Sunday, September 29, 2013

||ಶ್ರೀಗುರು ಚರಿತ್ರೆ - ಐವತ್ತೆರಡನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ಐವತ್ತೊಂದು ಅಧ್ಯಾಯಗಳ ಗುರುಚರಿತ್ರೆಯನ್ನು ಕೇಳಿ ನಾಮಧಾರಕನ ಮನಸ್ಸು ಬ್ರಹ್ಮಾನಂದದಲ್ಲಿ ಮಗ್ನವಾಗಿಹೋಯಿತು. ಜಗತ್ತೆಲ್ಲವೂ ಅವನಿಗೆ ದಿವ್ಯವಾಗಿ ಕಾಣಬಂತು. ಹೀಗೆ ಸಮಾಧಿಸ್ಥಿತನಾಗಿ ಆನಂದಮಗ್ನನಾದ ನಾಮಧಾರಕನು ವಾಗತೀತವಾದ ಸಾತ್ವಿಕ ಅಷ್ಟಭಾವಗಳಿಂದ ಕೂಡಿ ನಿಮೀಲಿತ ನೇತ್ರನಾದನು. ಅವನನ್ನು ಕಂಡ ಸಿದ್ಧಮುನಿಯು ಆನಂದಭರಿತನಾಗಿ ‘ನನ್ನ ಶಿಷ್ಯನಿಗೆ ಸಮಾಧಿಸ್ಥಿತಿ ಲಭಿಸಿತು. ಲೋಕೋಪಕಾರ್ಥವಾಗಿ ಇವನನ್ನು ಎಚ್ಚರಗೊಳಿಸಬೇಕು’ ಎಂದು ಯೋಚಿಸಿ, ಪ್ರೇಮ ಪೂರಿತನಾಗಿ ತನ್ನ ಅಮೃತ ಹಸ್ತವನ್ನು ನಾಮಧಾರಕನ ತಲೆಯಮೇಲಿಟ್ಟು, ಅವನನ್ನು ಆಲಿಂಗನ ಮಾಡಿಕೊಂಡು, "ನಾಮಧಾರಕ, ನೀನು ಚಂಚಲವಾದ ಭವಸಾಗರವನ್ನು ದಾಟಿದೆ. ನೀನು ಹೀಗೇ ಇದ್ದುಬಿಟ್ಟರೆ ನಿನ್ನ ಜ್ಞಾನವು ನಿನ್ನಲ್ಲಿಯೇ ಇದ್ದುಬಿಡುತ್ತದೆ. ಅದರಿಂದ ಜಗತ್ತು ಹೇಗೆ ಉದ್ಧರಿಸಲ್ಪಡುತ್ತದೆ? ಆದ್ದರಿಂದ ಶಿಷ್ಯ, ನೀನು ಎಚ್ಚರಗೊಳ್ಳಬೇಕು. ಅದಕ್ಕಾಗಿ ನೀನು ಅಂತಃಕರಣದಲ್ಲಿ ಶ್ರೀಗುರುಚರಣಗಳಲ್ಲಿ ಸುದೃಢಬಾವನೆಯನ್ನು ನಿಲ್ಲಿಸಿಕೊಳ್ಳಬೇಕು. ಬಾಹ್ಯದಲ್ಲಿ ನಿನ್ನ ಆಚರಣೆಗಳು ಶಾಸ್ತ್ರಾಧಾರವಾಗಿ ನಡೆಯಬೇಕು. ನೀನು ಕೋರಿದ ಹಾಗೆ ಅಮೃತದಂತಹ ಶ್ರೀಗುರುಚರಿತ್ರೆಯನ್ನು ನನ್ನ ಮನಸ್ಸಿಗೆ ಗೋಚರಿಸಿದಂತೆ ಹೇಳಿದ್ದೇನೆ. ಇದು ತಾಪತ್ರಯಗಳನ್ನು ಹೋಗಲಾಡಿಸುವುದು. ಇದು ನಿನಗೋಸ್ಕರವೇ ಲೋಕದಲ್ಲಿ ಪ್ರಕಟಗೊಂಡಿದೆ. ನಿನಗೋಸ್ಕರವೇ ನಾನು ಶ್ರೀಗುರುಚರಿತ್ರೆಯನ್ನು ಸ್ಮರಣೆಗೆ ತಂದುಕೊಂಡು ಉಪದೇಶಿಸಿದ್ದೇನೆ. ನಿನ್ನಿಂದಾಗಿ ನನಗೆ ಗುರುಚರಿತ್ರೆ ಸ್ಮರಣೆಗೆ ಬಂದದ್ದರಿಂದ ನನಗೂ ಹಿತವೇ ಆಯಿತು" ಎಂದು ಹೇಳಿದರು. ಸಿದ್ಧಮುನಿಯ ಉಪದೇಶವನ್ನು ಕೇಳಿದ ನಾಮಧಾರಕ ಕಣ್ಣು ತೆರೆದು ನೋಡಿದನು.

ನಾಮಧಾರಕನು, "ಸ್ವಾಮಿ, ನೀವು ಭವಸಾಗರತಾರಕರು. ನನಗೆ ಶ್ರೀಗುರುಚರಿತ್ರೆಯ ಅವತರಣಿಕೆ ಕ್ರಮವನ್ನು ತಿಳಿಸಬೇಕು" ಎಂದು ಪ್ರಾರ್ಥಿಸಿದನು. "ಶ್ರೀಗುರುಚರಣಾಮೃತದಲ್ಲಿ ಅಮೃತಕ್ಕಿಂತ ಪರಮಾಮೃತವಾದ ತೃಪ್ತಿ ಇರುವುದು. ಆದ್ದರಿಂದ ಈ ಕಥೆಯನ್ನು ಮತ್ತೆ ಸೂಚನಾ ಪ್ರಾಯವಾಗಿ ತಿಳಿಸಿ, ಅಕ್ಷಯಾಮೃತವನ್ನು ನಾನು ಆಸ್ವಾದಿಸುವಂತೆ ಮಾಡಿ, ನನ್ನನ್ನು ಆನಂದ ಸಾಗರದಲ್ಲಿ ನಿಮಗ್ನನಾಗುವಂತೆ ಮಾಡಿ" ಎಂದು ಬಿನ್ನವಿಸಿಕೊಂಡನು.

ಶಿಷ್ಯನ ಪ್ರಾರ್ಥನೆಯನ್ನು ಕೇಳಿದ ಸಿದ್ಧಮುನಿ, "ಶಿಷ್ಯ, ಈಗ ನಿನಗೆ ಶ್ರೀಗುರುಚರಿತ್ರೆಯ ಮೊದಲನೆಯ ಅಧ್ಯಾಯದಿಂದ ಐವತ್ತೆರಡನೆಯ ಅಧ್ಯಾಯದವರೆಗೂ ಸಂಗ್ರಹ ಸೂಚಿಕೆಯನ್ನು ಹೇಳುತ್ತೇನೆ. ಪ್ರಥಮಾಧ್ಯಾಯ ಮಂಗಳಾಚರಣವು. ಮುಖ್ಯಾವತಾರ ಸ್ಮರಣ, ಶ್ರೀಗುರುಮೂರ್ತಿ ದರ್ಶನ ಭಕ್ತರಿಗೆ ಸಿದ್ಧಿಸಿತು. ದ್ವಿತೀಯಾಧ್ಯಾಯದಲ್ಲಿ ಬ್ರಹ್ಮೋತ್ಪತ್ತಿ, ನಾಲ್ಕು ಯುಗಗಳ ಲಕ್ಷಣಗಳು: ಶ್ರೀಗುರು ಸೇವೆ ಮಾಡಿದ ದೀಪಕನ ವೃತ್ತಾಂತ: ಮೂರನೆಯ ಅಧ್ಯಾಯದಲ್ಲಿ ಸಿದ್ಧಗುರುವು ನಾಮಧಾರಕನನ್ನು ಅಮರಜಾ ಸಂಗಮದಲ್ಲಿ ಸ್ವಸ್ಥಾನಕ್ಕೆ ಕರೆದುಕೊಂಡು ಹೋಗಿ ಅಂಬರೀಷ ದೂರ್ವಾಸರ ಮಹಿಮೆಗಳನ್ನು ತಿಳಿಸಿದರು. ನಾಲ್ಕನೆಯ ಅಧ್ಯಾಯದಲ್ಲಿ ಅನಸೂಯಾ ದೇವಿಯನ್ನು ಪರೀಕ್ಷಿಸಲು ಬಂದ ತ್ರಿಮೂರ್ತಿಗಳು ಶಿಶುಗಳಾಗಿ ಆನಂದದಿಂದ ಅನಸೂಯಾ ದೇವಿಯ ಸ್ತನ್ಯವನ್ನು ಕುಡಿದರು. ಐದನೆಯ ಅಧ್ಯಾಯದಲ್ಲಿ ದತ್ತಾತ್ರೇಯರು ಪೀಠಾಪುರದಲ್ಲಿ ಶ್ರೀಪಾದ ಶ್ರೀವಲ್ಲಭರಾಗಿ ಅವತರಿಸಿ ತೀರ್ಥಯಾತ್ರೆಗಳಿಗೆಂದು ಹೊರಟರು. ಆರನೆಯ ಅಧ್ಯಾಯದಲ್ಲಿ ರಾವಣನು ಪರಮೇಶ್ವರನಿಂದ ಆತ್ಮಲಿಂಗವನ್ನು ಗ್ರಹಿಸಿ ತೆಗೆದುಕೊಂಡು ಹೋಗುವುದನ್ನು ವಿಘ್ನೇಶ್ವರನು ವಿಘ್ನಗೊಳಿಸಲು ಆತ್ಮಲಿಂಗವು ಗೋಕರ್ಣ ಕ್ಷೇತ್ರದಲ್ಲಿ ಸ್ಥಾಪನೆಗೊಂಡ ಕಥೆ ಇದೆ. ಏಳನೆಯ ಅಧ್ಯಾಯದಲ್ಲಿ ಗೌತಮನು ಮಿತ್ರ ಸಹ ರಾಜನಿಗೆ ಗೋಕರ್ಣ ಮಹಿಮೆಯನ್ನು ವರ್ಣಿಸಿ ಚಂಡಾಲಿ ಹಠಾತ್ತಾಗಿ ಉದ್ಧರಿಸಲ್ಪಟ್ಟ ಕಥೆ ಹೇಳಿದನು. ಎಂಟನೆಯ ಅಧ್ಯಾಯದಲ್ಲಿ ಮಾತಾಪುತ್ರರು ನದಿಯಲ್ಲಿ ಬಿದ್ದು ಪ್ರಾಣ ತ್ಯಾಗ ಮಾಡಲು ಯತ್ನಿಸುತ್ತಿದ್ದಾಗ ಶ್ರೀಗುರುವಲ್ಲಭರು ತಾಯಿಗೆ ಶನಿಪ್ರದೋಷ ವ್ರತವನ್ನು ಉಪದೇಶಿಸಿ, ಅವಳ ಮಗನನ್ನು ಜ್ಞಾನಿಯಾಗಿ ಮಾಡಿದರು. ಒಂಭತ್ತನೆಯ ಅಧ್ಯಾಯದಲ್ಲಿ ಕೃಪಾಸಾಗರನಾದ ಶ್ರೀಗುರುವು ರಜಕನಿಗೆ ರಾಜನಾಗುವಂತೆ ವರಕೊಟ್ಟು, ರಾಜನಾದಾಗ ಅವನಿಗೆ ದರ್ಶನ ಕೊಡಲು ಮಾತುಕೊಟ್ಟು, ಅದೃಶ್ಯರಾದರು. ಹತ್ತನೆಯ ಅಧ್ಯಾಯದಲ್ಲಿ ಕಳ್ಳರು ಸಂಹರಿಸಿದ ಬ್ರಾಹ್ಮಣನಿಗೆ ಶ್ರೀಗುರುವು ಪ್ರಾಣಕೊಟ್ಟು, ಕಳ್ಳರನ್ನು ಸಂಹರಿಸಿದರು.

ಹನ್ನೊಂದನೆಯ ಅಧ್ಯಾಯದಲ್ಲಿ ಕರಂಜಾ ನಗರದಲ್ಲಿ ಮಾಧವನೆಂಬ ಬ್ರಾಹ್ಮಣನ ಪತ್ನಿಯಾದ ಅಂಬೆಯ ಗರ್ಭದಲ್ಲಿ ಅವತರಿಸಿ ಶ್ರೀ ನೃಸಿಂಹ ಸರಸ್ವತಿ ಎಂಬ ಹೆಸರಿನಿಂದ ಪ್ರಸಿದ್ಧಿಗೊಂಡ ಶ್ರೀಗುರುವಿನ ಚರಿತ್ರೆ ಇದೆ. ಹನ್ನೆರಡನೆಯ ಅಧ್ಯಾಯದಲ್ಲಿ ಅಂಬಾ ದೇವಿಗೆ ಜ್ಞಾನವನ್ನು ಉಪದೇಶಿಸಿ ಅವಳ ಸಂತಾನವನ್ನು ಅನುಗ್ರಹಿಸಿ, ಕಾಶಿ ನಗರವನ್ನು ಸೇರಿ ಸನ್ಯಾಸವನ್ನು ಸ್ವೀಕರಿಸಿ, ಉತ್ತರ ಯಾತ್ರೆ ಮಾಡಿದರು. ಹದಿಮೂರನೆಯ ಅಧ್ಯಾಯದಲ್ಲಿ ಕಾರಂಜ ನಗರದಲ್ಲಿ ತಾಯಿತಂದೆಗಳಿಗೆ ದರ್ಶನಕೊಟ್ಟು ಶ್ರೀಗುರುವು ಗೋದಾವರಿ ತೀರವನ್ನು ಸೇರಿ ಅಲ್ಲಿ ಹೊಟ್ಟೆ ಶೂಲೆಯಿಂದ ಬಾಧೆಪಡುತ್ತಿದ್ದ ಬ್ರಾಹ್ಮಣನನ್ನು ಅನುಗ್ರಹಿಸಿದರು. ಹದಿನಾಲ್ಕನೆಯ ಅಧ್ಯಾಯದಲ್ಲಿ ಶ್ರೀಗುರುವು ಕೄರನಾದ ಯವನ ರಾಜನನ್ನು ಶಿಕ್ಷಿಸಿ ಸಾಯಂದೇವನನ್ನು ಅನುಗ್ರಹಿಸಿ ವರಗಳನಿತ್ತರು. ಹದಿನೈದನೆಯ ಅಧ್ಯಾಯದಲ್ಲಿ ಶ್ರೀಗುರುವು ತನ್ನ ಶಿಷ್ಯರನ್ನು ತೀರ್ಥಯಾತ್ರೆಗಳಿಗೆ ಕಳುಹಿಸಿ ತಾವು ವೈದ್ಯನಾಥದಲ್ಲಿ ಸ್ವಲ್ಪಕಾಲ ಗುಪ್ತವಾಗಿದ್ದರು. ಹದಿನಾರನೆಯ ಅಧ್ಯಾಯದಲ್ಲಿ ಶ್ರೀಗುರುವು ಒಬ್ಬ ಬ್ರಾಹ್ಮಣನಿಗೆ ಗುರುಭಕ್ತಿಯನ್ನು ಬೋಧಿಸಿ, ಅವನಿಗೆ ಜ್ಞಾನವನ್ನನುಗ್ರಹಿಸಿ, ಭಿಲ್ಲವಾಡಿಯಲ್ಲಿರುವ ಭುವನೇಶ್ವರಿ ಸನ್ನಿಧಿಯನ್ನು ಸೇರಿದರು. ಹದಿನೇಳನೆಯ ಅಧ್ಯಾಯದಲ್ಲಿ ಮೂರ್ಖನಾದ ಬ್ರಾಹ್ಮಣ, ದೇವಿಗೆ ತನ್ನ ನಾಲಗೆಯನ್ನು ಕತ್ತರಿಸಿ ಅರ್ಪಿಸಲು ಶ್ರೀಗುರುವು ಮತ್ತೆ ಅವನಿಗೆ ನಾಲಗೆಯನ್ನು ಕೊಟ್ಟು ಅವನನ್ನು ವಿದ್ಯಾವಂತನಾಗೆಂದು ಆಶೀರ್ವದಿಸಿದರು. ಹದಿನೆಂಟನೆಯ ಅಧ್ಯಾಯದಲ್ಲಿ ಒಬ್ಬ ದರಿದ್ರನ ಮನೆಯಲ್ಲಿ ಭಿಕ್ಷೆಗೆಂದು ಹೋಗಿ ಅಲ್ಲಿದ್ದ ಲತೆಯನ್ನು ಕಿತ್ತುಹಾಕಿ, ಆ ದರಿದ್ರನಿಗೆ ಶ್ರೀಗುರುವು ಧನ ತುಂಬಿದ ಬಿಂದಿಗೆಯನ್ನು ಅನುಗ್ರಹಿಸಿದರು. ಹತ್ತೊಂಭತ್ತನೆಯ ಅಧ್ಯಾಯದಲ್ಲಿ ಔದುಂಬರ ವೃಕ್ಷ ಮಹಿಮೆಯನ್ನು ವರ್ಣಿಸಿ ಯೋಗಿನಿಗಳಿಗೆ ವರ ಕೊಟ್ಟು ಶ್ರೀಗುರುವು ಗಾಣಗಾಪುರಕ್ಕೆ ಹೋದರು.

ಇಪ್ಪತ್ತನೆಯ ಅಧ್ಯಾಯದಲ್ಲಿ ಒಬ್ಬ ಬ್ರಾಹ್ಮಣ ಹೆಂಗಸಿಗಿದ್ದ ಪಿಶಾಚ ಬಾಧೆಯನ್ನು ತೊಲಗಿಸಿ ಇಬ್ಬರು ಗಂಡು ಮಕ್ಕಳಾಗುವಂತೆ ಅನುಗ್ರಹಿಸಿದರು. ಅವರಲ್ಲಿ ಒಬ್ಬನು ಮರಣಿಸಲಾಗಿ ಶ್ರೀಗುರುವು ಸಿದ್ಧರೂಪದಲ್ಲಿ ಬಂದು ಆ ಹೆಂಗಸಿಗೆ ಜ್ಞಾನೋಪದೇಶ ಮಾಡಿದರು. ಇಪ್ಪತ್ತೊಂದನೆಯ ಅಧ್ಯಾಯದಲ್ಲಿ ಆ ಬ್ರಾಹ್ಮಣ ಹೆಂಗಸಿಗೆ ಜ್ಞಾನೋಪದೇಶ ಮಾಡಲು, ಅವಳು ಹೇಳಿದ ಮಾತುಗಳನ್ನು ಕೇಳಿ, ಶ್ರೀಗುರುವು ಆ ಮರಣಿಸಿದ್ದ ಬಾಲಕನನ್ನು ಔದುಂಬರ ವೃಕ್ಷದ ಹತ್ತಿರಕ್ಕೆ ಕರೆದುಕೊಂಡು ಹೋಗುವಂತೆ ಹೇಳಿ ತಾವೇ ರಾತ್ರಿ ಅಲ್ಲಿಗೆ ಹೋಗಿ ಆ ಬಾಲಕನನ್ನು ಪುನರುಜ್ಜೀವಿತ ಗೊಳಿಸಿದರು. ಇಪ್ಪತ್ತೆರಡನೆಯ ಅಧ್ಯಾಯದಲ್ಲಿ ಸಂಗಮದ ಹತ್ತಿರದಲ್ಲಿನ ಗಾಣಗಾಪುರದಲ್ಲಿ ಒಬ್ಬ ಬಡ ಬ್ರಾಹ್ಮಣನ ಮನೆಗೆ ಭಿಕ್ಷೆಗೆಂದು ಹೋಗಿ ಬಂಜೆಯಾಗಿದ್ದ ಎಮ್ಮೆಯಿಂದ ಹಾಲು ಕರೆಸಿ ಆ ಬ್ರಾಹ್ಮಣ ದಂಪತಿಗಳನ್ನು ಅನುಗ್ರಹಿಸಿದರು. ಇಪ್ಪತ್ತಮೂರನೆಯ ಅಧ್ಯಾಯದಲ್ಲಿ ಶ್ರೀಗುರುವನ್ನು ರಾಜನು ಗಾಣಗಾಪುರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಒಬ್ಬ ಬ್ರಹ್ಮರಾಕ್ಷಸನನ್ನು ಉದ್ಧರಿಸಿ, ಆ ರಾಕ್ಷಸನಿದ್ದ ಮನೆಯಲ್ಲೇ ತಾವು ನೆಲೆಸಿದರು. ಇಪ್ಪತ್ತನಾಲ್ಕನೆಯ ಅಧ್ಯಾಯದಲ್ಲಿ ತ್ರಿವಿಕ್ರಮ ಭಾರತಿ ಶ್ರೀಗುರುವನ್ನು ನಿಂದಿಸಲು ಅವನಲ್ಲಿಗೆ ಹೋಗಿ ಅವನಿಗೆ ತಮ್ಮ ವಿಶ್ವರೂಪವನ್ನು ತೋರಿಸಲು ಅವನು ಅವರ ಪಾದಗಳಲ್ಲಿ ಬಿದ್ದು ಅವರಿಗೆ ಶರಣಾಗತನಾದನು. ಇಪ್ಪತ್ತೈದನೆಯ ಅಧ್ಯಾಯದಲ್ಲಿ ವಿದ್ಯಾಗರ್ವದಿಂದ ಮ್ಲೇಚ್ಛರಾಜನ ಆಸ್ಥಾನದಿಂದ ಬಂದ ಇಬ್ಬರು ಬ್ರಾಹ್ಮಣರು ತ್ರಿವಿಕ್ರಮ ಭಾರತಿಯನ್ನು ವಾದ ಮಾಡೆಂದು ಬಲವಂತ ಮಾಡಲು ಅವರನ್ನು ಶ್ರೀಗುರುವಿನ ಬಳಿಗೆ ತ್ರಿವಿಕ್ರಮನು ಕರೆತಂದನು. ಇಪ್ಪತ್ತಾರನೆಯ ಅಧ್ಯಾಯದಲ್ಲಿ ಶ್ರೀಗುರುವು ಆ ಗರ್ವಾಂಧರಾದ ವೇದವೇತ್ತರಿಬ್ಬರಿಗೆ ವೇದಗಳ ರಚನಾ ಸ್ವಭಾವವನ್ನು ತಿಳಿಸಿ ವಾದ ಮಾಡುವುದನ್ನು ಬಿಡಬೇಕೆಂದು ಬೋಧಿಸಿದರು. ಉನ್ಮತ್ತರಾದ ಅವರು ಗುರುವಾಕ್ಯಗಳನ್ನು ಕೇಳಲಿಲ್ಲ. ಇಪ್ಪತ್ತೇಳನೆಯ ಅಧ್ಯಾಯದಲ್ಲಿ ಶ್ರೀಗುರುವು ಪತಿತನೊಬ್ಬನನ್ನು ಕರೆದು ಅವನಿಂದ ವೇದಗಳನ್ನು ಹೇಳಿಸಿ ಆ ಬ್ರಾಹ್ಮಣರಿಬ್ಬರೂ ವಾದ ಮಾಡಲಾರದೇ ಹೋದಾಗ ಅವರಿಗೆ ಶಾಪ ಕೊಟ್ಟು ಬ್ರಹ್ಮರಾಕ್ಷಸರನ್ನಾಗಿ ಮಾಡಿದರು. ಇಪ್ಪತ್ತೆಂಟನೆಯ ಅಧ್ಯಾಯದಲ್ಲಿ ಶ್ರೀಗುರುವು ಪತಿತನಿಗೆ ಧರ್ಮಾಧರ್ಮಗಳನ್ನು ಬೋಧಿಸಿ, ಮತ್ತೆ ಅವನನ್ನು ಪತಿತನನ್ನಾಗಿ ಮಾಡಿ ಮನೆಗೆ ಕಳುಹಿಸಿದರು. ಇಪ್ಪತ್ತೊಂಭತ್ತನೆಯ ಅಧ್ಯಾಯದಲ್ಲಿ ಶ್ರೀಗುರುವು ತ್ರಿವಿಕ್ರಮನಿಗೆ ಭಸ್ಮ ಪ್ರಭಾವವನ್ನು ತಿಳಿಸಿ ವಾಮದೇವ ಮುನಿಯು ಬ್ರಹ್ಮರಾಕ್ಷಸನ ಪಿಶಾಚತ್ವವನ್ನು ತೊಲಗಿಸಿದ ಕಥೆಯನ್ನು ಹೇಳಿದರು.

ಮುವ್ವತ್ತನೆಯ ಅಧ್ಯಾಯದಲ್ಲಿ ಒಬ್ಬಳು ಪತಿವ್ರತೆ ಪತಿ ಮರಣಿಸಲು ದುಃಖಪಡುತ್ತಿರಲಾಗಿ ಸಾಧು ರೂಪದಲ್ಲಿ ಬಂದು ಅವಳಿಗೆ ಅನೇಕ ಕಥೆಗಳನ್ನು ಹೇಳಿ ಅವಳನ್ನು ಶಾಂತ ಗೊಳಿಸಿದರು. ಮುವ್ವತ್ತೊಂದನೆಯ ಅಧ್ಯಾಯದಲ್ಲಿ ಅವಳಿಗೆ ಪತಿವ್ರತಾ ಧರ್ಮವನ್ನು ಬೋಧಿಸಿ ಸಹಗಮನವಿಧಿಯನ್ನು ಉಪದೇಶಿಸಿದರು. ಮುವ್ವತ್ತೆರಡನೆಯ ಅಧ್ಯಾಯದಲ್ಲಿ ಆ ಪತಿವ್ರತೆ ಸಹಗಮನಕ್ಕೆಂದು ಹೊರಡುವುದಕ್ಕೆ ಮುಂಚೆ ಶ್ರೀಗುರು ದರ್ಶನ ಮಾಡಿಕೊಂಡು ನಮಸ್ಕರಿಸಲು ಅವಳಿಗೆ ‘ಅಷ್ಟಪುತ್ರ ಸೌಭಾಗ್ಯವತೀ ಭವ’ ಎಂದು ಆಶೀರ್ವದಿಸಿ, ಅವಳ ಗಂಡನನ್ನು ಪುನರುಜ್ಜೀವಿಸುವಂತೆ ಮಾಡಿದರು. ಮುವ್ವತ್ತಮೂರನೆಯ ಅಧ್ಯಾಯದಲ್ಲಿ ರುದ್ರಾಕ್ಷಧಾರಣ ಮಹಿಮೆ ಮತ್ತು ಕೋತಿ-ಕೋಳಿಗಳ ಕಥೆ, ಹಾಗೂ ವೈಶ್ಯ-ವೇಶ್ಯೆಯರ ಕಥೆಯನ್ನು ಶ್ರೀಗುರುವು ಹೇಳಿದರು. ಮುವ್ವತ್ತನಾಲ್ಕನೆಯ ಅಧ್ಯಾಯದಲ್ಲಿ ಪರಾಶ ಮುನಿಯು ಮಹಾರಾಜನಿಗೆ ರುದ್ರಾಧ್ಯಾಯ ಮಹಿಮೆ ತಿಳಿಸಿ ರುದ್ರಾಧ್ಯಾಯದಿಂದ ಅಭಿಷೇಕ ಮಾಡಿಸಿ ರಾಜಪುತ್ರನು ಬದುಕುವಂತೆ ಮಾಡಿದ ನಂತರ ನಾರದನು ರಾಜನಿಗೆ ರಾಜಕುಮಾರನ ಆಯುರ್ದಾನವನ್ನು ತಿಳಿಸಿದನು. ಮುವ್ವತ್ತೈದನೆಯ ಅಧ್ಯಾಯದಲ್ಲಿ ಕಚದೇವಯಾನಿಯರ ಕಥೆ, ಸೋಮವಾರ ವ್ರತ ಮಾಹಾತ್ಮ್ಯೆಯನ್ನು ತಿಳಿಸಿ ಸೀಮಂತಿನಿ ಕಥೆಯನ್ನು ಶ್ರೀಗುರುವು ಹೇಳಿದರು. ಮುವ್ವತ್ತಾರನೆಯ ಅಧ್ಯಾಯದಲ್ಲಿ ಬ್ರಹ್ಮನಿಷ್ಠನಾದ ಬ್ರಾಹ್ಮಣನ ಹೆಂಡತಿ ಅವನನ್ನು ಗುರ್ವಾಜ್ಞೆಯಂತೆ ಪರಾನ್ನಭೋಜನಕ್ಕೆ ಕರೆದುಕೊಂಡು ಹೋಗಿ ಆ ಭೋಜನ ಅಸಹ್ಯವಾಗಿ ಶ್ರೀಗುರು ಚರಣಗಳನ್ನು ಆಶ್ರಯಿಸಲು ಅವರಿಗೆ ಶ್ರೀಗುರುವು ಕರ್ಮವಿಪಾಕವನ್ನು ಬೋಧಿಸಿದರು. ಮುವ್ವತ್ತೇಳನೆಯ ಅಧ್ಯಾಯದಲ್ಲಿ ಶ್ರೀಗುರುವು ಆ ಬ್ರಾಹ್ಮಣನಿಗೆ ನಾನಾಧರ್ಮಗಳು, ಬ್ರಹ್ಮಕರ್ಮ ಮುಂತಾದುವನ್ನು ತಿಳಿಸಿ ಪ್ರಸನ್ನರಾಗಿ ಅವನನ್ನು ಅನುಗ್ರಹಿಸಿದರು. ಮುವ್ವತ್ತೆಂಟನೆಯ ಅಧ್ಯಾಯದಲ್ಲಿ ಭಾಸ್ಕರನೆಂಬ ಬ್ರಾಹ್ಮಣನು ಮೂವರಿಗೆ ಸಾಕಾಗುವಷ್ಟು ಮಾತ್ರವೇ ಅಡಿಗೆ ಮಾಡಿದಾಗ ಶ್ರೀಗುರುವು ಆ ಅಡಿಗೆಯನ್ನು ಅಕ್ಷಯವಾಗಿ ಮಾಡಿ ನಾಲ್ಕುಸಾವಿರ ಬ್ರಾಹ್ಮಣರು ಮತ್ತು ಬಹಳ ಜನ ಇತರರಿಗೆ ಊಟಮಾಡಿಸಿದರು. ಮುವ್ವತೊಂಭತ್ತನೆಯ ಅಧ್ಯಾಯದಲ್ಲಿ ಸೋಮನಾಥನೆಂಬ ಬ್ರಾಹ್ಮಣನ ಹೆಂಡತಿಗೆ ಅರವತ್ತು ವರ್ಷಗಳಾಗಿದ್ದರೂ ಪುತ್ರಹೀನಳಾಗಿದ್ದುದರಿಂದ ಶ್ರೀಗುರುವು ಅವಳಿಗೆ ಸಂತಾನವನ್ನನುಗ್ರಹಿಸಿ ಅವಳ ಬಂಜೆತನವನ್ನು ಹೋಗಲಾಡಿಸಿದರು. ನಲವತ್ತನೆಯ ಅಧ್ಯಾಯದಲ್ಲಿ ನರಹರಿಯಿಂದ ಒಣಗಿಹೋಗಿದ್ದ ಔದುಂಬರವೃಕ್ಷದ ಕಾಷ್ಠವನ್ನು ಅರ್ಚಿಸುವಂತೆ ಮಾಡಿ ಅವನ ಕುಷ್ಠರೋಗವನ್ನು ಹೋಗಲಾಡಿಸಿದುದೇ ಅಲ್ಲದೆ ಶಿಷ್ಯರಿಗೆ ಶಬರನ ಕಥೆಯನ್ನು ಹೇಳಿ ಶಿವಪೂಜಾವಿಧಾನವನ್ನು ತಿಳಿಸಿದರು.

ನಲವತ್ತೊಂದನೆಯ ಅಧ್ಯಾಯದಲ್ಲಿ ಸಾಯಂದೇವನ ಸೇವೆಯನ್ನು ಸ್ವೀಕರಿಸಿ ಕಾಶಿಯಾತ್ರಾ ವಿಧಾನವನ್ನು ಶ್ರೀಗುರುವು ಹೇಳಿದರು. ನಲವತ್ತೆರಡನೆಯ ಅಧ್ಯಾಯದಲ್ಲಿ ಸಾಯಂದೇವನು ಹೆಂದತಿಮಕ್ಕಳೊಡನೆ ಬಂದು ಶ್ರೀಗುರುವನ್ನು ಸ್ತುತಿಸಲು ಅವನಿಗೆ ಯಾತ್ರಾವಿಧಿಯನ್ನು ತಿಳಿಸಿ ಶ್ರೀಗುರುವು ವರವನ್ನು ಕೊಟ್ಟರು. ನಲವತ್ತಮೂರನೆಯ ಅಧ್ಯಾಯದಲ್ಲಿ ಅನಂತವ್ರತವನ್ನು ಶ್ರೀಕೃಷ್ಣನು ಧರ್ಮರಾಜನಿಗೆ ಹೇಳಿ ಮಾಡಿಸಿದಂತೆ ಶ್ರೀಗುರುವು ಸಾಯಂದೇವನಿಂದ ಅನಂತವ್ರತವನ್ನು ಮಾಡಿಸಿದರು. ನಲವತ್ತನಾಲ್ಕನೆಯ ಅಧ್ಯಾಯದಲ್ಲಿ ತಂತುಕಾರ ಭಕ್ತನಿಗೆ ಶ್ರೀಶೈಲಪರ್ವತವನ್ನು ತೋರಿಸಿ ಅದರ ಮಹಿಮೆ, ಶಿವರಾತ್ರಿ ಮಹಿಮೆಗಳನ್ನು ಬೋಧಿಸಿ, ವಿಮರ್ಷಣರಾಜನ ಕಥೆಯನ್ನು ಹೇಳಿದರು. ನಲವತ್ತೈದನೆಯ ಅಧ್ಯಾಯದಲ್ಲಿ ತುಲಜಾಪುರದಿಂದ ಬಂದ ಕುಷ್ಠರೋಗಪೀಡಿತನಾದ ಬ್ರಾಹ್ಮಣನಿಗೆ ಸಂಗಮದಲ್ಲಿ ಸ್ನಾನಮಾಡಿಸಿ, ಶ್ರೀಗುರುವು ಅವನ ರೋಗವನ್ನು ನಿವಾರಿಸಿ, ಅವನಿಗೆ ಜ್ಞಾನೋಪದೇಶಮಾಡಿದರು. ನಲವತ್ತಾರನೆಯ ಅಧ್ಯಾಯದಲ್ಲಿ ಶ್ರೀಗುರುವು ಹಿಪ್ಪರಿಗೆ ಗ್ರಾಮದಲ್ಲಿ ಕಲ್ಲೇಶ್ವರನ ಭಕ್ತನಾದ ನರಹರಿಗೆ ದರ್ಶನಕೊಟ್ಟು ಅವನನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡರು. ನಲವತ್ತೇಳನೆಯ ಅಧ್ಯಾಯದಲ್ಲಿ ಏಳು ಗ್ರಾಮಗಳಿಂದ ಬಂದ ಏಳು ಜನ ಶಿಷ್ಯರೊಬ್ಬೊಬ್ಬರೂ ಶ್ರೀಗುರುವನ್ನು ತಮ್ಮ ಊರಿಗೆ ಬರುವಂತೆ ಆಹ್ವಾನಿಸಲು ಶ್ರೀಗುರುವು ಏಳು ರೂಪಗಳನ್ನು ಧರಿಸಿ ಎಲ್ಲ ಗ್ರಾಮಗಳಿಗೂ ಹೋದರೂ ಎಂಟನೆಯ ರೂಪದಲ್ಲಿ ತಾವು ತಮ್ಮ ಮಠದಲ್ಲೇ ಇದ್ದರು. ನಲವತ್ತೆಂಟನೆಯ ಅಧ್ಯಾಯದಲ್ಲಿ ಶೂದ್ರ ಭಕ್ತನ ಹೊಲದಲ್ಲಿ ಪೈರನ್ನು ಕೊಯ್ಯಿಸಿ ಅವನ ಬೆಳೆ ಅಕ್ಷಯವಾಗುವಂತೆ ಮಾಡಿ ಅವನನ್ನು ಆನಂದಗೊಳಿಸಿದರು. ನಲವತ್ತೊಂಭತ್ತನೆಯ ಅಧ್ಯಾಯದಲ್ಲಿ ಭೀಮಾ ಅಮರಜಾ ಸಂಗಮ ಮಾಹಾತ್ಮ್ಯೆಯನ್ನು ಹೇಳಿ, ಅಷ್ಟತೀರ್ಥಮಹಿಮೆಯನ್ನು ಬೋಧಿಸಿ, ರತ್ನಾಬಾಯಿಯಿಂದ ಸ್ನಾನ ಮಾಡಿಸಿ ಆಕೆಗಿದ್ದ ಕುಷ್ಠರೋಗವನ್ನು ಹರಿಸಿದರು. ಐವತ್ತನೆಯ ಅಧ್ಯಾಯದಲ್ಲಿ ಶ್ರೀಗುರುವು ಮ್ಲೇಚ್ಛರಾಜನ ವ್ರಣವನ್ನು ತೊಲಗಿಸಿ ಅವನ ಭಕ್ತಿಯನ್ನು ಮೆಚ್ಚಿಕೊಂಡು ಅವನ ನಗರಕ್ಕೆ ಹೋಗಿ ನಿನಗೆ ನಂತರ ಶ್ರೀಶೈಲದಲ್ಲಿ ನನ್ನ ದರ್ಶನವಾಗುವುದು ಎಂದು ಹೇಳಿದರು. ಐವತ್ತೊಂದನೆಯ ಅಧ್ಯಾಯದಲ್ಲಿ ಈ ಭೂಮಿಯಲ್ಲಿನ ಪಾಪಪ್ರವೃತ್ತಿಯನ್ನು ನೋಡಿ ದುಷ್ಟರಿಂದ ಉಪದ್ರವವುಂಟಾಗುವುದೆಂದು ತಿಳಿದು, ತಾವು ಗುಪ್ತವಾಗಿರಲು ನಿಶ್ಚಯಿಸಿ, ಶಿಷ್ಯರನ್ನು ಕರೆದು ಶ್ರೀಶೈಲಯಾತ್ರೆಗೆ ಹೋಗುತ್ತೇನೆ ಎಂದು ಹೇಳಿದರು. ಅವರ ಮಾತುಗಳನ್ನುಕೇಳಿದ ಶಿಷ್ಯರು ಶೋಕಭರಿತರಾಗಿ ವಿಲಪಿಸಲು, ಅವರ ಅಳುವನ್ನು ಕೇಳಿದ ಶ್ರೀಗುರುವು, ತಾವು ಸದಾ ಮಠದಲ್ಲೇ ಇರುವೆವೆಂದು ಹೇಳಿ, ಅವರನ್ನು ಆಶೀರ್ವದಿಸಿ ಮಠದಲ್ಲಿಯೇ ಇದ್ದುಕೊಂಡು ತನ್ನ ಭಜನೆಯಲ್ಲಿ ನಿರತರಾಗಿರಬೇಕೆಂದು ಸಾಂತ್ವನ ಹೇಳಿದರು. ನಂತರ ಶ್ರೀಶೈಲದಲ್ಲಿ ಕದಳೀವನವನ್ನು ಸೇರಿ ಶಿಷ್ಯರಿಗೆ ಪುಷ್ಪಾಸನವನ್ನು ಸಿದ್ಧಪಡಿಸುವಂತೆ ಹೇಳಿ, ಅದರಮೇಲೆ ಕೂತು ಅದೃಶ್ಯರಾದರು. ತಮ್ಮ ನಾಲ್ಕುಜನ ಶಿಷ್ಯರಿಗೆ ಪ್ರಸಾದಪುಷ್ಪಗಳನ್ನು ಕೊಟ್ಟು ಅವರನ್ನು ಗಂಧರ್ವಪುರಕ್ಕೆ ಹಿಂದಿರುಗಲು ಆಜ್ಞೆ ಮಾಡಿದರು. ನಾಮಧಾರಕ ಈ ಪ್ರಕಾರ ಶ್ರೀಗುರುಚರಿತ್ರೆ ಅನಂತವಾದ ಕಥೆಗಳಿಂದ ತುಂಬಿ ಪರಮಪಾವನವಾಗಿದೆ. ಅದರಲ್ಲಿ ಐವತ್ತೆರಡು ಮಾತ್ರ ನಿನಗೆ ಹೇಳಿದ್ದೇನೆ." ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು.

"ಶ್ರೀಗುರುವು ಲೋಕವನ್ನು ಬಿಟ್ಟು ಹೋದರು ಎಂದು ಜನರು ಭಾವಿಸಿದ್ದಾರೆ. ಆದರೆ ಅವರು ಗಾಣಗಾಪುರದಲ್ಲಿ ಗುಪ್ತರೂಪದಲ್ಲಿ ಸದಾಕಾಲ ಇದ್ದಾರೆ. ಕಲಿಯುಗದಲ್ಲಿ ಅಧರ್ಮವು ಹೆಚ್ಚಾಗಿದ್ದರಿಂದ ಶ್ರೀಗುರುವು ಗುಪ್ತರಾಗಿ ನಿಜವಾದ ಭಕ್ತರಿಗೆ ಮಾತ್ರ ಹಿಂದಿನಂತೆಯೇ ಇಂದೂ ದರ್ಶನಕೊಡುತ್ತಿದ್ದಾರೆ. ಈ ಅವತರಣಿಕೆಯನ್ನು ಸಿದ್ಧಮಾಲ ಎನ್ನುತ್ತಾರೆ. ಇದನ್ನು ಓದುವವರಿಗೆ ಗುರುದರ್ಶನ ಲಭಿಸುವುದು. ಅವರವರ ಭಾವವನ್ನನುಸರಿಸಿ ಅವರ ಕಾರ್ಯಸಿದ್ಧಿಯಾಗುವುದು. ನಾಮಧಾರಕ ನೀನು ಉತ್ತಮಶಿಷ್ಯ. ನಿನ್ನ ಪ್ರಶ್ನೆಯಿಂದ ನಾನು ಈ ಅವತರಣಿಕೆಯನ್ನು ಹೇಳಿದ್ದೇನೆ. ಇದರಿಂದ ನಿನಗೆ ಹಿಂದೆ ಕೇಳಿದ ಶ್ರೀಗುರುಚರಿತ್ರೆಯೆಲ್ಲವೂ ನೆನಪಿಗೆ ಬರುವುದು. ಅದರಿಂದ ಶ್ರೀಗುರುಚರಿತ್ರೆಯನ್ನು ಸಂಪೂರ್ಣವಾಗಿ ಕೇಳಬೇಕೆಂಬ ವಾಂಛೆ ಬರುವುದು." ಎಂದು ಹೇಳಿದ ಸಿದ್ಧಮುನಿಯ ಮಾತುಗಳನ್ನು ಕೇಳಿದ ನಾಮಧರಕ ಅವರ ಚರಣಗಳನ್ನು ಸ್ಪರ್ಶಿಸಿ, ಕೈಜೋಡಿಸಿ, ವಿನಯದಿಂದ, " ಸ್ವಾಮಿ, ನಿಮ್ಮ ಮಾತುಗಳೇ ಸರ್ವಸಿದ್ಧಿಗಳನ್ನು ಕೊಡುವುದು. ಹೇ ಗುರುದೇವ, ನನ್ನದು ಇನ್ನೊಂದು ಮನವಿಯಿದೆ. ಶ್ರೀಗುರುಚರಿತ್ರೆಯನ್ನು ಹೇಗೆ ಸಪ್ತಾಹಪಾರಾಯಣ ಮಾಡಬೇಕು ಎಂಬುದನ್ನು ಹೇಳಬೇಕೆಂದು ಪ್ರಾರ್ಥಿಸುತ್ತೇನೆ." ಎಂದು ಕೇಳಿದನು. ಅದಕ್ಕೆ ಸಿದ್ದಮುನಿಯು, "ಅಯ್ಯಾ ನಾಮಧಾರಕ, ನೀನು ಕೇಳಿದ ಪ್ರಶ್ನೆ ಬಹಳ ಉತ್ತಮವಾಗಿದೆ. ಇದು ಲೋಕೋಪಕರವಾದದ್ದು. ಅಂತಃಕರಣವು ಶುದ್ಧಿಯಾಗಿದ್ದರೆ ನಿತ್ಯವೂ ಎಲ್ಲಕಾಲದಲ್ಲೂ ಶ್ರೀಗುರುಚರಿತ್ರೆಯನ್ನು ಪಠಿಸಬಹುದು. ಅದರಿಂದ ಇಹಪರ ಸುಖಗಳು ಲಭಿಸುವುವು.

ಎರಡನೆಯದು ಸಪ್ತಾಹ ಪದ್ಧತಿ. ಶುಚಿರ್ಭೂತನಾಗಿ ಶಾಸ್ತ್ರರೀತಿಯಾಗಿ ಶ್ರೀಗುರುಚರಿತ್ರೆಯನ್ನು ಸಪ್ತಾಹಪಾರಾಯಣ ಮಾಡಿದರೆ ಬಹಳ ಪುಣ್ಯ ಬರುತ್ತದೆ. ದಿನಶುದ್ಧಿಯನ್ನು ನೋಡಿಕೊಂಡು, ಸ್ನಾನಸಂಧ್ಯಾವಂದನಾದಿಗಳನ್ನು ಮಾಡಿ, ಪಾರಾಯಣ ಮಾಡಬೇಕೆದಿರುವ ಸ್ಥಳವನ್ನು ಶುದ್ಧಿಮಾಡಿ, ರಂಗೋಲಿ ಮುಂತಾದವುಗಳಿಂದ ಅಲಂಕರಿಸಬೇಕು. ನಂತರ ಸಂಕಲ್ಪ ಮಾಡಿ, ಪುಸ್ತಕರೂಪಿಯಾದ ಶ್ರೀಗುರುವಿಗೆ ಷೋಡಶೋಪಚಾರ ಪೂಜೆ ಮಾಡಿ, ಪಾರಾಯಣ ಮುಗಿಯುವವರೆಗೂ ಒಂದೇ ಸ್ಥಳದಲ್ಲಿ ಕೂತು, ಲೌಕಿಕವ್ಯವಹಾರಗಳ ಮಾತುಕಥೆಗಳನ್ನು ತ್ಯಜಿಸಿ, ಇಂದ್ರಿಯನಿಗ್ರಹ ಮಾಡಿಕೊಂಡು, ಕಾಮಕ್ರೋಧಾದಿಗಳನ್ನು ಬಿಟ್ಟು, ಪಾರಾಯಣವನ್ನು ಆರಂಭಿಸಬೇಕು. ಪಾರಾಯಣಮುಗಿಯುವವರೆಗೂ ದೀಪವೊಂದು ಸದಾ ಉರಿಯುತ್ತಿರುವಹಾಗೆ ನೋಡಿಕೊಳ್ಳಬೇಕು. ದೇವ,ಬ್ರಾಹ್ಮಣ, ವೃದ್ಧರಿಗೆ ನಮಸ್ಕರಿಸಿ, ಉತ್ತರ ಇಲ್ಲವೇ ಪೂರ್ವ ದಿಕ್ಕಿಗೆ ಮುಖಮಾಡಿಕೊಂಡು, ಸುಖಾಸನೋಪವಿಷ್ಟನಾಗಿ, ಮೊದಲನೆಯ ದಿನ ಒಂಭತ್ತು ಅಧ್ಯಾಯಗಳು, ಎರಡನೆಯದಿನ ಇಪ್ಪತ್ತೊಂದನೆಯ ಅಧ್ಯಾಯ ಪೂರ್ತಿ, ಮೂರನೆಯ ದಿನ ಇಪ್ಪತ್ತೊಂಭತ್ತನೆಯ ಅಧ್ಯಾಯ ಪೂರ್ತಿ, ನಾಲ್ಕನೆಯದಿನ ಮುವ್ವತ್ತೈದನೆಯ ಅಧ್ಯಾಯ ಪೂರ್ತಿ, ಐದನೆಯ ದಿನ ಮುವ್ವತ್ತೆಂಟನೆಯ ಅಧ್ಯಾಯ ಪೂರ್ತಿ, ಆರನೆಯದಿನ ನಲವತ್ತಮೂರನೆಯ ಅಧ್ಯಾಯ ಪೂರ್ತಿ, ಏಳನೆಯ ದಿನ ಐವತ್ತೆರಡನೆಯ ಅಧ್ಯಾಯ ಪೂರ್ತಿ ಪಾರಾಯಣ ಮಾಡಬೇಕು.

ಪ್ರತಿದಿನವೂ ಪಾರಾಯಣವಾದಮೇಲೆ ಉತ್ತರಪೂಜೆಮಾಡಿ, ಶ್ರೀಗುರುವಿಗೆ ನಮಸ್ಕರಿಸಿ, ಏನಾದರೂ ಸ್ವಲ್ಪ ಉಪಹಾರವನ್ನು ಸ್ವೀಕರಿಸಬೇಕು. ರಾತ್ರಿಯಲ್ಲಿ ನೆಲದಮೇಲೆ ಮಲಗುತ್ತಾ, ಏಳುದಿನಗಳ ಪಾರಾಯಣ ಮುಗಿಯುವವರೆಗೂ ಶುಚಿರ್ಭೂತನಾಗಿರಬೇಕು. ಏಳು ದಿನಗಳಾದ ಮೇಲೆ ಶ್ರೀಗುರುವಿನ ಪೂಜೆ ಮಾಡಿ ಬ್ರಾಹ್ಮಣ ಸುವಾಸಿನಿಯರಿಗೆ ದಕ್ಷಿಣೆ ತಾಂಬೂಲಗಳೊಡನೆ ಭೋಜನ ಮಾಡಿಸಿ ಸಂತೋಷಪಡಿಸಬೇಕು. ಹೀಗೆ ಸಪ್ತಾಹವನ್ನು ಆಚರಿಸಿದರೆ ಶ್ರೀಗುರು ದರ್ಶನ ಲಭಿಸುವುದು. ಭೂತಪ್ರೇತಪಿಶಾಚಾದಿಗಳ ಪೀಡೆಯು ನಿವಾರಣೆಯಾಗಿ ಸೌಖ್ಯವು ಲಭ್ಯವಾಗುವುದು." ಎಂದು ಸಿದ್ಧಮುನಿಯು ಹೇಳಿದರು.

ಇಲ್ಲಿಗೆ ಐವತ್ತೆರಡನೆಯ ಅಧ್ಯಾಯ ಮುಗಿಯಿತು. 

ಇದರೊಡನೆ ಶ್ರಿಗುರುಚರಿತ್ರೆಯೂ ಮುಕ್ತಾಯವಾಯಿತು. 

||ಶ್ರೀಗುರುಭ್ಯೋನ್ನಮಃ|| ||ಶ್ರೀ ದತ್ತಾತ್ರೇಯಾಯ ನಮಃ|| 
||ಶ್ರೀ ಗುರು ಶ್ರೀಪಾದಶ್ರೀವಲ್ಲಭಾಯ ನಮಃ|| 
||ಶ್ರೀಗುರು ನೃಸಿಂಹ ಸರಸ್ವತ್ಯೈ ನಮಃ|| 
||ಸಚ್ಚಿದಾನಂದ ಸದ್ಗುರು ಸಾಯಿಬಾಬಾಯ ನಮಃ||

||ಶ್ರೀಗುರು ಚರಿತ್ರೆ - ಐವತ್ತೊಂದನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ನಾಮಧಾರಕನು ಸಿದ್ಧಮುನಿಗೆ, "ಸ್ವಾಮಿ, ಶ್ರೀಗುರುವು ಗಂಧರ್ವ ನಗರವನ್ನು ಸೇರಿದಮೇಲೆ ಏನು ಮಾಡಿದರು? ಹೇ ಕರುಣಾವರ, ಆರ್ಯವರ್ಯ, ಮುಂದಿನ ಗುರುಚರಿತ್ರೆಯನ್ನು ಹೇಳಿ" ಎಂದು ಕೋರಿದನು. ಅದಕ್ಕೆ ಸಿದ್ಧಮುನಿ, "ವತ್ಸ, ಆ ಯೋಗೀಶ್ವರನ ಲೀಲೆಯನ್ನು ನಿನಗೆ ಹೇಳುತ್ತೇನೆ. ಆ ಲೀಲೆ ದೋಷಗಳನ್ನು ಹೋಗಲಾಡಿಸುವುದು. ಕೋರಿಕೆಗಳನ್ನು ತೀರಿಸುವುದು. ದಾದಿಯಂತೆ ಪೋಷಿಸುವುದು. ಆ ಲೀಲೆಯೇ ವರಗಳನ್ನು ಕೊಡುವುದು.

"ಬಹಳ ದೂರದವರೆಗೂ ಶ್ರೀಗುರುವಿನ ಮಹಿಮೆಗಳು ಪ್ರಕಟಗೊಂಡವು. ಆ ರಾಜನೂ ದೂರದಿಂದಲೇ ಬಂದಿದ್ದನಲ್ಲವೇ? ಯವನ ವಂಶಸ್ಥನಾದರೂ ಅವನು ಭಕ್ತಿವಂತನು. ಇತರ ನೀಚ ಜಾತಿಯವರು, ಭಕ್ತಿವಂತರು ಅಲ್ಲದವರೂ ಕೂಡಾ ಹಾಗೇ ಬರಬಹುದಲ್ಲವೇ? ಆದ್ದರಿಂದಲೇ ನಾನು ಶ್ರೀಶೈಲ ಯಾತ್ರೆಯ ನೆವದಿಂದ ಸಂಚರಿಸುತ್ತಾ ಅದೃಶ್ಯನಾಗಿರುತ್ತೇನೆ" ಎಂದು ಆ ಪ್ರಭುವು ನಿಶ್ಚಯಿಸಿ ಗಂಧರ್ವನಗರವನ್ನು ಬಿಟ್ಟು ಶ್ರೀಶೈಲಕ್ಕೆ ಶಿಷ್ಯರೊಡನೆ ಪ್ರಯಾಣವನ್ನು ಆರಂಭಿಸಿದರು. ಆಗ ಪ್ರಜೆಗಳೆಲ್ಲರೂ ಬಂದು, "ಶ್ರೀಗುರೋ, ನೀವೇ ನಮ್ಮ ಪ್ರಾಣವು. ನಿಮ್ಮ ತತ್ತ್ವವು ರಹಸ್ಯಯುಕ್ತವಾದದ್ದು. ನಮ್ಮ ಚಿಂತೆಗಳನ್ನು ಪರಿಹರಿಸಿದ್ದೀರಿ. ಈಗ ನಮ್ಮನ್ನು ಚಿಂತಾನಲದಲ್ಲಿ ಹಾಕಿ ಹೋಗುತ್ತಿದ್ದೀರಿ. ನಮ್ಮನ್ನು ರಕ್ಷಿಸಿ" ಎಂದು ಎಲ್ಲರೂ ಶೋಕದಿಂದ ಕೂಡಿದವರಾಗಿ ಶ್ರೀಗುರು ಪಾದಗಳಲ್ಲಿ ಆಸಕ್ತರಾಗಿ, ಮತ್ತೆ "ಸ್ವಾಮಿ, ಆರ್ತರನ್ನು ರಕ್ಷಿಸುವವರೇ! ನಮ್ಮನ್ನು ಅಕಸ್ಮಾತಾಗಿ ಬಿಟ್ಟು ಹೋಗುತ್ತಿದ್ದೀರಾ! ನೀವು ನಮ್ಮ ಸನ್ನಿಧಿಯಲ್ಲಿರುವ ನಿಧಿಯು. ನಮ್ಮ ಚಿತ್ತಗಳು ಸ್ಥಿರವಾಗಿರುವುದಕ್ಕೆ ನೀವೇ ಕಾರಣರು. ನಮ್ಮ ಕಾಮಧೇನುವು ನೀವೇ! ದಿನದಿನದ ನಿಮ್ಮ ದರ್ಶನವು ಕಲುಷಹರವು. ಹೇ ಪಾವನ, ತಾಯಿಯಂತೆ ನಮ್ಮನ್ನು ಕಾಪಾಡು. ನೀವು ಹಠಾತ್ತಾಗಿ ಎಲ್ಲಿಗೆ ಹೋಗುತ್ತಿದ್ದೀರಿ? ನೀವೇ ನಮ್ಮ ತಾಯಿ. ಗುರುವು. ತಂದೆ. ಹೇ ತಂದೆ, ನೀವು ಇಂತಹ ಸ್ನೇಹಹೀನರು ಏಕಾದಿರಿ?" ಎಂದು ಬಹು ಪ್ರಕಾರವಾಗಿ ಪ್ರಾರ್ಥಿಸುತ್ತಿರಲು, ಶ್ರೀಗುರುವು ದಯೆಯಿಂದ ಅವರನ್ನು ಸಮಾಧಾನಗೊಳಿಸಿ, ನಸುನಗುತ್ತಾ ಹೇಳಿದರು. "ಭಕ್ತರೇ, ಇಲ್ಲಿ ಸಂಗಮದಲ್ಲೇ ನನ್ನ ನಿತ್ಯಕೃತ್ಯಗಳು ನಡೆಯುತ್ತವೆ. ಮಧ್ಯಾಹ್ನದಲ್ಲಿ ಈ ನಿರ್ಗುಣ ಮಠದಲ್ಲೇ ಇರುತ್ತೇನೆ. ಅಯ್ಯಾ ಭಕ್ತರೇ, ನಿಮ್ಮ ಸಖ್ಯದಲ್ಲಿ ನಾನು ಇಲ್ಲಿಯೇ ಗುಪ್ತನಾಗಿ ಇರುತ್ತೇನೆ. ನಿಜವಾದ ಭಕ್ತರು, ನನ್ನ ಸೇವೆ ಮಾಡುವವರು, ನನ್ನನ್ನು ಹೃದಯದಲ್ಲಿ ನಿಲ್ಲಿಸಿಕೊಂಡಿರುವವರು, ಸಹೃದಯರಾಗಿ ಅವರ ಮನಸ್ಸನ್ನು ನನಗೆ ಅರ್ಪಿಸಿದವರು ನನ್ನನ್ನು ಇಲ್ಲಿಯೇ ಕಾಣುತ್ತಾರೆ. ಉಷಃಕಾಲದಲ್ಲಿ ಕಾಲುಷ್ಯವನ್ನು ಹೋಗುಟ್ಟುವಂತಹ ಕೃಷ್ಣೆಯಲ್ಲಿ ಸ್ನಾನ ಮಾಡಿ, ಕಲ್ಪತರುವಿನ ಸಮೀಪದಲ್ಲಿ ಕರ್ಮಗಳನ್ನಾಚರಿಸಿ, ಮಧ್ಯಾಹ್ನದಲ್ಲಿ ಭೀಮಾ ನದಿಯನ್ನು ನಾನು ಸೇರುವುದು ಅವರು ಗಮನಿಸಬಲ್ಲರು. ಪ್ರತಿ ದಿನವೂ ನಿರ್ಗುಣ ಮಠದಲ್ಲಿ ಮಧ್ಯಾಹ್ನದಲ್ಲಿ ಶಂಭುವಿನ ಅರ್ಚನೆಯನ್ನು ಸ್ವೀಕರಿಸುತ್ತೇನೆ. ನೀವು ಚಿಂತಿಸಬೇಡಿ. ಈ ಗಂಧರ್ವಪುರದಲ್ಲಿ ನನ್ನ, ಭಕ್ತರ ಯೋಗ ಕ್ಷೇಮಗಳನ್ನು ನಾನು ನೋಡಿಕೊಳ್ಳುತ್ತೇನೆ. ನನ್ನ ಭಕ್ತರಿಗೆ ಇಷ್ಟ ಸಿದ್ಧಿಯುಂಟಾಗುವಂತೆ ನೋಡಿಕೊಳ್ಳುತ್ತೇನೆ. ನನ್ನ ಭಕ್ತರು ನನಗೆ ಪ್ರಿಯರು. ಅವರ ಪರಿಶುದ್ಧತೆಯೇ ಅವರ ಕಾರ್ಯಗಳು ನೆರವೇರಲು ಹೇತುವಾಗುತ್ತದೆ. ಭಕ್ತಲೋಕವು ಇದು ಸತ್ಯವೆಂದು ತಿಳಿದುಕೊಳ್ಳಿ. ಅಶ್ವತ್ಥವೃಕ್ಷವೇ ಕಲ್ಪವೃಕ್ಷವು. ಭಕ್ತಿಯನ್ನು ಮಾತ್ರ ಅಪೇಕ್ಷಿಸುತ್ತದೆ. ಸಕಲ ಬಾಧೆಗಳನ್ನೂ ತೊಲಗಿಸುತ್ತಾ ಭಕ್ತರಲ್ಲಿ ಪ್ರಸನ್ನವಾಗಿ, ಶತ್ರು ಪಕ್ಷವನ್ನು ಜಯಿಸುತ್ತಾ (ಇರುವ) ಈ ಅಶ್ವತ್ಥವೃಕ್ಷವೇ ಪ್ರತ್ಯಕ್ಷವಾಗಿರುವ ಕಲ್ಪವೃಕ್ಷವು. ಇಲ್ಲಿ ಸಂಗಮ ಜಲದಲ್ಲಿ ನಿಯಮವಾಗಿ ಸ್ನಾನಮಾಡಿ, ನನ್ನ ನಿವಾಸವಾದ ಅಶ್ವತ್ಥವೃಕ್ಷವನ್ನು ಯಥಾವಿಧಿಯಾಗಿ ಅರ್ಚಿಸಿ, ಸರ್ವ ಅನರ್ಥಗಳನ್ನೂ ಹರಿಸುವ ನನ್ನ ಪಾದುಕೆಗಳನ್ನು ಅರ್ಚಿಸುವವರಿಗೆ ಎಂದಿಗೂ ಭ್ರಮೆಯುಂಟಾಗುವುದಿಲ್ಲ. ಇಲ್ಲಿ ವಿಘ್ನನಾಥನ ಚಿಂತಾಮಣಿಯನ್ನು ಅರ್ಚಿಸುವವನು ಕ್ಷಣದಲ್ಲಿ ಚಿಂತಿತಾರ್ಥವನ್ನು ಪಡೆಯಬಲ್ಲನು. ವಿನಾಯಕನನ್ನು ಅರ್ಚಿಸಿ ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡುವವನ ದುಃಖಗಳು ನಶಿಸಿಹೋಗಿ ಅವನು ಆಪ್ತ ಕಾಮನಾಗಿ ಮುಕ್ತಿಯನ್ನು ಹೊಂದಬಲ್ಲನು. ಆರತಿ ದೀಪಗಳಿಂದ ಇಲ್ಲಿ ನನ್ನ ಪಾದುಕೆಗಳನ್ನು ತ್ರಿಕಾಲದಲ್ಲೂ ಅರ್ಚಿಸುತ್ತಾ ನನ್ನನ್ನು ಸ್ಮರಿಸುತ್ತಿರುವವರ ಸರ್ವಕಾಮಗಳನ್ನೂ ಕೊಡುತ್ತೇನೆ. ಅವರ ಕಾಮನೆಗಳು ಅಸ್ತಮಿಸುವುವು" ಎಂದು ಹೇಳಿ ಶ್ರೀಗುರುಗಳಾದ ನೃಸಿಂಹ ಸರಸ್ವತಿ ಯತೀಂದ್ರರು ಉಪದೇಶಿಸಿ ಶ್ರೀಶೈಲಕ್ಕೆ ಹೊರಟು ಹೋದರು. ಭಕ್ತರು ಮಠವನ್ನು ಸೇರಿದರು. ಅವರು ತಮ್ಮ ಹೃದಯಗಳಲ್ಲಿ ಶ್ರೀಗುರುವನ್ನು ನಿಲ್ಲಿಸಿ ಗುರುಹೃದಯದಲ್ಲಿ ನಿಂತರು. ಅವರು ಗುರುನಾಥನ ನಿವಾಸವನ್ನು ಸೇರಿದಾಗ ಅಲ್ಲಿಯೇ ಶ್ರೀಗುರುವು ಇರುವುದನ್ನು ನೋಡಿ ವಿಸ್ಮಯಗೊಂಡರು. ‘ಶ್ರೀಗುರುವನ್ನು ಮಾನವನೆಂದು ಹೇಳುವವನು ಭಕ್ತಿಹೀನನು. ಅಂತಹವನು ಯಮಪುರಕ್ಕೇ ಹೋಗುತ್ತಾನೆ. ಉಪಾಸನೆಯಿಂದ ತರಿಸಬಲ್ಲ ವಿಭುವು ಸತ್ಯವಾಗಿ ಅವತಾರಪುರುಷನೇ! ಶ್ರೀಗುರುವಿನ ಮಾಹಾತ್ಮ್ಯೆಯು ಅನಂತವು’ ಎಂದೆಲ್ಲ ಹೇಳಿಕೊಳ್ಳುತ್ತಿದ್ದ ಅವರು ಅಲ್ಲಿ ಮತ್ತೆ ಶ್ರೀಗುರುವನ್ನು ಕಾಣಲಾರದೆ ಹೋದರು. ಆ ಸದ್ಯಶನಾದ ಶ್ರೀಗುರುವು ಸತ್ಪುರುಷರಿಗೇ ದರ್ಶನ ನೀಡುತ್ತಾನೆ. ಆದ್ದರಿಂದ ಇಲ್ಲಿ ಶ್ರೀಗುರುವು ಇಲ್ಲ ಎಂದು ಹೇಳಬಾರದು.

ಶ್ರೀಗುರುವು ಶೀಘ್ರವಾಗಿ ಶ್ರೀಶೈಲ ಪರ್ವತಕ್ಕೆ ಹೋಗಿ ಪಾತಾಳ ಗಂಗೆಯಲ್ಲಿ ಸ್ನಾನವನ್ನಾಚರಿಸಿ ಶಿಷ್ಯರನ್ನು ಕರೆದು ಅವರಿಗೆ ಆದೇಶವಿತ್ತರು. "ನನ್ನ ಕಾರ್ಯವು ಸಂಪೂರ್ಣವಾಯಿತು. ಪುಷ್ಪಾಸನವನ್ನು ಸಿದ್ಧಪಡಿಸಿ. ಇಲ್ಲಿಂದ ವಿಭುಕಳೆ ಇರುವೆಡೆಗೆ ಹೋಗಬೇಕು. ದುಷ್ಟರು ನನ್ನನ್ನು ನೋಡಬಾರದು" ಎಂದು ಹೇಳಿದ ಶ್ರೀಗುರುವಿನ ಆದೇಶವನ್ನು ಪಾಲಿಸಿ ಶಿಷ್ಯರು ತಾವರೆ ಹೂಗಳು ಮುಂತಾದುವನ್ನು ತಂದು ಬಾಳೆಯ ಎಲೆಯ ಮೇಲೆ ಹರಡಿ ಸುಖಾಸನವಾಗುವಂತೆ ಅಲಂಕರಿಸಿದರು. ಪರಮ ಪವಿತ್ರವಾದ ಪೀಠವನ್ನು ನಿರ್ಮಿಸಿ ಗಂಗಾ ಪ್ರವಾಹದಲ್ಲಿ ವಿಚಿತ್ರವಾಗಿ ನಿಲ್ಲಿಸಿದರು. ಶ್ರೀಗುರುವು ತನ್ನ ಭಕ್ತರಿಗೆ, "ನೀವು ತ್ವರೆಯಾಗಿ ನನ್ನ ಗಂಧರ್ವನಗರಕ್ಕೆ ಹೋಗಿ. ನನ್ನ ಗೃಹವು ಅಲ್ಲೇ ಇದೆ. ಸದ್ಭಕ್ತರಿಗೆ ಮಾತ್ರವೇ ನನ್ನ ದರ್ಶನ ಆಗುವಹಾಗೆ ನಾನು ಉಪಾಯವನ್ನು ಅವಲಂಬಿಸಿದ್ದೇನೆ. ನನ್ನ ಭಕ್ತರ ಗೃಹದಲ್ಲೇ ಸದಾ ಬಿಡದೇ ಇರುತ್ತೇನೆ" ಎಂದು ಆ ಭಗವಂತನು ಹೇಳಿ ಸಂತೋಷದಿಂದ ಪುಷ್ಪಾಸನದ ಮೇಲೆ ಉಪವಿಷ್ಠರಾದರು. ಉತ್ತರಾಯಣ ಶಿಶಿರ ಋತು ಮಾಘಮಾಸ ಕೃಷ್ಣಪಕ್ಷದಲ್ಲಿ ರಾಕ್ಷಸ ಗುರುದೇವತೆ ಶುಕ್ರನ ವಾರದಲ್ಲಿ ಪಾಡ್ಯಮಿಯ ದಿನ ಪುಷ್ಯಮೀ ನಕ್ಷತ್ರದಲ್ಲಿ ಚಂದ್ರನಿರಲು ದೇವಗುರುವಾದ ಬೃಹಸ್ಪತಿ ಕನ್ಯೆಯಲ್ಲಿರಲು ಸೂರ್ಯನು ಕುಂಭದಲ್ಲಿರಲು ಪುಣ್ಯತಮವಾದ ದಿನ ಬಹುಧಾನ್ಯ ಸಂವತ್ಸರ ದೇವತೆಗಳು ಪುಷ್ಪ ವೃಷ್ಟಿ ಮಾಡುತ್ತಿರಲು ಶ್ರೀಗುರುವು ಪುಷ್ಪಾಸನದ ಮೇಲೆ ಮಂಡಿತರಾದರು. ಶ್ರೀಗುರುವು ನದಿ ಪ್ರವಾಹದ ಮಧ್ಯದಿಂದ, "ನಾನು ಪುಷ್ಪಾಸನಸ್ಥನಾಗಿ ನಿಜಸ್ಥಾನಕ್ಕೆ ಹೋಗುತ್ತಿದ್ದೇನೆ. ನೀವು ನನಗೆ ಪ್ರಿಯರು. ನಿಮಗೆ ವಾಯು ಮುಖೇನ ಪ್ರಸಾದ ಪುಷ್ಪಗಳನ್ನು ಕಳುಹಿಸುತ್ತೇನೆ. ನಾನು ಕಳುಹಿಸುವ ನಾಲ್ಕು ಪ್ರಸಾದ ಪುಷ್ಪಗಳನ್ನು ನೀವೇ ಗ್ರಹಿಸಬೇಕು. ಅವನ್ನು ಭಕ್ತಿಯಿಂದ ಸ್ವೀಕರಿಸಿ ನನ್ನ ಪಾದುಕೆಗಳನ್ನು ಅರ್ಚಿಸಿದರೆ ಅಭೀಷ್ಟಸಿದ್ಧಿಯಾಗುವುದು. ಗೀತಗಳೆಂದರೆ ನನಗೆ ಬಹಳ ಪ್ರೀತಿ. ಆದ್ದರಿಂದ ಪ್ರತಿದಿನವೂ ನನ್ನನ್ನುದ್ದೇಶಿಸಿ ಗೀತಗಳನ್ನು ಗಾನಮಾಡಿ. ಭಕ್ತಿಯಿಂದ ನನ್ನ ಅವತಾರ ಕಥೆಗಳನ್ನು ಗಾನ ಮಾಡುವವರ ಗೃಹದಲ್ಲಿ ನಾನು ನಿತ್ಯವೂ ನಿವಾಸಮಾಡುತ್ತೇನೆ. ಅವರ ಮನೆಗಳಲ್ಲಿ ದೈವಭೀತಿಯಿರುವುದಿಲ್ಲ. ಅಖಂಡವಾದ ಸಿರಿಸಂಪದಗಳು ಅವರಿಗೆ ಉಂಟಾಗುತ್ತವೆ. ಅಂತಹವರು ಮೋಹದಲ್ಲಿ ಬೀಳುವುದಿಲ್ಲ. ನನ್ನಲ್ಲಿ ಭಕ್ತಿ ಇರುವವರಿಗೆ ನನ್ನ ಅನುಗ್ರಹ ದೊರಕುವುದು. ನನ್ನ ಭಕ್ತನಿಗೆ ವ್ಯಾಧಿಗಳು, ಪಾಪಗಳು, ದೈನ್ಯವು, ಕ್ಷೀಣದೆಶೆ ಬರಲಾರದು. ಅಂಥ ನನ್ನ ಭಕ್ತರು ಶ್ರೀಮಂತರಾಗಿ, ಪುತ್ರಪೌತ್ರರಿಂದ ಕೂಡಿ, ಶತಾಯುಷಿಗಳಾಗಿ ಜೀವಿಸಿ, ಕೊನೆಯಲ್ಲಿ ಮುಕ್ತಿ ಹೊಂದಬಲ್ಲರು. ನನ್ನ ಈ ವಿಚಿತ್ರವಾದ ಚರಿತ್ರೆಯನ್ನು ಓದುವವರು, ಸಾವಧಾನವಾಗಿ ಕೇಳುವವರು, ನನಗೆ ಹಿತರು. ಅವರ ವಂಶಸ್ಥರಲ್ಲಿ ಕೂಡ ಲಕ್ಷ್ಮಿ ನಿಶ್ಚಲವಾಗಿ ಇರುತ್ತಾಳೆ. ಈ ನನ್ನ ವಚನಗಳು ನಿಸ್ಸಂಶಯವಾಗಿ ಸತ್ಯವಾದವು" ಎಂದು ಶ್ರೀಗುರುವು ಭಕ್ತರಿಗೆ ಉಪದೇಶಿಸಿ ಗುಪ್ತ ರೂಪರಾಗಿ ಅಂತರ್ಧಾನವಾದರು. ಅಲ್ಲಿದ್ದ ಭಕ್ತರು ಆ ದೃಶ್ಯವನ್ನು ಕಂಡು ವಿಸ್ಮಿತರಾದರು. ನದಿದಡದಲ್ಲಿ ನಿಂತಿದ್ದ ಅಂಬಿಗರು ಚಿಂತಾಯುಕ್ತರಾಗಿ ದೋಣಿಗಳಲ್ಲಿ ಹೊರಟರು. ಅವರು ಮತ್ತೆ ಹಿಂತಿರುಗಿ ಭಕ್ತರಿಗೆ, "ದೇವದೇವನಾದ ಶ್ರೀಗುರುವು ನದಿ ಮಧ್ಯದಲ್ಲಿ ಸಾಕ್ಷಾತ್ತಾಗಿ ದರ್ಶನ ಕೊಟ್ಟರು. ಅಯ್ಯಾ ಶಿಷ್ಯರೇ, ಈಗ ವಿಚಿತ್ರವಾಗಿ ಪರಮ ಪವಿತ್ರವಾದ ಯತಿಸ್ವರೂಪವನ್ನು ನದಿಮಧ್ಯದಲ್ಲಿ ಸುಮನಸ್ಸಮೂಹವಾಗಿದ್ದುದನ್ನು ನಾವು ನೋಡಿದೆವು. ಎರಡು ಕೈಗಳಲ್ಲಿ ದಂಡ ಕಮಂಡಲಗಳನ್ನು ಹಿಡಿದು ಯತಿರೂಪಿಯಾಗಿ ‘ನಮ್ಮ ಶಿಷ್ಯರು ಅಲ್ಲಿ ಇದ್ದಾರೆ. ಅವರಿಗೆ ತಿಳಿಸಿ ಎಂದು ಹೇಳಿದರು" ಎಂದು ತಿಳಿಸಿದರು.

ಆ ಶ್ರೀ ನೃಸಿಂಹ ಸರಸ್ವತಿ ಯತೀಂದ್ರರು, "ಕದಳೀವನಕ್ಕೆ ಹೋಗುತ್ತಿದ್ದೇನೆ. ನೀವು ಗಂಧರ್ವನಗರಕ್ಕೆ ಹೊರಡಿ" ಎಂದು ಆಣತಿ ಕೊಟ್ಟರು. ಅವರ ಪಾದುಕೆಗಳು ಸ್ವರ್ಣಮಯವಾಗಿ ಪ್ರಕಾಶಿಸುತ್ತಿದ್ದವು. ಶ್ರೀಗುರುವು ಹೇಳಿದ ಮಾತುಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಅದ್ದರಿಂದ ನೀವಿನ್ನು ಸುಖವಾಗಿ ನಿಮ್ಮ ಗೃಹಗಳಿಗೆ ಹೊರಡಿ. ಭುಕ್ತಿ ಮುಕ್ತಿಪ್ರದವಾದ ಭಕ್ತಿಯನ್ನವಲಂಬಿಸಿ ಶಿಷ್ಟ ಕಾರ್ಯಗಳನ್ನು ಮಾಡುತ್ತಾ ನಿಮ್ಮ ಮನೆಗಳಲ್ಲಿ ನೆಲೆಸಿ. ಶ್ರೀಗುರುವು ಕಳುಹಿಸಿದ ಪ್ರಸಾದ ಪುಷ್ಪಗಳು ನಿಮಗಾಗಿ ಇಲ್ಲಿಗೇ ಬರುತ್ತವೆ. ಅವನ್ನು ತೆಗೆದುಕೊಳ್ಳಿ" ಎಂದು ಶ್ರೀಗುರುವು ಹೇಳಿದ ಸಂದೇಶವನ್ನು ಆ ಶಿಷ್ಯರಿಗೆ ಬಿನ್ನವಿಸಿ ಆ ಅಂಬಿಗರು ಅಲ್ಲಿಂದ ಹೊರಟರು. ಶಿಷ್ಯರು ಅಂಬಿಗರು ಹೇಳಿದ ಶ್ರೀಗುರುವಿನ ಮಾತುಗಳನ್ನು ಕೇಳಿ, ಅವನ್ನು ಮತ್ತೆ ಮತ್ತೆ ನೆನಸಿಕೊಳ್ಳುತ್ತಾ ಪ್ರಸಾದ ಪುಷ್ಪಗಳಿಗಾಗಿ ಕಾಯುತ್ತಾ ಅಲ್ಲಿಯೇ ನಿಂತಿದ್ದರು. ನಾಲ್ಕು ಪ್ರಸಾದಪುಷ್ಪಗಳು ಬಂದವು. ಶ್ರೀಗುರುವು ಅವುಗಳನ್ನು ಕಳುಹಿಸಿದ್ದರು. ಮುಖ್ಯಶಿಷ್ಯರು ಅವುಗಳನ್ನು ಗ್ರಹಿಸಿದರು". ಆಗ ನಾಮಧಾರಕನು ಸಿದ್ಧಮುನಿಯನ್ನು, "ಸ್ವಾಮಿ, ಶ್ರೀಗುರುವಿನ ಮುಖ್ಯಶಿಷ್ಯರು ಎಷ್ಟು ಜನ? ಅವರಲ್ಲಿ ಯಾರು ಪ್ರಸಾದ ಪುಷ್ಪಗಳನ್ನು ತೆಗೆದುಕೊಂಡರು?" ಎಂದು ಕೇಳಲು, ಸಿದ್ಧಮುನಿ, "ವತ್ಸ, ಹಿತಕಾರಿಯಾದ ಶ್ರೀಗುರುವಿಗೆ ಅನೇಕ ಶಿಷ್ಯರಿದ್ದರು. ಅವರಲ್ಲಿ ಕೆಲವರು ಗಂಧರ್ವಪುರಿಯಲ್ಲಿದ್ದಾರೆ. ಕೆಲವರು ಸನ್ಯಾಸವನ್ನು ಸ್ವೀಕರಿಸಿದರು. ಮತ್ತೆ ಕೆಲವರು ಗೃಹಸ್ಥರು. ಶ್ರೀಗುರುವು ಸನ್ಯಾಸಿಗಳಾದ ಶಿಷ್ಯರನ್ನು ಯಾತ್ರೆಗಳಿಗೆ ಕಳುಹಿಸಿದ್ದರು. ಅವರು ಯಾತ್ರೆಗಳಿಗೆ ಹೊರಟು ಹೋಗಿದ್ದರು. ಅವರಲ್ಲಿ ಪ್ರಾಧಾನ್ಯ ಕ್ರಮವನ್ನು ಅನುಸರಿಸಿ ಹೇಳುವೆನು ಕೇಳು. ಮೊದಲು ಬಾಲಸರಸ್ವತಿ. ನಂತರ ಕೃಷ್ಣಸರಸ್ವತಿ. ಆ ಮೇಲೆ ಉಪೇಂದ್ರ ಸರಸ್ವತಿ. ಆ ನಂತರ ಮಾಧವ ಸರಸ್ವತಿ. ಗುರುವಿನ ಆಜ್ಞೆಯಿಂದ ಕೆಲವರು ಗೃಹಸ್ಥರಾಗಿದ್ದಾರೆ. ಶ್ರೀಶೈಲಯಾತ್ರೆಯ ಸಮಯದಲ್ಲಿ ಶ್ರೀಗುರುವು ನಾಲ್ವರು ಶಿಷ್ಯರೊಡನೆ ಇದ್ದರು. ಅವರಲ್ಲಿ ಸಾಯಂದೇವನು ಒಬ್ಬನು. ಮತ್ತೊಬ್ಬ ಕವಿ ಎನ್ನುವವನು. ಇನ್ನೊಬ್ಬ ನಂದಿಶರ್ಮ. ಹಾಗೆಯೇ ಎರಡನೆಯ ಕವಿ ಎನ್ನಿಸಿಕೊಂಡ ಸಿದ್ಧನೆನ್ನುವ ನಾನು. ನಾವು ನಾಲ್ವರೂ ಆ ಪುಷ್ಪಗಳನ್ನು ತೆಗೆದುಕೊಂಡೆವು. ಇಗೋ, ದೇವಸಮರ್ಪಿತವಾದ, ಪೂಜಿತವಾದ ಆ ಪ್ರಸಾದ ಪುಷ್ಪವು ಇದೇ, ನೋಡು. ಶ್ರೀಗುರುವಿನ ಮಹಿಮೆಗೆ ಇಷ್ಟು ಎಂಬ ಪರಿಮಾಣವಿಲ್ಲ. ನಾನು ನಿನಗೆ ಸಂಗ್ರಹವಾಗಿ ಶ್ರೀಗುರುವಿನ ಮಹಿಮೆಯನ್ನು ತಿಳಿಸಿದ್ದೇನೆ. ಕಾಮದವಾದ, ಈ ಶ್ರೀಗುರುಚರಿತ್ರೆ, ನಾನು ಹೇಳಿದ್ದು, ದಾರಿದ್ರ್ಯ, ಪಾಪಗಳೆನ್ನುವ ಕಾಳ್ಗಿಚ್ಚನ್ನು ಆರಿಸಿ ಕಲ್ಪದ್ರುಮದಂತೆ ಶಾಂತಿಯನ್ನು ಉಂಟುಮಾಡುತ್ತದೆ. ಶ್ರೀಗುರುಚರಿತ್ರೆಯನ್ನು ಬರೆಯುವವರು, ಓದುವವರು, ಕೇಳುವವರು ಇಹಲೋಕ ಪರಲೋಕಗಳಲ್ಲಿ ಸಂತುಷ್ಟರಾಗಿರುತ್ತಾರೆ. ಅಂತಹವರ ಉಭಯ ಕುಲಗಳೂ ಪುತ್ರ ಪೌತ್ರಾಭಿವೃದ್ಧಿಯಾಗಿ ಆನಂದದಿಂದಿರುತ್ತಾರೆ. ಅಂಥವರು ಧರ್ಮಾರ್ಥಕಾಮಗಳನ್ನು ಪಡೆಯುತ್ತಾರೆ. ಶ್ರೀಗುರುವಿನ ಸೇವಕನು ಸುಗತಿಯನ್ನು ಹೊಂದುತ್ತಾನೆ" ಎಂದು ಸಿದ್ಧಮುನಿಯು ನಾಮಧಾರಕನಿಗೆ ಉಪದೇಶಿಸಿದರು. ಶ್ರೀಗುರುವಿನ ಚರಿತ್ರೆಯನ್ನು ಕೇಳಿದ ನಾಮಧಾರಕನು ಸಂಪೂರ್ಣ ಮನೋರಥನಾದನು. ಸಿದ್ಧಮುನಿಯ ಮಾತುಗಳನ್ನು ಕೇಳಿದ ನಾಮಧಾರಕನು ಸಂತೋಷಗೊಂಡವನಾಗಿ, ಶತಾಯುವಾಗಿ, ಕವಿಯಾಗಿ, ಪುತ್ರಪ್ರಾಪ್ತಿ ಸಂಪತ್ಪ್ರಾಪ್ತಿ ಹೊಂದಿ ಶ್ರೀಗುರುವಿನಲ್ಲಿ ಭಕ್ತಿಯುಕ್ತನಾದನು.

ಇದು ಸಂಪೂರ್ಣವಾದ ಶ್ರೀಗುರುಚರಿತ್ರೆಯು. ಕಾಮಧೇನುವಿನಂತೆ ಕಾಮಿತಗಳನ್ನು ಕೊಡುವುದು. ಈ ಚರಿತ್ರೆಯು ಪ್ರತಿದಿನವೂ ಕೇಳುವಂತಹುದು. ಸಂಸಾರವೆನ್ನುವ ಕಾನನದಲ್ಲಿ ಸಿಕ್ಕಿಕೊಂಡವರಿಗೆ ಈ ಶ್ರೀಗುರುಚರಿತ್ರೆಯು ಅಮೃತಪಾನದಂತೆ ಸದಾ ಆಸ್ವಾದನ ಮಾಡುವಂತಹುದು. ಈ ಚರಿತ್ರೆಯು ಧರ್ಮರ್ಥಕಾಮಗಳನ್ನು, ವೇದಮಾರ್ಗವನ್ನು, ಮತಿ, ಸ್ಮೃತಿ, ಸದ್ಗತಿಯನ್ನು ಉಂಟುಮಾಡುವುದು. ನಿತ್ಯವೂ ಈ ಅಖಂಡವಾದ ಚರಿತ್ರೆಯನ್ನು ಕೇಳುವವರ ಗೃಹದಲ್ಲಿ ಲಕ್ಷ್ಮಿ ಅಖಂಡವಾಗಿ ನೆಲೆಸಿರುತ್ತಾಳೆ.

"ಶ್ರೀಗುರುಚರಿತ್ರೆಯು ಶ್ರವಣಮಾತ್ರದಿಂದಲೇ ಪುರುಷಾರ್ಥಗಳನ್ನು ಕೊಡುವುದು. ಯತಿನಾಥನಾದ ಶ್ರೀ ನೃಸಿಂಹ ಸರಸ್ವತಿ, ಶ್ರೀಗುರುಚರಿತ್ರೆಯನ್ನು ಕೇಳಿದವರನ್ನು ಸದಾ ರಕ್ಷಿಸುತ್ತಾರೆ" ಎಂದು ಶ್ರೀ ವಾಸುದೇವ ಸರಸ್ವತಿ ಹೇಳಿದರು. ಆದ್ದರಿಂದಲೇ ಶ್ರೀ ವಾಸುದೇವ ಸರಸ್ವತಿಯ ಈ ಶ್ರೀಗುರುಚರಿತ್ರೆ ಶೀಘ್ರದಲ್ಲಿಯೇ ಅಖಿಲಾರ್ಥಗಳನ್ನೂ ಕೊಡುವುದು. ಇದನ್ನು ಕೇಳಿ ಎಂದು ಶ್ರೋತೃಗಳನ್ನು ಪ್ರಾರ್ಥಿಸುತ್ತಿದ್ದಾರೆ.

ಪ್ರವೃತ್ತಿ ನಿವೃತ್ತಿಗಳನ್ನು ಕೂಡಾ ಸಿದ್ಧಿಸಿಕೊಡಬಲ್ಲದು ಈ ಚರಿತ್ರೆ. ಜನರು ಸರ್ವಕಾಮಗಳನ್ನೂ ಫಲಿಸಿಕೊಡುವಂತಹ ಈ ಶ್ರೀಗುರುಚರಿತ್ರೆಯನ್ನು ಅನರ್ಥಗಳು ನಾಶವಾಗಲು ನಿತ್ಯವೂ ಓದುವವರಾಗಲಿ. ಇದರ ಸವಿಯನ್ನು ಅನೇಕಸಲ ಸವಿಯುವವರಾಗಲಿ. 

ಇಲ್ಲಿಗೆ ಐವತ್ತೊಂದನೆಯ ಅಧ್ಯಾಯ ಮುಗಿಯಿತು.

Friday, September 27, 2013

||ಶ್ರೀಗುರು ಚರಿತ್ರೆ - ಐವತ್ತನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
 ||ಶ್ರೀ ಗುರುಭ್ಯೋನಮಃ||

"ನಾಮಧಾರಕ, ಮುಂದಿನ ಕಥೆಯನ್ನು ಕೇಳು. ಹಿಂದೆ ಒಂಭತ್ತನೆಯ ಅಧ್ಯಾಯದಲ್ಲಿ ಒಬ್ಬ ಅಗಸರವನು ಶ್ರೀಗುರುವಿಗೆ ಸೇವಕನಾಗಿ ಇದ್ದನೆಂದು ಹೇಳಿದೆನಷ್ಟೆ. ಆ ಅಗಸರವನು ತನ್ನ ಮರುಜನ್ಮದಲ್ಲಿ ವೈಢೂರ್ಯಪುರದಲ್ಲಿ ಮ್ಲೇಚ್ಛರಾಜನಾಗಿ ಸಂಪತ್ತಿನಲ್ಲಿ ಓಲಾಡುತ್ತಾ, ಪುತ್ರಾದಿಗಳಿಂದ ಕೂಡಿ, ಸುಖವಾಗಿ ಜೀವಿಸುತ್ತಿದ್ದನು. ಅವನು ಜಾತಿಹೀನನಾದರೂ ಪೂರ್ವಜನ್ಮ ಸಂಸ್ಕಾರದಿಂದ ಪುಣ್ಯದಲ್ಲಿ ಕೋರಿಕೆಗಳುಳ್ಳವನಾಗಿ ದಾನಧರ್ಮಗಳಲ್ಲಿ ಆಸಕ್ತನಾಗಿ, ಬ್ರಾಹ್ಮಣರಲ್ಲಿ ವಿಶೇಷಭಕ್ತಿಯುಳ್ಳವನಾಗಿ, ದೇವಾಲಯಗಳಿಗೆ, ತೀರ್ಥಸ್ಥಳಗಳಿಗೆ ಯಾವ ಹಾನಿಯನ್ನೂ ಮಾಡುತ್ತಿರಲಿಲ್ಲ. ಅವನ ಪುರೋಹಿತರು ಅವನಿಗೆ ಒಂದುಸಲ, "ಹೇ ರಾಜ, ನೀನು ಮ್ಲೇಚ್ಛನು. ಆದ್ದರಿಂದ ದೇವತೆಗಳನ್ನು ದ್ವಿಜರನ್ನು ನಿಂದಿಸಬೇಕು. ನೀನಾದರೋ ಅವರನ್ನು ಸೇವಿಸುತ್ತಿದ್ದೀಯೆ. ಅದರಿಂದ ನಿನಗೆ ಮಹಾಪಾತಕಗಳು ಬರುತ್ತವೆ. ಯಾರಿಗೆ ವಿಧಿಸಿದ ಧರ್ಮದಂತೆ ಅವರು ನಡೆದುಕೊಂಡರೆ ಅದು ಅವರಿಗೆ ಬಹಳ ಪುಣ್ಯವನ್ನು ಕೊಡುತ್ತದೆ. ದ್ವಿಜರು ಮೂಢರು. ಕಟ್ಟಿಗೆ, ಕಲ್ಲುಗಳನ್ನು ಪೂಜಿಸುತ್ತಾರೆ. ಹಸು, ಅಗ್ನಿ, ಸೂರ್ಯ ಮುಂತಾದುವು ಕೂಡ ಅವರಿಗೆ ದೇವತೆಗಳೇ! ನದಿಗಳುಕೂಡ ಅವರಿಗೆ ದೇವತೆಗಳೇ! ಇಂತಹ ಅಜ್ಞಾನಿಗಳಾಗಿ ನಿರಾಕಾರನಾದ ದೇವರಿಗೆ ಆಕಾರವನ್ನು ಕಲ್ಪಿಸುತ್ತಾರೆ. ಅಂತಹವರನ್ನು ಸೇವಿಸುವ ಮ್ಲೇಚ್ಛರಿಗೆ ಅಧೋಗತಿ ತಪ್ಪದು." ಎಂದು ಹೇಳಿದರು. ಆ ರಾಜನಿಗೆ ವರ್ಣಾಶ್ರಮಧರ್ಮಗಳಲ್ಲಿ ಧೃಢಬುದ್ದಿಯಿತ್ತು. ಆ ರಾಜ, ತನ್ನ ಪುರೋಹಿತರಿಗೆ, "ಅಯ್ಯಾ, ಅಣುವಿನಿಂದ ತೃಣ, ಕಾಷ್ಠ ಮುಂತಾದುವೆಲ್ಲವನ್ನೂ ಈಶ್ವರನು ಸ್ಥಾವರಜಂಗಾತ್ಮಕವಾಗಿ ಸೃಷ್ಟಿಸಿದನು. ಹೀಗೆ ಜಗತ್ತನ್ನು ಸೃಷ್ಟಿಸಿ, ಆ ಸೃಷ್ಟಿಯಲ್ಲಿ ತಾನೇ ಪ್ರವೇಶಿಸಿದನು. ಮತಾಭಿಮಾದಿಂದ ಮತಗಳಲ್ಲಿ ಭೇದಗಳುಂಟಾದವು. ಒಬ್ಬನೇ ಈಶ್ವರನು ಪಂಚಭೂತಾತ್ಮಕವಾಗಿದ್ದಾನೆ. ಮಡಕೆ ಮುಂತಾದುವು ಮಣ್ಣಿನಿಂದ ಬಂದಹಾಗೆ, ನಾನಾಬಣ್ಣಗಳ ಹಸುಗಳಿಂದ ಬರುವ ಹಾಲು ಒಂದೇ ಇರುವಹಾಗೆ, ಈ ಪ್ರಪಂಚದಲ್ಲಿ ಚಿತ್ಸ್ವರೂಪವು ಒಂದೇ! ವಿಶ್ವಕ್ಕೆ ಅನೇಕತ್ವದಿಂದ ಹಾನಿ ಏನಿಲ್ಲ. ಘಟಾದಿಗಳಿಗೆ ಆಕಾಶವು ಹೇಗೆ ಭಿನ್ನವಲ್ಲವೋ ಅದೇ ರೀತಿಯಲ್ಲಿ ಆತ್ಮಬುದ್ಧಿ ಭೇದದಿಂದ ವಿಕಾರವನ್ನು ಹೊಂದುವುದಿಲ್ಲ. ಒಂದು ದೀಪದಿಂದ ಮತ್ತೊಂದು ದೀಪವನ್ನು ಬೆಳಗಿಸಿದರೂ ಅದರ ಏಕತ್ವಕ್ಕೆ ಎಂತಹ ಬಾಧೆಯೂ ಇಲ್ಲದಹಾಗೆ ಒಂದೇ ಪರಿಮಿತಿಯುಳ್ಳ ಬ್ರಹ್ಮ ಸಚ್ಚಿದಾನಂದ ಸ್ವರೂಪವು ಉಳ್ಳದ್ದು. ದೂರದಲ್ಲಿನ ನಾನಾಮಣಿ ಗಣಗಳು ಒಂದೇ ಇರುವಹಾಗೆ ಈ ವಸ್ತುಜಾತವೆಲ್ಲವೂ ಬ್ರಹ್ಮಾಧೀನವಾಗಿದೆ. ಶ್ರೀಹರಿಯೊಬ್ಬನೇ ಪ್ರಭುವು. ಆತ್ಮಜ್ಞಾನಕ್ಕೆ ಚಿತ್ತಶುದ್ಧಿ ಬೇಕು. ಅದಕ್ಕೋಸ್ಕರವೇ ಕಲ್ಲು ಮುಂತಾದ ಆಕಾರಗಳಲ್ಲಿ ಈಶ್ವರನೆಂಬ ಭಾವನೆ ವಿಧಿಸಲ್ಪಟ್ಟಿದೆ. (ಅದು) ಧ್ಯಾನಕ್ಕೋಸ್ಕರವೇ! ಸ್ವಲ್ಪಬುದ್ಧಿಯುಳ್ಳವರಿಗೆ ಪ್ರತಿಮೆಗಳನ್ನು ಪೂಜಿಸುವುದು ವಿಧಿಸಲ್ಪಟ್ಟಿದೆ. ಬುದ್ಧಿವಂತರಿಗೆ ಆತ್ಮಭಾವನೆಯೇ ಪ್ರಶಸ್ತವು. ಭಾವನೆಯಿಂದ ಸ್ಥಿರತ್ವವು ಬರುವುದು. ಭಾವನೆಯಲ್ಲೇ ನಾರಾಯಣನು ಇದ್ದಾನೆ ಅಲ್ಲವೇ? ಯಾರಿಗೆ ಯಾವ ಮಾರ್ಗ ವಿಧಿಸಿದೆಯೋ ಅವರಿಗೆ ಆ ಮಾರ್ಗ ಮಾತ್ರ ಹಿತವನ್ನುಂಟುಮಾಡುತ್ತದೆ." ಎಂದು ಆ ಮ್ಲೇಚ್ಛರಾಜ ತನ್ನ ಪುರೋಹಿತರಿಗೆ ವಿಸ್ತಾರವಾಗಿ ಹೇಳಿ ತಾನು ಸ್ವಯಂ ದೇವ ಬ್ರಾಹ್ಮಣರಲ್ಲಿ ಭಕ್ತಿಯುಳ್ಳವನಾಗಿ ಪುಣ್ಯವನ್ನಾಚರಿಸುತ್ತಿದ್ದನು.

ದೈವಯೋಗದಿಂದ ಒಂದುಸಲ ಅವನಿಗೆ ತೊಡೆಯಲ್ಲಿ ಸಣ್ಣ ಕುರು ಆಯಿತು. ಅದರಿಂದ ರಾಜನು ಬಹಳವಾಗಿ ಬಾಧೆಪಟ್ಟನು. ಗಂಧರ್ವಪುರದಲ್ಲಿ ಶ್ರೀಗುರುವು ತನ್ನಲ್ಲೇ ಆಲೋಚಿಸಿ, ‘ಮ್ಲೇಚ್ಛರಾಜ ಕೂಡಾ ಇಲ್ಲಿಗೆ ಬರುತ್ತಾನೆ. ಮ್ಲೇಚ್ಛರು ಇಲ್ಲಿಗೆ ಬಂದರೆ ದ್ವಿಜರಿಗೆ ಬಾಧೆಯಾಗುತ್ತದೆ. ಆದ್ದರಿಂದ ಅಂತರ್ಧಾನವಾಗುವುದು ಶ್ರೇಷ್ಠವು. ಬಹುಧಾನ್ಯ ಸಂವತ್ಸರ ಗುರುವು ಸಿಂಹರಾಶಿಯನ್ನು ಸೇರುತ್ತಾನೆ. ಆದ್ದರಿಂದ ಗೋದಾವರಿ ಯಾತ್ರೆಯ ನೆವದಿಂದ ಸಂಚಾರಮಾಡುತ್ತೇನೆ.’ ಎಂದು ಯೋಚಿಸಿ, ತನ್ನ ಶಿಷ್ಯರಿಗೆ, "ಮ್ಲೇಚ್ಛರಾಜ ನನ್ನನ್ನು ಕರೆದುಕೊಂಡು ಹೋಗಲು ಬರಲಿದ್ದಾನೆ. ಆದ್ದರಿಂದ ಗೌತಮಿತೀರಕ್ಕೆ ತ್ವರೆಯಾಗಿ ಹೋಗುತ್ತೇವೆ." ಎಂದು ಹೇಳಲು, ಶಿಷ್ಯರು, "ಮ್ಲೇಚ್ಛನು ಇಲ್ಲಿಗೆ ಬಂದರೆ ಧರ್ಮಹಾನಿಯಾಗುತ್ತದೆ ಎಂದು ಹೇಳುವುದು ಅಷ್ಟು ಸರಿಯಲ್ಲ. ಶ್ರೀನೃಸಿಂಹಸರಸ್ವತಿಯಾಗಿ ಸಾಕ್ಷಾತ್ತು ದತ್ತನೇ ಇಲ್ಲಿ ಇದ್ದಾನೆ. ಅವನೇ ನಮ್ಮನ್ನು ರಕ್ಷಿಸುತ್ತಾನೆ." ಎಂದು ಹೇಳಿ ಅಲ್ಲಿಂದ ಕದಲದೆ ಇದ್ದರು.

ಆ ರಾಜನ ಕುರುವಿನ ಬಾಧೆಯನ್ನು ಯಾವ ಔಷಧಗಳೂ, ಲೇಪನಗಳೂ ಕಡಮೆಮಾಡಲಿಲ್ಲ. ಆಗ ಆ ಮ್ಲೇಚ್ಛನು ಬ್ರಾಹ್ಮಣರನ್ನು ಕರೆಸಿ ಅವರನ್ನು ಈ ವಿಷಯವಾಗಿ ಕೇಳಿದನು. ಅವರು, "ರಾಜ, ಕೇಳು. ಪೂರ್ವಜನ್ಮ ಕೃತವಾದ ಪಾಪವು ವ್ಯಾಧಿರೂಪದಲ್ಲಿ ಬಾಧಿಸುತ್ತದೆ. ತೀರ್ಥಾಟನೆಗಳು, ದೇವತಾರ್ಚನೆ, ದಾನಗಳಿಂದ ವ್ಯಾಧಿ ಕಡಮೆಯಾಗುವುದು. ಇಲ್ಲವೇ ಸಾಧುಗಳ ಸೇವೆಯಿಂದ, ಅವರ ದರ್ಶನದಿಂದಲೂ ಆರೋಗ್ಯವು ಕುದುರಬಹುದು. ದೈವವಶಾತ್ ಸತ್ಪುರುಷರ ಕೃಪಾದೃಷ್ಟಿ ಲಭಿಸಿದರೆ ಅರವತ್ತು ಜನ್ಮಗಳಲ್ಲಿ ಮಾಡಿದ ಪಾಪಗಳು ನಾಶವಾಗುವುವು. ಇನ್ನು ಈ ವ್ರಣಬಾಧೆ ಏಕೆ ಉಪಶಮನವಾಗಲಾರದು?" ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿದ ರಾಜ, "ಅಯ್ಯಾ ಬ್ರಾಹ್ಮಣರಿರಾ, ಪೂರ್ವಜನ್ಮದಲ್ಲಿ ಶ್ರೀಗುರುವಿನ ಸೇವೆಯಿಂದ ರಾಜ್ಯ ದೊರೆಯಿತು. ಮಾಡಿದ ಪಾಪಗಳಿಂದ ಮ್ಲೇಚ್ಛವಂಶದಲ್ಲಿ ಸಂಭವಿಸಿತು. ಮಹಾನುಭಾವನ ದೃಷ್ಟಿಯಿಂದ ಯಾರಿಗೆ ರೋಗ ಶಮನವಾಯಿತೋ ಹೇಳಿ." ಎಂದನು. ಅವನ ಮಾತುಗಳನ್ನು ಕೇಳಿದ ಬ್ರಾಹ್ಮಣನೊಬ್ಬ ತನ್ನಲ್ಲೇ ಯೋಚಿಸಿ, "ರಾಜ, ಆ ವಿಷಯವನ್ನು ಇಲ್ಲಿ ಹೇಳಬಾರದು. ರಹಸ್ಯವಾಗಿ ಹೇಳುತ್ತೇನೆ." ಎನ್ನಲು, ಆ ಯವನ, "ನನ್ನ ಜಾತಿಯಿಂದೇನಾಗಬೇಕು? ದ್ವಿಜದಾಸನಾದ ನನ್ನನ್ನು ದಯಾಲೇಶದಿಂದಲಾದರೂ ಉದ್ಧರಿಸು." ಎಂದು ಬೇಡಿಕೊಂಡನು. ಪಶ್ಚಾತ್ತಾಪತಪ್ತನಾದ ರಾಜನ ಮನಸ್ಸನ್ನು ತಿಳಿದ ಆ ಬ್ರಾಹ್ಮಣ, "ರಾಜ, ಪಾಪವಿನಾಶವೆನ್ನುವ ಉತ್ತಮವಾದ ತೀರ್ಥದಲ್ಲಿ ಒಂದು ರಹಸ್ಯ ಸ್ಥಾನವು ಇದೆ. ಅಲ್ಲಿಗೆ ಹೋಗು. ಅಲ್ಲಿ ಸ್ನಾನ ಮಾಡಿ ರಹಸ್ಯವಾಗಿ ಇರು. ಆ ಏಕಾಂತಸ್ಥಾನದಲ್ಲಿ ನಿನ್ನ ಕಾರ್ಯವು ಕೈಗೂಡುವುದು." ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿ ಆ ರಾಜ ಏಕಾಕಿಯಾಗಿ ಪಾಪವಿನಾಶತೀರ್ಥಕ್ಕೆ ಹೋಗಿ ಸ್ನಾನವಾಚರಿಸುತ್ತಿರಲು ಒಬ್ಬ ವಿಪ್ರಯತಿ ಅಲ್ಲಿಗೆ ಬಂದನು. ಅವನನ್ನು ಕಾಣುತ್ತಲೇ ರಾಜ ಅವನಿಗೆ ನಮಸ್ಕರಿಸಿ, ಸದ್ಭಾವದಿಂದ ಕೂಡಿದವನಾಗಿ ತನ್ನ ವ್ರಣವು ಹೇಗೆ ವಾಸಿಯಾಗುವುದು ಎಂದು ಕೇಳಿದನು. ಆ ರಾಜನ ಪ್ರಾರ್ಥನೆಯನ್ನು ಕೇಳಿದ ಆ ಯತಿ, "ಅಯ್ಯಾ ಸಾಧುಗಳ ದರ್ಶನದಿಂದ ವಾಸಿಯಾಗುವುದು. ಪೂರ್ವದಲ್ಲಿ ಆವಂತಿಪುರದಲ್ಲಿ ದುರಾಚಾರಿಯಾದ ಬ್ರಾಹ್ಮಣನೊಬ್ಬನಿದ್ದನು. ಅವನು ಜನ್ಮತಃ ಬ್ರಾಹ್ಮಣನಷ್ಟೇ! ತನ್ನ ಕರ್ಮಗಳನ್ನು ಧರ್ಮವನ್ನು ಅವನು ಬಿಟ್ಟು ಬಿಟ್ಟಿದ್ದನು. ಪರಸ್ತ್ರೀಯರಲ್ಲಿ ಆಸಕ್ತನಾಗಿ ಸ್ನಾನ ಸಂಧ್ಯಾವಂದನಾದಿಗಳನ್ನು ಬಿಟ್ಟು ಅಬ್ರಾಹ್ಮಣನಾಗಿದ್ದನು. ಬ್ರಾಹ್ಮಣಾಚಾರಗಳನ್ನು ಬಿಟ್ಟು ಪಿಂಗಳ ಎನ್ನುವ ವೇಶ್ಯೆಯ ಮನೆಯಲ್ಲಿ ವಾಸಿಸುತ್ತಾ ಅದನ್ನೇ ಅಮೃತಸಮಾನವಾಗಿ ಭಾವಿಸಿ ಅವಳ ಮನೆಯಲ್ಲಿ ಭಯಭೀತಿಗಳಿಲ್ಲದೆ ಜೀವಿಸುತ್ತಿದ್ದ. ದೈವಯೋಗದಿಂದ ಋಷಭನೆಂಬುವ ಮಹಾಮುನಿ ಅಕಸ್ಮಾತ್ತಾಗಿ ಅಲ್ಲಿಗೆ ಬಂದನು. ಆ ಮುನಿಯನ್ನು ಕಂಡ ಆ ಬ್ರಾಹ್ಮಣ ವೇಶ್ಯೆಯೊಡನೆ ಮುನಿಗೆ ನಮಸ್ಕಾರಮಾಡಿ ಅವನನ್ನು ತಮ್ಮಮನೆಗೆ ಕರೆದುಕೊಂಡು ಬಂದರು. ಷೋಡಶೋಪಚಾರಗಳಿಂದ ಆ ಮುನಿಯನ್ನು ಪೂಜಿಸಿ, ಅವನ ಪಾದತೀರ್ಥವನ್ನು ಸೇವಿಸಿ, ನಾನಾವಿಧವಾದ ಮೃಷ್ಟಾನ್ನಗಳಿಂದ ಮುನಿಗೆ ಭೋಜನವಿಟ್ಟರು. ಉತ್ತಮವಾದ ತಾಂಬೂಲವನ್ನು ಕೊಟ್ಟು, ಮೃದುವಾದ ಶಯ್ಯೆಯಲ್ಲಿ ಆ ಮುನಿಯನ್ನು ಮಲಗಿಸಿ, ಅವನ ಪಾದಗಳನ್ನೊತ್ತುತ್ತಾ ಸೇವೆ ಮಾಡಿದರು. ಆ ಮುನಿ ನಿದ್ರಿಸಿದನೆಂದು ತಿಳಿದು ಅವರಿಬ್ಬರೂ ಅವನ ಬಳಿಯೇ ರಾತ್ರಿಯೆಲ್ಲ ಕೂತು ಕಳೆದರು. ಸೂರ್ಯೋದಯವಾಯಿತು. ಎಚ್ಚೆತ್ತ ಆ ಮುನಿ ಅವರ ಸೇವೆಯಿಂದ ಸಂತುಷ್ಟನಾಗಿ ಹೊರಟುಹೋದನು.

ಸ್ವಲ್ಪಕಾಲದಲ್ಲೇ ಆ ಬ್ರಾಹ್ಮಣನು ಮರಣಿಸಿದನು. ಆ ವೇಶ್ಯೆಯೂ ಕಾಲವಶಳಾದಳು. ಪೂರ್ವಕರ್ಮಾನುಬಂಧದಿಂದ ಅವರಿಬ್ಬರೂ ರಾಜವಂಶದಲ್ಲಿ ಜನಿಸಿದರು. ಆ ಬ್ರಾಹ್ಮಣನು ದಶಾರ್ಣದೇಶದ ಅಧಿಪತಿಯಾದ ವಜ್ರಬಾಹು ಎನ್ನುವವನ ಪಟ್ಟಮಹಿಷಿ ಸುಮತಿಯ ಗರ್ಭವನ್ನು ಪ್ರವೇಶಿಸಿದನು. ವಜ್ರಬಾಹು ಪುಂಸವನಾದಿಗಳನ್ನು ಅದ್ಧೂರಿಯಾಗಿ ನೆರವೇರಿಸಿದನು. ಸುಮತಿಯ ಸವತಿ ಮಾತ್ಸರ್ಯದಿಂದ ಅವಳ ಗರ್ಭವನ್ನು ನಾಶಮಾಡಲು ಪ್ರಯತ್ನಿಸಿದಳು. ಅವಳಿಗೆ ಹಾವಿನ ವಿಷವನ್ನು ಕೊಟ್ಟಳು. ಸುಮತಿಯ ಶರೀರದಲ್ಲೆಲ್ಲಾ ಆ ವಿಷವು ವ್ಯಾಪಿಸಿ ಅವಳು ಬಹಳ ಬಾಧೆಪಟ್ಟಳು. ಆದರೆ ಸಾಯಲಿಲ್ಲ.

ಇಂತಹ ದುಃಖದಲ್ಲೇ ಆ ರಾಣಿ ಪ್ರಸವಿಸಿದಳು. ಮಗನು ಹುಟ್ಟಿದನು. ವ್ರಣಗಳಿಂದ ಕೂಡಿದ ಅವನು ಹಗಲೂ ರಾತ್ರಿ ದುಃಖಾರ್ತನಾಗಿ ನಿದ್ರೆ ಆಹಾರಗಳಿಲ್ಲದೆ ಅಳುತ್ತಿದ್ದನು. ಚಿಂತೆಗೊಂಡ ರಾಜ ದೇಶಾಂತರಗಳಿಂದ ಕೂಡಾ ವೈದ್ಯರುಗಳನ್ನು ಕರೆಯಿಸಿ ಚಿಕಿತ್ಸೆಗಾಗಿ ಬಹಳ ಧನವನ್ನು ವ್ಯರ್ಥವಾಗಿ ವ್ಯಯಮಾಡಿದನು. ಆದರೂ ಆ ಬಾಲನಿಗೆ ಆರೋಗ್ಯವು ಸ್ವಲ್ಪಮಾತ್ರವೂ ಕೈಗೂಡಲಿಲ್ಲ. ಆ ತಾಯಿಮಗ ಇಬ್ಬರಿಗೂ ದೇಹಾದ್ಯಂತವಾಗಿ ಕ್ರಿಮಿಗಳಿಂದ ಕೂಡಿದ ವ್ರಣಗಳಾದವು.

ಅವರ ವ್ರಣಗಳಿಂದ ಕೀವುಸುರಿಯುತ್ತಾ ಭಯಂಕರವಾಗಲು ಅವರಿಬ್ಬರೂ ಬಹಳ ಖಿನ್ನರಾದರು. ಅನೇಕ ಔಷಧಿಗಳನ್ನು ಉಪಯೋಗಿಸಿದರೂ ಅವರ ಆರೋಗ್ಯ ಸರಿಯಾಗಲಿಲ್ಲ. ಅವರಿಬ್ಬರೂ ಜೀವಚ್ಛವಗಳಂತಾದರು. ಅವರಿಬ್ಬರೂ ಮತ್ತೆ ಆರೋಗ್ಯವಂತರಾಗುವ ಲಕ್ಷಣಗಳು ಕಾಣಲಿಲ್ಲ. ‘ಇವರಿಬ್ಬರಿಗೂ ಹೇಗಾದರೂ ಆರೋಗ್ಯ ಸರಿಯಾಗಲಾರದು. ಮಾಡಿದ ಪಾಪ ಅನುಭವಿಸದೇ ನಾಶವಾಗುವುದಿಲ್ಲ. ಆದ್ದರಿಂದ ಇಬ್ಬರನ್ನೂ ಬಿಟ್ಟುಬಿಡಬೇಕು’ ಎಂದು ನಿಶ್ಚಯಿಸಿಕೊಂಡು ಸಾರಥಿಯನ್ನು ಕರೆದು ಅವನಿಗೆ ರಾಜ, "ಅಯ್ಯಾ ಸೂತ, ನನ್ನ ಅಜ್ಞೆಯೆಂದು ತಿಳಿದು ಇವರಿಬ್ಬರನ್ನೂ ಕರೆದುಕೊಂಡು ಹೋಗಿ ಮಹಾರಣ್ಯದಲ್ಲಿ ನಿಶ್ಶಂಕೆಯಿಂದ ನಿರ್ಜನವಾದ ಕಡೆಯಲ್ಲಿ ಬಿಟ್ಟುಬಿಡು. ಇದು ನನ್ನ ಆಜ್ಞೆ. ಮನುಷ್ಯರ ಸಂಚಾರವಿಲ್ಲದಿರುವ ಕಡೆಯಲ್ಲಿ ನನ್ನ ಈ ಹೆಂಡತಿಮಗನನ್ನು ಬೇಗನೇ ಕರೆದುಕೊಂಡುಹೋಗಿ ಬಿಟ್ಟುಬಾ." ಎಂದು ಹೇಳಿ ತನ್ನ ರಥವನ್ನು ಕೊಟ್ಟನು. ಬಂಧುಗಳು ಪ್ರಜೆಗಳು ಎಲ್ಲರೂ ದುಃಖಪಟ್ಟರು. ಅವರಿಬ್ಬರನ್ನೂ ರಥದಲ್ಲಿ ಕೂಡಿಸಿಕೊಂಡು ಆ ಸೂತನು ಮಹಾರಣ್ಯದಲ್ಲಿ ಜನಸಂಚಾರವಿಲ್ಲದ ಕಡೆಯಲ್ಲಿ ಬಿಟ್ಟು ಬಂದು, ರಾಜನಿಗೆ ತಿಳಿಸಿದನು. ರಾಜನು ತನ್ನ ಎರಡನೆಯ ಹೆಂಡತಿಗೆ ನಿನ್ನ ಸವತಿಯನ್ನು ಕಾಡಿನಲ್ಲಿ ಬಿಟ್ಟೆನೆಂದು ಹೇಳಿದನು. ಅದನ್ನು ಕೇಳಿ ಅವಳು ಬಹಳ ಸಂತೋಷಪಟ್ಟಳು.

ಸುಕುಮಾರಿಯಾದ ಆ ರಾಣಿ ಮಗನೊಡನೆ ಬಹಳ ಕಷ್ಟಪಡುತ್ತಾ ದುಃಖದಿಂದ ಅನ್ನನೀರುಗಳಿಲ್ಲದೆ ನಿರ್ಜನವಾದ ಆ ಅರಣ್ಯದಲ್ಲಿ, ಅತಿಕಷ್ಟದಿಂದ ಮಗನನ್ನು ಎತ್ತಿಕೊಂಡು ಕಲ್ಲುಮುಳ್ಳುಗಳು ಚುಚ್ಚುತ್ತಿರಲು ದಾರಿ ತಿಳಿಯದೆ ಭಯದಿಂದ ಮೆಲ್ಲಮೆಲ್ಲಗೆ ನಡೆಯುತ್ತಾ ತನ್ನಲ್ಲೇ ತಾನು ಹೇಳಿಕೊಂಡಳು."ಇನ್ನು ನನಗೆ ಈ ಜೀವನ ಸಾಕು. ನನ್ನನ್ನು ದೊಡ್ದಹುಲಿಯೊಂದು ತ್ವರೆಯಾಗಿ ತಿಂದುಹಾಕಲಿ. ಈ ಪಾಪಾತ್ಮಳು ದುಷ್ಟಳಾದ ನನ್ನ ಬದುಕಿನಿಂದ ಪ್ರಯೋಜನವೇನು?" ಎಂದೆಲ್ಲ ಯೋಚಿಸುತ್ತಾ ಅವಳು ಸ್ಪೃಹೆ ಕಳೆದುಕೊಂಡು ಮತ್ತೆ ಎದ್ದು ದುಃಖಿಸುತ್ತಾ ಹೋಗುತ್ತಿದ್ದಳು. ಅವಳಿಗೆ ನೀರೂ ಸಿಕ್ಕಲಿಲ್ಲ. ವ್ರಣಗಳಿಂದ ದುಃಖಿತಳಾದ ಆವಳು ಹೆಜ್ಜೆಹೆಜ್ಜೆಗೂ ಹುಲಿ, ಹಾವು, ಸಿಂಹ, ಭೂತಪ್ರೇತಗಳು, ಬ್ರಹ್ಮರಾಕ್ಷಸರನ್ನು ನೋಡಿ ಭಯಪಡುತ್ತಾ ಕಾಲುಗಳಿಗೆ ಪಾದರಕ್ಷೆಗಳೂ ಇಲ್ಲದೆ ಅಳುತ್ತಾ ನಡೆದು ಹೋಗುತ್ತಿದ್ದಳು. ಹೋಗುತ್ತಾ ದಾರಿಯಲ್ಲಿ ಕೆಲವು ಹಸುಗಳು ಕಂಡುಬರಲು ಅವುಗಳ ಕಾವಲುದಾರರನ್ನು, "ಈ ಮಗು ಬಹಳ ಬಾಯಾರಿದ್ದಾನೆ. ನೀರು ಎಲ್ಲಿ ಸಿಕ್ಕುತ್ತದೆ?" ಎಂದು ಕೇಳಿದಳು. ಆ ಗೋಪಾಲರು, "ಹತ್ತಿರದಲ್ಲೇ ಗ್ರಾಮವೊಂದಿದೆ. ಮಂದಿರಗಳು, ಮನೆಗಳು ಕಾಣಬರುತ್ತಿವೆ. ಅಲ್ಲಿ ನಿನಗೆ ಆಹಾರ ನೀರು ದೊರಕುವುದು." ಎಂದು ಹೇಳಿ ಹೋಗುವ ದಾರಿಯನ್ನು ತೋರಿಸಿದರು. ಅವಳು ಮಗನೊಡನೆ ಆ ಗ್ರಾಮಕ್ಕೆ ಹೋಗಿ ಅಲ್ಲಿನ ಕೆಲವು ಹೆಂಗಸರನ್ನು, "ಈ ರಾಷ್ಟ್ರದ ರಾಜನಾರು?" ಎಂದು ಕೇಳಲು, ಅವರು, "ಇಲ್ಲಿನ ರಾಜ ಮಹಾಧನಿಕನಾದ ಒಬ್ಬ ವೈಶ್ಯ. ಪದ್ಮಾಕರನೆಂದು ಅವನ ಹೆಸರು. ಪುತ್ರಸಹಿತಳಾದ ನಿನ್ನನ್ನು ಅವನು ತಪ್ಪದೇ ರಕ್ಷಿಸುತ್ತಾನೆ." ಎಂದು ಹೇಳಿದರು. ಅದೇ ಸಮಯಕ್ಕೆ ಅ ವೈಶ್ಯನ ಮನೆಯಿಂದ ಬಂದ ಹಲವರು ದಾಸಿಯರು ಆ ರಾಣಿಯ ವೃತ್ತಾಂತವನ್ನೆಲ್ಲ ತಿಳಿದು ಆ ವೈಶ್ಯರಾಜ-ರಾಣಿಯರಿಗೆ ಎಲ್ಲವನ್ನೂ ಹೇಳಿದರು. ದಯಾಳುವಾದ ಆ ವೈಶ್ಯ ಅವಳನ್ನು ಕರೆದುಕೊಂಡು ಹೋಗಿ ಸುಖವಾಗಿರಲು ಅನುಕೂಲವಾದ ಮಂದಿರವೊಂದನ್ನು ಅವರಿಗೆ ಕೊಟ್ಟನು.

ಆ ವೈಶ್ಯ ರಾಜ ಅವರಿಗೆ ಅನ್ನ ವಸ್ತ್ರಗಳನ್ನು ಕೊಟ್ಟು ತನ್ನ ತಾಯಿಯನ್ನು ಕಾಪಾಡಿದಂತೆ ಕಾಪಾಡಿದನು. ಅವನು ಮಾಡಿಸಿದ ವೈದ್ಯಚಿಕಿತ್ಸೆಗಳಿಂದಲೂ, ಔಷಧಗಳಿಂದಲೂ ಅವರ ವ್ರಣಗಳು ಎಷ್ಟುಮಾತ್ರವೂ ತಗ್ಗಲಿಲ್ಲ. ಆ ರಾಣಿಗೆ ಅವಳ ವ್ರಣಗಳು ಬಹಳ ಬಾಧೆಯನ್ನುಂಟುಮಾಡುತ್ತಿದ್ದವು. ವ್ರಣಪೀಡಿತನಾದ ಅವಳ ಮಗನು ಒಂದುದಿನ ಸತ್ತುಹೋದನು. ಸತ್ತ ತನ್ನ ಮಗನನ್ನು ಕಂಡು ಅವಳು ಬಹಳ ದುಃಖಿತಳಾದಳು. ವೈಶ್ಯ ಸ್ತ್ರೀಯರು ಅವಳ ಬಳಿಗೆ ಬಂದು ಅವಳನ್ನು ಸಾಂತ್ವನಗೊಳಿಸಿದರು. ಆದರೂ ಆ ರಾಣಿಯಾಗಿದ್ದವಳು ತನ್ನ ಪೂರ್ವಸುಖವನ್ನು ನೆನಸಿಕೊಂಡು, "ತಂದೆ, ಎಲ್ಲಿಗೆ ಹೋಗುತ್ತೀಯೆ? ನೀನು ರಾಜವಂಶಕ್ಕೆ ಪೂರ್ಣಚಂದ್ರನು. ಕುಲನಂದನ, ಇನ್ನು ನಾನೂ ಪ್ರಾಣಗಳನ್ನು ಬಿಡುತ್ತೇನೆ." ಎಂದು ಹೇಳುತ್ತಾ, ಶೋಕಮಗ್ನಳಾದ ಅವಳನ್ನು ಕಂಡ ಜನರೂ ದುಃಖಿಸಿದರು. ಎಲ್ಲ ದುಃಖಗಳಲ್ಲಿ ಪುತ್ರಶೋಕವು ಅತಿದೊಡ್ಡದು. ಅದು ಬದುಕಿರುವ ತಾಯಿತಂದೆಗಳನ್ನು ಭಸ್ಮಮಾಡಿಬಿಡುತ್ತದೆ. ಹೀಗೆ ರಾಣಿ ದುಃಖಿಸುತ್ತಿದ್ದಾಗ ಪೂರ್ವ ಉಪಕಾರವನ್ನು ತಿಳಿದಿದ್ದ ಮಹಾಯೋಗಿ ಋಷಭನು ಅಲ್ಲಿಗೆ ಬಂದನು. ವೈಶ್ಯನು ಅವನನ್ನು ಪೂಜಿಸಿ ಸಂತಸಗೊಳಿಸಿದನು. ಆ ಮುನಿ ವೈಶ್ಯನನ್ನು, " ಬಹಳ ದೊಡ್ಡದಾಗಿ ಅಳುತ್ತಿದ್ದಾಳೆ ಏಕೆ?" ಎಂದು ಕೇಳಿದನು. ಅವನು ಆ ಯೋಗಿಗೆ ಎಲ್ಲವನ್ನೂ ಹೇಳಿದನು. ಯೋಗೀಶ್ವರನು ಆ ರಾಣಿಯನ್ನು ನೋಡಿ, "ಹೇ ರಾಣಿ, ಮೂರ್ಖತ್ವದಿಂದ ಶೋಕಿಸುತ್ತಿದ್ದೀಯೇಕೆ? ಹುಟ್ಟಿದವನಾರು? ಸತ್ತವನಾರು? ಆತ್ಮ ಯಾವ ರೀತಿಯಲ್ಲಿರುತ್ತಾನೆಂದು ಕಾಣಬರುವುದಿಲ್ಲ. ಈ ದೇಹವೇ ಕಾಣಿಸುವುದು. ಪಂಚಭೂತಗಳಿಂದಾದ ಈ ದೇಹ ಕಾರಣದೇಹದೊಡನೆ ಸೇರಿ ಕರ್ಮ ಇರುವವರೆಗೂ ಇಲ್ಲಿರುತ್ತದೆ. ಕರ್ಮ ಮುಗಿದ ನಂತರ, ಪಂಚಭೂತಗಳು ಬಿಟ್ಟು ಹೋದ ಕ್ಷಣವೇ ಈ ದೇಹ ಜಡವಾಗಿಹೋಗುತ್ತದೆ. ಶೋಕಿಸುವುದು ವ್ಯರ್ಥವು. ನಿಜಕರ್ಮ ಗುಣಗಳನ್ನನುಸರಿಸಿ ಏರ್ಪಡುವ ವಾಸನಾಮಯವಾದ ಕಾರಣದೇಹವು ಕಾಲವನ್ನು ಹಿಡಿದು ಭ್ರಮಿಸುತ್ತಿರುತ್ತದೆ. ಪ್ರಕೃತಿಸಿದ್ಧ ಗುಣಗಳು ಸತ್ವ, ರಜಸ್ಸು, ತಮಸ್ಸು ಎನ್ನುವವವು ಮೂರಿವೆ. ಅವುಗಳೇ ಕರ್ಮಸಂಗಕ್ಕೆ ಈ ದೇಹವನ್ನು ಇಲ್ಲಿ ಬಂಧಿಸಿರುವುದು. ಸತ್ವಗುಣದಿಂದ ದೇವತ್ವ, ರಜೋಗುಣದಿಂದ ಮಾನವತ್ವ, ತಮೋಗುಣದಿಂದ ಪಶುಪಕ್ಷಿಜಾತಿ ನಾನಾವಿಧವಾಗಿ ಸಂಭವಿಸುವುದು. (ಮಾನವ) ಗುಣಗಳನ್ನು ಬಿಟ್ಟು ನೈರ್ಗುಣ್ಯ ಬಂದಾಗ ಮುಕ್ತಿ ಹೊಂದುತ್ತಾನೆ. ಬೆಳೆಸಿಕೊಂಡ ಗುಣಗಳಿಂದ ದೇಹಧಾರಿ ಅಂತವನ್ನು ಹೊಂದುತ್ತಾನೆ. ಆಗ ಅವನೇ ನಶ್ವರವಾದ ದೇವ ದಾನವ ಮಾನವ ರಾಕ್ಷಸಾದಿ ಜನ್ಮಗಳನ್ನು ಪಡೆಯುತ್ತಾನೆ. ಈ ಸಂಸಾರದಲ್ಲಿ ನಿಜಕರ್ಮಗಳನ್ನನುಸರಿಸಿ ತಾನು ಆರ್ಜಿಸಿದ ಸುಖವನ್ನಾಗಲೀ ದುಃಖವನ್ನಾಗಲೀ ಅನುಭವಿಸುತ್ತಾನೆ. ಮರ್ತ್ಯರು ಅಲ್ಪಾಯುಗಳು. ಅವರ ಆಯುಷ್ಯಕ್ಕೆ ಸ್ಥಿರವೆಲ್ಲಿದೆ? ಅದರಿಂದಲೇ ಪ್ರಾಜ್ಞನು ಜನ್ಮವಾದಾಗ ಸಂತಸಪಡುವುದಿಲ್ಲ. ಮರಣವು ಪ್ರಾಪ್ತಿಯಾದಾಗ ದುಃಖಿಸುವುದಿಲ್ಲ. ಗರ್ಭದಲ್ಲಿ ಬಿದ್ದ ಕ್ಷಣದಿಂದಲೇ ಮೃತ್ಯುವನ್ನು ಹಿಂದಿಟ್ಟುಕೊಂಡೇ ಇಲ್ಲಿಗೆ ಬರುತ್ತಾನೆ. ಮೃತ್ಯುವು ಬಾಲ್ಯದಲ್ಲಿ, ಯೌವನದಲ್ಲಿ, ಬರಬಹುದು. ವಾರ್ಧಕ್ಯದಲ್ಲಿ ತಪ್ಪದೇ ಬರುವುದು. ಪ್ರಾರಬ್ಧಕರ್ಮಗಳಿರುವವರೆಗೆ ಮಾಯಾಮೋಹದಿಂದ ವ್ಯರ್ಥವಾಗಿ ಪುತ್ರಾದಿ ಸಂಬಂಧಗಳಿಂದ ಇಲ್ಲಿ ಕಟ್ಟುಬೀಳುತ್ತಾನೆ. ಬ್ರಹ್ಮಬರೆಹ ದೇವತೆಗಳೂ ದಾಟಲಾರದ್ದೇ! ಅಮ್ಮಾ, ನೀನೇಕೆ ಶೋಕಿಸುತ್ತಿದ್ದೀಯೆ? ಆತ್ಮನಿಗೆ ಶ್ರೇಯಸ್ಸು ಕೋರಿ ಈಶ್ವರನನ್ನು ಶರಣುಹೋಗು. ನೀನು ಯಾರಿಗೆ ತಾಯಿ? ಯಾರಿಗೆ ಹೆಂಡತಿ? ನಿನ್ನ ಬಂಧುಗಳು ಯಾರು?" ಎಂದು ಬೋಧಿಸಿದ ಯೋಗೀಶ್ವರನ ಹಿತವಾಕ್ಯಗಳನ್ನು ಕೇಳಿ ಆ ರಾಜಪತ್ನಿ ಮುನಿಗೆ ನಮಸ್ಕರಿಸಿ ಹೇಳಿದಳು.

"ಹೇ ಪ್ರಭು, ರಾಜ್ಯಭ್ರಷ್ಟಳಾಗಿ ದೈವಯೋಗದಿಂದ ಅಡವಿಯ ಪಾಲಾದೆ. ತಂದೆತಾಯಿಗಳು ಬಂಧುಗಳು ಎಲ್ಲರೂ ನನ್ನ ಕೈಬಿಟ್ಟರು. ಪ್ರಾಣಪ್ರಿಯನಾದ ನನ್ನ ಮಗನಿಗೆ ಈ ಗತಿ ಬಂತು. ನನಗೂ ಮೃತ್ಯುವೇ ಬೇಕು." ಎನ್ನುತ್ತಾ ಆ ಮುನಿಯ ಪಾದಗಳ ಮೇಲೆ ಬಿದ್ದಳು. ಆ ಯೋಗಿ ದಯಾನ್ವಿತನಾಗಿ ಹಿಂದೆ ಅವಳು ಮಾಡಿದ ಉಪಕಾರವನ್ನು ನೆನಪಿಗೆ ತಂದುಕೊಂಡು ಅವಳಲ್ಲಿ ಪ್ರಸನ್ನನಾಗಿ, ಅವಳ ಮಗನಿಗೆ ತಲೆಯಲ್ಲಿ ಭಸ್ಮವನ್ನಿಟ್ಟು ಬಾಯಲ್ಲಿ ಭಸ್ಮ ಹಾಕಿ ಮಂತ್ರಿಸಿದನು. ತಕ್ಷಣವೇ ಆ ಬಾಲಕನು ಎದ್ದು ಕುಳಿತನು. ಅವನಿಗೂ ಅವನ ತಾಯಿಗೂ ಅದುವರೆಗೆ ಇದ್ದ ವ್ರಣಗಳೆಲ್ಲ ನಾಶವಾದವು. ಪುತ್ರಸಹಿತಳಾಗಿ ಆ ತಾಯಿ ಯೋಗಿರಾಜನಿಗೆ ನಮಸ್ಕರಿಸಿದಳು. ಋಷಭಯೋಗಿ ಅವರಿಗೆ ಸ್ವಲ್ಪ ಭಸ್ಮವನ್ನು ಕೊಟ್ಟನು. ಅದರಿಂದ ಅವರಿಬ್ಬರ ಶರೀರದಲ್ಲಿ ಸುವರ್ಣ ಕಾಂತಿಯುಂಟಾಯಿತು. ಅವರಿಬ್ಬರೂ ದೇವತೆಗಳಂತೆ ಪ್ರಕಾಶಿಸಿದರು. ಅವರ ದೇಹಗಳಿಗೆ ಎಂದಿಗೂ ಮುದಿತನ ಬರದೆ ದಾರ್ಢ್ಯವಾಗಿರುವಂತೆ ಆ ಮುನಿ ಅವರಿಗೆ ವರವನ್ನು ಪ್ರಸಾದಿಸಿದನು. "ಭದ್ರಾಯು ಎಂಬ ಹೆಸರಿನಿಂದ ಆ ಬಾಲಕ ಚಿರಕಾಲ ರಾಜ್ಯವನ್ನು ಪರಿಪಾಲಿಸುತ್ತಾನೆ." ಎಂದು ಪ್ರಸನ್ನನಾದ ಆ ಮುನಿ ವರವನ್ನು ಕೊಟ್ಟು ಹೊರಟು ಹೋದನು.

ಆದ್ದರಿಂದ ಅಯ್ಯಾ ರಾಜ ಈ ನಿನ್ನ ವ್ರಣವು ನಿನಗೆ ಸಾಧುಗಳಿಂದಲೇ ನಾಶವಾಗುವುದು." ಎಂದು ಹೇಳಿದ ವಿಪ್ರ ವಾಕ್ಯವನ್ನು ಕೇಳಿ, ಆ ಮ್ಲೇಚ್ಛ ರಾಜ, "ಅಯ್ಯಾ ದ್ವಿಜೋತ್ತಮ, ಅಂತಹ ಸತ್ಪುರುಷರು ಎಲ್ಲಿದ್ದಾರೆ ಹೇಳು. ಅಂತಹವರ ದರ್ಶನಕ್ಕೆ ನಾನೀಗಲೇ ಹೊರಡುತ್ತೇನೆ." ಎಂದನು. ಅದಕ್ಕೆ ಆ ಬ್ರಾಹ್ಮಣ, "ಅಯ್ಯಾ ರಾಜ, ಗಂಧರ್ವಪಟ್ಟಣದಲ್ಲಿ ಭೀಮಾತೀರದಲ್ಲಿ ಪರಮಪುರುಷನಾದ ಭಗವಂತನಿದ್ದಾನೆ. ಅವನ ದರ್ಶನಮಾತ್ರದಿಂದಲೇ ನಿನಗೆ ಆರೋಗ್ಯವು ಸಿದ್ಧಿಸುವುದು." ಎಂದು ಹೇಳಿದನು.

ಶ್ರೀಗುರುವಿನ ದರ್ಶನಕ್ಕೆಂದು ಅ ರಾಜ ತಕ್ಷಣವೇ ಹೊರಟನು. ಆ ಮ್ಲೇಚ್ಛನು ಚತುರಂಗಬಲ ಹಿಂದೆ ಬರುತ್ತಿರಲು ಗಂಧರ್ವನಗರವನ್ನು ಸೇರಿದನು. ಆ ಗ್ರಾಮವನ್ನು ಸೇರಿ, ಅಲ್ಲಿನ ಜನರನ್ನು ತಾಪಸಿ ಎಲ್ಲಿದ್ದಾರೆ ಎಂದು ವಿಚಾರಿಸಿದನು. ಆ ಪುರಜನರು ಬಹಳ ಭಯಗೊಂಡು, "ಈ ಮ್ಲೇಚ್ಛನು ಶ್ರೀಗುರುವು ಎಲ್ಲಿದ್ದಾರೆ ಎಂದು ಕೇಳುತ್ತಿದ್ದಾನೆ. ಇನ್ನುಮುಂದೆ ಏನು ಕಾದಿದೆಯೋ?" ಎಂದು ತಮ್ಮಲ್ಲಿ ತಾವೇ ಚರ್ಚಿಸಿಕೊಳ್ಳುತ್ತಿದ್ದರು. ಆ ರಾಜ ಅವರಿಂದ ಏನೂ ಉತ್ತರ ಬರಲಿಲ್ಲವಾದದ್ದರಿಂದ, ‘ಆ ಯೋಗಿಶ್ವರನ ದರ್ಶನಕ್ಕೆಂದು ನಾನು ಬಂದಿದ್ದೇನೆ. ಆ ತಾಪಸಿ ಎಲ್ಲಿದ್ದಾರೆ?’ ಎಂದು ಮತ್ತೆ ಅವರನ್ನು ಕೇಳಿದನು. ಅದಕ್ಕೆ ಆ ಜನರು, "ಜಗದ್ಗುರುವು ಅನುಷ್ಠಾನಕ್ಕೆಂದು ಸಂಗಮಕ್ಕೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ಮಠಕ್ಕೆ ಹಿಂತಿರುಗುತ್ತಾರೆ." ಎಂದು ಹೇಳಿದರು. ಅವನು ನಂತರದಲ್ಲಿ ಶ್ರೀಗುರುವನ್ನು ದೂರದಿಂದ ನೋಡಿ ಪಲ್ಲಕ್ಕಿಯಿಂದ ಇಳಿದು ಪಾದಚಾರಿಯಾಗಿ ನಡೆದು ಹೋಗಿ ಅವರನ್ನು ಸಮೀಪಿಸಿ ಭಕ್ತಿಯಿಂದ ನಮಸ್ಕರಿಸಿ ದೂರವಾಗಿ ನಿಂತನು. ಶ್ರೀಗುರುವು ಅವನನ್ನು ನೋಡಿ, "ಅರೇ, ರಜಕ, ಎಲ್ಲಿದ್ದೀಯೆ? ಬಹಳಕಾಲದಮೇಲೆ ದರ್ಶನಕ್ಕೆಂದು ಇಲ್ಲಿಗೆ ಬಂದಿದ್ದೀಯೆ?" ಎಂದು ಕೇಳಿದರು. ಅವರ ಮಾತುಗಳನ್ನು ಕೇಳಿದ ಕ್ಷಣವೇ ಆ ಮ್ಲೇಚ್ಛನಿಗೆ ಜ್ಞಾನೋದಯವಾಗಿ, ಅವನ ಪೂರ್ವ ಜನ್ಮದ ಜ್ಞಾಪಕ ಬಂದು ಶ್ರೀಗುರುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕೈಜೋಡಿಸಿ ಎದುರಿಗೆ ನಿಂತು ಆನಂದದಿಂದ ಸ್ತುತಿಸಿದನು.

"ಸ್ವಾಮಿ, ನನ್ನನೇತಕ್ಕೆ ಉಪೇಕ್ಷಿಸಿದಿರಿ? ನಾನು ವಿದೇಶದಲ್ಲಿದ್ದು ನಿಮ್ಮ ಪಾದಗಳಿಗಳಿಗೆ ಪರಾಙ್ಮುಖನಾಗಿದ್ದೆ. ನಾನು ಸಂಸಾರಸಾಗರವೆಂಬ ಅಗಾಧದಲ್ಲಿ ನಿಮಗ್ನನಾಗಿ ಮಾಯಾಜಾಲದಿಂದ ಮುಚ್ಚಿಹೋದವನಾಗಿ ನಿಮ್ಮ ಪಾದಸ್ಮರಣೆ ನನಗೆ ದುರ್ಲಭವಾಯಿತು. ಸ್ವಾಮಿ, ಅಜ್ಞಾನವೆನ್ನುವ ಸಮುದ್ರದಲ್ಲಿ ಏಕೆ ನನ್ನನ್ನು ಹಾಕಿದಿರಿ? ಹೇ ಪ್ರಭು, ಈಗ ನನ್ನನ್ನುದ್ಧರಿಸಿ. ಇನ್ನುಮೇಲೆ ನಿಮ್ಮ ಪಾದದಾಸನಾಗಿರುತ್ತೇನೆ. ದುಃಖದಾಯಕವಾದ ಜನ್ಮಗಳು ನನಗಿನ್ನು ಸಾಕು." ಎಂದು ಆ ಮ್ಲೇಚ್ಛರಾಜ ಅನೇಕವಿಧಗಳಲ್ಲಿ ಶ್ರೀಗುರುವನ್ನು ಸ್ತುತಿಸಿ ನಮಸ್ಕರಿಸಿದನು.

ನಂತರ ಶ್ರೀಗುರುವು ತನ್ನ ಭಕ್ತನಲ್ಲಿ ಪ್ರಸನ್ನನಾಗಿ, "ಅಯ್ಯಾ, ನಿನಗೆ ಕಾಮಸಿದ್ಧಿಯಾಗುವುದು." ಎಂದು ಹೇಳಿದರು. ರಾಜ, "ಹೇ ಶ್ರೀಗುರು, ನನ್ನ ಶರೀರದಲ್ಲಿ ವ್ರಣವೊಂದು ಬಾಧಿಸುತ್ತಿದೆ. ಕೃಪಾದೃಷ್ಟಿಯಿಂದ ಅದನ್ನು ನೋಡು." ಎಂದು ಕೇಳಿಕೊಂಡನು. ಹಿಂದೆ ಕಾಣಿಸಿಕೊಂಡಿದ್ದ ವ್ರಣವು ತನ್ನ ಶರೀರದಲ್ಲಿ ಎಲ್ಲೂ ಕಾಣದೇ ಅವನು ವಿಸ್ಮಿತನಾಗಿ, "ಸ್ವಾಮಿ, ನಿಮ್ಮ ಪ್ರಸಾದದಿಂದ ಸಮೃದ್ಧವಾದ ರಾಜ್ಯವನ್ನು ಅನುಭವಿಸಿದೆ. ಪುತ್ರರು, ಪೌತ್ರರು ಇದ್ದಾರೆ. ನನ್ನ ಮನಸ್ಸು ತೃಪ್ತಿಗೊಂಡಿದೆ. ಒಂದೇ ಒಂದು ಕೋರಿಕೆ ಮಿಕ್ಕಿದೆ. ನನ್ನ ಐಶ್ವರ್ಯವನ್ನು ಒಂದು ಸಲ ನೀವು ನೋಡಬೇಕು. ಹೇ ಭಕ್ತವತ್ಸಲ, ಈ ನನ್ನ ಕೋರಿಕೆಯನ್ನು ಪೂರ್ತಿ ಮಾಡಬೇಕು. ಸಂಸಾರಭಾರವನ್ನು ಬಿಟ್ಟು ನಿಮ್ಮ ಪಾದಗಳಲ್ಲಿ ಸೇರಿಹೋಗುತ್ತೇನೆ." ಪ್ರಾರ್ಥಿಸಿದನು. ಶ್ರೀಗುರುವು ಅದಕ್ಕೆ, "ಅಯ್ಯಾ ರಜಕ, ನಾನು ಯತಿ, ಸನ್ಯಾಸಿಯಾಗಿದ್ದುಕೊಂಡು ನಿನ್ನ ಮ್ಲೇಚ್ಛಪುರಕ್ಕೆ ಹೇಗೆ ಬರಬಲ್ಲೆ? ಅಲ್ಲಿ ಮಹಾಪಾಪಗಳಿವೆಯಲ್ಲವೇ? ನೀವು ಯವನರು. ಜೀವಹಿಂಸೆ ಮಾಡುವವರು. ನಿಮ್ಮ ಪುರದಲ್ಲಿ ಗೋಹತ್ಯೆ ಮಾಡುತ್ತಾರೆ." ಎಂದು ಹೇಳಿ, ಮತ್ತೆ, "ನೀನು ಎಂದಿಗೂ ಹತ್ಯೆ ಮಾಡಬೇಡ." ಎಂದು ಹೇಳಿದರು. ಆ ಮ್ಲೇಚ್ಛರಾಜ ಅವರ ಮಾತನ್ನು ಅಂಗೀಕರಿಸಿ, "ಶ್ರೀಗುರು, ನಿನ್ನ ದೂರದೃಷ್ಟಿಯಿಂದ ನೋಡು. ನಾನು ನಿಮ್ಮಸೇವಕನೇ! ನನ್ನ ಜಾತಿ ಮಾತ್ರ ಗರ್ವಿತವಾದದ್ದು. ಹೇ ಪ್ರಭು, ನನ್ನ ಪುತ್ರಾದಿಗಳನ್ನು ನಿಮಗೆ ತೋರಿಸಿ ಆ ನಂತರ ನಿಮ್ಮ ದಾಸನಾಗುತ್ತೇನೆ." ಎಂದು ಪ್ರಾರ್ಥಿಸುತ್ತಾ, ಪ್ರಣಾಮ ಮಾಡಿದನು.

ಆ ನಂತರ ಶ್ರೀಗುರುವು, " ನಾವು ಇಲ್ಲಿದ್ದೇವೆಂದು ಎಲ್ಲರಿಗೂ ತಿಳಿದುಹೋಯಿತು. ನೀಚಜಾತಿಯವರೂ ಬರುತ್ತಿದ್ದಾರೆ. ಇನ್ನು ಮುಂದೆ ಕಲಿಯುಗದಲ್ಲಿ ಇರಬಾರದು. ಆದ್ದರಿಂದ ಗೌತಮಿ ತೀರಕ್ಕೆ ಹೋಗಿ ಗುರುವು ಸಿಂಹರಾಶಿಯಲ್ಲಿ ಇರಲು ಕಲಿಯುಗದಲ್ಲಿ ಅದೃಶ್ಯನಾಗುತ್ತೇನೆ." ಎಂದು ನಿಶ್ಚಯಿಸಿ, ಸಂಗಮದಿಂದ ಹೊರಟರು. ಆ ಮ್ಲೇಚ್ಛರಾಜನು ಶ್ರೀಗುರುವನ್ನು ಪಲ್ಲಕ್ಕಿಯಲ್ಲಿ ಕೂಡಿಸಿ, ಅವರ ಪಾದುಕೆಗಳನ್ನು ಹೊತ್ತು ಅವರನ್ನು ಅನುಸರಿಸಿ ನಡೆಯುತ್ತಾ ಹೊರಟನು. ಶ್ರೀಗುರುವು ರಾಜನನ್ನು ನೋಡಿ, "ನೀನು ಕುದುರೆಯನ್ನೇರು. ಇಲ್ಲದಿದ್ದರೆ ಜನರು ನಿನ್ನನ್ನು ನಿಂದಿಸುತ್ತಾರೆ. ನಿನ್ನನ್ನು ರಾಷ್ಟ್ರಾಧಿಪನೆನ್ನುತ್ತಾರೆಯಲ್ಲವೇ? ದ್ವಿಜನಿಗೆ ದಾಸ್ಯ ಮಾಡುವುದರಿಂದ ನಿನ್ನನ್ನು ಜಾತಿದೂಷಣೆ ಮಾಡುತ್ತಾ ಪರಿಹಾಸಮಾಡುತ್ತಾರೆ." ಎಂದು ಆಜ್ಞಾಪಿಸಲು, ಆ ರಾಜ, "ಹೇ ಸ್ವಾಮಿ, ರಾಜನಾರು? ನಿಮ್ಮ ಸೇವಕನಾದ ರಜಕನು ನಾನು. ನಿಮ್ಮ ದರ್ಶನದಿಂದ ಶುದ್ಧನಾದೆ. ಸಮಸ್ತ ಜನರಿಗೂ ರಾಜರು ನೀವೇ! ನನಗೆ ಮತ್ತೆ ದರ್ಶನ ಕೊಟ್ಟಿರಿ. ನನ್ನ ಮನೋರಥಗಳು ಪೂರಯಿಸಲ್ಪಟ್ಟವು." ಎಂದು ಹೇಳಿ, ತನ್ನ ತುರಂಗಬಲ, ಆನೆಗಳು, ಸುಶಿಕ್ಷಿತವಾದ ಚತುರಂಗಬಲವನ್ನು ತೋರಿಸಿ ಸಂತಸಪಟ್ಟನು.

ಆ ನಂತರ ಶ್ರೀಗುರುವು ರಾಜನಿಗೆ, "ಮಗು, ನಾವು ಬಹಳ ದೂರ ಹೋಗಬೇಕಾಗಿದೆಯಲ್ಲವೇ? ನನ್ನ ಆಜ್ಞೆಯನ್ನು ಶಿರಸಾವಹಿಸಿ ನೀನು ಕುದುರೆಯನ್ನೇರು." ಎನ್ನಲು, ಆ ರಾಜ, ಶಿಷ್ಯರಿಗೂ ವಾಹನಗಳನ್ನು ಕೊಟ್ಟು ತಾನು ಕುದುರೆಯನ್ನೇರಿದನು. ಶ್ರೀಗುರುವು ಆ ಯವನರಾಜನನ್ನು ಕರೆದು, "ಅಯ್ಯಾ ರಜಕ, ನೀನು ಅಧಮಜಾತಿಯವನಾದರೂ ಭಕ್ತಿಯುಳ್ಳವನು. ನಿನ್ನಲ್ಲಿ ನನಗೆ ಪ್ರೀತಿಯುಂಟಾಯಿತು. ನಾನು ತಾಪಸಿ, ಸನ್ಯಾಸಿ. ತ್ರಿಕಾಲದಲ್ಲೂ ನಾನು ಉಪಾಸನೆ ಮಾಡಬೇಕು. ನಿನ್ನ ಜೊತೆಯಲ್ಲಿದ್ದರೆ ಉಪಾಸನೆ ಆಗುವುದಿಲ್ಲ. ಆದ್ದರಿಂದ ನಾನು ನಿನಗಿಂತ ಮುಂಚೆ ಹೋಗುತ್ತೇನೆ. ನೀನು ನಿಧಾನವಾಗಿ ಯಥಾಸುಖವಾಗಿ ಬರಬಹುದು. ಪಾಪವಿನಾಶತೀರ್ಥದಲ್ಲಿ ನನ್ನ ದರ್ಶನ ಆಗುವುದು." ಎಂದು ರಾಜನಿಗೆ ಆಜ್ಞಾಪಿಸಿ, ತನ್ನ ಶಿಷ್ಯರೊಡನೆ ಯೋಗಮಾರ್ಗದಲ್ಲಿ ಅದೃಶ್ಯರಾಗಿ ವೈಢೂರ್ಯನಗರವನ್ನು ಸೇರಿದರು.

ಶ್ರೀಗುರುವು ಶಿಷ್ಯರೊಡನೆ ಪಾಪವಿನಾಶತೀರ್ಥದಲ್ಲಿ ಅನುಷ್ಠಾನಕ್ಕೆಂದು ನಿಂತರು. ಜನರು ಅಲ್ಲಿ ಬಂದು ಸೇರಿದರು. ಅಲ್ಲಿ ಸಾಯಂದೇವನ ಮಗನಾದ ನಾಗನಾಥನು ಬಂದು ಶ್ರೀಗುರುವನ್ನು ಶಿಷ್ಯರಸಹಿತ ತನ್ನ ಮನೆಗೆ ಕರೆದುಕೊಂಡು ಹೋಗಿ ಅವರನ್ನು ಅರ್ಚಿಸಿದನು. ಷೋಡಶೋಪಚಾರಗಳನ್ನು ಮಾಡಿ ಶ್ರೀಗುರುವಿಗೆ ಭೋಜನವನ್ನಿತ್ತನು. ಅಷ್ಟರಲ್ಲಿ ಸಾಯಂಕಾಲವಾಯಿತು. ಶ್ರೀಗುರುವು ನಾಗನಾಥನಿಗೆ, "ಅಯ್ಯಾ, ವಿಪ್ರವರ, ಪಾಪನಾಶಿನಿ ತೀರ್ಥಕ್ಕೆ ಬಾ ಎಂದು ಮ್ಲೇಚ್ಛನಿಗೆ ಹೇಳಿದ್ದೆನು. ಇಲ್ಲೇ ಇದ್ದರೆ ಬ್ರಾಹ್ಮಣರಿಗೆ ಉಪದ್ರವವಾಗಬಹುದೇನೋ ಎಂಬ ಆತಂಕದಿಂದ ಇಲ್ಲಿನಿಂದ ಹೊರಡುತ್ತಿದ್ದೇನೆ. ನಾನು ಇಲ್ಲಿಯೇ ಇದ್ದರೆ ಮ್ಲೇಚ್ಛರು ನಿನ್ನ ಮನೆಗೇ ಬರುತ್ತಾರೆ." ಎಂದು ಹೇಳಿ, ಶಿಷ್ಯರೊಡನೆ ಪಾಪನಾಶನತೀರ್ಥಕ್ಕೆ ಹೋಗಿ ಅಲ್ಲಿ ಆತ್ಮಾನುಸಂಧಾನ ಮಾಡುತ್ತಾ ಕುಳಿತರು.

ಮ್ಲೇಚ್ಛರಾಜನು ಶ್ರೀಗುರುವು ಕಾಣಿಸದೇ ಹೋಗಲು ಅವರನ್ನು ಹುಡುಕುತ್ತಾ ಚಿಂತಾವಿಷ್ಟನಾಗಿ, "ಅಯ್ಯೋ, ಶ್ರೀಗುರುವು ನನ್ನನ್ನು ಏಕೆ ಉಪೇಕ್ಷಿಸಿ ಹೋದರು? ನಾನು ಮಾಡಿದ ಅಪರಾಧವೇನು?" ಎಂದುಕೊಂಡು, ಮತ್ತೆ ಅವರು ಹೇಳಿದ್ದನ್ನು ಜ್ಞಾಪಕಕ್ಕೆ ತಂದುಕೊಂಡು, "ಪಾಪನಾಶನ ತೀರ್ಥದಲ್ಲಿ ದರ್ಶನ ಕೊಡುತ್ತಾರೆಯಲ್ಲವೇ? ಗುರುಮಹಿಮೆಯನ್ನು ತಿಳಿದವರಾರು? ಅವರ ಮಹಿಮೆಯನ್ನು ಸಾಂತವಾಗಿ ಬಲ್ಲವರಾರು? ಅವರು ಅಲ್ಲಿಂದಲ್ಕೂ ಮುಂದೆ ಹೋಗಬಹುದು." ಎಂದುಕೊಂಡು, ಆ ರಾಜ ದಿವ್ಯವಾದ ಕುದುರೆಯೊಂದನ್ನು ಹತ್ತಿ ದಿನಕ್ಕೆ ನಲವತ್ತನಾಲ್ಕು ಕ್ರೋಶಗಳಷ್ಟು ದೂರ ಪ್ರಯಾಣಮಾಡುತ್ತಾ, ಪಾಪನಾಶನತೀರ್ಥವನ್ನು ಸೇರಿ ಶ್ರೀಗುರುವನ್ನು ದರ್ಶಿಸಿದನು. ಆ ಮ್ಲೇಚ್ಛರಾಜ ಭಕ್ತಿಯಿಂದ ಶ್ರೀಗುರುವನ್ನು ತನ್ನ ಪುರವನ್ನು ಪಾವನಮಾಡಲು ಕೇಳಿಕೊಂಡನು. ಶ್ರೀಗುರುವು ಅವನ ಪ್ರಾರ್ಥನೆಯನ್ನು ಅಂಗೀಕರಿಸಲು, ಆ ರಾಜ ಮುತ್ತುರತ್ನಗಳಿಂದ ಅಲಂಕರಿಸಿದ, ದಾರಿಯಲ್ಲಿ ಪತಾಕೆಗಳು ಹಾರಾಡುತ್ತಿರುವ ತನ್ನ ಪಟ್ಟಣಕ್ಕೆ, ಶ್ರೀಗುರುವನ್ನು ಒಂದು ಪಲ್ಲಕ್ಕಿಯಲ್ಲಿ ಕೂಡಿಸಿ, ತಾನು ಪಾದಚಾರಿಯಾಗಿ, ರತ್ನಗಳಿಂದ ಶ್ರೀಗುರುವಿಗೆ ನೀರಾಜನವನ್ನು ಕೊಟ್ಟು, ಪಟ್ಟಣದೊಳಕ್ಕೆ ಕರೆದುಕೊಂಡು ಹೋದನು. ಅದನ್ನು ನೋಡಿದ ಮ್ಲೇಚ್ಛರೆಲ್ಲರೂ ಆಶ್ಚರ್ಯಪಟ್ಟರು.ಅವರು, "ಈ ರಾಜ ಬ್ರಾಹ್ಮಣನನ್ನು ಪೂಜಿಸುತ್ತಿದ್ದಾನೆ. ಎಂತಹ ಅನಾಚಾರ! ಸ್ವಧರ್ಮವನ್ನು ಬಿಟ್ಟುಬಿಟ್ಟಿದ್ದಾನೆ. ಇವನು ಧರ್ಮಭ್ರಷ್ಟನು." ಎಂದುಕೊಂಡರು. ಬ್ರಾಹ್ಮಣರು, "ಈ ರಾಜ ಪುಣ್ಯವಂತನು. ವಿಪ್ರರಿಗೆ ಸೇವಕನಾದನು. ಆದ್ದರಿಂದ ದೇಶಕ್ಕೆ ಒಳ್ಳೆಯದಾಗುವುದು." ಎಂದುಕೊಂಡರು. ಜನರೆಲ್ಲ ಭಕ್ತಿಯಿಂದ ಶ್ರೀಗುರುವಿಗೆ ನಮಸ್ಕಾರ ಮಾಡಿದರು. "ಈ ಮಹಾನುಭಾವ ಮನುಷ್ಯನಲ್ಲ. ದೇವಶ್ರೇಷ್ಠನಾಗಿರಬೇಕು. ಅದರಿಂದಲೇ ನಮ್ಮ ರಾಜ ಈ ಶ್ರೀಗುರುವನ್ನು ಸೇವಿಸುತ್ತಿದ್ದಾನೆ. ಇದು ಕಲಿಯುಗದಲ್ಲೊಂದು ವಿಚಿತ್ರ." ಎಂದು ಕೆಲವರು ಹೇಳಿದರು. ವಂದಿಮಾಗಧರು ಸ್ತೋತ್ರಪಾಠಗಳನ್ನು ಹೇಳುತ್ತಿರಲು, ವಾದ್ಯ ಘೋಷಗಳ ನಡುವೆ, ಮಾರ್ಗದಲ್ಲಿ ದಿವ್ಯ ವಸ್ತ್ರಗಳನ್ನು ಹರಡಿ, ರತ್ನಗಳನ್ನು ಚೆಲ್ಲುತ್ತಾ, ಶ್ರೀಗುರುವನ್ನು ಪುರಪ್ರವೇಶಮಾಡಿಸಿ, ಮೋಕ್ಷಕಾಮಿಯಾದ ಮ್ಲೇಚ್ಛರಾಜ ಅವರನ್ನು ಅಂತಃಪುರಕ್ಕೆ ಕರೆತಂದನು. ರತ್ನಗಳಿಂದ ಅಲಂಕೃತವಾದ ಸಿಂಹಾಸನದಲ್ಲಿ ಆರ್ತ ಬಂಧುವಾದ ಶ್ರೀಗುರುವನ್ನು ಕೂಡಿಸಿ ರಾಜನು ನಮಸ್ಕರಿಸಿದನು. ನಾಲ್ವರು ಶಿಷ್ಯರೊಡನೆ ಶ್ರೀಗುರುವನ್ನು ಸಿಂಹಾಸನದಲ್ಲಿ ಸುಖವಾಗಿ ಕೂಡಿಸಿ ತಾನು ಅವರಿಗೆ ಚಾಮರದಿಂದ ಗಾಳಿಹಾಕುತ್ತಾ ನಿಂತನು. ಅವನ ಭಾರ್ಯೆಯರು ಶ್ರೀಗುರುವಿಗೆ ಬಗ್ಗಿ ನಮಸ್ಕಾರ ಮಾಡಿದರು. ರಾಜ ಶ್ರೀಗುರುವಿಗೆ, "ಸ್ವಾಮಿ ನಿಮ್ಮ ಬರುವಿಕೆಯಿಂದ ನಾನು ಕೃತಾರ್ಥನಾದೆ. ವೇದಶಾಸ್ತ್ರಗಳು ನನ್ನನ್ನೂ, ನನ್ನ ಜಾತಿಯನ್ನೂ ನಿಂದಿಸುತ್ತಿದ್ದರೂ ನಿಮ್ಮ ಅನುಗ್ರಹದಿಂದ ನಾನು ಧನ್ಯನಾದೆ." ಎಂದು ಬಿನ್ನವಿಸಿಕೊಂಡನು. ಶ್ರೀಗುರುವು ರಾಜನ ಕುಶಲವನ್ನು ವಿಚಾರಿಸಿ, "ಮಗು, ನಿನ್ನ ಮನಸ್ಸು ವಿಷಯವಾಸನೆಗಳಲ್ಲಿ ತೃಪ್ತಿಹೊಂದಿದೆಯೋ ಇಲ್ಲವೋ? ನಿನಗಿನ್ನೇನಾದರೂ ಕೋರಿಕೆಗಳಿವೆಯೇ? ಭಯವಿಲ್ಲದೆ ಹೇಳು." ಎಂದು ಕೇಳಲು, ಆ ರಾಜ, "ಪ್ರಭು, ಬಹಳ ಕಾಲ ಈ ಮಹಾಸಾಮ್ರಾಜ್ಯವನ್ನು ಅನುಭವಿಸಿದೆ. ಅದರಿಂದ ನನಗೆ ಸಂತೋಷ ಬರಲಿಲ್ಲ. ಸ್ವಾಮಿ, ನಿಮ್ಮ ಪಾದಸೇವೆಗೆ ಅಂಗೀಕಾರ ಕೊಡಿ. ಈ ಜನ್ಮದಲ್ಲಿ ಅದೇ ನನ್ನ ಕೋರಿಕೆ. ಮತ್ತಾವ ಕೋರಿಕೆಯೂ ಇಲ್ಲ." ಎಂದು ಹೇಳಿದನು. ಅದಕ್ಕೆ ಶ್ರೀಗುರುವು, "ಅಯ್ಯಾ, ನಿನಗೆ ಶ್ರೀಪರ್ವತದಲ್ಲಿ ನನ್ನ ದರ್ಶನವು ಲಭಿಸುವುದು. ಈ ರಾಜ್ಯಭಾರವನ್ನು ನಿನ್ನ ಮಗನಿಗೆ ಒಪ್ಪಿಸಿ ಶ್ರೀಶೈಲಕ್ಕೆ ತ್ವರೆಯಾಗಿ ಹೋಗು." ಎಂದು ಹೇಳಿ ಅಲ್ಲಿಂದ ಶ್ರೀಗುರುವು ಹೊರಟರು.

ಅವರ ಅಗಲುವಿಕೆಯನ್ನು ತಾಳಲಾರದ ಆ ಭಕ್ತ, "ಹೇ ಭಗವನ್, ನಿನ್ನ ಸ್ಮರಣೆ ನನ್ನಲ್ಲಿ ಸತತವಾಗಿ ಇರುವಹಾಗೆ ನನಗೆ ಜ್ಞಾನವನ್ನು ಅನುಗ್ರಹಿಸು." ಎಂದು ಶ್ರೀಗುರುವನ್ನು ಬೇಡಿಕೊಂಡನು. ಕೃಪಾನಿಧಿಯಾದ ಶ್ರೀಗುರುವು ಅವನನ್ನು ಸಮಾಧಾನಗೊಳಿಸಿ ತನ್ನ ಶಿಷ್ಯರೊಡನೆ ಗೋದಾವರಿ ತೀರವನ್ನು ಸೇರಿದರು. ಆ ನದಿಯನ್ನು ಪವಿತ್ರಮಾಡುವಂತೆ ಅಲ್ಲಿನ ಶೀತಲಜಲದಲ್ಲಿ ಸ್ನಾನವನ್ನಾಚರಿಸಿ, ಶ್ರೀಗುರುವು ಶಿಷ್ಯಸಹಿತರಾಗಿ ಅಮರಜಾಭೀಮಾನದಿಗಳ ಸಂಗಮವನ್ನು ಸೇರಿದರು. ಶ್ರೀಗುರು ಮಹಿಮೆ ಜಗತ್ತಿನಲ್ಲಿ ಪರಿಮಿತಿಯಿಲ್ಲದ್ದು ಅಲ್ಲವೇ!

ಅಲ್ಲಿ ಶ್ರೀಗುರುವನ್ನು ದರ್ಶನಮಾಡಿಕೊಂಡು ಜನರು ತಮ್ಮ ಪ್ರಾಣಗಳು ಮತ್ತೆ ಬಂದಂತೆ ಭಾವಿಸುತ್ತಾ ಪ್ರಣಾಮ ಮಾಡಿದರು. ಅಲ್ಲಿನ ದ್ವಿಜರು ಅವರನ್ನು ಪುರದೊಳಕ್ಕೆ ಕರೆದುಕೊಂಡುಹೋಗಬೇಕು ಎಂದುಕೊಂಡರು. ಆಗ ಶ್ರೀಗುರುವು ‘ಈಗಾಗಲೇ ಪ್ರಖ್ಯಾತಿ ಬಹಳವಾಯಿತು. ಆದ್ದರಿಂದ ನಾನು ಇಲ್ಲೇ ಅಂತರ್ಹಿತನಾಗಿರುತ್ತೇನೆ’ ಎಂದು ಯೋಚಿಸಿ, ಆ ದ್ವಿಜರಿಗೆ, "ಶ್ರೀಶೈಲಯಾತ್ರೆಗೆಂದು ನಾನು ಹೋದರೂ ಈ ಶ್ರೇಷ್ಠವಾದ ಗಂಧರ್ವಪುರದಲ್ಲಿ ಗುಪ್ತರೂಪದಲ್ಲಿ ಭಕ್ತರ ಹಿತಕ್ಕಾಗಿ ಇರುತ್ತೇನೆ. ಭಕ್ತರಿಗೆ ಇಲ್ಲಿಯೇ ಸಾಕ್ಷಾತ್ಕಾರ ಕೊಡುತ್ತಿರುತ್ತೇನೆ. ಈ ಗಂಧರ್ವ ನಗರವು ಅತಿಶ್ರೇಷ್ಠವು. ನನಗೆ ಬಹಳ ಪ್ರಿಯವಾದದ್ದು. ನನ್ನನ್ನು ಭಜಿಸುವ ಭಕ್ತರಿಗೆ, ನನ್ನ ಪಾದಗಳನ್ನು ಆಶ್ರಯಿಸುವವರಿಗೆ, ಅನ್ಯ ಕಾಮನೆಗಳಿಲ್ಲದವರನ್ನು ಉದ್ಧರಿಸಲು, ಶಿಷ್ಟರ ಇಷ್ಟಗಳನ್ನು ಪೂರಯಿಸಲು, ಕಲಿಕಾಲದೋಷಗಳನ್ನು ಹೋಗಲಾಡಿಸುವವನಾಗಿ ಇಲ್ಲಿಯೇ ಇರುತ್ತೇನೆ. ಕಲಿಯುಗದಲ್ಲಿ ಧರ್ಮವು ಲೋಪಿಸುವುದು. ರಾಜರು ಮ್ಲೇಚ್ಚರಾಗಿ ಕ್ರೂರಕರ್ಮಗಳನ್ನು ಮಾಡುವರು. ಅಂತಹವರು ಕೂಡಾ ನನ್ನನ್ನು ಕಾಣಲು ಬರುವರು. ನನ್ನ ದರ್ಶನವನ್ನು ಮಾಡಲು ಬಂದ ರಾಜರನ್ನು ಕಂಡು ಇತರರೂ ಬರುತ್ತಾರೆ. ಯವನರು ಬರುವುದನ್ನು ಒಳ್ಳೆಯದಾಗಿ ಭಾವಿಸುವುದಿಲ್ಲ. ಆದ್ದರಿಂದ ಇಲ್ಲಿಯೇ ಇದ್ದುಕೊಂಡು ಅಂತರ್ಧಾನನಾಗುತ್ತೇನೆ." ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿದ ಶಿಷ್ಯರು, ಸೇವಕರು ಚಿಂತೆಗೊಂಡು ಗೊಂಬೆಗಳಹಾಗೆ ನಿಂತುಬಿಟ್ಟರು. ಇನ್ನುಮುಂದೆ ಭೂಪತಿಗಳು ಮ್ಲೇಚ್ಛರಾಗುತ್ತಾರೆ. ಶ್ರೀಗುರುವಿನ ಭಜನೆಯಲ್ಲಿ ಹೀನರೂ ಆಸಕ್ತರಾಗುತ್ತಾರೆ. ಅವರಿಗೆ ಅಸತ್ಯಗಳೇ ಪ್ರಿಯವಾಗುವುದು. ಆದ್ದರಿಂದಲೇ ಶ್ರೀಗುರುವು ಅಂತರ್ಧಾನರಾದರು. ಲೋಕಕ್ಕೆ ಅವರು ಬಿಟ್ಟುಹೋದಹಾಗೆ ತೋರುತ್ತಿದ್ದರೂ ಆ ವೇದಶಾಸ್ತ್ರಗಳಿಗೆ ಅತೀತನಾದ ಶ್ರೀಗುರುವು ಗಂಧರ್ವಪುರದಲ್ಲೇ ಅಮರೇಶ್ವರನಾಗಿ ಇದ್ದಾರೆ.

ಗಂಗಾಧರಪುತ್ರನಾದ ಸರಸ್ವತಿ ಶ್ರೀಗುರುವಿನಲ್ಲೇ ಭಕ್ತಿಯಿಂದ, "ಮುಕ್ತಿಪ್ರದಾತನಾದ ಶ್ರೀಗುರುವು ಈ ಗಂಧರ್ವನಗರದಲ್ಲೇ ಇದ್ದಾರೆ. ನಾನು ನೋಡಿದ್ದೆನು." ಎಂದು ಹೇಳಿದರು. "ಭಾವನೆಯಿಂದ ಭಜಿಸುವವರ ಸಮಸ್ತಕಾಮನೆಗಳನ್ನೂ ಶ್ರೀಗುರುವು ಕ್ಷಣದಲ್ಲೇ ಪೂರ್ಣಗೊಳಿಸುವರು. ಭಕ್ತಿಯೇ ಮುಖ್ಯವು. ಭಾವವನ್ನು ತಿಳಿಯುವ ಭಗವಂತನು ಇಲ್ಲಿ ಸುಲಭವಾಗಿ ಸಿದ್ಧಿಯನ್ನು ಕೊಡಬಲ್ಲನು. ಇಲ್ಲಿ ಭಗವಂತನಾದ ಶ್ರೀಗುರುವೇ ಕಲ್ಪವೃಕ್ಷವಾಗಿ ಇದ್ದಾರೆ. ಅಯ್ಯಾ ಜನಗಳಿರಾ, ಈ ಗಂಧರ್ವನಗರದಲ್ಲಿ ಶ್ರೀಗುರುವನ್ನು ಸೇರಿರಿ. ಇಲ್ಲಿಗೆ ಬಂದವರ ಸಂಕಲ್ಪಗಳು ನೆರವೇರುತ್ತವೆ. ಶ್ರೀಗುರುವಿನ ಭಕ್ತರು ಎಲ್ಲಕಾಲಕ್ಕೂ ಸುಖಸಂಪತ್ತುಗಳನ್ನು ಹೊಂದಿರುವರು. ಭಕ್ತನು ಭುಕ್ತಿ ಮುಕ್ತಿಗಳನ್ನು ಕೂಡಾ ಇಲ್ಲಿ ಮುದದಿಂದ ಹೊಂದಬಲ್ಲನು." ಎಂದು ಗಂಗಾಧರಸುತನಾದ ಸರಸ್ವತಿ ಬೋಧಿಸಿದನು. 

ಇಲ್ಲಿಗೆ ಐವತ್ತನೆಯ ಅಧ್ಯಾಯ ಮುಗಿಯಿತು.


Tuesday, September 24, 2013

||ಶ್ರೀಗುರು ಚರಿತ್ರೆ - ನಲವತ್ತೊಂಭತ್ತನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ನಾಮಧಾರಕ, "ಸ್ವಾಮಿ, ಶ್ರೀಗುರುವು ಮನುಷ್ಯನಂತೆ ಕಂಡು ಬಂದರೂ ತ್ರಿಮೂರ್ತಿಗಳ ಅವತಾರವೇ! ಗಂಧರ್ವನಗರದಲ್ಲಿ ಶ್ರೀಗುರುವು ಏಕೆ ನೆಲೆಸಿದರು? ಅ ಕ್ಷೇತ್ರದ ಹೆಸರೇನು? ಲೆಕ್ಕವಿಲ್ಲದಷ್ಟು ತೀರ್ಥಗಳಿರುವಾಗ ಅವುಗಳನ್ನೆಲ್ಲವನ್ನೂ ಬಿಟ್ಟು ಈ ಗಂಧರ್ವನಗರದಲ್ಲಿ ಏಕೆ ಇದ್ದಾರೆ? ಹೇ ಸ್ವಾಮಿ, ಈ ಸ್ಥಾನ ಮಾಹಾತ್ಮ್ಯೆಯನ್ನು ವಿಸ್ತಾರವಾಗಿ ತಿಳಿಸುವ ಕೃಪೆಮಾಡಿ" ಎಂದು ಕೇಳಿದನು. ಅದಕ್ಕೆ ಸಿದ್ಧಮುನಿ, "ಸಾವಧಾನವಾಗಿ ಕೇಳು. ಒಂದು ಸಲ ದೀಪೋತ್ಸವವು ಬಂತು. ಆಗ ಶ್ರೀಗುರುವು ತಮ್ಮ ಶಿಷ್ಯರನ್ನು ತ್ರಿಸ್ಥಲಿಯಲ್ಲಿ ಸ್ನಾನ ಮಾಡಿರೆಂದು ಉಪದೇಶಿಸಿದರು. ಅದಕ್ಕೆ ಆ ಶಿಷ್ಯರು ಕುಟುಂಬದವರೊಡನೆ ಪ್ರಯಾಗ, ಗಯ, ಕಾಶಿ ಈ ಮೂರು ಸ್ಥಳಗಳಿಗೆ ಹೊರಡಲು ಬೇಕಾದ ಸಾಮಗ್ರಿಗಳನ್ನೂ, ದಾರಿಗೆಂದು ತಿನಿಸುಗಳನ್ನೂ ಸರಿಮಾಡಿಕೊಳ್ಳುತ್ತೇವೆ" ಎಂದರು. ಶ್ರೀಗುರುವು ನಸುನಗುತ್ತಾ, "ನಮ್ಮ ಗ್ರಾಮದ ಸನ್ನಿಧಿಯಲ್ಲೇ ತ್ರಿಸ್ಥಲಿ ಇದೆ" ಎಂದು ಹೇಳಿ ಅವರೊಡನೆ ಸಂಗಮಕ್ಕೆ ಹೋಗಿ, ಆ ಜಗದ್ಗುರುವು ಅಮರಜಾನದಿಯಲ್ಲಿ ಶಿಷ್ಯರೊಡನೆ ಸ್ನಾನ ಮಾಡಿದರು.

ನಂತರ ಶ್ರೀಗುರುವು ಶಿಷ್ಯರಿಗೆ, "ಸಂಗಮ ಮಹಿಮೆ ಅಪಾರವು. ಇಲ್ಲಿನ ಸ್ನಾನದಿಂದ ಪ್ರಯಾಗ ಸ್ನಾನಕ್ಕೆ ಸಮನಾದ ಪುಣ್ಯವು ಲಭಿಸುವುದು. ಷಟ್ಕೂಲ ತೀರ್ಥಗಳಿಗೆಲ್ಲಾ ಅಧಿಕವಾದ ಮಹಿಮೆಯುಳ್ಳದ್ದು. ಭೀಮಾನದಿ ಅಮರಜಾನದಿ ಸಂಗಮವು ಗಂಗಾಯಮುನೆಗಳ ಯೋಗದಂತೆ ಸ್ವಯಂ ತೀರ್ಥರಾಜವು. ಉತ್ತರವಾಗಿ ಪ್ರವಹಿಸುವ ಈ ನದಿ ಇರುವ ಜಾಗವು ಕಾಶಿಗಿಂತ ಅಧಿಕ ಪುಣ್ಯಪ್ರದವು. ಇಲ್ಲಿ ಅಷ್ಟತೀರ್ಥಗಳಿವೆ. ಇದರ ಮಾಹಾತ್ಮ್ಯವು ಉತ್ತಮವಾದುದು" ಎಂದು ಹೇಳಲು, ಭಕ್ತರು ಶ್ರೀಗುರುವಿಗೆ ನಮಸ್ಕರಿಸಿ, "ಈ ಅಮರಜಾನದಿ ಎಲ್ಲಿ ಉತ್ಪನ್ನವಾಯಿತು?" ಎಂದು ಕೇಳಿದರು. "ಅದರ ಉತ್ಪತ್ತಿ ಕಥೆ ಪುರಾಣದಲ್ಲಿ ಜಾಲಂಧರೋಪಾಖ್ಯಾನದಲ್ಲಿ ಇದೆ. ಜಾಲಂಧರನೆಂಬ ನಿಶಾಚರನು ಭೂಮಿಯನ್ನು ಜಯಿಸಿದನು. ಸುರರು ಪರಾಜಿತರಾದರು. ಸ್ವರ್ಗವು ಅಪಹರಿಸಲ್ಪಟ್ಟಿತು. ದೇವದಾನವ ಯುದ್ಧವು ನಡೆಯಿತು. ಅದರಲ್ಲಿ ದೇವತೆಗಳು ಘಾಯಗೊಂಡರು. ಇಂದ್ರನು ಈಶ್ವರನ ಬಳಿಗೆ ಹೋಗಿ ಮೊರೆಯಿಟ್ಟುಕೊಂಡನು. "ಶಂಭೋ. ನಮಗೆ ಯಾವುದಾದರೂ ಉಪಾಯವನ್ನು ತೋರಿಸು. ಯುದ್ಧದಲ್ಲಿ ಏಟು ತಿಂದ ರಾಕ್ಷಸರ ರಕ್ತದ ಬಿಂದುಗಳು ಭೂಮಿಯ ಮೇಲೆ ಬಿದ್ದ ನಂತರ ಬಿಂದುಗಳ ಸಂಖ್ಯೆಯಂತೆ ದೈತ್ಯರು ಮತ್ತೆ ಜನ್ಮಿಸುತ್ತಿದ್ದಾರೆ. ಪರಮೇಶ, ಪಾತಾಳ, ಭೂತಲ, ಸ್ವರ್ಗ ಸಮಸ್ತವನ್ನೂ ದೈತ್ಯರು ವ್ಯಾಪಿಸಿದ್ದಾರೆ. ದೇವತೆಗಳ ಕೂಟಗಳೆಲ್ಲವೂ ದೈತ್ಯರಿಂದ ಹತವಾಯಿತು" ಎಂದು ಇಂದ್ರನು ಪ್ರಾರ್ಥಿಸಲು, ಕ್ರುದ್ಧನಾದ ಪರಮೇಶ್ವರನು ರುದ್ರನಾಗಿ ಅಸುರ ಸಂಹಾರಕ್ಕೆಂದು ಹೊರಟನು. ಇಂದ್ರನು ಶಿವನನ್ನು ನೋಡಿ, "ಸ್ವಾಮಿ, ದೇವತೆಗಳನ್ನು ಪುನರ್ಜೀವಿತರನ್ನಾಗಿ ಮಾಡಲು ಉಪಾಯವನ್ನು ಯೋಚಿಸು" ಎಂದು ಪ್ರಾರ್ಥಿಸಿದನು. ಇಂದ್ರನ ಪ್ರಾರ್ಥನೆಯನ್ನು ಮನ್ನಿಸಿದ ಈಶ್ವರನು ಒಂದು ಅಮೃತ ಘಟವನ್ನು ಇಂದ್ರನ ಕೈಯಲ್ಲಿಟ್ಟನು. ದೇವೇಂದ್ರನು ಮರಣಿಸಿದ್ದ ದೇವತೆಗಳ ಮೇಲೆ ಆ ಕುಂಭದಲ್ಲಿದ್ದ ನೀರನ್ನು ಚೆಲ್ಲಿದನು. ಅಮೃತಜಲ ಸೇವನೆಯಿಂದ ದೇವತೆಗಳೆಲ್ಲರೂ ನಿದ್ರೆಯಿಂದ ಎದ್ದವರಂತೆ ಎದ್ದರು. ಚೆಲ್ಲಿ ಮಿಕ್ಕಿದ್ದ ಜಲವಿದ್ದ ಕುಂಭವನ್ನು ಅಮರೇಶ್ವರನು ತೆಗೆದುಕೊಂಡು ಹೋಗುವಾಗ ಕುಂಭದಿಂದ ಜಾರಿದ ಅಮೃತವು ಭೂಮಿಯ ಮೇಲೆ ಬಿದ್ದಿತು. ಮಹಾಪ್ರವಾಹವಾದ ಆ ಅಮೃತಜಲವೇ ‘ಸಂಜೀವನಿ’ ಎನ್ನುವ ನದಿಯಾಗಿ ಅಮರಜಾ ಎಂದು ಪ್ರಸಿದ್ಧಿಯಾಯಿತು. ಈ ನದಿಯಲ್ಲಿ ಭಕ್ತಿಯಿಂದ ಸ್ನಾನ ಮಾಡುವವರಿಗೆ ಕಾಲಮೃತ್ಯುವೇ ಇಲ್ಲ ಎಂದಮೇಲೆ ಅಪಮೃತ್ಯು ಭಯವು ಹೇಗಾಗುತ್ತದೆ? ಇಲ್ಲಿನ ಸ್ನಾನದಿಂದ ಮಾನವನು ರೋಗಾದಿಗಳಿಲ್ಲದೆ ಶತಾಯುವಾಗಿರುತ್ತಾನೆ. ಬ್ರಹ್ಮಹತ್ಯಾದಿ ಪಾಪಗಳೂ ಕೂಡಾ ಅವನಿಗೆ ನಾಶವಾಗುತ್ತವೆ. ಈ ನದಿ ಭೀಮರಥಿ ನದಿಯೊಡನೆ ಸಂಗಮ ಹೊಂದಿ ಪ್ರಯಾಗದಂತೆ ತೀರ್ಥಸ್ಥಳವಾಯಿತು. ಇದು ತ್ರಿವೇಣಿ ಸಂಗಮವೇ! ವೈಶಾಖ, ಕಾರ್ತಿಕ, ಮಾಘ ಮಾಸಗಳಲ್ಲಿ ಇಲ್ಲಿ ಸ್ನಾನ ಮಾಡುವವರು ಇಹಲೋಕ ಸುಖವನ್ನು ಅನುಭವಿಸಿ ಕೊನೆಯಲ್ಲಿ ಮೋಕ್ಷವನ್ನು ಪಡೆಯುತ್ತಾರೆ. ಯಾವಾಗಲೂ ಸಂಗಮ ಸ್ನಾನವನ್ನು ಮಾಡಬೇಕು. ಇಲ್ಲವಾದರೆ ಸೂರ್ಯ ಚಂದ್ರ ಗ್ರಹಣಗಳ ಕಾಲದಲ್ಲಿ, ಸಂಕ್ರಾಂತಿಯಂದು, ಪರ್ವದಿನಗಳಲ್ಲಿ, ಏಕಾದಶಿಯಂದು ಸ್ನಾನ ಮಾಡುವುದರಿಂದ ಅನಂತ ಪುಣ್ಯವು ಲಭಿಸುವುದು. ಸಾಧ್ಯವಾದರೆ ಸದಾ ಸ್ನಾನ ಮಾಡುವುದು ಅತ್ಯಂತ ದೋಷಹಾರಿ. ಇದು ಸಂಗಮ ಮಾಹಾತ್ಮ್ಯವು. ಇದರ ಎದುರಿಗೆ ಅಶ್ವತ್ಥವೃಕ್ಷವಿದೆ. ಅದು ಮನೋಹರವೆಂದು ಹೆಸರುಳ್ಳ ತೀರ್ಥವು. ಕಲ್ಪದ್ರುಮವಾದ ಅಶ್ವತ್ಥವಿರುವಲ್ಲಿ ಸಿದ್ಧಿಸದೇ ಇರುವ ಕೋರಿಕೆ ಏನಿದೆ? ಅಶ್ವತ್ಥವೇ ಕಲ್ಪದ್ರುಮವು. ಮಾನವನು ತನ್ನ ಕಾಮನೆಗಳನ್ನು ತಪ್ಪದೇ ಪಡೆಯಬಲ್ಲನು. ಅಶ್ವತ್ಥ ಸನ್ನಿಧಿಯಲ್ಲಿ ಇಂತಹ ಮನೋರಥ ತೀರ್ಥವಿದೆ. ಶ್ರೀಗುರುನಾಥನ ವಚನಗಳಂತಹುದೇ ಈ ತೀರ್ಥವು. ನಾನು ಯಾವಾಗಲೂ ಇಲ್ಲೇ ಇರುತ್ತೇನೆ. ಭಕ್ತಿಯಿಂದ ಅರ್ಚಿಸುವವರಿಗೆ ದರ್ಶನವು, ಕಲಿಯುಗದಲ್ಲಾದರೂ, ಲಭಿಸುವುದು. ಕಲ್ಪವೃಕ್ಷವನ್ನು ಅರ್ಚಿಸಿ ಶಿವಾಲಯಕ್ಕೆ ಹೋಗಿ ಸಂಗಮದಲ್ಲಿ ತ್ರ್ಯಂಬಕನ ಎದುರಿಗೆ ಧ್ಯಾನದಿಂದ ಮಂತ್ರವನ್ನು ಜಪಿಸಬೇಕು. ಶ್ರೀಶೈಲದಲ್ಲಿನ ಮಲ್ಲಿಕಾರ್ಜುನನಂತೆ ಸಂಗಮದಲ್ಲಿ ರುದ್ರನು ಇದ್ದಾನೆ. ಮೊದಲು ನಂದಿಗೆ ನಮಸ್ಕರಿಸಿ ನಂತರ ಚಂಡೀಶ್ವರನ ಸ್ಥಾನದಲ್ಲಿ ಸಂಚರಿಸಬೇಕು. ಆ ನಂತರ ಮತ್ತೆ ಸವ್ಯವಾಗಿ ನಂದೀಶ್ವರನ ಸೋಮ ಸೂತ್ರವನ್ನು ಸೇರಬೇಕು. ಸೋಮ ಸೂತ್ರಕ್ಕೆ ಪ್ರದಕ್ಷಿಣೆ ಮಾಡಿ ಮತ್ತೆ ಬಂದು ನಂದಿಗೆ ನಮಸ್ಕರಿಸಿ ಚಂಡೀಶ್ವರನನ್ನು ಸೇರಿ ಸೋಮ ಸೂತ್ರದ ಕಡೆಗೆ ಮತ್ತೆ ಹೋಗಿ ಆ ನಂತರ ಶಿವನಿಗೆ ಪ್ರದಕ್ಷಿಣೆ ಆಚರಿಸಬೇಕು. ಹೀಗೆ ಮೂರುಸಲ ಮಾಡಿ ಶಿವನನ್ನು ನೋಡಿದರೆ ನರನಿಗೆ ಪಾಪ ವಿಮುಕ್ತಿಯಾಗುತ್ತದೆ. ವಾಮಹಸ್ತದಿಂದ ನಂದಿಯ ಪೃಷ್ಠವನ್ನು ಹಿಡಿದುಕೊಂಡು, (ದಕ್ಷಿಣ ಹಸ್ತದ)ಅಂಗುಷ್ಠ ತರ್ಜನಿಗಳನ್ನು ನಂದಿಯ ಕೊಂಬುಗಳ ಮೇಲಿಟ್ಟು ಅವೆರಡರ ಮಧ್ಯದಿಂದ ಶಿವದರ್ಶನ ಮಾಡುವವನ ಗೃಹದಲ್ಲಿ ದೇವೇಂದ್ರನಿಗೆ ಸಮಾನವಾದ ಸಂಪತ್ತು ಪುತ್ರಪೌತ್ರಾಭಿವೃದ್ಧಿ ಉಂಟಾಗುವುದು. ಮಾನವರಿಗೆ ಸಂಗಮೇಶ್ವರನ ಅರ್ಚನೆಯಿಂದ ಉಂಟಾಗುವ ಫಲಿತವಿಂತಹುದು.

ಸಂಗಮಕ್ಕೆದುರಾಗಿ ನಾಗೇಶವೆನ್ನುವ ಗ್ರಾಮಕ್ಕೆ ಅರ್ಧಕ್ರೋಶ ದೂರದಲ್ಲಿ ಮಹಾತೀರ್ಥವಿದೆ. ಅದು ಸಾಕ್ಷಾತ್ತು ವಾರಣಾಸಿಯೇ! ಹಿಂದೆ ಭಾರದ್ವಾಜ ಗೋತ್ರದವನೊಬ್ಬನಿದ್ದನು. ಅವನು ಸಂಸಾರ ವಿರಕ್ತನು. ನಿತ್ಯಾನುಷ್ಠಾನ ನಿರತನಾಗಿ ಶಿವಧ್ಯಾನವನ್ನು ಮಾಡುತ್ತಿದ್ದನು. ಆ ಬ್ರಾಹ್ಮಣನಿಗೆ ಚಂದ್ರಮೌಳಿ ಸದಾ ಪ್ರತ್ಯಕ್ಷವಾಗುತ್ತಿದ್ದನು. ಅವನು ಶಿವದರ್ಶನದಿಂದಲೇ ಆನಂದವನ್ನು ಹೊಂದಿ ತನ್ನ ದೇಹವನ್ನೂ ಮರೆತು ಓಡಾಡುತ್ತಿದ್ದನು. ಜನರು ಅವನನ್ನು ಪಿಶಾಚಿಯೆನ್ನುವ ಭ್ರಾಂತಿಯಿಂದ ನಿಂದಿಸುತ್ತಿದ್ದರು. ಅವನಿಗೆ ಇಬ್ಬರು ತಮ್ಮಂದಿರಿದ್ದರು. ಒಬ್ಬನ ಹೆಸರು ಈಶ್ವರ. ಇನ್ನೊಬ್ಬನ ಹೆಸರು ಪಾಂಡುರಂಗ. ಅವರಿಬ್ಬರೂ ಒಂದುಸಲ ಕಾಶಿಗೆ ಹೋಗಬೇಕೆಂದು ಎಲ್ಲವನ್ನು ಸಿದ್ಧ ಮಾಡಿಕೊಂಡರು. ಅಣ್ಣನನ್ನು ಅವರಿಬ್ಬರೂ, "ಅಯ್ಯಾ ನೀನೂ ಬರುತ್ತೀಯಾ?" ಎಂದು ಕೇಳಿದರು. ಅವನು, "ಕಾಶಿ ಇಲ್ಲಿಯೇ ನನ್ನ ಸನ್ನಿಧಿಯಲ್ಲೇ ಇದೆ. ವಿಶ್ವೇಶ್ವರನು ನನ್ನ ಸಮೀಪದಲ್ಲೇ ಇದ್ದಾನೆ. ನಿಮಗೂ ತೋರಿಸುತ್ತೇನೆ" ಎಂದು ತನ್ನ ಬಂಧುಗಳಿಗೆ ಹೇಳಿದನು. ಅವರು ಆಶ್ಚರ್ಯಪಟ್ಟು, "ಹಾಗಿದ್ದರೆ ನಮಗೆ ಇಲ್ಲಿಯೇ ವಿಶ್ವೇಶ್ವರನನ್ನು ತೋರಿಸು. ನೀನು ತೋರಿಸುವುದೇ ಆದರೆ ನಮಗೆ ಪ್ರಯಾಸವೇ ಇರುವುದಿಲ್ಲ" ಎಂದರು. ಆ ಬ್ರಾಹ್ಮಣ ಸ್ನಾನ ಮಾಡಿ ಧ್ಯಾನ ನಿಷ್ಠನಾಗಿ ಶಿವನನ್ನು ಧ್ಯಾನಿಸಿದನು. ತಕ್ಷಣವೇ ಶಿವನು ಪ್ರತ್ಯಕ್ಷನಾದನು. ಆ ಬ್ರಾಹ್ಮಣ, "ಹೇ ಪರಮೇಶ, ಇಲ್ಲಿಯೇ ನಮಗೆ ವಿಶ್ವೇಶ್ವರನ ದರ್ಶನ ಆಗಬೇಕು" ಎಂದು ಶಿವನ ಪಾದಗಳನ್ನು ಹಿಡಿದನು. ಈಶ್ವರನು ಪ್ರಸನ್ನನಾದನು. ಅಲ್ಲಿಯೇ ಜ್ಞಾನಕುಂಡ, ಮಣಿಕರ್ಣಿಕೆ, ಕಾಶಿ ಎಲ್ಲವೂ ಕಾಣಬಂದವು. ಜ್ಞಾನಕುಂಡದ ಮಧ್ಯದಿಂದ ವಿಶ್ವೇಶ್ವರನ ಮೂರ್ತಿ ಅಲ್ಲಿಯೇ ಆವಿರ್ಭವಿಸಿತು. ಉತ್ತರ ವಾಹಿನಿಯಾದ ಗಂಗಾಸ್ಥಾನದಲ್ಲಿ ನೆಲಸಿರುವ ಭೀಮಾನದಿ ತಟದಲ್ಲಿ ಕಾಶಿ ಕಂಡು ಬಂದಿತು. ಕಾಶಿಪುರದಲ್ಲಿ ಕಂಡು ಬರುವ ಚಿಹ್ನೆಗಳೆಲ್ಲವೂ ಅಲ್ಲಿ ಕಾಣ ಬಂದವು. ಹಾಗೆ ಭೀಮಾ ಅಮರಜಾ ನದಿಗಳ ಸಂಗಮದಲ್ಲಿ ಉತ್ತಮವಾದ ಕಾಶಿ ತೀರ್ಥವು ಏರ್ಪಟ್ಟಿತು. ಅದರಲ್ಲಿ ಸ್ನಾನಮಾಡಿ ಅವನು ಪಿಶಾಚಿಯಲ್ಲವೆಂದೂ ಪಂಡಿತನೆಂದೂ ತಿಳಿದರು. ಆ ಬ್ರಾಹ್ಮಣ, ಬಂಧುಗಳಿಗೆ, "ಈ ಕಾಶಿ ತೀರ್ಥವನ್ನು ವಿಶ್ವೇಶ್ವರನು ನನಗೆ ಕೊಟ್ಟನು. ಅಯ್ಯಾ ಬಂಧುಗಳಿರಾ, ನಾನು ಭ್ರಾಂತನೇ! ನನ್ನ ಹೆಸರು ಗೋಸ್ವಾಮಿ" ಎಂದು ಹೇಳಿ, ಸೋದರರೊಡನೆ ಕಲೆತು ಸದಾ ಈಶ್ವರಾಧನೆ ಮಾಡುತ್ತಾ, "ಪ್ರತಿವರ್ಷವೂ ನೀವಿಬ್ಬರೂ ಇಲ್ಲಿಯೇ ಕಾಶಿಯಾತ್ರೆಯನ್ನು ಮಾಡಿಕೊಳ್ಳಿ" ಎಂದು ಆಣತಿಯಿತ್ತನು. ಹೀಗೆ ಶ್ರೀಗುರುವಿನ ಮಾತುಗಳನ್ನು ಕೇಳಿ ಎಲ್ಲರೂ ಆ ಕಾಶಿತೀರ್ಥದಲ್ಲಿ ಸ್ನಾನಾದಿಗಳನ್ನು ಮಾಡಿದರು. ನಾಮಧಾರಕ, ಭಕ್ತರೊಡನೆ ಮುಂದಕ್ಕೆ ನಡೆಯುತ್ತಾ, ಶ್ರೀಗುರುವು, ಪಾಪನಾಶಿನಿಯಾದ ಆ ತೀರ್ಥವನ್ನು ಅವರಿಗೆ ತೋರಿಸಿದರು. ಆ ತೀರ್ಥವು ಸ್ನಾನ ಮಾತ್ರದಿಂದಲೇ ಪಾಪಗಳೆನ್ನುವ ಪರ್ವತಗಳನ್ನು, ಅಗ್ನಿ ತೃಣವನ್ನು ದಹಿಸಿದಂತೆ, ದಹಿಸಿಬಿಡುವುದು.

ಅಷ್ಟರಲ್ಲಿ ಶ್ರೀಗುರುವಿನ ಪೂರ್ವಾಶ್ರಮದ ತಂಗಿ ರತ್ನ ಅಲ್ಲಿಗೆ ಬರಲು ಶ್ರೀಗುರುವು ಅವಳನ್ನು ಕರೆದು, "ಪೂರ್ವಾಶ್ರಮ ಸೋದರಿ, ನಿನ್ನ ಪೂರ್ವೋಕ್ತವಾದ ಪಾಪಗಳನ್ನು ನೆನಪಿರುವಷ್ಟು ಹೇಳು" ಎಂದರು. ಅವಳು ಶ್ರೀಗುರುವಿನ ಮಾತುಗಳನ್ನು ಕೇಳಿ, ಪ್ರಣಾಮ ಮಾಡಿ, "ಸ್ವಾಮಿ, ನಾನು ಸ್ತ್ರೀಯು. ಜ್ಞಾನಹೀನಳು. ನೀವು ಜ್ಞಾನದೀಪಕರು. ವಿಶ್ವವ್ಯಾಪಕರು. ಜಗದಾತ್ಮರು. ಹೇ ಸರ್ವಜ್ಞ, ನಿಮಗೆ ಸರ್ವವೂ ತಿಳಿದಿದೆ. ವಿಸ್ತಾರವಾಗಿ ಹೇಳಿ" ಎಂದು ಹೇಳಲು, ಶ್ರೀಗುರುವು ಅವಳಿಗೆ ಹೀಗೆ ಬೋಧಿಸಿದರು. "ಅಮ್ಮಾ ರತ್ನ, ನೀನು ಐದು ಮರಿಗಳನ್ನು ಕೊಂದಿದ್ದೀಯೆ. ಒಂದು ಬೆಕ್ಕು ಮಡಕೆಯಲ್ಲಿ ತನ್ನ ಮರಿಗಳನ್ನು ಇಟ್ಟಿತ್ತು. ಅದನ್ನು ನೀನು ನೋಡದೆ ಆ ಮಡಕೆಯೊಳಕ್ಕೆ ನೀರು ಸುರಿದು ಅದನ್ನು ಬೆಂಕಿಯ ಮೇಲಿಟ್ಟು ಆ ಐದು ಮರಿಗಳನ್ನೂ ಸಾಯಿಸಿದೆ. ಇನ್ನೊಂದು ಪಾಪ ನೀನು ಮಾಡಿದ್ದುದನ್ನು ನಾನು ಅಗಲೇ ಹೇಳಿದ್ದೇನೆ" ಎಂದು ಶ್ರೀಗುರುವು ಹೇಳುತ್ತಿರಲು ಅವಳ ಶರೀರವೆಲ್ಲವೂ ಕುಷ್ಠು ರೋಗದಿಂದ ವ್ಯಾಪ್ತವಾದುದನ್ನು ಅವಳು ನೋಡಿದಳು. "ಸ್ವಾಮಿ, ನನ್ನಲ್ಲಿ ದಯೆತೋರಿಸಿ. ನೀವು ದಯಾಸಮುದ್ರರು. ಪಾಪಮೋಕ್ಷಕ್ಕೆಂದು ನಿಮ್ಮನ್ನು ದರ್ಶಿಸಲು ಬಂದಿದ್ದೇನೆ" ಎಂದು ಪ್ರಾರ್ಥಿಸಿಕೊಂಡಳು.

ಅದಕ್ಕೆ ಶ್ರೀಗುರುವು, "ರತ್ನ, ನೀನು ಈ ಪಾಪರಾಶಿಯನ್ನು ಆರ್ಜಿಸಿದ್ದೀಯೆ. ಇದನ್ನು ನೀನು ಮುಂದಿನ ಜನ್ಮದಲ್ಲಿ ಅನುಭವಿಸುತ್ತೀಯೋ ಇಲ್ಲವೇ ಈ ಜನ್ಮದಲ್ಲಿಯೇ ಅನುಭವಿಸುತ್ತೀಯೋ ಹೇಳು" ಎಂದರು. ಅದಕ್ಕೆ ರತ್ನ, "ಹೇ ಸ್ವಾಮಿ, ನಾನು ಬಹಳ ಜನ್ಮಗಳು ಕಷ್ಟಪಟ್ಟು ಈಗ ಮುಕ್ತಿಗೋಸ್ಕರ ನಿಮ್ಮ ಬಳಿಗೆ ಬಂದಿದ್ದೇನೆ. ಇನ್ನೂ ಲಕ್ಷಾದಿ ಜನ್ಮಗಳು ಬೇಡ. ನಾನು ನಿಮ್ಮ ಚರಣಗಳನ್ನು ಆಶ್ರಯಿಸಿದ್ದೇನೆ. ಈ ಜನ್ಮದಲ್ಲೇ ಪಾಪರಹಿತಳಾಗುವುದಕ್ಕೆ ಪ್ರಯತ್ನಪಡುತ್ತೇನೆ" ಎಂದು ಬಿನ್ನವಿಸಿಕೊಳ್ಳಲು, ಅವಳ ಮಾತುಗಳನ್ನು ಕೇಳಿದ ಶ್ರೀಗುರುವು ಅವಳಿಗೆ, "ಅಮ್ಮಾ ಕಲ್ಯಾಣಿ, ಪಾಪನಾಶನ ತೀರ್ಥದಲ್ಲಿ ಸ್ನಾನ ಮಾಡಿದರೆ ನಿನಗೆ ತ್ವರೆಯಾಗಿ ಕುಷ್ಠ ನಿವಾರಣೆಯಾಗುತ್ತದೆ. ನೀನು ಅಲ್ಲಿ ನಿತ್ಯವೂ ಸ್ನಾನ ಮಾಡು" ಎಂದು ಉಪದೇಶ ಮಾಡಿದರು.

ನಾಮಧಾರಕ, ಆ ರತ್ನಾವತಿ ಸ್ನಾನ ಮಾಡಿದ ತಕ್ಷಣವೇ ಕುಷ್ಠು ರೋಗವು ಶಾಂತಿಗೊಂಡ ವಿಶೇಷವನ್ನು ಈ ಸಿದ್ಧಮುನಿ ಕಣ್ಣಾರೆ ನೋಡಿದನು. ಪಾಪವಿನಾಶವೆನ್ನುವ ಈ ತೀರ್ಥದಲ್ಲಿ ಸ್ನಾನ ಮಾಡುವವರಿಗೆ ಸಪ್ತಜನ್ಮಗಳಲ್ಲಿ ಮಾಡಿದ ಪಾಪಗಳು ನಾಶವಾಗುವುವು. ಆ ರತ್ನಾವತಿ ಆ ತೀರ್ಥ ಸನ್ನಿಧಿಯಲ್ಲೇ ನೆಲೆಸಿದಳು. ಶ್ರೀಗುರುವು ಕೋಟಿ ತೀರ್ಥವನ್ನು ತೋರಿಸಿದರು. ಈ ಜಂಬೂದ್ವೀಪದಲ್ಲಿರುವ ತೀರ್ಥಗಳೆಲ್ಲವೂ ಈ ಕೋಟಿ ತೀರ್ಥದಲ್ಲಿ ನೆಲೆಸಿವೆ. ಗ್ರಹಣಗಳು, ಪರ್ವದಿನಗಳು, ಸೂರ್ಯ ಸಂಕ್ರಾಂತಿ, ಪಾಡ್ಯಮಿಗಳಲ್ಲಿ ಇಲ್ಲಿ ಸ್ನಾನ ಮಾಡಬೇಕು. ಕೋಟಿ ಹಸುಗಳು ದಾನ ಮಾಡಿದ ಫಲ ಇಲ್ಲಿ ಸ್ನಾನ ಮಾಡುವುದರಿಂದ ಲಭಿಸುತ್ತದೆ. ಇಲ್ಲಿ ಮಾಡಿದ ಒಂದೊಂದು ದಾನವೂ ಕೋಟಿ ಪುಣ್ಯ ಫಲವನ್ನು ನೀಡುತ್ತದೆ. ಇಂತಹುದು ಈ ತೀರ್ಥದ ಮಾಹಾತ್ಮ್ಯೆ. ಇದರ ಮುಂದಕ್ಕೆ ರುದ್ರಪಾದವೆನ್ನುವ ಉತ್ತಮವಾದ ತೀರ್ಥವಿದೆ. ಅದು ಗಯಾ ತೀರ್ಥಕ್ಕೆ ಸಮಾನವು. ರುದ್ರನ ಪಾದಪೂಜೆಯಿಂದ ಕೋಟಿ ಜನ್ಮಗಳಲ್ಲಿ ಆರ್ಜಿಸಿದ ಪಾಪವು ನಶಿಸುವುದು. ಅದಕ್ಕೆ ಮುಂದೆ ಚಕ್ರತೀರ್ಥವಿದೆ. ಇಲ್ಲಿ ಕೇಶವನು ನೆಲೆಸಿದ್ದಾನೆ. ಇಲ್ಲಿ ಅಸ್ಥಿ ಚಕ್ರಾಂಕನವಾದರೆ ದೊರೆಯುವ ಪುಣ್ಯ ದ್ವಾರಕೆಯಲ್ಲಿ ದೊರೆಯುವುದಕ್ಕಿಂತ ನಾಲ್ಕರಷ್ಟು ಹೆಚ್ಚು" ಎಂದು ಹೇಳಿದ ಶ್ರೀಗುರುವಿನ ಉಪದೇಶವನ್ನು ಕೇಳಿದ ಜನರು ಸ್ನಾನ ಮಾಡಿ ದಾನಗಳನ್ನು ಮಾಡಿದರು. ಆ ನಂತರ ಮನ್ಮಥತೀರ್ಥವು ಇದೆ. ಅಲ್ಲಿ ಕಲ್ಲೇಶ್ವರನು ಇದ್ದಾನೆ. ಗೋಕರ್ಣದಲ್ಲಿರುವ ಮಹಾಬಲೇಶ್ವರನಿಗೆ ಸಮಾನನು ಈ ಕಲ್ಲೇಶ್ವರನು. ಮನ್ಮಥತೀರ್ಥದಲ್ಲಿ ಸ್ನಾನ ಮಾಡಿ ಕಲ್ಲೇಶ್ವರನನ್ನು ಅರ್ಚಿಸಿದವನಿಗೆ ಅಷ್ಟೈಶ್ವರ್ಯ ಲಾಭವಾಗುವುದು.

ಶ್ರಾವಣ ಮಾಸದಲ್ಲಿ ಅಖಂಡಾಭಿಷೇಕವನ್ನು, ಕಾರ್ತಿಕ ಮಾಸದಲ್ಲಿ ದೀಪೋತ್ಸವವನ್ನು ಮಾಡಿದರೆ ಅಕ್ಷಯವಾದ ಫಲವನ್ನು ಈ ತೀರ್ಥವು ಕೊಡುವುದು" ಎಂದು ಶ್ರೀಗುರುವು ಅಷ್ಟತೀರ್ಥಗಳ ಮಾಹಾತ್ಮ್ಯೆಯನ್ನು ಉಪದೇಶಿಸಲು, ಭಕ್ತರು, "ಹೇ ಈಶ್ವರ, ನಿಮ್ಮ ಕೃಪೆಯಿಂದ ಇಂದು ನಾವು ಪವಿತ್ರರಾದೆವು" ಎಂದು ಅಲ್ಲಿ ದಾನಾದಿಗಳನ್ನು ಮಾಡಿದರು. ಹೀಗೆ ಶ್ರೀಗುರುವು ಅಷ್ಟತೀರ್ಥ ಮಾಹಾತ್ಮ್ಯೆಯನ್ನು ಉಪದೇಶಿಸಿ ಮಠವನ್ನು ಸೇರಿಕೊಂಡರು. ಅಯ್ಯಾ ನಾಮಧಾರಕ, ಅದರಿಂದಲೇ ಶ್ರೀ ನೃಸಿಂಹಸರಸ್ವತಿ ದೋಷಹರವಾದ ಸುರತೀರ್ಥಗಳಿಂದ ಕೂಡಿದ ಗಂಧರ್ವನಗರದಲ್ಲಿ ನಿವಾಸಮಾಡಿದರು" ಎಂದು ಸಿದ್ಧಮುನಿಯು ಹೇಳಿದರು. 

ಇಲ್ಲಿಗೆ ನಲವತ್ತೊಂಭತ್ತನೆಯ ಅಧ್ಯಾಯ ಮುಗಿಯಿತು.

||ಶ್ರೀಗುರು ಚರಿತ್ರೆ - ನಲವತ್ತೆಂಟನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

"ನಾಮಧಾರಕ, ಈ ಅಪೂರ್ವ ವಿಷಯವನ್ನು ಕೇಳು" ಎಂದು ಸಿದ್ಧಮುನಿಯು ಹೇಳಿದರು. "ಗಂಧರ್ವನಗರದಲ್ಲಿ ಶ್ರೀಗುರುವು ನೆಲೆಸಿದ್ದಾಗ ಒಬ್ಬ ಶೂದ್ರ ಭಕ್ತ ಇದ್ದನು. ಅವನ ಕಥೆಯನ್ನು ಹೇಳುತ್ತೇನೆ. ಶ್ರೀಗುರುವು ಅನುಷ್ಠಾನಕ್ಕೆಂದು ಪ್ರತಿ ನಿತ್ಯವೂ ಸಂಗಮಕ್ಕೆ ಹೋಗುವ ದಾರಿಯಲ್ಲಿ ವ್ಯವಸಾಯ ಮಾಡಿಕೊಳ್ಳುತ್ತಿದ್ದ ಶೂದ್ರನೊಬ್ಬನು ಇದ್ದನು. ಶ್ರೀಗುರುವು ಬರುತ್ತಿರುವಾಗ ನೋಡಿ ಸಾಷ್ಟಾಂಗ ಪ್ರಣಾಮ ಮಾಡಿ ಹೊಲಕ್ಕೆ ಹೋಗುತ್ತಿದ್ದನು. ಮಧ್ಯಾಹ್ನ ಮಠಕ್ಕೆ ಹಿಂತಿರುಗುವ ಶ್ರೀಗುರುವನ್ನು ನೋಡಿ ಪ್ರಣಾಮ ಮಾಡುತ್ತಿದ್ದನು. ಹೀಗೆ ಅವನು ಬಹಳ ದಿನಗಳು ಭಕ್ತಿ ತೋರಿಸುತ್ತಿದ್ದನು. ಶ್ರೀಗುರು ಪರಮೇಶ್ವರನು ಆ ರೈತ ದಿನವೂ ಪ್ರಣಾಮ ಮಾಡುತ್ತಿದ್ದರೂ ಮೌನವಾಗಿಯೇ ಇರುತ್ತಿದ್ದರು. ಹೀಗೆ ಬಹಳ ಕಾಲ ಕಳೆಯಿತು. ನಂತರ ಒಂದುದಿನ ತಮ್ಮೆದುರಿಗೆ ನಮಸ್ಕಾರ ಮಾಡುತ್ತಿದ್ದ ಶೂದ್ರನನ್ನು ಕಂಡು ಶ್ರೀಗುರುವು ಮುಗುಳ್ನಗುತ್ತಾ, "ನಿತ್ಯವೂ ಕಷ್ಟಪಟ್ಟು ನಮಗೇಕೆ ನಮಸ್ಕಾರ ಮಾಡುತ್ತಿದ್ದೀಯೆ? ನಿನ್ನ ಮನಸ್ಸಿನಲ್ಲಿ ಇರುವ ಕೋರಿಕೆಯೇನು?" ಎಂದು ಕೇಳಿದರು. ಅವನು ಅಂಜಲಿಬದ್ಧನಾಗಿ, "ಸ್ವಾಮಿ, ಈ ಹೊಲದಲ್ಲಿ ಬೆಳೆ ಅಧಿಕವಾಗಿ ಬರಬೇಕು" ಎಂದು ಕೋರಿದನು. "ನಿನ್ನ ಹೊಲದಲ್ಲಿ ಯಾವ ಬೆಳೆ ಬಿತ್ತಿದ್ದೀಯೆ?" ಎಂದು ಶ್ರೀಗುರುವು ಕೇಳಿದರು. "ಸ್ವಾಮಿ, ತಮ್ಮ ಅನುಗ್ರಹದಿಂದ ಜೋಳ ಬಿತ್ತಿದ್ದೇನೆ" ಎಂದು ಬದಲು ಹೇಳಿದನು. "ನಿತ್ಯ ಪ್ರಣಾಮದಿಂದ ಉಂಟಾದ ಪುಣ್ಯದಿಂದ ಬೆಳೆ ಚೆನ್ನಾಗಿಯೇ ಬಂದಿದೆ. ಸ್ವಾಮಿ, ಹೊಲದೊಳಕ್ಕೆ ಬನ್ನಿ. ನಿಮ್ಮ ಅಮೃತ ದೃಷ್ಟಿಯಿಂದ ನೋಡಿ. ನಾನು ಶೂದ್ರನಾದರೂ ನನ್ನನ್ನು ಉಪೇಕ್ಷಿಸಬೇಡಿ. ನೀವು ಜನರೆಲ್ಲರನ್ನೂ ಕಾಪಾಡುವವರು" ಎನ್ನಲು, ಶ್ರೀಗುರುವು ಹೊಲಕ್ಕೆ ಹೋಗಿ ನೋಡಿ, "ನಮ್ಮ ಮಾತುಗಳಲ್ಲಿ ನಿನಗೆ ನಂಬಿಕೆಯಿದ್ದರೆ ಒಂದು ಮಾತು ನಿನಗೆ ಹೇಳುತ್ತೇವೆ. ಏಕಾಗ್ರಚಿತ್ತದಿಂದ ಅದನ್ನು ನಡೆಸು" ಎಂದು ಶ್ರೀಗುರುವು ಹೇಳಲು, ಆ ಶೂದ್ರನು, "ಸ್ವಾಮಿ, ಗುರುವಾಕ್ಯವೇ ತರಿಸುವುದಲ್ಲವೇ? ನೀವೇ ಸಾಕ್ಷಿ. ನಿಮಗೆ ಸರ್ವವೂ ತಿಳಿದಿದೆ" ಎಂದು ಹೇಳಿದನು. ಅದಕ್ಕೆ ಶ್ರೀಗುರುವು, "ನಾವು ಮಧ್ಯಾಹ್ನ ಸಂಗಮದಿಂದ ಬರುವಷ್ಟರಲ್ಲಿ ಬೆಳೆಯನ್ನೆಲ್ಲಾ ಕೊಯಿಸಿ ಹಾಕು. ಸ್ವಲ್ಪವೇ ಬೆಳೆದಿದ್ದರೂ ಸರಿಯೆ. ಎಲ್ಲವನ್ನು ಕೊಯಿಸಿ ಬಿಡು" ಎಂದು ಆದೇಶ ಕೊಟ್ಟು ಶ್ರೀಗುರುವು ಸ್ನಾನಕ್ಕೆ ಹೊರಟು ಹೋದರು. ಶ್ರೀಗುರುವಾಕ್ಯವನ್ನು ಪ್ರಮಾಣವಾಗಿ ಸ್ವೀಕರಿಸಿ ಆ ರೈತನು ಗ್ರಾಮದೊಳಕ್ಕೆ ಹೋಗಿ, ಆ ಹೊಲದ ಯಜಮಾನನನ್ನು ಕಂಡು ಹಿಂದಿನ ವರ್ಷದಂತೆಯೇ ಕೊಡಬೇಕಾದ ಗೇಣಿಯನ್ನು ನಿರ್ಣಯಿಸಿ ಪ್ರಮಾಣಪತ್ರವನ್ನು ಸಿದ್ಧಮಾಡಿ ಕೊಡು" ಎಂದು ಕೇಳಿದನು. ಆ ಯಜಮಾನ, "ಬೆಳೆ ಚೆನ್ನಾಗಿ ಬಂದಿದೆ ಅಲ್ಲವೇ? ಇನ್ನೂ ಬೆಳೆಯುತ್ತದೆ. ಆದ್ದರಿಂದ ಮುಂಚೆಯೇ ಕೊಯ್ಯಲು ನಾನು ಅನುಮತಿ ಕೊಡುವುದಿಲ್ಲ" ಎನ್ನಲು, ಹೋದ ವರ್ಷ ಕೊಟ್ಟದಕ್ಕಿಂತ ಎರಡರಷ್ಟು ಕೊಡುವುದಕ್ಕೆ ನಿಶ್ಚಯಿಸಿ ಆ ಯಜಮಾನನಿಂದ ಪ್ರಮಾಣ ಪತ್ರವನ್ನು ತೆಗೆದುಕೊಂಡನು.

ಆ ರೈತ ಮನುಷ್ಯರನ್ನು ಕರೆದು ಹೊಲ ಕೊಯ್ಯಲು ಆರಂಭಿಸಿದನು. ರೈತನ ಹೆಂಡತಿ ಮಕ್ಕಳು ಬಂದು ಅಡ್ಡ ಹಾಕಿದರು. ಗುರುಭಕ್ತನಾದ ಶೂದ್ರನು ತನ್ನ ಹೆಂಡತಿಯನ್ನು ಕಲ್ಲುಗಳಿಂದ ಹೊಡೆದನು. ಮಕ್ಕಳನ್ನೂ ಹೊಡೆಯಲು ಅವರೆಲ್ಲರೂ ಭಯಪಟ್ಟು ಓಡಿಹೋದರು. ರಾಜದ್ವಾರಕ್ಕೆ ಹೋಗಿ, "ನಮ್ಮ ತಂದೆ ಪಿಶಾಚಿಯಂತೆ ಬದಲಾಗಿ ಅಪಕ್ವವಾದ ಧಾನ್ಯವನ್ನು ಮೂರ್ಖನಂತೆ ಕೊಯ್ದು ಹಾಕುತ್ತಿದ್ದಾನೆ. ನಮ್ಮ ಜೀವನೋಪಾಧಿಯೆಲ್ಲವೂ ವ್ಯರ್ಥವಾಗಿ ಹೋದವು" ಎಂದು ಮೊರೆಯಿಟ್ಟುಕೊಂಡರು. ಆ ರಾಜ ಅವರಿಗೆ, "ಅವನು ಕ್ಷೇತ್ರ ಸ್ವಾಮಿ. ಅವನಿಗೆ ಇಷ್ಟ ಬಂದಂತೆ ಮಾಡಿಕೊಳ್ಳುತ್ತಾನೆ. ಹಿಂದಿನ ವರ್ಷಕ್ಕಿಂತ ಎರಡರಷ್ಟು ಕೊಡಲು ಒಪ್ಪಿಕೊಂಡು ಪತ್ರ ಬರೆದು ಕೊಟ್ಟಿದ್ದಾನೆ. ಆದರೂ ಒಂದುಸಲ ಅಡ್ಡ ಮಾಡಿ ನೋಡುತ್ತೇನೆ" ಎಂದು ಹೇಳಿ ಆ ರಾಜ ಒಬ್ಬ ದೂತನನ್ನು ಕಳುಹಿಸಿದನು. ಬಂದ ಆ ರಾಜ ದೂತನಿಗೆ ರೈತನು, "ರಾಜನಿಗೆ ಇದಕ್ಕಿಂತಲೂ ಒಳ್ಳೆಯ ಧಾನ್ಯವನ್ನು ಕೊಡುತ್ತೇನೆ" ಎಂದು ಹೇಳಲು, ಆ ದೂತ ಹಿಂತಿರುಗಿ ಬಂದು ಆ ವಿಷಯವನ್ನು ಹೇಳಿದನು. ಆ ರಾಜ, "ಅವನ ಹತ್ತಿರ ಬಹಳ ಧಾನ್ಯವಿದೆಯೆಂದು ತಿಳಿದಿದೆಯಾದ್ದರಿಂದ ನನಗೆ ಚಿಂತೆಯಾಕೆ? ಅವನ ಇಷ್ಟದಂತೆ ಅವನು ಮಾಡಿಕೊಳ್ಳಲಿ" ಎಂದು ಹೇಳಿ ಸುಮ್ಮನಾದನು.

ಆ ರೈತ ನಿಶ್ಶೇಷವಾಗಿ ಪೈರನ್ನೆಲ್ಲಾ ಕೊಯ್ದು ಹಾಕಿ ಶ್ರೀಗುರುವಿನ ಬರುವಿಕೆಗಾಗಿ ಧ್ಯಾನ ಮಾಡುತ್ತಾ, ದಾರಿಯಲ್ಲಿ ಕಾಯುತ್ತಾ ನಿಂತಿದ್ದನು. ಶ್ರೀಗುರುವು ಬಂದು, "ಅಯ್ಯೋ, ವ್ಯರ್ಥವಾಗಿ ಈ ಹೊಲವನ್ನು ನೀನೇಕೆ ಕೊಯ್ದು ಹಾಕಿದೆ? ನನ್ನ ಪರಿಹಾಸವನ್ನು ಸತ್ಯವೆಂದು ನೀನೇಕೆ ನಂಬಿದೆ?" ಎಂದು ಕೇಳಲು, "ನಿಮ್ಮ ವಾಕ್ಯವೇ ನನ್ನ ಕೋರಿಕೆಗಳನ್ನು ತೀರಿಸುತ್ತವೆ" ಎಂದು ಹೇಳಿದ ಆ ರೈತನಿಗೆ, "ನಿನ್ನ ಭಕ್ತಿಗೆ ತಗುನಾದ ಫಲಿತವು ಲಭಿಸುತ್ತದೆ. ಭಕ್ತ, ಚಿಂತಿಸಬೇಡ" ಎಂದು ಹೇಳಿ ಶ್ರೀಗುರುವು ಗ್ರಾಮದೊಳಕ್ಕೆ ಹೊರಟು ಹೋದರು. ಆ ಶೂದ್ರನೂ ತನ್ನ ಮನೆಗೆ ಹೊರಟು ಹೋದನು. ಗ್ರಾಮಸ್ಥರು ಅವನನ್ನು ಮೂರ್ಖನೆಂದರು. ಅವನ ಹೆಂಡತಿ ಅಳುತ್ತಿದ್ದಳು. ಆ ಶೂದ್ರನು, "ಶ್ರೀಗುರುವಿನ ವಚನವು ಕಾಮಧೇನುವೇ! ಒಂದೊಂದು ಧಾನ್ಯದ ಕಾಳಿಗೂ ಸಾವಿರದಷ್ಟು ಶ್ರೀಗುರುವು ಕೊಡುತ್ತಾರೆ. ಅನಂತನು ಅನಂತವನ್ನೇ ಕೊಡುತ್ತಾನೆ. ನನ್ನ ಮನಸ್ಸು ಸ್ಥಿರವಾಗಿದೆ. ಆದ್ದರಿಂದ ಎಂತಹ ಹಾನಿಯೂ ಆಗುವುದಿಲ್ಲ. ನನಗೆ ಶ್ರೀಗುರುವೆಂಬ ನಿಧಿಯು ಲಭಿಸಿತು" ಎಂದು ಆ ರೈತನು ಹೆಂಡತಿ ಮಕ್ಕಳು ಇಷ್ಟಬಾಂಧವರು ಎಲ್ಲರಿಗೂ ಹೇಳುತ್ತಾ ಅವರಿಗೆ ಬೋಧಿಸುತ್ತಿದ್ದನು. ಅವರೆಲ್ಲರೂ ಸುಮ್ಮನಿದ್ದರು.

ಹೀಗೆ ಎಂಟು ದಿನಗಳು ಕಳೆದ ಮೇಲೆ ಬಿರುಗಾಳಿ ಬೀಸಲಾರಂಭಿಸಿತು. ಬೆಳೆಗಳೆಲ್ಲವೂ ಹಾಳಾದವು. ಅಕಾಲದಲ್ಲಿ ಅತಿವೃಷ್ಟಿಯೂ ಸುರಿಯಿತು. ಆ ರೈತ ಕೊಯ್ದು ಬಿಟ್ಟಿದ್ದ ಕೂಳೆಗಳಿಂದ ಹೊಸದಾಗಿ ಹನ್ನೊಂದು ಹನ್ನೆರಡು ಮೊಳಕೆಗಳು ಹುಟ್ಟಿದವು. ಅವನ ಹೊಲದಲ್ಲಿ ಧಾನ್ಯವು ಸಮೃದ್ಧಿಯಾಗಿ ಬೆಳೆಯಿತು. ಜನರೆಲ್ಲ ಆಶ್ಚರ್ಯ ಪಟ್ಟರು. ಆ ಶೂದ್ರನ ಹೆಂಡತಿ ಅವನ ಬಳಿ ಸೇರಿ, ಅವನ ಪಾದಗಳಲ್ಲಿ ಬಿದ್ದು, "ಪ್ರಾಣನಾಥ, ನಿನ್ನನ್ನೂ, ಶ್ರೀಗುರುವನ್ನೂ ನಿಂದಿಸಿದೆ. ನನ್ನನ್ನು ಕ್ಷಮಿಸು" ಎಂದು ಗೋಳಾಡಿದಳು. ಆ ಹೆಂಗಸು ಶ್ರೀಗುರುವನ್ನು ಧ್ಯಾನಿಸಿ ಗಂಡನೊಡನೆ ಶ್ರೀಗುರುವಿನ ದರ್ಶನಕ್ಕೆ ಹೊರಟಳು. ಅವನು ಹೆಂಡತಿಯೊಡನೆ ಹೋಗಿ ಶ್ರೀಗುರುವನ್ನು ಪೂಜಿಸಿದನು. ಶ್ರೀಗುರುವು ಆ ದಂಪತಿಗಳನ್ನು ಕಂಡು ನಸುನಗುತ್ತಾ, "ಅದ್ಭುತವೇನು ನಡೆಯಿತು?" ಎಂದು ಕೇಳಿದರು. ಆ ದಂಪತಿಗಳಿಬ್ಬರೂ ಒಂದೇ ಜೊತೆಯಾಗಿ, "ನೀವೆ ನಮ್ಮ ಕುಲದೈವವು. ತಮ್ಮ ವಚನವೇ ಅಮೃತವು. ಸ್ವಾಮಿ, ನಿಮ್ಮ ಪಾದಗಳು ಚಿಂತಾಮಣಿಯೇ! ನಮ್ಮ ಕೋರಿಕೆ ಸಂಪೂರ್ಣವಾಯಿತು. ನಿಮಗೆ ಶರಣು ಬಂದಿದ್ದೇವೆ" ಎಂದು ಗುರುವಿನ ಪಾದಗಳಲ್ಲಿ ಬಿದ್ದರು. ಆ ಹೆಂಗಸು ಶ್ರೀಗುರುವಿಗೆ ನೀರಾಜನವನ್ನು ಕೊಟ್ಟು ಸ್ತುತಿಸಿದಳು. ಅನಂತರ ಶ್ರೀಗುರುವು, "ನಿಮ್ಮ ಮನೆಯಲ್ಲಿ ಸಿರಿಸಂಪದಗಳು ಅಖಂಡವಾಗಲಿ" ಎಂದು ಹೇಳಲು, ಅವರಿಬ್ಬರೂ ತಮ್ಮ ಮನೆಗೆ ಹಿಂತಿರುಗಿದರು.

ಒಂದು ತಿಂಗಳು ಕಳೆದ ನಂತರ ಹಿಂದಿನ ವರ್ಷಕ್ಕಿಂತ ನೂರರಷ್ಟು ಹೆಚ್ಚಾಗಿ ಧಾನ್ಯ ಅವರಿಗೆ ಲಭಿಸಿತು. ಆ ಶೂದ್ರನು ರಾಜನಿಗೆ, "ಹಿಂದಿನ ವರ್ಷಕ್ಕಿಂತ ಎರಡರಷ್ಟು ಕೊಡುತ್ತೇನೆಂದು ಪತ್ರ ಬರೆದು ಕೊಟ್ಟಿದ್ದೆ. ಆದರೆ ಹಿಂದಿನ ವರ್ಷಕ್ಕಿಂತ ನೂರರಷ್ಟು ಹೆಚ್ಚು ಧಾನ್ಯ ಬಂದಿದೆ. ಆದ್ದರಿಂದ ಹೇ ಪ್ರಭು, ನಿಮಗೆ ಅದರಲ್ಲಿ ಅರ್ಧ ಕೊಡುತ್ತೇನೆ. ಸಂಶಯ ಪಡಬೇಡಿ" ಎಂದು ಹೇಳಲು, ಆ ರಾಜ, "ಲೋಭಗೊಂಡು ನಾನು ಧರ್ಮಾಹನಿ ಮಾಡುವುದಿಲ್ಲ. ನಿನಗೆ ಗುರುಪ್ರಸಾದವಾಗಿದೆ. ಅನುಭವಿಸು" ಎಂದು ಹೇಳಿ ಹೊರಟು ಹೋದನು. ಆ ಶೂದ್ರ ಸ್ವಯಂ ಬ್ರಾಹ್ಮಣರಿಗೆ ಬಹಳವಾಗಿ ದಾನಮಾಡಿ ಮಿಕ್ಕ ಧಾನ್ಯವನ್ನು ತನ್ನ ಮನೆಗೆ ಸೇರಿಸಿದನು. ರಾಜನ ಭಾಗವನ್ನು ರಾಜನಿಗೆ ಕೊಟ್ಟನು.

ಹೇ ನಾಮಧಾರಕ, ಶ್ರೀಗುರುಚರಿತ್ರೆಯು ಇಂತಹ ವಿಚಿತ್ರವು. ಶ್ರೀಗುರು ಸುಚರಿತ್ರೆಯನ್ನು ಯಾರ ಮನೆಯಲ್ಲಿ ಕೇಳುತ್ತಾರೋ ಅವರ ಮನೆಯಲ್ಲಿ ತನ್ನ ಸಹಜವಾದ ಚಾಪಲ್ಯವನ್ನು ಬಿಟ್ಟು ಲಕ್ಷ್ಮಿ ಯಾವಾಗಲೂ ನೆಲೆಸಿರುತ್ತಾಳೆ. ಶ್ರೀಗುರು ಸೇವಕನಿಗೆ ದೈನ್ಯವೆಂಬುದು ಇರುವುದಿಲ್ಲ. ಅದರಿಂದಲೇ ಶ್ರೀ ಗಂಗಾಧರಾತ್ಮಜನಾದ ಸರಸ್ವತಿ ಶ್ರೀಗುರುವನ್ನು ಸೇವಿಸಿ ಎಂದು ಉಪದೇಶಿಸಿದನು." 

ಇಲ್ಲಿಗೆ ನಲವತ್ತೆಂಟನೆಯ ಅಧ್ಯಾಯ ಮುಗಿಯಿತು.

||ಶ್ರೀಗುರು ಚರಿತ್ರೆ - ನಲವತ್ತೇಳನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ನಂತರ ಸಿದ್ಧಮುನಿಯು ಹೇಳಿದರು. "ನಾಮಧಾರಕ, ಶ್ರೀಗುರು ಚರಿತ್ರೆಯನ್ನು ಕೇಳು. ಪವಿತ್ರವಾದ ಸುಂದರವಾದ ಚರಿತ್ರೆಯನ್ನು ಕೇಳುವುದರಿಂದ ಪತಿತನು ಪವಿತ್ರನಾಗಬಲ್ಲನು. ಶ್ರೀಗುರುವು ಗಂಧರ್ವನಗರದಲ್ಲಿ ನೆಲೆಸಿದ್ದಾಗ ದೀಪಾವಳಿ ಮಹೋತ್ಸವವು ಬಂತು. ಶ್ರೀಗುರುವನ್ನು ಕರೆದುಕೊಂಡು ಹೋಗಲು ಪ್ರಿಯಭಕ್ತರಾದ ಏಳುಜನ ಶಿಷ್ಯರು ಬಂದು ದೀಪಾವಳಿ ಮಹೋತ್ಸವಕ್ಕೆ ತಮ್ಮ ಮನೆಗೆ ಬರಬೇಕೆಂದು ಕೇಳಿಕೊಂಡರು. ಅವರ ಗ್ರಾಮಗಳು ಬೇರೆಬೇರೆಯವು ಎಂದು ತಿಳಿದ ಶ್ರೀಗುರುವು, "ಎಲ್ಲರ ಮನೆಗೆ ಒಂದೇ ಸಮಯದಲ್ಲಿ ನಾನು ಬರುವುದು ಹೇಗೆ ಸಂಭವ? ನೀವು ಇದನ್ನು ವಿಚಾರಮಾಡಿ ನನಗೆ ಹೇಳಿ. ನಾನು ಹಾಗೆ ಮಾಡುತ್ತೇನೆ" ಎಂದರು. ಆ ಶಿಷ್ಯರು ತಮ್ಮಲ್ಲಿ ತಾವು ಚರ್ಚೆ ಮಾಡಿಕೊಂಡು ಜಗಳವಾಡಲು ಪ್ರಾರಂಭಿಸಿದರು. ಶ್ರೀಗುರುವು ಅವರ ಜಗಳವನ್ನು ನಿಲ್ಲಿಸಿ, "ನಿಮ್ಮ ಜಗಳ ವ್ಯರ್ಥ. ನಿಮ್ಮ ಗುರುವು ನಾನೊಬ್ಬನೇ. ಒಂದು ಮನೆಗೆ ಬರಬಹುದಲ್ಲವೇ?" ಎನ್ನಲು, ಅವರು, "ಸ್ವಾಮಿ, ಇವನು ಸಮರ್ಥನು, ಇವನು ದುರ್ಬಲನು ಎಂಬ ಭೇದ ನೋಡಬೇಡಿ. ತನ್ನ ಭಕ್ತನಾದ ವಿದುರನ ಮನೆಯಲ್ಲಿ ಶ್ರೀಕೃಷ್ಣನು ಗಂಜಿಯನ್ನವನ್ನು ಕೂಡಾ ತಿಂದನು. ಕೌರವರ ಅನ್ನವನ್ನು ಸ್ವೀಕರಿಸಲಿಲ್ಲ. ನಾವೆಲ್ಲರೂ ನಿಮ್ಮ ದಾಸರು. ಸ್ವಾಮಿಯ ಆಜ್ಞೆಯನ್ನು ಶಿರಸಾ ವಹಿಸುವೆವು" ಎಂದು ಒಂದೇ ಕೊರಳಲ್ಲಿ ನುಡಿದು, "ಶ್ರೀಗುರು ನಮ್ಮನ್ನು ನೋಡು" ಎಂದು ಪ್ರಾರ್ಥಿಸಿದರು. ಅದಕ್ಕೆ ಶ್ರೀಗುರುವು, "ನೀವು ನಿಮ್ಮ ನಿಮ್ಮ ಮನೆಗಳಿಗೆ ಹೋಗಿ. ನಾನು ಬರುತ್ತೇನೆ. ಸತ್ಯಪ್ರತಿಜ್ಞೆ ಮಾಡುತ್ತಿದ್ದೇನೆ" ಎಂದರು. ಅದನ್ನು ಕೇಳಿದ ಆ ಏಳೂಜನ ಶಿಷ್ಯರು, "ಸ್ವಾಮಿ, ನಾನು ಬರುತ್ತೇನೆ ಎಂದು ಹೇಳಿದ್ದರಿಂದ ನೀವು ಯಾರ ಮನೆಗೆ ಬರುತ್ತೀರಿ ಎಂಬುದನ್ನು ನಾವು ಹೇಗೆ ತಿಳಿಯಬೇಕು? ಹೇಳಿ" ಎಂದು ಪ್ರಾರ್ಥಿಸಿದರು.

ಶ್ರೀಗುರುವು, "ಆಹಾ, ಇವರು ಎಂತಹ ಅಜ್ಞಾನಿಗಳು. ಇವರನ್ನು ಒಬ್ಬೊಬ್ಬರನ್ನಾಗಿ ಕರೆದು ಹೇಳಬೇಕು" ಎಂದುಕೊಂಡು, ಅವರನ್ನು ಒಬ್ಬೊಬ್ಬರನ್ನಾಗಿ ಕರೆದು, ಅವನ ಕಿವಿಯಲ್ಲಿ, "ನೀನು ಇನ್ನಾರಿಗೂ ಹೇಳಬೇಡ. ನಿನ್ನ ಮನೆಗೆ ನಾವು ಬರುತ್ತೇವೆ" ಎಂದು ಎಲ್ಲರಿಗೂ ಹೇಳಿ ಕಳುಹಿಸಿ, ತಾವು ಮಠಕ್ಕೆ ಹೋದರು. (ಆ ವಿಷಯವನ್ನು ತಿಳಿದ) ಗ್ರಾಮಸ್ಥರು ಅವರಲ್ಲಿಗೆ ಬಂದು, "ಸ್ವಾಮಿ, ನಮ್ಮನ್ನು ಬಿಟ್ಟು ನೀವು ಎಲ್ಲಿಗೆ ಹೋಗುತ್ತೀರಿ?" ಎಂದು ಕೇಳಲು, ಅವರನ್ನು ಸಮಾಧಾನ ಗೊಳಿಸುತ್ತಾ ಶ್ರೀಗುರುವು, "ನಾವು ಇಲ್ಲಿಯೇ ಇರುತ್ತೇವೆ. ಎಂತಹ ಚಿಂತೆಯನ್ನೂ ಇಟ್ಟುಕೊಳ್ಳಬೇಡಿ" ಎಂದು ಹೇಳಿದರು. ಕ್ರಮವಾಗಿ ಕಾಲ ಕಳೆದು ಧನ ತ್ರಯೋದಶಿಯೂ ಬಂತು. ಅದು ಮಂಗಳಸ್ನಾನ ಮಾಡಬೇಕಾದ ದಿನ. ಆ ಸ್ವಾಮಿ ಮಹಿಮೆ ಅಪಾರವಲ್ಲವೇ! ಮಹಾಮಾಯಿಯಾದ ಶ್ರೀಗುರುವು ಅಲ್ಲಿಯೇ ಇದ್ದುಕೊಂಡು, ಸಪ್ತಗ್ರಾಮಗಳಿಗೂ ಹೋದರು. ಅಷ್ಟರೂಪನಾಗಿ ಎಂಟು ಗ್ರಾಮಗಳಲ್ಲೂ ಇದ್ದುಕೊಂಡು ಅರ್ಚನಾದಿಗಳನ್ನು ಗ್ರಹಿಸಿ ಮಠಕ್ಕೆ ಬಂದರು. ಈ ರಹಸ್ಯವು ಯಾರೂ ತಿಳಿಯಲಾರದೇ ಹೋದರು.

ಕಾರ್ತಿಕ ಪೂರ್ಣಿಮೆಯಂದು ತ್ರಿಪುರೋತ್ಸವ. ಎಂಟು ಗ್ರಾಮಗಳವರೂ ಶ್ರೀಗುರು ಸನ್ನಿಧಿಗೆ ಮಠದೊಳಕ್ಕೆ ಬಂದರು. ‘ಹತ್ತು ದಿನಗಳಾದ ಮೇಲೆ ಗುರುದರ್ಶನವಾಯಿತು’ ಎಂದು ಶ್ರೀಗುರುವಿನಲ್ಲಿ ಬಿನ್ನವಿಸಿಕೊಂಡರು. ಅವರೆಲ್ಲರೂ, ಒಬ್ಬೊಬ್ಬರೂ, ನಮ್ಮ ಮನೆಗೆ ಶ್ರೀಗುರುವು ಬಂದಿದ್ದರು, ಇತರರ ಮಾತುಗಳು ನಿಜವಲ್ಲ ಎಂದು ಹೇಳಿಕೊಳ್ಳುತ್ತಾ, ತಾವು ಅವರಿಗೆ ಸಮರ್ಪಿಸಿದ ವಸ್ತ್ರಾದಿಗಳು ಇನ್ನೂ ಗುರು ಸನ್ನಿಧಿಯಲ್ಲೇ ಇವೆ ಎನ್ನುತ್ತಾ ಶ್ರೀಗುರುವಿನ ಬಳಿಯಿದ್ದ ವಸ್ತ್ರಾದಿಗಳನ್ನು ಮಿಕ್ಕವರಿಗೆ ತೋರಿಸುತ್ತಿದ್ದರು. ಅಲ್ಲಿನ ಗ್ರಾಮಸ್ಥರು ಆಶ್ಚರ್ಯಗೊಂಡು ಶ್ರೀಗುರುವು ದೀಪಾವಳಿಗೆ ಇಲ್ಲೆ ಇದ್ದರಲ್ಲವೇ? ಎಂದುಕೊಳ್ಳುತ್ತಿದ್ದರು.

ಅದರಿಂದ ಅವರೆಲ್ಲರೂ ವಿಸ್ಮಿತರಾಗಿ, "ತ್ರಿಮೂರ್ತಿ ಸ್ವರೂಪಿ ಈ ಶ್ರೀಗುರುವೇ!" ಎಂದು ಹೇಳುತ್ತಾ ಅನೇಕ ಸ್ತೋತ್ರಗಳಿಂದ ಶ್ರೀಗುರುವನ್ನು ಸ್ತುತಿಸಿದರು. "ಹೇ ವೇದಸ್ವರೂಪ, ಗುರುನಾಥ, ನಿಮ್ಮ ಮಾಹಾತ್ಮ್ಯವನ್ನು ತಿಳಿದವನಾರಿದ್ದಾನೆ? ನೀವೇ ವಿಷ್ಣುರೂಪರು. ನಿಮ್ಮ ಮಹಿಮೆ ಅಪಾರ. ಭಕ್ತರಕ್ಷಣೆಗಾಗಿ ನೀವು ತ್ರಿರೂಪರು. ನೀವೊಬ್ಬರೇ!" ಎಂದು ಸ್ತುತಿಸಿ ದೀಪಮಾಲಿಕೆಗಳನ್ನು ಹಚ್ಚಿ ಭಕ್ತರು ಬ್ರಾಹ್ಮಣರಿಗೆ ಭೋಜನವಿಟ್ಟರು. ಹೀಗೆ ಶ್ರೀಗುರುವಿನ ಮಹಿಮೆ ಎಲ್ಲ ಕಡೆಯೂ ಖ್ಯಾತಿಗೊಂಡಿತು. ಅದರಿಂದಲೇ ಸರಸ್ವತಿ, "ಈ ಶ್ರೀಗುರುವೇ ಕಲ್ಪದ್ರುಮವು. ಅಜ್ಞಾನಾಂಧಕಾರದಲ್ಲಿ ಮುಳುಗಿದವರು ದೈನ್ಯವನ್ನೇ ಹೊಂದುವರು" ಎಂದು ಹೇಳಿದನು. ಆದ್ದರಿಂದ ಜನಗಳೇ, ಕಾಮನೆಗಳು ಸಿದ್ಧಿಸಲು ಶ್ರೀಗುರುವನ್ನು ಭಜಿಸಿರಿ. ತ್ವರೆಯಾಗಿ ಕಾರ್ಯ ಸಿದ್ಧಿಯಾಗುವುದು. ಶ್ರೀಗುರುವನ್ನು ಸೇವಿಸಿ ಎಂದು ನಾನು ಡಂಗುರ ಹೊಡೆಯುತ್ತೇನೆ. ಶ್ರೀಗುರುವಿಗಿಂತ ಅನ್ಯ ದೈವವಿಲ್ಲ. ಶ್ರೀಗುರುವನ್ನು ನಿಂದಿಸುವ ಮೂಢನು ಹಂದಿಯ ಜನ್ಮ ಪಡೆಯುತ್ತಾನೆ. ಸಂಸಾರವೆನ್ನುವ ದಾವಾಗ್ನಿಯಲ್ಲಿ ಶಲಭವಾಗಿರುವಂತಹ ನಮಗೆ ಅಮೃತಪ್ರಾಯವಾದ ಕಥೆಯನ್ನು ನಾನು ಹೇಳುತ್ತಿದ್ದೇನೆ. ನೃಸಿಂಹ ಸರಸ್ವತಿಯಾಗಿ ತ್ರಿಮೂರ್ತಿ ಅವತರಿಸಿದ್ದಾನೆ. ಗಂಧರ್ವನಗರದಲ್ಲಿ ಆತನು ಸತ್ಪುರುಷರಿಗೆ ಪ್ರತ್ಯಕ್ಷವಾಗಿ ಇದ್ದಾನೆ. ಆ ಸ್ಥಳವನ್ನು ಸೇರುವವರ ಕಾರ್ಯಗಳು ಕ್ಷಣದಲ್ಲಿ ಸಿದ್ಧಿಸುವುವು. ನಿಮಗೆ ಇಷ್ಟವಿದ್ದರೆ ತ್ವರೆಯಾಗಿ ಗಂಧರ್ವನಗರಕ್ಕೆ ಹೋಗಿ ಎಂದು ಸರಸ್ವತಿ ಹೇಳುತ್ತಿದ್ದಾನೆ. 

ಇಲ್ಲಿಗೆ ನಲವತ್ತೇಳನೆಯ ಅಧ್ಯಾಯ ಮುಗಿಯಿತು.

||ಶ್ರೀಗುರು ಚರಿತ್ರೆ - ನಲವತ್ತಾರನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ನಾಮಧಾರಕನು, "ಸ್ವಾಮಿ, ಸಿದ್ಧಯೋಗಿ, ನೀವು ನಂದಿಶರ್ಮನ ಕಥೆಯನ್ನು ಹೇಳಿದಿರಿ. ಇನೊಬ್ಬ ಕವಿ ಶ್ರೀಗುರುವಿನ ಸನ್ನಿಧಿಗೆ ಬಂದನೆಂದೂ ಹೇಳಿದಿರಿ. ಅವನಾರು? ಆ ವಿಷಯವನ್ನು ಹೇಳಬೇಕೆಂದು ಕೋರುತ್ತೇನೆ" ಎಂದು ಕೇಳಿದನು. ಸಿದ್ಧಯೋಗಿ, "ನಾಮಧಾರಕ, ಶ್ರೀಗುರುಚರಿತ್ರೆಯಲ್ಲಿನ ರಮ್ಯವಾದ ಕವಿ ಕಥೆಯನ್ನು ಹೇಳುತ್ತೇನೆ. ಕೇಳು. ಗಂಧರ್ವಪುರದಲ್ಲಿ ಶ್ರೀಗುರುವಿನ ಕೀರ್ತಿ ಬಹಳವಾಗಿ ವ್ಯಾಪಿಸಿತ್ತು. ಬಹಳ ಜನ ಸೇರಿದ್ದರು. ನಂದಿಶರ್ಮನ ಕವಿತೆಗಳನ್ನು ಭಕ್ತರು ಭಕ್ತಿಯಿಂದ ಹಾಡಿಕೊಳ್ಳುತ್ತಿದ್ದರು. ಮತ್ತೊಂದು ಗ್ರಾಮದಲ್ಲಿ ಒಬ್ಬ ವಿಪ್ರಭಕ್ತ ಮಹೋತ್ಸವ ಮಾಡಿಸಿ ಶ್ರೀಗುರುವನ್ನು ತನ್ನ ಮನೆಗೆ ಕರೆದುಕೊಂಡು ಬಂದನು. ಅವನು ಅಲ್ಲಿಂದ ಹಿಪ್ಪರಿಗೆ ಎನ್ನುವ ಗ್ರಾಮಕ್ಕೆ ಹೋಗಿ ಶ್ರೀಗುರುವನ್ನು ಸಂತೋಷದಿಂದ ಪೂಜಿಸಿದನು. ಆ ಗ್ರಾಮದ ಶಿವಾಲಯದಲ್ಲಿ ಕಲ್ಲೇಶ್ವರನೆಂಬ ಶಿವಲಿಂಗವಿತ್ತು. ಅಲ್ಲಿಗೆ ಒಬ್ಬ ಬ್ರಾಹ್ಮಣನು ಬಂದನು. ಅವನ ಹೆಸರು ನರಕೇಸರಿ. ಅವನು ಐದು ಹೊಸ ಪದ್ಯಗಳನ್ನು ಕಲ್ಲೇಶ್ವರನಿಗೆ ಅರ್ಪಿಸಿದನು. ಆ ಬ್ರಾಹ್ಮಣ ಶಿವಸೇವಾಪರನು. ಜನರು ಅವನಿಗೆ, "ಶ್ರೀಗುರುವಿಗೆ ಕವಿತೆಯೆಂದರೆ ಪ್ರೀತಿ. ಆದ್ದರಿಂದ ಶ್ರೀಗುರುವಿನ ಗುಣಗಳನ್ನು ವರ್ಣಿಸು" ಎಂದರು. ಆ ಕವೀಶ್ವರ ಅವರಿಗೆ, "ಈ ನಾಲಗೆ ಕಲ್ಲೇಶ್ವರನಿಗೆ ಅಂಕಿತವಾಗಿದೆ. ನಾನು ನರಸ್ತುತಿಯನ್ನು ಮಾಡುವುದಿಲ್ಲ" ಎಂದು ಹೇಳಿ, ಆ ನರಕೇಸರಿ ಅಂದು ಕೂಡಾ ಶಿವಲಿಂಗವನ್ನು ಪೂಜಿಸಲು ಕುಳಿತನು. (ಆದರೆ) ಅವನು ಗಾಢ ನಿದ್ರೆಯಲ್ಲಿ ಮುಳುಗಿಹೋದನು. ಅವನ ಕನಸಿನಲ್ಲಿ ಯತಿಯಾದ ಶ್ರೀಗುರುವು ಶಿವಲಿಂಗದಲ್ಲಿ ಕೂತು ದರ್ಶನ ಕೊಡಲು ಆ ಬ್ರಾಹ್ಮಣ ಕನಸಿನಲ್ಲಿ ಶ್ರೀಗುರುವನ್ನೇ ಅರ್ಚಿಸುತ್ತಿದ್ದನು. ಅವನಿಗೆ ಲಿಂಗವು ಕಾಣಲಿಲ್ಲ. ಶ್ರೀಗುರುವು, "ಅಯ್ಯಾ, ಕವಿತೆಗೆ ಅನರ್ಹನಾದ ಮಾನವನನ್ನು ಏಕೆ ಅರ್ಚಿಸುತ್ತಿದ್ದೀಯೆ?" ಎಂದು ಕೇಳಿದರು. ಷೋಡಶೋಪಚಾರಗಳಿಂದ ಶ್ರೀಗುರುವನ್ನು ಅರ್ಚಿಸಿದ ಹಾಗೆ ಕನಸು ಕಂಡ ಅವನು ತಕ್ಷಣವೇ ಎಚ್ಚೆತ್ತನು. ಅದರಿಂದ ವಿಸ್ಮಯಗೊಂಡ ನರಕೇಸರಿ ತನ್ನಲ್ಲೇ, "ಈ ನೃಸಿಂಹಸರಸ್ವತಿಯಾಗಿ ಶಿವನೇ ಭೂಮಿಯಲ್ಲಿ ಅವತರಿಸಿದ್ದಾನೆ. ಶ್ರೀಗುರುವು ತ್ರಿಮೂರ್ತಿಗಳ ಅವತಾರವೇ! ಈ ಸ್ವಾಮಿ ದರ್ಶನ ಈಗ ನನ್ನ ಕರ್ತವ್ಯವು" ಎಂದು ಯೋಚಿಸಿ, ತಕ್ಷಣವೇ ಶ್ರೀಗುರುವಿನ ದರ್ಶನಕ್ಕೆ ಹೊರಟು, ಅವರನ್ನು ಸೇರಿ ಅವರ ಚರಣಗಳನ್ನು ಹಿಡಿದು, "ಸ್ವಾಮಿ ನಾನು ಅಜ್ಞನು. ಪ್ರಪಂಚದಲ್ಲಿ ಮಾಯೆ ಸುತ್ತುವರೆದಿರಲು ಆ ಮಾಯೆಯನ್ನು ನಡೆಸುತ್ತಿರುವವನನ್ನು ತಿಳಿಯಲಾರೆನು. ಮುನೀಶ್ವರರಾದ ನೀವು ಸಾಕ್ಷಾತ್ತು ಶಿವನೇ! ಕರ್ಪೂರಗೌರನಾದ ಕಲ್ಲೇಶ್ವರನೂ ನೀವೇ! ಹೇ ಜಗದ್ಗುರು, ಅದರಿಂದಲೇ ನಿಮ್ಮ ಪಾದಗಳಲ್ಲಿ ಶರಣು ಬಂದಿದ್ದೇನೆ. ನೀವೇ ವಿಶ್ವಾಧಾರರು. ಶರಣಾಗತರನ್ನು ರಕ್ಷಿಸುವವರು. ಇಂದು ಯಾವ ಅನುಷ್ಠಾನ ಮಾಡದಿದ್ದರೂ ನೀವು ನನಗೆ ದರ್ಶನ ಕೊಟ್ಟಿರಿ. ಕಲ್ಲೇಶ್ವರನು ಪ್ರಸನ್ನನಾದನು. ಸತ್ಯವಾಗಿಯೂ ನೀವೇ ಕಲ್ಲೇಶ್ವರನು. ಹೇ ಜಗದ್ಗುರು, ದಯೆ ತೋರಿಸಿ" ಎಂದು ಆ ಕವೀಶ್ವರನು ಶ್ರೀಗುರುವಿನ ಪಾದಗಳನ್ನು ಹಿಡಿದನು. ಆಗ ಶ್ರೀಗುರುವು, "ಹೇ ಕವಿ, ನಿತ್ಯವೂ ನಮ್ಮ ನಿಂದೆ ಮಾಡುತ್ತಿದ್ದೀಯೆ. ಇಂದು ಭಕ್ತಿ ಹೇಗೆ ಬಂತು?" ಎಂದು ಅವನನ್ನು ಕೇಳಿದರು. ಆ ಕವಿ, "ಶ್ರೀಗುರುವೇ, ಸ್ವಾಮಿ, ಕಲ್ಲೇಶ್ವರನ ಪೂಜೆಯಿಂದ ನಾನು ಆರ್ಜಿಸಿದ ಪುಣ್ಯ ಪ್ರಭಾವದಿಂದ ಇಂದು ನನಗೆ ನಿಮ್ಮ ಪಾದಗಳು ದೊರೆತವು. ಇಂದು ಕಲ್ಲೇಶ್ವರನ ಮಂದಿರಕ್ಕೆ ಹೋಗಿ ಸ್ವಪ್ನದಲ್ಲಿ ಆ ಶಿವಲಿಂಗದಲ್ಲಿ ನಿಮ್ಮನ್ನೇ ಈಶ್ವರನಾಗಿ ನೋಡಿದೆ. ಆ ಸ್ವಪ್ನದಲ್ಲಿ ನಿಮ್ಮ ಪಾದಯುಗ್ಮಗಳು ನನಗೆ ಕಾಣಿಸಿದವು. ನನಗೆ ಈಗ ಪ್ರತ್ಯಕ್ಷ ದರ್ಶನವಾಯಿತು. ಆದ್ದರಿಂದ ನನ್ನನ್ನು ನಿಮ್ಮ ಶಿಷ್ಯನಾಗಿ ತೆಗೆದುಕೊಳ್ಳಿ" ಎಂದು ಪ್ರಾರ್ಥಿಸಿ, ಆ ಕವಿ ಶ್ರೀಗುರುವನ್ನು ಬಹಳವಾಗಿ ಸ್ತುತಿಸಿದನು. ಹೃದ್ಯವಾದ ಪದ್ಯಗಳಿಂದ ಅವನು ಶ್ರೀಗುರುವನ್ನು ಸ್ತುತಿಸುತ್ತಾ, ಅಲಂಕಾರ, ಲಲಿತವಾದ ಪದಗಳಿಂದ ಮಾನಸ ಪೂಜೆ ಮಾಡಲು ಶ್ರೀಗುರುವು, "ಈ ಕವಿ ಸ್ವಪ್ನದಲ್ಲಿ ನನ್ನನ್ನು ಪೂಜಿಸಿದನು. ಭಕ್ತಿಯಿಂದ ಕೂಡಿದ ಮನಸ್ಸಿನಿಂದ ಅರ್ಚಿಸಿದನು" ಎಂದು ಹೇಳಿ, ಆ ಕವೀಶ್ವರನನ್ನು ಕರೆದು, ಅವನಿಗೆ ವರಗಳನ್ನು ಕೊಟ್ಟು, "ಅಯ್ಯಾ, ಕಲ್ಲೇಶನು ನಮಗೆ ಸಮ್ಮತವಾದವನೇ! ನಿತ್ಯವೂ ಆ ಶಿವನನ್ನು ನೀನು ಭಕ್ತಿಯಿಂದ ಪೂಜಿಸು. ನಾವು ಅಲ್ಲಿಯೂ ನೆಲೆಸಿದ್ದೇವೆ" ಎಂದು ಆಣತಿ ಮಾಡಲು, ಆ ಕವಿ ಶ್ರೀಗುರುವಿಗೆ, "ಸ್ವಾಮಿ, ಪ್ರತ್ಯಕ್ಷ ಸುಲಭನಾದ ನಿಮ್ಮನ್ನು ಬಿಟ್ಟು ನಾನು ಶಿವಲಿಂಗವನ್ನು ಏಕೆ ಪೂಜಿಸಲಿ? ಆ ಶಿವಲಿಂಗದಲ್ಲಿ ನೀವೇ ಕಂಡು ಬಂದಿರಿ. ನೀವೇ ಕಲ್ಲೇಶ್ವರನು. ನೀವೇ ತ್ರಿಮೂರ್ತಿಯು. ಲೀಲೆಯಾಗಿ ಅವತರಿಸಿದ್ದೀರಿ" ಎಂದು ಪ್ರಾರ್ಥಿಸಿ, ಅನುಚರನಾಗಿ, ಗಂಧರ್ವಪುರದಲ್ಲೇ ನಿವಾಸ ಮಾಡಿಕೊಂಡು, ಶ್ರೀಗುರುವನ್ನು ಭಕ್ತಿ ಕೀರ್ತನೆಗಳಿಂದ ಕವಿತಾ ರೂಪದಲ್ಲಿ ಸೇವಿಸಿದನು.

ನಾಮಧಾರಕ, ಹೀಗೆ ಭಕ್ತರಿಬ್ಬರೂ ಕವೀಶ್ವರರಾಗಿ ಶ್ರೀಗುರುವಿನ ಸನ್ನಿಧಿಯಲ್ಲಿ ಇದ್ದುಕೊಂಡು ಶ್ರೀಗುರುವನ್ನು ಸೇವಿಸುತ್ತಿದ್ದರು. ಶ್ರೀಗುರುವು ಪ್ರಸನ್ನನಾದವನಿಗೆ ಕಲ್ಪವೃಕ್ಷವು ಇದ್ದಹಾಗೆ! ಭವಸಾಗರವನ್ನು ತರಿಸುವ ತಾರಕ ಮಾರ್ಗವನ್ನು ಗಂಗಧರಾತ್ಮಜನಾದ ಸರಸ್ವತಿ ಎನ್ನುವ ವಿಪ್ರನು ಹೇಳಿದ ಸತ್ಕಥೆ ಇದು. ಇಹಪರಗಳಿಗೆ ಇದು ಹಿತಪ್ರದವು. 

ಇಲ್ಲಿಗೆ ನಲವತ್ತಾರನೆಯ ಅಧ್ಯಾಯ ಮುಗಿಯಿತು