||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ||
||ಶ್ರೀಗುರುಭ್ಯೋನಮಃ||
"ನಾಮಧಾರಕ, ಒಣಗಿದ ಕಟ್ಟಿಗೆ ಗಿಡವಾಗಿ ಬದಲಾದ ಕಥೆಯನ್ನು ಕೇಳು. ಗಂಧರ್ವ ನಗರದಲ್ಲಿ ಶ್ರೀಗುರುವು ನೆಲೆಸಿದ್ದ ಸಮಯದಲ್ಲಿ ಕುಷ್ಠು ರೋಗ ಪೀಡಿತನಾದ ಬ್ರಾಹ್ಮಣನೊಬ್ಬನು ಶ್ರೀಗುರುವಿನ ಬಳಿಗೆ ಬಂದನು. ಅವನು ಯಜುರ್ವೇದಿ. ಹೆಸರು ನರಹರಿ. ಗಾರ್ಗ್ಯ ಗೋತ್ರ. ಅವನು ಭಕ್ತಿ ಭಾವದಿಂದ ಬಂದು ಶ್ರೀಗುರುವಿಗೆ ನಮಸ್ಕಾರ ಮಾಡಿ, ಶ್ರೀಗುರುವನ್ನು ಸ್ತುತಿಸುತ್ತಾ, "ಹೇ ಗುರುಮೂರ್ತಿ, ಜಯವಾಗಲಿ. ಜಯವಾಗಲಿ. ನಿಮ್ಮ ಉತ್ತಮ ಖ್ಯಾತಿಯನ್ನು ಕೇಳಿದೆ. ನೀವು ಪರಮ ಪುರುಷನು. ನೀವೇ ಪರಂಜ್ಯೋತಿಯು. ಭಕ್ತವತ್ಸಲರು. ಹೇ ಶ್ರೀಗುರು, ಸ್ವಾಮಿ, ಇವನು ಕುಷ್ಠು ರೋಗಿ ಎಂದು ಎಲ್ಲರೂ ನನ್ನನ್ನು ನಿಂದಿಸುತ್ತಿದ್ದಾರೆ. ನಾನು ಆಪಸ್ಥಂಭ ಶಾಖೆಯನ್ನು ಅಧ್ಯಯನ ಮಾಡಿದ್ದೇನೆ. ಅವಯವ ಹೀನನು ಇವನು ಎಂದು ನನ್ನನ್ನು ಬ್ರಾಹ್ಮಣರು ಯಾರೂ ಊಟಕ್ಕೆ ಆಹ್ವಾನಿಸುವುದಿಲ್ಲ. ಬೆಳಗ್ಗೆ ಏಳುತ್ತಲೇ ಕುಷ್ಠನಾದ ನನ್ನ ಮುಖವನ್ನು ಯಾರೂ ನೋಡುವುದಿಲ್ಲ. ಇನ್ನು ನಾನು ಜೀವಿಸಿ ಪ್ರಯೋಜನವೇನು? ಹಿಂದಿನ ಜನ್ಮದಲ್ಲಿ ಲೆಕ್ಕವಿಲ್ಲದಷ್ಟು ಪಾಪಗಳನ್ನು ನಾನು ಮಾಡಿದ್ದಿರಬೇಕು. ಅದರ ಪರಿಣಾಮ ಹೀಗಾಗಿದೆ. ಇದನ್ನು ಸಹಿಸಲಾರೆ. ಅನೇಕ ವ್ರತಗಳನ್ನು ಮಾಡಿದೆ. ತೀರ್ಥಗಳಲ್ಲಿ ಸೇವೆ ಮಾಡಿದೆ. ದೇವತೆಗಳ ಪೂಜೆಗಳನ್ನು ಮಾಡಿದೆ. ಆದರೂ ನನ್ನ ಈ ರೋಗವು ಹೋಗಲಿಲ್ಲ. ನೀವು ದಯೆ ತೋರಿಸದಿದ್ದರೆ ನಿಮ್ಮ ಎದುರಿಗೇ ಪ್ರಾಣ ತ್ಯಾಗ ಮಾಡಬೇಕೆಂದು ನಿಶ್ಚಯ ಮಾಡಿಕೊಂಡು ಬಂದಿದ್ದೇನೆ" ಎಂದು ಹೇಳಿ, "ನನಗೆ ನಿಮ್ಮ ದರ್ಶನವು ಲೋಹವನ್ನು ಬದಲಿಸುವ ಪರಶು ವೇದಿಯಾಗಬೇಕು" ಎಂದು ಕೇಳಿಕೊಂಡನು.
ಶ್ರೀಗುರುವು ಆ ದ್ವಿಜನಿಗೆ, "ನೀನು ಪೂರ್ವದಲ್ಲಿ ಮಹಾಪಾಪಗಳನ್ನು ಮಾಡಿದ್ದೀಯೆ. ಹೇ ವಿಪ್ರ, ಅದರಿಂದಲೇ ನೀನೀಗ ಕುಷ್ಠು ರೋಗದಿಂದ ಬಾಧೆ ಪಡುತ್ತಿದ್ದೀಯೆ. ಈಗ ನಿನಗೆ ಆ ದೋಷಗಳನ್ನು ನಾಶ ಮಾಡುವಂತಹ ಒಂದು ಉಪಾಯವನ್ನು ಹೇಳುತ್ತೇನೆ. ಹಾಗೆ ಮಾಡಿದರೆ ನೀನು ಶುದ್ಧನಾಗಿ ದಿವ್ಯವಾದ ದೇಹವನ್ನು ತ್ವರೆಯಾಗಿ ಹೊಂದಬಲ್ಲೆ" ಎಂದು ಹೇಳಿದರು. ಆ ಸಮಯದಲ್ಲಿ ಒಬ್ಬನು ನಾಲ್ಕು ವರ್ಷಗಳ ಹಿಂದೆಯೇ ಒಣಗಿ ಹೋಗಿದ್ದ ಔದುಂಬರ ವೃಕ್ಷದ ತುಂಡೊಂದನ್ನು ಸೌದೆಯಾಗಿ ಉಪಯೋಗಿಸಲು ತೆಗೆದು ಕೊಂಡು ಬರುತ್ತಿದ್ದನು. ಅದನ್ನು ನೋಡಿದ ಶ್ರೀಗುರುವು, "ಹೇ ಬ್ರಾಹ್ಮಣ, ಈ ಒಣಗಿದ ಕಟ್ಟಿಗೆಯನ್ನು ನೀನು ತೆಗೆದುಕೊಂಡು ಹೋಗಿ ನೆಡು. ಭಿಮಾ ನದೀ ತೀರದ ಸಂಗಮ ಸ್ಥಳದ ಪೂರ್ವ ಭಾಗದಲ್ಲಿ ಇದನ್ನು ಗಿಡದಂತೆ ನೆಡು. ಆ ನಂತರ ಸಂಗಮಕ್ಕೆ ಹೋಗಿ ಸ್ನಾನ ಮಾಡಿ ಬಂದು, ಅಶ್ವತ್ಥ ವೃಕ್ಷವನ್ನು ಅರ್ಚಿಸಿ, ಮತ್ತೆ ಸಂಗಮದಲ್ಲಿ ಸ್ನಾನ ಮಾಡು. ಹೇ ಭೂಸುರ, ಅನಂತರ ನೀರು ತುಂಬಿದ ಎರಡು ಕಲಶಗಳನ್ನು ತಂದು ಮೂರು ಕಾಲದಲ್ಲೂ ಈ ಒಣಗಿದ ಕಟ್ಟಿಗೆಗೆ ನನ್ನ ಮಾತಿನಂತೆ ಅಭಿಷೇಕ ಮಾಡು. ಯಾವ ದಿನ ಈ ಒಣಗಿದ ಕಟ್ಟಿಗೆಯ ತುಂಡು ಚಿಗುರುತ್ತದೋ ಅಂದು ನಿನ್ನ ಪಾಪಗಳೆಲ್ಲಾ ನಾಶವಾಗಿ ನೀನು ಸುಂದರಾಂಗನಾಗುವೆ" ಎಂದು ಶ್ರೀಗುರುವು ಆ ಕುಷ್ಠು ರೋಗಿಗೆ ಆದೇಶ ಕೊಟ್ಟರು. ಶ್ರೀಗುರುವಿನ ಆಜ್ಞೆಯನ್ನು ಅನುಸರಿಸಿ ಆ ವಿಪ್ರನು, ಒಣಗಿದ ಆ ಕಟ್ಟಿಗೆಯತುಂಡನ್ನು ತಲೆಯ ಮೇಲಿಟ್ಟು ಕೊಂಡು ತೆಗೆದು ಕೊಂಡು. ಭೀಮಾತೀರದ ಸಂಗಮಕ್ಕೆ ಹೋಗಿ, ಸಂಗಮೇಶ್ವರನ ಎದುರಿಗೆ ಹಳ್ಳ ತೆಗೆದು ಆ ತುಂಡನ್ನು ನೆಟ್ಟನು. ಆ ಬ್ರಾಹ್ಮಣ ಭಕ್ತಿಯಿಂದ ಶ್ರೀಗುರುವಿನ ಆಜ್ಞೆಯನ್ನು ಪಾಲಿಸುತ್ತಾ ಅಲ್ಲಿ ನೆಟ್ಟಿದ್ದ ಕಟ್ಟಿಗೆಯ ತುಂಡಿಗೆ ನೀರು ಹಾಕುತ್ತಿದ್ದನು. ಹೀಗೆ ಆ ಬ್ರಾಹ್ಮಣ ಉಪವಾಸ ಮಾಡುತ್ತಾ ಏಳು ದಿನಗಳು ನೀರು ತುಂಬಿದ ಮಡಕೆಗಳಿಂದ ಶ್ರದ್ಧೆಯಿಂದ ಅಭಿಷೇಕ ಮಾಡಿದನು. ಅಲ್ಲಿನ ಬ್ರಾಹ್ಮಣರು ಅವನನ್ನು ಕರೆದು, "ಇದೇನಯ್ಯ ನಿನ್ನ ಕೆಲಸ? ಒಣಗಿದ ಕಟ್ಟಿಗೆಯನ್ನು ಸೇವಿಸುತ್ತಿದ್ದೀಯೇಕೆ? ನಿರ್ಜೀವವಾದದ್ದಕ್ಕೆ ನೀರು ಹಾಕುವುದರಿಂದ ನಿನಗೆ ಏನು ಸಿಕ್ಕುತ್ತದೆ? ಶ್ರೀಗುರು ಮೂರ್ತಿ ದಯಾ ಸಮುದ್ರನು. ಭಕ್ತರಿಗೆ ವರದನು ಅಲ್ಲವೇ? ಆತನ ಕೃಪೆ ತಕ್ಷಣವೇ ಫಲ ಕೊಡುವುದಲ್ಲವೇ? ನಿನ್ನ ಪಾಪಗಳಿಗೆ ಪ್ರಾಯಶ್ಚಿತ್ತವಿಲ್ಲ. ಅದರಿಂದಲೇ ನಿನಗೆ ಈ ಕಟ್ಟಿಗೆಯನ್ನು ಕೊಟ್ಟನು. ಅದು ವ್ಯರ್ಥವು. ಶ್ರೀಗುರುವಿನ ಮಾತುಗಳಲ್ಲಿ ನೀನು ವಿಶ್ವಾಸ ಇಟ್ಟೆ" ಎಂದರು. ಅವರ ಮಾತುಗಳನ್ನು ಕೇಳಿ ಅವನು ವಿನಯದಿಂದ, "ಅಯ್ಯಾ, ಶ್ರೀಗುರು ವಾಕ್ಯವೇ ಕಾಮಧೇನುವು. ಅದು ಬೇರೊಂದು ರೀತಿಯಲ್ಲಿ ಹೇಗಾಗುವುದು? ಶ್ರೀಗುರು ವಾಕ್ಯವು ಅಸತ್ಯ ಹೇಗಾಗುವುದು? ಈ ಕಟ್ಟಿಗೆಯ ತುಂಡು ಮರವಾಗಬಲ್ಲದು ಎಂಬ ಧೈರ್ಯ ನನ್ನಲ್ಲಿ ನಿಜವಾಗಿಯೂ ಇದೆ. ಪ್ರಾಣ ಕೊಟ್ಟಾದರೂ ನಾನು ಶ್ರೀಗುರುವಿನ ಆದೇಶವನ್ನು ಪರಿಪಾಲಿಸುತ್ತೇನೆ" ಎಂದು ಎಲ್ಲರಿಗೂ ಹೇಳಿ, ಆ ಬ್ರಾಹ್ಮಣ ಇತರರು ಅವನನ್ನು ನಿವಾರಿಸಿದರೂ ತಾನ್ನ ಸೇವೆಯನ್ನು ಮಾಡುತ್ತಲೇ ಇದ್ದನು.
ಒಂದು ದಿನ ಶಿಷ್ಯರೆಲ್ಲರೂ ಶ್ರೀಗುರುವಿನ ಬಳಿಸೇರಿ, "ಸ್ವಾಮಿ, ಆ ಬ್ರಾಹ್ಮಣನನ್ನು ಆ ಕಾಷ್ಠವನ್ನು ಸೇವಿಸಲು ಏಕೆ ಹೇಳಿದಿರಿ? ವ್ಯರ್ಥವಾಗಿ ಅವನು ಕಷ್ಟ ಪಡುತ್ತಿದ್ದಾನೆ ಎಂದು ಅವನನ್ನು ನಾವು ನಿವಾರಿಸಿದರೂ, ಇದು ಮೂರ್ಖತ್ವ ಎಂದು ಹೇಳಿದರೂ ಅವನು ಅಂಗೀಕರಿಸುತ್ತಿಲ್ಲ. ಅದಲ್ಲದೆ ನಮಗೆ ಶ್ರೀಗುರುವಿನ ಮಾತೇ ನನ್ನ ಆಕಾಂಕ್ಷೆ ಎನ್ನುವ ನಿಶ್ಚಯದಿಂದ ಅವನು ಆ ಕಾಷ್ಠವನ್ನು ಸೇವಿಸುತಿದ್ದಾನೆ. ಏಳು ದಿನಗಳಾಯಿತು. ಆ ಬ್ರಾಹ್ಮಣ ನೀರು ಕೂಡಾ ಕುಡಿಯುತ್ತಿಲ್ಲ" ಎಂದರು. ಶಿಷ್ಯರ ಮಾತು ಕೇಳಿ, ಶ್ರೀಗುರುವು ಅವರಿಗೆ, "ಯಾರಿಗೆ ಎಂತಹ ಭಾವನೆಯಿರುತ್ತದೋ ಅವರಿಗೆ ಅಂತಹ ಸಿದ್ಧಿ ಲಭಿಸುತ್ತದೆ. ಶಿಷ್ಯರಿಗೆ ಗುರು ವಾಕ್ಯವೇ ಸಿದ್ಧಿಗೆ ಕಾರಣ. ಮಾನವರಿಗೆ ಅವರವರ ಭಾವನೆಗಳಿಗೆ ಅನುಗುಣವಾದ ಸಿದ್ಧಿ ಲಭ್ಯವಾಗುತ್ತದೆ.ಈ ಸಂಗತಿಯನ್ನು ತಿಳಿಸಲು ನಿಮಗೆ ಒಂದು ಪುಣ್ಯ ಪ್ರದವಾದ ಕಥೆಯನ್ನು ಹೇಳುತ್ತೇನೆ. ಅದು ಸ್ಕಾಂದ ಪುರಾಣದಲ್ಲಿದೆ. ಅದನ್ನು ಸೂತನು ಹೇಳಿದನು. ಸೂತನು ಋಷಿಪುಂಗವರಿಗೆ ಗುರುಭಕ್ತಿ ಸಂಸಾರವನ್ನು ತರಿಸುವಂತಹುದು. ಅಂತಹ ಸುಲಭ ಸಾಧನ ಬೇರೊಂದಿಲ್ಲ. ಗುರುವಿನ ಯೋಗ್ಯತೆಯನ್ನು ಪ್ರಶ್ನಿಸಬಾರದು. ಗುರುವನ್ನೇ ಬ್ರಹ್ಮನಾಗಿ ಧ್ಯಾನಿಸುತ್ತಾ ಸೇವೆ ಮಾಡಬೇಕು. ಗುರುವನ್ನು ಲಘುವಾಗಿ ಕಾಣಬಾರದು. ಗುರುವನ್ನು ಈಶ್ವರನಾಗಿ ಭಾವಿಸಬೇಕು. ಮಾನವ ದೃಷ್ಟಿಯಿಂದ ಗುರುವನ್ನು ನೋಡ ಬಾರದು. ಗುರುವನ್ನು ತ್ರಿಮೂರ್ತಿಯಾಗಿ ಭಾವಿಸಬೇಕು. ಹಾಗೆ ನಿಶ್ಚಯಿಸಿಕೊಂಡು ಶ್ರೀಗುರು ಪಾದಗಳನ್ನು ಭಜಿಸುವವರಿಗೆ ಶೂಲಪಾಣಿ ಪ್ರಸನ್ನನಾಗುತ್ತಾನೆ. ಮಂತ್ರದಲ್ಲಿ, ತೀರ್ಥದಲ್ಲಿ, ದ್ವಿಜನಲ್ಲಿ, ದೈವದಲ್ಲಿ, ಜ್ಯೋತಿಷ್ಕನಲ್ಲಿ, ವೈದ್ಯನಲ್ಲಿ, ಗುರುವಿನಲ್ಲಿ ಯಾರಿಗೆ ಯಾವ ಭಾವನೆ ಇರುತ್ತದೋ ಅವರು ಅಂತಹ ಸಿದ್ಧಿಯನ್ನೇ ಪಡೆಯುತ್ತಾರೆ. ಗುರುವನ್ನು ಶಿವನಾಗಿ ನೋಡಿದರೆ ಈಶ್ವರನು ಪ್ರಸನ್ನನಾಗುತ್ತಾನೆ. ಗುರುಭಕ್ತಿ ಅಂತಹುದು. ಅದು ತಕ್ಷಣವೆ ಫಲಪ್ರದವಾಗುತ್ತದೆ. ಹೇ ಋಷೀಶ್ವರರೇ, ಧೃಢ ಭಕ್ತಿಯನ್ನು ಉಂಟುಮಾಡುವ ನಿದರ್ಶನವೊಂದನ್ನು ಹೇಳುತ್ತೇನೆ.
ಪೂರ್ವದಲ್ಲಿ ಪಾಂಚಾಲನಗರವೆಂಬಲ್ಲಿ ಸಿಂಹಕೇತುವೆಂಬ ರಾಜನೊಬ್ಬನಿದ್ದನು. ಅವನ ತನಯನು ಧಾರ್ಮಿಕನು. ಹೆಸರು ಧನಂಜಯ. ಒಂದುಸಲ ಆ ರಾಜಕುಮಾರನು ಬೇಟೆಗೆಂದು ಕಾಡಿಗೆ ಹೋದನು. ನೀರೂ ಕೂಡಾ ದೊರೆಯದ ನಿರ್ಜನ ಪ್ರದೇಶದಲ್ಲಿ ಅವನು ಸಂಚರಿಸುತ್ತಿದ್ದನು. ರಾಜಪುತ್ರನಿಗೆ ನೀರಡಿಕೆಯಾಗಿ ಬಾಧೆಯಾಯಿತು. ಒಬ್ಬ ಬೇಟೆಗಾರನನ್ನು ಹಿಂದಿಟ್ಟುಕೊಂಡು, ದಾಹದಿಂದ ಒದ್ದಾಡುತ್ತಾ ಅವನು ಕಾಡಿನಲ್ಲಿ ಅಲೆಯುತ್ತಿದನು. ಹಾಗೆ ಅಲೆಯುತ್ತಾ ಅಲಸಿ ಹೋಗಿ ಅವನು ದೂರದಲ್ಲಿದ್ದ ಶಬರನೊಡನೆ ಒಂದು ಜೀರ್ಣವಾದ ಶಿವಾಲಯವನ್ನು ಸೇರಿದನು. ಅಲ್ಲಿ ಅನೇಕ ಶಿವಲಿಂಗಗಳು ಬಿದ್ದಿದ್ದವು. ಶಬರನು ಒಂದು ಮೊನೋಹರವಾದ ಶಿವಲಿಂಗವನ್ನು ತೆಗೆದುಕೊಂಡು ರಾಜಪುತ್ರನಿದ್ದ ಜಾಗಕ್ಕೆ ಬಂದನು. ಆ ಅಜಪುತ್ರನು ಅವನನ್ನು ನೋಡಿ, "ಈ ಲಿಂಗದಿಂದ ಏನಾಗಬೇಕು ನಿನಗೆ? ಇಲ್ಲಿ ಬಹಳ ಲಿಂಗಗಳಿವೆಯಲ್ಲವೇ?" ಎಂದನು. ಆ ಶಬರ, " ಈ ಲಿಂಗದಲ್ಲಿ ನನಗೆ ಮನಸ್ಸುಂಟಾಗಿದೆ. ಈ ಲಿಂಗವನ್ನು ಪೂಜೆಮಾಡಬೇಕು" ಎಂದನು. ಅವನ ಮಾತುಗಳನ್ನು ಕೇಳಿದ ರಾಜಪುತ್ರ , " ಒಳ್ಳೆಯದು. ಈ ಲಿಂಗವನ್ನು ಸ್ಥಿರಭಕ್ತಿಯಿಂದ ಪೂಜೆಮಾಡು" ಎನ್ನಲು, ಆ ಶಬರನು ರಾಜಕುಮಾರನಿಗೆ ನಮಸ್ಕರಿಸಿ, "ಹೇ ಪ್ರಭು, ಲಿಂಗವನ್ನು ಯಾವ ವಿಧಾನದಲ್ಲಿ ಪೂಜಿಸಬೇಕೋ ಹೇಳು. ನಾನು ಜಾತಿಯಲ್ಲಿ ಬೇಡರವನು. ಅಜ್ಞಾನಿ. ಪೂಜಾವಿಧಾನ ನನಗೆ ತಿಳಿಯದು. ವಿಸ್ತಾರವಾಗಿ ಹೇಳು. ಹೇ ಪ್ರಭು ನೀನೇ ನನಗೆ ಗುರುವು" ಎಂದು ಪ್ರಾರ್ಥಿಸಿದನು. ಆ ರಾಜಕುಮಾರನು, "ಈ ಲಿಂಗವನ್ನು ಮನೆಗೆ ತೆಗೆದುಕೊಂಡು ಹೋಗಿ, ಶುಭ್ರವಾದ ಒಂದು ಪ್ರದೇಶದಲ್ಲಿ ಸ್ಥಾಪಿಸಿ, ಗಂಧ ಪುಷ್ಪಾದಿಗಳಿಂದ ಅರ್ಚಿಸು. ನಿನ್ನ ಹೆಂಡತಿಯನ್ನೂ ನಿನ್ನ ಜೊತೆಯಲ್ಲಿಟ್ಟುಕೊಂಡು ಪೂಜಿಸು. ಲಿಂಗಕ್ಕೆ ನೈವೇದ್ಯ ಮಾಡಿ ಆ ನೈವೇದ್ಯ ಪ್ರಸಾದವನ್ನು ನಿನ್ನ ಹೆಂಡತಿಯೊಡನೆ ತಿನ್ನು. ನೀನು ಯಾವಯಾವ ಪದಾರ್ಥಗಳನ್ನು ತಿನ್ನುತ್ತಿಯೋ ಅದೆಲ್ಲವನ್ನೂ ಮೊದಲು ಲಿಂಗಕ್ಕೆ ಅರ್ಪಿಸಿ ನಂತರ ತಿನ್ನು. ಶಬರ, ನಿನಗೆ ಪೂಜಾವಿಧಾನವನ್ನು ಹೇಳಿದ್ದೇನೆ" ಎಂದು ಹೇಳಿದನು.
ಆ ಶಬರನು ಸಂತುಷ್ಟನಾಗಿ ಲಿಂಗವನ್ನು ತೆಗೆದು ಕೊಂಡು ಮನೆಗೆ ಹೋದನು. ಅವನು ತನಗೆ ಲಿಂಗವ ಪ್ರಸನ್ನವಾಯಿತೆಂದು ತನ್ನ ಹೆಂಡತಿಗೆ ಹೇಳಿದನು. ಅವನು ಪ್ರತಿದಿನವೂ ಲಿಂಗವನ್ನು ರಾಜಕುಮಾರನು ಹೇಳಿದ ಹಾಗೆ ಅರ್ಚಿಸುತ್ತಿದ್ದನು. ನಿತ್ಯವೂ ಚಿತಾ ಭಸ್ಮವನ್ನು ತಂದು ಲಿಂಗವನ್ನು ಅಲಂಕರಿಸಿ ಅವರಿಬ್ಬರೂ ಲಿಂಗಾರ್ಚನೆ ಮಾಡುತ್ತಿದ್ದರು. ಒಂದುದಿನ ಚಿತಾ ಭಸ್ಮ ದೊರೆಯಲಿಲ್ಲ. ಅವನು ಎಲ್ಲ ಕಡೆಯಲ್ಲೂ ಹುಡುಕಿ ಅಲಸಿಹೋಗಿ ಮನೆಗೆ ಹಿಂತಿರುಗಿದನು. ಚಿಂತೆಯಿಂದ ಖಿನ್ನನಾದ ಅವನು ಹೆಂಡತಿಗೆ, "ನಾನೇನು ಮಾಡಲಿ? ಪ್ರಾಣ ಬಿಡುತ್ತೇನೆ. ಚಿತಾಭಸ್ಮವಿಲ್ಲದೆ ಲಿಂಗ ಪೂಜೆ ಆಗುವುದಿಲ್ಲ. ಇಂದು ಚಿತಾಭಸ್ಮ ದೊರೆಯಲಿಲ್ಲ. ಗುರುವು ಆದೇಶಿಸಿದಂತೆ ನೈವೇದ್ಯವನ್ನು ಇಡಲೇ ಬೇಕು. ಇಲ್ಲದಿದ್ದರೆ ಲಿಂಗಪೂಜೆ ವ್ಯರ್ಥ. ಗುರುವಾಕ್ಯವನ್ನು ನಿರ್ವಹಿಸದವನು ರೌರವ ನರಕಕ್ಕೆ ಹೋಗುತ್ತಾನೆ. ದರಿದ್ರನಾಗುತ್ತಾನೆ. ಗುರುಭಕ್ತಿಯನ್ನು ತೋರಿಸುವವನು ಭವಸಾಗರವನ್ನು ದಾಟುತ್ತಾನೆ. ಆದ್ದರಿಂದ ಲಿಂಗಕ್ಕೋಸ್ಕರ ನಾನು ಪ್ರಾಣ ಬಿಡಲು ನಿಶ್ಚಯಿಸಿ ಕೊಂಡಿದ್ದೇನೆ" ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿದ ಶಬರಿ, "ಸ್ವಾಮಿ, ನಿಮಗೆ ಚಿಂತೆ ಏತಕ್ಕೆ? ನಾನು ನಿಮಗೆ ಚಿತಾಭಸ್ಮವನ್ನು ಕೊಡುತ್ತೇನೆ. ನನ್ನನ್ನು ಮನೆಯೊಳಗೆ ಇಟ್ಟು ಮನೆಗೆ ಬೆಂಕಿ ಹಚ್ಚು. ನನ್ನ ದೇಹವು ದಗ್ಧವಾಗುವುದು. ಆ ಭಸ್ಮವನ್ನು ತೆಗೆದುಕೊಂಡು ಶಂಕರನಿಗೆ ಸಮರ್ಪಿಸು. ವ್ರತಭಂಗ ಮಾಡಬೇಡ. ಈ ಶರೀರಕ್ಕೆ ಎಂದಾದರೂ ನಾಶನವು ನಿಶ್ಚಯವೇ ಅಲ್ಲವೇ? ಆದ್ದರಿಂದ ಶಿವ ಕಾರ್ಯಾರ್ಥವಾಗಿ ದೇಹವನ್ನು ಸಮರ್ಪಿಸುತ್ತೇನೆ" ಎಂದಳು.
ಆ ಶಬರನು ದುಃಖದಿಂದ, "ಪ್ರಿಯಳೇ. ನಿನ್ನ ಪ್ರಾಣವನ್ನು ಹೇಗೆ ತೆಗೆಯಲಿ? ಚಿಕ್ಕ ವಯಸ್ಸಿನವಳು. ಸಂತಾನ ಸೌಖ್ಯವನ್ನೂ ಪಡೆದಿಲ್ಲ. ನಿನ್ನಲ್ಲಿ ಏನೂ ದೋಷವಿಲ್ಲ. ನಿನ್ನ ತಾಯಿ ನಿನ್ನನ್ನು ರಕ್ಷಿಸು ಎಂದು ನನಗೆ ಕೊಟ್ಟಳು. ಪ್ರಾಣದಂತೆ ರಕ್ಷಿಸುತ್ತೇನೆ ಎಂದು ನಿನ್ನನ್ನು ನನ್ನ ಮನೆಗೆ ಕರೆದುತಂದೆ. ಅದರಿಂದ ನಾನು ನಿನ್ನನ್ನು ದಹಿಸಿದರೆ ನನಗೆ ಅನೇಕ ಪಾಪಗಳು ಬರುತ್ತವೆ. ನನ್ನನ್ನು ಎಲ್ಲರೂ ಭಾರ್ಯಾ ಹಂತಕನೆಂದು ಹಳಿಯುತ್ತಾರೆ. ಹೇಗೋ ಮಾಡಿ ನಾನು ನಿನ್ನನ್ನು ಸಾಯಿಸಿದರೂ ತ್ರಿಪುರಾರಿಯಾದ ಮಹೇಶ್ವರನು ಹೇಗೆ ಸಂತುಷ್ಟನಾಗುತ್ತಾನೆ? ಶರೀರವಿಟ್ಟುಕೊಂಡೇ ಈ ಲೋಕದಲ್ಲಿ ವ್ರತಾದಿಗಳನ್ನು ಮಾಡಬೇಕಲ್ಲವೇ? ಅಂತಹ ಶರೀರವನ್ನು ದಹಿಸಲಾಗದು. ಜೀವಿಸಿರುವ ಶರೀರವನ್ನು ದಹಿಸುವುದರಿಂದ ನನಗೇನು ಸಿಕ್ಕುವುದು?’ ಎಂದು ಅವನು ಹೇಳಲು, ಅವಳು ತನ್ನ ಗಂಡನಿಗೆ, "ಮೋಹದಿಂದಾಗಿ ನಿನ್ನ ಭಕ್ತಿಯು ಅಸತ್ಯವಾಗಿದೆ. ಈ ದೇಹವು ಕನಸಿನಲ್ಲಿ ಕಂಡಂತೆ, ನೀರಿನಗುಳ್ಳೆಯಂತೆ ನಶ್ವರವಾದದ್ದು. ಹುಟ್ಟಿದವನಿಗೆ ಮರಣವು ನಿಶ್ಚಯವು. ನನ್ನ ತಾಯಿತಂದೆಗಳು ನನ್ನನ್ನು ನಿನಗೆ ಅರ್ಪಿಸಿದ್ದಾರೆ. ನಾನು ನಿನ್ನ ಶರೀರದಲ್ಲಿ ಅರ್ಧಭಾಗವೇ ಅಲ್ಲವೇ? ಪ್ರಾಣನಾಥ, ನಿನಗಿಂತ ನಾನು ಬೇರೆ ಹೇಗಾಗುತ್ತೇನೆ ಹೇಳು. ‘ನಾನೇ ನಿನ್ನ ಆತ್ಮವು. ನೀನೇ ನನ್ನ ಆತ್ಮವು’ ಎಂದು ಭಾವಿಸಿ ಅರ್ಧ ಶರೀರ ಎಂದು ತಿಳಿದವನಿಗೆ ತನ್ನಲ್ಲಿ ದೋಷವೇನೂ ಇಲ್ಲ. ಆದ್ದರಿಂದ ನನ್ನ ದೇಹಕ್ಕೆ ಸಾಫಲ್ಯವನ್ನು ಪ್ರಸಾದಿಸು. ಅದರಿಂದ ಈಶ್ವರನೂ ಕೂಡಾ ಪ್ರಸನ್ನನಾಗುತ್ತಾನೆ" ಎಂದು ವಿನಯದಿಂದ ಹೇಳಿ, ತಾನು ಮನೆಯೊಳಕ್ಕೆ ಹೋಗಿ, "ನಾಥ, ಮನೆಗೆ ಬೆಂಕಿ ಹಚ್ಚು" ಎಂದಳು. ಶಬರನು ಗೃಹದ್ವಾರವನ್ನು ಮುಚ್ಚಿ ಮನೆಗೆ ಬೆಂಕಿಯಿಟ್ಟನು. ಮನೆಯೆಲ್ಲವೂ ಸುಟ್ಟು ಭಸ್ಮವಾಯಿತು. ಶಬರನ ಹೆಂಡತಿಯೂ ಸುಟ್ಟು ಹೋದಳು. ಆ ಭಸ್ಮವನ್ನು ತೆಗೆದು ಕೊಂಡು ಎಂದಿನಂತೆ ಆ ಶಬರನು ಭಕ್ತಿಯಿಂದ ಲಿಂಗಕ್ಕೆ ಅರ್ಪಿಸಿದನು. ಅವನಿಗೆ ಮಹದಾನಂದವಾಯಿತು. ಆ ಆನಂದದಲ್ಲಿ ಅವನಿಗೆ ಹೆಂಡತಿ ಸುಟ್ಟು ಹೋದಳೆಂಬುದೂ ಮರೆತುಹೋಯಿತು.
ಶ್ರದ್ಧಾಭಕ್ತಿಗಳಿಂದ ದಿನವೂ ಆ ಶಬರ ಶಿವನನ್ನು ಪೂಜಿಸಿ ಕೈಯಲ್ಲಿ ಪ್ರಸಾದವನ್ನು ಹಿಡಿದು ಪ್ರೇಮದಿಂದ ತನ್ನ ಹೆಂಡತಿಯನ್ನು ಕರೆದು ಅವಳೊಡನೆ ಪ್ರಸಾದವನ್ನು ತಿನ್ನುವನು. ಆ ದಿನವೂ ಎಂದಿನಂತೆ, ತನ್ನ ಹೆಂಡತಿಯಿಲ್ಲ ಎನ್ನುವುದನ್ನು ಮರೆತು, ಪ್ರಸಾದ ತೆಗೆದುಕೊಳ್ಳಲು ಅವಳನ್ನು ಕರೆದನು. ಶಂಕರನು ಅವನಲ್ಲಿ ಪ್ರಸನ್ನನಾದನು. ಆ ಶಬರಿಯು ಕೈಯಲ್ಲಿ ಪ್ರಸಾದವನ್ನು ಹಿಡಿದು ಬಂದಳು. ಮನೆಯೂ ಕೂಡಾ ಹಿಂದಿನಂತೆಯೇ ಇತ್ತು. ಅದನ್ನು ಕಂಡ ಶಬರನು, "ಇದೇನು ಆಶ್ಚರ್ಯ! ಮನೆಯು ಹಿಂದಿನಂತೆಯೇ ಇದೆ!" ಎಂದು ಯೋಚಿಸುತ್ತ ತನ್ನ ಹೆಂಡತಿಯನ್ನು ಕರೆದು, "ಪ್ರಿಯೆ, ನೀನು ದಗ್ಧಳಾಗಿದ್ದರೂ ಮತ್ತೆ ಹೇಗೆ ಬಂದೆ?" ಎಂದು ಕೇಳಿದನು. ಅವಳು "ನನಗೆ ನಿದ್ದೆ ಬಂತು. ಬಹಳ ಛಳಿಯಿಂದ ಬಾಧೆಯಾಗಿ ಮನೆಯಲ್ಲಿ ನಿದ್ರೆ ಮಾಡಿದೆ. ಈಗ ನೀನು ಕರೆಯುತ್ತಲೇ ಎಚ್ಚರವಾಯಿತು" ಎಂದಳು. ಆ ಕ್ಷಣದಲ್ಲಿ ಶಿವನು ಅವರ ಮುಂದೆ ಪ್ರತ್ಯಕ್ಷನಾದನು. ಅವರಿಬ್ಬರೂ ಶಿವನ ಪಾದಗಳನ್ನು ಹಿಡಿದು ಕೊಂಡರು. ಶೂಲಪಾಣಿ ಪ್ರಸನ್ನನಾಗಿ ವರ ಕೇಳೆಂದು ಹೇಳಿ, ತಾನೇ ಅವರಿಗೆ ಇಹದಲ್ಲಿ ಸೌಖ್ಯ, ನಂತರ ಕೋಟಿ ವರ್ಷಗಳು ಸ್ವರ್ಗದಲ್ಲಿ ವಾಸ ಎಂದು ವರವನ್ನು ಕೊಟ್ಟನು. ಹೀಗೆ ಮುನಿಗಳಿಗೆ ಸೂತನು ವಿಸ್ತಾರವಾಗಿ ಈ ಕಥೆಯನ್ನು ಹೇಳಿದನು. ಗುರುವಾಕ್ಯದಲ್ಲಿ ವಿಶ್ವಾಸ ಇರುವವರಿಗೆ ಫಲವು ತ್ವರೆಯಾಗಿ ಲಭಿಸುತ್ತದೆ" ಎಂದು ಶ್ರೀಗುರುವು ಶಿಷ್ಯರಿಗೆ ಬೋಧಿಸಿ, ಮತ್ತೆ ಹೇಳಿದರು.
"ಅ ಬ್ರಾಹ್ಮಣನು ಭಕ್ತಿಯಿಂದ ವಿಶ್ವಾಸವಿಟ್ಟು ಆ ಕಾಷ್ಠವನ್ನು ಸೇವಿಸುತ್ತಿದ್ದಾನೆ. ಯಾರ ಭಾವ ಹೇಗಿರುತ್ತದೋ ಅವರಿಗೆ ಫಲವೂ ಹಾಗೆಯೆ ಲಭಿಸುತ್ತದೆ" ಎಂದು ಹೇಳಿ ಶ್ರೀಗುರುವು ಸಂಗಮ ಸ್ಥಾನಕ್ಕೆ ಹೋದರು. ಮಾಧ್ಯಾಹ್ನಿಕ ಅನುಷ್ಠಾನಗಳನ್ನೆಲ್ಲ ತೀರಿಸಿಕೊಂಡು ಆ ಕುಷ್ಠುರೋಗಿಯನ್ನು ನೋಡಿ, ಕಾಷ್ಠವನ್ನು ಹೇಗೆ ಸೇವಿಸುತ್ತಿದ್ದಾನೆ ಎಂಬುದನ್ನು ಕಂಡು ಅವನಲ್ಲಿ ಪ್ರಸನ್ನನಾದರು. ಕಮಂಡಲುವಿನಿಂದ ನೀರು ತೆಗೆದುಕೊಂಡು ಆ ಒಣಕಾಷ್ಠದ ಮೇಲೆ ಚೆಲ್ಲಿ, ಅದನ್ನು ದೃಷ್ಟಿಸಿ ನೋಡಿದರು. ತಕ್ಷಣವೇ ಆ ಒಣಕಾಷ್ಠ ಚಿಗುರಿತು. ಅದು ಔದುಂಬರ ವೃಕ್ಷವೆನ್ನುವುದನ್ನು ಎಲ್ಲರೂ ಸಾಕ್ಷಾತ್ತಾಗಿ ನೋಡಿದರು. ಚಿಂತಾಮಣಿ ಸ್ಪರ್ಶದಿಂದ ಕಬ್ಬಿಣವು ಚಿನ್ನವಾದ ಹಾಗೆ ಶ್ರೀಗುರುವಿನ ಸುಧಾದೃಷ್ಟಿಯಿಂದ ಒಣಗಿದ ಕಟ್ಟಿಗೆ ಔದುಂಬರ ವೃಕ್ಷವಾಯಿತು. ಪಂಡಿತನಾದ ಆ ಕುಷ್ಠು ರೋಗಿಯ ರೋಗವು ತೊಲಗಿಹೋಗಿ, ಅವನ ಶರೀರ ಹೇಮ ಛಾಯೆಯಿಂದ ಬೆಳಗಿತು. ಆಗ ಆ ದ್ವಿಜನು ಶ್ರೀಗುರುವನ್ನು ಹೀಗೆ ಸ್ತುತಿಸಿದನು. ** **
"ಶ್ರೀ ನೃಸಿಂಹೇಶ್ವರ ಕೋಟಿಸೂರ್ಯಪ್ರಭೆಯಿಂದ ಕೋಟಿ ಚಂದ್ರನಂತೆ ಶಾಂತನಾಗಿ ವಿಶ್ವಕ್ಕೆಲ್ಲಾ ಆಶ್ರಯನಾಗಿ ದೇವಗಣಗಳು ಅರ್ಚಿಸುವ ಪಾದಪದ್ಮಗಳೊಡನೆ ಬೆಳಗುತ್ತಾ ಭಕ್ತಪ್ರಿಯನಾಗಿ ವರೇಣ್ಯನಾದ ನಿನಗೆ ವಂದನವು. ನನ್ನನ್ನು ರಕ್ಷಿಸು.
ಮಾಯೆ ಎನ್ನುವ ಕತ್ತಲಿಗೆ ನೀನೇ ಸೂರ್ಯನು. ಗುಣರಹಿತನಾದರೂ ಗುಣಾಢ್ಯನು. ನೀನೇ ಶ್ರೀವಲ್ಲಭನು. ಭಿಕ್ಷುವೇಷವನ್ನು ಸ್ವೀಕರಿಸಿದ್ದೀಯೆ. ಸದ್ಭಕ್ತರು ನಿನ್ನ ಸೇವೆ ಮಾಡುತ್ತಾರೆ. ನೀನೇ ವರದನು. ನೀನೇ ವರಿಷ್ಠನು. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು.
ಕಾಮವೇ ಮೊದಲಾದ ಷಡ್ಗುಣಗಳೆಂಬ ಗಜಗಳಿಗೆ ನೀನೇ ಅಂಕುಶವು. ನೀನೇ ಆನಂದಕ್ಕೆ ಮೂಲವು. ಪರತತ್ತ್ವವೇ ನಿನ್ನ ರೂಪವು. ಸದ್ಧರ್ಮವನ್ನು ರಕ್ಷಿಸಲು ಅವತಾರವನ್ನು ಧರಿಸಿದ್ದೀಯೆ. ನಿನಗೆ ವಂದನವು. ನನ್ನನ್ನು ಕಾಪಾಡು.
ಸೂರ್ಯನೂ ಚಂದ್ರನೂ ನಿನ್ನ ನೇತ್ರಗಳು. ಸಜ್ಜನರಿಗೆ ಕಾಮಧೇನುವು ನೀನೇ. ಪಂಚಭೂತಾತ್ಮಕವಾದ ಈ ಮಾಯಾಪ್ರಪಂಚವು ನಿನ್ನಿಂದಲೇ ಉದಯಿಸಿ ನಿನ್ನಲ್ಲೇ ರಮಿಸುತ್ತಾ ನಿನ್ನಲ್ಲೇ ಅಸ್ತಮಿಸುತ್ತಿದೆ. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು.
ಕೆಂಪುತಾವರೆಯಂತೆ ಮನೋಹರವಾದವು ನಿನ್ನ ನಯನಗಳು. ಉತ್ತಮವಾದ ದಂಡವನ್ನು ಕಮಂಡಲವನ್ನು ಹಿಡಿದು ನೀನು ಪಾಪಗಳನ್ನು ಹೋಗಲಾಡಿಸುತ್ತೀಯೆ. ಆಶ್ರಿತರಿಗೆ ನಸುನಗೆ ಎನ್ನುವ ಬೆಳದಿಂಗಳಿನಿಂದ ನಿನ್ನ ಮುಖಚಂದ್ರವು ಶೋಭಿಸುತ್ತಿದೆ. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು.
ನಿತ್ಯವೂ ವೇದತ್ರಯಗಳು ನಿನ್ನ ಪಾದಪದ್ಮಧೂಳಿಯನ್ನು ಅನ್ವೇಷಿಸುತ್ತಿರುತ್ತಿವೆ. ನಾದಬಿಂದುಕಳಾಸ್ವರೂಪನು ನೀನು. ತಾಪತ್ರಯಗಳಿಂದ ತಪ್ತರಾದ ಆಶ್ರಿತರಿಗೆ ನೀನೇ ಕಲ್ಪವೃಕ್ಷವು. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು.
ದೈನ್ಯ, ಆಧಿ, ಭಯ, ಕಷ್ಟಗಳೆನ್ನುವ ದಾವಾಗ್ನಿಯನ್ನು ಶಾಂತಗೊಳಿಸಿ ಸ್ತುತ್ಯನಾಗಿದ್ದೀಯೆ ನೀನು. ಅಷ್ಟಾಂಗಯೋಗವನ್ನು, ಜ್ಞಾನವನ್ನು ಬೋಧಿಸುವುದರಲ್ಲಿ ನೀನು ಉತ್ಸಾಹವನ್ನು ತೋರಿಸುತ್ತೀಯೆ. ಕೃಷ್ಣಾನದಿಯ ಪಂಚನದಿ ಸಂಗಮದಲ್ಲಿ ನೀನು ನೆಲೆಸಿದ್ದೀಯೆ. ಶ್ರೀ ನೃಸಿಂಹೇಶ್ವರ ನಿನಗೆ ವಂದನವು. ನನ್ನನ್ನು ಕಾಪಾಡು.
ಆದಿಮಧ್ಯಾಂತಗಳು ನಿನಗಿಲ್ಲ. ನಿನ್ನ ಶಕ್ತಿ ಅನಂತವು. ನಿನ್ನ ಭಾವವು ತರ್ಕಕ್ಕೆ ಸಿಕ್ಕಲಾರದ್ದು. ನಿನ್ನ ಹೆಸರೇ ಪರಮಾತ್ಮ. ಮಾತುಗಳಿಗೆ, ದೃಷ್ಟಿಗೆ ನಿನ್ನ ಮಾರ್ಗವು ಸಿಕ್ಕುವುದಿಲ್ಲ. ನೀನು ಅದ್ವಿತೀಯನು. ಶ್ರೀನೃಸಿಂಹೇಶ್ವರ ನಿನಗೆ ವಂದನವು. ರಕ್ಷಿಸು.
ಶ್ರೀ ನೃಸಿಂಹಾಷ್ಟಕವನ್ನು ಪಠಿಸುವವನಿಗೆ ದೀರ್ಘಾಯುವು ಲಭಿಸುವುದು. ಅಂತಹವನು ಸಂಸಾರವನ್ನು ದಾಟಿ ಅಮೃತವನ್ನು ಪಡೆಯುತ್ತಾನೆ" **
ಎಂದು ಸ್ತುತಿಸಿ ನರಹರಿ ಎನ್ನುವ ಆ ದ್ವಿಜನು ಶ್ರೀಗುರುವನ್ನು, "ಹೇ ಭಗವನ್, ನೃಹರಿ, ದೇವ, ಸ್ವಾಮಿ, ನನ್ನಲ್ಲಿ ದಯೆತೋರಿಸಿದೆ." ಎಂದು ಹೇಳುತ್ತಾ ಅವರ ಪಾದಗಳಲ್ಲಿ ನಮಿಸಿದನು. ಶ್ರೀಗುರುನಾಥನು ಅವನ ತಲೆಯಮೇಲೆ ಕೈಯಿಟ್ಟು, ಕೃಪಾತಿರೇಕದಿಂದ ಅವನನ್ನು ಮೇಲೆತ್ತಿ, "ಹೇ ಜ್ಞಾನರಾಶಿ ಏಳು’ ಎಂದು ಹೇಳಿ ಆದರಿಸಿದನು. ಒಣಗಿದ ಕೊಂಬೆ ಚಿಗುರುವುದು, ಆ ಬ್ರಾಹ್ಮಣನು ರೋಗವಿಮುಕ್ತನಾಗುವುದು ಎಲ್ಲವನ್ನೂ ಕಂಡು ಅಲ್ಲಿ ಸೇರಿದ್ದವರೆಲ್ಲರೂ ವಿಸ್ಮಯಗೊಂಡು ಶ್ರೀಗುರುವನ್ನು ಸ್ತುತಿಸಿದರು.
ಶ್ರೀಗುರುವು ನಿರ್ಗುಣ ಮಠಕ್ಕೆ ಹಿಂತಿರುಗಿದರು. ಗ್ರಾಮಸ್ಥರು ನೀರಾಜನವನ್ನು ತಂದು ಆದರದಿಂದ ಅವರ ಸಮ್ಮುಖಕ್ಕೆ ಬಂದರು. ಅಂದು ನರಹರಿ ಸಕುಟುಂಬರಾದ ಬ್ರಾಹ್ಮಣರೆಲ್ಲರಿಗೂ ಸಮಾರಾಧನೆ ಮಾಡಿದನು. ನರಹರಿಯನ್ನು ಕರೆದು ಶ್ರೀಗುರುವು, "ಅಯ್ಯಾ, ನೀನು ನನ್ನ ಭಕ್ತನು. ನಿನಗೆ ಇಹಲೋಕಪರಲೋಕಗಳ ಸುಖವನ್ನು ಕೊಟ್ಟಿದ್ದೇನೆ. ಪುತ್ರಪುತ್ರಿಯರು, ಸಂಪದವು ನಿನಗೆ ಸಮೃದ್ಧಿಯಾಗಿ ಸೇರುತ್ತವೆ." ಎಂದು ಹೇಳಿ ಅವನಿಗೆ ಸಾಂಗಯೋಗಮಾರ್ಗವನ್ನು ಅನುಗ್ರಹಿಸಿ, "ನಿನಗೆ ಇಂದಿನಿಂದ ಯೋಗೀಶ್ವರನೆಂದು ಹೆಸರು ಕೊಡಲಾಗಿದೆ. ಈ ಸರ್ವ ಶಿಷ್ಯರಲ್ಲಿ ನೀನೇ ಶ್ರೇಷ್ಠನು. ನೀನು ನನ್ನ ಪ್ರಿಯ ಭಕ್ತನು. ಇನ್ನು ಮೇಲೆ ನನ್ನ ಅನುಗ್ರಹದಿಂದ ನಿನಗೆ ಎಂತಹ ಚಿಂತೆಯೂ ಬರುವುದಿಲ್ಲ. ನನ್ನ ಆಜ್ಞೆಯನ್ನು ತ್ವರೆಯಾಗಿ ನಡೆಸು. ತಕ್ಷಣವೇ ನಿನ್ನ ಮನೆಗೆ ಹೋಗಿ ನಿನ್ನ ಹೆಂಡತಿ ಮಗನನ್ನು ಕರೆದುಕೊಂಡು ತ್ವರೆಯಾಗಿ ಬಾ. ನಿನ್ನ ಹೆಂಡತಿ ಮಕ್ಕಳೊಡನೆ ಇಲ್ಲೇ ನನ್ನ ಸನ್ನಿಧಿಯಲ್ಲಿ ಸಂತೋಷವಾಗಿರು. ಅಯ್ಯಾ ನರಹರಿ, ನಿನಗೆ ಒಳ್ಳೆಯದಾಗುತ್ತದೆ. ನಿನಗೆ ಮೂವರು ಪುತ್ರರು ಜನಿಸುತ್ತಾರೆ. ಅವರು ಯೋಗಿಗಳೆನ್ನುವ ಹೆಸರಿನಿಂದ ನನ್ನನ್ನು ಅರ್ಚಿಸುತ್ತಾರೆ. ನಿನ್ನ ವಂಶದಲ್ಲಿ ಹುಟ್ಟುವವರೆಲ್ಲರೂ ನನ್ನ ಭಕ್ತರೇ ಆಗುತ್ತಾರೆ." ಎಂದು ಹೇಳಿ, ವಿದ್ಯಾಸರಸ್ವತಿ ಎನ್ನುವ ಮಂತ್ರವನ್ನು ಪಂಡಿತನಿಗೆ ಉಪದೇಶಿಸಿದರು. ಶ್ರೀಗುರುವು ಹೇಳಿದಂತೆಯೇ ನರಹರಿಗೆ ಎಲ್ಲವೂ ನಡೆಯಿತು. ಅಯ್ಯಾ ನಾಮಧಾರಕ, ಶ್ರೀಗುರುವಿನ ಪ್ರಸಾದವು ಅಂತಹುದಯ್ಯ! ಅದರಿಂದಲೇ ಗಂಗಾಧರ ಪುತ್ರನಾದ ಸರಸ್ವತಿ ಶ್ರೀಗುರು ಚರಿತ್ರೆಯನ್ನು ವಿಸ್ತರಿಸಿದನು. ಇದು (ಸಂಸಾರಸಾಗರವನ್ನು)ತರಿಸಬೇಕು ಎಂದುಕೊಳ್ಳುವವರಿಗೆ ಪವಿತ್ರವಾದ ಮಿತ್ರನು.
ಇಲ್ಲಿಗೆ ನಲವತ್ತನೆಯ ಅಧ್ಯಾಯ ಮುಗಿಯಿತು.
No comments:
Post a Comment