Saturday, March 9, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತೇಳನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

ಸಿದ್ಧಮುನಿಯ ಚರಣಾಶ್ರಯವನ್ನು ಪಡೆದ ನಾಮಧಾರಕ, "ಸಿದ್ಧಮುನಿ, ಜಯವಾಗಲಿ. ಜಯವಾಗಲಿ. ಯೋಗೀಶ್ವರರಾದ ನೀವು ನಿಮ್ಮ ಪಾದ ದರ್ಶನದಿಂದಲೇ ನನ್ನಲ್ಲಿ ಜ್ಞಾನ ದೀಪವನ್ನು ಬೆಳಗಿಸಿದಿರಿ. ಆ ವಿಪ್ರರಿಬ್ಬರ ಕಥೆ ಹೇಗೆ ಮುಂದುವರೆಯಿತು ಎಂಬುದನ್ನು ಹೇಳುವ ಕೃಪೆಮಾಡಿ" ಎಂದು ಕೇಳಿಕೊಂಡನು.

ಅದಕ್ಕೆ ಸಿದ್ಧಮುನಿ. "ಗುರು ಮಹಿಮೆಯೆನ್ನುವುದು ಸಾಟಿಯಿಲ್ಲದ್ದು. ಆ ನಂತರದಲ್ಲಿ ಏನು ನಡೆಯಿತು ಎಂಬುದನ್ನು ಹೇಳುತ್ತೇನೆ ಕೇಳು. ಶ್ರೀಗುರುವು ಆ ‘ಪಂಡಿತ’ರಿಬ್ಬರಿಗೂ ಅನೇಕ ರೀತಿಗಳಲ್ಲಿ ತಿಳಿಯ ಹೇಳಿದರೂ, ಅವರಿಬ್ಬರೂ ಅವರ ಮಾತಿಗೆ ಬೆಲೆಕೊಡದೆ, ‘ನಮ್ಮೊಡನೆ ವಾದಮಾಡಿ. ಇಲ್ಲವೇ ಜಯಪತ್ರ ಬರೆದುಕೊಡಿ’ ಎಂದು ಶ್ರೀಗುರುವನ್ನು ನಿರ್ಬಂಧಿಸಿದರು. ಅದರಿಂದ ಸ್ವಲ್ಪ ಕ್ರುದ್ಧರಾದ ಶ್ರೀಗುರುವು, "ನಿಮ್ಮಿಷ್ಟದಂತೆಯೇ ಆಗಲಿ. ದೈವೇಚ್ಛೆ ಏನಿದೆಯೋ ಅದೇ ನಡೆಯುತ್ತದೆ" ಎಂದು ಹೇಳಿದರು. ಮೂಷಕವು ಸರ್ಪೋದರವನ್ನು ಇಚ್ಛಿಸಿದಂತೆ ಆ ದ್ವಿಜರಿಬ್ಬರೂ ಶ್ರೀಗುರುವೇನೆಂದು ಅರಿಯದೆ ತಮ್ಮ ಅಂತ್ಯವನ್ನು ತಾವೇ ಬರ ಮಾಡಿಕೊಂಡರು.

ಆ ಸಮಯದಲ್ಲಿ ಹತ್ತಿರದಲ್ಲಿ ಹೋಗುತ್ತಿದ್ದ ಒಬ್ಬನನ್ನು ಕಂಡ ಶ್ರೀಗುರುವು ತಮ್ಮ ಶಿಷ್ಯನನ್ನು ಕರೆದು, ತಕ್ಷಣವೇ ಹೋಗಿ ಅವನನ್ನು ಕರೆ ತರಲು ಅಪ್ಪಣೆ ಮಾಡಿದರು. ಶಿಷ್ಯನು ಅವನನ್ನು ಶ್ರೀಗುರುವಿನ ಬಳಿಗೆ ಕರೆ ತರುತ್ತಲೇ ಅವರು ಅವನನ್ನು, "ಅಯ್ಯಾ, ನೀನು ಯಾರು? ನಿನ್ನ ಜಾತಿ ಯಾವುದು? ಎಲ್ಲಿಗೆ ಹೋಗುತ್ತಿದ್ದೀಯೆ?" ಎಂದು ಕೇಳಿದರು. ಅವನು ಕೈಜೋಡಿಸಿ, "ಅಯ್ಯಾ, ನಾನೊಬ್ಬ ಅಂತ್ಯಜ. ನನ್ನ ಹೆಸರು ಮಾತಂಗ. ಈ ಗ್ರಾಮದ ಆಚೆ ವಾಸ ಮಾಡುತ್ತಿದ್ದೇನೆ. ದಯಾಳುವಾದ ನೀವು ಇಂದು ನನ್ನನ್ನು ಕರೆದು ನನ್ನ ಬಗ್ಗೆ ಕೇಳಿದಿರಿ. ನಾನು ಕೃತಾರ್ಥನಾದೆ" ಎಂದು ಹೇಳಿ ದಂಡ ಪ್ರಣಾಮ ಮಾಡಿದನು. ಶ್ರೀಗುರುವು ಅವನ ಮೇಲೆ ತಮ್ಮ ಕೃಪಾ ದೃಷ್ಟಿಯನ್ನು ಹರಿಸಿ, ಶಿಷ್ಯನೊಬ್ಬನನ್ನು ಕರೆದು, ಅವನಿಗೆ ತಮ್ಮ ದಂಡವನ್ನು ಕೊಟ್ಟು, ಅದರಿಂದ ನೆಲದ ಮೇಲೆ ಏಳು ಗೆರೆಗಳನ್ನು ಬರೆಯುವಂತೆ ಹೇಳಿದರು. ಶಿಷ್ಯನು ಹಾಗೆ ಮಾಡಿದ ಮೇಲೆ. ಶ್ರೀಗುರುವು ಆ ಅಂತ್ಯಜನನ್ನು ಒಂದೊಂದಾಗಿ ಆ ಗೆರೆಗಳನ್ನು ದಾಟಿ ಮುಂದೆ ಬರುವಂತೆ ಅಪ್ಪಣೆ ಮಾಡಿದರು. ಅದರಂತೆ ಅವನು ಮೊದಲನೆಯ ಗೆರೆಯನ್ನು ದಾಟುತ್ತಲೇ, ಅವನನ್ನು , "ನೀನು ಯಾರು?" ಎಂದು ಕೇಳಿದರು. ಅದಕ್ಕೆ ಅವನು, "ನಾನು ಬೈಂದನೆನ್ನುವವನು" ಎಂದು ಉತ್ತರ ಕೊಟ್ಟನು. ಎರಡನೆಯ ಗೆರೆಯನ್ನು ದಾಟಿ, "ನಾನು ಕಿರಾತ ವಂಶಕ್ಕೆ ಸೇರಿದವನು" ಎಂದನು. ಮೂರನೆಯ ಗೆರೆಯನ್ನು ದಾಟಿ, "ನಾನು ಗಂಗಾತೀರವಾಸಿಯಾದ ಗಂಗಾ ಪುತ್ರನೆಂಬುವವನು" ಎಂದ. ನಾಲ್ಕನೆಯ ಗೆರೆಯನ್ನು ದಾಟಿ, " ನಾನೊಬ್ಬ ವೃತ್ತಿ ನಿರತನಾದ ಶೂದ್ರ" ಎಂದನು. ಐದನೆಯ ಗೆರೆಯನ್ನು ದಾಟಿ, "ನಾನು ಸೋಮ ದತ್ತನೆಂಬುವ ವೈಶ್ಯ" ಎಂದನು. ಆರನೆಯ ಗೆರೆ ದಾಟಿ, "ನಾನೊಬ್ಬ ಕ್ಷತ್ರಿಯ" ಎಂದನು. ಏಳನೆಯ ಗೆರೆ ದಾಟಿ, "ನಾನೊಬ್ಬ ವೇದಶಾಸ್ತ್ರ ಪಾರಂಗತನಾದ ಬ್ರಾಹ್ಮಣ" ಎಂದನು. ಅವನು ಹಾಗೆ ಹೇಳುತ್ತಲೇ, ಶ್ರೀಗುರುವು, "ನೀನು ವೇದಶಾಸ್ತ್ರ ಪಾರಂಗತನೇ ಆದರೆ, ಇವರಿಬ್ಬರೊಡನೆ ವಾದ ಮಾಡಿ ಇವರನ್ನು ಜಯಿಸು" ಎಂದು ಹೇಳಿ ಅವನ ಮೇಲೆ ಭಸ್ಮವನ್ನು ಹಾಕಿದರು. ತಕ್ಷಣವೇ ಅವನಲ್ಲಿ ಜ್ಞಾನ ಉದ್ದೀಪನಗೊಂಡು, ಶ್ರೀಗುರುವಿನ ಕೃಪೆಯಿಂದ ಜ್ಞಾನಿಯಾಗಿ, ವೇದ ಪಠನೆ ಮಾಡಿ ವಾದಕ್ಕೆ ಸಿದ್ಧನಾದನು. ಇದೆಲ್ಲವನ್ನೂ ಕಂದ ಆ ಬ್ರಾಹ್ಮಣರು ಆಶ್ಚರ್ಯಪಟ್ಟು, ಅಧೀರರಾಗಿ, ನಾಲಗೆ ಕಟ್ಟಿ ಘೋದವರಂತೆ ಮೂಗರಾಗಿ ಹೋದರು. ಇಬ್ಬರೂ, ನಡುಗುತ್ತಾ, ಶ್ರೀಗುರುವಿನ ಪಾದಗಳಲ್ಲಿ ಬಿದ್ದು, "ಸ್ವಾಮಿ, ನಾವು ಗುರುದ್ರೋಹಿಗಳು. ಸದ್ಬ್ರಾಹ್ಮಣರನ್ನು ಧಿಕ್ಕರಿಸಿ ಅವಮಾನಗೊಳಿಸಿದೆವು. ನೀವು ಈಶ್ವರಾವತಾರವೆಂದು ತಿಳಿಯದೆ ನಿಮ್ಮ ಮಾತನ್ನು ಧಿಕ್ಕರಿಸಿ ಮಾತನಾಡಿದೆವು. ನಮ್ಮಲ್ಲಿ ದಯೆರ್ತೋರಿ, ನಮ್ಮನ್ನು ಕ್ಷಮಿಸಿ, ಉದ್ಧರಿಸಿ. ಮಾಯಾ ಮೋಹಿತರಾದ ನಾವು ನೀವು ಯಾರೆಂದು ಗುರುತಿಸಲಾರದೆ ಹೋದೆವು. ಹೇ ಗುರುವರ್ಯ, ಹುಲ್ಲನ್ನು ಬೆಟ್ಟವನ್ನಾಗಿ, ಬೆಟ್ಟವನ್ನು ಹುಲ್ಲಾಗಿ ಮಾಡಬಲ್ಲ, ನಿಮ್ಮ ಸಾಮರ್ಥ್ಯವನ್ನು ಅರಿಯಲಿಲ್ಲ. ನಿಮ್ಮ ಲೀಲೆಗಳು ಅನಂತವಾದವು. ತ್ರಿಗುಣಗಳಿಂದ ಕೂಡಿ, ಸೃಷ್ಟಿ, ಪಾಲನ, ಸಂಹಾರ ಮಾಡಬಲ್ಲ ಜಗದ್ಗುರುವೇ ನೀವು! ಹೇ ತ್ರಿಮೂರ್ತಿ ಸ್ವರೂಪ, ನಿಮ್ಮ ಮಾಹಾತ್ಮ್ಯೆಯನ್ನು ವರ್ಣಿಸಲು ನಮ್ಮಂತಹ ಬುದ್ಧಿಹೀನರಿಗೆ ಹೇಗೆ ಸಾಧ್ಯ? ನಮ್ಮನ್ನು ಕಾಪಾಡಿ. ಅನುಗ್ರಹಿಸಿ" ಎಂದು ಸ್ತೋತ್ರ ಪೂರ್ವಕವಾಗಿ ಬೇಡಿಕೊಂಡರು.

ಅದಕ್ಕೆ ಶ್ರೀಗುರುವು, "ನೀವು ವಿನಾಕಾರಣವಾಗಿ ಬ್ರಾಹ್ಮಣರನ್ನು ದೂಷಿಸಿ, ಅವಮಾನ ಗೊಳಿಸಿದಿರಿ. ಅದರಿಂದ ನಿಮಗೆ ಅಪರಿಮಿತ ಪಾಪಗಳು ಉಂಟಾಗಿವೆ. ಅದರ ಫಲವನ್ನು ಅನುಭವಿಸಲೇ ಬೇಕು. ಪಾಪ ಫಲಗಳನ್ನು ಅನುಭವಿಸಿಯೇ ಪಾಪ ಕ್ಷಾಳನ ಮಾಡಿಕೊಳ್ಳಬೇಕು. ಪಾಪವಾಗಲೀ, ಪುಣ್ಯವಾಗಲೀ, ಅದರ ಫಲವನ್ನು ಮಾಡಿದವನೇ ಅನುಭವಿಸಬೇಕಲ್ಲವೇ? ನಿಮ್ಮ ಈ ಪಾಪ ಫಲದಿಂದಾಗಿ ನೀವು ಬ್ರಹ್ಮರಾಕ್ಷಸರಾಗಿ ಹುಟ್ಟುತ್ತೀರಿ" ಎಂದು ಶ್ರೀಗುರುವು ಹೇಳಿದರು. ದುಃಖಿತರಾದ ಅವರಿಬ್ಬರೂ ಶ್ರೀಗುರುವಿನ ಪಾದಗಳನ್ನು ಬಿಡದೆ, "ಸ್ವಾಮಿ, ನಮಗೆ ಈ ರಾಕ್ಷಸ ಜನ್ಮದಿಂದ ಬಿಡುಗಡೆ ಎಂದು?" ಎಂದು ಆರ್ತರಾಗಿ ಕೇಳಿದರು. ಅದಕ್ಕೆ ಶ್ರೀಗುರುವು, "ನೀವು ಈ ರಾಕ್ಷಸತ್ವವನ್ನು ಹನ್ನೆರಡು ವರ್ಷ ಅನುಭವಿಸಬೇಕು. ನಿಮಗೆ ನಿಮ್ಮ ಕಾರ್ಯದಿಂದ ಪಶ್ಚಾತ್ತಾಪವುಂಟಾಗಿದೆಯಾಗಿ, ಪಾಪ ಪರಿಹಾರವಾಗುವ ಕಾಲಕ್ಕೆ, ಬ್ರಾಹ್ಮಣನೊಬ್ಬನು ನಾರಾಯಣಾನುವಾಕವನ್ನು ಪಠಿಸುತ್ತ ಬರುವನು. ಅವನಿಂದ ನಿಮಗೆ ಸದ್ಗತಿಯಾಗುವುದು. ನೀವು ಗಂಗಾತೀರಕ್ಕೆ ಹೋಗಿ ಅಲ್ಲಿ ನಿವಾಸ ಮಾಡಿ" ಎಂದು ಅಪ್ಪಣೆ ಕೊಟ್ಟರು. ಅದರಂತೆ ಅವರಿಬ್ಬರೂ ಅಲ್ಲಿಂದ ಹೊರಟು ಗ್ರಾಮದ ಸರಹದ್ದಿಗೆ ಬರುತ್ತಲೇ, ಅವರಿಗೆ ಹೃದಯಾಘಾತವಾಗಿ, ನದೀ ತೀರ ಸೇರುತ್ತಲೇ ಮೃತರಾಗಿ ಬಿದ್ದರು. ಇಬ್ಬರೂ ಹನ್ನೆರಡು ವರ್ಷ ರಾಕ್ಷಸರಾಗಿ, ನಂತರ ಶ್ರೀಗುರುವು ಹೇಳಿದ್ದಂತೆ ನಾರಾಯಣಾನುವಾಕವನ್ನು ಹೇಳುತ್ತಾ ಬಂದ ಒಬ್ಬ ಬ್ರಾಹ್ಮಣನ ದೆಸೆಯಿಂದ ರಾಕ್ಷಸತ್ವದಿಂದ ಬಿಡುಗಡೆ ಹೊಂದಿದರು.

ನಾಮಧಾರಕ, ಗುರುವಿನ ಮಾತು ಸದಾ ಸತ್ಯವೇ! ಅನ್ಯಥಾ ಹೇಗೆ ಆಗುವುದು? ಅನಂತರ ನಡೆದ ಕಥೆಯನ್ನು ಹೇಳುತ್ತೇನೆ, ಕೇಳು. ಶ್ರೀಗುರುವಿನ ಅನುಗ್ರಹದಿಂದ ವೇದಶಾಸ್ತ್ರ ಪಾರಂಗತನಾದ ಬ್ರಾಹ್ಮಣನಾದ ಆ ಅಂತ್ಯಜ, ಶ್ರೀಗುರುವನ್ನು ನಮಸ್ಕಾರ ಪೂರ್ವಕವಾಗಿ ಸಂಬೋಧಿಸಿ, "ಗುರುವರ್ಯ, ವೇದಶಾಸ್ತ್ರ ಪಾರಂಗತನಾಗಿ ವಿಪ್ರನಾಗಿದ್ದ ನಾನು ಅಂತ್ಯಜ ಹೇಗಾದೆ? ನಾನು ಮಾಡಿದ್ದ ಪಾಪಗಳೇನು? ನೀವು ತ್ರಿಕಾಲಜ್ಞರು. ಹೇ ಗುರು, ನೃಸಿಂಹ ಸರಸ್ವತಿ ಸ್ವಾಮಿ, ದಯೆಯಿಟ್ಟು ಅದನ್ನು ಹೇಳುವ ಕೃಪೆಮಾಡಿ" ಎಂದು ಕೋರಿಕೊಂಡ ಅವನ ಕೋರಿಕೆಯನ್ನು ಮನ್ನಿಸಿ, ಶ್ರೀಗುರುವು ಅವನಿಗೆ ಅವನ ಪೂರ್ವ ವೃತ್ತಾಂತವನ್ನು ಹೇಳಿದರು" ಎಂದು ಸಿದ್ಧಮುನಿ ಹೇಳಿದರು. 

ಇಲ್ಲಿಗೆ ಇಪ್ಪತ್ತೇಳನೆಯ ಅಧ್ಯಾಯ ಮುಗಿಯಿತು.