Monday, February 18, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತನೆಯ ಅಧ್ಯಾಯ||

ನಾಮಧಾರಕನು ಸಿದ್ಧಮುನಿಗೆ ನಮಸ್ಕಾರಮಾಡಿ, "ಸ್ವಾಮಿ, ಶ್ರೀಗುರುವು ಗಂಧರ್ವನಗರವನ್ನು ಸೇರಿದ್ದರೂ ಅಮರಪುರದಲ್ಲಿ ಔದುಂಬರ ಮೂಲದಲ್ಲಿ ಅದೃಶ್ಯವಾಗಿ ಇರುತ್ತೇನೆಂದು ಯೋಗಿನಿಯರಿಗೆ ಆಶ್ವಾಸನವಿತ್ತರು. ಹಾಗೆ ಅಲ್ಲಿ ಅಗೋಚರರಾದ ಶ್ರೀಗುರುವಿನ ಅನುಗ್ರಹ ಯಾರಿಗಾದರೂ ದೊರಕಿದೆಯೇ ಎಂಬುದನ್ನು ಹೇಳಿ" ಎಂದು ಕೇಳಿದನು. ಅವನ ಮಾತಿನಿಂದ ಸಂತಸಗೊಂಡ ಸಿದ್ಧಮುನಿ, ಕೃಷ್ಣಾ ತೀರದಲ್ಲಿನ ಔದುಂಬರ ಮಾಹಾತ್ಮ್ಯೆಯನ್ನು ಹೇಳರಾಂಭಿಸಿದರು.

"ನಾಮಧಾರಕ, ಔದುಂಬರದ ಮೂಲದಲ್ಲಿ ನಡೆದಿರುವ ಗುರುಲೀಲೆಗಳು ಅನೇಕವಾಗಿವೆ. ಅದು ಕಲ್ಪವೃಕ್ಷವೇ ಆದದ್ದರಿಂದ ಅದು ಕೊಡಲಾರದು ಎಂಬುದು ಯಾವುದೂ ಇಲ್ಲ. ಶ್ರೀಗುರುವೇ ಅಲ್ಲಿ ನೆಲಸಿರುವುದರಿಂದ ಯಾವ ಅಭೀಷ್ಟವಾದರೂ ಸಿದ್ಧಿಸುತ್ತದೆ. ಅಂತಹ ಒಂದು ನಿದರ್ಶನವನ್ನು ಹೇಳುತ್ತೇನೆ, ಕೇಳು.

ಶಿರೋಲವೆಂಬ ಊರಿನಲ್ಲಿ ವೇದ ಶಾಸ್ತ್ರ ಪರಾಯಣನಾದ ಗಂಗಾಧರನೆಂಬ ಬ್ರಾಹ್ಮಣನೊಬ್ಬನಿದ್ದನು. ಧರ್ಮ ಪರಾಯಣೆಯೂ, ಶಾಂತ ಚಿತ್ತಳೂ ಆದ ಅವನ ಹೆಂಡತಿ, ಸುಶೀಲ. ಅವಳಿಗೆ ಐದು ಮಕ್ಕಳಾದರೂ, ಅವರೆಲ್ಲರೂ ಹುಟ್ಟಿದ ಸ್ವಲ್ಪ ಕಾಲದಲ್ಲೇ ಮರಣಿಸಿದರು. ಅದರಿಂದ ಬಹಳ ದುಃಖಿತರಾದ ಆ ದಂಪತಿಗಳು ಅನೇಕ ದೇವತಾರಾಧನೆಗಳನ್ನು ಮಾಡಿದರು. ಆದರೂ ಅವರ ದುಃಖ ಕಡಮೆಯಾಗಲಿಲ್ಲ. ಸುಶೀಲ ಇದಕ್ಕೆ ಕಾರಣವನ್ನು ತಿಳಿಯಲು, ಅದನ್ನು ಹೇಳಬಲ್ಲ ಒಬ್ಬ ಬ್ರಾಹ್ಮಣನ ಬಳಿಗೆ ಹೋಗಿ, ಅವನನ್ನು ವಿಚಾರಿಸಿದಳು. ಅವನು ಅವಳಿಗೆ, "ನಿನ್ನ ದುಃಖಕ್ಕೆ ಕಾರಣ ನಿನ್ನ ಪೂರ್ವಜನ್ಮ ಕೃತ ಕರ್ಮಗಳು. ಗೋವು ಮುಂತಾದ ಪಶುಗಳನ್ನು ಹತ್ಯೆ ಮಾಡಿದವಳು ಬಂಜೆಯಾಗುತ್ತಾಳೆ. ಪರರ ದ್ರವ್ಯವನ್ನು ಅಪಹರಿಸಿದವಳಿಗೆ ಹುಟ್ಟಿದ ಮಕ್ಕಳು ಅನತಿ ಕಾಲದಲ್ಲೇ ಮರಣ ಹೊಂದುತ್ತಾರೆ. ನಿನ್ನ ದೋಷವನ್ನು ಹೇಳುತ್ತೇನೆ ಕೇಳು. ಶೌನಕ ಗೋತ್ರೀಯನಾದ ಬ್ರಾಹ್ಮಣನೊಬ್ಬನಿಂದ ನೀನು ೧೦೦ ವರಹಗಳನ್ನು ಪಡೆದು ಅದನ್ನು ಹಿಂತಿರುಗಿಸಲಿಲ್ಲ. ಆ ಬ್ರಾಹ್ಮಣ ನೀನು ಹಣ ಹಿಂತಿರುಗಿಸದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡು, ಪಿಶಾಚಿಯಾಗಿ, ನಿನ್ನ ಶೋಕಕ್ಕೆ ಕಾರಣನಾಗಿದ್ದಾನೆ. ಅವನೇ ನಿನಗೆ ಹುಟ್ಟಿದ ಮಕ್ಕಳನ್ನೆಲ್ಲಾ ಸಾಯಿಸುತ್ತಿದ್ದಾನೆ. ನೀನು ಮಾಡಿದ ಪೂರ್ವಜನ್ಮದ ಫಲವಿದು. ಅನುಭವಿಸಬೇಕು" ಎಂದು ಹೇಳಿದನು. ಅದನ್ನು ಕೇಳಿ, ಖಿನ್ನಳಾದ ಅವಳು ಮತ್ತೆ ಆ ಬ್ರಾಹ್ಮಣನನ್ನು, "ಅಯ್ಯಾ, ನಾನು ಈ ಪಾಪದಿಂದ ಹೇಗೆ ಬಿಡುಗಡೆ ಹೊಂದ ಬಹುದು ಎಂಬುದನ್ನು ಹೇಳು" ಎಂದು ಕೇಳಿದಳು. ಅದಕ್ಕೆ ಅವನು, "ನೀನು ಬ್ರಾಹ್ಮಣ ಧನವನ್ನು ಅಪಹರಿಸಿ ಅವನ ಸಾವಿಗೆ ಕಾರಣಳಾಗಿದ್ದೀಯೆ. ಅವನು ಆತ್ಮಹತ್ಯೆ ಮಾಡಿಕೊಂಡದ್ದರಿಂದ ಅವನಿಗೆ ಊರ್ಧ್ವಲೋಕ ಕ್ರಿಯೆಗಳಾಗಲಿಲ್ಲ. ಅದರಿಂದ ನೀನು ಅವನಿಗೆ ಅಂತ್ಯಕ್ರಿಯೆಗಳನ್ನು ಮಾಡಿ. ಅವನ ಗೋತ್ರೋದ್ಭವನಾದ ಬ್ರಾಹ್ಮಣನೊಬ್ಬನಿಗೆ ಅವನಿಗೆ ಕೊಡಬೇಕಾಗಿದ್ದ ಹಣವನ್ನು ದಾನ ಮಾಡು. ಹಾಗೆ ಮಾಡುವುದರಿಂದ ನೀನು ದೋಷ ಮುಕ್ತಳಾಗುತ್ತೀಯೆ. ಕೃಷ್ಣಾನದಿ ತೀರದಲ್ಲಿರುವ ಪಂಚ ಗಂಗಾ ಸಂಗಮದಲ್ಲಿ ಸ್ನಾನಮಾಡಿ, ಉಪವಾಸವಿರುತ್ತಾ, ಔದುಂಬರ ವೃಕ್ಷವನ್ನು ಆರಾಧಿಸು. ಪಾಪವಿನಾಶ ತೀರ್ಥದಲ್ಲಿ ಸ್ನಾನ ಮಾಡಿ ಔದುಂಬರಕ್ಕೆ ಏಳು ಸಲ ಪ್ರದಕ್ಷಿಣೆ ಮಾಡಿ ಅಭಿಷೇಕ ಮಾಡು. ಮತ್ತೆ ಕಾಮ್ಯ ತೀರ್ಥದಲ್ಲಿ ಮಿಂದು ಗುರು ಪಾದುಕೆಗಳಿಗೆ ಅಭಿಷೇಕ ಪೂಜೆಗಳನ್ನು ಅರ್ಪಿಸು. ಅದು ಶ್ರೀ ನೃಸಿಂಹ ಸರಸ್ವತಿಗಳ ಸ್ಥಾನವಾದದ್ದರಿಂದ ಪವಿತ್ರವಾದದ್ದು. ಹೀಗೆ ಒಂದು ತಿಂಗಳು ಮಾಡಿ, ನಂತರ ಪಿಶಾಚಿಯಾಗಿರುವ ಆ ಬ್ರಾಹ್ಮಣನ ಅಂತ್ಯಕ್ರಿಯೆಗಳನ್ನು ಮಾಡಿಸು. ನಂತರ ಗುರು ಪಾದುಕೆಗಳಿಗೆ ಅಭಿಷೇಕ, ಪೂಜೆಗಳನ್ನು ಅರ್ಪಿಸಿ, ನೀನು ಆ ಬ್ರಾಹ್ಮಣನಿಗೆ ಕೊಡಬೇಕಾಗಿದ್ದ ಹಣವನ್ನು, ನಾನು ಹೇಳಿದಂತೆ ದಾನ ಮಾಡು. ಹೀಗೆ ಮಾಡಿದರೆ ನಿನ್ನ ದೋಷಗಳೆಲ್ಲಾ ಕಳೆದು ನಿನಗೆ ಪೂರ್ಣಾಯುಷಿಗಳಾದ ಮಕ್ಕಳು ಹುಟ್ಟುತ್ತಾರೆ. ಶ್ರೀಗುರುವೇ ನಿನ್ನನ್ನು ಕಾಪಾಡುತ್ತಾನೆ. ಆ ಬ್ರಾಹ್ಮಣನೂ ತನ್ನ ಪಿಶಾಚತ್ವವನ್ನು ಕಳೆದುಕೊಂಡು ಉದ್ಧರಿಸಲ್ಪಡುತ್ತಾನೆ" ಎಂದು ಹೇಳಿದನು.

ಆ ಬ್ರಾಹ್ಮಣ ಹೇಳಿದ ಮಾತುಗಳನ್ನು ಕೇಳಿ ಸುಶೀಲ, "ನೀನು ಹೇಳಿದ ಶಾರೀರಿಕವಾದ ಕಷ್ಟಗಳನ್ನೆಲ್ಲಾ ಸಹಿಸಿ ಪೂಜಾದಿಗಳನ್ನು ಮಾಡಬಲ್ಲೆ. ಶ್ರದ್ಧಾಭಕ್ತಿಗಳಿಂದ ಶ್ರೀಗುರುವನ್ನು ಆರಾಧಿಸಬಲ್ಲೆ. ಆದರೆ ನೀನು ಹೇಳಿದ ನೂರು ವರಹಗಳನ್ನು ಕೊಡುವ ಶಕ್ತಿ ನನಗಿಲ್ಲ" ಎಂದಳು. ಅದಕ್ಕೆ ಆ ಬ್ರಾಹ್ಮಣ, "ನಿನಗೆ ದಾನ ಕೊಡಲು ಶಕ್ತಿಯಿಲ್ಲದಿದ್ದರೆ ನಿಶ್ಚಲ ಮನಸ್ಸಿನಿಂದ ಶ್ರೀಗುರುವನ್ನು ಪೂಜಿಸು. ಗುರುವೇ ನಿನ್ನ ಪಾಪವನ್ನು ಪರಿಹರಿಸುತ್ತಾನೆ. ಶ್ರೀಗುರುವು ದಯಾ ಸಮುದ್ರನು. ಭಕ್ತವತ್ಸಲ. ಗುರುವಿನ ಅಪ್ಪಣೆ ಪಡೆದು ನಿನಗೆ ಶಕ್ತಿಯಿದ್ದಷ್ಟು ದಾನ ಮಾಡು" ಎಂದನು. ಅವನ ಮಾತುಗಳಿಂದ ಸಮಾಧಾನಗೊಂಡ ಸುಶೀಲ, ಶ್ರೀಗುರುವು ಅಗೋಚರನಾಗಿ ನೆಲೆಸಿರುವ ಔದುಂಬರ ವೃಕ್ಷವಿರುವ ಸಂಗಮವನ್ನು ಸೇರಿದಳು. ಅಲ್ಲಿ ಬ್ರಾಹ್ಮಣನು ಹೇಳಿದಂತೆ ಸ್ನಾನಾದಿಗಳನ್ನು ಮಾಡುತ್ತಾ, ಗುರು ಪಾದುಕೆಗಳಿಗೆ ಅಭಿಷೇಕ, ಪೂಜಾದಿಗಳನ್ನು ಅರ್ಪಿಸಿದಳು. ಹಾಗೆ ಮೂರು ದಿನಗಳು ಮಾಡುವುದರಲ್ಲಿ ಆ ಪಿಶಾಚಿಯು ಅವಳ ಕನಸಿನಲ್ಲಿ ಕಾಣಿಸಿಕೊಂಡು, ಅವಳನ್ನು ಭಯಪಡಿಸುತ್ತಾ, "ನನ್ನ ಹಣವನ್ನು ಕೊಡು, ಇಲ್ಲದಿದ್ದರೆ ನಿನ್ನನ್ನೂ ಕೊಂದು ನಿನ್ನ ವಂಶವನ್ನೇ ನಾಶಮಾಡುತ್ತೇನೆ. ನೀನು ಮಾಡುತ್ತಿರುವ ಈ ಪ್ರಯಾಸವೆಲ್ಲವೂ ವ್ಯರ್ಥವೇ!" ಎಂದು ಹೇಳುತ್ತಾ ಅವಳನ್ನು ಹೊಡೆಯಲು ಬಂದಿತು. ಸುಶೀಲ, ಭಯಗೊಂಡು, ಔದುಂಬರ ವೃಕ್ಷದ ಬಳಿಗೆ ಹೋಗಿ, ಅಲ್ಲಿ ಅಗೋಚರನಾದ ಶ್ರೀಗುರುವನ್ನು ಆಶ್ರಯಿಸಿ, ಅಲ್ಲಿ ಕೂತಳು. ಶ್ರೀಗುರುವು ಅವಳಿಗೆ ಅಭಯನೀಡಿ, ಅವಳನ್ನು ಹಿಂಬಾಲಿಸಿ ಬಂದಿದ್ದ ಆ ಪಿಶಾಚಿಗೆ, "ಏಯ್, ಈಕೆಯನ್ನು ನೀನೇಕೆ ಪೀಡಿಸುತ್ತಿದ್ದೀಯೆ?" ಎಂದು ಕೇಳಲು, ಆ ಪಿಶಾಚಿ, "ಹಿಂದಿನ ಜನ್ಮದಲ್ಲಿ ಇವಳು ನನ್ನಿಂದ ಹಣ ಪಡೆದು ಹಿಂತಿರುಗಿಸಲಿಲ್ಲ. ಅದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಸ್ವಾಮಿ, ಈ ನನ್ನ ಶತ್ರುವಿನಲ್ಲಿ ನೀವು ಪಕ್ಷಪಾತ ತೋರಿಸುವುದು ಸರಿಯಲ್ಲ" ಎಂದಿತು. ಶ್ರೀಗುರುವು ಅದರಿಂದ ಕೋಪಗೊಂಡು, "ನೀನು ನನ್ನ ಭಕ್ತರನ್ನು ಪೀಡಿಸದಿದ್ದರೆ ನಿನಗೆ ಸದ್ಗತಿಯಾಗುವಂತೆ ಮಾಡುತ್ತೇನೆ. ಅದರಿಂದ ನಿನ್ನ ಪಿಶಾಚತ್ವ ತೊಲಗಿ ಹೋಗುತ್ತದೆ. ಇನ್ನಾವುದೇ ರೀತಿಯಲ್ಲೂ ನಿನಗೆ ಪರಿಹಾರವಿರುವುದಿಲ್ಲ. ಈಕೆ ತನಗೆ ಸಾಧ್ಯವಿದ್ದಷ್ಟು ಹಣ ಹಿಂತಿರುಗಿಸುವಂತೆ ಹೇಳುತ್ತೇನೆ. ಅದನ್ನು ನೀನು ಅಂಗೀಕರಿಸಬೇಕು. ಇಲ್ಲದಿದ್ದರೆ ನಿನ್ನನ್ನು ದಂಡನೆಗೆ ಗುರಿಮಾಡುತ್ತೇನೆ" ಎಂದು ಹೇಳಿದರು. ಅದಕ್ಕೆ ಆ ಪಿಶಾಚಿ, "ಸ್ವಾಮಿ, ನಾನು ನಿಮ್ಮ ಪಾದಗಳಲ್ಲಿ ಬಿದ್ದಿದ್ದೇನೆ. ನೀವು ಹೇಳಿದಂತೆ ಮಾಡುತ್ತೇನೆ. ನನ್ನನ್ನು ಉದ್ಧರಿಸಿ. ನಿಮ್ಮ ಆಜ್ಞೆಯನ್ನು ಅಂಗೀಕರಿಸುತ್ತೇನೆ" ಎಂದು ಹೇಳಿತು. ಅದಕ್ಕೆ ಶ್ರೀಗುರುವು, "ಇವಳು ನಿನಗೆ ಅಂತ್ಯಕ್ರಿಯೆಗಳನ್ನು ಮಾಡಿಸುತ್ತಾಳೆ. ಅದರಿಂದ ನಿನಗೆ ಸದ್ಗತಿಯಾಗುತ್ತದೆ" ಎಂದು ಹೇಳಿ, ಆ ಬ್ರಾಹ್ಮಣ ಸ್ತ್ರೀಗೆ, "ನೀನು ನಿನ್ನ ಕೈಲಾದಷ್ಟು ಹಣ ವ್ಯಯ ಮಾಡಿ, ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕೆ ಮುಂಚೆಯೇ, ಇವನ ಅಂತ್ಯಕ್ರಿಯೆಗಳನ್ನು ಮಾಡಿಸು. ನಿನ್ನ ಬ್ರಹ್ಮಾಹತ್ಯಾ ದೋಷವು ನಾಶವಾಗುತ್ತದೆ. ಏಳು ದಿನಗಳು ಔದುಂಬರಕ್ಕೆ ಅಭಿಷೇಕ ಮಾಡು. ನಿನಗೆ ಪೂರ್ಣಾಯುಷಿಗಳಾದ ಪುತ್ರರಾಗುತ್ತಾರೆ" ಎಂದು ಹೇಳಿದರು. ಸ್ವಪ್ನದಲ್ಲಿ ತನಗೆ ಗುರುವಿನ ಆಜ್ಞೆಯಾದಂತೆ ಅವಳು ಪ್ರೇತ ಕರ್ಮಗಳನ್ನು ಮಾಡಿಸಿ, ತನಗೆ ಸಾಧ್ಯವಾದಷ್ಟು ಹಣ ದಾನ ಮಾಡಿದಳು. ಹಾಗೆ ಅವಳ ಬ್ರಹ್ಮಹತ್ಯಾದೋಷವು ಕಳೆಯಿತು.

ಮಾರನೆಯ ದಿನ ಅವಳ ಕನಸಿನಲ್ಲಿ ಶ್ರೀಗುರುವು ಕಾಣಿಸಿಕೊಂಡು ಅವಳಿಗೆ ಎರಡು ತೆಂಗಿನ ಕಾಯಿಗಳನ್ನು ಕೊಟ್ಟು, "ವ್ರತ ಸಮಾಪ್ತಿಯಾದ ನಂತರ ಇವುಗಳ ಪಾರಣೆ ಮಾಡು. ಅದರಿಂದ ನಿನಗೆ ಸಂತಾನ ಪ್ರಾಪ್ತಿಯಾಗುತ್ತದೆ" ಎಂದು ಹೇಳಿದರು. ಎಚ್ಚೆತ್ತ ಅವಳು ತನ ಪಕ್ಕದಲ್ಲಿ ಎರಡು ತೆಂಗಿನ ಕಾಯಿಗಳು ಇರುವುದನ್ನು ಕಂಡಳು. ನಡೆದ ವಿಷಯವನ್ನೆಲ್ಲ ತನ್ನ ಗಂಡನಿಗೆ ವಿವರಿಸಿ, ಅವಳು ಶ್ರೀಗುರುವು ಹೇಳಿದಂತೆ, ಔದುಂಬರ ವೃಕ್ಷ ಪೂಜಾದಿಗಳನ್ನು ಮುಗಿಸಿ, ಕಾಯಿಗಳ ಪಾರಣೆ ಮಾಡಿದಳು. ಗುರುವಿನ ಅನುಗ್ರಹದಿಂದ ಅವಳಿಗೆ ಎರಡು ಗಂಡು ಮಕ್ಕಳಾದವು. ಅದರಿಂದ ಸುಶೀಲ ಆನಂದ ಭರಿತಳಾದಳು.

ಮಕ್ಕಳು ಬೆಳೆದು ದೊಡ್ಡವರಾದರು. ದೊಡ್ಡವನಿಗೆ ಉಪನಯನ, ಚಿಕ್ಕವನಿಗೆ ಚೌಲ ಮಾಡಬೇಕೆಂದು ನಿಶ್ಚಯಿಸಿ, ದಂಪತಿಗಳು ಮುಹೂರ್ತಕ್ಕೆ ಪ್ರಶಸ್ತವಾದ ದಿನವನ್ನು ಗೊತ್ತುಮಾಡಿ, ಸರ್ವ ಸಿದ್ಧತೆಗಳನ್ನೂ ಅಣಿ ಮಾಡಿದರು. ಆದರೆ ಆಕಸ್ಮಾತ್ತಾಗಿ, ಮುಹೂರ್ತ ನಿರ್ಧರಿಸಿದ್ದ ದಿನಕ್ಕೆ ಒಂದು ದಿನ ಮುಂಚೆ, ದೊಡ್ಡ ಹುಡುಗನಿಗೆ, ಧನುರ್ವಾತ ರೋಗವು ಬಂದು ಅವನು ಮೂರು ದಿನಗಳು ಬಹಳ ವೇದನೆಯನ್ನನುಭವಿಸಿ, ಗತಪ್ರಾಣನಾದನು. ಅಸಹನೀಯವಾದ ದುಃಖದಿಂದ ಸುಶೀಲ ಅಳಲಾರಂಭಿಸಿದಳು.

ತಲೆಚಚ್ಚಿಕೊಳ್ಳುತ್ತಾ, ನೆಲದ ಮೇಲೆ ಬಿದ್ದು ಹೊರಳಾಡುತ್ತಾ, ತನ್ನ ಮಗನ ಸುಗುಣಗಳನ್ನು ನೆನಸಿಕೊಳ್ಳುತ್ತಾ, ದುಃಖಿಸುತ್ತಿದ್ದ ಆ ತಾಯಿಯು ಮೃತ ಪ್ರಾಯಳೇ ಆದಳು. ಮಗನ ಶವವನ್ನು ತಬ್ಬಿಕೊಂಡು, ಅವಳು, "ತಂದೆ, ನಿನ್ನನ್ನು ನಮ್ಮ ರಕ್ಷಕನೆಂದು ಭಾವಿಸಿದ್ದೆವು. ಆದರೆ ನಮ್ಮನ್ನು ಬಿಟ್ಟು ನೀನು ಎಲ್ಲಿಗೆ ಹೊರಟು ಹೋದೆ? ನಿನ್ನ ಮನಸ್ಸು ಹೇಗೆ ಇಷ್ಟು ಕಠೋರವಾಯಿತು? ಎಲ್ಲಿಗೆ ಆಟವಾಡಲು ಹೋಗಿದ್ದೀಯೆ ಮಗು? ಬೇಗ ಹಿಂತಿರುಗಿ ಬಾ. ನಿನ್ನ ಸುಗುಣಗಳನ್ನು ನಾನು ಹೇಗೆ ಮರೆಯಬಲ್ಲೆ? ನಿನ್ನ ಮುದ್ದು ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಮೊಳಗುತ್ತಿವೆ. ಕನಸಿನಲ್ಲಿ ಕಂಡ ಹಣದ ಗಂಟಿನಂತೆ ನೀನು ನಮಗೆ ಭ್ರಾಂತಿಯುಂಟುಮಾಡಿ ಹೊರಟು ಹೋದೆಯಾ ತಂದೆ? ನನ್ನ ಇಬ್ಬರು ಮಕ್ಕಳಲ್ಲಿ ನೀನೇ ನನ್ನ ನಿಧಿಯೆಂದು ತಿಳಿದಿದ್ದೆ. ನೀನು ನನ್ನ ಗರ್ಭದಲ್ಲಿದ್ದಾಗ ನನಗೆ ಯಾವ ದುರ್ಯೋಚನೆಗಳೂ ಇಲ್ಲದೆ, ಮಗನು ಹುಟ್ಟುತ್ತಾನೆ ಎಂಬ ಆನಂದವೇ ತುಂಬಿತ್ತು. ನಿನಗೆ ಪೂರ್ಣಾಯುಷಿಯಾದ ಸತ್ಪುತ್ರನಾಗುತ್ತಾನೆ ಎಂದು ಶ್ರೀಗುರುವು ನನಗೆ ಅನುಗ್ರಹ ಮಾಡಿದ್ದರು. ಅಂತಹ ವರದಿಂದ ಲಭಿಸಿದ ಮಗನೆಂದು ನಾನು ಅತ್ಯಂತ ಸಂತೋಷದಲ್ಲಿದ್ದೆ. ಹುಟ್ಟಿದಾಗಿನಿಂದಲೂ ನಿನ್ನನ್ನು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪಾಲಿಸಿ, ಬೆಳೆಸಿದೆ. ನೀನೇ ನಮ್ಮನ್ನು ನಮ್ಮ ಮುದಿ ವಯಸ್ಸಿನಲ್ಲಿ ಕಾಪಾಡುವವನೆಂದು ನಾವು ನಂಬಿದ್ದೆವು. ನಮ್ಮನ್ನು ಬಿಟ್ಟು ನೀನು ಹೇಗೆ ತಾನೇ ಹೋಗಬಲ್ಲೆ? ನಿನ್ನನ್ನು ಕಾಣುತ್ತಲೇ ನಾನು ನನ್ನ ಹಿಂದಿನ ದುಃಖಗಳನ್ನೆಲ್ಲಾ ಮರೆತಿದ್ದೆ" ಎಂದು ನಾನಾ ವಿಧವಾಗಿ ಆಲಾಪಿಸುತ್ತಾ ಅವಳು ಅಳುತ್ತಿದ್ದಳು.

ಸೇರಿದ್ದ ಜನರೆಲ್ಲರೂ, ಅವಳನ್ನು ಸಂತೈಸುತ್ತಾ, "ಬ್ರಹ್ಮಲಿಪಿಯನ್ನು ತಪ್ಪಿಸಲು ಸಾಧ್ಯವೇ? ಅವತಾರಮಾಡಿ ಬಂದ ಶ್ರೀಹರಿಯೂ ಕಾಲವಶನೇ ಅಲ್ಲವೇ? ಇನ್ನು ಹುಲುಮಾನವರ ಗತಿಯೇನು?" ಎಂದು ನಾನಾ ವಿಧದಲ್ಲಿ ಅವಳಿಗೆ ಬುದ್ಧಿ ಹೇಳಿದರು. ಅದರಿಂದ ಅವಳ ದುಃಖ ಹೆಚ್ಚಿ, "ಔದುಂಬರ ಮೂಲ ನಿವಾಸಿಯಾದ ಶ್ರೀ ನೃಸಿಂಹ ಸರಸ್ವತಿಯವರು ನನ್ನನ್ನು ಆದರಿಸಿ, ಅನುಗ್ರಹಿಸಿ ನನಗೆ ಈ ಮಗನನ್ನು ಕೊಟ್ಟರು. ಆ ಸ್ವಾಮಿಯ ಮಾತು ಸುಳ್ಳಾಗುವುದು ಹೇಗೆ? ಈ ಮಗನೊಡನೆ ನಾನೂ ಪ್ರಾಣ ಕಳೆದುಕೊಳ್ಳುತ್ತೇನೆ. ಅವರ ಮಾತು ಸುಳ್ಳಾದರೂ ನನ್ನ ಸಾವು ಸುಳ್ಳಾಗುವುದಿಲ್ಲ" ಎಂದು ಹೇಳುತ್ತಾ, ಶ್ರೀಗುರುವನ್ನು ನೆನಸಿಕೊಂಡು, "ಸ್ವಾಮಿ, ನನ್ನನ್ನು ಇಂತಹ ದುಃಖಕ್ಕೆ ಏಕೆ ಈಡುಮಾಡಿದೆ? ನೀವು ಸತ್ಯ ವಚನರೆಂದು ನಿಮ್ಮ ಮಾತುಗಳನ್ನು ಸಂಪೂರ್ಣವಾಗಿ ನಂಬಿದ್ದೆ. ಅದು ತಪ್ಪಾಯಿತೇ? ಈಗ ಇಂತಹ ವಿಶ್ವಾಸಘಾತವೇತಕ್ಕೆ? ತ್ರಿಮೂರ್ತಿಗಳ ಅವತಾರವೆಂದು ಪ್ರಸಿದ್ಧರಾದ ಶ್ರೀ ನೃಸಿಂಹ ಸರಸ್ವತಿಗಳಲ್ಲವೇ ನೀವು? ಹಿಂದೆ ಅನೇಕ ಭಕ್ತರು ನಿಮ್ಮ ಮಾತುಗಳನ್ನು ನಂಬಿ ಉದ್ಧಾರವಾದರಲ್ಲವೇ? ನಿಮ್ಮನ್ನು ನಂಬಿದ ನಾನು ಈಗ ನಿಮಗಾಗಿಯೇ ನನ್ನ ಪ್ರಾಣಗಳನ್ನು ತ್ಯಜಿಸುವೆ. ಫಲಾಪೇಕ್ಷೆಯಿಂದ ಮಾಡಿದ ಸೇವೆ ಇನ್ನು ಸಾಕು. ನನ್ನನ್ನು ಪಿಶಾಚಿಯಿಂದ ಕಾಪಾಡಿ ಉದ್ಧರಿಸಿದ ನೀವು, ಈಗ ಹೀಗೆ ನನ್ನ ಕೈಬಿಡುವುದು ನಿಮಗೆ ಉಚಿತವೇ? ದೇವತಾ ದರ್ಶನಕ್ಕೆಂದು ದೇವಾಲಯಕ್ಕೆ ಹೋದವನ ಮೇಲೆ ದೇವಾಲಯವೇ ಕುಸಿದು ಬಿದ್ದಂತೆ ನನ್ನ ಗತಿಯಾಯಿತು. ಇನ್ನೇನು ಹೆಚ್ಚಿಗೆ ಹೇಳಲಿ, ಸ್ವಾಮಿ? ನನ್ನ ಮಗನ ಪ್ರಾಣ ರಕ್ಷಣೆ ಹೇಗೆ ಹೇಳು" ಎಂದು ಧಾರಾಕಾರವಾಗಿ ಕಣ್ಣಿರು ಸುರಿಸುತ್ತಾ, ರಾತ್ರಿಯೆಲ್ಲ ದುಃಖಿಸುತ್ತಾ ಅಲ್ಲಿಯೇ ಕುಳಿತಿದ್ದಳು.

ಮಾರನೆಯ ದಿನ ಬೆಳಗ್ಗೆ ಊರಿನ ಬ್ರಾಹ್ಮಣರೆಲ್ಲರೂ ಬಂದು, "ಅಮ್ಮಾ, ನೀನು ವ್ಯರ್ಥವಾಗಿ ಅಳುತ್ತಿದ್ದಿಯೆ. ಆಗಬೇಕಾದ್ದನ್ನು ಆ ಬ್ರಹ್ಮನೂ ಬದಲಿಸಲಾರ. ಸಂಸ್ಕಾರ ಮಾಡಲು ಶವವನ್ನು ನಮಗೆ ಕೊಡು" ಎಂದರು. ಅವರ ಮಾತುಗಳನ್ನು ಕೇಳಿ ಅವಳು ಇನ್ನೂ ಹೆಚ್ಚಾಗಿ ಅಳುತ್ತಾ, "ಅಯ್ಯಾ, ಬ್ರಾಹ್ಮಣರೇ, ಶವದ ಜೊತೆಗೆ ನನ್ನನ್ನೂ ಚಿತೆಗೇರಿಸಿ. ಇಲ್ಲದಿದ್ದರೆ ನಾನು ಶವವನ್ನು ಕೊಡುವುದಿಲ್ಲ. ಮಗನ ಜೊತೆಗೆ ನಾನೂ ಅಗ್ನಿಗೆ ಆಹುತಿಯಾಗುತ್ತೇನೆ" ಎಂದು ಹೇಳುತ್ತಾ, ಶವವನ್ನು ಇನ್ನೂ ಘಟ್ಟಿಯಾಗಿ ಅಪ್ಪಿಕೊಂಡಳು. ಅದನ್ನು ಕೇಳಿ ಬಂದಿದ್ದವರು, "ಮಗನೊಡನೆ ಅಗ್ನಿಪ್ರವೇಶ ಎಂದರೆ ಆತ್ಮಹತ್ಯೆ. ಅದು ಮಹಾಪಾಪ" ಎಂದು ಅವಳಿಗೆ ಅನೇಕ ರೀತಿಯಲ್ಲಿ ತಿಳಿಯಹೇಳಿದರು. ಆದರೂ ಅವಳು ತನ್ನ ನಿಶ್ಚಯದಿಂದ ಕದಲಲಿಲ್ಲ. ಮಧ್ಯಾಹ್ನ ಸಮಯವಾದರೂ ಅವಳು ಶವವನ್ನು ಕೊಡದೆ ಅದನ್ನು ಅಪ್ಪಿ ಕೂತಳು. ಎಲ್ಲರೂ ಅವಳ ಚರ್ಯೆಯಿಂದ ಚಿಂತಿತರಾಗಿದ್ದಾಗ, ಅಲ್ಲಿಗೆ ಒಬ್ಬ ಬ್ರಹ್ಮಚಾರಿ ಬಂದು ಅವಳಿಗೆ ತಗುನಾದ ರೀತಿಯಲ್ಲಿ ಆತ್ಮಜ್ಞಾನ ಉಪದೇಶ ಮಾಡಿದನು. ಪುತ್ರಶೋಕವನ್ನು ಪರಿಹರಿಸುವಂತಹ ಆತ್ಮಜ್ಞಾನವನ್ನು ಬೋಧಿಸಿದ ಆ ಬ್ರಹ್ಮಚಾರಿ ಇನ್ನಾರೂ ಅಲ್ಲ, ತ್ರಿಮೂರ್ತಿ ಸ್ವರೂಪನಾದ ಶ್ರೀ ನೃಸಿಂಹ ಸರಸ್ವತಿ ಗುರುವೇ! 

ಇಲ್ಲಿಗೆ ಇಪ್ಪತ್ತನೆಯ ಅಧ್ಯಾಯ ಮುಗಿಯಿತು.



No comments:

Post a Comment