||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ||
||ಶ್ರೀಗುರುಭ್ಯೋನಮಃ||
"ನಂತರ ನಡೆದ ಗುರು ಕಥೆಯನ್ನು ಹೇಳಿ. ಗುರು ಚರಿತ್ರೆಯನ್ನು ಕೇಳಿದಷ್ಟೂ ನನ್ನಲ್ಲಿ ಇನ್ನಷ್ಟು, ಮತ್ತಷ್ಟು ಕೇಳಬೇಕೆಂಬ ಉತ್ಸಾಹ ಹೆಚ್ಚಾಗುತ್ತಿದೆ" ಎಂದು ಪ್ರಾರ್ಥಿಸಿದ ನಾಮಧಾರಕನಿಗೆ ಸಿದ್ಧಮುನಿ, "ಶಿಷ್ಯ, ಕೇಳು. ಗುರು ಚರಿತ್ರೆ ಎಂಬ ಸತ್ಕಥೆಗಳನ್ನು ಕೇಳುವುದರಿಂದ ಪಾಪ ಕ್ಷಾಳನವಾಗುತ್ತದೆ. ಜ್ಞಾನ ಉದ್ದೀಪನವಾಗುತ್ತದೆ. ಶ್ರೀಗುರುವು ಬ್ರಾಹ್ಮಣನಾದ ಆ ಅಂತ್ಯಜನಿಗೆ ‘ನಿನ್ನ ಪೂರ್ವಜನ್ಮದ ವಿಷಯವಾಗಿ ಕೇಳುತ್ತಿದ್ದೀಯೆ. ನಿನಗೇಕೆ ಚಂಡಾಲತ್ವವು ಬಂತು ಎಂಬುದನ್ನು ಹೇಳುತ್ತೇನೆ, ಕೇಳು. ತಾನು ಮಾಡಿದ ಪುಣ್ಯ ಪಾಪಗಳಿಂದಲೇ ಮನುಷ್ಯನಿಗೆ ಇಹ ಪರಗಳ ಗತಿಯುಂಟಾಗುತ್ತದೆ. ನೀಚ ಜನ್ಮ ಏಕಾಗುತ್ತದೆ ಎಂಬುದನ್ನು ಕೇಳು. ಯಾವುದೇ ವರ್ಣಕ್ಕೆ ಸೇರಿದವರಾದರೂ, ದುರಾಚಾರಿ, ಅನಾಚಾರಿಗಳಾದರೆ ಅಂತಹವರಿಗೆ ನೀಚ ಜನ್ಮ ಬರುತ್ತದೆ. ಬ್ರಾಹ್ಮಣ ಸ್ತ್ರೀ ಶೂದ್ರ ಜಾತಿಯವನೊಡನೆ ಸಂಗ ಮಾಡಿದಾಗ ಹುಟ್ಟುವ ಸಂತತಿ ಚಂಡಾಲವಾಗಿರುತ್ತದೆ. ತಂದೆ ತಾಯಿಯರನ್ನು ದೂರ ಮಾಡಿ ಬೇರೆಯಾಗಿ ಜೀವಿಸುವವನು, ಕುಲಸ್ತ್ರೀಯನ್ನು ಬಿಟ್ಟ ಬ್ರಾಹ್ಮಣ, ಅಸತ್ಯವಾದಿ ಬ್ರಾಹ್ಮಣ, ಕುಲದೈವವನ್ನು ಬಿಟ್ಟು ಅನ್ಯ ದೇವತೆಗಳನ್ನು ಪೂಜಿಸುವವನು, ಜೀವಹಿಂಸೆ ಮಾಡುವವನು, ಕನ್ಯಾ ವಿಕ್ರಯ ಮಾಡುವವನು, ಸುಳ್ಳು ಸಾಕ್ಷಿ ನುಡಿಯುವವನು, ಶೂದ್ರನ ಮನೆಯಲ್ಲಿ ಊಟ ಮಾಡುವವನು, ಕುದುರೆಗಳ ಕ್ರಯ ಮಾಡುವವನು, ಸದಾ ಶೂದ್ರ ಸಂಗದಲ್ಲೇ ಕಾಲ ಕಳೆಯುವವನು ಚಂಡಾಲರಾಗಿ ಜನ್ಮಿಸುತ್ತಾರೆ. ಶೂದ್ರ ಸ್ತ್ರೀ, ದಾಸಿ ಸಂಗ ಮಾಡುವವನು, ಕೋಪದಿಂದ ದೇವ ಪಿತೃ ಕಾರ್ಯಗಳಲ್ಲಿ ಕಾರ್ಯೋಪಕರಣಗಳನ್ನು ಧ್ವಂಸ ಮಾಡುವವನು, ಅರಣ್ಯಕ್ಕೆ ಬೆಂಕಿ ಹಚ್ಚುವವನು, ಹಸು ಕರುಗಳನ್ನು ಬಲಾತ್ಕಾರವಾಗಿ ದೂರ ಮಾಡುವವನು, ಆಸ್ತಿ ವಿಭಾಗ ಮಾಡಿಕೊಂಡು ತನ್ನವರನ್ನು ಬಿಟ್ಟು ದೂರ ಹೋಗುವವನು, ಇವರೆಲ್ಲರೂ ಚಂಡಾಲರಾಗಿ ಜನ್ಮಿಸುತ್ತಾರೆ. ತೀರ್ಥ ಯಾತ್ರೆಗಳನ್ನು ಮಾಡಿ ಶ್ರಾದ್ಧಾದಿಗಳನ್ನು ಮಾಡದವನು, ತೀರ್ಥ ಕ್ಷೇತ್ರಗಳಲ್ಲಿ ದಾನ ಗ್ರಹಣ ಮಾಡುವವನು, ಸ್ವಧರ್ಮವನ್ನು ಬಿಟ್ಟವನು, ಈಶ್ವರ ಸಮರ್ಪಣೆ ಮಾಡದೆ ಗೋಕ್ಷೀರವನ್ನು ಕುಡಿಯುವವನು, ದೇವತಾರ್ಚನೆಗಾದರೂ ತುಳಸಿ ದಳವನ್ನು ಉಗುರುಗಳಿಂದ ಜಿಗುಟಿ ಕೀಳುವವನು ಸಹ ಚಂಡಾಲ ಜನ್ಮಿಗಳಾಗುತ್ತಾರೆ. ಸಾಲಗ್ರಾಮವನ್ನು ಅರ್ಚಿಸುವ ಶೂದ್ರ, ಮಾತಾಪಿತರ ಸೇವೆ, ರಕ್ಷಣೆಗಳನ್ನು ಮಾಡದವನು ಚಂಡಾಲನಾಗಿಯೋ, ಇಲ್ಲವೆ ಏಳು ಜನ್ಮಗಳು ಕ್ರಿಮಿಯಾಗಿಯೋ ಹುಟ್ಟುವನು. ವೇದ ಶಾಸ್ತ್ರ ಪಂಡಿತನಾಗಿಯೂ ತನ್ನ ಮೊದಲ ಭಾರ್ಯೆಯನ್ನು ಬಿಟ್ಟು, ಇನ್ನೊಬ್ಬಳನ್ನು ಮದುವೆಯಾಗುವವನು, ಅಲಸಿ ಬಂದ ಅತಿಥಿಯನ್ನು ಅಲಕ್ಷ್ಯ ಮಾಡಿ ತನ್ನ ಪಾಡಿಗೆ ತಾನು ವೇದ ಪಠನೆಯಲ್ಲಿ ನಿರತನಾಗಿರುವವನು, ಯೋಗ್ಯರಾದ ಬ್ರಾಹ್ಮಣರನ್ನು ನಿಂದಿಸುತ್ತಾ ಅಯೋಗ್ಯರನ್ನು ಹೊಗಳುವವನು ವಾಪಿ ಕೂಪ ತಟಾಕಗಳನ್ನು ಧ್ವಂಸ ಮಾಡುವವನು, ಲಿಂಗ ಪೂಜೆಗೆ ಅಡ್ಡ ತರುವವನು, ವಿಪ್ರಗೃಹಗಳನ್ನು ಹಾಳು ಮಾಡುವವನು, ವಿಶ್ವಾಸ ಘಾತುಕ, ಸ್ವಾಮಿದ್ವೇಷಿ, ಗುರುದ್ರೋಹಿ, ವ್ಯಭಿಚಾರಿ, ಮಿತ್ರ ಭಾರ್ಯಾ ಸಂಗ ಮಾಡುವವನು, ಹೆಂಡತಿಯರಲ್ಲಿ ಬೇಧ ಭಾವ ತೋರಿಸುವವನು, ಅಕಾರಣವಾಗಿ ಅತಿಥಿಗಳಿಗೆ ಆತಿಥ್ಯ ನೀಡುವುದರಲ್ಲಿ ಆಲಸ್ಯ ಮಾಡುವವನು, ಸಂಧ್ಯಾ ಸಮಯದಲ್ಲಿ ನಿದ್ರೆ ಮಾಡುವವನು, ಬ್ರಾಹ್ಮಣರಿಗೆ ದಾನ ಕೊಟ್ಟಿದ್ದ ಗೋ ಭೂಮಿಗಳನ್ನು ಅಪಹರಿಸುವ ರಾಜ ಇವರೆಲ್ಲರೂ ಕೂಡಾ ಚಂಡಾಲರಾಗಿ ಹುಟ್ಟುತ್ತಾರೆ.
ಅತಿಥಿಗಳು ಊಟ ಮಾಡುವ ಸಮಯದಲ್ಲಿ ದುರುಕ್ತಿಗಳನ್ನಾಡುತ್ತ ಅವರಿಗೆ ಊಟವಿಡುವವನು, ಕೆಟ್ಟ ಮಾತನಾಡುತ್ತಾ ದಾನ ಮಾಡುವವನು, ಚಂಡಾಲನಾಗುವನು. ಗಂಗಾ ತೀರವನ್ನು ನಿಂದಿಸುವವನು, ಏಕಾದಶಿಯಂದು ಊಟ ಮಾಡುವವನು, ಯುದ್ಧದಲ್ಲಿ ತನ್ನ ಪ್ರಭುವನ್ನು ಬಿಟ್ಟು ಓಡಿ ಹೋಗುವವನು, ಹಗಲು ಹೊತ್ತಿನಲ್ಲಿ ಸ್ತ್ರೀಸಂಗ ಮಾಡುವವನು, ಶೂದ್ರರಿಗೆ ವೇದಾದಿಗಳನ್ನು ಬೋಧಿಸುವವನು ಕೂಡಾ ಚಂಡಾಲರಾಗಿ ಹುಟ್ಟುತ್ತಾರೆ. ಕಾಲ ಮೀರಿ ಶ್ರಾದ್ಧಾದಿಗಳನ್ನು ಮಾಡುವವನು, ತಾನು ಮಾಡಿದ ಪುಣ್ಯ ಕಾರ್ಯಗಳನ್ನು ತಾನೇ ಹೇಳಿಕೊಂಡು ತನ್ನನ್ನು ತಾನೇ ಪ್ರಶಂಸೆ ಮಾಡಿಕೊಳ್ಳುವವನು, ಜೊತೆಗಾರರಲ್ಲಿ ವಿರಸ ಉಂಟು ಮಾಡಿ ಕಲಹ ಹುಟ್ಟು ಹಾಕುವವನು, ಅರವಂಟಿಗೆಗಳನ್ನು ಕಟ್ಟುವವರಿಗೆ ವಿಘ್ನವುಂಟುಮಾಡೂವವನು, ವೈದ್ಯಕೀಯ ಜ್ಞಾನವಿಲ್ಲದೆ ವೈದ್ಯ ಮಾಡುವವನು, ಚಿಕಿತ್ಸಾ ವಿಧಾನವನ್ನು ತಿಳಿಯದೆ ಔಷಧಗಳನ್ನು ಕೊಡುವವನು, ಋಜು ಮಾರ್ಗವನ್ನು ಅನ್ಯ ಮಾರ್ಗವನ್ನು ಹಿಡಿದವನು, ಗುರುವನ್ನು ಮನುಷ್ಯ ಮಾತ್ರನೆಂದು ಹೇಳುವವನು, ಹರಿ ಹರರ ನಿಂದೆ ಮಾಡುವವನು, ದುಷ್ಟ ದೇವತೆಗಳನ್ನು ಅರ್ಚಿಸುವವನು ಕೂಡಾ ಚಂಡಾಲರಾಗಿ ಜನ್ಮಿಸುತ್ತಾರೆ.
ಚತುರ್ವರ್ಣಗಳಲ್ಲಿ ಯಾರಾದರೂ ತಮ್ಮ ನಿಯಮಿತ ಕರ್ತವ್ಯಗಳನ್ನು ಬಿಟ್ಟು ಇತರ ಕರ್ಮಗಳಲ್ಲಿ ನಿರತರಾಗುವವರು ನಿಶ್ಚಯವಾಗಿಯೂ ಚಂಡಾಲರಾಗಿ ಹುಟ್ಟುತ್ತಾರೆ. ಶೂದ್ರನಿಂದ ಮಂತ್ರಗ್ರಹಣ ಮಾಡುವ ಬ್ರಾಹ್ಮಣ ಚಂಡಾಲನಾಗಿ ಹುಟ್ಟುವುದರಲ್ಲಿ ಸಂದೇಹವಿಲ್ಲ. ಶ್ರಾದ್ಧದಲ್ಲಿ ಪಿಂಡ ಪ್ರದಾನ ಮಾಡದವನು, ಜ್ಞಾನ ವಿಹೀನನು, ವಿಧವೆಯರಲ್ಲಿ ಆಸಕ್ತನಾದವನು, ಮಾತಾ ಪಿತೃ ಬ್ರಾಹ್ಮಣ ಗುರು ದ್ವೇಷಿ, ಗುರು ನಿಂದೆಯಲ್ಲಿ ಸಂತಸ ಪಡುವವನು, ಶಾಸ್ತ್ರೋಕ್ತವಾದ ವೇದ ಚರ್ಚೆಗಳಲ್ಲಿ ಭಾಗವಹಿಸದ ಬ್ರಾಹ್ಮಣ ಬ್ರಹ್ಮ ರಾಕ್ಷಸರಾಗುತ್ತಾರೆ. ತಾನು ಪೂಜಿಸದ ಅನ್ಯ ದೇವತೆಗಳನ್ನು ದೂಷಿಸುವವನು ಮೂರ್ಛೆ ರೋಗ ಪೀಡಿತನಾದ ದರಿದ್ರನಾಗಿ ಹುಟ್ಟುತ್ತಾನೆ. ಮಾತಾ ಪಿತೃ ಗುರುಗಳನ್ನು ತ್ಯಜಿಸಿ ಬೇರೆಯಾಗುವವನು ರೋಗಿಷ್ಠನಾದ ಮೇದರವನಾಗಿ ಹುಟ್ಟುತ್ತಾನೆ. ವೇದ ದೂಷಿತನಾಗಿ ಬಾಹ್ಮಣರನ್ನು ಸದಾ ಅವಹೇಳನ ಮಾಡುವವನು ಕರ್ಮ ಭ್ರಷ್ಟನಾಗಿ, ಮೂತ್ರ ಪಿಂಡಗಳ ಭಾದೆಯಿಂದ ಪೀಡಿತನಾಗುತ್ತಾನೆ.
ತನಗೆ ತಿಳಿದ ಇತರರ ರಹಸ್ಯಗಳನ್ನು ಬಯಲು ಮಾಡಿ, ಅವರ ದುಷ್ಕೃತ್ಯಗಳನ್ನು ಇತರರಿಗೆ ಹೇಳಿ ಸಂತೋಷ ಪಡುವವನು ಜನ್ಮಾಂತರದಲ್ಲಿ ಹೃದ್ರೋಗಿಗಳಾಗಿ ಹುಟ್ಟಿ ಅನೇಕವಾದ ಕಷ್ಟಗಳನ್ನು ಅನುಭವಿಸುತ್ತಾನೆ. ಗರ್ಭಪಾತ ಮಾಡಿಸುವ ಸ್ತ್ರೀ ಜನ್ಮಾಂತರದಲ್ಲಿ ಬಂಜೆಯಗಿ ಹುಟ್ಟುತ್ತಾಳೆ ಅಥವ ಅವಳಿಗೆ ಹುಟ್ಟುವ ಮಕ್ಕಳೆಲ್ಲರೂ ಸಾಯುತ್ತಾರೆ. ವೇದ ಶಾಸ್ತ್ರ ಪುರಾಣಾದಿಗಳನ್ನು ದುಷ್ಟ ಬುದ್ಧಿ, ದುಷ್ಟ ದೃಷ್ಟಿಯಿಂದ ಕಾಣುತ್ತಾ ಅವನ್ನು ಕೇಳುವವನು, ಹೊಟ್ಟೆಬಾಕರು ಊಟ ಮಾಡುವುದನ್ನು ನೋಡುವವನು ಕಿವುಡ, ಮೂಕನಾಗಿ ಹುಟ್ಟುತ್ತಾನೆ. ಪತಿತನ ಸ್ನೇಹ ಮಾಡಿದವನು ಕತ್ತೆಯಾಗುತ್ತಾನೆ. ಸುರಾಪಾನಸಕ್ತರು ಕಪ್ಪು ಹಲ್ಲುಳ್ಳವರಾಗಿ ಹುಟ್ಟುತ್ತಾರೆ. ಚಿನ್ನ ಕದ್ದವನು ವಕ್ರ ನಖಗಳುಳ್ಳವನಾಗಿ ಹುಟ್ಟುತ್ತಾನೆ. ಗುರು ಪತ್ನಿ ಸಂಗ ಮಾಡಿದವನು ಕುಷ್ಠು ರೋಗಿಯಾಗುತ್ತಾನೆ. ಕುದುರೆ ಹಸುಗಳನ್ನು ಕೊಂಡವನು ಸಂತಾನ ಹೀನನಾಗಿ ಹುಟ್ಟುತ್ತಾನೆ.
ನಿಜವಾದ ಪಶ್ಚಾತ್ತಾಪದಿಂದ ಸ್ವಲ್ಪಮಟ್ಟಿಗೆ ಪಾಪ ಹೀನನಾಗಬಹುದು. ಮೊದಲು ನರಕ ಯಾತನೆಗಳನ್ನು ಅನುಭವಿಸಿ ನಂತರ ಭೂಮಿಯಲ್ಲಿ ರೋಗ ಗ್ರಸ್ತರಾಗಿಯೋ, ಅಂಗ ವಿಹೀನರಾಗಿಯೋ ತಮ್ಮ ಕರ್ಮ ಫಲದಂತೆ ಹುಟ್ಟುತ್ತಾರೆ. ವಿಶ್ವಾಸ ಘಾತುಕನು ರೋಗಿಯಾಗಿ ಹುಟ್ಟಿ ವಾಂತಿಗಳಿಂದ ಬಾಧಿಸಲ್ಪಡುತ್ತಾನೆ. ಇತರರ ಸೇವಕರನ್ನು ಬಿಡಿಸಿ ತನ್ನ ಸೇವಕರನ್ನಾಗಿ ಮಾಡಿ ಕೊಳ್ಳುವವನು ಕಾರಾಗಾರ ವಾಸವನ್ನನುಭವಿಸುತ್ತಾ ಘೋರವಾದ ಯಾತನೆಗಳಿಗೆ ಗುರಿಯಾಗುತ್ತಾನೆ. ಪರಸ್ತ್ರೀಯರನ್ನು ಅಪಹರಿಸಿದವನು ದಾರುಣವಾದ ನರಕ ಯಾತನೆಗಳನ್ನನುಭವಿಸಿ ಮತಿಹೀನನಾಗಿ ಹುಟ್ಟಿ ಕಷ್ಟ ಭೋಗಿಯಾಗುತ್ತಾನೆ. ಸರ್ಪಗಳನ್ನು ಕೊಂದವನು ಸರ್ಪವಾಗಿ ಹುಟ್ಟುತ್ತಾನೆ.
ಇನ್ನು ಕಳ್ಳತನ ಮಾಡುವುದರಿಂದ ಉಂಟಾಗುವ ಕಷ್ಟಗಳನ್ನು ಕೇಳು. ಚಿನ್ನ ಕದ್ದವನು ಮಧು ಮೇಹಿಯಾಗುತ್ತಾನೆ. ಪುಸ್ತಕಗಳನ್ನು ಕದ್ದವನು ಹುಟ್ಟು ಕುರುಡನಾಗುತ್ತಾನೆ. ವಸ್ತ್ರಾಪಹಾರಿ ಬಿಳಿತೊನ್ನು ರೋಗಿಯಾಗುತ್ತಾನೆ. ಸಂಘದ ಹಣವನ್ನು ಅಪಹರಿಸಿದವನು ಗಂಡ ಮಾಲೆ ರೋಗದಿಂದ ನರಳುತ್ತಾನೆ. ಶ್ವಾಸ ರೋಗದಿಂದ ನರಳುತ್ತಿರುವವನ ಹಣವನ್ನು ಕದ್ದವನು ಸೆರೆಮನೆ ಸೇರುತ್ತಾನೆ. ಅಡವಿಟ್ಟ ಒಡವೆ ಮುಂತಾದವುಗಳನ್ನು ಅಪಹರಿಸಿದವನು, ಪರಧನಾಪಹಾರಿ, ಇತರರನ್ನು ದ್ವೇಷಿಸುವವನು ಜನ್ಮಾಂತರದಲ್ಲಿ ಅಪುತ್ರರಾಗುತ್ತಾರೆ. ಇತರರ ಅನ್ನವನ್ನು ಅಪಹರಿಸುವವನು ಗುಲ್ಮ ರೋಗಿಯಾಗುತ್ತಾನೆ. ಎಣ್ಣೆ ಕದ್ದವನು ದುರ್ಗಂಧ ಶರೀರಿಯಾಗುತ್ತಾನೆ. ಬ್ರಾಹ್ಮಣನ ಧನ, ಪರ ಭಾರ್ಯೆಯನ್ನು ಆಪಹರಿಸುವವನು ಬ್ರಹ್ಮ ರಾಕ್ಷಸನಾಗುತ್ತಾನೆ. ಮುತ್ತು ರತ್ನ ಮುಂತಾದುವನ್ನು ಕದ್ದವನು ಹೀನ ಜಾತಿಯಲ್ಲಿ ಹುಟ್ಟುತ್ತಾನೆ. ಎಲೆ, ಕಾಯಿ, ಹಣ್ಣು ಹೂಗಳನ್ನು ಕದ್ದವನು ಕಜ್ಜಿಯಿಂದ ನರಳುತ್ತಾನೆ. ರಕ್ತಪಾನ ಮಾಡಿದವನು ಉಣ್ಣಿಯಾಗಿ ಹುಟ್ಟುತ್ತಾನೆ. ಕಂಚು ಇತ್ಯಾದಿ ಲೋಹಗಳು, ಹತ್ತಿ, ಮುಂತಾದುವನ್ನು ಕದ್ದವನು ನರಕದಲ್ಲಿ ಬಿದ್ದು ಕಷ್ಟಗಳನ್ನನುಭವಿಸಿ ಮತ್ತೆ ಕುಷ್ಠು ರೋಗಿಯಾಗಿ ಹುಟ್ಟುತ್ತಾನೆ. ದೇವ ದ್ರವ್ಯವನ್ನು ಅಪಹರಿಸಿದವನು, ದೇವ ಕಾರ್ಯಗಳಿಗೆ ಅಡ್ಡ ತರುವವನು, ನಿಷಿದ್ಧ ಪದಾರ್ಥಗಳನ್ನು ತಿನ್ನುವವನು ಪಾಂಡು ರೋಗಿಯಾಗುತ್ತಾನೆ. ಪರಧನವನ್ನು ಕದ್ದವನು ‘ಉಷ್ಟ್ರ’ವಾಗಿ ಹುಟ್ಟುತ್ತಾನೆ. ಹಣ್ಣು ಕದ್ದವನು ಗೊತ್ತು ಗುರಿಯಿಲ್ಲದೆ ಕಾಡಿನಲ್ಲಿ ಅಲೆಯುವವನಾಗಿ ಹುಟ್ಟುತ್ತಾನೆ. ನೀರನ್ನು ಕದ್ದವನು ಚಾತ ಪಕ್ಷಿಯಾಗಿ ಹುಟ್ಟುತ್ತಾನೆ. ಗೃಹೋಪಯೋಗಿ ವಸ್ತುಗಳನ್ನು ಅಪಹರಿಸಿದವನು ಕಾಗೆಯಾಗಿ ಹುಟ್ಟುತ್ತಾನೆ. ಜೇನು ತುಪ್ಪ ಕದ್ದವನು ಜೇನ್ನೊಣವಾಗಿ ಹುಟ್ಟುತ್ತಾನೆ. ಹಾಲು, ತುಪ್ಪ, ಮೊಸರು, ಬೆಣ್ಣೆ ಮುಂತಾದುವನ್ನು ಕದ್ದವನು ಕುಷ್ಟು ರೋಗಿಯಾಗುತ್ತಾನೆ. ಮೇಲೆ ಹೇಳಿದವೆಲ್ಲವೂ ಜನ್ಮಾಂತರದಲ್ಲಿ ಉಂಟಾಗುವಂತಹವು.
ಶಾಂತಿಪರ್ವದಲ್ಲಿ ವ್ಯಭಿಚಾರದ ಬಗ್ಗೆ ಹೇಳಲ್ಪಟ್ಟಿದೆ. ಪರಸ್ತ್ರೀಯನ್ನು ತಬ್ಬಿ ಕೊಂಡವನು ನೂರು ಜನ್ಮಗಳು ನಾಯಿಯಾಗಿ, ನಂತರ ಹಾವಾಗಿ ಹುಟ್ಟಿ ಅನೇಕ ರೀತಿಯ ದುಃಖಗಳಿಗೆ ಈಡಾಗುತ್ತಾನೆ. ಪರಸ್ತ್ರೀಯನ್ನು ನಗ್ನಳಾಗಿ ನೋಡಿದವನು ಹುಟ್ಟು ಕುರುಡನಾಗುತ್ತಾನೆ. ಬಂಧು ಭಾರ್ಯಾ ಸಂಗ ಮಾಡಿದವನು ಕತ್ತೆಯಾಗಿ, ನಂತರ ಹಾವಾಗಿ ಹುಟ್ಟುತ್ತಾನೆ. ಜಾರನಾದವನು ನಿತ್ಯ ನರಕ ವಾಸಿಯಾಗುತ್ತಾನೆ. ಮಿತ್ರ ಭಾರ್ಯಾ ಸಂಗ ಮಾಡಿದವನು, ಸೋದರ ಮಾವನ ಹೆಂಡತಿಯ ಸಂಗ ಮಾಡಿದವನು, ನಾಯಿಯಾಗುತ್ತಾನೆ. ಇತರರ ಹೆಂಡಂದಿರನ್ನು ದುಷ್ಟ ಬುದ್ಧಿಯಿಂದ ನೋಡಿದವನು ಕಣ್ಣು ರೋಗದಿಂದ ನರಳುತ್ತಾನೆ. ಶೂದ್ರನಾಗಿ ಬ್ರಾಹ್ಮಣ ಸ್ತ್ರೀಯನ್ನು ಕೂಡಿದರೆ ಇಬ್ಬರೂ ಕ್ರಿಮಿಗಳಾಗಿ ಹುಟ್ಟುತ್ತಾರೆ. ಶೂದ್ರನನ್ನು ಕೂಡಿದ ಸ್ತ್ರೀ ದುಷ್ಟಾಚಾರಿಯಾಗಿ ಹೆಣ್ಣು ನಾಯಿಯಾಗಿ ಹುಟ್ಟುತ್ತಾಳೆ.
ಈ ರೀತಿಯಲ್ಲಿ ಶ್ರೀಗುರುವು ದೋಷಗಳು, ಅದರಿಂದ ಪತಿತರಿಗೆ ಉಂಟಾಗುವ ದುಷ್ಫಲಗಳನ್ನು ಬಹಳವಾಗಿ ತಿಳಿಸಿದರು. ಅದನ್ನು ಕೇಳಿದ ತ್ರಿವಿಕ್ರಮ, ಶ್ರೀಗುರುವನ್ನು, "ಸ್ವಾಮಿ, ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳನ್ನು ಹೇಗೆ ನಾಶ ಮಾಡಿಕೊಳ್ಳಬಹುದು?" ಎಂದು ಕೇಳಿದನು. ಅದಕ್ಕೆ ಶ್ರೀಗುರುವು, "ತ್ರಿವಿಕ್ರಮ, ಪ್ರಾಯಶ್ಚಿತ್ತ ಮಾಡಿಕೊಳ್ಳುವುದರಿಂದ ಅವನ್ನು ಕಳೆದು ಕೊಳ್ಳಬಹುದು. ನಿಜವಾಗಿಯೂ ಪಶ್ಚಾತಾಪ ದಗ್ಧನಾದವನ ಪಾಪಗಳೆಲ್ಲವೂ ನಾಶವಾಗುತ್ತವೆ. ಮುನಿಗಳಿಂದ ಹೇಳಲ್ಪಟ್ಟ ಪ್ರಾಯಶ್ಚಿತ್ತ ವಿಧಿ ವಿಧಾನಗಳನ್ನು ಹೇಳುತ್ತೇನೆ ಕೇಳು. ಅವುಗಳು ಅನೇಕ ವಿಧವಾಗಿವೆ. ಬ್ರಾಹ್ಮಣ ಸಭೆಯಲ್ಲಿ ತಪ್ಪೊಪ್ಪಿಕೊಂಡು ಸಭೆಯ ಸದಸ್ಯರು ಹೇಳಿದ ನಿಬಂಧನೆಗಳನ್ನು ತನ್ನ ಶಕ್ತಿ ಮೀರಿ ಒಂದು ವರ್ಷ ಪಾಲಿಸಬೇಕು. ಗೋದಾನ ಮುಂತಾದುವುಗಳನ್ನು ಪಾಲಿಸಲಾಗದಿದ್ದರೆ ಅದರ ಬದಲಾಗಿ ಅದಕ್ಕೆ ಸರಿಯಾದ ಧನವನ್ನು ದಂಡವಾಗಿ ಕಟ್ಟಬೇಕು. ಕೃಚ್ಛವ್ರತವನ್ನು ಆಚರಿಸಬೇಕು. ಅಜ್ಞಾನದಿಂದ ಪಾಪ ಮಾಡಿದ್ದರೆ ನಿಜವಾದ ಪಶ್ಚಾತ್ತಾಪದಿಂದ ಅವು ಕಳೆಯುತ್ತವೆ. ಗುರುಸೇವಾಪರನ ಪಾಪಗಳನ್ನು ಗುರುವು ಮಾತ್ರವೇ ನಿವಾರಿಸಬಲ್ಲನು. ಗುಲಗಂಜಿ ತೂಕದ ಚಿನ್ನ ದಾನ ಮಾಡುವುದು, ತೀರ್ಥ ಯಾತ್ರೆಗಳನ್ನು ಮಾಡುವುದರಿಂದ ಸ್ವಲ್ಪ ಪಾಪ ನಾಶವಾಗುತ್ತದೆ. ಇದೊಂದು ಬ್ರಾಹ್ಮಣರಿಗೆ ವಿಧಿಸಿದ ಪರಿಹಾರ ವಿಧಾನವು. ಗಂಡ-ಹೆಂಡಿರಲ್ಲಿ ಒಬ್ಬರು ಪಾಪ ಮಾಡಿದರೂ ಇಬ್ಬರಿಗೂ ಆ ಪಾಪದ ಫಲವುಂಟಾಗುತ್ತದೆ. ಆದ್ದರಿಂದ ಇಬ್ಬರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಸಾಮಾನ್ಯವಾದ ಪಾಪಗಳನ್ನು ಕಳೆದು ಕೊಳ್ಳುವುದಕ್ಕಾಗಿ ಮುನಿಗಳು ಇನ್ನೊಂದು ವಿಧಾನವನ್ನು ಹೇಳಿದ್ದಾರೆ. ಗಾಯತ್ರಿ ಮಂತ್ರವನ್ನು ೧೦,೦೦೦ ಸಲ ಜಪ ಮಾಡುವುದರಿಂದ ಅದು ಗಾಯತ್ರಿ ಕೃಚ್ಛ ಆಗುತ್ತದೆ. ನಂತರ ತುಪ್ಪದಿಂದ ೧೦೦೦ ಗಾಯತ್ರಿ ಹೋಮ ಮಾಡಬೇಕು. ಸ್ವಶಾಖ ವೇದ ಪಠನದಿಂದಲೂ ಗಾಯತ್ರಿ ಕೃಚ್ಛ ಮಾಡಿದಂತಾಗುತ್ತದೆ. ಮೂರುದಿನ ಬೆಳಗ್ಗೆ ಒಂದು ಹೊತ್ತು, ಮತ್ತೆ ಮೂರುದಿನ ರಾತ್ರಿ ಒಂದು ಹೊತ್ತು, ಊಟ ಮಾಡಿ, ಮುಂದಿನ ಮೂರು ದಿನ ಅಯಾಚಿತವಾಗಿ ಬಂದದ್ದನ್ನು ಮಾತ್ರ ತೆಗೆದುಕೊಂಡು. ಮೂರುದಿನ ಪೂರ್ತಿ ಉಪವಾಸ. ಹೀಗೆ ಹನ್ನೆರಡು ದಿನಗಳು ಗುರು ಸ್ಮರಣೆ ಮಾಡುತ್ತಾ ಕಾಲ ಕಳೆಯಬೇಕು. ಇದನ್ನು ಪ್ರಾಜಾಪತ್ಯ ಕೃಚ್ಛವೆನ್ನುತ್ತಾರೆ. ಇದನ್ನು ಮಾಡುವುದರಿಂದ ಸಾಮಾನ್ಯ ಪಾಪಗಳು ಕಳೆಯುತ್ತವೆ. ಹದಿನೈದು ಹಿಡಿ ಬೆಳಗ್ಗೆ, ಹನ್ನೆರಡು ಹಿಡಿ ರಾತ್ರಿ ಅನ್ನ ತಿನ್ನುತ್ತಾ ಶುದ್ಧನಾಗಿದ್ದುಕೊಂಡು, ಒಂದು ತಿಂಗಳು ವ್ರತವನ್ನಾಚರಿಸಿದರೆ ಸಾಮಾನ್ಯ ಪಾಪಗಳು ಕಳೆಯುತ್ತವೆ. ಮೂರುದಿನ ತುಪ್ಪ, ಮೂರುದಿನ ಹಾಲು, ಮೂರುದಿನ ವಾಯು ಭಕ್ಷಣ ಮಾಡಿ, ನಂತರ ೨೧ ದಿನ ಕ್ಷೀರಪಾನ ಮಾಡಿದರೂ ಪಾಪ ಕ್ಷಾಳನವಾಗುತ್ತದೆ. ಉಪವಾಸ ಮಾಡಲು ಶಕ್ತಿಯಿಲ್ಲದಿದ್ದರೆ ಅವಲಕ್ಕಿ ತಿಂದು ಉಪವಾಸ ಮಾಡ ಬಹುದು. ಶಕ್ತಿಯಿದ್ದವರು ಪರ್ಣಕೃಚ್ಛ ಮಾಡಬಹುದು. ಅಶ್ವತ್ಥ, ಆಲ, ತಾವರೆ, ದರ್ಭೆ, ದೂರ್ವಗಳಿಂದ ಜಾರಿಬಿದ್ದ ನೀರನ್ನು ಮಾತ್ರ ಕುಡಿಯುವುದಕ್ಕೆ ಪರ್ಣಕೃಚ್ಛವೆನ್ನುತ್ತಾರೆ. ಈ ಪರ್ಣ ಕೃಚ್ಛವನ್ನು ಏಳು ದಿನ ಮಾಡಿದರೂ ಪಾಪ ಕ್ಷಾಳನವಾಗುತ್ತದೆ. ಚಾಂದ್ರಾಯಣ ವ್ರತವೆಂಬುದೊಂದುಂಟು. ಶುಕ್ಲ ಪಕ್ಷದ ಮೊದಲದಿನ ಒಂದು ಹಿಡಿಯಿಂದ ಆರಂಭಮಾಡಿ, ದಿನಕ್ಕೆ ಒಂದು ಹಿಡಿಯಂತೆ ಹೆಚ್ಚು ಮಾಡುತ್ತಾ ಪೂರ್ಣಿಮೆಯ ದಿನದಂದು ಹದಿನೈದು ಹಿಡಿ ತಿನ್ನಬೇಕು. ನಂತರ ಕೃಷ್ಣ ಪಕ್ಷದ ಮೊದಲ ದಿನದಿಂದ ಆರಂಭಿಸಿ ಅಮಾವಾಸ್ಯೆಯವರೆಗೂ ಒಂದೊಂದು ಹಿಡಿ ಕಡಮೆ ಮಾಡುತ್ತಾ ಅಮಾವಾಸ್ಯೆಯ ದಿನ ಉಪವಾಸ ಮಾಡಬೇಕು. ಇದನ್ನು ಚಾಂದ್ರಾಯಣ ವ್ರತವೆನ್ನುತ್ತಾರೆ.
ಈ ರೀತಿಯಲ್ಲಿ ಅನೇಕ ವಿಧಾನಗಳಿಂದ ಮಾಡಿದ ಪಾಪಗಳನ್ನು ಕಳೆದುಕೊಳ್ಳಬಹುದು. ಆದರೆ ಯಾವುದಕ್ಕೂ ಮುಂಚೆ ಸಭೆಯಲ್ಲಿ ತಾನು ಮಾಡಿದ ಪಾಪಗಳಿಗೆ ಪಶ್ಚಾತ್ತಾಪ ಪಟ್ಟು, ತಪ್ಪೊಪ್ಪಿಕೊಂಡು, ಸತ್ಯವನ್ನು ಹೇಳಿ, ಶ್ರದ್ಧಾ ಭಕ್ತಿಗಳಿಂದ ಆಚರಿಸಿದ ವ್ರತಗಳು, ಕೃಚ್ಛಗಳು ಫಲ ಕೊಡುತ್ತವೆ. ಇಲ್ಲದಿದ್ದರೆ ಅವುಗಳಿಂದ ಯಾವ ಉಪಯೋಗವೂ ಆಗುವುದಿಲ್ಲ.
ಇನ್ನು ತೀರ್ಥ ಯಾತ್ರೆಗಳಿಂದ ಆಗುವ ಫಲವನ್ನು ಹೇಳುತ್ತೇನೆ ಕೇಳು. ವಾರಣಾಸಿಯಲ್ಲಿ ಗಂಗಾ ಸ್ನಾನ ಮಾತ್ರದಿಂದಲೇ ಸರ್ವ ಪಾಪಗಳೂ ನಾಶವಾಗುತ್ತವೆ. ಬೇರೆ ತೀರ್ಥಗಳಿಗೆ ಹೋದವರು, ಅಗಸ್ತ್ಯ ಮುನಿಗಳು ಹೇಳಿರುವಂತೆ ಅಲ್ಲಿ ಸಹಸ್ರ ಗಾಯತ್ರಿ ಜಪ ಮಾಡಿದರೆ ಪಾಪ ನಾಶವಾಗುತ್ತದೆ. ಸೇತು ಬಂಧದ ಹತ್ತಿರ ಸಮುದ್ರ ಸ್ನಾನ ಮಾಡಿದವರಿಗೆ ಭ್ರೂಣ ಹತ್ಯೆ, ಕೃತಘ್ನತೆಯಂತಹ ಪಾಪಗಳೂ ಕಳೆಯುತ್ತವೆ. ಅಲ್ಲಿ ವಿಧಿ ಪೂರ್ವಕವಾಗಿ ಸ್ನಾನ ಮಾಡಿ ಕೋಟಿ ಗಾಯತ್ರಿ ಜಪ ಮಾಡಿದರೆ ಬ್ರಹ್ಮ ಹತ್ಯೆಯಂತಹ ಪಾಪಗಳೂ ನಾಶವಾಗುತ್ತವೆ. ಲಕ್ಷ ಗಾಯತ್ರಿ ಜಪ ಮಾಡಿದರೆ ಸುರಾಪಾನದಂತಹ ಪಾಪಗಳು ಕಳೆಯುತ್ತವೆ. ಏಳು ಲಕ್ಷ ಜಪ ಮಾಡಿದರೆ ಚಿನ್ನ ಕದ್ದ ಪಾಪ ಕಳೆಯುತ್ತದೆ. ಎಂಟು ಲಕ್ಷ ಜಪ ಮಾಡಿದರೆ ಗುರು ಭಾರ್ಯಾಗಮನದಂತಹ ಮಹಾ ಪಾಪಗಳೂ ಕಳೆಯುತ್ತವೆ.
ಇನ್ನು ವೇದ ಪಠನದಿಂದ ಉಂಟಾಗುವ ಫಲಗಳನ್ನು ಕೇಳು. ‘ಪಾವಮಾನ’ ಮಂತ್ರ, ‘ಇಂದ್ರಮಿತ್ರ’ ಮಂತ್ರ ಜಪದಿಂದ ಬ್ರಹ್ಮ ಹತ್ಯೆಯಂತಹ ಪಾಪಗಳು ಕಳೆಯುತ್ತವೆ. ‘ಶಾಂತಿಸೂಕ್ತ’ ಪಠನದಿಂದ ಸುರಾ ಪಾನದಂತಹ ಪಾಪಗಳು ಕಳೆಯುತ್ತವೆ. ‘ಶೌನಶ್ಶೇಫ ಸೂಕ್ತ’ ಪಠನೆಯಿಂದ ಸ್ವರ್ಣಾಪಹಾರಿ ತನ್ನ ಪಾಪ ಕಳೆದುಕೊಂಡು ಶುದ್ಧನಾಗುತ್ತಾನೆ. ‘ಶಾಂತಿ ಸೂಕ್ತ’ವನ್ನು ಪಠಿಸುತ್ತಾ, ಒಂದು ತಿಂಗಳು ಬರಿಯ ಹವಿಷ್ಯಾನ್ನವನ್ನು ಮಾತ್ರ ಊಟ ಮಾಡಿದರೆ ಗುರುಭಾರ್ಯಾ ಗಮನದಂತಹ ಪಾಪಗಳೂ ನಾಶವಾಗುತ್ತವೆ. ಶ್ರದ್ಧಾ ಭಕ್ತಿಗಳಿಂದ ಕೂಡಿ, ಮಿತಾಹಾರಿಯಾಗಿ, ೬ ತಿಂಗಳು ಪುರುಷಸೂಕ್ತವನ್ನು ಪಠಿಸಿದರೆ, ಜಪಿಸಿದರೆ ಪಂಚ ಮಹಾ ಪಾತಕಗಳೂ ನಾಶವಾಗಿ ಅವನು ಪರಿಶುದ್ಧನಾಗುತ್ತಾನೆ. ಶ್ರದ್ಧೆಯಿಂದ, ಭಕ್ತಿಯಿಟ್ಟು ಮಾಡಿದ, ‘ತ್ರಿಸುಪರ್ಣ’ ಜಪದಿಂದ ಪಂಚ ಮಹಾಪಾತಕಗಳೂ ಕಳೆದು ಹೋಗುತ್ತವೆ. ‘ತ್ರಿಸುಪರ್ಣ’ ಜಪ ಸರ್ವ ಪಾಪ ನಾಶಕರವು. ನಾರಾಯಣೋಪನಿಷತ್ತನ್ನು ಶ್ರದ್ಧಾಭಕ್ತಿಗಳಿಂದ ಕೂಡಿ ಜಪಿಸುವವನು ಪಂಚ ಮಹಾಪಾತಕಗಳಿಂದ ಬಿಡುಗಡೆ ಹೊಂದುವನು. ತ್ರಿಪದಿ ಗಾಯತ್ರಿಯನ್ನು ಜಪಿಸುವವನ ಪಾಪಗಳೆಲ್ಲವೂ ನಾಶವಾಗುತ್ತವೆ. ‘ಅಘಮರ್ಷಣ ಸೂಕ್ತ’ ಜಪದಿಂದ, ‘ವಿಷ್ಣು ಸೂಕ್ತ’ ಜಪದಿಂದ ಏಳು ಜನ್ಮಗಳಲ್ಲಿ ಮಾಡಿದ ಪಾಪಗಳಿಂಡ ಬಿಡುಗಡೆಯಾಗುತ್ತದೆ. ಆದರೆ, ತ್ರಿವಿಕ್ರಮ, ಇವೆಲ್ಲಕ್ಕೂ ಶ್ರದ್ಧಾ ಭಕ್ತಿಗಳು ಬಹು ಮುಖ್ಯ. ಶ್ರದ್ಧಾ ಭಕ್ತಿಗಳಿಲ್ಲದೆ ಮಾಡಿದ ಯಾವ ಜಪವೂ, ಪಠನವೂ ಪಾಪ ನಾಶ ಮಾಡಲಾರದು.
ಇನ್ನು ತಿಳಿಯದೆ ಮಾಡಿದ ಪಾಪಗಳಿಂದ ಬಿಡುಗಡೆ ಹೇಗೆ ಎಂಬುದನ್ನು ಹೇಳುತ್ತೇನೆ. ಸಾವಧಾನವಾಗಿ ಕೇಳು. ಪಂಚ ಗವ್ಯ ಪ್ರಾಶನ ಮಾಡಿ, ನಿಜವಾಗಿಯೂ ಪಶ್ಚಾತ್ತಾಪದಿಂದ ದಗ್ಧನಾದವನು ಶುದ್ಧನಾಗುತ್ತಾನೆ. ಕರಿಯ ಬಣ್ಣದ ಹಸುವಿನಿಂದ ಗೋಮೂತ್ರ, ಗೋಮಯ, ಗೋಘೃತ, ತಾಮ್ರ ಬಣ್ಣದ ಹಸುವಿನಿಂದ ಗೋಕ್ಷೀರ, ಬಿಳಿಯ ಬಣ್ಣದ ಹಸುವಿನಿಂದ ಗೋದಧಿ ಇವನ್ನು ಬೇರೆ ಬೇರೆಯಾಗಿ ಶೇಖರಿಸಿ, ಶಾಸ್ತ್ರೋಕ್ತವಾಗಿ, ನಿರ್ದಿಷ್ಟ ಪ್ರಮಾಣದಲ್ಲಿ ಕಲಸಿದ ಸಮ್ಮಿಶ್ರಣವೇ ಪಂಚಗವ್ಯ. ಇದನ್ನು ದರ್ಭೆಗಳನ್ನಿಟ್ಟ ನೀರಿನೊಡನೆ ಕಲಸಿ ಕುಡಿಯಬೇಕು. ಕುಡಿಯುವುದಕ್ಕೆ ಮುಂಚೆ ಒಂದು ದಿನ ಉಪವಾಸವಿರಬೇಕು. ಆಯಾ ಬಣ್ಣದ ಹಸುಗಳು ಸಿಕ್ಕದಿದ್ದಲ್ಲಿ ಕಪಿಲ ಬಣ್ಣದ ಹಸುವಿನಿಂದ ಎಲ್ಲವನ್ನೂ ಸಂಗ್ರಹಿಸಬೇಕು. ಪಂಚಗವ್ಯವನ್ನು ಮಾಡಿಟ್ಟುಕೊಂಡು, ಇರಾವತಿ, ಇದಂವಿಷ್ಣು, ಮಾನಸ್ತೋಕೆ, ಪ್ರಜಾಪತೇ ಎಂಬ ಮಂತ್ರಗಳಿಂದಲೂ, ಗಾಯತ್ರಿ ಮಂತ್ರದಿಂದಲೂ, ಓಂಕಾರ ಪೂರ್ವಕವಾಗಿ, ವ್ಯಾಹೃತಿಗಳೊಡನೆ ಶಾಸ್ತ್ರೋಕ್ತವಾಗಿ ಹೋಮ ಮಾಡಬೇಕು. ಈ ರೀತಿಯಲ್ಲಿ ಹೋಮ ಮಾಡಿ ತಾನು ಮಾಡಿದ ತಪ್ಪಿನಿಂದ ಪ್ರಾಯಶ್ಚಿತ್ತ ದಗ್ಧನಾಗಿ ಪಂಚಗವ್ಯವನ್ನು ಸೇವಿಸಿ, ಯತ್ವಗಸ್ಥಿ ಎಂಬ ಮಂತ್ರ ಪಠಿಸಿದರೆ ಶುದ್ಧನಾಗುವನು.
ಬ್ರಹ್ಮ ಹತ್ಯೆ, ಸುರಾಪಾನ, ಗುರು ಭಾರ್ಯಾ ಸಂಗ, ಸ್ವರ್ಣ ಚೌರ್ಯ ಇವು ಮಹಾ ಪಾತಕಗಳು. ಇದರಲ್ಲಿ ಯಾವುದಾದರೊಂದನ್ನು ಮಾಡಿದವನನ್ನು ಮಹಾ ಪಾತಕಿಯೆನ್ನುತ್ತಾರೆ. ಅಂತಹ ಮಹಾ ಪಾತಕಿಯ ಸಂಗ ಮಾಡುವುದು ಕೂಡ ಮಹಾ ಪಾತಕವೇ. ಇವೈದನ್ನೂ ಪಂಚ ಮಹಾ ಪಾತಕಗಳೆನ್ನುತ್ತಾರೆ. ಇವು ಪರಿಹಾರವಿಲ್ಲದಂತಹ ಪಾತಕಗಳು. ಬೇರೆಯ ಪಾಪಗಳು ಪ್ರಾಯಶ್ಚಿತ್ತ ಮಾಡಿಕೊಳ್ಳುವುದರಿಂದ ಕಳೆದರೂ, ಪಂಚ ಮಹಾಪಾತಕಗಳು ಸದ್ಗುರುವಿನ ಅನುಗ್ರಹದಿಂದ ಕಳೆಯುತ್ತವೆ. ಸ್ವಧರ್ಮ ನಿರತನಾಗಿ, ಮನೋ ವಾಕ್ಕಾಯಗಳಿಂದ ಶುದ್ಧನಾದ ವೈದ್ಯ ಶಾಸ್ತ್ರನಿಪುಣನ ಅನುಗ್ರಹದಿಂದಲೂ ಪಾಪಿಯಾದವನು ಶುದ್ಧನಾಗಬಲ್ಲನು.
ಈ ರೀತಿಯಲ್ಲಿ ಶ್ರೀಗುರುವು ಅನೇಕ ವಿಧವಾದ ಪ್ರಾಯಶ್ಚಿತ್ತ ವಿಧಾನಗಳನ್ನು ತ್ರಿವಿಕ್ರಮನಿಗೆ ಹೇಳಿದರು. ನಂತರ ಪತಿತನಾಗಿ ಅಲ್ಲಿ ನಿಂತಿದ್ದ ಚಂಡಾಲನ ಕಡೆಗೆ ನೋಡಿ, "ಅಯ್ಯಾ, ನೀನು ಪೂರ್ವ ಜನ್ಮದಲ್ಲಿ ಬ್ರಾಹ್ಮಣನಾಗಿ ನಿನ್ನ ಮಾತಾ ಪಿತರನ್ನು ದ್ವೇಷಿಸಿದ್ದರಿಂದ ಈಗ ಚಂಡಾಲನಾಗಿ ಹುಟ್ಟಿದ್ದೀಯೆ. ನೀನು ಶುದ್ಧಿಯಾಗಬಲ್ಲ ಮಾರ್ಗವನ್ನು ಹೇಳುತ್ತೇನೆ ಕೇಳು. ಒಂದು ತಿಂಗಳು ಸಂಗಮದಲ್ಲಿ ಸ್ನಾನಮಾಡು. ನಿನ್ನ ದೋಷಗಳೆಲ್ಲವೂ ಕಳೆದು ನೀನು ಮತ್ತೆ ಬ್ರಾಹ್ಮಣನಾಗುತ್ತೀಯೆ" ಎಂದು ಹೇಳಿದರು. ಅದಕ್ಕೆ ಅವನು, "ಸ್ವಾಮಿ, ನಿಮ್ಮ ದರ್ಶನದಿಂದ ನಾನು ಶುದ್ಧನಾಗಿದ್ದೇನೆ. ಮಾನಸ ಸರೋವರದಲ್ಲಿ ಮುಳುಗಿದ ಕಾಗೆ ಹಂಸವಾದಂತೆ ನಿಮ್ಮ ದೃಷ್ಟಿ ಬಿದ್ದ ಮಾತ್ರಕ್ಕೇ ನಾನು ಪವಿತ್ರನಾದೆ. ಹಾಗಾದ ನನ್ನನ್ನು ಉದ್ಧರಿಸಿ. ಶರಣಾಗತ ವತ್ಸಲರು, ಜಗದ್ರಕ್ಷಕರು ನೀವು. ಜಗತ್ತಿಗೇ ಗುರುವು. ನಿಮ್ಮ ಅಮೃತ ದೃಷ್ಟಿ ನನ್ನ ಮೇಲೆ ಬಿದ್ದುದರಿಂದಲೇ ನಾನು ಜ್ಞಾನಿಯಾದೆ. ನನ್ನನ್ನು ಮಂತ್ರಗಳಿಂದ ಪುನೀತನನ್ನಾಗಿ ಮಾಡಿ ಮಿಕ್ಕ ಬ್ರಾಹ್ಮಣರ ಜೊತೆ ಸೇರಿಸಿ" ಎಂದು ಕೇಳಿ ಕೊಂಡನು. ಅದನ್ನು ಕೇಳಿದ ಶ್ರೀಗುರುವು ನಗುತ್ತಾ, "ನಿನ್ನ ಈ ದೇಹ ಹೀನ ಜಾತಿಯಲ್ಲಿ ಹುಟ್ಟಿದ್ದು. ಆದ್ದರಿಂದ ನಿನ್ನನ್ನು ಯಾರೂ ವಿಪ್ರನೆಂದು ಒಪ್ಪಿಕೊಳ್ಳುವುದಿಲ್ಲ. ಈ ದೇಹವು ಹೀನವಾದ ಪುರುಷ-ಸ್ತ್ರೀ ಸಂಬಂಧದಿಂದ ಹುಟ್ಟಿದ್ದು. ಅಂತಹ ದೇಹಕ್ಕೆ ವಿಪ್ರತ್ವ ಹೇಗೆ ಬರುತ್ತದೆ? ಹಿಂದೆ ಗಾಧಿ ಪುತ್ರನಾದ ವಿಶ್ವಾಮಿತ್ರನು ವೇದ ಪಠನದಿಂದ ವಿಪ್ರನಾದರೂ, ಸಾವಿರ ವರ್ಷಕಾಲ ತಪಸ್ಸು ಮಾಡಿ, ಬ್ರಹ್ಮರ್ಷಿತ್ವವನ್ನು ದಯ ಪಾಲಿಸ ಬೇಕೆಂದು ಇಂದ್ರಾದಿ ದೇವತೆಗಳನ್ನು ಪ್ರಾರ್ಥಿಸಿದನು. ಆದರೆ ಅವರು ಗುರು ಶ್ರೇಷ್ಠನಾದ ವಸಿಷ್ಠ ಮಹರ್ಷಿಯು ನಿನ್ನನ್ನು ಬ್ರಹ್ಮರ್ಷಿ ಎಂದು ಒಪ್ಪಿಕೊಂಡರೆ ಮಾತ್ರ ನಾವು ನಿನ್ನನ್ನು ಬ್ರಹ್ಮರ್ಷಿ ಎಂದು ಒಪ್ಪಿಕೊಳ್ಳುತ್ತೇವೆ" ಎಂದರು. ವಿಶ್ವಾಮಿತ್ರನು ವಸಿಷ್ಠನ ಬಳಿಗೆ ಹೋಗಿ, "ನಾನು ಬಹಳ ಕಾಲ ತಪಸ್ಸು ಮಾಡಿದ್ದೇನೆ. ನನ್ನನ್ನು ಬ್ರಹ್ಮರ್ಷಿಯಾಗಿ ಮಾಡಿ" ಎಂದು ಕೇಳಲು, ವಸಿಷ್ಠನು, "ಅಯ್ಯಾ, ನೀನು ನಿನ್ನ ಈ ಕ್ಷತ್ರಿಯ ದೇಹವನ್ನು ಬಿಟ್ಟು ಉತ್ತಮ ಜನ್ಮದಲ್ಲಿ ಹುಟ್ಟು. ಆಗ ನಿನಗೆ ಉಪನಯನವಾಗಿ, ಗಾಯತ್ರಿಯ ಉಪದೇಶದಿಂದ ನೀನು ವಿಪ್ರನಾಗಬಲ್ಲೆ. ಈ ದೇಹದಲ್ಲಿ ನೀನು ಬ್ರಹ್ಮರ್ಷಿಯಾಗಲು ಸಾಧ್ಯವಿಲ್ಲ" ಎಂದನು. ಅದರಿಂದ ಕೋಪಗೊಂಡ ವಿಶ್ವಾಮಿತ್ರ ವಸಿಷ್ಠನ ನೂರು ಮಕ್ಕಳನ್ನು ಕೊಂದನು. ಅದರಿಂದ ವಿಚಲಿತನಾಗದ ವಸಿಷ್ಠ ವಿಶ್ವಾಮಿತ್ರನನ್ನು ಬ್ರಹ್ಮರ್ಷಿಯೆಂದು ಮಾತ್ರ ಒಪ್ಪಿಕೊಳ್ಳಲಿಲ್ಲ. ಆಗ್ರಹಗೊಂಡ ವಿಶ್ವಾಮಿತ್ರ ವಸಿಷ್ಠನನ್ನು ಕೊಲ್ಲಲು ಪರ್ವತದಂತಹ ಬಂಡೆಯನ್ನು ಹಿಡಿದು ಬಂದನು. ಆದರೆ ಅವನಿಗೆ ಯೋಚನೆಯಾಯಿತು. ‘ನಾನು ಈಗ ಇವನನ್ನು ಕೊಂದರೆ ನನ್ನನ್ನು ಬ್ರಹ್ಮರ್ಷಿ ಎಂದು ಒಪ್ಪಿಕೊಳ್ಳುವವರು ಬೇರೆ ಯಾರೂ ಇಲ್ಲ. ಮಿಕ್ಕವರೆಲ್ಲರೂ ವಸಿಷ್ಠನ ಮಾತನ್ನೇ ಅನುಸರಿಸುತ್ತಾರೆ. ಅಲ್ಲದೆ ಈ ಮುನಿ ಶ್ರೇಷ್ಠನನ್ನು ಕೊಂದರೆ ನನಗೆ ಮಹಾ ಪಾಪ ಸುತ್ತಿಕೊಳ್ಳುತ್ತದೆ’ ಎಂದೆಲ್ಲ ಯೋಚಿಸಿ, ಪಶ್ಚಾತ್ತಾಪದಿಂದ ವಿಶ್ವಾಮಿತ್ರನು ವಸಿಷ್ಠರನ್ನೇ ಶರಣು ಹೋದನು. ‘ರಾಜರ್ಷಿ’ಎಂದು ತನ್ನನ್ನು ಸಂಬೋಧಿಸಿದ ವಸಿಷ್ಠನನ್ನು, ವಿಶ್ವಾಮಿತ್ರ, "ನನ್ನನ್ನು ಬ್ರಹ್ಮರ್ಷಿಯನ್ನಾಗಿ ಮಾಡಿ ನನ್ನ ಕೈಯಿಂದ ಅನ್ನ ಸ್ವೀಕಾರ ಮಾಡಿ" ಎಂದು ಕೇಳಿ ಕೊಂಡನು. ಆಗ ವಸಿಷ್ಠ, " ನಿನ್ನ ಈ ದೇಹವನ್ನು ಸೂರ್ಯ ಕಿರಣಗಳಿಂದ ಸುಟ್ಟುಹಾಕಿ, ನಿನ್ನ ಹೊಸ ದೇಹದೊಡನೆ ಬಾ" ಎಂದು ಆದೇಶ ಕೊಟ್ಟನು. ಅದರಂತೆ ವಿಶ್ವಾಮಿತ್ರ ಮತ್ತೆ ತಪಸ್ಸು ಮಾಡಿ, ತನ್ನ ತಪೋಬಲದಿಂದ, ಸೂರ್ಯನ ಅನುಗ್ರಹದಿಂದ ತನ್ನ ಹಳೆಯ ದೇಹವನ್ನು ಸುಟ್ಟು ಹೊಸ ದೇಹವನ್ನು ಪಡೆದು ವಸಿಷ್ಠನನ್ನು ಕಂಡು, ಅವನಿಂದ ಬ್ರಹ್ಮರ್ಷಿ ಎಂದು ಕರೆಸಿಕೊಂಡು, ತ್ರಿಲೋಕ ಪೂಜಿತನಾದನು. ಹಾಗಿರುವಾಗ ನಿನ್ನ ಈ ಚಂಡಾಲ ದೇಹದಲ್ಲಿ ನೀನು ವಿಪ್ರತ್ವವನ್ನು ಹೇಗೆ ಪಡೆಯಬಲ್ಲೆ? ಪಶ್ಚಾತ್ತಾಪದಿಂದ ನೀನು ನಾನು ಹೇಳಿದಂತೆ ಮಾಡಿ, ಈ ದೇಹವನ್ನು ಬಿಟ್ಟಮೇಲೆ, ಜನ್ಮಾಂತರದಲ್ಲಿ ವಿಪ್ರನಾಗಬಲ್ಲೆ. ಅಯ್ಯಾ, ಆದ್ದರಿಂದ ಈಗ ನೀನು ನಿನ್ನ ಮನೆಗೆ ಹೋಗು" ಎಂದು ಹೇಳಿದರು. ಆದರೆ ಆ ಚಂಡಾಲ ದೇಹಿ, ಹಣದ ಗಂಟು ಸಿಕ್ಕಿದವನು ಅದನ್ನು ಹೇಗೆ ಬಿಡಲಾರನೋ ಹಾಗೆ ತಾನು ಉತ್ತಮನಾದ ಬ್ರಾಹ್ಮಣ, ಜ್ಞಾನಿ ಎಂದು ಕೊಂಡು ಮನೆಗೆ ಹೋಗದೆ ಅಲ್ಲಿಯೇ ನಿಂತಿದ್ದನು. ಅಷ್ಟರಲ್ಲಿ ಅವನ ಹೆಂಡತಿ ಮಕ್ಕಳು ಅಲ್ಲಿಗೆ ಬಂದರು. ಅವನನ್ನು ಕೈಹಿಡಿದು ಮನೆಗೆ ಕರೆಯಲು ಹೋದ ಅವಳನ್ನು ಆ ಪತಿತ ಹೊಡೆಯಲು ಮುಂದಾದನು. ಅವಳು ಶ್ರೀಗುರುವಿನ ಶರಣು ಹೋಗಿ, "ನನ್ನ ಗಂಡ ನನ್ನನ್ನು ದೂರಮಾಡಲು ಯತ್ನಿಸುತ್ತಿದ್ದಾನೆ. ಅವನಿಗೆ ಬುದ್ಧಿ ಮಾತು ಹೇಳಿ. ಇವನನ್ನು ಬಿಟ್ಟರೆ ನಮಗೆ ಇನ್ನಾರು ಗತಿ? ನೀವೇ ಅವನಿಗೆ ತಿಳಿಯಹೇಳಿ. ಅವನು ನಮ್ಮನ್ನು ತ್ಯಜಿಸಿದರೆ ನಾವು ಇಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತೇವೆ" ಎಂದು ಆರ್ತಳಾಗಿ ಬೇಡಿ ಕೊಂಡಳು. ಅವಳ ಮಾತನ್ನು ಕೇಳಿದ ಶ್ರೀಗುರುವು ಆ ಚಂಡಾಲನನ್ನು ತಮ್ಮ ಹತ್ತಿರಕ್ಕೆ ಕರೆದು, "ಅಯ್ಯಾ, ನಮ್ಮ ಮಾತು ಕೇಳು. ಇವರನ್ನು ಕರೆದುಕೊಂಡು ನಿನ್ನ ಮನೆಗೆ ಹೋಗು. ಅವರನ್ನು ಕ್ಷೋಭೆ ಗೊಳಿಸಿದರೆ ನಿನಗೆ ಸದ್ಗತಿ ಹೇಗೆ ಉಂಟಾಗುತ್ತದೆ? ವಿಧಿ ಪೂರ್ವಕವಾಗಿ ಕೈ ಹಿಡಿದವಳನ್ನು ಬಿಡುವುದು ಮಹಾ ಪಾಪಕರವು. ಅದರಿಂದ ನಿನಗೆ ಒಳ್ಳೆಯದಾಗುವುದಿಲ್ಲ" ಎಂದು ಮತ್ತೆ ಬುದ್ಧಿವಾದ ಹೇಳಿದರು. ಅವನು, ಅಂಜಲಿ ಬದ್ಧನಾಗಿ, "ಸ್ವಾಮಿ, ಜ್ಞಾನಿಯಾದ ನಾನು ಮತ್ತೆ ಹೇಗೆ ಚಂಡಾಲನಾಗುತ್ತೇನೆ?" ಎಂದು ಕೇಳಲು, ಶ್ರೀಗುರುವು, ‘ಅವನ ಮೈಮೇಲಿರುವ ಭಸ್ಮವು ಹೋಗುವವರೆಗೂ ಅವನ ಜ್ಞಾನವು ಹೋಗುವುದಿಲ್ಲ’ ಎಂದು ಯೋಚಿಸಿ, ತಮ್ಮ ಶಿಷ್ಯನೊಬ್ಬನನ್ನು ಕರೆದು, "ಈಗಲೇ ಗ್ರಾಮದೊಳಕ್ಕೆ ಹೋಗಿ, ಪಿಶನಾರಿಯಾದ ಬ್ರಾಹ್ಮಣನೊಬ್ಬನನ್ನು ಕರೆದುಕೊಂಡು ಬಾ" ಎಂದು ಆಜ್ಞೆ ಮಾಡಿದರು.
ತಕ್ಷಣವೇ ಆ ಶಿಷ್ಯ ಊರೊಳಕ್ಕೆ ಹೋಗಿ, ಹಣದಾಸೆಯಿಂದ ವಾಣಿಜ್ಯದಲ್ಲಿ ನಿರತನಾಗಿದ್ದ ಬ್ರಾಹ್ಮಣನೊಬ್ಬನನ್ನು ಕರೆತಂದನು. ಶ್ರೀಗುರುವು ಆ ಬ್ರಾಹ್ಮಣನಿಗೆ, "ಈ ಚಂಡಾಲನಿಗೆ ತಲೆಯಮೇಲೆ ನೀರು ಸುರಿದು ಸ್ನಾನ ಮಾಡಿಸು. ಅದರಿಂದ ಅವನಿಗುಂಟಾಗಿರುವ ಜ್ಞಾನ ಕಳೆದು ಅವನು ಮತ್ತೆ ಸಂಸಾರಾಸಕ್ತ ನಾಗುತ್ತಾನೆ" ಎಂದು ಅಪ್ಪಣೆ ಮಾಡಿದರು. ಅ ಲೋಭಿ ಬ್ರಾಹ್ಮಣ ಶ್ರೀಗುರುವಿನ ಆಪ್ಪಣೆಯಂತೆ, ನೀರನ್ನು ತಂದು ಆ ಚಂಡಾಲನ ತಲೆಯ ಮೇಲೆ ಸುರಿದನು. ಅದರಿಂದ ಚಂಡಾಲನ ಮೈಮೇಲಿದ್ದ ಭಸ್ಮವೆಲ್ಲ ಜಾರಿ ಹೋಗಿ, ಅವನು ಎಲ್ಲವನ್ನೂ ಮರೆತು, ತನ್ನ ಹೆಂಡತಿ ಮಕ್ಕಳನ್ನು ಕಂಡು, ಅವರನ್ನು ಆಲಂಗಿಸಿ, "ಈಗ ಸ್ವಲ್ಪ ಹೊತ್ತು ನನಗೆ ಭ್ರಾಂತಿಯಾಗಿತ್ತು" ಎಂದು ಹೇಳಿ ಅವರೆಲ್ಲರನ್ನು ಕರೆದು ಕೊಂಡು ತನ್ನ ಮನೆಗೆ ಹೋದನು. ಅದನ್ನೆಲ್ಲಾ ಕಂಡು ಅಲ್ಲಿ ಸೇರಿದ್ದವರೆಲ್ಲ ಆಶ್ಚರ್ಯ ಚಕಿತರಾದರು. ತ್ರಿವಿಕ್ರಮನು, "ಸ್ವಾಮಿ, ಆ ಚಂಡಾಲನಿಗೆ ತಲೆಯ ಮೇಲೆ ನೀರು ಸುರಿದುದರಿಂದ ಅವನಿಗುಂಟಾಗಿದ್ದ ಜ್ಞಾನವೆಲ್ಲ ಕಳೆದು ಹೋಯಿತು. ಅದು ಹೇಗಾಯಿತು ಎಂಬುದನ್ನು ದಯೆಯಿಟ್ಟು ತಿಳಿಸುವ ಕೃಪೆಮಾಡಿ" ಎಂದು ಕೇಳಿ ಕೊಳ್ಳಲು, ಶ್ರೀಗುರುವು, "ತ್ರಿವಿಕ್ರಮ, ಅದು ಭಸ್ಮದ ಮಹಿಮೆ. ಭಸ್ಮದಿಂದ ಉಂಟಾದ ಜ್ಞಾನ ಭಸ್ಮದೊಂದಿಗೇ ತೊಳೆದು ಹೋಯಿತು. ಆದ್ದರಿಂದಲೇ ಈಶ್ವರನೂ ಸದಾ ಭಸ್ಮ ಧಾರಿಯಾಗಿರುತ್ತಾನೆ" ಎಂದು ಹೇಳಿದರು. ತ್ರಿವಿಕ್ರಮನು ಮತ್ತೆ, "ಗುರುದೇವ, ಭಸ್ಮ ಮಾಹಾತ್ಮ್ಯೆಯನ್ನು ವಿಶದಗೊಳಿಸುವ ಕೃಪೆ ಮಾಡಿ" ಎಂದು ಕೇಳಿ ಕೊಳ್ಳಲು, ಶ್ರೀಗುರುವು ಅದನ್ನು ತ್ರಿವಿಕ್ರಮನಿಗೆ ಬೋಧಿಸಿದರು, ಎಂದು ಸಿದ್ಧಮುನಿ ನಾಮಧಾರಕನಿಗೆ ಹೇಳಿದರು.
ಇಲ್ಲಿಗೆ ಇಪ್ಪತ್ತೆಂಟನೆಯ ಅಧ್ಯಾಯ ಮುಗಿಯಿತು.
No comments:
Post a Comment