Friday, February 8, 2013

||ಶ್ರೀ ಗುರು ಚರಿತ್ರೆ - ಏಳನೆಯ ಅಧ್ಯಾಯ||

ಗೋಕರ್ಣ ಕ್ಷೇತ್ರ ವೃತ್ತಾಂತವನ್ನು ಕೇಳಿ, ನಾಮಧಾರಕ ಸಿದ್ಧಪುರುಷನಿಗೆ, ಆ ಕ್ಷೇತ್ರ ಮಹಿಮೆಯನ್ನು ಇನ್ನಷ್ಟು ವಿವರಿಸಿ ಹೇಳಬೇಕೆಂದು ಬಿನ್ನವಿಸಿಕೊಂಡನು. "ಸರ್ವ ತೀರ್ಥಗಳನ್ನೂ ಬಿಟ್ಟು ಶ್ರೀಪಾದ ಶ್ರೀವಲ್ಲಭರು ಅಲ್ಲಿಯೇ ನಿಲ್ಲಲು ಕಾರಣವೇನು? ಆ ಕ್ಷೇತ್ರದಲ್ಲಿ ಯಾರು ಯಾರು ವರಗಳನ್ನು ಪಡೆದರು? ಸದ್ಗುರುವಿನಲ್ಲಿ ಪ್ರೀತಿಯಿಟ್ಟವರಿಗೆ ಆ ತೀರ್ಥ ಮಹಿಮೆಯನ್ನು ಕೇಳಬೇಕೆಂಬ ಕೋರಿಕೆಯು ಸಹಜವಲ್ಲವೇ? ಹೇ ಕೃಪಾಮೂರ್ತಿ, ಜ್ಞಾನಸಿಂಧು, ನನಗೆ ಅಂತಹ ಕಥೆಗಳನ್ನು ವಿಸ್ತರಿಸಿ ಹೇಳಿ." ಎಂದು ಸಿದ್ಧರನ್ನು ಪ್ರಾರ್ಥಿಸಿಕೊಂಡನು. ಅವನ ಪ್ರಾರ್ಥನೆಯನ್ನು ಕೇಳಿ ಸಿದ್ಧಮುನಿಯು ಹೇಳಿದರು. "ನಾಮಧಾರಕ, ಗೋಕರ್ಣ ಮಹಿಮೆಯನ್ನು ವಿಸ್ತಾರವಾಗಿ ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಹಿಂದೆ ಇಕ್ಷ್ವಾಕು ವಂಶದಲ್ಲಿ ಮಿತ್ರಸಹನೆಂಬ ರಾಜನಿದ್ದನು. ಧರ್ಮಾನುಚರನಾದ ಆ ರಾಜ ಕ್ಷತ್ರಿಯರಲ್ಲೇ ಬಹು ಪ್ರತಾಪಿಯಾದವನು. ಸಕಲ ಧರ್ಮಗಳನ್ನೂ ಬಲ್ಲವನು. ವೇದ ಧರ್ಮಗಳನ್ನು ತಿಳಿದವನು. ವಿವೇಕಿ. ಕುಲಾಭಿಮಾನಿ. ಬಲಾಢ್ಯ. ದಯಾನಿಧಿ. ಪ್ರಯತ್ನಶಾಲಿ.

ಒಂದುಸಲ ಅವನು ಬೇಟೆಗೆಂದು ಹೊರಟು, ಅನೇಕ ವನ್ಯಮೃಗಗಳುಳ್ಳ ಅರಣ್ಯವನ್ನು ಪ್ರವೇಶಮಾಡಿದನು. ನಿರ್ಮಾನುಷ್ಯವಾದ ಆ ಅರಣ್ಯದಲ್ಲಿ ಮೃಗಗಳನ್ನನ್ನ್ವೇಷಿಸುತ್ತಾ ಹೊರಟ ಅವನು, ದಾರಿಯಲ್ಲಿ, ಅಗ್ನಿಯಂತೆ ಜ್ವಾಲಾಕಾರವಾಗಿ ಭಯಾನಕವಾಗಿ ಕಾಣುತ್ತಿದ್ದ ಒಬ್ಬ ರಾಕ್ಷಸನನ್ನು ನೋಡಿದನು. ಆ ರಾಕ್ಷಸನನ್ನು ಕಂಡ ಆ ರಾಜ ಕ್ರುದ್ಧನಾಗಿ ಅವನಮೇಲೆ ಶರ ವರ್ಷವನ್ನು ಕುರಿಸಿದನು. ಶರಘಾತದಿಂದ ಆ ರಾಕ್ಷಸ ಮೂರ್ಛೆಗೊಂಡು ಭೂಶಾಯಿಯಾದನು. ಸಾಯುತ್ತಾ ಬಿದ್ದಿರುವ ಅವನನ್ನು ಕಂಡು ಬಹು ದುಃಖಿತನಾದ ಅವನ ಸಹೋದರ, ಶೋಕತಪ್ತನಾಗಿ ಅಳುತ್ತಾ ಅವನ ಬಳಿಯೇ ಕುಳಿತನು. ಸಾಯುತ್ತಿದ್ದ ಆ ರಾಕ್ಷಸ, ಸರ್ವ ಪ್ರಯತ್ನದಿಂದಲೂ ತನ್ನ ಸಾವಿಗೆ ಕಾರಣನಾದ ಆ ರಾಜನನ್ನು ಕೊಲ್ಲಬೇಕೆಂದು ತನ್ನ ಸಹೋದರನಿಗೆ ಆಣತಿಕೊಟ್ಟು, ಪ್ರಾಣಬಿಟ್ಟನು.

ಸಮಯಕಾದು, ಮಾಯಾವಿಯಾದ ಆ ರಾಕ್ಷಸನ ಸಹೋದರ, ಮಾನವರೂಪದಲ್ಲಿ, ರಾಜನ ಬಳಿಗೆ ಬಂದು ಮೃದುವಾಕ್ಯಗಳಿಂದ ರಾಜನನ್ನು ಒಲಿಸಿಕೊಂಡು, ನಮ್ರತೆಯನ್ನು ನಟಿಸುತ್ತಾ, ರಾಜನ ಸೇವೆಯಲ್ಲಿ ನಿಂತನು. ಆ ಕಪಟಿ, ತನ್ನ ಸ್ವಾಮಿಯದ ರಾಜನ ಮನೋಗತಗಳನ್ನರಿತು, ಅವನಿಗೆ ಅನುಕೂಲನಾಗಿ, ಅವನ ಸೇವೆ ಮಾಡುತ್ತಾ, ಅವನನ್ನು ಸಂತುಷ್ಟನನ್ನಾಗಿ ಮಾಡಿ, ಅವನ ನಂಬಿಕೆಗೆ ಪಾತ್ರನಾದನು. ಒಂದುಸಲ ಪಿತೃಶ್ರಾದ್ಧ ಬರಲು, ರಾಜನು ವಸಿಷ್ಠಾದಿ ಮುನಿಗಳನ್ನು ಅಹ್ವಾನಿಸಿದನು. ಆ ದಿವಸ, ಕಪಟವನ್ನರಿಯದ ರಾಜನು ಆ ಕಪಟಿ ಸೇವಕನನ್ನು ಅಡಿಗೆಯ ಮೇಲ್ವಿಚಾರಕ್ಕೆ ನೇಮಿಸಿ, "ನೀನು ಪಾಕಶಾಲೆಯಲ್ಲಿದ್ದುಕೊಂಡು, ಅಡಿಗೆಗೆ ಬೇಕಾದ ಪದಾರ್ಥಗಳನ್ನು ತಂದುಕೊಟ್ಟು, ಅಡಿಗೆಯವನಿಗೆ ಸಹಾಯಕನಾಗಿ ನಿಂತು ಎಲ್ಲವನ್ನು ಸಿದ್ಧಪಡಿಸು." ಎಂದು ಆಜ್ಞೆ ಮಾಡಿದನು. ರಾಜಾಜ್ಞೆಯನ್ನಂಗೀಕರಿಸಿ, ಆ ಕಪಟಸೇವಕ, ಅಡಿಗೆಯ ಪದಾರ್ಥಗಳನ್ನು ತಂದುಕೊಡುವಾಗ ಯಾರಿಗೂ ತಿಳಿಯದಂತೆ ನರಮಾಂಸವನ್ನು ಜೊತೆಗೆ ಸೇರಿಸಿ ತಂದು ಕೊಟ್ಟನು. ನಿಜವನ್ನರಿಯದ ಅಡಿಗೆಯವನು ಕಪಟಿ ತಂದುಕೊಟ್ಟಿದ್ದ ಪದಾರ್ಥಗಳನ್ನು ಉಪಯೋಗಿಸಿ ಅಡಿಗೆ ಸಿದ್ಧಪಡಿಸಿದನು.

ಭೋಜನಸಮಯದಲ್ಲಿ ತನ್ನ ದಿವ್ಯ ದೃಷ್ಟಿಯಿಂದ ಅಡಿಗೆಯಲ್ಲಿ ನರಮಾಂಸ ಬೆರೆತಿರುವುದನ್ನು ಅರಿತ ವಸಿಷ್ಠಮುನಿ, ಕ್ರೋಧಗೊಂಡು, "ಹೇ ರಾಜನ್, ಅಸ್ಪರ್ಶವಾದ ನರಮಾಂಸವನ್ನು ಉಪಯೋಗಿಸಿ ನಮಗೆ ಭೋಜನವನ್ನು ಸಿದ್ಧಪಡಿಸಿದ್ದೀಯೆ. ನೀನು ಮಾಡಿದ ಈ ಪಾಪದಿಂದ ಬ್ರಹ್ಮರಾಕ್ಷಸನಾಗು." ಎಂದು ಶಾಪ ಕೊಟ್ಟನು. ಅದನ್ನು ಕೇಳಿದ ಆ ರಾಜ, ಪ್ರತಿಶಾಪ ಕೊಡಲು ಸಿದ್ಧನಾಗಿ, "ಮಹರ್ಷಿ, ಅಡಿಗೆಯಲ್ಲಿ ಯಾವ ಮಾಂಸವಿದೆ ಎಂಬುದರ ಅರಿವು ನನಗಿಲ್ಲ. ನನ್ನ ಆಜ್ಞೆಯಂತೆ ಅಡಿಗೆಯವನು ಅಡಿಗೆ ಮಾಡಿದ್ದಾನೆ. ಅದರಲ್ಲಿ ಏನಿದೆ ಎಂಬುದು ನನಗೆ ತಿಳಿಯದು. ಅದರಿಂದಲೇ ನೀನು ಕೊಟ್ಟ ಶಾಪ ವ್ಯರ್ಥವು. ತಿಳಿಯದೇ ಆದ ಪಾಪಕ್ಕೆ ನೀನು ಅನಾವಶ್ಯಕವಾಗಿ ಶಾಪ ಕೊಟ್ಟೆ. ಈಗ ನಿನಗೆ ನಾನು ಪ್ರತಿಶಾಪ ಕೊಡುತ್ತೇನೆ." ಎಂದು ಹೇಳಿ, ಕೈಯಲ್ಲಿ ನೀರು ತೆಗೆದುಕೊಂಡು ಶಾಪಕೊಡಲುದ್ಯುಕ್ತನಾದನು. ಅಷ್ಟರಲ್ಲಿ, ರಾಜನ ಪತ್ನಿ, ಮದಯಂತಿ ಅಡ್ಡಬಂದು, ರಾಜನನ್ನು ತಡೆದು, "ರಾಜಗುರುವನ್ನು ಶಪಿಸುವುದರಿಂದ ಮಹಾ ದೋಷವುಂಟಾಗುತ್ತದೆ. ಗುರುವಚನವು ವೃಥಾ ಅಗುವುದಿಲ್ಲ. ಅದರಿಂದ ಅವರ ಪಾದಗಳನ್ನು ಆಶ್ರಯಿಸಿಯೇ ಉದ್ಧಾರವಾಗಬೇಕು." ಎಂದು ಅವನನ್ನು ತಡೆದಳು. ರಾಣಿಯ ಮಾತುಗಳನ್ನು ಕೇಳಿ ರಾಜ, ಕೈಯಲ್ಲಿ ಹಿಡಿದಿದ್ದ ನೀರನ್ನು ಕೆಳಕ್ಕೆ ಬಿಟ್ಟನು. ಆ ಕಲ್ಮಷವಾದ ನೀರು ಅವನ ಪಾದಗಳ ಮೇಲೆ ಬಿತ್ತು. ಅದರಿಂದ ಆ ರಾಜ ಕಲ್ಮಷಪಾದನೆಂದು ಹೆಸರುಗೊಂಡು, ಬ್ರಹ್ಮರಾಕ್ಷಸನಾದನು. ರಾಜಪತ್ನಿ, ಮದಯಂತಿ, ಮಹರ್ಷಿಯ ಪಾದಗಳಮೇಲೆ ಬಿದ್ದು, "ಹೇ ಮಹರ್ಷಿವರ್ಯ, ನಿನ್ನ ಕೋಪವನ್ನು ಉಪಸಂಹರಿಸಿಕೊಂಡು, ತಿಳಿಯದೆ ಮಾಡಿದ ಪಾಪದಿಂದ ನನ್ನ ಗಂಡನನ್ನು ಕಾಪಾಡು." ಎಂದು ಬೇಡಿಕೊಂಡಳು. ಶಾಂತನಾದ ವಸಿಷ್ಠಮುನಿ, ಎಲ್ಲವನ್ನು ಅರಿತವನಾಗಿ, ಶಾಪಕಾಲವನ್ನು ತಗ್ಗಿಸಿ, ಹನ್ನೆರಡು ವರ್ಷಗಳು ಶಾಪವನ್ನನುಭವಿಸಿ ಯಥಾಪೂರ್ವದಂತೆ ಮಹಾರಾಜನಾಗಿ ಬಾಳುವಂತೆ ಅವನಿಗೆ ಶಾಪ ಉಪಸಂಹಾರವನ್ನು ಹೇಳಿ, ತನ್ನ ಆಶ್ರಮಕ್ಕೆ ಹೊರಟುಹೋದನು.

ಮಿತ್ರಸಹನು ಕಲ್ಮಾಷಪಾದನೆಂಬ ಬ್ರಹ್ಮರಾಕ್ಷಸನಾಗಿ ಅರಣ್ಯದಲ್ಲಿ ಮನುಷ್ಯರನ್ನೂ, ಮೃಗಗಳನ್ನು ಭಕ್ಷಿಸುತ್ತಾ ಅಲೆದಾಡುತ್ತಿದ್ದನು. ಹೀಗಿರಲು, ಒಂದು ದಿನ, ದೈವಯೋಗದಿಂದ ವಿಪ್ರ ದಂಪತಿಗಳು ಆ ದಾರಿಯಲ್ಲಿ ಪಯಣಿಸುತ್ತ ಬಂದರು. ಅವರನ್ನು ಕಂಡ ಬ್ರಹ್ಮರಾಕ್ಷಸ ಅವರನ್ನು ತಿನ್ನಲು ಅಲ್ಲಿಗೆ ಬಂದು, ಆ ಬ್ರಾಹ್ಮಣನನ್ನು ಹಿಡಿದು ತಿನ್ನಬೇಕೆಂದುಕೊಳ್ಳುವಷ್ಟರಲ್ಲಿ ಅವನ ಹೆಂಡತಿ, ಶೋಕಗ್ರಸ್ತಳಾಗಿ, ಆ ಬ್ರಹ್ಮರಾಕ್ಷಸನನ್ನು ಕುರಿತು, "ಅಯ್ಯಾ, ರಾಕ್ಷಸ, ನನ್ನ ಸೌಭಾಗ್ಯವನ್ನು ಹಾಳುಮಾಡಬೇಡ. ನನ್ನ ಗಂಡನನ್ನು ಹಿಂಸಿಸಬೇಡ. ಅವನನ್ನು ಬಿಟ್ಟುಬಿಡು. ನನ್ನನ್ನು ಬೇಕಾದರೆ ತಿನ್ನು. ಗಂಡನಿಲ್ಲದ ಸ್ತ್ರೀ ಪಾಷಾಣಕ್ಕೆ ಸಮಾನ. ನನ್ನನ್ನು ಮೊದಲು ತಿಂದು ಅನಂತರ ಬೇಕಾದರೆ ಅವನನ್ನು ತಿನ್ನು. ಸುಂದರ ಯುವಕನಾದ ನನ್ನ ಪತಿ ವೇದಶಾಸ್ತ್ರ ವಿದ್ವಾಂಸನು. ಅವನನ್ನು ರಕ್ಷಿಸಿದರೆ ನಿನಗೆ ಜಗತ್ತನ್ನೇ ರಕ್ಷಿಸಿದ ಪುಣ್ಯ ಬರುವುದು. ನೀನು ದಯೆಮಾಡಿ ನನ್ನ ಮಾತು ನಡೆಸಿಕೊಟ್ಟರೆ ನಾನು ನಿನಗೆ ಮಗಳಾಗಿ ಹುಟ್ಟುತ್ತೇನೆ. ಅಥವಾ ನನಗೆ ಪುತ್ರಸಂತಾನವಾದರೆ ಅವನಿಗೆ ನಿನ್ನ ಹೆಸರನ್ನೇ ಇಡುತ್ತೇನೆ." ಎಂದು ನಾನಾವಿಧವಾಗಿ ಆ ರಾಕ್ಷಸನನ್ನು ಬೇಡಿಕೊಂಡಳು. ಆದರೂ ಆ ರಾಕ್ಷಸ ಅವಳ ಮಾತಿಗೆ ಬೆಲೆ ಕೊಡದೆ ಆ ಬ್ರಾಹ್ಮಣನನ್ನು ತಿಂದುಬಿಟ್ಟನು. ಅದರಿಂದ ಕ್ರುದ್ಧಳಾದ ಆ ಹೆಂಗಸು, "ಎಲೈ ಪಾಪಿ, ನಾನು ಇಷ್ಟು ಬೇಡಿಕೊಂಡರೂ ನೀನು ನನ್ನ ಮಾತಿಗೆ ಬೆಲೆಕೊಡದೆ ನನ್ನ ಗಂಡನನ್ನು ತಿಂದುಹಾಕಿದೆ. ಇದೋ, ನನ್ನ ಶಾಪವನ್ನು ಕೇಳು. ನೀನು ಸೂರ್ಯವಂಶೀಯನಾದ ರಾಜನಾಗಿದ್ದೂ ಕೂಡ ಶಾಪಗ್ರಸ್ತನಾಗಿ ಬ್ರಹ್ಮರಾಕ್ಷಸನಾದೆ. ಹನ್ನೆರಡು ವರ್ಷಗಳು ಕಳೆದು ನೀನು ಮತ್ತೆ ರಾಜನಾದಾಗ, ನೀನು ನಿನ್ನ ರಾಣಿಯೊಡನೆ ಕೂಡಿದರೆ ಸಾಯುತ್ತೀಯೆ. ದುರಾತ್ಮ, ಅನಾಥ ವಿಪ್ರ ಭಕ್ಷಣೆಯ ಫಲವನ್ನು ಅನುಭವಿಸು." ಎಂದು ಶಪಿಸಿ, ತನ್ನ ಗಂಡನ ಅಸ್ತಿಗಳನ್ನು ಕೂಡಿಸಿ ಅದರೊಡನೆ ಆ ಬ್ರಾಹ್ಮಣ ಸ್ತ್ರೀ ಅಗ್ನಿಪ್ರವೇಶಮಾಡಿದಳು.

ಶಾಪ ವಿಮೋಚನೆಯಾದ ಮೇಲೆ ಮತ್ತೆ ರಾಜನಾದ ಕಲ್ಮಷಪಾದನು ರಾಜಧಾನಿಗೆ ಹಿಂತಿರುಗಿದನು. ಸಂತೋಷಗೊಂದ ರಾಣಿ, ಅವನನ್ನು ಕಂಡು ಅವನೊಡನೆ ಸೇರಲು ಬಂದಳು. ರಾಜ ಅವಳನ್ನು ತಡೆದು, ತನಗುಂಟಾದ ಬ್ರಾಹ್ಮಣ ಸ್ತ್ರೀ ಶಾಪವನ್ನು ಕುರಿತು ಹೇಳಿದನು. ರಾಣಿ, ಮದಯಂತಿ, ಗಂಡನ ಮಾತು ಕೇಳಿ, ಬಹು ದುಃಖಿತಳಾಗಿ, ಪ್ರಾಣತ್ಯಾಗ ಮಾಡಲು ಉದ್ಯುಕ್ತಳಾದಳು. ಅದರಿಂದ ದುಃಖಿತನಾದ ರಾಜನನ್ನು ಕಂಡು, ಅವಳು, "ಪ್ರಾಣನಾಥ, ಹನ್ನೆರಡು ವರ್ಷಗಳು ನಿನಗಾಗಿ ಕಷ್ಟದಿಂದ ಕಾದಿದ್ದು, ನಿನ್ನ ಬರುವನ್ನೇ ಎದುರು ನೋಡುತ್ತಿದ್ದೆ. ಈಗ ಹೀಗಾಯಿತು. ಹೋಗಲಿ ಬಿಡು. ಸಂತಾನವಿಲ್ಲದಿದ್ದರೂ ನಷ್ಟವಿಲ್ಲ. ನಾವಿಬ್ಬರೂ ಒಟ್ಟಿಗೇ ಇರಬಹುದು." ಏಂದು ಹೇಳಿದಳು. ಅವಳ ಮಾತನ್ನು ಕೇಳಿ ರಾಜ, ದುಃಖದಿಂದ ಕಣ್ಣೀರು ಸುರಿಸುತ್ತಾ, "ಏನು ಮಾಡಲು ಸಾಧ್ಯ? ವಿಧಿ ಬಲವತ್ತರವಾದದ್ದು." ಎಂದು ನಿಟ್ಟುಸಿರುಬಿಟ್ಟ.

ಮತ್ತೆ ಆ ರಾಜ, ವೃದ್ಧರೂ, ಮತಿವಂತರೂ ಆದ ಪುರೋಹಿತರನ್ನೂ, ಮಂತ್ರಿವರ್ಗದವರನ್ನು ಕರೆಸಿ, ತನಗುಂಟಾದ ಅವಗಢವನ್ನು, ಬ್ರಹ್ಮಹತ್ಯಾಪಾಪವೂ ಸೇರಿದಂತೆ, ಎಲ್ಲವನ್ನೂ ವಿವರಿಸಿ ಹೇಳಿ, ಅದರಿಂದ ಪಾರಾಗುವ ಉಪಾಯವನ್ನು ಹೇಳಿ ಎಂದು ಬಿನ್ನವಿಸಿಕೊಂಡ. ಅವರು ಹೇಳಿದಂತೆ ಪಾಪವಿಮೋಚನಾರ್ಥವಾಗಿ ತೀರ್ಥಯಾತ್ರೆಗಳನ್ನು ಮಾಡುತ್ತಾ, ಹೋದಕಡೆಗಳಲ್ಲೆಲ್ಲ ಸ್ನಾನ, ಪೂಜಾರ್ಚನಾದಿಗಳನ್ನು ನಡೆಸಿ, ಬ್ರಾಹ್ಮಣರಿಗೆ ವಸ್ತ್ರ, ಧನ, ಅನ್ನ ದಾನಗಳನ್ನು ಮಾಡುತ್ತಾ, ದೇವಾದಿಗಳಿಗೆ ತರ್ಪಣಗಳನ್ನು ನೀಡುತ್ತಾ, ಇದ್ದನು. ಆದರೂ, ಶ್ರದ್ಧಾಭಕ್ತಿಗಳಿಂದ ಎಲ್ಲವನ್ನೂ ಮಾಡಿದರೂ, ಬ್ರಹ್ಮಹತ್ಯಾಪಾಪವು ಅವನನ್ನು ಬಿಡದೆ, ಅವನ ಬೆನ್ನಂಟಿ ಬರುತ್ತಲೇ ಇತ್ತು. ಆ ರಾಜ, ಅನೇಕ ಕಷ್ಟಗಳನ್ನು ಅನುಭವಿಸುತ್ತಾ, ಚಿಂತಾಕುಲನಾಗಿ, ವಿರಕ್ತಮನಸ್ಕನಾಗಿ, ದೈವಯೋಗದಿಂದಲೋ ಎಂಬಂತೆ ಮಿಥಿಲಾಪುರಕ್ಕೆ ಬಂದನು. ಅಲ್ಲಿ ಚಿಂತಾಗ್ರಸ್ತನಾಗಿ ಒಂದು ಮರದ ನೆರಳಿನಲ್ಲಿ ಕುಳಿತಿದ್ದಾಗ, ಆ ಮಾರ್ಗದಲ್ಲಿ ಋಷೀಶ್ವರೊಡನೆ ಕೂಡಿ, ಮಹಾರುದ್ರನಂತೆ ಪ್ರಕಾಶಿಸುತ್ತಿದ್ದ, ಗೌತಮ ಮಹರ್ಷಿ ಬಂದನು. ಅವನನ್ನು ಕಂಡ ರಾಜ ಅವನ ಪಾದಗಳಲ್ಲಿ ಬಿದ್ದು, ಭಕ್ತಿಯಿಂದ ನಮಸ್ಕರಿಸಿದನು. ಅದರಿಂದ ಸಂತುಷ್ಟನಾದ ಆ ಮುನಿಯು, ಕರುಣಾರ್ದ್ರಹೃದಯನಾಗಿ, ದುಃಖಿತನಾದ ಆ ರಾಜನನ್ನು ಆದರಿಸಿ, ಅವನಾರೆಂದು ವಿಚಾರಿಸಿದನು. ಅವನು ರಾಜನೆಂದರಿತು, "ಹೇ ರಾಜ, ನಿನ್ನ ರಾಜ್ಯವಾವುದು? ಅದನ್ನು ಯಾರು ವಶಪಡಿಸಿಕೊಂಡರು? ನಿನ್ನ ಈ ವನವಾಸಕ್ಕೆ ಕಾರಣವೇನು? ಚಿಂತಾಗ್ರಸ್ತನಾಗಿ ಹೀಗೇಕೆ ಕಾಡಿನಲ್ಲಿ ಅಲೆಯುತ್ತಿದ್ದೀಯೆ? ನಿನ್ನನ್ನು ಕಾಡುತ್ತಿರುವ ಚಿಂತೆಯೇನು?" ಎಂದು ವಿಚಾರಿಸಿದನು. ಅದಕ್ಕೆ ಆ ರಾಜ, "ಹೇ ಮುನಿವರ್ಯ, ವಿಧಿವಶದಿಂದ ಬ್ರಾಹ್ಮಣ ಶಾಪವು ಬ್ರಹ್ಮಹತ್ಯಾರೂಪದಲ್ಲಿ ನನ್ನ ಬೆನ್ನು ಹತ್ತಿದೆ. ಯಜ್ಞಾದಿಗಳನ್ನು ಮಾಡಿದರೂ, ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡರೂ, ತೀರ್ಥಯಾತ್ರೆಗಳನ್ನು ಮಾಡುತ್ತಾ ದಾನ ಧರ್ಮಗಳಲ್ಲಿ ನಿರತನಾದರೂ, ನನ್ನ ಪಾಪಗಳು ಕಳೆಯುತ್ತಿಲ್ಲ. ಘೋರವಾದ ಬ್ರಹ್ಮಹತ್ಯಾಪಾಪವು ನನ್ನ ಬೆನ್ನಂಟಿ ಬರುತ್ತಲೇ ಇದೆ. ಇಂದು ನಿಮ್ಮ ಚರಣಗಳ ದರ್ಶನದಿಂದ ನನ್ನ ಜನ್ಮ ಸಾಫಲ್ಯವಾಯಿತು. ಇನ್ನು ನನ್ನ ಕಷ್ಟಗಳೆಲ್ಲಾ ತೀರಿದಂತೆಯೇ!" ಎಂದು ಹೇಳುತ್ತಾ ರಾಜ ಮತ್ತೆ ಆ ಗೌತಮ ಮಹರ್ಷಿಯ ಚರಣಗಳಲ್ಲಿ ತಲೆಯಿಟ್ಟನು.

ರಾಜನ ಮಾತುಗಳನ್ನು ಆಲಿಸಿದ ಆ ಮಹಾಮುನಿ, ದಯಾಪೂರಿತನಾಗಿ, ಅವನನ್ನು ಕರುಣೆಯಿಂದ ನೋಡುತ್ತಾ, "ರಾಜ, ಭಯಪಡಬೇಡ. ಮೃತ್ಯುಂಜಯನಾದ ಶಂಕರನು ನಿನಗೆ ಅಭಯವಿತ್ತು ರಕ್ಷಿಸುತ್ತಾನೆ. ನಿನ್ನ ಪಾಪಗಳನ್ನೆಲ್ಲ ತೊಲಗಿಸುವ ಕ್ಷೇತ್ರವೊಂದನ್ನು ಹೇಳುತ್ತೇನೆ. ಗೋಕರ್ಣಕ್ಷೇತ್ರ ಪವಿತ್ರವಾದದ್ದು. ಮಹಾಪಾಪಹರವಾದದ್ದು. ಗೋಕರ್ಣ ಸ್ಮರಣೆಯಿಂದಲೇ ಬ್ರಹ್ಮಹತ್ಯಾದಿ ಪಾಪಗಳು ನಶಿಸಿಹೋಗುತ್ತವೆ. ಅಲ್ಲಿ ಶಿವನು ಮೃತ್ಯುಂಜಯನಾಗಿ ಕೂತಿದ್ದಾನೆ. ಕೈಲಾಸಪರ್ವತದಂತೆ, ಸುಂದರಕಂದರನೂ, ಕರ್ಪೂರಗೌರನೂ ಆದ ಶಿವನ ವಾಸಸ್ಥಾನ ಗೋಕರ್ಣ. ರಾತ್ರಿಯ ಸಮಯದಲ್ಲಿ ಚಂದ್ರನಾಗಲೀ, ವಹ್ನಿಯಾಗಲೀ ಸಂಪೂರ್ಣವಾಗಿ ತಮಸ್ಸನ್ನು ತೊಲಗಿಸುವುದಿಲ್ಲ. ಸೂರ್ಯೋದಯದಿಂದಲೇ ಕತ್ತಲು ಸಂಪೂರ್ಣವಾಗಿ ಕಳೆಯುತ್ತದೆ. ಅದರಂತೆಯೇ, ಇತರ ತೀರ್ಥಕ್ಷೇತ್ರಗಳು ಸಂಪೂರ್ಣವಾಗಿ ಪಾಪವನ್ನು ನಾಶಪಡಿಸಲಾರವು. ಗೋಕರ್ಣ ದರ್ಶನ ಮಾತ್ರದಿಂದಲೇ ಸಕಲ ಪಾತಕಗಳೂ ನಿವಾರಿಸಲ್ಪಡುತ್ತವೆ. ಒಂದುಸಲ ಗೋಕರ್ಣ ಕ್ಷೇತ್ರವನ್ನು ದರ್ಶಿಸಿದರೂ ಸಾಕು, ಸಹಸ್ರ ಬ್ರಹ್ಮಹತ್ಯಾಪಾಪಗಳು ನಶಿಸಿಹೋಗುತ್ತವೆ. ಗೋಕರ್ಣ ಸ್ಮರಣೆಯಿಂದಲೇ ಮನುಷ್ಯರು ಪುಣ್ಯಾತ್ಮರಾಗುತ್ತಾರೆ. ಇಂದ್ರೋಪೇಂದ್ರವಿರಂಚಿ ಪ್ರಭೃತಿಗಳು ಸಿದ್ಧಿಹೊಂದಿದ ಇತರ ದೇವತೆಗಳೂ, ಎಲ್ಲರೂ ಅಲ್ಲಿ ತಪಸ್ಸು ಮಾಡಿಯೇ ತಮ್ಮ ತಮ್ಮ ಮನೋರಥಗಳನ್ನು ಈಡೇರಿಸಿಕೊಂಡರು. ಗೋಕರ್ಣಕ್ಕೆ ಹೋಗಿ ಅಲ್ಲಿ ತಪಸ್ಸು ಮಾಡಿದ ಜ್ಞಾನಿಗಳಿಗೆ ಕ್ಷೇತ್ರ ಪ್ರಭಾವದಿಂದ ಅವರೆಣಿಸಿದ್ದಕ್ಕಿಂತ ಅತಿಹೆಚ್ಚಾದ ಫಲ ಲಭಿಸುತ್ತದೆ. ಅಲ್ಲಿ ನಿವಸಿಸಿದ ಮಾತ್ರಕ್ಕೇ ಬ್ರಹ್ಮವಿಷ್ಣುದೇವೇಂದ್ರಾದಿಗಳು ಸಿದ್ಧಿ ಪಡೆದರು. ಅದಕ್ಕಿಂತ ಇನ್ನು ಹೆಚ್ಚು ಹೇಳಬೇಕಾದದ್ದೇನಿದೆ? ಗೋಕರ್ಣವೇ ಕೈಲಾಸವೆಂದೂ, ಮಹಾಬಲೇಶ್ವರನೇ ಸಾಕ್ಷಾತ್ಪರಮೇಶ್ವರನೆಂದೂ ತಿಳಿ. ಶ್ರೀ ಮಹಾವಿಷ್ಣುವಿನ ಆಜ್ಞೆಯಿಂದ ವಿಘ್ನೇಶ್ವರ ಅಲ್ಲಿ ಮಹಾಬಲೇಶ್ವರನನ್ನು ಸ್ಥಾಪಿಸಿದ. ಗೋಕರ್ಣ ಪುಣ್ಯಕ್ಷೇತ್ರದಲ್ಲಿ ಸಮಸ್ತ ದೇವತೆಗಳೂ, ಬ್ರಹ್ಮ, ವಿಷ್ಣು, ಇಂದ್ರ, ವಿಶ್ವೇದೇವತೆಗಳು, ಮರುದ್ಗಣಗಳು, ಸೂರ್ಯ, ಚಂದ್ರ, ಅಷ್ಟವಸುಗಳು ನೆಲಸಿದ್ದಾರೆ. ಅವರೆಲ್ಲರೂ ಪ್ರತಿದಿನವೂ ಭಕ್ತಿಯುಕ್ತರಾಗಿ, ಮಹಾಬಲೇಶ್ವರನ ಪೂಜೆ ಮಾಡುತ್ತಾರೆ. ಯಮ, ಅಗ್ನಿ, ಚಿತ್ರಗುಪ್ತ, ರುದ್ರ, ಪಿತೃಗಣಗಳು, ದಕ್ಷಿಣದ್ವಾರವನ್ನು ಆಶ್ರಯಿಸಿದ್ದಾರೆ. ವರುಣಮುಖ್ಯರಾದ ದೇವತೆಗಳು ಪಶ್ಚಿಮದ್ವಾರವನ್ನು ಆಶ್ರಯಿಸಿದ್ದಾರೆ. ಕುಬೇರ, ಭದ್ರಕಾಳಿ, ವಾಯು ಸಪ್ತಮಾತೃಕೆಯರು, ಉತ್ತರದ್ವಾರವನ್ನು ಆಶ್ರಯಿಸಿದ್ದಾರೆ. ಇವರೆಲ್ಲರೂ ಪ್ರತಿದಿನವೂ ಭಕ್ತಿಶ್ರದ್ಧೆಗಳಿಂದ ಕೂಡಿ, ಪ್ರೀತ್ಯಾದರಗಳಿಂದ ಆ ಮಹಾಬಲೇಶ್ವರನನ್ನು ಉಪಾಸನೆ ಮಾಡುತ್ತಾರೆ. ವಿಶ್ವಾವಸು, ಚಿತ್ರರಥ, ಚಿತ್ರಸೇನಾದಿ ಗಂಧರ್ವರು ತಮ್ಮ ಗಾನದಿಂದ ಆ ಶಂಕರನನ್ನು ಸೇವಿಸುತ್ತಾರೆ. ಕಶ್ಯಪ, ಅತ್ರಿ, ವಸಿಷ್ಠ, ಕಣ್ವಾದಿ ನಿರ್ಮಲ ಮುನಿಶ್ರೇಷ್ಠರೆಲ್ಲರೂ ಗೋಕರ್ಣ ಕ್ಷೇತ್ರವನ್ನಾಶ್ರಯಿಸಿ ತಪಸ್ಸು ಮಾಡಿ ಪರಮೇಶ್ವರನ ಆರಾಧನೆ ಮಾಡುತ್ತಾರೆ. ಊರ್ವಶಿ, ತಿಲೋತ್ತಮೆ, ರಂಭೆ, ಘೃತಾಚಿ, ಮೇನಕಾದಿ ಅಪ್ಸರಸೆಯರು ಮಹಾಬಲೇಶ್ವರನಿಗೆ, ತಮ್ಮ ನಾಟ್ಯದಿಂದ ಸೇವೆ ಮಾಡುತ್ತಾರೆ.

ಕೃತಯುಗದಲ್ಲಿ ವಿಶ್ವಾಮಿತ್ರ ಪ್ರಮುಖರಾದ ಮಹರ್ಷಿಗಳು, ಜಾಬಾಲಿ, ಜೈಮಿನಿ, ಭಾರದ್ವಾಜಾದಿ ಮುನಿಗಳು, ಸನಕಾದಿಗಳೇ ಮೊದಲಾದ ಬಾಲತಪಸ್ವಿಗಳು, ನಾರದಾದಿ ಮಹರ್ಷಿಗಳು, ಮರೀಚ್ಯಾದಿ ಬ್ರಹ್ಮಮಾನಸಪುತ್ರರು, ಉಪನಿಷದ್ವೇತ್ತರು, ಸಿದ್ಧರು, ಸಾಧ್ಯರು, ಸನ್ಯಾಸಿಗಳು, ಬ್ರಹ್ಮಚಾರಿಗಳು, ಅಜಿನಧಾರಿಗಳಾದ ನಿರ್ಗುಣೋಪಾಸಕರು, ಮುಂತಾದವರೆಲ್ಲರೂ ಗೋಕರ್ಣದಲ್ಲಿ ಶಂಭುವಿನ ಉಪಾಸನೆ ಮಾಡುತ್ತಾರೆ. ತ್ವಗಸ್ಥಿ ಮಾತ್ರವೇ ಉಳಿದ ಶರೀರಗಳಿಂದ ಕೂಡಿದ ತಾಪಸರೂ ಭಕ್ತಿಯಿಂದ ಅಲ್ಲಿ ಚಂದ್ರಮೌಳಿಯನ್ನು ಅರ್ಚನೆ ಮಾಡುತ್ತಾರೆ. ಗಂಧರ್ವರು, ಪಿತೃಗಳು, ಸಿದ್ಧರು, ಅಷ್ಟವಸುಗಳು, ವಿದ್ಯಾಧರರು, ಕಿನ್ನರರು, ಆಗಿಂದಾಗ್ಗೆ ಗೋಕರ್ಣಕ್ಕೆ ಶಿವ ದರ್ಶನಕ್ಕೆ ಬರುತ್ತಲೇ ಇರುತ್ತಾರೆ. ಗುಹ್ಯಕರು, ಕಿಂಪುರುಷರು, ಶೇಷನಾಗತಕ್ಷಕರು, ಭೂತ ಭೇತಾಳ ಪಿಶಾಚಗಳೂ ಕೂಡ ಈಶ್ವರನ ದರ್ಶನಕ್ಕೆಂದು ಗೋಕರ್ಣಕ್ಕೆ ಬರುತ್ತಿರುತ್ತಾರೆ. ಅಲಂಕಾರಯುಕ್ತರಾದ ದೇವ ದೇವಿಯರೂ ಸ್ವರ್ಗದಿಂದ ವಿಮಾನ ಆರೋಹಣರಾಗಿ ಶಿವದರ್ಶನಕಾತುರರಾಗಿ ಹಗಲು ಹೊತ್ತಿನಲ್ಲಿ ಬರುತ್ತಿರುತ್ತಾರೆ. ಕೆಲವರು ಶಿವನ ಸ್ತೋತ್ರ ಮಾಡುತ್ತಾರೆ. ಕೆಲವರು ಅವನನ್ನು ಕುರಿತು ದಾನಾದಿಗಳನ್ನು ಮಾಡುತ್ತಾರೆ. ಮತ್ತೆ ಕೆಲವರು ಅವನ ಪ್ರೀತಿಗಾಗಿ ಅವನನ್ನು ನಾಟ್ಯದಿಂದ ಆರಾಧಿಸುತ್ತಾರೆ. ಇನ್ನೂ ಕೆಲವರು ಶಿವನಿಗೆ ಪೂಜಾರ್ಚನೆಗಳನ್ನು ಮಾಡಿ ನಮಸ್ಕರಿಸುತ್ತಾರೆ.

ಹೇ ರಾಜ, ಪ್ರಾಣಿಗಳ ಮಾನಸಿಕ ವಾಸನೆಗಳೂ ಇಲ್ಲಿ ನೆರವೇರಿಸಲ್ಪಡುತ್ತವೆ. ಈ ಕ್ಷೇತ್ರ ಸದೃಶವಾದ ಕ್ಷೇತ್ರ ಮತ್ತೊಂದಿಲ್ಲ. ಅಗಸ್ತ್ಯಮುಖ್ಯರಾದ ಮಹರ್ಷಿಗಳು, ಕಂದರ್ಪ ಅಗ್ನಿ ಮೊದಲಾದ ದಿವ್ಯರು, ಪ್ರಿಯವ್ರತಾದಿಗಳಾದ ರಾಜರು, ಈ ಕ್ಷೇತ್ರದಲ್ಲಿ ವರಗಳನ್ನು ಪಡೆದರು. ಶಿಂಶುಮಾರ, ಭದ್ರಕಾಳಿಯರು ದಿನವೂ ಮೂರುಸಲ ಇಲ್ಲಿ ಪ್ರಾಣಲಿಂಗವನ್ನು ಅರ್ಚಿಸುತ್ತಾರೆ. ರಾವಣ ಕುಂಭಕರ್ಣರು, ರಾಕ್ಷಸಪ್ರಮುಖರನೇಕರು, ವಿಭೀಷಣನೂ ಸಹ ಇಲ್ಲಿ ಧೂರ್ಜಟಿಯನ್ನು ಪೂಜಿಸಿ, ವರಗಳನ್ನು ಪಡೆದರು. ಹೀಗೆ ಸಮಸ್ತ ದೇವಲೋಕ, ಸಿದ್ಧದಾನವ ಮಂಡಲಗಳು ಪರಮೇಶ್ವರನನ್ನು ಆರಾಧಿಸಿ ಕೃತಕೃತ್ಯರಾದರು. ಕೆಲವರು ತಮ್ಮ ತಮ್ಮ ಹೆಸರಿನಲ್ಲಿ ಇಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿ, ಚತುರ್ವಿಧ ಪಲಪುರುಷಾರ್ಥಗಳನ್ನು ಪಡೆದರು. ಬ್ರಹ್ಮ, ವಿಷ್ಣು, ಕುಮಾರಸ್ವಾಮಿ, ವಿನಾಯಕ ಮೊದಲಾದವರು ಯಮ, ಕ್ಷೇತ್ರಪತಿ ದುರ್ಗಾದೇವಿ, ಶಕ್ತಿ ಕೂಡಾ ಇಲ್ಲಿ ತಮ್ಮ ತಮ್ಮ ಹೆಸರಿನಲ್ಲಿ ಲಿಂಗಗಳನ್ನು ಸ್ಥಾಪಿಸಿದರು.

ಗೋಕರ್ಣವು ಒಂದು ಬಹು ಉತ್ತಮವಾದ ಕ್ಷೇತ್ರ. ಇಲ್ಲಿ ಹೆಜ್ಜೆ ಹೆಜ್ಜೆಗೂ ಅಸಂಖ್ಯಾತವಾದ ಲಿಂಗಗಳಿವೆ. ಕೃತಯುಗದಲ್ಲಿ ಬಿಳಿಯ ಲಿಂಗ, ತ್ರೇತಾಯುಗದಲ್ಲಿ ಲೋಹಿತ ಲಿಂಗ, ದ್ವಾಪರದಲ್ಲಿ ಪೀತ ಲಿಂಗ, ಕಲಿಯುಗದಲ್ಲಿ ಕೃಷ್ಣವರ್ಣದ ಲಿಂಗ ಇಲ್ಲಿರುತ್ತದೆ. ಸಪ್ತಪಾತಾಲಗಳವರೆಗೂ ವ್ಯಾಪಿಸಿರುವ ಮಹೋನ್ನತ ಲಿಂಗವು ಕಲಿಯುಗದಲ್ಲಿ ಮೃದುವಾಗಿ ಸೂಕ್ಷ್ಮವಾಗಿರಬಹುದು.

ಪಶ್ಚಿಮ ಸಮುದ್ರ ತೀರದಲ್ಲಿ ಗೋಕರ್ಣ ಕ್ಷೇತ್ರವಿದೆ. ಅದು ಬ್ರಹ್ಮಹತ್ಯವೇ ಮುಂತಾದ ಪಾಪಗಳನ್ನು ಹೋಗಲಾಡಿಸುವಂತಹುದು. ಪರಸ್ತ್ರೀಗಮನದಂತಹ ದುರಾಚಾರಗಳಿಂದುಂಟಾದ ಮಹಾಪಾಪಗಳೂ ಕೂಡ ಆ ಕ್ಷೇತ್ರ ದರ್ಶನಮಾತ್ರದಿಂದಲೇ ನಾಶವಾಗುವುವು. ಗೋಕರ್ಣಲಿಂಗ ದರ್ಶನಮಾತ್ರದಿಂದಲೇ ಸರ್ವಕಾಮಗಳೂ ಸಿದ್ಧಿಯಾಗಿ, ಮಾನವ ಮೋಕ್ಷವನ್ನು ಪಡೆಯುತ್ತಾನೆ. ಹೇ ರಾಜ, ಅಲ್ಲಿಯೇ ನೆಲೆಸಿ, ಪುಣ್ಯ ದಿನಗಳಲ್ಲಿ ಭಕ್ತಿಯಿಂದ ಆ ಲಿಂಗಕ್ಕೆ ಅರ್ಚನಪೂಜಾದಿಗಳನ್ನು ಮಾಡಿದವನು ರುದ್ರಲೋಕವನ್ನು ಸೇರುವುದರಲ್ಲಿ ಸಂದೇಹವೇ ಇಲ್ಲ! ದೈವಯೋಗದಿಂದ ಗೋಕರ್ಣವನ್ನು ಸೇರಿ ಅಲ್ಲಿ ಮಹೇಶನನ್ನು ಶ್ರದ್ಧಾ ಭಕ್ತಿಗಳಿಂದ ಅರ್ಚಿಸುವ ನರನು ಬ್ರಹ್ಮಲೋಕವನ್ನು ಪಡೆಯುತ್ತಾನೆ. ಭಾನು, ಸೋಮ, ಬುಧವಾರಗಳಂದು, ಹುಣ್ಣಿಮೆ ಮೊದಲಾದ ಪರ್ವದಿನಗಳಂದು, ಈ ಕ್ಷೇತ್ರದಲ್ಲಿ ಸಮುದ್ರಸ್ನಾನಮಾಡಿ ದಾನಾದಿಗಳನ್ನು ಕೊಟ್ಟು, ಶಿವಪೂಜಾವ್ರತಹೋಮಜಪಾದಿಗಳನ್ನೂ, ತರ್ಪಣಾದಿಗಳನ್ನೂ ಸ್ವಲ್ಪವೇ ಮಾಡಿದರೂ ಅದರಿಂದ ಅನಂತಫಲ ಲಭಿಸುತ್ತದೆ. ಗ್ರಹಪೀಡೆಗಳ ಸಮಯದಲ್ಲಿ, ಸೂರ್ಯಸಂಕ್ರಮಣದಲ್ಲಿ, ಶಿವರಾತ್ರಿಯಂದು ಆ ಕ್ಷೇತ್ರದಲ್ಲಿ ಪೂಜಾದಿಗಳನ್ನು ಮಾಡುವವರಿಗೆ ಉತ್ತಮೋತ್ತಮವಾದ ಪುಣ್ಯ ಲಭ್ಯವಾಗುತ್ತದೆ. ಆ ಕ್ಷೇತ್ರ ಮಹಿಮೆಯನ್ನು ಯಾರು ತಾನೇ ವರ್ಣಿಸಬಲ್ಲರು? ಭಕ್ತವತ್ಸಲನಾದ ಶಿವನು ಬರಿಯ ಪುಷ್ಪಾರ್ಚನೆಯಿಂದಲೇ ಸಂತುಷ್ಟನಾಗುತ್ತಾನೆ. ಅನೇಕರು ಅಲ್ಲಿ ಅನೇಕ ರೀತಿಯ ಪೂಜೆಗಳನ್ನು ಮಾಡಿ ವರಗಳನ್ನು ಪಡೆದಿದ್ದಾರೆ.

ಮಾಘ ಬಹುಳ ಶಿವರಾತ್ರಿಯ ದಿನ ಅಲ್ಲಿ ಬಿಲ್ವಪತ್ರೆಯನ್ನು ಅರ್ಪಿಸಿದರೆ ತ್ರೈಲೋಕ್ಯದುರ್ಲಭವಾದ ಫಲ ಲಭಿಸುತ್ತದೆ. ಅಂತಹ ಸಾಟಿಯಿಲ್ಲದ ಕ್ಷೇತ್ರದರ್ಶನ ಮಾಡದವರು ದೌರ್ಭಾಗ್ಯರೇ ಸರಿ! ಆ ಕ್ಷೇತ್ರದ ಬಗ್ಗೆ ಕೇಳದ ಮೂಢರು ಕಿವುಡರೇ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಗೋಕರ್ಣಕ್ಷೇತ್ರ ಮಹಿಮೆ ಚತುರ್ವಿಧ ಪುರುಷಾರ್ಥಪ್ರದವು. ಗೋಕರ್ಣದಲ್ಲಿನ ಮುಖ್ಯ ತೀರ್ಥಗಳಲ್ಲಿ ಸ್ನಾನಮಾಡಿ, ಮುಕ್ತಿಯನ್ನು ನೀಡುವ ಮಹಾಬಲೇಶ್ವರ ಲಿಂಗವನ್ನು ಭಕ್ತಿಯಿಂದ ಅರ್ಚಿಸಿದ ನರನ ಪಾಪಕ್ಷಾಳನವಾಗುತ್ತದೆ." ಎಂದು ಗೋಕರ್ಣಮಾಹಾತ್ಮ್ಯೆಯನ್ನು ಗೌತಮ ಮುನಿ ವಿವರವಾಗಿ ತಿಳಿಸಿದನು. ಅದನ್ನು ಕೇಳಿ ರಾಜ ಮಿತ್ರಸಹ ಬಹು ಸಂತೋಷಗೊಂಡವನಾಗಿ, "ಹೇ ಮಹರ್ಷಿ, ಗೋಕರ್ಣ ಮಾಹಾತ್ಮ್ಯೆಯನ್ನು ವಿಸ್ತಾರವಾಗಿ ತಿಳಿಸಿದ್ದೀರಿ. ಅಲ್ಲಿ ಮಹಾಪಾಪದಿಂದ ಮುಕ್ತಿಗೊಂಡವರೊಬ್ಬರ ನಿದರ್ಶನವೊಂದನ್ನು ಹೇಳುವ ಕೃಪೆ ಮಾಡಿ." ಎಂದು ಕೋರಿದನು.

ಅದಕ್ಕೆ ಗೌತಮಮುನಿಯು, "ಮಹೀಪತಿ, ಸಾವಿರಾರು ಜನ ಮಹಾಪಾಪಿಗಳು ಆ ಕ್ಷೇತ್ರದಲ್ಲಿ ಮುಕ್ತರಾದದ್ದನ್ನು ನಾನು ಬಲ್ಲೆ. ಅದರಲ್ಲೊಂದನ್ನು ಹೇಳುತ್ತೇನೆ ಕೇಳು. ಒಂದುಸಲ ಮಾಘ ಕೃಷ್ಣ ಪಕ್ಷ ಶಿವರಾತ್ರಿಯ ದಿನ ನಾನು ಗೋಕರ್ಣ ಕ್ಷೇತ್ರದಲ್ಲಿದ್ದೆ. ಆಗ ಅಲ್ಲಿ ಅನೇಕ ಯಾತ್ರಿಕರು ಸೇರಿದ್ದರು. ಮಧ್ಯಾಹ್ನ ಸಮಯದಲ್ಲಿ ಒಂದು ಗಿಡದ ನೆರಳಿನಲ್ಲಿ ಕುಳಿತಿದ್ದೆ. ಅಲ್ಲಿಗೆ ರೋಗಪೀಡಿತಳಾದ ಚಂಡಾಲಿಯೊಬ್ಬಳು ಬರುತ್ತಿರುವ ಹಾಗೆ ಕಾಣಿಸಿತು. ಅವಳು ವೃದ್ಧೆ. ಬಾಡಿದ ಮುಖ. ಹಸಿದಿದ್ದಳು. ಮೈಯೆಲ್ಲಾ ವ್ರಣಗಳಾಗಿ, ಅದರಿಂದ ಕೀವು ರಕ್ತ ಸೋರುತ್ತಿತ್ತು. ದುರ್ವಾಸನೆ ಬರುತ್ತಿದ್ದ ಅವುಗಳ ಮೇಲೆ ನೊಣಗಳು ತುಂಬಿ ಕೂತಿದ್ದವು. ಗಂಡಮಾಲೆ ರೋಗವೂ ಆಕೆಯ ದೇಹದಲ್ಲಿ ವ್ಯಾಪಿಸಿತ್ತು. ಹಲ್ಲುಗಳು ಬಿದ್ದುಹೋಗಿದ್ದವು. ಕಫ ಪೀಡಿತಳಾದ ಅವಳು ದಿಗಂಬರೆಯಾಗಿ ಮರಣದೆಶೆಯಲ್ಲಿದ್ದಳು. ಸೂರ್ಯಕಿರಣಗಳು ತಾಕಿದರೂ ಸಾಯುವವಳೇನೋ ಎಂಬಂತಹ ಸ್ಥಿತಿಯಲ್ಲಿದ್ದಳು. ಸರ್ವಾಯವಗಳೂ ಬಾಧಾಪೀಡಿತವಾಗಿರುವಂತೆ ಕಾಣುತ್ತಿದ್ದ ಆ ವಿಧವೆಗೆ ತಲೆಯಲ್ಲಿ ಕೂದಲೂ ಉದುರಿಹೋಗಿತ್ತು. ಹೆಜ್ಜೆಹೆಜ್ಜೆಗೂ ಒದ್ದಾಡುತ್ತಾ ಮರದ ನೆರಳಿಗೆ ಬಂದಳು. ನೋಡಲು ಅವಳು ಇನ್ನೇನು ಸಾಯುತ್ತಾಳೆ ಎಂಬ ಸ್ಥಿತಿಯಲ್ಲಿದ್ದಳು. ಮೆಲ್ಲಮೆಲ್ಲಗೆ ನಡೆಯುತ್ತಾಅ ಮರದ ನೆರಳಿಗೆ ಬಂದು ಅಲ್ಲಿ ಕುಸಿದು ಬಿದ್ದಳು. ಹಾಗೆ ಬಿದ್ದ ಅವಳು ನಾನು ನೋಡುತ್ತಿರುವಂತೆಯೇ ಪ್ರಾಣ ಬಿಟ್ಟಳು. ಅಷ್ಟರಲ್ಲಿಯೇ ಆಕಸ್ಮಿಕವೋ ಎಂಬಂತೆ ವಿಮಾನವೊಂದು ಸೂರ್ಯನಂತೆ ಬೆಳಗುತ್ತಾ ಬಂದು ನನ್ನ ಸಮೀಪದಲ್ಲೇ ಇಳಿಯಿತು. ಕೈಲಾಸದಿಂದ ಬಂದ ಆ ವಿಮಾನದಿಂದ ಶೂಲಖಟ್ವಾಂಗ ಧಾರಿಗಳಾದ ನಾಲ್ವರು ದೂತರು ಇಳಿದರು. ಅವರೆಲ್ಲರೂ ಶೈವರು. ಕಿರೀಟಧಾರಿಗಳು. ದಿವ್ಯರೂಪರು. ಆ ದೂತರನ್ನು ನೀವು ಏತಕ್ಕೆ ಬಂದಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು ಈ ಚಂಡಾಲಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳಿದರು. ಸೂರ್ಯಪ್ರಕಾಶದಂತೆ ಬೆಳಗುತ್ತಿದ್ದ ಆ ದಿವ್ಯ ವಿಮಾನ ಆ ಸತ್ತುಬಿದ್ದಿದ್ದ ಚಂಡಾಲಿಯನ್ನು ಕೈಲಾಸಕ್ಕೆ ಕರೆದುಕೊಂಡುಹೋಗಲು ಬಂದಿರುವುದನ್ನು ಕಂಡು ನಾನು ಆಶ್ಚರ್ಯಚಕಿತನಾಗಿಹೋದೆ. ಮಹದಾಶ್ಚರ್ಯಗೊಂಡ ನಾನು, ’ಇಂತಹ ಚಂಡಾಲಿ ದಿವ್ಯವಿಮಾನಕ್ಕೆ ಅರ್ಹಳೇ? ನಾಯಿಯನ್ನು ದಿವ್ಯಸಿಂಹಾಸನದಮೇಲೆ ಕೂಡಿಸಬಹುದೇ? ಇವಳು ಹುಟ್ಟಿದಾಗಿನಿಂದಲೇ ಮಹಾಪಾಪಗಳನ್ನು ಸೇರಿಸಿಕೊಂಡು ಬಂದಿದ್ದಾಳೆ. ಅಂತಹ ಈ ಪಾಪರೂಪಿಣಿ ಕೈಲಾಸಕ್ಕೆ ಹೇಗೆ ಸೇರಬಲ್ಲಳು? ಪಶುಮಾಂಸವನ್ನು ಆಹಾರವಾಗಿ ತಿಂದು ಇವಳು ವೃದ್ಧೆಯಾದಳು. ಜೀವಹಿಂಸಾ ಪರಾಯಣೆಯಾಗಿ, ಕುಷ್ಠುರೋಗ ಪೀಡಿತಳಾಗಿ, ಪಾಪಿನಿಯಾದ ಈ ಚಂಡಾಲಿ ಕೈಲಾಸಕ್ಕೆ ಹೇಗೆ ಅರ್ಹಳಾದಳು? ಇವಳಿಗೆ ಶಿವಜ್ಞಾನವಿಲ್ಲ. ತಪಸ್ಸು ಎಂದರೇನು ಎಂದು ತಿಳಿಯದು. ದಯೆ ಸತ್ಯಗಳು ಎನ್ನುವುವು ಇವಳಲ್ಲಿ ಇಲ್ಲವೇ ಇಲ್ಲ. ಶಿವಪೂಜೆಯನ್ನು ಎಂದೂ ಮಾಡಲಿಲ್ಲ. ಪಂಚಾಕ್ಷರಿ ಜಪ ಮಾಡಿಲ್ಲ. ದಾನ ಮಾಡಲಿಲ್ಲ. ತೀರ್ಥಗಳ ವಿಷಯ ಏನೂ ತಿಳಿಯದು. ಪರ್ವದಿನಗಳಲ್ಲಿ ಸ್ನಾನಮಾಡಲಿಲ್ಲ. ಯಾವ ವ್ರತವನ್ನೂ ಮಾಡಲಿಲ್ಲ. ಇವಳ ಪಾಪಗಳಿಂದಾಗಿ ಇವಳ ಶರೀರವೆಲ್ಲ ವ್ರಣಗಳಾಗಿ ದುರ್ಗಂಧದಿಂದ ಕೂಡಿದೆ. ವ್ರಣಗಳು ಸೋರುತ್ತಿವೆ. ದುಶ್ಚರಿತೆಯಾದ ಈ ಚಂಡಾಲಿಯ ಮುಖದಲ್ಲಾಗಿರುವ ವ್ರಣಗಳಿಂದ ಇವಳ ಪಾಪಫಲವಾಗಿ ಹುಳುಗಳು ಬೀಳುತ್ತಿವೆ. ಇವಳಿಗೆ ಗಳತ್ಕುಷ್ಠ ಎನ್ನುವ ಮಹಾ ರೋಗ ಪ್ರಾಪ್ತಿಯಾಗಿದೆ. ಚರಾಚರಗಳಲ್ಲೇ ನಿಂದ್ಯವಾದ ಇಂತಹ ಪಾಪಿಯನ್ನು ಶಿವಾಲಯಕ್ಕೆ ಸೇರಿಸಲು ಬಂದಿದ್ದೀರೇಕೆ? ಅದಕ್ಕೆ ಕಾರಣವನ್ನು ತಿಳಿಸಿ.’ ಎಂದು ಆ ಶಿವದೂತರನ್ನು ಪ್ರಶ್ನಿಸಿದೆ.

ಅದಕ್ಕೆ ಆ ಶಿವದೂತರು ಹೇಳಿದರು. "ಈ ಚಂಡಾಲಿಯ ಪೂರ್ವಜನ್ಮ ವೃತ್ತಾಂತವನ್ನು ಹೇಳುತ್ತೇವೆ ಕೇಳಿ. ಇವಳು ಪೂರ್ವದಲ್ಲಿ ಬ್ರಾಹ್ಮಣ ವಂಶದಲ್ಲಿ ಜನಿಸಿದಳು. ಈ ಚಂದ್ರಮುಖಿಯ ಹೆಸರು ಸೌದಾಮಿನಿ. ಆ ಬಾಲಸುಂದರಿಯನ್ನು ಅವಳ ತಂದೆ ಅವಳಿಗೆ ಅನುರೂಪನಾದ ವರನಿಗಾಗಿ ಹುಡುಕಿ ಎಲ್ಲಿಯೂ ತಗುನಾದ ವರನು ದೊರಕದೇ ಇದ್ದುದರಿಂದ, ಚಿಂತಾಪರನಾಗಿ, ವಿವಾಹಕಾಲ ಮೀರಿಹೋಗುವುದು ಎಂಬ ಕಾರಣಕ್ಕಾಗಿ, ಕೊನೆಗೆ ಇವಳನ್ನು ಅತಿಸಾಮಾನ್ಯನಾದ ಒಬ್ಬ ಬ್ರಾಹ್ಮಣನನ್ನು ಕರೆತಂದು ಅವನಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟ. ವಿವಾಹವಾದ ನಂತರ ಇವಳು ತನ್ನ ಗಂಡನ ಮನೆಗೆ ಹೋದಳು. ಅನತಿಕಾಲದಲ್ಲೇ ಇವಳ ಗಂಡ ಸತ್ತುಹೋದನು. ದುರದೃಷ್ಟದಿಂದ ಆ ಸುಂದರಿಯಾದ ಬಾಲಕಿ ಬಾಲ್ಯದಲ್ಲೇ ವಿಧವೆಯಾಗಿ ತೌರುಮನೆಗೆ ಹಿಂತಿರುಗಿದಳು. ಪತಿವಿರಹದಿಂದ ಖಿನ್ನಳಾಗಿ, ಕಾಮ ಪೀಡಿತಳಾಗಿದ್ದ ಆ ಸುಂದರ ಯುವತಿಗೆ, ಯುವಕರನ್ನು ಕಂಡಾಗಲೆಲ್ಲಾ ಮನಸ್ಸು ಚಂಚಲವಾಗುತ್ತಿತ್ತು. ಅದನ್ನು ತಡೆಯಲಾರದೆ ಕೊನೆಗೆ ಇವಳು ಕಾಮಾರ್ತೆಯಾಗಿ ರಹಸ್ಯವಾಗಿ ಯುವಕನೊಬ್ಬನನ್ನು ಸೇರಿ ಜಾರಿಣಿಯಾದಳು. ಇಂತಹ ರಹಸ್ಯಗಳು ಬಹಳಕಾಲ ಗುಪ್ತವಾಗಿರಲು ಸಾಧ್ಯವಿಲ್ಲವಲ್ಲವೇ? ಕಾಲಕಳೆದಂತೆ ಇವಳ ಪಾಪ ಪ್ರಕಟಗೊಂಡಿತು. ವಯಸ್ಸಿನಲ್ಲಿದ್ದ ಸುಂದರ ವಿಧವೆ. ವಿಷಯಾನ್ವಿತವಾದ ಮನಸ್ಸಿನಿಂದ ಕೂಡಿ ಚಂಚಲೆಯಾಗಿ ಜಾರಿಣಿಯಾದಳು. ಹಾಗೆ ದುಷ್ಟಾಚಾರಿಯೂ, ವ್ಯಭಿಚಾರಿಣಿಯೂ ಆದ ಇವಳನ್ನು ತಂದೆ ತಾಯಿಗಳು ಮನೆಯಿಂದ ಹೊರಕ್ಕೆ ಹಾಕಿದರು. ಬಂಧುಭಾಂದವರಿಂದಲೂ ಬಹಿಷ್ಕರಿಸಲ್ಪಟ್ಟಳು. ದೂಷಿತಳಾದ ಇವಳನ್ನು ಮನೆಯಿಂದ ಹೊರಕ್ಕೆ ಹಾಕಿ ತಂದೆತಾಯಿಗಳು ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಂಡು, ಇವಳ ಸಂಪರ್ಕವನ್ನು ಕಳೆದುಕೊಂಡು, ಇವಳಿಂದುಂಟಾದ ದೋಷದಿಂದ ಮುಕ್ತರಾದರು.

ಬಂಧುಭಾಂದವರಿಂದ ಪರಿತ್ಯಕ್ತಳಾದ ಸೌದಾಮಿನಿ ಸ್ವತಂತ್ರಳಾಗಿ, ಆ ಊರಿನಲ್ಲೆ ಮನೆಮಾಡಿಕೊಂಡು ತನಗಿಷ್ಟಬಂದವರೊಡನೆ ಸುಖವನ್ನನುಭವಿಸುತ್ತಾ, ಜೀವಿಸತೊಡಗಿದಳು. ತನ್ನ ಕುಲಕ್ಕೇ ಶತ್ರುವಾದ ಇವಳು, ಒಬ್ಬ ಬಹುಸುಂದರನಾದ ವೈಶ್ಯನನ್ನು ಮೋಹಿಸಿ ಅವನೊಡನೆ ಗೃಹಿಣಿಯಂತೆ ವಾಸಮಾಡಲಾರಂಭಿಸಿದಳು. ಸ್ತ್ರೀಯರು ಕಾಮದಿಂದ, ಬ್ರಾಹ್ಮಣರು ಹೀನರ ಸೇವೆಯಿಂದ, ರಾಜರು ಬ್ರಾಹ್ಮಣರನ್ನು ದಂಡಿಸುವುದರಿಂದ, ಯತಿಗಳು ಭೋಗಸಂಗ್ರಹದಿಂದ ನಾಶವಾಗುತ್ತಾರೆಯಲ್ಲವೆ? ವೈಶ್ಯ ಯುವಕನೊಡನೆ ಕೂಡಿಯಾಡುತ್ತಿದ್ದ ಇವಳಿಗೆ ಮಕ್ಕಳೂ ಆದರು. ಮಾಂಸಾಹಾರಿಯಾಗಿ, ಮದ್ಯಪಾನಾಸಕ್ತಳಾಗಿ, ವೈಶ್ಯನ ಹೆಂಡತಿಯಾಗಿ ತನ್ನ ಆಯುಷ್ಯವನ್ನು ಕಳೆಯಬೇಕೆಂದುಕೊಂಡಿದ್ದ ಇವಳು, ಒಂದುದಿನ, ಹಸುವಿನ ಕರುವೊಂದನ್ನು ಮೇಕೆಯೆಂದುಕೊಂಡು ಸಾಯಿಸಿ ಅದರ ತಲೆಯನ್ನು ಮುಚ್ಚಿಟ್ಟು, ಮಿಕ್ಕ ಮಾಂಸವನ್ನು ತಿಂದಳು. ಮದ್ಯಪಾನ ಮತ್ತಳಾಗಿ ಅಂತಹ ಅಕಾರ್ಯವನ್ನು ಮಾಡಿ, ಸುಖವಾಗಿ ನಿದ್ರಿಸಿದಳು. ಮರುದಿನ ಬೆಳಗ್ಗೆದ್ದು, ತಾನು ರಾತ್ರಿ ಮಾಡಿದ್ದ ಅಕಾರ್ಯವನ್ನು ಅರಿತು, ಭ್ರಾಂತಳಾಗಿ, ಮನೆಯೊಳಕ್ಕೆ ಬಂದು ಮುಚ್ಚಿಟ್ಟಿದ್ದ ಕರುವಿನ ತಲೆಯನ್ನು ನೋಡಿ ಭಯಪಟ್ಟಳು. ’ಅಯ್ಯೋ! ಅಜ್ಞಾನದಿಂದ, ದುರಾತ್ಮಳಾದ ನಾನು ಎಂತಹ ಪಾಪ ಮಾಡಿದೆ. ಇದು ನನ್ನ ಗಂಡನಿಗೆ ತಿಳಿದರೆ ಅವನು ನನ್ನ ಮೇಲೆ ಕೋಪಗೊಳ್ಳುತ್ತಾನೆ.’ ಎಂಬ ಹೆದರಿಕೆಯಿಂದ, ಆ ಕರುವಿನ ಅಸ್ಥಿಮಾಂಸಗಳನ್ನೂ, ತಲೆಯನ್ನೂ ಹಳ್ಳದೊಳಕ್ಕೆ ಬಿಸುಟು, ಮನೆಗೆ ಬಂದು, ಗಂಡನಿಗೆ ನಿಜವನ್ನು ಮುಚ್ಚಿಟ್ಟು, ಕರುವನ್ನು ಹುಲಿ ತಿಂದುಹಾಕಿತು ಎಂದು ಸುಳ್ಳು ಹೇಳಿದಳು.

ಇಂತಹ ದುರ್ಬುದ್ಧಿಯುಳ್ಳ ಈ ಸೌದಾಮಿನಿ, ಇನ್ನೂ ಅನೇಕ ಪಾಪಗಳನ್ನು ಮಾಡಿ ಮರಣಿಸಿದಳು. ಸತ್ತಮೇಲೆ, ನರಕಕ್ಕೆ ಹೋಗಿ, ಅನೇಕ ದುಸ್ತರವಾದ ಯಾತನೆಗಳನ್ನನುಭವಿಸಿ, ಈ ಜನ್ಮದಲ್ಲಿ ಚಂಡಾಲಿಯಾಗಿ ಜನ್ಮಿಸಿದಳು. ನೋಡಿ ಪರಿಶೀಲಿಸದೆ ಗೋಹತ್ಯೆ ಮಾಡಿದ ಪಾಪದಿಂದ ಇವಳು ನೇತ್ರಹೀನಳಾದಳು. ಉಪಪತಿಯೊಡನೆ ಇದ್ದುದರಿಂದ ಗಳತ್ಕುಷ್ಠುರೋಗ ಪೀಡಿತಳಾದಳು. ಬಾಲ್ಯದಲ್ಲೇ ತಂದೆತಾಯಿಗಳನ್ನು ಕಳೆದುಕೊಂಡು ಅನಾಥಳಾಗಿದ್ದ ಇವಳು, ಬೆಳೆದು ದೊಡ್ಡವಳಾಗುತ್ತಾ ಬಂದಂತೆಲ್ಲ ಇವಳ ವ್ರಣಗಳೂ ದೊಡ್ಡದಾದವು. ದೀನಳಾಗಿ, ಕುಷ್ಠುರೋಗ ಪೀಡಿತಳಾಗಿ, ದುರ್ಗಂಧಪೂರಿತಳಾಗಿದ್ದ ಇವಳನ್ನು ಇವಳ ಸಹೋದರರೂ ಕೈಬಿಟ್ಟರು. ದಿನವೂ ಯಾಚನೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ, ಅದು ಸಾಕಾಗದೆ ಹಸಿವು ಬಾಯಾರಿಕೆಗಳಿಂದ ಒದ್ದಾಡುತ್ತಿದ್ದ, ರೋಗಪೀಡಿತಳಾದ ಇವಳು, ಬೆಳೆದು ವೃದ್ಧೆಯಾದಳು. ಹೀಗೆ ತನ್ನ ಪೂರ್ವದುಷ್ಕರ್ಮ ಫಲಗಳನ್ನು ಅನುಭವಿಸುತ್ತಾ, ಇವಳು ದರಿದ್ರಳಾಗಿ, ಉಡಲು ಸರಿಯಾದ ಬಟ್ಟೆಯೂ ಇಲ್ಲದೆ, ದಾರಿಯಲ್ಲಿ ಕಂಡಕಂಡವರನ್ನೆಲ್ಲಾ ಬೇಡುತ್ತಾ ತಿರುಗುತಿದ್ದಳು. ಆದರೂ ಆಕೆಯ ಹಸಿವು ತೀರಲಿಲ್ಲ. ವ್ಯಾಧಿಗ್ರಸ್ತವಾದ ಶರೀರವು, ಸೊರಗಿ, ಹಸಿವು ತಾಳಲಾರದೆ, ರೋಗವು ಅತಿಯಾಗಿ ಭಾದಿಸುತ್ತಿರಲು, ತನ್ನ ಕರ್ಮಗಳನ್ನು ನಿಂದಿಸಿಕೊಳ್ಳುತ್ತಾ ಕಾಲಕಳೆಯುತ್ತಿದ್ದಳು.

ಹೀಗಿರುತ್ತಿರಲು ಒಂದುಸಲ ಮಾಘಮಾಸ ಬಂತು. ಅವಳಿದ್ದ ಊರಿನ ಜನರೆಲ್ಲರು, ಆಬಾಲಸ್ತ್ರೀವೃದ್ಧರಾದಿಯಾಗಿ ಗೋಕರ್ಣಕ್ಕೆ ಹೊರಟಿದ್ದರು. ಶಿವರಾತ್ರಿಗೆ, ಶಿವದರ್ಶನಕ್ಕೆಂದು ನಾನಾ ಕಡೆಗಳಿಂದ ಅನೇಕ ಜನ ಸಮೂಹಗಳು ಸೇರಿ ಹೊರಟಿದ್ದರು. ಇವಳೂ ಅವರ ಜೊತೆಯಲ್ಲಿ ಹೊರಟಳು. ಆ ಜನರಲ್ಲಿ, ಕೆಲವರು ಆನೆಗಳ ಮೇಲೆ ಕುಳಿತು, ಕೆಲವರು ಕುದುರೆಗಳ ಮೇಲೆ, ಕೆಲವರು ರಥಗಳಲ್ಲಿ, ಕೆಲವರು ಪಾದಚಾರಿಗಳಾಗಿ, ಅಲಂಕಾರ ಭೂಷಿತರಾಗಿ, ಹೀಗೆ ಅನೇಕ ರೀತಿಗಳಲ್ಲಿ, ಸಂತೋಷ ಸಂಭ್ರಮಗಳಿಂದ ಎಲ್ಲರೂ ಮಹಾಬಲೇಶ್ವರನ ದರ್ಶನಕ್ಕಾಗಿ ಹೊರಟಿದ್ದರು. ಎಲ್ಲ ವರ್ಗದ ಜನರೂ, ತಮತಮಗೆ ತೋಚಿದಂತೆ ಶಿವಸ್ಮರಣೆ ಮಾಡುತ್ತಾ ಹೊರಟಿದ್ದರು. ಅವರೊಡನೆ ಹೊರಟ ಚಂಡಾಲಿಯೂ, ಶಿವನಾಮೋಚ್ಚರಣೆಯೆಂಬ ಪುಣ್ಯದಿಂದ ಗೋಕರ್ಣ ಕ್ಷೇತ್ರವನ್ನು ಸೇರುವಂತಾಯಿತು. ಗೋಕರ್ಣವನ್ನು ಸೇರಿ ಅಲ್ಲಿ ಭಿಕ್ಷೆ ಮಾಡುತ್ತಿದ್ದಳು. "ಪೂರ್ವಜನ್ಮದಲ್ಲಿ ಮಾಡಿದ ಪಾಪಗಳಿಂದ ಪೀಡಿಸಲ್ಪಡುತ್ತಿರುವ ಈ ಪಾಪಿಗೆ ಸ್ವಲ್ಪ ಅನ್ನವನ್ನು ನೀಡಿ. ರೋಗಪೀಡಿತಳಾಗಿ, ತಿಂಡಿ ಊಟಗಳಿಲ್ಲದೆ, ಬಟ್ಟೆಯೂ ಇಲ್ಲದೆ ಇರುವ ನನ್ನನ್ನು ಛಳಿ ಬಾಧಿಸುತ್ತಿದೆ. ಈ ಕುರುಡಿಯ ಹಸಿವನ್ನು ಹೋಗಲಾಡಿಸಿ. ಸಜ್ಜನರು ಧರ್ಮ ಮಾಡಿ. ಬಹಳ ದಿನಗಳಿಂದ ಸಹಿಸುತ್ತಿರುವ ಕ್ಷುಧ್ಭಾಧೆಯಿಂದ ನನ್ನನ್ನು ಮುಕ್ತಗೊಳಿಸಿ. ನಾನು ನನ್ನ ಹಿಂದಿನ ಜನ್ಮಗಳಲ್ಲಿ ಪುಣ್ಯ ಮಾಡಿಲ್ಲದಿರುವುದರಿಂದಲೇ ಇಷ್ಟು ಕಷ್ಟಪಡುತ್ತಿದ್ದೇನೆ. ಅಯ್ಯಾ ಸಜ್ಜನರೇ ದಯವಿಟ್ಟು ಧರ್ಮ ಮಾಡಿ." ಎಂದು ಅನೇಕ ರೀತಿಗಳಲ್ಲಿ, ದೀನಳಾಗಿ, ಬೇಡಿಕೊಳ್ಳುತ್ತಾ ಆ ಜನರ ಹಿಂದೆ ಓಡಾಡುತ್ತಿದ್ದಳು.

ಅಂದು ಶಿವರಾತ್ರಿಯಾದದ್ದರಿಂದ ಯಾರೂ ಅವಳಿಗೆ ಅನ್ನ ನೀಡಲಿಲ್ಲ. ಕೆಲವರು ನಗುತ್ತಾ, "ಇಂದು ಶಿವರಾತ್ರಿ. ಉಪವಾಸವಾದದ್ದರಿಂದ ಅನ್ನವಿಲ್ಲ." ಎಂದು ತಮ್ಮ ಕೈಯಲ್ಲಿದ್ದ ಬಿಲ್ವದಳಗಳನ್ನು ಅವಳ ಕೈಯಲ್ಲಿ ಹಾಕಿದರು. ಅವಳು ಅದನ್ನು ಮೂಸಿನೋಡಿ ಅದು ತಿನ್ನುವುದಲ್ಲ ಎಂಬುದನ್ನು ತಿಳಿದು ಕೋಪದಿಂದ ಬಿಸುಟಳು. ಹಾಗೆ ಅವಳು ಬಿಸಾಡಿದ ಬಿಲ್ವದಳ ಶಿವಲಿಂಗದ ತಲೆಯಮೇಲೆ ಬಿತ್ತು. ದೈವಯೋಗದಿಂದ ಅದು ಅವಳಿಗೆ ಶಿವಪೂಜೆಯ ಪುಣ್ಯವನ್ನು ತಂದಿತು. ಯಾರೂ ಅನ್ನ ಕೊಡಲಿಲ್ಲವಾಗಿ ಅವಳಿಗೆ ಉಪವಾಸವಾಯಿತು. ಅದರಿಂದ ಅವಳಿಗೆ ಉಪವಾಸ ಮಾಡಿದ ಪುಣ್ಯ ಲಭಿಸಿತು. ಹಸಿವಿನಿಂದಾಗಿ ಅವಳಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಅದರಿಂದ ಅವಳು ಜಾಗರಣೆ ಮಾಡಿದಂತಾಗಿ ಅವಳಿಗೆ ಜಾಗರಣೆಮಾಡಿದ ಪುಣ್ಯ ಲಭಿಸಿತು. ಆ ರೀತಿಯಲ್ಲಿ, ಅವಳಿಗೆ ಅರಿವಿಲ್ಲದೆಯೇ, ಅವಳ ವ್ರತ ಸಾಂಗವಾಗಿ ಮುಗಿದಂತಾಯಿತು. ಅವಳ ಪ್ರಯತ್ನವಿಲ್ಲದೆಯೇ ಅವಳಿಗೆ ವ್ರತ ಪುಣ್ಯವು ಲಭಿಸಿ, ಶಿವನು ಸಂತುಷ್ಟನಾಗಿ, ಅವಳಿಗೆ ಭವಾರ್ಣವ ತಾರಕನಾದನು. ಈ ವಿಧದಲ್ಲಿ, ರೋಗೋಪವಾಸಗಳಿಂದ ಶ್ರಾಂತಳಾಗುವ ಮಾರ್ಗವನ್ನರಿಯದ, ಹೆಜ್ಜೆ ಇಡಲೂ ಶಕ್ತಿಯಿಲ್ಲದ, ಈ ಚಂಡಾಲಿಗೆ ಮಹಾವ್ರತಫಲ ದೊರೆತು, ಪೂರ್ವ ಕರ್ಮಗಳಿಂದ ಮುಕ್ತಿ ದೊರೆತು, ಈ ಗಿಡದ ನೆರಳಿಗೆ ಬಂದು ಪ್ರಾಣ ಬಿಟ್ಟಳು. ಅದರಿಂದ ಶಿವನ ಆದೇಶದಂತೆ ನಾವು ಇಲ್ಲಿಗೆ ಬಂದೆವು. ಶಿವರಾತ್ರಿಯ ಬಿಲ್ವಾರ್ಚನೆ, ಉಪವಾಸ ಜಾಗರಣೆಗಳಿಂದ ದೊರೆತ ಪುಣ್ಯದಿಂದ ಇವಳ ಪಾಪಗಳೆಲ್ಲಾ ನಾಶವಾದವು. ನೂರು ಜನ್ಮಗಳಲ್ಲಿ ಸಂಪಾದಿಸಿದ್ದ ಪಾಪಗಳೆಲ್ಲಾ ಕ್ಷಯವಾಗಲು, ಇವಳು ಶಿವನಿಗೆ ಪ್ರೀತಿಪಾತ್ರಳಾದಳು." ಎಂದು ಹೇಳಿ ಆ ಶಿವದೂತರು ಸೌದಾಮಿನಿಯ ಮೇಲೆ ಅಮೃತವನ್ನು ಚುಮುಕಿಸಿದರು. ತಕ್ಷಣವೇ ಅವಳು ದಿವ್ಯದೇಹಧಾರಿಯಾಗಿ, ಅವರ ಹಿಂದೆ ವಿಮಾನದಲ್ಲಿ ಹೊರಟಳು. " ಎಂದು ಗೌತಮ ಮುನಿಯು ಕಥೆಯನ್ನು ಹೇಳಿ, " ಹೇ ರಾಜ, ಇದನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಗೋಕರ್ಣ ಮಾಹಾತ್ಮ್ಯೆ ಅಷ್ಟು ದೊಡ್ಡದು. ಲೋಕಪಾವನವಾದದ್ದು. ಜ್ಞಾನ ಹೀನಳಾದರೂ ಚಂಡಾಲಿಗೆ ಮುಕ್ತಿ ದೊರಕಿತು. ಅದರಿಂದ, ರಾಜ, ನೀನು ಅಲ್ಲಿಗೆ ಹೋಗು. ಅಲ್ಲಿ ನೀನು ಶುದ್ಧನಾಗಿ, ಇಹಪರಗಳೆರಡರಲ್ಲೂ ಒಳ್ಳೆಯದನ್ನು ಪಡೆಯಬಲ್ಲೆ." ಎಂದನು.

ಹೀಗೆ ಗೌತಮ ಮುನಿಯು ಹೇಳಲಾಗಿ ಆ ರಾಜನು ತಡಮಾಡದೆ ಗೋಕರ್ಣ ಕ್ಷೇತ್ರವನ್ನು ಸೇರಿ, ಅಲ್ಲಿ ಮಹಾಬಲೇಶ್ವರನ ಪೂಜಾರ್ಚನೆಗಳನ್ನು ಮಾಡಿ, ಪಾಪ ವಿಮುಕ್ತನಾದನು. ಆದ್ದರಿಂದ ನಾಮಧಾರಕ, ಗೋಕರ್ಣ ಕ್ಷೇತ್ರವು, ಪವಿತ್ರವಾದದ್ದರಿಂದಲೇ, ಶ್ರೀಪಾದ ಗುರುವು ಅಲ್ಲಿ ನಿಂತರು. ಆ ಕ್ಷೇತ್ರದಲ್ಲಿ, ತಿಳಿಯದೆ ನಿವಾಸ ಮಾಡಿದ ದುರ್ಮಾರ್ಗಿಗಳಿಗೂ ಸತ್ಫಲವು ದೊರೆಯುವುದು. ಇನ್ನು ವಿದ್ವಾಂಸರಿಗೆ/ಜ್ಞಾನಿಗಳಿಗೆ ದೊರೆಯುವ ಫಲವನ್ನು ಕುರಿತು ಹೇಳಬೇಕಾದ್ದೇನಿದೆ? 

ಇಲ್ಲಿಗೆ ಏಳನೆಯ ಅಧ್ಯಾಯ ಮುಗಿಯಿತು.



No comments:

Post a Comment