Sunday, September 22, 2013

||ಶ್ರೀಗುರುಚರಿತ್ರೆ - ನಲವತ್ತೊಂದನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ನಾಮಧಾರಕನು, "ಸ್ವಾಮಿ, ಸಿದ್ಧಪುರುಷ, ಜಯವಾಗಲಿ. ಜಯವಾಗಲಿ. ನೀವು ಮಹಾಪುರುಷರು. ಶ್ರೀಗುರುವಿನ ಚರಿತ್ರೆಯನ್ನು ನನಗೆ ತಿಳಿಸಿದ್ದೀರಿ. ಅದರಿಂದ ನಾನು ಧನ್ಯನಾದೆ. ನನ್ನ ಜ್ಞಾನವು ಪ್ರಕಾಶಗೊಂಡಿತು. ಆನಂದಬ್ರಹ್ಮಕಲ್ಪವಾದ ಗುರುಸ್ಮೃತಿಯನ್ನು ನೀವು ಪ್ರಕಾಶಗೊಳಿಸಿದಿರಿ. ಹಿಂದೆ ನಮ್ಮ ವಂಶಸ್ಥನು ಶ್ರೀಗುರುವನ್ನು ಹೇಗೆ ಪೂಜಿಸಿದರು? ನೀವು ಸಿದ್ಧರು. ಮಹಾಜ್ಞಾನಿ. ಶ್ರೀಗುರುವಿನ ಸನ್ನಿಧಿಯಲ್ಲೇ ಸದಾ ನಿವಸಿಸಿದ್ದೀರಿ. ಅ ನನ್ನ ಪೂರ್ವೀಕನು ಶ್ರೀಗುರುವಿಗೆ ಹೇಗೆ ಶಿಷ್ಯನಾದನು ಎಂಬುದನ್ನು ಹೇಳಿ." ಎಂದು ಕೋರಿದನು. ಅದನ್ನು ಕೇಳಿದ ಸಿದ್ಧಮುನಿಯು ಹೇಳಲು ಆರಂಭಮಾಡಿ, " ಅಯ್ಯಾ ಶಿಷ್ಯ, ನಾಮಧಾರಕ, ಕೇಳು. ನಿನ್ನ ಪೂರ್ವಜನು ಗೋದಾವರಿ ತೀರದಲ್ಲಿ ಶ್ರೀಗುರುವಿನ ಸನ್ನಿಧಿಯನ್ನು ಸೇರಿ ಪೂಜಿಸಿದನು. ಆ ಕಥೆಯನ್ನೇ ಈಗ ಹೇಳುತ್ತೇನೆ. 

ಸಾಯಂದೇವನೆಂಬ ಹೆಸರುಳ್ಳ ಒಬ್ಬನು ಶ್ರೀಗುರುವನ್ನು ಅರ್ಚಿಸಿದನು. ಅಯ್ಯಾ, ದ್ವಿಜ, ಶ್ರೀಗುರುವಿಗೆ ನಾವು ಶಿಶ್ಯರೆಲ್ಲರಲ್ಲೂ ಅವನ ಮೇಲೆ ಹೆಚ್ಚು ಪ್ರೀತಿಯಿತ್ತು. ನಂತರ ಶ್ರೀಗುರುವು ದಕ್ಷಿಣಭಾರತದಿಂದ ಗಂಧರ್ವನಗರವನ್ನು ಸೇರಿದರು. ಶ್ರೀಗುರುವಿನ ಕೀರ್ತಿ ಕೇಳಿ ಅವರ ದರ್ಶನಾರ್ಥಿಗಳಾಗಿ ಬಂದವರು ಪೂರ್ಣಕಾಮರಾಗುತ್ತಿದ್ದಾರೆ. ಹೀಗೆ ಎಲ್ಲಕಡೆಯಲ್ಲೂ ವ್ಯಾಪಿಸಿದ ಕೀರ್ತಿಯಿಂದ ಶ್ರೀ ನೃಸಿಂಹ ಸರಸ್ವತಿಯವರು ಭಕ್ತವತ್ಸಲರಾಗಿ ಗಂಧರ್ವನಗರದಲ್ಲಿ ಇದ್ದಾರೆನ್ನುವ ವಾರ್ತೆ ಹರಡಿತು. ನಿನ ಪೂರ್ವಜನಾದ ಸಾಯಂದೇವನೆಂಬುವನು ಶ್ರೀಗುರು ಕೀರ್ತಿ ಕೇಳಿ ಆನಂದಭರಿತನಾಗಿ ಭಕ್ತಿಯಿಂದ ಕೂಡಿ ಗಂಧರ್ವನಗರಕ್ಕೆ ಸಾಷ್ಟಾಂಗ ನಮಸ್ಕಾರಮಾಡುತ್ತ ಬಂದನು. ಸಾಕ್ಷಾತು ಪರಬ್ರಹ್ಮನೇ ಆದ ಶ್ರೀಗುರುವನ್ನು ಅವನು ಬಂದು ದರ್ಶಿಸಿದನು. ಆ ಸಾಯಂದೇವನು ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟನು. ಶ್ರೀಗುರು ಪಾದಧೂಳಿಯನ್ನು ತನ್ನ ಕೂದಲಿನಿಂದ ಒರೆಸಿದನು. ಎರಡೂ ಕೈ ಜೋಡಿಸಿ ಏಕಾಗ್ರಮನಸ್ಸಿನಿಂದ ಅವನು ಶ್ರೀಗುರುವನ್ನು ಸ್ತುತಿಸಿದನು.

"ಹೇ ಸ್ವಾಮಿ, ಶ್ರೀಗುರುದೇವ, ನೀವೊಬ್ಬರೇ! ತ್ರಿಮೂರ್ತಿಸ್ವರೂಪರು. ನನ್ನ ಜನ್ಮ ಧನ್ಯವಾಯಿತು. ನನ್ನ ಪಿತೃಗಳು ಕೃತಾರ್ಥರಾದರು. ನಿಮ್ಮ ಪಾದಗಳನ್ನು ಗ್ರಹಿಸಿದ್ದರಿಂದ ನಾನು ಕೋಟಿ ಜನ್ಮಗಳಲ್ಲಿ ಮಾಡಿದ್ದ ಪಾಪಗಳೆಲ್ಲವೂ ನಷ್ಟವಾದವು. ಹೇ ಪರಮಾತ್ಮ, ಶ್ರೀ ನೃಸಿಂಹ ಸರಸ್ವತಿ, ಹೇ ಸ್ವಾಮಿ, ನೀವು ಭಕ್ತವತ್ಸಲರು. ನಿಮ್ಮ ಶ್ರೀಚರಣಗಳು ಎಲ್ಲಿರುತ್ತದೋ ಅಲ್ಲಿ ಕೋಟಿಗಟ್ಟಳೆ ತೀರ್ಥಗಳು ಇರುತ್ತವೆ. ಶ್ರುತಿಯು, "ಚರಣಂ ಪವಿತ್ರಂ ವಿತತಂ---" ಎನ್ನುವ ಮಂತ್ರವನ್ನು ಹೇಳಿದೆ. ನಿನ್ನ ಸ್ವರೂಪವು ಸಾಕ್ಷಾತ್ತು ತ್ರಿಮೂರ್ತ್ಯಾತ್ಮಕವೇ! ನೀವೇ ಬ್ರಹ್ಮದೇವನು. ಸುಧಾಪೂರ್ಣ ಕಮಂಡಲವನ್ನು ಕೈಯಲ್ಲಿ ಹಿಡಿದಿದ್ದೀರಿ. ಅದರಲ್ಲಿನ ಅಮೃತ ಸ್ಪರ್ಶದಿಂದ ಮೃತನು ಜೀವಿಸಲ್ಪಡುತ್ತಿದ್ದಾನೆ. ಶ್ರೀ ಮಹಾವಿಷ್ಣುವು ನೀವೇ. ಶರಣು ಎಂದವರನ್ನು ರಕ್ಷಿಸುತ್ತೀರಿ. ಭಸ್ಮ ರುದ್ರಾಕ್ಷ ವ್ಯಾಘ್ರಚರ್ಮಗಳನ್ನು ಧರಿಸಿದ ಮೂರು ಕಣ್ಣುಗಳುಳ್ಳ ಶಿವನೂ ನೀವೇ! ಕೄರದೃಷ್ಟಿಯಿಂದ ನೀವು ಪಾಪಗಳನ್ನು ದಹಿಸುತ್ತೀರಿ. ಅಮೃತ ನೇತ್ರಗಳಿಂದ ಜೀವಿಸುವಂತೆ ಮಾಡುತ್ತೀರಿ. ಭಕ್ತಜನರಿಗೆ ನೀವು ಚತುರ್ವಿಧಪುರುಷಾರ್ಥಗಳನ್ನು ಅನುಗ್ರಹಿಸುತ್ತೀರಿ. ಹೇ ನೃಸಿಂಹ, ಶ್ರೀಜಗದ್ಗುರು, ನೀವು ಭವರೋಗಗಳನ್ನು ಹರಿಸುವ ರುದ್ರನು. ನೀವೇ ಪೀತಾಂಬರಧಾರಿಯಾದ ವಿಷ್ಣುವು. ಕ್ಷಮ ಶಾಂತಿ ಮುಂತಾದವು ನಿಮ್ಮ ಭೂಷಣಗಳು. ನಿಮ್ಮ ಪಾದಗಳಲ್ಲಿಯೇ ಸರ್ವ ತೀರ್ಥಗಳೂ ಇವೆ. ಒಣಗಿಹೋಗಿದ್ದ ಕಾಷ್ಠವನ್ನು ಚಿಗುರುವಂತೆ ಮಾಡಿದಿರಿ. ಗೊಡ್ಡೆಮ್ಮೆ ಹಾಲುಕರೆಯುವಂತೆ ಮಾಡಿದಿರಿ. ಬಂಜೆಗೆ ಕನ್ಯೆ ಪುತ್ರರನ್ನು ಕೊಟ್ಟಿರಿ. ನಿಮ್ಮ ಹತ್ತಿರ ಅನ್ನಪೂರ್ಣೆ ಇದ್ದಾಳೆ. ಶ್ರೀಗುರು, ವಿಷ್ಣುಸ್ವರೂಪವನ್ನು ಜ್ಞಾಪಕಕ್ಕೆ ಬರುವಂತೆ ಮಾಡಲು ನೀವು ತ್ರಿವಿಕ್ರಮನೆನ್ನುವ ಮುನಿಗೆ ವಿಶ್ವರೂಪವನ್ನು ಪ್ರದರ್ಶಿಸಿದಿರಿ. ಅಂತ್ಯಜನ ಮುಖದಿಂದ ವೇದಗಳನ್ನು ಹೇಳಿಸಿದ ಮಹಿಮೆ ನಿಮ್ಮದು. ನೀವು ತ್ರಿಮೂರ್ತಿಯೇ!"

ಹೀಗೆ ಶ್ರೀಗುರುವನ್ನು ಸ್ತುತಿಸಿ ಸಾಯಂದೇವನು ಅತಿ ಭಕ್ತಿಯಿಂದ ನವರಸಪೂರ್ಣವಾದ ಸದ್ಗುರು ಸ್ತುತಿಯನ್ನು ರಚಿಸಿದನು. ಶ್ರೀಗ್ರುವು ಅದರಿಂದ ಸಂತುಷ್ಟನಾಗಿ ಅವನನ್ನು ಆಶೀರ್ವದಿಸಿ, ಆ ದಯಾನಿಧಿಯು, "ನೀನೇ ನನ್ನ ಪರಮಭಕ್ತನೆಂದು." ಎಂದು ಅವನ ತಲೆಯಮೇಲೆ ಅಭಯಹಸ್ತವನ್ನು ಇಟ್ಟರು. "ನಿನ್ನ ಸ್ತೋತ್ರದಿಂದ ಸಂತುಷ್ಟನಾಗಿದ್ದೇನೆ. ನಿನಗೆ ವರವನ್ನು ಕೊಡುತ್ತಿದ್ದೇನೆ. ನಿನ್ನ ವಂಶದವರೂ ನನ್ನನ್ನು ಪೂಜಿಸುತ್ತಾರೆ." ಎಂದು ಶ್ರ್ರೀಗುರುವು ಅವನಿಗೆ ವರವನ್ನು ನೀಡಿದರು. ಮತ್ತೆ ಶ್ರೀಗುರುವು ಅವನ ತಲೆಯಮೇಲೆ ಹಸ್ತವನ್ನಿಟ್ಟು, "ನೀನು ನನ್ನ ಪ್ರಿಯಭಕ್ತನು. ಸಂಗಮಸ್ನಾನ ಮಾಡಿ ಅಶ್ವತ್ಥವೃಕ್ಷವನ್ನು ಆದರದಿಂದ ಪೂಜಿಸಿಕೊಂಡು ಮಠದಲ್ಲಿ ಊಟಮಾಡಲು ತ್ವರೆಯಾಗಿ ಬಾ." ಎಂದು ಸಾಯಂದೇವನಿಗೆ ಆಜ್ಞಾಪಿಸಿದರು. ಅವನು ಹಾಗೆಯೇ ಸ್ನಾನ ಮಾಡಿ ಬಂದು, ಸದ್ಗುರುವನ್ನು ಷೋಡಶೋಪಚಾರಗಳಿಂದ, ಭಕ್ತಿಪೂರ್ಣನಾಗಿ ಪೂಜಿಸಿ, ಪಕ್ವಾನ್ನಗಳು, ಷಡ್ರಸಗಳಿಂದ ಕೂಡಿದ ಭಿಕ್ಷೆಯನ್ನು ಶ್ರೀಗುರುವು ಭುಜಿಸುವಂತೆ ಮಾಡಿದನು. ನಂತರ ಶ್ರೀಗುರುವು ಸಾಯಂದೇವನನ್ನು ತಮ್ಮ ಸನ್ನಿಧಿಯಲ್ಲಿ ಊಟಮಾಡಿಸಿದರು. ಶಿಷ್ಯರೆಲ್ಲರ ಸಹಿತನಾಗಿ ಸಂತೋಷದಿಂದ ಕುಳಿತ ಶ್ರೀಗುರುವು, ಸಾಯಂದೇವನನ್ನು ಕರೆದು, "ಸಾಯಂದೇವ ನೀನು ಯಾವ ದೇಶದವನು? ನೀನು ಏನು ಮಾಡುತ್ತಿದ್ದೀಯೆ? ನಿನ್ನ ಹೆಂಡತಿ ಮಕ್ಕಳು ಎಲ್ಲಿದ್ದಾರೆ? ನೀವೆಲ್ಲರೂ ಕ್ಷೇಮವೇ?" ಎಂದು ಪರಮಕೃಪೆಯಿಂದ ಕೇಳಿದರು. ಅದಕ್ಕೆ ಸಾಯಂದೇವನು, "ಸ್ವಾಮಿ, ಸರ್ವಜ್ಞ, ಉತ್ತರ ಕಂಚಿ ನನ್ನ ನಿವಾಸವು. ಹೇ ದಯಾನಿಧಿ, ನನ್ನ ಮಕ್ಕಳು, ಬಂಧುಗಳು ಎಲ್ಲರೂ ಅಲ್ಲೇ ಇದ್ದಾರೆ. ಎಲ್ಲರೂ ಕ್ಷೇಮವೇ. ಹೇ ಭಗವನ್, ಇಲ್ಲಿಯೇ ಇರುತ್ತಾ, ಭಕ್ತಿಯಿಂದ ನಿಮ್ಮ ಚರಣ ಸೇವೆ ಮಾಡಿಕೊಂಡಿರಬೇಕೆಂದು ಎಂದು ನನ್ನ ಅಭಿಲಾಷೆಯು. ಹೇ ದೇವ, ನಿಮ್ಮ ದಾಸ್ಯವನ್ನು ಮಾಡುವ ಅದೃಷ್ಟವನ್ನು ನನಗೆ ಕೊಡು." ಎಂದು ಹೇಳಿದನು. ಅದಕ್ಕೆ ಶ್ರೀಗುರುವು ನಸುನಗುತ್ತಾ ಹೇಳಿದರು.

"ಅಯ್ಯಾ, ನನ್ನ ಸೇವೆಯು ಕಠಿಣವು. ನನ್ನ ನಿವಾಸ ಒಂದುಕಡೆ ಇರುವುದಿಲ್ಲ. ಅದರಿಂದ ನೀನು ನನ್ನ ಜೊತೆಯಲ್ಲಿ ಇದ್ದುಕೊಂಡು ಕಷ್ಟಗಳನ್ನು ಸಹಿಸಲಾರೆ." ಶ್ರೀಗುರುವು ಹೇಳಿದ ಮಾತನ್ನು ಕೇಳಿ ಸಾಯಂದೇವನು ನಮಸ್ಕರಿಸಿ, "ಸ್ವಾಮಿ, ನನ್ನನ್ನು ಅಂಗೀಕರಿಸಿ. ನಾನು ಶರಣು ಬೇಡುತ್ತಿದ್ದೇನೆ. ಗುರುಸೇವೆಯನ್ನು ಮಾಡಿದ ಮಾನವನು ಭವಸಾಗರವನ್ನು ದಾಟಬಲ್ಲನು. ಶ್ರೀಗುರುದೇವರು ಅವನಿಗೆ ಚತುರ್ವಿಧ ಪುರುಷಾರ್ಥಗಳನ್ನು ಕೊಡುತ್ತಾರೆ. ಅವನಿಗೆ ಯಮನ ಭಯವಿರುವುದಿಲ್ಲ. ಶ್ರೀಗುರುಭಕ್ತಿಯೇ ಅವನಿಗೆ ಶ್ರೇಷ್ಠವು." ಎಂದು ಅತ್ಯಂತ ಭಕ್ತಿಯಿಂದ ಬಿನ್ನವಿಸಿಕೊಂಡನು. ಆಗ ಶ್ರೀಗುರುವು, " ನಿನ್ನ ಮನಸ್ಸಿನಲ್ಲಿ ಎಂತಹ ಭಕ್ತಿಯಿದೆಯೋ ಅದರಂತೆ ಮಾಡು." ಎಂದು, "ನನ್ನಲ್ಲಿ ಸುದೃಢವಾದ ಭಕ್ತಿಯಿದ್ದರೆ ಮಾತ್ರ ನನ್ನ ದಾಸ್ಯವನ್ನು ಅಂಗೀಕರಿಸು." ಎಂದು ಶ್ರೀಗುರುವು ಎಚ್ಚರಿಸಿದರು. ಸಾಯಂದೇವನು ‘ಹಾಗೇ ಆಗಲಿ’ ಎಂದು ಮನಸ್ಥೈರ್ಯವನ್ನು ಹೊಂದಿ ಸದಾ ಶ್ರೀಗುರುವನ್ನು ಭಜಿಸುತ್ತಾ ಅವರ ಸೇವೆ ಮಾಡುತ್ತಿದ್ದನು. ಹೀಗೇ ಮೂರು ತಿಂಗಳುಗಳು ಕಳೆದವು. ಒಂದು ದಿನ ಶಿಷ್ಯರೆಲ್ಲರನ್ನೂ ಬಿಟ್ಟು ಶ್ರೀಗುರುವು ಸಾಯಂದೇವನೊಬ್ಬನನ್ನು ಮಾತ್ರ ಕರೆದುಕೊಂಡು ಸಂಗಮಕ್ಕೆ ಹೋಗಿ, ಅಲ್ಲಿ ಅಶ್ವತ್ಥಮೂಲದಲ್ಲಿ ಕುಳಿತು ಅವನೊಡನೆ ಮಾತನಾಡಲಾರಂಭಿಸಿದರು. ಶ್ರೀಗುರುವು ತನ್ನ ಶಿಷ್ಯನ ಮನೋಸ್ಥೈರ್ಯವನ್ನು ಪರೀಕ್ಷಿಸಬೇಕೆಂದು ಯೋಚಿಸಿ, ಒಂದು ಉಪಾಯವನ್ನು ಮಾಡಿದರು. ಅಕಸ್ಮಾತ್ತಾಗಿ ಗಾಳಿಯು ತೀಕ್ಷ್ಣವಾಗಿ ಬೀಸಲಾರಂಭಿಸಿತು. ಮರಗಳು ಮುರಿದು ಬಿದ್ದವು. ಮಳೆ ಧಾರಾಕಾರವಾಗಿ ಸುರಿಯಿತು. ಸಾಯಂದೇವನು ಮಳೆಗಾಳಿಗಳನ್ನು ಸಹಿಸಿಕೊಂಡು, ತನ್ನವಸ್ತ್ರವನ್ನು ಶ್ರೀಗುರುವಿಗೆ ಹೊದಿಸಿದನು. ಹಾಗೆ ಎರಡು ಝಾಮಗಳವರೆಗೂ ಕುಂಭವೃಷ್ಟಿ ಆಯಿತು. ಆಮೇಲೆ ಬಹಳ ಜೋರಾದ ಬೀಸುಗಾಳಿಯು ಮೊದಲಾಗಿ ಬಹಳ ಛಳಿ ಹುಟ್ಟಿತು. ಶ್ರೀಗುರುವು, "ಅಯ್ಯಾ, ಸಾಯಂದೇವ, ಛಳಿ ಬಹಳವಾಗಿದೆ. ಊರೊಳಕ್ಕೆ ಹೋಗಿ ಮಠದಿಂದ ಕಾಯಿಸಿಕೊಳ್ಳುವುದಕ್ಕೆ ಅಗ್ನಿಯನ್ನು ತೆಗೆದುಕೊಂಡು ಬಾ." ಎಂದು ಹೇಳಿದರು. ತಕ್ಷಣವೇ ಅವನು ಗುರುವಾಕ್ಯವನ್ನು ಶಿರಸಾವಹಿಸಿ ಅಗ್ನಿ ತರಲು ಹೊರಟನು. ನಗುತ್ತಾ, ಶ್ರೀಗುರುವು, "ಎರಡೂ ಕಡೆಗಳನ್ನು ನೋಡದೆ ತ್ವರೆಯಾಗಿ ಹೋಗಿ ಬಾ." ಎಂದು ಹೇಳಿದರು. ‘ಹಾಗೇ ಆಗಲಿ’ ಎಂದು ನುಡಿದು ಸಾಯಂದೇವನು ಗುರುವಾಜ್ಞೆಯಂತೆ ಹೊರಟನು. ಕತ್ತಲಲ್ಲಿ ದಾರಿ ಕಾಣುತ್ತಿರಲಿಲ್ಲ. ಹೇಗೋ ಮಾರ್ಗವನ್ನು ಹುಡುಕುತ್ತಾ, ಶ್ರೀಗುರುವನ್ನೇ ಧ್ಯಾನಿಸುತ್ತಾ ಮುಂದುವರೆಯುತ್ತಿದ್ದನು. ಆ ರೀತಿಯಲ್ಲಿ ಮೆಲ್ಲಮೆಲ್ಲಗೆ ನಡೆದು ಗಂಧರ್ವನಗರದ ಬಾಗಿಲಿಗೆ ಬಂದು ಅಲ್ಲಿ ದ್ವಾರಪಾಲಕರಿಗೆ ತಾನು ಬಂದ ವಿಷಯವನ್ನು ತಿಳಿಸಿದನು. ಅವರು ಒಂದು ಭಾಂಡದಲ್ಲಿ ಅಗ್ನಿಯನ್ನು ಹಾಕಿ ಅವನಿಗೆ ಕೊಟ್ಟರು. ಅದನ್ನು ತೆಗೆದುಕೊಂಡು ಅವನು ಹಿಂದಿನಂತೆಯೇ ಮಿಂಚಿನ ಬೆಳಕಿನಲ್ಲಿ ದಾರಿಯನ್ನು ಹುಡುಕುತ್ತಾ ಶ್ರೀಗುರುವನ್ನು ಧ್ಯಾನಿಸುತ್ತಾ ಆ ಕಡೆ ಈ ಕಡೆ ನೋಡದೆ ಹಿಂತಿರುಗಿ ಹೊರಟನು. 


ಬರುತ್ತಾ ದಾರಿಯಲ್ಲಿ ಶ್ರೀಗುರುವು ನನ್ನನ್ನು ಎರಡು ಪಕ್ಕಗಳನ್ನು ನೋಡದೆ ಹೋಗಿ ಬಾ ಎಂದು ಹೇಳಲು ಕಾರಣವೇನು ಎಂದು ಯೋಚಿಸುತ್ತಾ ಬಲಗಡೆ ನೋಡಿದನು. ಅಲ್ಲಿ ಮಹಾಸರ್ಪವೊಂದು ಕಾಣಿಸಿತು. ಅವನು ಭಯದಿಂದ ಎಡಗಡೆ ನೋಡಲು ಅಲ್ಲಿಯೂ ಅವನಿಗೆ ಮತ್ತೊಂದು ಮಹಾಸರ್ಪ ಕಾಣಿಸಿತು. ಎರಡೂ ಹಾವುಗಳು ಸಾಯಂದೇವನನ್ನು ಅನುಸರಿಸುತ್ತಾ ಅವನ ಹಿಂದೆಯೇ ಬರುತ್ತಿದ್ದವು. ಬಹಳ ಭೀತನಾಗಿ ಅವನು ಓಡಿ ಬರುತ್ತಿದ್ದಾಗ ದಾರಿತಪ್ಪಿ ಕಾಡಿನೊಳಕ್ಕೆ ಹೋದನು. ಆ ಹಾವುಗಳು ಅಲ್ಲಿಯೂ ಅವನನ್ನು ಹಿಂಬಾಲಿಸಿ ಬರುತ್ತಿದ್ದವು. ಹೇಗೋ ಮಾಡಿ, ಶ್ರೀಗುರುವನ್ನು ಧ್ಯಾನಿಸುತ್ತಾ. ಕೊನೆಗೆ ಅವನು ಸಂಗಮವನ್ನು ಸಮೀಪಿಸಿದನು. ಅಲ್ಲಿ ಸಾವಿರಾರೂ ದೀಪಗಳು ಕಾಣಿಸಿತು. ಬ್ರಾಹ್ಮಣರು ಉಚ್ಛಸ್ವರದಲ್ಲಿ ವೇದಘೋಷಗಳನ್ನು ಮಾಡುತ್ತಿದ್ದುದು ಕೇಳಿಸಿತು. ಹತ್ತಿರಕ್ಕೆ ಹೋದಾಗ ಅಲ್ಲಿ ಶ್ರೀಗುರುವು ಒಬ್ಬರೇ ಇರುವುದನ್ನು ನೋಡಿದನು. ಅಗ್ನಿಯನ್ನು ಪ್ರಜ್ವಲಿಸಿ ಸಾಯಂದೇವನು ಶ್ರೀಗುರುವನ್ನು ಸಮೀಪಿಸಲು ಅಲ್ಲಿ ಅವನಿಗೆ ತನ್ನನ್ನು ಹಿಂಬಾಲಿಸಿದ್ದ ಎರಡೂ ಸರ್ಪಗಳು ಬಂದು ಶ್ರೀಗುರುವಿಗೆ ನಮಸ್ಕರಿಸಿ ಬಂದ ದಾರಿಯಲ್ಲಿ ಹಿಂತಿರುಗಿ ಹೊರಟು ಹೋದದ್ದನ್ನು ನೋಡಿದನು. ಭಯಪಟ್ಟ ಅವನನ್ನು ಕಂಡ ಶ್ರೀಗುರುವು, " ನಿನಗೇಕೆ ಭಯವಯ್ಯಾ? ನಿನ್ನನ್ನು ರಕ್ಷಿಸಲು ನಾನೇ ಆ ಸರ್ಪಗಳನ್ನು ಕಳುಹಿಸಿದ್ದೆ. ನಮ್ಮನ್ನು ಸೇವಿಸುವುದು ಎಷ್ಟು ಕಷ್ಟ ಎಂದು ತಿಳಿಯಿತಲ್ಲವೇ? ಮುಂಚೆಯೇ ಚೆನ್ನಾಗಿ ಯೋಚಿಸಿ ನಮ್ಮ ಸೇವೆಯನ್ನು ಸ್ವೀಕರಿಸಬೇಕು. ಕಠಿಣವಾದ ಗುರುಸೇವೆಯನ್ನು ದೃಢವಾದ ಧೈರ್ಯದಿಂದ ಮಾಡುವ ಬುದ್ಧಿವಂತನಿಗೆ ಕಾಲನಿಂದಲಾಗಲೀ, ಕಲಿಯಿಂದಲಾಗಲೀ ಭಯವೇತಕ್ಕೆ?" ಎಂದರು. ಸಾಯಂದೇವನು ಮತ್ತೆ ಶ್ರೀಗುರು ಪಾದಗಳನ್ನು ಹಿಡಿದು, "ಸ್ವಾಮಿ ಗುರುಭಕ್ತಿಯನ್ನು ಉಪದೇಶಿಸಿ. ಅದರಿಂದ ನನ್ನ ಮನಸ್ಸು ಸ್ಥಿರಗೊಂಡು ನಿಮ್ಮ ಸೇವೆ ಮಾಡುತ್ತೇನೆ." ಎಂದು ಕೇಳಿಕೊಂಡನು.

ಶ್ರೀಗುರುವು ಹೇಳಿದರು. "ಅಯ್ಯಾ ಬ್ರಾಹ್ಮಣ, ನಿನಗೆ ಒಂದು ರಮ್ಯವಾದ ಕಥೆಯನ್ನು ಹೇಳುತ್ತೇನೆ. ಕೇಳು. ಹಿಂದೆ ಕೈಲಾಸಶಿಖರದಲ್ಲಿ ವ್ಯೋಮಕೇಶನು ರಹಸ್ಯವಾಗಿದ್ದನು. ಅವನು ಅರ್ಧನಾರೀಶ್ವರನು. ಆಗ ಗಿರಿಜೆ, "ಸ್ವಾಮಿ, ಗುರುಭಕ್ತಿಯ ವಿಧಾನವನ್ನು ನನಗೆ ವಿಸ್ತಾರವಾಗಿ ಅನುಗ್ರಹಿಸು." ಎಂದು ಕೇಳಲು, ಶಂಕರನು ಅವಳಿಗೆ ಹೇಳಿದನು. "ಪ್ರಿಯಳೇ, ಗುರುಭಕ್ತಿ ಸರ್ವಸಿದ್ಧಿಗಳನ್ನೂ ಕೈಗೂಡಿಸುತ್ತದೆ. ಶ್ರೀಗುರುವನ್ನು ಶಿವಸ್ವರೂಪನಾಗಿ ಭಾವಿಸಬೇಕು. ಗುರುಭಕ್ತಿ ಸುಲಭವಾದುದು. ತಕ್ಷಣವೇ ಫಲಕೊಡುವಂತಹುದು. ತಪಾನುಷ್ಠಾನಗಳಿಂದ ಸಿದ್ಧಿಯಾಗುವುದು ತಡವಾಗುತ್ತದೆ. ವ್ರತ, ದಾನ, ಯಜ್ಞಾದಿಗಳು ದುಷ್ಕರವು. ಅವುಗಳ ಸಿದ್ಧಿ ಲೋಕದಲ್ಲಿ ದುರ್ಲಭವು. ಅವಕ್ಕೆ ಪ್ರತಿಕ್ಷಣವೂ ವಿಘ್ನಗಳೇ! (ಆದರೆ) ಸದ್ಗುರು ಭಕ್ತಿಯಿಂದ ಫಲವು ತ್ವರೆಯಾಗಿ ಕೈಗೂಡುತ್ತದೆ. ಯಜ್ಞಾದಿಗಳ ಫಲವೂ ಗುರುಭಕ್ತಿಯಲ್ಲೇ ಸೇರಿವೆ. ಭಕ್ತಿಯಿಂದ ಗುರುಕುಲವಾಸ ಮಾಡುತ್ತಾ ಗುರುವನ್ನು ಸೇವಿಸಬೇಕು. ಗಿರಿಜೆ, ಇದಕ್ಕೆ ಒಂದು ವಿಚಿತ್ರವಾದ ನಿದರ್ಶನವನ್ನು ನಿನಗೆ ಹೇಳುತ್ತೇನೆ.

ಬ್ರಹ್ಮವಂಶದಲ್ಲಿ ಉದ್ಭವಿಸಿದ ತ್ವಷ್ಟ ಎನ್ನುವವನು ಲೋಕದಲ್ಲಿ ಪ್ರಸಿದ್ಧನು. ಅವನು ಸರ್ವಕರ್ಮಗಳಲ್ಲಿಯೂ ಕುಶಲನು. ಅವನಿಗೆ ಉಪನಯದ ವಯಸ್ಸು ಬಂತು. ಅವನ ತಂದೆ ಸಂಸ್ಕಾರಗಳನ್ನೆಲ್ಲಾ ಮುಗಿಸಿ, ಉಪನಯನ ಮಾಡಿ ಅವನನ್ನು ಗುರುಕುಲಕ್ಕೆ ಕಳುಹಿಸಿದನು. ಗುರ್ವಾಶ್ರಮದಲ್ಲಿ ಇದ್ದುಕೊಂಡು ಅವನು ಗುರುವನ್ನು ಭಕ್ತಿಯಿಂದ ಸೇವಿಸುತ್ತಿದ್ದನು. ಒಂದು ದಿನ ಆ ಆಶ್ರಮದಲ್ಲಿ ಕುಂಭವೃಷ್ಟಿಯಾಯಿತು. ಜೀರ್ಣವಾಗಿದ್ದ ಪರ್ಣಶಾಲೆಯೆಲ್ಲವೂ ನೀರಿನಿಂದ ತುಂಬಿಹೋಯಿತು. ಆಗ ಸದ್ಗುರುವು ಶಿಷ್ಯನನ್ನು ಕರೆದು ಅದನ್ನು ತೋರಿಸುತ್ತಾ, " ಈ ಮನೆಯನ್ನು ದೃಢವಾಗಿ ನಿರ್ಮಿಸು. ಪ್ರತಿ ವರ್ಷವೂ ಇದು ಜೀರ್ಣವಾಗುತ್ತಲೇ ಇದೆ. ಈ ಮನೆಯು ನಿತ್ಯ ನೂತನವಾಗಿರುವಂತೆ ನಿರ್ಮಿಸು. ನೀನು ನಿರ್ಮಿಸುವ ಮನೆಯು ಮನೋಹರವಾಗಿ ಸರ್ವೋಪಕರಣಗಳಿಂದ ಕೂಡಿರಬೇಕು." ಎಂದು ಗುರುವು ಆದೇಶಿಸಿದನು. ಗುರುಪತ್ನಿ, "ಶಿಷ್ಯ, ನನಗೊಂದು ಕಂಚುಕವನ್ನು ತೆಗೆದುಕೊಂಡು ಬಾ. ಅದಕ್ಕೆ ಬಣ್ಣ ಹಾಕಿರಬಾರದು. ಹೊಲೆದಿರಬಾರದು. ಚಿತ್ರವಿಚಿತ್ರವಾಗಿ ಮನೋಹರವಾಗಿರಬೇಕು. ಶರೀರದ ಅಳತೆಗೆ ಸರಿಯಾಗಿರಬೇಕು." ಎಂದು ಕೇಳಿದಳು. ನಂತರ ಗುರುಪುತ್ರನೂ ಕೂಡಾ, "ಅಯ್ಯಾ, ನನಗೆ ಪಾದುಕೆಗಳನ್ನು ತಂದುಕೊಡು. ಅವು ನೀರಿನಲ್ಲಿ ಮುಳುಗಿಹೋಗಬಾರದು. ನನ್ನ ಪಾದಗಳಿಗೆ ಹೆಚ್ಚುಕಡಮೆಯಿಲ್ಲದೆ ಸರಿಹೋಗುವಂತಿರಬೇಕು. ಅದಕ್ಕೆ ಮಣ್ಣು ಅಂಟಿಕೊಳ್ಳಬಾರದು. ನಾನು ಹೋಗಬೇಕೆಂದಿರುವ ಸ್ಥಳಕ್ಕೆ ನನ್ನನ್ನು ತ್ವರೆಯಾಗಿ, ಸುಖವಾಗಿ ಸೇರಿಸುವಂತಿರಬೇಕು." ಎಂದು ಹೇಳಿದನು. ಅಷ್ಟರಲ್ಲಿ ಗುರುಪುತ್ರಿಯೂ ಅಲ್ಲಿಗೆ ಬಂದು ತ್ವಷ್ಟನಿಗೆ, "ನನಗೋಸ್ಕರ ಚೆನ್ನಾಗಿರುವ ಎರಡು ಕರ್ಣಕುಂಡಲಗಳನ್ನು ತಂದುಕೊಡು. ನಾನು ಆಡಿಕೊಳ್ಳಲು ಅಂದವಾದ ಒಂದು ಮನೆಯನ್ನೂ ಕಟ್ಟಿಕೊಡು. ಆ ಮನೆಗೆ ಆನೆಯ ದಂತಗಳಿಂದ ಮಾಡಿದ ಒಂದೇ ಒಂದು ಸ್ಥಂಭವಿರಬೇಕು. ಅದು ಎಂದಿಗೂ ಮುರಿಯಬಾರದು. ಶಿಥಿಲವಾಗಬಾರದು. ಅಲ್ಲಲ್ಲಿ ಆಟವಾಡಲು ಅನುಕೂಲವಾಗುವಂತೆ ಆಟಗಳಿಗೆ ಸರಿಹೋಗುವ ಪೀಠಗಳು ಮುಂತಾದ ಪರಿಕರಗಳು ಇರುವ ನಿತ್ಯ ನೂತನ ಗೃಹವನ್ನು ಕಟ್ಟು. ಮಣಿಗಳಿಂದ ಮಾಡಿದ, ಅಡಿಗೆಗೆ ಉಪಯೋಗವಾಗುವಂತಹ ಪಾತ್ರೆಗಳು ಮುಂತಾದುವು ಕೂಡಾ ಅದರಲ್ಲಿರಬೇಕು. ಪಾತ್ರೆಗಳಲ್ಲಿ ಮಾಡಿದ ಅಡಿಗೆ ಒಂದು ಝಾಮ ಕಳೆದರೂ ತಣ್ಣಗಾಗಬಾರದು. ಅಡಿಗೆ ಮಾಡುವಾಗ ಪಾತ್ರೆಗಳ ಮೇಲೆ ಮಸಿ ಅಂಟದಂತಿರುವ ಪಾತ್ರೆಗಳನ್ನೇ ತರಬೇಕು." ಎಂದಳು. ಹಾಗೆ ನಾಲ್ವರೂ ಕೊಟ್ಟ ಆದೇಶದಂತೆ, ಆ ಶಿಷ್ಯ ಅವರ ಕೋರಿಕೆಗಳನ್ನು ಅಂಗೀಕರಿಸಿ ಹೊರಟನು. ಅಡವಿಯಲ್ಲಿ ಹೋಗುತ್ತಾ, "ನಾನು ಬಾಲಕ. ಬ್ರಹ್ಮಚಾರಿ. ಈ ಕರ್ತವ್ಯವನ್ನು ನಿರ್ವಹಿಸುವ ಶಕ್ತಿ ನನಗೆಲ್ಲಿದೆ? ಊಟದೆಲೆಗಳನ್ನು ಕೂಡಿಸುವುದನ್ನು ಕೂಡಾ ನಾನು ಅರಿಯೆ! ದೃಢವಾದ ಮನೆಯನ್ನು ಹೇಗೆ ನಿರ್ಮಿಸಬಲ್ಲೆ?" ಎಂದು ಯೋಚಿಸುತ್ತಾ ಗುರುವನ್ನು ಸ್ಮರಿಸಿದನು. ಹೇಳಿದ್ದನ್ನು ಮಾಡದಿದ್ದರೆ ಗುರುವು ಕೋಪಿಸಿಕೊಳ್ಳುತ್ತಾನೆ. ಆದ್ದರಿಂದ ನಾನು ಯಾರನ್ನು ಶರಣುಹೋಗಲಿ? ಶರಣಾಗಲು ಬೇರೆ ಯಾರೂ ಕಾಣುತ್ತಿಲ್ಲ. ಸದ್ಗುರುವು ದಯಾಸಮುದ್ರನು. ಅವನಲ್ಲದೆ ಇನ್ನು ಯಾರು ನನಗೆ ಸಹಾಯಮಾಡುತ್ತಾರೆ? ಆ ಗುರುವಾಕ್ಯಗಳನ್ನು ಮಾಡದೇ ಹೇಗಿರಲಿ? ಗುರುವಾಕ್ಯಗಳೇ ಕಾಮಧೇನುವು. ಪ್ರಾಣಕೊಟ್ಟಾದರೂ ಗುರುವಾಕ್ಯಗಳನ್ನು ಸತ್ಯ ಮಾಡಲು ಪ್ರಯತ್ನಿಸುತ್ತೇನೆ. ಅವರು ಹೇಳಿದ ಕೆಲಸ ಮಾಡಲು ನನಗೆ ಶಕ್ತಿಯಿಲ್ಲ. ಅದರೂ ಅದನ್ನು ಮಾಡುತ್ತೇನೆಂದು ಒಪ್ಪಿಕೊಂಡೆ." ಎಂದೆಲ್ಲಾ ಚಿಂತೆಮಾಡುತ್ತಾ, ಆ ಕಾಡಿನಲ್ಲಿ ಹೊಗುತ್ತಾ ಬಳಲಿದವನಾಗಿ ದುಃಖಗೊಂಡು ಕ್ಷಣಕಾಲ ಒಂದುಕಡೆ ನಿಂತನು. ಅಲ್ಲಿಂದ ಮುಂದಕ್ಕೆ ಹೋಗುತ್ತಾ ಅಲ್ಲೊಬ್ಬ ಅವಧೂತನನ್ನು ಕಂಡನು. ಚಿಂತಾವಿಷ್ಟನಾಗಿ ಹೋಗುತ್ತಿದ್ದ ಆ ಬ್ರಹ್ಮಚಾರಿಯನ್ನು ಕಂಡ ಆ ಅವಧೂತ ಅವನನ್ನು ಕೇಳಿದನು. 


’ಅಯ್ಯಾ ಬ್ರಹ್ಮಚಾರಿ, ನೀನು ಎಲ್ಲಿಂದ ಏತಕ್ಕೆಂದು ಬಂದಿದ್ದೀಯೆ ನನಗೆ ಹೇಳು." ಅದಕ್ಕೆ ಆ ಬ್ರಹ್ಮಚಾರಿ ಆ ಸನ್ಯಾಸಿಗೆ ನಮಸ್ಕರಿಸಿ, "ಸ್ವಾಮಿ, ನಾನು ಚಿಂತಾಸಮುದ್ರದಲ್ಲಿ ಮುಳುಗಿಹೋಗಿದ್ದೇನೆ. ನನ್ನನ್ನು ದಡ ಸೇರಿಸು. ನೀನು ನಿಧಿಯಂತೆ ನನ್ನನ್ನು ತರಿಸಲು, ಹಸು ತನ್ನ ಕರುವನ್ನು ಸೇರಿದಂತೆ, ಲಭಿಸಿದ್ದೀಯೆ. ನೀನು ವಾತ್ಸಲ್ಯದಿಂದ ಬಂದಿದ್ದು, ದುಃಖದಲ್ಲಿದ್ದ ನನಗೆ ಸುಖವನ್ನು ತಂದಿದೆ. ಚಕೋರವು ಚಂದ್ರನ ಬೆಳದಿಂಗಳನ್ನು ನೋಡಿದಕೂಡಲೇ ಆನಂದಪಡುವುದು ಅಲ್ಲವೇ! ಹಾಗೆ ನಿನ್ನ ದೃಷ್ಟಿ ನನ್ನಮೇಲೆ ಬಿದ್ದ ತಕ್ಷಣವೇ ನನಗೆ ಸಂತೋಷವುಂಟಾಯಿತು. ನನ್ನ ಪೂರ್ವಪುಣ್ಯ ಇಂದು ಫಲಿತವಾಯಿತು. ಮನುಷ್ಯರೇ ಇಲ್ಲದ ಈ ಕಾಡಿನಲ್ಲಿ ದುಃಖಿತನಾಗಿದ್ದ ನನ್ನನ್ನು ಸಾಂತ್ವನಗೊಳಿಸಲು ಬಂದಿದ್ದೀಯೆ. ನೀನೇ ನನ್ನ ಗುರುವು. ಈಶ್ವರನಾದ ನಿನ್ನನ್ನು ನೋಡಿ ನನ್ನ ಮನಸ್ಸು ಸ್ಥಿರವಾಯಿತು. ನಿನ್ನ ದಾಸನು ನಾನು." ಎಂದು ಹೇಳುತ್ತಾ ಅವನು ಆ ಅವಧೂತನ ಪಾದಗಳನ್ನು ಹಿಡಿದನು. ಆ ಹುಡುಗನನ್ನು ಆದರದಿಂದ ಮೇಲಕ್ಕೆತ್ತಿ , ಅಪ್ಪಿಕೊಂಡು ಸಮಾಧಾನಮಾಡುತ್ತಾ ಆ ಅವಧೂತ ಅವನೊಡನೆ ಕೂತನು. ಮತ್ತೆ ಆ ಹುಡುಗನನ್ನು ಪ್ರಶ್ನೆಮಾಡಲು ಆ ಬಾಲಬ್ರಹ್ಮಚಾರಿ, ತನ್ನ ಗುರುವು ಮುಂತಾದವರೆಲ್ಲರೂ ಕೇಳಿದ ಕೋರಿಕೆಗಳ ವಿಷಯವನ್ನೆಲ್ಲ ಆರಂಭದಿಂದ ಹೇಳಿ, " ನಾನು ಈ ಕಷ್ಟಸಾಧ್ಯವಾದ ಕಾರ್ಯವನ್ನು ಮಾಡಲು ಒಪ್ಪಿಕೊಂಡು ಚಿಂತಾಸಮುದ್ರದಲ್ಲಿ ಮುಳುಗಿಹೋದೆ. ಹೇ ಸ್ವಾಮಿ, ನನ್ನನ್ನುದ್ಧರಿಸು." ಎಂದು ಕೇಳಿಕೊಳ್ಳಲು ಆ ಅವಧೂತ ಆ ಬಾಲಕನಿಗೆ ಅಭಯವನ್ನು ಕೊಟ್ಟು, "ಅಯ್ಯಾ ವಟುವೇ, ನಿನಗೊಂದು ಹಿತವನ್ನು ಹೇಳುತ್ತೇನೆ. ಅದರಿಂದ ನಿನಗೆ ಎಲ್ಲವೂ ಸಿದ್ಧಿಸುತ್ತದೆ. ಕಾಶೀಪುರವು ಸಕಲ ಅಭೀಷ್ಟಗಳನ್ನು ಸಾಧಿಸಿಕೊಳ್ಳುವ ಮಹಾಸಾಧನವು. ಅಲ್ಲಿನ ವಿಶ್ವೇಶ್ವರನನ್ನು ವಿಧಿವಿಧಾನಗಳಿಂದ ಆರಾಧಿಸು. ಆ ಕಾಶೀಪ್ರದೇಶವು ೫೦೦ ಕೋಟಿ ಯೋಜನಗಳ ವಿಸ್ತಾರದಿಂದ ಖ್ಯಾತಿ ಪಡೆದಿದೆ.ಅಲ್ಲಿ ಬ್ರಹ್ಮಾದಿಗಳೇ ವರವನ್ನು ಪಡೆದಿದ್ದು ಒಂದು ವಿಶೇಷವು. ಬ್ರಹ್ಮ ಇಲ್ಲಿ ಜಗತ್ತನ್ನು ಸೃಷ್ಟಿಸಲು ಉತ್ತಮವರಗಳನ್ನು ಪಡೆದನು. ವಿಷ್ಣುವೂ ಕೂಡಾ ಇಲ್ಲಿ ಆರಾಧನೆ ಮಾಡಿ ಜಗತ್ಪರಿಪಾಲನೆಗೆ ವರಗಳನ್ನು ಪಡೆದನು. ಕಾಶೀಪುರವು ಮಹತ್ಕ್ಷೇತ್ರವು. ಬರಿಯ ದರ್ಶನದಿಂದಲೇ ಸಿದ್ಧಿಯನ್ನು ನೀಡುವುದು. ಅಲ್ಲಿ ನಿನ್ನ ಕೋರಿಕೆಗಳು ಸಿದ್ಧಿಸುವುವು. ಆದ್ದರಿಂದ ತಕ್ಷಣವೇ ಸಂಶಯ ಪಡದೆ ಕಾಶಿ ಪಟ್ಟಣಕ್ಕೆ ಹೋಗು. ನೀನು ವಿಶ್ವಕರ್ಮನೇ ಆಗಬಲ್ಲೆ. ಆ ಕಾಶಿಯಲ್ಲೇ ಧರ್ಮಾರ್ಥಕಾಮ ಮೋಕ್ಷಗಳು ಸಿದ್ಧಿಸುವುವು. ಆ ಕಾಶಿಯಲ್ಲಿ ನೆಲೆಗೊಂಡಿರುವ ಕೃಪಾನಿಲಯನೇ ಆದ ದೇವನು ಸ್ವಲ್ಪ ಹಾಲು ಕೋರಿದ ಉಪಮನ್ಯುವಿಗೆ ಕ್ಷೀರಸಮುದ್ರವನ್ನೇ ಕೊಟ್ಟನು. ಆ ಕಾಶಿಯ ಆನಂದಕಾನನದಲ್ಲಿ ಸಮಸ್ತ ಕಾಮನೆಗಳೂ ಸಿದ್ಧಿಸುವುವು. ಕಾಶಿ ಸಮಸ್ತ ಧರ್ಮಗಳಿಗೂ ರಾಶಿ. ಸರ್ವಲೋಕಗಳಿಗೂ ಇದೇ ಮೋಕ್ಷಸ್ಥಾನವು. ಕಾಶಿಯನ್ನು ನೋಡಿದರೇನೇ ಸರ್ವ ದೋಷಗಳೂ ನಾಶವಾಗುವುವು. ಅಲ್ಲೇ ನೆಲಸಿರುವವರ ವಿಷಯವನ್ನು ಇನ್ನು ಹೇಳಲೇಕೆ? ತೀರ್ಥಸ್ವರೂಪಿಯಾದ ಕಾಶಿಯನ್ನು ಹೆಜ್ಜೆಹೆಜ್ಜೆಯಲ್ಲೂ ನೋಡುತ್ತಾ ಪರ್ಯಟಿಸುವವರಿಗೆ ಅಶ್ವಮೇಧ ಮಾಡಿದ ಪುಣ್ಯಫಲವು ಲಭಿಸುವುದು." ಎಂದು ಅವಧೂತನು ಉಪದೇಶಿಸಿದನು. ಅವನ ಉಪದೇಶವನ್ನು ಕೇಳಿದ ಆ ಬಾಲಬ್ರಹ್ಮಚಾರಿ ಅವಧೂತನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, "ಸ್ವಾಮಿ, ಕಾಶೀಪುರವು ಎಲ್ಲಿದೆ? ನಾನು ಈಗ ಮಹಾರಣ್ಯದಲ್ಲಿದ್ದೇನೆ. ಆನಂದಕಾನನವು ಪಾತಾಳದಲ್ಲಿದೆಯೇ? ಮಹೀತಲದಲ್ಲಿದೆಯೇ? ಸ್ವರ್ಗದಲ್ಲಿದೆಯೇ? ನನಗೇನೂ ತಿಳಿಯದು. ಕಾಶಿ ಎಲ್ಲಿದೆ ಎಂಬುದನ್ನು ನನಗೆ ಹೇಳು. ನನ್ನನ್ನು ಕಾಪಾಡು. ನೀನಲ್ಲದೆ ನನ್ನನ್ನು ಇನ್ನು ಯಾರು ಕಾಶಿಗೆ ಸೇರಿಸಬಲ್ಲರು? ಸ್ವಾಮಿ ನಿನಗೆ ಅಲ್ಲಿ ಕೆಲಸವಿದ್ದರೆ ಬಾಲಕನಾದ ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗು. ನೀನು ನೀಡಿದ ಜ್ಞಾನವನ್ನು ಅನುಸರಿಸಿ ಹಾಗೆಯೇ ಮಾಡುತ್ತೇನೆ." ಎನ್ನುತ್ತಾ ಬಾಲಕನು ಮತ್ತೆ ಅವಧೂತನ ಪಾದಗಳನ್ನು ಹಿಡಿದುಕೊಂಡನು.

ಹಾಗೆ ಪ್ರಾರ್ಥಿಸುತ್ತಿದ್ದ ಆ ಬಾಲಕನಿಗೆ ಆ ಅನಾಥನಾಥನು ಸಂತೋಷದಿಂದ, " ಅಯ್ಯಾ, ಬಾಲಕ, ನಿನ್ನನ್ನು ಅಲ್ಲಿಗೆ ಯೋಗಮಾರ್ಗದಿಂದ ಕರೆದುಕೊಂಡು ಹೋಗುತ್ತೇನೆ. ನನಗೂ ತೀರ್ಥಯಾತ್ರೆ ಮಾಡಿದ ಲಾಭವಾಗುವುದು. ಕಾಶೀವಾಸವಿಲ್ಲದ ಮಾನವನ ಜನ್ಮವು ವ್ಯರ್ಥವೇ ಅಲ್ಲವೇ! ನಿನ್ನೊಡನೆ ಮಾತನಾಡಿದ್ದರಿಂದ ನನಗೆ ಕಾಶಿ ದರ್ಶನ ಲಭ್ಯವಾಯಿತು. ನನ್ನೊಡನೆ ಬಾ." ಎಂದು ಹೇಳಿ ಆ ಬಾಲಕನನ್ನು ಜೊತೆಯಲ್ಲಿಟ್ಟುಕೊಂಡು ಆ ಅವಧೂತ ಮನೋವೇಗದಲ್ಲಿ ಕ್ಷಣದಲ್ಲಿ ವಿಶ್ವೇಶ್ವರನನ್ನು ಸೇರಿದನು. ಅಲ್ಲಿ ಆ ಅವಧೂತನು ಬಾಲಕನಿಗೆ, " ಇನ್ನು ಕಾಶಿ ಯಾತ್ರೆ ಮಾಡು." ಎಂದು ಹೇಳಿದನು. "ಸ್ವಾಮಿ, ನನಗೇನೂ ತಿಳಿಯದು. ನೀನು ಭಗವಂತನು. ಆದ್ದರಿಂದ ಕಾಶಿಯಾತ್ರಾ ವಿಧಿಯನ್ನು ವಿಶದವಾಗಿ ತಿಳಿಸು." ಎಂದು ಆ ಬಾಲಕನು ಪ್ರಾರ್ಥಿಸಲು, ಆ ತಾಪಸಿ ಕ್ರಮವಾಗಿ ಕಾಶಿಯಾತ್ರಾ ಪದ್ಧತಿಯನ್ನು ಹೇಳಿದನು.

ಸರಸ್ವತಿ "ಹೀಗೆ ಶ್ರೀಗುರುಚರಿತ್ರೆ ಹರ್ಷದಾಯಕವು. ಇದರಿಂದ ನಾಲ್ಕು ಪುರುಷಾರ್ಥಗಳೂ ಸುಲಭಸಾಧ್ಯವಾಗುವುದು." ಎಂದು ಬೋಧಿಸಿದನು. ಸಕಲ ಪ್ರಿಯಗಳನ್ನೂ ಕೈಗೂಡಿಸುವಂತಹ ಇದನ್ನು ಕೇಳುವವನು ಕೃತಾರ್ಥನಾಗಿ ಇಹಲೋಕದಲ್ಲಿ ಭಯರಹಿತನಾಗುತ್ತಾನೆ.

ಇಲ್ಲಿಗೆ ನಲವತ್ತೊಂದನೆಯ ಅಧ್ಯಾಯ ಮುಗಿಯಿತು.

1 comment:

  1. ಶ್ರೀಯುತರೇ, ದಯವಿಟ್ಟು ತಪ್ಪಿಹೋಗಿರುವ ಅಧ್ಯಾಯಗಳನ್ನು ಸೇಪ೯ಡೆಮಾಡಿ ಸಹಕರಿಸಿ.

    ReplyDelete