Sunday, September 29, 2013

||ಶ್ರೀಗುರು ಚರಿತ್ರೆ - ಐವತ್ತೆರಡನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ಐವತ್ತೊಂದು ಅಧ್ಯಾಯಗಳ ಗುರುಚರಿತ್ರೆಯನ್ನು ಕೇಳಿ ನಾಮಧಾರಕನ ಮನಸ್ಸು ಬ್ರಹ್ಮಾನಂದದಲ್ಲಿ ಮಗ್ನವಾಗಿಹೋಯಿತು. ಜಗತ್ತೆಲ್ಲವೂ ಅವನಿಗೆ ದಿವ್ಯವಾಗಿ ಕಾಣಬಂತು. ಹೀಗೆ ಸಮಾಧಿಸ್ಥಿತನಾಗಿ ಆನಂದಮಗ್ನನಾದ ನಾಮಧಾರಕನು ವಾಗತೀತವಾದ ಸಾತ್ವಿಕ ಅಷ್ಟಭಾವಗಳಿಂದ ಕೂಡಿ ನಿಮೀಲಿತ ನೇತ್ರನಾದನು. ಅವನನ್ನು ಕಂಡ ಸಿದ್ಧಮುನಿಯು ಆನಂದಭರಿತನಾಗಿ ‘ನನ್ನ ಶಿಷ್ಯನಿಗೆ ಸಮಾಧಿಸ್ಥಿತಿ ಲಭಿಸಿತು. ಲೋಕೋಪಕಾರ್ಥವಾಗಿ ಇವನನ್ನು ಎಚ್ಚರಗೊಳಿಸಬೇಕು’ ಎಂದು ಯೋಚಿಸಿ, ಪ್ರೇಮ ಪೂರಿತನಾಗಿ ತನ್ನ ಅಮೃತ ಹಸ್ತವನ್ನು ನಾಮಧಾರಕನ ತಲೆಯಮೇಲಿಟ್ಟು, ಅವನನ್ನು ಆಲಿಂಗನ ಮಾಡಿಕೊಂಡು, "ನಾಮಧಾರಕ, ನೀನು ಚಂಚಲವಾದ ಭವಸಾಗರವನ್ನು ದಾಟಿದೆ. ನೀನು ಹೀಗೇ ಇದ್ದುಬಿಟ್ಟರೆ ನಿನ್ನ ಜ್ಞಾನವು ನಿನ್ನಲ್ಲಿಯೇ ಇದ್ದುಬಿಡುತ್ತದೆ. ಅದರಿಂದ ಜಗತ್ತು ಹೇಗೆ ಉದ್ಧರಿಸಲ್ಪಡುತ್ತದೆ? ಆದ್ದರಿಂದ ಶಿಷ್ಯ, ನೀನು ಎಚ್ಚರಗೊಳ್ಳಬೇಕು. ಅದಕ್ಕಾಗಿ ನೀನು ಅಂತಃಕರಣದಲ್ಲಿ ಶ್ರೀಗುರುಚರಣಗಳಲ್ಲಿ ಸುದೃಢಬಾವನೆಯನ್ನು ನಿಲ್ಲಿಸಿಕೊಳ್ಳಬೇಕು. ಬಾಹ್ಯದಲ್ಲಿ ನಿನ್ನ ಆಚರಣೆಗಳು ಶಾಸ್ತ್ರಾಧಾರವಾಗಿ ನಡೆಯಬೇಕು. ನೀನು ಕೋರಿದ ಹಾಗೆ ಅಮೃತದಂತಹ ಶ್ರೀಗುರುಚರಿತ್ರೆಯನ್ನು ನನ್ನ ಮನಸ್ಸಿಗೆ ಗೋಚರಿಸಿದಂತೆ ಹೇಳಿದ್ದೇನೆ. ಇದು ತಾಪತ್ರಯಗಳನ್ನು ಹೋಗಲಾಡಿಸುವುದು. ಇದು ನಿನಗೋಸ್ಕರವೇ ಲೋಕದಲ್ಲಿ ಪ್ರಕಟಗೊಂಡಿದೆ. ನಿನಗೋಸ್ಕರವೇ ನಾನು ಶ್ರೀಗುರುಚರಿತ್ರೆಯನ್ನು ಸ್ಮರಣೆಗೆ ತಂದುಕೊಂಡು ಉಪದೇಶಿಸಿದ್ದೇನೆ. ನಿನ್ನಿಂದಾಗಿ ನನಗೆ ಗುರುಚರಿತ್ರೆ ಸ್ಮರಣೆಗೆ ಬಂದದ್ದರಿಂದ ನನಗೂ ಹಿತವೇ ಆಯಿತು" ಎಂದು ಹೇಳಿದರು. ಸಿದ್ಧಮುನಿಯ ಉಪದೇಶವನ್ನು ಕೇಳಿದ ನಾಮಧಾರಕ ಕಣ್ಣು ತೆರೆದು ನೋಡಿದನು.

ನಾಮಧಾರಕನು, "ಸ್ವಾಮಿ, ನೀವು ಭವಸಾಗರತಾರಕರು. ನನಗೆ ಶ್ರೀಗುರುಚರಿತ್ರೆಯ ಅವತರಣಿಕೆ ಕ್ರಮವನ್ನು ತಿಳಿಸಬೇಕು" ಎಂದು ಪ್ರಾರ್ಥಿಸಿದನು. "ಶ್ರೀಗುರುಚರಣಾಮೃತದಲ್ಲಿ ಅಮೃತಕ್ಕಿಂತ ಪರಮಾಮೃತವಾದ ತೃಪ್ತಿ ಇರುವುದು. ಆದ್ದರಿಂದ ಈ ಕಥೆಯನ್ನು ಮತ್ತೆ ಸೂಚನಾ ಪ್ರಾಯವಾಗಿ ತಿಳಿಸಿ, ಅಕ್ಷಯಾಮೃತವನ್ನು ನಾನು ಆಸ್ವಾದಿಸುವಂತೆ ಮಾಡಿ, ನನ್ನನ್ನು ಆನಂದ ಸಾಗರದಲ್ಲಿ ನಿಮಗ್ನನಾಗುವಂತೆ ಮಾಡಿ" ಎಂದು ಬಿನ್ನವಿಸಿಕೊಂಡನು.

ಶಿಷ್ಯನ ಪ್ರಾರ್ಥನೆಯನ್ನು ಕೇಳಿದ ಸಿದ್ಧಮುನಿ, "ಶಿಷ್ಯ, ಈಗ ನಿನಗೆ ಶ್ರೀಗುರುಚರಿತ್ರೆಯ ಮೊದಲನೆಯ ಅಧ್ಯಾಯದಿಂದ ಐವತ್ತೆರಡನೆಯ ಅಧ್ಯಾಯದವರೆಗೂ ಸಂಗ್ರಹ ಸೂಚಿಕೆಯನ್ನು ಹೇಳುತ್ತೇನೆ. ಪ್ರಥಮಾಧ್ಯಾಯ ಮಂಗಳಾಚರಣವು. ಮುಖ್ಯಾವತಾರ ಸ್ಮರಣ, ಶ್ರೀಗುರುಮೂರ್ತಿ ದರ್ಶನ ಭಕ್ತರಿಗೆ ಸಿದ್ಧಿಸಿತು. ದ್ವಿತೀಯಾಧ್ಯಾಯದಲ್ಲಿ ಬ್ರಹ್ಮೋತ್ಪತ್ತಿ, ನಾಲ್ಕು ಯುಗಗಳ ಲಕ್ಷಣಗಳು: ಶ್ರೀಗುರು ಸೇವೆ ಮಾಡಿದ ದೀಪಕನ ವೃತ್ತಾಂತ: ಮೂರನೆಯ ಅಧ್ಯಾಯದಲ್ಲಿ ಸಿದ್ಧಗುರುವು ನಾಮಧಾರಕನನ್ನು ಅಮರಜಾ ಸಂಗಮದಲ್ಲಿ ಸ್ವಸ್ಥಾನಕ್ಕೆ ಕರೆದುಕೊಂಡು ಹೋಗಿ ಅಂಬರೀಷ ದೂರ್ವಾಸರ ಮಹಿಮೆಗಳನ್ನು ತಿಳಿಸಿದರು. ನಾಲ್ಕನೆಯ ಅಧ್ಯಾಯದಲ್ಲಿ ಅನಸೂಯಾ ದೇವಿಯನ್ನು ಪರೀಕ್ಷಿಸಲು ಬಂದ ತ್ರಿಮೂರ್ತಿಗಳು ಶಿಶುಗಳಾಗಿ ಆನಂದದಿಂದ ಅನಸೂಯಾ ದೇವಿಯ ಸ್ತನ್ಯವನ್ನು ಕುಡಿದರು. ಐದನೆಯ ಅಧ್ಯಾಯದಲ್ಲಿ ದತ್ತಾತ್ರೇಯರು ಪೀಠಾಪುರದಲ್ಲಿ ಶ್ರೀಪಾದ ಶ್ರೀವಲ್ಲಭರಾಗಿ ಅವತರಿಸಿ ತೀರ್ಥಯಾತ್ರೆಗಳಿಗೆಂದು ಹೊರಟರು. ಆರನೆಯ ಅಧ್ಯಾಯದಲ್ಲಿ ರಾವಣನು ಪರಮೇಶ್ವರನಿಂದ ಆತ್ಮಲಿಂಗವನ್ನು ಗ್ರಹಿಸಿ ತೆಗೆದುಕೊಂಡು ಹೋಗುವುದನ್ನು ವಿಘ್ನೇಶ್ವರನು ವಿಘ್ನಗೊಳಿಸಲು ಆತ್ಮಲಿಂಗವು ಗೋಕರ್ಣ ಕ್ಷೇತ್ರದಲ್ಲಿ ಸ್ಥಾಪನೆಗೊಂಡ ಕಥೆ ಇದೆ. ಏಳನೆಯ ಅಧ್ಯಾಯದಲ್ಲಿ ಗೌತಮನು ಮಿತ್ರ ಸಹ ರಾಜನಿಗೆ ಗೋಕರ್ಣ ಮಹಿಮೆಯನ್ನು ವರ್ಣಿಸಿ ಚಂಡಾಲಿ ಹಠಾತ್ತಾಗಿ ಉದ್ಧರಿಸಲ್ಪಟ್ಟ ಕಥೆ ಹೇಳಿದನು. ಎಂಟನೆಯ ಅಧ್ಯಾಯದಲ್ಲಿ ಮಾತಾಪುತ್ರರು ನದಿಯಲ್ಲಿ ಬಿದ್ದು ಪ್ರಾಣ ತ್ಯಾಗ ಮಾಡಲು ಯತ್ನಿಸುತ್ತಿದ್ದಾಗ ಶ್ರೀಗುರುವಲ್ಲಭರು ತಾಯಿಗೆ ಶನಿಪ್ರದೋಷ ವ್ರತವನ್ನು ಉಪದೇಶಿಸಿ, ಅವಳ ಮಗನನ್ನು ಜ್ಞಾನಿಯಾಗಿ ಮಾಡಿದರು. ಒಂಭತ್ತನೆಯ ಅಧ್ಯಾಯದಲ್ಲಿ ಕೃಪಾಸಾಗರನಾದ ಶ್ರೀಗುರುವು ರಜಕನಿಗೆ ರಾಜನಾಗುವಂತೆ ವರಕೊಟ್ಟು, ರಾಜನಾದಾಗ ಅವನಿಗೆ ದರ್ಶನ ಕೊಡಲು ಮಾತುಕೊಟ್ಟು, ಅದೃಶ್ಯರಾದರು. ಹತ್ತನೆಯ ಅಧ್ಯಾಯದಲ್ಲಿ ಕಳ್ಳರು ಸಂಹರಿಸಿದ ಬ್ರಾಹ್ಮಣನಿಗೆ ಶ್ರೀಗುರುವು ಪ್ರಾಣಕೊಟ್ಟು, ಕಳ್ಳರನ್ನು ಸಂಹರಿಸಿದರು.

ಹನ್ನೊಂದನೆಯ ಅಧ್ಯಾಯದಲ್ಲಿ ಕರಂಜಾ ನಗರದಲ್ಲಿ ಮಾಧವನೆಂಬ ಬ್ರಾಹ್ಮಣನ ಪತ್ನಿಯಾದ ಅಂಬೆಯ ಗರ್ಭದಲ್ಲಿ ಅವತರಿಸಿ ಶ್ರೀ ನೃಸಿಂಹ ಸರಸ್ವತಿ ಎಂಬ ಹೆಸರಿನಿಂದ ಪ್ರಸಿದ್ಧಿಗೊಂಡ ಶ್ರೀಗುರುವಿನ ಚರಿತ್ರೆ ಇದೆ. ಹನ್ನೆರಡನೆಯ ಅಧ್ಯಾಯದಲ್ಲಿ ಅಂಬಾ ದೇವಿಗೆ ಜ್ಞಾನವನ್ನು ಉಪದೇಶಿಸಿ ಅವಳ ಸಂತಾನವನ್ನು ಅನುಗ್ರಹಿಸಿ, ಕಾಶಿ ನಗರವನ್ನು ಸೇರಿ ಸನ್ಯಾಸವನ್ನು ಸ್ವೀಕರಿಸಿ, ಉತ್ತರ ಯಾತ್ರೆ ಮಾಡಿದರು. ಹದಿಮೂರನೆಯ ಅಧ್ಯಾಯದಲ್ಲಿ ಕಾರಂಜ ನಗರದಲ್ಲಿ ತಾಯಿತಂದೆಗಳಿಗೆ ದರ್ಶನಕೊಟ್ಟು ಶ್ರೀಗುರುವು ಗೋದಾವರಿ ತೀರವನ್ನು ಸೇರಿ ಅಲ್ಲಿ ಹೊಟ್ಟೆ ಶೂಲೆಯಿಂದ ಬಾಧೆಪಡುತ್ತಿದ್ದ ಬ್ರಾಹ್ಮಣನನ್ನು ಅನುಗ್ರಹಿಸಿದರು. ಹದಿನಾಲ್ಕನೆಯ ಅಧ್ಯಾಯದಲ್ಲಿ ಶ್ರೀಗುರುವು ಕೄರನಾದ ಯವನ ರಾಜನನ್ನು ಶಿಕ್ಷಿಸಿ ಸಾಯಂದೇವನನ್ನು ಅನುಗ್ರಹಿಸಿ ವರಗಳನಿತ್ತರು. ಹದಿನೈದನೆಯ ಅಧ್ಯಾಯದಲ್ಲಿ ಶ್ರೀಗುರುವು ತನ್ನ ಶಿಷ್ಯರನ್ನು ತೀರ್ಥಯಾತ್ರೆಗಳಿಗೆ ಕಳುಹಿಸಿ ತಾವು ವೈದ್ಯನಾಥದಲ್ಲಿ ಸ್ವಲ್ಪಕಾಲ ಗುಪ್ತವಾಗಿದ್ದರು. ಹದಿನಾರನೆಯ ಅಧ್ಯಾಯದಲ್ಲಿ ಶ್ರೀಗುರುವು ಒಬ್ಬ ಬ್ರಾಹ್ಮಣನಿಗೆ ಗುರುಭಕ್ತಿಯನ್ನು ಬೋಧಿಸಿ, ಅವನಿಗೆ ಜ್ಞಾನವನ್ನನುಗ್ರಹಿಸಿ, ಭಿಲ್ಲವಾಡಿಯಲ್ಲಿರುವ ಭುವನೇಶ್ವರಿ ಸನ್ನಿಧಿಯನ್ನು ಸೇರಿದರು. ಹದಿನೇಳನೆಯ ಅಧ್ಯಾಯದಲ್ಲಿ ಮೂರ್ಖನಾದ ಬ್ರಾಹ್ಮಣ, ದೇವಿಗೆ ತನ್ನ ನಾಲಗೆಯನ್ನು ಕತ್ತರಿಸಿ ಅರ್ಪಿಸಲು ಶ್ರೀಗುರುವು ಮತ್ತೆ ಅವನಿಗೆ ನಾಲಗೆಯನ್ನು ಕೊಟ್ಟು ಅವನನ್ನು ವಿದ್ಯಾವಂತನಾಗೆಂದು ಆಶೀರ್ವದಿಸಿದರು. ಹದಿನೆಂಟನೆಯ ಅಧ್ಯಾಯದಲ್ಲಿ ಒಬ್ಬ ದರಿದ್ರನ ಮನೆಯಲ್ಲಿ ಭಿಕ್ಷೆಗೆಂದು ಹೋಗಿ ಅಲ್ಲಿದ್ದ ಲತೆಯನ್ನು ಕಿತ್ತುಹಾಕಿ, ಆ ದರಿದ್ರನಿಗೆ ಶ್ರೀಗುರುವು ಧನ ತುಂಬಿದ ಬಿಂದಿಗೆಯನ್ನು ಅನುಗ್ರಹಿಸಿದರು. ಹತ್ತೊಂಭತ್ತನೆಯ ಅಧ್ಯಾಯದಲ್ಲಿ ಔದುಂಬರ ವೃಕ್ಷ ಮಹಿಮೆಯನ್ನು ವರ್ಣಿಸಿ ಯೋಗಿನಿಗಳಿಗೆ ವರ ಕೊಟ್ಟು ಶ್ರೀಗುರುವು ಗಾಣಗಾಪುರಕ್ಕೆ ಹೋದರು.

ಇಪ್ಪತ್ತನೆಯ ಅಧ್ಯಾಯದಲ್ಲಿ ಒಬ್ಬ ಬ್ರಾಹ್ಮಣ ಹೆಂಗಸಿಗಿದ್ದ ಪಿಶಾಚ ಬಾಧೆಯನ್ನು ತೊಲಗಿಸಿ ಇಬ್ಬರು ಗಂಡು ಮಕ್ಕಳಾಗುವಂತೆ ಅನುಗ್ರಹಿಸಿದರು. ಅವರಲ್ಲಿ ಒಬ್ಬನು ಮರಣಿಸಲಾಗಿ ಶ್ರೀಗುರುವು ಸಿದ್ಧರೂಪದಲ್ಲಿ ಬಂದು ಆ ಹೆಂಗಸಿಗೆ ಜ್ಞಾನೋಪದೇಶ ಮಾಡಿದರು. ಇಪ್ಪತ್ತೊಂದನೆಯ ಅಧ್ಯಾಯದಲ್ಲಿ ಆ ಬ್ರಾಹ್ಮಣ ಹೆಂಗಸಿಗೆ ಜ್ಞಾನೋಪದೇಶ ಮಾಡಲು, ಅವಳು ಹೇಳಿದ ಮಾತುಗಳನ್ನು ಕೇಳಿ, ಶ್ರೀಗುರುವು ಆ ಮರಣಿಸಿದ್ದ ಬಾಲಕನನ್ನು ಔದುಂಬರ ವೃಕ್ಷದ ಹತ್ತಿರಕ್ಕೆ ಕರೆದುಕೊಂಡು ಹೋಗುವಂತೆ ಹೇಳಿ ತಾವೇ ರಾತ್ರಿ ಅಲ್ಲಿಗೆ ಹೋಗಿ ಆ ಬಾಲಕನನ್ನು ಪುನರುಜ್ಜೀವಿತ ಗೊಳಿಸಿದರು. ಇಪ್ಪತ್ತೆರಡನೆಯ ಅಧ್ಯಾಯದಲ್ಲಿ ಸಂಗಮದ ಹತ್ತಿರದಲ್ಲಿನ ಗಾಣಗಾಪುರದಲ್ಲಿ ಒಬ್ಬ ಬಡ ಬ್ರಾಹ್ಮಣನ ಮನೆಗೆ ಭಿಕ್ಷೆಗೆಂದು ಹೋಗಿ ಬಂಜೆಯಾಗಿದ್ದ ಎಮ್ಮೆಯಿಂದ ಹಾಲು ಕರೆಸಿ ಆ ಬ್ರಾಹ್ಮಣ ದಂಪತಿಗಳನ್ನು ಅನುಗ್ರಹಿಸಿದರು. ಇಪ್ಪತ್ತಮೂರನೆಯ ಅಧ್ಯಾಯದಲ್ಲಿ ಶ್ರೀಗುರುವನ್ನು ರಾಜನು ಗಾಣಗಾಪುರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಒಬ್ಬ ಬ್ರಹ್ಮರಾಕ್ಷಸನನ್ನು ಉದ್ಧರಿಸಿ, ಆ ರಾಕ್ಷಸನಿದ್ದ ಮನೆಯಲ್ಲೇ ತಾವು ನೆಲೆಸಿದರು. ಇಪ್ಪತ್ತನಾಲ್ಕನೆಯ ಅಧ್ಯಾಯದಲ್ಲಿ ತ್ರಿವಿಕ್ರಮ ಭಾರತಿ ಶ್ರೀಗುರುವನ್ನು ನಿಂದಿಸಲು ಅವನಲ್ಲಿಗೆ ಹೋಗಿ ಅವನಿಗೆ ತಮ್ಮ ವಿಶ್ವರೂಪವನ್ನು ತೋರಿಸಲು ಅವನು ಅವರ ಪಾದಗಳಲ್ಲಿ ಬಿದ್ದು ಅವರಿಗೆ ಶರಣಾಗತನಾದನು. ಇಪ್ಪತ್ತೈದನೆಯ ಅಧ್ಯಾಯದಲ್ಲಿ ವಿದ್ಯಾಗರ್ವದಿಂದ ಮ್ಲೇಚ್ಛರಾಜನ ಆಸ್ಥಾನದಿಂದ ಬಂದ ಇಬ್ಬರು ಬ್ರಾಹ್ಮಣರು ತ್ರಿವಿಕ್ರಮ ಭಾರತಿಯನ್ನು ವಾದ ಮಾಡೆಂದು ಬಲವಂತ ಮಾಡಲು ಅವರನ್ನು ಶ್ರೀಗುರುವಿನ ಬಳಿಗೆ ತ್ರಿವಿಕ್ರಮನು ಕರೆತಂದನು. ಇಪ್ಪತ್ತಾರನೆಯ ಅಧ್ಯಾಯದಲ್ಲಿ ಶ್ರೀಗುರುವು ಆ ಗರ್ವಾಂಧರಾದ ವೇದವೇತ್ತರಿಬ್ಬರಿಗೆ ವೇದಗಳ ರಚನಾ ಸ್ವಭಾವವನ್ನು ತಿಳಿಸಿ ವಾದ ಮಾಡುವುದನ್ನು ಬಿಡಬೇಕೆಂದು ಬೋಧಿಸಿದರು. ಉನ್ಮತ್ತರಾದ ಅವರು ಗುರುವಾಕ್ಯಗಳನ್ನು ಕೇಳಲಿಲ್ಲ. ಇಪ್ಪತ್ತೇಳನೆಯ ಅಧ್ಯಾಯದಲ್ಲಿ ಶ್ರೀಗುರುವು ಪತಿತನೊಬ್ಬನನ್ನು ಕರೆದು ಅವನಿಂದ ವೇದಗಳನ್ನು ಹೇಳಿಸಿ ಆ ಬ್ರಾಹ್ಮಣರಿಬ್ಬರೂ ವಾದ ಮಾಡಲಾರದೇ ಹೋದಾಗ ಅವರಿಗೆ ಶಾಪ ಕೊಟ್ಟು ಬ್ರಹ್ಮರಾಕ್ಷಸರನ್ನಾಗಿ ಮಾಡಿದರು. ಇಪ್ಪತ್ತೆಂಟನೆಯ ಅಧ್ಯಾಯದಲ್ಲಿ ಶ್ರೀಗುರುವು ಪತಿತನಿಗೆ ಧರ್ಮಾಧರ್ಮಗಳನ್ನು ಬೋಧಿಸಿ, ಮತ್ತೆ ಅವನನ್ನು ಪತಿತನನ್ನಾಗಿ ಮಾಡಿ ಮನೆಗೆ ಕಳುಹಿಸಿದರು. ಇಪ್ಪತ್ತೊಂಭತ್ತನೆಯ ಅಧ್ಯಾಯದಲ್ಲಿ ಶ್ರೀಗುರುವು ತ್ರಿವಿಕ್ರಮನಿಗೆ ಭಸ್ಮ ಪ್ರಭಾವವನ್ನು ತಿಳಿಸಿ ವಾಮದೇವ ಮುನಿಯು ಬ್ರಹ್ಮರಾಕ್ಷಸನ ಪಿಶಾಚತ್ವವನ್ನು ತೊಲಗಿಸಿದ ಕಥೆಯನ್ನು ಹೇಳಿದರು.

ಮುವ್ವತ್ತನೆಯ ಅಧ್ಯಾಯದಲ್ಲಿ ಒಬ್ಬಳು ಪತಿವ್ರತೆ ಪತಿ ಮರಣಿಸಲು ದುಃಖಪಡುತ್ತಿರಲಾಗಿ ಸಾಧು ರೂಪದಲ್ಲಿ ಬಂದು ಅವಳಿಗೆ ಅನೇಕ ಕಥೆಗಳನ್ನು ಹೇಳಿ ಅವಳನ್ನು ಶಾಂತ ಗೊಳಿಸಿದರು. ಮುವ್ವತ್ತೊಂದನೆಯ ಅಧ್ಯಾಯದಲ್ಲಿ ಅವಳಿಗೆ ಪತಿವ್ರತಾ ಧರ್ಮವನ್ನು ಬೋಧಿಸಿ ಸಹಗಮನವಿಧಿಯನ್ನು ಉಪದೇಶಿಸಿದರು. ಮುವ್ವತ್ತೆರಡನೆಯ ಅಧ್ಯಾಯದಲ್ಲಿ ಆ ಪತಿವ್ರತೆ ಸಹಗಮನಕ್ಕೆಂದು ಹೊರಡುವುದಕ್ಕೆ ಮುಂಚೆ ಶ್ರೀಗುರು ದರ್ಶನ ಮಾಡಿಕೊಂಡು ನಮಸ್ಕರಿಸಲು ಅವಳಿಗೆ ‘ಅಷ್ಟಪುತ್ರ ಸೌಭಾಗ್ಯವತೀ ಭವ’ ಎಂದು ಆಶೀರ್ವದಿಸಿ, ಅವಳ ಗಂಡನನ್ನು ಪುನರುಜ್ಜೀವಿಸುವಂತೆ ಮಾಡಿದರು. ಮುವ್ವತ್ತಮೂರನೆಯ ಅಧ್ಯಾಯದಲ್ಲಿ ರುದ್ರಾಕ್ಷಧಾರಣ ಮಹಿಮೆ ಮತ್ತು ಕೋತಿ-ಕೋಳಿಗಳ ಕಥೆ, ಹಾಗೂ ವೈಶ್ಯ-ವೇಶ್ಯೆಯರ ಕಥೆಯನ್ನು ಶ್ರೀಗುರುವು ಹೇಳಿದರು. ಮುವ್ವತ್ತನಾಲ್ಕನೆಯ ಅಧ್ಯಾಯದಲ್ಲಿ ಪರಾಶ ಮುನಿಯು ಮಹಾರಾಜನಿಗೆ ರುದ್ರಾಧ್ಯಾಯ ಮಹಿಮೆ ತಿಳಿಸಿ ರುದ್ರಾಧ್ಯಾಯದಿಂದ ಅಭಿಷೇಕ ಮಾಡಿಸಿ ರಾಜಪುತ್ರನು ಬದುಕುವಂತೆ ಮಾಡಿದ ನಂತರ ನಾರದನು ರಾಜನಿಗೆ ರಾಜಕುಮಾರನ ಆಯುರ್ದಾನವನ್ನು ತಿಳಿಸಿದನು. ಮುವ್ವತ್ತೈದನೆಯ ಅಧ್ಯಾಯದಲ್ಲಿ ಕಚದೇವಯಾನಿಯರ ಕಥೆ, ಸೋಮವಾರ ವ್ರತ ಮಾಹಾತ್ಮ್ಯೆಯನ್ನು ತಿಳಿಸಿ ಸೀಮಂತಿನಿ ಕಥೆಯನ್ನು ಶ್ರೀಗುರುವು ಹೇಳಿದರು. ಮುವ್ವತ್ತಾರನೆಯ ಅಧ್ಯಾಯದಲ್ಲಿ ಬ್ರಹ್ಮನಿಷ್ಠನಾದ ಬ್ರಾಹ್ಮಣನ ಹೆಂಡತಿ ಅವನನ್ನು ಗುರ್ವಾಜ್ಞೆಯಂತೆ ಪರಾನ್ನಭೋಜನಕ್ಕೆ ಕರೆದುಕೊಂಡು ಹೋಗಿ ಆ ಭೋಜನ ಅಸಹ್ಯವಾಗಿ ಶ್ರೀಗುರು ಚರಣಗಳನ್ನು ಆಶ್ರಯಿಸಲು ಅವರಿಗೆ ಶ್ರೀಗುರುವು ಕರ್ಮವಿಪಾಕವನ್ನು ಬೋಧಿಸಿದರು. ಮುವ್ವತ್ತೇಳನೆಯ ಅಧ್ಯಾಯದಲ್ಲಿ ಶ್ರೀಗುರುವು ಆ ಬ್ರಾಹ್ಮಣನಿಗೆ ನಾನಾಧರ್ಮಗಳು, ಬ್ರಹ್ಮಕರ್ಮ ಮುಂತಾದುವನ್ನು ತಿಳಿಸಿ ಪ್ರಸನ್ನರಾಗಿ ಅವನನ್ನು ಅನುಗ್ರಹಿಸಿದರು. ಮುವ್ವತ್ತೆಂಟನೆಯ ಅಧ್ಯಾಯದಲ್ಲಿ ಭಾಸ್ಕರನೆಂಬ ಬ್ರಾಹ್ಮಣನು ಮೂವರಿಗೆ ಸಾಕಾಗುವಷ್ಟು ಮಾತ್ರವೇ ಅಡಿಗೆ ಮಾಡಿದಾಗ ಶ್ರೀಗುರುವು ಆ ಅಡಿಗೆಯನ್ನು ಅಕ್ಷಯವಾಗಿ ಮಾಡಿ ನಾಲ್ಕುಸಾವಿರ ಬ್ರಾಹ್ಮಣರು ಮತ್ತು ಬಹಳ ಜನ ಇತರರಿಗೆ ಊಟಮಾಡಿಸಿದರು. ಮುವ್ವತೊಂಭತ್ತನೆಯ ಅಧ್ಯಾಯದಲ್ಲಿ ಸೋಮನಾಥನೆಂಬ ಬ್ರಾಹ್ಮಣನ ಹೆಂಡತಿಗೆ ಅರವತ್ತು ವರ್ಷಗಳಾಗಿದ್ದರೂ ಪುತ್ರಹೀನಳಾಗಿದ್ದುದರಿಂದ ಶ್ರೀಗುರುವು ಅವಳಿಗೆ ಸಂತಾನವನ್ನನುಗ್ರಹಿಸಿ ಅವಳ ಬಂಜೆತನವನ್ನು ಹೋಗಲಾಡಿಸಿದರು. ನಲವತ್ತನೆಯ ಅಧ್ಯಾಯದಲ್ಲಿ ನರಹರಿಯಿಂದ ಒಣಗಿಹೋಗಿದ್ದ ಔದುಂಬರವೃಕ್ಷದ ಕಾಷ್ಠವನ್ನು ಅರ್ಚಿಸುವಂತೆ ಮಾಡಿ ಅವನ ಕುಷ್ಠರೋಗವನ್ನು ಹೋಗಲಾಡಿಸಿದುದೇ ಅಲ್ಲದೆ ಶಿಷ್ಯರಿಗೆ ಶಬರನ ಕಥೆಯನ್ನು ಹೇಳಿ ಶಿವಪೂಜಾವಿಧಾನವನ್ನು ತಿಳಿಸಿದರು.

ನಲವತ್ತೊಂದನೆಯ ಅಧ್ಯಾಯದಲ್ಲಿ ಸಾಯಂದೇವನ ಸೇವೆಯನ್ನು ಸ್ವೀಕರಿಸಿ ಕಾಶಿಯಾತ್ರಾ ವಿಧಾನವನ್ನು ಶ್ರೀಗುರುವು ಹೇಳಿದರು. ನಲವತ್ತೆರಡನೆಯ ಅಧ್ಯಾಯದಲ್ಲಿ ಸಾಯಂದೇವನು ಹೆಂದತಿಮಕ್ಕಳೊಡನೆ ಬಂದು ಶ್ರೀಗುರುವನ್ನು ಸ್ತುತಿಸಲು ಅವನಿಗೆ ಯಾತ್ರಾವಿಧಿಯನ್ನು ತಿಳಿಸಿ ಶ್ರೀಗುರುವು ವರವನ್ನು ಕೊಟ್ಟರು. ನಲವತ್ತಮೂರನೆಯ ಅಧ್ಯಾಯದಲ್ಲಿ ಅನಂತವ್ರತವನ್ನು ಶ್ರೀಕೃಷ್ಣನು ಧರ್ಮರಾಜನಿಗೆ ಹೇಳಿ ಮಾಡಿಸಿದಂತೆ ಶ್ರೀಗುರುವು ಸಾಯಂದೇವನಿಂದ ಅನಂತವ್ರತವನ್ನು ಮಾಡಿಸಿದರು. ನಲವತ್ತನಾಲ್ಕನೆಯ ಅಧ್ಯಾಯದಲ್ಲಿ ತಂತುಕಾರ ಭಕ್ತನಿಗೆ ಶ್ರೀಶೈಲಪರ್ವತವನ್ನು ತೋರಿಸಿ ಅದರ ಮಹಿಮೆ, ಶಿವರಾತ್ರಿ ಮಹಿಮೆಗಳನ್ನು ಬೋಧಿಸಿ, ವಿಮರ್ಷಣರಾಜನ ಕಥೆಯನ್ನು ಹೇಳಿದರು. ನಲವತ್ತೈದನೆಯ ಅಧ್ಯಾಯದಲ್ಲಿ ತುಲಜಾಪುರದಿಂದ ಬಂದ ಕುಷ್ಠರೋಗಪೀಡಿತನಾದ ಬ್ರಾಹ್ಮಣನಿಗೆ ಸಂಗಮದಲ್ಲಿ ಸ್ನಾನಮಾಡಿಸಿ, ಶ್ರೀಗುರುವು ಅವನ ರೋಗವನ್ನು ನಿವಾರಿಸಿ, ಅವನಿಗೆ ಜ್ಞಾನೋಪದೇಶಮಾಡಿದರು. ನಲವತ್ತಾರನೆಯ ಅಧ್ಯಾಯದಲ್ಲಿ ಶ್ರೀಗುರುವು ಹಿಪ್ಪರಿಗೆ ಗ್ರಾಮದಲ್ಲಿ ಕಲ್ಲೇಶ್ವರನ ಭಕ್ತನಾದ ನರಹರಿಗೆ ದರ್ಶನಕೊಟ್ಟು ಅವನನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡರು. ನಲವತ್ತೇಳನೆಯ ಅಧ್ಯಾಯದಲ್ಲಿ ಏಳು ಗ್ರಾಮಗಳಿಂದ ಬಂದ ಏಳು ಜನ ಶಿಷ್ಯರೊಬ್ಬೊಬ್ಬರೂ ಶ್ರೀಗುರುವನ್ನು ತಮ್ಮ ಊರಿಗೆ ಬರುವಂತೆ ಆಹ್ವಾನಿಸಲು ಶ್ರೀಗುರುವು ಏಳು ರೂಪಗಳನ್ನು ಧರಿಸಿ ಎಲ್ಲ ಗ್ರಾಮಗಳಿಗೂ ಹೋದರೂ ಎಂಟನೆಯ ರೂಪದಲ್ಲಿ ತಾವು ತಮ್ಮ ಮಠದಲ್ಲೇ ಇದ್ದರು. ನಲವತ್ತೆಂಟನೆಯ ಅಧ್ಯಾಯದಲ್ಲಿ ಶೂದ್ರ ಭಕ್ತನ ಹೊಲದಲ್ಲಿ ಪೈರನ್ನು ಕೊಯ್ಯಿಸಿ ಅವನ ಬೆಳೆ ಅಕ್ಷಯವಾಗುವಂತೆ ಮಾಡಿ ಅವನನ್ನು ಆನಂದಗೊಳಿಸಿದರು. ನಲವತ್ತೊಂಭತ್ತನೆಯ ಅಧ್ಯಾಯದಲ್ಲಿ ಭೀಮಾ ಅಮರಜಾ ಸಂಗಮ ಮಾಹಾತ್ಮ್ಯೆಯನ್ನು ಹೇಳಿ, ಅಷ್ಟತೀರ್ಥಮಹಿಮೆಯನ್ನು ಬೋಧಿಸಿ, ರತ್ನಾಬಾಯಿಯಿಂದ ಸ್ನಾನ ಮಾಡಿಸಿ ಆಕೆಗಿದ್ದ ಕುಷ್ಠರೋಗವನ್ನು ಹರಿಸಿದರು. ಐವತ್ತನೆಯ ಅಧ್ಯಾಯದಲ್ಲಿ ಶ್ರೀಗುರುವು ಮ್ಲೇಚ್ಛರಾಜನ ವ್ರಣವನ್ನು ತೊಲಗಿಸಿ ಅವನ ಭಕ್ತಿಯನ್ನು ಮೆಚ್ಚಿಕೊಂಡು ಅವನ ನಗರಕ್ಕೆ ಹೋಗಿ ನಿನಗೆ ನಂತರ ಶ್ರೀಶೈಲದಲ್ಲಿ ನನ್ನ ದರ್ಶನವಾಗುವುದು ಎಂದು ಹೇಳಿದರು. ಐವತ್ತೊಂದನೆಯ ಅಧ್ಯಾಯದಲ್ಲಿ ಈ ಭೂಮಿಯಲ್ಲಿನ ಪಾಪಪ್ರವೃತ್ತಿಯನ್ನು ನೋಡಿ ದುಷ್ಟರಿಂದ ಉಪದ್ರವವುಂಟಾಗುವುದೆಂದು ತಿಳಿದು, ತಾವು ಗುಪ್ತವಾಗಿರಲು ನಿಶ್ಚಯಿಸಿ, ಶಿಷ್ಯರನ್ನು ಕರೆದು ಶ್ರೀಶೈಲಯಾತ್ರೆಗೆ ಹೋಗುತ್ತೇನೆ ಎಂದು ಹೇಳಿದರು. ಅವರ ಮಾತುಗಳನ್ನುಕೇಳಿದ ಶಿಷ್ಯರು ಶೋಕಭರಿತರಾಗಿ ವಿಲಪಿಸಲು, ಅವರ ಅಳುವನ್ನು ಕೇಳಿದ ಶ್ರೀಗುರುವು, ತಾವು ಸದಾ ಮಠದಲ್ಲೇ ಇರುವೆವೆಂದು ಹೇಳಿ, ಅವರನ್ನು ಆಶೀರ್ವದಿಸಿ ಮಠದಲ್ಲಿಯೇ ಇದ್ದುಕೊಂಡು ತನ್ನ ಭಜನೆಯಲ್ಲಿ ನಿರತರಾಗಿರಬೇಕೆಂದು ಸಾಂತ್ವನ ಹೇಳಿದರು. ನಂತರ ಶ್ರೀಶೈಲದಲ್ಲಿ ಕದಳೀವನವನ್ನು ಸೇರಿ ಶಿಷ್ಯರಿಗೆ ಪುಷ್ಪಾಸನವನ್ನು ಸಿದ್ಧಪಡಿಸುವಂತೆ ಹೇಳಿ, ಅದರಮೇಲೆ ಕೂತು ಅದೃಶ್ಯರಾದರು. ತಮ್ಮ ನಾಲ್ಕುಜನ ಶಿಷ್ಯರಿಗೆ ಪ್ರಸಾದಪುಷ್ಪಗಳನ್ನು ಕೊಟ್ಟು ಅವರನ್ನು ಗಂಧರ್ವಪುರಕ್ಕೆ ಹಿಂದಿರುಗಲು ಆಜ್ಞೆ ಮಾಡಿದರು. ನಾಮಧಾರಕ ಈ ಪ್ರಕಾರ ಶ್ರೀಗುರುಚರಿತ್ರೆ ಅನಂತವಾದ ಕಥೆಗಳಿಂದ ತುಂಬಿ ಪರಮಪಾವನವಾಗಿದೆ. ಅದರಲ್ಲಿ ಐವತ್ತೆರಡು ಮಾತ್ರ ನಿನಗೆ ಹೇಳಿದ್ದೇನೆ." ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು.

"ಶ್ರೀಗುರುವು ಲೋಕವನ್ನು ಬಿಟ್ಟು ಹೋದರು ಎಂದು ಜನರು ಭಾವಿಸಿದ್ದಾರೆ. ಆದರೆ ಅವರು ಗಾಣಗಾಪುರದಲ್ಲಿ ಗುಪ್ತರೂಪದಲ್ಲಿ ಸದಾಕಾಲ ಇದ್ದಾರೆ. ಕಲಿಯುಗದಲ್ಲಿ ಅಧರ್ಮವು ಹೆಚ್ಚಾಗಿದ್ದರಿಂದ ಶ್ರೀಗುರುವು ಗುಪ್ತರಾಗಿ ನಿಜವಾದ ಭಕ್ತರಿಗೆ ಮಾತ್ರ ಹಿಂದಿನಂತೆಯೇ ಇಂದೂ ದರ್ಶನಕೊಡುತ್ತಿದ್ದಾರೆ. ಈ ಅವತರಣಿಕೆಯನ್ನು ಸಿದ್ಧಮಾಲ ಎನ್ನುತ್ತಾರೆ. ಇದನ್ನು ಓದುವವರಿಗೆ ಗುರುದರ್ಶನ ಲಭಿಸುವುದು. ಅವರವರ ಭಾವವನ್ನನುಸರಿಸಿ ಅವರ ಕಾರ್ಯಸಿದ್ಧಿಯಾಗುವುದು. ನಾಮಧಾರಕ ನೀನು ಉತ್ತಮಶಿಷ್ಯ. ನಿನ್ನ ಪ್ರಶ್ನೆಯಿಂದ ನಾನು ಈ ಅವತರಣಿಕೆಯನ್ನು ಹೇಳಿದ್ದೇನೆ. ಇದರಿಂದ ನಿನಗೆ ಹಿಂದೆ ಕೇಳಿದ ಶ್ರೀಗುರುಚರಿತ್ರೆಯೆಲ್ಲವೂ ನೆನಪಿಗೆ ಬರುವುದು. ಅದರಿಂದ ಶ್ರೀಗುರುಚರಿತ್ರೆಯನ್ನು ಸಂಪೂರ್ಣವಾಗಿ ಕೇಳಬೇಕೆಂಬ ವಾಂಛೆ ಬರುವುದು." ಎಂದು ಹೇಳಿದ ಸಿದ್ಧಮುನಿಯ ಮಾತುಗಳನ್ನು ಕೇಳಿದ ನಾಮಧರಕ ಅವರ ಚರಣಗಳನ್ನು ಸ್ಪರ್ಶಿಸಿ, ಕೈಜೋಡಿಸಿ, ವಿನಯದಿಂದ, " ಸ್ವಾಮಿ, ನಿಮ್ಮ ಮಾತುಗಳೇ ಸರ್ವಸಿದ್ಧಿಗಳನ್ನು ಕೊಡುವುದು. ಹೇ ಗುರುದೇವ, ನನ್ನದು ಇನ್ನೊಂದು ಮನವಿಯಿದೆ. ಶ್ರೀಗುರುಚರಿತ್ರೆಯನ್ನು ಹೇಗೆ ಸಪ್ತಾಹಪಾರಾಯಣ ಮಾಡಬೇಕು ಎಂಬುದನ್ನು ಹೇಳಬೇಕೆಂದು ಪ್ರಾರ್ಥಿಸುತ್ತೇನೆ." ಎಂದು ಕೇಳಿದನು. ಅದಕ್ಕೆ ಸಿದ್ದಮುನಿಯು, "ಅಯ್ಯಾ ನಾಮಧಾರಕ, ನೀನು ಕೇಳಿದ ಪ್ರಶ್ನೆ ಬಹಳ ಉತ್ತಮವಾಗಿದೆ. ಇದು ಲೋಕೋಪಕರವಾದದ್ದು. ಅಂತಃಕರಣವು ಶುದ್ಧಿಯಾಗಿದ್ದರೆ ನಿತ್ಯವೂ ಎಲ್ಲಕಾಲದಲ್ಲೂ ಶ್ರೀಗುರುಚರಿತ್ರೆಯನ್ನು ಪಠಿಸಬಹುದು. ಅದರಿಂದ ಇಹಪರ ಸುಖಗಳು ಲಭಿಸುವುವು.

ಎರಡನೆಯದು ಸಪ್ತಾಹ ಪದ್ಧತಿ. ಶುಚಿರ್ಭೂತನಾಗಿ ಶಾಸ್ತ್ರರೀತಿಯಾಗಿ ಶ್ರೀಗುರುಚರಿತ್ರೆಯನ್ನು ಸಪ್ತಾಹಪಾರಾಯಣ ಮಾಡಿದರೆ ಬಹಳ ಪುಣ್ಯ ಬರುತ್ತದೆ. ದಿನಶುದ್ಧಿಯನ್ನು ನೋಡಿಕೊಂಡು, ಸ್ನಾನಸಂಧ್ಯಾವಂದನಾದಿಗಳನ್ನು ಮಾಡಿ, ಪಾರಾಯಣ ಮಾಡಬೇಕೆದಿರುವ ಸ್ಥಳವನ್ನು ಶುದ್ಧಿಮಾಡಿ, ರಂಗೋಲಿ ಮುಂತಾದವುಗಳಿಂದ ಅಲಂಕರಿಸಬೇಕು. ನಂತರ ಸಂಕಲ್ಪ ಮಾಡಿ, ಪುಸ್ತಕರೂಪಿಯಾದ ಶ್ರೀಗುರುವಿಗೆ ಷೋಡಶೋಪಚಾರ ಪೂಜೆ ಮಾಡಿ, ಪಾರಾಯಣ ಮುಗಿಯುವವರೆಗೂ ಒಂದೇ ಸ್ಥಳದಲ್ಲಿ ಕೂತು, ಲೌಕಿಕವ್ಯವಹಾರಗಳ ಮಾತುಕಥೆಗಳನ್ನು ತ್ಯಜಿಸಿ, ಇಂದ್ರಿಯನಿಗ್ರಹ ಮಾಡಿಕೊಂಡು, ಕಾಮಕ್ರೋಧಾದಿಗಳನ್ನು ಬಿಟ್ಟು, ಪಾರಾಯಣವನ್ನು ಆರಂಭಿಸಬೇಕು. ಪಾರಾಯಣಮುಗಿಯುವವರೆಗೂ ದೀಪವೊಂದು ಸದಾ ಉರಿಯುತ್ತಿರುವಹಾಗೆ ನೋಡಿಕೊಳ್ಳಬೇಕು. ದೇವ,ಬ್ರಾಹ್ಮಣ, ವೃದ್ಧರಿಗೆ ನಮಸ್ಕರಿಸಿ, ಉತ್ತರ ಇಲ್ಲವೇ ಪೂರ್ವ ದಿಕ್ಕಿಗೆ ಮುಖಮಾಡಿಕೊಂಡು, ಸುಖಾಸನೋಪವಿಷ್ಟನಾಗಿ, ಮೊದಲನೆಯ ದಿನ ಒಂಭತ್ತು ಅಧ್ಯಾಯಗಳು, ಎರಡನೆಯದಿನ ಇಪ್ಪತ್ತೊಂದನೆಯ ಅಧ್ಯಾಯ ಪೂರ್ತಿ, ಮೂರನೆಯ ದಿನ ಇಪ್ಪತ್ತೊಂಭತ್ತನೆಯ ಅಧ್ಯಾಯ ಪೂರ್ತಿ, ನಾಲ್ಕನೆಯದಿನ ಮುವ್ವತ್ತೈದನೆಯ ಅಧ್ಯಾಯ ಪೂರ್ತಿ, ಐದನೆಯ ದಿನ ಮುವ್ವತ್ತೆಂಟನೆಯ ಅಧ್ಯಾಯ ಪೂರ್ತಿ, ಆರನೆಯದಿನ ನಲವತ್ತಮೂರನೆಯ ಅಧ್ಯಾಯ ಪೂರ್ತಿ, ಏಳನೆಯ ದಿನ ಐವತ್ತೆರಡನೆಯ ಅಧ್ಯಾಯ ಪೂರ್ತಿ ಪಾರಾಯಣ ಮಾಡಬೇಕು.

ಪ್ರತಿದಿನವೂ ಪಾರಾಯಣವಾದಮೇಲೆ ಉತ್ತರಪೂಜೆಮಾಡಿ, ಶ್ರೀಗುರುವಿಗೆ ನಮಸ್ಕರಿಸಿ, ಏನಾದರೂ ಸ್ವಲ್ಪ ಉಪಹಾರವನ್ನು ಸ್ವೀಕರಿಸಬೇಕು. ರಾತ್ರಿಯಲ್ಲಿ ನೆಲದಮೇಲೆ ಮಲಗುತ್ತಾ, ಏಳುದಿನಗಳ ಪಾರಾಯಣ ಮುಗಿಯುವವರೆಗೂ ಶುಚಿರ್ಭೂತನಾಗಿರಬೇಕು. ಏಳು ದಿನಗಳಾದ ಮೇಲೆ ಶ್ರೀಗುರುವಿನ ಪೂಜೆ ಮಾಡಿ ಬ್ರಾಹ್ಮಣ ಸುವಾಸಿನಿಯರಿಗೆ ದಕ್ಷಿಣೆ ತಾಂಬೂಲಗಳೊಡನೆ ಭೋಜನ ಮಾಡಿಸಿ ಸಂತೋಷಪಡಿಸಬೇಕು. ಹೀಗೆ ಸಪ್ತಾಹವನ್ನು ಆಚರಿಸಿದರೆ ಶ್ರೀಗುರು ದರ್ಶನ ಲಭಿಸುವುದು. ಭೂತಪ್ರೇತಪಿಶಾಚಾದಿಗಳ ಪೀಡೆಯು ನಿವಾರಣೆಯಾಗಿ ಸೌಖ್ಯವು ಲಭ್ಯವಾಗುವುದು." ಎಂದು ಸಿದ್ಧಮುನಿಯು ಹೇಳಿದರು.

ಇಲ್ಲಿಗೆ ಐವತ್ತೆರಡನೆಯ ಅಧ್ಯಾಯ ಮುಗಿಯಿತು. 

ಇದರೊಡನೆ ಶ್ರಿಗುರುಚರಿತ್ರೆಯೂ ಮುಕ್ತಾಯವಾಯಿತು. 

||ಶ್ರೀಗುರುಭ್ಯೋನ್ನಮಃ|| ||ಶ್ರೀ ದತ್ತಾತ್ರೇಯಾಯ ನಮಃ|| 
||ಶ್ರೀ ಗುರು ಶ್ರೀಪಾದಶ್ರೀವಲ್ಲಭಾಯ ನಮಃ|| 
||ಶ್ರೀಗುರು ನೃಸಿಂಹ ಸರಸ್ವತ್ಯೈ ನಮಃ|| 
||ಸಚ್ಚಿದಾನಂದ ಸದ್ಗುರು ಸಾಯಿಬಾಬಾಯ ನಮಃ||

4 comments:

  1. Hi, Can you please let me know the source of your gurucharitre? I would like to fill-in the missing chapters!! Thanks

    ReplyDelete
  2. sir please share the missing chapters

    ReplyDelete
  3. Hi sir,
    I am very thankful for this soft copy of Guru Charitre.
    Can you please upload the missing chapters (29 and 33)?

    ReplyDelete
  4. ನಮಸ್ತೆ, ಶ್ರೀ ಗುರುಭ್ಯೋ ನಮಃ, ತಮ್ಮ ಅಪೂರ್ವ ಕೆಲಸಕ್ಕೆ ತುಂಬು ಹೃದಯದ ಶ್ಲಾಘನೆಗಳು, ನಾನು ಶ್ರೀ ರಾಘವೇಂದ್ರ ಮೂಡಕಟ್ಟೆ ಯವರ ಶ್ರೀ ಗುರುಚರಿತ್ರೆ ಕನ್ನಡ ಪದ್ಯ ರೂಪವನ್ನು ಗಣಕೀಕರಿಸಿದ್ದೇನೆ, ನೀವು ದಯವಿಟ್ಟು ಈ ನಿಮ್ಮ ಬ್ಲಾಗ್ ನಲ್ಲಿ ಅದನ್ನು ಸಮಸ್ತ ಗುರುಭಕ್ತರ ಅನುಕೂಲಕ್ಕಾಗಿ ಸೇರಿಸಬೇಕೆಂದು ಬಯಸುತ್ತೇನೆ, ನಿಮ್ಮ ಮಿಂಚಂಚೆ ಅಥವಾ ಡ್ರೈವ್ ನನ್ನ shridatta.dixit@gmail .com ಗೆ ಹಂಚಿಕೊಳ್ಳಿ, ಧನ್ಯವಾದಗಳು.

    ReplyDelete