||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ||
||ಶ್ರೀ ಗುರುಭ್ಯೋನಮಃ||
"ನಾಮಧಾರಕ, ಮುಂದಿನ ಕಥೆಯನ್ನು ಕೇಳು. ಹಿಂದೆ ಒಂಭತ್ತನೆಯ ಅಧ್ಯಾಯದಲ್ಲಿ ಒಬ್ಬ ಅಗಸರವನು ಶ್ರೀಗುರುವಿಗೆ ಸೇವಕನಾಗಿ ಇದ್ದನೆಂದು ಹೇಳಿದೆನಷ್ಟೆ. ಆ ಅಗಸರವನು ತನ್ನ ಮರುಜನ್ಮದಲ್ಲಿ ವೈಢೂರ್ಯಪುರದಲ್ಲಿ ಮ್ಲೇಚ್ಛರಾಜನಾಗಿ ಸಂಪತ್ತಿನಲ್ಲಿ ಓಲಾಡುತ್ತಾ, ಪುತ್ರಾದಿಗಳಿಂದ ಕೂಡಿ, ಸುಖವಾಗಿ ಜೀವಿಸುತ್ತಿದ್ದನು. ಅವನು ಜಾತಿಹೀನನಾದರೂ ಪೂರ್ವಜನ್ಮ ಸಂಸ್ಕಾರದಿಂದ ಪುಣ್ಯದಲ್ಲಿ ಕೋರಿಕೆಗಳುಳ್ಳವನಾಗಿ ದಾನಧರ್ಮಗಳಲ್ಲಿ ಆಸಕ್ತನಾಗಿ, ಬ್ರಾಹ್ಮಣರಲ್ಲಿ ವಿಶೇಷಭಕ್ತಿಯುಳ್ಳವನಾಗಿ, ದೇವಾಲಯಗಳಿಗೆ, ತೀರ್ಥಸ್ಥಳಗಳಿಗೆ ಯಾವ ಹಾನಿಯನ್ನೂ ಮಾಡುತ್ತಿರಲಿಲ್ಲ. ಅವನ ಪುರೋಹಿತರು ಅವನಿಗೆ ಒಂದುಸಲ, "ಹೇ ರಾಜ, ನೀನು ಮ್ಲೇಚ್ಛನು. ಆದ್ದರಿಂದ ದೇವತೆಗಳನ್ನು ದ್ವಿಜರನ್ನು ನಿಂದಿಸಬೇಕು. ನೀನಾದರೋ ಅವರನ್ನು ಸೇವಿಸುತ್ತಿದ್ದೀಯೆ. ಅದರಿಂದ ನಿನಗೆ ಮಹಾಪಾತಕಗಳು ಬರುತ್ತವೆ. ಯಾರಿಗೆ ವಿಧಿಸಿದ ಧರ್ಮದಂತೆ ಅವರು ನಡೆದುಕೊಂಡರೆ ಅದು ಅವರಿಗೆ ಬಹಳ ಪುಣ್ಯವನ್ನು ಕೊಡುತ್ತದೆ. ದ್ವಿಜರು ಮೂಢರು. ಕಟ್ಟಿಗೆ, ಕಲ್ಲುಗಳನ್ನು ಪೂಜಿಸುತ್ತಾರೆ. ಹಸು, ಅಗ್ನಿ, ಸೂರ್ಯ ಮುಂತಾದುವು ಕೂಡ ಅವರಿಗೆ ದೇವತೆಗಳೇ! ನದಿಗಳುಕೂಡ ಅವರಿಗೆ ದೇವತೆಗಳೇ! ಇಂತಹ ಅಜ್ಞಾನಿಗಳಾಗಿ ನಿರಾಕಾರನಾದ ದೇವರಿಗೆ ಆಕಾರವನ್ನು ಕಲ್ಪಿಸುತ್ತಾರೆ. ಅಂತಹವರನ್ನು ಸೇವಿಸುವ ಮ್ಲೇಚ್ಛರಿಗೆ ಅಧೋಗತಿ ತಪ್ಪದು." ಎಂದು ಹೇಳಿದರು. ಆ ರಾಜನಿಗೆ ವರ್ಣಾಶ್ರಮಧರ್ಮಗಳಲ್ಲಿ ಧೃಢಬುದ್ದಿಯಿತ್ತು. ಆ ರಾಜ, ತನ್ನ ಪುರೋಹಿತರಿಗೆ, "ಅಯ್ಯಾ, ಅಣುವಿನಿಂದ ತೃಣ, ಕಾಷ್ಠ ಮುಂತಾದುವೆಲ್ಲವನ್ನೂ ಈಶ್ವರನು ಸ್ಥಾವರಜಂಗಾತ್ಮಕವಾಗಿ ಸೃಷ್ಟಿಸಿದನು. ಹೀಗೆ ಜಗತ್ತನ್ನು ಸೃಷ್ಟಿಸಿ, ಆ ಸೃಷ್ಟಿಯಲ್ಲಿ ತಾನೇ ಪ್ರವೇಶಿಸಿದನು. ಮತಾಭಿಮಾದಿಂದ ಮತಗಳಲ್ಲಿ ಭೇದಗಳುಂಟಾದವು. ಒಬ್ಬನೇ ಈಶ್ವರನು ಪಂಚಭೂತಾತ್ಮಕವಾಗಿದ್ದಾನೆ. ಮಡಕೆ ಮುಂತಾದುವು ಮಣ್ಣಿನಿಂದ ಬಂದಹಾಗೆ, ನಾನಾಬಣ್ಣಗಳ ಹಸುಗಳಿಂದ ಬರುವ ಹಾಲು ಒಂದೇ ಇರುವಹಾಗೆ, ಈ ಪ್ರಪಂಚದಲ್ಲಿ ಚಿತ್ಸ್ವರೂಪವು ಒಂದೇ! ವಿಶ್ವಕ್ಕೆ ಅನೇಕತ್ವದಿಂದ ಹಾನಿ ಏನಿಲ್ಲ. ಘಟಾದಿಗಳಿಗೆ ಆಕಾಶವು ಹೇಗೆ ಭಿನ್ನವಲ್ಲವೋ ಅದೇ ರೀತಿಯಲ್ಲಿ ಆತ್ಮಬುದ್ಧಿ ಭೇದದಿಂದ ವಿಕಾರವನ್ನು ಹೊಂದುವುದಿಲ್ಲ. ಒಂದು ದೀಪದಿಂದ ಮತ್ತೊಂದು ದೀಪವನ್ನು ಬೆಳಗಿಸಿದರೂ ಅದರ ಏಕತ್ವಕ್ಕೆ ಎಂತಹ ಬಾಧೆಯೂ ಇಲ್ಲದಹಾಗೆ ಒಂದೇ ಪರಿಮಿತಿಯುಳ್ಳ ಬ್ರಹ್ಮ ಸಚ್ಚಿದಾನಂದ ಸ್ವರೂಪವು ಉಳ್ಳದ್ದು. ದೂರದಲ್ಲಿನ ನಾನಾಮಣಿ ಗಣಗಳು ಒಂದೇ ಇರುವಹಾಗೆ ಈ ವಸ್ತುಜಾತವೆಲ್ಲವೂ ಬ್ರಹ್ಮಾಧೀನವಾಗಿದೆ. ಶ್ರೀಹರಿಯೊಬ್ಬನೇ ಪ್ರಭುವು. ಆತ್ಮಜ್ಞಾನಕ್ಕೆ ಚಿತ್ತಶುದ್ಧಿ ಬೇಕು. ಅದಕ್ಕೋಸ್ಕರವೇ ಕಲ್ಲು ಮುಂತಾದ ಆಕಾರಗಳಲ್ಲಿ ಈಶ್ವರನೆಂಬ ಭಾವನೆ ವಿಧಿಸಲ್ಪಟ್ಟಿದೆ. (ಅದು) ಧ್ಯಾನಕ್ಕೋಸ್ಕರವೇ! ಸ್ವಲ್ಪಬುದ್ಧಿಯುಳ್ಳವರಿಗೆ ಪ್ರತಿಮೆಗಳನ್ನು ಪೂಜಿಸುವುದು ವಿಧಿಸಲ್ಪಟ್ಟಿದೆ. ಬುದ್ಧಿವಂತರಿಗೆ ಆತ್ಮಭಾವನೆಯೇ ಪ್ರಶಸ್ತವು. ಭಾವನೆಯಿಂದ ಸ್ಥಿರತ್ವವು ಬರುವುದು. ಭಾವನೆಯಲ್ಲೇ ನಾರಾಯಣನು ಇದ್ದಾನೆ ಅಲ್ಲವೇ? ಯಾರಿಗೆ ಯಾವ ಮಾರ್ಗ ವಿಧಿಸಿದೆಯೋ ಅವರಿಗೆ ಆ ಮಾರ್ಗ ಮಾತ್ರ ಹಿತವನ್ನುಂಟುಮಾಡುತ್ತದೆ." ಎಂದು ಆ ಮ್ಲೇಚ್ಛರಾಜ ತನ್ನ ಪುರೋಹಿತರಿಗೆ ವಿಸ್ತಾರವಾಗಿ ಹೇಳಿ ತಾನು ಸ್ವಯಂ ದೇವ ಬ್ರಾಹ್ಮಣರಲ್ಲಿ ಭಕ್ತಿಯುಳ್ಳವನಾಗಿ ಪುಣ್ಯವನ್ನಾಚರಿಸುತ್ತಿದ್ದನು.
ದೈವಯೋಗದಿಂದ ಒಂದುಸಲ ಅವನಿಗೆ ತೊಡೆಯಲ್ಲಿ ಸಣ್ಣ ಕುರು ಆಯಿತು. ಅದರಿಂದ ರಾಜನು ಬಹಳವಾಗಿ ಬಾಧೆಪಟ್ಟನು. ಗಂಧರ್ವಪುರದಲ್ಲಿ ಶ್ರೀಗುರುವು ತನ್ನಲ್ಲೇ ಆಲೋಚಿಸಿ, ‘ಮ್ಲೇಚ್ಛರಾಜ ಕೂಡಾ ಇಲ್ಲಿಗೆ ಬರುತ್ತಾನೆ. ಮ್ಲೇಚ್ಛರು ಇಲ್ಲಿಗೆ ಬಂದರೆ ದ್ವಿಜರಿಗೆ ಬಾಧೆಯಾಗುತ್ತದೆ. ಆದ್ದರಿಂದ ಅಂತರ್ಧಾನವಾಗುವುದು ಶ್ರೇಷ್ಠವು. ಬಹುಧಾನ್ಯ ಸಂವತ್ಸರ ಗುರುವು ಸಿಂಹರಾಶಿಯನ್ನು ಸೇರುತ್ತಾನೆ. ಆದ್ದರಿಂದ ಗೋದಾವರಿ ಯಾತ್ರೆಯ ನೆವದಿಂದ ಸಂಚಾರಮಾಡುತ್ತೇನೆ.’ ಎಂದು ಯೋಚಿಸಿ, ತನ್ನ ಶಿಷ್ಯರಿಗೆ, "ಮ್ಲೇಚ್ಛರಾಜ ನನ್ನನ್ನು ಕರೆದುಕೊಂಡು ಹೋಗಲು ಬರಲಿದ್ದಾನೆ. ಆದ್ದರಿಂದ ಗೌತಮಿತೀರಕ್ಕೆ ತ್ವರೆಯಾಗಿ ಹೋಗುತ್ತೇವೆ." ಎಂದು ಹೇಳಲು, ಶಿಷ್ಯರು, "ಮ್ಲೇಚ್ಛನು ಇಲ್ಲಿಗೆ ಬಂದರೆ ಧರ್ಮಹಾನಿಯಾಗುತ್ತದೆ ಎಂದು ಹೇಳುವುದು ಅಷ್ಟು ಸರಿಯಲ್ಲ. ಶ್ರೀನೃಸಿಂಹಸರಸ್ವತಿಯಾಗಿ ಸಾಕ್ಷಾತ್ತು ದತ್ತನೇ ಇಲ್ಲಿ ಇದ್ದಾನೆ. ಅವನೇ ನಮ್ಮನ್ನು ರಕ್ಷಿಸುತ್ತಾನೆ." ಎಂದು ಹೇಳಿ ಅಲ್ಲಿಂದ ಕದಲದೆ ಇದ್ದರು.
ಆ ರಾಜನ ಕುರುವಿನ ಬಾಧೆಯನ್ನು ಯಾವ ಔಷಧಗಳೂ, ಲೇಪನಗಳೂ ಕಡಮೆಮಾಡಲಿಲ್ಲ. ಆಗ ಆ ಮ್ಲೇಚ್ಛನು ಬ್ರಾಹ್ಮಣರನ್ನು ಕರೆಸಿ ಅವರನ್ನು ಈ ವಿಷಯವಾಗಿ ಕೇಳಿದನು. ಅವರು, "ರಾಜ, ಕೇಳು. ಪೂರ್ವಜನ್ಮ ಕೃತವಾದ ಪಾಪವು ವ್ಯಾಧಿರೂಪದಲ್ಲಿ ಬಾಧಿಸುತ್ತದೆ. ತೀರ್ಥಾಟನೆಗಳು, ದೇವತಾರ್ಚನೆ, ದಾನಗಳಿಂದ ವ್ಯಾಧಿ ಕಡಮೆಯಾಗುವುದು. ಇಲ್ಲವೇ ಸಾಧುಗಳ ಸೇವೆಯಿಂದ, ಅವರ ದರ್ಶನದಿಂದಲೂ ಆರೋಗ್ಯವು ಕುದುರಬಹುದು. ದೈವವಶಾತ್ ಸತ್ಪುರುಷರ ಕೃಪಾದೃಷ್ಟಿ ಲಭಿಸಿದರೆ ಅರವತ್ತು ಜನ್ಮಗಳಲ್ಲಿ ಮಾಡಿದ ಪಾಪಗಳು ನಾಶವಾಗುವುವು. ಇನ್ನು ಈ ವ್ರಣಬಾಧೆ ಏಕೆ ಉಪಶಮನವಾಗಲಾರದು?" ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿದ ರಾಜ, "ಅಯ್ಯಾ ಬ್ರಾಹ್ಮಣರಿರಾ, ಪೂರ್ವಜನ್ಮದಲ್ಲಿ ಶ್ರೀಗುರುವಿನ ಸೇವೆಯಿಂದ ರಾಜ್ಯ ದೊರೆಯಿತು. ಮಾಡಿದ ಪಾಪಗಳಿಂದ ಮ್ಲೇಚ್ಛವಂಶದಲ್ಲಿ ಸಂಭವಿಸಿತು. ಮಹಾನುಭಾವನ ದೃಷ್ಟಿಯಿಂದ ಯಾರಿಗೆ ರೋಗ ಶಮನವಾಯಿತೋ ಹೇಳಿ." ಎಂದನು. ಅವನ ಮಾತುಗಳನ್ನು ಕೇಳಿದ ಬ್ರಾಹ್ಮಣನೊಬ್ಬ ತನ್ನಲ್ಲೇ ಯೋಚಿಸಿ, "ರಾಜ, ಆ ವಿಷಯವನ್ನು ಇಲ್ಲಿ ಹೇಳಬಾರದು. ರಹಸ್ಯವಾಗಿ ಹೇಳುತ್ತೇನೆ." ಎನ್ನಲು, ಆ ಯವನ, "ನನ್ನ ಜಾತಿಯಿಂದೇನಾಗಬೇಕು? ದ್ವಿಜದಾಸನಾದ ನನ್ನನ್ನು ದಯಾಲೇಶದಿಂದಲಾದರೂ ಉದ್ಧರಿಸು." ಎಂದು ಬೇಡಿಕೊಂಡನು. ಪಶ್ಚಾತ್ತಾಪತಪ್ತನಾದ ರಾಜನ ಮನಸ್ಸನ್ನು ತಿಳಿದ ಆ ಬ್ರಾಹ್ಮಣ, "ರಾಜ, ಪಾಪವಿನಾಶವೆನ್ನುವ ಉತ್ತಮವಾದ ತೀರ್ಥದಲ್ಲಿ ಒಂದು ರಹಸ್ಯ ಸ್ಥಾನವು ಇದೆ. ಅಲ್ಲಿಗೆ ಹೋಗು. ಅಲ್ಲಿ ಸ್ನಾನ ಮಾಡಿ ರಹಸ್ಯವಾಗಿ ಇರು. ಆ ಏಕಾಂತಸ್ಥಾನದಲ್ಲಿ ನಿನ್ನ ಕಾರ್ಯವು ಕೈಗೂಡುವುದು." ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿ ಆ ರಾಜ ಏಕಾಕಿಯಾಗಿ ಪಾಪವಿನಾಶತೀರ್ಥಕ್ಕೆ ಹೋಗಿ ಸ್ನಾನವಾಚರಿಸುತ್ತಿರಲು ಒಬ್ಬ ವಿಪ್ರಯತಿ ಅಲ್ಲಿಗೆ ಬಂದನು. ಅವನನ್ನು ಕಾಣುತ್ತಲೇ ರಾಜ ಅವನಿಗೆ ನಮಸ್ಕರಿಸಿ, ಸದ್ಭಾವದಿಂದ ಕೂಡಿದವನಾಗಿ ತನ್ನ ವ್ರಣವು ಹೇಗೆ ವಾಸಿಯಾಗುವುದು ಎಂದು ಕೇಳಿದನು. ಆ ರಾಜನ ಪ್ರಾರ್ಥನೆಯನ್ನು ಕೇಳಿದ ಆ ಯತಿ, "ಅಯ್ಯಾ ಸಾಧುಗಳ ದರ್ಶನದಿಂದ ವಾಸಿಯಾಗುವುದು. ಪೂರ್ವದಲ್ಲಿ ಆವಂತಿಪುರದಲ್ಲಿ ದುರಾಚಾರಿಯಾದ ಬ್ರಾಹ್ಮಣನೊಬ್ಬನಿದ್ದನು. ಅವನು ಜನ್ಮತಃ ಬ್ರಾಹ್ಮಣನಷ್ಟೇ! ತನ್ನ ಕರ್ಮಗಳನ್ನು ಧರ್ಮವನ್ನು ಅವನು ಬಿಟ್ಟು ಬಿಟ್ಟಿದ್ದನು. ಪರಸ್ತ್ರೀಯರಲ್ಲಿ ಆಸಕ್ತನಾಗಿ ಸ್ನಾನ ಸಂಧ್ಯಾವಂದನಾದಿಗಳನ್ನು ಬಿಟ್ಟು ಅಬ್ರಾಹ್ಮಣನಾಗಿದ್ದನು. ಬ್ರಾಹ್ಮಣಾಚಾರಗಳನ್ನು ಬಿಟ್ಟು ಪಿಂಗಳ ಎನ್ನುವ ವೇಶ್ಯೆಯ ಮನೆಯಲ್ಲಿ ವಾಸಿಸುತ್ತಾ ಅದನ್ನೇ ಅಮೃತಸಮಾನವಾಗಿ ಭಾವಿಸಿ ಅವಳ ಮನೆಯಲ್ಲಿ ಭಯಭೀತಿಗಳಿಲ್ಲದೆ ಜೀವಿಸುತ್ತಿದ್ದ. ದೈವಯೋಗದಿಂದ ಋಷಭನೆಂಬುವ ಮಹಾಮುನಿ ಅಕಸ್ಮಾತ್ತಾಗಿ ಅಲ್ಲಿಗೆ ಬಂದನು. ಆ ಮುನಿಯನ್ನು ಕಂಡ ಆ ಬ್ರಾಹ್ಮಣ ವೇಶ್ಯೆಯೊಡನೆ ಮುನಿಗೆ ನಮಸ್ಕಾರಮಾಡಿ ಅವನನ್ನು ತಮ್ಮಮನೆಗೆ ಕರೆದುಕೊಂಡು ಬಂದರು. ಷೋಡಶೋಪಚಾರಗಳಿಂದ ಆ ಮುನಿಯನ್ನು ಪೂಜಿಸಿ, ಅವನ ಪಾದತೀರ್ಥವನ್ನು ಸೇವಿಸಿ, ನಾನಾವಿಧವಾದ ಮೃಷ್ಟಾನ್ನಗಳಿಂದ ಮುನಿಗೆ ಭೋಜನವಿಟ್ಟರು. ಉತ್ತಮವಾದ ತಾಂಬೂಲವನ್ನು ಕೊಟ್ಟು, ಮೃದುವಾದ ಶಯ್ಯೆಯಲ್ಲಿ ಆ ಮುನಿಯನ್ನು ಮಲಗಿಸಿ, ಅವನ ಪಾದಗಳನ್ನೊತ್ತುತ್ತಾ ಸೇವೆ ಮಾಡಿದರು. ಆ ಮುನಿ ನಿದ್ರಿಸಿದನೆಂದು ತಿಳಿದು ಅವರಿಬ್ಬರೂ ಅವನ ಬಳಿಯೇ ರಾತ್ರಿಯೆಲ್ಲ ಕೂತು ಕಳೆದರು. ಸೂರ್ಯೋದಯವಾಯಿತು. ಎಚ್ಚೆತ್ತ ಆ ಮುನಿ ಅವರ ಸೇವೆಯಿಂದ ಸಂತುಷ್ಟನಾಗಿ ಹೊರಟುಹೋದನು.
ಸ್ವಲ್ಪಕಾಲದಲ್ಲೇ ಆ ಬ್ರಾಹ್ಮಣನು ಮರಣಿಸಿದನು. ಆ ವೇಶ್ಯೆಯೂ ಕಾಲವಶಳಾದಳು. ಪೂರ್ವಕರ್ಮಾನುಬಂಧದಿಂದ ಅವರಿಬ್ಬರೂ ರಾಜವಂಶದಲ್ಲಿ ಜನಿಸಿದರು. ಆ ಬ್ರಾಹ್ಮಣನು ದಶಾರ್ಣದೇಶದ ಅಧಿಪತಿಯಾದ ವಜ್ರಬಾಹು ಎನ್ನುವವನ ಪಟ್ಟಮಹಿಷಿ ಸುಮತಿಯ ಗರ್ಭವನ್ನು ಪ್ರವೇಶಿಸಿದನು. ವಜ್ರಬಾಹು ಪುಂಸವನಾದಿಗಳನ್ನು ಅದ್ಧೂರಿಯಾಗಿ ನೆರವೇರಿಸಿದನು. ಸುಮತಿಯ ಸವತಿ ಮಾತ್ಸರ್ಯದಿಂದ ಅವಳ ಗರ್ಭವನ್ನು ನಾಶಮಾಡಲು ಪ್ರಯತ್ನಿಸಿದಳು. ಅವಳಿಗೆ ಹಾವಿನ ವಿಷವನ್ನು ಕೊಟ್ಟಳು. ಸುಮತಿಯ ಶರೀರದಲ್ಲೆಲ್ಲಾ ಆ ವಿಷವು ವ್ಯಾಪಿಸಿ ಅವಳು ಬಹಳ ಬಾಧೆಪಟ್ಟಳು. ಆದರೆ ಸಾಯಲಿಲ್ಲ.
ಇಂತಹ ದುಃಖದಲ್ಲೇ ಆ ರಾಣಿ ಪ್ರಸವಿಸಿದಳು. ಮಗನು ಹುಟ್ಟಿದನು. ವ್ರಣಗಳಿಂದ ಕೂಡಿದ ಅವನು ಹಗಲೂ ರಾತ್ರಿ ದುಃಖಾರ್ತನಾಗಿ ನಿದ್ರೆ ಆಹಾರಗಳಿಲ್ಲದೆ ಅಳುತ್ತಿದ್ದನು. ಚಿಂತೆಗೊಂಡ ರಾಜ ದೇಶಾಂತರಗಳಿಂದ ಕೂಡಾ ವೈದ್ಯರುಗಳನ್ನು ಕರೆಯಿಸಿ ಚಿಕಿತ್ಸೆಗಾಗಿ ಬಹಳ ಧನವನ್ನು ವ್ಯರ್ಥವಾಗಿ ವ್ಯಯಮಾಡಿದನು. ಆದರೂ ಆ ಬಾಲನಿಗೆ ಆರೋಗ್ಯವು ಸ್ವಲ್ಪಮಾತ್ರವೂ ಕೈಗೂಡಲಿಲ್ಲ. ಆ ತಾಯಿಮಗ ಇಬ್ಬರಿಗೂ ದೇಹಾದ್ಯಂತವಾಗಿ ಕ್ರಿಮಿಗಳಿಂದ ಕೂಡಿದ ವ್ರಣಗಳಾದವು.
ಅವರ ವ್ರಣಗಳಿಂದ ಕೀವುಸುರಿಯುತ್ತಾ ಭಯಂಕರವಾಗಲು ಅವರಿಬ್ಬರೂ ಬಹಳ ಖಿನ್ನರಾದರು. ಅನೇಕ ಔಷಧಿಗಳನ್ನು ಉಪಯೋಗಿಸಿದರೂ ಅವರ ಆರೋಗ್ಯ ಸರಿಯಾಗಲಿಲ್ಲ. ಅವರಿಬ್ಬರೂ ಜೀವಚ್ಛವಗಳಂತಾದರು. ಅವರಿಬ್ಬರೂ ಮತ್ತೆ ಆರೋಗ್ಯವಂತರಾಗುವ ಲಕ್ಷಣಗಳು ಕಾಣಲಿಲ್ಲ. ‘ಇವರಿಬ್ಬರಿಗೂ ಹೇಗಾದರೂ ಆರೋಗ್ಯ ಸರಿಯಾಗಲಾರದು. ಮಾಡಿದ ಪಾಪ ಅನುಭವಿಸದೇ ನಾಶವಾಗುವುದಿಲ್ಲ. ಆದ್ದರಿಂದ ಇಬ್ಬರನ್ನೂ ಬಿಟ್ಟುಬಿಡಬೇಕು’ ಎಂದು ನಿಶ್ಚಯಿಸಿಕೊಂಡು ಸಾರಥಿಯನ್ನು ಕರೆದು ಅವನಿಗೆ ರಾಜ, "ಅಯ್ಯಾ ಸೂತ, ನನ್ನ ಅಜ್ಞೆಯೆಂದು ತಿಳಿದು ಇವರಿಬ್ಬರನ್ನೂ ಕರೆದುಕೊಂಡು ಹೋಗಿ ಮಹಾರಣ್ಯದಲ್ಲಿ ನಿಶ್ಶಂಕೆಯಿಂದ ನಿರ್ಜನವಾದ ಕಡೆಯಲ್ಲಿ ಬಿಟ್ಟುಬಿಡು. ಇದು ನನ್ನ ಆಜ್ಞೆ. ಮನುಷ್ಯರ ಸಂಚಾರವಿಲ್ಲದಿರುವ ಕಡೆಯಲ್ಲಿ ನನ್ನ ಈ ಹೆಂಡತಿಮಗನನ್ನು ಬೇಗನೇ ಕರೆದುಕೊಂಡುಹೋಗಿ ಬಿಟ್ಟುಬಾ." ಎಂದು ಹೇಳಿ ತನ್ನ ರಥವನ್ನು ಕೊಟ್ಟನು. ಬಂಧುಗಳು ಪ್ರಜೆಗಳು ಎಲ್ಲರೂ ದುಃಖಪಟ್ಟರು. ಅವರಿಬ್ಬರನ್ನೂ ರಥದಲ್ಲಿ ಕೂಡಿಸಿಕೊಂಡು ಆ ಸೂತನು ಮಹಾರಣ್ಯದಲ್ಲಿ ಜನಸಂಚಾರವಿಲ್ಲದ ಕಡೆಯಲ್ಲಿ ಬಿಟ್ಟು ಬಂದು, ರಾಜನಿಗೆ ತಿಳಿಸಿದನು. ರಾಜನು ತನ್ನ ಎರಡನೆಯ ಹೆಂಡತಿಗೆ ನಿನ್ನ ಸವತಿಯನ್ನು ಕಾಡಿನಲ್ಲಿ ಬಿಟ್ಟೆನೆಂದು ಹೇಳಿದನು. ಅದನ್ನು ಕೇಳಿ ಅವಳು ಬಹಳ ಸಂತೋಷಪಟ್ಟಳು.
ಸುಕುಮಾರಿಯಾದ ಆ ರಾಣಿ ಮಗನೊಡನೆ ಬಹಳ ಕಷ್ಟಪಡುತ್ತಾ ದುಃಖದಿಂದ ಅನ್ನನೀರುಗಳಿಲ್ಲದೆ ನಿರ್ಜನವಾದ ಆ ಅರಣ್ಯದಲ್ಲಿ, ಅತಿಕಷ್ಟದಿಂದ ಮಗನನ್ನು ಎತ್ತಿಕೊಂಡು ಕಲ್ಲುಮುಳ್ಳುಗಳು ಚುಚ್ಚುತ್ತಿರಲು ದಾರಿ ತಿಳಿಯದೆ ಭಯದಿಂದ ಮೆಲ್ಲಮೆಲ್ಲಗೆ ನಡೆಯುತ್ತಾ ತನ್ನಲ್ಲೇ ತಾನು ಹೇಳಿಕೊಂಡಳು."ಇನ್ನು ನನಗೆ ಈ ಜೀವನ ಸಾಕು. ನನ್ನನ್ನು ದೊಡ್ದಹುಲಿಯೊಂದು ತ್ವರೆಯಾಗಿ ತಿಂದುಹಾಕಲಿ. ಈ ಪಾಪಾತ್ಮಳು ದುಷ್ಟಳಾದ ನನ್ನ ಬದುಕಿನಿಂದ ಪ್ರಯೋಜನವೇನು?" ಎಂದೆಲ್ಲ ಯೋಚಿಸುತ್ತಾ ಅವಳು ಸ್ಪೃಹೆ ಕಳೆದುಕೊಂಡು ಮತ್ತೆ ಎದ್ದು ದುಃಖಿಸುತ್ತಾ ಹೋಗುತ್ತಿದ್ದಳು. ಅವಳಿಗೆ ನೀರೂ ಸಿಕ್ಕಲಿಲ್ಲ. ವ್ರಣಗಳಿಂದ ದುಃಖಿತಳಾದ ಆವಳು ಹೆಜ್ಜೆಹೆಜ್ಜೆಗೂ ಹುಲಿ, ಹಾವು, ಸಿಂಹ, ಭೂತಪ್ರೇತಗಳು, ಬ್ರಹ್ಮರಾಕ್ಷಸರನ್ನು ನೋಡಿ ಭಯಪಡುತ್ತಾ ಕಾಲುಗಳಿಗೆ ಪಾದರಕ್ಷೆಗಳೂ ಇಲ್ಲದೆ ಅಳುತ್ತಾ ನಡೆದು ಹೋಗುತ್ತಿದ್ದಳು. ಹೋಗುತ್ತಾ ದಾರಿಯಲ್ಲಿ ಕೆಲವು ಹಸುಗಳು ಕಂಡುಬರಲು ಅವುಗಳ ಕಾವಲುದಾರರನ್ನು, "ಈ ಮಗು ಬಹಳ ಬಾಯಾರಿದ್ದಾನೆ. ನೀರು ಎಲ್ಲಿ ಸಿಕ್ಕುತ್ತದೆ?" ಎಂದು ಕೇಳಿದಳು. ಆ ಗೋಪಾಲರು, "ಹತ್ತಿರದಲ್ಲೇ ಗ್ರಾಮವೊಂದಿದೆ. ಮಂದಿರಗಳು, ಮನೆಗಳು ಕಾಣಬರುತ್ತಿವೆ. ಅಲ್ಲಿ ನಿನಗೆ ಆಹಾರ ನೀರು ದೊರಕುವುದು." ಎಂದು ಹೇಳಿ ಹೋಗುವ ದಾರಿಯನ್ನು ತೋರಿಸಿದರು. ಅವಳು ಮಗನೊಡನೆ ಆ ಗ್ರಾಮಕ್ಕೆ ಹೋಗಿ ಅಲ್ಲಿನ ಕೆಲವು ಹೆಂಗಸರನ್ನು, "ಈ ರಾಷ್ಟ್ರದ ರಾಜನಾರು?" ಎಂದು ಕೇಳಲು, ಅವರು, "ಇಲ್ಲಿನ ರಾಜ ಮಹಾಧನಿಕನಾದ ಒಬ್ಬ ವೈಶ್ಯ. ಪದ್ಮಾಕರನೆಂದು ಅವನ ಹೆಸರು. ಪುತ್ರಸಹಿತಳಾದ ನಿನ್ನನ್ನು ಅವನು ತಪ್ಪದೇ ರಕ್ಷಿಸುತ್ತಾನೆ." ಎಂದು ಹೇಳಿದರು. ಅದೇ ಸಮಯಕ್ಕೆ ಅ ವೈಶ್ಯನ ಮನೆಯಿಂದ ಬಂದ ಹಲವರು ದಾಸಿಯರು ಆ ರಾಣಿಯ ವೃತ್ತಾಂತವನ್ನೆಲ್ಲ ತಿಳಿದು ಆ ವೈಶ್ಯರಾಜ-ರಾಣಿಯರಿಗೆ ಎಲ್ಲವನ್ನೂ ಹೇಳಿದರು. ದಯಾಳುವಾದ ಆ ವೈಶ್ಯ ಅವಳನ್ನು ಕರೆದುಕೊಂಡು ಹೋಗಿ ಸುಖವಾಗಿರಲು ಅನುಕೂಲವಾದ ಮಂದಿರವೊಂದನ್ನು ಅವರಿಗೆ ಕೊಟ್ಟನು.
ಆ ವೈಶ್ಯ ರಾಜ ಅವರಿಗೆ ಅನ್ನ ವಸ್ತ್ರಗಳನ್ನು ಕೊಟ್ಟು ತನ್ನ ತಾಯಿಯನ್ನು ಕಾಪಾಡಿದಂತೆ ಕಾಪಾಡಿದನು. ಅವನು ಮಾಡಿಸಿದ ವೈದ್ಯಚಿಕಿತ್ಸೆಗಳಿಂದಲೂ, ಔಷಧಗಳಿಂದಲೂ ಅವರ ವ್ರಣಗಳು ಎಷ್ಟುಮಾತ್ರವೂ ತಗ್ಗಲಿಲ್ಲ. ಆ ರಾಣಿಗೆ ಅವಳ ವ್ರಣಗಳು ಬಹಳ ಬಾಧೆಯನ್ನುಂಟುಮಾಡುತ್ತಿದ್ದವು. ವ್ರಣಪೀಡಿತನಾದ ಅವಳ ಮಗನು ಒಂದುದಿನ ಸತ್ತುಹೋದನು. ಸತ್ತ ತನ್ನ ಮಗನನ್ನು ಕಂಡು ಅವಳು ಬಹಳ ದುಃಖಿತಳಾದಳು. ವೈಶ್ಯ ಸ್ತ್ರೀಯರು ಅವಳ ಬಳಿಗೆ ಬಂದು ಅವಳನ್ನು ಸಾಂತ್ವನಗೊಳಿಸಿದರು. ಆದರೂ ಆ ರಾಣಿಯಾಗಿದ್ದವಳು ತನ್ನ ಪೂರ್ವಸುಖವನ್ನು ನೆನಸಿಕೊಂಡು, "ತಂದೆ, ಎಲ್ಲಿಗೆ ಹೋಗುತ್ತೀಯೆ? ನೀನು ರಾಜವಂಶಕ್ಕೆ ಪೂರ್ಣಚಂದ್ರನು. ಕುಲನಂದನ, ಇನ್ನು ನಾನೂ ಪ್ರಾಣಗಳನ್ನು ಬಿಡುತ್ತೇನೆ." ಎಂದು ಹೇಳುತ್ತಾ, ಶೋಕಮಗ್ನಳಾದ ಅವಳನ್ನು ಕಂಡ ಜನರೂ ದುಃಖಿಸಿದರು. ಎಲ್ಲ ದುಃಖಗಳಲ್ಲಿ ಪುತ್ರಶೋಕವು ಅತಿದೊಡ್ಡದು. ಅದು ಬದುಕಿರುವ ತಾಯಿತಂದೆಗಳನ್ನು ಭಸ್ಮಮಾಡಿಬಿಡುತ್ತದೆ. ಹೀಗೆ ರಾಣಿ ದುಃಖಿಸುತ್ತಿದ್ದಾಗ ಪೂರ್ವ ಉಪಕಾರವನ್ನು ತಿಳಿದಿದ್ದ ಮಹಾಯೋಗಿ ಋಷಭನು ಅಲ್ಲಿಗೆ ಬಂದನು. ವೈಶ್ಯನು ಅವನನ್ನು ಪೂಜಿಸಿ ಸಂತಸಗೊಳಿಸಿದನು. ಆ ಮುನಿ ವೈಶ್ಯನನ್ನು, " ಬಹಳ ದೊಡ್ಡದಾಗಿ ಅಳುತ್ತಿದ್ದಾಳೆ ಏಕೆ?" ಎಂದು ಕೇಳಿದನು. ಅವನು ಆ ಯೋಗಿಗೆ ಎಲ್ಲವನ್ನೂ ಹೇಳಿದನು. ಯೋಗೀಶ್ವರನು ಆ ರಾಣಿಯನ್ನು ನೋಡಿ, "ಹೇ ರಾಣಿ, ಮೂರ್ಖತ್ವದಿಂದ ಶೋಕಿಸುತ್ತಿದ್ದೀಯೇಕೆ? ಹುಟ್ಟಿದವನಾರು? ಸತ್ತವನಾರು? ಆತ್ಮ ಯಾವ ರೀತಿಯಲ್ಲಿರುತ್ತಾನೆಂದು ಕಾಣಬರುವುದಿಲ್ಲ. ಈ ದೇಹವೇ ಕಾಣಿಸುವುದು. ಪಂಚಭೂತಗಳಿಂದಾದ ಈ ದೇಹ ಕಾರಣದೇಹದೊಡನೆ ಸೇರಿ ಕರ್ಮ ಇರುವವರೆಗೂ ಇಲ್ಲಿರುತ್ತದೆ. ಕರ್ಮ ಮುಗಿದ ನಂತರ, ಪಂಚಭೂತಗಳು ಬಿಟ್ಟು ಹೋದ ಕ್ಷಣವೇ ಈ ದೇಹ ಜಡವಾಗಿಹೋಗುತ್ತದೆ. ಶೋಕಿಸುವುದು ವ್ಯರ್ಥವು. ನಿಜಕರ್ಮ ಗುಣಗಳನ್ನನುಸರಿಸಿ ಏರ್ಪಡುವ ವಾಸನಾಮಯವಾದ ಕಾರಣದೇಹವು ಕಾಲವನ್ನು ಹಿಡಿದು ಭ್ರಮಿಸುತ್ತಿರುತ್ತದೆ. ಪ್ರಕೃತಿಸಿದ್ಧ ಗುಣಗಳು ಸತ್ವ, ರಜಸ್ಸು, ತಮಸ್ಸು ಎನ್ನುವವವು ಮೂರಿವೆ. ಅವುಗಳೇ ಕರ್ಮಸಂಗಕ್ಕೆ ಈ ದೇಹವನ್ನು ಇಲ್ಲಿ ಬಂಧಿಸಿರುವುದು. ಸತ್ವಗುಣದಿಂದ ದೇವತ್ವ, ರಜೋಗುಣದಿಂದ ಮಾನವತ್ವ, ತಮೋಗುಣದಿಂದ ಪಶುಪಕ್ಷಿಜಾತಿ ನಾನಾವಿಧವಾಗಿ ಸಂಭವಿಸುವುದು. (ಮಾನವ) ಗುಣಗಳನ್ನು ಬಿಟ್ಟು ನೈರ್ಗುಣ್ಯ ಬಂದಾಗ ಮುಕ್ತಿ ಹೊಂದುತ್ತಾನೆ. ಬೆಳೆಸಿಕೊಂಡ ಗುಣಗಳಿಂದ ದೇಹಧಾರಿ ಅಂತವನ್ನು ಹೊಂದುತ್ತಾನೆ. ಆಗ ಅವನೇ ನಶ್ವರವಾದ ದೇವ ದಾನವ ಮಾನವ ರಾಕ್ಷಸಾದಿ ಜನ್ಮಗಳನ್ನು ಪಡೆಯುತ್ತಾನೆ. ಈ ಸಂಸಾರದಲ್ಲಿ ನಿಜಕರ್ಮಗಳನ್ನನುಸರಿಸಿ ತಾನು ಆರ್ಜಿಸಿದ ಸುಖವನ್ನಾಗಲೀ ದುಃಖವನ್ನಾಗಲೀ ಅನುಭವಿಸುತ್ತಾನೆ. ಮರ್ತ್ಯರು ಅಲ್ಪಾಯುಗಳು. ಅವರ ಆಯುಷ್ಯಕ್ಕೆ ಸ್ಥಿರವೆಲ್ಲಿದೆ? ಅದರಿಂದಲೇ ಪ್ರಾಜ್ಞನು ಜನ್ಮವಾದಾಗ ಸಂತಸಪಡುವುದಿಲ್ಲ. ಮರಣವು ಪ್ರಾಪ್ತಿಯಾದಾಗ ದುಃಖಿಸುವುದಿಲ್ಲ. ಗರ್ಭದಲ್ಲಿ ಬಿದ್ದ ಕ್ಷಣದಿಂದಲೇ ಮೃತ್ಯುವನ್ನು ಹಿಂದಿಟ್ಟುಕೊಂಡೇ ಇಲ್ಲಿಗೆ ಬರುತ್ತಾನೆ. ಮೃತ್ಯುವು ಬಾಲ್ಯದಲ್ಲಿ, ಯೌವನದಲ್ಲಿ, ಬರಬಹುದು. ವಾರ್ಧಕ್ಯದಲ್ಲಿ ತಪ್ಪದೇ ಬರುವುದು. ಪ್ರಾರಬ್ಧಕರ್ಮಗಳಿರುವವರೆಗೆ ಮಾಯಾಮೋಹದಿಂದ ವ್ಯರ್ಥವಾಗಿ ಪುತ್ರಾದಿ ಸಂಬಂಧಗಳಿಂದ ಇಲ್ಲಿ ಕಟ್ಟುಬೀಳುತ್ತಾನೆ. ಬ್ರಹ್ಮಬರೆಹ ದೇವತೆಗಳೂ ದಾಟಲಾರದ್ದೇ! ಅಮ್ಮಾ, ನೀನೇಕೆ ಶೋಕಿಸುತ್ತಿದ್ದೀಯೆ? ಆತ್ಮನಿಗೆ ಶ್ರೇಯಸ್ಸು ಕೋರಿ ಈಶ್ವರನನ್ನು ಶರಣುಹೋಗು. ನೀನು ಯಾರಿಗೆ ತಾಯಿ? ಯಾರಿಗೆ ಹೆಂಡತಿ? ನಿನ್ನ ಬಂಧುಗಳು ಯಾರು?" ಎಂದು ಬೋಧಿಸಿದ ಯೋಗೀಶ್ವರನ ಹಿತವಾಕ್ಯಗಳನ್ನು ಕೇಳಿ ಆ ರಾಜಪತ್ನಿ ಮುನಿಗೆ ನಮಸ್ಕರಿಸಿ ಹೇಳಿದಳು.
"ಹೇ ಪ್ರಭು, ರಾಜ್ಯಭ್ರಷ್ಟಳಾಗಿ ದೈವಯೋಗದಿಂದ ಅಡವಿಯ ಪಾಲಾದೆ. ತಂದೆತಾಯಿಗಳು ಬಂಧುಗಳು ಎಲ್ಲರೂ ನನ್ನ ಕೈಬಿಟ್ಟರು. ಪ್ರಾಣಪ್ರಿಯನಾದ ನನ್ನ ಮಗನಿಗೆ ಈ ಗತಿ ಬಂತು. ನನಗೂ ಮೃತ್ಯುವೇ ಬೇಕು." ಎನ್ನುತ್ತಾ ಆ ಮುನಿಯ ಪಾದಗಳ ಮೇಲೆ ಬಿದ್ದಳು. ಆ ಯೋಗಿ ದಯಾನ್ವಿತನಾಗಿ ಹಿಂದೆ ಅವಳು ಮಾಡಿದ ಉಪಕಾರವನ್ನು ನೆನಪಿಗೆ ತಂದುಕೊಂಡು ಅವಳಲ್ಲಿ ಪ್ರಸನ್ನನಾಗಿ, ಅವಳ ಮಗನಿಗೆ ತಲೆಯಲ್ಲಿ ಭಸ್ಮವನ್ನಿಟ್ಟು ಬಾಯಲ್ಲಿ ಭಸ್ಮ ಹಾಕಿ ಮಂತ್ರಿಸಿದನು. ತಕ್ಷಣವೇ ಆ ಬಾಲಕನು ಎದ್ದು ಕುಳಿತನು. ಅವನಿಗೂ ಅವನ ತಾಯಿಗೂ ಅದುವರೆಗೆ ಇದ್ದ ವ್ರಣಗಳೆಲ್ಲ ನಾಶವಾದವು. ಪುತ್ರಸಹಿತಳಾಗಿ ಆ ತಾಯಿ ಯೋಗಿರಾಜನಿಗೆ ನಮಸ್ಕರಿಸಿದಳು. ಋಷಭಯೋಗಿ ಅವರಿಗೆ ಸ್ವಲ್ಪ ಭಸ್ಮವನ್ನು ಕೊಟ್ಟನು. ಅದರಿಂದ ಅವರಿಬ್ಬರ ಶರೀರದಲ್ಲಿ ಸುವರ್ಣ ಕಾಂತಿಯುಂಟಾಯಿತು. ಅವರಿಬ್ಬರೂ ದೇವತೆಗಳಂತೆ ಪ್ರಕಾಶಿಸಿದರು. ಅವರ ದೇಹಗಳಿಗೆ ಎಂದಿಗೂ ಮುದಿತನ ಬರದೆ ದಾರ್ಢ್ಯವಾಗಿರುವಂತೆ ಆ ಮುನಿ ಅವರಿಗೆ ವರವನ್ನು ಪ್ರಸಾದಿಸಿದನು. "ಭದ್ರಾಯು ಎಂಬ ಹೆಸರಿನಿಂದ ಆ ಬಾಲಕ ಚಿರಕಾಲ ರಾಜ್ಯವನ್ನು ಪರಿಪಾಲಿಸುತ್ತಾನೆ." ಎಂದು ಪ್ರಸನ್ನನಾದ ಆ ಮುನಿ ವರವನ್ನು ಕೊಟ್ಟು ಹೊರಟು ಹೋದನು.
ಆದ್ದರಿಂದ ಅಯ್ಯಾ ರಾಜ ಈ ನಿನ್ನ ವ್ರಣವು ನಿನಗೆ ಸಾಧುಗಳಿಂದಲೇ ನಾಶವಾಗುವುದು." ಎಂದು ಹೇಳಿದ ವಿಪ್ರ ವಾಕ್ಯವನ್ನು ಕೇಳಿ, ಆ ಮ್ಲೇಚ್ಛ ರಾಜ, "ಅಯ್ಯಾ ದ್ವಿಜೋತ್ತಮ, ಅಂತಹ ಸತ್ಪುರುಷರು ಎಲ್ಲಿದ್ದಾರೆ ಹೇಳು. ಅಂತಹವರ ದರ್ಶನಕ್ಕೆ ನಾನೀಗಲೇ ಹೊರಡುತ್ತೇನೆ." ಎಂದನು. ಅದಕ್ಕೆ ಆ ಬ್ರಾಹ್ಮಣ, "ಅಯ್ಯಾ ರಾಜ, ಗಂಧರ್ವಪಟ್ಟಣದಲ್ಲಿ ಭೀಮಾತೀರದಲ್ಲಿ ಪರಮಪುರುಷನಾದ ಭಗವಂತನಿದ್ದಾನೆ. ಅವನ ದರ್ಶನಮಾತ್ರದಿಂದಲೇ ನಿನಗೆ ಆರೋಗ್ಯವು ಸಿದ್ಧಿಸುವುದು." ಎಂದು ಹೇಳಿದನು.
ಶ್ರೀಗುರುವಿನ ದರ್ಶನಕ್ಕೆಂದು ಅ ರಾಜ ತಕ್ಷಣವೇ ಹೊರಟನು. ಆ ಮ್ಲೇಚ್ಛನು ಚತುರಂಗಬಲ ಹಿಂದೆ ಬರುತ್ತಿರಲು ಗಂಧರ್ವನಗರವನ್ನು ಸೇರಿದನು. ಆ ಗ್ರಾಮವನ್ನು ಸೇರಿ, ಅಲ್ಲಿನ ಜನರನ್ನು ತಾಪಸಿ ಎಲ್ಲಿದ್ದಾರೆ ಎಂದು ವಿಚಾರಿಸಿದನು. ಆ ಪುರಜನರು ಬಹಳ ಭಯಗೊಂಡು, "ಈ ಮ್ಲೇಚ್ಛನು ಶ್ರೀಗುರುವು ಎಲ್ಲಿದ್ದಾರೆ ಎಂದು ಕೇಳುತ್ತಿದ್ದಾನೆ. ಇನ್ನುಮುಂದೆ ಏನು ಕಾದಿದೆಯೋ?" ಎಂದು ತಮ್ಮಲ್ಲಿ ತಾವೇ ಚರ್ಚಿಸಿಕೊಳ್ಳುತ್ತಿದ್ದರು. ಆ ರಾಜ ಅವರಿಂದ ಏನೂ ಉತ್ತರ ಬರಲಿಲ್ಲವಾದದ್ದರಿಂದ, ‘ಆ ಯೋಗಿಶ್ವರನ ದರ್ಶನಕ್ಕೆಂದು ನಾನು ಬಂದಿದ್ದೇನೆ. ಆ ತಾಪಸಿ ಎಲ್ಲಿದ್ದಾರೆ?’ ಎಂದು ಮತ್ತೆ ಅವರನ್ನು ಕೇಳಿದನು. ಅದಕ್ಕೆ ಆ ಜನರು, "ಜಗದ್ಗುರುವು ಅನುಷ್ಠಾನಕ್ಕೆಂದು ಸಂಗಮಕ್ಕೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ಮಠಕ್ಕೆ ಹಿಂತಿರುಗುತ್ತಾರೆ." ಎಂದು ಹೇಳಿದರು. ಅವನು ನಂತರದಲ್ಲಿ ಶ್ರೀಗುರುವನ್ನು ದೂರದಿಂದ ನೋಡಿ ಪಲ್ಲಕ್ಕಿಯಿಂದ ಇಳಿದು ಪಾದಚಾರಿಯಾಗಿ ನಡೆದು ಹೋಗಿ ಅವರನ್ನು ಸಮೀಪಿಸಿ ಭಕ್ತಿಯಿಂದ ನಮಸ್ಕರಿಸಿ ದೂರವಾಗಿ ನಿಂತನು. ಶ್ರೀಗುರುವು ಅವನನ್ನು ನೋಡಿ, "ಅರೇ, ರಜಕ, ಎಲ್ಲಿದ್ದೀಯೆ? ಬಹಳಕಾಲದಮೇಲೆ ದರ್ಶನಕ್ಕೆಂದು ಇಲ್ಲಿಗೆ ಬಂದಿದ್ದೀಯೆ?" ಎಂದು ಕೇಳಿದರು. ಅವರ ಮಾತುಗಳನ್ನು ಕೇಳಿದ ಕ್ಷಣವೇ ಆ ಮ್ಲೇಚ್ಛನಿಗೆ ಜ್ಞಾನೋದಯವಾಗಿ, ಅವನ ಪೂರ್ವ ಜನ್ಮದ ಜ್ಞಾಪಕ ಬಂದು ಶ್ರೀಗುರುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕೈಜೋಡಿಸಿ ಎದುರಿಗೆ ನಿಂತು ಆನಂದದಿಂದ ಸ್ತುತಿಸಿದನು.
"ಸ್ವಾಮಿ, ನನ್ನನೇತಕ್ಕೆ ಉಪೇಕ್ಷಿಸಿದಿರಿ? ನಾನು ವಿದೇಶದಲ್ಲಿದ್ದು ನಿಮ್ಮ ಪಾದಗಳಿಗಳಿಗೆ ಪರಾಙ್ಮುಖನಾಗಿದ್ದೆ. ನಾನು ಸಂಸಾರಸಾಗರವೆಂಬ ಅಗಾಧದಲ್ಲಿ ನಿಮಗ್ನನಾಗಿ ಮಾಯಾಜಾಲದಿಂದ ಮುಚ್ಚಿಹೋದವನಾಗಿ ನಿಮ್ಮ ಪಾದಸ್ಮರಣೆ ನನಗೆ ದುರ್ಲಭವಾಯಿತು. ಸ್ವಾಮಿ, ಅಜ್ಞಾನವೆನ್ನುವ ಸಮುದ್ರದಲ್ಲಿ ಏಕೆ ನನ್ನನ್ನು ಹಾಕಿದಿರಿ? ಹೇ ಪ್ರಭು, ಈಗ ನನ್ನನ್ನುದ್ಧರಿಸಿ. ಇನ್ನುಮೇಲೆ ನಿಮ್ಮ ಪಾದದಾಸನಾಗಿರುತ್ತೇನೆ. ದುಃಖದಾಯಕವಾದ ಜನ್ಮಗಳು ನನಗಿನ್ನು ಸಾಕು." ಎಂದು ಆ ಮ್ಲೇಚ್ಛರಾಜ ಅನೇಕವಿಧಗಳಲ್ಲಿ ಶ್ರೀಗುರುವನ್ನು ಸ್ತುತಿಸಿ ನಮಸ್ಕರಿಸಿದನು.
ನಂತರ ಶ್ರೀಗುರುವು ತನ್ನ ಭಕ್ತನಲ್ಲಿ ಪ್ರಸನ್ನನಾಗಿ, "ಅಯ್ಯಾ, ನಿನಗೆ ಕಾಮಸಿದ್ಧಿಯಾಗುವುದು." ಎಂದು ಹೇಳಿದರು. ರಾಜ, "ಹೇ ಶ್ರೀಗುರು, ನನ್ನ ಶರೀರದಲ್ಲಿ ವ್ರಣವೊಂದು ಬಾಧಿಸುತ್ತಿದೆ. ಕೃಪಾದೃಷ್ಟಿಯಿಂದ ಅದನ್ನು ನೋಡು." ಎಂದು ಕೇಳಿಕೊಂಡನು. ಹಿಂದೆ ಕಾಣಿಸಿಕೊಂಡಿದ್ದ ವ್ರಣವು ತನ್ನ ಶರೀರದಲ್ಲಿ ಎಲ್ಲೂ ಕಾಣದೇ ಅವನು ವಿಸ್ಮಿತನಾಗಿ, "ಸ್ವಾಮಿ, ನಿಮ್ಮ ಪ್ರಸಾದದಿಂದ ಸಮೃದ್ಧವಾದ ರಾಜ್ಯವನ್ನು ಅನುಭವಿಸಿದೆ. ಪುತ್ರರು, ಪೌತ್ರರು ಇದ್ದಾರೆ. ನನ್ನ ಮನಸ್ಸು ತೃಪ್ತಿಗೊಂಡಿದೆ. ಒಂದೇ ಒಂದು ಕೋರಿಕೆ ಮಿಕ್ಕಿದೆ. ನನ್ನ ಐಶ್ವರ್ಯವನ್ನು ಒಂದು ಸಲ ನೀವು ನೋಡಬೇಕು. ಹೇ ಭಕ್ತವತ್ಸಲ, ಈ ನನ್ನ ಕೋರಿಕೆಯನ್ನು ಪೂರ್ತಿ ಮಾಡಬೇಕು. ಸಂಸಾರಭಾರವನ್ನು ಬಿಟ್ಟು ನಿಮ್ಮ ಪಾದಗಳಲ್ಲಿ ಸೇರಿಹೋಗುತ್ತೇನೆ." ಪ್ರಾರ್ಥಿಸಿದನು. ಶ್ರೀಗುರುವು ಅದಕ್ಕೆ, "ಅಯ್ಯಾ ರಜಕ, ನಾನು ಯತಿ, ಸನ್ಯಾಸಿಯಾಗಿದ್ದುಕೊಂಡು ನಿನ್ನ ಮ್ಲೇಚ್ಛಪುರಕ್ಕೆ ಹೇಗೆ ಬರಬಲ್ಲೆ? ಅಲ್ಲಿ ಮಹಾಪಾಪಗಳಿವೆಯಲ್ಲವೇ? ನೀವು ಯವನರು. ಜೀವಹಿಂಸೆ ಮಾಡುವವರು. ನಿಮ್ಮ ಪುರದಲ್ಲಿ ಗೋಹತ್ಯೆ ಮಾಡುತ್ತಾರೆ." ಎಂದು ಹೇಳಿ, ಮತ್ತೆ, "ನೀನು ಎಂದಿಗೂ ಹತ್ಯೆ ಮಾಡಬೇಡ." ಎಂದು ಹೇಳಿದರು. ಆ ಮ್ಲೇಚ್ಛರಾಜ ಅವರ ಮಾತನ್ನು ಅಂಗೀಕರಿಸಿ, "ಶ್ರೀಗುರು, ನಿನ್ನ ದೂರದೃಷ್ಟಿಯಿಂದ ನೋಡು. ನಾನು ನಿಮ್ಮಸೇವಕನೇ! ನನ್ನ ಜಾತಿ ಮಾತ್ರ ಗರ್ವಿತವಾದದ್ದು. ಹೇ ಪ್ರಭು, ನನ್ನ ಪುತ್ರಾದಿಗಳನ್ನು ನಿಮಗೆ ತೋರಿಸಿ ಆ ನಂತರ ನಿಮ್ಮ ದಾಸನಾಗುತ್ತೇನೆ." ಎಂದು ಪ್ರಾರ್ಥಿಸುತ್ತಾ, ಪ್ರಣಾಮ ಮಾಡಿದನು.
ಆ ನಂತರ ಶ್ರೀಗುರುವು, " ನಾವು ಇಲ್ಲಿದ್ದೇವೆಂದು ಎಲ್ಲರಿಗೂ ತಿಳಿದುಹೋಯಿತು. ನೀಚಜಾತಿಯವರೂ ಬರುತ್ತಿದ್ದಾರೆ. ಇನ್ನು ಮುಂದೆ ಕಲಿಯುಗದಲ್ಲಿ ಇರಬಾರದು. ಆದ್ದರಿಂದ ಗೌತಮಿ ತೀರಕ್ಕೆ ಹೋಗಿ ಗುರುವು ಸಿಂಹರಾಶಿಯಲ್ಲಿ ಇರಲು ಕಲಿಯುಗದಲ್ಲಿ ಅದೃಶ್ಯನಾಗುತ್ತೇನೆ." ಎಂದು ನಿಶ್ಚಯಿಸಿ, ಸಂಗಮದಿಂದ ಹೊರಟರು. ಆ ಮ್ಲೇಚ್ಛರಾಜನು ಶ್ರೀಗುರುವನ್ನು ಪಲ್ಲಕ್ಕಿಯಲ್ಲಿ ಕೂಡಿಸಿ, ಅವರ ಪಾದುಕೆಗಳನ್ನು ಹೊತ್ತು ಅವರನ್ನು ಅನುಸರಿಸಿ ನಡೆಯುತ್ತಾ ಹೊರಟನು. ಶ್ರೀಗುರುವು ರಾಜನನ್ನು ನೋಡಿ, "ನೀನು ಕುದುರೆಯನ್ನೇರು. ಇಲ್ಲದಿದ್ದರೆ ಜನರು ನಿನ್ನನ್ನು ನಿಂದಿಸುತ್ತಾರೆ. ನಿನ್ನನ್ನು ರಾಷ್ಟ್ರಾಧಿಪನೆನ್ನುತ್ತಾರೆಯಲ್ಲವೇ? ದ್ವಿಜನಿಗೆ ದಾಸ್ಯ ಮಾಡುವುದರಿಂದ ನಿನ್ನನ್ನು ಜಾತಿದೂಷಣೆ ಮಾಡುತ್ತಾ ಪರಿಹಾಸಮಾಡುತ್ತಾರೆ." ಎಂದು ಆಜ್ಞಾಪಿಸಲು, ಆ ರಾಜ, "ಹೇ ಸ್ವಾಮಿ, ರಾಜನಾರು? ನಿಮ್ಮ ಸೇವಕನಾದ ರಜಕನು ನಾನು. ನಿಮ್ಮ ದರ್ಶನದಿಂದ ಶುದ್ಧನಾದೆ. ಸಮಸ್ತ ಜನರಿಗೂ ರಾಜರು ನೀವೇ! ನನಗೆ ಮತ್ತೆ ದರ್ಶನ ಕೊಟ್ಟಿರಿ. ನನ್ನ ಮನೋರಥಗಳು ಪೂರಯಿಸಲ್ಪಟ್ಟವು." ಎಂದು ಹೇಳಿ, ತನ್ನ ತುರಂಗಬಲ, ಆನೆಗಳು, ಸುಶಿಕ್ಷಿತವಾದ ಚತುರಂಗಬಲವನ್ನು ತೋರಿಸಿ ಸಂತಸಪಟ್ಟನು.
ಆ ನಂತರ ಶ್ರೀಗುರುವು ರಾಜನಿಗೆ, "ಮಗು, ನಾವು ಬಹಳ ದೂರ ಹೋಗಬೇಕಾಗಿದೆಯಲ್ಲವೇ? ನನ್ನ ಆಜ್ಞೆಯನ್ನು ಶಿರಸಾವಹಿಸಿ ನೀನು ಕುದುರೆಯನ್ನೇರು." ಎನ್ನಲು, ಆ ರಾಜ, ಶಿಷ್ಯರಿಗೂ ವಾಹನಗಳನ್ನು ಕೊಟ್ಟು ತಾನು ಕುದುರೆಯನ್ನೇರಿದನು. ಶ್ರೀಗುರುವು ಆ ಯವನರಾಜನನ್ನು ಕರೆದು, "ಅಯ್ಯಾ ರಜಕ, ನೀನು ಅಧಮಜಾತಿಯವನಾದರೂ ಭಕ್ತಿಯುಳ್ಳವನು. ನಿನ್ನಲ್ಲಿ ನನಗೆ ಪ್ರೀತಿಯುಂಟಾಯಿತು. ನಾನು ತಾಪಸಿ, ಸನ್ಯಾಸಿ. ತ್ರಿಕಾಲದಲ್ಲೂ ನಾನು ಉಪಾಸನೆ ಮಾಡಬೇಕು. ನಿನ್ನ ಜೊತೆಯಲ್ಲಿದ್ದರೆ ಉಪಾಸನೆ ಆಗುವುದಿಲ್ಲ. ಆದ್ದರಿಂದ ನಾನು ನಿನಗಿಂತ ಮುಂಚೆ ಹೋಗುತ್ತೇನೆ. ನೀನು ನಿಧಾನವಾಗಿ ಯಥಾಸುಖವಾಗಿ ಬರಬಹುದು. ಪಾಪವಿನಾಶತೀರ್ಥದಲ್ಲಿ ನನ್ನ ದರ್ಶನ ಆಗುವುದು." ಎಂದು ರಾಜನಿಗೆ ಆಜ್ಞಾಪಿಸಿ, ತನ್ನ ಶಿಷ್ಯರೊಡನೆ ಯೋಗಮಾರ್ಗದಲ್ಲಿ ಅದೃಶ್ಯರಾಗಿ ವೈಢೂರ್ಯನಗರವನ್ನು ಸೇರಿದರು.
ಶ್ರೀಗುರುವು ಶಿಷ್ಯರೊಡನೆ ಪಾಪವಿನಾಶತೀರ್ಥದಲ್ಲಿ ಅನುಷ್ಠಾನಕ್ಕೆಂದು ನಿಂತರು. ಜನರು ಅಲ್ಲಿ ಬಂದು ಸೇರಿದರು. ಅಲ್ಲಿ ಸಾಯಂದೇವನ ಮಗನಾದ ನಾಗನಾಥನು ಬಂದು ಶ್ರೀಗುರುವನ್ನು ಶಿಷ್ಯರಸಹಿತ ತನ್ನ ಮನೆಗೆ ಕರೆದುಕೊಂಡು ಹೋಗಿ ಅವರನ್ನು ಅರ್ಚಿಸಿದನು. ಷೋಡಶೋಪಚಾರಗಳನ್ನು ಮಾಡಿ ಶ್ರೀಗುರುವಿಗೆ ಭೋಜನವನ್ನಿತ್ತನು. ಅಷ್ಟರಲ್ಲಿ ಸಾಯಂಕಾಲವಾಯಿತು. ಶ್ರೀಗುರುವು ನಾಗನಾಥನಿಗೆ, "ಅಯ್ಯಾ, ವಿಪ್ರವರ, ಪಾಪನಾಶಿನಿ ತೀರ್ಥಕ್ಕೆ ಬಾ ಎಂದು ಮ್ಲೇಚ್ಛನಿಗೆ ಹೇಳಿದ್ದೆನು. ಇಲ್ಲೇ ಇದ್ದರೆ ಬ್ರಾಹ್ಮಣರಿಗೆ ಉಪದ್ರವವಾಗಬಹುದೇನೋ ಎಂಬ ಆತಂಕದಿಂದ ಇಲ್ಲಿನಿಂದ ಹೊರಡುತ್ತಿದ್ದೇನೆ. ನಾನು ಇಲ್ಲಿಯೇ ಇದ್ದರೆ ಮ್ಲೇಚ್ಛರು ನಿನ್ನ ಮನೆಗೇ ಬರುತ್ತಾರೆ." ಎಂದು ಹೇಳಿ, ಶಿಷ್ಯರೊಡನೆ ಪಾಪನಾಶನತೀರ್ಥಕ್ಕೆ ಹೋಗಿ ಅಲ್ಲಿ ಆತ್ಮಾನುಸಂಧಾನ ಮಾಡುತ್ತಾ ಕುಳಿತರು.
ಮ್ಲೇಚ್ಛರಾಜನು ಶ್ರೀಗುರುವು ಕಾಣಿಸದೇ ಹೋಗಲು ಅವರನ್ನು ಹುಡುಕುತ್ತಾ ಚಿಂತಾವಿಷ್ಟನಾಗಿ, "ಅಯ್ಯೋ, ಶ್ರೀಗುರುವು ನನ್ನನ್ನು ಏಕೆ ಉಪೇಕ್ಷಿಸಿ ಹೋದರು? ನಾನು ಮಾಡಿದ ಅಪರಾಧವೇನು?" ಎಂದುಕೊಂಡು, ಮತ್ತೆ ಅವರು ಹೇಳಿದ್ದನ್ನು ಜ್ಞಾಪಕಕ್ಕೆ ತಂದುಕೊಂಡು, "ಪಾಪನಾಶನ ತೀರ್ಥದಲ್ಲಿ ದರ್ಶನ ಕೊಡುತ್ತಾರೆಯಲ್ಲವೇ? ಗುರುಮಹಿಮೆಯನ್ನು ತಿಳಿದವರಾರು? ಅವರ ಮಹಿಮೆಯನ್ನು ಸಾಂತವಾಗಿ ಬಲ್ಲವರಾರು? ಅವರು ಅಲ್ಲಿಂದಲ್ಕೂ ಮುಂದೆ ಹೋಗಬಹುದು." ಎಂದುಕೊಂಡು, ಆ ರಾಜ ದಿವ್ಯವಾದ ಕುದುರೆಯೊಂದನ್ನು ಹತ್ತಿ ದಿನಕ್ಕೆ ನಲವತ್ತನಾಲ್ಕು ಕ್ರೋಶಗಳಷ್ಟು ದೂರ ಪ್ರಯಾಣಮಾಡುತ್ತಾ, ಪಾಪನಾಶನತೀರ್ಥವನ್ನು ಸೇರಿ ಶ್ರೀಗುರುವನ್ನು ದರ್ಶಿಸಿದನು. ಆ ಮ್ಲೇಚ್ಛರಾಜ ಭಕ್ತಿಯಿಂದ ಶ್ರೀಗುರುವನ್ನು ತನ್ನ ಪುರವನ್ನು ಪಾವನಮಾಡಲು ಕೇಳಿಕೊಂಡನು. ಶ್ರೀಗುರುವು ಅವನ ಪ್ರಾರ್ಥನೆಯನ್ನು ಅಂಗೀಕರಿಸಲು, ಆ ರಾಜ ಮುತ್ತುರತ್ನಗಳಿಂದ ಅಲಂಕರಿಸಿದ, ದಾರಿಯಲ್ಲಿ ಪತಾಕೆಗಳು ಹಾರಾಡುತ್ತಿರುವ ತನ್ನ ಪಟ್ಟಣಕ್ಕೆ, ಶ್ರೀಗುರುವನ್ನು ಒಂದು ಪಲ್ಲಕ್ಕಿಯಲ್ಲಿ ಕೂಡಿಸಿ, ತಾನು ಪಾದಚಾರಿಯಾಗಿ, ರತ್ನಗಳಿಂದ ಶ್ರೀಗುರುವಿಗೆ ನೀರಾಜನವನ್ನು ಕೊಟ್ಟು, ಪಟ್ಟಣದೊಳಕ್ಕೆ ಕರೆದುಕೊಂಡು ಹೋದನು. ಅದನ್ನು ನೋಡಿದ ಮ್ಲೇಚ್ಛರೆಲ್ಲರೂ ಆಶ್ಚರ್ಯಪಟ್ಟರು.ಅವರು, "ಈ ರಾಜ ಬ್ರಾಹ್ಮಣನನ್ನು ಪೂಜಿಸುತ್ತಿದ್ದಾನೆ. ಎಂತಹ ಅನಾಚಾರ! ಸ್ವಧರ್ಮವನ್ನು ಬಿಟ್ಟುಬಿಟ್ಟಿದ್ದಾನೆ. ಇವನು ಧರ್ಮಭ್ರಷ್ಟನು." ಎಂದುಕೊಂಡರು. ಬ್ರಾಹ್ಮಣರು, "ಈ ರಾಜ ಪುಣ್ಯವಂತನು. ವಿಪ್ರರಿಗೆ ಸೇವಕನಾದನು. ಆದ್ದರಿಂದ ದೇಶಕ್ಕೆ ಒಳ್ಳೆಯದಾಗುವುದು." ಎಂದುಕೊಂಡರು. ಜನರೆಲ್ಲ ಭಕ್ತಿಯಿಂದ ಶ್ರೀಗುರುವಿಗೆ ನಮಸ್ಕಾರ ಮಾಡಿದರು. "ಈ ಮಹಾನುಭಾವ ಮನುಷ್ಯನಲ್ಲ. ದೇವಶ್ರೇಷ್ಠನಾಗಿರಬೇಕು. ಅದರಿಂದಲೇ ನಮ್ಮ ರಾಜ ಈ ಶ್ರೀಗುರುವನ್ನು ಸೇವಿಸುತ್ತಿದ್ದಾನೆ. ಇದು ಕಲಿಯುಗದಲ್ಲೊಂದು ವಿಚಿತ್ರ." ಎಂದು ಕೆಲವರು ಹೇಳಿದರು. ವಂದಿಮಾಗಧರು ಸ್ತೋತ್ರಪಾಠಗಳನ್ನು ಹೇಳುತ್ತಿರಲು, ವಾದ್ಯ ಘೋಷಗಳ ನಡುವೆ, ಮಾರ್ಗದಲ್ಲಿ ದಿವ್ಯ ವಸ್ತ್ರಗಳನ್ನು ಹರಡಿ, ರತ್ನಗಳನ್ನು ಚೆಲ್ಲುತ್ತಾ, ಶ್ರೀಗುರುವನ್ನು ಪುರಪ್ರವೇಶಮಾಡಿಸಿ, ಮೋಕ್ಷಕಾಮಿಯಾದ ಮ್ಲೇಚ್ಛರಾಜ ಅವರನ್ನು ಅಂತಃಪುರಕ್ಕೆ ಕರೆತಂದನು. ರತ್ನಗಳಿಂದ ಅಲಂಕೃತವಾದ ಸಿಂಹಾಸನದಲ್ಲಿ ಆರ್ತ ಬಂಧುವಾದ ಶ್ರೀಗುರುವನ್ನು ಕೂಡಿಸಿ ರಾಜನು ನಮಸ್ಕರಿಸಿದನು. ನಾಲ್ವರು ಶಿಷ್ಯರೊಡನೆ ಶ್ರೀಗುರುವನ್ನು ಸಿಂಹಾಸನದಲ್ಲಿ ಸುಖವಾಗಿ ಕೂಡಿಸಿ ತಾನು ಅವರಿಗೆ ಚಾಮರದಿಂದ ಗಾಳಿಹಾಕುತ್ತಾ ನಿಂತನು. ಅವನ ಭಾರ್ಯೆಯರು ಶ್ರೀಗುರುವಿಗೆ ಬಗ್ಗಿ ನಮಸ್ಕಾರ ಮಾಡಿದರು. ರಾಜ ಶ್ರೀಗುರುವಿಗೆ, "ಸ್ವಾಮಿ ನಿಮ್ಮ ಬರುವಿಕೆಯಿಂದ ನಾನು ಕೃತಾರ್ಥನಾದೆ. ವೇದಶಾಸ್ತ್ರಗಳು ನನ್ನನ್ನೂ, ನನ್ನ ಜಾತಿಯನ್ನೂ ನಿಂದಿಸುತ್ತಿದ್ದರೂ ನಿಮ್ಮ ಅನುಗ್ರಹದಿಂದ ನಾನು ಧನ್ಯನಾದೆ." ಎಂದು ಬಿನ್ನವಿಸಿಕೊಂಡನು. ಶ್ರೀಗುರುವು ರಾಜನ ಕುಶಲವನ್ನು ವಿಚಾರಿಸಿ, "ಮಗು, ನಿನ್ನ ಮನಸ್ಸು ವಿಷಯವಾಸನೆಗಳಲ್ಲಿ ತೃಪ್ತಿಹೊಂದಿದೆಯೋ ಇಲ್ಲವೋ? ನಿನಗಿನ್ನೇನಾದರೂ ಕೋರಿಕೆಗಳಿವೆಯೇ? ಭಯವಿಲ್ಲದೆ ಹೇಳು." ಎಂದು ಕೇಳಲು, ಆ ರಾಜ, "ಪ್ರಭು, ಬಹಳ ಕಾಲ ಈ ಮಹಾಸಾಮ್ರಾಜ್ಯವನ್ನು ಅನುಭವಿಸಿದೆ. ಅದರಿಂದ ನನಗೆ ಸಂತೋಷ ಬರಲಿಲ್ಲ. ಸ್ವಾಮಿ, ನಿಮ್ಮ ಪಾದಸೇವೆಗೆ ಅಂಗೀಕಾರ ಕೊಡಿ. ಈ ಜನ್ಮದಲ್ಲಿ ಅದೇ ನನ್ನ ಕೋರಿಕೆ. ಮತ್ತಾವ ಕೋರಿಕೆಯೂ ಇಲ್ಲ." ಎಂದು ಹೇಳಿದನು. ಅದಕ್ಕೆ ಶ್ರೀಗುರುವು, "ಅಯ್ಯಾ, ನಿನಗೆ ಶ್ರೀಪರ್ವತದಲ್ಲಿ ನನ್ನ ದರ್ಶನವು ಲಭಿಸುವುದು. ಈ ರಾಜ್ಯಭಾರವನ್ನು ನಿನ್ನ ಮಗನಿಗೆ ಒಪ್ಪಿಸಿ ಶ್ರೀಶೈಲಕ್ಕೆ ತ್ವರೆಯಾಗಿ ಹೋಗು." ಎಂದು ಹೇಳಿ ಅಲ್ಲಿಂದ ಶ್ರೀಗುರುವು ಹೊರಟರು.
ಅವರ ಅಗಲುವಿಕೆಯನ್ನು ತಾಳಲಾರದ ಆ ಭಕ್ತ, "ಹೇ ಭಗವನ್, ನಿನ್ನ ಸ್ಮರಣೆ ನನ್ನಲ್ಲಿ ಸತತವಾಗಿ ಇರುವಹಾಗೆ ನನಗೆ ಜ್ಞಾನವನ್ನು ಅನುಗ್ರಹಿಸು." ಎಂದು ಶ್ರೀಗುರುವನ್ನು ಬೇಡಿಕೊಂಡನು. ಕೃಪಾನಿಧಿಯಾದ ಶ್ರೀಗುರುವು ಅವನನ್ನು ಸಮಾಧಾನಗೊಳಿಸಿ ತನ್ನ ಶಿಷ್ಯರೊಡನೆ ಗೋದಾವರಿ ತೀರವನ್ನು ಸೇರಿದರು. ಆ ನದಿಯನ್ನು ಪವಿತ್ರಮಾಡುವಂತೆ ಅಲ್ಲಿನ ಶೀತಲಜಲದಲ್ಲಿ ಸ್ನಾನವನ್ನಾಚರಿಸಿ, ಶ್ರೀಗುರುವು ಶಿಷ್ಯಸಹಿತರಾಗಿ ಅಮರಜಾಭೀಮಾನದಿಗಳ ಸಂಗಮವನ್ನು ಸೇರಿದರು. ಶ್ರೀಗುರು ಮಹಿಮೆ ಜಗತ್ತಿನಲ್ಲಿ ಪರಿಮಿತಿಯಿಲ್ಲದ್ದು ಅಲ್ಲವೇ!
ಅಲ್ಲಿ ಶ್ರೀಗುರುವನ್ನು ದರ್ಶನಮಾಡಿಕೊಂಡು ಜನರು ತಮ್ಮ ಪ್ರಾಣಗಳು ಮತ್ತೆ ಬಂದಂತೆ ಭಾವಿಸುತ್ತಾ ಪ್ರಣಾಮ ಮಾಡಿದರು. ಅಲ್ಲಿನ ದ್ವಿಜರು ಅವರನ್ನು ಪುರದೊಳಕ್ಕೆ ಕರೆದುಕೊಂಡುಹೋಗಬೇಕು ಎಂದುಕೊಂಡರು. ಆಗ ಶ್ರೀಗುರುವು ‘ಈಗಾಗಲೇ ಪ್ರಖ್ಯಾತಿ ಬಹಳವಾಯಿತು. ಆದ್ದರಿಂದ ನಾನು ಇಲ್ಲೇ ಅಂತರ್ಹಿತನಾಗಿರುತ್ತೇನೆ’ ಎಂದು ಯೋಚಿಸಿ, ಆ ದ್ವಿಜರಿಗೆ, "ಶ್ರೀಶೈಲಯಾತ್ರೆಗೆಂದು ನಾನು ಹೋದರೂ ಈ ಶ್ರೇಷ್ಠವಾದ ಗಂಧರ್ವಪುರದಲ್ಲಿ ಗುಪ್ತರೂಪದಲ್ಲಿ ಭಕ್ತರ ಹಿತಕ್ಕಾಗಿ ಇರುತ್ತೇನೆ. ಭಕ್ತರಿಗೆ ಇಲ್ಲಿಯೇ ಸಾಕ್ಷಾತ್ಕಾರ ಕೊಡುತ್ತಿರುತ್ತೇನೆ. ಈ ಗಂಧರ್ವ ನಗರವು ಅತಿಶ್ರೇಷ್ಠವು. ನನಗೆ ಬಹಳ ಪ್ರಿಯವಾದದ್ದು. ನನ್ನನ್ನು ಭಜಿಸುವ ಭಕ್ತರಿಗೆ, ನನ್ನ ಪಾದಗಳನ್ನು ಆಶ್ರಯಿಸುವವರಿಗೆ, ಅನ್ಯ ಕಾಮನೆಗಳಿಲ್ಲದವರನ್ನು ಉದ್ಧರಿಸಲು, ಶಿಷ್ಟರ ಇಷ್ಟಗಳನ್ನು ಪೂರಯಿಸಲು, ಕಲಿಕಾಲದೋಷಗಳನ್ನು ಹೋಗಲಾಡಿಸುವವನಾಗಿ ಇಲ್ಲಿಯೇ ಇರುತ್ತೇನೆ. ಕಲಿಯುಗದಲ್ಲಿ ಧರ್ಮವು ಲೋಪಿಸುವುದು. ರಾಜರು ಮ್ಲೇಚ್ಚರಾಗಿ ಕ್ರೂರಕರ್ಮಗಳನ್ನು ಮಾಡುವರು. ಅಂತಹವರು ಕೂಡಾ ನನ್ನನ್ನು ಕಾಣಲು ಬರುವರು. ನನ್ನ ದರ್ಶನವನ್ನು ಮಾಡಲು ಬಂದ ರಾಜರನ್ನು ಕಂಡು ಇತರರೂ ಬರುತ್ತಾರೆ. ಯವನರು ಬರುವುದನ್ನು ಒಳ್ಳೆಯದಾಗಿ ಭಾವಿಸುವುದಿಲ್ಲ. ಆದ್ದರಿಂದ ಇಲ್ಲಿಯೇ ಇದ್ದುಕೊಂಡು ಅಂತರ್ಧಾನನಾಗುತ್ತೇನೆ." ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿದ ಶಿಷ್ಯರು, ಸೇವಕರು ಚಿಂತೆಗೊಂಡು ಗೊಂಬೆಗಳಹಾಗೆ ನಿಂತುಬಿಟ್ಟರು. ಇನ್ನುಮುಂದೆ ಭೂಪತಿಗಳು ಮ್ಲೇಚ್ಛರಾಗುತ್ತಾರೆ. ಶ್ರೀಗುರುವಿನ ಭಜನೆಯಲ್ಲಿ ಹೀನರೂ ಆಸಕ್ತರಾಗುತ್ತಾರೆ. ಅವರಿಗೆ ಅಸತ್ಯಗಳೇ ಪ್ರಿಯವಾಗುವುದು. ಆದ್ದರಿಂದಲೇ ಶ್ರೀಗುರುವು ಅಂತರ್ಧಾನರಾದರು. ಲೋಕಕ್ಕೆ ಅವರು ಬಿಟ್ಟುಹೋದಹಾಗೆ ತೋರುತ್ತಿದ್ದರೂ ಆ ವೇದಶಾಸ್ತ್ರಗಳಿಗೆ ಅತೀತನಾದ ಶ್ರೀಗುರುವು ಗಂಧರ್ವಪುರದಲ್ಲೇ ಅಮರೇಶ್ವರನಾಗಿ ಇದ್ದಾರೆ.
ಗಂಗಾಧರಪುತ್ರನಾದ ಸರಸ್ವತಿ ಶ್ರೀಗುರುವಿನಲ್ಲೇ ಭಕ್ತಿಯಿಂದ, "ಮುಕ್ತಿಪ್ರದಾತನಾದ ಶ್ರೀಗುರುವು ಈ ಗಂಧರ್ವನಗರದಲ್ಲೇ ಇದ್ದಾರೆ. ನಾನು ನೋಡಿದ್ದೆನು." ಎಂದು ಹೇಳಿದರು. "ಭಾವನೆಯಿಂದ ಭಜಿಸುವವರ ಸಮಸ್ತಕಾಮನೆಗಳನ್ನೂ ಶ್ರೀಗುರುವು ಕ್ಷಣದಲ್ಲೇ ಪೂರ್ಣಗೊಳಿಸುವರು. ಭಕ್ತಿಯೇ ಮುಖ್ಯವು. ಭಾವವನ್ನು ತಿಳಿಯುವ ಭಗವಂತನು ಇಲ್ಲಿ ಸುಲಭವಾಗಿ ಸಿದ್ಧಿಯನ್ನು ಕೊಡಬಲ್ಲನು. ಇಲ್ಲಿ ಭಗವಂತನಾದ ಶ್ರೀಗುರುವೇ ಕಲ್ಪವೃಕ್ಷವಾಗಿ ಇದ್ದಾರೆ. ಅಯ್ಯಾ ಜನಗಳಿರಾ, ಈ ಗಂಧರ್ವನಗರದಲ್ಲಿ ಶ್ರೀಗುರುವನ್ನು ಸೇರಿರಿ. ಇಲ್ಲಿಗೆ ಬಂದವರ ಸಂಕಲ್ಪಗಳು ನೆರವೇರುತ್ತವೆ. ಶ್ರೀಗುರುವಿನ ಭಕ್ತರು ಎಲ್ಲಕಾಲಕ್ಕೂ ಸುಖಸಂಪತ್ತುಗಳನ್ನು ಹೊಂದಿರುವರು. ಭಕ್ತನು ಭುಕ್ತಿ ಮುಕ್ತಿಗಳನ್ನು ಕೂಡಾ ಇಲ್ಲಿ ಮುದದಿಂದ ಹೊಂದಬಲ್ಲನು." ಎಂದು ಗಂಗಾಧರಸುತನಾದ ಸರಸ್ವತಿ ಬೋಧಿಸಿದನು.
ಇಲ್ಲಿಗೆ ಐವತ್ತನೆಯ ಅಧ್ಯಾಯ ಮುಗಿಯಿತು.
No comments:
Post a Comment