Friday, September 6, 2013

||ಶ್ರೀಗುರುಚರಿತ್ರೆ - ಮುವ್ವತ್ತೇಳನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| ||ಶ್ರೀಗುರುಭ್ಯೋನಮಃ||

"ಹೇ ಸಿದ್ಧಯೋಗೀಶ್ವರ, ಶ್ರೀಗುರುವು ಬ್ರಾಹ್ಮಣನಿಗೆ ಉಪದೇಶ ಮಾಡಿದ ನಂತರ ನಡೆದ ಕಥೆಯನ್ನು ಹೇಳಿ" ಎಂದು ನಾಮಧಾರಕನು ಸಿದ್ಧಮುನಿಯನ್ನು ಪ್ರಾರ್ಥಿಸಲು, ಸಿದ್ಧಯೋಗಿ ಹೇಳಿದರು. "ಶ್ರೀಗುರುವು ಸಾಕ್ಷಾತ್ತು ನಾರಾಯಣನೇ! ಆ ಸ್ವಾಮಿಯು ಸರ್ವಜ್ಞನು. ಜ್ಞಾನದಾನ ಮಾಡಿ ಹೀನನ ಮುಖದಿಂದ ಅವರು ವೇದಗಳನ್ನು ಹೇಳಿಸಲಿಲ್ಲವೇ? ಶ್ರೀಗುರುವು ಈಶ್ವರನೇ! ಆತನೇ ಕಲ್ಪವೃಕ್ಷವು. ಶ್ರೀಗುರುವು ಆ ಬ್ರಾಹ್ಮಣನಿಗೆ ಧರ್ಮೋಪದೇಶ ಮಾಡಿ ಅವನಿಗೆ ಹೀಗೆ ಹೇಳಿದರು. ‘ಗೃಹಸ್ಥನು ತನ್ನ ಮನೆಯಲ್ಲಿ ಅರಣಿ ಮುಂತಾದ ಸಾಧನಾ ಸಾಮಗ್ರಿಗಳನ್ನು ಕಾಪಾಡಿಕೊಂಡಿರಬೇಕು. ಸಾಲಗ್ರಾಮ, ತುಪ್ಪ, ಶ್ರೀಚಂದನ, ಎಳ್ಳು, ಕೃಷ್ಣಾಜಿನ ಮುಂತಾದುವು ಮನೆಯಲ್ಲಿ ಇರುವವನನ್ನು ದುರಿತಗಳು ಭಾಧಿಸುವುದೇ ಇಲ್ಲ. ಶುಕ್ಲಪಕ್ಷದಲ್ಲಿ ಸಾರಸ ಪಕ್ಷಿಯನ್ನು ರಕ್ಷಿಸಬೇಕು. ಗೋವನ್ನು ಚೆನ್ನಾಗಿ ಬೆಳೆಸಬೇಕು. ಮನೆಯನ್ನು ಸಾರಿಸಿ, ರಂಗೋಲಿ ಇಟ್ಟಮೇಲೆಯೇ ಪ್ರತಿದಿನವೂ ದೇವತಾ ಪೂಜೆಯನ್ನು ಮಾಡಬೇಕು. ಚಿನ್ನ, ಬೆಳ್ಳಿ, ತಾಮ್ರ, ಮಣ್ಣಿನಲ್ಲಿ ಮಾಡಿದ ಪಾತ್ರೆಗಳಲ್ಲಿ ಯಾವುದಾದರೂ ಒಂದನ್ನು ಮನೆ ತೊಳೆ (ಸಾರಿಸು)ಯುವುದಕ್ಕೆ ಉಪಯೋಗಿಸಬಹುದು. ಕಂಚು ಪಾತ್ರೆ ಉಪಯೋಗಕ್ಕೆ ಬರುವುದಿಲ್ಲ. ಕುಮಾರಿಯರು, ಹೊಸಸೊಸೆ, ಶೂದ್ರರು ಮನೆ ಸಾರಿಸಬಾರದು. ಬಲಗೈಯಲ್ಲಿ ಸಾರಿಸಬಾರದು. ನೈರುತ್ಯ ಮೂಲೆಯಿಂದ ಆರಂಭಿಸಿ ಮನೆ ಸಾರಿಸಬೇಕು. ರಾತ್ರಿಯಲ್ಲಿ ಸಾರಿಸಬಾರದು. ಸಾರಿಸಲೇ ಬೇಕಾದ ಸಂದರ್ಭ ಬಂದರೆ ಭಸ್ಮದಿಂದ ಸಾರಿಸಬೇಕು. ರಾತ್ರಿಯ ಹೊತ್ತು ನೀರಿನಿಂದ ಸಾರಿಸಬಾರದು.

ದೇವರ ಮನೆಯನ್ನು ದಿನವೂ ರಂಗೋಲಿಗಳಿಂದ ಅಲಂಕರಿಸಬೇಕು. ಶುಭಾಸನದಲ್ಲಿ ಕುಳಿತು ದೇವರ ಪೂಜೆಯನ್ನು ಆರಂಭಿಸಬೇಕು. ಬ್ರಾಹ್ಮಣರು ಸಂಧ್ಯಾತ್ರಯವನ್ನು ಮಾಡಬೇ. ಭಕ್ತಿಯುಕ್ತವಾಗಿ ದೇವರ ಪೂಜೆಯನ್ನು ಬ್ರಾಹ್ಮಣನು ಮಾಡಬೇಕು. ತ್ರಿಕಾಲ ಪೂಜೆಯನ್ನು ಮಾದಲು ಶಕ್ತಿಯಿಲ್ಲದಿದ್ದರೆ ಪ್ರಾತಃಕಾಲದಲ್ಲಿ ಯಥಾವಿಧಿಯಾಗಿ ಪೂಜೆ ಮಾಡಬೇಕು. ಮಧ್ಯಾಹ್ನದಲ್ಲಿ ಗಂಧಾದಿಗಳಿಂದ ಪಂಚೋಪಚಾರ ಪೂಜೆ ಮಾಡಬೇಕು. ಸಾಯಂಕಾಲ ನೀರಾಜನ ಕೊಟ್ಟು ಮಂತ್ರಪುಷ್ಪವನ್ನು ನೀಡಬೇಕು. ದೇವರ ಪೂಜೆ ಮಾಡದವನು ಯಮಾಲಯಕ್ಕೆ ಹೋಗುವನು. ದ್ವಿಜ ಕುಲದಲ್ಲಿ ಜನಿಸಿ ಪೂಜೆ ಮಾಡದೆ ಊಟ ಮಾಡಿದರೆ ಯಮನಿಂದ ದಂಡಿಸಲ್ಪಡುತ್ತಾನೆ. ಪಂಚ ಮಹಾಯಜ್ಞಗಳನ್ನು ಮಾಡದವನೂ ಕೂಡಾ ಅದೇ ರೀತಿಯಲ್ಲಿ ದಂಡಿಸಲ್ಪಡುತ್ತಾನೆ.

ದೇವರ ಪೂಜೆಯಲ್ಲಿನ ಬೇಧ-ವಿಧಾನಗಳನ್ನು ಹೇಳುತ್ತೇನೆ. ಜಲಪೂಜೆಯಿಂದ ನಾರಾಯಣ, ಅಗ್ನಿಪೂಜೆಯಿಂದ ವಿಷ್ಣು ತೃಪ್ತಿಹೊಂದುತ್ತಾರೆ. ಮಾನಸ ಪೂಜೆಯೇ ಪ್ರಶಸ್ತವು. ಸೂರ್ಯನ ಪೂಜೆ ಶ್ರದ್ಧೆಯಿಂದ ಮಾಡುವುದರಿಂದ ಶ್ರೀಮನ್ನಾರಾಯಣನು ಸಾಕ್ಷಾತ್ತು ತೃಪ್ತಿಹೊಂದುತ್ತಾನೆ. ಸ್ಥಂಡಿಲದಲ್ಲಿ ಪ್ರತಿಮಾ ಪೂಜೆ ಸಾಮಾನ್ಯವು. ಬುದ್ಧಿವಂತನಾದ ಜ್ಞಾನಿ ಯಜ್ಞಪುರುಷನನ್ನು ಪೂಜಿಸಬೇಕು. ಯಜ್ಞಪೂಜೆ ಸರ್ವಮೋಕ್ಷಗಳನ್ನೂ ಕೊಡುವುದು. ಬ್ರಾಹ್ಮಣನು ಧೇನುವನ್ನು ಪೂಜಿಸಬೇಕು. ಶ್ರೀಗುರುವಿನ ಪೂಜೆಯನ್ನು ಭಕ್ತಿಯಿಂದ ಮಾಡಿದರೆ ತ್ರಿಮೂರ್ತಿಗಳೂ ಸಂತೋಷಗೊಳ್ಳುತ್ತಾರೆ. ಶ್ರೀಗುರುವೇ ತ್ರಿಮೂರ್ತಿ ಸ್ವರೂಪನು. ಶ್ರೀಗುರುವನ್ನು ಅರ್ಚಿಸುವುದರಿಂದ ಅಭೀಷ್ಟ ಸಿದ್ಧಿ, ಪುರುಷಾರ್ಥ ಪ್ರಾಪ್ತಿಯಾಗುತ್ತದೆ. ಕಲಿಯುಗದಲ್ಲಿ ಮಾನವರ ಅಂತಃಕರಣವು ಸ್ಥಿರವಾಗಿ ನಿಲ್ಲುವುದಿಲ್ಲ. ಆದ್ದರಿಂದ ಮನಸ್ಥೈರ್ಯಕ್ಕಾಗಿ ಶಾರ್ಙ್ಞಧರನು ಉಪಾಯವೊಂದನ್ನು ಏರ್ಪಡಿಸಿದ್ದಾನೆ. ಹೃಷೀಕೇಶನು ಸಾಲಗ್ರಾಮ ಅರ್ಚನೆಯನ್ನು ಪ್ರಕಟಗೊಳಿಸಿದನು. ಚಕ್ರಾಂಕಿತವಾಗಿ ದ್ವಾರವತಿಯಿಂದ ಉದ್ಭವಿಸಿದ ಸಾಲಗ್ರಾಮ ಜಲವನ್ನು ತೆಗೆದುಕೊಳ್ಳುವುದರಿಂದ ಪಾತಕಗಳು ಕ್ಷಯವಾಗುವುವು. ಶ್ರೀಗುರುವಿನ ಅನುಜ್ಞೆ ಪಡೆದು ಬ್ರಾಹ್ಮಣನು ಪ್ರತಿಮೆಯನ್ನು ಪೂಜಿಸಬೇಕು. ಸ್ತ್ರೀಯರಿಗೆ, ಶೂದ್ರರಿಗೆ ಶ್ರೀಗುರುವು ಪೌರಾಣಿಕವಾದ ಮಂತ್ರಗಳನ್ನು ಹೇಳುವರು. ಶ್ರೀಗುರುವಿನ ಆಜ್ಞೆಯಂತೆ ಕಲ್ಲು, ಕಟ್ಟಿಗೆಯ ತುಂಡು ಅರ್ಚಿಸಿದರೂ ಆ ಕಲ್ಲು, ಕಟ್ಟಿಗೆಗಳೇ ದೇವರಾಗಿ ಭಕ್ತಿಗೆ ಪ್ರಸನ್ನರಾಗುತ್ತಾನೆ. ಪೀಠದಲ್ಲಿ ಕೂತು, ಮೂರುಸಲ ಪ್ರಾಣಾಯಾಮ ಮಾಡಿ, "ಯೇಭ್ಯೋಮಾತಾ-----"ಎನ್ನುವ ಮಂತ್ರದಿಂದ ಮನುಷ್ಯ ಭಾವವನ್ನು ಬಿಟ್ಟು, ಆತ್ಮಭಾವದಿಂದ ಸಂಕಲ್ಪ ಮಾಡಿ, ತನ್ನನ್ನೂ, ಪೂಜಾದ್ರವ್ಯಗಳನ್ನೂ ಪ್ರಣವದಿಂದ ಪ್ರೋಕ್ಷಿಸಿ, ಪೂಜಾ ಸಂಕಲ್ಪ ಮಾಡಿ, ಅಂಗನ್ಯಾಸ ಮಾಡಿ, ಕಲಶಾರಾಧನೆ ಮಾಡಬೇಕು. ದೇವರಿಗೆ ಬಲಭಾಗದಲ್ಲಿ ಕಲಶ ಸ್ಥಾಪನೆ ಮಾಡಬೇಕು. ದೇವರಿಗೆ ಎಡ, ಬಲ ಭಾಗಗಳಲ್ಲಿ ಕ್ರಮವಾಗಿ ಶಂಖ, ಘಂಟೆಗಳನ್ನು ಇಟ್ಟು ಅರ್ಚಿಸಬೇಕು. ಮೊದಲು ನಿರ್ಮಾಲ್ಯವನ್ನು ವಿಸರ್ಜಿಸಿ, ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಒಗೆದು ಶುದ್ಧಮಾಡಿದ ವಸ್ತ್ರವನ್ನು ಹರಡಿ, ದೀಪವನ್ನು ಬೆಳಗಿಸಬೇಕು. ಶ್ರದ್ಧಾ ಭಕ್ತಿಗಳಿಂದ ಶ್ರೀಗುರುವಿಗೆ ನಮಸ್ಕಾರ ಮಾಡಿ, ಮನೋವಾಕ್ಕಾಯಗಳಿಂದ, ಆಗಮೋಕ್ತ ವಿಧಾನದಿಂದ ಮೊದಲು ಪೀಠ ಪೂಜೆಯನ್ನು ಮಾಡಬೇಕು. ನಂತರ ದ್ವಾರಪಾಲಕ ಪೂಜೆ ಮಾಡಿ, ಆತ್ಮನಲ್ಲಿ ಧ್ಯಾನ ಮಾಡಿ ಚಿತ್ಕಳೆಯನ್ನು ದೇವರೂಪವಾಗಿ ಭಾವಿಸಬೇಕು. ಪುರುಷಸೂಕ್ತದ ಮೊದಲ ಮಂತ್ರದಿಂದ ಆವಾಹನೆ ಮಾಡಬೇಕು. ಎರಡನೆಯ ಮಂತ್ರದಿಂದ ಆಸನ ಕೊಡಬೇಕು. ಮೂರನೆಯ ಮಂತ್ರದಿಂದ ಪಾದ್ಯವನ್ನು ಕೊಡಬೇಕು. ನಾಲ್ಕನೆಯ ಮಂತ್ರವನ್ನು ಉಚ್ಛರಿಸಿ, ತಗುನಾದ ವಿಧದಲ್ಲಿ ಅರ್ಘ್ಯವನ್ನು ಕೊಡಬೇಕು. ಐದನೆಯ ಮಂತ್ರದಿಂದ ಶುಚಿಯಾದ ಆಚಮನವನ್ನು ನೀಡಬೇಕು. ಆರನೆಯ ಮಂತ್ರದಿಂದ ಸ್ನಾನವು. ಸಾಧ್ಯವಾದರೆ ಪಂಚಾಮೃತಗಳಿಂದ ಸ್ನಾನ ಮಾಡಿಸಬೇಕು. ಅದಕ್ಕೆ ಐದು ಮಂತ್ರಗಳು ಬೇರೆಬೇರೆಯಾಗಿ ಹೇಳಬೇಕು. ಪುರುಷಸೂಕ್ತ, ರುದ್ರ(ನಮಕ) ಮತ್ತು ಇತರ ಮಂತ್ರಗಳಿಂದ ಘಂಟಾನಾದ ಮಾಡುತ್ತಾ ಭಕ್ತಿಯಿಂದ ಅಭಿಷೇಕವನ್ನು ಮಾಡಬೇಕು. ಸ್ನಾನಾನಂತರ ಆಚಮನ ಕೊಟ್ಟು ದೇವರನ್ನು ಪೀಠದಮೇಲೆ ಧೃಢವಾಗಿ ಇರುವಂತೆ ಇಡಬೇಕು.

ಪುರುಷಸೂಕ್ತದ ಏಳನೆಯ ಮಂತ್ರದಿಂದ ಎರಡು ವಸ್ತ್ರಗಳನ್ನು ದೇವರಿಗೆ ಸಮರ್ಪಿಸಬೇಕು. ಎಂಟನೆಯ ಮಂತ್ರದಿಂದ ಯಜ್ಞೋಪವೀತವನ್ನು ಅರ್ಪಿಸಿ, ಮತ್ತೆ ಆಚಮನ ಮಾಡಬೇಕು. ಒಂಭತ್ತನೆಯ ಮಂತ್ರದಿಂದ ಗಂಧ ಅಕ್ಷತೆಗಳನ್ನು ನೀಡಬೇಕು. ಹತ್ತನೆಯ ಮಂತ್ರದಿಂದ ನಾನಾವಿಧ ಪರಿಮಳ ಪುಷ್ಪಗಳನ್ನು ಅರ್ಪಿಸಬೇಕು. ಮುನಿಸಮ್ಮತವಾದ ಪುಷ್ಪಾರ್ಪಣ ವಿಧಾನವನ್ನು ಹೇಳುತ್ತೇನೆ. ಸ್ವಂತ ತೋಟದಲ್ಲಿ ಬೆಳೆದ ಹೂಗಳು ಉತ್ತಮವಾದವು. ಕೊಂಡು ತಂದ ಹೂಗಳು ಅಧಮವು. ಸಾಧ್ಯವೇ ಇಲ್ಲದಂತಹ ಸಮಯದಲ್ಲಿ ಕೊಂಡ ಹೂಗಳಲ್ಲಿ ಬಿಳಿಯ ಹೂಗಳನ್ನು ಸ್ವೀಕರಿಸಬಹುದು. ಅರಣ್ಯದಲ್ಲಿ ಬಿಡುವ ಹೂಗಳು ಮಧ್ಯಮವು. ಬಿಳಿಯ ಹೂಗಳು ಉತ್ತಮವಾದವು. ಕೆಂಪು ಹಳದಿ ಹೂಗಳು ಮಧ್ಯಮವು. ಕಪ್ಪುಬಣ್ಣದ ಹೂಗಳು ಅಧಮವು. ಉಪಯೋಗಿಸಿ ಬಿಟ್ಟ ಹೂಗಳು, ಹುಳು ತಿಂದಿರುವ ಹೂಗಳು, ರಂಧ್ರಗಳಿರುವ ಹೂಗಳು ನಿಂದ್ಯವು. ಉದುರಿಬಿದ್ದ ಹೂಗಳನ್ನು ದೇವರಿಗೆ ಅರ್ಪಿಸಬಾರದು. ಪದ್ಮಪತ್ರ, ತುಳಸಿಪತ್ರ, ಬಿಲ್ವಪತ್ರಗಳು ಹಳೆಯವು ಎಂಬುದಿಲ್ಲ. ಗಂಗಾಜಲದಂತೆ ಆ ಪತ್ರಗಳು ಹಳೆಯದಾದದರೂ ಸ್ವೀಕರಿಸಬಹುದಾದಂತಹವು. ಶತಪತ್ರ, ಪಗಡೆ, ಸಂಪಿಗೆ, ನಾಗಕೇಸರ, ಪಾಟಲ, ಮಲ್ಲಿಗೆ, ಜಾಜಿ, ಕಣಿಗಲೆ, ನೀರುದಾವರೆ, ಈ ಹೂಗಳು ಸರ್ವದೇವರಿಗೂ ಸಮರ್ಪಿಸಬಹುದಾದವು. ಪೂಜೆ ಮಾಡುವವನು ಎಕ್ಕ, ಗಿರಿಕರ್ಣಿಕೆಗಳನ್ನು ವಿಷ್ಣು ಪೂಜೆಯಲ್ಲಿ ವಿಸರ್ಜಿಸಬೇಕು. ಕೆಂಪು ಕಣಿಗಲೆ, ಎಕ್ಕ, ಉಮ್ಮತ್ತಿ, ಗಿರಿಕರ್ಣಿಕೆ, ಬೇಲ, ಕುಂಬಳದ ಹೂಗಳು, ಎಲ್ಲತರಹೆಯವೂ, ವರ್ಜ್ಯವು. ವಿಷ್ಣುವಿಗೆ ಎಕ್ಕದ ಹೂವನ್ನು ಸಮರ್ಪಿಸಿದರೆ ಕುಲನಾಶವು. ಉಮ್ಮತ್ತಿ ಹೂವು ಕೊಟ್ಟರೆ ಪ್ರಜ್ಞಾ ನಾಶ, ದಾರಿದ್ರ್ಯ ಉಂಟಾಗುವುವು. ಗಿರಿಕರ್ಣಿಕೆಯನ್ನು ಪೂಜಿಸಿದರೆ ಕುಲನಾಶವು. ಕಂಟಕಾರಿ ಪುಷ್ಪಗಳಿಂದ ಪೂಜಿಸಿದರೆ ಶೋಕ. ಬೆಟ್ಟಮಲ್ಲಿಗೆಯಿಂದ ಅರ್ಚನೆಮಾಡಿದರೆ ದುಃಖಪ್ರದವು. ಬೂರುಗದ ಹೂಗಳಿಂದ ಪೂಜೆ ಮಾಡಿದರೆ ವ್ಯಾಧಿಯುಂಟಾಗುವುದು. ಅದರಿಂದ ವಿಷ್ಣುವಿಗೆ ಸರಿಯಾಗಿ ಯೋಚಿಸಿ-ವಿಮರ್ಶಿಸಿ, ಪುಷ್ಪಗಳನ್ನು ಸಮರ್ಪಿಸಬೇಕು. ರಕ್ತ ಪುಷ್ಪ, ಶಶಾಂಕ, ಕರಂಜ, ಉಸಿರಿ, ಬೇವು, ಮಾಧವಿ, ಪಗಡೆ, ದಾಳಿಂಬೆ ಮುಂತಾದ ಅನೇಕ ಹೂಗಳನ್ನು ಶಂಭುವಿನ ಪೂಜೆಗೆ ಉಪಯೋಗಿಸಬಾರದು. ಮಾವಿನ ಹೂವು, ಮಲ್ಲಿಗೆ, ದೋಷಗಳನ್ನುಂಟು ಮಾಡುವ ಹೂಗಳು. ಶಿವನಿಗೆ ಬಿಳಿಯ ಹೂಗಳನ್ನೇ ಮುಖ್ಯವಾಗಿ ಭಕ್ತಿಯಿಂದ ಕೊಡಬೇಕು. ಗಣೇಶನ ಅರ್ಚನೆಯಲ್ಲಿ ತುಳಸಿಯನ್ನು ವಿಸರ್ಜಿಸಬೇಕು. ದುರ್ಗಾಶಕ್ತಿಯನ್ನು ದೂರ್ವೆಗಳಿಂದ ಎಂದೂ ಪೂಜಿಸಬಾರದು. ಹೀಗೆ ಹೂಗಳ ಒಳ್ಳೆಯ-ಕೆಟ್ಟ ಗುಣಗಳನ್ನರಿತು ಭಕ್ತಿಯಿಂದ ಪೂಜಿಸಬೇಕು. ಅದರಿಂದ ಧರ್ಮಾರ್ಥ ಕಾಮಮೋಕ್ಷಗಳು ಲಭಿಸುತ್ತವೆ.

ಪುರುಷಸೂಕ್ತದ ಹನ್ನೊಂದನೆಯ ಮಂತ್ರದಿಂದ ಧೂಪವನ್ನು ದೇವರಿಗೆ ಆಘ್ರಾಣಿಸುವಂತೆ ಮಾಡಬೇಕು. ಹನ್ನೆರಡನೆಯ ಮಂತ್ರದಿಂದ ಏಕಾರ್ತಿ ಎನ್ನುವ ದೀಪವನ್ನು ಸಮರ್ಪಿಸಬೇಕು. ಹದಿಮೂರನೆಯ ಮಂತ್ರದಿಂದ ನೈವೇದ್ಯವಿಟ್ಟು ಆಚಮನ ಕೊಡಬೇಕು. ಹದಿನಾಲ್ಕನೆಯ ಮಂತ್ರದಿಂದ ಪೂಗೀಫಲ ಸಹಿತ ತಾಂಬೂಲವನ್ನು ಅರ್ಪಿಸಬೇಕು. ನೀರಾಜನವನ್ನು ಹದಿನೈದನೆಯ ಮಂತ್ರದಿಂದ ಕೊಟ್ಟು, ಹದಿನಾರನೆಯ ಮಂತ್ರದಿಂದ ಪುಷ್ಪಾಂಜಲಿಯನ್ನು ಕೊಡಬೇಕು. ಸಾಷ್ಟಾಂಗ ನಮಸ್ಕಾರ ಮಾಡುವಾಗ ದೇವರಿಗೆ ಬಹಳ ಹತ್ತಿರ ಹೋಗಬಾರದು. ಗರ್ಭಾಲಯದ ಹಿಂಭಾಗಕ್ಕೆ ನಮಸ್ಕಾರ ಮಾಡಬಾರದು. ಅಯ್ಯಾ, ದ್ವಿಜೋತ್ತಮ, ನಮಸ್ಕಾರ ವಿಧಾನವನ್ನು ಹೇಳುತ್ತೇನೆ. ಮೊದಲು ಪ್ರದಕ್ಷಿಣೆ ಮಾಡಿ, ನಂತರ ಪ್ರಣಾಮ ಮಾಡಬೇಕು. ತಾಯಿ-ತಂದೆಯರಿಗೆ, ಗುರುಗಳಿಗೆ ಹತ್ತಿರಕ್ಕೆ ಹೋಗಿ ನಮಸ್ಕರಿಸಬೇಕು. ಎಲ್ಲ ಕಾಲದಲ್ಲೂ, ಬ್ರಾಹ್ಮಣನ ಸಮ್ಮುಖಕ್ಕೆ ಹೋಗಿ, ನಮಸ್ಕರಿಸಬೇಕು. ಸಭೆಗೆ ಒಂದು ನಮಸ್ಕಾರ ಮಾಡಬೇಕು. ಬೇರೆಬೇರೆಯಾಗಿ ಮಾಡುವ ಅವಶ್ಯಕತೆ ಇಲ್ಲ. ದೇವಾಲಯದಲ್ಲಿ ಪ್ರಾಜ್ಞನು ಹಾಗೆ ಒಂದು ನಮಸ್ಕಾರ ಮಾತ್ರ ಮಾಡಬೇಕು. ತಾಯಿತಂದೆಯರಿಗೆ, ಗುರುಗಳಿಗೆ ನಮಸ್ಕಾರ ಮಾಡುವ ವಿಧಾನ ಹೇಗೆಂದರೆ, ಎರಡು ಕಿವಿಗಳನ್ನೂ ಮುಟ್ಟಿ, ತನ್ನ ಎರಡೂಕೈಗಳಿಂದ ಎದುರಿಗಿರುವ ಗುರುಗಳ ಪೃಷ್ಠಭಾಗದಿಂದ ಪಾದಗಳವರೆಗೂ ನೇವರಿಸುತ್ತಾ ಅಭಿವಾದನ ಮಾಡಬೇಕು. ತಾಯಿ, ತಂದೆ, ಗುರುವು, ವಿದ್ಯಾದಾತ, ಭಯವನ್ನು ಹೋಗಲಾಡಿಸಿದವನು, ಅನ್ನವಿಟ್ಟವನು, ಸವತಿ ತಾಯಿ, ಗಾಯತ್ರಿ ಹೇಳಿಕೊಟ್ಟವನು, ಪುರೋಹಿತ, ದೊಡ್ಡ ಅಣ್ಣ, ತಂದೆಯ ಸಹೋದರ, ತಾಯಿಯ ಸಹೋದರ, ವಯಸ್ಸಾದ ಹಿರಿಯ ಸ್ನೇಹಿತರು, ಇಷ್ಟರು, ಜ್ಞಾನವೃದ್ಧರು, ನಮಸ್ಕಾರಾರ್ಹರು. ನಮಸ್ಕಾರ ಮಾಡುವಾಗ ನಿಷಿದ್ಧ ಸ್ಥಾನಗಳನ್ನು ಹೇಳುತ್ತೇನೆ. ವಿದ್ಯೆಯಿಲ್ಲದವನು, ವಯಸ್ಸಿನಲ್ಲಿ ಚಿಕ್ಕವನು ನಮಸ್ಕರಿಸಲು ಅರ್ಹರಲ್ಲ. ಸಮಿತ್ತುಗಳು, ಹೂಗಳು, ಅಕ್ಷತೆ ತರುತ್ತಿರುವ ದ್ವಿಜನಿಗೆ ನಮಸ್ಕರಿಸಬಾರದು. ಅವನ್ನು ತಾನು ತರುತ್ತಿರುವಾಗಲೂ ಬೇರೆಯವರಿಗೆ ನಮಸ್ಕರಿಸಬಾರದು. ಹೋಮ ಮಾಡುತ್ತಿರುವಾಗ ದೂರದಲ್ಲಿ ಯಾರಾದರೂ ತಿಳಿದವರು ಕಂಡುಬಂದರೆ ನಮಸ್ಕರಿಸಬಾರದು. ಓಡುತ್ತಿರುವವನು, ಕೋಪಗೊಂಡಿರುವವನು, ಧನಗರ್ವಿತನು ಇವರಿಗೂ ನಮಸ್ಕರಿಸಬಾರದು. ಬ್ರಾಹ್ಮಣನಿಗೆ ಒಂದೇ ಕೈಯಲ್ಲಿ ಎಂದೂ ನಮಸ್ಕರಿಸಬಾರದು.

ವಾದ್ಯ, ನೃತ್ಯ, ಗೀತಗಳಿಂದ ದೇವರನ್ನು ಸಂತುಷ್ಟಿಗೊಳಿಸಬೇಕು. ಸ್ತೋತ್ರಗಳಿಂದ ಪ್ರಾರ್ಥಿಸಿ, ಸನಕಾದಿಗಳನ್ನು ಅರ್ಚಿಸಬೇಕು. ದೇವರ ಪೂಜೆ ಮಾಡಿ, ಪೀಠದ ಮೇಲೆ ಎರಡೂ ಕೈಯಿಟ್ಟು ನಮಸ್ಕರಿಸಬೇಕು. ಅಂತ್ಯದಲ್ಲಿ ಉತ್ತರಪೂಜೆ (ಪುನಃಪೂಜೆ) ಮಾಡಿ ಉದ್ವಾಸನೆ ಹೇಳಬೇಕು. ವೈಶ್ವದೇವವನ್ನು, ಪಂಚಸೂನ ದೋಷಾಘ್ನವನ್ನು ಆತ್ಮಸಂಸ್ಕಾರಕ್ಕೋಸ್ಕರ, ಅನ್ನಸಂಸ್ಕಾರಕ್ಕೋಸ್ಕರ ಆಚರಿಸಬೇಕು. ಅನ್ನಸಂಸ್ಕಾರಕ್ಕೆ ಸಂಕಲ್ಪ ಮಾಡಿ, ಕುಂಡದಲ್ಲಿ ಅಗ್ನಿಯನ್ನು ಪ್ರಜ್ವಲಿಸಿ, ಧ್ಯಾನಿಸಿ, ಸಂಸ್ಕರಿಸಿ, ಆಜ್ಯ(ತುಪ್ಪ)ದಿಂದ ಕೂಡಿದ ಅನ್ನದ ಒಂದು ಭಾಗವನ್ನು ವಿಧಿವಿಧಾನವಾಗಿ ಹೋಮ ಮಾಡಬೇಕು. ಎರಡನೆಯ ಭಾಗದಿಂದ ಬಲಿಹರಣ ಮಾಡಬೇಕು. ಮೂರನೆಯ ಭಾಗದಿಂದ ಪಿತೃಗಳಿಗೆ, ನಾಲ್ಕನೆಯ ಭಾಗದಿಂದ ಕಾಗೆ/ನಾಯಿಗಳಿಗೆ ಹಾಕಬೇಕು. ಐದನೆಯ ಭಾಗದಿಂದ ಸನಕಾದಿಗಳಿಗೆ/ಮನುಷ್ಯರಿಗೆ ದ್ವಿಜನು ಸಮರ್ಪಿಸಬೇಕು. ಅನ್ನವಿಲ್ಲದ ಪಕ್ಷದಲ್ಲಿ ತಂಡುಲಾದಿಗಳಿಂದ ವೈಶ್ವದೇವ ಮಾಡಬೇಕು. ವೈಶ್ವದೇವ ಸಮಯದಲ್ಲಿ ಯಾರು ಬಂದರೆ ಅವನೇ ಅತಿಥಿ. ಹಾಗೆ ಬಂದವನು ಚಂಡಾಲನಾದರೂ, ಕಳ್ಳನಾದರೂ ಅನ್ನವನ್ನು ಇಡಬೇಕು. "ವೈಶ್ವದೇವವಿಲ್ಲದ ಮನೆಯಲ್ಲಿ, ಅನ್ನದಾನವಿಲ್ಲದ ಮನೆಯಲ್ಲಿ ವಾಸ ಮಾಡುವವರು ನನ್ನಿಂದ ದಂಡಿಸಲ್ಪಡಲು ಅರ್ಹರು. ಆದ್ದರಿಂದ ಅಂತಹವರನ್ನು ಕರೆದುತನ್ನಿ. ಅತಿಥಿಪೂಜೆ ಮಾಡುವವರ ಮನೆಗಳಿಗೆ ನೀವು ಹೋಗಬಾರದು/ ಹೋಗಬೇಡಿ. ಇದು ವಿಷ್ಣು ಮಾಡಿರುವ ಆಜ್ಞೆ." ಎಂದು ಯಮನು ತನ್ನ ದೂತರಿಗೆ ಹೇಳಿದ್ದಾನೆ. ತಂದೆತಾಯಿಗಳನ್ನು ಕೊಂದವನು, ನಾಯಿ ತಿಂದವನು, ಮನೆಗೆ ಬಂದರೂ ಅವರಿಗೆ ಅನ್ನವನ್ನು ಕೊಡಬೇಕು. ಬ್ರಾಹ್ಮಣರಿಗೆ ಕುಲಗೋತ್ರಗಳನ್ನು ವಿಚಾರಿಸದೆ ಅನ್ನವನ್ನು ನೀಡಬೇಕು. ಅತಿಥಿ ವಿಮುಖನಾದವನ ಮನೆಗೆ ಪಿತೃದೇವತೆಗಳು ಬರುವುದಿಲ್ಲ. ದ್ವಿಜನಾದವನು ಪ್ರವಾಸಾದಿಗಳಲ್ಲಿದ್ದರೂ ತುಪ್ಪ ಮುಂತಾದುವುಗಳಿಂದ ಯಜ್ಞ ಮಾಡಬೇಕು. ಪ್ರಾಜ್ಞನು ಕಂದಮೂಲಾದಿಗಳಿಂದಲೂ ಯಜ್ಞ ಮಾಡಬಹುದು. ಸಜ್ಜನನಾದವನು ಅನ್ನವಿಲ್ಲದೆ ಅಗ್ರದಾನ ಮಾಡಬಾರದು. ಬುಧನು ಪಂಚಯಜ್ಞಗಳಿಗಾಗಿ ಚಾಂದ್ರಾಯಣ ಮಾಡಬೇಕು. ವೈಶ್ವದೇವಕ್ಕೆ ಮುಂಚೆಯೇ ಯತಿ ಬಂದರೆ ಅವನಿಗೆ ಭಿಕ್ಷೆ ಕೊಟ್ಟರೆ ವೈಶ್ವದೇವ ಫಲವು ಲಭಿಸುವುದು. ಸ್ವಯಂ (ತಾನೇ) ಬಲಿ ಕೊಡಬಾರದು. ಪರಹಸ್ತದಿಂದ ಬಲಿಯನ್ನು ಹಾಕಿಸಬೇಕು. ತನ್ನ ಕೈಯಿಂದ ಬಲಿಯನ್ನು ಹಾಕುವವರಿಗೆ ಚಾಂದ್ರಾಯಣದಿಂದ ಶುದ್ಧಿಯಾಗುತ್ತದೆ. ಬಲಿಯನ್ನಿಡದೆ ಊಟ ಮಾಡಿದರೆ ಬ್ರಾಹ್ಮಣನು ದೋಷಿಯಾಗುತ್ತಾನೆ. ಆ ದೋಷ ಪರಿಹಾರಕ್ಕೆ ಆರು ಪ್ರಾಣಾಯಾಮಗಳನ್ನು ಮಾಡಬೇಕು. ಮನೆಯ ಬಾಗಿಲಲ್ಲಿ ಬಲಿಯನ್ನಿಟ್ಟು ಗೋವಿಗೆ ಗ್ರಾಸ ಹಾಕಿಸಬೇಕು. ಆ ನಂತರ ನಿತ್ಯಶ್ರಾದ್ಧ, ನೈಮಿತ್ತಿಕ ಶ್ರಾದ್ಧ ಮಾಡಬೇಕು. ನಿತ್ಯ ಶ್ರಾದ್ಧದಲ್ಲಿ ಪಿಂಡಗಳ ಅಗ್ನೌಕರಣದ ಅವಶ್ಯಕತೆಯಿಲ್ಲ. ಅದಕ್ಕೆ ದಕ್ಷಿಣೆ ಕೊಡಬೇಕಾದ ಅವಸರವೂ ಇಲ್ಲ. ಬ್ರಹ್ಮಚರ್ಯದ ಅವಸರವೂ ಇಲ್ಲ. ಯಜ್ಞಾಂತ್ಯದಲ್ಲಿ ಹಾಲು ಕರೆಯುವಷ್ಟು ಕಾಲ ಮಾತ್ರವೇ ಮನೆಯ ಬಾಗಿಲಲ್ಲಿ ನಿಂತು ಅತಿಥಿಗಳ ಬರವಿಗಾಗಿ ಕಾಯಬೇಕು. ಅಲಸಿಹೋದ, ಹಸಿದು ಬಂದ ಅತಿಥಿಯನ್ನು ವಿಶೇಷವಾಗಿ ಪೂಜಿಸಬೇಕು. ಹಾಗೆಯೇ ಸೂರ್ಯಾಸ್ತಮಯ ಕಾಲದಲ್ಲಿ ಬಂದವನಿಗೆ ಕೂಡಾ ಗೌರವದಿಂದ ಪೂಜೆಮಾಡಬೇಕು. ವೈಶ್ವದೇವ ಸಮಯದಲ್ಲಿ ಬಂದ ಬ್ರಾಹ್ಮಣೋತ್ತಮನನ್ನು ಪೂಜಿಸಬೇಕು. ಎಲ್ಲ ವರ್ಣದವರಿಗೂ ಬ್ರಾಹ್ಮಣನು ಗುರುವು. ಅವನನ್ನು ಪೂಜಿಸಿದರೆ ದೇವತೆಗಳೆಲ್ಲರನ್ನೂ ಪೂಜಿಸಿದಂತೆಯೇ! ಅವನ ಪೂಜೆಯಿಂದ ಅಗ್ನಿದೇವನ ಮುಖದಲ್ಲಿರುವ ಸುರರೆಲ್ಲರೂ ಸಂತಸಗೊಳ್ಳುತ್ತಾರೆ. ಮರುದ್ಗಣ, ಆರ್ಯಮ, ಬ್ರಹ್ಮ, ಸದಾಶಿವ, ದೇವತೆಗಳು, ಎಲ್ಲರೂ ಅತಿಥಿಪೂಜೆಯಿಂದಲೇ ತೃಪ್ತಿ/ಸಂತೋಷ ಹೊಂದುತ್ತಾರೆ. ಬ್ರಾಹ್ಮಣನ ಪಾದಗಳನ್ನು ತೊಳೆಯುವುದರಿಂದ ಪಿತೃದೇವತೆಗಳೆಲ್ಲರೂ ತೃಪ್ತಿಹೊಂದುತ್ತಾರೆ. ಅತಿಥಿಗೆ ಭೋಜನವಿಟ್ಟರೆ ಬ್ರಹ್ಮ, ವಿಷ್ಣು, ಮಹೇಶ್ವರರು ಸಂತೃಪ್ತಿಗೊಳ್ಳುತ್ತಾರೆ. ಯತೀಶ್ವರನಾಗಲೀ, ಬ್ರಹ್ಮಚಾರಿಯಾಗಲೀ ಮನೆಗೆ ಬಂದಾಗಲೂ ಅನ್ನವನ್ನು ಕೊಡಬೇಕು. ಅದರಿಂದ ಮಹಾಪುಣ್ಯ ಲಭ್ಯವಾಗುತ್ತದೆ. ಒಂದು ಮುದ್ದೆ ಅನ್ನವನ್ನಿಟ್ಟರೆ ಅದು ಮೇರುವನ್ನು ಕೊಟ್ಟ ಫಲಕ್ಕೆ ಸಮಾನವು. ಭೋಜನಕ್ಕೆ ಮುಂಚೆ, ಭೋಜನಾನಂತರ ಸ್ವಲ್ಪ ನೀರನ್ನು ಕೊಟ್ಟರೆ ಸಮುದ್ರವನ್ನು ಕೊಟ್ಟಿದ್ದಕ್ಕೆ ಸಮಾನವು. ಬಂದ ಅತಿಥಿಯನ್ನು ಆದರಿಸದೆ, ಅವನಿಗೆ ಏನನ್ನೂ ಕೊಡದೆ ತಾನು ತಿನ್ನುವ ದ್ವಿಜಾಧಮನು ಮೊದಲು ನಾಯಿ ನಂತರ ಕತ್ತೆಯಾಗಿ ಹುಟ್ಟುವನು. ಆದ್ದರಿಂದ ಅತಿಥಿಗಳಿಗೆ ಮೊದಲು ಅನ್ನವಿಟ್ಟು ಆ ನಂತರವೇ ಬಾಲವೃದ್ಧರೊಡನೆ ಕೂಡಿ ತಾನು ಊಟಮಾಡಬೇಕು. ಪಂಕ್ತಿ ಬೇಧ ಮಾಡಬಾರದು. ಮೊದಲು ಪಾದಗಳು, ನಂತರ ಎರಡು ಕೈಗಳು, ನಂತರ ಎರಡೂ ಕಾಲುಗಳು, ಐದನೆಯದಾಗಿ ಮುಖ ತೊಳೆದುಕೊಳ್ಳಬೇಕು. ಈ ಐದನ್ನೂ ಒದ್ದೆಯಾಗಿಯೇ ಇಟ್ಟುಕೊಂಡು ಭೋಜನ ಮಾಡುವ ದ್ವಿಜನು ಶತಾಯುವಾಗುವನು. ಪೂರ್ವಮುಖಿಯಾಗಿ, ಮೌನಿಯಾಗಿ, ಎರಡೂ ಪಾದಗಳನ್ನು ಸೇರಿಸಿ ಕೂತು ಊಟಮಾಡಬೇಕು. ಬ್ರಾಹ್ಮಣನಿಗೆ ನಾಲ್ಕು ಕೋಣೆಗಳುಳ್ಳ ಭಸ್ಮದಿಂದ ಕೂಡಿದ ಮಂಡಲ, ಕ್ಷತ್ರಿಯನಿಗೆ ಮೂರುಕೋಣಗಳುಳ್ಳ ಮಂಡಲ, ವೈಶ್ಯನಿಗೆ ಗುಂಡಗಿರುವ ಮಂಡಲ, ಹೇಳಲ್ಪಟ್ಟಿದೆ. ಶೂದ್ರನಿಗೆ ಅರ್ಧಚಂದ್ರಕಾರದ ಮಂಡಲವು ವಿಹಿತವು. ಅಂತಹ ಮಂಡಲದಲ್ಲಿ ದ್ವಿಜನು ವಸುಗಳು, ರುದ್ರರು, ಆದಿತ್ಯರು ಮುಂತಾದ ದೇವತೆಗಳನ್ನು ಆವಾಹನ ಮಾಡಬೇಕು. ಮಂಡಲದಲ್ಲಿ ಬ್ರಹ್ಮಾದಿ ದೇವತೆಗಳು ಕೂಡಾ ಇರುತ್ತಾರೆ. ಮಂಡಲ ಮಾಡದೆಯೇ ತಿನ್ನುವವನ ಅನ್ನರಸವನನ್ನು ರಾಕ್ಷಸರು, ಪಿಶಾಚಿಗಳು ಮುಂತಾದವುಗಳ ಸಮ್ಮೂಹಗಳು ತಿನ್ನುತ್ತವೆ. ಪೂರ್ವಾಭಿಮುಖವಾಗಿ ಕೂತು ತಿನ್ನುವುದು ಪ್ರಶಸ್ತವು. ಪಶ್ಚಿಮಮುಖವಾಗಿ ತಿನ್ನುವುದು ಮಧ್ಯಮವು. ಉತ್ತರ ಮುಖವಾಗಿ ಕೂತು ತಿನ್ನುವುದು ಪಿತೃಕಾರ್ಯದಲ್ಲಿ ಮಾಡಬೇಕಾದದ್ದು. ದಕ್ಷಿಣ ಮುಖವಾಗಿ ಕೂತು ತಿನ್ನುವುದು ಸರಿಯಲ್ಲವೇನಲ್ಲ. ಆದರೆ ಮೂಲೆಗಳಿಗೆದುರಾಗಿ ಕೂತು ತಿನ್ನುವುದು ನಿಷಿದ್ಧವು. ಚಿನ್ನ ಇಲ್ಲ ಬೆಳ್ಳಿಪಾತ್ರೆಯಲ್ಲಿ ಊಟಮಾಡುವುದು ಶುಭವು. ತಾಮ್ರ, ಕಮಲದೆಲೆ, ತೇಗದೆಲೆ, ಮುಂತಾದುವುಗಳಲ್ಲಿ ತಿನ್ನುವುದು ಉತ್ತಮವು. ತಾಮ್ರ ಪಾತ್ರೆಯನ್ನು ಗೃಹಸ್ಥನು ಬಿಡಬೇಕು. ಯತಿಯಾದವನು ಧಾತುಮಯವಾದ ಪಾತ್ರೆಯನ್ನು ವಿಸರ್ಜಿಸಬೇಕು. ತಾಮ್ರ ಪಾತ್ರೆ, ಮರದ ಪಾತ್ರೆ, ಸ್ಫಟಿಕ ಪಾತ್ರೆ, ಕಲ್ಲು ಪಾತ್ರೆ ಯತಿಗೆ ಶುಭಕರವು. ಬಾಳೆಯ ದೊನ್ನೆಯಲ್ಲಾಗಲೀ, ತೇಗದ ಮಧ್ಯದೆಲೆಯಲ್ಲಾಗಲೀ, ಬಳ್ಳಿಯ ಎಲೆಗಳಲ್ಲಾಗಲೀ, ತಿನ್ನುತ್ತಾ ಚಾಂದ್ರಾಯಣ ವ್ರತವನ್ನು ಮಾಡಬೇಕು. ಎಕ್ಕ, ಅಶ್ವತ್ಥ ಎಲೆಗಳಲ್ಲಿ ತಿನ್ನುವವನು ಚಾಂದ್ರಾಯಣ ವ್ರತ ಆಚರಿಸಬೇಕು. ನೆಲದ ಮೇಲೆ, ಲೋಹದ ಪಾತ್ರೆಯಲ್ಲಿ, ಮಣ್ಣಿನ ಪಾತ್ರೆಯಲ್ಲಿ ಅಥವಾ ವಸ್ತ್ರದ ಮೇಲೆ ತಿನ್ನುವ ದ್ವಿಜಾತಿ ನರಕಕ್ಕೆ ಹೋಗುವನು. ಕಂಚಿನ ಪಾತ್ರೆಯಲ್ಲಿ ತಿಂದರೆ ಆಯುರ್ದಾಯ, ಕೀರ್ತಿ, ಬಲ, ಪ್ರಜ್ಞೆ ಬೆಳೆಯುತ್ತವೆ. ಆದ್ದರಿಂದ ಗೃಹಸ್ಥನು ಕಂಚುಪಾತ್ರೆಯಲ್ಲಿ ತಿನ್ನುವುದು ಮುಖ್ಯವು. ಐದು ಅಂಗುಲಕ್ಕಿಂತ ಕಡಮೆಯಾದ ಪಾತ್ರೆ ಪ್ರಶಸ್ತವಲ್ಲ. ಹದಿನಾರು ಅಂಗುಲಗಳ ಕಂಚುಪಾತ್ರೆ ಚಿನ್ನದ ಪಾತ್ರೆಗೆ ಸಮಾನವು. ಅಭ್ಯಂಗ ಸ್ನಾನ, ತಾಂಬೂಲ, ಕಂಚುಪಾತ್ರೆ ಭೋಜನ, ವಿಧವಾ ಸ್ತ್ರೀಯರಿಗೆ, ಯತಿಗಳಿಗೆ, ಬ್ರಹ್ಮಚಾರಿಗಳಿಗೆ ವರ್ಜ್ಯವು. ಹರಳೆಲೆ ನಾಯಿಚರ್ಮದಂತಹುದಾದದ್ದರಿಂದ ನಿಷಿದ್ಧವು. ಕಂಚುಪಾತ್ರೆಯೂ ನಿಷಿದ್ಧವೇ! ಬಹಳ ಒಡೆದಿರುವ ಕಂಚುಪಾತ್ರೆಯಲ್ಲಿ ಭೋಜನ ಅತಿನಿಷಿದ್ಧ. ಸಂಧ್ಯಾಸಮಯದಲ್ಲಿ ಊಟ ಮಾಡುವುದು ಮಹಾ ದೋಷಕರವು. ಪತಿತನ ಬಳಿ ಕುಳಿತು ವಿಪ್ರನು ತಿನ್ನಬಾರದು. ಶೂದ್ರನು ತಿಂದು ಮಿಕ್ಕ ಭೋಜನವು ಬ್ರಾಹ್ಮಣನಿಗೆ ಪ್ರಶಸ್ತವಲ್ಲ. ಶ್ರಾದ್ಧದಿನಗಳಲ್ಲಿ ಸಣ್ಣಪುಟ್ಟವರೊಡನೆ ಕೂತು ಊಟ ಮಾಡಬಾರದು. ರಾತ್ರಿಯಲ್ಲೂ ಹುಡುಗರೊಡನೆ ಊಟ ಮಾಡಬಾರದು. ಆಪೋಶನ ತೆಗೆದುಕೊಳ್ಳುವ ನೀರನ್ನು ತಾನೇ ಗ್ರಹಿಸಬಾರದು. ಅಭ್ಯಂಗನಕ್ಕೆ ನೀರನ್ನು, ಆಪೋಶನ ತೆಗೆದುಕೊಳ್ಳುವ ನೀರನ್ನು ತನಗೆ ತಾನೇ ತೆಗೆದುಕೊಳ್ಳಬಾರದು. ಅದರಿಂದ ಬುದ್ಧಿಮಾಂದ್ಯವಾಗುವುದು. ಆದ್ದರಿಂದ ಅದನ್ನು ಪರಹಸ್ತದಿಂದ ಮಾಡಿಸಿಕೊಳ್ಳಬೇಕು. ಹಾಗೆಯೇ ಮಂಡಲವನ್ನು ತಾನೇ ಮಾಡಬಾರದು. ತಾನೇ ಮಾಡಿದರೆ ಪುತ್ರಘಾತ, ಆಯುಕ್ಷೀಣ ಸಂಭವಿಸುವುದು. ಬಡಿಸುವ ಸಮಯದಲ್ಲಿ ನಮಸ್ಕಾರ ಮಾಡಿದಮೇಲೆ ಅಭಿಗಾರ ಮಾಡಬೇಕು. ಮೊದಲು ಪಾಯಸ, ಕೊನೆಯಲ್ಲಿ ಉಪ್ಪು ಬಡಿಸಬೇಕು. ಗಾಯತ್ರಿ ಮಂತ್ರದಿಂದ ಬಡಿಸಿದ ಅನ್ನದ ಮೇಲೆ ನೀರು ಚುಮುಕಿಸಿ, "ಸತ್ಯಂತ್ವಾ------"ಎನ್ನುವ ಮಂತ್ರದಿಂದ ಹಗಲಿನಲ್ಲಿ, "ಋತಂತ್ವಾ----------" ಎನ್ನುವ ಮಂತ್ರದಿಂದ ರಾತ್ರಿಯಲ್ಲಿ ಪರಿಷೇಚನ ಮಾಡಿ, ಬಲಭಾಗದಲ್ಲಿ ಬಲಿ ನೀಡಬೇಕು. ಚಿತ್ರಾದಿಗಳಿಗೆ ಬಲ್ಯನ್ನವನ್ನು ವಿಸರ್ಜನೆ ಮಾಡಿ ನಂತರ ದ್ವಿಜನು ಕೈತೊಳೆದುಕೊಳ್ಳಬೇಕು. ತರ್ಜನಿ, ಮಧ್ಯಮ ಹಾಗೂ ಹೆಬ್ಬೆರಳು ಮೂರೂ ಸೇರಿಸಿ, ಎಡದ ಕೈಯಲ್ಲಿ ಭೋಜನಪಾತ್ರೆಯನ್ನು ಹಿಡಿದುಕೊಂಡು, ದ್ವಿಜನು ಬಲಗೈಯಲ್ಲಿ ಆಪೋಶನ ಹಿಡಿದು ಮಂತ್ರಸಹಿತವಾಗಿ ನೀರನ್ನು ಕುಡಿಯಬೇಕು. ಆಪೋಶನಜಲವನ್ನು ಬಿಟ್ಟು ಮತ್ತೆ ಬೇರೆ ನೀರನ್ನು ತೆಗೆದುಕೊಂಡರೆ ಅದು ನಾಯಿಮೂತ್ರದಂತಾಗುತ್ತದೆ. ಕೈಯಲ್ಲಿ ಆಪೋಶನಜಲ ಗ್ರಹಿಸಿ ತಾನು ಇತರರಿಗೆ ನಮಸ್ಕರಿಸಿದರೂ, ಇತರರು ತನಗೆ ನಮಸ್ಕರಿಸಿದರೂ/ ಆಶೀರ್ವಾದ ಕೊಟ್ಟರೂ ಇಬ್ಬರಿಗೂ ಅದು ದೋಷವೇ! ಮೌನವಾಗಿ ಊಟಮಾಡುವುದು ಪ್ರಶಸ್ತವು. ತಿನ್ನುವಾಗ ಶಬ್ದಾದಿಗಳನ್ನು ಮಾಡಬಾರದು. ಮಂತ್ರಪೂರ್ವಕವಾಗಿ ಆಪೋಶನಜಲವನ್ನು ಕುಡಿದು, ನಂತರ ಪ್ರಾಣಾಹುತಿಗಳನ್ನು ಮಾಡಬೇಕು. ಅಪೋಶನ ತೆಗೆದುಕೊಳ್ಳದೆ ಊಟ ಮಾಡಿದರೆ ಅದು ದೋಷವು. ಆ ದೋಷವನ್ನು ಕಳೆದುಕೊಳ್ಳಲು ದ್ವಿಜನು ಅಷ್ಟೋತ್ತರಶತ ಗಾಯತ್ರಿ ಮಾಡಬೇಕು.

ಬ್ರಾಹ್ಮಣ, ಪ್ರಾಣಾಹುತಿ ವಿಧಾನವು ಶ್ರುತಿಯಲ್ಲಿ ಹೇಳಿರುವ ಹಾಗೆ ಕೇಳು. ಈ ಪ್ರಾಣಾಗ್ನಿಹೋತ್ರವು ಸರ್ವಪಾಪಹರವು. ಅಗ್ನಿಯ ಸ್ಪರ್ಶದಿಂದಲೇ ಹತ್ತಿಯ ರಾಶಿಯು ಸುಟ್ಟುಹೋಗುವಹಾಗೆ ಪ್ರಾಣಾಗ್ನಿಹೋತ್ರದಿಂದ ಸರ್ವಪಾಪಗಳು ನಾಶವಾಗುವುವು. ಪ್ರಾಣಾಹುತಿ ವಿಧಾನದಲ್ಲಿ ಸರ್ವಾರ್ಥಕಾಮಮೋಕ್ಷಗಳೆನ್ನುವ ಚತುರ್ವರ್ಗಗಳೂ ಸಿದ್ಧಿಸುತ್ತವೆ. ಗೀತೆಯಲ್ಲಿ ಹೇಳಿರುವ ಶ್ಲೋಕವನ್ನು ಅನ್ನವನು ಮುಟ್ಟಿಕೊಂಡು ಧ್ಯಾನನಿಷ್ಠನಾಗಿ ಹೇಳಬೇಕು. 

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ| 
ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ||

ನಾನು ವೈಶ್ವಾನರನಾಗಿ ಪ್ರಾಣಿಗಳ ದೇಹವನ್ನಾಶ್ರಯಿಸಿ ಪ್ರಾಣ-ಅಪಾನಗಳಿಂದ ಕೂಡಿ, ಚತುರ್ವಿಧವಾದ ಅನ್ನವನ್ನು ಪಚನ ಮಾಡುತ್ತೇನೆ. ಅನ್ನಂ ಬ್ರಹ್ಮ, ರಸೋ ವಿಷ್ಣುಃ, ಭೋಕ್ತಾದೇವೋ ಮಹೇಶ್ವರಃ ಅನ್ನವು ಬ್ರಹ್ಮ, ರಸವು ವಿಷ್ಣು, ಭೋಕ್ತ ಮಹೇಶ್ವರದೇವನು. ಹೀಗೆ ಧ್ಯಾನಮಾಡಿ ಭುಜಿಸುವವನು ಅನ್ನ ದೋಷವನ್ನು ಹೊಂದುವುದಿಲ್ಲ. ಆದ್ದರಿಂದ ಮಂತ್ರಾರ್ಥವನ್ನು ಧ್ಯಾನಮಾಡಿ, ‘ಅಗ್ನಿರಸ್ಮಿ------’ ಎನ್ನುವ ಮಂತ್ರವನ್ನು ಪಠಿಸಿ, ಪ್ರಾಣಾಹುತಿಗಳನ್ನು ಸ್ವೀಕರಿಸುವುದಕ್ಕೆ, ಕ್ರಮಕ್ರಮವಾಗಿ ಒಂದೊಂದಾಗಿ ಬಾಯೊಳಕ್ಕೆ ಹಾಕಿಕೊಳ್ಳಬೇಕು. ತರ್ಜನಿ (ತೋರುಬೆರಳು), ಹೆಬ್ಬೆರಳು, ಮಧ್ಯದ ಬೆರಳುಗಳಿಂದ ಮೊದಲನೆಯ ಪ್ರಾಣಾಹುತಿ ಹಾಕಿಕೊಳ್ಳಬೇಕು. ಮಧ್ಯದ ಬೆರಳು, ಅನಾಮಿಕ, ಹೆಬ್ಬೆರಳುಗಳಿಂದ ಅಪಾನಾಹುತಿಯನ್ನು ಬಾಯಲ್ಲಿ ಹಾಕಿಕೊಳ್ಳಬೇಕು. ಕಿರುಬೆರಳು ಅನಾಮಿಕದಿಂದ ವ್ಯಾನಾಹುತಿಯನ್ನು ಹಾಕಿಕೊಳ್ಳಬೇಕು. ಕಿರುಬೆರಳು, ಹೆಬ್ಬೆರಳು, ತೋರುಬೆರಳುಗಳಿಂದ ಉದಾನಾಹುತಿಯನ್ನು ಹಾಕಿಕೊಳ್ಳಬೇಕು. ಸಮಾನಾಹುತಿಯನ್ನು ಐದೂ ಬೆರಳುಗಳಲ್ಲಿ ಆದರದಿಂದ ಹೋಮ ಮಾಡಬೇಕು. ಇದಕ್ಕೆ ಸ್ಥಾನಗಳು ಹೃದಯ, ಗುದ, ನಾಭಿ, ಕಂಠ, ಸಮಗ್ರ ಅವಯವಗಳು. ದ್ವಿಜನು ಹಲ್ಲುಗಳಿಂದ ಮುಟ್ಟದೆ ಪ್ರಾಣಾಹುತಿಗಳಿಗೆ ಕೊಟ್ಟ ಅನ್ನವನ್ನು ನಾಲಗೆಯಿಂದ ಮುಟ್ಟುತ್ತ ಮಾತ್ರ ನುಂಗಬೇಕು. ಪಂಚಸ್ಥಾನಗಳಲ್ಲಿ ಪ್ರಾಣಾಹುತಿಗಳನ್ನು ಕೊಡುವಾಗ ಮೌನ ವಹಿಸುವುದು ಸರ್ವಾರ್ಥ ಸಾಧಕವು. ಸ್ನಾನ ಮಾಡುವಾಗ ಮೌನವನ್ನು ವಹಿಸದಿದ್ದರೆ ಅದರ ಫಲವನ್ನು ವರುಣನು ತೆಗೆದುಕೊಂಡು ಹೋಗುತ್ತಾನೆ. ಹೋಮ ಮಾಡುವಾಗ ಮೌನವನ್ನು ವಹಿಸದಿದ್ದರೆ ಅದರ ಫಲವಾಗಿ ಲಕ್ಷ್ಮಿ ಬಿಟ್ಟು ಹೋಗುತ್ತಾಳೆ. ಭೋಜನ ಮಾಡುವಾಗ ಮೌನ ಪಾಲಿಸದಿದ್ದರೆ ಅಪಮೃತ್ಯುವು ಬರಬಹುದು. ಮೌನವು ಅಸಂಭವವಾದರೆ ಪ್ರಾಣಾಹುತಿಗಳು ಆಗುವವರೆಗಾದರೂ ಮೌನವು ಎಲ್ಲರಿಗೂ ಬಹು ಅವಶ್ಯವು. ಇದರಲ್ಲಿ ವಿಶೇಷವೊಂದಿದೆ. ತಂದೆ ಜೀವಂತವಿರುವವನಿಗೆ, ದೊಡ್ಡಣ್ಣ ಇರುವವನಿಗೆ, ಮೌನದ ಅವಶ್ಯಕತೆಯಿಲ್ಲ. ಅವರು ಶ್ರಾದ್ಧ ಭೋಜನದಲ್ಲಿ ಮೌನ ಪಾಲಿಸಬೇಕು.

ಮಧುರಾನ್ನವನ್ನು ಮೊದಲು ತಿನ್ನಬೇಕು. ಹುಳಿಯಾದದ್ದು, ಘಟ್ಟಿಯಾದದ್ದು, ಊಟದ ಮಧ್ಯದಲ್ಲಿ ತಿನ್ನಬೇಕು. ಭೋಜನ ಮಧ್ಯದಲ್ಲಿ ದ್ರವಾನ್ನ ತಿನ್ನಬಾರದು. ಭೋಜನದ ಕೊನೆಯಲ್ಲಿ ಘಟ್ಟಿಯಾದದ್ದನ್ನು ತಿನ್ನಬೇಕು. ಮೊದಲು ತಿನ್ನಬೇಕಾದ್ದು ಆಮೇಲೆ, ಆಮೇಲೆ ತಿನ್ನಬೇಕಾದ್ದು ಮೊದಲು ತಿಂದರೆ ಬಲಹಾನಿ. ಬೇಗ ತಿನ್ನುವುದು ಉತ್ತಮವು. ಸುಖಪ್ರದವು. ಈ ಶೀಘ್ರ ಭೋಜನವನ್ನು ಹಸುವು ನೀರು ಕುಡಿಯುವಷ್ಟು ಹೊತ್ತಿನಲ್ಲಿ ಮಾಡಬೇಕು. ಮೇಕೆಯ ಹಾಗೆ ಶೀಘ್ರ ಭೋಜನ ಮಡುವುದು ಸುಖಪ್ರದವು. ಊಟಮಾಡುವಾಗ ಮುದ್ದೆಗಳು ಹೇಗಿರಬೇಕು ಎಂಬುದನ್ನು ಮುನಿಗಳು ಹೇಳಿದ್ದಾರೆ. ಸನ್ಯಾಸಿಗೆ ನವಿಲು ಮೊಟ್ಟೆಯಪರಿಮಾಣದಲ್ಲಿ ಎಂಟು ಮುದ್ದೆ ಹೇಳಿದ್ದಾರೆ. ಗೃಹಸ್ಥನಿಗೆ ಮುವ್ವತ್ತೆರಡು ಗ್ರಾಸ. ವಾನಪ್ರಸ್ಥನಿಗೆ ಹದಿನಾರು ಗ್ರಾಸ. ಬ್ರಹ್ಮಚಾರಿಗೆ ಇವೆರಡರ ಮಧ್ಯೆ ಅವನಿಗಿಷ್ಟವಾದಷ್ಟು. ಅಂದರೆ ಹದಿನಾರರಿಂದ ಮುವ್ವತ್ತೆರಡರವರೆಗೂ ಇರಬಹುದು. ಮುಖದಲ್ಲಿ ಯಾವ ವಿಕಾರವೂ ತೋರದಂತೆ ನುಂಗಬೇಕು. ತುತ್ತು ಬಹಳ ದೊಡ್ಡದಾಗಿ ಮಾಡಿಕೊಂಡು ತಿನ್ನಬಾರದು. ಪಾತ್ರೆಯಲ್ಲಿ ಬಿದ್ದ ಉಚ್ಚಿಷ್ಟವನ್ನು ತಿನ್ನಬಾರದು. ಹಾಗೆ ತಿಂದವನು ಎಂಜಲು ತಿಂದವನಾಗುತ್ತಾನೆ. ಸ್ವಲ್ಪ ತುತ್ತನ್ನು ತಿಂದು, ಮಿಕ್ಕದ್ದನ್ನು ಪಾತ್ರೆಯಲ್ಲಿಟ್ಟು, ಮತ್ತೆ ಹಾಗಿಟ್ಟದ್ದನ್ನು ತಿಂದವನು ಚಾಂದ್ರಾಯಣ ವ್ರತವನ್ನು ಮಾಡಬೇಕು. ಒಂದೇ ಪಾತ್ರೆಯಲ್ಲಿ ಇಷ್ಟರೊಡನೆ ಕೂಡಿ ತಿನ್ನಬಾರದೆಂದು ಕೆಲವರು ಹೇಳುತ್ತಾರೆ. ಉಪನಯನವಾಗದ ಬಾಲಕನೊಡನಾಗಲೀ, ವಿವಾಹವಾಗದ ಕನ್ಯೆಯೊಡನಾಗಲೀ ಏಕಪತ್ರ ಭೋಜನವು ದೋಷವಲ್ಲ. ಪದಾರ್ಥಗಳನ್ನು ಸ್ವಲ್ಪ ಮಿಗಿಸಿ ತಿನ್ನಬೇಕು. ತುಪ್ಪ ಸೇರಿಸಿದ ಪಾಯಸವನ್ನು ನಿಶ್ಶೇಷವಾಗಿ ತಿನ್ನಬೇಕು. ಉಪ್ಪನ್ನು, ತುಪ್ಪವನ್ನು ಮಿಗಿಸಬಾರದು. ಮೊದಲು ಭೋಜನ ಪಾತ್ರೆಯನ್ನು ಎಡಕೈಯಲ್ಲಿ ಎತ್ತಿ ಹಿಡಿದು ಊಟ ಪೂರ್ತಿಯಾಗುವವರೆಗೂ ಕೆಳಗಿಡಬಾರದು. ಹಾಗೆ ಹಿಡಿದಿದ್ದ ಪಾತ್ರೆಯನ್ನು ಕೆಳಗಿಟ್ಟರೆ ಮತ್ತೆ ಅದರಿಂದ ತಿನ್ನಬಾರದು. ಇಲ್ಲದಿದ್ದರೆ ಪಾತ್ರೆಯನ್ನು ಮೊದಲೇ ಕೈಯಲ್ಲಿ ಹಿಡಿಯಬಾರದು. ಅದರಿಂದ ಯಾವ ದೋಷವೂ ಇಲ್ಲ. ತಲೆಯ ಮೇಲೆ ಬಟ್ಟೆ ಹೊದ್ದುಕೊಂಡು ತಿನ್ನಬಾರದು. ಪಾದರಕ್ಷೆಗಳನ್ನು ಎದುರಿಗಿಟ್ಟುಕೊಂಡು ತಿನ್ನಬಾರದು. ಎಡಕಾಲಿನ ಮೇಲೆ ಕೈಯ್ಯೂರಿಕೊಂಡು ತಿನ್ನಬಾರದು. ಹಾಗೆ ಮಾಡಿದರೆ ಆ ಅನ್ನವನ್ನು ರಾಕ್ಷಸರು ತಿನ್ನುತ್ತಾರೆ. ಬಲಗಾಲಿನ ಮೇಲೆ ಕೈಯಿಟ್ಟು ಊಟಮಾಡುವವನು ರೋಗಿಯಾಗುತ್ತಾನೆ. ಕೈಬೆರಳುಗಳನ್ನು ಬಿಡಿಸಿಟ್ಟುಕೊಂಡು ತಿನ್ನುವವನೂ ರೋಗಿಯಾಗುತ್ತಾನೆ. ಕೈಬೆರಳುಗಳನ್ನು ಚಾಚಿಕೊಂಡು ತಿನ್ನುವವನು ಮಾಂಸಭಕ್ಷಣ ದೋಷವನ್ನು ಹೊಂದುತ್ತಾನೆ. ಕುದುರೆ ಅಥವಾ ಆನೆಯ ಮೇಲೆ ಕೂತು ಅಥವಾ ದೇವಾಲಯದಲ್ಲಿ ಕೂತು ಊಟ ಮಾಡಬಾರದು. ಶ್ಮಶಾನದಲ್ಲಿ, ನಿದ್ರಿಸುವ ಜಾಗದಲ್ಲಿ ಊಟ ಮಾಡಬಾರದು. ಕೈಯಲ್ಲಿಟ್ಟುಕೊಂಡು ಅನ್ನವನ್ನು ತಿನ್ನಬಾರದು. ಒದ್ದೆಬಟ್ಟೆಯುಟ್ಟೂ ಊಟಮಾಡಬಾರದು. ಕೈಗಳನ್ನು ಹೊರಗೆ ಹರಡಿಕೊಂಡು ಊಟ ಮಾಡಬಾರದು. ಜನಿವಾರವನ್ನು ಸವ್ಯದಲ್ಲಿಟ್ಟುಕೊಂಡೇ ಊಟ ಮಾಡಬೇಕು. ಪಾದರಕ್ಷೆಗಳನ್ನು ಧರಿಸಿ ಊಟ ಮಾಡಬಾರದು. ಅನ್ನದ ಮುದ್ದೆ, ನೀರು, ಕಂದಮೂಲಗಳು, ಸ್ವಲ್ಪ ತಿಂದು ಮಿಕ್ಕಿದ್ದನ್ನು ಇಟ್ಟು ಮತ್ತೆ ಅದನ್ನು ತಿನ್ನುವವನು ಉಚ್ಚಿಷ್ಟವನ್ನು ತಿಂದವನಾಗುತ್ತಾನೆ. ಸ್ನಾನ ಮಾಡದೆ ಊಟ ಮಾಡಬಾರದು. ಸ್ನಾನವಿಲ್ಲದವನು ಹೋಮವನ್ನೂ ಮಾಡಬಾರದು. ರೋಗವಿಲ್ಲದೆ, ಸ್ನಾನಮಾಡದೆ ಊಟ ಮಾಡುವವನು ಕೀಟಕಗಳನ್ನು ತಿಂದವನಾಗುತ್ತಾನೆ. ಎಲೆಯ ಹಿಂಭಾಗದಲ್ಲಿ ಅನ್ನವಿಟ್ಟುಕೊಂಡು ತಿನ್ನಬಾರದು. ದೀಪವನ್ನು ಬೆಳಗಿಸದೆ ಅಂಧಕಾರದಲ್ಲಿಯೇ ಊಟ ಮಾಡುವ ಆರೋಗ್ಯವಂತನು ಹುಳುಗಳನ್ನು ತಿನ್ನುವವನೇ! ಊಟದ ಮಧ್ಯೆ ದೀಪ ಆರಿಹೋದರೆ ಸೂರ್ಯನನ್ನು ಸ್ಮರಿಸಿ, ಮತ್ತೆ ದೀಪವನ್ನು ಹಚ್ಚಿ, ನಂತರವೇ ಊಟ ಮಾಡಬೇಕು. (ತನ್ನ)ಪಾತ್ರೆಯಲ್ಲಿರುವ ಅನ್ನವನ್ನೇ ತಿನ್ನಬೇಕು. ಇನ್ನೊಂದು ಪಾತ್ರೆಯಲ್ಲಿರುವ ಅನ್ನವನ್ನು ತೆಗೆದುಕೊಂಡು ತಿನ್ನುವವನು ದೋಷಯುಕ್ತನಾಗುತ್ತಾನೆ. ಅನ್ನದಲ್ಲಿ ಕೂದಲು ಕಾಣಿಸಿದರೆ ಆ ಅನ್ನವನ್ನು ಬಿಟ್ಟುಬಿಡಬೇಕು. ಊಟ ಮಾಡುತ್ತಾ ಕಥೆಗಳನ್ನು ಹೇಳಬಾರದು. ದಿಕ್ಕುಗಳನ್ನೂ, ಆಕಾಶವನ್ನೂ ನೋಡಬಾರದು. ಹೆಂಡತಿಗೆ ಮಿಗಿಸದೇ ಊಟ ಮಾಡುವುದು ದೋಷವು. ಶೂನ್ಯಗೃಹದಲ್ಲಿ ಊಟ ಮಾಡಬಾರದು. ನೀರಿನ ಸಮೀಪದಲ್ಲಿ ಸಂಧ್ಯಾಸಮಯದಲ್ಲಿ ಊಟ ಮಾಡಬಾರದು. ಕಲ್ಲಿನ ಮೇಲೆ ಪಾತ್ರೆಯಿಟ್ಟು ಎಂದಿಗೂ ಊಟ ಮಾಡಬಾರದು. ಊಟ ಮಾಡುವವನು ಬಡಿಸುವ ಸ್ತ್ರೀಯ ಮುಖವನ್ನು ನೋಡಬಾರದು. ಒಂದೇ ಮನೆಯಲ್ಲಿ, ಒಂದೇ ಸಮಯದಲ್ಲಿ ಹೆಂಡತಿಯೊಡನೆ ಊಟ ಮಾಡುವ ಮಾನವನು, ಮತ್ತೊಂದು ಪಾತ್ರೆಯಲ್ಲಿ ಊಟ ಮಾಡಿದರೂ, ಉಚ್ಚಿಷ್ಟ ದೋಷವನ್ನು ಹೊಂದುತ್ತಾನೆ. ಬಟ್ಟೆಯಿಂದ ನೀರು ಕುಡಿಯುವವನಿಗೆ ನಿಶ್ಚಯವಾಗಿಯೂ ದೋಷ ಬರುತ್ತದೆ. ಬಟ್ಟೆಯಲ್ಲಿ ಊಟ ಮಾಡಿದರೂ ಘೋರ ನರಕವನ್ನು ಹೊಂದಿ ನಾಯಿಯಾಗಿ ಜನಿಸುತ್ತಾನೆ. ಶಬ್ದ ಮಾಡುತ್ತಾ ನೀರು ಕುಡಿಯುವುದು, ಫೂತ್ಕಾರಗಳೊಡನೆ ಪಾಯಸಾದಿಗಳನ್ನು ತಿನ್ನುವುದೂ ಸುರಾಪಾನಕ್ಕೆ ಸಮಾನ. ನಿಂತು ನೀರು ಕುಡಿಯುವುದು, ನೀರಿನಲ್ಲಿ ಪ್ರವೇಶಿಸಿ ಬಾಯಿಂದ ನೀರು ಕುಡಿಯುವುದು ಮದ್ಯಪಾನಕ್ಕೆ ಸಮಾನವು. ಹಾಗೆಯೇ ಬೊಗಸೆ ಹಿಡಿದು ನೀರು ಕುಡಿಯುವುದೂ ಮದ್ಯಪಾನಕ್ಕೆ ಸಮಾನ. ಎಡಕೈಯಲ್ಲಿ ಪಾತ್ರೆ ಹಿಡಿದು ನೀರು ಕುಡಿಯುವುದೂ ಮದ್ಯಪಾನದಂತಹುದೇ! ಬೇರೆ ಬೇರೆ ಪಾತ್ರೆಗಳಲ್ಲಿ ಅನ್ನವನ್ನು ಇಡಬಾರದು. (ಊಟ ಮಾಡುವಾಗ) ರಜಸ್ವಲೆಯರನ್ನು ನೋಡಬಾರದು. ಭೋಜನ ಸಮಯದಲ್ಲಿ ನಾಯಿ, ಚಂಡಾಲ, ಹೀನ ಜಾತಿಯವರನ್ನು ಕೂಡಾ ನೋಡಬಾರದು. ಊಟದ ಸಮಯದಲ್ಲಿ ಅಂತಹವರನ್ನು ನೋಡಿದರೂ, ಅವರ ಶಬ್ದ/ಮಾತು ಕೇಳಿಸಿದರೂ, ಬಾಯಲ್ಲಿದ್ದ ಅನ್ನವನ್ನು ಉಗುಳಿ ಊಟ ಬಿಟ್ಟು ಏಳಬೇಕು.

ಬೀಸುವ ಕಲ್ಲು, ರುಬ್ಬುಗುಂಡು, ಒರಳುಕಲ್ಲು ಮುಂತಾದುವುಗಳ ಶಬ್ದ ಕೇಳಿ ಬಂದಾಗ, ಶಬ್ದ ಕೇಳಿಸುತ್ತಿರುವವರೆಗೂ ಊಟ ಮಾಡಬಾರದು. ಜಗಳ ಬಂದಾಗ ಅಪಶಬ್ದಗಳು (ಬೈಗಳು) ಕೇಳಿಸುತ್ತಿರುವವರೆಗೂ ಊಟ ನಿಲ್ಲಿಸಬೇಕು. ಪಂಕ್ತಿಯಲ್ಲಿ ಅಪರಿಚಿತ ವ್ಯಕ್ತಿ ಕಂಡುಬಂದರೆ ಎಂದಿಗೂ ಅಲ್ಲಿ ಕುಳಿತು ಊಟ ಮಾಡಬಾರದು. ಅಜ್ಞಾತ ವ್ಯಕ್ತಿಯೊಡನೆ ಸಹಪಂಕ್ತಿಯಿಂದ ಬರುವ ದೋಷವನ್ನು ಹೋಗಲಾಡಿಸುವುದಕ್ಕೆ ಭಸ್ಮದಿಂದ ಪಂಕ್ತಿಯನ್ನು ಬೇರೆ ಮಾಡಬೇಕು. ದ್ವಾರಮಾರ್ಗವನ್ನು ಏರ್ಪಡಿಸಿಕೊಂಡು, ಸ್ತಂಭವನ್ನು ಅಡ್ಡವಿಟ್ಟುಕೊಂಡು, ನೀರಿನ ಧಾರೆಯಿಂದ ಪಂಕ್ತಿಯನ್ನು ಬೇರ್ಪಡಿಸಿ ಊಟ ಮಾಡಬೇಕು. ಪಂಕ್ತಿ ಬೇಧ ಮಾಡಿದರೆ ಇಂತಹ ದೋಷ ಸಂಭವಿಸದು. ಕಪ್ಪು ಸೀರೆಯುಟ್ಟ ಸ್ತ್ರೀ ಅನ್ನವನ್ನು ಬಡಿಸಿದರೆ ಆ ಅನ್ನವು ದೋಷವನ್ನುಂಟುಮಾಡುತ್ತದೆ. ಕಚ್ಚೆಹಾಕದೆ ಸೀರೆಯುಟ್ಟು ಬಡಿಸಿದರೂ ಅನ್ನವು ಉಚ್ಚಿಷ್ಟದಂತಹುದೇ ಆಗುತ್ತದೆ. ಹೀಗೆ ಎಲ್ಲ ವಿಷಯಗಳನ್ನು ಸರಿಯಾಗಿ ತಿಳಿದುಕೊಂಡು/ವಿಮರ್ಶಿಸಿಕೊಂಡು ವಿದ್ವಾಂಸನಾದವನು ಉತ್ತಮವಾದ ಭೋಜನವನ್ನು ಮಾಡಬೇಕು. "ವಿಕಿರಿದ ವಿಲೋಹಿತ_______"ಎನ್ನುವ ರುದ್ರ ಮಂತ್ರದಿಂದ ಉಚ್ಚಿಷ್ಟ ಶೇಷವನ್ನು ಅಭಿಮಂತ್ರಿಸಬೇಕು. ಎಲ್ಲ ಮಂತ್ರಗಳಿಗೂ ಋಷಿ, ಛಂದಸ್ಸು, ದೇವತೆ, ಮಂತ್ರವಿನಿಯೋಗಗಳನ್ನು ಸ್ಮರಿಸಿ ಕರ್ಮವಾಚರಿಸಬೇಕು. ಮಂತ್ರಿತವಾದ ಅನ್ನವನ್ನು ಪಾತ್ರೆಯ ಹೊರಗೆ, ಭೂಮಿಯಮೇಲೆ, ಉಚ್ಚಿಷ್ಟವನ್ನು ಪಡೆಯುವ ಜೀವಿಗಳಿಗಾಗಿ ಹಾಕಿ, ನಂತರ ಉತ್ತರಾಪೋಶನ ತೆಗೆದುಕೊಳ್ಳಬೇಕು. ಉತ್ತರಾಪೋಶನಕ್ಕೆ ತೆಗೆದುಕೊಂಡ ನೀರಿನಲ್ಲಿ ಸ್ವಲ್ಪ ಉಚ್ಚಿಷ್ಟಾನ್ನದ ಮೇಲೆ ಹಾಕಬೇಕು. ಇದಕ್ಕೆ "ರೌರವೇ ಅಪುಣ್ಯ ನಿಲಯೇ__________" ಎನ್ನುವ ಮಂತ್ರವನ್ನು ಹೇಳಬೇಕು. ಹೊರಗೆ ಹೋಗಿ ಪುಕ್ಕಳಿಸಿ ಕೈ ತೊಳೆದುಕೊಳ್ಳಬೇಕು. ಮೊದಲು ಗಂಡೂಷ(ಪುಕ್ಕಳಿಸುವುದು)ಮಾಡದೆ ಕೈ ತೊಳೆದುಕೊಳ್ಳುವುದು ಆತ್ಮಹತ್ಯೆಯೇ!

ಮುಖಪ್ರಕ್ಷಾಳನ ಮಾಡಿಕೊಳ್ಳುವಾಗ ತೋರುಬೆರಳಿನಿಂದ ಬಾಯಿ ಶುಭ್ರ ಮಾಡಬಾರದು. ಮಧ್ಯದ ಬೆರಳಿನಿಂದ ಶುಭ್ರಪಡಿಸಬೇಕು. ಇಲ್ಲದಿದ್ದರೆ ರೌರವ ನರಕವೇ! ಕೈಗಳನ್ನು ಚೆನ್ನಾಗಿ ತೊಳೆದು, ಹಲ್ಲುಗಳನ್ನು ಶುಭ್ರವಾಗಿ ತೊಳೆಯಬೇಕು. ಕೈಯಿಂದ ಪವಿತ್ರವನ್ನು ತೆಗೆದು ನೈರುತ್ಯ ದಿಕ್ಕಿನಲ್ಲಿ ಹಾಕಬೇಕು. ನಂತರ ಪಾದಗಳನ್ನು ಶುಭ್ರ ಮಾಡಿಕೊಂಡು, ಆಚಮನ ಮಾಡಿ, ಕೈಯಿಂದ ಎತ್ತಿದ ನೀರನ್ನು, "ಅಂಗುಷ್ಠ______" ಎನ್ನುವ ಮಂತ್ರದಿಂದ ಜಪಿಸಿ ಎರಡೂ ಕಣ್ಣುಗಳಲ್ಲಿ ಚುಮುಕಿಸಕೊಳ್ಳಬೆಕು. ಹೀಗೆ ಮಾಡದವನಿಗೆ ಕಣ್ಣು ಬೇನೆ ಬರುವುದು. ಕೈನೀರನ್ನು ಕಣ್ಣುಗಳ ಮೇಲೆ ಚುಮುಕಿಸಿಕೊಳ್ಳುವವನು ಸುದರ್ಶನ (ಚೆನ್ನಾಗಿ ನೋಡುವವನು) ಆಗುತ್ತಾನೆ. ಅನಂತರ ಎರಡುಬಾರಿ ಆಚಮನ ಮಾಡಿ, "ಅಯಂಗೌಃ_______" ಎನ್ನುವ ಮಂತ್ರವನ್ನು ಯಥೋಕ್ತವಾಗಿ ಜಪಿಸಬೇಕು. "ದುಪದಾದಿ____" ಎಂದೂ, ಪ್ರಾಣಾನಾಂ ಗ್ರಂಥಿರಸಿ______" ಎಂದೂ, ಎರಡು ಮಂತ್ರಗಳನ್ನು ಕೂಡಾ ಜಪಿಸಬೇಕು. ಈ ಮಂತ್ರಗಳನ್ನು ಜಪಿಸಿ, ದ್ವಿಜೋತ್ತಮನು ಕೂತು ನಾಭಿಯನ್ನು ಸ್ಪರ್ಶಿಸಬೇಕು. ಆ ನಂತರ ಎರಡುಸಲ ಆಚಮನ ಮಾಡಿ, ಅಗಸ್ತ್ಯ, ಕುಂಭಕರ್ಣ, ಬಡಬಾಗ್ನಿ, ವಾತಾಪಿಯರನ್ನು ಸ್ಮರಿಸಿ, "ಶರ್ಯಾತಿಂ_________" ಎನ್ನುವ ಮಂತ್ರವನ್ನು ದ್ವಿಜನು ಜಪಿಸಬೇಕು. ನಂತರ ತಂದೆ ಬದುಕಿರುವವನು ಎರಡೂ ಕೈಗಳನ್ನು ಅಗ್ನಿಯ ಮೇಲೆ ಹಿಡಿದು ಕಾಯಿಸಿಕೊಳ್ಳಬೇಕು. ದೊಡ್ಡಣ್ಣನಾದರೆ ವಸ್ತ್ರದಿಂದ ಒರೆಸಿಕೊಳ್ಳಬೇಕು. ಅದಾದನಂತರ ಶ್ರೀಗುರುವು, ಕುಲದೈವಗಳನ್ನು ಸ್ಮರಿಸಬೇಕು. ಬ್ರಾಹ್ಮಣರಿಗೆ ಭೋಜನ ವಿಧಾನವಿದು." ಎಂದು ಶ್ರೀಗುರುವು ಬ್ರಾಹ್ಮಣನಿಗೆ ಹೇಳಿದರು. ಹಾಗೆ ಹೇಳಿದ ಗುರೂಪದೇಶವನ್ನು ಕೇಳಿದ ಆ ಬ್ರಾಹ್ಮಣ, "ಭೋಜನ ವಿಧಿಯನ್ನು ಕೇಳಿದೆ. ನಿಷಿದ್ಧಾನದ ವಿಷಯವನ್ನು ಹೇಳಬೇಕೆಂದು ಕೋರುತ್ತೇನೆ." ಎನ್ನಲು, ಸಂತುಷ್ಟನಾಗಿ ಶ್ರೀಗುರುವು ಹೇಳಿದರು.

"ವೈಶ್ವದೇವ ಮಾಡದ ಅನ್ನ, ಉಪ್ಪು ಖಾರಗಳನ್ನು ಹೆಚ್ಚಾಗಿ ಹಾಕಿದ ಪದಾರ್ಥಗಳಿಂದ ಕೂಡಿದ ಅನ್ನ, ಒಂದೇಕಡೆಯಲ್ಲಿ ಬಹಳ ಜನಕ್ಕಾಗಿ ಮಾಡಿದ ಅಡಿಗೆ ಇವನ್ನು ಬಿಟ್ಟುಬಿಡಬೇಕು. ಬಿಳಿಬದನೆ, ಬೆಳ್ಳುಳ್ಳಿ, ಈರುಳ್ಳಿ, ಅಣಬೆಗಳನ್ನು ಉಪಯೋಗಿಸಿ ಮಾಡಿದ ಅಡಿಗೆ, ನೀಚರು ಮಾಡಿದ ಅಡಿಗೆ, ಇವು ನಿಷಿದ್ಧವು. ಮೂರು ದಿನಗಳವರೆಗೂ ಹೊಸ ನೀರು, ಹಸು, ಮೇಕೆ ಮುಂತಾದವು ಕರುಹಾಕಿದ ಹತ್ತು ದಿನಗಳವರೆಗೂ ಅವುಗಳ ಹಾಲು, ಸೀದುಹೋದ ಅನ್ನ ಇವನ್ನೂ ವರ್ಜಿಸಬೇಕು. ಉಗುರು/ಕೂದಲುಗಳಿಂದ ಕೂಡಿದ ಅನ್ನ, ಹದ್ದು, ಕೋಳಿ, ಕಾಗೆ, ಬೆಕ್ಕು ಇವುಗಳು ಮುಟ್ಟಿದ ಅನ್ನ ಇವನ್ನೂ ವರ್ಜಿಸಬೇಕು. ಹಸು, ಇಲಿಗಳು ಮುಟ್ಟಿದ ಅನ್ನ, ಕೆಳಗೆ ಬಿದ್ದ ಅನ್ನ, ಉಚ್ಚಿಷ್ಟ ತಗುಲಿದ ಅನ್ನ, ಇವನ್ನೂ ಬಿಡಬೇಕು. ಸೌಟಿನಲ್ಲಿ ಬಡಿಸಬೇಕಾದ್ದನ್ನು ಕೈಯಲ್ಲಿ ಬಡಿಸಿದರೆ ಅದನ್ನೂ ಬಿಟ್ಟುಬಿಡಬೇಕು. ತುಪ್ಪ ಕಲಿಸಿದ, ಎಣ್ಣೆ,ತುಪ್ಪ, ಹಾಲುಗಳಿಂದ ಮಾಡಿದ ಪದಾರ್ಥಗಳಾದರೂ ರಾತ್ರಿ ಇಟ್ಟಿದ್ದರೆ ಅವು ವರ್ಜ್ಯವು. ಬ್ರಾಹ್ಮಣನು ಮಾರಿದ ಹಾಲನ್ನು ಬಿಡಬೇಕು. ಅಗ್ನಿಯಲ್ಲಿ ಸುಟ್ಟ ಅನ್ನ ಕೆಲಸಕ್ಕೆ ಬರುವುದಿಲ್ಲ. ಉದ್ದಿನಿಂದ ಮಾಡಿದ ಪದಾರ್ಥ, ವಡೆ, ಅರಳು, ಹುರಿಹಿಟ್ಟು ಪರ್ಯುಷಿತಗಳಲ್ಲ. ಮಿಕ್ಕ ಪರ್ಯುಷಿತಗಳು ನಿಷಿದ್ಧ. ಕಂದಮೂಲಗಳು, ಬೆಲ್ಲ ಮುಂತಾದವುಗಳೊಡನೆ ಸೇರಿಸಿ ಬೇಯಿಸಿದ ಪರಮಾನ್ನವು ರಾತ್ರಿ ಕಳೆದಮೇಲೆ ಉಪಯೋಗಕ್ಕೆ ಬರುವುದಿಲ್ಲ. ಪರ್ಯುಷಿತದೋಷಗಳಿಲ್ಲದಿರುವವನ್ನು ಜಾಗ್ರತೆಯಾಗಿ ಕಾಪಾಡಬೇಕು. ಅಶುಚಿ ಸೋಕಿದ ಪದಾರ್ಥವನ್ನು ಬಿಡಬೇಕು. ಎಣ್ಣೆ ಕಲಸಿ ಮಾಡಿದ ಭಕ್ಷ್ಯಾದಿಗಳನ್ನು ಹಗಲು ಮಾತ್ರ ತಿನ್ನಬೇಕು. ರಾತ್ರಿಹೊತ್ತು ಎಣ್ಣೆ ಮಿಶ್ರಿತಾನ್ನವನ್ನು ವಿಸರ್ಜಿಸಬೇಕು. ನೆಲ್ಲಿಕಾಯಿ, ಕುಂಬಳ, ಪಡವಲಕಾಯಿ, ಗೆಡ್ಡೆಗೆಣಸು ಪಾಡ್ಯಮಿಯಂದು ತಿನ್ನಬಾರದು. ಸ್ವರ್ಗ-ಮೋಕ್ಷಗಳನ್ನು ಕೋರುವವನು ಅತ್ತಿಹಣ್ಣನ್ನು ಅಷ್ಟಮಿಯಂದು ತಿನ್ನಬಾರದು. ನೆಲ್ಲಿಕಾಯಿ ರಾತ್ರಿಹೊತ್ತಿನಲ್ಲಿ, ಸಪ್ತಮಿಯಂದು, ಭಾನುವಾರದಂದು, ತಿನ್ನಬಾರದು. ಬಿಲ್ವದ ಹಣ್ಣು ಶುಕ್ರವಾರದಂದು, ನೇರಳೆಹಣ್ಣು ಶನಿವಾರದಂದು ತಿನ್ನುವವನಿಂದ ಲಕ್ಷ್ಮಿ ದೂರವಾಗುತ್ತಾಳೆ. ರಾತ್ರಿಯಲ್ಲಿ ನೆಲ್ಲಿಕಾಯಿ ತಿಂದವನ ಪ್ರಜ್ಞೆ ನಾಶವಾಗುತ್ತದೆ. ಸಪ್ತಮಿ, ಭಾನುವಾರಗಳಂದು ನೆಲ್ಲಿಕಾಯಿ ತಿಂದರೆ ವೀರ್ಯನಾಶವಾಗುವುದು. ಬ್ರಾಹ್ಮಣನಿಗೆ ತಾಂಬೂಲ, ಅಡಿಕೆ ಹೋಳು, ಸುಣ್ಣವನ್ನು ಸೇರಿಸಿ ಕೊಟ್ಟು, ನಂತರ ತಾನು ತಿನ್ನಬೇಕು. ಒಂದು ಅಡಿಕೆ ಕೊಟ್ಟರೆ ಸುಖ. ಎರಡು ಕೊಟ್ಟರೆ ನಿಷ್ಫಲ. ಮೂರು ಮಹಾಭಾಗ್ಯದಾಯಕವು. ನಾಲ್ಕು ಕೊಟ್ಟರೆ ದುಃಖದಾಯಕವು. ಐದು ಕೊಟ್ಟರೆ ಆಯುರ್ವೃದ್ಧಿ. ಆರು ಕೊಟ್ಟರೆ ಮೃತ್ಯುಪ್ರದವು. ವಿಳ್ಳೇದೆಲೆಯ ಮೂಲವನ್ನು ತೆಗೆಯದೆ ತಿಂದರೆ ವ್ಯಾಧಿಕರವು. ಕೊನೆಯನ್ನು ತಿಂದರೆ ಪಾಪವುಂಟಾಗುವುದು. ಭಿನ್ನವಾದ/ಅಪೂರ್ಣ ಎಲೆಯನ್ನು ತಿಂದರೆ ಹಾನಿಕರವು. ಎಲೆಯ ಹಿಂಭಾಗದ ನಾರನ್ನು ತೆಗೆಯದೆ ತಿಂದರೆ ಬುದ್ಧಿನಾಶ. ಎರಡು ಎಲೆಗಳಿಂದ ಮಾಡಿದ ತಾಂಬೂಲದಿಂದ ಐಶ್ವರ್ಯ ನಾಶ. ಎಲೆಯಿಲ್ಲದೆ ಬರಿಯ ಅಡಿಕೆ ಬಾಯಲ್ಲಿ ಹಾಕಿಕೊಂಡವನು (ತಿಂದವನು) ಸುಖವಂಚಿತನಾಗುತ್ತಾನೆ. ಅದರಿಂದ ಏಳು ಜನ್ಮಗಳಲ್ಲಿ ದಾರಿದ್ರ್ಯ, ಕೊನೆಗೆ ಅಜ್ಞಾನ ಬರುತ್ತದೆ. ಯತಿ, ಬ್ರಹ್ಮಚಾರಿ, ವಿಧವೆ, ರಜಸ್ವಲೆಯಾದವಳು ತಾಂಬೂಲವನ್ನು ತಿಂದರೆ ಮಾಂಸತಿಂದರೆ/ಮದ್ಯಪಾನಮಾಡಿದರೆ ಉಂಟಾಗುವ ದೋಷಕ್ಕೆ ಸಮಾನವಾದ ದೋಷ ಉಂಟಾಗುತ್ತದೆ.

ನಂತರ ಪುರಾಣಾದಿಗಳ ಶ್ರವಣ ಮಾಡಿ ಸಂಧ್ಯಾವಂದನೆ ಮಾಡಬೇಕು. ಸೂರ್ಯಾಸ್ತಮಯಕ್ಕೆ ಮುಂಚೆಯೇ, ಕೂತು, ಮೂರುಸಲ, ಅರ್ಘ್ಯ ಕೊಡಬೇಕು. ಕಾಲಾತೀತವಾದರೆ ನಾಲ್ಕನೆಯ ಅರ್ಘ್ಯ ಕೊಡಬೇಕು. ಬ್ರಾಹ್ಮಣನು ಗಾಯತ್ರಿ ಜಪಮಾಡಿ ವರುಣನ ಮಂತ್ರಗಳಿಂದ ಉಪಸ್ಥಾನ ಮಾಡಬೇಕು. ಹಿಂದಿನಂತೆ ಗುರುಗಳಿಗೆ ಅಭಿನಂದನ ಮಾಡಿ ಯಥಾವಿಧಿಯಾಗಿ ಹೋಮಮಾಡಿ, ಇಷ್ಟವಾದರೆ ಭುಜಿಸಬೇಕು. ರಾತ್ರಿಯಲ್ಲಿ ಕ್ಷೀರಮಿಶ್ರಿತ ಅನ್ನ ಉತ್ತಮವು. ಹಿಂದಿನಂತೆಯೇ "ಋತುತ್ವಾ_______" ಎನ್ನುವ ಮಂತ್ರದಿಂದ ಪರಿಷೇಚನ ಮಾಡಿ ಬ್ರಾಹ್ಮಣನು ಹಿಂದೆ ಹೇಳಿದಂತೆ ಊಟ ಮಾಡಬೇಕು. ದ್ವಿಜನಾದವನು ರಾತ್ರಿ ಒಂದು ಝಾಮದವರೆಗೂ ವೇದಾಭ್ಯಾಸ ಮಾಡಬೇಕು. ಅನಂತರ ಎಲ್ಲವನ್ನೂ ಶ್ರೀಹರಿಗೆ ಅರ್ಪಣಮಾಡಿ ಶಯನ ಮಾಡಬೇಕು.

ಶಯನ ವಿಧಾನವನ್ನು ಹೇಳುತ್ತೇನೆ. ನಿರ್ಮಲವಾದ ಮಂಚವನ್ನು ಹಾಕಿಕೊಳ್ಳಬೇಕು. ಮೂರು ಕಾಲಿನ ಮಂಚ, ಮುರಿದ ಮಂಚಗಳು ಉಪಯೋಗಿಸಬಾರದು. ಅತ್ತಿ, ಆಲ, ಮರದಿಂದ ಮಾಡಿದ ಮಂಚವು ನಿಂದ್ಯವು. ಘಟ್ಟಿಯಾದ ಮರದಿಂದ ಮಂಚ ಮಾಡಬೇಕು. ನೇರಳೆಯ ಮರ ದೂಷ್ಯ. ಆನೆಯ ದಂತಗಳು ಇಲ್ಲವೇ ಮೂಳೆಗಳಿಂದ ಮಾಡಿದ ಮಂಚ, ಶಿಥಿಲವಾದ ಮರದಿಂದ ಮಾಡಿದ ಮಂಚ ನಿಂದ್ಯವು. ಸುಮುಹೂರ್ತದಲ್ಲಿ ಶುಭ ಸಮಯದಲ್ಲಿ ಮಂಚವನ್ನು ಮಾಡಿಸಬೇಕು. ಧನಿಷ್ಠ, ಭರಣಿ, ಮೃಗಶಿರ ನಕ್ಷತ್ರಗಳಲ್ಲಿ ಮಂಚ ಮಾಡಿಸಬಾರದು. ಭಾನುವಾರ ಮಂಚ ಮಾಡಿಸುವುದರಿಂದ ಮಹಾಲಾಭವು. ಸೋಮವಾರ ಸುಖ. ಮಂಗಳವಾರ ಮಹಾದುಃಖ. ಬುಧವಾರ ಮಹಾಪೀಡೆ. ಗುರುವಾರ ಆರು ಪುತ್ರರ ಲಾಭ ಎಂದು ಮುನಿಗಳು ಹೇಳಿದ್ದಾರೆ. ಶುಕ್ರವಾರವೂ ಪುತ್ರ ಲಾಭವೇ! ಶನಿವಾರ ಮೃತ್ಯು ಎಂದಿದ್ದಾರೆ. ಮನೆಯಲ್ಲಿ ಪೂರ್ವದಿಕ್ಕಿಗೆ ತಲೆಯಿಟ್ಟು ನಿದ್ರಿಸಬೇಕು. ಅತ್ತೆಯ ಮನೆಯಲ್ಲಿ ಉತ್ತರ ದಿಕ್ಕಿಗೆ ಕಾಲುಗಳಿಟ್ಟು ಮಲಗಬೇಕು. ಪ್ರವಾಸ ಮಾಡುವಾಗ ಪಶ್ಚಿಮಕ್ಕೆ ತಲೆಯಿಟ್ಟು ಮಲಗಬೇಕು. ಇದು ಶಯನವಿಧಿ. ಎಂದಿಗೂ ದಕ್ಷಿಣಕ್ಕೆ ಕಾಲಿಟ್ಟು ಮಲಗಬಾರದು. ಮೂಲೆಗಳಿಗೆ ಪಾದಗಳು ತೋರುವಂತೆಯೂ ಕೂಡಾ ಮಲಗಬಾರದು. ತಲೆಯ ಹತ್ತಿರ ಮಂಗಳದ್ರವ್ಯ ಸಹಿತವಾದ ನೀರು ಪಾತ್ರೆ ಇಡಬೇಕು. ರಾತ್ರಿಸೂಕ್ತವನ್ನು ಪಠಿಸಿ, ಭಯವನ್ನು ಹೋಗಲಾಡಿಸುವ ವಿಷ್ಣು ಸ್ಮರಣೆ ಮಾಡಬೇಕು. ಅಗಸ್ತ್ಯ, ಮಾಧವ, ಮುಕುಂದ, ಆಸ್ತಿಕ, ಕಪಿಲರನ್ನೂ ಕೂಡಾ ಸ್ಮರಿಸಿ, ಆ ನಂತರ ಸರ್ಪಸ್ತುತಿ ಮಾಡಬೇಕು. ನಿದ್ರೆಗೆ ನಿಷಿದ್ಧವಾದ ಸ್ಥಾನಗಳನ್ನು ಕುರಿತು ಹೇಳುತ್ತೇನೆ, ಕೇಳು. ಜೀರ್ಣಗೃಹ, ವೃಕ್ಷದಲ್ಲಿ (ನೆರಳು), ಜೀರ್ಣದೇವಾಲಯಗಳಲ್ಲಿ, ಮಲಗಬಾರದು. ದೇವರ ಎದುರಿಗೆ, ನಾಲ್ಕು ದಾರಿಗಳು ಸೇರುವ ಸ್ಥಳದಲ್ಲಿ, ತಂದೆತಾಯಿಗಳು ಮಲಗುವ ಸ್ಥಳದಲ್ಲಿ, ಹುತ್ತದ ಹತ್ತಿರ, ನೀರಿನ ಹತ್ತಿರ, ಕೆರೆಗೆ ಎದುರಾಗಿ, ನದಿಗಳಲ್ಲಿ(ಹತ್ತಿರ), ಭಯಂಕರ ಸ್ಥಳಗಳಲ್ಲಿ ಕೂಡಾ ಮಲಗಬಾರದು. ಸಿಹಿತಿಂಡಿಗಳ ಹತ್ತಿರ, ಧಾನ್ಯದಲ್ಲಿ, ಭಗ್ನಗೃಹದಲ್ಲಿ, ಗುರುಗಳ ಸಮೀಪದಲ್ಲಿ ಮಂಚದ ಮೇಲೆ ಮಲಗಬಾರದು. ದಿಗಂಬರನಾಗಿ, ತಲೆಗೆ ಬಟ್ಟೆ ಸುತ್ತಿಕೊಂಡು, ಒದ್ದೆಬಟ್ಟೆ ಉಟ್ಟು, ಆಕಾಶದ ಕೆಳಗೆ (ಬಟ್ಟ ಬಯಲಿನಲ್ಲಿ), ದೀಪದ ಹತ್ತಿರ ಮಲಗಬಾರದು. ರಾತ್ರಿ ಮೊದಲನೆಯ ಝಾಮದಲ್ಲಿ, ಕೊನೆಯ ಝಾಮದಲ್ಲಿ ರಜಸ್ವಲೆಯಾದವಳ ಎದುರಿಗೆ ಮಲಗಬಾರದು. ನಾಲ್ಕನೆಯ ಝಾಮದಲ್ಲಿಯೂ ಕೂಡಾ ಶಯನ ನಿಷಿದ್ಧ. ಜನಿವಾರವನ್ನು ಎಡ ಭುಜದ ಮೇಲೆ ಹಾಕಿಕೊಂಡು ನಿದ್ರಿಸಬೇಕು. ಸ್ತ್ರೀ ಅವಯವ ದರ್ಶನದಿಂದ ಆಯುಕ್ಷಯವು. ಆದ್ದರಿಂದ ದ್ವಿಜನು ಶಯನಕಾಲದಲ್ಲಿ ದೀಪ ಆರಿಸಿ ಮಲಗಬೇಕು. ನೀಲವಸ್ತ್ರ ಧರಿಸಿದ ಸ್ತ್ರೀಗೆ ಪಿಂಡೋತ್ಪತ್ತಿಯಾದರೆ ಆ ಪಿಂಡವು ಚಂಡಾಲಸಮವಾದದ್ದು. ಆದ್ದರಿಂದ ಬಿಳಿಯ ವಸ್ತ್ರ ಧರಿಸಿ ಮಲಗುವುದು ಮೇಲು. ರಜೋದರ್ಶನವಾಗದೆ ಸಂಗಮವು ಪ್ರಯೋಜನವಿಲ್ಲ. ರಜಸ್ವಲೆಯಾಗದೆ, ಸಂಸ್ಕಾರಮಾಡಿ, ಭಾರ್ಯಗಮನ ಮಾಡಿದರೆ ದೋಷವುಂಟಾಗುತ್ತದೆ. ಕನ್ಯೆ ರಜಸ್ವಲೆಯಾಗುವುದು ಹತ್ತು ವರ್ಷಗಳಾದ ನಂತರ. ಕನ್ಯಾ ವಿವಾಹ ಅದಕ್ಕಿಂತ ಮುಂಚೆಯೇ ಮಾಡುವುದು ಸರ್ವ ಋಷಿಸಮ್ಮತ. ಋತುಕಾಲವನ್ನು ದಾಟಿದ ನಂತರ, ಗ್ರಾಮಾಂತರಗಳಿಗೆ ಹೋಗುವ ದ್ವಿಜನು ಭ್ರೂಣಹತ್ಯಾದೋಷಕ್ಕೆ ಗುರಿಯಾಗುತ್ತಾನೆ. ಬಂಜೆ, ಬಹುಪುತ್ರಳು, ವೃದ್ಧಳಾದ ಭಾರ್ಯೆಯೊಡನೆ ಋತುಕಾಲಾತಿಕ್ರಾಂತ ದೋಷವು ಇಲ್ಲ. ಸಂಸಾರ ವಿರಕ್ತನಿಗೆ ಅಂತಹ ದೋಷವಿಲ್ಲ. ನಾಲ್ಕನೆಯ ದಿನ ಸಂಗಮದಿಂದ ಅಲ್ಪಾಯುವಾದ ಪುತ್ರ ಹುಟ್ಟುತ್ತಾನೆ. ಐದನೆಯ ದಿನ ಕನ್ಯೆ, ಆರನೆಯ ದಿನ ಪುತ್ರ ಹುಟ್ಟುತ್ತಾರೆ. ಬೆಸದಿನಗಳಲ್ಲಿ ಕನ್ಯೆ. ಸರಿದಿನಗಳಲ್ಲಿ ಪುತ್ರ. ಸ್ತ್ರೀಗೆ ಹದಿನಾರು ದಿನಗಳು ಋತುಕಾಲ. ಆ ದಿನಗಳಲ್ಲಿ ಚಂದ್ರಬಲವನ್ನು ತಿಳಿದುಕೊಳ್ಳಬೇಕು. ಬುಧನು ಮೂಲ, ಮಘ, ರೇವತಿ ನಕ್ಷತ್ರಗಳಲ್ಲಿದ್ದರೆ ಸ್ತ್ರೀ ಸಂಗವನ್ನು ವರ್ಜಿಸಬೇಕು. ಇಬ್ಬರೂ ಕೋಪಗೊಳ್ಳಬಾರದು. ಇಬ್ಬರೂ ಸಂತೋಷವಾಗಿರುವುದು ಮಹಾಫಲದಾಯಕ. ಗರ್ಭದಾನ ಸಮಯದಲ್ಲಿ ಮನಸ್ಸು ಯಾವರೀತಿ ಇರುತ್ತದೆಯೋ ಪಿಂಡವೂ ಅಂತಹುದೇ ಆಗಿರುತ್ತದೆ. ಆದ್ದರಿಂದ ಒಳ್ಳೆಯದಾಗುವುದಕ್ಕೆ ಇಬ್ಬರೂ ಸತ್ವಗುಣ ಪೂರಿತರಾಗಿರಬೇಕು. ಅಂತಹ ಆಚಾರವಂತನು ದೇವತೆಗಳಿಗೂ ವಂದ್ಯನಾಗಿರುತ್ತಾನೆ. ಅವನ ಮನೆಯಲ್ಲಿ ಕಾಮಧೇನು ವಾಸಿಸುತ್ತಾಳೆ. ಅಖಂಡವಾದ ಲಕ್ಷ್ಮಿಯಿಂದೊಡಗೂಡಿ, ಪುತ್ರಪೌತ್ರಾದಿಗಳಿಂದ ಕೂಡಿ, ಆಚಾರಪರನಾದವನು, ಆನಂದಿಸುತ್ತಾನೆ. ಆಚಾರದಿಂದ ಬ್ರಾಹ್ಮಣನು ಶತಾಯುಷಿಯಾಗುತ್ತಾನೆ. ಅವನ ದೋಷಗಳೆಲ್ಲವೂ ಅಶೇಷವಾಗಿ ನಾಶವಾಗುತ್ತವೆ. ಅವನಿಗೆ ಕಲಿಕಾಲ ಭಯವಿರುವಿದಿಲ್ಲ. ಕ್ರಮಕ್ರಮವಾಗಿ ಅವನು ಜ್ಞಾನಿಯಾಗುತ್ತಾನೆ. ಅವನಿಗೆ ಅಪಮೃತ್ಯುವು ಎಂದಿಗೂ ಬರುವುದಿಲ್ಲ. ಸಕಾಲ ಮೃತ್ಯುವೇ ಸಂಭವಿಸುವುದು. ಆದ್ದರಿಂದ, ಹೇ, ದ್ವಿಜಶ್ರೇಷ್ಠ, ಸದಾಚಾರವನ್ನು ಪಾಲಿಸು" ಎಂದು ಹೇಳಿದ ಶ್ರೀಗುರುವಿನ ಮಾತುಗಳನ್ನು ಕೇಳಿ, ಆ ಬ್ರಾಹ್ಮಣ, "ಹೇ ಕೃಪಾಸಾಗರ, ಸದ್ಗುರು, ನಿನ್ನ ಉಪದೇಶವು ನನಗೆ ಲಭ್ಯವಾಯಿತು. ನಿನ್ನ ಭಕ್ತರನ್ನು ಉದ್ಧರಿಸಲು ಈ ಭೂಮಿಯಲ್ಲಿ ನೀನು ಅವತರಿಸಿದ್ದೀಯೆ." ಎಂದು ಹೇಳುತ್ತಾ, ಶ್ರೀಗುರುವಿನ ಪಾದಗಳನ್ನು ಹಿಡಿದು ಅಭಿನಂದಿಸಿದನು. ಸಂತುಷ್ಟನಾದ ಶ್ರೀಗುರುವು ಅವನಲ್ಲಿ ಪ್ರಸನ್ನನಾಗಿ, " ಅಯ್ಯಾ, ದ್ವಿಜೋತ್ತಮ, ನಿನಗೆ ಆಚಾರಗಳ ವಿಷಯವನ್ನು ಸವಿಸ್ತಾರವಾಗಿ ಹೇಳಿದ್ದೇನೆ. ಪರಾನ್ನವನ್ನು ಬಿಟ್ಟು, ಆಚಾರಗಳನ್ನು ಪಾಲಿಸುತ್ತಾ, ಸುಖವನ್ನು ಪಡೆ. ಆಗ ನಿನ್ನ ಕೋರಿಕೆಗಳೆಲ್ಲವೂ ನೆರವೇರುತ್ತವೆ. ಕನ್ಯೆಯರು, ಪುತ್ರರೊಡಗೂಡಿ ಸುಖವಾಗಿದ್ದು ನಂತರ ಮೋಕ್ಷ ಪಡೆಯುತ್ತೀಯೆ." ಎಂದು ಅನುಗ್ರಹಿಸಿದರು. ಆ ವಿಪ್ರನು ತನ್ನ ಮನೆಗೆ ಹಿಂದಿರುಗಿ, ಶ್ರೀಗುರುವು ಹೇಳಿದಂತೆ ಆಚಾರಗಳನ್ನು ಪಾಲಿಸುತ್ತಾ, ಸಕಲಾಭೀಷ್ಟಗಳನ್ನೂ ಪಡೆದನು.

ಇಂತಹ ಶ್ರೀಗುರುಚರಿತ್ರೆ ಪವಿತ್ರವಾದದ್ದು. ಇದನ್ನು ಕೇಳಿದವನು ತ್ವರೆಯಾಗಿ ಬ್ರಹ್ಮಜ್ಞಾನಿಯಾಗಬಲ್ಲನು. ಹೇ, ನಾಮಧಾರಕ, ಈ ಕಥೆ ಮನೋಹರವಾದದ್ದು. ಅಜ್ಞಾನವೆನ್ನುವ ಅಂಧಕಾರದಲ್ಲಿ ಸಿಕ್ಕಿಹಾಕಿಕೊಂಡಿರುವವರಿಗೆ ಈ ಚರಿತ್ರೆ ಬೆಳಕನ್ನು ಕೊಡುತ್ತದೆ. ಇದನ್ನು ಕೇಳಿದ ಮಾತ್ರಕ್ಕೇ ಕೋರಿಕೆಗಳೆಲ್ಲವೂ ನೆರವೇರುತ್ತವೆ. 

ಇಲ್ಲಿಗೆ ಮುವ್ವತ್ತೇಳನೆಯ ಅಧ್ಯಾಯ ಮುಗಿಯಿತು. 



No comments:

Post a Comment