Saturday, February 16, 2013

||ಶ್ರೀ ಗುರು ಚರಿತ್ರೆ - ಹದಿನಾರನೆಯ ಅಧ್ಯಾಯ||

ಶಿಷ್ಯನಾದ ನಾಮಧಾರಕನು ವಿನಯದಿಂದ, "ಸ್ವಾಮಿ, ಆ ನಂತರದ ಗುರುಚರಿತ್ರೆಯನ್ನು ಹೇಳಿ. ಯಾವ ಯಾವ ಶಿಷ್ಯರು ತೀರ್ಥಯಾತ್ರೆಗಳಿಗೆ ಹೊರಟರು? ಯಾರು ಯಾರು ಅವರ ಸೇವೆಯಲ್ಲಿ ನಿಂತರು? ಎಲ್ಲವನ್ನೂ ತಿಳಿಸಿ" ಎಂದು ಕೇಳಲು, ಸಿದ್ಧಮುನಿ ಹೇಳಿದರು. "ಅಯ್ಯಾ, ನಾಮಧಾರಕ, ಬಹಳ ಕಾಲದಿಂದ ಗುರುಚರಿತ್ರೆಯ ಬಗ್ಗೆ ಮಾತನಾಡದೆ ನನ್ನ ಮನಸ್ಸು ಜಡವಾಗಿತ್ತು. ನೀನು ಅದರ ಬಗ್ಗೆ ಕೇಳಿದ್ದರಿಂದ ನನ್ನ ಮನಸ್ಸು ಈಗ ಉಲ್ಹಾಸಗೊಂಡಿದೆ. ನೀನು ನನ್ನ ಪ್ರಾಣಸಖನಾದೆ. ನಿನ್ನನ್ನು ಕಲೆತಾಗಿನಿಂದಲೂ ಗುರುಚರಿತ್ರೆಯು ನನ್ನ ನೆನಪಿಗೆ ಬರುತ್ತಿದೆ. ಇತರ ಯೋಚನೆಗಳಲ್ಲಿ ಮುಳುಗಿ ಹೋಗಿದ್ದ ನಾನು, ಈಗ ನಿನ್ನಿಂದಾಗಿ ಗುರುಚರಿತ್ರೆ ಎಂಬುವ ಅಮೃತವನ್ನು ಕುಡಿಯುವುದರಲ್ಲಿ ಮಗ್ನನಾಗಿ, ಮನಸ್ಸು ಶಾಂತಿಗೊಂಡಿದೆ. ನೀನು ನನಗೆ ಇಂತಹ ಉಪಕಾರ ಮಾಡಿ ಸಂತೋಷವನ್ನು ತಂದುಕೊಟ್ಟೆ. ನಿನ್ನ ಕುಲ ಉದ್ಧಾರವಾಗುತ್ತದೆ. ನೀನು ಪುತ್ರ ಪೌತ್ರರಿಂದ ಕೂಡಿ ಆನಂದಪಡುವೆ. ನಿನ್ನ ಮನೆಯಲ್ಲಿ ದೈನ್ಯವೆಂಬುದು ಇರುವುದಿಲ್ಲ. ಗುರುವಿನ ಅನುಗ್ರಹದಿಂದ ನೀನು ಈ ಲೋಕದಲ್ಲಿ ಮಾನ್ಯನಾಗುತ್ತೀಯೆ. ಸಂಶಯಪಡಬೇಡ. ನನ್ನನ್ನು ನಂಬು. ನಿನಗೆ ಸರ್ವ ಸಂಪದಗಳೂ ಸಿದ್ಧಿಸುತ್ತವೆ. ಗುರುಚರಿತ್ರೆಯನ್ನು ವಿಸ್ತಾರವಾಗಿ ಹೇಳುತ್ತೇನೆ. ಸಾವಧಾನ ಚಿತ್ತನಾಗಿ ಕೇಳು.

ಶ್ರೀಗುರುವು ವೈದ್ಯೇಶ್ವರ ಸನ್ನಿಧಿಯಲ್ಲಿ ರಹಸ್ಯವಾಗಿದ್ದರು. ಶಿಷ್ಯರೆಲ್ಲರೂ ಗುರುವಿನೆ ಆಜ್ಞೆಯಂತೆ ತೀರ್ಥಾಟನೆಗೆಂದು ಹೊರಟು ಹೋಗಿದ್ದರು. ನಾನು ಗುರುದೇವರ ಸೇವೆಗೆಂದು ಅವರ ಜೊತೆಯಲ್ಲಿ ಇದ್ದೆ. ಒಂದು ವರ್ಷಕಾಲ ಶ್ರೀಗುರುವು ವೈದ್ಯನಾಥದಲ್ಲಿ ರಹಸ್ಯವಾಗಿದ್ದರು. ಅಲ್ಲಿ ಆರೋಗ್ಯಭವಾನಿ ಮಾತೆ ಇದ್ದಾಳೆ. ಅದೊಂದು ಮನೋಹರವಾದ ಸ್ಥಳ. ಅವರು ಅಲ್ಲಿದ್ದಾಗ ಒಬ್ಬ ಬ್ರಾಹ್ಮಣ ಬಂದು ಸದ್ಗುರುವಿಗೆ ನಮಸ್ಕಾರಮಾಡಿ, "ಅಜ್ಞಾನವೆನ್ನುವ ಕತ್ತಲೆಯಲ್ಲಿ ಬಿದ್ದಿರುವ ನನ್ನನ್ನು ಉದ್ಧರಿಸಿ. ಬಹಳ ಕಾಲ ತಪಸ್ಸು ಮಾಡಿದರೂ ನನ್ನ ಮನಸ್ಸು ಇನ್ನೂ ಸ್ಥಿರವಾಗಿಲ್ಲ. ಸನ್ಮಾರ್ಗವು ಯಾವುದೆಂದು ತಿಳಿಯುತ್ತಿಲ್ಲ. ಜ್ಞಾನವಿಲ್ಲದ ತಪಸ್ಸು ವ್ಯರ್ಥವಲ್ಲವೇ? ಈಗ ನಿಮ್ಮ ದರ್ಶನ ಮಾತ್ರದಿಂದಲೇ ನನ್ನ ಮನಸ್ಸು ಶಾಂತಗೊಂಡಿದೆ. ಬಹಳಕಾಲ ಗುರುಸೇವೆ ಮಾಡಲಿಲ್ಲವೆಂದೋ ಅಥವಾ ಇನ್ನಾವುದಾದರೂ ಕಾರಣಕ್ಕಾಗಿಯೋ ನನ್ನ ಮನಸ್ಸು ಸ್ಥಿರವಾಗುತ್ತಿಲ್ಲ. ನೀವೇ ಲೋಕೋದ್ಧಾರಕರು. ನನಗೆ ಉಪದೇಶಕೊಟ್ಟು ಜ್ಞಾನೋದಯವಾಗುವಂತೆ ಮಾಡಿ" ಎಂದು ಪ್ರಾರ್ಥಿಸಿಕೊಂಡನು. ಅವನ ಮಾತು ಕೇಳಿ ಗುರುವು ಅವನನ್ನು, "ಅಯ್ಯಾ, ಗುರುವಿಲ್ಲದೆ ನೀನು ಹೇಗೆ ತಪಸ್ಸು ಮಾಡಿದೆ?" ಎಂದು ಕೇಳಿದರು.

ಅದಕ್ಕೆ ಆ ಬ್ರಾಹ್ಮಣ, ಕಣ್ಣೀರು ಸುರಿಸುತ್ತಾ, "ಸ್ವಾಮಿ, ಗುರುನಾಥ, ನನಗೆ ಗುರುವೊಬ್ಬರಿದ್ದರು. ಆತ ಶೀಘ್ರಕೋಪಿ. ಬಹಳ ನಿಷ್ಠೂರವಾದ ಮಾತುಗಳನ್ನಾಡುತ್ತಾ, ನನ್ನಾನ್ನು ದುಷ್ಕರವಾದ ಸೇವೆಯಲ್ಲಿ ನಿಯಮಿಸಿ ಬಹಳವಾಗಿ ಪೀಡಿಸುತ್ತಿದ್ದರು. ವೇದ, ಶಾಸ್ತ್ರ, ತರ್ಕ, ವ್ಯಾಕರಣಗಳೇನನ್ನೂ ಬೋಧಿಸಲಿಲ್ಲ. ಬರಿಯ ಸೇವೆ ಮಾಡಿಸುತ್ತಿದ್ದರು. ನನ್ನ ಮೇಲೆ ಸದಾ ಕೋಪಿಸಿಕೊಳ್ಳುತ್ತಿದ್ದರು. ಅದರಿಂದ ನನ್ನ ಮನಸ್ಸು ಸ್ಥಿರಗೊಳ್ಳಲಿಲ್ಲ. ಅಂತಹ ನಿಷ್ಠುರಗಳನ್ನಾಡುವ ಗುರುವನ್ನು ಬಿಟ್ಟು ಬಂದೆ" ಎಂದು ಹೇಳಿದನು.

ಅದನ್ನು ಕೇಳಿ, ಶ್ರೀಗುರುವು, "ಅಯ್ಯಾ ಬ್ರಾಹ್ಮಣ, ನೀನು ಆತ್ಮಘಾತಕನಾದೆ. ಮೂಢನೊಬ್ಬ ದೇವಾಲಯದೊಳಗೆ ಮಲವಿಸರ್ಜನೆ ಮಾಡುತ್ತಿದ್ದನು. ಅದನ್ನು ಕಂಡ ಇನ್ನೊಬ್ಬ ಅವನನ್ನು ನಿಂದಿಸಿದನು. ಅದಕ್ಕೆ ಆ ಮೂಢ ತನ್ನನ್ನು ನಿಂದಿಸಿದವನನ್ನು ಹಿಂತಿರುಗಿಸಿ ಬೈದನು. ಹಾಗೆ ನೀನು ಕಿವಿ ಮೂಗುಗಳನ್ನು ಕತ್ತರಿಸಿಕೊಂಡು ಹೋಗುತ್ತಿದ್ದೀಯೆ. ಅದೇನೆಂದು ಕೇಳಿದವನನ್ನು ನಿಂದಿಸುತ್ತಿದ್ದೀಯೆ. ನಿನ್ನ ಅವಗುಣಗಳನ್ನು ತಿಳಿದುಕೊಳ್ಳದೆ ನಿನಗೆ ಜ್ಞಾನ ಹೇಗೆ ಲಭ್ಯವಾಗುತ್ತದೆ? ಅಷ್ಟೇ ಆಲ್ಲದೆ ಗುರುನಿಂದೆ ಮಾಡಿ ದುರ್ಬುದ್ಧಿಯಾದ ನೀನು ಗುರು ದ್ರೋಹಿಯಾದೆ. ಮನೆಯನ್ನು ಬಿಟ್ಟು ಕಾಡಿನಲ್ಲಿ ಅಲೆಯುತ್ತಿರುವೆ. ಕಾಮಧೇನುವಂತಹ ಗುರುವನ್ನು ಬಿಟ್ಟು ಓಡಿಹೋಗುತ್ತಿದ್ದೀಯೇಕೆ? ನೀನೇ ನಿನ್ನ ಗುರುವಿನ ದೋಷಗಳನ್ನು ಎತ್ತಿತೋರಿಸಿ ಆಡಿಕೊಳ್ಳುತ್ತಿದ್ದೀಯೆ. ನಿನಗೆ ಮನಸ್ಸು ಹೇಗೆ ಸ್ಥಿರವಾಗಬಲ್ಲದು? ಜ್ಞಾನ ಹೇಗೆ ಉಂಟಾಗುತ್ತದೆ? ಗುರುದ್ರೋಹಿಗೆ ಇಹಪರಗಳೆರಡರಲ್ಲೂ ಸುಖವಿರಲಾರದು. ಅಜ್ಞಾನಾಂಧಕಾರದಲ್ಲಿ ಮುಳುಗಿದವನಿಗೆ ಜ್ಞಾನ ಹೇಗೆ ಲಭಿಸುವುದು? ಗುರುಸೇವಾ ಪದ್ಧತಿಯನ್ನು ಅರಿತವನಿಗೆ ಮಾತ್ರವೇ ವೇದಾದಿಗಳು ತಿಳಿಯುತ್ತವೆ. ಸದ್ಗುರುವು ಸಂತುಷ್ಟನಾದರೆ ಸರ್ವಜ್ಞತ್ವ ಲಭ್ಯವಾಗುತ್ತದೆ. ಸದ್ಗುರುವನ್ನು ಸಂತೋಷಗೊಳಿಸಿದವನು ಅಷ್ಟಸಿದ್ಧಿಗಳನ್ನೂ ಪಡೆಯುತ್ತಾನೆ. ಕ್ಷಣಮಾತ್ರದಲ್ಲಿ ವೇದಶಾಸ್ತ್ರಗಳೆಲ್ಲ ಸುಲಭವಾಗುತ್ತವೆ" ಎಂದು ಹೇಳಿದರು. ಅದನ್ನು ಕೇಳಿದ ಆ ಬ್ರಾಹ್ಮಣ, ಗುರುವಿನ ಚರಣಗಳಲ್ಲಿ ತಲೆಯಿಟ್ಟು, ವಿನೀತನಾಗಿ, ದೀನನಾಗಿ, "ಜ್ಞಾನಸಾಗರ, ನೀವು ನಿರ್ಗುಣರು. ದುರ್ಬುದ್ಧಿಯಾದ ನನ್ನನ್ನು ಉದ್ಧರಿಸಿ. ಮಾಯಾ ಮೋಹಿತನಾದ ನಾನು ಸದ್ಗುರುವನ್ನು ಗುರುತಿಸಲಾರದೆ ಹೋದೆ. ನನ್ನಲ್ಲಿ ದಯೆತೋರಿ ಜ್ಞಾನದಾನ ಮಾಡಿ. ಗುರುಸೇವಾ ರೀತಿ ಹೇಗೆ? ನನ್ನ ಮನಸ್ಸು ಸ್ಥಿರವಾಗಿ, ಹೇಗೆ ಗುರುವನ್ನು ತಿಳಿದುಕೊಳ್ಳಬೇಕು? ಹೇ ವಿಶ್ವವಂದ್ಯ, ಎಲ್ಲವನ್ನೂ ವಿಸ್ತರಿಸಿ ಹೇಳಿ, ನನಗೆ ಉಪಕಾರ ಮಾಡಿ" ಎಂದು ಪ್ರಾರ್ಥಿಸಿಕೊಂಡನು.

ಅವನ ಮಾತುಗಳನ್ನು ಕೇಳಿದ ಗುರುವು ಅವನಲ್ಲಿ ಕೃಪೆಮಾಡಿ, "ಅಯ್ಯಾ, ಗುರುವೇ ತಂದೆ, ತಾಯಿ, ಹಿತಕರ್ತ, ಉದ್ಧರಿಸುವವನು. ಅವನೇ ತ್ರಿಮೂರ್ತಿ ಸ್ವರೂಪನು. ಅದರಲ್ಲಿ ಸಂಶಯಬೇಡ. ಮನಸ್ಸನ್ನು ಸ್ಥಿರಮಾಡಿ ಕಷ್ಟಪಟ್ಟಾದರೂ, ಗುರುಸೇವೆಯನ್ನು ಮಾಡಬೇಕು. ಮಹಾಭಾರತದ ಆದಿಪರ್ವದಲ್ಲಿ ಗುರುಸೇವೆಯ ಬಗ್ಗೆ ವಿಶೇಷವಾಗಿ ಹೇಳಲ್ಪಟ್ಟಿದೆ. ಅದಕ್ಕೆ ನಿದರ್ಶನವಾಗಿ ಒಂದು ಕಥೆಯನ್ನು ಹೇಳುತ್ತೇನೆ. ಸಮಾಧಾನಚಿತ್ತನಾಗಿ ಕೇಳು.

ದ್ವಾಪರಯುಗದಲ್ಲಿ ಧೌಮ್ಯನೆಂಬ ಋಷಿವರ್ಯನೊಬ್ಬನಿದ್ದನು. ಆತ ಮಹಾಜ್ಞಾನಿ. ಆತನಿಗೆ ಅರುಣ, ಬೈದ, ಉಪಮನ್ಯು ಎಂಬ ಮೂರು ಜನ ಗುರುಸೇವಾ ಪರಾಯಣರಾದ ಶಿಷ್ಯರಿದ್ದರು. ಶಿಷ್ಯನ ಸೇವೆಯನ್ನು ಸ್ವೀಕರಿಸಿ, ಅವನ ಅಂತಃಕರಣ ಶುದ್ಧಿಗಾಗಿ ಅವನನ್ನು ಪರೀಕ್ಷಿಸಿ, ಅವನಲ್ಲಿ ಭಕ್ತಿ ಧೃಢವಾಗಿ ನೆಲೆಗೊಂಡಿದೆ ಎಂಬುದನ್ನು ಖಚಿತ ಮಾಡಿಕೊಂಡ ನಂತರ ಅವನ ಅಭೀಷ್ಟಗಳನ್ನು ನೆರವೇರಿಸುವುದು, ಅವನನ್ನು ಅನುಗ್ರಹಿಸುವುದು ಪ್ರಾಚೀನ ಗುರು ಸಂಪ್ರದಾಯ. ಅದರಂತೆ ಧೌಮ್ಯನು ಅವರನ್ನು ಪರೀಕ್ಷಿಸಲು ನಿರ್ಧರಿಸಿಕೊಂಡನು.

ಅದರಂತೆ, ಒಂದು ದಿನ ಧೌಮ್ಯನು ಅರುಣನನ್ನು ಕರೆದು, "ಅರುಣ, ಹೊಲದಲ್ಲಿ ಧಾನ್ಯವನ್ನು ಹಾಕಿದ್ದೇವೆ. ನೀರಿಲ್ಲದಿದ್ದರೆ ಅದು ಒಣಗಿಹೋಗುತ್ತದೆ. ನೀನು ಹೋಗಿ ಕೆರೆಯಿಂದ ನೀರು ಹಾಯಿಸಿ ಹೊಲದಲ್ಲಿ ನೀರು ತುಂಬಿಸಿ ಬಾ" ಎಂದನು. ಗುರುವಿನ ಆಜ್ಞೆಯಂತೆ ಅರುಣ ಹೊಲಕ್ಕೆ ಹೋಗಿ ನದಿಯಿಂದ ಹೊಲಕ್ಕೆ ಕಾಲುವೆ ಮಾಡಿದನು. ಆದರೆ ನೀರಿನ ಪ್ರವಾಹವು ಕಾಲುವೆಯೊಳಕ್ಕೆ ಬಹಳ ವೇಗವಾಗಿದ್ದುದರಿಂದ ಕಾಲುವೆಯ ಪಕ್ಕಗಳು ಕುಸಿದು ನೀರು ಅಕ್ಕ ಪಕ್ಕಗಳಿಗೆ ಹರಿದು ಹೋಗಿ, ಹೊಲ ಸ್ವಲ್ಪ ಎತ್ತರದಲ್ಲಿದ್ದುದರಿಂದ, ಹೊಲದೊಳಕ್ಕೆ ಹೋಗುತ್ತಿರಲಿಲ್ಲ. ನೀರನ್ನು ಹೊಲದೊಳಕ್ಕೆ ಹರಿಸಲು ಮಾಡಿದ ಅವನ ಎಲ್ಲ ಪ್ರಯತ್ನಗಳೂ ವಿಫಲವಾದವು. ನೀರನ್ನು ಸರಿಯಾದ ದಾರಿಗೆ ತರಲು ಅವನು ದೊಡ್ಡ ದೊಡ್ಡ ಕಲ್ಲುಗಳನ್ನು ಅಡ್ಡ ಇಟ್ಟನು. ಆದರೆ ನೀರು ಹೋಗ ಬೇಕಾದ ದಾರಿಯನ್ನೇ ಬಿಟ್ಟು ಬೇರೆ ದಾರಿ ಹಿಡಿಯಿತು. ಹೊಲದೊಳಕ್ಕೆ ನೀರು ಹರಿಯಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಅವನು ನೀರನ್ನು ಹೊಲದೊಳಕ್ಕೆ ತರಲಾಗಲಿಲ್ಲ. ಅದರಿಂದ ಬಹಳ ನಿರಾಶನಾದ ಅರುಣ, ದೇವರನ್ನು ಸ್ಮರಿಸುತ್ತ, ನೀರು ಹೊಲದೊಳಕ್ಕೆ ಹೋಗದಿದ್ದರೆ ನಾನು ಪ್ರಾಣತ್ಯಾಗ ಮಾಡುತ್ತೇನೆ ಎಂದು ನಿರ್ಧರಿಸಿ, ಶ್ರೀಗುರುವಿನ ಧ್ಯಾನಮಾಡುತ್ತಾ, ಕಲ್ಲುಗಳಿಟ್ಟುದದರಿಂದ ಅಡ್ಡ ದಾರಿಯನ್ನು ಹಿಡಿದಿದ್ದ ನೀರಿನ ಎದುರಿಗೆ ತನ್ನ ದೇಹವನ್ನೇ ಇಟ್ಟು ನೀರಿನ ಪ್ರವಾಹವನ್ನು ತಡೆದನು. ಆಗ ನೀರು ಸರಿಯಾದ ದಾರಿಯನ್ನು ಹಿಡಿದು ಹೊಲದೊಳಕ್ಕೆ ಹೊರಟಿತು. ಆ ಪ್ರಯತ್ನದಿಂದ ಅವನ ದೇಹವು ನೀರಿನಲ್ಲಿ ಮುಳುಗಿ ಹೋಯಿತು. ಹಾಗೆ ಅವನು ಗುರುವಿನ ಆಜ್ಞೆಯನ್ನು ಪಾಲಿಸಿದನು. ಬಹಳ ಹೊತ್ತಾದರೂ ಅರುಣ ಹಿಂತಿರುಗಿ ಬರಲಿಲ್ಲವೆಂದು ಆತಂಕಗೊಂಡ ಗುರುವು ಅಲ್ಲಿಗೆ ಬಂದು ಹೊಲದಲ್ಲಿ ನೀರು ತುಂಬಿರುವುದನ್ನು ನೋಡಿ ಬಹಳ ಸಂತೋಷಗೊಂಡನು. ಆದರೆ ಶಿಷ್ಯನಾದ ಅರುಣ ಎಲ್ಲಿಯೂ ಕಾಣಲಿಲ್ಲವಾದ್ದರಿಂದ ಅವನನ್ನು ಹುಡುಕುತ್ತಾ, "ಹೇ ಅರುಣ ಎಲ್ಲಿದ್ದೀಯೆ?" ಎಂದು ಗಟ್ಟಿಯಾಗಿ ಕೂಗುತ್ತಾ, ಅವನ ಜಾಡನ್ನು ಹುಡುಕಲು ಆರಂಭಿಸಿದನು. ಗುರುವಿನ ಕೂಗು ಅರುಣನ ಕಿವಿಗೆ ಬಿದ್ದು, ಅವನು ಪ್ರಯತ್ನಮಾಡಿ ಮೆಲ್ಲಮೆಲ್ಲಗೆ ಎದ್ದುಬಂದು ಗುರುವಿನ ಪಾದಗಳಿಗೆ ನಮಸ್ಕರಿಸಿ, ಭಕ್ತಿಯಿಂದ ಗುರುವಿನ ಎದುರಿಗೆ ನಿಂತನು. ಅವನಿಂದ ಎಲ್ಲವನ್ನೂ ಕೇಳಿಸಿಕೊಂಡ ಗುರುವು, ಅವನನ್ನು ಆಲಂಗಿಸಿಕೊಂಡು, "ನೀನು ನನ್ನ ಶಿಷ್ಯರಲ್ಲಿ ಉತ್ತಮನು. ನೀನು ವೇದಶಾಸ್ತ್ರ ನಿಪುಣನಾಗು" ಎಂದು ಆಶೀರ್ವದಿಸಿದನು. ಮತ್ತೊಮ್ಮೆ ತನ್ನ ಪಾದಗಳಿಗೆ ನಮಸ್ಕರಿಸಿದ ಅರುಣನನ್ನು, ಕೃಪಾನಿಧಿಯಾದ ಧೌಮ್ಯನು, "ಮಗು ನೀನು ಇನ್ನು ನಿನ್ನ ಮನೆಗೆ ಹೋಗಿ, ಅನುರೂಪಳಾದ ಕನ್ಯೆಯನ್ನು ವಿವಾಹ ಮಾಡಿಕೊಂಡು ಕೃತಾರ್ಥನಾಗು" ಎಂದು ಮತ್ತೊಮ್ಮೆ ಅಶೀರ್ವದಿಸಿ ಕಳುಹಿಸಿದನು. ಗುರ್ವಾಜ್ಞೆಯನ್ನು ಶಿರಸಾವಹಿಸಿ ಅರುಣ ತನ್ನ ಮನೆಗೆ ಹಿಂತಿರುಗಿ ವಿದ್ವದ್ವೇತ್ತನಾಗಿ ಸುಖವಾಗಿ ಜೀವಿಸಿದನು.

ಅರುಣ ಹೊರಟುಹೋದಮೇಲೆ ಧೌಮ್ಯನಿಗೆ ಇನ್ನೂ ಇಬ್ಬರು ಶಿಷ್ಯರಿದ್ದರು. ಅವರಲ್ಲಿ ಬೈದನನ್ನು ಪರೀಕ್ಷಿಸಲು ಧೌಮ್ಯನು ಅವನನ್ನು ಕರೆದು, "ಬೈದ, ಹೊಲಕ್ಕೆ ಹೋಗಿ ಅಲ್ಲಿ ದಿನಪೂರ್ತಿ ಕಾವಲಿದ್ದು ಬೆಳೆಯನ್ನು ಕಾಪಾಡಿ, ಅದು ಪಕ್ವವಾದ ಮೇಲೆ ಕೊಯ್ದು, ಧಾನ್ಯವನ್ನೆಲ್ಲಾ ಮನೆಗೆ ತೆಗೆದುಕೊಂಡು ಬಾ" ಎಂದು ಹೇಳಿದನು. ಗುರುವಿನ ಆಜ್ಞೆಯನ್ನು ಶಿರಸಾವಹಿಸಿ, ಬೈದನು ಸಂತೋಷದಿಂದ ಹೊಲಕ್ಕೆ ಹೋಗಿ ಫಸಲು ಪಕ್ವವಾಗುವವರೆಗೂ ಅದನ್ನು ಕಾಯುತ್ತಿದ್ದು, ಪಕ್ವವಾದಮೇಲೆ ಅದನ್ನು ಕೊಯ್ದು ಧಾನ್ಯವನ್ನೆಲ್ಲಾ ಬೇರೆಮಾಡಿ, ಗುರುವಿನ ಸನ್ನಿಧಿಗೆ ಬಂದು, "ಧಾನ್ಯವನ್ನೆಲ್ಲಾ ಬೇರೆಮಾಡಿ, ರಾಶಿಮಾಡಿದ್ದೇನೆ. ಅದನ್ನು ಮನೆಗೆ ತರಲು ಅನುಮತಿ ಕೊಡಿ" ಎಂದು ಹೇಳಿದನು. ಧೌಮ್ಯನು ಅವನಿಗೆ ಗಾಡಿಯೊಂದನ್ನು ಕೊಟ್ಟು, "ಬೇಗ ಹೋಗಿ ಧಾನ್ಯವನ್ನೆಲ್ಲ ತಂದು ಮನೆಗೆ ಸೇರಿಸು" ಎಂದು ಹೇಳಿದನು. ಆ ಗಾಡಿಗೆ ಎರಡು ಎಮ್ಮೆಗಳ ಬದಲಾಗಿ ಒಂದೇ ಎಮ್ಮೆಯಿತ್ತು. ಬೈದನು, ಗಾಡಿಯಲ್ಲಿ ಧಾನ್ಯವನ್ನೆಲ್ಲ ತುಂಬಿ, ಒಂದೇ ಎಮ್ಮೆ ಇದ್ದದ್ದರಿಂದ ಅದನ್ನು ಒಂದು ಕಡೆ ಕಟ್ಟಿ, ಇನ್ನೊಂದು ಕಡೆ ತಾನೇ ನೊಗವನ್ನು ಹಿಡಿದು ಗಾಡಿಯನ್ನು ಎಳೆದು ತರುತ್ತಿರುವಾಗ, ದಾರಿಯಲ್ಲಿ ಎಮ್ಮೆ ಒಂದು ಹಳ್ಳದಲ್ಲಿ ಬಿದ್ದು ಹೋಯಿತು. ಬೈದನು ಆ ಎಮ್ಮೆಯನ್ನು ನೊಗದಿಂದ ಬಿಡಿಸಿ, ತಾನೊಬ್ಬನೇ ಗಾಡಿಯನ್ನು ಎಳೆಯಲು ಪ್ರಯತ್ನಿಸಿದನು. ತನ್ನ ಬಲವನ್ನೆಲ್ಲ ಬಿಟ್ಟು ಬಹು ಭಾರವಾದ ಆ ಗಾಡಿಯನ್ನು ಎಳೆಯುತ್ತಿರಲು, ಉಸಿರುಕಟ್ಟಿ ಮೂರ್ಛಿತನಾಗಿ ಬಿದ್ದುಬಿಟ್ಟನು. ಬಹಳ ಸಮಯವಾದರೂ ಮನೆಗೆ ಬೈದನು ಬರಲಿಲ್ಲವೆಂದು ಅವನನ್ನು ಹುಡುಕುತ್ತಾ ಬಂದ ಧೌಮ್ಯನು, ಅವನು ಮೂರ್ಛಿತನಾಗಿ ಬಿದ್ದಿದ್ದುದನ್ನು ಕಂಡು, ಅವನನ್ನು ಎಬ್ಬಿಸಿ, ಆಲಂಗಿಸಿಕೊಂಡು, "ನೀನು ವೇದಶಾಸ್ತ್ರವೇತ್ತನಾಗು" ಎಂದು ಆಶೀರ್ವದಿಸಿದನು, ಕ್ಷಣದಲ್ಲಿಯೇ ಸರ್ವವಿದ್ಯಾ ವಿಶಾರದನಾಗಿ ಬೈದನು, ಗುರುವಿನ ಅನುಮತಿ ಪಡೆದು, ತನ್ನ ಮನೆಗೆ ಹಿಂತಿರುಗಿ ಪ್ರಖ್ಯಾತನಾದನು.

ಮೂರನೆಯವನು ಉಪಮನ್ಯುವು. ಅವನೂ ಗುರುಸೇವಾ ಪರಾಯಣನೇ! ಆದರೆ ಅವನು ಆಹಾರ ಪ್ರಿಯನಾದದ್ದರಿಂದ ಅವನಿಗೆ ವಿದ್ಯಾಭ್ಯಾಸದಲ್ಲಿ ಮನಸ್ಸು ಸ್ಥಿರವಾಗಲಿಲ್ಲ. ಅದರ ಬಗ್ಗೆ ಚಿಂತಿಸಿ ಧೌಮ್ಯನು ಒಂದು ಉಪಾಯವನ್ನು ಮಾಡಿದನು. ಒಂದು ದಿನ ಧೌಮ್ಯನು ಉಪಮನ್ಯುವನ್ನು ಕರೆದು, "ಮಗು, ಹಸುಗಳನ್ನು ಪ್ರತಿದಿನವೂ ಕಾಡಿಗೆ ಕರೆದುಕೊಂಡು ಹೋಗಿ ಅವನ್ನು ಮೇಯಿಸಿಕೊಂಡು ಬಾ" ಎಂದು ಹೇಳಿದನು. ಉಪಮನ್ಯುವು ಗುರುವಾಜ್ಞೆಯನ್ನು ಶಿರಸಾವಹಿಸಿ, ಹಸುಗಳನ್ನು ಕರೆದುಕೊಂಡು ಹೋಗುತ್ತಿದ್ದನು. ಆದರೆ ಅವನಿಗೆ ಹಸಿವು ಹೆಚ್ಚಾಗಿದ್ದುದರಿಂದ ಅವನು ಹಸಿವೆಯನ್ನು ತಾಳಲಾರದೆ, ಬಹಳ ಬೇಗ ಮನೆಗೆ ಹಿಂತಿರುಗುತ್ತಿದ್ದನು. ಅದನ್ನು ಗಮನಿಸಿದ ಗುರುವು, ಕೋಪಗೊಂಡು, "ನೀನೇಕೆ ಹಸುಗಳನ್ನು ಬೇಗನೆ ಮನೆಗೆ ಕರೆದುಕೊಂಡು ಬರುತ್ತಿದ್ದೀಯೆ? ಸೂರ್ಯಾಸ್ತಮದವರೆಗೂ ಅವುಗಳನ್ನು ಮೇಯಿಸಿಕೊಂಡು ಬರಬೇಕು" ಎಂದು ಆಜ್ಞೆ ಮಾಡಿದನು. ಹಾಗೇ ಆಗಲೆಂದು ಹೇಳಿ, ಉಪಮನ್ಯುವು ಹಸುಗಳನ್ನು ಕರೆದುಕೊಂಡು ಹೋಗಿ, ಹಸಿವೆಯನ್ನು ತಾಳಲಾರದೆ, ಅಲ್ಲಿ ನದಿಯಲ್ಲಿ ಸಂಧ್ಯಾ ಕರ್ಮಗಳನ್ನಾಚರಿಸಿ, ಹತ್ತಿರದಲ್ಲಿದ್ದ ಗ್ರಾಮದಲ್ಲಿ ಬ್ರಾಹ್ಮಣರ ಮನೆಗಳಲ್ಲಿ ಭಿಕ್ಷೆಯೆತ್ತಿ, ಭಿಕ್ಷಾನ್ನವನ್ನುಂಡು, ಸಾಯಂಕಾಲದವೇಳೆಗೆ ಹಸುಗಳನ್ನು ಮನೆಗೆ ಕರೆತರುತ್ತಿದ್ದನು. ಅವನನ್ನು ಗಮನಿಸುತ್ತಿದ್ದ ಧೌಮ್ಯನು ಶಿಷ್ಯನು ಹಸಿವೆಯಿಂದ ಒದ್ದಾಡದೇ ಇರುವುದನ್ನು ಕಂಡು, "ಶಿಷ್ಯ, ನೀನು ಕಾಡಿನಲ್ಲಿ ಉಪವಾಸ ಇರುತ್ತೀಯೆ ಅಲ್ಲವೇ? ಆದರೂ ನಿನ್ನ ಶರೀರವು ಪುಷ್ಟಿಯಾಗಿಯೇ ಕಾಣುತ್ತಿದೆ. ಅದಕ್ಕೆ ಕಾರಣವೇನು?" ಎಂದು ಕೇಳಿದನು. ಉಪಮನ್ಯುವು, "ಗುರುದೇವ, ನಾನು ವಿಪ್ರರ ಮನೆಗಳಲ್ಲಿ ಭಿಕ್ಷೆಯೆತ್ತಿ ಹಸಿವೆ ತೀರಿಸಿಕೊಂಡು ಹಸುಗಳನ್ನು ಮೇಯಿಸುತ್ತಿದ್ದೇನೆ" ಎಂದು ಹೇಳಿದನು. ಅದನ್ನು ಕೇಳಿ ಧೌಮ್ಯನು ಕೋಪದಿಂದ, "ನನಗೆ ನಿವೇದಿಸದೆ ಹೇಗೆ ನೀನು ಭಿಕ್ಷಾನವನ್ನು ತಿನ್ನುತ್ತೀಯೆ? ಇನ್ನುಮೇಲೆ, ಪ್ರತಿದಿನವೂ ಭಿಕ್ಷೆಮಾಡಿದ ನಂತರ ಅದನ್ನು ನನಗೆ ತಂದುಕೊಟ್ಟು ಮತ್ತೆ ಕಾಡಿಗೆ ಹೋಗಿ ಹಸುಗಳನ್ನು ಮೇಯಿಸಿಕೊಂಡು ಬಾ" ಎಂದು ಆಜ್ಞೆ ಮಾಡಿದನು. ಹಾಗೇ ಆಗಲೆಂದು ಹೇಳಿ, ಉಪಮನ್ಯುವು, ಪ್ರತಿದಿನ ಭಿಕ್ಷಾನ್ನವನ್ನು ತಂದು ಗುರುವಿಗೆ ಅರ್ಪಿಸಿ ಕಾಡಿಗೆ ಹಿಂತಿರುಗಿ, ಎರಡನೆಯ ಸಲ ಭಿಕ್ಷೆಯೆತ್ತಿ ತಿಂದು ಹಸುಗಳನ್ನು ಕಾಯಲು ಹೋಗುತ್ತಿದ್ದನು. ಹೀಗೇ ಸ್ವಲ್ಪ ಕಾಲವಾದಮೇಲೆ ಅವನು ಇನ್ನೂ ಪುಷ್ಟಿಯಾಗಿಯೇ ಇರುವುದನ್ನು ಕಂಡ ಧೌಮ್ಯನು, ಮತ್ತೆ ಅವನನ್ನು ಅದಕ್ಕೆ ಕಾರಣವೇನೆಂದು ಕೇಳಿದನು. ಉಪಮನ್ಯುವು ತನ್ನ ಹಸಿವಿನ ಉಪಶಮನಕ್ಕಾಗಿ ತಾನು ಎರಡನೆಯ ಸಲ ಭಿಕ್ಷೆ ಎತ್ತುತ್ತಿರುವುದಾಗಿ ಹೇಳಿದನು. ಅದಕ್ಕೆ ಧೌಮ್ಯನು ಕ್ರುದ್ಧನಾಗಿ, "ಎರಡನೆಯ ಸಲ ಮಾಡಿದ ಭಿಕ್ಷೆಯನ್ನೂ ನನಗೇ ತಂದು ಕೊಡಬೇಕು" ಎಂದು ಆಜ್ಞೆ ಮಾಡಿದನು. ಉಪಮನ್ಯುವು ಗುರುವಿನ ಆಜ್ಞೆಯಂತೆ ಎರಡನೆಯಸಲ ಮಾಡಿದ ಭಿಕ್ಷೆಯನ್ನೂ ತಂದು ಗುರುವಿಗೆ ಅರ್ಪಿಸಿ ಮತ್ತೆ ಕಾಡಿಗೆ ಹಸುಗಳನ್ನು ಕಾಯಲು ಹೋಗುತ್ತಿದ್ದನು. ಆದರೆ ತಾಳಲಾರದ ಹಸಿವಿನಿಂದ ಅವನು ಕರುಗಳು ಹಾಲು ಕುಡಿದಾದಮೇಲೆ ಹಾಲು ಸುರಿಯುವುದನ್ನು ಕಂಡು, ಅ ಎಂಜಲು ಹಾಲನ್ನು ಕುಡಿಯಬಹುದೆಂದು ತಿಳಿದು ಅದನ್ನು ಕುಡಿದು ಹಸಿವೆ ತೀರಿಸಿಕೊಳ್ಳುತ್ತಿದ್ದನು. ಹೀಗೆ ದಿನವೂ ಹಾಲು ಕುಡಿದು ಪುಷ್ಟಿಯಾಗಿದ್ದ ಅವನನ್ನು ಕಂಡು ಧೌಮ್ಯನು ಅವನನ್ನು ಕಾರಣ ಕೇಳಲು, ತಾನು ಕರುಗಳು ಕುಡಿದು ಬಿಟ್ಟ ಹಾಲನ್ನು ಕುಡಿಯುತ್ತಿದ್ದೇನೆಂದು ನಿಜವನ್ನು ನುಡಿದನು. ಅದಕ್ಕೆ ಗುರುವು, "ಎಂಜಲು ಹಾಲು ಕುಡಿಯುವುದರಿಂದ ಅನೇಕ ದೋಷಗಳುಂಟಾಗುತ್ತವೆ. ಅದರಿಂದ ಅದನ್ನು ಕುಡಿಯಬೇಡ" ಎಂದು ಆಣತಿಯಿತ್ತನು. ಆ ಆಣತಿಯನ್ನೂ ಪಾಲಿಸಿದ ಉಪಮನ್ಯುವು ಹಸಿವಿನಿಂದ ಕಂಗೆಟ್ಟು, ಚಿಂತಾಕುಲನಾಗಿ, ಹಸುಗಳನ್ನು ಮೇಯಿಸುತ್ತಾ, ದಾರಿಯಲ್ಲಿ ಎಕ್ಕದ ಗಿಡವೊಂದರಿಂದ ಹಾಲು ಸುರಿಯುತ್ತಿರುವುದನ್ನು ಕಂಡನು. ಈ ಹಾಲು ಎಂಜಲಲ್ಲ. ಇದನ್ನು ಕುಡಿಯಬಹುದು ಎಂದು ಯೋಚಿಸಿ, ಒಂದು ಎಲೆಯಲ್ಲಿ ಆ ಹಾಲನ್ನು ಹಿಡಿದು ಕುಡಿಯುತ್ತಿರುವಾಗ ಆ ಹಾಲು ಅವನ ಕಣ್ಣಲ್ಲಿ ಬಿದ್ದು ಅವನಿಗೆ ಕಣ್ಣು ಕಾಣದೇ ಹೋಯಿತು. ಕಣ್ಣಿಲ್ಲದವನಾಗಿ, ದಾರಿ ತಿಳಿಯದೆ, ಎಲ್ಲಿ ಹೋಗುತ್ತಿದ್ದೇನೆಂಬ ಅರಿವಿಲ್ಲದೆ, ಚಿಂತಾ ಕ್ರಾಂತನಾಗಿ ಹಸುಗಳನ್ನು ಹುಡುಕುತ್ತಾ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಭಾವಿಯಲ್ಲಿ ಬಿದ್ದುಹೋದನು.

ಹಿಂತಿರುಗಿದ ಹಸುಗಳ ಜೊತೆಗೆ ಉಪಮನ್ಯುವು ಬರದಿದ್ದುದನ್ನು ಕಂಡ ಗುರುವು ಅವನೇನಾದನೋ ಎಂದು ಚಿಂತೆಗೊಂಡು, ಅವನನ್ನು ಹುಡುಕಲು ಕಾಡಿಗೆ ಹೋಗಿ, ಅವನ ಹೆಸರು ಕೂಗುತ್ತಾ, ಹುಡುಕಾಡಿದನು. ಗುರುವಿನ ಕೂಗನ್ನು ಕೇಳಿದ ಉಪಮನ್ಯುವು ಭಾವಿಯೊಳಗಿಂದಲೇ ಕ್ಷೀಣವಾದ ಧ್ವನಿಯಿಂದ ಉತ್ತರಿಸಿದನು. ಅದನ್ನು ಕೇಳಿ ಗುರುವು ಅಲ್ಲಿಗೆ ಬಂದು ನಡೆದದ್ದೆಲ್ಲವನ್ನೂ ಅವನಿಂದ ತಿಳಿದುಕೊಂಡು ಅವನಿಗೆ ಅಶ್ವಿನಿದೇವತೆಗಳನ್ನು ಪ್ರಾರ್ಥಿಸಿಕೊಳ್ಳುವಂತೆ ಹೇಳಿದನು. ಉಪಮನ್ಯುವು ಅದೇ ರೀತಿ ಪ್ರಾರ್ಥಿಸಿಕೊಳ್ಳಲು, ಅಶ್ವಿನಿ ದೇವತೆಗಳ ಅನುಗ್ರಹದಿಂದ ಅವನಿಗೆ ಹಿಂದಿನಂತೆ ದೃಷ್ಟಿ ಬಂತು. ಭಾವಿಯಿಂದ ಮೇಲಕ್ಕೆ ಬಂದು ಅವನು ಗುರು ಪಾದಗಳಿಗೆ ನಮಸ್ಕರಿಸಿ, ಸ್ತೋತ್ರಮಾಡಿದನು. ಅದರಿಂದ ಸಂತೋಷಗೊಂಡ ಧೌಮ್ಯನು, "ಶಿಷ್ಯೋತ್ತಮ ನಿನ್ನ ಭಕ್ತಿಗೆ ಮೆಚ್ಚಿದೆ" ಎಂದು ಹೇಳಿ ಅವನ ತಲೆಯಮೇಲೆ ಕೈಯಿಟ್ಟು ಅಶೀರ್ವದಿಸಿದನು. ತಕ್ಷಣವೇ ಉಪಮನ್ಯುವು ವೇದಶಾಸ್ತ್ರನಿಪುಣನಾದನು. ಗುರುವು, "ಮಗು, ನೀನು ನಿನ್ನ ಮನೆಗೆ ಹಿಂತಿರುಗಿ, ನಿನಗೆ ಅನುರೂಪಳಾದ ಕನ್ಯೆಯನ್ನು ಮದುವೆಯಾಗಿ ಸುಖವಾಗಿ ಜೀವನಮಾಡು. ನಿನ್ನ ಕೀರ್ತಿ ನಾಲ್ಕೂ ದಿಕ್ಕುಗಳಲ್ಲಿ ಹರಡಿ, ನಿನ್ನ ಶಿಷ್ಯರೂ ನಿನ್ನಂತಹವರೇ ಆಗುತ್ತಾರೆ. ಅವರಲ್ಲಿ ಉದಂಕನೆಂಬುವನೊಬ್ಬನು ಪ್ರಸಿದ್ಧಿಯಾಗುತ್ತಾನೆ. ನಾಗರನ್ನು ಜಯಿಸಿ ನಿನಗೆ ದಕ್ಷಿಣೆಯೆಂದು ಅವನು ನಾಗಕುಂಡಲಗಳನ್ನು ತಂದುಕೊಡುತ್ತಾನೆ. ಜನಮೇಜಯನ ಸರ್ಪಯಾಗದಲ್ಲಿ ಸರ್ಪಗಳಹೋಮ ಮಾಡಿ ಸರ್ಪಗಳ ನಾಶಮಾಡುತ್ತಾನೆ" ಎಂದು ಅವನನ್ನು ಆಶೀರ್ವದಿಸಿ ಕಳುಹಿಸಿದರು. ಉಪಮನ್ಯುವು ಮನೆಗೆ ಹಿಂತಿರುಗಿ ಗುರುವು ಹೇಳಿದಂತೆ ಮಾಡಿ ಪ್ರಖ್ಯಾತನಾದನು.

ಉಪಮನ್ಯುವಿನ ಶಿಷ್ಯ ಉದಂಕನು ಇಂದ್ರ ರಕ್ಷಿತ ತಕ್ಷಕನನ್ನು ಕೂಡ, ಗುರುಕೃಪಾ ಸಾಮರ್ಥ್ಯದಿಂದ, ಯಾಗದಲ್ಲಿ ಕರೆಯಲು ಸಮರ್ಥನಾದನು. ಗುರುದ್ರೋಹಿಗೆ ಇಹಪರಗಳಲ್ಲಿ ಸುಖವಿಲ್ಲ. ಗುರುದ್ರೋಹಿಯಾದ ಶಿಷ್ಯನು ಕುಂಭೀಪಾಕ ನರಕದಲ್ಲಿ ಬೀಳುತ್ತಾನೆ. ಗುರುವು ಸಂತುಷ್ಟನಾದರೆ ಸಾಧಿಸಲಸಾಧ್ಯವೆನ್ನುವುದು ಯಾವುದೂ ಇರುವುದಿಲ್ಲ. ಗುರುವು ಸಂತೋಷಗೊಂಡರೆ ಕ್ಷಣದಲ್ಲಿ ಶಿಷ್ಯನಿಗೆ ವೇದಶಾಸ್ತ್ರಾದಿಗಳು ಲಭ್ಯವಾಗುತ್ತವೆ. ಇದನ್ನು ತಿಳಿಯದೆ ನೀನು ಭ್ರಮೆಯಲ್ಲಿ ಬಿದ್ದಿದ್ದೀಯೆ. ಈಗಲಾದರೂ ಗುರುವಿನ ಬಳಿಗೆ ಹೋಗು. ಅವನೇ ನಿನ್ನನ್ನು ಉದ್ಧರಿಸಬಲ್ಲವನು. ನಿನ್ನ ಗುರುವು ಸಂತೋಷಗೊಂಡರೆ ನಿನಗೆ ಮಂತ್ರಸಿದ್ಧಿ ಶೀಘ್ರವಾಗಿ ಆಗುವುದು. ಈ ವಿಷಯವನ್ನು ನಿನ್ನ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡು ನೀನು ನಿನ್ನ ಗುರುವಿನ ಬಳಿಗೆ ಹೋಗು" ಎಂದು ಶ್ರೀಗುರುವು ಆ ಬ್ರಾಹ್ಮಣನಿಗೆ ಹೇಳಲು, ಅವನಿಗೆ ನಿಜದ ಅರಿವುಂಟಾಗಿ, ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟು, "ಹೇ ಗುರುದೇವ, ಪರಾರ್ಥ ಸಾಧನವು ನೀವೇ! ಕೃಪೆಯಿಟ್ಟು ನನಗೆ ತತ್ತ್ವಬೋಧೆ ಮಾಡಿದಿರಿ. ನಿಜವಾಗಿಯೂ ನಾನು ಗುರುದ್ರೋಹಿಯೇ! ನನ್ನ ಅಪರಾಧಗಳಿಗೆ ಕೊನೆಯಿಲ್ಲ. ನನ್ನ ಗುರುವಿನ ಮನಸ್ಸಿಗೆ ನೋವುಂಟುಮಾಡಿದೆ. ಅವನು ನನ್ನಲ್ಲಿ ಹೇಗೆ ಪ್ರಸನ್ನನಾಗುತ್ತಾನೆ? ಚಿನ್ನ ಬೆಳ್ಳಿ ಮುಂತಾದ ಲೋಹಗಳು ಮುರಿದರೆ ಅವನ್ನು ಸರಿಮಾಡಬಹುದು. ಆದರೆ ಮುತ್ಯವು ಒಡೆದರೆ ಅದನ್ನು ಸರಿಮಾಡಲಾಗುವುದೇ? ಹಾಗೆ ನಾನು ನನ್ನ ಗುರುವಿನ ಅಂತಃಕರಣವನ್ನು ಒಡೆದು ಬಿಟ್ಟಿದ್ದೇನೆ. ಅದನ್ನು ಸರಿಪಡಿಸಲಾಗುವುದಿಲ್ಲ. ಈ ಗುರುದ್ರೋಹಿಯ ಶರೀರವು ಇನ್ನು ಇರಬಾರದು. ಗುರ್ವಾರ್ಪಣವೆಂದು ಈ ಶರೀರವನ್ನು ತ್ಯಾಗಮಾಡುತ್ತೇನೆ" ಎಂದು ಹೇಳಿ, ಶ್ರೀಗುರುವಿಗೆ ನಮಸ್ಕಾರಮಡಿ, ಪಶ್ಚಾತ್ತಾಪ ದಗ್ಧನಾದ ಆ ಬ್ರಾಹ್ಮಣನು ಪ್ರಾಣ ತ್ಯಾಗಮಾಡಲು ಉದ್ಯುಕ್ತನಾದನು. ಹಾಗೆ ಪಶ್ಚಾತ್ತಾಪ ದಗ್ಧವಾದ ಬ್ರಾಹ್ಮಣನ ಮನಸ್ಸು ನಿಷ್ಕಲ್ಮಷವಾಯಿತು. ನಿಜವಾದ ಪಶ್ಚಾತ್ತಾಪದಿಂದ ನೂರು ಜನ್ಮಗಳಲ್ಲಿ ಮಾಡಿದ್ದ ಪಾಪಗಳೂ ಕೂಡಾ ನಾಶವಾಗಿ ಹೋಗಬಲ್ಲವು.

ಹೀಗೆ ವಿರಕ್ತನಾಗಿ ದೇಹತ್ಯಾಗಕ್ಕೆ ಸಿದ್ಧನಾಗುತ್ತಿದ್ದ ಬ್ರಾಹ್ಮಣನನ್ನು ಕರೆದು, "ಅಯ್ಯಾ ವಿಪ್ರ. ಚಿಂತಿಸಬೇಡ. ನಿನ್ನ ದುರಿತಗಳೆಲ್ಲ ನಾಶವಾದವು. ನಿನಗೆ ವೈರಾಗ್ಯವುಂಟಾಗಿದೆ. ಈಗ ನಿನ್ನ ಗುರುವನ್ನು ಸಮಾಧಾನ ಚಿತ್ತನಾಗಿ ಸ್ಮರಿಸಿಕೋ" ಎಂದು ಅಪ್ಪಣೆ ಮಾಡಿದರು. ತಕ್ಷಣವೇ ಅವನು, "ಸ್ವಾಮಿ, ನೀವು ತ್ರಿಮೂರ್ತ್ಯವತಾರರು. ಜಗದ್ಗುರುವು. ಭವತಾರಕರು. ನಿಮ್ಮ ಕೃಪೆ ನನ್ನ ಮೇಲೆ ಸರ್ವವಿಧದಲ್ಲೂ ಇರಲು ನನಗೆ ಪಾತಕಗಳಿನ್ನೆಲ್ಲಿಯದು?" ಎಂದು ಶ್ರೀಗುರುವನ್ನು ಭಕ್ತಿಯಿಂದ ಸ್ತುತಿಸಿ, ಪುಲಕಿತನಾಗಿ, ನಿರ್ಮಲ ಮನಸ್ಕನಾಗಿ, ಕಣ್ಣೀರುಸುರಿಸುತ್ತಾ, ವಿನಯ ವಿನಮ್ರತೆಗಳಿಂದ, "ಉದ್ಧರಿಸು, ಉದ್ಧರಿಸು" ಎಂದು ಮತ್ತೆ ಮತ್ತೆ ಪ್ರಾರ್ಥಿಸುತ್ತಾ, ಸಾಷ್ಟಾಂಗನಮಸ್ಕಾರ ಮಾಡಿದನು.

ಅವನು ನಮಸ್ಕಾರಮಾಡಿ ಏಳುತ್ತಿದ್ದಹಾಗೆಯೇ, ವೇದಶಾಸ್ತ್ರ ನಿಪುಣನಾಗಿ, ಶ್ರೀಗುರುವಿನಿಂದ ಉದ್ಧರಿಸಲ್ಪಟ್ಟನು. ಶಂಕರನೇ ಪ್ರಸನ್ನನಾದಮೇಲೆ ಬೇರೆ ದೇವತೆಗಳ ಅವಶ್ಯಕತೆಯಾದರೂ ಏನು? ಗುರುಪಾದ ಸ್ಪರ್ಶದಿಂದ ಆ ಬ್ರಾಹ್ಮಣನು ಜ್ಞಾನಿಯಾಗಿ ಆನಂದ ತುಂಬಿದವನಾದನು. ಆಗ ಶ್ರೀಗುರುವು ಅವನನ್ನು ನೋಡಿ, "ಅಯ್ಯಾ, ನನ್ನ ಮಾತು ಕೇಳಿ, ಈಗ ನೀನು ನಿನ್ನ ಗುರುಸನ್ನಿಧಿಯನ್ನು ಸೇರು. ನಿನ್ನ ಹಿಂತಿರುಗುವಿಕೆಯಿಂದ ಆತನು ಸಂತುಷ್ಟನಾಗುತ್ತಾನೆ. ನೀನು ಆತನಿಗೆ ನಮಸ್ಕರಿಸುತ್ತಲೂ ಆತ ಇನ್ನೂ ಹೆಚ್ಚಿನ ಸಂತೋಷದಿಂದ ನಿನ್ನನ್ನು ಆದರಿಸುತ್ತಾನೆ. ಆತನೇ ನಾನೆಂದು ತಿಳಿದುಕೋ. ಇದರಲ್ಲಿ ನಿನಗೆ ಸಂದೇಹಬೇಡ" ಎಂದು ಹೇಳಿ ಆ ಬ್ರಾಹ್ಮಣನನ್ನು ಕಳುಹಿಸಿಕೊಟ್ಟರು. ಆ ಬ್ರಾಹ್ಮಣ ತನ್ನ ಗುರುಸನ್ನಿಧಿಯನ್ನು ಸೇರಿ ಮುಕ್ತನಾದನು.

ನಂತರ ಶ್ರೀಗುರುವು ಕೃಷ್ಣಾನದೀ ತೀರ ಯಾತ್ರೆಮಾಡುತ್ತಾ ಭಿಲ್ಲವಟಿ ಎಂಬ ಊರನಲ್ಲಿರುವ ಭುವನೇಶ್ವರಿಯನ್ನು ಸೇರಿದರು. ಕೃಷ್ಣವೇಣಿಯ ಪಶ್ಚಿಮತೀರದಲ್ಲಿ ಔದುಂಬರ ವೃಕ್ಷವಿದೆ. ಅದರ ಮೂಲದಲ್ಲಿ ಶ್ರೀಗುರುವು ನಿಂತರು. ಆ ಸ್ಥಳದಲ್ಲಿ ಸರ್ವಸಿದ್ಧಿಗಳೂ ಇವೆ. ಆ ಪ್ರದೇಶದ ಮಹಿಮೆಯನ್ನು ಕೇಳಿದರೂ ಸಾಕು ಮೋಕ್ಷ ಪ್ರಾಪ್ತಿಯಾಗುತ್ತದೆ." 

ಇಲ್ಲಿಗೆ ಹದಿನಾರನೆಯ ಅಧ್ಯಾಯ ಮುಗಿಯಿತು.



No comments:

Post a Comment