ಸಚ್ಛಿಷ್ಯನಾದ ನಾಮಧಾರಕನು ಸಿದ್ಧಮುನಿಯನ್ನು, "ಯೋಗೀಶ್ವರ, ಜ್ಞಾನಸಾಗರ, ನಿನಗೆ ಜಯವಾಗಲಿ. ಹೊಟ್ಟೆನೋವಿನಿಂದ ನರಳುತ್ತಿದ್ದ ಬ್ರಾಹ್ಮಣನ ರೋಗವನ್ನು ಹೋಗಲಾಡಿಸಿದ ನಂತರದ ವೃತ್ತಾಂತವನ್ನು ಹೇಳಿ" ಎಂದು ಕೇಳಿದನು. ಅದಕ್ಕೆ ಸಿದ್ಧಮುನಿಯು, "ಶ್ರೀಗುರುವು, ಭಿಕ್ಷೆಯನ್ನಿಟ್ಟ ಬ್ರಾಹ್ಮಣ ಸಾಯಂದೇವನನ್ನು ಕರೆದು, "ನಿನ್ನಲ್ಲಿ ಪ್ರಸನ್ನನಾಗಿದ್ದೇವೆ. ನಿನ್ನ ವಂಶಸ್ಥರು ನಮ್ಮ ಭಕ್ತರಾಗುತ್ತಾರೆ" ಎಂದರು. ಅದಕ್ಕೆ ಸಾಯಂದೇವನು ಗುರುವಿಗೆ ಸಾಷ್ಟಾಂಗ ನಮಸ್ಕಾರಮಾಡಿ, "ಸ್ವಾಮಿ, ನೀವು ಮನುಷ್ಯ ರೂಪದಲ್ಲಿರುವ ತ್ರಿಮೂರ್ತಿಗಳ ಅವತಾರವೇ! ನಿಮ್ಮ ಮಹಿಮೆಯನ್ನು ವೇದಗಳೂ ಅರಿಯಲಾರವು. ವಿಶ್ವವ್ಯಾಪಕರಾದ ಬ್ರಹ್ಮ, ವಿಷ್ಣು, ಮಹೇಶ್ವರ ರೂಪಗಳನ್ನು ಮುಚ್ಚಿಟ್ಟು ಈ ರೂಪದಲ್ಲಿ ಭಕ್ತರನ್ನುದ್ಧರಿಸಲು ಬಂದಿದ್ದೀರಿ. ನಿಮ್ಮ ಮಹಿಮೆಯನ್ನು ವರ್ಣಿಸಲು ನನಗೆ ಸಾಧ್ಯವೇ? ನನ್ನದೊಂದು ಪ್ರಾರ್ಥನೆಯಿದೆ. ನನ್ನ ವಂಶದಲ್ಲಿ ಹುಟ್ಟಿದವರಿಗೆ ನಿಮ್ಮಲ್ಲಿ ಭಕ್ತಿ, ಪುತ್ರಪೌತ್ರಾದಿಗಳಿಂದ ಕೂಡಿದ ಸುಖಸಂತೋಷಗಳನ್ನು ಕೊಟ್ಟು, ಕೊನೆಯಲ್ಲಿ ಅವರಿಗೆ ಸದ್ಗತಿಯನ್ನು ಪ್ರಸಾದಿಸಿ. ಕ್ರೂರವಾದ ಯವನನಲ್ಲಿ ಸೇವೆ ಮಾಡುತ್ತಿದ್ದೇನೆ. ಅವನು ರಾಕ್ಷಸನಂತೆ ಪ್ರತಿವರ್ಷವೂ ಒಬ್ಬ ಬ್ರಾಹ್ಮಣನನ್ನು ಸಂಹರಿಸುತ್ತಾನೆ. ಇಂದು ನನ್ನನ್ನು ಸಂಭ್ರಮಾದರಗಳಿಂದ ಆಹ್ವಾನಿಸಿದ್ದಾನೆ. ಅವನ ಬಳಿಗೆ ಹೋದರೆ ಅವನು ನನ್ನನ್ನು ತಪ್ಪದೇ ಸಂಹರಿಸುತ್ತಾನೆ. ನಿಮ್ಮ ಚರಣಗಳನ್ನಾಶ್ರಯಿಸಿದ ನನಗೆ ಅಂತಹ ಮರಣವು ಉಂಟಾಗಬಾರದು" ಎಂದು ಬಿನ್ನವಿಸಿಕೊಳ್ಳಲು, ಶ್ರೀಗುರುವು ಅವನ ತಲೆಯಮೇಲೆ ಕೈಯಿಟ್ಟು, ಅಭಯ ನೀಡಿ, "ಚಿಂತಿಸಬೇಡ. ಕ್ರೂರನಾದ ಆ ಯವನನ ಕಡೆಗೆ ದುಃಖಪಡದೆ ಹೋಗು. ಅವನು ಪ್ರೇಮದಿಂದ ನಿನ್ನನ್ನು ಮತ್ತೆ ನನ್ನೆಡೆಗೆ ಕಳುಹಿಸುತ್ತಾನೆ. ಅಲ್ಲಿಯವರೆಗೂ ನಾವು ಇಲ್ಲಿಯೇ ಇರುತ್ತೇವೆ. ನೀನು ಹಿಂತಿರುಗಿದ ಮೇಲೆ ನಾವು ಸಂತೋಷದಿಂದ ಇಲ್ಲಿಂದ ಹೊರಡುತ್ತೇವೆ. ನಿನ್ನಂತೆಯೇ ನಿನ್ನ ವಂಶಸ್ಥರೆಲ್ಲರೂ ನಮ್ಮ ಭಕ್ತರಾಗುತ್ತಾರೆ. ಪುತ್ರಪೌತ್ರಾದಿಗಳೆಲ್ಲರೂ ಸುಖಸಂತೋಷಗಳುಳ್ಳವರಾಗುವರು. ನಿನ್ನ ಕುಲದಲ್ಲಿ ಎಲ್ಲರಿಗೂ ಆಯುರಾರೋಗ್ಯಗಳು ಇರುತ್ತವೆ" ಎಂದು ಹೇಳಿ ಸಾಯಂದೇವನನ್ನು ಕಳುಹಿಸಿಕೊಟ್ಟರು.
ಅಲ್ಲಿಂದ ಹೊರಟ ಸಾಯಂದೇವನು, ಆ ಯವನ ರಾಜನ ಬಳಿಗೆ ಹೋದನು. ಕಾಲಾಂತಕ ಸದೃಶನಾದ ಆ ಯವನನು ಸಾಯಂದೇವನನ್ನು ನೋಡುತ್ತಲೇ ಅವನಿಗೆ ವಿಮುಖನಾಗಿ, ತನ್ನ ಅಂತರ್ಗೃಹಕ್ಕೆ ಹೊರಟು ಹೋದನು. ಭಯಗೊಂಡ ಸಾಯಂದೇವನು ಮನಸ್ಸಿನಲ್ಲಿಯೇ ಶ್ರೀಗುರುವನ್ನು ಧ್ಯಾನಿಸಿಕೊಂಡನು. ಗುರು ಕೃಪೆಯಿರುವನನ್ನು ಯವನನು ಏನುತಾನೇ ಮಾಡಬಲ್ಲನು? ಹಾವು ಕೄರವಾದರೂ ಗರುಡನನ್ನು ಭಕ್ಷಿಸಬಲ್ಲದೇ? ಐರಾವತವನ್ನು ಸಿಂಹವು ನುಂಗಬಲ್ಲದೇ? ಗುರು ಕೃಪೆಯಿರುವವನಿಗೆ ಕಲಿಯ ಭಯವೂ ಇರುವುದಿಲ್ಲ. ಸದಾ ಮನಸ್ಸಿನಲ್ಲಿ ಗುರು ಧ್ಯಾನಮಾಡುತ್ತಿರುವವನಿಗೆ ಯಾವುದೇ ಭಯವೂ ಇರುವುದಿಲ್ಲ. ಕಾಲಮೃತ್ಯುವು ಕೂಡ ಗುರುಭಕ್ತನನ್ನು ಮುಟ್ಟಲಾರದು. ಅಪಮೃತ್ಯುಭಯವೆಂಬುದು ಅವನಿಗೆ ಇರುವುದಿಲ್ಲ. ಮೃತ್ಯುವಿನ ಭಯವೇ ಇಲ್ಲದವನಿಗೆ ಯವನನ ಭಯ ಹೇಗೆ ಉಂಟಾಗುತ್ತದೆ? ಸಾಯಂದೇವನನ್ನು ಕಂಡ ಆ ಯವನನು ಕಾರಣವೇ ಇಲ್ಲದೆ ಭೀತನಾಗಿ, ಅಂತಃಪುರವನ್ನು ಸೇರಿ, ದುಃಖಿತನಾಗಿ ಗಾಢನಿದ್ರೆಯಲ್ಲಿ ಮುಳುಗಿಹೋದನು. ಎಚ್ಚರಗೊಂಡು, ಹೃದಯವೇದನೆಯಿಂದ ಪ್ರಾಣಾಂತಿಕವಾದ ಬಾಧೆಪಡುತ್ತಾ, ಸ್ವಪ್ನದಲ್ಲಿ ಕಂಡ ದೃಶ್ಯಗಳ ನೆನಪುಗಳು ಬರುತ್ತಿರಲು, "ಆ ಬ್ರಾಹ್ಮಣ ಶಸ್ತ್ರಗಳಿಂದ ನನ್ನ ಅಂಗಾಂಗಗಳನ್ನು ಕತ್ತರಿಸುತ್ತಿದ್ದಾನೆ" ಎಂದು ಹೇಳುತ್ತಾ, ಸಾಯಂದೇವನ ಬಳಿಗೆ ಓಡಿಬಂದು, ನಡುಗುತ್ತಾ, "ಸ್ವಾಮಿ, ನೀನೆ ದಿಕ್ಕು. ನಿನ್ನನ್ನು ಇಲ್ಲಿಗೆ ಯಾರು ಕರೆದರು? ತಕ್ಷಣವೇ ನೀನು ನಿನ್ನ ಮನೆಗೆ ಹಿಂತಿರುಗು" ಎಂದು ಹೇಳಿ, ಅವನಿಗೆ ವಸ್ತ್ರಾದಿಗಳನ್ನು ಅರ್ಪಿಸಿ ಕಳುಹಿಸಿಕೊಟ್ಟನು.
ಸಂತೋಷಗೊಂಡ ಸಾಯಂದೇವನು, ಹಿಂತಿರುಗಿ ಶ್ರೀಗುರುದರ್ಶನ ಕಾತುರನಾಗಿ, ಶ್ರೀಗುರುವು ಇದ್ದ ಗಂಗಾತೀರಕ್ಕೆ ಬಂದನು. ಶ್ರೀಗುರುವನ್ನು ಕಂಡು ಅವರಿಗೆ ನಮಸ್ಕರಿಸಿ, ಸ್ತೋತ್ರಾದಿಗಳಿಂದ ಅವರನ್ನು ಸ್ತುತಿಸಿ, ಅವರಿಗೆ ನಡೆದದ್ದನ್ನೆಲ್ಲಾ ತಿಳಿಸಿದನು. ಶ್ರೀಗುರುವು ಸಂತೃಪ್ತನಾಗಿ, "ನಾವು ದಕ್ಷಿಣದಿಕ್ಕಿನಲ್ಲಿ ಹೊರಟು ಮಾರ್ಗದಲ್ಲಿನ ತೀರ್ಥಗಳನ್ನು ಸಂದರ್ಶಿಸುತ್ತೇವೆ" ಎಂದು ಹೇಳಲು, ಸಾಯಂದೇವನು ವಿನಯದಿಂದ ಕೈಜೋಡಿಸಿ, "ನಾನು ನಿಮ್ಮಪಾದಸೇವಕ. ಪಾಪಹರವಾದ ನಿಮ್ಮ ಚರಣಗಳನ್ನು ಬಿಟ್ಟು ಒಂದು ಕ್ಷಣವೂ ಇರಲಾರೆ. ಸಗರರನ್ನುದ್ಧರಿಸಲು ಗಂಗೆ ಬಂದಂತೆ ನೀವು ನನಗೆ ದರ್ಶನಕೊಡಲೆಂದೇ ಇಲ್ಲಿಗೆ ದಯಮಾಡಿಸಿದಿರಿ. ಭಕ್ತವತ್ಸಲ, ನಿಮ್ಮ ಕೀರ್ತಿ ಯಾರಿಗೆ ಸಂಪೂರ್ಣವಗಿ ತಿಳಿದಿದೆ? ನನ್ನನ್ನು ಬಿಟ್ಟು ಹೋಗಬೇಡಿ. ನಿಮ್ಮಜೊತೆಯಲ್ಲಿಯೇ ಬರುತ್ತೇನೆ" ಎಂದು ಅವರ ಚರಣಗಳಲ್ಲಿ ಬಿದ್ದನು. ಅವನು ವಿನಯದಿಂದ ಮಾಡಿದ ಆ ಪ್ರಾರ್ಥನೆಯನ್ನು ಕೇಳಿದ ಗುರುವು ಸಂತೋಷದಿಂದ, "ಕಾರ್ಯನಿಮಿತ್ತವಾಗಿ ದಕ್ಷಿಣದೇಶಕ್ಕೆ ಹೋಗುತ್ತಿದ್ದೇವೆ. ನಿನಗೆ ಮತ್ತೆ ಹತ್ತು ವರ್ಷಗಳ ನಂತರ ನಮ್ಮ ದರ್ಶನವಾಗುತ್ತದೆ. ಆಗ ನಿನ್ನ ಗ್ರಾಮದ ಹತ್ತಿರದಲ್ಲೇ ಇರುತ್ತೇವೆ. ಆಗ ನೀನು ನಿನ್ನ ಹೆಂಡತಿ ಮಕ್ಕಳೊಡನೆ ಬಂದು ನಮ್ಮನ್ನು ಕಾಣು. ಚಿಂತಿಸಬೇಡ. ನಿನ್ನ ದುರಿತಗಳೆಲ್ಲಾ ನಾಶವಾದವು. ಸುಖವಾಗಿರು" ಎಂದು ಅನುಗ್ರಹ ಮಾಡಿ, ತಲೆಯಮೇಲೆ ಕೈಯಿಟ್ಟು ಆಶೀರ್ವದಿಸಿದರು. ಅಲ್ಲಿಂದ ಹೊರಟ ಶ್ರೀಗುರುವು ಶಿಷ್ಯರೊಡನೆ ವೈದ್ಯನಾಥ ಕ್ಷೇತ್ರವನ್ನು ಸೇರಿದರು. ಅಲ್ಲಿ ಆರೋಗ್ಯಭವಾನಿ ಇದ್ದಾಳೆ. ಶಿಷ್ಯರೊಡನೆ ಕ್ಷೇತ್ರ ಸಂದರ್ಶನ ಮಾಡುತ್ತಾ, ಪ್ರಸಿದ್ಧವಾದ ವೈದ್ಯನಾಥದಲ್ಲಿ ಗುರುವು ರಹಸ್ಯವಾಗಿ ನಿಂತರು" ಎಂದು ಹೇಳಿದ ಸಿದ್ಧಮುನಿಯ ಮಾತನ್ನು ಕೇಳಿ, ನಾಮಧಾರಕ, "ಸ್ವಾಮಿ, ಅಲ್ಲಿ ಶ್ರೀಗುರುವು ರಹಸ್ಯವಾಗಿ ಏಕೆ ನಿಂತರು? ಶಿಷ್ಯರೆಲ್ಲರೂ ಎಲ್ಲಿದ್ದರು?" ಎಂದು ಕೇಳಲು, ಸಿದ್ಧರು ಮುಂದಿನ ಕಥೆಯನ್ನು ಹೇಳಲು ಉಪಕ್ರಮಿಸಿದರು.
ಇಲ್ಲಿಗೆ ಹದಿನಾಲ್ಕನೆಯ ಅಧ್ಯಾಯ ಮುಗಿಯಿತು.
No comments:
Post a Comment