Wednesday, February 20, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತಮೂರನೆಯ ಅಧ್ಯಾಯ||

ನಾಮಧಾರಕ ಸಿದ್ಧಮುನಿಗೆ ನಮಸ್ಕರಿಸಿ, "ಸ್ವಾಮಿ, ಗುರು ಮಹಿಮೆಯನ್ನು ತಿಳಿಸುವಂತಹ ಇನ್ನೊಂದು ಗುರು ಕಥೆಯನ್ನು ಹೇಳಿ" ಎಂದು ಪ್ರಾರ್ಥಿಸಿಕೊಂಡನು. ಅದಕ್ಕೆ ಸಿದ್ಧಮುನಿ, "ಗುರು ಮಹಿಮೆಯನ್ನು ತಿಳಿಸುವ ಮತ್ತೊಂದು ಕಥೆಯನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಗೊಡ್ಡೆಮ್ಮೆಯಿಂದ ಹಾಲು ಕರೆಸಿ ಶ್ರೀಗುರುವು ತಮ್ಮ ಮಹಿಮೆಯನ್ನು ಪ್ರಕಟಗೊಳಿಸಿದ್ದರಲ್ಲವೇ? ಅದರ ಮಾರನೆಯ ದಿನ, ಆ ಎಮ್ಮೆಯನ್ನು ಮಣ್ಣು ಹೊರಲು ಕರೆದು ಕೊಂಡು ಹೋಗಲು ಜನ ಬಂದರು. ಆದರೆ ಅ ಬ್ರಾಹ್ಮಣ ಎಮ್ಮೆಯನ್ನು ಕಳುಹಿಸಲು ನಿರಾಕರಿಸಿ, "ಅದು ನಮಗೆ ಈಗ ಹಾಲು ಕೊಡುತ್ತಿದೆ. ಆದ್ದರಿಂದ ಅದನ್ನು ನಾವು ಕಳುಹಿಸುವುದಿಲ್ಲ" ಎಂದು ಹೇಳಿ, ಅದು ಆಂದು ಕೊಟ್ಟಿದ್ದ ಎರಡು ಪಾತ್ರೆ ಹಾಲನ್ನು ತೋರಿಸಿದನು. ಬಂದವರೆಲ್ಲರೂ ವಿಸ್ಮಿತರಾಗಿ, "ನೆನ್ನೆಯವರೆಗೂ ಈ ಎಮ್ಮೆ ಹಲ್ಲಿಲ್ಲದ ಗೋಡ್ಡಾಗಿತ್ತು. ಗರ್ಭ ಧರಿಸಿರಲಿಲ್ಲ. ಕರು ಹಾಕಲಿಲ್ಲ. ಇಂದು ಹೇಗೆ ಹಾಲು ಕೊಟ್ಟಿತು?" ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಾ ಹೊರಟು ಹೋದರು. ಗೊಡ್ಡೆಮ್ಮೆ ಹಾಲು ಕೊಟ್ಟ ವಿಷಯ ಕರ್ಣಾಕರ್ಣಿಕೆಯಾಗಿ, ಒಬ್ಬರಿಂದೊಬ್ಬರ ಕಿವಿಗೆ ಬಿದ್ದು, ಕೊನೆಗೆ ಆ ಊರಿನ ರಾಜನವರೆಗೂ ಹೋಯಿತು. ರಾಜ, ಆಶ್ಚರ್ಯಪಟ್ಟು, ನಿಜವನ್ನು ತಿಳಿಯಲು, ಆ ಬ್ರಾಹ್ಮಣನ ಮನೆಗೆ ಬಂದು, ಅವನಿಗೆ ನಮಸ್ಕರಿಸಿ, ನಿಜವಾದ ವಿಷಯ ಏನೆಂದು ವಿವರಿಸಲು ಅವನನ್ನು ಕೇಳಿಕೊಂಡನು. ಅದಕ್ಕೆ ಆ ಬ್ರಾಹ್ಮಣ, "ಗಂಗಾತಟದಲ್ಲಿ ಸನ್ಯಾಸಿಯೊಬ್ಬರಿದ್ದಾರೆ. ಅವರು ಈಶ್ವರನ ಅವತಾರವೇ! ಇದು ಅವರ ಮಹಿಮೆ. ನೆನ್ನೆಯ ದಿನ ಅವರು ನಮ್ಮ ಮನೆಗೆ ಬಂದು, ನನ್ನ ಹೆಂಡತಿಯನ್ನು ಭಿಕ್ಷೆ ಕೇಳಿ, ಆಕೆ ಸ್ವಲ್ಪ ಸಮಯ ಕಾಯಲು ವಿನಂತಿಸಿಕೊಂಡರೆ, ತಮಗೆ ಕಾಲಾವಕಾಶವಿಲ್ಲವೆಂದು ಹೇಳಿ, ಎದುರಿಗೆ ಕಾಣುತ್ತಿದ್ದ ಎಮ್ಮೆಯಿಂದ ಹಾಲು ಕರೆದು ಕೊಡಲು ಹೇಳಿದರು. ಅದು ಗೊಡ್ಡೆಮ್ಮೆ ಎಂದು ಹೇಳಿದರೂ, ಅವರು ಅದನ್ನು ಕೇಳದೆ, ಹಾಲು ಕರೆದು ತೋರಿಸುವಂತೆ ಆದೇಶ ಕೊಟ್ಟರು. ಆ ಆದೇಶವೇ ಅವರು ಕೊಟ್ಟ ವರದಂತೆ ಕೆಲಸ ಮಾಡಿ, ಆ ಗೊಡ್ಡೆಮ್ಮೆ, ಎರಡು ಪಾತ್ರೆ ತುಂಬಾ ಹಾಲು ಕೊಟ್ಟಿತು" ಎಂದು ಹೇಳಿದನು. ಅದನ್ನು ಕೇಳಿದ ರಾಜ, ತಡಮಾಡದೆ, ತನ್ನ ಪರಿವಾರದವರೊಡನೆ. ತ್ವರೆಯಾಗಿ ಶ್ರೀಗುರುವಿನ ಬಳಿಗೆ ಹೋಗಿ, ಅವರಿಗೆ ದಂಡಪ್ರಣಾಮ ಮಾಡಿ, "ಜಗದ್ಗುರು, ಜಯವಾಗಲಿ. ಜಯವಾಗಲಿ. ಮಾನವ ರೂಪ ಧರಿಸಿದ ತ್ರಿಮೂರ್ತಿಗಳೇ ನೀವು. ಮಾಯಾ ಮೋಹಿತನಾದ ನನ್ನನ್ನು ಉದ್ಧರಿಸಿ. ನಿಮ್ಮ ಚರಣಗಳನ್ನು ಆಶ್ರಯಿಸಿದ್ದೇನೆ. ಮಾನವರಂತೆ ಕಾಣುತ್ತಿರುವ ನಿಮ್ಮ ಮಹಿಮೆಯನ್ನು ನನ್ನಂತಹ ಮಂದಬುದ್ಧಿ ಹೇಗೆ ತಾನೇ ವರ್ಣಿಸಬಲ್ಲ? ನೀವೇ ನನ್ನ ರಕ್ಷಕರಾದ ಸದಾಶಿವನು. ಜಗದ್ರಕ್ಷಕರು ನೀವೇ!" ಎಂದು ಭಕ್ತಿಯಿಂದ ಅವರನ್ನು ಸ್ತುತಿಸಿದನು.

ಅವನ ಸ್ತುತಿಯಿಂದ ಸಂತುಷ್ಟರಾದ ಶ್ರೀಗುರುವು, "ಹೇ ರಾಜ, ನಾವು ತಾಪಸಿಗಳು. ಕಾಡಿನಲ್ಲಿ ವಾಸ ಮಾಡುವವರು. ಪರಿವಾರ ಸಮೇತನಾಗಿ ನಮ್ಮನ್ನು ಕಾಣಲು ನೀನು ಬಂದ ಕಾರಣವೇನು?" ಎಂದು ಕೇಳಿದರು. ಅದಕ್ಕೆ ರಾಜನು ಕೈಜೋಡಿಸಿ, "ಸ್ವಾಮಿ, ನಿಮಗೆ ಈ ಕಾಡಿನಲ್ಲಿ ವಾಸವೇತಕ್ಕೆ? ನೀವು ಭಕ್ತರನ್ನುದ್ಧರಿಸಲು ಬಂದಿರುವ ನಾರಾಯಣ ಸ್ವರೂಪಿಗಳು. ಭಕ್ತರ ಇಷ್ಟಾರ್ಥಗಳನ್ನು ಪೂರ್ಣಗೊಳಿಸಿ, ಅವರಿಗೆ ಆನಂದವನ್ನುಂಟು ಮಾಡುತ್ತೀರಿ. ಭಕ್ತವತ್ಸಲ, ನಿಮ್ಮ ಕೀರ್ತಿ ಎಣೆಯಿಲ್ಲದ್ದು. ನನ್ನ ಮಾತನ್ನು ದಯವಿಟ್ಟು ಆಲಿಸಿ, ಕೃಪೆಮಾಡಿ ಗಂಧರ್ವಪುರಕ್ಕೆ ದಯಮಾಡಿಸಿ. ಅಲ್ಲಿ ನಿಮಗೊಂದು ಮಠವನ್ನು ನಿರ್ಮಿಸಿ ಕೊಡುತ್ತೇನೆ. ನೀವು ಅಲ್ಲಿದ್ದುಕೊಂಡು, ನಿಮ್ಮ ಅನುಷ್ಠಾನಾದಿಗಳನ್ನು ನಿರ್ವಹಿಸುತ್ತಾ, ನಮ್ಮನ್ನು ಕಾಪಾಡಿ. ಅಲ್ಲಿದ್ದುಕೊಂಡು ನಮ್ಮನ್ನುದ್ಧರಿಸಿ" ಎಂದು ಶ್ರದ್ಧಾಭಕ್ತಿಗಳಿಂದ ಕೂಡಿ, ಅವರ ಪಾದಗಳಿಗೆ ನಮಸ್ಕರಿಸಿ, ಬೇಡಿಕೊಂಡನು. ಭಕ್ತ ಜನೋದ್ಧಾರಕಾಗಿ ಅವನ ಕೋರಿಕೆಯನ್ನು ಈಡೇರಿಸಬೇಕು ಎಂದು ಶ್ರೀಗುರುವು ಯೋಚಿಸಿ, "ಹೇ ರಾಜ, ನಿನ್ನ ಭಕ್ತಿಗೆ ಮೆಚ್ಚಿದ್ದೇವೆ. ನಿನ್ನ ಕೋರಿಕೆಯಂತೆ ಆಗಲಿ" ಎಂದು ಅವನ ಮಾತಿಗೆ ತಮ್ಮ ಒಪ್ಪಿಗೆ ಕೊಟ್ಟರು. ಗುರು ವಚನದಿಂದ ಸಂತೋಷಗೊಂಡ ರಾಜ, ಶ್ರೀಗುರುವನ್ನು ಪಲ್ಲಕ್ಕಿಯೊಂದರಲ್ಲಿ ಕೂಡಿಸಿ, ವಾದ್ಯಗಳೊಡನೆ, ಸುಘೋಷಗಳನ್ನು ಮಾಡುತ್ತಾ, ಮಂಗಳ ಗೀತಗಳನ್ನು ಹಾಡುತ್ತಾ, ಅವರನ್ನು ಮೆರವಣಿಗೆಯಲ್ಲಿ ಗಂಧರ್ವಪುರಕ್ಕೆ ಕರೆದು ಕೊಂಡು ಹೊರಟನು.

ಆ ದಾರಿಯಲ್ಲಿ, ಊರಿನ ಪಶ್ಚಿಮಕ್ಕೆ, ದೊಡ್ಡದಾದ ಅಶ್ವತ್ಥ ವೃಕ್ಷವೊಂದಿತ್ತು. ಅದರ ಹತ್ತಿರದಲ್ಲಿ ಇದ್ದ ಮನೆಗಳೆಲ್ಲವೂ ಪಾಳು ಬಿದ್ದಿದ್ದವು. ಆ ಅಶ್ವತ್ಥ ವೃಕ್ಷದಲ್ಲಿ, ಭಯಂಕರವಾದ, ನರಮಾಂಸ ಭಕ್ಷಕನಾದ, ಬ್ರಹ್ಮರಾಕ್ಷಸನೊಬ್ಬನಿದ್ದನು. ಅವನ ಭಯದಿಂದಾಗಿ ಅಲ್ಲಿ ಜನರು ಯಾರೂ ವಾಸ ಮಾಡುತ್ತಿರಲಿಲ್ಲ. ಮೆರವಣಿಗೆ ಆ ವೃಕ್ಷದ ಸಮೀಪಕ್ಕೆ ಬರುತ್ತಲೇ, ಆ ಬ್ರಹ್ಮರಾಕ್ಷಸ ಮರದಿಂದ ಕೆಳಗಿಳಿದು ಬಂದು, ಶ್ರೀಗುರುವಿನ ಪಾದಗಳಲ್ಲಿ ಬಿದ್ದು, ಕೈಜೋಡಿಸಿ, ಭಕ್ತಿಯಿಂದ, "ಹೇ ಸ್ವಾಮಿ, ದಯಮಾಡಿ ನನ್ನನ್ನುದ್ಧರಿಸು. ನಿಮ್ಮ ದರ್ಶನದಿಂದಲೇ ನನ್ನ ಪಾಪಗಳೆಲ್ಲಾ ನಾಶವಾಗಿ ಹೋದವು. ನನ್ನನ್ನು ಈ ಬ್ರಹ್ಮರಾಕ್ಷಸತ್ವದಿಂದ ಬಿಡುಗಡೆ ಮಾಡು" ಎಂದು ಬೇಡಿಕೊಂಡನು. ಶ್ರೀಗುರುವು ಅವನ ತಲೆಯಮೇಲೆ ಕೈಯಿಟ್ಟು ಆಶೀರ್ವದಿಸಿದರು. ತಕ್ಷಣವೇ ಆ ಬ್ರಹ್ಮರಾಕ್ಷಸ ಮಾನವ ರೂಪದಿಂದ ಕಾಣಿಸಿಕೊಂಡು, ಮತ್ತೆ ಶ್ರೀಗುರುವಿನ ಚರಣಗಳಲ್ಲಿ ಬಿದ್ದನು. ಶ್ರೀಗುರುವು ಅವನಿಗೆ, "ಅಯ್ಯಾ, ತಕ್ಷಣವೇ ನೀನು ಸಂಗಮಕ್ಕೆ ಹೋಗಿ ಸ್ನಾನ ಮಾಡು. ಸ್ನಾನ ಮಾತ್ರದಿಂದಲೇ, ನಿನ್ನ ಸರ್ವ ಪಾಪಗಳೂ ನಾಶವಾಗಿ, ನೀನು ಪುನರ್ಜನ್ಮ ರಹಿತನಾಗುತ್ತೀಯೆ" ಎಂದು ಹೇಳಿದರು. ಅವನು ಗುರುವಿನ ಅಪ್ಪಣೆಯಂತೆ, ತಡಮಾಡದೆ ಸಂಗಮಕ್ಕೆ ಹೋಗಿ ಅಲ್ಲಿ ಸ್ನಾನ ಮಾಡಿ ಮುಕ್ತನಾದನು. ಅಲ್ಲಿ ಸೇರಿದ್ದ ಜನರೆಲ್ಲರೂ, "ಈ ಸನ್ಯಾಸಿ ಮನುಷ್ಯ ಮಾತ್ರನಲ್ಲ. ತ್ರಿಮೂರ್ತ್ಯವತಾರನೇ!" ಎಂದು ಮುಕ್ತ ಕಂಠದಿಂದ ಕೊಂಡಾಡಿದರು. ನಂತರ ಶ್ರೀಗುರುವು ರಾಜನಿಗೆ, "ನಾವು ಇಲ್ಲಿಯೇ ನೆಲೆಯಾಗುತ್ತೇವೆ" ಎಂದು ಹೇಳಲು, ರಾಜ ತಕ್ಷಣವೇ ಅಲ್ಲಿದ್ದ ಮನೆಯೊಂದನ್ನು ಮಠದಂತೆ ಪರಿವರ್ತಿಸಿ ಕೊಟ್ಟನು. ಅಲ್ಲಿದ್ದುಕೊಂಡು ಶ್ರೀಗುರುವು ಪ್ರತಿದಿನವೂ ಸಂಗಮಕ್ಕೆ ಹೋಗಿ ಅಲ್ಲಿ ಅನುಷ್ಠಾನಾದಿಗಳನ್ನು ಮಾಡಿಕೊಳ್ಳುತ್ತಾ, ಮಧ್ಯಾಹ್ನದ ವೇಳೆಗೆ ಮಠಕ್ಕೆ ಹಿಂತಿರುಗುತ್ತಿದ್ದರು. ಹಾಗೆ ಅವರು ಸಂಗಮಕ್ಕೆ ಹೋಗಿ ಬರುವಾಗ ರಾಜ ಸಪರಿವಾರ, ಸೈನ್ಯ ಸಮೇತನಾಗಿ ಅವರೊಡನೆ ಹೋಗಿ ಬರುತ್ತಿದ್ದನು. ಭಕ್ತವತ್ಸಲನಾದ ಶ್ರೀಗುರುವು ಅಲ್ಲಿದ್ದುಕೊಂಡೇ ತಮ್ಮ ಭಕ್ತರ ಇಷ್ಟಾರ್ಥಗಳನ್ನು ಪೂರಯಿಸುತ್ತಿದ್ದರು. ನಿತ್ಯ ಸಂತರ್ಪಣೆ ನಡೆಯುತ್ತಿದ್ದ ಆ ಮಠಕ್ಕೆ, ಶ್ರೀಗುರುವಿನ ಕೀರ್ತಿಯನ್ನು ಕೇಳಿದ ಬಹಳ ಜನ ಅವರ ದರ್ಶನಾಕಾಂಕ್ಷಿಗಳಾಗಿ ಬರುತ್ತಿದ್ದರು.

ಅವರಿದ್ದ ಮಠಕ್ಕೆ ಸ್ವಲ್ಪ ದೂರದಲ್ಲಿ ಕುಮಸಿ ಎಂಬ ಹಳ್ಳಿಯೊಂದಿತ್ತು. ಅಲ್ಲಿ ವೇದಶಾಸ್ತ್ರಗಳನ್ನು ಬಲ್ಲ ತ್ರಿವಿಕ್ರಮ ಭಾರತಿ ಎಂಬ ತಾಪಸಿಯೊಬ್ಬನಿದ್ದನು. ಅವನು ಪ್ರತಿದಿನವೂ ನೃಸಿಂಹಸ್ವಾಮಿಯ ಮಾನಸ ಪೂಜೆ ಮಾಡುತ್ತಿದ್ದನು. ಅವನು ಶ್ರೀಗುರುವಿನ ಬಗ್ಗೆ ಕೇಳಿ, "ಆ ಸನ್ಯಾಸಿ ಡಾಂಭಿಕರಬೇಕು. ಇಲ್ಲದಿದ್ದರೆ ಅವನಿಗೆ ಈ ಡಂಭಾಚಾರಗಳೆಲ್ಲಾ ಏಕೆ ಬೇಕು?" ಎಂದು ಶ್ರೀಗುರುವನ್ನು ನಿಂದಿಸುತ್ತಿದ್ದನು. ಸರ್ವಜ್ಞರಾದ ಶ್ರೀಗುರುವು ಅವನು ಮಾಡುತ್ತಿದ್ದ ನಿಂದೆಗಳನ್ನು ತಿಳಿದರು. ಆಗ ಅಲ್ಲಿ ಒಂದು ಅಪೂರ್ವವಾದ ಘಟನೆ ನಡೆಯಿತು. ನಾಮಧಾರಕ ನಿಶ್ಚಲವಾದ ಮನಸ್ಸಿನಿಂದ ನಾನು ಹೇಳುವುದನ್ನು ಕೇಳು" ಎಂದು ಸಿದ್ಧಮುನಿ ಹೇಳಿದರು. 

ಇಲ್ಲಿಗೆ ಇಪ್ಪತ್ತಮೂರನೆಯ ಅಧ್ಯಾಯ ಮುಗಿಯಿತು.



No comments:

Post a Comment