Sunday, September 29, 2013

||ಶ್ರೀಗುರು ಚರಿತ್ರೆ - ಐವತ್ತೊಂದನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ನಾಮಧಾರಕನು ಸಿದ್ಧಮುನಿಗೆ, "ಸ್ವಾಮಿ, ಶ್ರೀಗುರುವು ಗಂಧರ್ವ ನಗರವನ್ನು ಸೇರಿದಮೇಲೆ ಏನು ಮಾಡಿದರು? ಹೇ ಕರುಣಾವರ, ಆರ್ಯವರ್ಯ, ಮುಂದಿನ ಗುರುಚರಿತ್ರೆಯನ್ನು ಹೇಳಿ" ಎಂದು ಕೋರಿದನು. ಅದಕ್ಕೆ ಸಿದ್ಧಮುನಿ, "ವತ್ಸ, ಆ ಯೋಗೀಶ್ವರನ ಲೀಲೆಯನ್ನು ನಿನಗೆ ಹೇಳುತ್ತೇನೆ. ಆ ಲೀಲೆ ದೋಷಗಳನ್ನು ಹೋಗಲಾಡಿಸುವುದು. ಕೋರಿಕೆಗಳನ್ನು ತೀರಿಸುವುದು. ದಾದಿಯಂತೆ ಪೋಷಿಸುವುದು. ಆ ಲೀಲೆಯೇ ವರಗಳನ್ನು ಕೊಡುವುದು.

"ಬಹಳ ದೂರದವರೆಗೂ ಶ್ರೀಗುರುವಿನ ಮಹಿಮೆಗಳು ಪ್ರಕಟಗೊಂಡವು. ಆ ರಾಜನೂ ದೂರದಿಂದಲೇ ಬಂದಿದ್ದನಲ್ಲವೇ? ಯವನ ವಂಶಸ್ಥನಾದರೂ ಅವನು ಭಕ್ತಿವಂತನು. ಇತರ ನೀಚ ಜಾತಿಯವರು, ಭಕ್ತಿವಂತರು ಅಲ್ಲದವರೂ ಕೂಡಾ ಹಾಗೇ ಬರಬಹುದಲ್ಲವೇ? ಆದ್ದರಿಂದಲೇ ನಾನು ಶ್ರೀಶೈಲ ಯಾತ್ರೆಯ ನೆವದಿಂದ ಸಂಚರಿಸುತ್ತಾ ಅದೃಶ್ಯನಾಗಿರುತ್ತೇನೆ" ಎಂದು ಆ ಪ್ರಭುವು ನಿಶ್ಚಯಿಸಿ ಗಂಧರ್ವನಗರವನ್ನು ಬಿಟ್ಟು ಶ್ರೀಶೈಲಕ್ಕೆ ಶಿಷ್ಯರೊಡನೆ ಪ್ರಯಾಣವನ್ನು ಆರಂಭಿಸಿದರು. ಆಗ ಪ್ರಜೆಗಳೆಲ್ಲರೂ ಬಂದು, "ಶ್ರೀಗುರೋ, ನೀವೇ ನಮ್ಮ ಪ್ರಾಣವು. ನಿಮ್ಮ ತತ್ತ್ವವು ರಹಸ್ಯಯುಕ್ತವಾದದ್ದು. ನಮ್ಮ ಚಿಂತೆಗಳನ್ನು ಪರಿಹರಿಸಿದ್ದೀರಿ. ಈಗ ನಮ್ಮನ್ನು ಚಿಂತಾನಲದಲ್ಲಿ ಹಾಕಿ ಹೋಗುತ್ತಿದ್ದೀರಿ. ನಮ್ಮನ್ನು ರಕ್ಷಿಸಿ" ಎಂದು ಎಲ್ಲರೂ ಶೋಕದಿಂದ ಕೂಡಿದವರಾಗಿ ಶ್ರೀಗುರು ಪಾದಗಳಲ್ಲಿ ಆಸಕ್ತರಾಗಿ, ಮತ್ತೆ "ಸ್ವಾಮಿ, ಆರ್ತರನ್ನು ರಕ್ಷಿಸುವವರೇ! ನಮ್ಮನ್ನು ಅಕಸ್ಮಾತಾಗಿ ಬಿಟ್ಟು ಹೋಗುತ್ತಿದ್ದೀರಾ! ನೀವು ನಮ್ಮ ಸನ್ನಿಧಿಯಲ್ಲಿರುವ ನಿಧಿಯು. ನಮ್ಮ ಚಿತ್ತಗಳು ಸ್ಥಿರವಾಗಿರುವುದಕ್ಕೆ ನೀವೇ ಕಾರಣರು. ನಮ್ಮ ಕಾಮಧೇನುವು ನೀವೇ! ದಿನದಿನದ ನಿಮ್ಮ ದರ್ಶನವು ಕಲುಷಹರವು. ಹೇ ಪಾವನ, ತಾಯಿಯಂತೆ ನಮ್ಮನ್ನು ಕಾಪಾಡು. ನೀವು ಹಠಾತ್ತಾಗಿ ಎಲ್ಲಿಗೆ ಹೋಗುತ್ತಿದ್ದೀರಿ? ನೀವೇ ನಮ್ಮ ತಾಯಿ. ಗುರುವು. ತಂದೆ. ಹೇ ತಂದೆ, ನೀವು ಇಂತಹ ಸ್ನೇಹಹೀನರು ಏಕಾದಿರಿ?" ಎಂದು ಬಹು ಪ್ರಕಾರವಾಗಿ ಪ್ರಾರ್ಥಿಸುತ್ತಿರಲು, ಶ್ರೀಗುರುವು ದಯೆಯಿಂದ ಅವರನ್ನು ಸಮಾಧಾನಗೊಳಿಸಿ, ನಸುನಗುತ್ತಾ ಹೇಳಿದರು. "ಭಕ್ತರೇ, ಇಲ್ಲಿ ಸಂಗಮದಲ್ಲೇ ನನ್ನ ನಿತ್ಯಕೃತ್ಯಗಳು ನಡೆಯುತ್ತವೆ. ಮಧ್ಯಾಹ್ನದಲ್ಲಿ ಈ ನಿರ್ಗುಣ ಮಠದಲ್ಲೇ ಇರುತ್ತೇನೆ. ಅಯ್ಯಾ ಭಕ್ತರೇ, ನಿಮ್ಮ ಸಖ್ಯದಲ್ಲಿ ನಾನು ಇಲ್ಲಿಯೇ ಗುಪ್ತನಾಗಿ ಇರುತ್ತೇನೆ. ನಿಜವಾದ ಭಕ್ತರು, ನನ್ನ ಸೇವೆ ಮಾಡುವವರು, ನನ್ನನ್ನು ಹೃದಯದಲ್ಲಿ ನಿಲ್ಲಿಸಿಕೊಂಡಿರುವವರು, ಸಹೃದಯರಾಗಿ ಅವರ ಮನಸ್ಸನ್ನು ನನಗೆ ಅರ್ಪಿಸಿದವರು ನನ್ನನ್ನು ಇಲ್ಲಿಯೇ ಕಾಣುತ್ತಾರೆ. ಉಷಃಕಾಲದಲ್ಲಿ ಕಾಲುಷ್ಯವನ್ನು ಹೋಗುಟ್ಟುವಂತಹ ಕೃಷ್ಣೆಯಲ್ಲಿ ಸ್ನಾನ ಮಾಡಿ, ಕಲ್ಪತರುವಿನ ಸಮೀಪದಲ್ಲಿ ಕರ್ಮಗಳನ್ನಾಚರಿಸಿ, ಮಧ್ಯಾಹ್ನದಲ್ಲಿ ಭೀಮಾ ನದಿಯನ್ನು ನಾನು ಸೇರುವುದು ಅವರು ಗಮನಿಸಬಲ್ಲರು. ಪ್ರತಿ ದಿನವೂ ನಿರ್ಗುಣ ಮಠದಲ್ಲಿ ಮಧ್ಯಾಹ್ನದಲ್ಲಿ ಶಂಭುವಿನ ಅರ್ಚನೆಯನ್ನು ಸ್ವೀಕರಿಸುತ್ತೇನೆ. ನೀವು ಚಿಂತಿಸಬೇಡಿ. ಈ ಗಂಧರ್ವಪುರದಲ್ಲಿ ನನ್ನ, ಭಕ್ತರ ಯೋಗ ಕ್ಷೇಮಗಳನ್ನು ನಾನು ನೋಡಿಕೊಳ್ಳುತ್ತೇನೆ. ನನ್ನ ಭಕ್ತರಿಗೆ ಇಷ್ಟ ಸಿದ್ಧಿಯುಂಟಾಗುವಂತೆ ನೋಡಿಕೊಳ್ಳುತ್ತೇನೆ. ನನ್ನ ಭಕ್ತರು ನನಗೆ ಪ್ರಿಯರು. ಅವರ ಪರಿಶುದ್ಧತೆಯೇ ಅವರ ಕಾರ್ಯಗಳು ನೆರವೇರಲು ಹೇತುವಾಗುತ್ತದೆ. ಭಕ್ತಲೋಕವು ಇದು ಸತ್ಯವೆಂದು ತಿಳಿದುಕೊಳ್ಳಿ. ಅಶ್ವತ್ಥವೃಕ್ಷವೇ ಕಲ್ಪವೃಕ್ಷವು. ಭಕ್ತಿಯನ್ನು ಮಾತ್ರ ಅಪೇಕ್ಷಿಸುತ್ತದೆ. ಸಕಲ ಬಾಧೆಗಳನ್ನೂ ತೊಲಗಿಸುತ್ತಾ ಭಕ್ತರಲ್ಲಿ ಪ್ರಸನ್ನವಾಗಿ, ಶತ್ರು ಪಕ್ಷವನ್ನು ಜಯಿಸುತ್ತಾ (ಇರುವ) ಈ ಅಶ್ವತ್ಥವೃಕ್ಷವೇ ಪ್ರತ್ಯಕ್ಷವಾಗಿರುವ ಕಲ್ಪವೃಕ್ಷವು. ಇಲ್ಲಿ ಸಂಗಮ ಜಲದಲ್ಲಿ ನಿಯಮವಾಗಿ ಸ್ನಾನಮಾಡಿ, ನನ್ನ ನಿವಾಸವಾದ ಅಶ್ವತ್ಥವೃಕ್ಷವನ್ನು ಯಥಾವಿಧಿಯಾಗಿ ಅರ್ಚಿಸಿ, ಸರ್ವ ಅನರ್ಥಗಳನ್ನೂ ಹರಿಸುವ ನನ್ನ ಪಾದುಕೆಗಳನ್ನು ಅರ್ಚಿಸುವವರಿಗೆ ಎಂದಿಗೂ ಭ್ರಮೆಯುಂಟಾಗುವುದಿಲ್ಲ. ಇಲ್ಲಿ ವಿಘ್ನನಾಥನ ಚಿಂತಾಮಣಿಯನ್ನು ಅರ್ಚಿಸುವವನು ಕ್ಷಣದಲ್ಲಿ ಚಿಂತಿತಾರ್ಥವನ್ನು ಪಡೆಯಬಲ್ಲನು. ವಿನಾಯಕನನ್ನು ಅರ್ಚಿಸಿ ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡುವವನ ದುಃಖಗಳು ನಶಿಸಿಹೋಗಿ ಅವನು ಆಪ್ತ ಕಾಮನಾಗಿ ಮುಕ್ತಿಯನ್ನು ಹೊಂದಬಲ್ಲನು. ಆರತಿ ದೀಪಗಳಿಂದ ಇಲ್ಲಿ ನನ್ನ ಪಾದುಕೆಗಳನ್ನು ತ್ರಿಕಾಲದಲ್ಲೂ ಅರ್ಚಿಸುತ್ತಾ ನನ್ನನ್ನು ಸ್ಮರಿಸುತ್ತಿರುವವರ ಸರ್ವಕಾಮಗಳನ್ನೂ ಕೊಡುತ್ತೇನೆ. ಅವರ ಕಾಮನೆಗಳು ಅಸ್ತಮಿಸುವುವು" ಎಂದು ಹೇಳಿ ಶ್ರೀಗುರುಗಳಾದ ನೃಸಿಂಹ ಸರಸ್ವತಿ ಯತೀಂದ್ರರು ಉಪದೇಶಿಸಿ ಶ್ರೀಶೈಲಕ್ಕೆ ಹೊರಟು ಹೋದರು. ಭಕ್ತರು ಮಠವನ್ನು ಸೇರಿದರು. ಅವರು ತಮ್ಮ ಹೃದಯಗಳಲ್ಲಿ ಶ್ರೀಗುರುವನ್ನು ನಿಲ್ಲಿಸಿ ಗುರುಹೃದಯದಲ್ಲಿ ನಿಂತರು. ಅವರು ಗುರುನಾಥನ ನಿವಾಸವನ್ನು ಸೇರಿದಾಗ ಅಲ್ಲಿಯೇ ಶ್ರೀಗುರುವು ಇರುವುದನ್ನು ನೋಡಿ ವಿಸ್ಮಯಗೊಂಡರು. ‘ಶ್ರೀಗುರುವನ್ನು ಮಾನವನೆಂದು ಹೇಳುವವನು ಭಕ್ತಿಹೀನನು. ಅಂತಹವನು ಯಮಪುರಕ್ಕೇ ಹೋಗುತ್ತಾನೆ. ಉಪಾಸನೆಯಿಂದ ತರಿಸಬಲ್ಲ ವಿಭುವು ಸತ್ಯವಾಗಿ ಅವತಾರಪುರುಷನೇ! ಶ್ರೀಗುರುವಿನ ಮಾಹಾತ್ಮ್ಯೆಯು ಅನಂತವು’ ಎಂದೆಲ್ಲ ಹೇಳಿಕೊಳ್ಳುತ್ತಿದ್ದ ಅವರು ಅಲ್ಲಿ ಮತ್ತೆ ಶ್ರೀಗುರುವನ್ನು ಕಾಣಲಾರದೆ ಹೋದರು. ಆ ಸದ್ಯಶನಾದ ಶ್ರೀಗುರುವು ಸತ್ಪುರುಷರಿಗೇ ದರ್ಶನ ನೀಡುತ್ತಾನೆ. ಆದ್ದರಿಂದ ಇಲ್ಲಿ ಶ್ರೀಗುರುವು ಇಲ್ಲ ಎಂದು ಹೇಳಬಾರದು.

ಶ್ರೀಗುರುವು ಶೀಘ್ರವಾಗಿ ಶ್ರೀಶೈಲ ಪರ್ವತಕ್ಕೆ ಹೋಗಿ ಪಾತಾಳ ಗಂಗೆಯಲ್ಲಿ ಸ್ನಾನವನ್ನಾಚರಿಸಿ ಶಿಷ್ಯರನ್ನು ಕರೆದು ಅವರಿಗೆ ಆದೇಶವಿತ್ತರು. "ನನ್ನ ಕಾರ್ಯವು ಸಂಪೂರ್ಣವಾಯಿತು. ಪುಷ್ಪಾಸನವನ್ನು ಸಿದ್ಧಪಡಿಸಿ. ಇಲ್ಲಿಂದ ವಿಭುಕಳೆ ಇರುವೆಡೆಗೆ ಹೋಗಬೇಕು. ದುಷ್ಟರು ನನ್ನನ್ನು ನೋಡಬಾರದು" ಎಂದು ಹೇಳಿದ ಶ್ರೀಗುರುವಿನ ಆದೇಶವನ್ನು ಪಾಲಿಸಿ ಶಿಷ್ಯರು ತಾವರೆ ಹೂಗಳು ಮುಂತಾದುವನ್ನು ತಂದು ಬಾಳೆಯ ಎಲೆಯ ಮೇಲೆ ಹರಡಿ ಸುಖಾಸನವಾಗುವಂತೆ ಅಲಂಕರಿಸಿದರು. ಪರಮ ಪವಿತ್ರವಾದ ಪೀಠವನ್ನು ನಿರ್ಮಿಸಿ ಗಂಗಾ ಪ್ರವಾಹದಲ್ಲಿ ವಿಚಿತ್ರವಾಗಿ ನಿಲ್ಲಿಸಿದರು. ಶ್ರೀಗುರುವು ತನ್ನ ಭಕ್ತರಿಗೆ, "ನೀವು ತ್ವರೆಯಾಗಿ ನನ್ನ ಗಂಧರ್ವನಗರಕ್ಕೆ ಹೋಗಿ. ನನ್ನ ಗೃಹವು ಅಲ್ಲೇ ಇದೆ. ಸದ್ಭಕ್ತರಿಗೆ ಮಾತ್ರವೇ ನನ್ನ ದರ್ಶನ ಆಗುವಹಾಗೆ ನಾನು ಉಪಾಯವನ್ನು ಅವಲಂಬಿಸಿದ್ದೇನೆ. ನನ್ನ ಭಕ್ತರ ಗೃಹದಲ್ಲೇ ಸದಾ ಬಿಡದೇ ಇರುತ್ತೇನೆ" ಎಂದು ಆ ಭಗವಂತನು ಹೇಳಿ ಸಂತೋಷದಿಂದ ಪುಷ್ಪಾಸನದ ಮೇಲೆ ಉಪವಿಷ್ಠರಾದರು. ಉತ್ತರಾಯಣ ಶಿಶಿರ ಋತು ಮಾಘಮಾಸ ಕೃಷ್ಣಪಕ್ಷದಲ್ಲಿ ರಾಕ್ಷಸ ಗುರುದೇವತೆ ಶುಕ್ರನ ವಾರದಲ್ಲಿ ಪಾಡ್ಯಮಿಯ ದಿನ ಪುಷ್ಯಮೀ ನಕ್ಷತ್ರದಲ್ಲಿ ಚಂದ್ರನಿರಲು ದೇವಗುರುವಾದ ಬೃಹಸ್ಪತಿ ಕನ್ಯೆಯಲ್ಲಿರಲು ಸೂರ್ಯನು ಕುಂಭದಲ್ಲಿರಲು ಪುಣ್ಯತಮವಾದ ದಿನ ಬಹುಧಾನ್ಯ ಸಂವತ್ಸರ ದೇವತೆಗಳು ಪುಷ್ಪ ವೃಷ್ಟಿ ಮಾಡುತ್ತಿರಲು ಶ್ರೀಗುರುವು ಪುಷ್ಪಾಸನದ ಮೇಲೆ ಮಂಡಿತರಾದರು. ಶ್ರೀಗುರುವು ನದಿ ಪ್ರವಾಹದ ಮಧ್ಯದಿಂದ, "ನಾನು ಪುಷ್ಪಾಸನಸ್ಥನಾಗಿ ನಿಜಸ್ಥಾನಕ್ಕೆ ಹೋಗುತ್ತಿದ್ದೇನೆ. ನೀವು ನನಗೆ ಪ್ರಿಯರು. ನಿಮಗೆ ವಾಯು ಮುಖೇನ ಪ್ರಸಾದ ಪುಷ್ಪಗಳನ್ನು ಕಳುಹಿಸುತ್ತೇನೆ. ನಾನು ಕಳುಹಿಸುವ ನಾಲ್ಕು ಪ್ರಸಾದ ಪುಷ್ಪಗಳನ್ನು ನೀವೇ ಗ್ರಹಿಸಬೇಕು. ಅವನ್ನು ಭಕ್ತಿಯಿಂದ ಸ್ವೀಕರಿಸಿ ನನ್ನ ಪಾದುಕೆಗಳನ್ನು ಅರ್ಚಿಸಿದರೆ ಅಭೀಷ್ಟಸಿದ್ಧಿಯಾಗುವುದು. ಗೀತಗಳೆಂದರೆ ನನಗೆ ಬಹಳ ಪ್ರೀತಿ. ಆದ್ದರಿಂದ ಪ್ರತಿದಿನವೂ ನನ್ನನ್ನುದ್ದೇಶಿಸಿ ಗೀತಗಳನ್ನು ಗಾನಮಾಡಿ. ಭಕ್ತಿಯಿಂದ ನನ್ನ ಅವತಾರ ಕಥೆಗಳನ್ನು ಗಾನ ಮಾಡುವವರ ಗೃಹದಲ್ಲಿ ನಾನು ನಿತ್ಯವೂ ನಿವಾಸಮಾಡುತ್ತೇನೆ. ಅವರ ಮನೆಗಳಲ್ಲಿ ದೈವಭೀತಿಯಿರುವುದಿಲ್ಲ. ಅಖಂಡವಾದ ಸಿರಿಸಂಪದಗಳು ಅವರಿಗೆ ಉಂಟಾಗುತ್ತವೆ. ಅಂತಹವರು ಮೋಹದಲ್ಲಿ ಬೀಳುವುದಿಲ್ಲ. ನನ್ನಲ್ಲಿ ಭಕ್ತಿ ಇರುವವರಿಗೆ ನನ್ನ ಅನುಗ್ರಹ ದೊರಕುವುದು. ನನ್ನ ಭಕ್ತನಿಗೆ ವ್ಯಾಧಿಗಳು, ಪಾಪಗಳು, ದೈನ್ಯವು, ಕ್ಷೀಣದೆಶೆ ಬರಲಾರದು. ಅಂಥ ನನ್ನ ಭಕ್ತರು ಶ್ರೀಮಂತರಾಗಿ, ಪುತ್ರಪೌತ್ರರಿಂದ ಕೂಡಿ, ಶತಾಯುಷಿಗಳಾಗಿ ಜೀವಿಸಿ, ಕೊನೆಯಲ್ಲಿ ಮುಕ್ತಿ ಹೊಂದಬಲ್ಲರು. ನನ್ನ ಈ ವಿಚಿತ್ರವಾದ ಚರಿತ್ರೆಯನ್ನು ಓದುವವರು, ಸಾವಧಾನವಾಗಿ ಕೇಳುವವರು, ನನಗೆ ಹಿತರು. ಅವರ ವಂಶಸ್ಥರಲ್ಲಿ ಕೂಡ ಲಕ್ಷ್ಮಿ ನಿಶ್ಚಲವಾಗಿ ಇರುತ್ತಾಳೆ. ಈ ನನ್ನ ವಚನಗಳು ನಿಸ್ಸಂಶಯವಾಗಿ ಸತ್ಯವಾದವು" ಎಂದು ಶ್ರೀಗುರುವು ಭಕ್ತರಿಗೆ ಉಪದೇಶಿಸಿ ಗುಪ್ತ ರೂಪರಾಗಿ ಅಂತರ್ಧಾನವಾದರು. ಅಲ್ಲಿದ್ದ ಭಕ್ತರು ಆ ದೃಶ್ಯವನ್ನು ಕಂಡು ವಿಸ್ಮಿತರಾದರು. ನದಿದಡದಲ್ಲಿ ನಿಂತಿದ್ದ ಅಂಬಿಗರು ಚಿಂತಾಯುಕ್ತರಾಗಿ ದೋಣಿಗಳಲ್ಲಿ ಹೊರಟರು. ಅವರು ಮತ್ತೆ ಹಿಂತಿರುಗಿ ಭಕ್ತರಿಗೆ, "ದೇವದೇವನಾದ ಶ್ರೀಗುರುವು ನದಿ ಮಧ್ಯದಲ್ಲಿ ಸಾಕ್ಷಾತ್ತಾಗಿ ದರ್ಶನ ಕೊಟ್ಟರು. ಅಯ್ಯಾ ಶಿಷ್ಯರೇ, ಈಗ ವಿಚಿತ್ರವಾಗಿ ಪರಮ ಪವಿತ್ರವಾದ ಯತಿಸ್ವರೂಪವನ್ನು ನದಿಮಧ್ಯದಲ್ಲಿ ಸುಮನಸ್ಸಮೂಹವಾಗಿದ್ದುದನ್ನು ನಾವು ನೋಡಿದೆವು. ಎರಡು ಕೈಗಳಲ್ಲಿ ದಂಡ ಕಮಂಡಲಗಳನ್ನು ಹಿಡಿದು ಯತಿರೂಪಿಯಾಗಿ ‘ನಮ್ಮ ಶಿಷ್ಯರು ಅಲ್ಲಿ ಇದ್ದಾರೆ. ಅವರಿಗೆ ತಿಳಿಸಿ ಎಂದು ಹೇಳಿದರು" ಎಂದು ತಿಳಿಸಿದರು.

ಆ ಶ್ರೀ ನೃಸಿಂಹ ಸರಸ್ವತಿ ಯತೀಂದ್ರರು, "ಕದಳೀವನಕ್ಕೆ ಹೋಗುತ್ತಿದ್ದೇನೆ. ನೀವು ಗಂಧರ್ವನಗರಕ್ಕೆ ಹೊರಡಿ" ಎಂದು ಆಣತಿ ಕೊಟ್ಟರು. ಅವರ ಪಾದುಕೆಗಳು ಸ್ವರ್ಣಮಯವಾಗಿ ಪ್ರಕಾಶಿಸುತ್ತಿದ್ದವು. ಶ್ರೀಗುರುವು ಹೇಳಿದ ಮಾತುಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಅದ್ದರಿಂದ ನೀವಿನ್ನು ಸುಖವಾಗಿ ನಿಮ್ಮ ಗೃಹಗಳಿಗೆ ಹೊರಡಿ. ಭುಕ್ತಿ ಮುಕ್ತಿಪ್ರದವಾದ ಭಕ್ತಿಯನ್ನವಲಂಬಿಸಿ ಶಿಷ್ಟ ಕಾರ್ಯಗಳನ್ನು ಮಾಡುತ್ತಾ ನಿಮ್ಮ ಮನೆಗಳಲ್ಲಿ ನೆಲೆಸಿ. ಶ್ರೀಗುರುವು ಕಳುಹಿಸಿದ ಪ್ರಸಾದ ಪುಷ್ಪಗಳು ನಿಮಗಾಗಿ ಇಲ್ಲಿಗೇ ಬರುತ್ತವೆ. ಅವನ್ನು ತೆಗೆದುಕೊಳ್ಳಿ" ಎಂದು ಶ್ರೀಗುರುವು ಹೇಳಿದ ಸಂದೇಶವನ್ನು ಆ ಶಿಷ್ಯರಿಗೆ ಬಿನ್ನವಿಸಿ ಆ ಅಂಬಿಗರು ಅಲ್ಲಿಂದ ಹೊರಟರು. ಶಿಷ್ಯರು ಅಂಬಿಗರು ಹೇಳಿದ ಶ್ರೀಗುರುವಿನ ಮಾತುಗಳನ್ನು ಕೇಳಿ, ಅವನ್ನು ಮತ್ತೆ ಮತ್ತೆ ನೆನಸಿಕೊಳ್ಳುತ್ತಾ ಪ್ರಸಾದ ಪುಷ್ಪಗಳಿಗಾಗಿ ಕಾಯುತ್ತಾ ಅಲ್ಲಿಯೇ ನಿಂತಿದ್ದರು. ನಾಲ್ಕು ಪ್ರಸಾದಪುಷ್ಪಗಳು ಬಂದವು. ಶ್ರೀಗುರುವು ಅವುಗಳನ್ನು ಕಳುಹಿಸಿದ್ದರು. ಮುಖ್ಯಶಿಷ್ಯರು ಅವುಗಳನ್ನು ಗ್ರಹಿಸಿದರು". ಆಗ ನಾಮಧಾರಕನು ಸಿದ್ಧಮುನಿಯನ್ನು, "ಸ್ವಾಮಿ, ಶ್ರೀಗುರುವಿನ ಮುಖ್ಯಶಿಷ್ಯರು ಎಷ್ಟು ಜನ? ಅವರಲ್ಲಿ ಯಾರು ಪ್ರಸಾದ ಪುಷ್ಪಗಳನ್ನು ತೆಗೆದುಕೊಂಡರು?" ಎಂದು ಕೇಳಲು, ಸಿದ್ಧಮುನಿ, "ವತ್ಸ, ಹಿತಕಾರಿಯಾದ ಶ್ರೀಗುರುವಿಗೆ ಅನೇಕ ಶಿಷ್ಯರಿದ್ದರು. ಅವರಲ್ಲಿ ಕೆಲವರು ಗಂಧರ್ವಪುರಿಯಲ್ಲಿದ್ದಾರೆ. ಕೆಲವರು ಸನ್ಯಾಸವನ್ನು ಸ್ವೀಕರಿಸಿದರು. ಮತ್ತೆ ಕೆಲವರು ಗೃಹಸ್ಥರು. ಶ್ರೀಗುರುವು ಸನ್ಯಾಸಿಗಳಾದ ಶಿಷ್ಯರನ್ನು ಯಾತ್ರೆಗಳಿಗೆ ಕಳುಹಿಸಿದ್ದರು. ಅವರು ಯಾತ್ರೆಗಳಿಗೆ ಹೊರಟು ಹೋಗಿದ್ದರು. ಅವರಲ್ಲಿ ಪ್ರಾಧಾನ್ಯ ಕ್ರಮವನ್ನು ಅನುಸರಿಸಿ ಹೇಳುವೆನು ಕೇಳು. ಮೊದಲು ಬಾಲಸರಸ್ವತಿ. ನಂತರ ಕೃಷ್ಣಸರಸ್ವತಿ. ಆ ಮೇಲೆ ಉಪೇಂದ್ರ ಸರಸ್ವತಿ. ಆ ನಂತರ ಮಾಧವ ಸರಸ್ವತಿ. ಗುರುವಿನ ಆಜ್ಞೆಯಿಂದ ಕೆಲವರು ಗೃಹಸ್ಥರಾಗಿದ್ದಾರೆ. ಶ್ರೀಶೈಲಯಾತ್ರೆಯ ಸಮಯದಲ್ಲಿ ಶ್ರೀಗುರುವು ನಾಲ್ವರು ಶಿಷ್ಯರೊಡನೆ ಇದ್ದರು. ಅವರಲ್ಲಿ ಸಾಯಂದೇವನು ಒಬ್ಬನು. ಮತ್ತೊಬ್ಬ ಕವಿ ಎನ್ನುವವನು. ಇನ್ನೊಬ್ಬ ನಂದಿಶರ್ಮ. ಹಾಗೆಯೇ ಎರಡನೆಯ ಕವಿ ಎನ್ನಿಸಿಕೊಂಡ ಸಿದ್ಧನೆನ್ನುವ ನಾನು. ನಾವು ನಾಲ್ವರೂ ಆ ಪುಷ್ಪಗಳನ್ನು ತೆಗೆದುಕೊಂಡೆವು. ಇಗೋ, ದೇವಸಮರ್ಪಿತವಾದ, ಪೂಜಿತವಾದ ಆ ಪ್ರಸಾದ ಪುಷ್ಪವು ಇದೇ, ನೋಡು. ಶ್ರೀಗುರುವಿನ ಮಹಿಮೆಗೆ ಇಷ್ಟು ಎಂಬ ಪರಿಮಾಣವಿಲ್ಲ. ನಾನು ನಿನಗೆ ಸಂಗ್ರಹವಾಗಿ ಶ್ರೀಗುರುವಿನ ಮಹಿಮೆಯನ್ನು ತಿಳಿಸಿದ್ದೇನೆ. ಕಾಮದವಾದ, ಈ ಶ್ರೀಗುರುಚರಿತ್ರೆ, ನಾನು ಹೇಳಿದ್ದು, ದಾರಿದ್ರ್ಯ, ಪಾಪಗಳೆನ್ನುವ ಕಾಳ್ಗಿಚ್ಚನ್ನು ಆರಿಸಿ ಕಲ್ಪದ್ರುಮದಂತೆ ಶಾಂತಿಯನ್ನು ಉಂಟುಮಾಡುತ್ತದೆ. ಶ್ರೀಗುರುಚರಿತ್ರೆಯನ್ನು ಬರೆಯುವವರು, ಓದುವವರು, ಕೇಳುವವರು ಇಹಲೋಕ ಪರಲೋಕಗಳಲ್ಲಿ ಸಂತುಷ್ಟರಾಗಿರುತ್ತಾರೆ. ಅಂತಹವರ ಉಭಯ ಕುಲಗಳೂ ಪುತ್ರ ಪೌತ್ರಾಭಿವೃದ್ಧಿಯಾಗಿ ಆನಂದದಿಂದಿರುತ್ತಾರೆ. ಅಂಥವರು ಧರ್ಮಾರ್ಥಕಾಮಗಳನ್ನು ಪಡೆಯುತ್ತಾರೆ. ಶ್ರೀಗುರುವಿನ ಸೇವಕನು ಸುಗತಿಯನ್ನು ಹೊಂದುತ್ತಾನೆ" ಎಂದು ಸಿದ್ಧಮುನಿಯು ನಾಮಧಾರಕನಿಗೆ ಉಪದೇಶಿಸಿದರು. ಶ್ರೀಗುರುವಿನ ಚರಿತ್ರೆಯನ್ನು ಕೇಳಿದ ನಾಮಧಾರಕನು ಸಂಪೂರ್ಣ ಮನೋರಥನಾದನು. ಸಿದ್ಧಮುನಿಯ ಮಾತುಗಳನ್ನು ಕೇಳಿದ ನಾಮಧಾರಕನು ಸಂತೋಷಗೊಂಡವನಾಗಿ, ಶತಾಯುವಾಗಿ, ಕವಿಯಾಗಿ, ಪುತ್ರಪ್ರಾಪ್ತಿ ಸಂಪತ್ಪ್ರಾಪ್ತಿ ಹೊಂದಿ ಶ್ರೀಗುರುವಿನಲ್ಲಿ ಭಕ್ತಿಯುಕ್ತನಾದನು.

ಇದು ಸಂಪೂರ್ಣವಾದ ಶ್ರೀಗುರುಚರಿತ್ರೆಯು. ಕಾಮಧೇನುವಿನಂತೆ ಕಾಮಿತಗಳನ್ನು ಕೊಡುವುದು. ಈ ಚರಿತ್ರೆಯು ಪ್ರತಿದಿನವೂ ಕೇಳುವಂತಹುದು. ಸಂಸಾರವೆನ್ನುವ ಕಾನನದಲ್ಲಿ ಸಿಕ್ಕಿಕೊಂಡವರಿಗೆ ಈ ಶ್ರೀಗುರುಚರಿತ್ರೆಯು ಅಮೃತಪಾನದಂತೆ ಸದಾ ಆಸ್ವಾದನ ಮಾಡುವಂತಹುದು. ಈ ಚರಿತ್ರೆಯು ಧರ್ಮರ್ಥಕಾಮಗಳನ್ನು, ವೇದಮಾರ್ಗವನ್ನು, ಮತಿ, ಸ್ಮೃತಿ, ಸದ್ಗತಿಯನ್ನು ಉಂಟುಮಾಡುವುದು. ನಿತ್ಯವೂ ಈ ಅಖಂಡವಾದ ಚರಿತ್ರೆಯನ್ನು ಕೇಳುವವರ ಗೃಹದಲ್ಲಿ ಲಕ್ಷ್ಮಿ ಅಖಂಡವಾಗಿ ನೆಲೆಸಿರುತ್ತಾಳೆ.

"ಶ್ರೀಗುರುಚರಿತ್ರೆಯು ಶ್ರವಣಮಾತ್ರದಿಂದಲೇ ಪುರುಷಾರ್ಥಗಳನ್ನು ಕೊಡುವುದು. ಯತಿನಾಥನಾದ ಶ್ರೀ ನೃಸಿಂಹ ಸರಸ್ವತಿ, ಶ್ರೀಗುರುಚರಿತ್ರೆಯನ್ನು ಕೇಳಿದವರನ್ನು ಸದಾ ರಕ್ಷಿಸುತ್ತಾರೆ" ಎಂದು ಶ್ರೀ ವಾಸುದೇವ ಸರಸ್ವತಿ ಹೇಳಿದರು. ಆದ್ದರಿಂದಲೇ ಶ್ರೀ ವಾಸುದೇವ ಸರಸ್ವತಿಯ ಈ ಶ್ರೀಗುರುಚರಿತ್ರೆ ಶೀಘ್ರದಲ್ಲಿಯೇ ಅಖಿಲಾರ್ಥಗಳನ್ನೂ ಕೊಡುವುದು. ಇದನ್ನು ಕೇಳಿ ಎಂದು ಶ್ರೋತೃಗಳನ್ನು ಪ್ರಾರ್ಥಿಸುತ್ತಿದ್ದಾರೆ.

ಪ್ರವೃತ್ತಿ ನಿವೃತ್ತಿಗಳನ್ನು ಕೂಡಾ ಸಿದ್ಧಿಸಿಕೊಡಬಲ್ಲದು ಈ ಚರಿತ್ರೆ. ಜನರು ಸರ್ವಕಾಮಗಳನ್ನೂ ಫಲಿಸಿಕೊಡುವಂತಹ ಈ ಶ್ರೀಗುರುಚರಿತ್ರೆಯನ್ನು ಅನರ್ಥಗಳು ನಾಶವಾಗಲು ನಿತ್ಯವೂ ಓದುವವರಾಗಲಿ. ಇದರ ಸವಿಯನ್ನು ಅನೇಕಸಲ ಸವಿಯುವವರಾಗಲಿ. 

ಇಲ್ಲಿಗೆ ಐವತ್ತೊಂದನೆಯ ಅಧ್ಯಾಯ ಮುಗಿಯಿತು.

No comments:

Post a Comment