Saturday, September 7, 2013

||ಶ್ರೀಗುರುಚರಿತ್ರೆ - ಮುವ್ವತ್ತೆಂಟನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

ನಾಮಧಾರಕ ಸಿದ್ಧಮುನಿಗೆ, "ಸ್ವಾಮಿ, ಇನ್ನೂ ವಿಸ್ತಾರವಾಗಿ ಗುರುಕಥಾಮೃತವನ್ನು ಆಸ್ವಾದನ ಮಾಡುವಂತೆ ಮಾಡಿ. ಶ್ರೀಗುರು ಮಾಹಾತ್ಮ್ಯೆಯನ್ನು ಕೇಳುವುದರಿಂದ ನನ್ನ ಮನಸ್ಸು ಶಾಂತಿಗೊಂಡಿದೆ" ಎಂದು ಕೇಳಲು, ಸಿದ್ಧಮುನಿಯು, "ನಿನ್ನ ನಿಮಿತ್ತದಿಂದ ನನಗೂ ಉತ್ತಮವಾದ ಲಾಭ ಕೈಗೂಡಿತು. ಆದ್ದರಿಂದ ಹೇಳುತ್ತೇನೆ. ಕೇಳು. ಗಂಧರ್ವನಗರದಲ್ಲಿ ಭಕ್ತರು ಶ್ರೀಗುರುವಿನ ಪ್ರೀತಿಗಾಗಿ ಬ್ರಾಹ್ಮಣರಿಗೆ ಸಮಾರಾಧನೆ ನಡೆಸುತ್ತಿದ್ದರು. ಬ್ರಾಹ್ಮಣರು ಅಲ್ಲಿ ಹಾಗೆ ಊಟಮಾಡದೇ ಇದ್ದ ದಿವಸವೇ ಇರುತ್ತಿರಲಿಲ್ಲ. ಹೀಗಿರಲು ಒಂದು ದಿನ ಬಡವನಾದ ಬ್ರಾಹ್ಮಣನೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಭಾಸ್ಕರ. ಅವನೊಬ್ಬ ದೀನನಾದ ಭಕ್ತ. ಕಾಶ್ಯಪ ಗೋತ್ರದವನು. ಶ್ರೀಗುರು ದರ್ಶನಕ್ಕಾಗಿ ಆ ದರಿದ್ರ ವಿಪ್ರ ಬಂದು ಭಕ್ತಿಪೂರ್ವಕವಾಗಿ ಶ್ರೀಗುರುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಶ್ರೀಗುರುವಿಗೆ ಭಿಕ್ಷೆ ಕೊಡಬೇಕೆಂಬ ಸಂಕಲ್ಪದಿಂದ ಅವನು ಬಂದಿದ್ದನು. ಆವನು ತಂದಿದ್ದ ಪದಾರ್ಥಗಳು ಮೂರು ಜನರ ಊಟಕ್ಕೆ ಮಾತ್ರ ಸಾಕಾಗುವಷ್ಟಿತ್ತು. ಆ ದಿನವೂ ಶ್ರೀಗುರು ಪ್ರೀತಿಗೋಸ್ಕರ ಸಮಾರಾಧನೆ ನಡೆಯುತ್ತಿತ್ತು. ಅವನಿಗೂ ಊಟಕ್ಕೆ ಆಹ್ವಾನ ಬಂದಿದ್ದರಿಂದ, ತಾನು ತಂದಿದ್ದ ಪದಾರ್ಥಗಳನ್ನು ಮೂಟೆ ಕಟ್ಟಿ ಮಠದಲ್ಲಿ ಒಂದು ಮೂಲೆಯಲ್ಲಿಟ್ಟು, ಅವನು ಊಟ ಮಾಡಿ ಬರುವಷ್ಟರಲ್ಲಿ ಸಾಯಂಕಾಲವಾಗಿತ್ತು. ಸಂಧ್ಯಾದಿಗಳನ್ನು ಮುಗಿಸಿ ಭಾಸ್ಕರನು ಮೂಟೆಯನ್ನು ತಲೆ ಕೆಳಗಿಟ್ಟುಕೊಂಡು ಮಲಗಿದನು. ಎರಡನೆಯ ದಿನವೂ ಅವನು ಮತ್ತೆ ಊಟಕ್ಕೆ ಹೋದನು. ಹೀಗೆ ಪ್ರತಿ ದಿನವೂ ಊಟ ಮಾಡುತ್ತಿದ್ದ ಭಾಸ್ಕರನ್ನು ನೋಡಿ, "ಶ್ರೀಗುರುವಿಗೆ ಭಿಕ್ಷೆಕೊಡಲು ಬಂದ ನಿನ್ನ ಹತ್ತಿರ ಒಬ್ಬನಿಗೆ ಸಾಕಾಗುವಷ್ಟು ಕೂಡಾ ಇಲ್ಲ. ಶ್ರೀಗುರುವಿಗೆ ಅನೇಕ ಶಿಷ್ಯರಿದ್ದಾರೆ. ಸಮರಾಧನೆ ಮಾಡುತ್ತೇನೆ ಎಂದು ಹೇಳಲಾದರೂ ನಿನಗೆ ನಾಚಿಕೆ ಬೇಡವೇ? ಸ್ವಯಂಪಾಕ ಮಾಡಿ ನೀನು ನಮಗೆ ಭಿಕ್ಷೆ ಕೊಡು" ಎಂದು ಮಠದಲ್ಲಿನ ಬ್ರಾಹ್ಮಣರು ಅವನನ್ನು ಪರಿಹಾಸ ಮಾಡುತ್ತಿದ್ದರು. ಆ ಮಾತುಗಳನ್ನು ಕೇಳದವನ ಹಾಗೆ ಇದ್ದುಕೊಂಡು ಭಾಸ್ಕರನು ಮಠದಲ್ಲಿ ಮೂರು ತಿಂಗಳು ಇದ್ದನು. ಮೂರು ತಿಂಗಳಾದ ನಂತರ ಬ್ರಾಹ್ಮಣರು ಬಾಸ್ಕರನನ್ನು ಪರಿಹಾಸ ಮಾಡುತ್ತಿದ್ದಾರೆ ಎಂದು ಶ್ರೀಗುರುವಿಗೆ ತಿಳಿಯಿತು. ಶ್ರೀಗುರುವು ಭಾಸ್ಕರನನ್ನು ಕರೆದು ಕೃಪೆಯಿಂದ, "ಇಂದು ಸ್ವಯಂಪಾಕ ಮಾಡಿ ನನಗೆ ಭಿಕ್ಷೆ ಕೊಡು" ಎಂದು ಹೇಳಿದರು. ಅವರ ಮಾತಿನಿಂದ ಸಂತೋಷಗೊಂಡ ಭಾಸ್ಕರ ಶ್ರೀಗುರು ಪಾದಗಳಿಗೆ ಶಿರಸಾ ನಮಸ್ಕರಿಸಿ, ಮಾರುಕಟ್ಟೆಗೆ ಹೋಗಿ ತುಪ್ಪ, ತರಕಾರಿಗಳನ್ನು ತಂದು, ಸ್ನಾನ ಮಾಡಿ ಶುಚಿಯಾಗಿ ಅಡಿಗೆ ಮಾಡಲು ಆರಂಭಿಸಿದನು.

ಅಷ್ಟರಲ್ಲಿ ಶ್ರೀಗುರುವಿನ ಹತ್ತಿರಕ್ಕೆ ಮತ್ತೊಬ್ಬ ಭಕ್ತ ಬಂದು, "ಇಂದೇ ನಾನು ಆರಾಧನೆ ಆರಂಭಿಸ ಬೇಕೆಂದು ಕೊಂಡಿದ್ದೇನೆ. ಅಡಿಗೆ ಸಿದ್ಧವಾಗಿದೆ" ಎಂದು ಹೇಳಲು, ಶ್ರೀಗುರುವು, "ಇಂದು ಭಾಸ್ಕರನು ಕೊಡುತ್ತಾನೆ. ನಾಳೆ ನೀನು ಕೊಡ ಬಹುದು" ಎಂದರು. ಅದಕ್ಕೆ ಅಲ್ಲಿದ್ದ ಬ್ರಾಹ್ಮಣರು, "ಇಂದು ದಿನ ನಿತ್ಯದಂತೆ ಮೃಷ್ಟಾನ್ನ ಭೋಜನ ದೊರೆಯುವುದಿಲ್ಲ. ಏಕೆಂದರೆ ಇಂದು ಭಿಕ್ಷೆ ಕೊಡುವವನು ನಿರ್ಧನನು. ಆದ್ದರಿಂದ ನಾವು ನಮ್ಮ ಮನೆಗಳಿಗೆ ಹೋಗುತ್ತೇವೆ" ಎಂದರು. ಆ ಮಾತುಗಳನ್ನು ಕೇಳಿದ ಶ್ರೀಗುರುವು, "ನೀವು ಮನೆಗಳಿಗೆ ಹೋಗಬೇಡಿ. ನೀವೆಲ್ಲರೂ ಇಂದು ಸಕುಟುಂಬರಾಗಿ ಇಲ್ಲಿಯೇ ಊಟ ಮಾಡಬೇಕು" ಎಂದು ಹೇಳಲು, ಬ್ರಾಹ್ಮಣರು ಮಠದಲ್ಲಿರುವ ಸಾಮಗ್ರಿಗಳನ್ನು ಉಪಯೋಗಿಸಿ ಶ್ರೀಗುರುವು ಅಡಿಗೆಮಾಡಿಸಿ ನಮಗೆ ಊಟ ಕೊಡುತ್ತಾರೆ" ಎಂದುಕೊಂಡು ಎಲ್ಲರೂ ಸ್ನಾನಕ್ಕೆ ಹೋದರು. ಶ್ರೀಗುರುವು ಭಾಸ್ಕರನಿಗೆ, "ಬಹಳ ಜನಕ್ಕೆ ಆಹ್ವಾನ ಹೋಗಿದೆ. ತಕ್ಷಣವೆ ಹೋಗಿ ಶೀಘ್ರವಾಗಿ ಅಡಿಗೆ ತಯಾರು ಮಾಡು" ಎಂದರು. ಅವನು ‘ಹಾಗೇ ಆಗಲಿ’ ಎಂದು ಹೇಳಿ, ತಕ್ಷಣವೇ ಹೋಗಿ ಅಡಿಗೆಯನ್ನು ಸಿದ್ಧಪಡಿಸಿ ಬಂದು ‘ಅಡಿಗೆ ತಯಾರಾಗಿದೆ’ ಎಂದು ಶ್ರೀಗುರುವಿಗೆ ತಿಳಿಸಿದನು. ಶ್ರೀಗುರುವು ಹೋಗಿ ಬ್ರಾಹ್ಮಣರನ್ನು ಕರೆಯುವಂತೆ ಹೇಳಿದರು. ಭಾಸ್ಕರನು ಅವರು ಹೇಳಿದಂತೆ ನದಿಯ ಹತ್ತಿರ ಹೋಗಿ ಬ್ರಾಹ್ಮಣರನ್ನು, "ನಾನು ಅಡಿಗೆಯೆಲ್ಲ ಸಿದ್ಧಪಡಿಸಿದ್ದೇನೆ. ಸ್ವಾಮಿ ನಿಮ್ಮೆಲ್ಲರನ್ನು ತಕ್ಷಣವೇ ಬರಲು ಹೇಳಿದ್ದಾರೆ" ಎಂದು ಹೇಳಿದನು. ಅವರೆಲ್ಲರೂ, "ನಾವು ಬರುವುದಿಲ್ಲ. ನೀನು ಹೋಗು. ಶ್ರೀಗುರುವಿಗೆ ಭಿಕ್ಷೆ ಕೊಡು" ಎಂದು ಪ್ರತ್ಯುತ್ತರ ಕೊಟ್ಟರು. ಭಾಸ್ಕರನು ಹಿಂತಿರುಗಿ ಶ್ರೀಗುರುವಿಗೆ ಆ ವಿಷಯವನ್ನು ಬಿನ್ನವಿಸಿದನು. "ಈಗಲೇ ಆ ಬ್ರಾಹ್ಮಣರೊಡನೆಯೇ ಭುಜಿಸುತ್ತೇನೆ. ಬ್ರಾಹ್ಮಣರೊಡನೆ ನನಗೆ ಭಿಕ್ಷೆ ಕೊಡಲು ಸಮ್ಮತಿಸಿದರೇನೆ ನಾನು ಅಂಗೀಕರಿಸುವುದು. ಇಲ್ಲದಿದ್ದರೆ ನಿನ್ನ ಮನೆಗೆ ಬರುವುದಿಲ್ಲ" ಎಂದರು. "ಪ್ರಭು, ನಿಮ್ಮ ಆಜ್ಞೆಯನ್ನು ಶಿರಸಾ ವಹಿಸಿದ್ದೇನೆ. ಬ್ರಾಹ್ಮಣರೊಡನೆಯೇ ನಿಮಗೆ ಭಿಕ್ಷೆ ಕೊಡುತ್ತೇನೆ" ಎಂದು ಹೇಳಿ, ಭಾಸ್ಕರನು, ‘ಈ ಸ್ವಾಮಿ ಸಾಕ್ಷಾತ್ತು ಈಶ್ವರಾವತಾರವೇ! ತಮ್ಮ ಮಾತನ್ನು ತಾವೇ ಸತ್ಯ ಮಾಡುತ್ತಾರೆ’ ಎಂದು ತನ್ನೊಳಗೇ ಆಲೋಚಿಸಿದನು.

ಶ್ರೀಗುರುವು, "ನನ್ನ ಆಜ್ಞೆಯೆಂದು ಹೇಳಿ ಇಲ್ಲೇ ಊಟಮಾಡಲು ಎಲ್ಲರನ್ನೂ ತಕ್ಷಣವೇ ಕರೆದುಕೊಂಡು ಬಾ" ಎಂದು ಆಣತಿ ಕೊಟ್ಟರು. ಹಾಗೇ ಎಂದು ಆ ದ್ವಿಜನು ಓಡಿ ಹೋಗಿ ಎಲ್ಲರಿಗೂ ಗುರು ವಾಕ್ಯವನ್ನು ತಿಳಿಸಿದನು. ವಿಪ್ರರೆಲ್ಲರೂ ಗುರು ಸನ್ನಿಧಿಗೆ ಬಂದರು. ಶ್ರೀಗುರುವು, "ವಿಪ್ರರೇ, ಎಲೆಗಳನ್ನು ಹಾಕಿ. ನೀವೆಲ್ಲರೂ ಇಂದು ಸಕುಟುಂಬರಾಗಿ ಇಲ್ಲಿಯೇ ಊಟ ಮಾಡಬೇಕು. ನಾಲ್ಕು ಸಾವಿರ ಎಲೆಗಳನ್ನು ತ್ವರೆಯಾಗಿ ಹರಡಿ" ಎಂದರು. ಅಷ್ಟು ಹೇಳಿ ಅಲ್ಲಿಯೇ ನಿಂತಿದ್ದ ಭಾಸ್ಕರನನ್ನು ನೋಡಿ ಶ್ರೀಗುರುವು, "ಅಯ್ಯಾ, ನೀವೆಲ್ಲರೂ ಸೇರಿ ಇಲ್ಲಿಗೆ ಬಂದು ಊಟ ಮಾಡಿ. ಸಕುಟುಂಬರಾಗಿ ಬನ್ನಿ ಎಂದು ದ್ವಿಜರೆಲ್ಲರನ್ನೂ ಪ್ರಾರ್ಥಿಸು" ಎಂದು ಅಜ್ಞಾಪಿಸಲು, ಭಾಸ್ಕರನು ಅವರು ಹೇಳಿದ ಹಾಗೆ ವಿಪ್ರರೆಲ್ಲರನ್ನೂ ಸಕುಟುಂಬರಾಗಿ ಬರುವಂತೆ ಆಹ್ವಾನಿಸಿದನು. ಅವರೆಲ್ಲರೂ ನಗುತ್ತಾ, "ಅಯ್ಯಾ ಬ್ರಾಹ್ಮಣ, ನೀನು ಹೀಗೆ ಕರೆಯುವುದಕ್ಕೆ ಏಕೆ ನಾಚಿಕೆ ಪಡುವುದಿಲ್ಲ?" ಎಂದರು. ಅವರಲ್ಲಿ ವೃದ್ಧರು ಮಾತ್ರ, "ಈ ದ್ವಿಜನನ್ನು ನಿಂದಿಸಬಾರದು. ಇವನು ಶ್ರೀಗುರುವು ಹೇಳಿದ ಮಾತುಗಳನ್ನೇ ಮತ್ತೆ ಹೇಳುತ್ತಿದ್ದಾನೆ. ಅದರಲ್ಲಿ ದೋಷವೇನಿಲ್ಲ" ಎಂದರು. ಆ ನಂತರ ಎಲ್ಲರೂ ಸೇರಿ ಎಲೆಗಳನ್ನು ಹಾಕಿದರು. ಭಾಸ್ಕರನು ಶ್ರೀಗುರುವಿಗೆ ಉಪಚಾರಗಳನ್ನು ಮಾಡಿ ಪೂಜಿಸಿದನು. ಭಕ್ತಿಪೂರ್ವಕವಾಗಿ ಅರ್ಚನೆ ಮಾಡಿ ನೀರಾಜನವನ್ನು ಕೊಟ್ಟನು.

ಆಗ ಶ್ರಿಗುರುವು ಭಾಸ್ಕರನಿಗೆ, "ತ್ವರೆಯಾಗಿ ಎಲೆಗಳಮೇಲೆ ನೀರು ಚೆಲ್ಲಿ ಸಿದ್ಧಮಾಡು. ಮಾಡಿರುವ ಅಡಿಗೆಯನ್ನು ನನ್ನ ಹತ್ತಿರಕ್ಕೆ ತೆಗೆದುಕೊಂಡು ಬಾ" ಎಂದು ಹೇಳಿದರು. ಅವನು ಮಾಡಿದ್ದ ಅಡಿಗೆಯನ್ನು ತಂದು ಶ್ರೀಗುರುವಿನ ಮುಂದೆ ಇಟ್ಟನು. ಒಂದು ವಸ್ತ್ರವನ್ನು ಕೊಟ್ಟು ಶ್ರೀಗುರುವು, "ಅಯ್ಯಾ ಭಾಸ್ಕರ, ಈ ನನ್ನ ವಸ್ತ್ರದಿಂದ ಅಡಿಗೆಯೆಲ್ಲವನ್ನೂ ಮುಚ್ಚು" ಎಂದು ಆಜ್ಞಾಪಿಸಿದರು. ಅವನು ಹಾಗೇ ಮುಚ್ಚಿಟ್ಟನು. ಶ್ರೀಗುರುವು ಕಮಂಡಲದಿಂದ ನೀರು ತೆಗೆದುಕೊಂಡು ಮಂತ್ರಿಸಿ ಅದರ ಮೇಲೆ ಪ್ರೋಕ್ಷಿಸಿದರು. ನಂತರ ಶ್ರೀಗುರುವು ಭಾಸ್ಕರನನ್ನು ಕರೆದು, "ಬೇರೊಂದು ಪಾತ್ರೆಯಲ್ಲಿ, ಈ ಮುಚ್ಚಿಟ್ಟಿರುವ ಅನ್ನವನ್ನು ತೆಗೆದುಕೊಂಡು ತ್ವರೆಯಾಗಿ ಬಡಿಸು. ಹಾಗೆಯೇ ಕುಂಡದಲ್ಲಿರುವ ತುಪ್ಪವನ್ನೂ ಕೂಡಾ ಇನ್ನೊಂದು ಪಾತ್ರೆಯಲ್ಲಿ ತೆಗೆದುಕೊಂಡು ದ್ವಿಜರಿಗೆಲ್ಲ ಇಷ್ಟ ಬಂದ ಹಾಗೆ ಬಡಿಸು" ಎಂದು ಆದೇಶ ಕೊಟ್ಟರು. ಭಾಸ್ಕರನು ಅನೇಕ ಪಾತ್ರೆಗಳಲ್ಲಿ ಬಡಿಸಿದನು. ಆ ಮಹದಾಶ್ಚರ್ಯವನ್ನು ಕಂಡ ಎಲ್ಲರೂ ವಿಸ್ಮಿತರಾದರು. ಶ್ರೀಗುರುವು ಇತರರನ್ನೂ ಬಡಿಸಿರಿ ಎಂದು ಆದೇಶ ಕೊಟ್ಟರು. ಬಹಳ ಜನ ಬ್ರಾಹ್ಮಣರು ಎದ್ದು ಬಡಿಸಿದರು. ಅನೇಕ ಪಾತ್ರೆಗಳನ್ನು ಅನ್ನದಿಂದ ತುಂಬಿ ಅವರು ಮತ್ತೆ ಮತ್ತೆ ಬಡಿಸಿದರು. ಹಾಗೆಯೇ ಇನ್ನೊಂದು ಪಾತ್ರೆಯಲ್ಲಿ ತುಪ್ಪವನ್ನು ತೆಗೆದುಕೊಂಡು ಶ್ರೀಗುರುವಿನ ಪಾತ್ರೆಯಲ್ಲೂ, ಎಲ್ಲ ಪಂಕ್ತಿಗಳಲ್ಲೂ ಬಡಿಸಿದರು. ಆಗ ಅವರೆಲ್ಲರೂ ಶ್ರೀಗುರುವಿನೊಡನೆ ಕೂಡಿ ಊಟ ಮಾಡಲಾರಂಭಿಸಿದರು.

ಭಾಸ್ಕರನು ಬ್ರಾಹ್ಮಣರಿಗೆ, "ಬೇಕಾದ್ದನ್ನು ಕೇಳಿ. ಅಲಸಿಹೋಗಿದ್ದೀರಿ. ಕ್ಷಮಿಸಿ. ತೃಪ್ತಿಯಾಗುವವರೆಗೂ ಸ್ವಸ್ಥ ಮನಸ್ಕರಾಗಿ ಊಟಮಾಡಿ" ಎಂದು ಪ್ರಾರ್ಥಿಸಿ, ತಾನೇ ತುಪ್ಪ ಬಡಿಸಿದನು. ತಿಂದ ಹಾಗೆಲ್ಲಾ, ಭೋಕ್ತರ ಇಷ್ಟದಂತೆ ಭಕ್ಷ್ಯ, ಭೋಜ್ಯ, ಪಲ್ಯಗಳು, ಪರಮಾನ್ನ, ತುಪ್ಪ, ಮೊಸರು ಮುಂತಾದುವುಗಳನ್ನು ಭಾಸ್ಕರನು ಬಡಿಸಿದನು. ದ್ವಿಜರೆಲ್ಲರೂ ತೃಪ್ತಿ ಹೊಂದಿದರು. ನಂತರ ಅವರು ಆಚಮನ ಮಾಡಿ ಅತ್ಯಾಶ್ಚರ್ಯಪಟ್ಟರು. ಭಾಸ್ಕರನು ಅವರೆಲ್ಲರಿಗೂ ತಾಂಬೂಲವನ್ನು ಕೊಟ್ಟನು. ನಂತರ ಶ್ರೀಗುರುವು ಭಾಸ್ಕರನಿಗೆ, "ಅಯ್ಯಾ, ಮಿಕ್ಕ ಸ್ತ್ರೀಯರನ್ನೂ ಮಕ್ಕಳನ್ನು ಊಟ ಮಾಡಲು ಬರಹೇಳು" ಎಂದರು. ಹಾಗೆ ವಿಪ್ರ ಕುಲದವರೆಲ್ಲರೂ ಬಂದು ಮಠದಲ್ಲಿ ಅಮೃತವನ್ನೇ ಊಟ ಮಾಡಿದರು. ಆ ನಂತರ ಶ್ರೀಗುರುವು ಗ್ರಾಮಸ್ಥರನ್ನು, ಶೂದ್ರರನ್ನು ಕೂಡಾ ಊಟಕ್ಕೆ ಕರೆಸಿದರು. ಕರೆದವರೆಲ್ಲರೂ ಬಂದು ಊಟ ಮಾಡಿದರು. ಶ್ರೀಗುರುವು ಮಿಕ್ಕವರು ಯಾರಿದ್ದಾರೆ ಎಂದು ಕೇಳಲು, "ಸ್ವಾಮಿ ಹೀನ ಜಾತಿಯವರು ಮಾತ್ರ ಇದ್ದಾರೆ" ಎಂದು ಹೇಳಿದರು. "ಅವರನ್ನೂ ಕೂಡಾ ಕರೆದು ಅವರಿಗೆ ಬೇಕಾದಷ್ಟು ಅನ್ನವನ್ನು ನೀಡಬೇಕಾದ್ದೇ! ಯಾರು ಎಷ್ಟು ಕೇಳುತ್ತಾರೋ ಅಷ್ಟು ಅನ್ನವನ್ನು ಅವರಿಗೆ ಕೊಡಿ. ಅವರ ಸ್ತ್ರೀಬಾಲರನ್ನೂ ಕೂಡಾ ಕರೆದು ಅನ್ನವನ್ನು ನೀಡಿ" ಎಂದು ಶ್ರೀಗುರುವು ಆಜ್ಞಾಪಿಸಲು ಭಾಸ್ಕರನು ಅವರನ್ನೂ ಕರೆದು ಕೇಳಿದಷ್ಟು ಅನ್ನವನ್ನು ಅವರಿಗೂ ಕೊಟ್ಟನು. ಅವರೆಲ್ಲರೂ ತೃಪ್ತಿಪಟ್ತರು. ಹಸಿದು ಕೊಂಡಿದ್ದವರು ಯಾರೂ ಇರಲಿಲ್ಲ. ಆ ನಂತರದಲ್ಲಿ ಶ್ರೀಗುರುವು ಭಾಸ್ಕರನಿಗೆ, "ಅಯ್ಯಾ ಬ್ರಾಹ್ಮಣ, ಗ್ರಾಮದಲ್ಲಿ ಎಲ್ಲ ವೀಧಿಗಳಿಗೂ ಹೋಗಿ ಹಸಿದುಕೊಂಡಿರುವವರು ಯಾರಾದರೂ ಇದ್ದರೆ ಬಂದು ಊಟ ಮಾಡಿಕೊಂಡು ಹೋಗಿ. ಇದು ಶ್ರೀಗುರುವಿನ ಆಜ್ಞೆ, ಎಂದು ಘಟ್ಟಿಯಾಗಿ ಘೋಷಣೆ ಮಾಡು" ಎಂದು ಆದೇಶಿಸಿದರು. ಭಾಸ್ಕರನು ಅದೇ ರೀತಿ ಮಾಡಿದನು. ಯಾವ ಪ್ರಾಣಿಯೂ ಅಂದು ಉಪವಾಸ ಮಾಡಲಿಲ್ಲ. ಎಲ್ಲರೂ ಕೋರಿದಷ್ಟು ತಿಂದವರಾದರು. ಆಗ ಶ್ರೀಗುರುವು, "ಭಾಸ್ಕರ ಇನ್ನು ನೀನು ಊಟ ಮಾಡಯ್ಯಾ" ಎಂದರು. ಅವನೂ ಊಟ ಮಾಡಿದನು. ಅದಾದಮೇಲೆ ಶ್ರೀಗುರುವು, "ಭಾಸ್ಕರ, ಇಲ್ಲಿ ಕೇಳು. ಇನ್ನೂ ಅನ್ನವೇನಾದರೂ ಮಿಕ್ಕಿದೆಯೇ?" ಎಂದು ಕೇಳಿದರು. ಅವನು ಮಿಕ್ಕ ಅನ್ನವೆಷ್ಟೊ ತೋರಿಸಿದನು. "ಈ ಅವಶಿಷ್ಟಾನ್ನವನ್ನೆಲ್ಲಾ ನೀರಿನಲ್ಲಿ ಜಲಪ್ರಾಣಿಗಳಿಗೆ ಕೊಡು. ಅವೂ ಸ್ವೇಚ್ಛೆಯಾಗಿ ತಿಂದು ತೃಪ್ತಿ ಹೊಂದುತ್ತವೆ" ಎಂದು ಆಣತಿ ಕೊಟ್ಟ ಶ್ರೀಗುರುವಿನ ಆಜ್ಞೆಯಂತೆ ಭಾಸ್ಕರನು ಮಿಕ್ಕ ಅನ್ನವನ್ನೆಲ್ಲಾ ನೀರಿನಲ್ಲಿ ಹಾಕಿದನು. ಅಂದು ಊಟ ಮಾಡಿದ ಒಟ್ಟು ಜನರ ಸಂಖ್ಯೆ ನಾಲ್ಕು ಸಾವಿರವಾಗಿತ್ತು ಎಂದು ತಿಳಿದು ಜನರೆಲ್ಲರೂ ಆಶ್ಚರ್ಯ ಪಟ್ಟರು. ಬಹಳ ಕಡಮೆ ಅನ್ನದಿಂದ ಅಪರಿಮಿತವಾದ ಜನ ಊಟ ಮಾಡಿದರು ಎನ್ನುವುದು ಎಷ್ಟು ಆಶ್ಚರ್ಯಕರವಾದದ್ದು! ಭಾಸ್ಕರನನ್ನು, ‘ಪುತ್ರಪೌತ್ರಾದಿಗಳು, ಸಿರಿಸಂಪದದಿಂದ ಕೂಡಿ ವರ್ಧಮಾನನಾಗು’ ಎಂದು ಶ್ರೀಗುರುವು ಆಶೀರ್ವದಿಸಿದರು. ಆ ಆಶೀರ್ವಚನಗಳನ್ನು ಕೇಳಿ ಅಲ್ಲಿದ್ದವರೆಲ್ಲರೂ ಆಶ್ಚರ್ಯಪಟ್ಟರು. ‘ಶ್ರೀಗುರುವು ಅನ್ನಪೂರ್ಣೆಯನ್ನು ಸ್ಮರಿಸಿದರೇ?’ ಎಂದು ಮತ್ತೆ ಕೆಲವರು ಹೇಳಿದರು. ‘ಇಲ್ಲಿ ಶ್ರೀ ನೃಸಿಂಹ ಸರಸ್ವತಿ ಮಾನವನಾಗಿ ಅವತರಿಸಿದರು’ ಎಂದು ಮತ್ತೆ ಕೆಲವರು ಹೇಳಿದರು. ಹಿಂದೆ ದೂರ್ವಾಸ ಮಹರ್ಷಿ ಋಷಿಗಳೊಡನೆ ಪಾಂಡವರ ಮನೆಗೆ ಹೋದನಂತೆ. ಆತಿಥ್ಯ ಕೊಡಲು ಅವಕಾಶವಿಲ್ಲವೆನ್ನುವ ಭಯದಿಂದ ದ್ರೌಪದಿ ಪ್ರಾರ್ಥಿಸಲು ಶ್ರೀ ಕೃಷ್ಣನು ಪ್ರತ್ಯಕ್ಷನಾಗಿ ಅನ್ನವನ್ನು ಸಂಪೂರ್ಣವಾಗಿ ಸೃಷ್ಟಿಸಿದನೆಂದು ಕೇಳಿದ್ದೇನೆ. ಈಗ ಪ್ರತ್ಯಕ್ಷವಾಗಿ ನೋಡಿದೆವು. ತ್ರಿಮೂರ್ತ್ಯವತಾರವಾದ ಈ ಪುರುಷನು ಕೇವಲ ಮಾನವ ಮಾತ್ರನಲ್ಲ. ಈ ಗುರುವಿನ ಮಹಿಮೆ ಯಾರಿಗೂ ತಿಳಿಯಲಾಗುವುದಿಲ್ಲ. ಈತನು ಮಾನವ ಮಾತ್ರನು ಎಂದು ಹೇಳುವವನು ಅಧೋಗತಿಯನ್ನು ಹೊಂದುತ್ತಾನೆ. ಪ್ರಾಣ ಹೋದವನು ಜೀವಂತನಾದನು. ಒಣಗಿಹೋದ ಕಟ್ಟಿಗೆ ಚಿಗುರಿತು. ತ್ರಿವಿಕ್ರಮನಿಗೆ ವಿಶ್ವರೂಪವನ್ನೇ ಈ ಶ್ರೀಗುರುವು ದರ್ಶಿಸುವಂತೆ ಮಾಡಿದನು. ಗೊಡ್ಡೆಮ್ಮೆ ಹಾಲು ಕರೆಯಿತು. ನೀಚನ ಮುಖವನ್ನು ಅಭಿಮಂತ್ರಿಸಲು ವೇದಗಳು ಉಚ್ಚರಿಸಲ್ಪಟ್ಟವು. ಕುಷ್ಠುರೋಗ ಪೀಡಿತನಾದ ಬ್ರಾಹ್ಮಣ ಬಂದಾಗ ಶ್ರೀಗುರುವಿನ ದೃಷ್ಟಿ ತಾಕುತ್ತಿದಂತೆಯೇ ಅವನು ರೋಗ ಹೋಗಿ ನಿರ್ಮಲನಾದನು. ಭಕ್ತನಾದ ನೇಯ್ಗೆಯವನನ್ನು ಒಂದು ಕ್ಷಣದಲ್ಲಿ ಶ್ರೀಗಿರಿಗೆ ಕರೆದುಕೊಂಡು ಹೋದರು. ಅರೆಕ್ಷಣದಲ್ಲಿ ಭಕ್ತನಿಗೆ ಕಾಶಿಕ್ಷೇತ್ರ ದರ್ಶನ ಮಾಡಿಸಿದರು. ಹಾಗೆ ಮಾಡಬಲ್ಲ ಸಮರ್ಥನು ಶ್ರಿಗುರುವೊಬ್ಬನೇ! ಶ್ರೀಗುರುವಿಗೆ ಸಮಾನರಾದವರು ಯಾರೂ ಇಲ್ಲ. ದೇವತೆಗಳನ್ನು ಆರಾಧಿಸಿದರೆ ಅವರು ತ್ವರೆಯಾಗಿ ಫಲವನ್ನು ನೀಡುವುದಿಲ್ಲ. ಶ್ರೀಗುರುನಾಥನು ತನ್ನ ದೃಷ್ಟಿಯಿಂದಲೇ ತ್ವರೆಯಾಗಿ ಸರ್ವಕರ್ಮಗಳೂ ಸಿದ್ಧಿಸುವಂತೆ ಮಾಡುವನು. ಹೀಗೆಲ್ಲಾ ಹೇಳಿಕೊಳ್ಳುತ್ತಾ ಎಲ್ಲರೂ ಕುತೂಹಲಿಗಳಾಗಿ ನಿಂತಿದ್ದರು. ಹಾಗೆ ಶ್ರೀಗುರುವಿನ ಚರಿತ್ರೆ ಮೂರುಲೋಕಗಳಲ್ಲೂ ಖ್ಯಾತಿಗೆ ಬಂತು. ನಾಮಧಾರಕ, ಆದರಿಂದಲೇ ಆ ಮಹಾತ್ಮನಿಗೆ ಬಹಳಜನ ಶಿಷ್ಯರು ಇದ್ದಾರೆ. ಅವರೆಲ್ಲರೂ ವಿವಿಧ ದೇಶಗಳಿಂದ ಬಂದು ಶ್ರೀಗುರುವಿನ ಸೇವೆ ಮಾಡುತ್ತಿದ್ದಾರೆ. ಅಂತಃಕರಣ ಧೃಢವಾಗಿರುವವನಿಗೆ ಶ್ರೀಗುರುವು ಪ್ರಸನ್ನನಾಗುತ್ತಾನೆ.

ಶ್ರೀಗುರುವು ಕಲಿಯುಗದಲ್ಲೂ ಕೂಡಾ ತ್ವರೆಯಾಗಿ ಅಭೀಷ್ಟ ಸಿದ್ಧಿಯಾಗುವಂತೆ ಮಾಡುತ್ತಾನೆ. ಆದ್ದರಿಂದ ಆಪ್ತಬಂಧುವಾದ ಶ್ರೀಗುರುವಿನ ಸೇವೆ ಸತತವಾಗಿ ಮಾಡು" ಎಂದು ಸಿದ್ಧಮುನಿ ಬೋಧಿಸಿದರು. 

ಇಲ್ಲಿಗೆ ಮುವ್ವತ್ತೆಂಟನೆಯ ಅಧ್ಯಾಯ ಮುಗಿಯಿತು.

No comments:

Post a Comment