Monday, September 23, 2013

||ಶ್ರೀಗುರುಚರಿತ್ರೆ - ನಲವತ್ತನಾಲ್ಕನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀ ಗುರುಭ್ಯೋನಮಃ||

ಸಿದ್ಧ ಮುನಿಯು ಮುಂದಿನ ಕಥೆಯನ್ನು ಹೇಳಲುಪಕ್ರಮಿಸಿದರು. ಶ್ರೀಗುರುವಿನ ಸೇವಕರಲ್ಲಿ ನೇಕಾರನೊಬ್ಬನಿದ್ದ. ಅವನ ಹೆಸರು ತಂತುಕ. ಅವನು ತನ್ನ ಗೃಹಕೃತ್ಯಗಳನ್ನೆಲ್ಲ ಮುಗಿಸಿ ಶ್ರೀಗುರುವಿನ ನಿವಾಸದ ಬಾಗಿಲನ್ನು ತೊಳೆದು, ಗೋಮಯ ನೀರನ್ನು ಚೆಲ್ಲಿ ದೂರದಿಂದಲೇ ಶ್ರೀಗುರುವಿಗೆ ನಮಸ್ಕಾರ ಮಾಡುತ್ತಿದ್ದನು. ಒಂದು ಶಿವರಾತ್ರಿಯ ದಿನ ಅವನ ಬಂಧುಗಳು ಶ್ರೀಶೈಲಯಾತ್ರೆಯ ಪ್ರಯಾಣಕ್ಕೆ ಸಿದ್ಧರಾಗುತ್ತಿದ್ದರು. ಅವರು ತಂತುಕನನ್ನು ಕೂಡಾ ಬರುವಂತೆ ಆಹ್ವಾನಿಸಿದರು. ಅವನು ನಗುತ್ತಾ, "ಶ್ರೀಗುರುವಿನ ನಿವಾಸವೇ ಶ್ರೀಶೈಲವು. ಶ್ರೀಗುರುವೇ ಮಲ್ಲಿಕಾರ್ಜುನನು. ಇದೇ ನನ್ನ ನಂಬಿಕೆ. ಅದರಿಂದಲೇ ನಾನು ಇಲ್ಲಿಂದ ಎಲ್ಲಿಗೂ ಬರುವುದಿಲ್ಲ" ಎಂದು ಹೇಳಿದನು. ಅವರೆಲ್ಲರೂ ಸಂತೋಷದಿಂದ ಶ್ರೀಶೈಲಕ್ಕೆ ಹೊರಟರು. ತಂತುಕನು ಮಾತ್ರ ಪ್ರತಿನಿತ್ಯ ಮಾಡುತ್ತಿದ್ದಂತೆ ಸಂಗಮ ಸ್ಥಾನವನ್ನು ಸೇರಿ ಶ್ರೀಗುರುವಿಗೆ ನಮಿಸಿದನು. ಶ್ರೀಗುರುವು ತಂತುಕನಿಗೆ, "ನಿನ್ನ ಬಂಧುಗಳೆಲ್ಲರೂ ಶ್ರೀಶೈಲಕ್ಕೆ ಹೋರಟಿದ್ದಾರೆ. ನೀನೇಕೆ ಹೋಗಲಿಲ್ಲ?" ಎಂದು ಕೇಳಿದರು. ಆ ತಂತುಕ, "ಅಯ್ಯಾ, ನನಗೆ ಸಮಸ್ತವೂ ಇಲ್ಲೇ ಇದೆ. ತಮ್ಮ ಚರಣಗಳೇ ನಾನಾ ಕ್ಷೇತ್ರಗಳು. ನಾನಾ ತೀರ್ಥಗಳು" ಎಂದು ಹೇಳಿ, ನಿತ್ಯದಂತೆ ನಮಸ್ಕರಿಸಿಕೊಂಡು ತನ್ನ ಮನೆಗೆ ಹಿಂತಿರುಗಿದ. ಮಾಘ ಬಹುಳ ಚತುರ್ದಶಿ ಶಿವರಾತ್ರಿ. ಅಂದು ಮಧ್ಯಾಹ್ನ ತಂತುಕನು ಸಂಗಮದಲ್ಲಿ ಸ್ನಾನ ಮಾಡಿಕೊಂಡು ಶ್ರೀಗುರುವಿನ ಬಳಿಗೆ ಹೋಗಿ ನಮಸ್ಕರಿಸಿ ಅವರ ಎದುರಿಗೆ ನಿಂತನು. ಶ್ರೀಗುರುವು, "ಅಯ್ಯಾ ತಂತುಕ, ನಿನ್ನವರೆಲ್ಲರೂ ಶ್ರೀಶೈಲಕ್ಕೆ ಹೋದರು. ನೀನು ಎಂದಾದರೂ ಶ್ರೀಶೈಲವನ್ನು ನೋಡಿದ್ದೀಯೋ ಇಲ್ಲವೋ ಹೇಳು" ಎಂದು ಕೇಳಲು, ಅವನು, "ಸ್ವಾಮಿ, ಸರ್ವಯಾತ್ರೆಗಳೂ ನನಗೆ ನಿಮ್ಮ ಪಾದಗಳೇ!" ಎಂದನು. ಅವನ ಮಾತುಗಳನ್ನು ಕೇಳಿದ ಶ್ರೀಗುರುವು ಅದರ ಹಿಂದಿನ ಭಾವವನ್ನು ತಿಳಿದು, ಅವನನ್ನು ಹತ್ತಿರಕ್ಕೆ ಕರೆದು, "ನಿನಗೆ ಶ್ರೀಶೈಲವನ್ನು ತೋರಿಸುತ್ತೇನೆ" ಎಂದು ಹೇಳಿ, ಅವನು ಹೇಗಿದ್ದನೋ ಹಾಗೆಯೇ, ಕ್ಷಣದಲ್ಲಿ, ಶ್ರೀಶೈಲದಲ್ಲಿ ಪಾತಾಳ ಎನ್ನುವ ಹೆಸರಿನ ನದಿಯ ತಟದಲ್ಲಿ ನಿಲ್ಲಿಸಿ, "ಕಣ್ಣು ಬಿಟ್ಟು ನೋಡು. ಇದೇ ಶ್ರೀಶೈಲ ಕ್ಷೇತ್ರ" ಎಂದರು. ಅವನು ಶ್ರೀಶೈಲವನ್ನು ನೋಡಿ "ನಾನೇನಾದರೂ ಕನಸು ಕಾಣುತ್ತಿದ್ದೇನೆಯೇ?" ಎಂದನು.

ಶ್ರೀಗುರುವು ಆ ಭಕ್ತನಿಗೆ, "ಕ್ಷೌರಾದಿಗಳನ್ನು ಮುಗಿಸಿ, ತಕ್ಷಣವೇ ಮಲ್ಲಿಕಾರ್ಜುನನನ್ನು ದರ್ಶಿಸು" ಎಂದು ಆಜ್ಞಾಪಿಸಿದರು. ತಂತುಕನು ಹಾಗೆ ಮಾಡಲು ಹೊರಟನು. ಅಲ್ಲಿ ತನ್ನ ಊರಿನವರನ್ನು ಕಂಡನು. ಅವರು ತಂತುಕನನ್ನು ನೋಡಿ, "ನೀನೂ ನಮ್ಮ ಹಿಂದೆಯೇ ಬಂದೆಯಾ? ಬಂದೂ ಇನ್ನೂ ದರ್ಶನ ಮಾಡಿಕೊಳ್ಳಲಿಲ್ಲವೇ?" ಎಂದು ಕೇಳಿದರು. ಅವನು, "ನಾನು ಇಲ್ಲಿಗೆ ಬಂದು ಇನ್ನೂ ಒಂದು ಘಳಿಗೆಯಾಗಿಲ್ಲ. ಶ್ರೀಗುರುವಿನ ಜೊತೆಯಲ್ಲಿ ಬಂದೆ" ಎಂದು ಹೇಳಿದನು. ಅವರಲ್ಲಿ ಕೆಲವರು ಅದು ಸುಳ್ಳು ಎಂದರು. ಕೆಲವರು, "ಇವನು ನಮ್ಮ ಹಿಂದೆಯೇ ಮರೆಯಾಗಿದ್ದುಕೊಂಡು ನಮ್ಮನ್ನನುಸರಿಸಿ ಬಂದಿದ್ದಾನೆ. ಇವನು ಅಸತ್ಯವನ್ನಾಡುತ್ತಿದ್ದಾನೆ" ಎಂದರು. ತಂತುಕನು ಶಿವಲಿಂಗ ಪೂಜೆಗೆಂದು ಹೋದನು. ದೇವಾಲಯದಲ್ಲಿ ಶ್ರೀಗುರುವನ್ನು ಬಿಟ್ಟು ಬೇರೆ ಯಾವ ದೇವರನ್ನೂ ಅವನು ಕಾಣಲಿಲ್ಲ. ಸದ್ಗುರುವೇ ಅವರ ಪೂಜೆಗಳನ್ನು ಸ್ವೀಕರಿಸುತ್ತಿದ್ದುದನ್ನು ನೋಡಿ, ಅವನು ಮನಸಾರ ಶ್ರೀಗುರುವನ್ನೇ ಶಂಕರನೆಂದು ತಿಳಿದು, ಶ್ರೀಗುರುವನ್ನು ಅರ್ಚಿಸಿ, ಪ್ರಸಾದವನ್ನು ಸ್ವೀಕರಿಸಿ, ಶ್ರೀಗುರುವಿನ ಸನ್ನಿಧಿಯನ್ನು ಸೇರಿಕೊಂಡನು. ಶ್ರೀಗುರುವು, "ನನ್ನೊಡನೆ ಬರುತ್ತೀಯೋ ಇಲ್ಲ ಇನ್ನೂ ಇಲ್ಲೇ ಇರುತ್ತೀಯೋ?" ಎಂದು ಕೇಳಲು, ತಂತುಕನು, "ಸ್ವಾಮಿ, ದೇವಾಲಯದಲ್ಲಿ ಶಿವಲಿಂಗವು ನನಗೆ ಕಾಣಲಿಲ್ಲ. ನಿಮ್ಮನ್ನೇ ಪೂಜಿಸುತ್ತಿರುವುದು ನನಗೆ ಕಂಡು ಬಂತು. ಹತ್ತಿರವೇ ಇರುವ ನಿಮ್ಮನ್ನು ಬಿಟ್ಟು ಕಷ್ಟಪಟ್ಟು ಇಷ್ಟು ದೂರ ಬರುವುದೇತಕ್ಕೆ? ಜನರು ಮೂಢರಾಗಿ ನಿಮ್ಮ ಮಾಹಾತ್ಮ್ಯೆಯನ್ನು ತಿಳಿದುಕೊಳ್ಳಲಾರದವರಾಗಿದ್ದಾರೆ. ನಿಮ್ಮನ್ನು ಬಿಟ್ಟು ಬೆಟ್ಟಕ್ಕೆ ಹೋಗುವುದೇಕೆ? ಇದಕ್ಕೆ ಕಾರಣವನ್ನು ತಿಳಿಸಬೇಕೆಂದು ಕೋರುತ್ತೇನೆ" ಎಂದು ಪ್ರಾರ್ಥಿಸಿದನು. ಅದಕ್ಕೆ ಶ್ರೀಗುರುವು ಹೀಗೆ ಹೇಳಿದರು.

"ಭಕ್ತ, ಈಶ್ವರನು ಒಬ್ಬನೇ. ಸ್ಥಾನ ಮಾಹಾತ್ಮ್ಯೆಯು ಭೂಮಿಯ ಮೇಲೆ ಕಾಣಬರುವುದು. ತಂತುಕ, ನಿನಗೆ ಶ್ರೀಶೈಲ ಮಾಹಾತ್ಮ್ಯೆಯನ್ನು ವಿಸ್ತರಿಸಿ ಹೇಳುತ್ತೇನೆ. ಕೇಳು. ಮಾಘ ಬಹುಳ ಚತುರ್ದಶಿಯ ದಿನ ಶ್ರೀಶೈಲದಲ್ಲಿ ಮಹೋತ್ಸವ ನಡೆಯುತ್ತದೆ. ಅದರ ಮಾಹಾತ್ಮ್ಯೆಯು ಅಪಾರವು. ಹಿಂದೆ ಕಿರಾತ ದೇಶವನ್ನು ವಿಮರ್ಷಣನೆಂಬ ರಾಜನು ಪರಿಪಾಲಿಸುತ್ತಿದ್ದನು. ಅವನು ಬುದ್ಧಿವಂತನು. ಆದರೆ ಪರಸ್ತ್ರೀಯನ್ನು ಕಂಡರೆ ಅವನ ಮನಸ್ಸು ಚಂಚಲವಾಗುತ್ತಿತ್ತು. ಇದು ತಿನ್ನಬಹುದು, ಇದು ತಿನ್ನಬಾರದು ಎನ್ನುವ ವಿವೇಕವು ಇರಲಿಲ್ಲ. ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಿದ್ದನು. ನಿತ್ಯವೂ ಶಿವನನ್ನು ಅರ್ಚಿಸುತ್ತಿದ್ದನು. ಶಿವರಾತ್ರಿಯಂದು ವಿಶೇಷವಾದ ಪೂಜೆ ಮಾಡುತ್ತಿದ್ದನು. ಅವನು ಹೊರಗೆ ದುರಾಚಾರಿಯಾಗಿ ಕಂಡರೂ ಒಳಗೆ ಬಹಳ ಭಕ್ತಿಯಿದ್ದವನು. ಶಿವಭಕ್ತನು. ಅವನ ಪಟ್ಟಮಹಿಷಿ ಸೌಭಾಗ್ಯವತಿ. ಸಾಧ್ವಿ. ಕುಮುದ್ವತಿ ಎಂದು ಹೆಸರು. ಅವಳು ‘ನನ್ನ ಪ್ರಾಣನಾಥನು ಪರಭಾರ್ಯೆಯರಲ್ಲಿ ಆಸಕ್ತನಾದರೂ ಶಿವಭಕ್ತನು ಹೇಗಾದನು?’ ಎಂದು ಯೋಚಿಸುತ್ತಾ, "ನಿನಗೆ ಶಿವನಲ್ಲಿ ಸದ್ಭಕ್ತಿಯಿದೆ. ಅದು ಹೇಗೆ ಲಭಿಸಿತು? ಹೇ ಪ್ರಾಣೇಶ್ವರ ಕೋಪ ಮಾಡಿಕೊಳ್ಳದೆ, ಸಂಶಯಪಡದೆ ಹೇಳು" ಎಂದು ಅವನನ್ನು ಪ್ರಾರ್ಥಿಸಿದಳು. ಅದಕ್ಕೆ ಅವನು, "ಹೇ ಪುಣ್ಯವತಿ, ನನ್ನ ಪೂರ್ವಜನ್ಮ ವೃತ್ತಾಂತವನ್ನು ಕೇಳು. ಹಿಂದೆ ನಾನು ಒಬ್ಬ ಗೊಲ್ಲರವನ ಮನೆಯಲ್ಲಿ ಕರ್ಮಯೋಗದಿಂದ ನಾಯಿಯಾಗಿದ್ದೆ. ಶಿವರಾತ್ರಿ ಬಂತು. ಜನರು ಶಿವಾಲಯಕ್ಕೆ ಶಿವಾರ್ಚನೆಗೆಂದು ಬಂದರು. ನಾನು ಹಸಿವಿನಿಂದ ಅಲ್ಲಿಗೆ ಹೋದೆ. ಅವರೆಲ್ಲರೂ ಕೈಯಲ್ಲಿ ಆರತಿ ಹಿಡಿದು ಭಕ್ತಿಯಿಂದ ಪ್ರದಕ್ಷಿಣೆ ಮಾಡುತ್ತಿದ್ದರು. ನಾನು ನೋಡಬೇಕೆಂದು ಬಾಗಿಲ ಬಳಿಗೆ ಹೋದೆ. "ನಾಯಿ! ನಾಯಿ! ಹೊಡೆದಟ್ಟು" ಎಂದು ಎಲ್ಲರೂ ಕಿರಿಚಿದರು. ಅದು ಕೇಳಿ ಹೊಡೆತಗಳಿಗೆ ಹೆದರಿ ನಾನು ಓಡಿದೆ. ಜನರು ಬಾಗಿಲನ್ನು ಆವರಿಸಿದರು. ಹೊರಗೆ ಹೋಗುವ ಮಾರ್ಗ ಇಲ್ಲವಾಯಿತು. ದೇವಾಲಯದ ಒಳಗೇ ಓಡುತ್ತಿದ್ದೆ. ಹೊರಕ್ಕೆ ಹೋಗುವ ದಾರಿಯೇ ಕಾಣಲಿಲ್ಲ. ಪ್ರದಕ್ಷಿಣೆಯಾಗಿ ಓಡಿ ಮತ್ತೆ ಬಾಗಿಲ ಬಳಿಗೆ ಬಂದೆ. ಮುಚ್ಚಿಟ್ಟು ಕೊಳ್ಳಲೂ ನನಗೆ ಎಲ್ಲಿಯೂ ಜಾಗ ಸಿಗಲಿಲ್ಲ. ನನ್ನ ಹಿಂದೆಯೇ ಜನರೆಲ್ಲರೂ ಅರಚುತ್ತಾ ಓಡಿ ಬರುತ್ತಿದ್ದರು. ದೇವರ ಮುಂದೆ ಎಂಜಲು ತಿನ್ನಬೇಕೆಂದು ಬಂದ ನಾನು ಪ್ರಾಣಗಳನ್ನು ರಕ್ಷಿಸು ಶಿವನೇ ಎನ್ನುತ್ತಾ ಎಲ್ಲ ಕಡೆಯೂ ನೋಡುತ್ತಾ ಮೂರುಸಲ ಪ್ರದಕ್ಷಿಣೆ ಹಾಕಿದೆ. ಹೇ ಭಾಮ, ನಾನು ಭಯಪಟ್ಟು ಗರ್ಭಗುಡಿಯೊಳಕ್ಕೆ ಹೋಗಿ ಅಲ್ಲಿ ನಡೆಯುತ್ತಿದ್ದ ಶಿವಾರ್ಚನೆಯನ್ನು ನೋಡಿ ಸಂತೋಷಪಟ್ಟೆ. ಜನರು ನನ್ನನ್ನು ಹೊಡೆಯುತ್ತ ಈಚೆಗೆ ತಂದು ಹೊರಗೆ ಹಾಕಿದರು. ಪ್ರದಕ್ಷಿಣೆಯಿಂದ ಪುಣ್ಯವು ಲಭಿಸಿತು. ನಾನು ಶಿವಪೂಜೆಯನ್ನು ನೋಡಿದೆ. ಆ ಪುಣ್ಯದಿಂದ, ಹೇ ಪ್ರಿಯೆ, ಹೀಗೆ ರಾಜನಾಗಿ ಹುಟ್ಟಿದೆ. ಆಗ ನನಗೆ ತಿನ್ನಲು ಉಚ್ಛಿಷ್ಟವಾದರೂ ಲಭಿಸಲಿಲ್ಲ. ಅದರಿಂದಲೇ ನಾಯಿಯ ಜನ್ಮದಲ್ಲಿ ನನಗೆ ಪೂರ್ವ ಜನ್ಮ ಪುಣ್ಯ ಲಭಿಸಿದೆ. ಇನ್ನೊಂದು ಪುಣ್ಯವೂ ಕೂಡಾ ಲಭಿಸಿತು. ಉಜ್ವಲವಾದ ದೀಪಮಾಲಿಕೆಯನ್ನು ನೋಡಿದ ನಂತರ ಶಿವಾಲಯ ದ್ವಾರದಲ್ಲಿ ನನ್ನ ಪ್ರಾಣಹೋಯಿತಲ್ಲವೆ? ಶಿವರಾತ್ರಿ ಮಹಿಮೆಯಿಂದಲೂ, ದೀಪಮಾಲೆ ನೋಡಿದುದರಿಂದಲೂ ಬಂದ ಪುಣ್ಯದಿಂದ ನಾನು ರಾಜನಾದೆ. ನಾಯಿಗೆ ಸಹಜವಾಗಿ ಭಕ್ಶ್ಯಾಭಕ್ಷ್ಯ ವಿವೇಚನೆ ಇರುವುದಿಲ್ಲ. ಅ ಪೂರ್ವ ಜನ್ಮ ಸ್ವಭಾವದಿಂದಲೇ ನನಗೆ ಸ್ತ್ರೀಲಂಪಟತ್ವವೂ ಬಂದಿದೆ" ಎಂದು ಹೇಳಿದ. ತನ್ನ ಗಂಡನ ಮಾತನ್ನು ಕೇಳಿ ಆ ರಾಣಿ, "ಪ್ರಾಣೇಶ್ವರ, ನನ್ನ ಪೂರ್ವಜನ್ಮವನ್ನು ತಿಳಿಸು" ಎಂದು ಅವನನ್ನು ಪ್ರಾರ್ಥಿಸಿದಳು. ರಾಜ, "ಹೇ ದಯಿತೆ, ಕೇಳು. ಹಿಂದೆ ನೀನೊಂದು ಹೆಣ್ಣು ಪಾರಿವಾಳವಾಗಿದ್ದೆ. ಒಂದು ದಿನ ಹೊಟ್ಟೆ ತುಂಬಿಕೊಳ್ಳುವುದಕ್ಕೆ ಕಾಡಿನಲ್ಲಿ ಸಿಕ್ಕಿದ ಮಾಂಸದ ತುಂಡೊಂದನ್ನು ಕೊಕ್ಕಿನಲ್ಲಿ ಹಿಡಿದು ಆಕಾಶ ಮಾರ್ಗದಲ್ಲಿ ಹೋಗುತ್ತಿರಲು ಡೇಗೆಯೊಂದು ನಿನ್ನನ್ನು ಕೊಲ್ಲಲು ನಿನ್ನ ಹಿಂದೆ ಬಿತ್ತು. ಪ್ರಾಣ ರಕ್ಷಣೆಯ ಆತುರದಲ್ಲಿ ನೀನು ವೇಗವಾಗಿ ಅರಣ್ಯವೊಂದನ್ನು ಪ್ರವೇಶಿಸಿದೆ. ಡೇಗೆ ನಿನ್ನನ್ನು ಹಿಂಬಾಲಿಸುತ್ತಿದೆ ಎಂಬ ಭಯದಿಂದ ನೀನು ಶ್ರೀಶೈಲ ಶಿಖರಕ್ಕೆ ಬಂದಿದ್ದೆ. ಅ ಶಿಖರವು ರಮ್ಯವಾದದ್ದು. ಅಲ್ಲಿಯೇ ಮಲ್ಲಿಕಾರ್ಜುನಸ್ವಾಮಿ ಇದ್ದಾನೆ. ನಿನ್ನ ಹಿಂದೆಯೇ ಡೇಗೆಯೂ ಬಂತು. ನೀನು ಭಯದಿಂದ ಪ್ರದಕ್ಷಿಣೆಯಾಗಿ ತಿರುಗುತ್ತಾ ಬಳಲಿ ಹೋದೆ. ಬಳಲಿದ ನಿನ್ನನ್ನು ಡೇಗೆ ಸಾಯಿಸಿತು. ಪ್ರದಕ್ಷಿಣೆ ಮಾಡಿದ ಪುಣ್ಯದಿಂದ ನೀನು ರಾಜವನಿತೆಯಾದೆ" ಎಂದು ಹೇಳಲು, ರಾಣಿ ಮತ್ತೆ, "ನೀನು ಶೈವನಾದೆ. ನಿನ್ನ ಆಜ್ಞೆಯಿಂದ ಶಿವಾರ್ಚನೆ ಮಾಡುತ್ತೇನೆ. ಇನು ಮುಂದೆ ನಮ್ಮ ಗತಿ ಹೇಗಿದೆ ಎಂಬುದನ್ನು ಹೇಳು" ಎಂದಳು. ಅದಕ್ಕೆ ರಾಜ, "ಪ್ರಿಯೆ, ಕೇಳು. ಇನ್ನು ಮುಂದಿನ ಏಳು ಜನ್ಮಗಳಲ್ಲಿ ನಾವು ರಾಜವಂಶದಲ್ಲಿ ಹುಟ್ಟುತ್ತೇವೆ. ಹೇ ಪ್ರಾಣಪ್ರಿಯೆ, ಏಳನೆಯ ಜನ್ಮದಲ್ಲಿ ನಾನು ಪಾಂಡ್ಯ ದೇಶದ ರಾಜನಾಗುತ್ತೇನೆ. ಮನ್ಮಥನಂತೆ ಸುಂದರನಾಗಿ, ಪ್ರಕಾಶದಲ್ಲಿ ಸೂರ್ಯ ಸಮಾನನಾಗಿ ಪದ್ಮವರ್ಣನೆಂಬ ಹೆಸರಿನಿಂದ ಪ್ರಸಿದ್ಧಿ ಹೊಂದುತ್ತೇನೆ. ನೀನು ಸುಮತಿ ಎನ್ನುವ ಹೆಸರಿನಿಂದ ವೈದರ್ಭ ವಂಶದಲ್ಲಿ ಹುಟ್ಟಿ ವಿಖ್ಯಾತಳಾಗಿರುತ್ತೀಯೆ. ನಾನು ಸ್ವಯಂವರದಲ್ಲಿ, ಸ್ವಧರ್ಮವನ್ನನುಸರಿಸಿ, ದಮಯಂತಿ ನಳನನ್ನು ವರಿಸಿದಂತೆ ನಿನ್ನಿಂದ ವರಿಸಲ್ಪಡುತ್ತೇನೆ. ದಾನ ಧರ್ಮ ಪರಾಯಣನಾಗಿ ವೃದ್ಧಾಪ್ಯದವರೆಗೂ ರಾಜ್ಯವಾಳಿ ಪುತ್ರನಿಗೆ ರಾಜ್ಯವನ್ನು ಕೊಟ್ಟು, ನಾಲ್ಕನೆಯ ಆಶ್ರಮವಾದ ಸನ್ಯಾಸಾಶ್ರಮವನ್ನು ಆಶ್ರಯಿಸಿ ಅಗಸ್ತ್ಯನೆಂಬ ಸದ್ಗುರುವನ್ನು ಸೇರಿ ಬ್ರಹ್ಮಜ್ಞಾನವನ್ನು ಪಡೆದು ನಿನ್ನೊಡನೆ ಕೂಡಿ ಮುಕ್ತಿ ಹೊಂದಿ ಸ್ವಯಂಪ್ರಕಾಶನಾಗಿರುತ್ತೇನೆ. ಇದು ಈಶ್ವರನ ಅರ್ಚನೆ ತೋರಿಸಿದ ಪುಣ್ಯವು" ಎಂದು ರಾಣಿಗೆ ಹೇಳಿ ಶ್ರೀಶೈಲ ಯಾತ್ರೆಗೆ ಹೊರಟನು. ಈ ವೃತ್ತಾಂತವನ್ನು ಹೇಳಿ ಶ್ರೀಗುರುವು ತಂತುಕನಿಗೆ, "ಇದು ಕ್ಷೇತ್ರ ಮಾಹಾತ್ಮ್ಯೆ. ಇದರ ಪ್ರಭಾವದಿಂದ ಅವನು ಏಳು ಜನ್ಮಗಳಲ್ಲಿ ತನ್ನ ಹೆಂಡತಿಯೊಡನೆ ರಾಜನಾದನು. ಇಬ್ಬರೂ ಆಮೇಲೆ ಮೋಕ್ಷ ಪಡೆದರು. ಶ್ರೀಶೈಲ ಮಾಹಾತ್ಮ್ಯೆ ಇಂತಹುದು. ನಿನಗೆ ಗುರೂಪದೇಶವಾಯಿತು. ಈಶ್ವರನನ್ನು ಆದರದಿಂದ ಪೂಜೆ ಮಾಡು. ಗಂಧರ್ವಪುರದಲ್ಲಿ ಕಲ್ಲೇಶ್ವರನೆಂಬ ಹೆಸರಿನಲ್ಲಿ ಈಶ್ವರನು ಇದ್ದಾನೆ. ಮಲ್ಲಿಕಾರ್ಜುನನಿಗೆ ಸಮಾನನು. ಸಂಗಮದಲ್ಲಿ ಸಂಗಮೇಶ್ವರನನ್ನು ಕೂಡಾ ನೀನು ಪೂಜಿಸು. ಆ ದೇವನೂ ಮಲ್ಲಿಕಾರ್ಜುನನೇ ಅಲ್ಲವೇ!". ಶ್ರೀಗುರುವಿನ ಆ ಮಾತುಗಳನ್ನು ಕೇಳಿದ ತಂತುಕನು, "ಸ್ವಾಮಿ ಹೇಳುತ್ತಿರುವುದೇನು? ಮಲ್ಲಿಕಾರ್ಜುನನ್ನು ಪೂಜಿಸಲು ಹೋದಾಗ ತಮ್ಮನ್ನೇ ಅಲ್ಲಿ ತೋರಿಸಿ ಕೊಂಡಿರಿ. ಕಲ್ಲೇಶ ಸಂಗಮೇಶರನ್ನು ಪೂಜಿಸಿಕೊಳ್ಳಲು ನನಗೇಕೆ ಹೇಳುತ್ತಿದ್ದೀರಿ? ಎಲ್ಲೆಲ್ಲೂ ವ್ಯಾಪಿಸಿರುವ ಒಬ್ಬನೇ ಆದರೂ ಅನೇಕ ಸೂತ್ರಗಳನ್ನು ಆಡಿಸುವ ನೀವು ಇತರರನ್ನು ಪೂಜಿಸಲು ಹೇಳುವುದೇತಕ್ಕೆ?" ಎಂದು ಕೇಳಿದ. ತಂತುಕನಿಗೆ ಶ್ರೀಗುರುವು ನಗುತ್ತಾ, ತನ್ನ ಪಾದುಕೆಗಳನ್ನು ಧರಿಸಿ, ಕಣ್ಣು ಮುಚ್ಚಿ ಕೂತಿದ್ದ ಅವನನ್ನು ಕ್ಷಣದಲ್ಲಿ ಸಂಗಮಕ್ಕೆ ಸೇರಿಸಿದರು. ಅಲ್ಲಿ ಗ್ರಾಮಸ್ಥರು ಶ್ರೀಗುರುವು ನಮ್ಮನ್ನು ಬಿಟ್ಟು ಎಲ್ಲಿಗೆ ಹೋರಟು ಹೋದರು ಎಂದು ಮಾತನಾಡಿಕೊಳ್ಳುತ್ತಿದ್ದರು. ಸಂಗಮಕ್ಕೆ ಸೇರಿದ ಶ್ರೀಗುರುವು ತಂತುಕನಿಗೆ ಊರೊಳಕ್ಕೆ ಹೋಗಿ ಗ್ರಾಮಸ್ಥರನ್ನು ಕರೆದುಕೊಂಡು ಬರಲು ಹೇಳಿದರು. ಅವನು ಹೋಗಿ ಶ್ರೀಗುರುವಿನ ಮಾತುಗಳನ್ನು ಹೇಳಿ, ಪ್ರಸಾದವಾಗಿ ತಂದಿದ್ದ ಪತ್ರ ಪುಷ್ಪ ವಿಭೂತಿಗಳನ್ನು ತೋರಿಸಿದನು. ಅವರು, "ಅಯ್ಯಾ ನಿಜವನ್ನು ಹೇಳು" ಎನ್ನಲು, ಅವನು "ಸ್ವಾಮಿ, ಶ್ರೀಗುರುವಿನೊಡನೆ ಶ್ರೀಶೈಲಪರ್ವತಕ್ಕೆ ಹೋಗಿ ಬಂದೆ. ಶ್ರೀಗುರುವು ಒಂದು ಕ್ಷಣದ ಮುಂಚೆ ನನ್ನೊಡನೆ ಸಂಗಮಕ್ಕೆ ಬಂದು,ನಿಮ್ಮನ್ನು ಕರೆದುಕೊಂಡು ಬರಲು ಹೇಳಿದರು. ಈಗ ಶ್ರೀಗುರುವು ಅಲ್ಲೇ ಇದ್ದಾರೆ" ಎಂದನು. ಕೆಲವರು ಅದು ನಿಜವೆಂದರು. ಇನ್ನು ಕೆಲವರು ಮೂಢರು ಸುಳ್ಳು ಎಂದರು. ಅವರೆಲ್ಲರೂ ಶ್ರೀಗುರುವಿನ ಸನ್ನಿಧಾನವನ್ನು ಸೇರಿ, ಅಲ್ಲಿ ಶ್ರೀಗುರುವನ್ನು ಪೂಜಿಸಿ ಶಿವರಾತ್ರಿ ಆಚರಿಸಿದರು. ನಾಮಧಾರಕ, ಸುಳ್ಳು ಎಂದವರಿಗೆ ಕುಂಭೀಪಾಕ ನರಕವೇ! ಶ್ರೀಶೈಲಕ್ಕೆ ಹೋಗಿದ್ದ ಯಾತ್ರಿಕರು ಹದಿನೈದು ದಿನಗಳಾದ ಮೇಲೆ ಹಿಂತಿರುಗಿದರು. ಅವರು ಹೇಳಿದ ಮಾತುಗಳನ್ನು ಕೇಳಿ ಊರಿನವರೆಲ್ಲರೂ ಆಶ್ಚರ್ಯಪಟ್ಟರು. 

ಹೀಗೆ ಸಿದ್ಧಮುನಿ ಭ್ರಮನಾಶಕವಾದ ಈ ವೃತ್ತಾಂತವನ್ನು ನಾಮಧಾರಕನಿಗೆ ಹೇಳಿದರು. ಶ್ರೀಗುರು ಮಹಿಮೆಯೆನ್ನುವ ಈ ಅಮೃತವು ಭಕ್ತರಿಗೆ ಮುದ ನೀಡುವಂತಹುದು. ಶ್ರೋತೃಗಳಿಗೆ ಜ್ಞಾನವನ್ನು ಕೊಟ್ಟು ಶ್ರೀಗುರುವಿನಲ್ಲಿ ಪ್ರೀತಿಯುಂಟುಮಾಡುವುದು. 

ಇಲ್ಲಿಗೆ ನಲವತ್ತನಾಲ್ಕನೆಯ ಅಧ್ಯಾಯ ಮುಗಿಯಿತು.

No comments:

Post a Comment