Monday, February 11, 2013

||ಶ್ರೀ ಗುರು ಚರಿತ್ರೆ - ಹತ್ತನೆಯ ಅಧ್ಯಾಯ||

ನಾಮಧಾರಕನು, "ಸ್ವಾಮಿ ಕುರುವರಪುರದಲ್ಲಿ ಶ್ರೀಪಾದರು ಮತ್ತೊಂದು ಅವತಾರವೆತ್ತಲುದ್ಯುಕ್ತರಾದರು ಎಂದು ಹೇಳಿದಿರಿ. ಹಾಗಿದ್ದರೆ ಅವರು ಈಗ ಕುರವರಪುರದಲ್ಲಿ ಇಲ್ಲವೇ? ಅವರ ಮತ್ತೊಂದು ಅವತಾರವು ಎಲ್ಲಿ, ಹೇಗಾಯಿತು? ಎಂಬುದನ್ನು ವಿಸ್ತರಿಸಿ ಹೇಳುವ ಕೃಪೆಮಾಡಿ " ಎಂದು ಕೇಳಿದನು. ಅದಕ್ಕೆ ಶ್ರೀಪಾದರು ಹೇಳಿದರು. "ಅಯ್ಯಾ, ನಾಮಧಾರಕ, ಶ್ರೀಪಾದರ ಮಹಿಮೆಯನ್ನು ಹೇಗೆ ತಾನೇ ವರ್ಣಿಸಬಲ್ಲೆ? ಅವರು ವಿಶ್ವವ್ಯಾಪಿ. ಪರಮಾತ್ಮ ಸ್ವರೂಪರು. ನಾನಾ ರೂಪ ಧರಿಸಿದ ನಾರಾಯಣನೇ ಅವರು. ಕಾರ್ಯಾರ್ಥವಾಗಿ ಬೇರೆಡೆ ಅವತರಿಸಿದರೂ, ಅವರು ಕುರುವರಪುರದಲ್ಲಿ ಗುಪ್ತವಾಗಿದ್ದುಕೊಂಡು ಭಕ್ತರ ಅಭೀಷ್ಟಗಳನ್ನು ನಡೆಸಿಕೊಡುತ್ತಿದ್ದಾರೆ. ಭಾರ್ಗವ ರಾಮನು ಚಿರಂಜೀವಿಯಾಗಿ ಈಗಲೂ ಇದ್ದಾನೆ ಎಂದು ಕೇಳಿದ್ದೀಯಲ್ಲವೆ? ಅದೇ ರೀತಿಯಲ್ಲಿ ಶ್ರೀಪಾದರು ಅಲ್ಲಿ ಈಗಲೂ ಇದ್ದಾರೆ.

ಕುರುವರಪುರ ತ್ರಿಮೂರ್ತಿ ನಿವಾಸ ಸ್ಥಾನ. ಆ ಕ್ಷೇತ್ರದರ್ಶನ ಮಾಡುವುದರಿಂದ ಮಾನವರ ಚಿಂತೆಗಳೆಲ್ಲ ತೀರಿಹೋಗುತ್ತವೆ. ಶ್ರೀಗುರುವಿನ ವಾಸಸ್ಥಾನವೇ ಕಾಮಧೇನು! ಅಂತಹ ವಾಸಸ್ಥಾನ ಮಹಿಮೆಯನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ನೀನು ಗುರುವಿನಲ್ಲಿ ಧೃಢಭಕ್ತಿಯುಳ್ಳವನು. ಋಜುಮಾರ್ಗವನ್ನು ತೋರಿಸಿ ಎಂದು ಕೇಳುತ್ತಿದ್ದೀಯೆ. ನಿನ್ನಂತಹ ಭಕ್ತರನ್ನು ಉಪೇಕ್ಷಿಸಬಾರದು. ಧೃಢಭಕ್ತಿಯುಳ್ಳವನು ಇಹದಲ್ಲಿ ಸುಖವನ್ನನುಭವಿಸಿ, ಪರದಲ್ಲೂ ಉದ್ಧರಿಸಲ್ಪಡುತ್ತಾನೆ" ಎಂದರು. ಅದಕ್ಕೆ ನಾಮಧಾರಕ, "ಸ್ವಾಮಿ, ಅವರು ಈಗಲೂ ಕುರುವರಪುರದಲ್ಲಿ ಇದ್ದಾರೆ ಎಂಬುದಕ್ಕೆ ನಿದರ್ಶನಗಳಿವೆಯೇ?" ಎಂದು ಕೇಳಿದನು.

ಅದಕ್ಕೆ ಸಿದ್ಧಮುನಿ, "ಇದಕ್ಕೊಂದು ನಿದರ್ಶನವಾಗಿ ಅಲ್ಲಿ ನಡೆದ ಘಟನೆಯೊಂದನ್ನು ಹೇಳುತ್ತೇನೆ. ಸಾವಧಾನವಾಗಿ ಕೇಳು. ಕಾಶ್ಯಪಗೋತ್ರಕ್ಕೆಸೇರಿದ, ಆಚಾರವಂತ, ಸುಶೀಲ, ವಲ್ಲಭೇಶನೆಂಬ ಬ್ರಾಹ್ಮಣೊಬ್ಬನಿದ್ದನು. ವ್ಯಾಪಾರವನ್ನು ವೃತ್ತಿಯಾಗಿ ಅವಲಂಬಿಸಿದ್ದ ಆ ಬ್ರಾಹ್ಮಣ, ಪ್ರತಿವರ್ಷವೂ ಶ್ರೀಪಾದರು ಅಂತರ್ಧಾನರಾದಮೇಲೂ, ಅವರ ದರ್ಶನಕ್ಕೆ ಕುರುವರಪುರಕ್ಕೆ ಬರುತ್ತಿದ್ದನು. ಒಂದುಸಲ ಅವನು ವ್ಯಾಪಾರಕ್ಕೆ ಹೊರಡುವ ಮುಂಚೆ, ತನ್ನ ಕಾರ್ಯ ಸಿದ್ಧಿಯಾದರೆ ಕುರುವರಪುರಕ್ಕೆ ಬಂದು ಒಂದು ಸಾವಿರ ಬ್ರಾಹ್ಮಣರಿಗೆ ಊಟವಿಡುತ್ತೇನೆ ಎಂದು ಸಂಕಲ್ಪಮಾಡಿಕೊಂಡು ವ್ಯಾಪಾರಕ್ಕಾಗಿ ಹೊರಟನು. ಶ್ರೀಪಾದಶ್ರೀವಲ್ಲಭರ ಧ್ಯಾನಮಾಡುತ್ತಾ ಅವನು ಹೋದಕಡೆಯಲ್ಲೆಲ್ಲಾ ಅವನಿಗೆ ಬಹಳ ಲಾಭವಾಯಿತು. ತನ್ನ ಊಹೆಗೂ ಮೀರಿ, ಅವನೆಂದುಕೊಂಡದ್ದಕ್ಕಿಂತ ಹೆಚ್ಚಾದ ಲಾಭ ದೊರೆಯಿತು. ಊರಿಗೆ ಹಿಂತಿರುಗಿದಮೇಲೆ, ತಾನು ಮುಂಚೆ ಸಂಕಲ್ಪಮಾಡಿಕೊಂಡಿದ್ದಂತೆ ಅವನು ಬ್ರಾಹ್ಮಣ ಭೋಜನಕ್ಕೆ ಬೇಕಾದ ಹಣವನ್ನು ತೆಗೆದುಕೊಂಡು ಕುರುವರಪುರಕ್ಕೆ ಹೊರಟನು.

ದಾರಿಯಲ್ಲಿ, ಅವನ ಹತ್ತಿರ ಬಹಳ ಹಣವಿದೆಯೆಂಬುದನ್ನು ಹೇಗೋ ಅರಿತುಕೊಂಡ ಕೆಲವರು ಕಳ್ಳರು, ತಾವೂ ಕುರುವರಪುರಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ, ಅವನ ಸ್ನೇಹ ಸಂಪಾದಿಸಿ, ಅವನ ಜೊತೆಗಾರರಾದರು. ಅವರ ಮಾತುಗಳನ್ನು ನಂಬಿದ ವಲ್ಲಭೇಶ ಅವರೊಡನೆ ಪ್ರಯಾಣ ಮುಂದುವರೆಸಿದ. ಸ್ವಲ್ಪ ಕಾಲ ಹಾಗೆ ಪ್ರಯಾಣಮಾಡುತ್ತಾ, ಅವನಲ್ಲಿ ನಂಬಿಕೆ ಹುಟ್ಟಿಸಿದ ಆ ಕಳ್ಳರು, ದಾರಿಯಲ್ಲಿ ನಿರ್ಜನಪ್ರದೇಶವೊಂದನ್ನು ಸೇರಿದಾಗ, ಅವನ ತಲೆಕಡಿದು ಅವನಲ್ಲಿದ್ದ ಹಣವನ್ನೆಲ್ಲಾ ಅಪಹರಿಸಿದರು. ವಲ್ಲಭೇಶ ಸಾಯುವುದಕ್ಕೆ ಮುಂಚೆ, ಶರಣ್ಯರಕ್ಷಕನೂ, ಭಕ್ತವತ್ಸಲನೂ ಆದ ಶ್ರೀಪಾದರನ್ನು ನೆನಸಿಕೊಂಡನು. ಆ ಪ್ರಭುವು ತಕ್ಷಣವೇ ಅಲ್ಲಿ ತ್ರಿಶೂಲ ಖಡ್ಗ ಧಾರಿಯಾಗಿ ಕಾಣಿಸಿಕೊಂಡು, ಆ ಕಳ್ಳರನ್ನು ಸಂಹರಿಸಿದನು. ಅವರಲ್ಲಿ ಒಬ್ಬ, ಭಕ್ತರಕ್ಷಕನಾದ ಶ್ರೀಪಾದರ ಪಾದಗಳನ್ನು ಹಿಡಿದು, ಅವರಿಗೆ ಶರಣಾಗಿ, "ಸ್ವಾಮಿ, ನಾನು ನಿರಪರಾಧಿ. ನನಗೆ ಕಳ್ಳತನವೆಂದರೇನು ಎಂದು ತಿಳಿಯದು. ಅಜ್ಞಾನದಿಂದಾಗಿ ನಾನು ಈ ಕಳ್ಳರ ಜೊತೆ ಸೇರಿದೆ. ನನ್ನನ್ನು ಮನ್ನಿಸಿ" ಎಂದು ಬೇಡಿಕೊಂಡ. ಶ್ರೀಪಾದರು ಅವನಿಗೆ ಅಭಯನೀಡಿ, "ಈ ಭಸ್ಮವನ್ನು ತೆಗೆದುಕೊಂಡು ಆ ಸತ್ತ ಬ್ರಾಹ್ಮಣನ ಮೇಲೆ ಚುಮುಕಿಸಿ, ಅವನ ಶಿರವನ್ನು ಶರೀರಕ್ಕೆ ಜೋಡಿಸು" ಎಂದು ಆಜ್ಞಾಪಿಸಿದರು. ಅವನು ಶ್ರೀಪಾದರು ಹೇಳಿದಂತೆ ಮಾಡಲು, ಅವರು ಆ ಮೃತದೇಹವನ್ನು ಒಮ್ಮೆ ತಮ್ಮ ಅಮೃತದೃಷ್ಟಿಯಿಂದ ನೋಡಿ, ಅಂತರ್ಧಾನರಾದರು. ಅವರ ದೃಷ್ಟಿ ತಾಕುತ್ತಲೇ ವಲ್ಲಭೇಶನು ಪುನರ್ಜೀವಿತನಾದನು.

ಇಷ್ಟೆಲ್ಲಾ ಆಗುವುದರಲ್ಲಿ ಸೂರ್ಯೋದಯವಾಯಿತು. ಕಳ್ಳರಲ್ಲಿ ಉಳಿದಿದ್ದವನೊಬ್ಬನು ಮಾತ್ರ ಅಲ್ಲಿದ್ದನು. ನಿದ್ರೆಯಿಂದೆದ್ದವನಂತೆ ಎಚ್ಚೆತ್ತು ಕುಳಿತ ವಲ್ಲಭೇಶನು, ಸುತ್ತಲೂ ನೋಡಿ, ಅಲ್ಲಿದ್ದ ಆ ಉಳಿದವನನ್ನು, "ಅಯ್ಯಾ, ಇವರನ್ನು ಯಾರು ಕೊಂದರು? ನೀನು ನನ್ನನ್ನೇಕೆ ಕಾಪಾಡುತ್ತಿದ್ದೀಯೆ?" ಎಂದು ಕೇಳಲು, ಆವನು "ಅಯ್ಯಾ, ಬ್ರಾಹ್ಮಣೋತ್ತಮ, ಈಗ ಇಲ್ಲೊಂದು ವಿಚಿತ್ರ ಘಟನೆ ನಡೆಯಿತು. ನಮ್ಮ ಜೊತೆಯಲ್ಲಿ ಬಂದ ಇವರೆಲ್ಲರೂ ಕಳ್ಳರು. ನಿನ್ನನ್ನು ಕೊಂದು ನಿನ್ನ ಹಣವನ್ನು ಅಪಹರಿಸಿದರು. ಅಷ್ಟರಲ್ಲಿ ಒಬ್ಬ ತಪಸ್ವಿ ಬಂದು ಆ ಕಳ್ಳರನ್ನು ತನ್ನ ತ್ರಿಶೂಲದಿಂದ ತಿವಿದು ಕೊಂದನು. ಆ ತಪಸ್ವಿ ಯಾರೋ ಗೊತ್ತಿಲ್ಲ. ಅವನು ನಿನ್ನನ್ನು ಮಂತ್ರ ಭಸ್ಮದಿಂದ ಜೀವಿಸುವಂತೆ ಮಾಡಿ, ನನ್ನನ್ನು ನಿನಗೆ ಕಾವಲಾಗಿಟ್ಟು ಹೋದನು. ಇದುವರೆಗೂ ಇಲ್ಲೇ ಇದ್ದ ಆತ ಈಗತಾನೇ ಅದೃಶ್ಯನಾದನು. ಆ ತಪಸ್ವಿ ತ್ರಿಪುರಾಂತಕನಾದ ಪರಮೇಶ್ವರನೇ ಇರಬೇಕು. ನಿನ್ನ ಪ್ರಾಣ ರಕ್ಷಣೆ ಮಾಡಲು, ಜಟಾಧಾರಿಯಾಗಿ, ಭಸ್ಮಲಿಪ್ತನಾಗಿ, ತ್ರಿಶೂಲ ಹಿಡಿದು ಬಂದನು. ನೀನು ಮಹಾಭಕ್ತನೆಂದು ತೋರುತ್ತಿದೆ" ಎಂದು ಹೇಳಿದನು.

ಅವನ ಮಾತುಗಳನ್ನು ಕೇಳಿದ ವಲ್ಲಭೇಶ, ಬಹು ಖಿನ್ನನಾಗಿ, ಶ್ರೀಪಾದರ ದರ್ಶನ ಭಾಗ್ಯ ತನಗಾಗಲಿಲ್ಲವೆಂದು ಬಹು ದುಃಖಪಟ್ಟನು. ಕಳ್ಳರು ಅಪಹರಿಸಿದ್ದ ಹಣವನ್ನೆಲ್ಲಾ ತೆಗೆದುಕೊಂಡು, ಗುರುಸ್ಥಾನವಾದ ಕುರುವರಪುರಕ್ಕೆ ಹೊರಟನು. ಅಲ್ಲಿ ವಲ್ಲಭೇಶ, ಶ್ರೀಪಾದರ ಪಾದುಕೆಗಳಿಗೆ ನಾನಾವಿಧವಾದ ಪೂಜೋಪಚಾರಗಳನ್ನು ಮಾಡಿ, ತಾನು ಸಂಕಲ್ಪಿಸಿದ್ದ ಸಾವಿರ ಬ್ರಾಹ್ಮಣರಿಗೆ ಬದಲಾಗಿ ನಾಲ್ಕು ಸಾವಿರ ಬ್ರಾಹ್ಮಣರಿಗೆ ಭೋಜನವಿತ್ತನು.

ಅದೇ ರೀತಿಯಲ್ಲಿ ಕುರುವರಪುರದಲ್ಲಿ ಅನೇಕ ಸದ್ಭಕ್ತರು ಶ್ರೀಪಾದರ ಪಾದುಕೆಗಳಿಗೆ ಪೂಜಾರ್ಚನೆಗಳನ್ನು ಮಾಡಿ ಸಿದ್ಧ ಸಂಕಲ್ಪರಾದರು. ಕುರುವರಪುರದಲ್ಲಿ ಶ್ರೀಪಾದರ ಕೀರ್ತಿ ಈ ರೀತಿಯಲ್ಲಿ ಪ್ರಖ್ಯಾತವಾಯಿತು. ನಾಮಧಾರಕ, ಅದೃಶ್ಯರೂಪದಲ್ಲಿ ಶ್ರೀಪಾದರು, ಅಲ್ಲಿ ನೆಲೆಸಿದ್ದಾರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆ ಸರ್ವಾಂತರ್ಯಾಮಿಯಾದ ನಾರಾಯಣ, ಇಲ್ಲಿದ್ದುಕೊಂಡೂ, ಬೇರೆಡೆಯಲ್ಲಿ ಅವತರಿಸಬಲ್ಲನು. ಶ್ರೀಪಾದರು, ಕುರುವರಪುರದಲ್ಲಿ ಲೋಕರ ದೃಷ್ಟಿಗೆ ಕಾಣದೇ ಹೋದರೂ, ಗುಪ್ತರೂಪದಲ್ಲಿ ಅಲ್ಲಿ ಸರ್ವಕಾಲದಲ್ಲೂ ಇದ್ದಾರೆ. ಇರುತ್ತಾರೆ. ಅವರ ನಂತರದ ಅವತಾರವೇ ಶ್ರೀ ನೃಸಿಂಹ ಸರಸ್ವತಿ ಯತಿಗಳು" 

ಇಲ್ಲಿಗೆ ಹತ್ತನೆಯ ಅಧ್ಯಾಯ ಮುಗಿಯಿತು.


No comments:

Post a Comment