Tuesday, February 19, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತೊಂದನೆಯ ಅಧ್ಯಾಯ||

ಸಿದ್ಧಮುನಿ ಮುಂದುವರೆಸಿ ಹೇಳಿದರು. "ಆ ಬ್ರಹ್ಮಚಾರಿ ಅವಳಿಗೆ "ಅಮ್ಮಾ, ಮೂರ್ಖಳಂತೆ ದುಃಖಿಸಬೇಡ. ಕ್ಷಣಭಂಗುರವಾದ ಈ ಜೀವನದಲ್ಲಿ ಚಿರಂಜೀವಿಯಾದವನು ಯಾರಿದ್ದಾನೆ? ಹುಟ್ಟಿದವನಾರು? ಸತ್ತವನಾರು? ಜಲಬಿಂದುವಿನಂತೆ, ಹುಟ್ಟಿದ ಮಾನವರು ಅಶಾಶ್ವತರು. ಪಂಚಭೂತಗಳಿಂದಾಗಿ ವ್ಯಕ್ತವಾದ ಈ ದೇಹ, ಅವು ಬೇರೆಗೊಂಡಾಗ ಅವ್ಯಕ್ತವಾಗುತ್ತದೆ. ಅಂತಹ ಪಂಚ ಭೂತಾತ್ಮಕ ಶರೀರಗಳನ್ನು ನಾವು ಮಗ, ಮಗಳು, ಹೆಂಡತಿ, ಮಿತ್ರ ಎಂದು ನೋಡುತ್ತಿದ್ದೇವೆ. ತ್ರಿಗುಣಗಳಿಂದ ಕೂಡಿದ ಮನಸ್ಸು ನಮ್ಮನ್ನು ನಾನು, ನನ್ನದು ಮುಂತಾದ ಭ್ರಮೆಯಲ್ಲಿ ಸಿಲುಕಿಸುತ್ತದೆ. ಸತ್ವ ಗುಣದಿಂದ ದೇವತ್ವ, ರಜೋಗುಣದಿಂದ ಮಾನವತ್ವ, ತಮೋಗುಣದಿಂದ ರಾಕ್ಷಸತ್ವ, ಕರ್ಮಾನುಸಾರವಾಗಿ ಏರ್ಪಡುತ್ತದೆ. ತಮ್ಮ ಸುಕೃತ ದುಷ್ಕೃತಗಳಿಂದ ಪುಣ್ಯ ಪಾಪ ಫಲಗಳುಂಟಾಗಿ ಮಾನವರು ಆ ಫಲಗಳನ್ನು ತಾವೇ ಅನುಭವಿಸ ಬೇಕಾಗುತ್ತದೆ. ಇಂದ್ರಿಯಗಳೂ ಈ ಗುಣಗಳನ್ನನುಸರಿಸಿ ಪ್ರವರ್ತಿಸುತ್ತವೆ. ಅದರಿಂದುಂಟಾದ ಸುಖ ದುಃಖಗಳನ್ನೆಲ್ಲ ಜೀವಿಯು ಅನುಭವಿಸಲೇಬೇಕು. ಹುಟ್ಟಿದ ಮನುಷ್ಯರೆಲ್ಲರೂ ಈ ಗುಣಗಳಿಂದುಂಟಾದ ಕರ್ಮ ಫಲವಾಗಿ ಬರುವ ಸುಖ-ದುಃಖಗಳನ್ನು ಪಡೆಯುತ್ತಾರೆ. ಕಲ್ಪಾಂತದವರೆಗೂ ಆಯುಸ್ಸುಳ್ಳ ದೇವತೆಗಳೂ ಇದರಿಂದ ತಪ್ಪಿಸಿ ಕೊಳ್ಳಲಾರರು. ಇನ್ನು ಮಾನವರ ಮಾತೇನು? ದೇಹಕ್ಕೆ ಹುಟ್ಟುವುದು, ಇರುವುದು, ಬೆಳೆಯುವುದು, ಬದಲಾಗುವುದು, ಕ್ಷೀಣಿಸುವುದು, ನಾಶವಾಗುವುದು ಎನ್ನುವ ಆರು ವಿಕಾರಗಳು ಕ್ರಮವಾಗಿ ಉಂಟಾಗುತ್ತದೆ. ದೇಹವು ಸ್ಥಿರ ಎನ್ನುವುದು ಎಲ್ಲಿದೆ? ಅದು ನಿಶ್ಚಯವಾಗಿಯೂ ಕಾಲಾಧೀನವೇ! ಅದರಿಂದಲೇ ಜ್ಞಾನಿಗಳು ಹುಟ್ಟಿದರೆ ಸಂತೋಷಪಡುವುದಿಲ್ಲ. ಸತ್ತರೆ ದುಃಖಪಡುವುದಿಲ್ಲ. ನೀರಿನಲ್ಲಿರುವ ಗಾಳಿ ಗುಳ್ಳೆಗಳಂತೆ ಈ ದೇಹವು ನಾಶವಾಗುವಂತಹುದೇ! ಕೆಲವರು ಬಾಲ್ಯದಲ್ಲಿ, ಕೆಲವರು ಯೌವನದಲ್ಲಿ, ಕೆಲವರು ವಾರ್ಧಕ್ಯದಲ್ಲಿ ಸಾಯುವರು. ಕರ್ಮಫಲ ಇರುವವರೆಗೆ ಈ ದೇಹವು ಫಲಾನುಭವಕ್ಕಾಗಿ ಇರುತ್ತದೆ. ತಂದೆ, ತಾಯಿ, ಮಗ, ಮಗಳು, ಅಣ್ಣ, ತಂಗಿ, ಬಂಧು ಬಾಂಧವರು ಎಲ್ಲರೂ ತಮ್ಮವರು ಏಂಬ ಭ್ರಮೆಯಿಂದ ಮೂಢರು ಮಾಯಾ ಮೋಹಿತರಾಗಿ ಹಾಳಾಗುತ್ತಿದ್ದಾರೆ. ಮಾಂಸ, ಮೂಳೆ, ರಕ್ತ, ಶ್ಲೇಷ್ಮ, ಮಲ ಮೂತ್ರಾದಿಗಳಿಂದ ತುಂಬಿದೆ ಈ ದೇಹ. ದೇಹಿಯಾದವನು ಬ್ರಹ್ಮಲಿಪಿಯನ್ನನುಸರಿಸಿ ಸುಖ ದುಃಖಗಳನ್ನು ಅನುಭವಿಸುತ್ತಾನೆ. ಕಾಲ ಕರ್ಮಗಳನ್ನು ಜಯಿಸಿದವರಾರು? ಅದರಿಂದಲೇ ಈ ದೇಹ ಶಾಶ್ವತವಲ್ಲ. ಕನಸಿನಲ್ಲಿ ಕಂಡ ಗಂಟು ಎಚ್ಚರಗೊಂಡಮೇಲೆ ಎಲ್ಲಿರುತ್ತದೆ? ಸಂಬಂಧಗಳೇ ನಿಜವಾದರೆ ಹಿಂದಿನ ಜನ್ಮದಲ್ಲಿ ನೀನೇನಾಗಿದ್ದೆ ಎಂದು ಹೇಳಬಲ್ಲೆಯಾ? ನಿನ್ನ ತಂದೆ ತಾಯಿಗಳು ಯಾರಾಗಿದ್ದರು ಎಂಬುದನ್ನು ಹೇಳಬಲ್ಲೆಯಾ? ಮುಂದಿನ ಜನ್ಮದಲ್ಲಿ ನೀನೇನಾಗುತ್ತೀಯೆಂದು ಹೇಳಬಲ್ಲೆಯಾ? ಪುತ್ರ ಶೋಕದಿಂದ ನೀನು ಅನವಶ್ಯಕವಾಗಿ ವ್ಯಥೆ ಪಡುತ್ತಿದ್ದೀಯೆ. ಅಸ್ಥಿ ಚರ್ಮಗಳಿಂದಾದ ಈ ದೇಹದ ಮೇಲೆ ಮಮಕಾರವು ಸಲ್ಲದು. ಮಗನಾರು? ಸಾವೆಲ್ಲಿಂದ ಬಂತು? ನೀನು ಭ್ರಮೆಯಿಂದ ದುಃಖಿಸುತ್ತಿದ್ದೀಯೆ. ಅದನ್ನು ಬಿಟ್ಟು ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡಲು ಶವವನ್ನು ಅವರಿಗೆ ಕೊಡು" ಎಂದು ಆ ಬ್ರಹ್ಮಚಾರಿ ಅವಳಿಗೆ ಉಪದೇಶ ಮಾಡಿದನು.

ಅದಕ್ಕೆ ಅವಳು, "ಸ್ವಾಮಿ, ನೀವು ನನ್ನಲ್ಲಿ ಕರುಣೆ ತೋರಿ ಉಪದೇಶ ಮಾಡಿದಿರಿ. ಆದರೂ ನನ್ನ ಮನಸ್ಸು ಸಮಾಧಾನಗೊಳ್ಳುತ್ತಿಲ್ಲ. ಪ್ರಾರಬ್ಧವೇ ಪ್ರಮಾಣ ಎನ್ನುವುದಾದರೆ ಪೂಜೆ ಪುನಸ್ಕಾರಗಳೇಕೆ? ಚಿಂತಾಮಣಿಯ ಸ್ಪರ್ಶದಿಂದಲೇ ಲೋಹ ಚಿನ್ನವಾಗುತ್ತದೆಯಲ್ಲವೇ? ಅದೃಷ್ಟ ಹೀನಳೆಂದು ತಿಳಿದೇ ನಾನು ಶ್ರೀಗುರುವನ್ನು ಆಶ್ರಯಿಸಿದೆ. ಶ್ರೀಗುರುವು ನನಗೆ ಅಭಯಕೊಟ್ಟು, ಈಗ ನನ್ನನ್ನು ಏಕೆ ಹೀಗೆ ದೂರ ಮಾಡಿದ್ದಾರೆ? ಜ್ವರ ಪೀಡಿತನಿಗೆ ವೈದ್ಯ ಕೊಟ್ಟ ಔಷಧದಿಂದ ಗುಣವಾಗುತ್ತದೆ. ಹಾಗೆ ನಾನು ತ್ರಿಮೂರ್ತಿ ಸ್ವರೂಪನಾದ ಶ್ರೀಗುರುವನ್ನು ಆಶ್ರಯಿಸಿದೆ. ಅವರು ಕೊಟ್ಟ ಫಲ ವಿಫಲ ಹೇಗಾಗುತ್ತದೆ? ಅವರನ್ನು ನಂಬಿದ ನಾನು ಮೂರ್ಖಳೇ? ಅದರಿಂದಲೇ ನಾನು ಅವರ ಎದುರಿಗೇ ಪ್ರಾಣ ಬಿಡುತ್ತೇನೆ" ಎಂದು ನಿಶ್ಚಿತವಾಗಿ ಹೇಳಿದಳು. ಅವಳ ದೃಢ ನಿರ್ಧಾರವನ್ನು ಅರಿತ ಬ್ರಹ್ಮಚಾರಿ ವೇಷದ ಶ್ರೀಗುರುವು ಅವಳಿಗೆ, " ಶ್ರೀಗುರುವಿನಲ್ಲಿ ನಿನಗೆ ಅಷ್ಟು ನಂಬಿಕೆಯಿದ್ದರೆ, ನಿನ್ನ ಮಗನ ಶವವನ್ನು, ಎಲ್ಲಿ ನಿನಗೆ ಗುರುವಿನ ಅನುಗ್ರಹವಾಯಿತೋ ಅಲ್ಲಿಗೆ ತೆಗೆದುಕೊಂಡು ಹೋಗಿ, ಅಲ್ಲಿಯೇ ದಹನಮಾಡು. ಕೃಷ್ಣಾನದಿ ತಟದಲ್ಲಿರುವ ಔದುಂಬರವು ಕಲ್ಪವೃಕ್ಷವೇ!" ಎಂದು ಹೇಳಿದರು.

ಅವನ ಮಾತಿನಂತೆ ಅವಳು ತನ್ನ ಮಗನ ಶವವನ್ನು ಆತುಕೊಂಡು, ಆ ಔದುಂಬರ ವೃಕ್ಷದ ಬಳಿಗೆ ಹೋದಳು. ಅಲ್ಲಿರುವ ಶ್ರೀಗುರುವಿನ ಪಾದುಕೆಗಳಿಗೆ ತನ್ನ ತಲೆಯನ್ನು ಚಚ್ಚಿಕೊಳ್ಳುತ್ತಾ, ತನ್ನ ರಕ್ತದಿಂದ ಆ ಪಾದುಕೆಗಳನ್ನು ತೋಯಿಸಿದಳು. ಎಲ್ಲ ಶೋಕಗಳಿಗಿಂತಲೂ ಪುತ್ರ ಶೋಕವೆನ್ನುವುದು ಬಹಳ ದೊಡ್ಡದು. ಆ ರೀತಿಯಲ್ಲಿ ಅವಳು ದುಃಖಿಸುತ್ತಾ, ಸೂರ್ಯಾಸ್ತವಾದರೂ ಶವವನ್ನು ದಹನಕ್ಕಾಗಿ ಕೊಡಲಿಲ್ಲ. ಬ್ರಾಹ್ಮಣರು ಸಂಸ್ಕಾರ ಮಾಡಲು ಶವವನ್ನು ಕೊಡು ಎಂದು ಎಷ್ಟು ಕೇಳಿದರೂ ಅವಳು ಒಪ್ಪದೆ ಕಣ್ಣಿರು ಸುರಿಸುತ್ತಾ ಪಾದುಕೆಗಳಮೇಲೆ ಬಿದ್ದಳು. ಬಂದಿದ್ದ ಬ್ರಾಹ್ಮಣರು, "ರಾತ್ರಿಯಾಯಿತು, ಇನ್ನು ನಾವಿಲ್ಲಿರಬಾರದು. ಇಲ್ಲಿ ಕಳ್ಳರ ಬಾಧೆಯೂ ಹೆಚ್ಚು. ನಾವು ಮನೆಗೆ ಹಿಂತಿರುಗಿ ಮತ್ತೆ ಬೆಳಗ್ಗೆ ಬರೋಣ. ಶವದಿಂದ ದುರ್ವಾಸನೆ ಬಂದಾಗಲಾದರೂ ಅವಳೇ ಶವವನ್ನು ನಮಗೆ ಒಪ್ಪಿಸುತ್ತಾಳೆ" ಎಂದು ತಮ್ಮಲ್ಲೇ ಯೋಚಿಸಿ, ಅವಳಿಗೆ, "ಅಮ್ಮಾ, ರಾತ್ರಿ ಹೊತ್ತಿನಲ್ಲಿ ಇಲ್ಲಿ ಗಂಡಸರೇ ಇರಲು ಹೆದರುತ್ತಾರೆ. ಇಲ್ಲಿ ಕಳ್ಳರ ಕಾಟವೂ ಜಾಸ್ತಿ. ನೀವು ಇಲ್ಲಿರಬಾರದು" ಎಂದು ಹೇಳಿ ಹೊರಟು ಹೋದರು. ರಾತ್ರಿ ಶವದೊಂದಿಗೆ ಅಲ್ಲಿ ತಾಯಿ ತಂದೆಗಳು ಮಾತ್ರವಿದ್ದರು.

ಎರಡು ದಿನಗಳಿಂದ ನಿದ್ರೆಯಿಲ್ಲದೆ, ಕಣ್ಣಿರು ಸುರಿಸುತ್ತಾ ಶವದೊಂದಿಗೆ ಕುಳಿತಿದ್ದ ಸುಶೀಲಳಿಗೆ ಕುಳಿತಿದ್ದ ಹಾಗೇ ನಿದ್ರೆ ಬಂದಿತು. ಕನಸಿನಲ್ಲಿ ಅವಳಿಗೆ ತೇಜಃಪುಂಜವಾದ ಆಕೃತಿಯೊಂದು ಕಾಣಿಸಿತು. ಜಟಾಧಾರಿಯಾಗಿ, ಚರ್ಮಾಂಬರ ಧರಿಸಿ, ಭಸ್ಮ ಧೂಳಿತನಾಗಿ, ರುದ್ರಾಕ್ಷಮಾಲೆ ಕಂಠದಲ್ಲಿ ಧರಿಸಿ, ಕೈಯ್ಯಲ್ಲಿ ತ್ರಿಶೂಲ ಹಿಡಿದಿದ್ದ ಆ ಆಕೃತಿ ಅವಳನ್ನು ಸಂಬೋಧಿಸಿ, "ಅಮ್ಮಾ, ನನ್ನನ್ನು ಏಕೆ ನಿಂದಿಸುತ್ತೀಯೆ? ಈಗಲೇ ನಿನ್ನ ಮಗನ ಪ್ರಾಣ ಹಿಂತಿರುಗಿಸುತ್ತೇನೆ" ಎಂದು ಹೇಳಿ, ಶವಕ್ಕೆ ಭಸ್ಮ ಹಚ್ಚಿ, ಅವನ ಮೂಗಿನಲ್ಲಿ ಗಾಳಿ ಊದಿ, "ಇವನ ಹೋಗಿದ್ದ ಪ್ರಾಣವನ್ನು ಮತ್ತೆ ಕೊಟ್ಟಿದ್ದೇನೆ. ಇನ್ನು ನಿನ್ನ ಶೋಕವನ್ನು ಬಿಟ್ಟು ಸಮಾಧಾನ ಚಿತ್ತಳಾಗು" ಎಂದು ಹೇಳಿದನು. ಆ ಕನಸಿನಿಂದ ಎಚ್ಚರಗೊಂಡ ಸುಶೀಲ, "ಇದು ನನ್ನ ಭ್ರಾಂತಿಯಿರಬೇಕು. ಸತ್ತವನು ಹೇಗೆ ಮತ್ತೆ ಬದುಕಿ ಬರುತ್ತಾನೆ? ಅದನ್ನೇ ಯೋಚಿಸುತ್ತಾ ನಿದ್ರಿಸಿದ ನನಗೆ ಅದೇ ಕನಸಿನಲ್ಲೂ ಕಾಣಿಸಿತು. ನನ್ನ ಅದೃಷ್ಟವೇ ಹಾಗಿದ್ದರೆ ದೈವವೇನು ಮಾಡಬಲ್ಲುದು? ಮೂರ್ಖಳಾಗಿ ಗುರುವಿನಲ್ಲಿ ದೋಷಾರೋಪಣೆ ಮಾಡಿದೆ" ಎಂದು ಕೊಳ್ಳುತ್ತಿರಲು, ಶವವು ಅಲುಗಾಡಿದಂತಾಯಿತು. ಇದರಲ್ಲಿ ಭೂತ ಪ್ರವೇಶವಾಯಿತೋ ಏನೋ ಎಂದು ಹೆದರಿದ ಅವಳು ಆ ಶವವನ್ನು ದೂರ ತಳ್ಳಿದಳು. ಆ ಕ್ಷಣದಲ್ಲೇ ಆ ಬಾಲಕ ಎದ್ದು ಕುಳಿತು, "ಅಮ್ಮಾ, ನನಗೆ ಹಸಿವೆಯಾಗುತ್ತಿದೆ. ಬೇಗ ಏನಾದರೂ ಕೊಡು" ಎಂದು ಕೇಳುತ್ತ, ಅವಳ ಹತ್ತಿರಕ್ಕೆ ಬಂದನು. ಅವನು ಹಾಗೆ ಹತ್ತಿರಕ್ಕೆ ಬರುತ್ತಿದ್ದ ಹಾಗೆಯೇ ಅವಳ ಸ್ತನಗಳಿಂದ ಹಾಲು ಧಾರೆಯಾಗಿ ಸುರಿಯಲು ಆರಂಭವಾಯಿತು. ವಿಸ್ಮಿತಳಾದ ಅವಳು ಅವನಿಗೆ ಸ್ತನ್ಯ ಪಾನ ಮಾಡಿಸಿ, ಸಂತೋಷದಿಂದ ಮಗನ ಜೊತೆಯಲ್ಲಿ ಗಂಡನ ಬಳಿಗೆ ಹೋಗಿ ಅವನನ್ನು ಎಬ್ಬಿಸಿ ನಡೆದ ವಿಷಯವನ್ನೆಲ್ಲಾ ವಿವರವಾಗಿ ಅವನಿಗೆ ತಿಳಿಸಿದಳು. ವಿಷಯವೆಲ್ಲಾ ತಿಳಿದ ಅವನೂ ಬಹಳ ಸಂತೋಷಗೊಂಡು, "ಇದೆಲ್ಲವೂ ಆ ಸದ್ಗುರುವಿನ ಲೀಲೆಯೇ!" ಎಂದು ಶ್ರೀಗುರುವಿನ ಗುಣಗಾನ ಮಾಡಿದನು.

ದಂಪತಿಗಳು ಬದುಕಿದ ಮಗನೊಡನೆ ಔದುಂಬರ ವೃಕ್ಷಕ್ಕೆ ಬಂದು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ, "ಹೇ ತ್ರಿಮೂರ್ತಿ ಸ್ವರೂಪ, ಮಾನವ ರೂಪದಲ್ಲಿ ಬಂದಿರುವ ನಿನ್ನ ಲೀಲೆಗಳನ್ನು ವರ್ಣಿಸುವುದು ಅಸಾಧ್ಯ. ಹೇ ಗುರುದೇವ ನಿನಗೆ ಜಯವಾಗಲಿ. ಜಯವಾಗಲಿ. ನಿನ್ನನ್ನು ಆಶ್ರಯಿಸಿದವರ ಕೈಬಿಡದೆ ಅವರನ್ನು ಕಾಪಾಡುತ್ತೀಯೆ. ನಿನ್ನ ಸೇವೆ ಮಾಡಿದವರನ್ನು ನೀನು ಎಂದು ಉಪೇಕ್ಷಿಸುವುದಿಲ್ಲ. ನಿನ್ನ ಮಹಿಮೆಗಳನ್ನು ವರ್ಣಿಸುವವರು ಯಾರು ಸ್ವಾಮಿ? ನಮ್ಮಿಂದ ಅಪರಾಧವಾಯಿತು. ನಮ್ಮನ್ನು ಕ್ಷಮಿಸಿ, ನಮ್ಮಲ್ಲಿ ದಯೆತೋರು. ಮಕ್ಕಳು ನಿಷ್ಠೂರವಾದ ಮಾತುಗಳನ್ನಾಡಿದರೂ ಹೇಗೆ ತಾಯಿಯಾದವಳು ಅವರನ್ನು ಬಿಟ್ಟು ಬಿಡುವುದಿಲ್ಲವೋ ಹಾಗೆ ನಮ್ಮನ್ನು ಬಿಟ್ಟು ಬಿಡಬೇಡ. ನಿನ್ನ ಮಾಯೆಯಿಂದಲೇ ನಾವು ನಿನ್ನ ಬಗ್ಗೆ ಅನುಚಿತ ಮಾತುಗಳನ್ನಾಡಿದೆವು. ಶರಣಾಗತರಾಗಿ ಬಂದಿರುವ ನಮ್ಮನ್ನು ಕ್ಷಮಿಸಿ, ಉದ್ಧರಿಸು" ಎಂದು ಶ್ರೀಗುರುವನ್ನು ಮತ್ತೆ ಮತ್ತೆ ಬೇಡಿಕೊಳ್ಳುತ್ತಾ, ಶ್ರೀಗುರುವಿನ ಪಾದುಕೆಗಳಿಗೆ ನಮಸ್ಕರಿಸಿದರು. ಅಲ್ಲಿಂದ ಸಂಗಮಕ್ಕೆ ಹೋಗಿ, ಸ್ನಾನಮಾಡಿ, ನೀರು ತಂದು ರಕ್ತಸಿಕ್ತವಾಗಿದ್ದ ಶ್ರೀಗುರುವಿನ ಪಾದುಕೆಗಳನ್ನು ತೊಳೆದು, ಅದಕ್ಕೆ ಪೂಜಾದಿಗಳನ್ನು ಆಚರಿಸಿ, ಗುರುಸ್ತೋತ್ರ ಮಾಡಿದರು.

ಅಷ್ಟರಲ್ಲಿ ಬೆಳಗಾಯಿತು. ಊರಿನ ಬ್ರಾಹ್ಮಣರು ಶವ ಸಂಸ್ಕಾರ ಮಾಡಲೆಂದು ಅಲ್ಲಿಗೆ ಬಂದರು. ಅವರು ಅಲ್ಲಿ ಪುನರ್ಜೀವಿತನಾಗಿದ್ದ ಹುಡುಗನನ್ನು ನೋಡಿ ಆಶ್ಚರ್ಯಗೊಂಡು ಮೂಕರಾಗಿ ಹೋದರು. ಆ ದಂಪತಿಗಳು ಎಲ್ಲರಿಗೂ ಭೋಜನಾದಿಗಳನ್ನು ಮಾಡಿಸಿದರು. ಊಟೋಪಚಾರಗಳಾದ ಮೇಲೆ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು.

ಶಿಷ್ಯ, ನಾಮಧಾರಕ, ಗುರುವಿನ ಮಹಿಮೆ ಇಂತಹುದು. ಅವರ ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದವರಾರು? ಆ ಔದುಂಬರ ವೃಕ್ಷ ಮೂಲದಲ್ಲಿ ಶ್ರೀಗುರುವು ಸದಾ ನೆಲಸಿರುತ್ತಾನೆ. ಅಲ್ಲಿರುವ ಗುರು ಪಾದುಕೆಗಳನ್ನು ಸ್ಥಿರ ಮನಸ್ಕರಾಗಿ, ನಂಬಿಕೆಯಿಟ್ಟು ಪೂಜಿಸಿದವರ ಇಷ್ಟಾರ್ಥಗಳು ತಪ್ಪದೇ ನೆರವೇರುತ್ತವೆ. ಅದರಲ್ಲಿ ಸಂಶಯವೇ ಇಲ್ಲ! ಅಲ್ಲಿ ಪೂಜೆ ಮಾಡಿದ ಮತಿಹೀನರು ಮತಿವಂತರಾಗುತ್ತಾರೆ. ಅಧನರು ಧನವಂತರಾಗುತ್ತಾರೆ. ಬಂಜೆಯರು ಪುತ್ರವಂತರಾಗುತ್ತಾರೆ. ರೋಗಿಗಳು ನಿರೋಗಿಗಳಾಗುತ್ತಾರೆ. ಅಂಗಹೀನರು ದೃಢ ಶರೀರಿಗಳಾಗುತ್ತಾರೆ. ಚತುರ್ವಿಧ ಪುರುಷಾರ್ಥಗಳೂ ಅಲ್ಲಿ ನಿಸ್ಸಂದೇಹವಾಗಿ ಸಿದ್ಧಿಸುತ್ತವೆ. ಶ್ರದ್ಧಾಭಕ್ತಿಗಳಿಂದ ಪೂಜಿಸುವವರಿಗೆ ಆ ಔದುಂಬರವು ಕಲ್ಪವೃಕ್ಷವೇ!" ಎಂದು ಹೇಳಿದರು. 

ಇಲ್ಲಿಗೆ ಇಪ್ಪತ್ತೊಂದನೆಯ ಅಧ್ಯಾಯ ಮುಗಿಯಿತು.



No comments:

Post a Comment