Thursday, April 11, 2013

||ಶ್ರೀಗುರು ಚರಿತ್ರೆ - ಮೂವತ್ತನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
 ||ಶ್ರೀಗುರುಭ್ಯೋನಮಃ||

ನಾಮಧಾರಕನು ಸಿದ್ಧಮುನಿಯ ಚರಣಗಳಿಗೆ ನಮಸ್ಕರಿಸಿ, "ಸಿದ್ಧಯೋಗೀಶ್ವರ, ಭವಸಾಗರತಾರಕ, ನಿನ್ನ ಕೃಪೆಯಿಂದ ನಾನು ಉದ್ಧರಿಸಲ್ಪಟ್ಟೆ. ಶ್ರೀಗುರುಚರಿತ್ರೆಯೆಂಬ ಸುಧಾರಸವನ್ನು ನಾನು ಪಾನಮಾಡಿದವನಾದೆ. ಆದರೆ ಇನ್ನೂ ನನ್ನ ಮನಸ್ಸು ತೃಪ್ತಿಹೊಂದಲಿಲ್ಲ. ನನ್ನ ತೃಷ್ಣೆ ಹೆಚ್ಚುತ್ತಿದೆ. ಹೇ ಸ್ವಾಮಿ, ನೀನು ನನಗೆ ಮಾಡಿರುವ ಉಪಕಾರಕ್ಕೆ ನನ್ನ ವಂಶಪರಂಪರೆಯೂ ಪ್ರತ್ಯುಪಕಾರ ಮಾಡಲು ಸಾಧ್ಯವಿಲ್ಲ. ನೀನು ನನ್ನ ನಿಜಸ್ವರೂಪವನ್ನು ನನಗೆ ದರ್ಶನಮಾಡಿಸಿದೆ. ನಂತರ ನಡೆದ ಶ್ರೀಗುರುವಿನ ಕಥೆಯನ್ನು ಹೇಳುವ ಕೃಪೆಮಾಡು." ಎಂದು ಪ್ರಾರ್ಥಿಸಿಕೊಂಡನು. ಸಿದ್ಧಮುನಿಯು, ಅವನ ಮಾತುಗಳಿಂದ ಸಂತೋಷಗೊಂಡವರಾಗಿ, ಅವನನ್ನು ಆಲಂಗಿಸಿ, " ಶಿಷ್ಯೋತ್ತಮ, ನೀನು ಧನ್ಯನಾದೆ. ನಿನ್ನಲ್ಲಿ ಶ್ರೀಗುರುವಿನ ಕೃಪೆಯಾಗಿದೆ. ಭವಸಾಗರದಿಂದ ಪಾರಾಗಿ ಸರ್ವಾರ್ಥ ಸಿದ್ಧಿಯನ್ನು ಪಡೆದವನಾದೆ. ನಿನ್ನ ಹೃದಯದಲ್ಲಿ ಗುರುಚರಣಗಳು ಸ್ಥಾಪಿತವಾದವು. ನಿನ್ನ ಮಾತಿನಿಂದ ನನಗೆ ಸಂತೋಷವಾಯಿತು. ಶ್ರೀಗುರುವಿನ ಮಹಿಮೆಯನ್ನು ಸಂಪೂರ್ಣವಾಗಿ ತಿಳಿದವರಾರು? ನನಗೆ ತಿಳಿದ ಇನ್ನೊಂದು ಗುರುಕಥೆಯನ್ನು ಹೇಳುತ್ತೇನೆ. ಸಾವಧಾನವಾಗಿ ಕೇಳು.

ಶ್ರೀಗುರುವು ಗಂಧರ್ವನಗರದಲ್ಲಿದ್ದಾಗ ಅವರ ಮಹಿಮೆ ಪ್ರಸರಿಸಿ ವಿಖ್ಯಾತವಾಯಿತು. ತ್ರಿಮೂರ್ತ್ಯವತಾರರಾದರೂ, ಶ್ರೀಗುರು ನೃಸಿಂಹ ಸರಸ್ವತಿ ಅವರು ಸಾಮಾನ್ಯಮನುಷ್ಯನಂತೆ ಕಾಣಿಸಿಕೊಳ್ಳುತ್ತಿದ್ದರು. ವಿದ್ವಾಂಸರಿಗೂ ಅವರ ಮಹಿಮೆ ಎಷ್ಟೆಂದು ತಿಳಿಯಲಾಗದು. ದೂರದೂರದಿಂದ ಭಕ್ತರು ಬಂದು ಅವರ ಸೇವೆ ಮಾಡಿಕೊಂಡು, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಿದ್ದರು. ಬಡವರು ಶ್ರೀಮಂತರಾದರು. ಬಂಜೆಯರು ಪುತ್ರವತಿಯರಾದರು. ಅಂಧರು ಕಣ್ಣು ಪಡೆದರು. ಬಧಿರರು ಶ್ರವಣ ಶಕ್ತಿಯನ್ನು ಪಡೆದರು. ಶ್ರೀಗುರುವಿನ ದರ್ಶನಮಾತ್ರದಿಂದಲೇ ರೋಗಿಗಳು ನಿರೋಗಿಗಳಾದರು. ಚಿಂತಾಮಣಿಯ ಸ್ಪರ್ಶದಿಂದ ಲೋಹವು ಚಿನ್ನವಾದಂತೆ, ಸದ್ಗುರುವಿನ ಕೃಪಾದೃಷ್ಟಿಯಿಂದ ಜನರಿಗೆ ಸರ್ವಾಭೀಷ್ಟಗಳೂ ನೆರವೇರಿದವು ಎಂಬುದರಲ್ಲಿ ಅಶ್ಚರ್ಯವೇನಿದೆ? 

ಮಾಹೂರು ಎಂಬ ಊರಿನಲ್ಲಿ ಗೋಪಿನಾಥನೆಂಬ ಬ್ರಾಹ್ಮಣನೊಬ್ಬನಿದ್ದನು. ಅವನಿಗೆ ಹುಟ್ಟಿದ ಮಕ್ಕಳೆಲ್ಲಾ ಸ್ವಲ್ಪ ಸಮಯದಲ್ಲೇ ಮರಣಿಸುತ್ತಿದ್ದವು. ಅವನು ತನ್ನ ಹೆಂಡತಿಯೊಡನೆ ದತ್ತಾತ್ತ್ರೇಯರನ್ನು ಆರಾಧಿಸಿ ಅವರ ಅನುಗ್ರಹದಿಂದ ಮಗನೊಬ್ಬನನ್ನು ಪಡೆದನು. ಅವನಿಗೆ ದತ್ತನೆಂದು ಹೆಸರಿಟ್ಟರು. ತಂದೆತಾಯಿಗಳ ಅತಿಶಯಪ್ರೇಮಕ್ಕೆ ಪಾತ್ರನಾದ ಅವನು, ದತ್ತ ಕೃಪೆಯಿಂದ ಬೆಳೆದು, ಹನ್ನೆರಡು ವರ್ಷದವನಾದಾಗ, ಸುಂದರಿಯಾದ ಕನ್ಯೆಯೊಬ್ಬಳನ್ನು ತಂದು ಮದುವೆಮಾಡಿದರು. ಹಿರಿಯರ ಪ್ರೇಮಕ್ಕೆ ಪಾತ್ರರಾಗಿ, ಅನ್ಯೋನ್ಯಪ್ರಿಯರಾಗಿ, ಅವರಿಬ್ಬರೂ ಆನಂದದಿಂದ ಕಾಲಕಳೆಯುತ್ತಿದ್ದರು. 

ಹೀಗಿರುವಾಗ, ದುರದೃಷ್ಟವಶಾತ್, ದತ್ತನು ರೋಗಗ್ರಸ್ತನಾದನು. ಔಷಧೋಪಚಾರಗಳಿಂದ ಅವನ ರೋಗ ಕಡಮೆಯಾಗಲಿಲ್ಲ. ಊಟತಿಂಡಿಗಳಲ್ಲಿ ಅವನಿಗೆ ರುಚಿಯಿಲ್ಲದೆ ಅವನು ನಿತ್ಯೋಪವಾಸಿಯಾದನು. ಪತಿಪರಾಯಣೆಯಾದ ಅವನ ಹೆಂಡತಿಯೂ ಅದನ್ನನುಸರಿಸಿ ತಾನೂ ಊಟಮಾಡುತ್ತಿರಲಿಲ್ಲ. ಹೀಗೇ ಮೂರುವರ್ಷಗಳು ಕಳೆದರೂ ದತ್ತನ ರೋಗ ಕಡಮೆಯಾಗುವ ಲಕ್ಷಣಗಳು ಕಾಣಲಿಲ್ಲ. ಅವನೊಡನೆ ಅವನ ಹೆಂಡತಿಯೂ ಕೃಶಳಾಗುತ್ತಿದ್ದಳು. ವೈದ್ಯರೆಲ್ಲರೂ ಅವನು ಪ್ರಾಣದಿಂದುಳಿಯುವ ಆಸೆಯನ್ನು ಬಿಟ್ಟರು. ಆದರೆ ಅವನ ಹೆಂಡತಿ ಮಾತ್ರ, ಯಾರು ಏನೇ ಹೇಳಿದರೂ ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳದೆ, ತದೇಕಚಿತ್ತಳಾಗಿ ಅವನ ಸೇವೆಯಲ್ಲಿ ನಿರತಳಾಗಿದ್ದಳು. ಅವರಿಬ್ಬರ ಪರಿಸ್ಥಿತಿಯನ್ನು ನೋಡಿದವರೆಲ್ಲರೂ ಅವರಿಗಾಗಿ ದುಃಖಿಸುತ್ತಿದ್ದರು. ವ್ರತ, ಬ್ರಾಹ್ಮಣ ಪೂಜೆ/ಭೋಜನಾದಿಗಳನ್ನು ಮಾಡಿಸಿ, ವೈದ್ಯರು ಹೇಳಿದ ಔಷಧೋಪಚಾರಗಳನ್ನು ಮಾಡಿದರೂ ರೋಗವು ಕಡಮೆಯಾಗಲಿಲ್ಲ. ಕೆಲವರು ಹಿತೈಷಿಗಳು, ‘ಇದು ಮಾನವ ವೈದ್ಯರಿಂದ ಗುಣವಾಗುವ ರೋಗವಲ್ಲ. ದೈವಕೃಪೆಯಿಂದಲೇ ಗುಣವಾಗಬೇಕು.’ ಎಂದರು. ಅವರ ಮಾತುಗಳನ್ನು ಕೇಳಿದ, ಗೋಪಿನಾಥ ದಂಪತಿಗಳು, ದತ್ತಾತ್ತ್ರೇಯನನ್ನು ಮೊರೆಹೊಕ್ಕು, "ಸ್ವಾಮಿ, ದತ್ತಾತ್ತ್ರೇಯ, ನಿನ್ನ ಅನುಗ್ರಹದಿಂದ ಇವನು ನಮ್ಮ ಮಗನಾದನು. ಬಡವನಿಗೆ ಧನ ಪ್ರಾಪ್ತಿಯಾದರೂ ದುರಾದೃಷ್ಟದಿಂದ ಅದು ಅವನಿಗೆ ದಕ್ಕದಂತೆ, ನಮ್ಮ ದುರದೃಷ್ಟದಿಂದ ಈ ಒಬ್ಬ ಮಗನೂ ನಮ್ಮಿಂದ ದೂರನಾಗುತ್ತಿದ್ದಾನೆ. ವಂಶೋದ್ಧಾರಕನಾದ ಇವನೊಬ್ಬನೇ ನಮಗೆ ಉಳಿದದ್ದು. ಅವನನ್ನಾದರೂ ನಮಗೆ ಉಳಿಸಿಕೊಡು. ಅದಕ್ಕಾಗಿ ನಮ್ಮ ಪ್ರಾಣಗಳನ್ನು ಕೊಡಲೂ ನಾವು ಹಿಂತೆಗೆಯುವುದಿಲ್ಲ. ಹೇ, ದತ್ತಾತ್ತ್ರೇಯ ಸ್ವಾಮಿ, ನಮ್ಮ ಮೊರೆಯನ್ನು ಕೇಳುವ ಕೃಪೆಮಾಡು." ಎಂದು ಆರ್ತರಾಗಿ ಬೇಡಿಕೊಂಡರು.  

ದತ್ತನು ತನ್ನ ತಂದೆತಾಯಿಯರನ್ನು ಸಂತೈಸುತ್ತಾ, "ನನ್ನ ಜನ್ಮಾಂತರದ ಋಣವನ್ನು ನಿಮ್ಮ ಮಗನಾಗಿ ಹುಟ್ಟಿ ತೀರಿಸಿದೆ. ಋಣವಿದ್ದಷ್ಟೇ ಸಂಬಂಧಗಳು ಎನ್ನುವುದು ನಿಜವಲ್ಲವೇ?" ಎಂದು ಹೇಳಲು, ಅದನ್ನು ಕೇಳಿದ ಅವನ ತಂದೆತಾಯಿಯರು ಸ್ಪೃಹೆ ಕಳೆದುಕೊಂಡು ಬಿದ್ದುಬಿಟ್ಟರು. ಮತ್ತೆ ಎಚ್ಚೆತ್ತುಗೊಂಡು, "ಮಗು ದತ್ತ, ನಮ್ಮನ್ನು ನಿರಾಶರನ್ನಾಗಿ ಮಾಡಿ ಹೊರಟು ಹೋಗಬೇಡ. ನಮ್ಮ ವಾರ್ಧಕ್ಯದಲ್ಲಿ ನೀನೇ ನಮ್ಮನ್ನು ರಕ್ಷಿಸುತ್ತೀಯೆಂದು ನಂಬಿದ್ದೆವು. ನಮ್ಮನ್ನು ಹೀಗೆ ನಡುನೀರಿನಲ್ಲಿ ಬಿಟ್ಟು ಹೋಗುವುದು ನಿನಗೆ ಧರ್ಮವೇ?" ಎಂದು ಪ್ರಲಾಪಿಸಿದರು. ಅವರ ಮಾತುಗಳನ್ನು ಕೇಳಿದ ದತ್ತ, "ಎಲ್ಲವೂ ಈಶ್ವರಾಧೀನ. ಇದರಲ್ಲಿ ಮಾನವ ಪ್ರಯತ್ನವೇನಿದೆ? ತಾಯಿಯ ಋಣವನ್ನು ಮಗನಾದ ನಾನು ಹೇಗೆತಾನೇ ತೀರಿಸಬಲ್ಲೆ? ನಾನು ಹುಟ್ಟಿದಾಗಿನಿಂದ ನಿಮಗೆ ಕಷ್ಟವನ್ನೇ ಉಂಟುಮಾಡಿದ್ದೇನೆ. ನನ್ನಿಂದಾಗಿ ನಿಮಗೆ ಯಾವ ಸುಖವೂ ಸಿಕ್ಕಲಿಲ್ಲ. ಬದಲಾಗಿ ಕಷ್ಟಪರಂಪರೆಗಳೆ ನಿಮಗೆ ಎದುರಾದವು." ಎಂದು ಹೇಳಿ, ತನ್ನ ಹೆಂಡತಿಗೆ, "ಪ್ರಿಯೆ, ನಾನು ಹೇಳುವುದನ್ನು ಸಮಾಧಾನವಾಗಿ ಕೇಳು. ಇನ್ನು ನನ್ನ ದಿನಗಳು ಮುಗಿದವು. ಇದುವರೆಗೂ ನನ್ನಿಂದಾಗಿ ನಿನಗೆ ಯಾವ ಸುಖವು ಸಿಕ್ಕಲಿಲ್ಲ. ಬದಲು ಕಷ್ಟವೇ ನಿನ್ನ ಪಾಲಿನದಾಯಿತು. ಜನ್ಮಾಂತರದಲ್ಲಿ ನಾನು ನಿನ್ನ ವೈರಿಯಾಗಿದ್ದಿರಬೇಕು. ಅದರಿಂದಲೇ ನಿನಗೆ ನನ್ನಿಂದ ಇಂತಹ ಕಷ್ಟಗಳು ಉಂಟಾದವು. ನನ್ನಿಂದಾಗಿ ನಿನ್ನ ಸೌಂದರ್ಯವೆಲ್ಲವೂ ಹಾಳಾಯಿತು. ನೀನು ಇಲ್ಲಿಯೇ ಇರುವುದಾದರೆ ನನ್ನ ತಂದೆತಾಯಿಗಳು ನಿನ್ನನ್ನು ತಮ್ಮ ಮಗಳಂತೆಯೇ ನೋಡಿಕೊಳ್ಳುತ್ತಾರೆ. ಅದು ನಿನಗೆ ಇಷ್ಟವಾಗದೇ ಹೋದರೆ ನೀನು ನಿನ್ನ ತವರುಮನೆಗೆ ಹೋಗಬಹುದು. " ಎಂದು ಹೇಳಿದನು. ಅದನ್ನು ಕೇಳಿದ ಅವನ ಹೆಂಡತಿ ಮೂರ್ಛಿತಳಾಗಿ ಬಿದ್ದುಹೋದಳು. ಸ್ವಲ್ಪಹೊತ್ತಿನ ನಂತರ ಎಚ್ಚೆತ್ತ ಅವಳು ತನ್ನ ಗಂಡನ ಪಾದಗಳಲ್ಲಿ ತಲೆಯಿಟ್ಟು, ಪರಮ ದುಃಖದಿಂದ, "ಪ್ರಾಣಪ್ರಿಯ, ಸ್ತ್ರೀಯಾದವಳಿಗೆ, ಗಂಡನನ್ನು ಬಿಟ್ಟು ಬೇರೆ ಏನು ಗತಿಯಿದೆ? ನೀನು ಎಲ್ಲಿರುತ್ತೀಯೋ ಅಲ್ಲಿಯೇ ನಾನೂ ಇರುತ್ತೇನೆ. ಅದರಲ್ಲಿ ಸಂದೇಹವೇ ಇಲ್ಲ. ಸದಾ ನಿನ್ನನ್ನೇ ಅನುಸರಿಸುವವಳು ನಾನು." ಎಂದು ಹೇಳಿದಳು. ಆ ಮಾತುಗಳನ್ನು ಕೇಳಿದ ಅವಳ ಅತ್ತೆಮಾವಂದಿರು ಮತ್ತೆ ಸ್ಪೃಹೆ ಕಳೆದುಕೊಂಡು ಬಿದ್ದುಬಿಟ್ಟರು. ಅವರನ್ನು ಎಬ್ಬಿಸಿ, ಆದರಿಸಿ, "ನೀವು ಚಿಂತೆಮಾಡಬೇಡಿ. ನನ್ನ ಗಂಡ ಖಂಡಿತವಾಗಿಯೂ ಜೀವಿಸಿರುತ್ತಾನೆ. ನನ್ನ ಮಾತು ಕೇಳಿ. ನಮಗೆ ಆ ಸಾಂಬಶಿವನೇ ರಕ್ಷಕ. ನನ್ನನ್ನು ನನ್ನ ಗಂಡನೊಡನೆ ಯಾವುದಾದರೂ ತೀರ್ಥಕ್ಷೇತ್ರಕ್ಕೆ ಕಳುಹಿಸಿಕೊಡಿ. ಅದರಿಂದ ನನ್ನ ಗಂಡ ಬದುಕುತ್ತಾನೆ. ಶ್ರೀಗುರು ನೃಸಿಂಹ ಸರಸ್ವತಿಯವರು ಗಂಧರ್ವಪುರದಲ್ಲಿ ಇದ್ದಾರೆಂದು ಜನರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇನೆ. ಅವರ ದರ್ಶನಮಾತ್ರದಿಂದಲೇ ನನ್ನ ಗಂಡನು ಆರೋಗ್ಯವಂತನಾಗುತ್ತಾನೆ. ಆದ್ದರಿಂದ ನಮ್ಮನ್ನು ಆದಷ್ಟು ತ್ವರೆಯಾಗಿ ಅಲ್ಲಿಗೆ ಕಳುಹಿಸುವ ಏರ್ಪಾಡುಮಾಡಿ." ಎಂದು ಕೇಳಿಕೊಂಡಳು. ಪುತ್ರನೆಂಬ ವಾತ್ಸಲ್ಯ, ಅವನು ಆರೋಗ್ಯವಂತನಾಗುತ್ತಾನೆ ಎಂಬ ಆಸೆ/ನಂಬಿಕೆಗಳಿಂದ ಅವರು ಅವಳು ಕೇಳಿದಂತೆ ಸುಖವಾಗಿ ಪ್ರಯಾಣಮಾಡಲು ಅನುಕೂಲವಾದ ಸೌಕರ್ಯಗಳನ್ನು ಏರ್ಪಡಿಸಿದರು. ಪಲ್ಲಕ್ಕಿಯೊಂದರಲ್ಲಿ, ರೋಗಿ ಸುಖವಾಗಿ ಮಲಗಿ ಪ್ರಯಾಣಮಾಡಲನುಕೂಲವಾಗುವಂತೆ ಎಲ್ಲವನ್ನೂ ಸಿದ್ಧಪಡಿಸಿ, ಅವಳು ಅತ್ತೆಮಾವಂದಿರಿಗೆ, "ನೀವು ಘಟ್ಟಿಮನಸ್ಸು ಮಾಡಿ ಚಿಂತೆಯಿಲ್ಲದೆ ಮನೆಯಲ್ಲಿರಿ. ನನ್ನ ಪ್ರಾಣೇಶ್ವರನನ್ನು ನನ್ನ ಕುಲದೈವವೇ ರಕ್ಷಿಸುತ್ತಾನೆ." ಎಂದು ದೃಢವಾಗಿ ಹೇಳಿ, ಅವರಿಗೆ ನಮಸ್ಕರಿಸಿದಳು. ಅವರು ಅವಳನ್ನು, "ಅಮ್ಮ, ಸೌಭಾಗ್ಯವತಿ, ನಿನ್ನ ಸೌಭಾಗ್ಯದಿಂದ ನಮ್ಮ ಮಗ ಜೀವಿಸಲಿ. ಹೋಗಿ ಬಾ." ಎಂದು ಹೇಳಿ, ತುಂಬುಮನದಿಂದ ಆಶೀರ್ವಾದಮಾಡಿ, ಅವರಿಬ್ಬರನ್ನೂ ಕಳುಹಿಸಿಕೊಟ್ಟರು. 

ಆ ಪತಿಪರಾಯಣೆ ತನ್ನ ಗಂಡನಿಗೆ ತೊಂದರೆಯಾಗದಂತೆ ಪ್ರಯಾಣಮಾಡುತ್ತಾ, ಭೀಮಾನದೀತೀರವನ್ನು ಸೇರಿದಳು. ಬಹಳ ದೂರ ಪ್ರಯಾಣಮಾಡಿದ್ದರಿಂದ ದತ್ತನು ಬಹಳ ಆಯಾಸಗೊಂಡಿದ್ದನು. ಅದರಿಂದ ಅವನನ್ನು ಗ್ರಾಮಸರಹದ್ದಿನಲ್ಲಿ ಇಳಿಸಿ, ಅವನಿಗೆ ಬೇಕಾದ ಆಹಾರ, ಔಷಧೋಪಚಾರಗಳಿಗೆ ಏರ್ಪಾಡುಮಾಡಿ ಊರೊಳಕ್ಕೆ ಹೋಗಿ ಶ್ರೀಗುರುವು ಎಲ್ಲಿರುತ್ತಾರೆ ಎಂದು ವಿಚಾರಿಸಿದಳು. ಅವರು ಸ್ನಾನಕ್ಕೆ ಹೋಗಿದ್ದಾರೆಂದು ತಿಳಿದು ತನ್ನ ಗಂಡನನ್ನು ಕರೆದುಕೊಂಡು ಅಲ್ಲಿಗೆ ಹೋಗಬೇಕೆಂದು ತನ್ನ ಗಂಡನಿದ್ದಲ್ಲಿಗೆ ಬಂದಳು. ಅಷ್ಟರಲ್ಲಿ ಪ್ರಯಾಣದಿಂದಾದ ಆಯಾಸವನ್ನು ತಡೆಯಲಾರದೆ ದತ್ತನು ಇದ್ದಲ್ಲಿಯೇ ಪ್ರಾಣಬಿಟ್ಟಿದ್ದನು. ಅದನ್ನು ಕಂಡ ಅವಳು, "ಅಯ್ಯೋ, ನನ್ನಿಂದಾಗಿ ನನ್ನ ಗಂಡ ಮರಣಹೊಂದಿದ." ಎಂದು ದುಃಖಪಡುತ್ತಾ, ತಾನೂ ಸಾಯಲು ಸಿದ್ಧಳಾದಳು. ಅಲ್ಲಿ ಸೇರಿದ್ದವರೆಲ್ಲರೂ ಆ ಪ್ರಯತ್ನದಿಂದ ಅವಳನ್ನು ನಿವಾರಿಸಿ, ಸಾಂತ್ವನ ಹೇಳಲು ನೋಡಿದರು. ಆದರೆ ಅವಳು, "ಅಯ್ಯೋ, ದೈವವೇ! ನನಗೆ ಎಂತಹ ಗತಿಯನ್ನು ತಂದಿಟ್ಟೆ! ನೀನೇ ನನಗೆ ರಕ್ಷಕನೆಂದು, ನಿನ್ನಮೇಲೆ ಭರವಸೆಯಿಟ್ಟು, ನಾನು ನನ್ನ ಗಂಡನನ್ನು ಇಲ್ಲಿಯವರೆಗೂ ಕರೆತಂದೆ. ಆದರೆ, ಪೂಜೆಗೆಂದು ದೇವಾಲಯಕ್ಕೆ ಹೋದರೆ ದೇವಾಲಯವೇ ತಲೆಯಮೇಲೆ ಕುಸಿದುಬಿದ್ದಂತೆ, ಬಾಯಾರಿಕೆಯೆಂದು ನೀರು ಕುಡಿಯಲು ನದಿಗೆ ಹೋದರೆ ಮೊಸಳೆಯ ಬಾಯಿಗೆ ಸಿಕ್ಕಿಬಿದ್ದಂತೆ ನನ್ನ ಗತಿಯಾಯಿತು. ನನಗೆ ಎಂತಹ ಕಷ್ಟಬಂತು. ನನ್ನಂತಹ ದುರದೃಷ್ಟಳು ಇನ್ನಾರಿದ್ದಾರೆ? ಅತ್ತೆಮಾವಂದಿರನ್ನೂ, ತಂದೆತಾಯಿಗಳನ್ನೂ ಬಿಟ್ಟು, ದೂರದೂರಿಗೆ ಬಂದು, ಪತಿಘಾತಿನಿಯಾಗಿ, ಕಷ್ಟಕ್ಕೆ ಗುರಿಯಾದೆ." ಎಂದು ದುಃಖದಿಂದ ಕಣ್ಣೀರಿಡುತ್ತಿದ್ದ ಅವಳನ್ನು, ಅಲ್ಲಿದ್ದ ಜನರು, "ವ್ಯರ್ಥವಾಗಿ ಅಳುವುದರಿಂದ ಪ್ರಯೋಜನವೇನು? ನಿನ್ನ ಅಳುವನ್ನು ನಿಲ್ಲಿಸಿ ಮುಂದಾಗಬೇಕಾದ ಕಾರ್ಯಗಳ ಬಗ್ಗೆ ಯೋಚಿಸು. ವಿಧಿಲಿಖಿತವನ್ನು ಬದಲಾಯಿಸಲು ಸಾಧ್ಯವೇ?" ಎಂದು ಅನೇಕವಿಧಗಳಲ್ಲಿ ಅವಳಿಗೆ ತಿಳಿಯಹೇಳಲು ನೋಡಿದರು. ಆದರೆ ಅದರಿಂದ ಅವಳ ದುಃಖ ಇನ್ನೂ ಹೆಚ್ಚಾಗಿ, ಗಂಡನೊಡನಿದ್ದಾಗ ಅನುಭವಿಸಿದ ಹಿಂದಿನ ಸಂಗತಿಗಳನ್ನು ನೆನಸಿಕೊಂಡು, "ತಾಯಂದಿರಾ, ನಾನು ಏನು ಹೇಳಲಿ? ಇನ್ನು ನಾನು ಹೇಗೆ ಜೀವಿಸಿರಬಲ್ಲೆ? ಬೆಟ್ಟದಷ್ಟು ಆಸೆಯಿಟ್ಟು ನಾನು ನನ್ನ ಗಂಡನನ್ನೂ ಕರೆದುಕೊಂಡು ಶ್ರೀಗುರುವಿನ ಸನ್ನಿಧಿಗೆ ಬಂದೆ. ಅವರೇ ಕೈಬಿಟ್ಟಮೇಲೆ ನನ್ನನ್ನು ಇನ್ನಾರು ರಕ್ಷಿಸುತ್ತಾರೆ? ಗಂಡನಿಲ್ಲದೆ ನಾನು ಹೇಗೆ ಬದುಕಿರಬಲ್ಲೆ? ಸಣ್ಣವಳಾಗಿದ್ದಾಗಿನಿಂದಲೂ ಗೌರಿಶಂಕರರ ಪೂಜೆ ಮಾಡಿದೆ. ಮದುವೆಯಾದಮೇಲೆ ಆ ಪೂಜೆಯೊಡನೆ ತಾಯಿ ಭವಾನಿದೇವಿಯನ್ನು ಸೌಭಾಗ್ಯ ಕೋರಿ ದಿನವೂ ಪೂಜೆಮಾಡಿದೆ. ನನ್ನ ಗಂಡನೊಡನೆ ಸುಖಸಂತೋಷಗಳಿಂದ ಇರಬೇಕೆಂಬ ಆಸೆಯಿಂದ ಸುಮಂಗಲಿಯರು ಹೇಳಿದ ವ್ರತಪೂಜಾದಿಗಳನ್ನು ತಪ್ಪದೇ ಮಾಡಿದೆ. ಎಲ್ಲವೂ ವ್ಯರ್ಥವಾದವು. ನಾನು ಗಳಿಸಿದ್ದ ಪುಣ್ಯವೆಲ್ಲಾ ಏನಾಯಿತು? ಇನ್ನು ನನಗೇನು ಗತಿ? ನನ್ನ ಗಂಡನ ಹಾಗೆ ನನ್ನನ್ನು ನೋಡಿಕೊಳ್ಳುವವರು ಇನ್ನಾರಿದ್ದಾರೆ? ಅಯ್ಯೋ, ನನ್ನ ಗತಿ ಹೀಗಾಯಿತಲ್ಲಾ?’ ಎಂದು ಅತ್ಯಂತ ದುಃಖದಿಂದ ಪ್ರಲಾಪಿಸಿದಳು. ಗಂಡನ ಮುಖವನ್ನು ಮತ್ತೆ ಮತ್ತೆ ನೋಡುತ್ತಾ, ಅವನ ಜೊತೆಯಲ್ಲಿ ಕಳೆದ ಹಿಂದಿನ ದಿನಗಳನ್ನು ನೆನಸುತ್ತಾ, "ಸ್ವಾಮಿ, ಹೀಗೇಕೆ ನನ್ನೊಬ್ಬಳನ್ನೇ ಬಿಟ್ಟು ಹೊರಟು ಹೋದಿರಿ? ನಿಮ್ಮ ಮಾತನ್ನು ನಾನು ಎಂದೂ ಕಡೆಗಣಿಸಲಿಲ್ಲವಲ್ಲ. ಹೇ ನಾಥ, ನೀವು ನನಗೆ ಸಿಕ್ಕ ನಿಧಿಯೆಂದುಕೊಂಡಿದ್ದೆ. ಈಗ ನನ್ನಿಂದಾಗಿಯೇ ಆ ನಿಧಿ ಕಳೆದುಹೋಯಿತು. ನಿಮ್ಮವರೆಲ್ಲರನ್ನೂ ದೂರಮಾಡಿ ನಿಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದು ನಿಮ್ಮ ಸಾವಿಗೆ ಕಾರಣಳಾದೆ. ನಿಮ್ಮ ತಂದೆತಾಯಿಯರಿಗೆ ಈ ವಿಷಯ ತಿಳಿದರೆ ಅವರು ತಕ್ಷಣವೇ ಪ್ರಾಣಬಿಡುತ್ತಾರೆ. ಹಾಗೆ ನಾನು ಅತ್ತೆಮಾವಂದಿರನ್ನು ಕೊಂದ ಹಂತಕಳಾದೆ. ಅಯ್ಯೋ, ಪ್ರಾಣೇಶ್ವರ, ನಾನೇ ನಿನಗೆ ಶತೃವಾದೆ. ಪತಿಘಾತಿನಿಯೆಂದು ನನ್ನನ್ನು ಎಲ್ಲರೂ ನಿಂದಿಸುತ್ತಾರೆ. ಒಬ್ಬನೇ ಮಗನಾದ ನೀನು ಪ್ರಾಣಬಿಡುವ ಸಮಯದಲ್ಲಿ ನಿನ್ನ ತಂದೆತಾಯಿಯರು ನಿನ್ನ ಬಳಿ ಇರಲಾಗದೇ ಹೋದುದಕ್ಕೆ ಅವರೆಷ್ಟು ಸಂಕಟಪಡುತ್ತಾರೋ ಏನೋ? ಆ ಸಮಯದಲ್ಲಿ ನಿನ್ನನ್ನು ಇಲ್ಲಿಗೆ ಕರೆದು ತಂದ ನಾನೂ ನಿನ್ನ ಬಳಿ ಇರಲಾರದೇ ಹೋದೆ. ಅಯ್ಯೋ, ಎಂತಹ ದುಃಸ್ಥಿತಿ ಬಂತು ನನಗೆ! ವೃದ್ಧರಾದ ನಿನ್ನ ತಂದೆತಾಯಿಗಳ ಕೋರಿಕೆಗಳನ್ನು ತೀರಿಸದೆ, ಅವರನ್ನು ನನ್ನನ್ನೂ ಬಿಟ್ಟು ಎಲ್ಲಿಗೆ ಹೋದೆ ನಾಥ? ದೀನಳೂ, ದಿಕ್ಕಿಲ್ಲದವಳೂ, ನತದೃಷ್ಟಳೂ ಆದ ನನ್ನನ್ನು ಇನ್ನು ಯಾರು ಕಾಪಾಡುತ್ತಾರೆ? ನನ್ನೊಡನೆ ಒಂದು ಮಾತನ್ನೂ ಆಡದೆ ಹೊರಟುಹೋದೆಯಲ್ಲಾ ಸ್ವಾಮಿ? ನೀನೇ ನನಗೆ ಆಸರೆಯಲ್ಲವೇ? ನಿನ್ನನ್ನು ನಾನು ಹೇಗೆ ತಾನೇ ಮರೆಯಲಿ? ನೀನಿಲ್ಲದ ಬದುಕು ಹೇಗೆ ಎಂಬುದನ್ನು ನೆನಸಿಕೊಂಡರೆ ಹೃದಯ ಛಿದ್ರವಾಗುತ್ತದೆ. ನೀನಿಲ್ಲದೆ ನನಗೆಂತಹ ಜೀವನ ಸ್ವಾಮಿ? ನನ್ನ ಪ್ರಾಣವಾದ ನೀವು, ನಿಮ್ಮ ಈ ಧರ್ಮಪತ್ನಿಯನ್ನು ಬಿಟ್ಟು ಎಲ್ಲಿಗೆ ಹೋದಿರಿ ಸ್ವಾಮಿ? ನನ್ನನ್ನು ಒಂಟಿಯಾಗಿ ಬಿಟ್ಟು ನೀನೊಬ್ಬನೇ ಎಲ್ಲಿಗೆ ಹೋದೆ ಸ್ವಾಮಿ? ಗಂಡನನ್ನು ಕೊಂದ ವಿಧವೆಯೆಂದು ಎಲ್ಲರೂ ನನ್ನಮೇಲೆ ಅಪವಾದ ಹೊರೆಸಿ, ನನ್ನನ್ನು ಹೀಯಾಳಿಸಿ ಅವಮಾನಮಾಡುವುದಿಲ್ಲವೇ? ನಿನ್ನ ಸಹವಾಸದಲ್ಲಿ ನಾನು ನನ್ನ ತಂದೆತಾಯಿಯರನ್ನೂ ಮರೆತಿದ್ದೆ. ಅವರು ಕರೆದರೂ ನಿನ್ನ ಸಹವಾಸ ತಪ್ಪುತ್ತದೆ ಎಂದು ನಾನು ಅವರಲ್ಲಿಗೆ ಹೋಗಲಿಲ್ಲ. ಅಂಥ ನನ್ನನ್ನು ಒಂಟಿಯಾಗಿ ಮಾಡಿ ಹೋದೆಯಾ ಸ್ವಾಮಿ? ಈಗ ನಾನು ಅವರ ಬಳಿಗೆ ಯಾವ ಮುಖವಿಟ್ಟುಕೊಂಡು ಹೋಗಲಿ? ನಿನ್ನ ಆಸರೆಯಲ್ಲಿದ್ದೇನೆಂದು ಎಲ್ಲರೂ ನನ್ನನ್ನು ಆದರದಿಂದ ಕಂಡರು. ಆದರೆ ಈಗ ಈ ಗಂಡನಿಲ್ಲದವಳನ್ನು ಯಾರು ಆದರಿಸುತ್ತಾರೆ? ಆರೋಗ್ಯವಂತನನ್ನಾಗಿ ಮಾಡಿ ಹಿಂತಿರುಗಿ ಕರೆದು ತರುತ್ತೇನೆ ಎಂದು ಅತ್ತೆಮಾವಂದಿರನ್ನು ನಂಬಿಸಿ ನಿನ್ನನ್ನು ಇಲ್ಲಿಗೆ ಕರೆತಂದೆ. ಈಗ ಹೀಗಾಯಿತು. ನಂಬಿಕೆದ್ರೋಹಿಯಾದ ನನ್ನ ಈ ಕೆಟ್ಟ ಮುಖವನ್ನು ನೋಡಿದರೆ ಅವರು ಕೂಡಲೇ ಪ್ರಾಣಬಿಡುತ್ತಾರೆ. ನಿನ್ನ ಜೊತೆಯಿಲ್ಲದೆ ನಾನೊಬ್ಬಳೇ ಹೇಗೆ ಹಿಂತಿರುಗಿಹೋಗಲಿ? ನಾನೊಬ್ಬಳು ಮಹಾಪಾಪಿ." ಎಂದು ನಾನಾ ವಿಧವಾಗಿ ಆವಳು ಪ್ರಲಾಪಿಸುತ್ತಿದ್ದಳು.  

ಆ ಸಮಯದಲ್ಲಿ ಅಲ್ಲಿಗೆ ಭಸ್ಮೋದ್ಧೂಳಿತ, ಜಟಾಧಾರಿ, ರುದ್ರಾಕ್ಷಿ ಧರಿಸಿದ, ತ್ರಿಶೂಲಹಸ್ತನಾದ ಒಬ್ಬ ತಾಪಸಿ ಬಂದನು. ಕಣ್ಣೀರಿಡುತ್ತಿದ್ದ ಅವಳ ಎದುರಿಗೆ ಬಂದು ನಿಂತ ಆ ತಾಪಸಿ, ಅವಳನ್ನು ಸಾಂತ್ವನಗೊಳಿಸುತ್ತಾ, "ಅಮ್ಮಾ, ಮೂರ್ಖಳಂತೆ ಏಕೆ ಅಳುತ್ತಿದ್ದೀಯೆ? ಹಣೆಯ ಬರಹವನ್ನು ತಪ್ಪಿಸಲು ಸಾಧ್ಯವೇ? ಅದು ನಿನ್ನ ಬೆನ್ನಂಟಿಯೇ ಬರುತ್ತಿರುವಾಗ ನೀನು ಅನವಶ್ಯಕವಾಗಿ ದುಃಖಿಸುತ್ತಿದ್ದೀಯಲ್ಲವೇ? ನೀನು ಎಷ್ಟು ದಿನಗಳು ಹೀಗೆ ಕಣ್ಣೀರಿಟ್ಟರೂ ಅವನ ಪ್ರಾಣ ಹಿಂತಿರುಗಿ ಬರುವುದಿಲ್ಲ ಅಲ್ಲವೇ? ಮೂಢಳಾಗಿ ದುಃಖಪಡುತ್ತಿದ್ದೀಯೆ. ಈ ಭೂಮಿಯಲ್ಲಿ ಚಿರಂಜೀವಿಯಾದವನು ಯಾರಿದ್ದಾನೆ? ಮೃತ್ಯುವನ್ನು ಮೀರಿದವರು ಯಾರಾದರೂ ಇದ್ದಾರೆಯೇ ನನಗೆ ಹೇಳು. ಇವನನ್ನು ನಿನ್ನ ಗಂಡನೆಂದು ಹೇಳುತ್ತಿದ್ದೀಯೆ. ಇವನು ಎಲ್ಲಿಂದ ಬಂದ, ಎಲ್ಲಿಗೆ ಹೋದ ಎಂದು ಹೇಳಬಲ್ಲೆಯಾ? ನೀನಾರು? ನಿನ್ನ ಗಂಡ ಯಾರು? ನಿನ್ನ ತಂದೆತಾಯಿಗಳು ಯಾರು? ನೀರಿನ ಪ್ರವಾಹದಲ್ಲಿ ಒಟ್ಟಿಗೇ ತೇಲಿಬಂದ ಕಟ್ಟಿಗೆಯ ತುಂಡುಗಳು ಒಂದು ಕ್ಷಣ ಎಲ್ಲವೂ ಒಟ್ಟುಗೂಡಿಕೊಂಡಿದ್ದು ಮತ್ತೆ ಬೇರೆಬೇರೆಯಾಗಿ ಹೊರಟು ಹೋಗುವುವು. ಅದರಂತೆಯೇ ಈ ಪ್ರಪಂಚದಲ್ಲಿಯೂ ಕೂಡಾ ಎಲ್ಲರೂ ಎಲ್ಲೆಲ್ಲಿಂದಲೋ ಬಂದು ನಾಲ್ಕುದಿನ ಒಟ್ಟಿಗಿದ್ದು ಮತ್ತೆ ಬೇರೆಬೇರೆಯಾಗಿ ಹೊರಟು ಹೋಗುತ್ತಾರೆ. ಹುಟ್ಟಿದವನಾರು? ಸತ್ತವನಾರು? ಮಾಯಾಮೋಹಿತರಾಗಿ ಇವನು ನನ್ನ ಗಂಡ, ಇವನು ನನ್ನ ಮಗ, ಇವಳು ನನ್ನ ಹೆಂಡತಿ ಎಂದುಕೊಳ್ಳುವುದೆಲ್ಲವೂ ಬರಿಯ ಭ್ರಮೆಯೇ! ನೀರಿನಲ್ಲಿ ಹುಟ್ಟಿದ ಗುಳ್ಳೆ ಕ್ಷಣಕಾಲವಿದ್ದು ಒಡೆದುಹೋಗುವಂತೆ ಕರ್ಮಬಂಧಗಳಿಂದ ಆದ ಈ ದೇಹವು ಕ್ಷಣಕಾಲವಿದ್ದು ಹೋಗುವುದು. ಅದಕ್ಕಾಗಿ ಶೋಕಿಸುವುದು ವ್ಯರ್ಥ. ಈ ದೇಹದೊಳಗೆ ಇರುವ ಆತ್ಮವನ್ನು ಕುರಿತು ಯೋಚಿಸದೆ, ಈ ಜಡದೇಹವನ್ನೇ ನನ್ನದೆಂದು ಹೇಳುತ್ತಿದ್ದೀಯೆ. ಪಂಚಭೂತಾತ್ಮಕವಾದ ಈ ದೇಹವು ಕರ್ಮಾನುಸಾರವಾಗಿ ಲಭಿಸುವಂತಹುದು. ಅದಕ್ಕೆ ಪ್ರಾಧಾನ್ಯವೇಕೆ? ಕರ್ಮವೇ ಸುಖದುಃಖಗಳಿಗೆ ಮೂಲವು. ಮಾಯಾವೃತವಾದ, ಕಣ್ಣಿಗೆ ಕಾಣುವಂತಹ ಪದಾರ್ಥಗಳೆಲ್ಲವೂ ಅನಿತ್ಯಗಳೇ! ಆತ್ಮನು ತ್ರಿಗುಣಾತೀತನು. ತ್ರಿಗುಣಸ್ವರೂಪವಾದದ್ದು ಮಾಯೆಯೇ! ಆತ್ಮನಿಗೆ ಗುಣಗಳೊಡನೆ ಯಾವ ಸಂಬಂಧವೂ ಇಲ್ಲ. 

ಹುಟ್ಟಿದ ಜಂತುಗಳೆಲ್ಲವೂ ಕರ್ಮಾಧೀನವು. ಸುಖದುಃಖಗಳೆನ್ನುವುವು ನಮ್ಮ ಕರ್ಮಾನುಸಾರವಾಗಿ ತ್ರಿಗುಣಗಳನ್ನನುಸರಿಸಿ ಬರುವುವು. ದೇವತೆಗಳ ಆಯುಸ್ಸು ಮನುಷ್ಯನ ಆಯುಸ್ಸಿಗಿಂತ ಲಕ್ಷಾಂತರ ವರ್ಷಗಳಷ್ಟು ಹೆಚ್ಚಾದದ್ದು. ಆದರೆ ಅವರೂ ಕೂಡಾ ಕಾಲಾಧೀನರೇ! ಕಲ್ಪಾಂತದಲ್ಲಿ ಇಲ್ಲವಾಗುವವರೇ! ಇನ್ನು ಮಾನವನ ಕಥೆಯನ್ನು ಏನೆಂದು ಹೇಳಬೇಕು? ‘ಕಾಲ’ ನಮ್ಮ ಜೊತೆಯಲ್ಲಿಯೇ ಬಂದಿದೆ. ಈ ನಮ್ಮ ಶರೀರ ಕಾಲಾಧೀನ. ಇದನ್ನು ಸ್ಥಿರ ಮಾಡಬಲ್ಲವರು ಯಾರು? ಪಂಚಭೂತ/ತ್ರಿಗುಣಗಳಿಂದಾದ ಈ ದೇಹವು ಕಾಲಕ್ಕೆ ಅಧೀನವಾಗಿದೆಯಲ್ಲವೇ? ಅದರಿಂದಲೇ ಜ್ಞಾನಿಗಳು ಈ ದೇಹ ಹುಟ್ಟಿದಾಗ ಸಂತೋಷಪಡುವುದಿಲ್ಲ. ಸತ್ತಾಗ ದುಃಖಿಸುವುದಿಲ್ಲ. ಪ್ರಾರಬ್ಧ ಕರ್ಮವಿರುವವರೆಗೂ ಈ ದೇಹವಿರುವುದು. ಕೆಲವರು ಬಾಲ್ಯದಲ್ಲಿ, ಕೆಲವರು ಯುವಕರಾಗಿ, ಕೆಲವರು ವಾರ್ಧಕ್ಯದಲ್ಲಿ ಮರಣಿಸುತ್ತಾರೆ. ಆರ್ಜಿಸಿದಷ್ಟೇ ಮಾನವನಿಗೆ ಇಹಲೋಕದಲ್ಲಿ ಸ್ಥಾನವಿರುವುದು. ಪೂರ್ವಾರ್ಜಿತ ಕರ್ಮಫಲಾನುಸಾರವಾಗಿ ಈ ದೇಹವು ಸುಖದುಃಖಗಳನ್ನನುಭವಿಸುವುದು. ಪಾಪಪುಣ್ಯಗಳನ್ನನುಸರಿಸಿಯೇ ಸ್ತ್ರೀಯರು ಮುಂತಾದ ಸಂಬಂಧಗಳು ಏರ್ಪಡುತ್ತವೆ. ಪಾಪಪುಣ್ಯಗಳನ್ನು ಹಿಡಿದೇ ಸುಖದುಃಖ ಪ್ರಾಪ್ತಿ, ಹಾನಿ, ಆಯುಸ್ಸು, ಮರಣಗಳು ಉಂಟಾಗುತ್ತಿರುತ್ತವೆ. ಹೇಗೆ? ಒಮ್ಮೆ ಪುಣ್ಯವಶಾತ್ ದುಷ್ಕರ್ಮಗಳನ್ನು ತೊಲಗಿಸಿಕೊಳ್ಳಬಹುದು. ಆದರೆ ದೇವತೆಗಳಿಗೆ, ಮಾನವರಿಗೆ, ದಾನವರಿಗೆ ಕೂಡಾ ಕಾಲವನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ. ನೂರು ಜನ್ಮಗಳಿಗೆ ಮುಂಚೆ ನೀನು ಯಾರ ಹೆಂಡತಿಯಾಗಿದ್ದೆ? ಹಾಗೆಯೇ ಇನ್ನು ಮುಂದೆ ಯಾರ ಹೆಂಡತಿಯಾಗುತ್ತೀಯೆ? ನೀನು ವ್ಯರ್ಥವಾಗಿ ದುಃಖಪಡುತ್ತಿದ್ದೀಯೆ. ಅದನ್ನು ಯೋಚಿಸುವುದೂ ನಿನ್ನ ಮೂರ್ಖತ್ವವೇ! ಚರ್ಮ, ಮಾಂಸ, ರಕ್ತ, ಕೊಬ್ಬು, ಮೂಳೆ, ಶ್ಲೇಷ್ಮ, ಮಲಮೂತ್ರಸ್ವರೂಪವಾದ ಈ ದೇಹವು ಒಳಗೂ ಹೊರಗೂ ಅಸಹ್ಯ ಉಂಟುಮಾಡುವಂತಹುದು. ಹೀಗೆ ಅಸಹ್ಯವಾದ ಈ ದೇಹವನ್ನು ಸ್ವಾರ್ಥದಿಂದ ನೋಡುವುದೇತಕ್ಕೆ? ಮಲಮೂತ್ರಾದಿಗಳಿಂದ ಕೂಡಿದ ಈ ದೇಹವನ್ನು ಶ್ರೇಷ್ಠವೆಂದುಕೊಳ್ಳುವುದೇಕೆ? ಸಂಸಾರಸಾಗರವನ್ನು ದಾಟಲು ಏನು ಮಾಡಬೇಕೋ ಅದನ್ನು ಯೋಚಿಸು." ಎಂದು ಆ ತಾಪಸಿಯು ಉಪದೇಶಿಸಿದನು.

ಆ ಪತಿವ್ರತೆ ಹಾಗೆ ಆ ತಾಪಸಿಯಿಂದ ಉಪದೇಶ ಪಡೆದವಳಾಗಿ, ದುಃಖಿತಳಾಗಿದ್ದರೂ, ಅವನ ಉಪದೇಶದಲ್ಲಿನ ಸ್ನೇಹಭಾವವನ್ನು ತಿಳಿದುಕೊಂಡು, ಶೋಕವನ್ನು ಬಿಟ್ಟಳು. ಕೈಜೋಡಿಸಿ, ಅವನ ಪಾದಗಳಲ್ಲಿ ಶಿರಸ್ಸಿಟ್ಟು, ವಿನೀತಳಾಗಿ, ಕರುಣೆಹುಟ್ಟುವಂತೆ, "ಸ್ವಾಮಿ, ನನ್ನನ್ನುದ್ಧರಿಸು. ನಾನು ಯಾವ ಮಾರ್ಗದಲ್ಲಿ ನಡೆಯಬೇಕೋ ಅದನ್ನು ತಿಳಿಸು. ದಯಾನಿಧಿ, ನೀನೇ ನನ್ನ ತಾಯಿ. ನೀನೇ ನನ್ನ ತಂದೆ. ನನ್ನನ್ನು ರಕ್ಷಿಸು. ನೀನು ಆಜ್ಞಾಪಿಸಿದ ಹಾಗೆ ನಾನು ನಡೆದುಕೊಳ್ಳುತ್ತೇನೆ." ಎಂದು ಆ ತಾಪಸಿಯನ್ನು ಕೋರಿದಳು. ಅವಳ ಮಾತುಗಳನ್ನು ಕೇಳಿ ಪ್ರಸನ್ನನಾದ ಆ ತಾಪಸಿ, ಸ್ತ್ರೀಯರಿಗೆ ಧರ್ಮಬದ್ಧವಾದ, ಉಭಯತಾರಕವಾದ ಆಚಾರವನ್ನು ಉಪದೇಶಿಸಿದನು.

ಇಲ್ಲಿಗೆ ಮುವ್ವತ್ತನೆಯ ಅಧ್ಯಾಯ ಮುಗಿಯಿತು.

2 comments:

  1. ಶ್ರೀಯುತರೇ,

    ಶ್ರೀಗುರು ಚರಿತ್ರೆ ಈ ಕೆಳಗಿನ ಅಧ್ಯಾಯಗಳನ್ನು ಸೇಪ೯ಡೆಮಾಡಿ ಸಹಕರಿಸಿ.


    ೨೯ ಸೇಪ೯ಡೆಮಾಡಿ ಸಹಕರಿಸಿ.
    ೩೦ ಸೇಪ೯ಡೆಮಾಡಿ ಸಹಕರಿಸಿ.
    ೩೨ ಅರ್ಧ ಅಧ್ಯಾಯ ಇದೆ-- ಸಂಪೂರ್ಣ ಸೇಪ೯ಡೆಮಾಡಿ ಸಹಕರಿಸಿ.
    ೩೩ ಸೇಪ೯ಡೆಮಾಡಿ ಸಹಕರಿಸಿ.
    ೪೧ ಸೇಪ೯ಡೆಮಾಡಿ ಸಹಕರಿಸಿ.
    ೪೨ ಸೇಪ೯ಡೆಮಾಡಿ ಸಹಕರಿಸಿ.
    ೫೩ ಸೇಪ೯ಡೆಮಾಡಿ ಸಹಕರಿಸಿ.

    ತುಂಬಾ ಚೆನ್ನಾಗಿದೆ. ಶ್ರೀಯುತರೇ, ದಯವಿಟ್ಟು ತಪ್ಪಿಹೋಗಿರುವ ಅಧ್ಯಾಯಗಳನ್ನು ಸೇಪ೯ಡೆಮಾಡಿ ಸಹಕರಿಸಿ.


    ReplyDelete
  2. Sri Guru Charithre has narrated very well in this Blog, Glad for the writer and thanks for the blogger. A kind and a sincere request to add those 29-30-32-33-41-42-52 Adhyayas also....awaiting for ur addition...Thanks in advanced

    Regards
    RAKESH PUTTARAJ

    ReplyDelete