Thursday, April 11, 2013

||ಶ್ರೀಗುರು ಚರಿತ್ರೆ - ಮೂವತ್ತೊಂದನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
 ||ಶ್ರೀಗುರುಭ್ಯೋನಮಃ||

ಅಯ್ಯಾ, ನಾಮಧಾರಕ, ಅದು ಅಪೂರ್ವವಾದದ್ದು. ಯೋಗೀಶ್ವರನೇ ಕಾರಣಿಕನಾಗಿ ಸ್ತ್ರೀ ಧರ್ಮಗಳನ್ನು ಹೇಳಿದನು. ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು. ಅವಳಿಗೆ ಗುರುವು ಹೀಗೆ ಬೋಧಿಸಿದನು. "ಹೇ ಸಾಧ್ವಿ. ಈ ಆಚಾರಗಳು ಭವಸಾಗರದಿಂದ ತರಿಸಬಲ್ಲವು. ಗಂಡ ಜೀವಂತನಾಗಿರುವ ಸಮಯದಲ್ಲಿ ಆಚರಿಸ ಬೇಕಾದ ನಾರಿ ಧರ್ಮಗಳನ್ನು, ಗಂಡ ಸತ್ತ ಮೇಲೆ ಆಚರಿಸ ಬೇಕಾದ ನಾರಿ ಧರ್ಮಗಳನ್ನು ಹೇಳುತ್ತೇನೆ. ಸ್ಕಾಂದ ಪುರಾಣದಲ್ಲಿ ಕಾಶೀ ಖಂಡದಲ್ಲಿ ಬಹು ವಿಸ್ತಾರವಾಗಿ ಇರುವ ಈ ಸ್ತ್ರೀ ಧರ್ಮಗಳು ಬಹು ವಿಧಗಳು. ಅವನ್ನು ಏಕಾಗ್ರ ಚಿತ್ತಳಾಗಿ ಕೇಳು. ಕಾಶಿ ನಗರದಲ್ಲಿ ಮಹಾಮುನಿಯಾದ ಅಗಸ್ತ್ಯ ಮಹರ್ಷಿಯು ವಾಸಿಸುತ್ತಿದ್ದನು. ಲೋಪಾಮುದ್ರ ಅಗಸ್ತ್ಯನ ಪತ್ನಿ. ಆಕೆ ಮಹಾಸಾಧ್ವಿ. ಪ್ರಾಜ್ಞಳು. ಪತಿವ್ರತಾ ಶಿರೋಮಣಿ. ಆ ದಂಪತಿಗಳು ಕಾಶೀಪುರಕ್ಕೆ ಅಲಂಕಾರ ಪ್ರಾಯರಾಗಿ ಧರ್ಮಾಚರಣೆ ಮಾಡುತ್ತಿದ್ದರು. ಅಗಸ್ತ್ಯನಿಗೆ ವಿಂಧ್ಯನೆಂಬ ಮಹಾ ಶೈಲನು ಶಿಷ್ಯನಾಗಿದ್ದನು. ಭೂಲೋಕದಲ್ಲಿ ಪರ್ವತ ರೂಪನಾಗಿ ಅವನು ಗುರುವಿಗೆ ಪ್ರಿಯವನ್ನಾಚರಿಸುತ್ತಿದ್ದನು. ಆ ಪರ್ವತನು ನಾನಾ ವೃಕ್ಷಗಳು, ನಾನಾ ಲತೆಗಳು, ಪುತ್ರೀ ಸಮಾನರಾದ ನದಿಗಳಿಂದ ಕೂಡಿದ್ದನು. ಒಂದು ಸಲ ಬ್ರಹ್ಮರ್ಷಿಯಾದ ನಾರದನು ಪರ್ಯಟನೆ ಮಾಡುತ್ತಾ, ಆ ಪರ್ವತಕ್ಕೆ ಬಂದನು. ವಿಂಧ್ಯಾಚಲವನ್ನು ನೋಡಿ ಸಂತುಷ್ಟನಾದ ನಾರದನು ವಿಂಧ್ಯಾದ್ರಿಗೆ, " ಅಯ್ಯಾ ನಿನ್ನ ಸಮಾನರು ನನ್ನ ಕಣ್ಣಿಗೆ ಬೀಳಲಿಲ್ಲ. ನಿನ್ನ ಮೇಲೆ ರತ್ನ ಮಯವಾದ ಮಹಾಭೂಮಿಗಳು, ವೃಕ್ಷಗಳು, ಇವೆ. ಆದರೆ ಒಂದೇ ಕಡಮೆ. ಔನ್ನತ್ಯದಲ್ಲಿ ನೀನು ಮೇರು ಪರ್ವತದಂತಹವನು ಅಲ್ಲ. ಅವನಿಗಿಂತ ಸ್ವಲ್ಪ ಕೆಳಗೆ ಇರುವಂತೆ ಕಾಣುತ್ತಿದ್ದೀಯೆ" ಎಂದು ಹೇಳಿದನು. ನಾರದನು ಹಾಗೆ ಹೇಳುತ್ತಲೇ ವಿಂಧ್ಯ ಪರ್ವತನು ಕೋಪಗೊಂಡನು. ಕ್ಷಣ ಕಾಲದಲ್ಲಿ ಮೇರುವನ್ನು ತುಚ್ಛವಾಗಿ ಮಾಡುವ ಪ್ರಯತ್ನದಲ್ಲಿ ಬೆಳೆಯಲಾರಂಭಿಸಿದನು. ಹಾಗೆ ಬೆಳೆಯುತ್ತಿದ್ದ ವಿಂಧ್ಯನು ಸೂರ್ಯ ಮಂಡಲವನ್ನು ಸೇರಿ, ಕ್ರಮವಾಗಿ ಸೂರ್ಯನನ್ನು ದಾಟಿ, ಸ್ವರ್ಗ ಭವನವಾದ ಅಮರಾವತಿಯನ್ನು ದಾಟಿ ಹೋದನು. ವಿಂಧ್ಯದ ದಕ್ಷಿಣ ಭಾಗದಲ್ಲೆಲ್ಲಾ ಸದಾ ಕಾಲಕ್ಕೆ ಅಂಧಕಾರ ಉಂಟಾಯಿತು. ಸೂರ್ಯ ಕಿರಣಗಳು ಆ ದಕ್ಷಿಣ ಪ್ರಾಂತದಲ್ಲಿ ಪ್ರವೇಶಿಸಲಾರದೆ ಹೋದವು. ಯಜ್ಞಾದಿ ಕರ್ಮಗಳು ಲುಪ್ತವಾದವು. ಋಷಿಗಳೆಲ್ಲರೂ ಒಟ್ಟು ಗೂಡಿ ಇಂದ್ರ ಭವನವನ್ನು ಸೇರಿ ಇಂದ್ರನಿಗೆ ಅದನ್ನು ತಿಳಿಸಿದರು. ಆ ಅದ್ಭುತ ವಾರ್ತೆಯನ್ನು ಕೇಳಿ ಇಂದ್ರನು ಕ್ರುದ್ಧನಾಗಿ ಬ್ರಹ್ಮ ಲೋಕವನ್ನು ಸೇರಿ ಬ್ರಹ್ಮನಿಗೆ ನಮಸ್ಕರಿಸಿ ವಿಂಧ್ಯ ವೃತ್ತಾಂತವೆಲ್ಲವನ್ನೂ ಹೇಳಿದನು. ದೇವೇಂದ್ರನಿಗೆ ಬ್ರಹ್ಮ, "ಬ್ರಹ್ಮವೇತ್ತರಲ್ಲಿ ಶ್ರೇಷ್ಠನಾದ ಅಗಸ್ತ್ಯನು ಈ ವಿಂಧ್ಯನಿಗೆ ಗುರುವು. ಕಾಶೀಪುರದಲ್ಲಿದ್ದಾನೆ. ಅವನನ್ನು ದಕ್ಷಿಣ ಪ್ರಾಂತಕ್ಕೆ ಕಳುಹಿಸು. ಅಲ್ಲಿ ಆತನು ಆಧಾರವಾಗುತ್ತಾನೆ. ದಕ್ಷಿಣ ಭಾಗವು ಇಲ್ಲಿಯವರೆಗೆ ನಿರಾಧಾರ ವಾಗಿದೆಯಲ್ಲವೆ? ಆದ್ದರಿಂದ ಇಂದ್ರ, ಅಗಸ್ತ್ಯನನ್ನು ದಕ್ಷಿಣ ದಿಕ್ಕಿಗೆ ಪಯಣಿಸುವಂತೆ ಮಾಡು. ಬರುತ್ತಿರುವ ಮುನಿಯನ್ನು ಕಂಡ ಕೂಡಲೇ ಭಕ್ತಿಯಿಂದ ವಿಂಧ್ಯನು ಅವನಿಗೆ ಶರಣಾಗಿ ಪ್ರಣಾಮ ಮಾಡುತ್ತಾನೆ. ಆ ಶಿಷ್ಯನನ್ನು ಅಗಸ್ತ್ಯನು ಬೆಳೆಯ ಬೇಡವೆಂದು ಆದೇಶಿಸುತ್ತಾನೆ. ತನ್ನ ಶಿಖರಗಳೆನ್ನುವ ಶಿರಸ್ಸಿನಿಂದ ಪ್ರಣಾಮ ಮಾಡುತ್ತಿರುವ ವಿಂಧ್ಯನನ್ನು ಅಗಸ್ತ್ಯ ಋಷಿ ಭೂಮಿಗೆ ಸಮಾನನಾಗಿ ಮಾಡುತ್ತಾನೆ. ಆದ್ದರಿಂದ ಹೇ ಇಂದ್ರ, ನೀನು ಕಾಶೀ ನಗರಕ್ಕೆ ಹೋಗು. ಆಲಸ್ಯ ಮಾಡಬೇಡ. ಮುನೀಶ್ವರನನ್ನು ಪ್ರಾರ್ಥಿಸಿ ಅಗಸ್ತ್ಯನ ದಕ್ಷಿಣ ದಿಗ್ಯಾತ್ರೆಗೆ ಪ್ರೋತ್ಸಾಹಿಸು" ಎಂದು ಬ್ರಹ್ಮ ಬೋಧಿಸಿದನು. ತಕ್ಷಣವೇ ದೇವನಾಥನು ಬ್ರಹ್ಮನಿಗೆ ನಮಸ್ಕರಿಸಿ, ಪ್ರಯಾಣಕ್ಕೆ ಸಿದ್ಧನಾಗಿ, ಬೃಹಸ್ಪತಿ ದೇವತೆಗಳನ್ನು ಜೊತೆಯಲ್ಲಿಟ್ಟು ಕೊಂಡು ಅವಿಮುಕ್ತಪುರಿಯಾದ ಕಾಶೀಪುರವನ್ನು ಋಷಿಗಳ ಜೊತೆಯಲ್ಲಿ ಸೇರಿದನು. ದೇವ ಗುರುವಾದ ಬೃಹಸ್ಪತಿಯನ್ನು ಮುಂದಿಟ್ಟು ಕೊಂಡು ಅಗಸ್ತ್ಯನನ್ನು ದೇವರಾಜನು ಭೇಟಿ ಮಾಡಿದನು. ಬಂದ ಸುರರನ್ನು ಕಂಡು ಅಗಸ್ತ್ಯನು ಅರ್ಘ್ಯ ಪಾದ್ಯಾದಿಗಳನ್ನು ಕೊಟ್ಟು ಭಕ್ತಿಯಿಂದ ಪೂಜಿಸಿದನು. ದೇವತಾ ಸಹಿತನಾದ ಬೃಹಸ್ಪತಿ ಉತ್ತಮನಾದ ಅಗಸ್ತ್ಯನನ್ನು ಸ್ತುತಿಸಿ, ಪುಣ್ಯ ಕೀರ್ತಿಯೂ, ಪತಿವ್ರತೆಯೂ ಆದ ಲೋಪಾಮುದ್ರೆಯನ್ನು ಹೊಗಳಿದನು. ಬೃಹಸ್ಪತಿ ಅಲ್ಲಿ ಸೇರಿದ್ದ ಸುರರನ್ನು ಕಂಡು, "ಹೇ ದೇವತೆಗಳಿರ, ಲೋಪಾಮುದ್ರೆಗೆ ಸಮನಾದ ಪತಿವ್ರತೆ ಬೇರೊಬ್ಬಳಿಲ್ಲ. ಅನಸೂಯ, ಸಾವಿತ್ರಿ, ಪವಿತ್ರವಾದ ಅರುಂಧತಿ, ಶೌಂಡಿಲ್ಯನ ಪತ್ನಿ, ಸ್ವಯಂಭೂವಿನ ಸತಿ ಶತರೂಪ, ಪಾರ್ವತಿ, ಶ್ರೀಲಕ್ಷ್ಮಿ, ಹಿಮಾಲಯನ ಪ್ರಾಣವಲ್ಲಭೆ ಮೇನಕೆ, ಧ್ರುವನ ತಾಯಿ ಸುನೀತಿ, ಸೂರ್ಯನ ಕಾಂತೆ ಸೌಂಜ್ಞಾ ದೇವಿ, ಅಗ್ನಿಯ ಭಾರ್ಯೆ ಸ್ವಾಹಾದೇವಿ, ಪತಿವ್ರತೆಯರೆಂದು ಪ್ರಸಿದ್ಧಿಗೊಂಡವರು. ಇವರೆಲ್ಲರಿಗೂ ಅಧಿಕಳಾದ ಪತಿವ್ರತೆ ಲೋಪಾಮುದ್ರ. ದೇವತೆಗಳೇ, ಪತಿವ್ರತಾಚಾರಗಳನ್ನು, ಶಾಸ್ತ್ರ ಸಮ್ಮತವಾದದ್ದನ್ನು, ಹೇಳುತ್ತೇನೆ. ಕೇಳಿ. ಪತಿ ಭೋಜನವಾದ ಮೇಲೆ ಬಿಟ್ಟ ಉಚ್ಚಿಷ್ಟವೇ ಈಕೆಗೆ ಮುಖ್ಯ ಭೋಜನವು. ಹಗಲೂ ರಾತ್ರಿ ಪತಿಸೇವೆ, ಅತಿಥಿ ಪೂಜೆಯನ್ನು ಮಾಡಬೇಕು. ಪತಿಯ ಆಜ್ಞೆಯಿಲ್ಲದೆ ದಾನ ಧರ್ಮಾದಿಗಳನ್ನು ಸ್ವಬುದ್ಧಿಯಿಂದ ಮಾಡಬಾರದು. ಎಲ್ಲಕಾಲದಲ್ಲೂ ಪತಿಯನ್ನೇ ಸೇವೆ ಮಾಡಬೇಕು. ಗಂಡ ನಿಂತಿದ್ದರೆ ತಾನೂ ನಿಂತಿರಬೇಕು. ಪತಿ ಆಜ್ಞೆಯಿಲ್ಲದೆ ಕೂಡ ಬಾರದು. ಪತಿಯನ್ನು ಅವಮಾನಿಸಬಾರದು. ಪತಿಸೇವೆ ಮಾಡುವ ಕಾಲದಲ್ಲಿ ಪತಿಯನ್ನೇ ಶ್ರೀಹರಿಯೆಂದು ಭಾವಿಸಬೇಕು. ಗಂದ ಗಾಢ ನಿದ್ರೆ ಮಾಡಿದ ಮೇಲೆ ಪತ್ನಿ ಮಲಗಬೇಕು. ಗಂಡನ ಕಂಚುಕವನ್ನು, ಕರ್ಣ ಭೂಷಣವನ್ನು ಮುಟ್ಟಬಾರದು. ಕಂಚುಕ ಸ್ಪರ್ಶದಿಂದ ಗಂಡನ ಆಯುಸ್ಸು ಕ್ಷೀಣವಾಗುವುದು. ಪತಿ ನಾಮೋಚ್ಛಾರಣದಿಂದ ತನ್ನ ಆಯುಸ್ಸನ್ನೇ ಸ್ತ್ರೀಯಾದವಳು ಕ್ಷೀಣಿಸಿ ಕೊಳ್ಳುತ್ತಾಳೆ. ಗಂದ ನಿದ್ರೆಯಿಂದೇಳುವವರೆಗೂ ನಿದ್ರೆ ಮಾಡದೆ ಪತಿವ್ರತೆ ಮುಂಚೆಯೇ ಎದ್ದು, ಮನೆಯನ್ನು ಒರೆಸುವುದು, ಸಾರಿಸುವುದು ಮುಂತಾದ ಕೆಲಸಗಳನ್ನು ಮಾಡಬೇಕು. ಪ್ರತಿ ದಿನವೂ ಪತಿವ್ರತೆ ಗಂಡನನ್ನು ಪೂಜಿಸ ಬೇಕು. ಪತಿಯನ್ನೇ ಶಂಕರನಾಗಿ ಭಾವಿಸಬೇಕು. ಗಂದ ಮನೆಯಲ್ಲಿರುವಾಗಲೇ ಪತಿವ್ರತೆ ಶರೀರದಲ್ಲಿ ಅಲ್ಂಕಾರಗಳನ್ನು ಧರಿಸಬೇಕು. ಗಂದ ಗ್ರಾಮಾಂತರಗಳಿಗೆ ಹೋದಾಗ, ಬಹಳ ಕಾಲ ಪ್ರವಾಸದಲ್ಲಿದ್ದಾಗ ಪತಿವ್ರತೆ ಒಂದು ಭೂಷಣವನ್ನೂ ಧರಿಸಬಾರದು.

ಗಂಡ ಕಠಿಣವಾದ ಮಾತುಗಳನ್ನಾಡಿದಾಗ ತನ್ನನ್ನು ಕ್ಷಮಿಸುವಂತೆ ಕೇಳಿ ಕೊಳ್ಳಬೇಕು. ತನ್ನ ಹೃದಯದಲ್ಲಿ ಅವನ ಮೇಲೆ ಕೋಪವನ್ನು ನಿಲ್ಲಿಸಿ ಕೊಳ್ಳಬಾರದು. ಹೊರಗಿನಿಂದ ಬರುವ ಗಂಡನನ್ನು ಆದರದಿಂದ ಎದುರು ಗೊಳ್ಳಬೇಕು. ಸಾವಿರ ಕೆಲಸಗಳಿದ್ದರೂ ಎಲ್ಲವನ್ನು ಬಿಟ್ಟು ಗಂಡ ಮನೆಗೆ ಬಂದಕೂಡಲೇ ‘ಏನು ಬೇಕು’ ಎಂದು ಕೇಳಬೇಕು. ಅವನ ಕುಶಲವನ್ನು ಕೇಳಿ, ಅವನು ಆಜ್ಞಾಪಿಸಿದ ಕೆಲಸಗಳನ್ನು ಮಾತ್ರ ಮಾಡ ಬೇಕು. ಆದರೆ ಸ್ವಾತಂತ್ರ್ಯವನ್ನು ತೋರಿಸ ಬಾರದು. ಪತಿವ್ರತೆಗೆ ಒಂದು ಗುರುತು: ಇತರರ ಮನೆಗಳಿಗೆ ಹೋಗದೇ ಇರುವುದು. ಇತರರ ಮನೆಗಳಲ್ಲಿನ ಅನೇಕ ದೋಷಗಳು ಈಕೆಗೆ ಬರಬಹುದಲ್ಲವೇ! ಕೆಲಸದ ಮೇಲೆ ಹೋದರೂ ಅಲ್ಲಿ ಸ್ತ್ರೀ ಪುರುಷರನ್ನು ಯಾರನ್ನೂ ನೋಡದೆ ತ್ವರೆಯಾಗಿ ಕೆಲಸ ಮುಗಿಸಿ ಹಿಂತಿರುಗಿ ಬಂದು ತನ್ನ ಮನೆಯಲ್ಲೇ ಇರಬೇಕು. ಸ್ವತಂತ್ರಿಸಿ ಮನೆಯಿಂದ ಹೊರಗೆ ಹೋದ ಸ್ತ್ರೀ ಗೂಬೆಯಾಗಿ ಜನ್ಮಿಸುತ್ತಾಳೆ. ಪತಿವ್ರತೆಯಾದ ಲೋಪಾಮುದ್ರ ಇಂತಹ ಧರ್ಮಗಳನ್ನು ಆಚರಿಸುತ್ತಿರುವ ಸಾಧ್ವಿ. ಆಕೆ ಎಂದೂ ಬಾಗಿಲನ್ನು, ಹೊಸಲನ್ನು ದಾಟುವುದಿಲ್ಲ. ಪ್ರಾತಃಕಾಲದಲ್ಲೇ ಎದ್ದು, ಮಾರ್ಜನಾದಿಗಳನ್ನು ಮುಗಿಸಿ, ದೇವ ಪೂಜೆಗೆ ಉಪಯೋಗಿಸುವ ಪರಿಕರಗಳನ್ನು ಸ್ವಚ್ಛವಾಗಿ ಶುಭ್ರ ಗೊಳಿಸಿ, ಗಂಧ, ಅಕ್ಷತೆ, ಹೂವು ಮುಂತಾದುವನ್ನು ಕೂಡಿಸಿಟ್ಟು ಗಂಡನಿಗೆ ಸಂತೋಷವಾಗುವಂತೆ ಮಾಡ ಬೇಕು. ಗಂಡನ ಅನುಷ್ಠಾನ ಮುಗಿಯುವೊದರಳಗೆ ಗಂಡನ ಚಿತ್ತ ವೃತ್ತಿಗೆ ಅನುಗುಣವಾಗಿ ರುಚಿಕರವಾದ ಅಡಿಗೆಯನ್ನು ಮಾಡಿಡಬೇಕು. ಗಂಡನ ಉಚ್ಛಿಷ್ಟವನ್ನೇ ಭುಜಿಸಿ ಮನೋ ವಾಕ್ಕಾಯಗಳಲ್ಲಿ ಗಂಡನನ್ನು ಅನುಸರಿಸಬೇಕು. ಗಂಡ ಗ್ರಾಮಾಂತರ ಹೋದಾಗ ಹಸುವು ಕರುವಿಗೆ ಕೊಟ್ಟ ಮೇಲೆ ಉಳಿದ ಹಾಲನ್ನು ಸೇವಿಸುವುದು ಸಮ್ಮತವು. ಇಲ್ಲವೇ ಹಸುವು ತಿಂದು ಬಿಟ್ಟ ಪದಾರ್ಥಗಳನ್ನು ತಿನ್ನ ಬೇಕು. ಅಂದರೆ ಅನ್ನವನ್ನು ಅತಿಥಿಗಳಿಗೆ ಇಟ್ಟು, ಹಸುವಿಗೆ ಗ್ರಾಸವನ್ನು ಹಾಕಿ, ಪವಿತ್ರವಾದ ಬೋಜನವನ್ನು ಪತಿವ್ರತೆ ಮಾಡಬೇಕು. ಕಸವನ್ನು ತೆಗೆದು ಮನೆಯನ್ನು ಶುಭ್ರ ಮಾಡ ಬೇಕು. ಇದಕ್ಕೆ ಮಿಂಚಿದ ಧರ್ಮವಿಲ್ಲ. ಗಂಡನ ಆಜ್ಞೆಯಿಲ್ಲದೆ ವ್ರತ, ಉಪವಾಸ ಮುಂತಾದುವನ್ನು ಮಾಡ ಬಾರದು. ಗಂಡನ ಅನುಮತಿಯಿಲ್ಲದೆ ಉತ್ಸವಗಳು, ತೀರ್ಥ ಯಾತ್ರೆಗಳು ಮುಂತಾದುವಕ್ಕೆ ಹೋಗ ಬಾರದು. ತನ್ನ ಗಂಡ ಸಂತೋಷದಲ್ಲಿರುವಾಗ ಪತಿವ್ರತೆ ದುಷ್ಟ ಚಿತ್ತಳಾಗಿರಬಾರದು. ಹಾಗೆಯೇ ಗಂಡನು ದುಃಖದಲ್ಲಿರುವಾಗ ತಾನು ಸಂತೋಷದಲ್ಲಿರಬಾರದು. ರಜಸ್ವಲೆ ಯಾದಾಗ ಮೌನವನ್ನಾಚರಿಸಬೇಕು. ತನ್ನ ಮುಖವನ್ನು ತೋರಿಸ ಬಾರದು. ಆ ಸಮಯದಲ್ಲಿ ವೇದ ವಾಣಿಯನ್ನು ಕೇಳಬಾರದು. ಹೀಗೆ ಮೂರುದಿನಗಳು ಕಳೆಯ ಬೇಕು. ನಂತರ ಸ್ನಾನ ಮಾಡಿ, ನಾಲ್ಕನೆಯ ದಿನ ಗಂಡನ ಮುಖವನ್ನು ನೋಡ ಬೇಕು. ಆ ಸಮಯದಲ್ಲಿ ಗಂಡನು ಮನೆಯಲ್ಲಿಲ್ಲದಿದ್ದರೆ ಅವನ ಮುಖವನ್ನು ಮನಸಾ ಧ್ಯಾನಿಸಬೇಕು. ಇಲ್ಲದಿದ್ದರೆ ಸೂರ್ಯ ಮಂಡಲವನ್ನು ನೋಡ ಬೇಕು. ನಂತರವೇ ಮನೆಯೊಳಕ್ಕೆ ಪ್ರವೇಶ ಮಾಡಬೇಕು. ಗಂಡನ ಆಯುರ್ವರ್ಧನಕ್ಕೆ ಪತಿವ್ರತೆ ಅರಿಶಿನ ಕುಂಕುಮಗಳು, ಸಿಂಧೂರ, ಕಾಡಿಗೆ, ಮಂಗಳ ಸೂತ್ರಗಳನ್ನು ಧರಿಸಿ ಜಡೆ ಹಾಕಿ ವಿರಾಜ ಮಾನಳಾಗಿರಬೇಕು. ಸುವಾಸಿನಿಗೆ ವೇಣಿ ಬಂಧನವು, ತಾಂಬೂಲವು ಪ್ರಶಸ್ತವು. ಗಂಡನ ಸಮೀಪದಲ್ಲಿ ಪ್ರತಿ ದಿನವೂ ಬಳೆಗಳನ್ನು ಧರಿಸ ಬೇಕು. ಅಕ್ಕಪಕ್ಕದವರೊಡನೆ, ಕೆಲಸದವಳೊಡನೆ, ಜೈನ ವನಿತೆಯೊಡನೆ, ದರಿದ್ರಳೊಡನೆ. ವೈಶ್ಯೆಯರ ಹೆಣ್ಣಾಳುಗಳೊಡನೆ, ಸ್ನೇಹ ಮಾಡ ಬಾರದು. ಗಂಡನನ್ನು ಆಸಕ್ತಿಯಿಂದ ನಿಂದಿಸುವವಳೊಡನೆ ಮಾತನಾಡುವುದೂ ದೋಷವೇ! ಅಂತಹವರೊಡನೆ ಮಾತನಾಡಿದರೂ ಪತಿವ್ರತೆ ದೂಷಿತಳಾಗುತ್ತಾಳೆ. ಅತ್ತೆ ಮಾವಂದಿರನ್ನು, ಹೆಣ್ಣು ಮಕ್ಕಳನ್ನು, ಭಾವ ಮೈದಂದಿರನ್ನು ಬಿಟ್ಟು ಗಂಡನೊಡನೆ ಬೇರೆಯಾಗಿರಲು ಕೋರುವ ಸ್ತ್ರೀಯು ಮುಂದಿನ ಜನ್ಮದಲ್ಲಿ ಹೆಣ್ಣು ನಾಯಿಯಾಗಿ ಹುಟ್ಟುತ್ತಾಳೆ. ನಗ್ನವಾಗಿ ಸ್ನಾನ ಮಾಡ ಬಾರದು. ಪತಿವ್ರತೆ ಎಂದಿಗಾದರೂ ಒರಳು ಕಲ್ಲು, ಒರಳು, ಬಂಡೆ ಕಲ್ಲುಗಳ ಮೇಲೆ ಕೂಡ ಬಾರದು. ಔದುಂಬರ ವೃಕ್ಷದ ಕೆಳಗೆ, ಬೀಸುವ ಕಲ್ಲಿನಮೇಲೆ ಕುಳಿತು ಕೊಳ್ಳುವುದು ಒಳ್ಳೆಯದಲ್ಲ. ಅಂತಹ ಹೆಂಗಸೇ ಪತಿವ್ರತೆ. ಗಂಡನೊಡನೆ ವಾದ ಮಾಡುವ ಸ್ತ್ರೀ ಬಹಳ ದುಃಖ ಪೀಡಿತಳಾಗುತ್ತಾಳೆ. ಗಂಡ ಭಾಗ್ಯ ಹೀನ ನಾದರೂ, ದುಷ್ಟ ನಾದರೂ, ನಪುಂಸಕನಾದರೂ, ಕುಷ್ಟ ರೋಗಿಯಾದರೂ, ವ್ಯಾಧಿಗ್ರಸ್ತನಾದರೂ. ಕುಳ್ಳನಾದರೂ ಅವನನ್ನೇ ದೇವರಿಗೆ ಸಮನಾಗಿ ತಿಳಿಯ ಬೇಕು. ಅವನನ್ನು ಶ್ರೀಹರಿಯೆಂದು ಪತಿವ್ರತೆ ಭಾವಿಸ ಬೇಕು. ಗಂಡನನ್ನನುಸರಿಸುವ ಪತಿವ್ರತೆಯೇ ಪರಮೇಶ್ವರನಿಗೆ ಪ್ರೀತಿ ಪಾತ್ರಳು. ಗಂಡನಿಗೆ ಇಷ್ಟವಾದ ವಸ್ತ್ರ, ಭೂಷಣಗಳನ್ನೇ ಧರಿಸ ಬೇಕು. ಗಂಡನಿಗೆ ದುಃಖವಾಗಿದ್ದಾಗ ಸತಿಯು ಭೂಷಣಗಳನ್ನು ಧರಿಸ ಬಾರದು. ಆಭರಣಗಳನ್ನು ಕೊಳ್ಳಬೇಕೆಂದು ಇಷ್ಟವಾದರೆ ಅದನ್ನು ತಾನೇ ಹೇಳ ಬಾರದು. ಮಕ್ಕಳ ಮೂಲಕ ಹೇಳಿಸ ಬೇಕು. ಯಾರೂ ಇಲ್ಲದಿದ್ದಾಗಲೂ ತನ್ನ ವಾಂಛೆಯನ್ನು ನೇರವಾಗಿ ಹೇಳ ಬಾರದು. ಇದು ನನಗೀಗಲೇ ಬೇಕು ಎಂದು ಎಂದಿಗೂ ಹೇಳ ಬಾರದು. ಸತಿಗೆ ಪತಿಯಿಂದ ಏನು ಲಭ್ಯವಾಗುತ್ತದೋ ಅದರಲ್ಲೇ ಸಂತೋಷ ಪಡಬೇಕು. ಸಮರ್ಥರನ್ನು, ಧನವಂತರನ್ನು ಕಂಡು ತನ್ನ ಪತಿಯನ್ನು ನಿಂದಿಸ ಬಾರದು. ಯಾತ್ರೆಗೆ ಹೊರಟವರನ್ನು ನೋಡಿ ತಾನೂ ಯಾತ್ರೆ ಮಾಡಬೇಕು ಎಂದು, ವೃದ್ಧಳಾದರೂ, ಹೇಳ ಬಾರದು. ಪತಿ ಸೇವೆಯೇ ಸತಿಗೆ ಯಾತ್ರೆ. ಪತಿಪಾದ ಜಲವೇ ಆಕೆಗೆ ತೀರ್ಥ. ಭಾಗೀರಥಿಯ ನೀರಿಗಿಂತಲೂ ಅಧಿಕವೆಂದು ಭಾವಿಸಿ ಪತಿ ಪಾದೋದಕವನ್ನು ಕುಡಿಯ ಬೇಕು. ಪತಿ ಪೂಜೆ ಮಾಡುವ ಸತಿಯನ್ನು ತ್ರಿಮೂರ್ತಿಗಳೂ ಅನುಗ್ರಹಿಸುತ್ತಾರೆ. ಶ್ರಾವಣ ಶುಕ್ರವಾರದಂತಹ ನೈಮಿತ್ತಿಕ ವ್ರತಗಳನ್ನು ಮಾಡ ಬೇಕೆಂಬ ಇಚ್ಛೆಯಿದ್ದರೆ ಗಂಡನ ಅನುಮತಿಯಿಂದ ಮಾಡ ಬೇಕು. ಸ್ವಬುದ್ಧಿಯಿಂದ ಮಾಡಿದರೆ ಗಂಡನ ಆಯುಸ್ಸು ಕ್ಷೀಣವಾಗುವುದು. ಅಷ್ಟೇ ಅಲ್ಲದೆ ಗಂಡನೊಡನೆ ಕೂಡಿ ಅವಳು ನರಕಕ್ಕೆ ಹೋಗುವಳು. ಗಂಡನ ಮೇಲೆ ಕೋಪ ಗೊಂಡು ಅವನಿಗೆ ಪ್ರತ್ಯುತ್ತರ ಕೊಟ್ಟರೆ ಮೊದಲು ಹೆಣ್ಣು ನಾಯಿಯಾಗಿ, ನಂತರ ನರಿಯಾಗಿ ಹುಟ್ಟಿ ಅವಳು ಗ್ರಾಮದ ಹತ್ತಿರ ಇರುತ್ತಾಳೆ. ಪ್ರತಿ ದಿನವೂ ಪತಿಪಾದಗಳನ್ನು ಪ್ರೋಕ್ಷಣೆ ಮಾಡಿ ಆ ನೀರನ್ನು ಕುಡಿಯಬೇಕು. ಪತಿ ಉಚ್ಚಿಷ್ಟವನ್ನು ದೈವ ಲಭ್ಯವೆಂದು ಭಾವಿಸಿ ಸಂತೋಷದಿಂದ ತಿನ್ನ ಬೇಕು. ಹಾಗೆ ಮಾಡುವ ಪತಿವ್ರತೆಗೆ ಸ್ವತಃ ಶಂಕರನೇ ಸುಪ್ರಸನ್ನನಾಗಬಲ್ಲನು. ಪತಿ ಸಹಿತ ಅವಳಿಗೆ ಸ್ವರ್ಗವಾಸವನ್ನು ಕೊಟ್ಟು ಆದರಿಸುವನು. ವನ ಭೋಜನಗಳಿಗೆ, ಪರಗೃಹ ಭೋಜನಗಳಿಗೆ ಹೋಗ ಬಾರದು. ಇಷ್ಟರು ಆಪ್ತರ ಮನೆಗಳಿಗೂ ಕೂಡಾ ದಿನ ದಿನವೂ ಹೋಗ ಬಾರದು.

ಪತಿವ್ರತೆಯಾದವಳು ಧನಿಕರ ವಿಷಯಗಳನ್ನು ಕೇಳ ಬಾರದು. ತನ್ನ ಗಂಡ ದುರ್ಬಲನಾದರೂ, ಅನಾಚಾರಿಯಾದರೂ ಅವನನ್ನು ನಿಂದಿಸ ಬಾರದು. ಅವನು ದುಶ್ಶೀಲನಾದರೂ ಅವನ ನಿಂದೆ ಮಾಡ ಬಾರದು. ಯಾವಾಗಲೂ ಅವನನ್ನು ಲಕ್ಷ್ಮೀಪತಿಯ ಸಮಾನನೆಂದು ಭಾವಿಸಬೇಕು. ಅತ್ತೆ ಮಾವಂದಿರ ಎದುರಿಗೆ ಗಟ್ಟಿಯಾಗಿ ಮಾತನಾಡ ಬಾರದು. ಗಂಡನೆದುರಿಗೆ ವಿಶೇಷವಾಗಿ ಹಾಸ್ಯ ಮಾತುಗಳನ್ನಾಡಬಾರದು. ಕೋಪ ಗೊಂಡು ಗಂಡ ತನ್ನನ್ನು ಹೊಡೆದಾಗ ಅವನನ್ನು ‘ಸಾಯಿ’ ಎಂದು ನಿಂದಿಸಿದ ಸ್ತ್ರೀ ಮರು ಜನ್ಮದಲ್ಲಿ ವ್ಯಾಘ್ರಿಯಾಗಿ ಹುಟ್ಟಿ ಅರಣ್ಯದಲ್ಲಿ ಮಹಾ ಕಷ್ಟಕ್ಕೀಡಾಗುತ್ತಾಳೆ. ಪರ ಪುರುಷನನ್ನು ವಾಂಛೆಯಿಂದ ನೋಡಿದ ಸ್ತ್ರೀ ಮರು ಜನ್ಮದಲ್ಲಿ ಹುಟ್ಟು ಕುರುಡಿಯಾಗುತ್ತಾಳೆ. ಗಂಡನು ಊಟ ಮಾಡದೆಯೇ ತಾನು ಊಟ ಮಾಡುವ ಸ್ತ್ರೀ ಹೆಣ್ಣು ಹಂದಿಯಾಗುತ್ತಾಳೆ. ಆ ಪಾಪದಿಂದಲೇ ಬಾವಲಿಯಾಗಿ ಹುಟ್ಟಿ ಮರದಲ್ಲಿ ತಲೆ ಕೆಳಗಾಗಿ ನೇತಾಡುತ್ತಾ ತನ್ನ ಮಲವನ್ನು ತಾನೇ ತಿನ್ನುತ್ತಿರುತ್ತಾಳೆ. ಪತಿ ಸನ್ನಿಧಿಯಲ್ಲಿ ಕೋಪದಿಂದ ನಿಷ್ಠೂರೋಕ್ತಿಗಳನ್ನಾಡಿದ ಸ್ತ್ರೀ ಮುಂದಿನ ಏಳು ಜನ್ಮಗಳಲ್ಲಿ ಮೂಗಿಯಾಗಿ ದಾರಿದ್ರ್ಯ ಬಾಧೆಯಿಂದ ಬಹು ದುಃಖ ಪಡುತ್ತಾಳೆ. ಸವತಿಯೊಡನೆ ಜಗಳ ವಾಡುವವಳು ಏಳು ಜನ್ಮಗಳಲ್ಲಿ ದೌರ್ಭಾಗ್ಯವನ್ನು ಹೊಂದುತ್ತಾಳೆ. ಸ್ವೇಚ್ಛೆಯಿಂದ ಮತ್ತೊಬ್ಬ ಸ್ತ್ರೀಯ ಗಂಡನನ್ನು ನೋಡುವವಳು ಅವಯವ ಹೀನಳಾಗುತ್ತಾಳೆ. ಕಾಮ ಕಾಂಕ್ಷೆಯಿಂದ ಹಾಗೆ ನೋಡಿದವಳು ಹೀನ ಗೃಹದಲ್ಲಿ ಹುಟ್ಟಿ ದಾರಿದ್ರ್ಯವನ್ನನುಭವಿಸುತ್ತಾಳೆ. ಆದ್ದರಿಂದ ಪರ ಪುರುಷರನ್ನು ನೋಡ ಬಾರದು. ಮನೆಗೆ ಬಂದ ಗಂಡನಿಗೆ ಸಂತೋಷದಿಂದ ಎದುರಾಗಿ ಪಾದಗಳನ್ನು ತೊಳೆದು, ಬೀಸಣಿಗೆಯಿಂದ ಗಾಳಿ ಹಾಕಬೇಕು. ಪಾದಗಳನ್ನು ಒತ್ತುತ್ತಾ ಮೃದುವಾಗಿ ಮಾತನಾಡಬೇಕು. ಗಂಡನು ಸಂತೋಷ ಪಟ್ಟರೆ ತ್ರಿಮೂರ್ತಿಗಳೂ ಸಂತುಷ್ಟರಾಗುತ್ತಾರೆ. ಆಪ್ತರು, ಇಷ್ಟರು, ಬಂಧುಗಳು, ಸೋದರರು, ತಂದೆತಾಯಿಗಳು ಕೂಡಾ ಕೊಡುವುದೇನಿಲ್ಲ. ಗಂಡನೊಬ್ಬನೇ ಪ್ರತ್ಯಕ್ಷವಾಗಿ ಐಹಿಕಗಳನ್ನು, ಪರೋಕ್ಷವಾಗಿ ಆಮುಷ್ಮಿಕಗಳನ್ನು ಕೊಡುವವನು.

ಗುರುವು, ದೈವವು, ತೀರ್ಥವು ಸರ್ವವೂ ಪತಿಯೇ ನನಗೆ ಎನ್ನುವ ಮನಸ್ಸುಳ್ಳವಳೇ ಪತಿವ್ರತೆ. ಗಂಡ ಜೀವಂತನಾಗಿರುವವರೆಗೂ ಸ್ತ್ರೀ ಪವಿತ್ರಳು, ಪತಿವ್ರತೆ. ಗಂಡ ಮೃತನಾದ ಕ್ಷಣದಿಂದ ಆಕೆ ಪ್ರೇತದಂತೆ ಆಸ್ಪೃಶ್ಯಳು. ಗಂಡನಿಲ್ಲದ ಸ್ತ್ರೀಗೆ ಸದಾ ಕಾಲ ಅಮಂಗಳವು ಅಂಟಿಕೊಂಡಿರುತ್ತದೆ. ಸಂತಾನವಿಲ್ಲದ ಸ್ತ್ರೀ ವಿಧವೆಯಾದರೆ ಪ್ರೇತಕ್ಕಿಂತ ಹೆಚ್ಚಿನ ಹೀನಳಾಗುತ್ತಾಳೆ. ಪ್ರಯಾಣ ಮಾಡಲು ಹೊರಟವರ ಮುಂದೆ ವಿಧವೆ ಎದುರಾಗಿ ಬಂದರೆ ಆ ಪ್ರಯಾಣಿಕನಿಗೆ ಮರಣವು ನಿಶ್ಚಯವು. ಹಾಗೆ ಬಂದ ವಿಧವೆ ಪುತ್ರವತಿಯಾಗಿದ್ದರೆ ಶುಭವೇ ಆಗುವುದು. ಪ್ರಯಾಣ ಮಾಡುವವನ ತಾಯಿ, ವಿಧವೆಯಾಗಿದ್ದರೂ, ಎದುರಿಗೆ ಬಂದರೆ ಅವನಿಗೆ ಶುಭವೇ ಆಗುವುದು. ಪುತ್ರನಿಲ್ಲದ ಸ್ತ್ರೀ ನಮಸ್ಕಾರಕ್ಕೂ ಅನರ್ಹಳು. ಅಪುತ್ರಕಳಾದ ವಿಧವೆಯಿಂದ ಅಶೀರ್ವಾದವನ್ನೂ ಪಡೆಯ ಬಾರದು. ಅದೂ ಅಮಂಗಳಕರವೇ. ಆಂತಹವಳು ಶಪಿಸಿದರೂ ಮರಣವೇ. ಆದ್ದರಿಂದ ಅಪುತ್ರವತಿಯಾದ ವಿಧವೆಯನ್ನು ಮಾತನಾಡಿಸ ಬಾರದು. ವೈಭವವೇಕೆ? ದೇಹವೇಕೆ? ಸ್ತ್ರೀಗೆ ಗಂಡನೇ ಸುಖವು. ಮೇಘದಲ್ಲಿ, ಮಿಂಚಿನಂತೆ, ಚಂದ್ರನೊಳಗೆ ಬೆಳದಿಂಗಳಿನಂತೆ ಪತಿಯ ಜೊತೆಯಲ್ಲಿ ಪತಿವ್ರತೆ ಅಸ್ತಮಿಸಬೇಕು. ಅನುಗಮನ(ಸಹಗಮನ)ವು ಶೃತಿ, ಸ್ಮೃತಿಗಳಲ್ಲಿ ಹೇಳಿರುವಂತೆ ಮಹಾ ಧರ್ಮವು. ಸಹಗಮನದಿಂದ ತನ್ನ ನಲವತ್ತು ತಲೆ ಮಾರುಗಳ ಕುಲವು ಉದ್ಧರಿಸಲ್ಪಡುತ್ತದೆ. ಗಂಡ ಮರಣಿಸಿದರೆ ಸಹಗಮನ ಮಾಡುವ ಸತಿಗೆ ಒಂದೊಂದು ಹೆಜ್ಜೆಗೂ ಒಂದೊಂದು ಅಶ್ವಮೇಧಯಾಗ ಮಾಡಿದ ಫಲವು ಬರುತ್ತದೆ. ಗಂಡ ಪಾಪಾತ್ಮನಾದರೂ, ಮೃತನಾಗಿ ಯಮಕಿಂಕರಿಂದ ಒಯ್ಯಲ್ಪಡುತ್ತಿದ್ದರೂ, ನರಕವನ್ನು ಸೇರುವಷ್ಟರಲ್ಲಿ ಪತಿವ್ರತೆಯಾದ ಅವನ ಹೆಂಡತಿ ಸಹಗಮನ ಮಾಡಿದರೆ, ಹದ್ದು ಸರ್ಪವನ್ನು ಆಕಾಶಕ್ಕೆ ಎಗರಿಸಿ ಕೊಂಡು ಹೋದಹಾಗೆ, ಆ ಮೃತ ಪಾಪಿಯಾದ ಗಂಡನನ್ನು ಸ್ವರ್ಗಕ್ಕೆ ತೆಗೆದುಕೊಂಡು ಹೋಗುತ್ತಾಳೆ. ಆಕೆಯ ಸಹಗಮನವನ್ನು ನೋಡಿದ ಯಮ ಕಿಂಕರರು ಭೀತರಾಗಿ ಆಕೆಯ ಗಂಡನನ್ನು ಬಿಟ್ಟು ದೂರವಾಗಿ ಹೊರಟು ಹೋಗಿ ಯಮಾಲಯವನ್ನು ಸೇರುತ್ತಾರೆ. ಆ ಸುವಾಸಿನಿಯಾದ ಪತಿವ್ರತೆಯನ್ನು ವಿಮಾನದಲ್ಲಿ ಕೂಡಿಸಿ ಕೊಂಡು, ಸುರಾಂಗನೆಯರು ನೀರಾಜನ ಕೊಟ್ಟು, ತ್ವರಿತವಾಗಿ ಸ್ವರ್ಗಕ್ಕೆ ಕರೆದೊಯ್ಯುವರು. ಯಮನನ್ನು ನೋಡಿ ಭಯ ಪಡುವುದಕ್ಕಿಂತ ಪತಿವ್ರತೆಯನ್ನು ನೋಡಿದುವುದಕ್ಕೆ ನಮಗೆ ಹೆಚ್ಚಿನ ಭಯ ಎಂದು ಯಮ ದೂತರು ಹೇಳುವರು. ಸೂರ್ಯನು ಪತಿವ್ರತೆಯನ್ನು ನೋಡಿ ಭಯಪಟ್ಟು ಮೆಲ್ಲಮೆಲ್ಲಗೆ ತನ್ನ ತಾಪವನ್ನು ತಗ್ಗಿಸುತ್ತಾನೆ. ಅಗ್ನಿಯೂ ಭೀತನಾಗಿ ತನ್ನ ಉಷ್ಣವನ್ನು ಬಿಟ್ಟು ಪತಿವ್ರತೆಗೆ ಶೀತಲನಾಗುತ್ತಾನೆ. ನಕ್ಷತ್ರ ಮಂಡಲಗಳೂ ಕೂಡಾ ತಮ್ಮ ಸ್ಥಾನವನ್ನು ಅವಳು ಹರಿಸುತ್ತಾಳೇನೋ ಎಂದು ಭಯ ಪಡುತ್ತವೆ. ಹಾಗೆ ಗಂಡನೊಡನೆ ಸ್ವರ್ಗ ಸೇರಿದ ಪತಿವ್ರತೆ ಸ್ವರ್ಗದಲ್ಲೇ ನಿಲ್ಲುತ್ತಾಳೆ. ಹಾಗೆ ಸಾಸ್ಧ್ವಿ ಶಗಮನದಿಂದ ಸ್ವರ್ಗ ಸುಖವನ್ನು ಗಂಡನೊಡನೆ ಸ್ಥಿರವಾಗಿ ಅನುಭವಿಸುತ್ತಾ ದೇವ ಲೋಕದಲ್ಲಿ ಹರ್ಷಿತಲಾಗಿ ಇರುತ್ತಾಳೆ. ಮೂರುವರೆ ಕೋಟಿ ಕೇಶಗಳನ್ನು ಸಹಗಮನದಲ್ಲಿ ಅಗ್ನಿಗೆ ಸಮರ್ಪಿಸಿದ ಪತಿವ್ರತೆ ಒಂದೊಂದು ಕೇಶಕ್ಕೂ ಶತಕೋಟಿ ಸಂವತ್ಸರಗಳಂತೆ ಗಂಡನೊಡನೆ ಸ್ವರ್ಗದಲ್ಲಿರುತ್ತಾಳೆ. ಗಂಡನೊದನೆ ಸಹಗಮನ ಮಾಡಿದ್ದರಿಂಡ ಪತಿವ್ರತೆ ತನ್ನ ವಂಶದಲ್ಲಿ ಜನ್ಮಿಸಿದ ಇಪ್ಪತ್ತೊಂದು ತಲೆ ಮಾರುಗಳವರಿಗೆ, ತನ್ನ ಗಂಡನ ವಂಶ್ದ ಇಪ್ಪತ್ತೊಂದು ತಲೆಮಾರುಗಖ್ಳವರಿಗೆ, ಉಭಯ ಕುಲದವರಿಗ್ನಲವತ್ತೆರಡು ತಲೆಮಾರು ಗಳವರಿಗೆ ಸ್ವರ್ಗಪ್ರಾಪ್ತಿ ಮಾಡಿಸುತ್ತಾಳೆ. ಆ ಪತಿವ್ರತೆಯನ್ನು ಹೆತ್ತ ಮಾತಾಪಿತರು ಧನ್ಯರು. ಆಕೆಯ ಗಂಡನೂ ಧಸ್ನ್ಯನೇ ಅಲ್ಲವೇ? ಸಹಗಮನ ಫಲವಿದು. ಮಹಾಫಲವುಳ್ಳದ್ದು.

ಸ್ತ್ರೀ ದುರಾಚಾರಿಯಾಗಿದ್ದರೆ, ವ್ಯಭಿಚಾರಿಣಿಯಾಗಿದ್ದರೆ, ಅವಳಿಗೆ ಮಹಾ ಅನರ್ಥಗಳು ಲಭಿಸುತ್ತವೆ. ಇಹ ಪರ ಲೋಕಗಳೆರಡರಲ್ಲಿಯೂ ಕಷ್ಟವನ್ನನುಭವಿಸುತ್ತಾಳೆ. ನಲವತ್ತೆರಡು ತಲೆ ಮಾರಿನವರು ಸ್ವರ್ಗದಲ್ಲಿದ್ದರೂ, ಶುಭಕರರಾಗಿದ್ದರೂ, ಅವರನ್ನೂ ತನ್ನ ತಂದೆ ತಾಯಿಗಳನ್ನು ಕರೆದು ಕೊಂಡು ನರಕಕ್ಕೆ ಹೋಗುತ್ತಾಳೆ. ಮೂರೂವರೆ ಕೋಟಿ ಕೂದಲುಗಳಲ್ಲಿ ಒಂದು ಕೂದಲಿಗೆ ಒಂದು ವರ್ಷದಂತೆ ತನ್ನ ಪೂರ್ವೀಕರು, ಗಂಡನೊಡನೆ ಕೂಡಿ ಅವಳು ನರಕ ಯಾತನೆ ಪಡುತ್ತಾಳೆ. ಪತಿವ್ರತೆಯ ಪಾದಸ್ಪರ್ಶದಿಂದ ಅವಳ ಪಾಪಗಳು ಕ್ಷಾಳನವಾಗಿ ಪವಿತ್ರಳಾಗುತ್ತಾಳೆ. ಅದರಿಂದಲೇ ಭೂಮಿಯು ಸಾಧ್ವಿಯ ಪಾದಸ್ಪರ್ಶವನ್ನು ಕಾಂಕ್ಷಿಸುತ್ತಾಳೆ. ದೈವ ಯೋಗದಿಂದ ತನ್ನ ಕಿರಣಗಳು ಪತಿವ್ರತೆಯನ್ನು ಸೋಕಿದರೆ ತಾನು ಪವಿತ್ರನಾಗುತ್ತೇನೆ ಎಂದು ಸೂರ್ಯನೂ, ಚಂದ್ರನೂ ಕೂಡಾ ಆಸೆಪಡುತ್ತಾರೆ. ವಾಯು, ವರುಣರೂ ಸತಿ ಸ್ಪರ್ಶದಿಂದ ಪವಿತ್ರರಾಗಬಲ್ಲರು. ಎಲ್ಲರೂ ಪತಿವ್ರತೆಯ ದೃಷ್ಟಿ ಬಿದ್ದರೆ ಪವಿತ್ರರಾಗುವುದು ನಿಶ್ಚಯವು. ಕುಲವನ್ನುದ್ಧರಿಸುವವಳು ಸಾಧ್ವಿಯೇ! ಸತಿ ಹೆಂಡತಿಯಾಗಿ ಲಭಿಸುವುದು ಏಳು ಜನ್ಮಗಳಲ್ಲಿ ಮಾಡಿದ ಪುಣ್ಯದಿಂದಲೇ ಆಗುತ್ತದೆ. ಪತಿವ್ರತೆಯಾದ ಹೆಂಡತಿಯಿಂದಲೇ ಚತುರ್ವಿಧ ಪುರುಷಾರ್ಥಗಳು ಮಾನವರಿಗೆ ಲಭಿಸುವುದು. ಯಜ್ಞ ಯಾಗಾದಿಗಳಿಗೆ, ಮನೆಯಲ್ಲಿ ಸಾಧ್ವಿ ಇಲ್ಲದ ಪುರುಷ ಅನರ್ಹನು. ಸಾಧ್ವಿ ಮನೆಯಲ್ಲಿ ಇಲ್ಲದವರಿಗೆ ಕಾಡು ದೂರವಲ್ಲ. ಅವನ ಜನ್ಮ ಕರ್ಮ ಬದ್ಧವಾಗಿ ವ್ಯರ್ಥವಾಗುವುದು. ಪತಿವ್ರತೆ ಹೆಂಡತಿಯಾಗಿ ದೊರೆತವನಿಗೆ ಪುಣ್ಯಸಿದ್ಧಿ ದೊರೆಯುತ್ತದೆ. ಸತಿ ಯೋಗದಿಂದಲೇ ಪುತ್ರಲಾಭವನ್ನು, ಪರಲೋಕವನ್ನು ಮಾನವನು ಸಿದ್ಧಿಸಿ ಕೊಳ್ಳಬಲ್ಲನು. ಭಾರ್ಯೆಯಿಲ್ಲದೆ ಮನುಷ್ಯನಿಗೆ ಧರ್ಮಸಿದ್ಧಿಯಿಲ್ಲ. ಕರ್ಮಕ್ಕೆ ಅನರ್ಹನಾದ ಅವನ ಪಿತೃಗಳು ಸ್ವರ್ಗದಿಂದಲೂ ಪತನರಾಗುವರು. ಗಂಗಾ ಸ್ನಾನದಿಂಡ ಲಭಿಸುವ ಪುಣ್ಯಕ್ಕೆ ಸಮಾನವಾದ ಪುಣ್ಯವು ಸಾಧ್ವಿ ದರ್ಶನದಿಂದ ಲಭಿಸುವುದು. ಸಾಧ್ವಿ ಮಾನವನು ಏಳು ಜನ್ಮಗಳಲ್ಲಿ ಮಾಡಿದ ಪಾಪಗಳನ್ನು ಪರಿಹರಿಸಿ ಅವನನ್ನು ಪಾವನನನ್ನಾಗಿ ಮಾಡಬಲ್ಲಳು. ಎಂದು ದೇವಗುರು ಬೃಹಸ್ಪತಿ ಪತಿವ್ರತೆಯ ಆಚಾರಗಳನ್ನು ಅಗಸ್ತ್ಯನ ಎದುರು ತಿಳಿಸಿದನು. 

ಇಲ್ಲಿಗೆ ಮುವ್ವತ್ತೊಂದನೆಯ ಅಧ್ಯಾಯ ಮುಗಿಯಿತು.

    

No comments:

Post a Comment