Sunday, September 22, 2013

||ಶ್ರೀಗುರುಚರಿತ್ರೆ - ನಲವತ್ತುಮೂರನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ಶ್ರೀಗುರುವು, "ಸಾಯಂದೇವ, ಮಹಿಮೋಪೇತವಾದ ಅನಂತವ್ರತ ವಿಧಾನವನ್ನು ಕೇಳು. ಹಿಂದೆ ಕಪಟ ದ್ಯೂತದಲ್ಲಿ ಕೌರವರು ಪಾಂಡು ಪುತ್ರರ ರಾಜ್ಯವನ್ನು ಅಪಹರಿಸಿದರಲ್ಲವೇ? ರಾಜ್ಯಭ್ರಷ್ಠನಾದ ಯುಧಿಷ್ಠಿರ ಹನ್ನೆರಡು ವರ್ಷ ಕಾಡಿನಲ್ಲಿದ್ದನು. ಘೋರಾರಣ್ಯದಲ್ಲಿ ವಾಸಿಸುತ್ತಾ ದರ್ಮರಾಜನು ಸೋದರರೊಡನೆ ಯಾವಾಗಲೂ ಶ್ರೀಹರಿಯ ಧ್ಯಾನವನ್ನು ಮಾಡುತ್ತಿದ್ದನು. ಪಾಂಡವರು ಕಾಡಿನಲ್ಲಿ ಬಹಳ ಕಷ್ಟಪಡುತ್ತಿದ್ದರು. ಆ ಪಾಂಡವರ ಸರ್ವಸ್ವವನ್ನೂ ಅಪಹರಿಸಲು ದುರ್ಯೋಧನನು ದೂರ್ವಾಸ ಮುನಿಯನ್ನು ಕಳುಹಿಸಿದನು. ಪಾಂಡವರ ಸಹಾಯಕನಾದ ಹೃಷೀಕೇಶನು ಪಾಂಡವರನ್ನು ರಕ್ಷಿಸಿದನು. ಅವರ ಕಷ್ಟಗಳನ್ನು ತಿಳಿದ ಶ್ರೀ ಕೃಷ್ಣ ಅವರಿದ್ದ ಸ್ಥಳಕ್ಕೆ ಸ್ವಯಂ ಬಂದನು. ಧರ್ಮರಾಜನು ಶೀಕೃಷ್ಣನನ್ನು ಸಮೀಪಿಸಿ, ಶ್ರೀಕೃಷ್ಣನ ದರ್ಶನದಿಂದ ತಾನು ಪವಿತ್ರನಾದೆನೆಂದು ತಿಳಿದು ಅವನನ್ನು ಭಕ್ತಿಯಿಂದ ಪೂಜಿಸಿ ಈ ವಿಧದಲ್ಲಿ ಸ್ತುತಿಸಿದನು.

"ನಾರಾಯಣ, ಅನಂತ, ಭಕ್ತವತ್ಸಲ, ಹೃಷೀಕೇಶ, ಜಯವಾಗಲಿ. ಭವಸಾಗರತಾರಕ, ಜಯವಾಗಲಿ. ಕ್ಷೀರಸಮುದ್ರನಿವಾಸ, ಲಕ್ಷ್ಮೀಶ, ಶ್ರೀಪತೇ, ಜಯವಾಗಲಿ. ಪರಮಾತ್ಮ, ನೀನೇ ಪರಂಜ್ಯೊತಿಯಾದ ತ್ರಿಮೂರ್ತಿಯು. ವಿಶ್ವವನ್ನು ನೀನೇ ಸೃಷ್ಟಿಸುತ್ತಿದ್ದೀಯೆ. ನೀನೇ ರಕ್ಷಿಸುತ್ತಿದ್ದೀಯೆ. ನೀನೇ ಲಯ ಮಾಡುತ್ತಿದ್ದೀಯೆ. ವಿಶ್ವಕ್ಕೆಲ್ಲ ನೀನೇ ಜೀವವಾಗಿ ಸರ್ವವನ್ನೂ ಸದಾ ರಕ್ಷಿಸುತ್ತಿದ್ದೀಯೆ. ಪಾಂಡವರು ನನ್ನ ಪ್ರಾಣವೆಂದು ಎಲ್ಲರಿಗೂ ಪ್ರಕಟ ಮಾಡಿ ನಮ್ಮನ್ನು ಕಾಡಿನಲ್ಲಿ ಇಟ್ಟು ಇಂತಹ ಕಷ್ಟಗಳನ್ನು ಏಕೆ ಉಂಟು ಮಾಡಿದ್ದೀಯೆ? ನಿನ್ನನ್ನು ಬಿಟ್ಟು ನಾವು ಯಾರಿಗೆ ಹೇಗೆ ಹೇಳಿಕೊಳ್ಳಬೇಕೋ ಅದನ್ನು ನಮಗೆ ಹೇಳು" ಎಂದು ಧರ್ಮರಾಜನು ಹೇಳುತ್ತಿರಲು, ಭೀಮಸೇನನು ಬಂದು ಶ್ರೀಹರಿಯ ಪಾದಗಳನ್ನು ಹಿಡಿದು, "ಹೇ ಪ್ರಭು, ಭಕ್ತರಾದ ನಮ್ಮನ್ನು ಉಪೇಕ್ಷಿಸುತ್ತಿರುವುದೇತಕ್ಕೆ?" ಎಂದನು. ಧನಂಜಯನು ಕೂಡಾ ಅಲ್ಲಿಗೆ ಬಂದು, ಶ್ರೀಹರಿಯ ಪಾದಗಳಲ್ಲಿ ಶಿರಸ್ಸಿಟ್ಟು, "ಹೇ ಮುರವೈರಿ, ಕೃಪಾನಿಧಿ, ಶ್ರೀಕೃಷ್ಣ, ನಮ್ಮಲ್ಲಿ ನಿನಗೆ ದಯಾ ದೃಷ್ಟಿಯಿದ್ದರೆ ನಮಗೆ ಈ ವನವಾಸವೇ ಮೊದಲಾದ ಶ್ರಮ ಯಾತಕ್ಕೆ ಉಂಟಾಗುತ್ತಿದೆ? ಕುಂತೀಪುತ್ರರು ನನ್ನ ಪ್ರಾಣಪ್ರಿಯರು ಎಂದ ನಿನ್ನ ಮಾತನ್ನು ಸತ್ಯಮಾಡು. ನಮ್ಮ ಕಷ್ಟಗಳನ್ನು ಹೋಗಲಾಡಿಸು" ಎಂದು ಬಿನ್ನವಿಸಿಕೊಂಡನು. ನಂತರ ನಕುಲ ಸಹದೇವರೂ ಬಂದು ಪ್ರಣಾಮ ಮಾಡಿದರು. ದ್ರೌಪದಿ ಸಹಿತರಾದ ಪಂಚ ಪಾಂಡವರು ಹೀಗೆ ನಮಸ್ಕಾರಗಳನ್ನು ಅರ್ಪಿಸಿ, "ಹೇ ಪ್ರಭು, ನಮ್ಮಲ್ಲಿ ಪಕ್ಷಪಾತವಿರುವವನೇ! ನಮ್ಮನ್ನು ಕಾಡಿನಲ್ಲಿ ಏಕೆ ನಿಲ್ಲಿಸಿದ್ದೀಯೆ? ಈಗ ನಮ್ಮ ಕರ್ತವ್ಯವೇನು ಎಂಬುದನ್ನು ಹೇಳು. ಸಾಮ್ರಾಜ್ಯವನ್ನು ಮತ್ತೆ ಪಡೆಯಲು ಏನು ಮಾಡಬೇಕು? ಹೇ ಹೃಷೀಕೇಶ, ಹೇಳು" ಎಂದು ಪ್ರಾರ್ಥಿಸಿದ ಪಾಂಡವರಿಗೆ ಆರ್ದ್ರಹೃದಯನಾದ ಶ್ರೀ ಕೃಷ್ಣನು ಹೀಗೆ ಬೋಧಿಸಿದನು.

"ನಿಮಗೆ ಒಂದು ವ್ರತವನ್ನು ಹೇಳುತ್ತೇನೆ. ಅದರ ಅನುಗ್ರಹದಿಂದ ನಿಮಗೆ ರಾಜ್ಯ ಪ್ರಾಪ್ತಿಯಾಗುವುದು. ಅದು ಅನಂತವ್ರತವು. ವ್ರತಗಳಲ್ಲೆಲ್ಲಾ ಅದು ಉತ್ತಮವು. ಅದನ್ನು ಆಚರಿಸುವುದರಿಂದ ಶೀಘ್ರವಾಗಿ ರಾಜ್ಯವು ಪ್ರಾಪ್ತಿಯಾಗುವುದು. ಅನಂತನಾದ ನಾನು ಒಬ್ಬನೇ ಎಲ್ಲೆಲ್ಲೂ ಸದಾ ಸಂಪೂರ್ಣನಾಗಿ ಇದ್ದೇನೆ. ಹಗಲು ರಾತ್ರಿಗಳಲ್ಲಿ, ಪಕ್ಷಗಳಲ್ಲಿ, ಮಾಸಗಳಲ್ಲಿ, ಅಯನಗಳಲ್ಲಿ, ಸಂವತ್ಸರಗಳಲ್ಲಿ, ಯುಗಗಳಲ್ಲಿ, ಕಲ್ಪಗಳಲ್ಲಿ ನಾನೇ ವ್ಯಾಪಿಸಿದ್ದೇನೆ. ಭೂತ, ಭವಿಷ್ಯತ್, ವರ್ತಮಾನಗಳೆಲ್ಲವೂ ನಾರಾಯಣನಾದ ನನ್ನ ಸ್ವರೂಪಗಳೇ. ದುಷ್ಟ ಸಂಹಾರಕ್ಕೆಂದು, ಸಾಧು ರಕ್ಷಣೆಗಾಗಿ ನಾನು ಯದು ವಂಶದಲ್ಲಿ ಜನಿಸಿದ್ದೇನೆ. ಧರ್ಮರಾಜ, ಆ ವಾಸುದೇವನೂ, ಅನಂತನೂ ನಾನೇ! ಬ್ರಹ್ಮ, ವಿಷ್ಣು, ಮಹೇಶ್ವರರು ನನ್ನ ಮೂರ್ತಿತ್ರಯವೇ! ರಾಶಿಗಳು, ಗ್ರಹಗಳು, ಚತುರ್ದಶಭುವನಗಳು, ಅಷ್ಟವಸುಗಳು, ದ್ವಾದಶಾದಿತ್ಯರು, ಏಕಾದಶರುದ್ರರು, ಸಪ್ತಸಮುದ್ರಗಳು, ಸಪ್ತಪಾತಾಳಗಳು, ಪರ್ವತಗಳೂ ನಾನೇ! ತೃಣ, ವೃಕ್ಷ, ಲತೆ, ಪೊದೆಗಳು, ನಕ್ಷತ್ರಗಳು, ಆಕಾಶವು, ದಿಕ್ಕುವಿದಿಕ್ಕುಗಳು, ನಾನೇ ಆಗಿ ಸಮಸ್ತವನ್ನೂ ವ್ಯಾಪಿಸಿ, ಜನ್ಮ ರಹಿತನಾಗಿ ಭರಿಸುತ್ತಿದ್ದೇನೆ. ಪಾತಾಳಗಳು, ಭೂಲೋಕ, ಅಣುವೇ ಮುಂತಾದುವೂ ನಾನೇ! ಆದ್ದರಿಂದ ಯುಧಿಷ್ಠಿರ, ನನ್ನನ್ನೇ ಶಾಶ್ವತನಾದ ಅನಂತನನ್ನಾಗಿ ತಿಳಿದುಕೊಂಡು, ನನ್ನನ್ನು ಶಾಸ್ತ್ರೋಕ್ತವಾಗಿ ಪೂಜಿಸು. ಈ ವ್ರತವೇ ನನ್ನ ಪೂಜವಿಧಾನಗಳಲ್ಲೆಲ್ಲ ಶ್ರೇಷ್ಠವು" ಎಂದು ಶ್ರೀ ಕೃಷ್ಣನು ಉಪದೇಶಮಾಡಿದನು.

ಪಾರ್ಥನು, "ಸ್ವಾಮಿ, ವ್ರತವಿಧಾನವನ್ನು ತಿಳಿಸು. ಅದಕ್ಕೆ ಧನವೇನು? ಹೇಗೆ ಪೂಜೆಮಾಡಬೇಕು? ಯಾವ ದಿನದಂದು ಈ ವ್ರತವನ್ನು ಮಾಡಬೇಕು? ಹಿಂದೆ ಯಾರು ಈ ವ್ರತವನ್ನು ಮಾಡಿದ್ದಾರೆ? ಸ್ವಾಮಿ, ನಮಗೆ ಎಲ್ಲವನ್ನೂ ವಿಸ್ತರಿಸಿ ಹೇಳು" ಎಂದು ಪ್ರಾರ್ಥಿಸಲು, ಶ್ರೀಕೃಷ್ಣನು, "ಧರ್ಮರಾಜ, ಭಾದ್ರಪದ ಶುಕ್ಲ ಚತುರ್ದಶಿಯ ದಿನ ಮಧ್ಯಾಹ್ನದಲ್ಲಿ ಈ ವ್ರತವನ್ನು ಮಾಡು. ಶ್ರದ್ಧೆಯಿಂದ ಅನಂತನನ್ನು ಆರಾಧಿಸು. ಶೀಘ್ರವಾಗಿ ರಾಜ್ಯವನ್ನು ಹೊಂದಬಲ್ಲೆ. ಹಿಂದೆ ಕೃತ ಯುಗದಲ್ಲಿ ಸುಮಂತನೆಂಬ ಬ್ರಾಹ್ಮಣೋತ್ತಮನೊಬ್ಬನು ಇದ್ದನು. ಅವನು ವಸಿಷ್ಠ ಗೋತ್ರದವನು. ಅವನ ಹೆಂದತಿ ಭಾರ್ಗವ ವಂಶ ಸಂಜಾತೆ, ದೀಕ್ಷ ಎನ್ನುವ ಪತಿವ್ರತೆ. ಆಕೆಗೆ ಸುಶೀಲ ಎನ್ನುವ ಮಗಳಿದ್ದಳು. ಸುಮಂತನ ಹೆಂಡತಿ ದೈವವಶಾತ್ ಮರಣ ಹೊಂದಿದಳು. ಸುಶೀಲ ತಂದೆಯೊಡನೆ ಬೆಳೆಯುತ್ತಿದ್ದಳು. ಅವಳು ಪ್ರತಿದಿನವೂ ಐದು ಬಣ್ಣಗಳ ರಂಗೋಲಿಯಿಂದ ಮನೆಯನ್ನು ಅಲಂಕರಿಸಿ ವಿಚಿತ್ರವಾದ ತೋರಣಗಳನ್ನು ಕಟ್ಟುತ್ತಿದ್ದಳು. ಮನೆ ಬಾಗಿಲುಗಳನ್ನು ತೊಳೆಯುವಾಗ ಶಂಖ ಪದ್ಮ ಮುಂತಾದುವನ್ನು ಬರೆಯುತ್ತಿದ್ದಳು. ಸುಮಂತನು ಕ್ರಿಯಾಲೋಪ ವಾಗುತ್ತಿದ್ದುದರಿಂದ ಯಜ್ಞ ಸೇವೆಗೆಂದು ದ್ವಿತೀಯ ವಿವಾಹವನ್ನು ಮಾಡಿಕೊಂಡನು. ಆ ಎರಡನೆಯ ಹೆಂಡತಿ ಗಯ್ಯಾಳಿ. ದುರಾಚಾರಿ. ದುಶ್ಶೀಲೆ. ದುರದೃಷ್ಟದಿಂದ ಗಂಡನಲ್ಲಿ, ಮಗಳಲ್ಲಿ ವೈರವುಂಟಾಗುವಂತೆ ವರ್ತಿಸುತ್ತಿದ್ದಳು. ಸ್ವಲ್ಪಕಾಲದಲ್ಲಿ ಆ ಸುಶೀಲೆಗೆ ವಿವಾಹ ಯೋಗ್ಯ ವಯಸ್ಸಾಯಿತು. ಅವಳ ತಂದೆ ಇದು ಕನ್ಯಾದಾನ ಸಮಯವಲ್ಲವೇ ಎಂದು ಚಿಂತಿಸುತ್ತಿರಲು ಅವರಲ್ಲಿಗೆ ಕೌಂಡಿನ್ಯ ಋಷಿ ಬಂದನು. ಸರ್ವ ವಿದ್ಯಾ ಪಾರಂಗತನಾದ ಅವನು ಅವಳನ್ನು ಭಾರ್ಯೆಯಾಗಿ ಸ್ವೀಕರಿಸಿದನು. ಎರಡು ವರ್ಷ ಎರಡು ತಿಂಗಳು ಅ ನೂತನ ದಂಪತಿಗಳನ್ನು ಮುನಿ ತನ್ನ ಮನೆಯಲ್ಲೇ ನಿಲ್ಲಿಸಿ ಕೊಂಡನು. ಸವತಿ ತಾಯಿಗೂ ಮಗಳಿಗೂ ವೈರವು ಬೆಳೆಯಿತು. ಕೌಂಡಿನ್ಯನು ಮಾವನಿಗೆ ‘ಮತ್ತೊಂದು ಮನೆ ಮಾಡುತ್ತೇನೆ’ ಎಂದು ಹೇಳಿದನು. "ಈ ನನ್ನ ಹೆಂಡತಿ ಕಲಹಕಾರಿಣಿ. ಎಂದಿದ್ದರೂ ಇವರಿಬ್ಬರೂ ನನ್ನಿಂದ ದೂರವಾಗುವವರೇ! ಹೆಂಡತಿ ಶಾಂತಳಾಗಿಲ್ಲದ ಮನೆಯು ಕಾಡೇ! ಮಗಳು ಇಲ್ಲೇ ಇದ್ದರೆ ಅಳಿಯನ ದರ್ಶನ, ಸಂತೋಷಗಳು ಲಭಿಸುತ್ತವೆ" ಎಂದು ದುಃಖದಿಂದ ಯೋಚಿಸುತ್ತಿದ್ದ ಸುಮಂತನನ್ನು ಕೌಂಡಿನ್ಯನು, "ಇಬ್ಬರು ತಾಪಸಿಗಳು ಒಂದೇ ಕಡೆಯಲ್ಲಿ ಇರಬಾರದು. ಅದರಿಂದ ಇಬ್ಬರ ಯೋಗಾಭ್ಯಾಸಕ್ಕೂ ಹಾನಿಯಾಗುವುದು. ಆಶ್ರಮವನ್ನು ಏರ್ಪಡಿಸಿಕೊಂಡು ಸುಖವಾಗಿ ತಪಸ್ಸು ಮಾಡಿಕೊಳುತ್ತೇನೆ. ಸ್ವಲ್ಪವೇ ದೂರದಲ್ಲಿ ಇರುತ್ತೇನೆ. ಅದರಿಂದ ನಮ್ಮನ್ನು ಆಗಾಗ ನೋಡುತ್ತಿರಬಹುದು" ಎಂದು ಹೇಳಿದನು.

ಅದಕ್ಕೆ ಸುಮಂತನು, "ಅಯ್ಯಾ, ಸುವ್ರತ, ಇನ್ನು ಹನ್ನೆರಡು ದಿನಗಳು ಇಲ್ಲೇ ಇರು. ಸರ್ವಸಿದ್ಧಿ ಪ್ರದವಾದ ತ್ರಯೋದಶಿಯಂದು ಪ್ರಯಾಣ ಮಾಡು" ಎಂದು ಕೋರಲು, ಅವನ ಕೋರಿಕೆಯನ್ನು ಮನ್ನಿಸಿ ಕೌಂಡಿನ್ಯನು ಹನ್ನೆರಡು ದಿನಗಳು ಅಲ್ಲೇ ಇದ್ದು ನಂತರ, ಸುಮುಹೂರ್ತದಲ್ಲಿ ಹೆಂಡತಿಯನ್ನು ಕರೆದುಕೊಂಡು ಹೊರಟನು. ಸುಮಂತನು ತನ್ನ ಗಯ್ಯಾಳಿ ಹೆಂಡತಿಯೊಡನೆ, "ಮಗಳು ಗಂಡನೊಡನೆ ಹೊರಟಿದ್ದಾಳೆ. ಧಾನ್ಯವನ್ನು, ಗೋಧಿಯಿಂದ ಮಾಡಿದ ದಾರಿಬುತ್ತಿಯನ್ನು ಅವಳಿಗೆ ಕೊಡು" ಎಂದು ಹೇಳಿದನು. ಅದಕ್ಕೆ ಅವಳು ಮನೆಯೊಳಕ್ಕೆ ಹೋಗಿ ಬಾಗಿಲು ಸೇರಿಸಿ, ಚಿಲಕ ಹಾಕಿ, "ನಾನು ಏನೂ ಕೊಡುವುದಿಲ್ಲ" ಎಂದು ಹೇಳಿದಳು. ಸುಶೀಲೆ ತಂದೆಯನ್ನು ಓದಾರಿಸುತ್ತಾ, "ಏನೂ ಕೊಡಬೇಕಾದ ಅವಶ್ಯಕತೆಯಿಲ್ಲ. ನಾನು ಹೋಗಿಬರುತ್ತೇನೆ" ಎಂದು ಹೇಳಿದಳು. ಋಷಿಯು ಅಡಿಗೆ ಮನೆಯಲ್ಲಿದ್ದ ಸ್ವಲ್ಪ ಗೋಧಿಹಿಟ್ಟನ್ನು ತಂದು ಮಗಳಿಗೆ ಕೊಟ್ಟು ಅವರನ್ನು ಕಳುಹಿಸಿಕೊಟ್ಟನು.

ಮಧ್ಯಾಹ್ನವಾಗುತ್ತಲೂ ಕೌಂಡಿನ್ಯನು ಒಂದು ನದಿತೀರದಲ್ಲಿ ಆಹ್ನಿಕ ಕೃತ್ಯಗಳನ್ನು ಮುಗಿಸಿದನು. ನದೀತಟದಲ್ಲಿ ಕೆಲವು ಸ್ತ್ರೀಯರು ಕೆಂಪು ವಸ್ತ್ರಗಳನ್ನುಟ್ಟು ಚತುರ್ದಶಿ ವ್ರತವನ್ನು ಮಾಡುತ್ತಾ, ಬೇರೆಬೇರೆಯಾಗಿ ಕಲಶಗಳನ್ನು ಸ್ಥಾಪಿಸುತ್ತಿರುವುದನ್ನು ಸುಶೀಲ ನೋಡಿದಳು. ಮೆಲ್ಲಮೆಲ್ಲಗೆ ಅವಳು ಅವರ ಹತ್ತಿರಕ್ಕೆ ಹೋಗಿ, "ನೀವೆಲ್ಲರೂ ಮಾಡುತ್ತಿರುವ ವ್ರತವೇನು?" ಎಂದು ಕೇಳಿದಳು. ಅದಕ್ಕೆ ಅವರು, "ಇದು ಅನಂತವ್ರತ ಎನ್ನುವ ಉತ್ತಮ ವ್ರತವು. ಇದು ಸಕಲ ಅಭೀಷ್ಟಗಳನ್ನೂ ಕೊಡುವಂತಹುದು" ಎಂದರು. "ನೀವು ನನಗೆ ಈ ವ್ರತವಿಧಾನವನ್ನು ವಿಸ್ತಾರವಾಗಿ ಹೇಳಬೇಕೆಂದು ಕೋರುತ್ತೇನೆ" ಎಂದು ಅವರಲ್ಲಿ ಪ್ರಾರ್ಥಿಸಿದಳು. ಅವರು, "ಹೇ ಸಾಧ್ವಿ, ಭಾದ್ರಪದಮಾಸದ ಶುಕ್ಲಪಕ್ಷದ ಚತುರ್ದಶಿಯದಿನ ಮಾಡುವ ಈ ಅನಂತ ವ್ರತವು ಬಹು ಶ್ರೇಷ್ಠವಾದದ್ದು. ಸರ್ವಕಾಮಫಲಗಳನ್ನೂ ಕೊಡುವುದು. ಹದಿನಾಲ್ಕು ಗಂಟು ಹಾಕಿ ಕೆಂಪು ದಾರದ ದೋರ(ದಾರ)ವನ್ನು ಮಾಡಿಟ್ಟುಕೊಂಡು, ಶಾಸ್ತ ಪ್ರಕಾರ ನದಿಯಲ್ಲಿ ಸ್ನಾನ ಮಾಡಿ ವ್ರತ ಮಾಡಬೇಕು. ಕೆಂಪು ವಸ್ತ್ರವನ್ನು ಧರಿಸಿ, ಅರಿಶಿನ ಕುಂಕುಮಗಳಿಂದ ಶರೀರವನ್ನು ಅಲಂಕರಿಸಿಕೊಂಡು, ಎರಡು ಪೂರ್ಣ ಕಲಶಗಳನ್ನು ನೀರಿನಿಂದ ತುಂಬಿ ಐದು ಚಿಗುರುಗಳನ್ನು ಅದರಲ್ಲಿ ಹಾಕಿ, ಯಥಾಶಕ್ತಿಯಾಗಿ ರತ್ನಗಳೇ ಮುಂತಾದುವನ್ನು ಅದರಲ್ಲಿಟ್ಟು ಉಪಚಾರಗಳಿಂದ ಪೂಜಿಸಬೇಕು. ನೀರಾಜನ ಕೊಟ್ಟು ಪೂರ್ಣ ಕಲಶಗಳನ್ನಿಟ್ಟು ದರ್ಭೆಗಳಿಂದ ಸುತ್ತಲೂ ಅಲಂಕರಿಸಿ ಶೇಷನ ಪೂಜೆಯನ್ನು ಮಾಡಬೇಕು. ಪೂರ್ಣ ಕಲಶಗಳನ್ನು ಒಂದು ನೂತನ ವಸ್ತ್ರದಲ್ಲಿಟ್ಟು ಅಲ್ಲಿ ಅಷ್ಟದಳ ಪದ್ಮವನ್ನು ಸ್ಫುಟವಾಗಿ ಬರೆದು, ಆ ಪದ್ಮದಲ್ಲಿ ಅನಂತನನ್ನು ಪೂಜಿಸಬೇಕು. ಕಲಶಕ್ಕೆ ಎದುರಾಗಿ ಪದ್ಮ, ಸ್ವಸ್ತಿಕ ಮುಂತಾದುವನ್ನು ಪಂಚ ರಂಗುಗಳಿಂದ ಚೆನ್ನಾಗಿ ಬರೆದು ಅಲಂಕರಿಸಬೇಕು. ಮೊದಲು ಷೋಡಶೋಪಚಾರಗಳಿಂದ ಶೇಷನನ್ನು, ನಂತರ ಅನಂತನನ್ನು ಧ್ಯಾನಾದಿಗಳಿಂದ ಅರ್ಚಿಸಬೇಕು. ಅನಂತನನ್ನು ಧ್ಯಾನಿಸಿ, ಷೋಡಶೋಪಚಾರಗಳಿಂದ ಹೊಸದೋರವನ್ನು, ‘ಓಂ ನಮೋ ಭಗವತೇ ವಾಸುದೇವಾಯ’ ಎನ್ನುವ ದ್ವಾದಶಾಕ್ಷರಿ ಮಂತ್ರವನ್ನು ಬರೆದು, ಪುರುಷಸೂಕ್ತ ಅಥವ ವಿಷ್ಣುಸೂಕ್ತದಿಂದ ಸಮಾಹಿತಚಿತ್ತರಾಗಿ ಪೂಜೆಮಾಡಬೇಕು. ಹಾಗೆ ಪೂಜಿಸಿ, ‘ಸಂಸಾರಗಹ್ವರ---’ ಎನ್ನುವ ಮಂತ್ರದಿಂದ ಕೈಗೆ ಹೊಸದಾರವನ್ನು ಕಟ್ಟಿಕೊಂಡು, ಹಳೆಯದಾರವನ್ನು ನಮಸ್ಕಾರ ಪೂರ್ವಕವಾಗಿ ವಿಸರ್ಜಿಸಬೇಕು. ಆ ನಂತರ ಒಂದು ಅಳತೆ ಗೋಧಿ, ಸಿಹಿತಿಂಡಿ, ಹಣ್ಣುಗಳಿಂದ ಕೂಡಿದ ವಾಯನವನ್ನು ದಕ್ಷಿಣೆಯ ಸಹಿತ ದಾನ ಮಾಡಬೇಕು. ತರುವಾಯ ಇಷ್ಟರೊಡನೆ ಕೂಡಿ ಊಟ ಮಾಡಬೇಕು. ಹೀಗೆ ಹದಿನಾಲ್ಕು ವರ್ಷಗಳು ವ್ರತಮಾಡಿ, ನಂತರ ಉದ್ಯಾಪನೆ ಮಾಡಿ, ಹದಿನಾಲ್ಕು ಕುಂಭಗಳನ್ನು ದಾನ ಮಾಡಿ, ಬ್ರಾಹ್ಮಣರಿಗೆ ಭಕ್ತಿಯಿಂದ ಸುಗ್ರಾಸ ಊಟವಿಡಬೇಕು. ಹೀಗೆ ಮಾಡಿದರೆ ಚತುರ್ವಿಧ ಪುರುಷಾರ್ಥಗಳೂ ಸಿದ್ಧಿಸುತ್ತವೆ. ಅಮ್ಮಾ ಸುಶೀಲೆ, ನಮ್ಮೊಡನೆ ನೀನೂ ಅನಂತನನ್ನು ಪೂಜಿಸು. ಇಂದು ಚತುರ್ದಶಿ" ಎಂದು ಆ ಪುಣ್ಯಸ್ತ್ರೀಯರು ಹೇಳುತ್ತಾ, ಒಬ್ಬೊಬ್ಬರು ಒಂದೊಂದು ದಾರವನ್ನು ದೋರ ಮಾಡಲು ಸಂತೋಷದಿಂದ ಕೊಟ್ಟರು. ಸುಶೀಲ ಹದಿನಾಲ್ಕು ಗಂಟುಗಳನ್ನು ಹಾಕಿ ಅನಂತನನ್ನು ಪೂಜಿಸಿ, ತಮ್ಮ ರಥವಿದ್ದ ಕಡೆಗೆ ಬಂದಳು. ಅಷ್ಟರಲ್ಲಿ ಕೌಂಡಿನ್ಯನು ಅನುಷ್ಠಾನವನ್ನು ಮುಗಿಸಿ ಬಂದನು. ಅವರಿಬ್ಬರೂ ಮುಂದೆ ಹೋಗುತ್ತಾ ಅಮರಾವತಿಯಂತೆ ಕಾಣುತ್ತಿದ್ದ ಒಂದು ಊರಿಗೆ ಬಂದರು. ಅಲ್ಲಿನ ಜನರು ಆ ಮುನಿಯ ಸಮೀಪಕ್ಕೆ ಬಂದು, "ಸ್ವಾಮಿ, ತಪೋನಿಧಿ, ನೀವು ಇಲ್ಲೇ ಇರಿ" ಎಂದು ಪ್ರಾರ್ಥಿಸಿದರು. ಆ ಮುನಿದಂಪತಿಗಳು ಅಲ್ಲೇ ನೆಲೆಸಿದರು. ಅನಂತನ ಅನುಗ್ರಹದಿಂದ ಅವರು ಸಕಲೈಶ್ವರ್ಯಗಳನ್ನೂ ಹೊಂದಿದರು.

ಕೌಂಡಿನ್ಯನು ಒಂದು ದಿನ ಸುಶೀಲಳ ಕೈಯಲ್ಲಿದ್ದ ಅನಂತನ ದೋರವನ್ನು ನೋಡಿದನು. ಅವನು, "ಪ್ರಿಯಳೇ, ನಿನ್ನ ಕೈಯಲ್ಲಿ ಕಟ್ಟಿರುವುದೇನು? ನನ್ನನ್ನು ವಶ ಮಾಡಿಕೊಳ್ಳಲು ಕೆಂಪು ದಾರವನ್ನು ಕಟ್ಟಿಕೊಂಡಿದ್ದೀಯೇನು?" ಎಂದು ಕೇಳಿದನು. ಅದಕ್ಕೆ ಸುಶೀಲ, "ಸ್ವಾಮಿ, ನಾನು ಅನಂತನ ದೋರವನ್ನು ಕಟ್ಟಿಕೊಂಡಿದ್ದೇನೆ. ಆ ದೇವನ ಅನುಗ್ರಹದಿಂದಲೇ ನಮಗೆ ಈ ಸಂಪತ್ತೆಲ್ಲವೂ ಕೈಗೂಡಿದೆ" ಎಂದು ಹೇಳಲು, ಕೌಂಡಿನ್ಯನು ಕೋಪಗೊಂಡು ಅನಂತನ ದೋರವನ್ನು ಕಿತ್ತು ಅಗ್ನಿಕುಂಡದಲ್ಲಿ ಹಾಕಿ, "ಅನಂತನೆಲ್ಲಿ? ನನ್ನ ತಪಃಪುಣ್ಯವೇ ನನಗೆ ಈ ಐಶ್ವರ್ಯವನ್ನು ಸಂಪಾದಿಸಿ ಕೊಟ್ಟಿದೆ" ಎಂದು ಕೋಪದಿಂದ ಹೇಳಿದನು. ಆ ಪತಿವ್ರತೆ, "ಅಯ್ಯೋ, ಅನಂತನನ್ನು ಅಗ್ನಿಯಲ್ಲಿ ಹಾಕಿದಿರಾ?" ಎಂದು ಹೇಳುತ್ತಾ ಆ ದೋರವನ್ನು ತೆಗೆದು (ಮೊಸರಿನಲ್ಲಿ) ಇಟ್ಟಳು. ಅವರ ಐಶ್ವರ್ಯವೆಲ್ಲ ನಷ್ಟವಾಗಿ ದಾರಿದ್ರ್ಯ ಬಂತು. ಕಳ್ಳರು ಅವರ ಸಂಪದವನ್ನೆಲ್ಲ ಅಪಹರಿಸಿದರು. ಹಿತರು ಅಹಿತರಾದರು. ಕೌಂಡಿನ್ಯನು ದೀನನಾದನು. ಅನಂತನನ್ನು ಅವಮಾನಿಸಿದ್ದರಿಂದ ಅವರ ಮನೆಯೂ ಸುಟ್ಟು ದಗ್ಧವಾಯಿತು.

ಕೌಂಡಿನ್ಯನು ಅದರ ಬಗ್ಗೆ ಯೋಚಿಸಿ, "ಅನಂತನು ನನ್ನಮೇಲೆ ಕೋಪಗೊಂಡನು. ಮದಾಂಧನಾದ ನಾನು ದೋರವನ್ನು ಅಗ್ನಿಯಲ್ಲಿ ಹಾಕಿದೆ. ಅದಕ್ಕಾಗಿ ಅನಂತನನ್ನು ದರ್ಶಿಸಿದ ನಂತರವೇ ನಾನು ಊಟ ಮಾಡುತ್ತೇನೆ. ಅಲ್ಲಿಯವರೆಗೆ ನಾನು ಅನ್ನವನ್ನು ಮುಟ್ಟುವುದಿಲ್ಲ" ಎಂದು ನಿರ್ಧರಿಸಿ, ಅನಂತ, ಅನಂತ ಎಂದು ಕೂಗುತ್ತಾ ಕಾಡನ್ನು ಸೇರಿದನು. ಅಲ್ಲೊಂದು ಮಾವಿನ ಮರವನ್ನು ನೋಡಿದನು. ಪಕ್ಷಿಗಳು ಆ ಮರವನ್ನು ಮುಟ್ಟುತ್ತಿರಲಿಲ್ಲ. ಕೌಂಡಿನ್ಯನು ಆ ಮರವನ್ನು, "ಹೇ ಮಾವಿನ ಮರವೇ, ನಿನಗೆ ಅನಂತನು ಕಾಣಿಸಿದನೇ?" ಎಂದು ಕೇಳಿದನು. ಆ ಮರ, "ನಾನು ಅನಂತನನ್ನು ಕಾಣಲಿಲ್ಲ. ನೀನೇನಾದರೂ ಕಂಡರೆ ನನ್ನ ಈ ದೆಸೆಯನ್ನು ಕುರಿತು ಅವನಿಗೆ ಹೇಳು" ಎಂದು ಹೇಳಿತು. ಅವನು ಮುಂದಕ್ಕೆ ಹೋಗುತ್ತಾ, ಹುಲ್ಲುಗಾವಲೊಂದರಲ್ಲಿ ಕರುವಿನ ಜೊತೆಯಿದ್ದ ಹಸುವನ್ನು ಕಂಡನು. ಆ ಹಸುವು ಹುಲ್ಲು ಮೇಯುತ್ತಿರಲಿಲ್ಲ. ಆ ಹಸುವನ್ನು, "ಅಮ್ಮಾ ಹಸುವೇ, ನೀನು ಅನಂತನನ್ನು ನೋಡಿದ್ದರೆ ನನ್ನಲ್ಲಿ ದಯೆತೋರಿ ಹೇಳು" ಎಂದು ಕೇಳಿದನು. ಆ ಹಸುವು, "ಅಯ್ಯಾ ಬ್ರಾಹ್ಮಣ, ನಾನು ಅನಂತನನ್ನು ನೋಡಲಿಲ್ಲ. ನೀನು ನೋಡಿದರೆ ಅನಂತನಿಗೆ ನನ್ನ ಈ ದೆಸೆಯನ್ನು ತಿಳಿಸು" ಎಂದು ಹೇಳಿತು. ಕೌಂಡಿನ್ಯನು ಇನ್ನೂ ಮುಂದಕ್ಕೆ ಹೋಗುತ್ತಾ ಒಂದು ಎತ್ತನ್ನು ನೋಡಿದನು. ಅವನು ಆ ಎತ್ತನ್ನು ನೀನು ಅನಂತನನ್ನು ನೋಡಿದ್ದರೆ ಹೇಳು ಎನ್ನಲು ಅದೂ ಕೂಡಾ ಹಿಂದಿನವರಂತೆಯೇ ಉತ್ತರ ಕೊಟ್ಟಿತು. ಇನ್ನೂ ಮುಂದಕ್ಕೆ ಹೋಗುತ್ತಾ ಅವನು ಎರಡು ಸರಸ್ಸುಗಳನ್ನು ಕಂಡನು. ಅಲ್ಲಿ ಯಾವುದೇ ಪಕ್ಷಿಗಳೂ ಬರುತ್ತಿರಲಿಲ್ಲ. ಒಂದು ಸರಸ್ಸಿನ ನೀರು ಇನ್ನೊಂದು ಸರಸ್ಸಿನೊಳಕ್ಕೆ ಹರಿಯುತ್ತಿತ್ತು. ಅವನು ಆ ಸರಸ್ಸುಗಳನ್ನು ನೀವು ಅನಂತನನ್ನು ನೋಡಿದಿರಾ ಎಂದು ಕೇಳಲು ಅವೂ ಕೂಡಾ ನೋಡಿಲ್ಲ ಎಂದು ಹೇಳಿದವು. ಅವನು ಹಾಗೇ ಮುಂದಕ್ಕೆ ಹೋಗುತ್ತಾ ಒಂದು ಕತ್ತೆ, ಒಂದು ಆನೆ ನೋಡಿ, ಅವುಗಳನ್ನು ಹಿಂದಿನಂತೆಯೇ ಕೇಳಿದನು. ಅವೂ ಕೂಡಾ ಇಲ್ಲ ಎಂದು ಹೇಳಿದವು. ಅವನು ‘ಅನಂತ, ಅನಂತ’ ಎಂದು ಹೇಳಿಕೊಂಡು ಮುಂದಕ್ಕೆ ಹೋಗುತ್ತಾ ಬಸವಳಿದು ಮೂರ್ಛೆ ಹೊಂದಿ ಬಿದ್ದುಹೋದನು. ಅಷ್ಟರಲ್ಲಿ ವೃದ್ಧನೊಬ್ಬನು ಅವನನ್ನು ಸಮೀಪಿಸಿ, "ಅಯ್ಯಾ ವಿಪ್ರ, ಏಳು. ಬಾ. ನಾನು ನಿನಗೆ ಅನಂತನನ್ನು ತೋರಿಸುತ್ತೇನೆ" ಎಂದು ಹೇಳಿ ಅವನ ಕೈಹಿಡಿದು ಅರಣ್ಯದೊಳಕ್ಕೆ ಕರೆದುಕೊಂಡು ಹೋದನು. ಅಲ್ಲಿ ಕೌಂಡಿನ್ಯನು ಒಂದು ನಗರವನ್ನು ನೋಡಿದನು. ಶುಭಪ್ರದವಾದ ರತ್ನಖಚಿತವಾದ ಸಿಂಹಾಸನದಲ್ಲಿ ಕೂತು ಆ ವೃದ್ಧ ವೇಷಧಾರಿ ತನ್ನ ನಿಜರೂಪ ಸೌಂದರ್ಯವನ್ನು ತೋರಿಸಿದನು. ಆ ರೂಪವನ್ನು ನೋಡಿದ ಕೌಂಡಿನ್ಯನು ಸ್ತೋತ್ರ ಮಾಡಲು ಆರಂಭಿಸಿದನು.

"ಸಚ್ಚಿದಾನಂದ, ಗೋವಿಂದ, ಶ್ರೀವತ್ಸಾಂಕಿತ, ನಿನಗೆ ನಮಸ್ಕಾರಗಳು. ನಿನ್ನ ದರ್ಶನಮಾತ್ರದಿಂದಲೇ ನನ್ನ ಪಾಪಗಳು ದುಃಖಗಳು ಹೋದವು. ನೀನೇ ಬ್ರಹ್ಮ. ವಿಷ್ಣು, ರುದ್ರಾತ್ಮಕನು. ವೈಕುಂಠವಾಸಿ, ನಿನ್ನಲ್ಲಿ ನಾನು ಶರಣು ಬಂದಿದ್ದೇನೆ. ಹೇ ಬ್ರಹ್ಮಾಂಡನಾಥ, ನಾನು ಪಾಪಿಯು. ಭಕ್ತಿಯಿಲ್ಲದವನು. ನಿನ್ನನ್ನು ಶರಣುಹೊಂದಿದ್ದೇನೆ. ನಿನ್ನ ಪಾದಗಳಲ್ಲಿ ನನ್ನ ಜನ್ಮ ಸಫಲವಾಗಬಲ್ಲದು. ನನ್ನ ಜೀವನವು ಧನ್ಯವಾಗಬಲ್ಲದು. ಅದರಿಂದಲೇ ನಿನ್ನಲ್ಲಿ ಶರಣು ಬರುತ್ತಿದ್ದೇನೆ" ಎಂದು ಕೌಂಡಿನ್ಯನು ಸ್ತುತಿಸಲು, ಪ್ರಸನ್ನನಾದ ಆ ಅನಂತನು ದಾರಿದ್ರ್ಯನಾಶನ, ಧರ್ಮಪ್ರಾಪ್ತಿ, ಶಾಶ್ವತ ವೈಕುಂಠ ಪ್ರಾಪ್ತಿ ಎಂದು ಮೂರು ವರಗಳನ್ನು ಕೊಟ್ಟನು. ಅಯ್ಯಾ, ಯುಧಿಷ್ಠಿರ, ಕೌಂಡಿನ್ಯನು ಆಗ ತಾನು ಮಾರ್ಗ ಮಧ್ಯದಲ್ಲಿ ಕಂಡ ವಿಚಿತ್ರಗಳನ್ನು ಕುರಿತು ಹೇಳಿ, ಅದರ ವಿಷಯವೇನು ಎಂಬುದನ್ನು ವಿಸ್ತರಿಸಿ ಹೇಳಬೇಕೆಂದು ಪ್ರಾರ್ಥಿಸಿದನು. ಅದಕ್ಕೆ ಅನಂತನು ಹೀಗೆ ಹೇಳಿದನು. "ಆ ಮಾವಿನ ಮರವು ಪೂರ್ವಜನ್ಮದಲ್ಲಿ ವಿದ್ಯಾಭಿಮಾನದಿಂದ ಮತ್ತನಾಗಿ, ವೇದಶಾಸ್ತ್ರಗಳನ್ನು ಸಂಪೂರ್ಣವಾಗಿ ತಿಳಿದವನು. ಅವನು ಗರ್ವಿತನಾಗಿ ಶಿಷ್ಯರಿಗೆ ವಿದ್ಯೆಯನ್ನು ಸ್ವಲ್ಪವಾದರೂ ಹೇಳಿಕೊಡಲಿಲ್ಲ. ಆ ಪಾಪದಿಂದ ವೃಕ್ಷವಾದನು. ಅದರ ಹಣ್ಣನ್ನು ಯಾರೂ ತಿನ್ನುವುದಿಲ್ಲ. ಆ ಹಸುವು ಪೂರ್ವಜನ್ಮದಲ್ಲಿ ಬ್ರಾಹ್ಮಣನೊಬ್ಬನಿಗೆ ಬಂಜರು ಭೂಮಿಯನ್ನು ಕೊಟ್ಟವನು. ನೀನು ಕಂಡ ವೃಷಭವು ಹಿಂದೆ ಧನವಂತನಾದರೂ ಸ್ವಲ್ಪವಾದರೂ ದಾನಮಾಡಲಿಲ್ಲ. ನೀನು ಕಂಡ ಎರಡು ಸರಸ್ಸುಗಳು ಪೂರ್ವದಲ್ಲಿ ಅಕ್ಕ ತಂಗಿಯರು. ಒಬ್ಬರಿಗೊಬ್ಬರು ಮಾತ್ರವೇ ದಾನ ಪ್ರದಾನಗಳನ್ನು ಮಾಡಿಕೊಳ್ಳುತ್ತಿದ್ದುದರಿಂದ ಈ ಸ್ಥಿತಿಯನ್ನು ಹೊಂದಿದರು. ಕ್ರೋಧವು ಅಧಿಕವಾಗಿದ್ದವನು ಕತ್ತೆಯಾದನು. ಮದಾಂಧನು ಆನೆಯಾದನು.

ನಿನ್ನ ಮನಸ್ಸು ಶುದ್ಧವಾಗಿದ್ದರಿಂದ ನಾನು ದ್ವಿಜರೂಪದಲ್ಲಿ ಬಂದೆ. ನೀನು ನೋಡಿದವರೆಲ್ಲರಿಗೂ ನನ್ನಿಂದ ಪಾಪಮೋಕ್ಷವು ಪ್ರಸಾದಿಸಲ್ಪಟ್ಟಿತು. ಅಯ್ಯಾ, ಮುನಿಯೇ, ನೀನು ನಕ್ಷತ್ರಮಂಡಲದಲ್ಲಿ ಪುನರ್ವಸು ಆಗಿ ನೆಲಸು." ಎಂದು ಹೇಳಿ, ಅನಂತನು ಕೌಂಡಿನ್ಯನಿಗೆ ವರ ಪ್ರಸಾದಿಸಿದನು. ಹೇ ಪಾಂಡವ, ನೀನೂ ಆ ವ್ರತವನ್ನು ಮಾಡು." ಎಂದು ಶ್ರೀಕೃಷ್ಣನು ಧರ್ಮರಾಜನಿಗೆ ಉಪದೇಶಿಸಿದನು. ಧರ್ಮರಾಜನು ಆ ವ್ರತವನ್ನು ಮಾಡಿ ಶತ್ರುಗಳನ್ನು ಸಂಹರಿಸಿ, ಕಳೆದುಕೊಂಡಿದ್ದ ರಾಜ್ಯವನ್ನು ಹೊಂದಬಲ್ಲವನಾದನು. ನಿನ್ನ ಜ್ಯೇಷ್ಠಪುತ್ರನಾದ ನಾಗನಾಥನಿಗೆ ಈ ವ್ರತವನ್ನು ಉಪದೇಶಮಾಡು. ನೀನು ಕೌಂಡಿನ್ಯನ ಗೋತ್ರದಲ್ಲಿ ಹುಟ್ಟಿದವನು. ಕೌಂಡಿನ್ಯನು ಮಾಡಿದ ಈ ವ್ರತವನ್ನು, ಸಾಯಂದೇವ, ನೀನೂ ಆಚರಿಸು." ಎಂದು ಶ್ರೀಗುರುವು ಆಜ್ಞೆ ಮಾಡಲು, ಸಾಯಂದೇವನು ಆ ವ್ರತವನ್ನು ಆಚರಿಸಿ ಶ್ರೀಗುರುವನ್ನೂ ಪೂಜಿಸಿದನು. ಶ್ರೀಗುರುವಿಗೆ ಗೀತವಾದ್ಯಗಳನ್ನು ಕೇಳಿಸಿ, ಭಕ್ತಿಯಿಂದ ನೀರಾಜನವನ್ನು ಕೊಟ್ಟನು. ನಂತರದಲ್ಲಿ ಶ್ರೀಗುರುವಿಗೂ, ಬ್ರಾಹ್ಮಣರಿಗೂ ಅವನು ಭೋಜನವಿಟ್ಟನು. ಹೀಗೆ ಶ್ರೀಗುರುವನ್ನು ಆರಾಧಿಸಿ ಸಂತೋಷಗೊಂಡ ಸಾಯಂದೇವನು ಶ್ರೀಗುರುವು ಹೋಗಿಬಾ ಎಂದು ಆಜ್ಞೆ ಕೊಡಲು, ತನ್ನ ಕುಟುಂಬದವರೊಡನೆ ಸ್ವಗ್ರಾಮವನ್ನು ಸೇರಿಕೊಂಡನು. ಭಾರ್ಯಾಪುತ್ರರನ್ನು ಗೃಹದಲ್ಲಿ ನಿಲ್ಲಿಸಿ, ಸಾಯಂದೇವನು ಮತ್ತೆ ಶ್ರೀಗುರುವನ್ನು ಸೇವಿಸಲು ಹಿಂತಿರುಗಿ ಬಂದನು. ಅಯ್ಯಾ ನಾಮಧಾರಕ, ಈ ವಿಧದಲ್ಲಿ ನಿಮ್ಮ ವಂಶದ ಪೂರ್ವೀಕನಾದ ಸಾಯಂದೇವನು ಮಾಡಿದ ಪೂಜಾದಿಗಳಿಂದ ಭಗವಂತನು ಅವನಿಗೆ ಪ್ರಸನ್ನನಾದನು. ಶಿಷ್ಯ, ಇದು ನಿನ್ನ ಪೂರ್ವೀಕರು ಅರ್ಜಿಸಿದ ಪರಮದಿವ್ಯವಾದ ನಿಧಿ. ಆ ನಿಧಿಯೇ ಶ್ರೀ ನೃಸಿಂಹ ಸರಸ್ವತಿ. ಗಂಗಾಧರ ತನಯನು ವಿನಯದಿಂದ ಶ್ರೀಗುರುವಿನ ಸಮೀಪದಲ್ಲಿದ್ದುಕೊಂಡು ಶ್ರೋತೃಗಳಿಗೆ ಈ ಚರಿತ್ರೆಯನ್ನು ಹೇಳಿದನು. ಇದನ್ನು ಶ್ರದ್ಧೆಯಿಂದ ಕೇಳಿದ ಮನುಷ್ಯನು ಅಭೀಷ್ಟಸಿದ್ಧಿಯನ್ನು ಹೊಂದಬಲ್ಲನು. ಅವನಿಗೆ ಪುನರ್ಜನ್ಮವಿರುವುದಿಲ್ಲ. 

ಇಲ್ಲಿಗೆ ನಲವತ್ತಮೂರನೆಯ ಅಧ್ಯಾಯ ಮುಗಿಯಿತು.

No comments:

Post a Comment