||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ||
||ಶ್ರೀ ಗುರುಭ್ಯೋನಮಃ||
ಶಿಷ್ಯಾಗ್ರಣಿಯಾದ ನಾಮಧಾರಕನು, "ಹೇ ಯೋಗೀಶ್ವರ, ಶ್ರೀಗುರುವು ಹೇಳಿದ ಕಾಶೀಯಾತ್ರಾ ವಿಧಾನವನ್ನು ಹೇಳು." ಎಂದು ಕೋರಲು ಸಿದ್ಧಮುನಿ ಹೇಳಿದರು.
"ಅಯ್ಯಾ ನಾಮಧಾರಕ, ಸಾಯಂದೇವನಿಗೆ ಶ್ರೀಗುರುವು ಹೇಳಿದ ರೀತಿಯಲ್ಲಿ, ಆ ತಾಪಸಿಯು ಬಾಲಬ್ರಹ್ಮಚಾರಿಗೆ ಉಪದೇಶಿಸಿದ ರೀತಿಯಲ್ಲಿ ವಿಶ್ವೇಶ್ವರ ದರ್ಶನ, ಅಂತರ್ಗೃಹಯಾತ್ರೆ, ‘ದಕ್ಷಿಣೋತ್ತರ ಮಾನಸ’ ಎಂದು ಕರೆಯಲ್ಪಡುವ ಪಂಚಕ್ರೋಶಿಯನ್ನು ಯಥಾತಥವಾಗಿ ನಿನಗೆ ಹೇಳುತ್ತೇನೆ. ಸ್ನಾನ, ದಾನ, ಅರ್ಚನೆ, ಶ್ರಾದ್ಧಗಳಿಂದ ಕೂಡಿ ಶುಕ್ಲಕೃಷ್ಣಪಕ್ಷಗಳಯಾತ್ರೆಯಲ್ಲಿ ಭವಾನೀಶ್ವರ, ಹರಿ, ಡುಂಡಿ, ದಂಡಪಾಣಿ, ಭೈರವರ ಆಲಯಗಳು, ಕಾಶಿ ಗಂಗಾನದಿ ಮುಂತಾದ ದೇವತೆಗಳು, ಶಿವಲಿಂಗಗಳೆಲ್ಲದರ ಪೂಜೆ, ಪ್ರತಿಷ್ಠೆಮಾಡಿ ನೈವೇದ್ಯವಿಟ್ಟು ನಿನ್ನ ಹೆಸರಿನಲ್ಲಿ ಅಂಕಿತವಾಗುವಂತೆ ಲಿಂಗ ಸ್ಥಾಪನೆ ಮಾಡು. ಅಯ್ಯಾ ವಟು, ಪ್ರತಿದಿನವೂ ಪೂಜೆಮಾಡು. ಕಾಶಿಖಂಡದಲ್ಲಿ ಅಂತರ್ಗೃಹಯಾತ್ರೆ ಮಾಡು. ಹೀಗೆ ವಿಶ್ವೇಶ್ವರಯಾತ್ರಾ ವಿಧಾನವನ್ನು ನಿನಗೆ ಹೇಳಿದೆ. ಅಯ್ಯಾ ಬ್ರಹ್ಮಚಾರಿ, ನಿನ್ನ ಹೆಸರಿಗೆ ಅಂಕಿತಮಾಡಿ ಲಿಂಗವೊಂದನ್ನು ಪ್ರತಿಷ್ಠೆ ಮಾಡು. ಈ ವಿಧದಲ್ಲಿ ಕಾಶಿಯಾತ್ರೆ ಮಾಡು. ನಿನ್ನ ಕೋರಿಕೆ ನೆರವೇರುವುದು. ನಿನಗೆ ಶಂಕರನು ಪ್ರಸನ್ನನಾಗುವನು. ನಿನ್ನ ಮೇಲೆ ಗುರುದಯೆ ಪ್ರಸರಿಸುವುದು. ನಿನ್ನ ಗುರುವನ್ನು ಸ್ಮರಿಸು." ಎಂದು ಹೇಳಿ ಆ ತಾಪಸಿ ಅದೃಶ್ಯನಾದನು. ಹೀಗೆಂದು ಸಾಯಂದೇವನು ಕನ್ನಡ ಭಾಷೆಯಲ್ಲಿ ಶ್ರೀಗುರುವನ್ನು ಸ್ತುತಿಸಲಾಗಿ ಶ್ರೀಗುರುವು ಅವನಲ್ಲಿ ಪ್ರೇಮವನ್ನು ತೋರಿದನು.
ಆ ಬ್ರಹ್ಮಚಾರಿ ವಿಸ್ಮಿತನಾಗಿ, ‘ಗುರುವು ನನ್ನಲ್ಲಿ ದಯೆ ತೋರಿಸಿದನು. ನನ್ನ ಕರ್ತವ್ಯವು ನಿಶ್ಚಯವಾಯಿತು. ನಾನು ಆರಾಧಿಸದಿದ್ದರೂ ಈ ಪರಮೇಶ್ವರನು ನನ್ನ ಬಳಿಗೆ ಬಂದನು. ಯಜ್ಞ ದಾನ, ತಪಸ್ಸುಗಳನ್ನು ಮಾಡಿದರೂ ತಕ್ಷಣವೇ ಲಭ್ಯವಾಗದ ಈಶ್ವರನು ಗುರುಪ್ರಸಾದದಿಂದಲೇ ಪ್ರಯತ್ನವಿಲ್ಲದೆ ಲಭಿಸಿದನು.’ ಎಂದು ಯೋಚಿಸುತ್ತಾ, ಆ ಬ್ರಹ್ಮಚಾರಿ ಗುರುವು ಉಪದೇಶಿಸಿದ ರೀತಿಯಲ್ಲಿ ಕಾಶಿಯಾತ್ರೆ ಮಾಡಿದನು. ಆ ಬಾಲಕನು ಪೂಜೆಮಾಡುತ್ತಲೇ ಶಿವನು ಪ್ರಸನ್ನನಾಗಿ ಆ ಬಾಲಕನಿಗೆ ಕಾಣಿಸಿಕೊಂಡು, "ಅಯ್ಯಾ ವಟುವೇ, ವರವನ್ನು ಕೇಳಿಕೋ." ಎಂದನು. ತ್ವಷ್ಟ ಬಹಳ ಸಂತೋಷಗೊಂಡು ತನ್ನ ವೃತ್ತಾಂತವನ್ನೆಲ್ಲಾ ಬಿನ್ನವಿಸಿಕೊಂಡನು. ಆಗ ಶಂಕರನು, " ಹೇ ಬಾಲಕ, ನನ್ನ ವರಪ್ರಭಾವದಿಂದ ನೀನು ಬಹುತ್ವರೆಯಾಗಿ ಸರ್ವವಿದ್ಯೆಗಳನ್ನೂ ಕಲಿತವನಾಗುವೆ. ಗುರು ಭಕ್ತಿಯನ್ನು ತೋರಿಸಿದೆ. ವಿಶ್ವಕರ್ಮನಾಗಿ ಸೃಷ್ಟಿಕರ್ತನಾದ ಬ್ರಹ್ಮನಂತೆ ನೀನು ತ್ವಷ್ಟನಾಗುತ್ತೀಯೆ." ಎಂದು ಹೇಳಿದನು. ವರಗಳನ್ನು ಪಡೆದು ತ್ವಷ್ಟನು ತನ್ನ ಹೆಸರಿನಲ್ಲಿ ಒಂದು ಉತ್ತಮಲಿಂಗವನ್ನು ಸ್ಥಾಪಿಸಿದನು. ಗುರು ಕುಟುಂಬವು ಕೇಳಿದ್ದುದನ್ನೆಲ್ಲವನ್ನೂ ಆ ತ್ವಷ್ಟ ನಿರ್ಮಿಸಿ, ತೆಗೆದುಕೊಂಡು ಹೋಗಿ ನಮಸ್ಕರಿಸಿ, ಕ್ರಮವಾಗಿ ಗುರು, ಗುರುಪತ್ನಿ, ಗುರುಪುತ್ರ, ಗುರುಪುತ್ರಿ ಎಲ್ಲರಿಗೂ ಒಪ್ಪಿಸಿ ಪಾದಾಭಿವಂದನೆಗಳನ್ನು ಮಾಡಿದನು. ಗುರುವು, "ಹೇ ಶಿಷ್ಯ, ನಿನ್ನ ಭಕ್ತಿಗೆ ಸಂತುಷ್ಟನಾಗಿದ್ದೇನೆ. ನೀನು ಜ್ಞಾನರಾಶಿಯು. ನೀನು ಚಂದ್ರಸೂರ್ಯರಿರುವವರೆಗೂ ಚಿರಂಜೀವಿಯಾಗಿರು. ಸ್ವರ್ಗದಲ್ಲಿ, ಮರ್ತ್ಯಲೋಕದಲ್ಲಿ, ಪಾತಾಳದಲ್ಲಿ ನೀನು ಕಲಿತದ್ದನ್ನು ವ್ಯಾಪಕವಾಗುವಂತೆ ಮಾಡು." ಎಂದು ಆಣತಿ ಕೊಟ್ಟನು. ತ್ವಷ್ಟ ತನ್ನ ಆಶ್ರಮಕ್ಕೆ ಹೋದನು.
ಈ ವೃತ್ತಾಂತವನ್ನು ಈಶ್ವರನು ಪಾರ್ವತಿಗೆ ಹೇಳಿ, "ಹೇ ಪಾರ್ವತಿ, ಗುರುಭಕ್ತಿ ಇಂತಹುದು. ಭವಸಾಗರದಿಂದ ತರಿಸಬಲ್ಲ ಶಕ್ತಿ ಭೂಲೋಕದಲ್ಲಿ ಗುರುವೊಬ್ಬನಿಗೇ ಇರುವುದು. ಗುರುವನ್ನು ಭಕ್ತಿಯಿಂದ ಪೂಜಿಸುವವನಿಗೆ ತ್ರಿಮೂರ್ತಿಗಳೂ ಅಧೀನರಾಗಿರುತ್ತಾರೆ. ಸ್ವಯಂ ತ್ರಿಮೂರ್ತಿಗಳು ಶ್ರೀಗುರುಪಾದಗಳ ಸಮೀಪವನ್ನು ಸೇರುವರು. ಗುರುವಿಲ್ಲದೆ ಗತಿಯಿಲ್ಲ ಎಂದು ಶೃತಿಸ್ಮೃತಿಗಳು ಕೂಡಾ ಹೇಳುತ್ತಿವೆ." ಹೀಗೆ ಪಾರ್ವತಿಗೆ ಪರಮೇಶ್ವರನು ವಿಸ್ತಾರವಾಗಿ ಹೇಳಿದನು ಎಂಂದು ಭಕ್ತವತ್ಸಲನಾದ ಶ್ರೀಗುರುವು ಸಾಯಂದೇವನಿಗೆ ಹೇಳಿದರು. ಅಷ್ಟರಲ್ಲಿ ಸೂರ್ಯನು ಉದಯಿಸಿದನು. ಸಾಯಂದೇವನು ಶ್ರೀಗುರುವಿಗೆ ನಮಸ್ಕಾರಮಾಡಿ, " ಸ್ವಾಮಿ, ದೀನರಿಗೆ ನಾಥನು ನೀವೇ! ಕಥಾಶ್ರವಣಕಾಲದಲ್ಲಿ ನಾನೊಂದು ವಿಚಿತ್ರವನ್ನು ಕಂಡೆ. ನಿಮ್ಮ ಜೊತೆಯಲ್ಲಿ ನಾನೂ ಅಪೂರ್ವವಾದ ಕಾಶಿ ಕ್ಷೇತ್ರವೆಲ್ಲವನ್ನೂ ನೋಡಿದೆ. ಅದೇನು ಎಚ್ಚೆತ್ತಿರುವಾಗಲೇ ಸ್ವಪ್ನವೋ!" ಎಂದು ಹೇಳಿ ಮತ್ತೆ ಶ್ರೀಗುರು ಪಾದಗಳಿಗೆ ನಮಸ್ಕರಿಸಿ, ಶ್ರೀಗುರುವನ್ನು, "ನೀವೇ ಪರಮಹಂಸರು. ಶ್ರೀ ನೃಸಿಂಹ ಸರಸ್ವತಿ, ಭಕ್ತರ ಮನಸ್ಸುಗಳಲ್ಲಿ ನಿವಾಸಮಾಡುತ್ತೀರಿ." ಎಂದು ಸ್ತುತಿಸಿದನು. ಅಯ್ಯಾ ನಾಮಧಾರಕ ನಿನ್ನ ಪೂರ್ವಜನ ಆ ಸ್ತೋತ್ರವನ್ನು ಕೇಳು.
"ಹಿಂದೆ ಬ್ರಹ್ಮನಾದ ನೀನು ಬಹುರೂಪಿಯಾಗಿ ಬ್ರಹ್ಮಾಂಡವನ್ನು ಸೃಷ್ಟಿಸಿದೆ. ಅದರಿಂದ ಜಗತ್ತೆಲ್ಲವೂ ಬಂತು. ನಿನ್ನಲ್ಲಿ ನೀನೇ ರಮಿಸುತ್ತಾ ಈ ಭೂಮಿಯಲ್ಲಿ ಅವತರಿಸಿ ದುಷ್ಟ ಸಂಹಾರ ಮಾಡುತ್ತಿದ್ದೀಯೆ. ಶ್ರೀ ನೃಸಿಂಹಸರಸ್ವತಿ ನಿನ್ನ ಪಾದಪದ್ಮಗಳು ಶ್ರೇಷ್ಠವಾದವು. ಕಲಿಯುಗದಲ್ಲಿ ಸದ್ಧರ್ಮಗಳು, ಆಶ್ರಮಗಳು ಎನ್ನುವ ಸೇತುಗಳು ಶಿಥಿಲವಾಗಿ ಅವನ್ನು ಮತ್ತೆ ದೃಡ್ಃಅವಾಗಿ ನಿರ್ಮಿಸಿದ ಶ್ರೀ ನೃಸಿಂಹಸರಸ್ವತಿ ನಿನ್ನ ಶ್ರೇಷ್ಠವಾದ ಪಾದಪದ್ಮಗಳಿಗೆ ನಮಸ್ಕರಿಸುತ್ತಿದ್ದೇನೆ. ಮೂರ್ತೀಭವಿಸಿದ ಸತ್ತ್ವರೂಪನು. ಮೂರೂ ಆಶ್ರಮಗಳಲ್ಲಿ ಇರುವ ಈ ಜನರೆನ್ನುವ ಮೃಗಗಳು ಕ್ರೀಡಿಸುತ್ತಿರುವಂತೆ ಈ ಸಂಸಾರದಿಂದ ನಮ್ಮನ್ನು ಉದ್ಧರಿಸುವಂತಹ ಶ್ರೀ ನೃಸಿಂಹಸರಸ್ವತಿ ನಿಮ್ಮ ಶ್ರೇಷ್ಠವಾದ ಪಾದಪದ್ಮಗಳಿಗೆ ನಮಸ್ಕಾರವು. ಮೂಕನಿಗೆ ಮಾತು, ಕುರುಡನಿಗೆ ಕಣ್ಣು, ಬಂಜೆಗೆ ಸುಪುತ್ರ, ಮೃತನಿಗೆ ಪ್ರಾಣ, ವಿಧವೆಗೆ ಸೌಭಾಗ್ಯ, ಒಣಗಿದ ಕಟ್ಟಿಗೆಗೆ ಚಿಗುರು ಕೊಡಬಲ್ಲ ಮಹಿಮೆ ನಿನ್ನದು. ಮೂರುಲೋಕಗಳನ್ನು ನಿಲ್ಲಿಸಬಲ್ಲ ಸಮರ್ಥನು ನೀನು. ಹೇ ಶ್ರೀನೃಸಿಂಹಸರಸ್ವತಿ ಶ್ರೇಷ್ಠವಾದ ನಿನ್ನ ಪಾದಪದ್ಮಗಳಿಗೆ ನಮಸ್ಕಾರವು. ಮುಕ್ತಿಯೇ ನಿನ್ನ ನಿವಾಸವು. ಕೋರಿಕೆಗಲನ್ನು ಕೊಡುವ ಕಾಮಧೇನುವು. ದಾರಿದ್ರ್ಯವೆನ್ನುವ ಅಗ್ನಿಗೆ ನೀನೇ ಮೇಘವು. ದುಷ್ಕಾರ್ಯಗ್ಳಿಗೆ ನೀನೇ ದಾವಾಗ್ನಿ. ಹೇ ಮಹಾನುಭಾವ, ಶ್ರೇಷ್ಠವಾದ ನಿನ್ನ ಪಾದಪದ್ಮಗಳಿಗೆ ನಮಸ್ಕಾರವು. ಹೇ ಓಗೀಶ್ವರ, ನಿನ್ನ ಪ್ಪದಗಳು ತೀರ್ಥಗಳಿಗೆ ಆಶ್ರಯವು. ಸಜ್ಜನರಿಗೆ ಜೀವನವು. ಸುಕೃತಗಳಿಗೆ ಸ್ಥಾನವಾದ ನೀನು ಮಹಾಪಾವನನು. ಶ್ರೀ ನೃಸಿಂಹಸರಸ್ವತಿ ಶ್ರೇಶ್ಃಠವಾದ ನಿನ್ನ ಪಾದಪದ್ಮಗಳಿಗೆ ನಮಸ್ಕಾರವು. ಅಗ್ನಿ, ಜಲ, ಸೂರ್ಯ, ಚಂದ್ರ, ಭೂಮಿ, ಆಕಾಶ, ವಾಯು, ಆತ್ಮ ಎನ್ನುವ ಎಂಟೂ ನಿನ್ನ ಮೂರ್ತಿಗಳು ಎಂದು ಹೇಳುತ್ತಾರೆ. ನೀನು ವಿಶ್ವಮಯನು. ಓಂಕಾರರೂಪನಾಗಿ ಈಶ್ವರನಾದ ನಿನ್ನಂತಹ ಇತರರು ಇಲ್ಲ. ಹೇ ಶ್ರೀ ನೃಸಿಂಹಸರಸ್ವತಿ ಶ್ರೇಷ್ಟವಾದ ನಿನ್ನ ಪಾದಪದ್ಮಗಳಿಗೆ ನಮಸ್ಕಾರವು. ಕಮಂಡಲ ದಂಡಗಳನ್ನು ಧರಿಸಿದ್ದೀಯೆ. ಶಾಂತನು. ಶ್ರೀ ಭೀಮಾನದಿ ಅಮರಜಾನದಿ ಸಂಗಮಸ್ಥಾನವು ನಿನ್ನ ನಿವಾಸವು. ಶ್ರೀ ನೃಸಿಂಹ ಸರಸ್ವತಿ ನಿನ್ನ ಶ್ರೇಷ್ಠವಾದ ಪಾದಪದ್ಮಗಳಿಗೆ ನಮಸ್ಕಾರವು. ಈ ಶ್ರೀಗುರುವಿನ ಅಷ್ಟಕವನ್ನು ನಿತ್ಯವೂ ಪಠಿಸುವವನು ಬಲ, ಸಿರಿ, ಬುದ್ಧಿ, ತೇಜಸ್ಸು, ಆರೋಗ್ಯವಾದ ದೃಢಶರೀರ, ವರ್ಚಸ್ಸು, ಪುತ್ರಕಳತ್ರಮಿತ್ರರಿಂದ ಸುಖ, ದೀರ್ಘಾಯು, ಆರೋಗ್ಯಗಳಿಂದ ಇಹಲೋಕಸುಖವನ್ನು ಯಾವಾಗಲೂ ಪಡೆಯುತ್ತಾ ಕೊನೆಯಲ್ಲಿ ಮುಕ್ತಿಯನ್ನು ಹೊಂದಬಲ್ಲನು."
ಹೀಗೆ ಗುರುನಾಥಾಷ್ಟಕದಿಂದ ಶ್ರೀಗುರುವನ್ನು ಸ್ತುತಿಸಿ, ದಂಡಪ್ರಣಾಮ ಮಾಡಿ ಗಂಟಲು ಗದ್ಗದವಾಗಿ, ಪುಳಕಿತಶರೀರನಾಗಿ ಭಕ್ತಿಯಿಂದ ಸಾಯಂದೇವನು ಮತ್ತೆ ಹೀಗೆ ನುಡಿದನು. "ಹೇ ಸ್ವಾಮಿ, ನೀನು ತ್ರಿಮೂರ್ತಿಗಳ ಅವತಾರನಾದವನು. ಹೇ ದೇವದೇವ, ಜಗದ್ಗುರು, ನೀನು ಸತ್ಯವಾಗಿಯೂ ವಿಶ್ವನಾಥನೇ! ನಿನ್ನ ಸನ್ನಿಧಿಯಲ್ಲೇ ಕಾಶಿಪುರವು ಇದೆ."
ಹೀಗೆ ಆ ಸಾಯಂದೇವನು ಭಕ್ತಿಯಿಂದ ಶ್ರೀಗುರುವನ್ನು ಸ್ತುತಿಸಿದನು. ಬಹು ಸಂತುಷ್ಟರಾದ ಶ್ರೀಗುರುವು ಅವನಿಗೆ, "ಸಾಯಂದೇವ, ಇಂದು ನಿನಗೆ ಕಾಶಿಕ್ಷೇತ್ರವನ್ನು ಚೆನ್ನಾಗಿ ತೋರಿಸಿದ್ದೇನೆ. ನಿನ್ನ ಜೊತೆ ನಿನ್ನ ಇಪ್ಪತ್ತೊಂದು ತಲೆಮಾರಿನವರೂ ಆ ಫಲವನ್ನು ಹೊಂದಬಲ್ಲರು. ನನ್ನ ಸನ್ನಿಧಿಯಲ್ಲಿದ್ದುಕೊಂಡು ಯಾವಾಗಲೂ ನನ್ನ ಸೇವೆ ಮಾಡಿಕೊಂಡಿರು. ಮ್ಲೇಚ್ಛನ ಸೇವೆಯನ್ನು ಬಿಟ್ಟುಬಿಡು. ನಿನ್ನ ಹೆಂಡತಿಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ನನ್ನ ದರ್ಶನ ಮಾಡಿಸು." ಎಂದು ಅವನಿಗೆ ಆಣತಿಮಾಡಿ ಶ್ರೀಗುರುವು ಮಠಕ್ಕೆ ಬಂದರು.
ನಾಮಧಾರಕ ನಿನ್ನ ಪೂರ್ವಜನು ಹಾಗೆ ಗುರ್ವಾಜ್ಞೆಯಂತೆ ಭಾದ್ರಪದ ಶುಕ್ಲ ಚತುರ್ದಶಿಯ ದಿನ ಕುಟುಂಬಸಹಿತನಾಗಿ ಮಠಕ್ಕೆ ಬಂದನು. ಸಾಯಂದೇವನು ಪ್ರೇಮದಿಂದ ಸದ್ಗುರುವನ್ನು ಹೀಗೆ ಸ್ತುತಿಸಿದನು. "ಓಂ ನಮ್ಶ್ಚಂದ್ರಮೌಳಿ, ಪ್ರಭು, ತ್ರಿಮೂರ್ತಿಸ್ವರೂಪನು ನೀನೇ! ತ್ರಿಮೂರ್ತಿಗಳೇ ನೀನಾಗಿ ಅವತರಿಸಿ ಭೂಲೋಕದಲ್ಲಿ ಸದ್ಗುರುವಾದಿರಿ. ಪೂರ್ವಜನ್ಮದಲ್ಲಿ ಮಾಡಿದ್ದ ಪಾಪರಾಶಿಗಳು, ನಿಮ್ಮ ದರ್ಶನದಿಂದ, ಕ್ಷಣದಲ್ಲಿ ನಾಶವಾಗಿ ಹೋಗಿ, ನಾವೆಲ್ಲರೂ ಪವಿತ್ರರಾದೆವು. ಗಂಗೆ ಪಾಪವನ್ನು, ಚಂದ್ರನು ತಾಪವನ್ನು, ಕಲ್ಪತರುವು ದೈನ್ಯವನ್ನು ಹೋಗಲಾಡಿಸಬಲ್ಲವು. ಒಂದೊಂದರಲ್ಲಿ ಒಂದೊಂದು ಗುಣವಿದೆ. ನಿನ್ನ ದರ್ಶನದಿಂದ ತಕ್ಷಣವೇ ಫಲತ್ರಯವು ಲಭಿಸುವುದು." ಎಂದು ಆನಂದಭರಿತನಾಗಿ ಸಾಯಂದೇವನು ಶ್ರೀಗುರು ಸತ್ಕಥೆಯನ್ನು ಕನ್ನಡ ಭಾಷೆಯಲ್ಲಿ ರಚಿಸಿ ರಾಗಸಹಿತವಾಗಿ ಗಾನಮಾಡಿದನು. ‘ಯೋಗಿಜನರಿಗೆ ಶಿಷ್ಟನಾದ ಶ್ರೀನೃಸಿಂಹಸರಸ್ವತಿಗೆ ನಾನು ವಂದಿಸುತ್ತಿದ್ದೇನೆ. ಹೇ ಸ್ವಾಮಿ, ನೀನು ಸಗುಣಬ್ರಹ್ಮನು. ಸಜ್ಜನರಲ್ಲಿ ಪ್ರೀತಿಯುಳ್ಳವನು. ಹೇ ಗುರುಮೂರ್ತಿ, ಸನ್ಯಾಸಿಶ್ರೇಷ್ಠನು ನೀನು. ಹರಿದಾಸ ಪ್ರಿಯ, ಕರುಣಾನಿಲಯ, ಸ್ವಭಕ್ತಪರಿಪಾಲಕ, ಪ್ರೇಮಾತಿಶಯ, ನಿನ್ನ ಚರಣಸ್ಪರ್ಶದಿಂದ ಗಂಧರ್ವಪುರವೇ ಕೈಲಾಸವಾಯಿತು. ಹೇ ನೃಸಿಂಹಸರಸ್ವತಿ ಯತೀಶ್ವರ, ಜಯವಾಗಲಿ. ಜಯವಾಗಲಿ. ಹೇ ಸದ್ಗುರುಮೂರ್ತಿ, ನೀನೇ ಮಹಾತ್ಮನು. ದಯಾನಿಧಿ, ನಮ್ಮನ್ನು ಪಾಪರಹಿತರನ್ನಾಗಿ ಮಾಡಿ ರಕ್ಷಿಸು. ಹೇ ಸನ್ಮೂರ್ತಿ, ನೀನು ಅತ್ರಿಸುತನಾಗಿದ್ದೀಯೆ. ನಿನಗೆ ವಂದನವು. ಮಾಯೆಯನ್ನು ನಿವಾರಿಸು. ನನಗೆ ಭಕ್ತಿ ಸುಖಗಳನ್ನು ನೀಡು. ಹೇ ಸದ್ಗುರುಮೂರ್ತಿ, ನಿನಗೆ ಜಯವಾಗಲಿ. ಜಯವಾಗಲಿ. ಜಗತ್ಕಾರಣಕ್ಕಾಗಿ ನರರೂಪವನ್ನು ಧರಿಸಿದವನೇ, ಕೃಪಾಘನ, ವಿಶ್ವವ್ಯಾಪ್ತಿಯದ ಕೀರ್ತಿಯುಳ್ಳವನೇ, ಪಾಪರಾಹಿತ್ಯವನ್ನು ಉಂಟುಮಾಡಿ ನಮ್ಮನ್ನು ರಕ್ಷಿಸು."
ನಾಮಧಾರಕ ಆ ದಿನವೇ ಧನ್ಯವು. ಮನೆಯಲ್ಲಿನ ಎಲ್ಲರ ಕಷ್ಟಸುಖಗಳನ್ನು ಭಕ್ತವತ್ಸಲನಾದ ಆ ಭಗವಂತನು ಸಾಯಂದೇವನಲ್ಲಿ ವಿಚಾರಿಸಿದನು. ಪುತ್ರಾದಿಗಳ ಮತ್ತೆಲ್ಲರ ಯೋಗಕ್ಷೇಮವನ್ನು ಬಿನ್ನವಿಸಿ ಸಾಯಂದೇವನು ತನ್ನ ಇಬ್ಬರು ಮಕ್ಕಳನ್ನು ಶ್ರೀಗುರು ಪಾದಗಳಲ್ಲಿ ನಿಲ್ಲಿಸಿದನು. ಜ್ಯೇಷ್ಠಪುತ್ರನಾದ ನಾಗನಾಥನಲ್ಲಿ ಶ್ರೀಗುರುವಿನ ಕೃಪೆ ಅಧಿಕ. ದಯಾನಿಧಿಯಾದ ಶ್ರೀಗುರುವು ಅವನ ತಲೆಯಮೇಲೆ ಕೈಯಿಟ್ಟು, ಸಾಯಂದೇವನಿಗೆ, "ಅಯ್ಯಾ, ನಿನ್ನ ದೊಡ್ಡ ಮಗನು ಸಂಪೂರ್ಣ ಆಯುಸ್ಸಿನಿಂದ ನಿನ್ನ ವಂಶವನ್ನು ಉದ್ಧರಿಸುವನು. ಇವನೆ ನನ್ನ ಭಕ್ತನಾಗಿ ಸಿರಿಸಂಪದಗಳು ಇರುವವನಾಗುತ್ತಾನೆ. ಇನ್ನುಮೇಲೆ ನೀನು ಮ್ಲೇಛ್ಛಸೇವೆ ಮಾಡಬಾರದು. ಈಕೆ, ನಿನ್ನ ಭಾರ್ಯೆ, ಪತಿವ್ರತೆ. ಅದೃಷ್ಟವಂತಳು. ನಿಮಗೆ ಇನ್ನೂ ನಾಲ್ಕು ಮಕ್ಕಳು ಜನಿಸುತ್ತಾರೆ. ನಿನ್ನ ಕುಲವೆಲ್ಲ ಸಂಪದಗಳಿಂದ ತುಂಬಿರುತ್ತವೆ. ಆದ್ದರಿಂದ ನೀನು ನನ್ನನ್ನೇ ಸೇವಿಸು. ಸಾಯಂದೇವ, ಈ ನಿನ್ನ ಜ್ಯೇಷ್ಠಕುಮಾರ ನನ್ನ ಸೇವಕನು. ನನ್ನ ಅನುಗ್ರಹದಿಂದ ಇವನ ಕೀರ್ತಿ ಎಲ್ಲಕಡೆಯೂ ವ್ಯಾಪಿಸುತ್ತದೆ." ಎಂದು ಹೇಳಿ, " ತಕ್ಷಣವೇ ಸಂಗಮಸ್ಥಾನಕ್ಕೆ ಹೋಗಿ ವಿಧಿವಿಧಾನವಾಗಿ ಸ್ನಾನಮಾಡಿ ಮತ್ತೆ ನನ್ನ ಎದುರಿಗೆ ಬಾ." ಎಂದು ಆದೇಶಕೊಡಲು ಆ ದ್ವಿಜನು ಹೆಂಡತಿ ಮಕ್ಕಳೊಡನೆ ಹೋಗಿ ಸ್ನಾನ ಮಾಡಿ ಅಶ್ವತ್ಥವೃಕ್ಷವನ್ನು ಅರ್ಚಿಸಿ ಮತ್ತೆ ಶ್ರೀಗುರು ಸನ್ನಿಧಿಗೆ ಬಂದನು. ಅಂದಿನ ದಿನ ಆ ಗ್ರಾಮದಲ್ಲಿನ ಜನರು ಸಂತೋಷದಿಂದ ಅನಂತವ್ರತವನ್ನು ಆಚರಿಸಿ ಅಲ್ಲಿಗೆ ಬಂದು ಶ್ರೀಗುರುವನ್ನು ಭಕ್ತಿಯಿಂದ ಪೂಜಿಸಿದರು.
ಶ್ರೀಗುರುವು ಸಾಯಂದೇವನಿಗೆ, "ಅಯ್ಯಾ ಸಾಯಂದೇವ, ಈ ದಿನ ಅನಂತವ್ರತವಲ್ಲವೇ? ಪೂರ್ವದಲ್ಲಿ ಕೌಂಡಿನ್ಯನೆಂಬ ಋಷಿಯು ಸರ್ವಕಾಮದಗಳನ್ನೂ ತೀರಿಸುವ ಅನಂತನ ವ್ರತವನ್ನು ಮಾಡಿದನು." ಎಂದು ಹೇಳಿದರು. ಸಾಯಂದೇವನು ಸದ್ಗುರುವಿಗೆ ನಮಸ್ಕರಿಸಿ, "ಸ್ವಾಮಿ, ಈ ವ್ರತವನ್ನು ಪೂರ್ವದಲ್ಲಿ ಕೌಂಡಿನ್ಯ ಋಷಿಯು ಹೇಗೆ ಮಾಡಿದನು? ವ್ರತವಿಧಾನವನ್ನು ಆದ್ಯಂತವಾಗಿ ಹೇಳುವ ಕೃಪೆಮಾಡಿ." ಎಂದು ಪ್ರಾರ್ಥಿಸಲು, ಅವನ ಪ್ರಶ್ನೆಯನ್ನು ಕೇಳಿದ ಶ್ರೀಗುರುವು ಸಂತೋಷಪಟ್ಟವರಾಗಿ ವ್ರತವನ್ನು ವಿಸ್ತಾರವಾಗಿ ಹೇಳಿದರು.
ಇಲ್ಲಿಗೆ ನಲವತ್ತೆರಡನೆಯ ಅಧ್ಯಾಯ ಮುಗಿಯಿತು.
No comments:
Post a Comment