||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ||
||ಶ್ರೀ ಗುರುಭ್ಯೋನಮಃ||
ಶ್ರಿಗುರುಚರಿತೆಯನ್ನು ಕೇಳಿದ ನಾಮಧಾರಕ, "ನಿಮ್ಮ ಅನುಗ್ರಹದಿಂದ ನನಗೆ ದೇವತೆಗಳಿಗೂ ಅಲಭ್ಯವಾದ ಅಮೃತವು ಲಭಿಸಿತು. ಶ್ರೀಗುರುಚರಿತ್ರೆಯ ಶ್ರವಣದಿಂದ ನನ್ನ ಅಭೀಷ್ಟ ಸಿದ್ಧಿಯ ಜೊತೆಗೆ ಸುಖವೂ ದೊರಕಿತು. ನಂತರ ನಡೆದ ಗುರುಚರಿತ್ರೆಯೇನು ಎಂಬುದನ್ನು ಹೇಳಬೇಕೆಂದು ಕೋರುತ್ತೇನೆ" ಎಂದು ಪ್ರಾರ್ಥಿಸಿದನು. ಅದಕ್ಕೆ ಸಿದ್ಧಮುನಿಯು, "ಅಯ್ಯಾ, ನಾಮಧಾರಕ, ಪವಿತ್ರವಾದ ಶ್ರೀಗುರುಚರಿತ್ರೆಯಲ್ಲಿ ಒಂದು ವಿಚಿತ್ರವು ನಡೆಯಿತು. ನಂದಿಶರ್ಮ ಎನ್ನುವ ಬ್ರಾಹ್ಮಣನು ಶರೀರದಲ್ಲೆಲ್ಲಾ ಕುಷ್ಠುವ್ಯಾಧಿ ಆವರಿಸಿದ್ದುದರಿಂದ ತುಲಜಾಪುರಕ್ಕೆ ಹೋಗಿ ಅಲ್ಲಿ ಮೂರು ವರ್ಷಗಳು ದೇವಿಯನ್ನು ಪೂಜಿಸಿದನು. ದೇವಿ ಕನಸಿನಲ್ಲಿ ಕಾಣಿಸಿಕೊಂಡು ಚಂದಲಾ ಪರಮೇಶ್ವರಿಯ ಕಡೆಗೆ ಹೋಗು ಎಂದು ಆ ಬ್ರಾಹ್ಮಣನನ್ನು ಆದೇಶಿಸಿದಳು. ಜಗದಂಬೆ ಹಾಗೆ ಆಜ್ಞೆ ಮಾಡಿದ್ದರಿಂದ ಮನಸ್ಸಿಲ್ಲದಿದ್ದರೂ ಚಂದಲಾ ಪರಮೇಶ್ವರಿಯನ್ನು ಸೇರಿ ಅಲ್ಲಿ ಏಳು ತಿಂಗಳು ಉಪವಾಸ ಮಾಡುತ್ತಾ ಪೂಜಿಸಿದನು. ಸ್ವಪ್ನದಲ್ಲಿ ಆ ದೇವಿ ಕಾಣಿಸಿಕೊಂಡು ಅವನನ್ನು, "ಅಯ್ಯಾ, ನನ್ನ ಆಜ್ಞೆಯಂತೆ ಗಂಧರ್ವಪುರಕ್ಕೆ ಶೀಘ್ರವಾಗಿ ಹೋಗು. ಅಲ್ಲಿ ತ್ರಿಮೂರ್ತಿ ಸ್ವರೂಪನಾದ ಶ್ರೀ ನೃಸಿಂಹಸರಸ್ವತಿ ಇದ್ದಾನೆ. ಆತನು ಭಿಕ್ಷು ವೇಷವನ್ನು ಧರಿಸಿದ್ದಾನೆ. ದುಷ್ಟಬುದ್ಧಿಯಾದ ನಿನ್ನನ್ನು ಆತನು ಪವಿತ್ರನನ್ನಾಗಿ ಮಾಡುತ್ತಾನೆ" ಎಂದು ಅಜ್ಞಾಪಿಸಲು, ಅವನು ಎಚ್ಚರಗೊಂಡು, "ದೇವಿ, ಆರು ತಿಂಗಳು ನನ್ನನ್ನು ಇಷ್ಟು ಕಷ್ಟಕ್ಕೆ ಗುರಿಪಡಿಸಿದುದು ಏಕೆ? ಈ ವಿಷಯವನ್ನು ಮುಂಚೆಯೇ ಹೇಳಬಾರದಿತ್ತೆ? ಜಗನ್ಮಾತೆಯ ಅನುಜ್ಞೆಯಿಂದ ನಾನು ನಿನ್ನ ಸನ್ನಿಧಿಗೆ ಬಂದೆ. ನೀನು ದೇವತೆಯಾಗಿಯೂ ಒಬ್ಬ ಮನುಷ್ಯನ ದರ್ಶನ ಮಾಡಿಕೋ ಎಂದು ಪ್ರೋತ್ಸಾಹಿಸುವ ನಿನ್ನ ದೇವತ್ವವು ಈಗ ನನಗೆ ತಿಳಿದು ಬಂತು. ನಾನು ಏಳು ತಿಂಗಳು ಉಪವಾಸ ಮಾಡಿದೆ. ಈ ಸಂಗತಿ ನನಗೆ ಮುಂಚೆಯೇ ಹೇಳಿದ್ದರೆ ನನಗೀಕಷ್ಟ ತಪ್ಪುತ್ತಿತ್ತಲ್ಲ? ನೀನು ನನ್ನ ಆಸೆಯನ್ನು ಹೀಗೆ ತರಿದುಹಾಕಿದೆ" ಎಂದು ಅವನು ವಿಲಪಿಸಿದನು. ಹೀಗೆ ದುಃಖ ಪಡುತ್ತಲೇ ಅವನು ಪ್ರಾಯೋಪವೇಶ ಪ್ರಾರಂಭಿಸಿದನು. ದೇವಿ ಮತ್ತೆ ಕನಸಿನಲ್ಲಿ ಕಾಣಿಸಿಕೊಂಡು, "ಅಯ್ಯಾ ಬ್ರಾಹ್ಮಣ, ಗಂಧರ್ವನಗರಕ್ಕೆ ಹೋಗು" ಎಂದು ಆದೇಶಿಸಿ, ತನ್ನ ಭಕ್ತರಿಗೆ ‘ಆ ಬ್ರಾಹ್ಮಣನನ್ನು ಇಲ್ಲಿಂದ ಹೊರದೂಡಿ’ ಎಂದು ಆಜ್ಞಾಪಿಸಿದಳು. ಆ ಭಕ್ತರು ಅವನನ್ನು ಹೊರದೂಡುತ್ತೇವೆಂದು ಹೇಳಿದರು. ಆ ಬ್ರಾಹ್ಮಣನು ಅಂಬಿಕೆಯನ್ನು ಪೂಜಿಸಿ ಅಲ್ಲಿಂದ ಹೊರಟನು.
ಅವನು ಗಂಧರ್ವಪುರವನ್ನು ಸೇರಿ ಅಲ್ಲಿನ ಸೇವಕರನ್ನು ‘ಯತಿಗಳು ಎಲ್ಲಿ’ ಎಂದು ಕೇಳಿದನು. ಅವರು, "ಸಂಗಮದಲ್ಲಿದ್ದಾರೆ. ನೆನ್ನೆ ಶಿವರಾತ್ರಿಯಾದದ್ದರಿಂದ ಉಪವಾಸವಿದ್ದರು. ಪಾರಣೆ ಮಾಡಲು ತ್ವರೆಯಾಗಿ ಬರುತ್ತಾರೆ. ಸಂಶಯವಿಲ್ಲ" ಎಂದು ಹೇಳಿದರು. ಅಷ್ಟರಲ್ಲೇ ಶ್ರೀಗುರುವೂ ಬಂದರು. ಅವನನ್ನು ಗ್ರಾಮವಾಸಿಗಳು ದೂರದಲ್ಲೇ ಇರು ಎಂದು ಹೇಳಿದ್ದರಿಂದ ಅವನು ದೂರದಲ್ಲೇ ನಿಂತನು. ಶ್ರೀಗುರುವು ಮಠವನ್ನು ಸೇರಿದರು. ಭಕ್ತರು ಶ್ರೀಗುರುವಿಗೆ, "ಒಬ್ಬ ವಿಪ್ರನು ಬಂದಿದ್ದಾನೆ. ಆತನ ಸರ್ವಾವಯವಗಳಲ್ಲೂ ಶ್ವೇತ ಕುಷ್ಠುರೋಗದಿಂದ ಬಾಧೆಪಡುತ್ತಾ, ನಿಮ್ಮ ದರ್ಶನಕ್ಕಾಗಿ ಬಂದಿದ್ದಾನೆ" ಎಂದು ತಿಳಿಸಿದರು. ಅವರ ಮಾತನ್ನು ಕೇಳಿದ ಶ್ರೀಗುರುವು, "ಅವನನ್ನು ಬಲ್ಲೆ. ಅವನು ಮನಸ್ಸಿನಲ್ಲಿ ಸಂಶಯವಿಟ್ಟುಕೊಂಡು ಬಂದಿದ್ದಾನೆ. ಮಠದೊಳಕ್ಕೆ ಅವನನ್ನು ಕರೆಯಿರಿ" ಎಂದು ಹೇಳಿದರು. ಭಕ್ತರು ಹೋಗಿ ಅವನನ್ನು ಕರೆಯಲು ಅವನು ಒಳಕ್ಕೆ ಬಂದು ದೂರದಿಂದಲೇ ಶ್ರೀಗುರುವನ್ನು ನೋಡಿ ಸಾಷ್ಟಾಂಗ ಪ್ರಣಾಮ ಮಾಡುತ್ತ, ಸಂತೋಷಗೊಂಡು ಶ್ರೀಗುರುವನ್ನು ಸಮೀಪಿಸಿದನು. ಶ್ರೀಗುರುವು ಅವನನ್ನು ನೋಡಿ, "ಅಯ್ಯಾ, ನೀನು ಮೊದಲು ದೇವತಾ ಸನ್ನಿಧಿಗೆ ಹೋದೆ. ಮತ್ತೆ ಮಾನವನಾದ ನನ್ನ ಬಳಿಗೆ ಸಂದೇಹ ಪಡುತ್ತಾ ಏಕೆ ಬಂದೆ?" ಎಂದು ಕೇಳಿದರು. ಅವನು ‘ನನ್ನ ಹೃದಯಲ್ಲಿದ್ದ ಭಾವನೆಯು ಅವರಿಗೆ ತಿಳಿದುಹೋಯಿತು. ಅದರಿಂದ ಈತನು ಪರಮಾತ್ಮನು’ ಎಂದು ತಿಳಿದುಕೊಂಡು, ಕ್ಷಮಾಪಣೆ ಕೇಳಿಕೊಳ್ಳುತ್ತಾ, "ಸ್ವಾಮಿ, ನಾನು ಅಜ್ಞಾನಾಂಧಕಾರದಲ್ಲಿದ್ದೆ. ಸ್ವಾಮಿಯ ದರ್ಶನದಿಂದ ಶುದ್ದನಾದೆ. ನೀವಲ್ಲದೆ ಇತರ ಪರಬ್ರಹ್ಮ ನನಗೆ ತಿಳಿಯದು. ನಾನು ಅಜ್ಞಾನದಿಂದ ಸುತ್ತಲ್ಪಟ್ಟಿರುವ ಮಂದಮತಿಯು. ಇಂದು ನನಗೆ ಸುದಿನವು. ನಿಮ್ಮ ದರ್ಶನದಿಂದ ಧನ್ಯನಾದೆ. ಪಾವನನಾದೆ. ಹೇ ಶ್ರೀ ನೃಸಿಂಹಸರಸ್ವತಿ, ನಿನ್ನ ಬಿರುದಾವಳಿ ಪ್ರಪಂಚ ವ್ಯಾಪ್ತವಾಗಿದೆ. ನನ್ನ ದುಷ್ಕರ್ಮಗಳೆಲ್ಲ ನಾಶವಾದವು. ನಿನ್ನ ಸ್ಥಾನವೇ ಪರಬ್ರಹ್ಮ ಪದವು ಎಂದು ತಿಳಿಯಿತು. ಹೇ ಯತೀಶ್ವರ, ನಿನ್ನ ಕೃಪೆಯಿಂದಲೇ ನನ್ನ ಮನೋರಥವು ನೆರವೇರುತ್ತದೆ. ಮಾನವ ದೇಹದಲ್ಲಿ ಅವತರಿಸಿ ನೀವು ಭಕ್ತಜನರ ಕಾಮಧೇನುವಾಗಿದ್ದೀರಿ. ನೀವು ನಿಮ್ಮ ಸೇವಕರನ್ನು ರಕ್ಷಿಸಲು ಭೂತಲದಲ್ಲಿ ಅವತರಿಸಿದ್ದೀರಿ. ಸ್ವಾಮಿ, ವಿವಾಹವಾದಾಗಿನಿಂದಲೂ ನನ್ನ ಶರೀರವೆಲ್ಲವೂ ಕುಷ್ಠವು ವ್ಯಾಪಿಸಲು ನನ್ನ ಹೆಂಡತಿ ತವರು ಮನೆಗೆ ಹೊರಟು ಹೋದಳು. ಹೇ ಪ್ರಭು, ನನ್ನ ತಾಯಿ ತಂದೆಯರೂ ನನ್ನನ್ನು ದೂರಮಾಡಿದರು. ಜಗನ್ಮಾತೆಯ ಆಲಯದಲ್ಲಿ ಉಪವಾಸಗಳು ಮಾಡಿದೆ. ಆ ದೇವಿ ‘ನಿನ್ನ ಪಾಪಗಳು ಇಲ್ಲಿ ನಾಶವಾಗುವುದಿಲ್ಲ. ನೀನು ಚಂದಲೇಶ್ವರಿಯ ಕಡೆಗೆ ಹೋಗು. ಪಾಪ ರಹಿತನಾಗುತ್ತೀಯೆ’ ಎಂದು ಆಜ್ಞಾಪಿಸಿದಳು. ಅದರಂತೆ ನಾನು ಅಲ್ಲಿಗೆ ಹೋಗಿ ಕಷ್ಟ ಪಟ್ಟೆ. ಆಕೆ ನನ್ನನ್ನು ನಿಮ್ಮಲ್ಲಿಗೆ ಹೋಗು ಎಂದು ಆದೇಶಿಸಿದಳು. ಹೇ ಕೃಪಾನಿಧಿ, ದೇವತೆಗಳಿಗೇ ಆಗದು ಎಂದದ್ದನ್ನು ಮಾನವ ಮಾತ್ರನಾದವನು ಏನು ಮಾಡಬಲ್ಲ ಎಂದು ಸಂದೇಹ ಪಟ್ಟೆ. ನಿಮ್ಮ ಶರಣು ಬಂದಿದ್ದೇನೆ. ನಾನು ದೊಡ್ಡ ಪಾಪಿ. ಅಂಗಹೀನನಾದ ಕುಷ್ಠು ರೋಗಿಗೆ ಕರ್ತವ್ಯವೇನು? ಮರಣಿಸುವುದೇ ಅಲ್ಲವೇ? ಈಗ ನನ್ನದೊಂದೇ ಪ್ರಾರ್ಥನೆ. ಈ ಶರೀರದ ಮೇಲೆ ಆಸೆಯಿಲ್ಲ. ನಿಮ್ಮ ಎದುರಿಗೇ ಪ್ರಾಣ ಬಿಡುತ್ತೇನೆ. ನೀವು ಆರ್ತರನ್ನು ಕಾಪಾಡುವವರೆಂದು ನಿಮ್ಮ ಬಳಿಗೆ ಬಂದಿದ್ದೇನೆ. ನಿಮ್ಮ ಇಷ್ಟದಂತೆ ಮಾಡಿ" ಎಂದು ಪ್ರಾರ್ಥಿಸಿದನು.
ಶ್ರೀಗುರುವು ಕರುಣೆಯಿಂದ ನಗುತ್ತಾ ಸೋಮನಾಥನನ್ನು ಕರೆದು, "ಇವನನ್ನು ಸಂಗಮಕ್ಕೆ ಕರೆದುಕೊಂಡು ಹೋಗು. ಅಲ್ಲಿ ತೀರ್ಥದಲ್ಲಿ ಇವನಿಂದ ಸಂಕಲ್ಪ ಮಾಡಿಸಿ ಸ್ನಾನ ಮಾಡಿಸು. ಆ ನಂತರ ಅಶ್ವತ್ಥವೃಕ್ಷವನ್ನು ಅರ್ಚಿಸಿ, ಇವನ ಒದ್ದೆ ಬಟ್ಟೆಗಳನ್ನು ದೂರವಾಗಿ ಎಸೆದು, ಇವನಿಗೆ ಹೊಸ ಬಟ್ಟೆಗಳನ್ನು ಕೊಟ್ಟು ಇವನನ್ನು ಕರೆದುಕೊಂಡು ಬಾ" ಎಂದು ಆಣತಿ ಮಾಡಿದರು. ಸ್ನಾನ ಮಾತ್ರದಿಂದಲೇ ಅವನ ದೇಹವು ಪರಿಶುದ್ಧವಾಯಿತು. ಅವನು ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಿದ ಮಾತ್ರದಿಂದಲೇ ಅವನು ಸುವರ್ಣಕಾಂತಿ ಶರೀರನಾದನು. ಅವನ ಹಳೆಯ ಬಟ್ಟೆಗಳನ್ನು ಹಾಕಿದ ಸ್ಥಳವೆಲ್ಲವೂ ಬಂಜರು ಭೂಮಿಯಾಯಿತು. ಸೋಮನಾಥನು ಅವನನ್ನು ಹಿಂದಿಟ್ಟು ಕೊಂಡು ಮಠಕ್ಕೆ ಹಿಂತಿರುಗಿ ಅವನನ್ನು ಶ್ರೀಗುರುವಿನ ಪಾದಗಳಲ್ಲಿ ನಿಲ್ಲಿಸಿದನು. ಅಲ್ಲಿದ್ದವರೆಲ್ಲ ಅವನನ್ನು ನೋಡಿ ಆಶ್ಚರ್ಯಪಟ್ಟರು. ನಂದಿಶರ್ಮ ಎನ್ನುವ ಆ ಬ್ರಾಹ್ಮಣನು ಅತ್ಯಂತ ಸಂತೋಷದಿಂದ ಶ್ರೀಗುರು ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ‘ಧನ್ಯನಾದೆ’ ಎಂದು ಹೇಳಿದನು. "ಅಯ್ಯಾ, ನಿನ್ನ ಕೋರಿಕೆ ಸಿದ್ಧಿಸಿತೋ ಇಲ್ಲವೋ ಹೇಳು. ನಿನ್ನ ಶರೀರವನ್ನೆಲ್ಲ ಇನ್ನೊಂದುಸಲ ಚೆನ್ನಾಗಿ ಪರೀಕ್ಷಿಸಿ ನೋಡಿಕೊಂಡು ಹೇಳು" ಎಂದು ಶ್ರೀಗುರುವು ಹೇಳಿದರು. ಅವನು ಮತ್ತೊಮ್ಮೆ ತನ್ನ ಶರೀರವನ್ನೆಲ್ಲಾ ಹುಡುಕಿ ನೋಡಿ, ಭಯಪಟ್ಟು, "ಸ್ವಾಮಿ, ನಿಮ್ಮ ಕೃಪಾ ದೃಷ್ಟಿಯಿಂದ ಕುಷ್ಠವೆಲ್ಲ ಹೋಯಿತು. ಆದರೆ ಜಂಘದಲ್ಲಿ ಮಾತ್ರ ಹೇಗೆ ಮಿಕ್ಕಿದೆಯೋ ತಿಳಿಯುತ್ತಿಲ್ಲ. ಪರಮಾತ್ಮ, ನನ್ನಲ್ಲಿ ದಯೆತೋರು!" ಎಂದು ಕಳಕಳಿಯಿಂದ ಬೇಡಿಕೊಂಡನು.
"ಮಾನವನು ನನಗೇನು ಮಾಡಬಲ್ಲನು ಎಂದು ನಿನ್ನ ಸಂಶಯವು. ಅದರಿಂದಲೇ ಆ ಸ್ವಲ್ಪ ಜಾಗದಲ್ಲಿ ನಿನ್ನ ಕುಷ್ಠವು ಮಿಕ್ಕಿದೆ. ನನ್ನನ್ನು ಕವನಗಳಿಂದ ಸ್ತುತಿಸು. ನೀನು ಸ್ತುತಿಯನ್ನು ಸದಾ ಮಾಡುತ್ತಿರಬೇಕು. ಹಾಗಾದರೆ ನಿನಗೆ ಸಂಪೂರ್ಣ ಪರಿಶುದ್ಧಿಯಾಗುತ್ತದೆ" ಎಂದು ಶ್ರೀಗುರುವು ಆಣತಿ ಮಾಡಿದನು. ಅದಕ್ಕೆ ನಂದಿಶರ್ಮ, "ಸ್ವಾಮಿ ನಾನು ಮಂದಬುದ್ಧಿಯವನು. ಅಕ್ಷರಗಳನ್ನು ಕಲಿಯಲಿಲ್ಲ. ನಾನು ಕಾವ್ಯಕರ್ತನು ಹೇಗಾಗಬಲ್ಲೆ?" ಎಂದು ಹೇಳುತ್ತಾ ಶ್ರೀಗುರುವಿನ ಪಾದಗಳನ್ನು ಹಿಡಿದನು. ಆಗ ಶ್ರೀಗುರುವು ಅವನ ನಾಲಗೆಯ ಮೇಲೆ ಭಸ್ಮವನ್ನು ಹಾಕಿದರು. ತಕ್ಷಣವೇ ನಂದಿಶರ್ಮನು ಜ್ಞಾನವಂತನಾದನು. ಶ್ರೀಗುರುವಿನ ಪಾದಗಳಲ್ಲಿ ಶಿರವಿಟ್ಟು ಶ್ರೀಗುರುವನ್ನು ಸ್ತುತಿಸಲು ಆರಂಬಿಸಿದನು.
"ಸ್ವಾಮಿ ಅಜ್ಞಾನದಿಂದ ಇಲ್ಲಿಯವರೆಗೂ ನಿಮ್ಮನ್ನು ಸೇವಿಸಲಾರದೆ ಹೋದೆ. ಈ ಸಂಸಾರ ಚಕ್ರವನ್ನು ಸುತ್ತುತ್ತಾ ನಾನಾ ಯೋನಿಗಳಲ್ಲಿ ಜನಿಸಿ ಕರ್ಮಗಳನ್ನು ಅನುಭವಿಸಿದೆ. ಇಲ್ಲಿಯವರೆಗೂ ನಿಮ್ಮ ಪಾದಪದ್ಮಗಳು ನೆನಪಿಗೆ ಬರಲಿಲ್ಲ. ನನ್ನ ಪೂರ್ವ ಜನ್ಮದಲ್ಲಿ ನಿಮ್ಮ ಶ್ರೀಚರಣಗಳು ನನ್ನ ಸ್ಮರಣೆಗೆ ಬರಲಿಲ್ಲ. ಮಾನವರಲ್ಲಿಯೂ ನೀಚ ಜನ್ಮದ ಸಮಯದಲ್ಲೂ ನಿಮ್ಮ ತಾರಕಪಾದಗಳು ನನಗೆ ಸ್ಮರಣೆಗೆ ಬರಲಿಲ್ಲ. ಶ್ರೀಗುರು ಬ್ರಾಹ್ಮಣಜನ್ಮ ಶ್ರೇಷ್ಠವಾದುದು. ಅಂತಹ ಈ ಜನ್ಮದಲ್ಲೂ ಕೂಡಾ ನಿಮ್ಮ ತಾರಕವಾದ ಪಾದಗಳನ್ನು ನಾನು ಮೂಢತ್ವದಿಂದಾಗಿ ಸೇವಿಸಲಿಲ್ಲ. ಗರ್ಭಾವಾಸದಲ್ಲಿ ತಂದೆತಾಯಿಯರ ರಕ್ತ ತೇಜಸ್ಸುಗಳು ಏಕವಾಗಿ ಕುಕ್ಷಿಯಲ್ಲಿ ಐದು ದಿನಗಳಿಗೆ ಬುದ್ಬುದದಂತಾಗುವುದು. ಒಂದು ಪಕ್ಷದೊಳಗೆ ಸುಸ್ಥಿರನಾಗಿ ಮುದ್ದೆಯಾಗಿ ಬದಲಾಗಿ ಏಕರಸವಾಗಿ ತತ್ತ್ವಹೀನವಾದ ತಾಯಿಯ ಗರ್ಭದಲ್ಲಿ ಮೃತ ಸಮಾನನಾಗಿ ಬಿದ್ದಿದ್ದೆ. ಒಂದು ಮಾಸದಲ್ಲಿ ಪಿಂಡಕಾರನಾಗಿ, ಎರಡು ಮಾಸಗಳಲ್ಲಿ ತಲೆ ಮುಂತಾದುವು ಏರ್ಪಡಲು, ಮೂರನೆಯ ಮಾಸದಲ್ಲಿ ಅವಯವಗಳು ಏರ್ಪಟ್ಟು, ನಾಲ್ಕನೆಯ ಮಾಸದಲ್ಲಿ ನವದ್ವಾರಗಳು ಉಂಟಾಗಿ, ಐದನೆಯ ಮಾಸದಲ್ಲಿ ಪಂಚ ಭೂತಗಳು ಏಕೀಭೂತವಾಗಿ ಪ್ರಾಣಗಳು ಬರಲು ಆ ಸಮಯದಲ್ಲಿ ನನಗೆ ನಿಮ್ಮ ತಾರಕಪಾದಗಳ ಸ್ಮರಣೆ ಹೇಗಿರಬಲ್ಲದು? ಐದನೆಯ ಮಾಸದಲ್ಲೇ ಚರ್ಮ, ಕೂದಲು, ಉಗುರುಗಳು ಏರ್ಪಟ್ಟವು. ಆರನೆಯ ಮಾಸದಲ್ಲಿ ಶ್ವಾಸ ಕ್ರಿಯೆ ನಡೆಯಿತು. ಏಳನೆಯ ಮಾಸದಲ್ಲಿ ಇಂದ್ರಿಯಗಳು, ಎಂಟನೆಯ ಮಾಸದಲ್ಲಿ ಚಿತ್ತ ಏರ್ಪಡುವ ಕಾಲದಲ್ಲಿ ನಿಮ್ಮ ಸ್ಮರಣೆ ಹೇಗಿರಬಲ್ಲುದು? ಒಂಬತ್ತು ಮಾಸಗಳು ಮರಣ ಸಮಾನವಾದ ತಾಯಿಯ ಗರ್ಭದಲ್ಲಿ ಅತಿ ಕಷ್ಟದಿಂದ ನಾನು ಜೀವಿಸಿದ್ದೆ. ಆ ಕಷ್ಟ ಕಾಲದಲ್ಲಿ ನನಗೆ ನಿಮ್ಮ ಸ್ಮರಣೆ ಹೇಗಿರಬಲ್ಲುದು? ತಾಯಿ ಖಾರ, ಬಿಸಿ ಪದಾರ್ಥಗಳನ್ನು ತಿಂದಾಗ ನನಗೆ ಸಹಿಸಲಾರದ ವೇದನೆ, ದುಃಖಗಳಾಗುತ್ತಿದ್ದ ಕಾಲದಲ್ಲಿ ನನಗೆ ನಿಮ್ಮ ಸ್ಮರಣೆ ಹೇಗಾಗಬಲ್ಲುದು? ಪಂಜರದಲ್ಲಿ ಪಕ್ಷಿಯಂತೆ ಗರ್ಭವಾಸದಲ್ಲಿ ನಿಮ್ಮ ಪಾದಗಳನ್ನು ನೋಡಲಿಲ್ಲ. ಆಗ ಹೇಗೆ ನಿಮ್ಮ ಸ್ಮರಣೆ ಇರುತ್ತದೆ? ಯೋನಿ ದ್ವಾರಾ ಹೊರಗೆ ಬಿದ್ದ ಕಷ್ಟ ಕಾಲದಲ್ಲೂ ನಿಮ್ಮ ಸ್ಮರಣೆ ಹೇಗಿರಬಲ್ಲುದು? ನೂರು ವರ್ಷಗಳ ಆಯುರ್ದಾಯವು ಲಿಖಿತವಾಗಿದ್ದರೂ ಅದರಲ್ಲಿ ಅರ್ಧದಷ್ಟು ರಾತ್ರಿಯಾಗಿ ವ್ಯರ್ಥವಾಯಿತು. ಉಳಿದ ಆಯುಸ್ಸಿನಲ್ಲಿ ಮೂರುಭಾಗ ಬಾಲ್ಯ ಯೌವನ ವಾರ್ಧಕ್ಯಗಳೆಂದು ಹೋಯಿತು. ಆ ಕಾಲವೂ ವ್ಯರ್ಥವಾಯಿತು. ಶೈಶವದಲ್ಲಿ ಕಷ್ಟಗಳನ್ನನುಭವಿಸಿದೆ. ಶ್ರೀಗುರು, ಆ ಸಮಯದಲ್ಲಿ ನಿತ್ಯವೂ ಮಂಚದಮೇಲೆ ಬಿದ್ದಿದ್ದುದರಿಂದ ಮಹಾ ಕಷ್ಟವಾಯಿತು. ಬಾಲ್ಯ ಕಷ್ಟಗಳನ್ನು ಈಗ ನೆನಸಿಕೊಂಡರೆ ಅತಿ ದುಃಖವಾಗುತ್ತದೆ. ಮಲಮೂತ್ರಗಳಿದ್ದ ಜಾಗದಲ್ಲೇ ನಿರಂತರವಾಗಿ ನಾನಿರಬೇಕಾಗುತ್ತಿತ್ತು. ಅಜ್ಞಾನದಿಂದ ನನ್ನ ಮಲವನ್ನು ನಾನೇ ತಿನ್ನುತ್ತಿದ್ದೆ. ಹಸಿವೆಯಿಂದ ಅಳುತ್ತಿದ್ದಾಗ ನನ್ನ ತಾಯಿ ನನ್ನ ಮುಖದಲ್ಲಿ ಬೆರಳಿಟ್ಟು ತಿನ್ನಿಸುತ್ತಾ, ಬಲಾತ್ಕಾರವಾಗಿ ಬೇವಿನ ಬೀಜಗಳಂತಹ ಔಷಧಗಳನ್ನು ನುಂಗಿಸುತ್ತಿದ್ದಳು. ನನ್ನ ಹಸಿವನ್ನು ಅರಿಯಲಾರದೆ ನನ್ನ ತಾಯಿ ನನ್ನನ್ನು ತೊಟ್ಟಿಲಲ್ಲಿ ಹಾಕಿ ನಿದ್ರೆ ಮಾಡು ಎನ್ನುತ್ತಾ ನನ್ನ ಬಾಧೆಯನ್ನು ಗುರುತಿಸುತ್ತಿರಲಿಲ್ಲ. ಅಯ್ಯೋ, ಹಸಿವಿಗೆ ಸ್ವಲ್ಪ ಗಂಜಿ ಕುಡಿಸಿ, ದೃಷ್ಟಿ ತಗುಲಿದೆಯೇನೋ ಎಂದು ಮಂತ್ರದಿಂದ ರಕ್ಷೆ ಕಟ್ಟಲು ಪ್ರಯತ್ನಿಸುತ್ತಿದ್ದಳೇ ಹೊರತು ನನ್ನ ಅವಶ್ಯಕತೆಗಳೇನು ಎಂದು ಗುರುತಿಸಲಿಲ್ಲ. ಮಂಚದ ಮೇಲೆ ಚೇಳು ಕಡಿದು ಬಾಧೆಪಡುತ್ತಿದ್ದರೂ ಅಳುವುದಕ್ಕೆ ಕಾರಣವೇನು ತಿಳಿದುಕೊಳ್ಳದೆ ತೊಟ್ಟಿಲಲ್ಲಿಟ್ಟು ತೂಗುತ್ತಿದ್ದಳು. ಹಾಲು ಕುಡಿಯದೆ ಇನ್ನೂ ಅಳುತ್ತಿದ್ದರೂ ಮತ್ತೆ ಚೇಳಿದ್ದ ಕಡೆಯೇ ನನ್ನನ್ನು ಮಲಗಿಸುತ್ತಿದ್ದಳು. ಆ ಕಷ್ಟ ಪ್ರಾಣಾಂತಿಕವಾಗಿರುತ್ತಿತ್ತು. ತಾಯಿ ಖಾರ ಮುಂತಾದುವನ್ನು ತಿಂದು ಸ್ತನ್ಯ ಕುಡಿಸಿದಾಗ ಆಮ್ಲಾದಿಗಳಿಂದ ಕೂಡಿದ ಆ ಹಾಲಿನಿಂದ ಶ್ವಾಸಕೋಶ ರೋಗಗಳು ಪೀಡಿಸುತ್ತಿದ್ದವು. ಔಷಧಗಳಿಂದ ನೇತ್ರ ರೋಗ ಉಂಟಾಗುತ್ತಿತ್ತು. ಕಾಡಿಗೆ ಇಟ್ಟರೆ ಅದರಿಂದ ಕಣ್ಣುರೋಗ ವಾಗುತ್ತಿತ್ತು. ಹೀಗೆ ಬಾಲ್ಯದಲ್ಲಿ ಅತಿಕಷ್ಟಗಳು ಅಜ್ಞಾನದಿಂದ ಉಂಟಾಗಲು ಪರಾಧೀನತೆಯಿಂದ ಮುಂದಿನ ಜೀವನದಲ್ಲೂ, ಆಟಪಾಟಗಳಿಂದಲೂ ಆಯುರ್ದಾಯವು ಕ್ಷೀಣಿಸಿತು.
ಆ ನಂತರ ಯೌವನವು ಬಂದಾಗ ನಾನು ಅಬಲೆಯರು ಎನ್ನುವ ಅಗ್ನಿಯಲ್ಲಿ ಬಿದ್ದಿದ್ದೆ. ಕೊನೆಗೆ ತಾಯಿತಂದೆ ಗುರುವನ್ನು ಕೂಡಾ ಗುರುತಿಸದೆ ದೇವಮಾಯೆಯಂತಹ ಸ್ತ್ರೀಯನ್ನು, ಭೋಗಲಾಲಸೆಯಿಂದ ಪಾಪಿಯಾಗಿ, ಕಾರ್ಯಾಕಾರ್ಯಾಗಳನ್ನು ತಿಳಿಯಲಾರದೆ, ಪರಸ್ತ್ರೀಯರನ್ನು ಕೋರುತ್ತಿದ್ದೆ. ಬ್ರಾಹ್ಮಣರನ್ನು ನಿಂದಿಸಿದೆ. ವೃದ್ಧರ ದೂಷಣೆ ಮಾಡಿದೆ. ಅವರ ಸೇವೆ ಮಾಡಲಿಲ್ಲ. ಯೌವನದಲ್ಲಿ ಮದೋನ್ಮತ್ತನಾಗಿ ನಿಮ್ಮ ಪಾದಗಳನ್ನು ಸ್ಮರಿಸಲಿಲ್ಲ. ಇಂದ್ರಿಯ ಪರವಶನಾಗಿ ಅನೇಕ ಜಾತಿಯ ಸ್ತ್ರೀಯರನ್ನು ಅನುಭವಿಸಿದೆ. ಪರರ ಸೊತ್ತನ್ನು ಬಲಾತ್ಕಾರವಾಗಿ ಅಪಹರಿಸಿದೆ. ಸಾಧುಗಳನ್ನು, ಹಿರಿಯರನ್ನು ನಿಂದಿಸಿದೆ. ಯಾರನ್ನೂ ಲೆಕ್ಕಿಸಲಿಲ್ಲ. ಹೀಗೆ ಪರಬ್ರಹ್ಮಾನುಸಂಧಾನವನ್ನು ಬಿಟ್ಟು ಸ್ಮೃತಿ ಕಳೆದುಕೊಂಡು ಮನ್ಮಥನೆನ್ನುವ ಅಗ್ನಿಹೋತ್ರದಲ್ಲಿ ಬಿದ್ದಿದ್ದೆ. ನಿಮ್ಮ ಚರಣಗಳನ್ನು ಸ್ಮರಿಸಲಿಲ್ಲ. ಅಷ್ಟರಲ್ಲಿ ವಾರ್ಧಕ್ಯ ಬಂದು ಮೇಲೆಬಿತ್ತು. ಮುದಿತನವೇ ಪರಾಧೀನತೆಯನ್ನು ಉಂಟುಮಾಡುತ್ತದೆ. ಆದರೂ ಹೆಂಡತಿ ಮಕ್ಕಳು ಬಿಟ್ಟುಹೋದರು. ಕಫದ ಉಲ್ಬಣದಿಂದ ನನಗೆ ಶ್ವಾಸ ನಿಃಶ್ವಾಸಗಳು ಕಷ್ಟವಾಗಿ ನಾನು ರೋಗಿಯಾದೆ. ಇಂದ್ರಿಯಗಳು ಸ್ವಾಧೀನ ತಪ್ಪಿದವು. ಕೂದಲು ಬೆಳ್ಳಗಾಯಿತು. ಹಲ್ಲುಗಳು ಉದುರಿ ಹೋದವು. ದೃಷ್ಟಿ ಮಂದವಾಯಿತು. ಹಠಾತ್ತಾಗಿ ಕಿವುಡು ಬಂತು. ರೋಗಗಳೆಲ್ಲವೂ ಶತ್ರುಗಳಂತೆ ಒಂದೇ ಸಲ ಮುತ್ತಿಕೊಂಡವು. ಸ್ವಾಮಿ, ಗುರುದೇವ ನಿಮ್ಮ ಸೇವೆ ಮಾಡಿಕೊಳ್ಳಲಿಲ್ಲ. ನನ್ನನ್ನು ಉದ್ಧರಿಸು ತಂದೆ. ನಾನು ಮಂದ ಬುದ್ಧಿಯವನಾದರೂ ನಿನ್ನ ಶರಣು ಬೇಡಿ ಬಂದಿದ್ದೇನೆ. ಜಗತ್ತನ್ನು ರಕ್ಷಿಸಲು ಬಂದ ನಾರಾಯಣನೇ ನೀವು ಹೀಗೆ ಅವತರಿಸಿದಿರಿ. ಹೇ ಈಶ್ವರ, ನೀವೇ ವಿಶ್ವವನ್ನೆಲ್ಲಾ ತರಿಸುವಂತಹರು. ಮಾನವ ವೇಷ ಧರಿಸಿದ ದೇವರೇ ನೀವು. ಹೇ ಗುರು, ನೀವು ಏಕರೂಪರಾಗಿ ಅವತರಿಸಿದ ತ್ರಿಮೂರ್ತಿ ಸ್ವರೂಪರಾದ ಆ ಪರಬ್ರಹ್ಮನೇ! ನಿಮ್ಮ ಕುಮಾರ ನಾನು. ಈ ಸಂಸಾರದಿಂದ ರಕ್ಷಿಸು" ಈ ರೀತಿಯಲ್ಲಿ ಸ್ತೋತ್ರ ಮಾಡಿ ತನ್ನ ಸುತ್ತಮುತ್ತಲೂ ನೋಡಿ ಅಲ್ಲಿದ್ದ ಜನರಿಗೆ ನಂದಿಶರ್ಮ, "ಅಯ್ಯಾ, ನಾನು ಬಹಳ ಪಾಪಗಳನ್ನು ಮಾಡಿದ್ದೇನೆ. ಶ್ರೀಗುರುವಿನ ಕೃಪೆಯಿಂದ ನನ್ನ ಸರ್ವಪಾಪಗಳೂ ಲಯವಾದವು. ‘ಚರಣಂ ಪವಿತ್ರ........’ ಎಂದು ಹೇಳುವ ವೇದವು ಸತ್ಯವೇ! ಬ್ರಹ್ಮ ಬರೆದ ಲಿಪಿಯಲ್ಲಿ ದುಷ್ಟ ವರ್ಣಗಳಿದ್ದರೂ ಶ್ರೀಗುರುಪಾದ ಸ್ಪರ್ಶದಿಂದ ಆ ಲಿಪಿಯೆಲ್ಲವೂ ಶುಭಾಕ್ಷರಗಳುಳ್ಳದ್ದೇ ಆಗುವುದು. ಭಜಿಸುವವರಿಗೆ ಶ್ರೀ ನೃಸಿಂಹಸರಸ್ವತಿ ಕಾಮಧೇನುವೇ! ಐಹಿಕ, ಆಮುಷ್ಮಿಕ, ವೈಕುಂಠಗಳನ್ನು ಕೂಡಾ ಈತನು ಕೊಡುತ್ತಾನೆ. ನನ್ನ ಮಾತುಗಳು ಸತ್ಯವು" ಎನ್ನುತ್ತಾ ಸ್ತುತಿಸಲು, ಶ್ರೀಗುರುವು ಸಂತುಷ್ಟನಾಗಿ, "ಭಕ್ತರೇ, ಇವನನ್ನು ಕವೀಶ್ವರನೆಂದು ತಿಳಿಯಿರಿ. ಕವೀಶ್ವರನೆಂಬ ಹೆಸರು ಇವನಿಗೆ ಕೊಟ್ಟಿದ್ದೇನೆ" ಎಂದು ಹೇಳಲು, ನಂದಿಶರ್ಮ ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟನು. ಆಗ ಮಿಕ್ಕಿದ್ದ ಕುಷ್ಠು ರೋಗವೂ ನಾಶವಾಗಿ, ನಂದಿಶರ್ಮನಿಗೆ ಕವೀಶ್ವರನೆಂಬ ಹೆಸರು ಸಾರ್ಥಕವಾಯಿತು. ಅವನು ಶ್ರೀಗುರುವಿನ ಸೇವಕನಾದನು.
ಅಯ್ಯಾ ನಾಮಧಾರಕ, ಅಂತಹ ಕವೀಶ್ವರನೇ ಮತ್ತೊಬ್ಬನು ಬಂದನು. ಭಕ್ತಿಯಿಂದ ಶ್ರಿಗುರುವಿನ ಸತ್ಕಥೆಗಳನ್ನು ಬರೆಯುತ್ತಾ ಆ ಕವೀಶ್ವರರಿಬ್ಬರೂ ಶ್ರೀಗುರುವನ್ನು ಸೇವಿಸುತ್ತಿದ್ದರು." ಎಂದು ಸಿದ್ಧಮುನಿ ಹೇಳಲು, ಅದನ್ನು ಕೇಳಿದ ನಾಮಧಾರಕ, "ಸ್ವಾಮಿ, ಸಿದ್ಧಮುನೀಶ್ವರ, ಎರಡನೆಯ ಕವಿ ಬಂದುದನ್ನು ವಿಸ್ತಾರವಾಗಿ ದಯೆಯಿಟ್ಟು ಹೇಳಿ ಎಂದು ಕೋರುತ್ತೇನೆ. ಶ್ರೀಗುರುಚರಿತ್ರೆ ಬಹಳ ಆಸಕ್ತಿಕರವಾಗಿದೆ" ಎಂದು ಪ್ರಾರ್ಥಿಸಿದನು. ಸಿದ್ಧಯೋಗಿ ಹೇಳಿದ ರೀತಿಯಲ್ಲಿ ಗಂಗಾಧರಾತ್ಮಜನಾದ ಸರಸ್ವತಿ ಶ್ರೀಗುರುಚರಿತ್ರೆಯನ್ನು ಕಾಮದಾಯಕವಾಗಿ ಹೇಳುತ್ತಿದ್ದಾನೆ.
ಇಲ್ಲಿಗೆ ನಲವತ್ತೈದನೆಯ ಅಧ್ಯಾಯ ಮುಗಿಯಿತು.
No comments:
Post a Comment