Tuesday, September 24, 2013

||ಶ್ರೀಗುರು ಚರಿತ್ರೆ - ನಲವತ್ತೊಂಭತ್ತನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ನಾಮಧಾರಕ, "ಸ್ವಾಮಿ, ಶ್ರೀಗುರುವು ಮನುಷ್ಯನಂತೆ ಕಂಡು ಬಂದರೂ ತ್ರಿಮೂರ್ತಿಗಳ ಅವತಾರವೇ! ಗಂಧರ್ವನಗರದಲ್ಲಿ ಶ್ರೀಗುರುವು ಏಕೆ ನೆಲೆಸಿದರು? ಅ ಕ್ಷೇತ್ರದ ಹೆಸರೇನು? ಲೆಕ್ಕವಿಲ್ಲದಷ್ಟು ತೀರ್ಥಗಳಿರುವಾಗ ಅವುಗಳನ್ನೆಲ್ಲವನ್ನೂ ಬಿಟ್ಟು ಈ ಗಂಧರ್ವನಗರದಲ್ಲಿ ಏಕೆ ಇದ್ದಾರೆ? ಹೇ ಸ್ವಾಮಿ, ಈ ಸ್ಥಾನ ಮಾಹಾತ್ಮ್ಯೆಯನ್ನು ವಿಸ್ತಾರವಾಗಿ ತಿಳಿಸುವ ಕೃಪೆಮಾಡಿ" ಎಂದು ಕೇಳಿದನು. ಅದಕ್ಕೆ ಸಿದ್ಧಮುನಿ, "ಸಾವಧಾನವಾಗಿ ಕೇಳು. ಒಂದು ಸಲ ದೀಪೋತ್ಸವವು ಬಂತು. ಆಗ ಶ್ರೀಗುರುವು ತಮ್ಮ ಶಿಷ್ಯರನ್ನು ತ್ರಿಸ್ಥಲಿಯಲ್ಲಿ ಸ್ನಾನ ಮಾಡಿರೆಂದು ಉಪದೇಶಿಸಿದರು. ಅದಕ್ಕೆ ಆ ಶಿಷ್ಯರು ಕುಟುಂಬದವರೊಡನೆ ಪ್ರಯಾಗ, ಗಯ, ಕಾಶಿ ಈ ಮೂರು ಸ್ಥಳಗಳಿಗೆ ಹೊರಡಲು ಬೇಕಾದ ಸಾಮಗ್ರಿಗಳನ್ನೂ, ದಾರಿಗೆಂದು ತಿನಿಸುಗಳನ್ನೂ ಸರಿಮಾಡಿಕೊಳ್ಳುತ್ತೇವೆ" ಎಂದರು. ಶ್ರೀಗುರುವು ನಸುನಗುತ್ತಾ, "ನಮ್ಮ ಗ್ರಾಮದ ಸನ್ನಿಧಿಯಲ್ಲೇ ತ್ರಿಸ್ಥಲಿ ಇದೆ" ಎಂದು ಹೇಳಿ ಅವರೊಡನೆ ಸಂಗಮಕ್ಕೆ ಹೋಗಿ, ಆ ಜಗದ್ಗುರುವು ಅಮರಜಾನದಿಯಲ್ಲಿ ಶಿಷ್ಯರೊಡನೆ ಸ್ನಾನ ಮಾಡಿದರು.

ನಂತರ ಶ್ರೀಗುರುವು ಶಿಷ್ಯರಿಗೆ, "ಸಂಗಮ ಮಹಿಮೆ ಅಪಾರವು. ಇಲ್ಲಿನ ಸ್ನಾನದಿಂದ ಪ್ರಯಾಗ ಸ್ನಾನಕ್ಕೆ ಸಮನಾದ ಪುಣ್ಯವು ಲಭಿಸುವುದು. ಷಟ್ಕೂಲ ತೀರ್ಥಗಳಿಗೆಲ್ಲಾ ಅಧಿಕವಾದ ಮಹಿಮೆಯುಳ್ಳದ್ದು. ಭೀಮಾನದಿ ಅಮರಜಾನದಿ ಸಂಗಮವು ಗಂಗಾಯಮುನೆಗಳ ಯೋಗದಂತೆ ಸ್ವಯಂ ತೀರ್ಥರಾಜವು. ಉತ್ತರವಾಗಿ ಪ್ರವಹಿಸುವ ಈ ನದಿ ಇರುವ ಜಾಗವು ಕಾಶಿಗಿಂತ ಅಧಿಕ ಪುಣ್ಯಪ್ರದವು. ಇಲ್ಲಿ ಅಷ್ಟತೀರ್ಥಗಳಿವೆ. ಇದರ ಮಾಹಾತ್ಮ್ಯವು ಉತ್ತಮವಾದುದು" ಎಂದು ಹೇಳಲು, ಭಕ್ತರು ಶ್ರೀಗುರುವಿಗೆ ನಮಸ್ಕರಿಸಿ, "ಈ ಅಮರಜಾನದಿ ಎಲ್ಲಿ ಉತ್ಪನ್ನವಾಯಿತು?" ಎಂದು ಕೇಳಿದರು. "ಅದರ ಉತ್ಪತ್ತಿ ಕಥೆ ಪುರಾಣದಲ್ಲಿ ಜಾಲಂಧರೋಪಾಖ್ಯಾನದಲ್ಲಿ ಇದೆ. ಜಾಲಂಧರನೆಂಬ ನಿಶಾಚರನು ಭೂಮಿಯನ್ನು ಜಯಿಸಿದನು. ಸುರರು ಪರಾಜಿತರಾದರು. ಸ್ವರ್ಗವು ಅಪಹರಿಸಲ್ಪಟ್ಟಿತು. ದೇವದಾನವ ಯುದ್ಧವು ನಡೆಯಿತು. ಅದರಲ್ಲಿ ದೇವತೆಗಳು ಘಾಯಗೊಂಡರು. ಇಂದ್ರನು ಈಶ್ವರನ ಬಳಿಗೆ ಹೋಗಿ ಮೊರೆಯಿಟ್ಟುಕೊಂಡನು. "ಶಂಭೋ. ನಮಗೆ ಯಾವುದಾದರೂ ಉಪಾಯವನ್ನು ತೋರಿಸು. ಯುದ್ಧದಲ್ಲಿ ಏಟು ತಿಂದ ರಾಕ್ಷಸರ ರಕ್ತದ ಬಿಂದುಗಳು ಭೂಮಿಯ ಮೇಲೆ ಬಿದ್ದ ನಂತರ ಬಿಂದುಗಳ ಸಂಖ್ಯೆಯಂತೆ ದೈತ್ಯರು ಮತ್ತೆ ಜನ್ಮಿಸುತ್ತಿದ್ದಾರೆ. ಪರಮೇಶ, ಪಾತಾಳ, ಭೂತಲ, ಸ್ವರ್ಗ ಸಮಸ್ತವನ್ನೂ ದೈತ್ಯರು ವ್ಯಾಪಿಸಿದ್ದಾರೆ. ದೇವತೆಗಳ ಕೂಟಗಳೆಲ್ಲವೂ ದೈತ್ಯರಿಂದ ಹತವಾಯಿತು" ಎಂದು ಇಂದ್ರನು ಪ್ರಾರ್ಥಿಸಲು, ಕ್ರುದ್ಧನಾದ ಪರಮೇಶ್ವರನು ರುದ್ರನಾಗಿ ಅಸುರ ಸಂಹಾರಕ್ಕೆಂದು ಹೊರಟನು. ಇಂದ್ರನು ಶಿವನನ್ನು ನೋಡಿ, "ಸ್ವಾಮಿ, ದೇವತೆಗಳನ್ನು ಪುನರ್ಜೀವಿತರನ್ನಾಗಿ ಮಾಡಲು ಉಪಾಯವನ್ನು ಯೋಚಿಸು" ಎಂದು ಪ್ರಾರ್ಥಿಸಿದನು. ಇಂದ್ರನ ಪ್ರಾರ್ಥನೆಯನ್ನು ಮನ್ನಿಸಿದ ಈಶ್ವರನು ಒಂದು ಅಮೃತ ಘಟವನ್ನು ಇಂದ್ರನ ಕೈಯಲ್ಲಿಟ್ಟನು. ದೇವೇಂದ್ರನು ಮರಣಿಸಿದ್ದ ದೇವತೆಗಳ ಮೇಲೆ ಆ ಕುಂಭದಲ್ಲಿದ್ದ ನೀರನ್ನು ಚೆಲ್ಲಿದನು. ಅಮೃತಜಲ ಸೇವನೆಯಿಂದ ದೇವತೆಗಳೆಲ್ಲರೂ ನಿದ್ರೆಯಿಂದ ಎದ್ದವರಂತೆ ಎದ್ದರು. ಚೆಲ್ಲಿ ಮಿಕ್ಕಿದ್ದ ಜಲವಿದ್ದ ಕುಂಭವನ್ನು ಅಮರೇಶ್ವರನು ತೆಗೆದುಕೊಂಡು ಹೋಗುವಾಗ ಕುಂಭದಿಂದ ಜಾರಿದ ಅಮೃತವು ಭೂಮಿಯ ಮೇಲೆ ಬಿದ್ದಿತು. ಮಹಾಪ್ರವಾಹವಾದ ಆ ಅಮೃತಜಲವೇ ‘ಸಂಜೀವನಿ’ ಎನ್ನುವ ನದಿಯಾಗಿ ಅಮರಜಾ ಎಂದು ಪ್ರಸಿದ್ಧಿಯಾಯಿತು. ಈ ನದಿಯಲ್ಲಿ ಭಕ್ತಿಯಿಂದ ಸ್ನಾನ ಮಾಡುವವರಿಗೆ ಕಾಲಮೃತ್ಯುವೇ ಇಲ್ಲ ಎಂದಮೇಲೆ ಅಪಮೃತ್ಯು ಭಯವು ಹೇಗಾಗುತ್ತದೆ? ಇಲ್ಲಿನ ಸ್ನಾನದಿಂದ ಮಾನವನು ರೋಗಾದಿಗಳಿಲ್ಲದೆ ಶತಾಯುವಾಗಿರುತ್ತಾನೆ. ಬ್ರಹ್ಮಹತ್ಯಾದಿ ಪಾಪಗಳೂ ಕೂಡಾ ಅವನಿಗೆ ನಾಶವಾಗುತ್ತವೆ. ಈ ನದಿ ಭೀಮರಥಿ ನದಿಯೊಡನೆ ಸಂಗಮ ಹೊಂದಿ ಪ್ರಯಾಗದಂತೆ ತೀರ್ಥಸ್ಥಳವಾಯಿತು. ಇದು ತ್ರಿವೇಣಿ ಸಂಗಮವೇ! ವೈಶಾಖ, ಕಾರ್ತಿಕ, ಮಾಘ ಮಾಸಗಳಲ್ಲಿ ಇಲ್ಲಿ ಸ್ನಾನ ಮಾಡುವವರು ಇಹಲೋಕ ಸುಖವನ್ನು ಅನುಭವಿಸಿ ಕೊನೆಯಲ್ಲಿ ಮೋಕ್ಷವನ್ನು ಪಡೆಯುತ್ತಾರೆ. ಯಾವಾಗಲೂ ಸಂಗಮ ಸ್ನಾನವನ್ನು ಮಾಡಬೇಕು. ಇಲ್ಲವಾದರೆ ಸೂರ್ಯ ಚಂದ್ರ ಗ್ರಹಣಗಳ ಕಾಲದಲ್ಲಿ, ಸಂಕ್ರಾಂತಿಯಂದು, ಪರ್ವದಿನಗಳಲ್ಲಿ, ಏಕಾದಶಿಯಂದು ಸ್ನಾನ ಮಾಡುವುದರಿಂದ ಅನಂತ ಪುಣ್ಯವು ಲಭಿಸುವುದು. ಸಾಧ್ಯವಾದರೆ ಸದಾ ಸ್ನಾನ ಮಾಡುವುದು ಅತ್ಯಂತ ದೋಷಹಾರಿ. ಇದು ಸಂಗಮ ಮಾಹಾತ್ಮ್ಯವು. ಇದರ ಎದುರಿಗೆ ಅಶ್ವತ್ಥವೃಕ್ಷವಿದೆ. ಅದು ಮನೋಹರವೆಂದು ಹೆಸರುಳ್ಳ ತೀರ್ಥವು. ಕಲ್ಪದ್ರುಮವಾದ ಅಶ್ವತ್ಥವಿರುವಲ್ಲಿ ಸಿದ್ಧಿಸದೇ ಇರುವ ಕೋರಿಕೆ ಏನಿದೆ? ಅಶ್ವತ್ಥವೇ ಕಲ್ಪದ್ರುಮವು. ಮಾನವನು ತನ್ನ ಕಾಮನೆಗಳನ್ನು ತಪ್ಪದೇ ಪಡೆಯಬಲ್ಲನು. ಅಶ್ವತ್ಥ ಸನ್ನಿಧಿಯಲ್ಲಿ ಇಂತಹ ಮನೋರಥ ತೀರ್ಥವಿದೆ. ಶ್ರೀಗುರುನಾಥನ ವಚನಗಳಂತಹುದೇ ಈ ತೀರ್ಥವು. ನಾನು ಯಾವಾಗಲೂ ಇಲ್ಲೇ ಇರುತ್ತೇನೆ. ಭಕ್ತಿಯಿಂದ ಅರ್ಚಿಸುವವರಿಗೆ ದರ್ಶನವು, ಕಲಿಯುಗದಲ್ಲಾದರೂ, ಲಭಿಸುವುದು. ಕಲ್ಪವೃಕ್ಷವನ್ನು ಅರ್ಚಿಸಿ ಶಿವಾಲಯಕ್ಕೆ ಹೋಗಿ ಸಂಗಮದಲ್ಲಿ ತ್ರ್ಯಂಬಕನ ಎದುರಿಗೆ ಧ್ಯಾನದಿಂದ ಮಂತ್ರವನ್ನು ಜಪಿಸಬೇಕು. ಶ್ರೀಶೈಲದಲ್ಲಿನ ಮಲ್ಲಿಕಾರ್ಜುನನಂತೆ ಸಂಗಮದಲ್ಲಿ ರುದ್ರನು ಇದ್ದಾನೆ. ಮೊದಲು ನಂದಿಗೆ ನಮಸ್ಕರಿಸಿ ನಂತರ ಚಂಡೀಶ್ವರನ ಸ್ಥಾನದಲ್ಲಿ ಸಂಚರಿಸಬೇಕು. ಆ ನಂತರ ಮತ್ತೆ ಸವ್ಯವಾಗಿ ನಂದೀಶ್ವರನ ಸೋಮ ಸೂತ್ರವನ್ನು ಸೇರಬೇಕು. ಸೋಮ ಸೂತ್ರಕ್ಕೆ ಪ್ರದಕ್ಷಿಣೆ ಮಾಡಿ ಮತ್ತೆ ಬಂದು ನಂದಿಗೆ ನಮಸ್ಕರಿಸಿ ಚಂಡೀಶ್ವರನನ್ನು ಸೇರಿ ಸೋಮ ಸೂತ್ರದ ಕಡೆಗೆ ಮತ್ತೆ ಹೋಗಿ ಆ ನಂತರ ಶಿವನಿಗೆ ಪ್ರದಕ್ಷಿಣೆ ಆಚರಿಸಬೇಕು. ಹೀಗೆ ಮೂರುಸಲ ಮಾಡಿ ಶಿವನನ್ನು ನೋಡಿದರೆ ನರನಿಗೆ ಪಾಪ ವಿಮುಕ್ತಿಯಾಗುತ್ತದೆ. ವಾಮಹಸ್ತದಿಂದ ನಂದಿಯ ಪೃಷ್ಠವನ್ನು ಹಿಡಿದುಕೊಂಡು, (ದಕ್ಷಿಣ ಹಸ್ತದ)ಅಂಗುಷ್ಠ ತರ್ಜನಿಗಳನ್ನು ನಂದಿಯ ಕೊಂಬುಗಳ ಮೇಲಿಟ್ಟು ಅವೆರಡರ ಮಧ್ಯದಿಂದ ಶಿವದರ್ಶನ ಮಾಡುವವನ ಗೃಹದಲ್ಲಿ ದೇವೇಂದ್ರನಿಗೆ ಸಮಾನವಾದ ಸಂಪತ್ತು ಪುತ್ರಪೌತ್ರಾಭಿವೃದ್ಧಿ ಉಂಟಾಗುವುದು. ಮಾನವರಿಗೆ ಸಂಗಮೇಶ್ವರನ ಅರ್ಚನೆಯಿಂದ ಉಂಟಾಗುವ ಫಲಿತವಿಂತಹುದು.

ಸಂಗಮಕ್ಕೆದುರಾಗಿ ನಾಗೇಶವೆನ್ನುವ ಗ್ರಾಮಕ್ಕೆ ಅರ್ಧಕ್ರೋಶ ದೂರದಲ್ಲಿ ಮಹಾತೀರ್ಥವಿದೆ. ಅದು ಸಾಕ್ಷಾತ್ತು ವಾರಣಾಸಿಯೇ! ಹಿಂದೆ ಭಾರದ್ವಾಜ ಗೋತ್ರದವನೊಬ್ಬನಿದ್ದನು. ಅವನು ಸಂಸಾರ ವಿರಕ್ತನು. ನಿತ್ಯಾನುಷ್ಠಾನ ನಿರತನಾಗಿ ಶಿವಧ್ಯಾನವನ್ನು ಮಾಡುತ್ತಿದ್ದನು. ಆ ಬ್ರಾಹ್ಮಣನಿಗೆ ಚಂದ್ರಮೌಳಿ ಸದಾ ಪ್ರತ್ಯಕ್ಷವಾಗುತ್ತಿದ್ದನು. ಅವನು ಶಿವದರ್ಶನದಿಂದಲೇ ಆನಂದವನ್ನು ಹೊಂದಿ ತನ್ನ ದೇಹವನ್ನೂ ಮರೆತು ಓಡಾಡುತ್ತಿದ್ದನು. ಜನರು ಅವನನ್ನು ಪಿಶಾಚಿಯೆನ್ನುವ ಭ್ರಾಂತಿಯಿಂದ ನಿಂದಿಸುತ್ತಿದ್ದರು. ಅವನಿಗೆ ಇಬ್ಬರು ತಮ್ಮಂದಿರಿದ್ದರು. ಒಬ್ಬನ ಹೆಸರು ಈಶ್ವರ. ಇನ್ನೊಬ್ಬನ ಹೆಸರು ಪಾಂಡುರಂಗ. ಅವರಿಬ್ಬರೂ ಒಂದುಸಲ ಕಾಶಿಗೆ ಹೋಗಬೇಕೆಂದು ಎಲ್ಲವನ್ನು ಸಿದ್ಧ ಮಾಡಿಕೊಂಡರು. ಅಣ್ಣನನ್ನು ಅವರಿಬ್ಬರೂ, "ಅಯ್ಯಾ ನೀನೂ ಬರುತ್ತೀಯಾ?" ಎಂದು ಕೇಳಿದರು. ಅವನು, "ಕಾಶಿ ಇಲ್ಲಿಯೇ ನನ್ನ ಸನ್ನಿಧಿಯಲ್ಲೇ ಇದೆ. ವಿಶ್ವೇಶ್ವರನು ನನ್ನ ಸಮೀಪದಲ್ಲೇ ಇದ್ದಾನೆ. ನಿಮಗೂ ತೋರಿಸುತ್ತೇನೆ" ಎಂದು ತನ್ನ ಬಂಧುಗಳಿಗೆ ಹೇಳಿದನು. ಅವರು ಆಶ್ಚರ್ಯಪಟ್ಟು, "ಹಾಗಿದ್ದರೆ ನಮಗೆ ಇಲ್ಲಿಯೇ ವಿಶ್ವೇಶ್ವರನನ್ನು ತೋರಿಸು. ನೀನು ತೋರಿಸುವುದೇ ಆದರೆ ನಮಗೆ ಪ್ರಯಾಸವೇ ಇರುವುದಿಲ್ಲ" ಎಂದರು. ಆ ಬ್ರಾಹ್ಮಣ ಸ್ನಾನ ಮಾಡಿ ಧ್ಯಾನ ನಿಷ್ಠನಾಗಿ ಶಿವನನ್ನು ಧ್ಯಾನಿಸಿದನು. ತಕ್ಷಣವೇ ಶಿವನು ಪ್ರತ್ಯಕ್ಷನಾದನು. ಆ ಬ್ರಾಹ್ಮಣ, "ಹೇ ಪರಮೇಶ, ಇಲ್ಲಿಯೇ ನಮಗೆ ವಿಶ್ವೇಶ್ವರನ ದರ್ಶನ ಆಗಬೇಕು" ಎಂದು ಶಿವನ ಪಾದಗಳನ್ನು ಹಿಡಿದನು. ಈಶ್ವರನು ಪ್ರಸನ್ನನಾದನು. ಅಲ್ಲಿಯೇ ಜ್ಞಾನಕುಂಡ, ಮಣಿಕರ್ಣಿಕೆ, ಕಾಶಿ ಎಲ್ಲವೂ ಕಾಣಬಂದವು. ಜ್ಞಾನಕುಂಡದ ಮಧ್ಯದಿಂದ ವಿಶ್ವೇಶ್ವರನ ಮೂರ್ತಿ ಅಲ್ಲಿಯೇ ಆವಿರ್ಭವಿಸಿತು. ಉತ್ತರ ವಾಹಿನಿಯಾದ ಗಂಗಾಸ್ಥಾನದಲ್ಲಿ ನೆಲಸಿರುವ ಭೀಮಾನದಿ ತಟದಲ್ಲಿ ಕಾಶಿ ಕಂಡು ಬಂದಿತು. ಕಾಶಿಪುರದಲ್ಲಿ ಕಂಡು ಬರುವ ಚಿಹ್ನೆಗಳೆಲ್ಲವೂ ಅಲ್ಲಿ ಕಾಣ ಬಂದವು. ಹಾಗೆ ಭೀಮಾ ಅಮರಜಾ ನದಿಗಳ ಸಂಗಮದಲ್ಲಿ ಉತ್ತಮವಾದ ಕಾಶಿ ತೀರ್ಥವು ಏರ್ಪಟ್ಟಿತು. ಅದರಲ್ಲಿ ಸ್ನಾನಮಾಡಿ ಅವನು ಪಿಶಾಚಿಯಲ್ಲವೆಂದೂ ಪಂಡಿತನೆಂದೂ ತಿಳಿದರು. ಆ ಬ್ರಾಹ್ಮಣ, ಬಂಧುಗಳಿಗೆ, "ಈ ಕಾಶಿ ತೀರ್ಥವನ್ನು ವಿಶ್ವೇಶ್ವರನು ನನಗೆ ಕೊಟ್ಟನು. ಅಯ್ಯಾ ಬಂಧುಗಳಿರಾ, ನಾನು ಭ್ರಾಂತನೇ! ನನ್ನ ಹೆಸರು ಗೋಸ್ವಾಮಿ" ಎಂದು ಹೇಳಿ, ಸೋದರರೊಡನೆ ಕಲೆತು ಸದಾ ಈಶ್ವರಾಧನೆ ಮಾಡುತ್ತಾ, "ಪ್ರತಿವರ್ಷವೂ ನೀವಿಬ್ಬರೂ ಇಲ್ಲಿಯೇ ಕಾಶಿಯಾತ್ರೆಯನ್ನು ಮಾಡಿಕೊಳ್ಳಿ" ಎಂದು ಆಣತಿಯಿತ್ತನು. ಹೀಗೆ ಶ್ರೀಗುರುವಿನ ಮಾತುಗಳನ್ನು ಕೇಳಿ ಎಲ್ಲರೂ ಆ ಕಾಶಿತೀರ್ಥದಲ್ಲಿ ಸ್ನಾನಾದಿಗಳನ್ನು ಮಾಡಿದರು. ನಾಮಧಾರಕ, ಭಕ್ತರೊಡನೆ ಮುಂದಕ್ಕೆ ನಡೆಯುತ್ತಾ, ಶ್ರೀಗುರುವು, ಪಾಪನಾಶಿನಿಯಾದ ಆ ತೀರ್ಥವನ್ನು ಅವರಿಗೆ ತೋರಿಸಿದರು. ಆ ತೀರ್ಥವು ಸ್ನಾನ ಮಾತ್ರದಿಂದಲೇ ಪಾಪಗಳೆನ್ನುವ ಪರ್ವತಗಳನ್ನು, ಅಗ್ನಿ ತೃಣವನ್ನು ದಹಿಸಿದಂತೆ, ದಹಿಸಿಬಿಡುವುದು.

ಅಷ್ಟರಲ್ಲಿ ಶ್ರೀಗುರುವಿನ ಪೂರ್ವಾಶ್ರಮದ ತಂಗಿ ರತ್ನ ಅಲ್ಲಿಗೆ ಬರಲು ಶ್ರೀಗುರುವು ಅವಳನ್ನು ಕರೆದು, "ಪೂರ್ವಾಶ್ರಮ ಸೋದರಿ, ನಿನ್ನ ಪೂರ್ವೋಕ್ತವಾದ ಪಾಪಗಳನ್ನು ನೆನಪಿರುವಷ್ಟು ಹೇಳು" ಎಂದರು. ಅವಳು ಶ್ರೀಗುರುವಿನ ಮಾತುಗಳನ್ನು ಕೇಳಿ, ಪ್ರಣಾಮ ಮಾಡಿ, "ಸ್ವಾಮಿ, ನಾನು ಸ್ತ್ರೀಯು. ಜ್ಞಾನಹೀನಳು. ನೀವು ಜ್ಞಾನದೀಪಕರು. ವಿಶ್ವವ್ಯಾಪಕರು. ಜಗದಾತ್ಮರು. ಹೇ ಸರ್ವಜ್ಞ, ನಿಮಗೆ ಸರ್ವವೂ ತಿಳಿದಿದೆ. ವಿಸ್ತಾರವಾಗಿ ಹೇಳಿ" ಎಂದು ಹೇಳಲು, ಶ್ರೀಗುರುವು ಅವಳಿಗೆ ಹೀಗೆ ಬೋಧಿಸಿದರು. "ಅಮ್ಮಾ ರತ್ನ, ನೀನು ಐದು ಮರಿಗಳನ್ನು ಕೊಂದಿದ್ದೀಯೆ. ಒಂದು ಬೆಕ್ಕು ಮಡಕೆಯಲ್ಲಿ ತನ್ನ ಮರಿಗಳನ್ನು ಇಟ್ಟಿತ್ತು. ಅದನ್ನು ನೀನು ನೋಡದೆ ಆ ಮಡಕೆಯೊಳಕ್ಕೆ ನೀರು ಸುರಿದು ಅದನ್ನು ಬೆಂಕಿಯ ಮೇಲಿಟ್ಟು ಆ ಐದು ಮರಿಗಳನ್ನೂ ಸಾಯಿಸಿದೆ. ಇನ್ನೊಂದು ಪಾಪ ನೀನು ಮಾಡಿದ್ದುದನ್ನು ನಾನು ಅಗಲೇ ಹೇಳಿದ್ದೇನೆ" ಎಂದು ಶ್ರೀಗುರುವು ಹೇಳುತ್ತಿರಲು ಅವಳ ಶರೀರವೆಲ್ಲವೂ ಕುಷ್ಠು ರೋಗದಿಂದ ವ್ಯಾಪ್ತವಾದುದನ್ನು ಅವಳು ನೋಡಿದಳು. "ಸ್ವಾಮಿ, ನನ್ನಲ್ಲಿ ದಯೆತೋರಿಸಿ. ನೀವು ದಯಾಸಮುದ್ರರು. ಪಾಪಮೋಕ್ಷಕ್ಕೆಂದು ನಿಮ್ಮನ್ನು ದರ್ಶಿಸಲು ಬಂದಿದ್ದೇನೆ" ಎಂದು ಪ್ರಾರ್ಥಿಸಿಕೊಂಡಳು.

ಅದಕ್ಕೆ ಶ್ರೀಗುರುವು, "ರತ್ನ, ನೀನು ಈ ಪಾಪರಾಶಿಯನ್ನು ಆರ್ಜಿಸಿದ್ದೀಯೆ. ಇದನ್ನು ನೀನು ಮುಂದಿನ ಜನ್ಮದಲ್ಲಿ ಅನುಭವಿಸುತ್ತೀಯೋ ಇಲ್ಲವೇ ಈ ಜನ್ಮದಲ್ಲಿಯೇ ಅನುಭವಿಸುತ್ತೀಯೋ ಹೇಳು" ಎಂದರು. ಅದಕ್ಕೆ ರತ್ನ, "ಹೇ ಸ್ವಾಮಿ, ನಾನು ಬಹಳ ಜನ್ಮಗಳು ಕಷ್ಟಪಟ್ಟು ಈಗ ಮುಕ್ತಿಗೋಸ್ಕರ ನಿಮ್ಮ ಬಳಿಗೆ ಬಂದಿದ್ದೇನೆ. ಇನ್ನೂ ಲಕ್ಷಾದಿ ಜನ್ಮಗಳು ಬೇಡ. ನಾನು ನಿಮ್ಮ ಚರಣಗಳನ್ನು ಆಶ್ರಯಿಸಿದ್ದೇನೆ. ಈ ಜನ್ಮದಲ್ಲೇ ಪಾಪರಹಿತಳಾಗುವುದಕ್ಕೆ ಪ್ರಯತ್ನಪಡುತ್ತೇನೆ" ಎಂದು ಬಿನ್ನವಿಸಿಕೊಳ್ಳಲು, ಅವಳ ಮಾತುಗಳನ್ನು ಕೇಳಿದ ಶ್ರೀಗುರುವು ಅವಳಿಗೆ, "ಅಮ್ಮಾ ಕಲ್ಯಾಣಿ, ಪಾಪನಾಶನ ತೀರ್ಥದಲ್ಲಿ ಸ್ನಾನ ಮಾಡಿದರೆ ನಿನಗೆ ತ್ವರೆಯಾಗಿ ಕುಷ್ಠ ನಿವಾರಣೆಯಾಗುತ್ತದೆ. ನೀನು ಅಲ್ಲಿ ನಿತ್ಯವೂ ಸ್ನಾನ ಮಾಡು" ಎಂದು ಉಪದೇಶ ಮಾಡಿದರು.

ನಾಮಧಾರಕ, ಆ ರತ್ನಾವತಿ ಸ್ನಾನ ಮಾಡಿದ ತಕ್ಷಣವೇ ಕುಷ್ಠು ರೋಗವು ಶಾಂತಿಗೊಂಡ ವಿಶೇಷವನ್ನು ಈ ಸಿದ್ಧಮುನಿ ಕಣ್ಣಾರೆ ನೋಡಿದನು. ಪಾಪವಿನಾಶವೆನ್ನುವ ಈ ತೀರ್ಥದಲ್ಲಿ ಸ್ನಾನ ಮಾಡುವವರಿಗೆ ಸಪ್ತಜನ್ಮಗಳಲ್ಲಿ ಮಾಡಿದ ಪಾಪಗಳು ನಾಶವಾಗುವುವು. ಆ ರತ್ನಾವತಿ ಆ ತೀರ್ಥ ಸನ್ನಿಧಿಯಲ್ಲೇ ನೆಲೆಸಿದಳು. ಶ್ರೀಗುರುವು ಕೋಟಿ ತೀರ್ಥವನ್ನು ತೋರಿಸಿದರು. ಈ ಜಂಬೂದ್ವೀಪದಲ್ಲಿರುವ ತೀರ್ಥಗಳೆಲ್ಲವೂ ಈ ಕೋಟಿ ತೀರ್ಥದಲ್ಲಿ ನೆಲೆಸಿವೆ. ಗ್ರಹಣಗಳು, ಪರ್ವದಿನಗಳು, ಸೂರ್ಯ ಸಂಕ್ರಾಂತಿ, ಪಾಡ್ಯಮಿಗಳಲ್ಲಿ ಇಲ್ಲಿ ಸ್ನಾನ ಮಾಡಬೇಕು. ಕೋಟಿ ಹಸುಗಳು ದಾನ ಮಾಡಿದ ಫಲ ಇಲ್ಲಿ ಸ್ನಾನ ಮಾಡುವುದರಿಂದ ಲಭಿಸುತ್ತದೆ. ಇಲ್ಲಿ ಮಾಡಿದ ಒಂದೊಂದು ದಾನವೂ ಕೋಟಿ ಪುಣ್ಯ ಫಲವನ್ನು ನೀಡುತ್ತದೆ. ಇಂತಹುದು ಈ ತೀರ್ಥದ ಮಾಹಾತ್ಮ್ಯೆ. ಇದರ ಮುಂದಕ್ಕೆ ರುದ್ರಪಾದವೆನ್ನುವ ಉತ್ತಮವಾದ ತೀರ್ಥವಿದೆ. ಅದು ಗಯಾ ತೀರ್ಥಕ್ಕೆ ಸಮಾನವು. ರುದ್ರನ ಪಾದಪೂಜೆಯಿಂದ ಕೋಟಿ ಜನ್ಮಗಳಲ್ಲಿ ಆರ್ಜಿಸಿದ ಪಾಪವು ನಶಿಸುವುದು. ಅದಕ್ಕೆ ಮುಂದೆ ಚಕ್ರತೀರ್ಥವಿದೆ. ಇಲ್ಲಿ ಕೇಶವನು ನೆಲೆಸಿದ್ದಾನೆ. ಇಲ್ಲಿ ಅಸ್ಥಿ ಚಕ್ರಾಂಕನವಾದರೆ ದೊರೆಯುವ ಪುಣ್ಯ ದ್ವಾರಕೆಯಲ್ಲಿ ದೊರೆಯುವುದಕ್ಕಿಂತ ನಾಲ್ಕರಷ್ಟು ಹೆಚ್ಚು" ಎಂದು ಹೇಳಿದ ಶ್ರೀಗುರುವಿನ ಉಪದೇಶವನ್ನು ಕೇಳಿದ ಜನರು ಸ್ನಾನ ಮಾಡಿ ದಾನಗಳನ್ನು ಮಾಡಿದರು. ಆ ನಂತರ ಮನ್ಮಥತೀರ್ಥವು ಇದೆ. ಅಲ್ಲಿ ಕಲ್ಲೇಶ್ವರನು ಇದ್ದಾನೆ. ಗೋಕರ್ಣದಲ್ಲಿರುವ ಮಹಾಬಲೇಶ್ವರನಿಗೆ ಸಮಾನನು ಈ ಕಲ್ಲೇಶ್ವರನು. ಮನ್ಮಥತೀರ್ಥದಲ್ಲಿ ಸ್ನಾನ ಮಾಡಿ ಕಲ್ಲೇಶ್ವರನನ್ನು ಅರ್ಚಿಸಿದವನಿಗೆ ಅಷ್ಟೈಶ್ವರ್ಯ ಲಾಭವಾಗುವುದು.

ಶ್ರಾವಣ ಮಾಸದಲ್ಲಿ ಅಖಂಡಾಭಿಷೇಕವನ್ನು, ಕಾರ್ತಿಕ ಮಾಸದಲ್ಲಿ ದೀಪೋತ್ಸವವನ್ನು ಮಾಡಿದರೆ ಅಕ್ಷಯವಾದ ಫಲವನ್ನು ಈ ತೀರ್ಥವು ಕೊಡುವುದು" ಎಂದು ಶ್ರೀಗುರುವು ಅಷ್ಟತೀರ್ಥಗಳ ಮಾಹಾತ್ಮ್ಯೆಯನ್ನು ಉಪದೇಶಿಸಲು, ಭಕ್ತರು, "ಹೇ ಈಶ್ವರ, ನಿಮ್ಮ ಕೃಪೆಯಿಂದ ಇಂದು ನಾವು ಪವಿತ್ರರಾದೆವು" ಎಂದು ಅಲ್ಲಿ ದಾನಾದಿಗಳನ್ನು ಮಾಡಿದರು. ಹೀಗೆ ಶ್ರೀಗುರುವು ಅಷ್ಟತೀರ್ಥ ಮಾಹಾತ್ಮ್ಯೆಯನ್ನು ಉಪದೇಶಿಸಿ ಮಠವನ್ನು ಸೇರಿಕೊಂಡರು. ಅಯ್ಯಾ ನಾಮಧಾರಕ, ಅದರಿಂದಲೇ ಶ್ರೀ ನೃಸಿಂಹಸರಸ್ವತಿ ದೋಷಹರವಾದ ಸುರತೀರ್ಥಗಳಿಂದ ಕೂಡಿದ ಗಂಧರ್ವನಗರದಲ್ಲಿ ನಿವಾಸಮಾಡಿದರು" ಎಂದು ಸಿದ್ಧಮುನಿಯು ಹೇಳಿದರು. 

ಇಲ್ಲಿಗೆ ನಲವತ್ತೊಂಭತ್ತನೆಯ ಅಧ್ಯಾಯ ಮುಗಿಯಿತು.

No comments:

Post a Comment