Monday, February 11, 2013

||ಶ್ರೀ ಗುರು ಚರಿತ್ರೆ - ಹನ್ನೆರಡನೆಯ ಅಧ್ಯಾಯ||

"ನಾಮಧಾರಕ, ಶ್ರೀಗುರುವು ತನ್ನ ತಾಯಿಗೆ ತಿಳಿಸಿದ ತತ್ತ್ವವನ್ನು ಹೇಳುತ್ತೇನೆ ಕೇಳು. ಶ್ರೀ ಗುರುವು ಹೇಳಿದರು."ಅಮ್ಮಾ, ನೀನು ಹೀಗೆ ಆಣತಿ ಮಾಡುತ್ತಿದ್ದೀಯೆ. ಆದರೆ ದೇಹವು ಅನಿತ್ಯವಾದುದು. ಈ ಭೌತಿಕ ಶರೀರದ ಜೀವಿತಕಾಲ ಕ್ಷಣಭಂಗುರವಾದದ್ದು. ವೈಭವಗಳು ಶಾಶ್ವತವಲ್ಲ. ಮೃತ್ಯುವು ನಿತ್ಯವೂ ಹತ್ತಿರವಾಗುತ್ತಲೇ ಇದೆ. ಎಲ್ಲಿಯಾದರೂ ಯಾರಾದರೂ ಚಿರಂಜೀವಿಯಾಗಿದ್ದರೆ ಅವನಿಗೆ ನಿನ್ನ ಉಪದೇಶವನ್ನು ಕೊಡು. ಹಗಲು ರಾತ್ರಿಗಳೆನ್ನದೆ ಆಯುಸ್ಸು ಕ್ಷೀಣವಾಗುತ್ತಲೇ ಇರುತ್ತದೆ. ಅದರಿಂದಲೇ ಸಣ್ಣವನಾಗಿರುವಾಗಲಿಂದಲೇ ಧರ್ಮಾಚರಣೆಯನ್ನು ಮಾಡಲುಪಕ್ರಮಿಸಬೇಕು. ಸ್ವಲ್ಪವೇ ಆದ ನೀರಿನಲ್ಲಿ ಮೀನುಗಳು ಕಷ್ಟಪಡುವಂತೆ, ಮಾನವನು ಅಲ್ಪಾಯುಷಿಯಾಗಿ ಕಷ್ಟಪಡುತ್ತಿರುತ್ತಾನೆ. ಆದ್ದರಿಂದ ಮನುಷ್ಯನಿಗೆ ಧರ್ಮ ಸಂಗ್ರಹಣವು ಆದ್ಯ ಕರ್ತವ್ಯ. ಸೂರ್ಯರಥವು ಧಾವಿಸುತ್ತಾ, ಒಂದು ನಿಮಿಷಕಾಲದಲ್ಲಿ ನೂರಾರು ಯೋಜನೆಗಳನ್ನು ದಾಟುವಂತೆ, ಮನುಷ್ಯನ ಆಯುಸ್ಸು ಧಾವಿಸುತ್ತಿರುತ್ತದೆ. ಆದ್ದರಿಂದ ಕ್ಷಣಭಂಗುರವಾದ ಈ ದೇಹ ಇನ್ನೂ ಧೃಢವಾಗಿರುವಾಗಲೇ ಪುಣ್ಯವನ್ನು ಆಚರಿಸಬೇಕು. ವೃಕ್ಷದ ಕೊನೆಯಲ್ಲಿರುವ ಎಲೆಯಮೇಲೆ ಬಿದ್ದ ನೀರಿನ ಹನಿ ಜಾರಿ ಕೆಳಗೆ ಬೀಳುವಂತೆ, ಈ ಶರೀರವು ಪತನವಾಗುವುದು. ಆಕಸ್ಮಿಕವಾಗಿ ಮರಣವು ಆಸನ್ನವಾಗುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯಗಳಲ್ಲಿ ಎಂದಾದರೂ ಮರಣ ಉಂಟಾಗಿ, ಈ ಶರೀರ ನಾಶವಾಗಬಹುದು. ಅದರಿಂದಲೇ ಈ ನಶ್ವರವಾದ ಶರೀರವನ್ನು ನಂಬಬಾರದು. ಮೃತ್ಯುವು ಮಾನವನ ಬೆನ್ನಂಟಿಯೇ ಇರುತ್ತದೆ. ಅದರಿಂದ ಧರ್ಮವನ್ನು ಸಣ್ಣತನದಿಂದಲೇ ಆಚರಿಸಬೇಕು. ಒಣಗಿದ ಎಲೆ ಗಿಡದಿಂದ ಉದುರಿಹೋಗುವಂತೆ ಈ ದೇಹವು ಎಂದು ಬಿದ್ದುಹೋಗುವುದೋ ತಿಳಿಯದು. ಸಾಲವನ್ನು ಕೊಟ್ಟವನು ಸದಾ ಹೇಗೆ ದಿನಗಳನ್ನೆಣಿಸುತ್ತಿರುತ್ತಾನೋ ಹಾಗೆ ಮೃತ್ಯುವು ಮಾನವನ ಆಯುಸ್ಸಿನ ಲೆಕ್ಕ ಮಾಡುತ್ತಿರುತ್ತಾನೆ. ನದಿಗಳು ನೀರು ಹೊತ್ತು ಸಮುದ್ರವನ್ನು ಸೇರಿದಮೇಲೆ ಹೇಗೆ ಹಿಂದಿರುಗಲಾರವೋ, ಹಾಗೆ ಮನುಷ್ಯನ ಆಯುಸ್ಸು ಹಿಂತಿರುಗಿ ಬರುವುದಿಲ್ಲ. ಆಯುಸ್ಸನ್ನು ಹಿಂದೆ ಹಾಕಿ, ಹಗಲು ರಾತ್ರಿಗಳು ಮುಂದುಮುಂದಕ್ಕೆ ಓಡುತ್ತಿರುತ್ತವೆಯೇ ಹೊರತು, ಹಿಂತಿರುಗಿ ನೋಡುವುದಿಲ್ಲ. ಆದ್ದರಿಂದ ಜೀವಿತಕಾಲದಲ್ಲಿ ಪುಣ್ಯವನ್ನಾಚರಿಸದವನು ಪಶು ಸಮಾನನೇ! ಪುಣ್ಯಮಾಡದ ದಿನಗಳು ವ್ಯರ್ಥವಾದಂತೆಯೇ! ಯಮನಿಗೆ ದಯೆಯಿಲ್ಲ. ಆದ್ದರಿಂದ, ಈಗಲೇ, ಇಲ್ಲೇ, ಪುಣ್ಯಮಾಡಬೇಕು. ಹೆಂಡತಿ, ಮಕ್ಕಳು, ಮನೆ, ಸಂಪತ್ತು ಆಯುಸ್ಸು ಎಲ್ಲವೂ ಶಾಶ್ವತ ಎಂದು ನಂಬಿದವನು ಪಶುವಿಗೆ ಸಮಾನನು! ದುಸ್ತರವಾದ ಈ ಸಂಸಾರದಲ್ಲಿ ಮುದಿತನ, ಮೊಸಳೆಗಳಂತೆ ಕಾದು ಕೂತಿದೆ. ಅದರಿಂದ ಯೌವನದಲ್ಲಿಯೇ ಪುಣ್ಯಾರ್ಜನೆಯ ಕಾರ್ಯಗಳನ್ನು ಮಾಡಬೇಕು".

ಹೀಗೆ ಶ್ರೀಗುರುವು ತಾಯಿಗೆ ಉಪದೇಶಕೊಟ್ಟು, "ಅಮ್ಮಾ, ನನ್ನನ್ನು ತಡೆಯಬೇಡ. ಶಠ, ಅಮರ್ತ್ಯ, ಇಲ್ಲವೇ ಯಮನ ಶಿಷ್ಯನಾದವನು ಮಾತ್ರವೇ ಧರ್ಮಾಚರಣೆಯನ್ನು ಮುಂದೆಂದಾದರೂ ಮಾಡೋಣ ಎಂದು ಆಲಸ್ಯ ಮಾಡುವವನು. ಈ ಸಂಸಾರ ಸಾರವಿಲ್ಲದ್ದು. ಜೀವನವೆಲ್ಲಾ ಸ್ವಪ್ನದಂತೆ. ಮಾಲತಿ ಪುಷ್ಪ ಬಹಳ ಬೇಗ ಬಾಡಿಹೋಗುವಂತೆ, ಈ ಜನ್ಮವೂ ಬಹು ಬೇಗ ಅಂತರಿಸಿಹೋಗುವುದು. ಮಿಂಚು ಕ್ಷಣಕಾಲ ಮೆರೆದು ಮರೆಯಾಗುವಂತೆ, ನೋಡುತ್ತಿರುವಂತೆಯೇ ಮರೆಯಾಗಿ ಹೋಗುವ ಈ ದೇಹವೂ ಸ್ಥಿರವಲ್ಲ" ಎಂದು ಅನೇಕ ವಿಧಗಳಲ್ಲಿ ಶ್ರೀಗುರುವು ತನ್ನ ತಾಯಿಗೆ ಉಪದೇಶಮಾಡಿದರೂ, ಆಕೆ ಆತನ ಉಪದೇಶಾಮೃತವನ್ನು ಕೇಳಿ, "ಪ್ರಭು, ನೀನು ಅನೇಕ ರೀತಿಗಳಲ್ಲಿ ಜ್ಞಾನೋಪದೇಶಮಾಡಿದೆ. ಆದರೂ ನನ್ನ ಬಿನ್ನಪವನ್ನು ಕೇಳು. ನೀನು ಹೇಳಿದ್ದೆಲ್ಲವೂ ಒಳ್ಳೆಯದೇ. ಆದರೂ, ನನಗೆ ಇನ್ನೂ ಮಕ್ಕಳು ಜನಿಸುತ್ತಾರೆ ಎಂದು ನೀನು ಹೇಳಿದೆ. ನನಗೆ ಇನ್ನೊಂದು ಮಗುವಾಗುವವರೆಗೂ ನೀನು ನಮ್ಮೊಡನೆ ಇರಬೇಕು. ನಂತರ ನಾನು ನಿನಗೆ ಅನುಮತಿ ಕೊಡುತ್ತೇನೆ. ಇದು ನನ್ನ ಬಿನ್ನಪ. ನನ್ನ ಮಾತನ್ನು ಮೀರಿ ನೀನು ಹೊರಟು ಹೋದರೆ, ನಾನು ಆ ಕ್ಷಣದಲ್ಲೆ ಪ್ರಾಣ ತ್ಯಜಿಸುತ್ತೇನೆ. ನೀನು ಕೇವಲ ನನ್ನ ಮಗ ಮಾತ್ರವಲ್ಲ. ನಮ್ಮ ಕುಲದೀಪಕನು. ರಕ್ಷಕನು" ಎಂದ ತಾಯಿಯ ಮಾತುಗಳನ್ನು ಕೇಳಿ ಶ್ರೀಗುರುವು, ನಗುತ್ತಾ, "ಅಮ್ಮಾ, ನನ್ನ ಮಾತುಗಳು ಸತ್ಯವಾದವು. ನೀನೂ ನಿನ್ನ ಮಾತನ್ನು ಸತ್ಯಮಾಡು. ನಾನು ಇನ್ನೊಂದು ವರ್ಷ ಈ ಮನೆಯಲ್ಲಿ ಇರುತ್ತೇನೆ. ಅಷ್ಟರಲ್ಲಿ ನಿನಗೆ ಇಬ್ಬರು ಮಕ್ಕಳಾಗುತ್ತಾರೆ. ಆ ಇಬ್ಬರು ಮಕ್ಕಳನ್ನು ಕಂಡು ನೀನು ನನಗೆ ಸಂತೋಷದಿಂದ ಹೊರಡಲು ಅನುಮತಿ ಕೊಡಬೇಕು. ನಿನ್ನ ಮಾತನ್ನು ನಿಲ್ಲಿಸಿಕೋ. ನಾನು ಆ ನಂತರ ಈ ಮನೆಯಲ್ಲಿರುವುದಿಲ್ಲ" ಎಂದು ಹೇಳಿದರು.

ತಮ್ಮ ಮಾತಿನಂತೆ ಶ್ರೀಗುರುವು, ಶಿಷ್ಯರಿಗೆ ವೇದೋಪದೇಶಮಾಡುತ್ತಾ ಮನೆಯಲ್ಲಿಯೇ ನಿಂತರು. ಊರಿನ ಜನರು ಕುತೂಹಲಿಗಳಾಗಿ ಅವರು ಪಾಠ ಹೇಳುತ್ತಿದ್ದಲ್ಲಿಗೆ ಬಂದು, ಅವರು ಹೇಳುತ್ತಿದ್ದ ಪಾಠಪ್ರವಚನಗಳನ್ನು ಕೇಳಿ, "ಆಹಾ, ಈ ಪಂಡಿತನು ಶಿಷ್ಯರಿಗೆ ಸಾಂಗೋಪಾಂಗವಾಗಿ ಚತುರ್ವೇದಗಳನ್ನೂ ಉಪದೇಶಿಸುತ್ತಿದ್ದಾನೆ" ಎಂದು ಆಶ್ಚರ್ಯಪಟ್ಟರು. ವಿದ್ವಾಂಸರು, ತ್ರಿವೇದಿಗಳು, ಷಟ್ಶಾಸ್ತ್ರನಿಪುಣರೂ ಕೂಡಾ ಶ್ರೀಗುರುವಿನ ಬಳಿಗೆ ವಿದ್ಯಾರ್ಥಿಗಳಾಗಿ ಬಂದು ವಿದ್ಯಾರ್ಜನೆ ಮಾಡಿದರು. ತಾಯಿತಂದೆಗಳನ್ನು ಸಂತೋಷಪಡಿಸುತ್ತಾ ಶ್ರೀಗುರುವು ಗೃಹನಿವಾಸಿಯಾಗಿ ಒಂದು ವರ್ಷ ಕಳೆದರು. ತನ್ನ ಮಾತಿನಂತೆ ಮನೆಯಲ್ಲಿದ್ದ ಮಗನನ್ನು ದೇವಭಾವದಿಂದ ಅರ್ಚಿಸುತ್ತಾ, ಸಂತೋಷದಿಂದಿದ್ದ ಅಂಬ ಆ ಸಮಯದಲ್ಲಿ ಗರ್ಭ ಧರಿಸಿದಳು. ನವಮಾಸ ತುಂಬಿದಮೇಲೆ ಆಕೆ ಅವಳಿ ಮಕ್ಕಳಿಗೆ ಜನ್ಮವಿತ್ತಳು. ಸುಂದರರಾಗಿದ್ದ ಆ ಮಕ್ಕಳನ್ನು ಕಂಡು ಮಾತಾಪಿತರು ಸಂತಸಗೊಂಡರು. ಶ್ರೀಗುರುವಿನ ಆಶೀರ್ವಾದ ವ್ಯರ್ಥವಾಗುವುದಾದರೂ ಹೇಗೆ? ತಾಯಿಯ ಪಾಲನೆಯಲ್ಲಿ ಆ ಮಕ್ಕಳು ಬೆಳೆದು, ಮೂರುತಿಂಗಳು ತುಂಬಿದವರಾದರು. ಆಗ ಶ್ರೀಗುರುವು ತಾಯಿಗೆ, "ಅಮ್ಮ, ನಿನ್ನ ಕೋರಿಕೆ ನೆರವೇರಿತಲ್ಲವೇ? ಈ ಮಕ್ಕಳಿಬ್ಬರೂ ಪೂರ್ಣಾಯುಷಿಗಳಾಗಿ ಸುಖ ಸಂಪತ್ತುಗಳನ್ನು ಪಡೆಯುತ್ತಾರೆ. ನಿನಗಿನ್ನೂ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಕೂಡಾ ಹುಟ್ಟುತ್ತಾರೆ. ನೆರವೇರಿದ ಕೋರಿಕೆಯುಳ್ಳವಳಾಗಿ ನೀನು ಸಂತೋಷದಿಂದಿರು. ನಾನು ನನ್ನ ಮಾತನ್ನು ನಿಲ್ಲಿಸಿಕೊಂಡಿದ್ದೇನೆ. ಇನ್ನು ನನಗೆ ನಿನ್ನ ಅನುಮತಿ ಕೊಡು. ನಾನು ಹೊರಡುತ್ತೇನೆ. ಸಂತೋಷದಿಂದ ನನ್ನನ್ನು ಕಳುಹಿಸಿಕೊಡು" ಎಂದು ಹೇಳಿದರು. ಅದನ್ನು ಕೇಳಿ ತಾಯಿತಂದೆಗಳು, ಅವರಿಗೆ ನಮಸ್ಕಾರಮಾಡಿ, "ಸ್ವಾಮಿ, ನೀನು ನಮ್ಮ ಕುಲದೈವ. ನಾವು ನಿನಗೆ ಹೇಳುವುದೇನಿದೆ? ಮಾಯಾಮೋಹ ಬದ್ಧರಾದ ನಾವು, ನಿನ್ನ ಮಹಿಮೆಯನ್ನು ಹೇಗೆ ತಾನೇ ತಿಳಿಯಬಲ್ಲೆವು? ನೀನು ನಮ್ಮ ಮಗನೆಂದು ಭ್ರಮಿತರಾಗಿದ್ದ ನಾವು, ನಿನ್ನೊಡನೆ ಏನಾದರೂ ನಿಷ್ಠುರ ಮಾತುಗಳನ್ನಾಡಿದ್ದರೆ ಅದೆಲ್ಲವನ್ನು ಕ್ಷಮಿಸು. ನಮ್ಮಿಂದ ನಿನಗೆ ಊಟೋಪಚಾರಗಳಲ್ಲಿ ಕೊರತೆಯುಂಟಾಗಿರಬಹುದು. ನಿನ್ನನ್ನು ಎತ್ತಿ, ಆಡಿಸಿ, ಲಾಲಿಸಿ, ಪಾಲಿಸಲಿಲ್ಲ. ನಾವು ಏನೇ ಪಾಪಗಳನ್ನು ಮಾಡಿದ್ದರೂ ಅದೆಲ್ಲವನ್ನೂ ಕ್ಷಮಿಸಿ ನಮ್ಮನ್ನನುಗ್ರಹಿಸು. ನೀನು ನಮ್ಮ ವಂಶೋದ್ಧಾರಕನಾಗಿ ಅವತರಿಸಿದ್ದೀಯೆ. ನಮ್ಮ ಪ್ರದೋಷ ಪೂಜೆಗಳು ನಿಸ್ಸಂಶಯವಾಗಿ ಫಲಕೊಟ್ಟಿವೆ. ಇನ್ನು ಮುಂದೆ ನಮ್ಮ ಗತಿಯೇನು? ನಮ್ಮನ್ನು ಈ ಜನನ ಮರಣ ದುಃಖಗಳಿಂದ ದೂರಮಾಡು. ನಾವು, ನಮ್ಮ ಎರಡೂ ವಂಶಗಳೂ, ನೀನು ನಮಗೆ ಮಗನಾಗಿ ಬಂದಿದ್ದರಿಂದ, ಪಾವನವಾದವು. ಸ್ವಾಮಿ, ಈ ದುಸ್ತರವಾದ ಸಂಸಾರದಲ್ಲಿ ನಮ್ಮನ್ನು ಇನ್ನೂ ಏಕೆ ನಿಲ್ಲಿಸಿದ್ದೀಯೆ? ನಿನ್ನ ದರ್ಶನವಿಲ್ಲದೆ ನಾವು ಹೇಗೆತಾನೇ ಜೀವಿಸಿರಬಲ್ಲೆವು?" ಎಂದು ಮುಂತಾಗಿ ಕಳಕಳಿಯಿಂದ ಮೊರೆಯಿಟ್ಟರು.

ಅವರ ಮಾತುಗಳನ್ನು ಕೇಳಿ ಶ್ರೀಗುರುವು, ನಗುತ್ತಾ, "ನಿಮಗೆ ನನ್ನ ದರ್ಶನವಾಗಬೇಕೆಂಬ ಇಚ್ಛೆಯಾದರೆ, ನನ್ನನ್ನು ಸ್ಮರಿಸಿ. ತಕ್ಷಣವೇ ನಾನು ನಿಮಗೆ ದರ್ಶನ ಕೊಡುತ್ತೇನೆ. ಚಿಂತಿಸಬೇಡಿ. ನಿಮ್ಮ ಮನೆಯಲ್ಲಿ ಇನ್ನು ಮೇಲೆ ದೈನ್ಯವೆಂಬುದು ಎಂದಿಗೂ ಇರುವುದಿಲ್ಲ. ಪ್ರತಿದಿನವೂ ಲಕ್ಷ್ಮಿ ಈ ಮನೆಯಲ್ಲಿ ಕಲಕಲವಾಡುತ್ತಾ ಓಡಾಡುತ್ತಾಳೆ. ಹಿಂದಿನ ಜನ್ಮದಲ್ಲಿ ನೀವು ಮಾಡಿದ ಪ್ರದೋಷ ಪೂಜೆಯ ಫಲವಿದು. ನಿಮ್ಮ ವಂಶವೂ ಶ್ರೀಮಂತಗೊಳ್ಳುತ್ತದೆ. ಇಹದಲ್ಲಿ ಸೌಖ್ಯ, ದೇಹಾಂತದಲ್ಲಿ ಪರಲೋಕಗಳನ್ನು ಪಡೆದು ನೀವು ಪುನರ್ಜನ್ಮ ರಹಿತರಾಗುತ್ತೀರಿ. ಅಮ್ಮಾ, ನೀನು ಶಂಕರನನ್ನಾರಾಧಿಸಿ ನನ್ನನ್ನು ಅವತರಿಸಿಕೊಂಡು, ಪೂರ್ಣಕಾಮಳಾದೆ. ಇನ್ನು ನನಗೆ ಅನುಮತಿ ಕೊಟ್ಟರೆ ನಾನು ಹೊರಡುತ್ತೇನೆ. ಮುವ್ವತ್ತು ವರ್ಷಗಳ ನಂತರ ಮತ್ತೆ ನಿಮಗೆ ನನ್ನ ದರ್ಶನವಾಗುತ್ತದೆ. ಬದರಿವನಕ್ಕೆ ಹೊರಡುತ್ತಿದ್ದೇನೆ" ಎಂದು ಹೇಳಿ ಶ್ರೀಗುರುವು ಪಯಣಕ್ಕೆ ಸಿದ್ಧರಾದರು.

ಹಾಗೆ ಹೊರಟ ಶ್ರೀಗುರುವಿನ ಹಿಂದೆ ಗುಂಪುಗುಂಪಾಗಿ ಜನ ಹೊರಟರು. "ಈ ಬ್ರಹ್ಮಚಾರಿ ತಪಸ್ಸು ಮಾಡಲು ಹೊರಟಿದ್ದಾನೆ. ಇವನು ಮಾನವನಂತೆ ಕಂಡರೂ, ಪುರಾಣ ಪುರುಷನೇ!’ ಎಂದು ಕೆಲವರು ಹೇಳುತ್ತಿದ್ದರು. "ಈ ವಿಚಿತ್ರವನ್ನು ನೋಡು. ಈ ಸಣ್ಣ ಬಾಲಕ ತಪಸ್ಸಿಗೆಂದು ಹೊರಡುತ್ತಿದ್ದರೆ ಅವನ ತಂದೆತಾಯಿಗಳು ಅವನನ್ನು ಸಂತೋಷದಿಂದ ಕಳುಹಿಸಿಕೊಡುತ್ತಿದ್ದಾರೆ" ಎಂದು ಇನ್ನು ಕೆಲವರು ಹೇಳುತ್ತಿದ್ದರು. "ಅವರ ಹೃದಯ ಕಲ್ಲಾಗಿರಬೇಕು. ಅಷ್ಟು ಸಣ್ಣ ಮಗನನ್ನು ಸನ್ಯಾಸಿಯಾಗಲು ಕಳುಹಿಸಿಕೊಡುವವರೂ ಇದ್ದಾರೆಯೇ?" ಎಂದು ಮತ್ತೆ ಕೆಲವರು ಹೇಳುತ್ತಿದ್ದರು. "ಇವನು ಪರಮಾತ್ಮನೇ! ಹೀಗೆ ಅವತರಿಸಿದ್ದಾನೆ. ಅದರಲ್ಲಿ ಸಂಶಯವೇ ಇಲ್ಲ. ಸಕಲ ವೇದಗಳನ್ನೂ ಅಧ್ಯಯನಮಾಡಿರುವ ಈ ಏಳು ವರ್ಷದ ಬಾಲಕ, ಅಶೇಷವಾಗಿ ವೇದಗಳನ್ನು ಪಠಿಸಿರುವ ಇವನು, ಸಾಮಾನ್ಯ ಮನುಷ್ಯನಾಗಿರಲು ಹೇಗೆ ಸಾಧ್ಯ?" ಎಂದು ಇನ್ನೂ ಕೆಲವರು ಹೇಳುತ್ತಿದ್ದರು. ಹೀಗೆ ಅನೇಕರು, ಅನೇಕ ರೀತಿಗಳಲ್ಲಿ ಮಾತನಾಡುತ್ತಾ ಶ್ರೀಗುರುವಿಗೆ ಪ್ರಣಾಮಗಳನ್ನು ಅರ್ಪಿಸಿ, ಅವರ ಸ್ತೋತ್ರಮಾಡಿದರು. ಹಾಗೆ ಶ್ರೀಗುರುವಿನ ಸ್ತೋತ್ರ ಮಾಡುತಿದ್ದ ಜನರನ್ನು ಅಲ್ಲಿಯೇ ತಟಸ್ಥಿಸಿ, ಗುರುವು ಮುಂದಕ್ಕೆ ಪ್ರಯಾಣ ಮಾಡಿದರು. ಜನರೆಲ್ಲರೂ ಹೊರಟುಹೋದಮೇಲೆ, ತಂದೆತಾಯಿಗಳು ಇನ್ನೂ ಸ್ವಲ್ಪದೂರ ಶ್ರೀಗುರುವಿನ ಜೊತೆಯಲ್ಲಿ ಮುಂದುವರೆದರು. ಆಗ ಶ್ರೀಗುರುವು, ಅವರಿಗೆ ತ್ರಿಮೂರ್ತಿಸ್ವರೂಪದಲ್ಲಿ ತನ್ನ ದರ್ಶನ ದಯಪಾಲಿಸಿದರು. ಏಂದರೆ, ದತ್ತಾತ್ತ್ರೇಯರೇ ಅವರಿಗೆ ಶ್ರೀಪಾದ ಶ್ರೀವಲ್ಲಭರಾಗಿ ಕಾಣಿಸಿಕೊಂಡರು. ನಿಜರೂಪದಿಂದ ಕಂಡ, ಕರ್ಪೂರಗೌರನಾದ ನರಹರಿಯನ್ನು ನೋಡಿದ ಅವರು, ಸಾಷ್ಟಾಂಗ ನಮಸ್ಕಾರಮಾಡಿ, ಅವರ ಸ್ತೋತ್ರಮಾಡಿದರು. "ಹೇ ತ್ರಿಮೂರ್ತಿ, ನಿನಗೆ ಜಯವಾಗಲಿ. ಜಯವಾಗಲಿ. ಜಗದ್ಗುರು ನಿನ್ನ ದರ್ಶನದಿಂದ ನಮಗಿಂದು ಮಹಾಪುಣ್ಯ ಲಭ್ಯವಾಯಿತು. ಹೇ ವಿಶ್ವೋದ್ಧಾರಕ, ನಮ್ಮನ್ನು ಈ ಭವಾರ್ಣವದಿಂದ ಪಾರುಮಾಡಿದೆ. ಮತ್ತೆ ನಮಗೆ ನಿನ್ನ ದರ್ಶನ ಕೊಡು" ಎಂದು ಕಳಕಳಿಯಿಂದ ಬೇಡಿಕೊಳ್ಳುತ್ತಾ ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟು ನಮಸ್ಕರಿಸಿದರು. ಗುರುನಾಥನು ಅವರನ್ನು ಪ್ರೇಮದಿಂದ ಹಿಡಿದು ಮೇಲಕ್ಕೆತ್ತಿ, ಆಲಂಗಿಸಿ, ಸಂತುಷ್ಟನಾಗಿ, "ನಿಮಗೆ ತಪ್ಪದೇ ಮತ್ತೆ ದರ್ಶನ ಕೊಡುತ್ತೇನೆ" ಎಂದು ಮಾತು ಕೊಟ್ಟು, ಅವರನ್ನು ಹಿಂತಿರುಗುವಂತೆ ಹೇಳಿ, ತಾವು ಮುಂದಕ್ಕೆ ಹೊರಟರು. ಆ ಮಾತಾಪಿತರು ಶ್ರೀಗುರುವು ಹೋದ ದಾರಿಯನ್ನೇ ಮತ್ತೆ ಮತ್ತೆ ನೋಡುತ್ತಾ ತಮ್ಮ ಮನೆಗೆ ಹಿಂದಿರುಗಿದರು.

ಅಲ್ಲಿಂದ ಹೊರಟ ಶ್ರೀಗುರುವು, ಬದರಿನಾಥ, ಆನಂದ ಕಾನನವಾದ ಕಾಶಿಕ್ಷೇತ್ರವನ್ನು ದರ್ಶಿಸಿದರು. ವಾರಣಾಸಿಯಲ್ಲಿ ವಿಶ್ವೇಶ್ವರನು ಸ್ವಯಂ ನೆಲೆಸಿದ್ದಾನೆ. ಅದರಿಂದಲೇ ಅದು ತ್ರಿಲೋಕಗಳಲ್ಲೂ ಸಾಟಿಯಿಲ್ಲದ್ದು. ಶ್ರೀಗುರುವು ತ್ರಿಕಾಲದಲ್ಲೂ ಅನುಷ್ಠಾನ ಮಾಡಿಕೊಳ್ಳುತ್ತಾ, ವಿಶ್ವೇಶ್ವರನ ದರ್ಶನ ಮಾಡುತ್ತಾ ಕಾಶಿಯಲ್ಲಿ ಸ್ವಲ್ಪಕಾಲ ನಿಂತರು. ಅಲ್ಲಿ ಅಷ್ಟಾಂಗ ಯೋಗದಿಂದ ತಪಸ್ಸನ್ನಾಚರಿಸಿದರು. ಕಾಶಿಯಲ್ಲಿ ಬಹಳ ಜನ ತಪಸ್ವಿಗಳಿದ್ದರು. ಕೆಲವರು ಸನ್ಯಾಸಿಗಳು. ಕೆಲವರು ಅವಧೂತರು. ಅವರೆಲ್ಲರೂ ತಪೋನಿರತರೇ! ಯೊಗಾಭ್ಯಾಸ ನಿರತನಾದ ಈ ಬ್ರಹ್ಮಚಾರಿಯೇ ನಮಗಿಂತ ಉತ್ತಮ ಎಂದು ಭಾವಿಸಿದ ಅವರೆಲ್ಲರೂ, "ಈ ಬ್ರಹ್ಮಚಾರಿ ನಮ್ಮೆಲ್ಲರಿಗಿಂತ ದುಷ್ಕರವಾದ ತಪಸ್ಸನ್ನು ಆಚರಿಸುತ್ತಿದ್ದಾನೆ. ಇವನ ವೈರಾಗ್ಯವು ಅದ್ಭುತವಾಗಿದೆ. ದೇಹಾಭಿಮಾನವಿಲ್ಲದವನು. ಯೋಗ್ಯ, ಉತ್ತಮ ಸನ್ಯಾಸಿ. ತ್ರಿಕಾಲದಲ್ಲೂ ಮಣಿಕರ್ಣಿಕೆಯಲ್ಲಿ ಸ್ನಾನವಾಚರಿಸುತ್ತಾನೆ" ಎಂದು ಮಾತನಾಡಿಕೊಳ್ಳುತ್ತಿದ್ದರು.

ಅಲ್ಲಿದ್ದವರೆಲ್ಲರಲ್ಲಿ, ಮಹಾಮತಿಯಾದ ಕೃಷ್ಣ ಸರಸ್ವತಿ ಎನ್ನುವವರು ಬ್ರಹ್ಮಜ್ಞಾನಿ. ವೃದ್ಧ ತಪಸ್ವಿ. ಮಹಾಮುನಿ. ಆ ಯತಿವರ್ಯರು, ಶ್ರೀಗುರುವನ್ನು, ಸದಾ ಪ್ರೀತಿವಿಶ್ವಾಸಗಳಿಂದ ಕಾಣುತ್ತಾ, ಅವರಲ್ಲಿ ಭಕ್ತಿತತ್ಪರರಾದರು. ಕೃಷ್ಣ ಸರಸ್ವತಿ ಒಂದುಸಲ ಅಲ್ಲಿದ್ದ ಇತರ ಯತಿಗಳಿಗೆ, "ನೀವು ಈ ಬ್ರಹ್ಮಚಾರಿಯನ್ನು ಮಾನವ ಮಾತ್ರನೆಂದು ತಿಳಿಯಬೇಡಿ. ಈ ಪುರುಷ ಆ ವಿಶ್ವವಂದ್ಯನ ಅವತಾರವೇ! ವಯಸ್ಸಿನಲ್ಲಿ ಸಣ್ಣವನಾದರೂ, ಇವನಿಗೆ ನೀವು ಭಕ್ತಿಯಿಂದ ನಮಸ್ಕರಿಸಿಕೊಳ್ಳಬೇಕು. ತ್ರಿಭುವನ ವಂದ್ಯರಾದ ತ್ರಿಮೂರ್ತಿಗಳ ಅವತಾರವೇ ಇವನು. ವಯೋಜ್ಯೇಷ್ಠರು ಕನಿಷ್ಠರಿಗೆ ನಮಸ್ಕರಿಸಬಾರದು ಎಂಬುದು ಮೂರ್ಖ ದೃಷ್ಟಿ. ವಿದ್ವಾಂಸರಿಗೆ, ಇವನು ವಿಶ್ವವಂದ್ಯನೆಂಬ ಅರಿವಿದೆ. ಸನ್ಯಾಸವನ್ನು ಮತ್ತೆ ಸ್ಥಾಪಿಸುವುದರಿಂದ ನಮ್ಮ ಭಕ್ತಿ ಸ್ಥಿರವಾಗುವುದು. ಶರೀರಧಾರಿಗಳೆಲ್ಲರಿಗೂ ಅನುಗ್ರಹ ಮಾಡಲು ಇವನೇ ಸಮರ್ಥ. ಈ ಗುರುವಿನ ದರ್ಶನ ಮಾತ್ರದಿಂದಲೇ ಪತಿತನೂ ಪವಿತ್ರನಾಗುತ್ತಾನೆ. ಆದ್ದರಿಂದ ಈ ಬಾಲಕನನ್ನು ನಾವು ಪ್ರಾರ್ಥಿಸಿಕೊಳ್ಳೋಣ. ಇವನಿಗೆ ಸನ್ಯಾಸ ಕೊಟ್ಟು ನಾವು ಕೃತಾರ್ಥರಾಗೋಣ" ಎಂದು ಹೇಳಿದರು. ಯತಿಗಳೆಲ್ಲರೂ ಅವರು ಹೇಳಿದಂತೆ, ಆ ಬಾಲಬ್ರಹ್ಮಚಾರಿಯ ಬಳಿಗೆ ಹೋಗಿ, "ಹೇ ತಾಪಸ ಶ್ರೇಷ್ಠ, ನಮ್ಮ ಪ್ರಾರ್ಥನೆಯನ್ನು ಆಲಿಸಿ, ನೀನು ಲೋಕಾನುಗ್ರಹಾರ್ಥವಾಗಿ ಸನ್ಯಾಸ ಸ್ವೀಕಾರಮಾಡು. ನಮ್ಮ ಪೂಜಾದಿಗಳನ್ನು ಕೈಕೊಂಡು ನಮ್ಮನ್ನು ಉದ್ಧರಿಸು. ಈ ಕಲಿಯುಗದಲ್ಲಿ ಜನರು ಸನ್ಯಾಸಾಶ್ರಮವನ್ನು ನಿಂದಿಸುತ್ತಾರೆ. ಭೂಮಿಯಲ್ಲಿ ಸನ್ಯಾಸಮಾರ್ಗವನ್ನು ಸ್ಥಾಪಿಸುವಂತಹ ಸಮರ್ಥರು ಯಾರೂ ಇಲ್ಲ. ಅಗ್ನಿಹೋತ್ರ, ಗೋವಧೆ, ಸನ್ಯಾಸ, ಮಾಂಸಶ್ರಾದ್ಧ, ಮೈದುನನಿಂದ ಸಂತಾನೋತ್ಪತ್ತಿ, ಎನ್ನುವ ಐದನ್ನು ವಿಸರ್ಜಿಸಬೇಕೆಂಬುದನ್ನು ಶ್ರುತಿವಚನವಾಗಿ ಗ್ರಹಿಸಿ, ಕಲಿಯುಗದಲ್ಲಿ, ಜನರು ಸನ್ಯಾಸವನ್ನು ನಿಷೇಧಿಸುತ್ತಿದ್ದಾರೆ. ಆದರೆ ವೇದಗಳಲ್ಲಿ ಸನ್ಯಾಸವೆಂಬುದು ಪ್ರಸಿದ್ಧಾವಾಗಿದೆ. ಹಿಂದೆ ಅದನ್ನು ನಿಷೇಧಮಾಡಿದ್ದುದು ದುರ್ಬಲರಿಗೆ ಮಾತ್ರ. ವರ್ಣ ಬೇಧಗಳಿರುವವರೆಗೂ, ವೇದಗಳು ಆಚಾರದಲ್ಲಿರುವವರೆಗೂ, ಕಲಿಯುಗದಲ್ಲೂ ಸಹ ಅಗ್ನಿಹೋತ್ರ ಸನ್ಯಾಸಗಳನ್ನು ಪರಿತ್ಯಜಿಸಬಾರದು ಎಂದು ಶಂಕರಾಚಾರ್ಯರು ಸನಾತನ ಮತಸ್ಥಾಪನೆ ಮಾಡಿದರು. ಅಂದಿನಿಂದ ಇಂದಿನವರೆಗೂ ಸನ್ಯಾಸಾಶ್ರಮ ಮುಂದುವರೆಯುತ್ತಲೇ ಇದೆ. ಆದರೆ ಈ ಕಲಿಕಾಲದಲ್ಲಿ, ಪಾಮರರು ಅದನ್ನು ನಿಂದಿಸುತ್ತಿದ್ದಾರೆ. ಈ ಸನ್ಯಾಸಾಶ್ರಮವನ್ನು ಉದ್ಧರಿಸಿ, ಜನರಿಗೆ ಉಪಕಾರ ಮಾಡು. ಹೇ ಮುನೀಶ್ವರ, ನೀನು ಕೃಪಾಸಾಗರನು. ನಮ್ಮನ್ನು ಈ ಸಂಸಾರ ಕೂಪದಿಂದ ಉದ್ಧರಿಸು" ಏಂದು ಪ್ರಾರ್ಥಿಸಿದರು. ಅವರ ಮಾತನ್ನು ಕೇಳಿದ ಶ್ರೀಗುರುವು ಸನ್ಯಾಸವನ್ನು ಸ್ವೀಕರಿಸಲು ನಿಶ್ಚಯಿಸಿ, ವೃದ್ಧರಾದ ಕೃಷ್ಣ ಸರಸ್ವತಿ ಅವರಿಂದ ಶಾಸ್ತ್ರೋಕ್ತವಾಗಿ ಸನ್ಯಾಸ ದೀಕ್ಷೆ ಪಡೆದರು.

ಸಿದ್ಧಮುನಿಯ ಈ ಮಾತುಗಳನ್ನು ಕೇಳಿದ ನಾಮಧಾರಕ, "ಸ್ವಾಮಿ, ಜಗತ್ತಿಗೇ ಗುರುವಾದ ಅವರಿಗೆ ಇನ್ನೊಬ್ಬರು ಹೇಗೆ ಗುರುವಾಗುತ್ತಾರೆ? ತ್ರಿಮೂರ್ತ್ಯವತಾರವಾದ ಶ್ರೀಗುರುವಿಗೆ ಮತ್ತೊಬ್ಬ ಗುರುವಿನ ಅವಶ್ಯಕತೆಯಾದರೂ ಏನು?" ಎಂದು ತನ್ನ ಸಂದೇಹವನ್ನು ವ್ಯಕ್ತಪಡಿಸಿದನು. ಅದಕ್ಕೆ ಸಿದ್ಧರು, "ಹಿಂದೆ ಶ್ರೀರಾಮ ವಸಿಷ್ಠರನ್ನು ಗುರುವಾಗಿ ಸ್ವೀಕರಿಸಿದ್ದನಲ್ಲವೆ? ಭಗವಂತನು, ತನ್ನ ಎಂಟನೆಯ ಅವತಾರದಲ್ಲಿ ಶ್ರೀ ಕೃಷ್ಣನಾಗಿ, ಸಾಂದೀಪನಿ ಮುನಿಯನ್ನು ಗುರುವಾಗಿ, ಮಾನವ ಧರ್ಮಾನುಸಾರವಾಗಿ, ಸ್ವೀಕರಿಸಿದ್ದನಲ್ಲವೆ? ಅದೇ ರೀತಿಯಲ್ಲಿ ಶ್ರೀಗುರುವು ಕೂಡ ಜ್ಞಾನವೃದ್ಧರಾದ ಕೃಷ್ಣ ಸರಸ್ವತಿಯನ್ನು ಗುರುವಾಗಿ ಸ್ವೀಕರಿಸಿದರು" ಎಂದು ಹೇಳಿದರು. ಅದಕ್ಕೆ ನಾಮಧಾರಕ, "ಅಲ್ಲಿ ಬಹಳ ಜನ ಯತೀಶ್ವರರಿದ್ದರೂ, ಶ್ರೀಗುರುವು ಕೃಷ್ಣ ಸರಸ್ವತಿಯನ್ನೇ ಗುರುವಾಗಿ ಆರಿಸಿಕೊಳ್ಳಲು ಕಾರಣವೇನು? ಅದನ್ನು ನನಗೆ ವಿಸ್ತಾರವಾಗಿ ಹೇಳಿ" ಎಂದು ಕೇಳಲು, ಸಿದ್ಧಮುನಿ ಮೂಲದಿಂದ ಆರಂಭಿಸಿ, ಗುರು ಪರಂಪರೆಯನ್ನು ಹೇಳಿದರು. "ಗುರು ಪರಂಪರೆಗೆ ಮೂಲವಾದವನು ಶಂಕರ. ಶಂಕರನ ಶಿಷ್ಯ ವಿಷ್ಣು. ವಿಷ್ಣುವಿಗೆ ಬ್ರಹ್ಮ ಶಿಷ್ಯ. ಬ್ರಹ್ಮನಿಗೆ ವಸಿಷ್ಠ, ವಸಿಷ್ಠರಿಗೆ ಶಕ್ತಿ, ಶಕ್ತಿಗೆ ಪರಾಶರ, ಪರಾಶರರೇ ಸ್ವಯಂ ನಾರಾಯಣನಾದ ವ್ಯಾಸ, ವ್ಯಾಸರಿಗೆ ಶುಕ, ಶುಕರಿಗೆ ಗೌಡಪಾದ, ಗೌಡಪಾದರಿಗೆ ಗೋವಿಂದಾಚಾರ್ಯ, ಅವರಿಗೆ ಶಂಕರಾಚಾರ್ಯ, ಶಂಕರಾಚಾರ್ಯರಿಗೆ ಬೋಧಜ್ಞಾನಗಿರಿ, ಅವರಿಗೆ ಸಿಂಹಗಿರಿ, ಸಿಂಹಗಿರಿಗೆ ಈಶ್ವರತೀರ್ಥ, ಅವರಿಗೆ ನೃಸಿಂಹತೀರ್ಥ ಹಾಗೂ ಸರ್ವವಿದ್ಯಾ ವಿಶಾರದರಾದ ವಿದ್ಯಾರಣ್ಯ, ಅವರಿಗೆ ಮಲಯಾನಂದ, ಅವರಿಗೆ ದೈವತೀರ್ಥ, ಅವರಿಗೆ ಯಾದವೇಂದ್ರ ಸರಸ್ವತಿ, ಅವರ ಶಿಷ್ಯ ಈ ಕೃಷ್ಣ ಸರಸ್ವತಿ. ಹೀಗೆ, ಈ ಗುರು ಪರಂಪರೆ ಶ್ರೀಗುರುವಿಗೆ ಸಮ್ಮತವಾದದ್ದರಿಂದ ಅವರು ಕೃಷ್ಣ ಸರಸ್ವತಿಯನ್ನು ತಮ್ಮ ಗುರುವಾಗಿ ಅಂಗೀಕರಿಸಿದರು. ಅವರ ಸನ್ಯಾಸಾಶ್ರಮದ ಹೆಸರು ನೃಸಿಂಹ ಸರಸ್ವತಿ ಎಂದಾಯಿತು" ಎಂದು ಗುರುಪರಂಪರೆಯನ್ನು ವಿಸ್ತರವಾಗಿ ತಿಳಿಸಿದರು.

ಹೀಗೆ ಸನ್ಯಾಸಮಾರ್ಗ ಸ್ಥಾಪನೆಗೆಂದು, ತಾವು ಸನ್ಯಾಸವನ್ನು ಸ್ವೀಕರಿಸಿ, ಶ್ರೀ ಗುರುವು ಗುರುನಾಥನಾಗಿ ಕಾಶಿಯಲ್ಲಿ ಶಿಷ್ಯರಿಗೆ ವೇದೋಪದೇಶಮಾಡಿದರು. ವಯಸ್ಸಿನಲ್ಲಿ ಸಣ್ಣವರಾದರೂ, ಕಾಶಿಯಲ್ಲಿ ಇವರನ್ನು ಎಲ್ಲರೂ ಪೂಜಿಸಿದರು. ವಿಶೇಷವಾಗಿ, ಕಾಶಿಯಲ್ಲಿದ್ದ ಎಲ್ಲ ವಿದ್ವಾಂಸರೂ, ಯತಿಗಳೂ, ಶ್ರೀ ನೃಸಿಂಹ ಸರಸ್ವತಿಯವರನ್ನು ಆರಾಧಿಸುತ್ತಿದ್ದರು. ಶ್ರೀಗುರುವು ಕಾಶಿಯಲ್ಲಿ ಅನೇಕ ಶಿಷ್ಯರನ್ನು ಸೇರಿಸಿ, ಅಲ್ಲಿಂದ ಬದರಿಕಾವನವೇ ಮೊದಲಾದ ಅನೇಕ ತೀರ್ಥಗಳನ್ನು ಸಂದರ್ಶಿಸುತ್ತಾ, ಲೋಕಾನುಗ್ರಹಕ್ಕಾಗಿ ಪರ್ಯಟನೆ ಮಾಡುತ್ತಾ, ಮೇರು ಪರ್ವತವನ್ನು ಸೇರಿದರು. ಆ ಪರ್ವತಕ್ಕೆ ಪ್ರದಕ್ಷಿಣೆ ಮಾಡಿ, ಶಿಷ್ಯರೊಡನೆ ಸರ್ವ ತೀರ್ಥಗಳ ದರ್ಶನ ಮಾಡುತ್ತಾ, ಭೂಪ್ರದಕ್ಷಿಣೆ ಮಾಡಿ, ಗಂಗಾಸಾಗರ ಸಂಗಮ ಪ್ರದೇಶಕ್ಕೆ ಬಂದರು. ಪರ್ಯಟನಕಾಲದಲ್ಲಿ ಅವರು ನೆರವೇರಿಸಿದ ಲೋಕೋದ್ಧಾರ ಕಾರ್ಯಗಳನ್ನೆಲ್ಲ ತಿಳಿದವರು ಯಾರೂ ಇಲ್ಲ. ಅಲ್ಲದೆ ಶ್ರೀಗುರುವಿನ ಲೀಲೆಗಳನ್ನೆಲ್ಲ ವಿವರಿಸುತಾ ಹೋದರೆ ಗ್ರಂಥ ಬಹಳ ದೊಡ್ಡದಾಗುವುದು. ಆದ್ದರಿಂದ ಹೇ ನಾಮಧಾರಕ, ನನಗೆ ತಿಳಿದಮಟ್ಟಿಗೆ ಮಾತ್ರ ನಾನು ಎಲ್ಲವನ್ನೂ ತಿಳಿಸುತ್ತೇನೆ. ಗಂಗಾತೀರ್ಥ ಪರ್ಯಟನೆ ಮಾಡಿ, ಅವರು ಪ್ರಯಾಗವನ್ನು ಸೇರಿದರು. ಅಲ್ಲಿ ಮಾಧವನೆಂಬ ಬ್ರಾಹ್ಮಣ ಶ್ರೇಷ್ಠನೊಬ್ಬನು, ಗುರುದರ್ಶನಾಭಿಲಾಷಿಯಾಗಿ ಅವರಲ್ಲಿಗೆ ಬಂದನು. ಅವನಿಗೆ ಶ್ರೀಗುರುವು ಸನ್ಯಾಸ ಕೊಟ್ಟು , ಅದ್ವೈತವನ್ನು ಉಪದೇಶಿಸಿದರು. ಅವರ ಶಿಷ್ಯಗಣದಲ್ಲಿ, ಶ್ರೀಗುರುವಿಗೆ ಮಾಧವನನ್ನು ಕಂಡರೆ ಅತಿಶಯ ಪ್ರೀತಿ. ಶಿಷ್ಯರೆಲ್ಲರನ್ನೂ ಹಿಂದಿಟ್ಟುಕೊಂಡು ಶ್ರೀಗುರುವು ಪ್ರಯಾಗವನ್ನು ಬಿಟ್ಟು ಹೊರಟರು." 

ಇಲ್ಲಿಗೆ ಹನ್ನೆರಡನೆಯ ಅಧ್ಯಾಯ ಮುಗಿಯಿತು.


No comments:

Post a Comment