲಿ ಮಾಡಿದ ಒಂದು ಜಪ ಒಂದು ಕೋಟಿಸಲ ಜಪಮಾಡಿದ ಫಲವನ್ನು ಕೊಡುವುದು. ನಿರ್ಮಲ ಮನಸ್ಸಿನಿಂದ ಮಾಡಿದ ಹೋಮ ಫಲವೂ ಅಂತಹುದೇ! ಏಕಾದಶಿಯಂದು ಇಲ್ಲಿ ರುದ್ರಪಾದಗಳನ್ನು ಪೂಜಿಸಿದರೆ ಅತಿರುದ್ರಾಭಿಷೇಕ ಮಾಡಿದ ಫಲವುಂಟಾಗುತ್ತದೆ. ನಿರ್ಮಲ ಮನಸ್ಕರಾಗಿ, ಶ್ರದ್ಧಾಭಕ್ತಿಗಳಿಂದ ಮಾಡಿದ ಔದುಂಬರದ ಪ್ರದಕ್ಷಿಣೆ ವಾಜಪೇಯ ಯಾಗ ಮಾಡಿದ ಫಲವನ್ನು ಕೊಡುತ್ತದೆ. ಅಂಗಹೀನರು, ರೋಗಿಗಳು ಈ ವೃಕ್ಷಕ್ಕೆ ಒಂದು ಲಕ್ಷ ಸಲ ಪ್ರದಕ್ಷಿಣೆ ಮಾಡಿದರೆ ಅವರ ಶರೀರವು ದೇವಶರೀರ ಸಮಾನವಾಗುವುದು. ಕಲ್ಪತರುವೇ ಇರುವಂತಹ ಈ ಪ್ರದೇಶದಲ್ಲಿ ಲೌಕಿಕರ ದೃಷ್ಟಿಗೆ ಬೀಳದೆ ನಾವು ಸದಾ ಅಗೋಚರರಾಗಿ ಇಲ್ಲಿ ನೆಲಸಿರುತ್ತೇವೆ" ಎಂದು ಯೋಗಿನಿಗಳಿಗೆ ಹೇಳಿ, ಶ್ರೀಗುರುವು ಅಲ್ಲಿಂದ ಅದೃಶ್ಯರಾದರು. ಅವರೇ ಹೇಳಿದಂತೆ ಈಗಲೂ ಅವರು ಅಗೋಚರರಾಗಿ ಅಲ್ಲಿಯೇ ಇದ್ದುಕೊಂಡು, ಭೀಮಾ ಅಮರಜಾ ನದಿಯ ಸಂಗಮದಲ್ಲಿರುವ ಗಂಧರ್ವಪುರವನ್ನು ಸೇರಿಕೊಂಡರು. ಜಗನ್ನಾಥನೂ, ಸರ್ವಗತನೂ, ಅವ್ಯಯನೂ ಆದರೂ ಶ್ರೀಗುರುವು ಸದಾ, ಅಗೋಚರನಾಗಿ, ಅಲ್ಲಿ ಇರುತ್ತಾನೆ. ಪ್ರತ್ಯಕ್ಷವಾಗಿ ಆವರು ಗಂಧರ್ವಪುರದಲ್ಲಿ ಇದ್ದಾರೆ. ಹೇ ನಾಮಧಾರಕ, ಕೃಷ್ಣಾತೀರದಲ್ಲಿ ಶ್ರೀಗುರುವಿನ ಮಹಿಮೆ ಇಂತಹುದು’ ಎಂದು ನಾಮಧಾರಕನಿಗೆ ಸಿದ್ಧಮುನಿ ಹೇಳಿದರು. 

ಇಲ್ಲಿಗೆ ಹತ್ತೊಂಭತ್ತನೆಯ ಅಧ್ಯಾಯ ಮುಗಿಯಿತು. 



No comments:

Post a Comment