Saturday, September 7, 2013

||ಶ್ರೀಗುರುಚರಿತ್ರೆ - ಮುವ್ವತ್ತೊಂಭತ್ತನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

ಸಿದ್ಧಮುನಿಯು, "ನಾಮಧಾರಕ, ಮುಂದಿನ ವೃತ್ತಾಂತವನ್ನು ಹೇಳುತ್ತೇನೆ.ಕೇಳು. ಅರವತ್ತು ವರ್ಷ ತುಂಬಿದ ಬಂಜೆಗೆ ಶ್ರೀಗುರುವಿನ ಅನುಗ್ರಹದಿಂದ ಇಬ್ಬರು ಮಕ್ಕಳು ಹುಟ್ಟಿದರು. ಆಪಸ್ತಂಭ ಶಾಖೆಗೆ ಸೇರಿದ ಸೋಮನಾಥನೆನ್ನುವ ಬ್ರಾಹ್ಮಣನು ವೇದಶಾಸ್ತ್ರಪರಾಯಣನು. ಅವನ ಹೆಂಡತಿ ಗಂಗ ಪತಿವ್ರತಾ ಶಿರೋಮಣಿ. ಅರವತ್ತು ವರ್ಷಗಳಾದರೂ ಆಕೆಗೆ ಪುತ್ರಲಾಭವಾಗಲಿಲ್ಲ. ಗಂಧರ್ವನಗರದಲ್ಲಿನ ಪ್ರಜೆಗಳು ಅವಳನ್ನು ಬಂಜೆ ಎನ್ನುತ್ತಿದ್ದರು. ಆಕೆ ಶ್ರದ್ಧಾಭಕ್ತಿಗಳಿಂದ ಪತಿಸೇವೆ ಮಾಡುತ್ತಾ ಅನಿಂದ್ಯಳಾಗಿದ್ದಳು. ಪ್ರತಿದಿನವೂ ನಿಯಮವಾಗಿ ಆಕೆ ಶ್ರೀಗುರುವಿನ ದರ್ಶನ ಮಾಡುತ್ತಿದ್ದಳು. ಪ್ರತಿದಿನವೂ ಶ್ರೀಗುರುವಿಗೆ ನೀರಾಜನ ಕೊಟ್ಟು, ಉಪಚಾರಗಳನ್ನು ಮಾಡುತ್ತಾ ಬಹಳಕಾಲ ಕಳೆಯಿತು. ಸಂತುಷ್ಟನಾದ ಶ್ರೀಗುರುವು, ಒಂದು ದಿನ, ನಸುನಗೆ ನಗುತ್ತಾ, "ಅಮ್ಮಾ, ಗಂಗ ಬ್ರಾಹ್ಮಣಿ, ದಿನವೂ ಏಕೆ ನೀರಾಜನ ಕೊಡುತ್ತಿದ್ದೀಯೆ? ನಿನ್ನ ಅಭೀಷ್ಟವೇನೋ ಹೇಳಲಿಲ್ಲ. ನಿನ್ನ ಕೋರಿಕೆ ಏನು ಎಂದು ಇಂದು ಹೇಳು. ಗುರುಪ್ರಸಾದದಿಂದ ನಿನಗೆ ಗೌರೀಶನೂ, ನಾರಾಯಣನೂ ಸಿದ್ಧಿಯಾಗುವಂತೆ ಮಾಡುತ್ತಾರೆ." ಎಂದು ಹೇಳಿದರು. ಆಕೆ ಅಂಜಲಿಬದ್ಧಳಾಗಿ, ಪ್ರಣಾಮ ಮಾಡಿ, "ಸ್ವಾಮಿ, ಅಪುತ್ರನಿಗೆ ಗತಿಯಿಲ್ಲ ಎಂದು ಶ್ರುತಿಗಳು ಹೇಳುತ್ತಿವೆ. ಪುತ್ರನಿಲ್ಲದ ಸ್ತ್ರೀಯ ಮುಖವನ್ನು ನೋಡಬಾರದು ಎನ್ನುತ್ತಾರೆ. ಗರ್ಭವು ಫಲಿಸದ ಸ್ತ್ರೀಜನ್ಮ ನಿಷ್ಫಲವು. ನಮ್ಮ ವಂಶದಲ್ಲಿ ಸಾಧ್ವಿ ಮಗನನ್ನು ಹೆರುತ್ತಾಳೆ ಎಂದೂ, ಅವನು ನಮ್ಮನ್ನು ದುರ್ಗತಿಯಿಂದ ಉದ್ಧರಿಸುತ್ತಾನೆ ಎಂದೂ ಪಿತೃಗಳು ದಿನವೂ ಕಾಯುತ್ತಿದ್ದಾರೆ. ಪುತ್ರರಿಲ್ಲದ ಗೃಹವು ಘೋರ ಅರಣ್ಯವು. ಬಾಲಕನನ್ನು ಸೊಂಟದಲ್ಲಿಟ್ಟುಕೊಂಡು ಗಂಗಾಸ್ನಾನಕ್ಕೆ ಬರುವ ಸ್ತ್ರೀಯರು ಪ್ರತಿದಿನವೂ ತಮ್ಮ ಮಕ್ಕಳನ್ನು ಆಡಿಸುತ್ತಾರೆ. ನನ್ನ ವಿಷಯದಲ್ಲಿ ದೈವವು ಹಾಗಿಲ್ಲ. ನಾನು ದೊಡ್ಡ ನಿರ್ಭಾಗ್ಯಳು. ಮಗನಿಲ್ಲದೇ ಹೋದರೂ ಮಗಳು ಕೂಡಾ ಇಲ್ಲ. ಮಗನಿಲ್ಲದೆ ಪರಲೋಕವಿಲ್ಲ ಅಲ್ಲವೇ! ಮಕ್ಕಳಿಲ್ಲದವನ ಪಿತೃಗಳು ಪಿಂಡೋದಕ ಕ್ರಿಯೆಗಳಿಲ್ಲದೆ ಅಧೋಗತಿ ಹೊಂದುವರು. ನಾನು ಹುಟ್ಟಿ ಅರವತ್ತು ವರ್ಷಗಳಾದವು. ಇನ್ನು ನನಗೆ ಈ ಜನ್ಮವೇಕೆ? ಆದ್ದರಿಂದ ಸ್ವಾಮಿ, ನನಗೆ ಮರುಜನ್ಮವಾದರೂ ಶುಭಪ್ರದವಾಗುವಂತೆ ವರವನ್ನು ಕೊಡು. ಬರುವ ಜನ್ಮದಲ್ಲಿ ಪುತ್ರವತಿಯಾಗಿವಂತೆ ವರವನ್ನು ನೀಡು." ಎಂದು ಗಂಗ ಪ್ರಾರ್ಥಿಸಿದಳು. ಶ್ರೀಗುರುವು ನಸುನಕ್ಕು, " ಆ ಜನ್ಮದಲ್ಲಿ ನಿನಗೆ ಈ ಜನ್ಮದ ಸ್ಮೃತಿ ಹೇಗಿರುತ್ತದೆ? ನೀನು ಈ ಜನ್ಮದಲ್ಲಿ ಭಕ್ತಿಯಿಂದ ದಿನವೂ ನೀರಾಜನ ಕೊಡುತ್ತಿದ್ದೀಯಲ್ಲವೇ? ಅದರಿಂದ ನಾನು ಸಂತುಷ್ಟನಾಗಿದ್ದೇನೆ. ಈ ಜನ್ಮದಲ್ಲೇ ನಿನಗೆ ಉತ್ತಮನಾದ ಮಗ, ಒಬ್ಬಳು ಮಗಳು ಜನಿಸುತ್ತಾರೆ." ಎಂದು ಪ್ರೀತಿಯಿಂದ ಶ್ರೀಗುರುವು ಅನುಗ್ರಹಿಸಿದರು. ಹಾಗೆ ಶ್ರೀಗುರುವು ಹೇಳಲು ಗಂಗ ಸೀರೆಸೆರಗು ಗಂಟುಹಾಕಿ, ಕೈಜೋಡಿಸಿ, "ಸ್ವಾಮಿ, ದಯಾನಿಧಿ, ನಾನು ಹುಟ್ಟಿ ಅರವತ್ತು ವರ್ಷಗಳು ಕಳೆದುಹೋಗಿವೆ. ಇನ್ನು ಪುತ್ರನು ಹೇಗೆ ಜನಿಸುತ್ತಾನೆ? ಪುತ್ರಾರ್ಥಿಯಾಗಿ ನಾನಾ ವ್ರತಗಳನ್ನು ಮಾಡಿದೆ, ಅನೇಕ ತೀರ್ಥಗಳನ್ನು ದರ್ಶಿಸಿದೆ. ಪುತ್ರಕಾಮನೆಯಿಂದ ಅಶ್ವತ್ಥಪೂಜೆಗಳು ಮಾಡಿದೆ. ಈ ಜನ್ಮದಲ್ಲಿ ಪುತ್ರರು ಆಗದಿದ್ದರೂ, ಮರುಜನ್ಮದಲ್ಲಿ ಸಂಭವಿಸಲಿ ಎನ್ನುವ ಕೋರಿಕೆಯಿಂದ ಅಶ್ವತ್ಥನಾರಾಯಣನನ್ನು ಸೇವಿಸುತ್ತಿದ್ದೇನೆ. ಸ್ವಾಮಿ, ಈಗ ನೀವು ನನಲ್ಲಿ ಪ್ರಸನ್ನರಾಗಿ ಈ ಜನ್ಮದಲ್ಲೇ ಪುತ್ರನನ್ನು ಕೊಡುತ್ತಿದ್ದೀರಿ. ನಿಮ್ಮ ಮಾತು ಅನ್ಯಥಾ ಆಗಲಾರದು. ಸ್ವಾಮಿ, ಸ್ವಯಂ ಆ ನರಹರಿಯೇ ನೀವಲ್ಲವೇ! ಈ ವರವನ್ನು ಕೊಟ್ಟಿರಿ. ನಿಮ್ಮ ಮಾತು ನಿಶ್ಚಯವೆಂದು ಮುಡಿಹಾಕಿದೆ. ಸ್ವಾಮಿ ಈಗ ನೀವೇ ಪ್ರಸನ್ನನಾಗಿ ಕನ್ಯೆಯನ್ನು ಪುತ್ರನನ್ನು ಕೊಡುತ್ತಿದ್ದೀರಿ. ಪೂಜೆ ಮಾಡುವುದರಿಂದ ಅಶ್ವತ್ಥವು ಏನು ಕೊಡುತ್ತದೆ? ಮೂರ್ಖತ್ವದಿಂದ ನಾನು ಅದನ್ನು ಅರ್ಚಿಸಿದೆ." ಎಂದಳು. ಹಾಗೆ ಹೇಳಿದ ಆಕೆಯ ಮಾತುಗಳನ್ನು ಕೇಳಿ ಶ್ರೀಗುರುವು ನಗುತ್ತಲೇ ಉತ್ತರಕೊಟ್ಟರು. "ಅಶ್ವತ್ಥ ಪೂಜೆಯು ಎಂದಿಗೂ ವ್ಯರ್ಥವಲ್ಲ. ಅಶ್ವತ್ಥನಿಂದೆ ಮಾಡಬಾರದು. ನಾನು ನಿವಸಿಸುತ್ತಿರುವ ಅಶ್ವತ್ಥವನ್ನು ಭಜಿಸು. ಸತ್ಯವಾಗಿ ಪುತ್ರನು ಜನಿಸುತ್ತಾನೆ. ನನ್ನ ಮಾತಿನಂತೆ ವ್ರತ ಮಾಡು. ಪ್ರತಿದಿನವೂ ಸಂಗಮಕ್ಕೆ ಹೋಗು. ಶ್ರೀ ಭೀಮಾ-ಅಮರಜಾ ನದಿಗಳ ಸಂಗಮಸ್ಥಾನದಲ್ಲಿರುವ ಅಶ್ವತ್ಥದಲ್ಲಿ ನಾನು ನಿವಾಸಮಾಡುತ್ತಿದ್ದೇನೆ. ನಾನು ಸೇರಿದಂತೆ ಅಶ್ವತ್ಥವನ್ನು ಪೂಜಿಸು. ಅದು ತ್ವರೆಯಾಗಿ ಕಾಮನೆಗಳನ್ನು ಪೂರಯಿಸುವುದು. ನಾರಾಯಣನಿಗೂ ನನಗೂ ಅಶ್ವತ್ಥವೇ ನಿವಾಸವು." ಅವರ ಉಪದೇಶವನ್ನು ಕೇಳಿದ ಆಕೆ ಮತ್ತೆ ಕೇಳಿದಳು. "ಸ್ವಾಮಿ, ಅಶ್ವತ್ಥ ಮಹಿಮೆಯನ್ನು ಕೇಳಿಸಬೇಕೆಂದು ಕೋರುತ್ತಿದ್ದೇನೆ. ತತ್ತ್ವವು ತಿಳಿದರೆ ಮನಸ್ಸು ಸ್ಥಿರವಾಗಿ ಆಮೇಲೆ ಭಕ್ತಿಯಿಂದ ಸೇವೆಮಾಡಬಲ್ಲೆನು." ಅವಳ ಮಾತನ್ನು ಕೇಳಿದ ಶ್ರೀಗುರುವು ಅಶ್ವತ್ಥ ಮಹಿಮೆಯನ್ನು ಉಪದೇಶಿಸಿದರು.

ಬ್ರಹ್ಮಾಂಡಪುರಾಣದಲ್ಲಿ ಅಶ್ವತ್ಥ ಮಹಿಮೆ ಹೇಳಲ್ಪಟ್ಟಿದೆ. ನಾರದ ಮಹರ್ಷಿಗೆ ಬ್ರಹ್ಮದೇವನು ಆ ಮಹಿಮೆಯನ್ನು ವರ್ಣಿಸಿದನು. ನಾರದ ಮಹಾಮುನಿ ನಿತ್ಯವೂ ತ್ರಿಭುವನಗಳಲ್ಲಿ ಸಂಚರಿಸುತ್ತಿದ್ದನು. ಆ ಬ್ರಹ್ಮಪುತ್ರನು ಒಂದುಸಲ ಋಷಿಗಳ ಆಶ್ರಮಕ್ಕೆ ಹೋದನು. ಅರ್ಘ್ಯಪಾದ್ಯಾದಿಗಳನ್ನು ಆ ಮಹರ್ಷಿಗೆ ಅರ್ಪಿಸಿ ಸ್ವಾಗತಕೊಟ್ಟಮೇಲೆ ಋಷಿಗಳು, " ಹೇ ಮಹರ್ಷಿ, ಅಶ್ವತ್ಥ ಮಾಹಾತ್ಮ್ಯೆಯನ್ನು ವಿಸ್ತಾರವಾಗಿ ನಮಗೆ ಉಪದೇಶಿಸು." ಎಂದು ಪ್ರಾರ್ಥಿಸಲು, ನಾರದನು, "ಅಯ್ಯಾ ಮುನಿಗಳಿರಾ, ನಾನು ಈಗ ಬ್ರಹ್ಮಲೋಕದಿಂದ ಬರುತ್ತಿದ್ದೇನೆ. ಬ್ರಹ್ಮದೇವನನ್ನು ನಾನು ಅಶ್ವತ್ಥ ಮಹಿಮೆಯನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತಾ, ಈ ಅಶ್ವತ್ಥವನ್ನು ಎಲ್ಲರೂ ವಿಷ್ಣುಸ್ವರೂಪವೆಂದು ಹೇಳುತ್ತಾರೆಯಲ್ಲವೇ. ಈ ಅಶ್ವತ್ಥ ಮಹಿಮೆಯನ್ನು ತಿಳಿಯಲು ಇಚ್ಛಿಸುತ್ತೇನೆ" ಎಂದು ಕೋರಲು ಬ್ರಹ್ಮನು ಹೀಗೆ ಬೋಧಿಸಿದನು.

"ಅಶ್ವತ್ಥ ವೃಕ್ಷದ ಮೂಲದಲ್ಲಿ ನಾನು ನೆಲಸಿದ್ದೇನೆ. ಮಧ್ಯದಲ್ಲಿ ಹೃಷೀಕೇಶ, ಅಗ್ರದಲ್ಲಿ ರುದ್ರ ನೆಲೆಸಿದ್ದಾರೆ. ಹಾಗೆಯೇ ದಕ್ಷಿಣದಲ್ಲಿರುವ ಕೊಂಬೆಗಳಲ್ಲಿ ಶೂಲಪಾಣಿ ಇದ್ದಾನೆ. ವಿಷ್ಣುವು ಪಶ್ಚಿಮಶಾಖೆಗಳಲ್ಲಿದ್ದರೆ ನಾನು ಉತ್ತರದಲ್ಲಿ ಇದ್ದೇನೆ. ಪೂರ್ವದಲ್ಲಿರುವ ಕೊಂಬೆಗಳಲ್ಲಿ ಸದಾ ಇಂದ್ರಾದಿ ದೇವತೆಗಳು ಇರುತ್ತಾರೆ. ವಸುಗಳು, ರುದ್ರರು, ಆದಿತ್ಯರು ಎನ್ನುವ ದೇವತೆಗಳೆಲ್ಲರೂ ಎಲ್ಲ ಶಾಖೆಗಳಲ್ಲೂ ನಿವಸಿಸುತ್ತಾರೆ. ಬ್ರಾಹ್ಮಣರು, ಋಷಿಗಳು, ಗೋವುಗಳು, ವೇದಗಳು, ಯಜ್ಞಗಳು ಎಲ್ಲ ಜಾಗಗಳಲ್ಲೂ ಸದಾ ಬೇರುಗಳು, ಚಿಗುರು ಮುಂತಾದುವುಗಳಲ್ಲಿನಿವಾಸಮಾಡುತ್ತಾರೆ. ಸಮಸ್ತ ನದಿಗಳು, ಕ್ಷೀರಸಮುದ್ರವೇ ಮೊದಲಾದ ಸಪ್ತಸಮುದ್ರಗಳು ಪೂರ್ವದ ಕೊಂಬೆಗಳಲ್ಲಿ ನಿವಸಿಸುತ್ತವೆ. ಇಂತಹುದು ಅಶ್ವತ್ಥವೃಕ್ಷವು. ಮೂಲದಲ್ಲಿ ಅಕಾರ, ಮಧ್ಯದಲ್ಲಿ ಉಕಾರ, ಫಲಪುಷ್ಪಗಳಲ್ಲಿ ಮಕಾರ ಇರುವುದರಿಂದ ಅಶ್ವತ್ಥ ವೃಕ್ಷವು ಉತ್ತಮವು. ಅಶ್ವಥ್ಥ ವೃಕ್ಷವೇ ಕಲ್ಪವೃಕ್ಷವೆಂದು ಬ್ರಹ್ಮ ನನಗೆ ಹೇಳಿದನು. ಅಶ್ವತ್ಥವೃಕ್ಷ ಮಹಿಮೆಯನ್ನು ಯಾರೂ ವಿವರಿಸಲಾರರು. ಆ ವೃಕ್ಷವನ್ನು ಸೇವಿಸುವವನು ಕಾಮದಾತ ಆಗುತ್ತಾನೆ. ಹೀಗೆಂದು ನಾರದನು ಹೇಳಲು ಮುನಿಗಣವು ಮತ್ತೆ ನಾರದನನ್ನು, "ದೇವರ್ಷಿ, ಅಶ್ವತ್ಥ ವೃಕ್ಷವನ್ನು ಸೇವಿಸುವ ವಿಧಾನವನ್ನು ತಿಳಿಸು." ಎಂದು ಕೋರಿದರು.

ನಾರದನು, " ಮುನಿಗಳಿರಾ, ವಿಸ್ತಾರವಾಗಿ ಬ್ರಹ್ಮನು ತಿಳಿಸಿದ ವಿಧಾನದಲ್ಲಿ ಅಶ್ವತ್ಥವನ್ನು ಸೇವಿಸುವುದನ್ನು ಹೇಳುತ್ತೇನೆ. ಕೇಳಿ. ಆಷಾಢ, ಪುಷ್ಯ, ಚೈತ್ರಮಾಸಗಳಂದು, ಗುರುಶುಕ್ರರ ಅಸ್ತಮೋದಯಗಳಲ್ಲಿ, ಚಂದ್ರನು ಅನುಕೂಲವಾಗಿ ಇಲ್ಲದಿರುವಾಗ ಅಶ್ವತ್ಥ ಸೇವೆಯನ್ನು ಪ್ರಾರಂಭಿಸುವುದು ಒಳ್ಳೆಯದಲ್ಲ. ನಿಷಿದ್ಧವಲ್ಲದ ಮಾಸಗಳಲ್ಲಿ, ಶುಭದಿನದಲ್ಲಿ, ಉಪವಾಸದಿಂದಿದ್ದು, ಶುಚಿಯಾಗಿ ಅಶ್ವತ್ಥ ಸೇವಾವ್ರತವನ್ನು ಆಚರಿಸಬೇಕು. ಧೀಮಂತನಾದವನು ಆದಿ ಸೋಮವಾರಗಳಲ್ಲಿ, ಶುಕ್ರವಾರದಲ್ಲಿ, ಸೂರ್ಯಸಂಕ್ರಮಣದಲ್ಲಿ ಅಶ್ವತ್ಥವನ್ನು ಮುಟ್ಟಬಾರದು. ಪರ್ವದಿನಗಳಲ್ಲಿ, ವ್ಯತಿಪಾತಯೋಗದಂದು, ದುರ್ದಿನಗಳಲ್ಲಿ, ವೈಧೃತೀಕರಣದಲ್ಲಿ, ರಾತ್ರಿಯಲ್ಲಿ, ರಿಕ್ತತಿಥಿಗಳಲ್ಲಿ, ಸಂಧಿಯಲ್ಲಿ, ಅಪರಾಹ್ಣದಲ್ಲಿ, ತಿಳಿದವನು ಅಶ್ವತ್ಥವನ್ನು ಸ್ಪರ್ಶಿಸಬಾರದು. ನಿಂದೆಗಳು, ಪಾಷಂಡಿಗಳೊಡನೆ ವಾದ, ಜೂಜು, ಅಸತ್ಯವನ್ನು ನುಡಿಯುವುದು, ಮುಂತಾದುವನ್ನು ಬಿಟ್ಟು, ಪ್ರಾತಃಕಾಲದಲ್ಲಿ ಶುಚಿಯಾಗಿ ಮೌನದಿಂದ ಅಶ್ವತ್ಥವ್ರತವನ್ನು ಆಚರಿಸಬೇಕು. ಸಚೇಲಸ್ನಾನಮಾಡಿ, ಸ್ವಚ್ಛವಾದ ವಸ್ತ್ರಗಳನ್ನು ಧರಿಸಿ, ಗಂಗಾಯಮುನೆಗಳ ನೀರು ತುಂಬಿದ ಎರಡು ಕಲಶಗಳನ್ನು, ರಂಗೋಲಿಗಳಿಂದ ಅಲಂಕರಿಸಿದ ಪದ್ಮವನ್ನು ಪೂಜಿಸಿ ಯಥಾವಿಧಿಯಾಗಿ ಪುಣ್ಯಾಹವನ್ನು ಬ್ರಾಹ್ಮಣರಿಂದ ಹೇಳಿಸಿ, ತನ್ನ ಕಾಮನೆಯನ್ನು ಉದ್ದೇಶಿಸಿ, ಆದರದಿಂದ ಸಂಕಲ್ಪಮಾಡಿ, ಕಲಶದಲ್ಲಿರುವ ನೀರಿನಿಂದ ಅಶ್ವತ್ಥವೃಕ್ಷಕ್ಕೆ ಏಳುಸಲ ಸ್ನಾನ ಮಾಡಿಸಿ, ಭಕ್ತಿಯಿಂದ ಕೂಡಿದವನಾಗಿ, ಮತ್ತೆ ತಾನು ಸ್ನಾನ ಮಾಡಿ ದೈವಸ್ವರೂಪವಾದ ಅಶ್ವತ್ಥವೃಕ್ಷವನ್ನು ಪೂಜಿಸಬೇಕು. ಪುರುಷಸೂಕ್ತ ವಿಧಾನವಾಗಿ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

ಶ್ರೀ ವಿಷ್ಣುಮೂರ್ತಿಯಾದ ಅಶ್ವತ್ಥವನ್ನು ಅಷ್ಟಭುಜಗಳು ಇರುವಹಾಗೆ ದ್ವಿಜನಾದವನು ಧ್ಯಾನಿಸಬೇಕು. ಕ್ರಮವಾಗಿ ಶಂಖ, ಚಕ್ರ, ವರದಹಸ್ತಗಳನ್ನು ಧ್ಯಾನಿಸಬೇಕು. ಖಡ್ಗ, ಗದೆ, ಶಾರ್ಙ್ಗಗಳನ್ನು, ಹಾಗೇ ಅಭಯಮುದ್ರೆಯನ್ನು ಅಷ್ಟಹಸ್ತಗಳಲ್ಲಿ ಧರಿಸಿರುವ ಅವ್ಯಯನಾದ ವಿಷ್ಣುವನ್ನು, ನಾರಾಯಣನನ್ನು, ಪೀತಾಂಬರನನ್ನು, ಲಕ್ಷ್ಮೀಸಹಿತನಾದ ಜನಾರ್ದನನ್ನು ಧ್ಯಾನಿಸಿ ಅಶ್ವತ್ಥ ಮೂಲವನ್ನು ಪೂಜಿಸಬೇಕು. ಅಶ್ವತ್ಥವನ್ನು ತ್ರಿಮೂರ್ತಿಗಳಿಗೆ ಉತ್ತಮ ಸ್ಥಾನವಾಗಿ ಆಹ್ವಾನ ಮಾಡಿ, ದೇವತಾಮಯವಾದ ಈ ವೃಕ್ಷವನ್ನು ಅರ್ಚಿಸಬೇಕು. ವಸ್ತ್ರವನ್ನಾಗಲೀ, ದಾರವನ್ನಾಗಲೀ ವೃಕ್ಷದ ಸುತ್ತಲೂ ಸುತ್ತಿ ತನ್ನ ಅಭೀಷ್ಟವನ್ನು ಸಂಕಲ್ಪಿಸಿಕೊಂಡು ಮನೋವಾಕ್ಕಾಯಗಳಿಂದ ನಿಯಮವನ್ನು ಪಾಲಿಸುತ್ತಾ, ಭಕ್ತಿಯಿಂದ ಕೂಡಿ ಪುರುಷಸೂಕ್ತವನ್ನು ಹೇಳುತ್ತಾ/ಪಠಿಸುತ್ತಾ ಪ್ರದಕ್ಷಿಣೆಗಳನ್ನು ಮಾಡಬೇಕು. ಆನಂದಫಲವನ್ನು ಕೊಡುವ ಸಹಸ್ರನಾಮಗಳನ್ನು ಹೇಳುತ್ತಾ ಮೌನವಾಗಿ, ನಿಧಾನವಾಗಿ, ಗರ್ಭಿಣಿಸ್ತ್ರೀಯಂತೆ, ತುಂಬಿದಕೊಡ ಹೊತ್ತಿರುವ ಸ್ತ್ರೀಯಂತೆ, ಮಂದಗಮನನಾಗಿ ಶಕ್ತಿಯಿದ್ದಷ್ಟು ಪ್ರದಕ್ಷಿಣೆಗಳನ್ನು ಮಾಡಬೇಕು.

ಪ್ರದಕ್ಷಿಣೆ ಮಾಡುವಾಗ ಪ್ರತಿ ಪ್ರದಕ್ಷಿಣೆಯ ಮೊದಲು, ಮಧ್ಯೆ ಹಾಗೂ ಕೊನೆಯಲ್ಲಿ ನಮಸ್ಕಾರ ಮಾಡಬೇಕು. ಬ್ರಹ್ಮಹತ್ಯೆಯಿಂದುಂಟಾದ ಪಾಪವನ್ನು ಎರಡು ಲಕ್ಷ ಪ್ರದಕ್ಷಿಣೆಗಳು ನಾಶಮಾಡಬಲ್ಲವು. ಗುರುತಲ್ಪಗಮನದಂತಹ ಪಾಪಗಳನ್ನೂ ಆ ಪ್ರದಕ್ಷಿಣೆಗಳು ನಾಶಮಾಡಬಲ್ಲವು. ಪ್ರದಕ್ಷಿಣೆ ಮಾಡುವವನ ವ್ಯಾಧಿಗಳು ನಾಶವಾಗುತ್ತವೆ. ಋಣವಿಮುಕ್ತನಾಗುತ್ತಾನೆ. ಈ ಪ್ರದಕ್ಷಿಣಗಳು ಜನ್ಮ, ಮೃತ್ಯು, ಜರಾ, ವ್ಯಾಧಿ, ಸಂಸಾರ ಭಯಗಳನ್ನು ಕೂಡಾ ಹೋಗಲಾಡಿಸಿ ಮಾನವರನ್ನು ತರಿಸಬಲ್ಲದು. ಸಾವಿರ ಪ್ರದಕ್ಷಿಣೆಗಳು ಗ್ರಹಬಾಧೆಗಳನ್ನು ಹೋಗಲಾಡಿಸುವುದು. ಮನೋವಾಕ್ಕಾಯಕರ್ಮಗಳಿಂದ ಅಶ್ವತ್ಥವೃಕ್ಷವನ್ನು ಸೇವಿಸಿದವರಿಗೆ ನಿಶ್ಚಯವಾಗಿಯೂ ಪುತ್ರಲಾಭವಾಗುತ್ತದೆ. ಅಶ್ವತ್ಥ ಸೇವೆ ಚತುರ್ವಿಧ ಫಲಪುರುಷಾರ್ಥಗಳನ್ನು ಕೊಡಬಲ್ಲುದು. ಇನ್ನು ಅಶ್ವತ್ಥ ಸೇವೆಯಿಂದ ಪುತ್ರಪ್ರಾಪ್ತಿಗೆ ತಡವೇಕಾಗುತ್ತದೆ? ಶನಿವಾರದ ದಿನ ಅಶ್ವತ್ಥ ವೃಕ್ಷವನ್ನು ಸ್ಪರ್ಶಿಸಿ ಮೃತ್ಯುಂಜಯ ಮಂತ್ರವನ್ನು ಜಪಿಸಿದವವನು ಕಾಲಮೃತ್ಯುವನ್ನೂ ಕೂಡಾ ಜಯಿಸಬಲ್ಲನು. ಅಂತಹ ನರನು ಪೂರ್ಣಾಯುಷ್ಯನಾಗುತ್ತಾನೆ. ಶನಿಯಿಂದ ಉಂಟಾಗುವ ಏಳು ವರ್ಷಗಳ ಕಾಟವು ಸಂಭವಿಸಿದಾಗ ಅಶ್ವತ್ಥ ಸಮೀಪದಲ್ಲಿ ಕೋಣಸ್ಥ, ಪಿಂಗಳ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಶೌರಿ, ಶನೇಶ್ವರ, ಮಂದ, ಪಿಪ್ಪಲಾದರುಗಳಿಂದ ಸ್ತುತಿಸಲ್ಪಡುವವನು ಎಂದು ಜಪಮಾಡಬೇಕು. ಧೃಢವಾದ ಮನಸ್ಸಿನಿಂದ ಅಶ್ವತ್ಥವನ್ನು ಸೇವಿಸುವವರಿಗೆ ಕಾಮಸಿದ್ಧಿ, ಪುತ್ರಲಾಭಗಳಾಗುವುದರಲ್ಲಿ ಸಂಶಯವೇ ಇಲ್ಲ. ಈ ವಿಧದಲ್ಲಿ ಬ್ರಹ್ಮದೇವನು ನಾರದನಿಗೆ ಅಶ್ವತ್ಥಮಾಹಾತ್ಮ್ಯೆಯನ್ನು ತಿಳಿಸಿದನು. ನಾರದ ಮಹರ್ಷಿಯಿಂದ ಪೂರ್ವದಲ್ಲಿ ಅದನ್ನು ಋಷಿಗಳೆಲ್ಲರೂ ಕೇಳಿದರು.

ಅಶ್ವತ್ಥ ಪ್ರದಕ್ಷಿಣೆಗಳ ಸಂಖ್ಯೆಯಯಲ್ಲಿ ದಶಾಂಶವಾಗಿ ಆಗಮೋಕ್ತ ಪ್ರಕಾರ ತಿಳಿದವರು ಹೋಮ ಮಾಡಬೇಕು. ಹೋಮದ ದಶಾಂಶವಾಗಿ ಬ್ರಾಹ್ಮಣರಿಗೆ ಭೋಜನ ಇಡಬೇಕು. ಪ್ರದಕ್ಷಿಣೆ ಮಾಡುವಾಗ ಬ್ರಹ್ಮಚರ್ಯೆಯನ್ನು ಪಾಲಿಸುತ್ತಾ, ಹವಿಷ್ಯಾನ್ನವನ್ನು ಮಾತ್ರ ತಿನ್ನುತ್ತಾ, ವ್ರತ ಮಾಡಿ ಕೊನೆಯಲ್ಲಿ ಉದ್ಯಾಪನೆ ಮಾಡುವಾಗ ಶಕ್ತಿಯಿದ್ದಷ್ಟು, ಚಿನ್ನದಲ್ಲಿ ಆಶ್ವತ್ಥವೃಕ್ಷವನ್ನು ಮಾಡಿಸಿ ಬ್ರಾಹ್ಮಣನಿಗೆ ದಾನ ಮಾಡಬೇಕು. ದಾನ ಸ್ವೀಕರಿಸುವ ಬ್ರಾಹ್ಮಣನು ಕುಟುಂಬಿಯಾಗಿ ಸುಶೀಲನಾಗಿರಬೇಕು. ಬ್ರಾಹ್ಮಣನಿಗೆ ಕರುವಿನ ಸಹಿತ ಸಾಲಂಕೃತ ಬಿಳಿಯ ಗೋವನ್ನು ಕೂಡಾ ದಾನ ಕೊಡಬೇಕು. ಅಶ್ವತ್ಥ ವೃಕ್ಷದ ಕೆಳಗೆ ಯಥಾಶಕ್ತಿಯಾಗಿ ಎಳ್ಳು ರಾಶಿಯಾಗಿ ಹಾಕಿ ವಸ್ತ್ರದಿಂದ ಮುಚ್ಚಿ ಬ್ರಾಹ್ಮಣನಿಗೆ ದಾನಕೊಟ್ಟವನು ಅಭೀಷ್ಟಸಿದ್ಧಿಗಳನ್ನು ಪಡೆಯುತ್ತಾನೆ. ಇದು ಅಶ್ವತ್ಥ ಸೇವಾ ವಿಧಾನವು. ಈ ವಿಧಾನದಲ್ಲಿ ಭಕ್ತಿಯಿಂದ ಆಚರಿಸುವವನು ತನ್ನ ಅಭೀಷ್ಟಗಳನ್ನು ಹೊಂದುತ್ತಾನೆ."

ಹೀಗೆ ಶ್ರೀಗುರುವು ಆ ಬಂಜೆ ಹೆಂಗಸಿಗೆ ಹೇಳಿ, "ನಿನಗೆ ಅಶ್ವತ್ಥ ಮಹಿಮೆಯನ್ನು ಹೇಳಿದ್ದೇನೆ. ಭಕ್ತಿಯಿದ್ದವರಿಗೆ ಅವರವರು ಕೇಳಿದ ಪ್ರಕಾರ ಆಯಾ ವಿಧವಾಗಿ ಫಲಗಳು ಕೈಗೂಡುತ್ತವೆ. ನೀನೂ ಕೂಡಾ ಹಾಗೆ ಅಶ್ವತ್ಥ ಸೇವೆಯನ್ನು ಮಾಡು. ಈ ಸಂಗಮ ಸ್ಥಾನದಲ್ಲಿರುವ ಅಶ್ವತ್ಥವೃಕ್ಷವು ಕಲ್ಪದ್ರುಮವೇ! ಅದೇ ನಮ್ಮ ನಿವಾಸವು. ಆದ್ದರಿಂದ ಈ ಅಶ್ವತ್ಥ ಸೇವೆಯನ್ನು ಭಕ್ತಿಯಿಂದ ಮಾಡು. ನಿನಗೆ ಇಷ್ಟ ಸಿದ್ಧಿಯಾಗಿ ಒಬ್ಬಳು ಕನ್ಯೆ, ಒಬ್ಬ ಮಗ ಜನಿಸುತ್ತಾರೆ" ಎಂದು ಉಪದೇಶಿಸಿದ ಗುರು ವಾಕ್ಯಗಳನ್ನು ಕೇಳಿ ಆ ದ್ವಿಜಾಂಗನೆ ಅವರಿಗೆ ನಮಸ್ಕರಿಸಿ, ಭಕ್ತಿಪೂರ್ವಕವಾಗಿ ಶ್ರೀಗುರುವನ್ನು ಕೇಳಿದಳು.

"ಸ್ವಾಮಿ, ನಾನು ಹುಟ್ಟಾವಂಧ್ಯೆ. ನನಗೆ ಅರವತ್ತು ವರ್ಷಗಳು ಕಳೆದಿವೆ. ನನಗೆ ಮಗನು ಹೇಗೆ ಹುಟ್ಟುತ್ತಾನೆ? ಆದರೂ ಗುರುವಾಕ್ಯವೇ ಕಾಮಧೇನು. ಆದ್ದರಿಂದ ನಿಮ್ಮ ಮಾತುಗಳನ್ನು ನಂಬಿ ನಾನು ಸೇವೆ ಮಾಡುತ್ತೇನೆ. ನಿಮ್ಮ ಪಾದಸೇವೆ ಮಾಡುತ್ತೇನೆ" ಎಂದು ಹೇಳಿ, ಶ್ರೀಗುರುವು ಆಣತಿ ಕೊಡಲು ಸಂಗಮ ಸ್ನಾನ ಮಾಡಿ, ಷಟ್ಕೂಲ ತೀರ್ಥದಲ್ಲಿ ಆ ಬಂಜೆ ಶ್ರೀಗುರುವು ಉಪದೇಶಿಸಿದಂತೆ ಅಶ್ವತ್ಥವನ್ನು ಸೇವಿಸಿದಳು. ಹಾಗೆ ಆಕೆ ಮೂರು ದಿನಗಳು ಆರಾಧಿಸಿದಳು. ಅಶ್ವತ್ಥದೊಡನೆ ಶ್ರೀಗುರುವಿಗೂ ಆ ದ್ವಿಜಾಂಗನೆ ಸೇವಿಸಲು ಆರಂಭ ಮಾಡಿದಳು. ಮೂರನೆಯ ದಿನ ಆ ಸಾಧ್ವಿ ಒಂದು ಸ್ವಪ್ನವನ್ನು ಕಂಡಳು. ಅಕೆಯ ಕನಸಿನಲ್ಲಿ ಒಬ್ಬ ಬ್ರಾಹ್ಮಣ ಬಂದು, "ಹೇ ಸಾಧ್ವಿ, ನಿನ್ನ ಕೋರಿಕೆ ನೆರವೇರಿತು. ಗಂಧರ್ವ ನಗರಕ್ಕೆ ಹೋಗಿ ಗುರುನಾಥನಿಗೆ ಭಕ್ತಿಯಿಂದ ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡು. ಶ್ರೀಗುರುವು ನಿನಗೆ ಏನನ್ನು ಕೊಟ್ಟರೂ ಅದನ್ನು ಭಕ್ಷಿಸು. ನಿನ್ನ ಕೋರಿಕೆ ತೀರುವುದು. ನೀನು ನಿನ್ನ ಮನೋ ನಿಶ್ಚಯವನ್ನು ಬಿಡದೆ ಮಾಡಬೇಕು" ಎಂದು ಹೇಳಿದನು. ಹಾಗೆ ಸ್ವಪ್ನವನ್ನು ಕಂಡ ಆ ಮಹಿಳೆ ತಕ್ಷಣವೇ ಎದ್ದು ಸಾಕ್ಷಾತ್ತು ಕಲ್ಪವೃಕ್ಷವೇ ಆದ ಆ ಅಶ್ವತ್ಥ ವೃಕ್ಷವನ್ನು ಸೇವಿಸಿ, ನಾಲ್ಕನೆಯ ದಿನ ಶ್ರೀಗುರುವಿದ್ದ ಮಠಕ್ಕೆ ಬಂದು ಶ್ರೀಗುರುವಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದಳು. ಮುಗುಳ್ನಗುತ್ತಾ ಶ್ರೀಗುರುವು ಅವಳಿಗೆ ಎರಡು ಫಲಗಳನ್ನು ಕೊಟ್ಟು, "ನಿನ್ನ ಕೋರಿಕೆ ಸಿದ್ಧಿಸಿತು. ಈ ಎರಡು ಫಲಗಳನ್ನು ತಿನ್ನು. ಈ ಪಾರಣೆಯಿಂದ ನಿನ್ನ ಸಂಕಲ್ಪವು ಸಿದ್ಧಿಸುವುದು. ನಿನಗೆ ಪುತ್ರೀ ಪುತ್ರರು ಅನುಗ್ರಹಿಸಲ್ಪಟ್ಟಿದ್ದಾರೆ" ನಂತರ ಆ ವಂಧ್ಯಾಸ್ತ್ರೀ ಬ್ರಾಹ್ಮಣನಿಗೆ ದಾನಕೊಟ್ಟು, ಗುರುದತ್ತವಾದ ಆ ಎರಡೂ ಫಲಗಳನ್ನು ಭಕ್ಷಿಸಿದಳು. ಹಾಗೆ ವ್ರತ ಸಮಾಪ್ತಿ ಮಾಡಿದ ದಿನವೇ ಆ ವೃದ್ಧಸ್ತ್ರೀ ಋತುಮತಿಯಾಗಿ ವಯೋವೃದ್ಧೆಯಾದರೂ ಶ್ರೀಗುರುಪ್ರಸಾದದಿಂದ ರಜಸ್ವಲೆಯಾದಳು. ಮೂರುದಿನಗಳು ಮೌನದಿಂದಿದ್ದು, ಹವಿಷ್ಯಾನವನ್ನೇ ತಿನ್ನುತ್ತಾ, ಶ್ವೇತವಸ್ತ್ರವನ್ನು ಧರಿಸಿ, ಹಾಗೆ ಹೀಗೆ ನೋಡದೆ ಕಳೆದಳು. ಮೂರು ದಿನಗಳು ಹಾಗೆ ಕಳೆದು ಆ ಪತಿವ್ರತೆ ಶುಚಿ ಸ್ನಾನ ಮಾಡಿ ನಾಲ್ಕನೆಯ ದಿನ ಸಂತೋಷದಿಂದ ಶ್ರೀಗುರುವಿನ ದರ್ಶನ ಮಾಡಿದಳು. ಐದನೆಯ ದಿನ ಅವಳು ತನ್ನ ಗಂಡನೊಡನೆ ಬಂದು ಶ್ರೀಗುರುವನ್ನು ಅರ್ಚಿಸಿದಳು. ಅವಳನ್ನು ಶ್ರೀಗುರುವು ‘ಪುತ್ರವತೀ ಭವ’ ಎಂದು ಆಶೀರ್ವದಿಸಿದರು.

ಹೀಗೆ ಶ್ರೀಗುರುವಿನ ಆಶೀರ್ವಾದ ಪಡೆದು ಆಕೆ ತನ್ನ ಮನೆಯನ್ನು ಸೇರಿದಳು. ಐದನೆಯ ದಿನ ಆ ವೃದ್ಧಸ್ತ್ರೀ ತನ್ನ ಭರ್ತೃ ಸಮಾಗಮದಿಂದ ಕನ್ಯೆಯಾಗುವಂತಹ ಗರ್ಭವನ್ನು ಧರಿಸಿದಳು. ಆಕೆ ಗರ್ಭಿಣಿ ಎಂದು ತಿಳಿದ ಜನ ಆಶ್ಚರ್ಯ ಚಕಿತರಾದರು. "ಇದು ಎಂತಹ ಆಶ್ಚರ್ಯ? ಇದೊಂದು ಹೊಸ ವಿಚಿತ್ರ. ಅರವತ್ತು ವಯಸ್ಸಿನ ವೃದ್ಧೆ ಬಂಜೆಯಾದರೂ ಗರ್ಭಿಣಿಯಾಗಿದ್ದಾಳೆ. ಸೋಮನಾಥನು ಅದೃಷ್ಟವಂತನು" ಎಂದು ಹೇಳಿಕೊಂಡರು. ಆ ದ್ವಿಜನು ಸಂತುಷ್ಟನಾಗಿ ಶ್ರೀಗುರುವಿನ ಆಜ್ಞೆಯಂತೆ ಪುಂಸವನಾದಿ ಕ್ರಿಯೆಗಳನ್ನು ಮಾಡಿದನು. ನಂತರ ಎಂಟನೆಯ ತಿಂಗಳಲ್ಲಿ ಆಕೆಗೆ ಸೀಮಂತೋನ್ನಯನವನ್ನು ಮಾಡಿದನು. ಅಕೆ ಗುರುವಿನ ಅಜ್ಞೆಯಂತೆ ಬ್ರಾಹ್ಮಣರಿಗೆ ವಾಯನಾದಿಗಳನ್ನು ಕೊಟ್ಟಳು. ಕೂದಲು ಬೆಳ್ಳಗಾದ ಆ ವೃದ್ಧೆ ಉತ್ಸಾಹದಿಂದ ವಾಯನಾದಿಗಳನ್ನು ಕೊಡುವುದನ್ನು ನೋಡಿ ಕೆಲವರು ಆಶ್ಚರ್ಯಪಟ್ಟರು. ಮತ್ತೆ ಕೆಲವರು, "ಶ್ರೀ ನೃಸಿಂಹ ಸರಸ್ವತಿ ಪ್ರಸನ್ನನಾದರು. ಶ್ರೀಗುರುವನ್ನು ಅರ್ಚಿಸಿದರೆ ತಕ್ಷಣವೇ ವರ ಕೊಡುತ್ತಾರೆ. ಈ ನೃಸಿಂಹ ಸರಸ್ವತಿ ತ್ರಿಮೂರ್ತಿಗಳ ಅವತಾರವೇ! ತನ್ನ ಭಕ್ತರನ್ನು ರಕ್ಷಿಸಲು ಇವರು ಅವತರಿಸಿದರು" ಎಂದು ಶ್ರೀಗುರುವನ್ನು ಸ್ತುತಿಸಿದರು. ಆಕೆ ವಾಯನಗಳನ್ನು ಕೊಟ್ಟ ನಂತರ ಹೋಗಿ ಶ್ರೀಗುರುವಿಗೆ ನಮಸ್ಕರಿಸಿದಳು. ಶ್ರೀಗುರುವು ಆಶೀರ್ವದಿಸಿದರು. ಆ ವಿಪ್ರವನಿತೆ, " ಹೇ ಪ್ರಭೋ, ನಿಮಗೆ ಜಯವಾಗಲಿ. ಜಯವಾಗಲಿ. ನೀವೇ ಪರಮ ಪುರುಷನು. ಬ್ರಹ್ಮ ವಿಷ್ಣು ಮಹೇಶ್ವರಾತ್ಮಕರು. ಆರ್ಯಾ, ನಿಮ್ಮ ವಚನವೇ ನನ್ನನ್ನು ಅನುಗ್ರಹಿಸಿತು. ವರಗಳನ್ನು ಕೊಟ್ಟಿರಿ. ನನ್ನ ಶರೀರವು ಅಮೃತವಾಯಿತು. ವಿಶ್ವರಕ್ಷಣೆಗಾಗಿ, ಅಜನೂ, ಅವ್ಯಯನೂ ಆಗಿದ್ದರೂ ಮಹೀತಲದಲ್ಲಿ ಅವತರಿಸಿದ್ದೀರಿ. ನೀವೇ ತ್ರಿಮೂರ್ತಿಯು. ನಿಮ್ಮ ಮಹಿಮೆ ಅನಂತವಾದದ್ದು. ಹೇ ಸ್ವಾಮಿ, ದಯಾಸಮುದ್ರ, ಅನವದ್ಯ, ನಿಮಗೆ ನಮಸ್ಕಾರಗಳು" ಎಂದು ಸ್ತುತಿಸುತ್ತಾ ಆ ಬ್ರಾಹ್ಮಣಿ ಶ್ರೀಗುರು ಚರಣಗಳಲ್ಲಿ ವಂದಿಸಿದಳು. ಶ್ರೀಗುರುವಿನ ಆಜ್ಞೆ ಪಡೆದು ಪ್ರೀತಿಯಿಂದ ಕೂಡಿ ತನ್ನ ಮನೆಗೆ ಹಿಂತಿರುಗಿದಳು. ಒಂಭತ್ತು ತಿಂಗಳು ಕಳೆದ ನಂತರ ಆಕೆ ಒಂದು ಶುಭ ದಿನದಲ್ಲಿ ಪ್ರಸವಿಸಿದಳು. ಜ್ಯೋತಿಷ್ಕರು ಬಂದು ಆ ಮಗುವಿನ ಜಾತಕವನ್ನು ನೋಡಿದರು. "ಹೇ ವಿಪ್ರ, ಈ ಕನ್ಯೆ ಶುಭ ಲಕ್ಷಣಗಳಿಂದ ಕೂಡಿದ್ದಾಳೆ. ಆಕೆಗೆ ಎಂಟು ಗಂಡು ಮಕ್ಕಳಾಗುತ್ತಾರೆ. ಕುಲ ವೃದ್ಧಿಯಾಗುತ್ತದೆ" ಎಂದು ಜ್ಯೋತಿಷ್ಕರು ಹೇಳಿದರು. ಹೀಗೆ ಕನ್ಯಾ ಜಾತಕವನ್ನು ತಿಳಿದುಕೊಂಡು ಸೋಮನಾಥನು ಆನಂದ ಹೊಂದಿ ಬ್ರಾಹ್ಮಣರಿಗೆ ಮರ್ಯಾದೆ ಮಾಡಿದನು. ಪುರುಡು ದಿನಗಳು ಕಳೆದ ಮೇಲೆ ಆ ಸಾಧ್ವಿ ಗಂಗಾ ಸ್ನಾನ ಮಾಡಿ ಕುಮಾರಿಯನ್ನೂ, ಗಂಡನನ್ನೂ ಕರೆದು ಕೊಂಡು ಶ್ರೀಗುರುವಿನ ದರ್ಶನಕ್ಕೆ ಹೋದಳು. ಶ್ರೀಗುರುವಿನ ಪಾದ ಸನ್ನಿಧಿಯಲ್ಲಿ ಭಕ್ತಿಯಿಂದ ಮಗುವನ್ನು ಇಟ್ಟು, ಏಕಾಗ್ರ ಚಿತ್ತಳಾಗಿ ಶ್ರೀಗುರುವಿಗೆ ನಮಸ್ಕರಿಸಿದಳು. ಶ್ರೀಗುರುವು ಅವಳನ್ನು ನೋಡಿ, "ಹೇ ಸಾಧ್ವಿ, ಧನ್ಯಳಾದೆ. ಪುತ್ರಿವತಿಯಾದೆ. ಏಳು. ಏಳು" ಎಂದು ಸಂತೋಷದಿಂದ ಹೇಳಿದರು. ಆಕೆ ಎದ್ದು, "ಸ್ವಾಮಿ, ನನ್ನ ಹೊಟ್ಟೆಯಲ್ಲಿ ಕುಮಾರನು ಇಲ್ಲ. ನೀವು ಕೊಟ್ಟ ಮಾತನ್ನು ಮರೆಯಬೇಡಿ" ಎಂದು ಹೇಳಲು, ಶ್ರೀಗುರುವು ನಗುತ್ತಾ, "ಹೇ ಪ್ರಾಜ್ಞೆ, ಸಂಶಯ ಪಡಬೇಡ. ನಿನಗೆ ಪುತ್ರನಾಗುತ್ತಾನೆ" ಎಂದು ಹೇಳಿ, ಆ ಕನ್ಯೆಯನ್ನು ತೆಗೆದು ಕೊಂಡು ನಸು ನಗುತ್ತಾ ಆ ಕನ್ಯೆಯ ಭಾವಿ ಲಕ್ಷಣಗಳನ್ನು ಅಲ್ಲಿದ್ದವರಿಗೆ ಹೇಳಿದರು. "ಈಕೆಗೆ ಶತಾಯುಗಳಾದ ಪುತ್ರರು, ಪೌತ್ರರು ಆಗಿ ಶುಭವಾಗಿರುತ್ತಾರೆ. ಈಕೆ ಪೂರ್ಣ ಸೌಭಾಗ್ಯವತಿಯಾಗಿರುತ್ತಾಳೆ. ಈಕೆಯ ಗಂಡ ಚತುರ್ವೇದ ಪರಾಯಣನಾಗಿ ಜ್ಞಾನಿಯಾಗಿರುತ್ತಾನೆ. ಈಕೆ ಕುಲದಲ್ಲಿ ಅಷ್ಟೈಷ್ವರ್ಯಗಳನ್ನೂ ಹೊಂದಿ ವೃದ್ಧಿಯಾಗುತ್ತಾಳೆ. ಪತಿವ್ರತೆ, ಧರ್ಮರತಿ, ಪುಣ್ಯಶೀಲಳೂ ಆಗುತ್ತಾಳೆ. ದಕ್ಷಿಣದೇಶದ ರಾಜನೊಬ್ಬನು ಈಕೆಯ ದರ್ಶನಕ್ಕೆ ಬರುತ್ತಾನೆ. ಹೇ ದಂಪತಿಗಳಿರಾ, ನಿಮಗೆ ಪುತ್ರನು ತ್ವರೆಯಾಗಿ ಹುಟ್ಟುತ್ತಾನೆ" ಎಂದು ತಿಳಿಸಿದರು. ಆ ವಿಪ್ರವನಿತೆ ಶ್ರೀಗುರುವಿಗೆ ನಮಸ್ಕರಿಸಿ, "ಶ್ರೀಗುರು, ನನಗೆ ಪುತ್ರನನ್ನು ದಯಪಾಲಿಸು" ಎಂದು ಪ್ರಾರ್ಥಿಸಿದಳು. ಶ್ರೀಗುರುವು, "ಅಮ್ಮಾ, ನಿನಗೆ ಎಂತಹ ಮಗ ಬೇಕು? ಯೋಗ್ಯನಾದ ಅಲ್ಪಾಯುವು ಬೇಕೆ ಅಥವ ಶತಾಯುವಾದ ಮೂರ್ಖನು ಬೇಕೆ? ಎಂತಹವನು ಬೇಕು ಹೇಳು" ಎನ್ನಲು, ಅವಳು, "ಹೇ ಭಗವಾನ್, ನನ್ನ ಮಗ ವಿದ್ವಾಂಸ, ಯೋಗ್ಯನಾಗಿ ಐದು ಪುತ್ರರಿಗೆ ತಂದೆಯಾಗುವವನು ಆಗಬೇಕು" ಎಂದು ಕೋರಲು, ಶ್ರೀಗುರುವು ಹಾಗೇ ಆಗಲೆಂದು ನುಡಿದರು. ಆ ದಂಪತಿಗಳು ಸಂತೋಷದಿಂದ ಶ್ರೀಗುರುವನ್ನು ಸ್ತುತಿಸಿ ಮನೆಗೆ ಹೋದರು.

ಕಾಲಾನಂತರದಲ್ಲಿ ಅವಳಿಗೆ ಮಗನು ಹುಟ್ಟಿದನು. ಅವನು ವೇದಶಾಸ್ತ್ರ ಪರಾಯಣನಾಗಿ, ಐದು ಪುತ್ರರಿಗೆ ಜನಕನಾಗಿ, ಶ್ರೀಗುರುವಿನ ಅನುಗ್ರಹವನ್ನು ಪಡೆದನು. ಶ್ರೀಗುರುವು ಹೇಳಿದ ರೀತಿಯಲ್ಲಿ ಕನ್ಯೆಯೂ ಲಕ್ಷಣವತಿಯಾಗಿ, ಸರಸ್ವತಿ ಎಂದು ಪ್ರಸಿದ್ಧಿಯಾದಳು. ಆಕೆಯ ಗಂಡ ದೀಕ್ಷಿತನೂ ನಾಲ್ಕು ರಾಷ್ಟ್ರಗಳಲ್ಲಿ ಶ್ರೀಗುರುವಿನ ಅನುಗ್ರಹದಿಂದ ಪ್ರಸಿದ್ಧಿ ಪಡೆದನು. 

ನಾಮಧಾರಕ, ಹೀಗೆ ಅರವತ್ತು ವರ್ಷಗಳ ಬಂಜೆಗೆ ಮಗಳು, ಮಗ ಹುಟ್ಟಿದರು. ಶಿಷ್ಯ, ಗುರುವಿನ ಕೃಪೆ ಅಂತಹುದು. ಮನಸ್ಸಿನಲ್ಲಿ ಧೃಢನಿಶ್ಚಯವಿರುವವರಿಗೆ ಸಿದ್ಧಿ ಲಭಿಸುವುದು. ಆದ್ದರಿಂದ ಶ್ರೀಗುರುವನ್ನು ಸೇವಿಸಬೇಕು. ಶ್ರೀಗುರುವಿನ ಚರಿತ್ರೆಯು ಲೋಕಾಭೀಷ್ಟವನ್ನು ಕೊಡುವುದು. ಆದ್ದರಿಂದ ಶ್ರೀಗುರುವಿನ ಸೇವೆ ಮಾಡಬೇಕು" ಎಂದು ಸಿದ್ಧಮುನಿಯು ಬೋಧಿಸಿದರು. 

ಇಲ್ಲಿಗೆ ಮುವ್ವತ್ತೊಂಭತ್ತನೆಯ ಅಧ್ಯಾಯ ಮುಗಿಯಿತು. 


No comments:

Post a Comment