Thursday, April 11, 2013

||ಶ್ರೀಗುರು ಚರಿತ್ರೆ - ಮೂವತ್ತೆರಡನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

ಹೀಗೆ ಬೃಹಸ್ಪತಿಯು ಪತಿವ್ರತೆಯ ರೀತಿಯನ್ನು, ಸಹಗಮನಕ್ಕೆ ಸಮ್ಮತಿ, ಫಲಶೃತಿಗಳನ್ನು ಹೇಳಿ, ನಂತರ ವಿಧವೆಯರ ಅಚಾರಗಳನ್ನು ಹೇಳಲು ದೇವತೆಗಳು ದೇವ ಗುರುವನ್ನು ಹೀಗೆ ಪ್ರಶ್ನಿಸಿದರು, "ಪತಿವ್ರತೆಯು ತನ್ನ ಎದುರಿಗೆ ಗಂಡ ಸತ್ತರೆ ಸಹಗಮನ ಮಾಡ ಬೇಕೆಂಬುದು ಸಹಜವೇ. ಆದರೆ ಅವಳು ಗರ್ಭಿಣಿಯಾಗಿದ್ದರೆ, ಸ್ತನ್ಯಪಾನ ಮಾಡುವ ಮಗುವಿದ್ದರೆ, ಗಂಡ ದೂರ ದೇಶದಲ್ಲಿ ಮರಣಿಸಿದರೆ ಆಗ ಏನು ಮಾಡಬೇಕು?" ಅವರ ಪ್ರಶ್ನೆಯನ್ನು ಕೇಳಿದ ದೇವ ಗುರುವು ಅದನ್ನು ವಿಸ್ತಾರವಾಗಿ ಹೇಳಲು ಉಪಕ್ರಮಿಸಿದನು. "ದೇವತೆಗಳಿರಾ ಕೇಳಿ. ಗಂಡ ಸಮೀಪದಲ್ಲಿ ಮರಣಿಸಿದಾಗ ಪತಿವ್ರತೆಗೆ ಸಹಗಮನವು ಕರ್ತವ್ಯವೇ ಅಲ್ಲವೆ? ಶವ ಸಿಕ್ಕದಿದ್ದರೆ, ಪತಿವ್ರತೆ ಗರ್ಭಿಣಿಯಾಗಿದ್ದರೆ, ಅವಳಿಗೆ ಹಾಲು ಕುಡಿಯುವ ಮಗುವಿದ್ದರೆ, ಸಹಗಮನ ಮಾಡುವುದರಿಂದ ದೋಷವುಂಟಾಗುತ್ತದೆ. ಎಲ್ಲೋ ದೂರದಲ್ಲಿ ಗಂಡ ಮರಣಿಸಿದಾಗಲೂ ಅವಳು ಸಹಗಮನ ಮಾಡಬಾರದು. ಆಗ ಅವಳು ಯಾವಜ್ಜೀವವೂ ವೈಧವ್ಯವನ್ನು ಪಾಲಿಸಬೇಕು. ಹಾಗೆ ಮಾಡಿದರೆ ಅವಳಿಗೆ ಸಹಗಮನ ಮಾಡಿದ ಪುಣ್ಯವು ಲಭಿಸುತ್ತದೆ. ವೈಧವ್ಯಾಚಾರಗಳನ್ನು ಪಾಲಿಸುವುದರಿಂದ ವಿಧವೆಯರಿಗೆ ಮಹಾ ಪುಣ್ಯವು ಲಭಿಸುವುದು. ಗಂಡ ಮೃತನಾದರೆ ವಿಧವೆ ಶಿರೋ ಮುಂಡನವನ್ನು ಮಾಡಿಸಿ ಕೊಳ್ಳಬೇಕು. ಜಡೆ ಹಾಕಿದ ವಿಧವೆ ತನ್ನ ಗಂಡನನ್ನು ಕೂದಲಿನಿಂದ ಬಂಧಿಸಿದವಳಾಗುತ್ತಾಳೆ. ಅವಳಿಗೆ ದುರ್ಗತಿಯು ಬರುವುದು. ಆದ್ದರಿಂದ ಅವಳೂ ಸದಾ ಶಿರೋ ಮುಂಡನವನ್ನು ಆಚರಿಸಬೇಕು. ಪ್ರತಿ ದಿನವೂ ತಲೆಗೆ ಸ್ನಾನ, ಒಂದು ಹೊತ್ತು ಊಟ ಮಾತ್ರ ಮಾಡಬೇಕು. ಅವಳು ಒಂದೇ ರೀತಿಯ ಅನ್ನವನ್ನು ತಿನ್ನಬೇಕು. ಶಕ್ತಿಯಿದ್ದರೆ ಭಕ್ತಿಯಿಂದ ಕೂಡಿ ಮೂರು ದಿನಗಳು ಉಪವಾಸ ಮಾಡಬೇಕು. ಐದು ದಿನಗಳಾಗಲೀ, ಒಂದು ಪಕ್ಷವಾಗಲಿ ಉಪವಾಸವಿರಬೇಕು. ಇಲ್ಲದಿದ್ದರೆ ಭಕ್ತಿಯಿಂದ ಚಾಂದ್ರಾಯಣ ವ್ರತವನ್ನು ಆಚರಿಸ ಬೇಕು. ಚಂದ್ರೋದಯದಲ್ಲಿ ಒಂದು ಹಿಡಿ ಅನ್ನ ಮಾತ್ರ ತಿಂದು, ದಿನಕ್ಕೊಂದು ಹಿಡಿಯಂತೆ ಹೆಚ್ಚಿಸುತ್ತಾ ಪೂರ್ಣಿಮೆಯ ದಿನ ಹದಿನೈದು ಹಿಡಿ ಅನ್ನವನ್ನು ತಿನ್ನಬೇಕು. ನಂತರ ಕೃಷ್ಣ ಪಕ್ಷದಲ್ಲಿ ದಿನಕ್ಕೊಂದು ಹಿಡಿಯಂತೆ ತಗ್ಗಿಸುತ್ತಾ ಅಮಾವಾಸ್ಯೆಯ ದಿನ ಒಂದು ಹಿಡಿ ಅನ್ನ ಮಾತ್ರ ತಿನ್ನಬೇಕು. ಹಾಗೆ ಚಾಂದ್ರಾಯಣ ವ್ರತವನ್ನು ಮಾಡ ಬೇಕು. ವೃದ್ಧಳಾಗಿದ್ದರೆ, ಶಕ್ತಿ ಹೀನಳಾಗಿದ್ದರೆ ಒಂದು ಹೊತ್ತು ಊಟ ಮಾಡುವುದನ್ನು ಪಾಲಿಸಬೇಕು. ಫಲಾಹಾರವನ್ನಾಗಲೀ, ಶಕ್ತಿಯನ್ನನ್ನುಸರಿಸಿ ಶಾಖಾಹಾರವನ್ನಾಗಲೀ ತೆಗೆದು ಕೊಳ್ಳಬೇಕು. ಇಲ್ಲದಿದ್ದರೆ ಸ್ವಲ್ಪ ಹಾಲು ತೆಗೆದು ಕೊಳ್ಳಬೇಕು. ದೋಷ ಭೀತಿಯಿಂದ ಅಧಿಕವಾಗಿ ಹಾಲನ್ನೂ ಕುಡಿಯ ಬಾರದು. ಶ್ವಾಸ ಆಡುವುದಕ್ಕೆ, ಪ್ರಾಣಗಳನ್ನು ಹಿಡಿದಿರುವುದಕ್ಕೆ ಸಾಕಾದಷ್ಟು ಆಹಾರವನ್ನು ಮಾತ್ರ ತೆಗೆದು ಕೊಳ್ಳಬೇಕು. ಮಂಚದ ಮೇಲೆ ಮಲಗುವ ವಿಧವೆ ತನ್ನ ಗಂಡನನ್ನು ರೌರವ ನರಕದಲ್ಲಿ ಬೀಳುವಂತೆ ಮಾಡುವಳು. ತಾನೂ ಕೂಡಾ ಗಂಡನಿಗೆ ಸಮಾನವಾಗಿ ನರಕ ಯಾತನೆಗಳನ್ನು ಅನುಭವಿಸುವಳು. ವಿಧವೆಯು ಮಂಗಳ ಸ್ನಾನವನ್ನು ಶರೀರವು ನಲುಗುವಂತೆ ಮಾಡಬಾರದು. ಹಾಗೆಯೇ ಅವಳು ಗಂಧ ಪುಷ್ಪ ತಾಂಬೂಲಾದಿಗಳನ್ನು ವರ್ಜಿಸಬೇಕು. ವಿಧವೆ ಪುತ್ರ ಹೀನಳಾದರೆ ಅವಳೇ ತಿಲೋದಕದಿಂದ, ದರ್ಭೋದಕದಿಂದ ನಾಮೋಚ್ಛಾರಣೆ ಮಾಡುತ್ತಾ ಪಿತೃ ತರ್ಪಣವನ್ನು ಕೊಡಬೇಕು. ಪತಿ ಭಾವನೆಯಲ್ಲಿರುವ ಸತಿಯು ಪ್ರತಿ ದಿನವೂ ವಿಷ್ಣು ಪೂಜೆಯನ್ನು ಮಾಡ ಬೇಕು. ವಿಧವೆಗೆ ಪತಿ ಸ್ಥಾನದಲ್ಲಿ ವಿಷ್ಣುವೇ ಎಂದು ಶೃತಿಗಳು ಹೇಳುತ್ತಿವೆ. ಸತಿಯಾದ ನಾರಿ ಪತಿಯು ಜೀವಿಸಿದ್ದಾಗ ಅವನ ಆಜ್ಞೆಯನ್ನನುಸರಿಸಿ ನಡೆದಂತೆ ವೈಧವ್ಯದಲ್ಲಿ ಭಕ್ತಿಯಿಂದ ವಿಷ್ಣುವಿನ ಅನುಜ್ಞೆಯನ್ನು ಪಡೆಯ ಬೇಕು. ವಿಷ್ಣುವಿನ ಅನುಜ್ಞೆಯನ್ನು ಪಡೆದು ಆಕೆ ವ್ರತ, ಉಪವಾಸಾದಿಗಳನ್ನು ಆಚರಿಸ ಬೇಕು. ಎಂದರೆ, ಗುರುಗಳ, ವಿಪ್ರರ ಅನುಜ್ಞೆಯನ್ನು ಭಕ್ತಿಯಿಂದ ಸ್ವೀಕರಿಸಿ ವ್ರತಾದಿಗಳನ್ನು ಮಾಡಬೇಕು. ಸುವಾಸಿನಿಯಾಗಿದ್ದಾಗ ತನಗೆ ಪ್ರೀತಿಕರವಾಗಿದ್ದ ವಸ್ತುಗಳನ್ನು ವಿದ್ವಾಂಸನಾದ ವಿಪ್ರನಿಗೆ ಕೊಟ್ಟು ಅವನಿಗೆ ಭೋಜನವನ್ನು ನೀಡ ಬೇಕು. ಮಾಘ ಮಾಸದಲ್ಲಿ, ಕಾರ್ತಿಕ ಮಾಸದಲ್ಲಿ, ವೈಶಾಖ ಮಾಸದಲ್ಲಿ ಆಯಾ ನಿಯಮಗಳನ್ನು ಆಚರಿಸಬೇಕು. ಮಾಘ ಮಾಸದಲ್ಲಿ ಮಾಘ ಸ್ನಾನವನ್ನು ವಿಷ್ಣು ಸ್ಮರಣೆ ಪೂರ್ವಕ ಮಾಡಬೇಕು. ವೈಶಾಖ ಮಾಸದಲ್ಲಿ ಜಲದಾನ, ಕಾರ್ತಿಕ ಮಾಸದಲ್ಲಿ ದೀಪದಾನ ಮಾಡಬೇಕು. ಹಾಗೆ ದಾನ ಮಾಡಿ ಬ್ರಾಹ್ಮಣನಿಗೆ ಕೈಲಾದಷ್ಟು ದಕ್ಷಿಣೆ ಕೊಡ ಬೇಕು. ಮಾಘ ಮಾಸದಲ್ಲಿ ಬ್ರಾಹ್ಮಣನಿಗೆ ತುಪ್ಪ, ಎಳ್ಳು ದಾನ ಮಾಡಬೇಕು. ವೈಶಾಖ ಮಾಸದಲ್ಲಿ ನೀರಿಲ್ಲದ ಕಡೆಗಳಲ್ಲಿ ಅರವಂಟಿಗೆಗಳನ್ನು ಸ್ಥಾಪಿಸಬೇಕು. ಶಿವಾರ್ಪಣವೆಂದು ತಂಬಿಗೆಗಳನ್ನು ದಾನ ಮಾಡಬೇಕು. ತಂಬಿಗೆಯನ್ನು ಸ್ವಚ್ಛವಾದ ನೀರಿನಿಂದ ತುಂಬಿ ದಾನ ಮಾಡಬೇಕು. ಗಂಧ, ಪರಿಮಳ ದ್ರವ್ಯಗಳಿಂದ ಶಿವನನ್ನು ಅರ್ಚಿಸಬೇಕು. ಬ್ರಾಹ್ಮಣ ಗೃಹಗಳಿಗೆ ಭಕ್ತಿಯಿಂದ, ಶಕ್ತಿಯಿರುವವರೆಗೆ ನೀರು ಹೊತ್ತು ಹಾಕಬೇಕು. ಅತಿಥಿಗಳಿಗೆ, ವಿಪ್ರರಿಗೆ ಸ್ವಶಕ್ತಿಯನ್ನನುಸರಿಸಿ ಅನ್ನದಾನ ಮಾಡಬೇಕು. ತೀರ್ಥ ಯಾತ್ರೆಗಳನ್ನು ಮಾಡಬೇಕೆಂದಿರುವವರಿಗೆ ಕೊಡೆ, ಪಾದುಕೆಗಳನ್ನು ಅರ್ಪಿಸಬೇಕು. ಮನೆಗೆ ಬಂದ ಬ್ರಾಹ್ಮಣರ ಪಾದಗಳನ್ನು ತೊಳೆಯ ಬೇಕು. ಬೀಸಣಿಗೆಯಿಂದ ಗಾಳಿ ಹಾಕುತ್ತಾ, ಅವರಿಗೆ ವಸ್ತ್ರಾದಿಗಳನ್ನು ಕೊಟ್ಟು ಪೂಜಿಸ ಬೇಕು. ಗಂಧ ಪರಿಮಳಾದಿಗಳಿಂದ ಅವರನ್ನು ಸಂತೋಷ ಪಡಿಸಬೇಕು. ಶಕ್ತಿಯಿದ್ದರೆ ಅವರಿಗೆ ಜಲಪಾತ್ರೆಗಳನ್ನು, ದ್ರಾಕ್ಷಿ, ಬಾಳೆ ಹಣ್ಣುಗಳನ್ನು ನೀಡಬೇಕು. ಬೆಲ್ಲ ಸೇರಿಸಿದ ಸ್ವಾದಿಷ್ಟ ಪಾನೀಯವನ್ನು ವಿಪ್ರರಿಗೆ ಕೊಟ್ಟು ಅವರ ಆಯಾಸವನ್ನು ತೀರುವಂತೆ ಮಾಡಬೇಕು.

ದಾನ ಮಾಡಿದಾಗ ಗಂಡನ ಹೆಸರು ಹೇಳಿ, ಸಂಕಲ್ಪ ಮಾಡಿ ವಿಪ್ರನಿಗೆ ದಾನ ಮಾಡಬೇಕು ಎನ್ನುವುದು ವಿಧವೆಯರಿಗೆ ವಿಧಿ. ಅದು ಸಾತ್ವಿಕ ದಾನವು. ಕಾರ್ತಿಕ ಮಾಸದಲ್ಲಿ ಅನ್ನವನ್ನಿಡಬೇಕು. ಅನ್ನದಾನದಲ್ಲಿ ಬದನೆ ಕಾಯಿ, ಮುಲ್ಲಂಗಿ, ಜೇನುತುಪ್ಪ, ಎಣ್ಣೆ ಇಡಬಾರದು. ಕಂಚಿನ ಪಾತ್ರೆಯಲ್ಲಿ ತಿನ್ನಬಾರದು. ಎರಡು ದಳಗಳ ಎಲೆಯಲ್ಲಿ ಊಟ ಮಾಡಬಾರದು. ಸ್ವಚ್ಛವಾದ ಮನಸ್ಸಿನಿಂದ ಕಾರ್ತಿಕ ಮಾಸ ಪೂರ್ತಿ ದಾನ ಧರ್ಮಗಳಲ್ಲಿ ಕಳೆಯಬೇಕು. ಮೋದಗದ ಎಲೆಯಲ್ಲಿ ತಿನ್ನುತ್ತಾ ಮಾಸಾಂತದಲ್ಲಿ ಉದ್ಯಾಪನೆ ಮಾಡಬೇಕು. ಯಾವ ವ್ರತಗಳನ್ನು ಮಾಡಿದರೂ ಉದ್ಯಾಪನೆ ಮಾಡಬೇಕು. ತುಪ್ಪದಿಂದ ತುಂಬಿದ ಕಂಚಿನ ಪಾತ್ರೆಯನ್ನು ವಿಪ್ರನಿಗೆ ಭಕ್ತಿಯಿಂದ ದಾನ ಮಾಡಬೇಕು. ತಾನು ನೆಲದಮೇಲೆ ಮಲಗಿ ವಿಪ್ರನಿಗೆ ಮಂಚವನ್ನು ದಾನ ಮಾಡಬೇಕು. ತಾನು ತ್ಯಜಿಸಿದ ವಸ್ತುಗಳನ್ನು ಬ್ರಾಹ್ಮಣನಿಗೆ ಭಕ್ತಿಯಿಂದ ಸಮರ್ಪಿಸ ಬೇಕು. ಒಂದು ತಿಂಗಳು ರಸವನ್ನು ಬಿಟ್ಟರೆ ಬ್ರಾಹ್ಮಣನಿಗೆ ದಕ್ಷಿಣೆಯೊಡನೆ ರಸ ದಾನಮಾಡಬೇಕು. ನಾಲ್ಕು ತಿಂಗಳು ಪಂಚಾಮೃತವನ್ನು ಬಿಟ್ಟರೆ ಉದ್ಯಾಪನೆ ಮಾಡಿ ಸಾಲಂಕೃತವಾದ ಧೇನುವನ್ನು ಸ್ವಶಕ್ತಿಯನ್ನನುಸರಿಸಿ ದಾನ ಕೊಡಬೇಕು. ದೀಪದಾನ ವ್ರತವು ಮಹಾಫಲವನ್ನು ಕೊಡುವುದು. ಮಿಕ್ಕ ಎಲ್ಲ ದಾನಗಳು, ಇತರ ಧರ್ಮಗಳು ಎಲ್ಲವೂ ದೀಪದಾನದ ಹದಿನಾರನೆಯ ಭಾಗಕ್ಕೆ ಸಮಾನವಾಗಲಾರವು. ಮಾಘ ಮಾಸದಲ್ಲಿ ಸೂರ್ಯನು ಅರ್ಧ ಉದಯವಾಗಿರುವ ಸಮಯದಲ್ಲಿ ಮಾಘ ಸ್ನಾನವನ್ನು ಮಾಡಬೇಕು. ಆ ತಿಂಗಳೆಲ್ಲಾ ಮಾಘ ವ್ರತವನ್ನು ಆಚರಿಸಬೇಕು. ಎಳ್ಳು, ಹೊಯ್ಗಡುಬು, ಖರ್ಜೂರ, ಪಕ್ವಾನ್ನ, ಮುಂತಾದುವನ್ನು ದಾನ ಮಾಡಬೇಕು. ಭಕ್ತಿಯಿಂದ ಯಥಾ ಶಕ್ತಿಯಾಗಿ ಬ್ರಾಹ್ಮಣರಿಗೆ ದಾನ ಕೊಡಬೇಕು. ಧನ ಲೋಭ ಮಾಡಬಾರದು. ಸಕ್ಕರೆ ಸೇರಿಸಿ ತುಪ್ಪದಲ್ಲಿ ಮಾಡಿದ ಭಕ್ಷ್ಯಗಳನ್ನು ದಾನ ಮಾಡಬೇಕು. ದೀಪದಾನವನ್ನು ಯಥಾ ಶಕ್ತಿಯಾಗಿ ಮಾಡಿ ತಾಪಸಿಗಳಿಗೆ ಊಟವನ್ನಿಡಬೇಕು. ಹೇಮಂತದಲ್ಲಿ ಛಳಿ ಹೋಗಲು ಬ್ರಾಹ್ಮಣನಿಗೆ ಕಟ್ಟಿಗೆ ದಾನಮಾಡಿ, ಯಥಾ ಶಕ್ತಿಯಾಗಿ ವಸ್ತ್ರಗಳು, ಕಂಬಳಿಗಳು ಮುಂತಾದುವನ್ನು ಸಮರ್ಪಿಸಬೇಕು. ವಿದ್ವಾಂಸನಾದ ಬ್ರಾಹ್ಮಣನಿಗೆ ಸುಖವಾಗಿ ನಿದ್ರೆ ಮಾಡಲು ಅನುಕೂಲವಾಗುವಂತೆ ಮಂಚ, ಚಿತ್ರರಂಜಿತವಾದ ಉಣ್ಣೆಯ ಬಟ್ಟೆಗಳನ್ನು ಕೊಡಬೇಕು. ಶೀತ ನಿವಾರಕಗಳಾದ ಶುಂಠಿ ಮುಂತಾದ ಬಿಸಿಯನ್ನುಂಟು ಮಾಡುವ ಔಷಧಗಳನ್ನು ವಿಪ್ರನಿಗೆ ದಾನ ಮಾಡಬೇಕು. ಏಲಕ್ಕಿ, ಪಚ್ಚಕರ್ಪೂರ ಸೇರಿಸಿದ ತಾಂಬೂಲವನ್ನು ನೀಡಬೇಕು. ವರ್ಷಕ್ಕೆ ಬೇಕಾದ ಪದಾರ್ಥಗಳೊಡನೆ ಸಮೃದ್ಧಿಯಾದ ಮನೆಯನ್ನು ಬ್ರಾಹ್ಮಣನಿಗೆ ನೀಡಬೇಕು. ತೀರ್ಥಯಾತ್ರೆಗಳನ್ನು ಮಾಡುವವರಿಗೆ ಸುಖವನ್ನುಂಟು ಮಾಡುವ ಪಾದುಕೆಗಳನ್ನು ದಾನ ಮಾಡಬೇಕು. ಗಂಧ, ಪರಿಮಳವಾದ ಹೂವುಗಳಿಂದ ಕೇಶವನ ಪೂಜೆ ಮಾಡಬೇಕು. ರುದ್ರಾಭಿಷೇಕದಿಂದ ಯಥಾ ವಿಧಿಯಾಗಿ ಪಾರ್ವತಿ ಪರಮೇಶ್ವರರನ್ನು ಅರ್ಚಿಸಬೇಕು. ಧೂಪ ದೀಪ ನೈವೇದ್ಯಗಳಿಂದ ಸಾಂಬಶಿವನ ಪೂಜೆ ಮಾಡಬೇಕು. ದೀಪಮಾಲೆ ಶಂಕರನಿಗೆ ವಿಶೇಷವಾಗಿ ಪ್ರೀತಿಕರವಾದದ್ದು. ಪತಿರೂಪವನ್ನು ಹೃದಯದಲ್ಲಿ ಧ್ಯಾನಿಸುತ್ತಾ ಭಕ್ತಿಯಿಂದ ನಾರಾಯಣನನ್ನು ಸ್ಮರಿಸಿ ಏಕಭಾವದಿಂದ ಪೂಜೆ ಮಾಡುವ ಸತಿಗೆ ಪಾಪಗಳೆಲ್ಲವೂ ನಾಶವಾಗುತ್ತವೆ. ನಿಯಮಗಳನ್ನು ಪಾಲಿಸುತ್ತಾ, ಎತ್ತಿನ ಗಾಡಿಯನ್ನು ಹತ್ತದೆ, ರವಿಕೆಯನ್ನು ಹಾಕಿಕೊಳ್ಳದೆ, ಬಿಳಿಯ ವಸ್ತ್ರಗಳನ್ನೇ ಧರಿಸಬೇಕು. ಕೆಂಪು, ಕಪ್ಪು, ಚಿತ್ರ ವರ್ಣಗಳ ವಸ್ತ್ರಗಳು ದೋಷಪ್ರದವು.
   

||ಶ್ರೀಗುರು ಚರಿತ್ರೆ - ಮೂವತ್ತೊಂದನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
 ||ಶ್ರೀಗುರುಭ್ಯೋನಮಃ||

ಅಯ್ಯಾ, ನಾಮಧಾರಕ, ಅದು ಅಪೂರ್ವವಾದದ್ದು. ಯೋಗೀಶ್ವರನೇ ಕಾರಣಿಕನಾಗಿ ಸ್ತ್ರೀ ಧರ್ಮಗಳನ್ನು ಹೇಳಿದನು. ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು. ಅವಳಿಗೆ ಗುರುವು ಹೀಗೆ ಬೋಧಿಸಿದನು. "ಹೇ ಸಾಧ್ವಿ. ಈ ಆಚಾರಗಳು ಭವಸಾಗರದಿಂದ ತರಿಸಬಲ್ಲವು. ಗಂಡ ಜೀವಂತನಾಗಿರುವ ಸಮಯದಲ್ಲಿ ಆಚರಿಸ ಬೇಕಾದ ನಾರಿ ಧರ್ಮಗಳನ್ನು, ಗಂಡ ಸತ್ತ ಮೇಲೆ ಆಚರಿಸ ಬೇಕಾದ ನಾರಿ ಧರ್ಮಗಳನ್ನು ಹೇಳುತ್ತೇನೆ. ಸ್ಕಾಂದ ಪುರಾಣದಲ್ಲಿ ಕಾಶೀ ಖಂಡದಲ್ಲಿ ಬಹು ವಿಸ್ತಾರವಾಗಿ ಇರುವ ಈ ಸ್ತ್ರೀ ಧರ್ಮಗಳು ಬಹು ವಿಧಗಳು. ಅವನ್ನು ಏಕಾಗ್ರ ಚಿತ್ತಳಾಗಿ ಕೇಳು. ಕಾಶಿ ನಗರದಲ್ಲಿ ಮಹಾಮುನಿಯಾದ ಅಗಸ್ತ್ಯ ಮಹರ್ಷಿಯು ವಾಸಿಸುತ್ತಿದ್ದನು. ಲೋಪಾಮುದ್ರ ಅಗಸ್ತ್ಯನ ಪತ್ನಿ. ಆಕೆ ಮಹಾಸಾಧ್ವಿ. ಪ್ರಾಜ್ಞಳು. ಪತಿವ್ರತಾ ಶಿರೋಮಣಿ. ಆ ದಂಪತಿಗಳು ಕಾಶೀಪುರಕ್ಕೆ ಅಲಂಕಾರ ಪ್ರಾಯರಾಗಿ ಧರ್ಮಾಚರಣೆ ಮಾಡುತ್ತಿದ್ದರು. ಅಗಸ್ತ್ಯನಿಗೆ ವಿಂಧ್ಯನೆಂಬ ಮಹಾ ಶೈಲನು ಶಿಷ್ಯನಾಗಿದ್ದನು. ಭೂಲೋಕದಲ್ಲಿ ಪರ್ವತ ರೂಪನಾಗಿ ಅವನು ಗುರುವಿಗೆ ಪ್ರಿಯವನ್ನಾಚರಿಸುತ್ತಿದ್ದನು. ಆ ಪರ್ವತನು ನಾನಾ ವೃಕ್ಷಗಳು, ನಾನಾ ಲತೆಗಳು, ಪುತ್ರೀ ಸಮಾನರಾದ ನದಿಗಳಿಂದ ಕೂಡಿದ್ದನು. ಒಂದು ಸಲ ಬ್ರಹ್ಮರ್ಷಿಯಾದ ನಾರದನು ಪರ್ಯಟನೆ ಮಾಡುತ್ತಾ, ಆ ಪರ್ವತಕ್ಕೆ ಬಂದನು. ವಿಂಧ್ಯಾಚಲವನ್ನು ನೋಡಿ ಸಂತುಷ್ಟನಾದ ನಾರದನು ವಿಂಧ್ಯಾದ್ರಿಗೆ, " ಅಯ್ಯಾ ನಿನ್ನ ಸಮಾನರು ನನ್ನ ಕಣ್ಣಿಗೆ ಬೀಳಲಿಲ್ಲ. ನಿನ್ನ ಮೇಲೆ ರತ್ನ ಮಯವಾದ ಮಹಾಭೂಮಿಗಳು, ವೃಕ್ಷಗಳು, ಇವೆ. ಆದರೆ ಒಂದೇ ಕಡಮೆ. ಔನ್ನತ್ಯದಲ್ಲಿ ನೀನು ಮೇರು ಪರ್ವತದಂತಹವನು ಅಲ್ಲ. ಅವನಿಗಿಂತ ಸ್ವಲ್ಪ ಕೆಳಗೆ ಇರುವಂತೆ ಕಾಣುತ್ತಿದ್ದೀಯೆ" ಎಂದು ಹೇಳಿದನು. ನಾರದನು ಹಾಗೆ ಹೇಳುತ್ತಲೇ ವಿಂಧ್ಯ ಪರ್ವತನು ಕೋಪಗೊಂಡನು. ಕ್ಷಣ ಕಾಲದಲ್ಲಿ ಮೇರುವನ್ನು ತುಚ್ಛವಾಗಿ ಮಾಡುವ ಪ್ರಯತ್ನದಲ್ಲಿ ಬೆಳೆಯಲಾರಂಭಿಸಿದನು. ಹಾಗೆ ಬೆಳೆಯುತ್ತಿದ್ದ ವಿಂಧ್ಯನು ಸೂರ್ಯ ಮಂಡಲವನ್ನು ಸೇರಿ, ಕ್ರಮವಾಗಿ ಸೂರ್ಯನನ್ನು ದಾಟಿ, ಸ್ವರ್ಗ ಭವನವಾದ ಅಮರಾವತಿಯನ್ನು ದಾಟಿ ಹೋದನು. ವಿಂಧ್ಯದ ದಕ್ಷಿಣ ಭಾಗದಲ್ಲೆಲ್ಲಾ ಸದಾ ಕಾಲಕ್ಕೆ ಅಂಧಕಾರ ಉಂಟಾಯಿತು. ಸೂರ್ಯ ಕಿರಣಗಳು ಆ ದಕ್ಷಿಣ ಪ್ರಾಂತದಲ್ಲಿ ಪ್ರವೇಶಿಸಲಾರದೆ ಹೋದವು. ಯಜ್ಞಾದಿ ಕರ್ಮಗಳು ಲುಪ್ತವಾದವು. ಋಷಿಗಳೆಲ್ಲರೂ ಒಟ್ಟು ಗೂಡಿ ಇಂದ್ರ ಭವನವನ್ನು ಸೇರಿ ಇಂದ್ರನಿಗೆ ಅದನ್ನು ತಿಳಿಸಿದರು. ಆ ಅದ್ಭುತ ವಾರ್ತೆಯನ್ನು ಕೇಳಿ ಇಂದ್ರನು ಕ್ರುದ್ಧನಾಗಿ ಬ್ರಹ್ಮ ಲೋಕವನ್ನು ಸೇರಿ ಬ್ರಹ್ಮನಿಗೆ ನಮಸ್ಕರಿಸಿ ವಿಂಧ್ಯ ವೃತ್ತಾಂತವೆಲ್ಲವನ್ನೂ ಹೇಳಿದನು. ದೇವೇಂದ್ರನಿಗೆ ಬ್ರಹ್ಮ, "ಬ್ರಹ್ಮವೇತ್ತರಲ್ಲಿ ಶ್ರೇಷ್ಠನಾದ ಅಗಸ್ತ್ಯನು ಈ ವಿಂಧ್ಯನಿಗೆ ಗುರುವು. ಕಾಶೀಪುರದಲ್ಲಿದ್ದಾನೆ. ಅವನನ್ನು ದಕ್ಷಿಣ ಪ್ರಾಂತಕ್ಕೆ ಕಳುಹಿಸು. ಅಲ್ಲಿ ಆತನು ಆಧಾರವಾಗುತ್ತಾನೆ. ದಕ್ಷಿಣ ಭಾಗವು ಇಲ್ಲಿಯವರೆಗೆ ನಿರಾಧಾರ ವಾಗಿದೆಯಲ್ಲವೆ? ಆದ್ದರಿಂದ ಇಂದ್ರ, ಅಗಸ್ತ್ಯನನ್ನು ದಕ್ಷಿಣ ದಿಕ್ಕಿಗೆ ಪಯಣಿಸುವಂತೆ ಮಾಡು. ಬರುತ್ತಿರುವ ಮುನಿಯನ್ನು ಕಂಡ ಕೂಡಲೇ ಭಕ್ತಿಯಿಂದ ವಿಂಧ್ಯನು ಅವನಿಗೆ ಶರಣಾಗಿ ಪ್ರಣಾಮ ಮಾಡುತ್ತಾನೆ. ಆ ಶಿಷ್ಯನನ್ನು ಅಗಸ್ತ್ಯನು ಬೆಳೆಯ ಬೇಡವೆಂದು ಆದೇಶಿಸುತ್ತಾನೆ. ತನ್ನ ಶಿಖರಗಳೆನ್ನುವ ಶಿರಸ್ಸಿನಿಂದ ಪ್ರಣಾಮ ಮಾಡುತ್ತಿರುವ ವಿಂಧ್ಯನನ್ನು ಅಗಸ್ತ್ಯ ಋಷಿ ಭೂಮಿಗೆ ಸಮಾನನಾಗಿ ಮಾಡುತ್ತಾನೆ. ಆದ್ದರಿಂದ ಹೇ ಇಂದ್ರ, ನೀನು ಕಾಶೀ ನಗರಕ್ಕೆ ಹೋಗು. ಆಲಸ್ಯ ಮಾಡಬೇಡ. ಮುನೀಶ್ವರನನ್ನು ಪ್ರಾರ್ಥಿಸಿ ಅಗಸ್ತ್ಯನ ದಕ್ಷಿಣ ದಿಗ್ಯಾತ್ರೆಗೆ ಪ್ರೋತ್ಸಾಹಿಸು" ಎಂದು ಬ್ರಹ್ಮ ಬೋಧಿಸಿದನು. ತಕ್ಷಣವೇ ದೇವನಾಥನು ಬ್ರಹ್ಮನಿಗೆ ನಮಸ್ಕರಿಸಿ, ಪ್ರಯಾಣಕ್ಕೆ ಸಿದ್ಧನಾಗಿ, ಬೃಹಸ್ಪತಿ ದೇವತೆಗಳನ್ನು ಜೊತೆಯಲ್ಲಿಟ್ಟು ಕೊಂಡು ಅವಿಮುಕ್ತಪುರಿಯಾದ ಕಾಶೀಪುರವನ್ನು ಋಷಿಗಳ ಜೊತೆಯಲ್ಲಿ ಸೇರಿದನು. ದೇವ ಗುರುವಾದ ಬೃಹಸ್ಪತಿಯನ್ನು ಮುಂದಿಟ್ಟು ಕೊಂಡು ಅಗಸ್ತ್ಯನನ್ನು ದೇವರಾಜನು ಭೇಟಿ ಮಾಡಿದನು. ಬಂದ ಸುರರನ್ನು ಕಂಡು ಅಗಸ್ತ್ಯನು ಅರ್ಘ್ಯ ಪಾದ್ಯಾದಿಗಳನ್ನು ಕೊಟ್ಟು ಭಕ್ತಿಯಿಂದ ಪೂಜಿಸಿದನು. ದೇವತಾ ಸಹಿತನಾದ ಬೃಹಸ್ಪತಿ ಉತ್ತಮನಾದ ಅಗಸ್ತ್ಯನನ್ನು ಸ್ತುತಿಸಿ, ಪುಣ್ಯ ಕೀರ್ತಿಯೂ, ಪತಿವ್ರತೆಯೂ ಆದ ಲೋಪಾಮುದ್ರೆಯನ್ನು ಹೊಗಳಿದನು. ಬೃಹಸ್ಪತಿ ಅಲ್ಲಿ ಸೇರಿದ್ದ ಸುರರನ್ನು ಕಂಡು, "ಹೇ ದೇವತೆಗಳಿರ, ಲೋಪಾಮುದ್ರೆಗೆ ಸಮನಾದ ಪತಿವ್ರತೆ ಬೇರೊಬ್ಬಳಿಲ್ಲ. ಅನಸೂಯ, ಸಾವಿತ್ರಿ, ಪವಿತ್ರವಾದ ಅರುಂಧತಿ, ಶೌಂಡಿಲ್ಯನ ಪತ್ನಿ, ಸ್ವಯಂಭೂವಿನ ಸತಿ ಶತರೂಪ, ಪಾರ್ವತಿ, ಶ್ರೀಲಕ್ಷ್ಮಿ, ಹಿಮಾಲಯನ ಪ್ರಾಣವಲ್ಲಭೆ ಮೇನಕೆ, ಧ್ರುವನ ತಾಯಿ ಸುನೀತಿ, ಸೂರ್ಯನ ಕಾಂತೆ ಸೌಂಜ್ಞಾ ದೇವಿ, ಅಗ್ನಿಯ ಭಾರ್ಯೆ ಸ್ವಾಹಾದೇವಿ, ಪತಿವ್ರತೆಯರೆಂದು ಪ್ರಸಿದ್ಧಿಗೊಂಡವರು. ಇವರೆಲ್ಲರಿಗೂ ಅಧಿಕಳಾದ ಪತಿವ್ರತೆ ಲೋಪಾಮುದ್ರ. ದೇವತೆಗಳೇ, ಪತಿವ್ರತಾಚಾರಗಳನ್ನು, ಶಾಸ್ತ್ರ ಸಮ್ಮತವಾದದ್ದನ್ನು, ಹೇಳುತ್ತೇನೆ. ಕೇಳಿ. ಪತಿ ಭೋಜನವಾದ ಮೇಲೆ ಬಿಟ್ಟ ಉಚ್ಚಿಷ್ಟವೇ ಈಕೆಗೆ ಮುಖ್ಯ ಭೋಜನವು. ಹಗಲೂ ರಾತ್ರಿ ಪತಿಸೇವೆ, ಅತಿಥಿ ಪೂಜೆಯನ್ನು ಮಾಡಬೇಕು. ಪತಿಯ ಆಜ್ಞೆಯಿಲ್ಲದೆ ದಾನ ಧರ್ಮಾದಿಗಳನ್ನು ಸ್ವಬುದ್ಧಿಯಿಂದ ಮಾಡಬಾರದು. ಎಲ್ಲಕಾಲದಲ್ಲೂ ಪತಿಯನ್ನೇ ಸೇವೆ ಮಾಡಬೇಕು. ಗಂಡ ನಿಂತಿದ್ದರೆ ತಾನೂ ನಿಂತಿರಬೇಕು. ಪತಿ ಆಜ್ಞೆಯಿಲ್ಲದೆ ಕೂಡ ಬಾರದು. ಪತಿಯನ್ನು ಅವಮಾನಿಸಬಾರದು. ಪತಿಸೇವೆ ಮಾಡುವ ಕಾಲದಲ್ಲಿ ಪತಿಯನ್ನೇ ಶ್ರೀಹರಿಯೆಂದು ಭಾವಿಸಬೇಕು. ಗಂದ ಗಾಢ ನಿದ್ರೆ ಮಾಡಿದ ಮೇಲೆ ಪತ್ನಿ ಮಲಗಬೇಕು. ಗಂಡನ ಕಂಚುಕವನ್ನು, ಕರ್ಣ ಭೂಷಣವನ್ನು ಮುಟ್ಟಬಾರದು. ಕಂಚುಕ ಸ್ಪರ್ಶದಿಂದ ಗಂಡನ ಆಯುಸ್ಸು ಕ್ಷೀಣವಾಗುವುದು. ಪತಿ ನಾಮೋಚ್ಛಾರಣದಿಂದ ತನ್ನ ಆಯುಸ್ಸನ್ನೇ ಸ್ತ್ರೀಯಾದವಳು ಕ್ಷೀಣಿಸಿ ಕೊಳ್ಳುತ್ತಾಳೆ. ಗಂದ ನಿದ್ರೆಯಿಂದೇಳುವವರೆಗೂ ನಿದ್ರೆ ಮಾಡದೆ ಪತಿವ್ರತೆ ಮುಂಚೆಯೇ ಎದ್ದು, ಮನೆಯನ್ನು ಒರೆಸುವುದು, ಸಾರಿಸುವುದು ಮುಂತಾದ ಕೆಲಸಗಳನ್ನು ಮಾಡಬೇಕು. ಪ್ರತಿ ದಿನವೂ ಪತಿವ್ರತೆ ಗಂಡನನ್ನು ಪೂಜಿಸ ಬೇಕು. ಪತಿಯನ್ನೇ ಶಂಕರನಾಗಿ ಭಾವಿಸಬೇಕು. ಗಂದ ಮನೆಯಲ್ಲಿರುವಾಗಲೇ ಪತಿವ್ರತೆ ಶರೀರದಲ್ಲಿ ಅಲ್ಂಕಾರಗಳನ್ನು ಧರಿಸಬೇಕು. ಗಂದ ಗ್ರಾಮಾಂತರಗಳಿಗೆ ಹೋದಾಗ, ಬಹಳ ಕಾಲ ಪ್ರವಾಸದಲ್ಲಿದ್ದಾಗ ಪತಿವ್ರತೆ ಒಂದು ಭೂಷಣವನ್ನೂ ಧರಿಸಬಾರದು.

ಗಂಡ ಕಠಿಣವಾದ ಮಾತುಗಳನ್ನಾಡಿದಾಗ ತನ್ನನ್ನು ಕ್ಷಮಿಸುವಂತೆ ಕೇಳಿ ಕೊಳ್ಳಬೇಕು. ತನ್ನ ಹೃದಯದಲ್ಲಿ ಅವನ ಮೇಲೆ ಕೋಪವನ್ನು ನಿಲ್ಲಿಸಿ ಕೊಳ್ಳಬಾರದು. ಹೊರಗಿನಿಂದ ಬರುವ ಗಂಡನನ್ನು ಆದರದಿಂದ ಎದುರು ಗೊಳ್ಳಬೇಕು. ಸಾವಿರ ಕೆಲಸಗಳಿದ್ದರೂ ಎಲ್ಲವನ್ನು ಬಿಟ್ಟು ಗಂಡ ಮನೆಗೆ ಬಂದಕೂಡಲೇ ‘ಏನು ಬೇಕು’ ಎಂದು ಕೇಳಬೇಕು. ಅವನ ಕುಶಲವನ್ನು ಕೇಳಿ, ಅವನು ಆಜ್ಞಾಪಿಸಿದ ಕೆಲಸಗಳನ್ನು ಮಾತ್ರ ಮಾಡ ಬೇಕು. ಆದರೆ ಸ್ವಾತಂತ್ರ್ಯವನ್ನು ತೋರಿಸ ಬಾರದು. ಪತಿವ್ರತೆಗೆ ಒಂದು ಗುರುತು: ಇತರರ ಮನೆಗಳಿಗೆ ಹೋಗದೇ ಇರುವುದು. ಇತರರ ಮನೆಗಳಲ್ಲಿನ ಅನೇಕ ದೋಷಗಳು ಈಕೆಗೆ ಬರಬಹುದಲ್ಲವೇ! ಕೆಲಸದ ಮೇಲೆ ಹೋದರೂ ಅಲ್ಲಿ ಸ್ತ್ರೀ ಪುರುಷರನ್ನು ಯಾರನ್ನೂ ನೋಡದೆ ತ್ವರೆಯಾಗಿ ಕೆಲಸ ಮುಗಿಸಿ ಹಿಂತಿರುಗಿ ಬಂದು ತನ್ನ ಮನೆಯಲ್ಲೇ ಇರಬೇಕು. ಸ್ವತಂತ್ರಿಸಿ ಮನೆಯಿಂದ ಹೊರಗೆ ಹೋದ ಸ್ತ್ರೀ ಗೂಬೆಯಾಗಿ ಜನ್ಮಿಸುತ್ತಾಳೆ. ಪತಿವ್ರತೆಯಾದ ಲೋಪಾಮುದ್ರ ಇಂತಹ ಧರ್ಮಗಳನ್ನು ಆಚರಿಸುತ್ತಿರುವ ಸಾಧ್ವಿ. ಆಕೆ ಎಂದೂ ಬಾಗಿಲನ್ನು, ಹೊಸಲನ್ನು ದಾಟುವುದಿಲ್ಲ. ಪ್ರಾತಃಕಾಲದಲ್ಲೇ ಎದ್ದು, ಮಾರ್ಜನಾದಿಗಳನ್ನು ಮುಗಿಸಿ, ದೇವ ಪೂಜೆಗೆ ಉಪಯೋಗಿಸುವ ಪರಿಕರಗಳನ್ನು ಸ್ವಚ್ಛವಾಗಿ ಶುಭ್ರ ಗೊಳಿಸಿ, ಗಂಧ, ಅಕ್ಷತೆ, ಹೂವು ಮುಂತಾದುವನ್ನು ಕೂಡಿಸಿಟ್ಟು ಗಂಡನಿಗೆ ಸಂತೋಷವಾಗುವಂತೆ ಮಾಡ ಬೇಕು. ಗಂಡನ ಅನುಷ್ಠಾನ ಮುಗಿಯುವೊದರಳಗೆ ಗಂಡನ ಚಿತ್ತ ವೃತ್ತಿಗೆ ಅನುಗುಣವಾಗಿ ರುಚಿಕರವಾದ ಅಡಿಗೆಯನ್ನು ಮಾಡಿಡಬೇಕು. ಗಂಡನ ಉಚ್ಛಿಷ್ಟವನ್ನೇ ಭುಜಿಸಿ ಮನೋ ವಾಕ್ಕಾಯಗಳಲ್ಲಿ ಗಂಡನನ್ನು ಅನುಸರಿಸಬೇಕು. ಗಂಡ ಗ್ರಾಮಾಂತರ ಹೋದಾಗ ಹಸುವು ಕರುವಿಗೆ ಕೊಟ್ಟ ಮೇಲೆ ಉಳಿದ ಹಾಲನ್ನು ಸೇವಿಸುವುದು ಸಮ್ಮತವು. ಇಲ್ಲವೇ ಹಸುವು ತಿಂದು ಬಿಟ್ಟ ಪದಾರ್ಥಗಳನ್ನು ತಿನ್ನ ಬೇಕು. ಅಂದರೆ ಅನ್ನವನ್ನು ಅತಿಥಿಗಳಿಗೆ ಇಟ್ಟು, ಹಸುವಿಗೆ ಗ್ರಾಸವನ್ನು ಹಾಕಿ, ಪವಿತ್ರವಾದ ಬೋಜನವನ್ನು ಪತಿವ್ರತೆ ಮಾಡಬೇಕು. ಕಸವನ್ನು ತೆಗೆದು ಮನೆಯನ್ನು ಶುಭ್ರ ಮಾಡ ಬೇಕು. ಇದಕ್ಕೆ ಮಿಂಚಿದ ಧರ್ಮವಿಲ್ಲ. ಗಂಡನ ಆಜ್ಞೆಯಿಲ್ಲದೆ ವ್ರತ, ಉಪವಾಸ ಮುಂತಾದುವನ್ನು ಮಾಡ ಬಾರದು. ಗಂಡನ ಅನುಮತಿಯಿಲ್ಲದೆ ಉತ್ಸವಗಳು, ತೀರ್ಥ ಯಾತ್ರೆಗಳು ಮುಂತಾದುವಕ್ಕೆ ಹೋಗ ಬಾರದು. ತನ್ನ ಗಂಡ ಸಂತೋಷದಲ್ಲಿರುವಾಗ ಪತಿವ್ರತೆ ದುಷ್ಟ ಚಿತ್ತಳಾಗಿರಬಾರದು. ಹಾಗೆಯೇ ಗಂಡನು ದುಃಖದಲ್ಲಿರುವಾಗ ತಾನು ಸಂತೋಷದಲ್ಲಿರಬಾರದು. ರಜಸ್ವಲೆ ಯಾದಾಗ ಮೌನವನ್ನಾಚರಿಸಬೇಕು. ತನ್ನ ಮುಖವನ್ನು ತೋರಿಸ ಬಾರದು. ಆ ಸಮಯದಲ್ಲಿ ವೇದ ವಾಣಿಯನ್ನು ಕೇಳಬಾರದು. ಹೀಗೆ ಮೂರುದಿನಗಳು ಕಳೆಯ ಬೇಕು. ನಂತರ ಸ್ನಾನ ಮಾಡಿ, ನಾಲ್ಕನೆಯ ದಿನ ಗಂಡನ ಮುಖವನ್ನು ನೋಡ ಬೇಕು. ಆ ಸಮಯದಲ್ಲಿ ಗಂಡನು ಮನೆಯಲ್ಲಿಲ್ಲದಿದ್ದರೆ ಅವನ ಮುಖವನ್ನು ಮನಸಾ ಧ್ಯಾನಿಸಬೇಕು. ಇಲ್ಲದಿದ್ದರೆ ಸೂರ್ಯ ಮಂಡಲವನ್ನು ನೋಡ ಬೇಕು. ನಂತರವೇ ಮನೆಯೊಳಕ್ಕೆ ಪ್ರವೇಶ ಮಾಡಬೇಕು. ಗಂಡನ ಆಯುರ್ವರ್ಧನಕ್ಕೆ ಪತಿವ್ರತೆ ಅರಿಶಿನ ಕುಂಕುಮಗಳು, ಸಿಂಧೂರ, ಕಾಡಿಗೆ, ಮಂಗಳ ಸೂತ್ರಗಳನ್ನು ಧರಿಸಿ ಜಡೆ ಹಾಕಿ ವಿರಾಜ ಮಾನಳಾಗಿರಬೇಕು. ಸುವಾಸಿನಿಗೆ ವೇಣಿ ಬಂಧನವು, ತಾಂಬೂಲವು ಪ್ರಶಸ್ತವು. ಗಂಡನ ಸಮೀಪದಲ್ಲಿ ಪ್ರತಿ ದಿನವೂ ಬಳೆಗಳನ್ನು ಧರಿಸ ಬೇಕು. ಅಕ್ಕಪಕ್ಕದವರೊಡನೆ, ಕೆಲಸದವಳೊಡನೆ, ಜೈನ ವನಿತೆಯೊಡನೆ, ದರಿದ್ರಳೊಡನೆ. ವೈಶ್ಯೆಯರ ಹೆಣ್ಣಾಳುಗಳೊಡನೆ, ಸ್ನೇಹ ಮಾಡ ಬಾರದು. ಗಂಡನನ್ನು ಆಸಕ್ತಿಯಿಂದ ನಿಂದಿಸುವವಳೊಡನೆ ಮಾತನಾಡುವುದೂ ದೋಷವೇ! ಅಂತಹವರೊಡನೆ ಮಾತನಾಡಿದರೂ ಪತಿವ್ರತೆ ದೂಷಿತಳಾಗುತ್ತಾಳೆ. ಅತ್ತೆ ಮಾವಂದಿರನ್ನು, ಹೆಣ್ಣು ಮಕ್ಕಳನ್ನು, ಭಾವ ಮೈದಂದಿರನ್ನು ಬಿಟ್ಟು ಗಂಡನೊಡನೆ ಬೇರೆಯಾಗಿರಲು ಕೋರುವ ಸ್ತ್ರೀಯು ಮುಂದಿನ ಜನ್ಮದಲ್ಲಿ ಹೆಣ್ಣು ನಾಯಿಯಾಗಿ ಹುಟ್ಟುತ್ತಾಳೆ. ನಗ್ನವಾಗಿ ಸ್ನಾನ ಮಾಡ ಬಾರದು. ಪತಿವ್ರತೆ ಎಂದಿಗಾದರೂ ಒರಳು ಕಲ್ಲು, ಒರಳು, ಬಂಡೆ ಕಲ್ಲುಗಳ ಮೇಲೆ ಕೂಡ ಬಾರದು. ಔದುಂಬರ ವೃಕ್ಷದ ಕೆಳಗೆ, ಬೀಸುವ ಕಲ್ಲಿನಮೇಲೆ ಕುಳಿತು ಕೊಳ್ಳುವುದು ಒಳ್ಳೆಯದಲ್ಲ. ಅಂತಹ ಹೆಂಗಸೇ ಪತಿವ್ರತೆ. ಗಂಡನೊಡನೆ ವಾದ ಮಾಡುವ ಸ್ತ್ರೀ ಬಹಳ ದುಃಖ ಪೀಡಿತಳಾಗುತ್ತಾಳೆ. ಗಂಡ ಭಾಗ್ಯ ಹೀನ ನಾದರೂ, ದುಷ್ಟ ನಾದರೂ, ನಪುಂಸಕನಾದರೂ, ಕುಷ್ಟ ರೋಗಿಯಾದರೂ, ವ್ಯಾಧಿಗ್ರಸ್ತನಾದರೂ. ಕುಳ್ಳನಾದರೂ ಅವನನ್ನೇ ದೇವರಿಗೆ ಸಮನಾಗಿ ತಿಳಿಯ ಬೇಕು. ಅವನನ್ನು ಶ್ರೀಹರಿಯೆಂದು ಪತಿವ್ರತೆ ಭಾವಿಸ ಬೇಕು. ಗಂಡನನ್ನನುಸರಿಸುವ ಪತಿವ್ರತೆಯೇ ಪರಮೇಶ್ವರನಿಗೆ ಪ್ರೀತಿ ಪಾತ್ರಳು. ಗಂಡನಿಗೆ ಇಷ್ಟವಾದ ವಸ್ತ್ರ, ಭೂಷಣಗಳನ್ನೇ ಧರಿಸ ಬೇಕು. ಗಂಡನಿಗೆ ದುಃಖವಾಗಿದ್ದಾಗ ಸತಿಯು ಭೂಷಣಗಳನ್ನು ಧರಿಸ ಬಾರದು. ಆಭರಣಗಳನ್ನು ಕೊಳ್ಳಬೇಕೆಂದು ಇಷ್ಟವಾದರೆ ಅದನ್ನು ತಾನೇ ಹೇಳ ಬಾರದು. ಮಕ್ಕಳ ಮೂಲಕ ಹೇಳಿಸ ಬೇಕು. ಯಾರೂ ಇಲ್ಲದಿದ್ದಾಗಲೂ ತನ್ನ ವಾಂಛೆಯನ್ನು ನೇರವಾಗಿ ಹೇಳ ಬಾರದು. ಇದು ನನಗೀಗಲೇ ಬೇಕು ಎಂದು ಎಂದಿಗೂ ಹೇಳ ಬಾರದು. ಸತಿಗೆ ಪತಿಯಿಂದ ಏನು ಲಭ್ಯವಾಗುತ್ತದೋ ಅದರಲ್ಲೇ ಸಂತೋಷ ಪಡಬೇಕು. ಸಮರ್ಥರನ್ನು, ಧನವಂತರನ್ನು ಕಂಡು ತನ್ನ ಪತಿಯನ್ನು ನಿಂದಿಸ ಬಾರದು. ಯಾತ್ರೆಗೆ ಹೊರಟವರನ್ನು ನೋಡಿ ತಾನೂ ಯಾತ್ರೆ ಮಾಡಬೇಕು ಎಂದು, ವೃದ್ಧಳಾದರೂ, ಹೇಳ ಬಾರದು. ಪತಿ ಸೇವೆಯೇ ಸತಿಗೆ ಯಾತ್ರೆ. ಪತಿಪಾದ ಜಲವೇ ಆಕೆಗೆ ತೀರ್ಥ. ಭಾಗೀರಥಿಯ ನೀರಿಗಿಂತಲೂ ಅಧಿಕವೆಂದು ಭಾವಿಸಿ ಪತಿ ಪಾದೋದಕವನ್ನು ಕುಡಿಯ ಬೇಕು. ಪತಿ ಪೂಜೆ ಮಾಡುವ ಸತಿಯನ್ನು ತ್ರಿಮೂರ್ತಿಗಳೂ ಅನುಗ್ರಹಿಸುತ್ತಾರೆ. ಶ್ರಾವಣ ಶುಕ್ರವಾರದಂತಹ ನೈಮಿತ್ತಿಕ ವ್ರತಗಳನ್ನು ಮಾಡ ಬೇಕೆಂಬ ಇಚ್ಛೆಯಿದ್ದರೆ ಗಂಡನ ಅನುಮತಿಯಿಂದ ಮಾಡ ಬೇಕು. ಸ್ವಬುದ್ಧಿಯಿಂದ ಮಾಡಿದರೆ ಗಂಡನ ಆಯುಸ್ಸು ಕ್ಷೀಣವಾಗುವುದು. ಅಷ್ಟೇ ಅಲ್ಲದೆ ಗಂಡನೊಡನೆ ಕೂಡಿ ಅವಳು ನರಕಕ್ಕೆ ಹೋಗುವಳು. ಗಂಡನ ಮೇಲೆ ಕೋಪ ಗೊಂಡು ಅವನಿಗೆ ಪ್ರತ್ಯುತ್ತರ ಕೊಟ್ಟರೆ ಮೊದಲು ಹೆಣ್ಣು ನಾಯಿಯಾಗಿ, ನಂತರ ನರಿಯಾಗಿ ಹುಟ್ಟಿ ಅವಳು ಗ್ರಾಮದ ಹತ್ತಿರ ಇರುತ್ತಾಳೆ. ಪ್ರತಿ ದಿನವೂ ಪತಿಪಾದಗಳನ್ನು ಪ್ರೋಕ್ಷಣೆ ಮಾಡಿ ಆ ನೀರನ್ನು ಕುಡಿಯಬೇಕು. ಪತಿ ಉಚ್ಚಿಷ್ಟವನ್ನು ದೈವ ಲಭ್ಯವೆಂದು ಭಾವಿಸಿ ಸಂತೋಷದಿಂದ ತಿನ್ನ ಬೇಕು. ಹಾಗೆ ಮಾಡುವ ಪತಿವ್ರತೆಗೆ ಸ್ವತಃ ಶಂಕರನೇ ಸುಪ್ರಸನ್ನನಾಗಬಲ್ಲನು. ಪತಿ ಸಹಿತ ಅವಳಿಗೆ ಸ್ವರ್ಗವಾಸವನ್ನು ಕೊಟ್ಟು ಆದರಿಸುವನು. ವನ ಭೋಜನಗಳಿಗೆ, ಪರಗೃಹ ಭೋಜನಗಳಿಗೆ ಹೋಗ ಬಾರದು. ಇಷ್ಟರು ಆಪ್ತರ ಮನೆಗಳಿಗೂ ಕೂಡಾ ದಿನ ದಿನವೂ ಹೋಗ ಬಾರದು.

ಪತಿವ್ರತೆಯಾದವಳು ಧನಿಕರ ವಿಷಯಗಳನ್ನು ಕೇಳ ಬಾರದು. ತನ್ನ ಗಂಡ ದುರ್ಬಲನಾದರೂ, ಅನಾಚಾರಿಯಾದರೂ ಅವನನ್ನು ನಿಂದಿಸ ಬಾರದು. ಅವನು ದುಶ್ಶೀಲನಾದರೂ ಅವನ ನಿಂದೆ ಮಾಡ ಬಾರದು. ಯಾವಾಗಲೂ ಅವನನ್ನು ಲಕ್ಷ್ಮೀಪತಿಯ ಸಮಾನನೆಂದು ಭಾವಿಸಬೇಕು. ಅತ್ತೆ ಮಾವಂದಿರ ಎದುರಿಗೆ ಗಟ್ಟಿಯಾಗಿ ಮಾತನಾಡ ಬಾರದು. ಗಂಡನೆದುರಿಗೆ ವಿಶೇಷವಾಗಿ ಹಾಸ್ಯ ಮಾತುಗಳನ್ನಾಡಬಾರದು. ಕೋಪ ಗೊಂಡು ಗಂಡ ತನ್ನನ್ನು ಹೊಡೆದಾಗ ಅವನನ್ನು ‘ಸಾಯಿ’ ಎಂದು ನಿಂದಿಸಿದ ಸ್ತ್ರೀ ಮರು ಜನ್ಮದಲ್ಲಿ ವ್ಯಾಘ್ರಿಯಾಗಿ ಹುಟ್ಟಿ ಅರಣ್ಯದಲ್ಲಿ ಮಹಾ ಕಷ್ಟಕ್ಕೀಡಾಗುತ್ತಾಳೆ. ಪರ ಪುರುಷನನ್ನು ವಾಂಛೆಯಿಂದ ನೋಡಿದ ಸ್ತ್ರೀ ಮರು ಜನ್ಮದಲ್ಲಿ ಹುಟ್ಟು ಕುರುಡಿಯಾಗುತ್ತಾಳೆ. ಗಂಡನು ಊಟ ಮಾಡದೆಯೇ ತಾನು ಊಟ ಮಾಡುವ ಸ್ತ್ರೀ ಹೆಣ್ಣು ಹಂದಿಯಾಗುತ್ತಾಳೆ. ಆ ಪಾಪದಿಂದಲೇ ಬಾವಲಿಯಾಗಿ ಹುಟ್ಟಿ ಮರದಲ್ಲಿ ತಲೆ ಕೆಳಗಾಗಿ ನೇತಾಡುತ್ತಾ ತನ್ನ ಮಲವನ್ನು ತಾನೇ ತಿನ್ನುತ್ತಿರುತ್ತಾಳೆ. ಪತಿ ಸನ್ನಿಧಿಯಲ್ಲಿ ಕೋಪದಿಂದ ನಿಷ್ಠೂರೋಕ್ತಿಗಳನ್ನಾಡಿದ ಸ್ತ್ರೀ ಮುಂದಿನ ಏಳು ಜನ್ಮಗಳಲ್ಲಿ ಮೂಗಿಯಾಗಿ ದಾರಿದ್ರ್ಯ ಬಾಧೆಯಿಂದ ಬಹು ದುಃಖ ಪಡುತ್ತಾಳೆ. ಸವತಿಯೊಡನೆ ಜಗಳ ವಾಡುವವಳು ಏಳು ಜನ್ಮಗಳಲ್ಲಿ ದೌರ್ಭಾಗ್ಯವನ್ನು ಹೊಂದುತ್ತಾಳೆ. ಸ್ವೇಚ್ಛೆಯಿಂದ ಮತ್ತೊಬ್ಬ ಸ್ತ್ರೀಯ ಗಂಡನನ್ನು ನೋಡುವವಳು ಅವಯವ ಹೀನಳಾಗುತ್ತಾಳೆ. ಕಾಮ ಕಾಂಕ್ಷೆಯಿಂದ ಹಾಗೆ ನೋಡಿದವಳು ಹೀನ ಗೃಹದಲ್ಲಿ ಹುಟ್ಟಿ ದಾರಿದ್ರ್ಯವನ್ನನುಭವಿಸುತ್ತಾಳೆ. ಆದ್ದರಿಂದ ಪರ ಪುರುಷರನ್ನು ನೋಡ ಬಾರದು. ಮನೆಗೆ ಬಂದ ಗಂಡನಿಗೆ ಸಂತೋಷದಿಂದ ಎದುರಾಗಿ ಪಾದಗಳನ್ನು ತೊಳೆದು, ಬೀಸಣಿಗೆಯಿಂದ ಗಾಳಿ ಹಾಕಬೇಕು. ಪಾದಗಳನ್ನು ಒತ್ತುತ್ತಾ ಮೃದುವಾಗಿ ಮಾತನಾಡಬೇಕು. ಗಂಡನು ಸಂತೋಷ ಪಟ್ಟರೆ ತ್ರಿಮೂರ್ತಿಗಳೂ ಸಂತುಷ್ಟರಾಗುತ್ತಾರೆ. ಆಪ್ತರು, ಇಷ್ಟರು, ಬಂಧುಗಳು, ಸೋದರರು, ತಂದೆತಾಯಿಗಳು ಕೂಡಾ ಕೊಡುವುದೇನಿಲ್ಲ. ಗಂಡನೊಬ್ಬನೇ ಪ್ರತ್ಯಕ್ಷವಾಗಿ ಐಹಿಕಗಳನ್ನು, ಪರೋಕ್ಷವಾಗಿ ಆಮುಷ್ಮಿಕಗಳನ್ನು ಕೊಡುವವನು.

ಗುರುವು, ದೈವವು, ತೀರ್ಥವು ಸರ್ವವೂ ಪತಿಯೇ ನನಗೆ ಎನ್ನುವ ಮನಸ್ಸುಳ್ಳವಳೇ ಪತಿವ್ರತೆ. ಗಂಡ ಜೀವಂತನಾಗಿರುವವರೆಗೂ ಸ್ತ್ರೀ ಪವಿತ್ರಳು, ಪತಿವ್ರತೆ. ಗಂಡ ಮೃತನಾದ ಕ್ಷಣದಿಂದ ಆಕೆ ಪ್ರೇತದಂತೆ ಆಸ್ಪೃಶ್ಯಳು. ಗಂಡನಿಲ್ಲದ ಸ್ತ್ರೀಗೆ ಸದಾ ಕಾಲ ಅಮಂಗಳವು ಅಂಟಿಕೊಂಡಿರುತ್ತದೆ. ಸಂತಾನವಿಲ್ಲದ ಸ್ತ್ರೀ ವಿಧವೆಯಾದರೆ ಪ್ರೇತಕ್ಕಿಂತ ಹೆಚ್ಚಿನ ಹೀನಳಾಗುತ್ತಾಳೆ. ಪ್ರಯಾಣ ಮಾಡಲು ಹೊರಟವರ ಮುಂದೆ ವಿಧವೆ ಎದುರಾಗಿ ಬಂದರೆ ಆ ಪ್ರಯಾಣಿಕನಿಗೆ ಮರಣವು ನಿಶ್ಚಯವು. ಹಾಗೆ ಬಂದ ವಿಧವೆ ಪುತ್ರವತಿಯಾಗಿದ್ದರೆ ಶುಭವೇ ಆಗುವುದು. ಪ್ರಯಾಣ ಮಾಡುವವನ ತಾಯಿ, ವಿಧವೆಯಾಗಿದ್ದರೂ, ಎದುರಿಗೆ ಬಂದರೆ ಅವನಿಗೆ ಶುಭವೇ ಆಗುವುದು. ಪುತ್ರನಿಲ್ಲದ ಸ್ತ್ರೀ ನಮಸ್ಕಾರಕ್ಕೂ ಅನರ್ಹಳು. ಅಪುತ್ರಕಳಾದ ವಿಧವೆಯಿಂದ ಅಶೀರ್ವಾದವನ್ನೂ ಪಡೆಯ ಬಾರದು. ಅದೂ ಅಮಂಗಳಕರವೇ. ಆಂತಹವಳು ಶಪಿಸಿದರೂ ಮರಣವೇ. ಆದ್ದರಿಂದ ಅಪುತ್ರವತಿಯಾದ ವಿಧವೆಯನ್ನು ಮಾತನಾಡಿಸ ಬಾರದು. ವೈಭವವೇಕೆ? ದೇಹವೇಕೆ? ಸ್ತ್ರೀಗೆ ಗಂಡನೇ ಸುಖವು. ಮೇಘದಲ್ಲಿ, ಮಿಂಚಿನಂತೆ, ಚಂದ್ರನೊಳಗೆ ಬೆಳದಿಂಗಳಿನಂತೆ ಪತಿಯ ಜೊತೆಯಲ್ಲಿ ಪತಿವ್ರತೆ ಅಸ್ತಮಿಸಬೇಕು. ಅನುಗಮನ(ಸಹಗಮನ)ವು ಶೃತಿ, ಸ್ಮೃತಿಗಳಲ್ಲಿ ಹೇಳಿರುವಂತೆ ಮಹಾ ಧರ್ಮವು. ಸಹಗಮನದಿಂದ ತನ್ನ ನಲವತ್ತು ತಲೆ ಮಾರುಗಳ ಕುಲವು ಉದ್ಧರಿಸಲ್ಪಡುತ್ತದೆ. ಗಂಡ ಮರಣಿಸಿದರೆ ಸಹಗಮನ ಮಾಡುವ ಸತಿಗೆ ಒಂದೊಂದು ಹೆಜ್ಜೆಗೂ ಒಂದೊಂದು ಅಶ್ವಮೇಧಯಾಗ ಮಾಡಿದ ಫಲವು ಬರುತ್ತದೆ. ಗಂಡ ಪಾಪಾತ್ಮನಾದರೂ, ಮೃತನಾಗಿ ಯಮಕಿಂಕರಿಂದ ಒಯ್ಯಲ್ಪಡುತ್ತಿದ್ದರೂ, ನರಕವನ್ನು ಸೇರುವಷ್ಟರಲ್ಲಿ ಪತಿವ್ರತೆಯಾದ ಅವನ ಹೆಂಡತಿ ಸಹಗಮನ ಮಾಡಿದರೆ, ಹದ್ದು ಸರ್ಪವನ್ನು ಆಕಾಶಕ್ಕೆ ಎಗರಿಸಿ ಕೊಂಡು ಹೋದಹಾಗೆ, ಆ ಮೃತ ಪಾಪಿಯಾದ ಗಂಡನನ್ನು ಸ್ವರ್ಗಕ್ಕೆ ತೆಗೆದುಕೊಂಡು ಹೋಗುತ್ತಾಳೆ. ಆಕೆಯ ಸಹಗಮನವನ್ನು ನೋಡಿದ ಯಮ ಕಿಂಕರರು ಭೀತರಾಗಿ ಆಕೆಯ ಗಂಡನನ್ನು ಬಿಟ್ಟು ದೂರವಾಗಿ ಹೊರಟು ಹೋಗಿ ಯಮಾಲಯವನ್ನು ಸೇರುತ್ತಾರೆ. ಆ ಸುವಾಸಿನಿಯಾದ ಪತಿವ್ರತೆಯನ್ನು ವಿಮಾನದಲ್ಲಿ ಕೂಡಿಸಿ ಕೊಂಡು, ಸುರಾಂಗನೆಯರು ನೀರಾಜನ ಕೊಟ್ಟು, ತ್ವರಿತವಾಗಿ ಸ್ವರ್ಗಕ್ಕೆ ಕರೆದೊಯ್ಯುವರು. ಯಮನನ್ನು ನೋಡಿ ಭಯ ಪಡುವುದಕ್ಕಿಂತ ಪತಿವ್ರತೆಯನ್ನು ನೋಡಿದುವುದಕ್ಕೆ ನಮಗೆ ಹೆಚ್ಚಿನ ಭಯ ಎಂದು ಯಮ ದೂತರು ಹೇಳುವರು. ಸೂರ್ಯನು ಪತಿವ್ರತೆಯನ್ನು ನೋಡಿ ಭಯಪಟ್ಟು ಮೆಲ್ಲಮೆಲ್ಲಗೆ ತನ್ನ ತಾಪವನ್ನು ತಗ್ಗಿಸುತ್ತಾನೆ. ಅಗ್ನಿಯೂ ಭೀತನಾಗಿ ತನ್ನ ಉಷ್ಣವನ್ನು ಬಿಟ್ಟು ಪತಿವ್ರತೆಗೆ ಶೀತಲನಾಗುತ್ತಾನೆ. ನಕ್ಷತ್ರ ಮಂಡಲಗಳೂ ಕೂಡಾ ತಮ್ಮ ಸ್ಥಾನವನ್ನು ಅವಳು ಹರಿಸುತ್ತಾಳೇನೋ ಎಂದು ಭಯ ಪಡುತ್ತವೆ. ಹಾಗೆ ಗಂಡನೊಡನೆ ಸ್ವರ್ಗ ಸೇರಿದ ಪತಿವ್ರತೆ ಸ್ವರ್ಗದಲ್ಲೇ ನಿಲ್ಲುತ್ತಾಳೆ. ಹಾಗೆ ಸಾಸ್ಧ್ವಿ ಶಗಮನದಿಂದ ಸ್ವರ್ಗ ಸುಖವನ್ನು ಗಂಡನೊಡನೆ ಸ್ಥಿರವಾಗಿ ಅನುಭವಿಸುತ್ತಾ ದೇವ ಲೋಕದಲ್ಲಿ ಹರ್ಷಿತಲಾಗಿ ಇರುತ್ತಾಳೆ. ಮೂರುವರೆ ಕೋಟಿ ಕೇಶಗಳನ್ನು ಸಹಗಮನದಲ್ಲಿ ಅಗ್ನಿಗೆ ಸಮರ್ಪಿಸಿದ ಪತಿವ್ರತೆ ಒಂದೊಂದು ಕೇಶಕ್ಕೂ ಶತಕೋಟಿ ಸಂವತ್ಸರಗಳಂತೆ ಗಂಡನೊಡನೆ ಸ್ವರ್ಗದಲ್ಲಿರುತ್ತಾಳೆ. ಗಂಡನೊದನೆ ಸಹಗಮನ ಮಾಡಿದ್ದರಿಂಡ ಪತಿವ್ರತೆ ತನ್ನ ವಂಶದಲ್ಲಿ ಜನ್ಮಿಸಿದ ಇಪ್ಪತ್ತೊಂದು ತಲೆ ಮಾರುಗಳವರಿಗೆ, ತನ್ನ ಗಂಡನ ವಂಶ್ದ ಇಪ್ಪತ್ತೊಂದು ತಲೆಮಾರುಗಖ್ಳವರಿಗೆ, ಉಭಯ ಕುಲದವರಿಗ್ನಲವತ್ತೆರಡು ತಲೆಮಾರು ಗಳವರಿಗೆ ಸ್ವರ್ಗಪ್ರಾಪ್ತಿ ಮಾಡಿಸುತ್ತಾಳೆ. ಆ ಪತಿವ್ರತೆಯನ್ನು ಹೆತ್ತ ಮಾತಾಪಿತರು ಧನ್ಯರು. ಆಕೆಯ ಗಂಡನೂ ಧಸ್ನ್ಯನೇ ಅಲ್ಲವೇ? ಸಹಗಮನ ಫಲವಿದು. ಮಹಾಫಲವುಳ್ಳದ್ದು.

ಸ್ತ್ರೀ ದುರಾಚಾರಿಯಾಗಿದ್ದರೆ, ವ್ಯಭಿಚಾರಿಣಿಯಾಗಿದ್ದರೆ, ಅವಳಿಗೆ ಮಹಾ ಅನರ್ಥಗಳು ಲಭಿಸುತ್ತವೆ. ಇಹ ಪರ ಲೋಕಗಳೆರಡರಲ್ಲಿಯೂ ಕಷ್ಟವನ್ನನುಭವಿಸುತ್ತಾಳೆ. ನಲವತ್ತೆರಡು ತಲೆ ಮಾರಿನವರು ಸ್ವರ್ಗದಲ್ಲಿದ್ದರೂ, ಶುಭಕರರಾಗಿದ್ದರೂ, ಅವರನ್ನೂ ತನ್ನ ತಂದೆ ತಾಯಿಗಳನ್ನು ಕರೆದು ಕೊಂಡು ನರಕಕ್ಕೆ ಹೋಗುತ್ತಾಳೆ. ಮೂರೂವರೆ ಕೋಟಿ ಕೂದಲುಗಳಲ್ಲಿ ಒಂದು ಕೂದಲಿಗೆ ಒಂದು ವರ್ಷದಂತೆ ತನ್ನ ಪೂರ್ವೀಕರು, ಗಂಡನೊಡನೆ ಕೂಡಿ ಅವಳು ನರಕ ಯಾತನೆ ಪಡುತ್ತಾಳೆ. ಪತಿವ್ರತೆಯ ಪಾದಸ್ಪರ್ಶದಿಂದ ಅವಳ ಪಾಪಗಳು ಕ್ಷಾಳನವಾಗಿ ಪವಿತ್ರಳಾಗುತ್ತಾಳೆ. ಅದರಿಂದಲೇ ಭೂಮಿಯು ಸಾಧ್ವಿಯ ಪಾದಸ್ಪರ್ಶವನ್ನು ಕಾಂಕ್ಷಿಸುತ್ತಾಳೆ. ದೈವ ಯೋಗದಿಂದ ತನ್ನ ಕಿರಣಗಳು ಪತಿವ್ರತೆಯನ್ನು ಸೋಕಿದರೆ ತಾನು ಪವಿತ್ರನಾಗುತ್ತೇನೆ ಎಂದು ಸೂರ್ಯನೂ, ಚಂದ್ರನೂ ಕೂಡಾ ಆಸೆಪಡುತ್ತಾರೆ. ವಾಯು, ವರುಣರೂ ಸತಿ ಸ್ಪರ್ಶದಿಂದ ಪವಿತ್ರರಾಗಬಲ್ಲರು. ಎಲ್ಲರೂ ಪತಿವ್ರತೆಯ ದೃಷ್ಟಿ ಬಿದ್ದರೆ ಪವಿತ್ರರಾಗುವುದು ನಿಶ್ಚಯವು. ಕುಲವನ್ನುದ್ಧರಿಸುವವಳು ಸಾಧ್ವಿಯೇ! ಸತಿ ಹೆಂಡತಿಯಾಗಿ ಲಭಿಸುವುದು ಏಳು ಜನ್ಮಗಳಲ್ಲಿ ಮಾಡಿದ ಪುಣ್ಯದಿಂದಲೇ ಆಗುತ್ತದೆ. ಪತಿವ್ರತೆಯಾದ ಹೆಂಡತಿಯಿಂದಲೇ ಚತುರ್ವಿಧ ಪುರುಷಾರ್ಥಗಳು ಮಾನವರಿಗೆ ಲಭಿಸುವುದು. ಯಜ್ಞ ಯಾಗಾದಿಗಳಿಗೆ, ಮನೆಯಲ್ಲಿ ಸಾಧ್ವಿ ಇಲ್ಲದ ಪುರುಷ ಅನರ್ಹನು. ಸಾಧ್ವಿ ಮನೆಯಲ್ಲಿ ಇಲ್ಲದವರಿಗೆ ಕಾಡು ದೂರವಲ್ಲ. ಅವನ ಜನ್ಮ ಕರ್ಮ ಬದ್ಧವಾಗಿ ವ್ಯರ್ಥವಾಗುವುದು. ಪತಿವ್ರತೆ ಹೆಂಡತಿಯಾಗಿ ದೊರೆತವನಿಗೆ ಪುಣ್ಯಸಿದ್ಧಿ ದೊರೆಯುತ್ತದೆ. ಸತಿ ಯೋಗದಿಂದಲೇ ಪುತ್ರಲಾಭವನ್ನು, ಪರಲೋಕವನ್ನು ಮಾನವನು ಸಿದ್ಧಿಸಿ ಕೊಳ್ಳಬಲ್ಲನು. ಭಾರ್ಯೆಯಿಲ್ಲದೆ ಮನುಷ್ಯನಿಗೆ ಧರ್ಮಸಿದ್ಧಿಯಿಲ್ಲ. ಕರ್ಮಕ್ಕೆ ಅನರ್ಹನಾದ ಅವನ ಪಿತೃಗಳು ಸ್ವರ್ಗದಿಂದಲೂ ಪತನರಾಗುವರು. ಗಂಗಾ ಸ್ನಾನದಿಂಡ ಲಭಿಸುವ ಪುಣ್ಯಕ್ಕೆ ಸಮಾನವಾದ ಪುಣ್ಯವು ಸಾಧ್ವಿ ದರ್ಶನದಿಂದ ಲಭಿಸುವುದು. ಸಾಧ್ವಿ ಮಾನವನು ಏಳು ಜನ್ಮಗಳಲ್ಲಿ ಮಾಡಿದ ಪಾಪಗಳನ್ನು ಪರಿಹರಿಸಿ ಅವನನ್ನು ಪಾವನನನ್ನಾಗಿ ಮಾಡಬಲ್ಲಳು. ಎಂದು ದೇವಗುರು ಬೃಹಸ್ಪತಿ ಪತಿವ್ರತೆಯ ಆಚಾರಗಳನ್ನು ಅಗಸ್ತ್ಯನ ಎದುರು ತಿಳಿಸಿದನು. 

ಇಲ್ಲಿಗೆ ಮುವ್ವತ್ತೊಂದನೆಯ ಅಧ್ಯಾಯ ಮುಗಿಯಿತು.

    

||ಶ್ರೀಗುರು ಚರಿತ್ರೆ - ಮೂವತ್ತನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
 ||ಶ್ರೀಗುರುಭ್ಯೋನಮಃ||

ನಾಮಧಾರಕನು ಸಿದ್ಧಮುನಿಯ ಚರಣಗಳಿಗೆ ನಮಸ್ಕರಿಸಿ, "ಸಿದ್ಧಯೋಗೀಶ್ವರ, ಭವಸಾಗರತಾರಕ, ನಿನ್ನ ಕೃಪೆಯಿಂದ ನಾನು ಉದ್ಧರಿಸಲ್ಪಟ್ಟೆ. ಶ್ರೀಗುರುಚರಿತ್ರೆಯೆಂಬ ಸುಧಾರಸವನ್ನು ನಾನು ಪಾನಮಾಡಿದವನಾದೆ. ಆದರೆ ಇನ್ನೂ ನನ್ನ ಮನಸ್ಸು ತೃಪ್ತಿಹೊಂದಲಿಲ್ಲ. ನನ್ನ ತೃಷ್ಣೆ ಹೆಚ್ಚುತ್ತಿದೆ. ಹೇ ಸ್ವಾಮಿ, ನೀನು ನನಗೆ ಮಾಡಿರುವ ಉಪಕಾರಕ್ಕೆ ನನ್ನ ವಂಶಪರಂಪರೆಯೂ ಪ್ರತ್ಯುಪಕಾರ ಮಾಡಲು ಸಾಧ್ಯವಿಲ್ಲ. ನೀನು ನನ್ನ ನಿಜಸ್ವರೂಪವನ್ನು ನನಗೆ ದರ್ಶನಮಾಡಿಸಿದೆ. ನಂತರ ನಡೆದ ಶ್ರೀಗುರುವಿನ ಕಥೆಯನ್ನು ಹೇಳುವ ಕೃಪೆಮಾಡು." ಎಂದು ಪ್ರಾರ್ಥಿಸಿಕೊಂಡನು. ಸಿದ್ಧಮುನಿಯು, ಅವನ ಮಾತುಗಳಿಂದ ಸಂತೋಷಗೊಂಡವರಾಗಿ, ಅವನನ್ನು ಆಲಂಗಿಸಿ, " ಶಿಷ್ಯೋತ್ತಮ, ನೀನು ಧನ್ಯನಾದೆ. ನಿನ್ನಲ್ಲಿ ಶ್ರೀಗುರುವಿನ ಕೃಪೆಯಾಗಿದೆ. ಭವಸಾಗರದಿಂದ ಪಾರಾಗಿ ಸರ್ವಾರ್ಥ ಸಿದ್ಧಿಯನ್ನು ಪಡೆದವನಾದೆ. ನಿನ್ನ ಹೃದಯದಲ್ಲಿ ಗುರುಚರಣಗಳು ಸ್ಥಾಪಿತವಾದವು. ನಿನ್ನ ಮಾತಿನಿಂದ ನನಗೆ ಸಂತೋಷವಾಯಿತು. ಶ್ರೀಗುರುವಿನ ಮಹಿಮೆಯನ್ನು ಸಂಪೂರ್ಣವಾಗಿ ತಿಳಿದವರಾರು? ನನಗೆ ತಿಳಿದ ಇನ್ನೊಂದು ಗುರುಕಥೆಯನ್ನು ಹೇಳುತ್ತೇನೆ. ಸಾವಧಾನವಾಗಿ ಕೇಳು.

ಶ್ರೀಗುರುವು ಗಂಧರ್ವನಗರದಲ್ಲಿದ್ದಾಗ ಅವರ ಮಹಿಮೆ ಪ್ರಸರಿಸಿ ವಿಖ್ಯಾತವಾಯಿತು. ತ್ರಿಮೂರ್ತ್ಯವತಾರರಾದರೂ, ಶ್ರೀಗುರು ನೃಸಿಂಹ ಸರಸ್ವತಿ ಅವರು ಸಾಮಾನ್ಯಮನುಷ್ಯನಂತೆ ಕಾಣಿಸಿಕೊಳ್ಳುತ್ತಿದ್ದರು. ವಿದ್ವಾಂಸರಿಗೂ ಅವರ ಮಹಿಮೆ ಎಷ್ಟೆಂದು ತಿಳಿಯಲಾಗದು. ದೂರದೂರದಿಂದ ಭಕ್ತರು ಬಂದು ಅವರ ಸೇವೆ ಮಾಡಿಕೊಂಡು, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಿದ್ದರು. ಬಡವರು ಶ್ರೀಮಂತರಾದರು. ಬಂಜೆಯರು ಪುತ್ರವತಿಯರಾದರು. ಅಂಧರು ಕಣ್ಣು ಪಡೆದರು. ಬಧಿರರು ಶ್ರವಣ ಶಕ್ತಿಯನ್ನು ಪಡೆದರು. ಶ್ರೀಗುರುವಿನ ದರ್ಶನಮಾತ್ರದಿಂದಲೇ ರೋಗಿಗಳು ನಿರೋಗಿಗಳಾದರು. ಚಿಂತಾಮಣಿಯ ಸ್ಪರ್ಶದಿಂದ ಲೋಹವು ಚಿನ್ನವಾದಂತೆ, ಸದ್ಗುರುವಿನ ಕೃಪಾದೃಷ್ಟಿಯಿಂದ ಜನರಿಗೆ ಸರ್ವಾಭೀಷ್ಟಗಳೂ ನೆರವೇರಿದವು ಎಂಬುದರಲ್ಲಿ ಅಶ್ಚರ್ಯವೇನಿದೆ? 

ಮಾಹೂರು ಎಂಬ ಊರಿನಲ್ಲಿ ಗೋಪಿನಾಥನೆಂಬ ಬ್ರಾಹ್ಮಣನೊಬ್ಬನಿದ್ದನು. ಅವನಿಗೆ ಹುಟ್ಟಿದ ಮಕ್ಕಳೆಲ್ಲಾ ಸ್ವಲ್ಪ ಸಮಯದಲ್ಲೇ ಮರಣಿಸುತ್ತಿದ್ದವು. ಅವನು ತನ್ನ ಹೆಂಡತಿಯೊಡನೆ ದತ್ತಾತ್ತ್ರೇಯರನ್ನು ಆರಾಧಿಸಿ ಅವರ ಅನುಗ್ರಹದಿಂದ ಮಗನೊಬ್ಬನನ್ನು ಪಡೆದನು. ಅವನಿಗೆ ದತ್ತನೆಂದು ಹೆಸರಿಟ್ಟರು. ತಂದೆತಾಯಿಗಳ ಅತಿಶಯಪ್ರೇಮಕ್ಕೆ ಪಾತ್ರನಾದ ಅವನು, ದತ್ತ ಕೃಪೆಯಿಂದ ಬೆಳೆದು, ಹನ್ನೆರಡು ವರ್ಷದವನಾದಾಗ, ಸುಂದರಿಯಾದ ಕನ್ಯೆಯೊಬ್ಬಳನ್ನು ತಂದು ಮದುವೆಮಾಡಿದರು. ಹಿರಿಯರ ಪ್ರೇಮಕ್ಕೆ ಪಾತ್ರರಾಗಿ, ಅನ್ಯೋನ್ಯಪ್ರಿಯರಾಗಿ, ಅವರಿಬ್ಬರೂ ಆನಂದದಿಂದ ಕಾಲಕಳೆಯುತ್ತಿದ್ದರು. 

ಹೀಗಿರುವಾಗ, ದುರದೃಷ್ಟವಶಾತ್, ದತ್ತನು ರೋಗಗ್ರಸ್ತನಾದನು. ಔಷಧೋಪಚಾರಗಳಿಂದ ಅವನ ರೋಗ ಕಡಮೆಯಾಗಲಿಲ್ಲ. ಊಟತಿಂಡಿಗಳಲ್ಲಿ ಅವನಿಗೆ ರುಚಿಯಿಲ್ಲದೆ ಅವನು ನಿತ್ಯೋಪವಾಸಿಯಾದನು. ಪತಿಪರಾಯಣೆಯಾದ ಅವನ ಹೆಂಡತಿಯೂ ಅದನ್ನನುಸರಿಸಿ ತಾನೂ ಊಟಮಾಡುತ್ತಿರಲಿಲ್ಲ. ಹೀಗೇ ಮೂರುವರ್ಷಗಳು ಕಳೆದರೂ ದತ್ತನ ರೋಗ ಕಡಮೆಯಾಗುವ ಲಕ್ಷಣಗಳು ಕಾಣಲಿಲ್ಲ. ಅವನೊಡನೆ ಅವನ ಹೆಂಡತಿಯೂ ಕೃಶಳಾಗುತ್ತಿದ್ದಳು. ವೈದ್ಯರೆಲ್ಲರೂ ಅವನು ಪ್ರಾಣದಿಂದುಳಿಯುವ ಆಸೆಯನ್ನು ಬಿಟ್ಟರು. ಆದರೆ ಅವನ ಹೆಂಡತಿ ಮಾತ್ರ, ಯಾರು ಏನೇ ಹೇಳಿದರೂ ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳದೆ, ತದೇಕಚಿತ್ತಳಾಗಿ ಅವನ ಸೇವೆಯಲ್ಲಿ ನಿರತಳಾಗಿದ್ದಳು. ಅವರಿಬ್ಬರ ಪರಿಸ್ಥಿತಿಯನ್ನು ನೋಡಿದವರೆಲ್ಲರೂ ಅವರಿಗಾಗಿ ದುಃಖಿಸುತ್ತಿದ್ದರು. ವ್ರತ, ಬ್ರಾಹ್ಮಣ ಪೂಜೆ/ಭೋಜನಾದಿಗಳನ್ನು ಮಾಡಿಸಿ, ವೈದ್ಯರು ಹೇಳಿದ ಔಷಧೋಪಚಾರಗಳನ್ನು ಮಾಡಿದರೂ ರೋಗವು ಕಡಮೆಯಾಗಲಿಲ್ಲ. ಕೆಲವರು ಹಿತೈಷಿಗಳು, ‘ಇದು ಮಾನವ ವೈದ್ಯರಿಂದ ಗುಣವಾಗುವ ರೋಗವಲ್ಲ. ದೈವಕೃಪೆಯಿಂದಲೇ ಗುಣವಾಗಬೇಕು.’ ಎಂದರು. ಅವರ ಮಾತುಗಳನ್ನು ಕೇಳಿದ, ಗೋಪಿನಾಥ ದಂಪತಿಗಳು, ದತ್ತಾತ್ತ್ರೇಯನನ್ನು ಮೊರೆಹೊಕ್ಕು, "ಸ್ವಾಮಿ, ದತ್ತಾತ್ತ್ರೇಯ, ನಿನ್ನ ಅನುಗ್ರಹದಿಂದ ಇವನು ನಮ್ಮ ಮಗನಾದನು. ಬಡವನಿಗೆ ಧನ ಪ್ರಾಪ್ತಿಯಾದರೂ ದುರಾದೃಷ್ಟದಿಂದ ಅದು ಅವನಿಗೆ ದಕ್ಕದಂತೆ, ನಮ್ಮ ದುರದೃಷ್ಟದಿಂದ ಈ ಒಬ್ಬ ಮಗನೂ ನಮ್ಮಿಂದ ದೂರನಾಗುತ್ತಿದ್ದಾನೆ. ವಂಶೋದ್ಧಾರಕನಾದ ಇವನೊಬ್ಬನೇ ನಮಗೆ ಉಳಿದದ್ದು. ಅವನನ್ನಾದರೂ ನಮಗೆ ಉಳಿಸಿಕೊಡು. ಅದಕ್ಕಾಗಿ ನಮ್ಮ ಪ್ರಾಣಗಳನ್ನು ಕೊಡಲೂ ನಾವು ಹಿಂತೆಗೆಯುವುದಿಲ್ಲ. ಹೇ, ದತ್ತಾತ್ತ್ರೇಯ ಸ್ವಾಮಿ, ನಮ್ಮ ಮೊರೆಯನ್ನು ಕೇಳುವ ಕೃಪೆಮಾಡು." ಎಂದು ಆರ್ತರಾಗಿ ಬೇಡಿಕೊಂಡರು.  

ದತ್ತನು ತನ್ನ ತಂದೆತಾಯಿಯರನ್ನು ಸಂತೈಸುತ್ತಾ, "ನನ್ನ ಜನ್ಮಾಂತರದ ಋಣವನ್ನು ನಿಮ್ಮ ಮಗನಾಗಿ ಹುಟ್ಟಿ ತೀರಿಸಿದೆ. ಋಣವಿದ್ದಷ್ಟೇ ಸಂಬಂಧಗಳು ಎನ್ನುವುದು ನಿಜವಲ್ಲವೇ?" ಎಂದು ಹೇಳಲು, ಅದನ್ನು ಕೇಳಿದ ಅವನ ತಂದೆತಾಯಿಯರು ಸ್ಪೃಹೆ ಕಳೆದುಕೊಂಡು ಬಿದ್ದುಬಿಟ್ಟರು. ಮತ್ತೆ ಎಚ್ಚೆತ್ತುಗೊಂಡು, "ಮಗು ದತ್ತ, ನಮ್ಮನ್ನು ನಿರಾಶರನ್ನಾಗಿ ಮಾಡಿ ಹೊರಟು ಹೋಗಬೇಡ. ನಮ್ಮ ವಾರ್ಧಕ್ಯದಲ್ಲಿ ನೀನೇ ನಮ್ಮನ್ನು ರಕ್ಷಿಸುತ್ತೀಯೆಂದು ನಂಬಿದ್ದೆವು. ನಮ್ಮನ್ನು ಹೀಗೆ ನಡುನೀರಿನಲ್ಲಿ ಬಿಟ್ಟು ಹೋಗುವುದು ನಿನಗೆ ಧರ್ಮವೇ?" ಎಂದು ಪ್ರಲಾಪಿಸಿದರು. ಅವರ ಮಾತುಗಳನ್ನು ಕೇಳಿದ ದತ್ತ, "ಎಲ್ಲವೂ ಈಶ್ವರಾಧೀನ. ಇದರಲ್ಲಿ ಮಾನವ ಪ್ರಯತ್ನವೇನಿದೆ? ತಾಯಿಯ ಋಣವನ್ನು ಮಗನಾದ ನಾನು ಹೇಗೆತಾನೇ ತೀರಿಸಬಲ್ಲೆ? ನಾನು ಹುಟ್ಟಿದಾಗಿನಿಂದ ನಿಮಗೆ ಕಷ್ಟವನ್ನೇ ಉಂಟುಮಾಡಿದ್ದೇನೆ. ನನ್ನಿಂದಾಗಿ ನಿಮಗೆ ಯಾವ ಸುಖವೂ ಸಿಕ್ಕಲಿಲ್ಲ. ಬದಲಾಗಿ ಕಷ್ಟಪರಂಪರೆಗಳೆ ನಿಮಗೆ ಎದುರಾದವು." ಎಂದು ಹೇಳಿ, ತನ್ನ ಹೆಂಡತಿಗೆ, "ಪ್ರಿಯೆ, ನಾನು ಹೇಳುವುದನ್ನು ಸಮಾಧಾನವಾಗಿ ಕೇಳು. ಇನ್ನು ನನ್ನ ದಿನಗಳು ಮುಗಿದವು. ಇದುವರೆಗೂ ನನ್ನಿಂದಾಗಿ ನಿನಗೆ ಯಾವ ಸುಖವು ಸಿಕ್ಕಲಿಲ್ಲ. ಬದಲು ಕಷ್ಟವೇ ನಿನ್ನ ಪಾಲಿನದಾಯಿತು. ಜನ್ಮಾಂತರದಲ್ಲಿ ನಾನು ನಿನ್ನ ವೈರಿಯಾಗಿದ್ದಿರಬೇಕು. ಅದರಿಂದಲೇ ನಿನಗೆ ನನ್ನಿಂದ ಇಂತಹ ಕಷ್ಟಗಳು ಉಂಟಾದವು. ನನ್ನಿಂದಾಗಿ ನಿನ್ನ ಸೌಂದರ್ಯವೆಲ್ಲವೂ ಹಾಳಾಯಿತು. ನೀನು ಇಲ್ಲಿಯೇ ಇರುವುದಾದರೆ ನನ್ನ ತಂದೆತಾಯಿಗಳು ನಿನ್ನನ್ನು ತಮ್ಮ ಮಗಳಂತೆಯೇ ನೋಡಿಕೊಳ್ಳುತ್ತಾರೆ. ಅದು ನಿನಗೆ ಇಷ್ಟವಾಗದೇ ಹೋದರೆ ನೀನು ನಿನ್ನ ತವರುಮನೆಗೆ ಹೋಗಬಹುದು. " ಎಂದು ಹೇಳಿದನು. ಅದನ್ನು ಕೇಳಿದ ಅವನ ಹೆಂಡತಿ ಮೂರ್ಛಿತಳಾಗಿ ಬಿದ್ದುಹೋದಳು. ಸ್ವಲ್ಪಹೊತ್ತಿನ ನಂತರ ಎಚ್ಚೆತ್ತ ಅವಳು ತನ್ನ ಗಂಡನ ಪಾದಗಳಲ್ಲಿ ತಲೆಯಿಟ್ಟು, ಪರಮ ದುಃಖದಿಂದ, "ಪ್ರಾಣಪ್ರಿಯ, ಸ್ತ್ರೀಯಾದವಳಿಗೆ, ಗಂಡನನ್ನು ಬಿಟ್ಟು ಬೇರೆ ಏನು ಗತಿಯಿದೆ? ನೀನು ಎಲ್ಲಿರುತ್ತೀಯೋ ಅಲ್ಲಿಯೇ ನಾನೂ ಇರುತ್ತೇನೆ. ಅದರಲ್ಲಿ ಸಂದೇಹವೇ ಇಲ್ಲ. ಸದಾ ನಿನ್ನನ್ನೇ ಅನುಸರಿಸುವವಳು ನಾನು." ಎಂದು ಹೇಳಿದಳು. ಆ ಮಾತುಗಳನ್ನು ಕೇಳಿದ ಅವಳ ಅತ್ತೆಮಾವಂದಿರು ಮತ್ತೆ ಸ್ಪೃಹೆ ಕಳೆದುಕೊಂಡು ಬಿದ್ದುಬಿಟ್ಟರು. ಅವರನ್ನು ಎಬ್ಬಿಸಿ, ಆದರಿಸಿ, "ನೀವು ಚಿಂತೆಮಾಡಬೇಡಿ. ನನ್ನ ಗಂಡ ಖಂಡಿತವಾಗಿಯೂ ಜೀವಿಸಿರುತ್ತಾನೆ. ನನ್ನ ಮಾತು ಕೇಳಿ. ನಮಗೆ ಆ ಸಾಂಬಶಿವನೇ ರಕ್ಷಕ. ನನ್ನನ್ನು ನನ್ನ ಗಂಡನೊಡನೆ ಯಾವುದಾದರೂ ತೀರ್ಥಕ್ಷೇತ್ರಕ್ಕೆ ಕಳುಹಿಸಿಕೊಡಿ. ಅದರಿಂದ ನನ್ನ ಗಂಡ ಬದುಕುತ್ತಾನೆ. ಶ್ರೀಗುರು ನೃಸಿಂಹ ಸರಸ್ವತಿಯವರು ಗಂಧರ್ವಪುರದಲ್ಲಿ ಇದ್ದಾರೆಂದು ಜನರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇನೆ. ಅವರ ದರ್ಶನಮಾತ್ರದಿಂದಲೇ ನನ್ನ ಗಂಡನು ಆರೋಗ್ಯವಂತನಾಗುತ್ತಾನೆ. ಆದ್ದರಿಂದ ನಮ್ಮನ್ನು ಆದಷ್ಟು ತ್ವರೆಯಾಗಿ ಅಲ್ಲಿಗೆ ಕಳುಹಿಸುವ ಏರ್ಪಾಡುಮಾಡಿ." ಎಂದು ಕೇಳಿಕೊಂಡಳು. ಪುತ್ರನೆಂಬ ವಾತ್ಸಲ್ಯ, ಅವನು ಆರೋಗ್ಯವಂತನಾಗುತ್ತಾನೆ ಎಂಬ ಆಸೆ/ನಂಬಿಕೆಗಳಿಂದ ಅವರು ಅವಳು ಕೇಳಿದಂತೆ ಸುಖವಾಗಿ ಪ್ರಯಾಣಮಾಡಲು ಅನುಕೂಲವಾದ ಸೌಕರ್ಯಗಳನ್ನು ಏರ್ಪಡಿಸಿದರು. ಪಲ್ಲಕ್ಕಿಯೊಂದರಲ್ಲಿ, ರೋಗಿ ಸುಖವಾಗಿ ಮಲಗಿ ಪ್ರಯಾಣಮಾಡಲನುಕೂಲವಾಗುವಂತೆ ಎಲ್ಲವನ್ನೂ ಸಿದ್ಧಪಡಿಸಿ, ಅವಳು ಅತ್ತೆಮಾವಂದಿರಿಗೆ, "ನೀವು ಘಟ್ಟಿಮನಸ್ಸು ಮಾಡಿ ಚಿಂತೆಯಿಲ್ಲದೆ ಮನೆಯಲ್ಲಿರಿ. ನನ್ನ ಪ್ರಾಣೇಶ್ವರನನ್ನು ನನ್ನ ಕುಲದೈವವೇ ರಕ್ಷಿಸುತ್ತಾನೆ." ಎಂದು ದೃಢವಾಗಿ ಹೇಳಿ, ಅವರಿಗೆ ನಮಸ್ಕರಿಸಿದಳು. ಅವರು ಅವಳನ್ನು, "ಅಮ್ಮ, ಸೌಭಾಗ್ಯವತಿ, ನಿನ್ನ ಸೌಭಾಗ್ಯದಿಂದ ನಮ್ಮ ಮಗ ಜೀವಿಸಲಿ. ಹೋಗಿ ಬಾ." ಎಂದು ಹೇಳಿ, ತುಂಬುಮನದಿಂದ ಆಶೀರ್ವಾದಮಾಡಿ, ಅವರಿಬ್ಬರನ್ನೂ ಕಳುಹಿಸಿಕೊಟ್ಟರು. 

ಆ ಪತಿಪರಾಯಣೆ ತನ್ನ ಗಂಡನಿಗೆ ತೊಂದರೆಯಾಗದಂತೆ ಪ್ರಯಾಣಮಾಡುತ್ತಾ, ಭೀಮಾನದೀತೀರವನ್ನು ಸೇರಿದಳು. ಬಹಳ ದೂರ ಪ್ರಯಾಣಮಾಡಿದ್ದರಿಂದ ದತ್ತನು ಬಹಳ ಆಯಾಸಗೊಂಡಿದ್ದನು. ಅದರಿಂದ ಅವನನ್ನು ಗ್ರಾಮಸರಹದ್ದಿನಲ್ಲಿ ಇಳಿಸಿ, ಅವನಿಗೆ ಬೇಕಾದ ಆಹಾರ, ಔಷಧೋಪಚಾರಗಳಿಗೆ ಏರ್ಪಾಡುಮಾಡಿ ಊರೊಳಕ್ಕೆ ಹೋಗಿ ಶ್ರೀಗುರುವು ಎಲ್ಲಿರುತ್ತಾರೆ ಎಂದು ವಿಚಾರಿಸಿದಳು. ಅವರು ಸ್ನಾನಕ್ಕೆ ಹೋಗಿದ್ದಾರೆಂದು ತಿಳಿದು ತನ್ನ ಗಂಡನನ್ನು ಕರೆದುಕೊಂಡು ಅಲ್ಲಿಗೆ ಹೋಗಬೇಕೆಂದು ತನ್ನ ಗಂಡನಿದ್ದಲ್ಲಿಗೆ ಬಂದಳು. ಅಷ್ಟರಲ್ಲಿ ಪ್ರಯಾಣದಿಂದಾದ ಆಯಾಸವನ್ನು ತಡೆಯಲಾರದೆ ದತ್ತನು ಇದ್ದಲ್ಲಿಯೇ ಪ್ರಾಣಬಿಟ್ಟಿದ್ದನು. ಅದನ್ನು ಕಂಡ ಅವಳು, "ಅಯ್ಯೋ, ನನ್ನಿಂದಾಗಿ ನನ್ನ ಗಂಡ ಮರಣಹೊಂದಿದ." ಎಂದು ದುಃಖಪಡುತ್ತಾ, ತಾನೂ ಸಾಯಲು ಸಿದ್ಧಳಾದಳು. ಅಲ್ಲಿ ಸೇರಿದ್ದವರೆಲ್ಲರೂ ಆ ಪ್ರಯತ್ನದಿಂದ ಅವಳನ್ನು ನಿವಾರಿಸಿ, ಸಾಂತ್ವನ ಹೇಳಲು ನೋಡಿದರು. ಆದರೆ ಅವಳು, "ಅಯ್ಯೋ, ದೈವವೇ! ನನಗೆ ಎಂತಹ ಗತಿಯನ್ನು ತಂದಿಟ್ಟೆ! ನೀನೇ ನನಗೆ ರಕ್ಷಕನೆಂದು, ನಿನ್ನಮೇಲೆ ಭರವಸೆಯಿಟ್ಟು, ನಾನು ನನ್ನ ಗಂಡನನ್ನು ಇಲ್ಲಿಯವರೆಗೂ ಕರೆತಂದೆ. ಆದರೆ, ಪೂಜೆಗೆಂದು ದೇವಾಲಯಕ್ಕೆ ಹೋದರೆ ದೇವಾಲಯವೇ ತಲೆಯಮೇಲೆ ಕುಸಿದುಬಿದ್ದಂತೆ, ಬಾಯಾರಿಕೆಯೆಂದು ನೀರು ಕುಡಿಯಲು ನದಿಗೆ ಹೋದರೆ ಮೊಸಳೆಯ ಬಾಯಿಗೆ ಸಿಕ್ಕಿಬಿದ್ದಂತೆ ನನ್ನ ಗತಿಯಾಯಿತು. ನನಗೆ ಎಂತಹ ಕಷ್ಟಬಂತು. ನನ್ನಂತಹ ದುರದೃಷ್ಟಳು ಇನ್ನಾರಿದ್ದಾರೆ? ಅತ್ತೆಮಾವಂದಿರನ್ನೂ, ತಂದೆತಾಯಿಗಳನ್ನೂ ಬಿಟ್ಟು, ದೂರದೂರಿಗೆ ಬಂದು, ಪತಿಘಾತಿನಿಯಾಗಿ, ಕಷ್ಟಕ್ಕೆ ಗುರಿಯಾದೆ." ಎಂದು ದುಃಖದಿಂದ ಕಣ್ಣೀರಿಡುತ್ತಿದ್ದ ಅವಳನ್ನು, ಅಲ್ಲಿದ್ದ ಜನರು, "ವ್ಯರ್ಥವಾಗಿ ಅಳುವುದರಿಂದ ಪ್ರಯೋಜನವೇನು? ನಿನ್ನ ಅಳುವನ್ನು ನಿಲ್ಲಿಸಿ ಮುಂದಾಗಬೇಕಾದ ಕಾರ್ಯಗಳ ಬಗ್ಗೆ ಯೋಚಿಸು. ವಿಧಿಲಿಖಿತವನ್ನು ಬದಲಾಯಿಸಲು ಸಾಧ್ಯವೇ?" ಎಂದು ಅನೇಕವಿಧಗಳಲ್ಲಿ ಅವಳಿಗೆ ತಿಳಿಯಹೇಳಲು ನೋಡಿದರು. ಆದರೆ ಅದರಿಂದ ಅವಳ ದುಃಖ ಇನ್ನೂ ಹೆಚ್ಚಾಗಿ, ಗಂಡನೊಡನಿದ್ದಾಗ ಅನುಭವಿಸಿದ ಹಿಂದಿನ ಸಂಗತಿಗಳನ್ನು ನೆನಸಿಕೊಂಡು, "ತಾಯಂದಿರಾ, ನಾನು ಏನು ಹೇಳಲಿ? ಇನ್ನು ನಾನು ಹೇಗೆ ಜೀವಿಸಿರಬಲ್ಲೆ? ಬೆಟ್ಟದಷ್ಟು ಆಸೆಯಿಟ್ಟು ನಾನು ನನ್ನ ಗಂಡನನ್ನೂ ಕರೆದುಕೊಂಡು ಶ್ರೀಗುರುವಿನ ಸನ್ನಿಧಿಗೆ ಬಂದೆ. ಅವರೇ ಕೈಬಿಟ್ಟಮೇಲೆ ನನ್ನನ್ನು ಇನ್ನಾರು ರಕ್ಷಿಸುತ್ತಾರೆ? ಗಂಡನಿಲ್ಲದೆ ನಾನು ಹೇಗೆ ಬದುಕಿರಬಲ್ಲೆ? ಸಣ್ಣವಳಾಗಿದ್ದಾಗಿನಿಂದಲೂ ಗೌರಿಶಂಕರರ ಪೂಜೆ ಮಾಡಿದೆ. ಮದುವೆಯಾದಮೇಲೆ ಆ ಪೂಜೆಯೊಡನೆ ತಾಯಿ ಭವಾನಿದೇವಿಯನ್ನು ಸೌಭಾಗ್ಯ ಕೋರಿ ದಿನವೂ ಪೂಜೆಮಾಡಿದೆ. ನನ್ನ ಗಂಡನೊಡನೆ ಸುಖಸಂತೋಷಗಳಿಂದ ಇರಬೇಕೆಂಬ ಆಸೆಯಿಂದ ಸುಮಂಗಲಿಯರು ಹೇಳಿದ ವ್ರತಪೂಜಾದಿಗಳನ್ನು ತಪ್ಪದೇ ಮಾಡಿದೆ. ಎಲ್ಲವೂ ವ್ಯರ್ಥವಾದವು. ನಾನು ಗಳಿಸಿದ್ದ ಪುಣ್ಯವೆಲ್ಲಾ ಏನಾಯಿತು? ಇನ್ನು ನನಗೇನು ಗತಿ? ನನ್ನ ಗಂಡನ ಹಾಗೆ ನನ್ನನ್ನು ನೋಡಿಕೊಳ್ಳುವವರು ಇನ್ನಾರಿದ್ದಾರೆ? ಅಯ್ಯೋ, ನನ್ನ ಗತಿ ಹೀಗಾಯಿತಲ್ಲಾ?’ ಎಂದು ಅತ್ಯಂತ ದುಃಖದಿಂದ ಪ್ರಲಾಪಿಸಿದಳು. ಗಂಡನ ಮುಖವನ್ನು ಮತ್ತೆ ಮತ್ತೆ ನೋಡುತ್ತಾ, ಅವನ ಜೊತೆಯಲ್ಲಿ ಕಳೆದ ಹಿಂದಿನ ದಿನಗಳನ್ನು ನೆನಸುತ್ತಾ, "ಸ್ವಾಮಿ, ಹೀಗೇಕೆ ನನ್ನೊಬ್ಬಳನ್ನೇ ಬಿಟ್ಟು ಹೊರಟು ಹೋದಿರಿ? ನಿಮ್ಮ ಮಾತನ್ನು ನಾನು ಎಂದೂ ಕಡೆಗಣಿಸಲಿಲ್ಲವಲ್ಲ. ಹೇ ನಾಥ, ನೀವು ನನಗೆ ಸಿಕ್ಕ ನಿಧಿಯೆಂದುಕೊಂಡಿದ್ದೆ. ಈಗ ನನ್ನಿಂದಾಗಿಯೇ ಆ ನಿಧಿ ಕಳೆದುಹೋಯಿತು. ನಿಮ್ಮವರೆಲ್ಲರನ್ನೂ ದೂರಮಾಡಿ ನಿಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದು ನಿಮ್ಮ ಸಾವಿಗೆ ಕಾರಣಳಾದೆ. ನಿಮ್ಮ ತಂದೆತಾಯಿಯರಿಗೆ ಈ ವಿಷಯ ತಿಳಿದರೆ ಅವರು ತಕ್ಷಣವೇ ಪ್ರಾಣಬಿಡುತ್ತಾರೆ. ಹಾಗೆ ನಾನು ಅತ್ತೆಮಾವಂದಿರನ್ನು ಕೊಂದ ಹಂತಕಳಾದೆ. ಅಯ್ಯೋ, ಪ್ರಾಣೇಶ್ವರ, ನಾನೇ ನಿನಗೆ ಶತೃವಾದೆ. ಪತಿಘಾತಿನಿಯೆಂದು ನನ್ನನ್ನು ಎಲ್ಲರೂ ನಿಂದಿಸುತ್ತಾರೆ. ಒಬ್ಬನೇ ಮಗನಾದ ನೀನು ಪ್ರಾಣಬಿಡುವ ಸಮಯದಲ್ಲಿ ನಿನ್ನ ತಂದೆತಾಯಿಯರು ನಿನ್ನ ಬಳಿ ಇರಲಾಗದೇ ಹೋದುದಕ್ಕೆ ಅವರೆಷ್ಟು ಸಂಕಟಪಡುತ್ತಾರೋ ಏನೋ? ಆ ಸಮಯದಲ್ಲಿ ನಿನ್ನನ್ನು ಇಲ್ಲಿಗೆ ಕರೆದು ತಂದ ನಾನೂ ನಿನ್ನ ಬಳಿ ಇರಲಾರದೇ ಹೋದೆ. ಅಯ್ಯೋ, ಎಂತಹ ದುಃಸ್ಥಿತಿ ಬಂತು ನನಗೆ! ವೃದ್ಧರಾದ ನಿನ್ನ ತಂದೆತಾಯಿಗಳ ಕೋರಿಕೆಗಳನ್ನು ತೀರಿಸದೆ, ಅವರನ್ನು ನನ್ನನ್ನೂ ಬಿಟ್ಟು ಎಲ್ಲಿಗೆ ಹೋದೆ ನಾಥ? ದೀನಳೂ, ದಿಕ್ಕಿಲ್ಲದವಳೂ, ನತದೃಷ್ಟಳೂ ಆದ ನನ್ನನ್ನು ಇನ್ನು ಯಾರು ಕಾಪಾಡುತ್ತಾರೆ? ನನ್ನೊಡನೆ ಒಂದು ಮಾತನ್ನೂ ಆಡದೆ ಹೊರಟುಹೋದೆಯಲ್ಲಾ ಸ್ವಾಮಿ? ನೀನೇ ನನಗೆ ಆಸರೆಯಲ್ಲವೇ? ನಿನ್ನನ್ನು ನಾನು ಹೇಗೆ ತಾನೇ ಮರೆಯಲಿ? ನೀನಿಲ್ಲದ ಬದುಕು ಹೇಗೆ ಎಂಬುದನ್ನು ನೆನಸಿಕೊಂಡರೆ ಹೃದಯ ಛಿದ್ರವಾಗುತ್ತದೆ. ನೀನಿಲ್ಲದೆ ನನಗೆಂತಹ ಜೀವನ ಸ್ವಾಮಿ? ನನ್ನ ಪ್ರಾಣವಾದ ನೀವು, ನಿಮ್ಮ ಈ ಧರ್ಮಪತ್ನಿಯನ್ನು ಬಿಟ್ಟು ಎಲ್ಲಿಗೆ ಹೋದಿರಿ ಸ್ವಾಮಿ? ನನ್ನನ್ನು ಒಂಟಿಯಾಗಿ ಬಿಟ್ಟು ನೀನೊಬ್ಬನೇ ಎಲ್ಲಿಗೆ ಹೋದೆ ಸ್ವಾಮಿ? ಗಂಡನನ್ನು ಕೊಂದ ವಿಧವೆಯೆಂದು ಎಲ್ಲರೂ ನನ್ನಮೇಲೆ ಅಪವಾದ ಹೊರೆಸಿ, ನನ್ನನ್ನು ಹೀಯಾಳಿಸಿ ಅವಮಾನಮಾಡುವುದಿಲ್ಲವೇ? ನಿನ್ನ ಸಹವಾಸದಲ್ಲಿ ನಾನು ನನ್ನ ತಂದೆತಾಯಿಯರನ್ನೂ ಮರೆತಿದ್ದೆ. ಅವರು ಕರೆದರೂ ನಿನ್ನ ಸಹವಾಸ ತಪ್ಪುತ್ತದೆ ಎಂದು ನಾನು ಅವರಲ್ಲಿಗೆ ಹೋಗಲಿಲ್ಲ. ಅಂಥ ನನ್ನನ್ನು ಒಂಟಿಯಾಗಿ ಮಾಡಿ ಹೋದೆಯಾ ಸ್ವಾಮಿ? ಈಗ ನಾನು ಅವರ ಬಳಿಗೆ ಯಾವ ಮುಖವಿಟ್ಟುಕೊಂಡು ಹೋಗಲಿ? ನಿನ್ನ ಆಸರೆಯಲ್ಲಿದ್ದೇನೆಂದು ಎಲ್ಲರೂ ನನ್ನನ್ನು ಆದರದಿಂದ ಕಂಡರು. ಆದರೆ ಈಗ ಈ ಗಂಡನಿಲ್ಲದವಳನ್ನು ಯಾರು ಆದರಿಸುತ್ತಾರೆ? ಆರೋಗ್ಯವಂತನನ್ನಾಗಿ ಮಾಡಿ ಹಿಂತಿರುಗಿ ಕರೆದು ತರುತ್ತೇನೆ ಎಂದು ಅತ್ತೆಮಾವಂದಿರನ್ನು ನಂಬಿಸಿ ನಿನ್ನನ್ನು ಇಲ್ಲಿಗೆ ಕರೆತಂದೆ. ಈಗ ಹೀಗಾಯಿತು. ನಂಬಿಕೆದ್ರೋಹಿಯಾದ ನನ್ನ ಈ ಕೆಟ್ಟ ಮುಖವನ್ನು ನೋಡಿದರೆ ಅವರು ಕೂಡಲೇ ಪ್ರಾಣಬಿಡುತ್ತಾರೆ. ನಿನ್ನ ಜೊತೆಯಿಲ್ಲದೆ ನಾನೊಬ್ಬಳೇ ಹೇಗೆ ಹಿಂತಿರುಗಿಹೋಗಲಿ? ನಾನೊಬ್ಬಳು ಮಹಾಪಾಪಿ." ಎಂದು ನಾನಾ ವಿಧವಾಗಿ ಆವಳು ಪ್ರಲಾಪಿಸುತ್ತಿದ್ದಳು.  

ಆ ಸಮಯದಲ್ಲಿ ಅಲ್ಲಿಗೆ ಭಸ್ಮೋದ್ಧೂಳಿತ, ಜಟಾಧಾರಿ, ರುದ್ರಾಕ್ಷಿ ಧರಿಸಿದ, ತ್ರಿಶೂಲಹಸ್ತನಾದ ಒಬ್ಬ ತಾಪಸಿ ಬಂದನು. ಕಣ್ಣೀರಿಡುತ್ತಿದ್ದ ಅವಳ ಎದುರಿಗೆ ಬಂದು ನಿಂತ ಆ ತಾಪಸಿ, ಅವಳನ್ನು ಸಾಂತ್ವನಗೊಳಿಸುತ್ತಾ, "ಅಮ್ಮಾ, ಮೂರ್ಖಳಂತೆ ಏಕೆ ಅಳುತ್ತಿದ್ದೀಯೆ? ಹಣೆಯ ಬರಹವನ್ನು ತಪ್ಪಿಸಲು ಸಾಧ್ಯವೇ? ಅದು ನಿನ್ನ ಬೆನ್ನಂಟಿಯೇ ಬರುತ್ತಿರುವಾಗ ನೀನು ಅನವಶ್ಯಕವಾಗಿ ದುಃಖಿಸುತ್ತಿದ್ದೀಯಲ್ಲವೇ? ನೀನು ಎಷ್ಟು ದಿನಗಳು ಹೀಗೆ ಕಣ್ಣೀರಿಟ್ಟರೂ ಅವನ ಪ್ರಾಣ ಹಿಂತಿರುಗಿ ಬರುವುದಿಲ್ಲ ಅಲ್ಲವೇ? ಮೂಢಳಾಗಿ ದುಃಖಪಡುತ್ತಿದ್ದೀಯೆ. ಈ ಭೂಮಿಯಲ್ಲಿ ಚಿರಂಜೀವಿಯಾದವನು ಯಾರಿದ್ದಾನೆ? ಮೃತ್ಯುವನ್ನು ಮೀರಿದವರು ಯಾರಾದರೂ ಇದ್ದಾರೆಯೇ ನನಗೆ ಹೇಳು. ಇವನನ್ನು ನಿನ್ನ ಗಂಡನೆಂದು ಹೇಳುತ್ತಿದ್ದೀಯೆ. ಇವನು ಎಲ್ಲಿಂದ ಬಂದ, ಎಲ್ಲಿಗೆ ಹೋದ ಎಂದು ಹೇಳಬಲ್ಲೆಯಾ? ನೀನಾರು? ನಿನ್ನ ಗಂಡ ಯಾರು? ನಿನ್ನ ತಂದೆತಾಯಿಗಳು ಯಾರು? ನೀರಿನ ಪ್ರವಾಹದಲ್ಲಿ ಒಟ್ಟಿಗೇ ತೇಲಿಬಂದ ಕಟ್ಟಿಗೆಯ ತುಂಡುಗಳು ಒಂದು ಕ್ಷಣ ಎಲ್ಲವೂ ಒಟ್ಟುಗೂಡಿಕೊಂಡಿದ್ದು ಮತ್ತೆ ಬೇರೆಬೇರೆಯಾಗಿ ಹೊರಟು ಹೋಗುವುವು. ಅದರಂತೆಯೇ ಈ ಪ್ರಪಂಚದಲ್ಲಿಯೂ ಕೂಡಾ ಎಲ್ಲರೂ ಎಲ್ಲೆಲ್ಲಿಂದಲೋ ಬಂದು ನಾಲ್ಕುದಿನ ಒಟ್ಟಿಗಿದ್ದು ಮತ್ತೆ ಬೇರೆಬೇರೆಯಾಗಿ ಹೊರಟು ಹೋಗುತ್ತಾರೆ. ಹುಟ್ಟಿದವನಾರು? ಸತ್ತವನಾರು? ಮಾಯಾಮೋಹಿತರಾಗಿ ಇವನು ನನ್ನ ಗಂಡ, ಇವನು ನನ್ನ ಮಗ, ಇವಳು ನನ್ನ ಹೆಂಡತಿ ಎಂದುಕೊಳ್ಳುವುದೆಲ್ಲವೂ ಬರಿಯ ಭ್ರಮೆಯೇ! ನೀರಿನಲ್ಲಿ ಹುಟ್ಟಿದ ಗುಳ್ಳೆ ಕ್ಷಣಕಾಲವಿದ್ದು ಒಡೆದುಹೋಗುವಂತೆ ಕರ್ಮಬಂಧಗಳಿಂದ ಆದ ಈ ದೇಹವು ಕ್ಷಣಕಾಲವಿದ್ದು ಹೋಗುವುದು. ಅದಕ್ಕಾಗಿ ಶೋಕಿಸುವುದು ವ್ಯರ್ಥ. ಈ ದೇಹದೊಳಗೆ ಇರುವ ಆತ್ಮವನ್ನು ಕುರಿತು ಯೋಚಿಸದೆ, ಈ ಜಡದೇಹವನ್ನೇ ನನ್ನದೆಂದು ಹೇಳುತ್ತಿದ್ದೀಯೆ. ಪಂಚಭೂತಾತ್ಮಕವಾದ ಈ ದೇಹವು ಕರ್ಮಾನುಸಾರವಾಗಿ ಲಭಿಸುವಂತಹುದು. ಅದಕ್ಕೆ ಪ್ರಾಧಾನ್ಯವೇಕೆ? ಕರ್ಮವೇ ಸುಖದುಃಖಗಳಿಗೆ ಮೂಲವು. ಮಾಯಾವೃತವಾದ, ಕಣ್ಣಿಗೆ ಕಾಣುವಂತಹ ಪದಾರ್ಥಗಳೆಲ್ಲವೂ ಅನಿತ್ಯಗಳೇ! ಆತ್ಮನು ತ್ರಿಗುಣಾತೀತನು. ತ್ರಿಗುಣಸ್ವರೂಪವಾದದ್ದು ಮಾಯೆಯೇ! ಆತ್ಮನಿಗೆ ಗುಣಗಳೊಡನೆ ಯಾವ ಸಂಬಂಧವೂ ಇಲ್ಲ. 

ಹುಟ್ಟಿದ ಜಂತುಗಳೆಲ್ಲವೂ ಕರ್ಮಾಧೀನವು. ಸುಖದುಃಖಗಳೆನ್ನುವುವು ನಮ್ಮ ಕರ್ಮಾನುಸಾರವಾಗಿ ತ್ರಿಗುಣಗಳನ್ನನುಸರಿಸಿ ಬರುವುವು. ದೇವತೆಗಳ ಆಯುಸ್ಸು ಮನುಷ್ಯನ ಆಯುಸ್ಸಿಗಿಂತ ಲಕ್ಷಾಂತರ ವರ್ಷಗಳಷ್ಟು ಹೆಚ್ಚಾದದ್ದು. ಆದರೆ ಅವರೂ ಕೂಡಾ ಕಾಲಾಧೀನರೇ! ಕಲ್ಪಾಂತದಲ್ಲಿ ಇಲ್ಲವಾಗುವವರೇ! ಇನ್ನು ಮಾನವನ ಕಥೆಯನ್ನು ಏನೆಂದು ಹೇಳಬೇಕು? ‘ಕಾಲ’ ನಮ್ಮ ಜೊತೆಯಲ್ಲಿಯೇ ಬಂದಿದೆ. ಈ ನಮ್ಮ ಶರೀರ ಕಾಲಾಧೀನ. ಇದನ್ನು ಸ್ಥಿರ ಮಾಡಬಲ್ಲವರು ಯಾರು? ಪಂಚಭೂತ/ತ್ರಿಗುಣಗಳಿಂದಾದ ಈ ದೇಹವು ಕಾಲಕ್ಕೆ ಅಧೀನವಾಗಿದೆಯಲ್ಲವೇ? ಅದರಿಂದಲೇ ಜ್ಞಾನಿಗಳು ಈ ದೇಹ ಹುಟ್ಟಿದಾಗ ಸಂತೋಷಪಡುವುದಿಲ್ಲ. ಸತ್ತಾಗ ದುಃಖಿಸುವುದಿಲ್ಲ. ಪ್ರಾರಬ್ಧ ಕರ್ಮವಿರುವವರೆಗೂ ಈ ದೇಹವಿರುವುದು. ಕೆಲವರು ಬಾಲ್ಯದಲ್ಲಿ, ಕೆಲವರು ಯುವಕರಾಗಿ, ಕೆಲವರು ವಾರ್ಧಕ್ಯದಲ್ಲಿ ಮರಣಿಸುತ್ತಾರೆ. ಆರ್ಜಿಸಿದಷ್ಟೇ ಮಾನವನಿಗೆ ಇಹಲೋಕದಲ್ಲಿ ಸ್ಥಾನವಿರುವುದು. ಪೂರ್ವಾರ್ಜಿತ ಕರ್ಮಫಲಾನುಸಾರವಾಗಿ ಈ ದೇಹವು ಸುಖದುಃಖಗಳನ್ನನುಭವಿಸುವುದು. ಪಾಪಪುಣ್ಯಗಳನ್ನನುಸರಿಸಿಯೇ ಸ್ತ್ರೀಯರು ಮುಂತಾದ ಸಂಬಂಧಗಳು ಏರ್ಪಡುತ್ತವೆ. ಪಾಪಪುಣ್ಯಗಳನ್ನು ಹಿಡಿದೇ ಸುಖದುಃಖ ಪ್ರಾಪ್ತಿ, ಹಾನಿ, ಆಯುಸ್ಸು, ಮರಣಗಳು ಉಂಟಾಗುತ್ತಿರುತ್ತವೆ. ಹೇಗೆ? ಒಮ್ಮೆ ಪುಣ್ಯವಶಾತ್ ದುಷ್ಕರ್ಮಗಳನ್ನು ತೊಲಗಿಸಿಕೊಳ್ಳಬಹುದು. ಆದರೆ ದೇವತೆಗಳಿಗೆ, ಮಾನವರಿಗೆ, ದಾನವರಿಗೆ ಕೂಡಾ ಕಾಲವನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ. ನೂರು ಜನ್ಮಗಳಿಗೆ ಮುಂಚೆ ನೀನು ಯಾರ ಹೆಂಡತಿಯಾಗಿದ್ದೆ? ಹಾಗೆಯೇ ಇನ್ನು ಮುಂದೆ ಯಾರ ಹೆಂಡತಿಯಾಗುತ್ತೀಯೆ? ನೀನು ವ್ಯರ್ಥವಾಗಿ ದುಃಖಪಡುತ್ತಿದ್ದೀಯೆ. ಅದನ್ನು ಯೋಚಿಸುವುದೂ ನಿನ್ನ ಮೂರ್ಖತ್ವವೇ! ಚರ್ಮ, ಮಾಂಸ, ರಕ್ತ, ಕೊಬ್ಬು, ಮೂಳೆ, ಶ್ಲೇಷ್ಮ, ಮಲಮೂತ್ರಸ್ವರೂಪವಾದ ಈ ದೇಹವು ಒಳಗೂ ಹೊರಗೂ ಅಸಹ್ಯ ಉಂಟುಮಾಡುವಂತಹುದು. ಹೀಗೆ ಅಸಹ್ಯವಾದ ಈ ದೇಹವನ್ನು ಸ್ವಾರ್ಥದಿಂದ ನೋಡುವುದೇತಕ್ಕೆ? ಮಲಮೂತ್ರಾದಿಗಳಿಂದ ಕೂಡಿದ ಈ ದೇಹವನ್ನು ಶ್ರೇಷ್ಠವೆಂದುಕೊಳ್ಳುವುದೇಕೆ? ಸಂಸಾರಸಾಗರವನ್ನು ದಾಟಲು ಏನು ಮಾಡಬೇಕೋ ಅದನ್ನು ಯೋಚಿಸು." ಎಂದು ಆ ತಾಪಸಿಯು ಉಪದೇಶಿಸಿದನು.

ಆ ಪತಿವ್ರತೆ ಹಾಗೆ ಆ ತಾಪಸಿಯಿಂದ ಉಪದೇಶ ಪಡೆದವಳಾಗಿ, ದುಃಖಿತಳಾಗಿದ್ದರೂ, ಅವನ ಉಪದೇಶದಲ್ಲಿನ ಸ್ನೇಹಭಾವವನ್ನು ತಿಳಿದುಕೊಂಡು, ಶೋಕವನ್ನು ಬಿಟ್ಟಳು. ಕೈಜೋಡಿಸಿ, ಅವನ ಪಾದಗಳಲ್ಲಿ ಶಿರಸ್ಸಿಟ್ಟು, ವಿನೀತಳಾಗಿ, ಕರುಣೆಹುಟ್ಟುವಂತೆ, "ಸ್ವಾಮಿ, ನನ್ನನ್ನುದ್ಧರಿಸು. ನಾನು ಯಾವ ಮಾರ್ಗದಲ್ಲಿ ನಡೆಯಬೇಕೋ ಅದನ್ನು ತಿಳಿಸು. ದಯಾನಿಧಿ, ನೀನೇ ನನ್ನ ತಾಯಿ. ನೀನೇ ನನ್ನ ತಂದೆ. ನನ್ನನ್ನು ರಕ್ಷಿಸು. ನೀನು ಆಜ್ಞಾಪಿಸಿದ ಹಾಗೆ ನಾನು ನಡೆದುಕೊಳ್ಳುತ್ತೇನೆ." ಎಂದು ಆ ತಾಪಸಿಯನ್ನು ಕೋರಿದಳು. ಅವಳ ಮಾತುಗಳನ್ನು ಕೇಳಿ ಪ್ರಸನ್ನನಾದ ಆ ತಾಪಸಿ, ಸ್ತ್ರೀಯರಿಗೆ ಧರ್ಮಬದ್ಧವಾದ, ಉಭಯತಾರಕವಾದ ಆಚಾರವನ್ನು ಉಪದೇಶಿಸಿದನು.

ಇಲ್ಲಿಗೆ ಮುವ್ವತ್ತನೆಯ ಅಧ್ಯಾಯ ಮುಗಿಯಿತು.

||ಶ್ರೀಗುರು ಚರಿತ್ರೆ - ಇಪ್ಪತ್ತೋಂಬತ್ತನೆಯ ಅಧ್ಯಾಯ||


Tuesday, April 9, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತೆಂಟನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
 ||ಶ್ರೀಗುರುಭ್ಯೋನಮಃ||

"ನಂತರ ನಡೆದ ಗುರು ಕಥೆಯನ್ನು ಹೇಳಿ. ಗುರು ಚರಿತ್ರೆಯನ್ನು ಕೇಳಿದಷ್ಟೂ ನನ್ನಲ್ಲಿ ಇನ್ನಷ್ಟು, ಮತ್ತಷ್ಟು ಕೇಳಬೇಕೆಂಬ ಉತ್ಸಾಹ ಹೆಚ್ಚಾಗುತ್ತಿದೆ" ಎಂದು ಪ್ರಾರ್ಥಿಸಿದ ನಾಮಧಾರಕನಿಗೆ ಸಿದ್ಧಮುನಿ, "ಶಿಷ್ಯ, ಕೇಳು. ಗುರು ಚರಿತ್ರೆ ಎಂಬ ಸತ್ಕಥೆಗಳನ್ನು ಕೇಳುವುದರಿಂದ ಪಾಪ ಕ್ಷಾಳನವಾಗುತ್ತದೆ. ಜ್ಞಾನ ಉದ್ದೀಪನವಾಗುತ್ತದೆ. ಶ್ರೀಗುರುವು ಬ್ರಾಹ್ಮಣನಾದ ಆ ಅಂತ್ಯಜನಿಗೆ ‘ನಿನ್ನ ಪೂರ್ವಜನ್ಮದ ವಿಷಯವಾಗಿ ಕೇಳುತ್ತಿದ್ದೀಯೆ. ನಿನಗೇಕೆ ಚಂಡಾಲತ್ವವು ಬಂತು ಎಂಬುದನ್ನು ಹೇಳುತ್ತೇನೆ, ಕೇಳು. ತಾನು ಮಾಡಿದ ಪುಣ್ಯ ಪಾಪಗಳಿಂದಲೇ ಮನುಷ್ಯನಿಗೆ ಇಹ ಪರಗಳ ಗತಿಯುಂಟಾಗುತ್ತದೆ. ನೀಚ ಜನ್ಮ ಏಕಾಗುತ್ತದೆ ಎಂಬುದನ್ನು ಕೇಳು. ಯಾವುದೇ ವರ್ಣಕ್ಕೆ ಸೇರಿದವರಾದರೂ, ದುರಾಚಾರಿ, ಅನಾಚಾರಿಗಳಾದರೆ ಅಂತಹವರಿಗೆ ನೀಚ ಜನ್ಮ ಬರುತ್ತದೆ. ಬ್ರಾಹ್ಮಣ ಸ್ತ್ರೀ ಶೂದ್ರ ಜಾತಿಯವನೊಡನೆ ಸಂಗ ಮಾಡಿದಾಗ ಹುಟ್ಟುವ ಸಂತತಿ ಚಂಡಾಲವಾಗಿರುತ್ತದೆ. ತಂದೆ ತಾಯಿಯರನ್ನು ದೂರ ಮಾಡಿ ಬೇರೆಯಾಗಿ ಜೀವಿಸುವವನು, ಕುಲಸ್ತ್ರೀಯನ್ನು ಬಿಟ್ಟ ಬ್ರಾಹ್ಮಣ, ಅಸತ್ಯವಾದಿ ಬ್ರಾಹ್ಮಣ, ಕುಲದೈವವನ್ನು ಬಿಟ್ಟು ಅನ್ಯ ದೇವತೆಗಳನ್ನು ಪೂಜಿಸುವವನು, ಜೀವಹಿಂಸೆ ಮಾಡುವವನು, ಕನ್ಯಾ ವಿಕ್ರಯ ಮಾಡುವವನು, ಸುಳ್ಳು ಸಾಕ್ಷಿ ನುಡಿಯುವವನು, ಶೂದ್ರನ ಮನೆಯಲ್ಲಿ ಊಟ ಮಾಡುವವನು, ಕುದುರೆಗಳ ಕ್ರಯ ಮಾಡುವವನು, ಸದಾ ಶೂದ್ರ ಸಂಗದಲ್ಲೇ ಕಾಲ ಕಳೆಯುವವನು ಚಂಡಾಲರಾಗಿ ಜನ್ಮಿಸುತ್ತಾರೆ. ಶೂದ್ರ ಸ್ತ್ರೀ, ದಾಸಿ ಸಂಗ ಮಾಡುವವನು, ಕೋಪದಿಂದ ದೇವ ಪಿತೃ ಕಾರ್ಯಗಳಲ್ಲಿ ಕಾರ್ಯೋಪಕರಣಗಳನ್ನು ಧ್ವಂಸ ಮಾಡುವವನು, ಅರಣ್ಯಕ್ಕೆ ಬೆಂಕಿ ಹಚ್ಚುವವನು, ಹಸು ಕರುಗಳನ್ನು ಬಲಾತ್ಕಾರವಾಗಿ ದೂರ ಮಾಡುವವನು, ಆಸ್ತಿ ವಿಭಾಗ ಮಾಡಿಕೊಂಡು ತನ್ನವರನ್ನು ಬಿಟ್ಟು ದೂರ ಹೋಗುವವನು, ಇವರೆಲ್ಲರೂ ಚಂಡಾಲರಾಗಿ ಜನ್ಮಿಸುತ್ತಾರೆ. ತೀರ್ಥ ಯಾತ್ರೆಗಳನ್ನು ಮಾಡಿ ಶ್ರಾದ್ಧಾದಿಗಳನ್ನು ಮಾಡದವನು, ತೀರ್ಥ ಕ್ಷೇತ್ರಗಳಲ್ಲಿ ದಾನ ಗ್ರಹಣ ಮಾಡುವವನು, ಸ್ವಧರ್ಮವನ್ನು ಬಿಟ್ಟವನು, ಈಶ್ವರ ಸಮರ್ಪಣೆ ಮಾಡದೆ ಗೋಕ್ಷೀರವನ್ನು ಕುಡಿಯುವವನು, ದೇವತಾರ್ಚನೆಗಾದರೂ ತುಳಸಿ ದಳವನ್ನು ಉಗುರುಗಳಿಂದ ಜಿಗುಟಿ ಕೀಳುವವನು ಸಹ ಚಂಡಾಲ ಜನ್ಮಿಗಳಾಗುತ್ತಾರೆ. ಸಾಲಗ್ರಾಮವನ್ನು ಅರ್ಚಿಸುವ ಶೂದ್ರ, ಮಾತಾಪಿತರ ಸೇವೆ, ರಕ್ಷಣೆಗಳನ್ನು ಮಾಡದವನು ಚಂಡಾಲನಾಗಿಯೋ, ಇಲ್ಲವೆ ಏಳು ಜನ್ಮಗಳು ಕ್ರಿಮಿಯಾಗಿಯೋ ಹುಟ್ಟುವನು. ವೇದ ಶಾಸ್ತ್ರ ಪಂಡಿತನಾಗಿಯೂ ತನ್ನ ಮೊದಲ ಭಾರ್ಯೆಯನ್ನು ಬಿಟ್ಟು, ಇನ್ನೊಬ್ಬಳನ್ನು ಮದುವೆಯಾಗುವವನು, ಅಲಸಿ ಬಂದ ಅತಿಥಿಯನ್ನು ಅಲಕ್ಷ್ಯ ಮಾಡಿ ತನ್ನ ಪಾಡಿಗೆ ತಾನು ವೇದ ಪಠನೆಯಲ್ಲಿ ನಿರತನಾಗಿರುವವನು, ಯೋಗ್ಯರಾದ ಬ್ರಾಹ್ಮಣರನ್ನು ನಿಂದಿಸುತ್ತಾ ಅಯೋಗ್ಯರನ್ನು ಹೊಗಳುವವನು ವಾಪಿ ಕೂಪ ತಟಾಕಗಳನ್ನು ಧ್ವಂಸ ಮಾಡುವವನು, ಲಿಂಗ ಪೂಜೆಗೆ ಅಡ್ಡ ತರುವವನು, ವಿಪ್ರಗೃಹಗಳನ್ನು ಹಾಳು ಮಾಡುವವನು, ವಿಶ್ವಾಸ ಘಾತುಕ, ಸ್ವಾಮಿದ್ವೇಷಿ, ಗುರುದ್ರೋಹಿ, ವ್ಯಭಿಚಾರಿ, ಮಿತ್ರ ಭಾರ್ಯಾ ಸಂಗ ಮಾಡುವವನು, ಹೆಂಡತಿಯರಲ್ಲಿ ಬೇಧ ಭಾವ ತೋರಿಸುವವನು, ಅಕಾರಣವಾಗಿ ಅತಿಥಿಗಳಿಗೆ ಆತಿಥ್ಯ ನೀಡುವುದರಲ್ಲಿ ಆಲಸ್ಯ ಮಾಡುವವನು, ಸಂಧ್ಯಾ ಸಮಯದಲ್ಲಿ ನಿದ್ರೆ ಮಾಡುವವನು, ಬ್ರಾಹ್ಮಣರಿಗೆ ದಾನ ಕೊಟ್ಟಿದ್ದ ಗೋ ಭೂಮಿಗಳನ್ನು ಅಪಹರಿಸುವ ರಾಜ ಇವರೆಲ್ಲರೂ ಕೂಡಾ ಚಂಡಾಲರಾಗಿ ಹುಟ್ಟುತ್ತಾರೆ.

ಅತಿಥಿಗಳು ಊಟ ಮಾಡುವ ಸಮಯದಲ್ಲಿ ದುರುಕ್ತಿಗಳನ್ನಾಡುತ್ತ ಅವರಿಗೆ ಊಟವಿಡುವವನು, ಕೆಟ್ಟ ಮಾತನಾಡುತ್ತಾ ದಾನ ಮಾಡುವವನು, ಚಂಡಾಲನಾಗುವನು. ಗಂಗಾ ತೀರವನ್ನು ನಿಂದಿಸುವವನು, ಏಕಾದಶಿಯಂದು ಊಟ ಮಾಡುವವನು, ಯುದ್ಧದಲ್ಲಿ ತನ್ನ ಪ್ರಭುವನ್ನು ಬಿಟ್ಟು ಓಡಿ ಹೋಗುವವನು, ಹಗಲು ಹೊತ್ತಿನಲ್ಲಿ ಸ್ತ್ರೀಸಂಗ ಮಾಡುವವನು, ಶೂದ್ರರಿಗೆ ವೇದಾದಿಗಳನ್ನು ಬೋಧಿಸುವವನು ಕೂಡಾ ಚಂಡಾಲರಾಗಿ ಹುಟ್ಟುತ್ತಾರೆ. ಕಾಲ ಮೀರಿ ಶ್ರಾದ್ಧಾದಿಗಳನ್ನು ಮಾಡುವವನು, ತಾನು ಮಾಡಿದ ಪುಣ್ಯ ಕಾರ್ಯಗಳನ್ನು ತಾನೇ ಹೇಳಿಕೊಂಡು ತನ್ನನ್ನು ತಾನೇ ಪ್ರಶಂಸೆ ಮಾಡಿಕೊಳ್ಳುವವನು, ಜೊತೆಗಾರರಲ್ಲಿ ವಿರಸ ಉಂಟು ಮಾಡಿ ಕಲಹ ಹುಟ್ಟು ಹಾಕುವವನು, ಅರವಂಟಿಗೆಗಳನ್ನು ಕಟ್ಟುವವರಿಗೆ ವಿಘ್ನವುಂಟುಮಾಡೂವವನು, ವೈದ್ಯಕೀಯ ಜ್ಞಾನವಿಲ್ಲದೆ ವೈದ್ಯ ಮಾಡುವವನು, ಚಿಕಿತ್ಸಾ ವಿಧಾನವನ್ನು ತಿಳಿಯದೆ ಔಷಧಗಳನ್ನು ಕೊಡುವವನು, ಋಜು ಮಾರ್ಗವನ್ನು ಅನ್ಯ ಮಾರ್ಗವನ್ನು ಹಿಡಿದವನು, ಗುರುವನ್ನು ಮನುಷ್ಯ ಮಾತ್ರನೆಂದು ಹೇಳುವವನು, ಹರಿ ಹರರ ನಿಂದೆ ಮಾಡುವವನು, ದುಷ್ಟ ದೇವತೆಗಳನ್ನು ಅರ್ಚಿಸುವವನು ಕೂಡಾ ಚಂಡಾಲರಾಗಿ ಜನ್ಮಿಸುತ್ತಾರೆ.

ಚತುರ್ವರ್ಣಗಳಲ್ಲಿ ಯಾರಾದರೂ ತಮ್ಮ ನಿಯಮಿತ ಕರ್ತವ್ಯಗಳನ್ನು ಬಿಟ್ಟು ಇತರ ಕರ್ಮಗಳಲ್ಲಿ ನಿರತರಾಗುವವರು ನಿಶ್ಚಯವಾಗಿಯೂ ಚಂಡಾಲರಾಗಿ ಹುಟ್ಟುತ್ತಾರೆ. ಶೂದ್ರನಿಂದ ಮಂತ್ರಗ್ರಹಣ ಮಾಡುವ ಬ್ರಾಹ್ಮಣ ಚಂಡಾಲನಾಗಿ ಹುಟ್ಟುವುದರಲ್ಲಿ ಸಂದೇಹವಿಲ್ಲ. ಶ್ರಾದ್ಧದಲ್ಲಿ ಪಿಂಡ ಪ್ರದಾನ ಮಾಡದವನು, ಜ್ಞಾನ ವಿಹೀನನು, ವಿಧವೆಯರಲ್ಲಿ ಆಸಕ್ತನಾದವನು, ಮಾತಾ ಪಿತೃ ಬ್ರಾಹ್ಮಣ ಗುರು ದ್ವೇಷಿ, ಗುರು ನಿಂದೆಯಲ್ಲಿ ಸಂತಸ ಪಡುವವನು, ಶಾಸ್ತ್ರೋಕ್ತವಾದ ವೇದ ಚರ್ಚೆಗಳಲ್ಲಿ ಭಾಗವಹಿಸದ ಬ್ರಾಹ್ಮಣ ಬ್ರಹ್ಮ ರಾಕ್ಷಸರಾಗುತ್ತಾರೆ. ತಾನು ಪೂಜಿಸದ ಅನ್ಯ ದೇವತೆಗಳನ್ನು ದೂಷಿಸುವವನು ಮೂರ್ಛೆ ರೋಗ ಪೀಡಿತನಾದ ದರಿದ್ರನಾಗಿ ಹುಟ್ಟುತ್ತಾನೆ. ಮಾತಾ ಪಿತೃ ಗುರುಗಳನ್ನು ತ್ಯಜಿಸಿ ಬೇರೆಯಾಗುವವನು ರೋಗಿಷ್ಠನಾದ ಮೇದರವನಾಗಿ ಹುಟ್ಟುತ್ತಾನೆ. ವೇದ ದೂಷಿತನಾಗಿ ಬಾಹ್ಮಣರನ್ನು ಸದಾ ಅವಹೇಳನ ಮಾಡುವವನು ಕರ್ಮ ಭ್ರಷ್ಟನಾಗಿ, ಮೂತ್ರ ಪಿಂಡಗಳ ಭಾದೆಯಿಂದ ಪೀಡಿತನಾಗುತ್ತಾನೆ.

ತನಗೆ ತಿಳಿದ ಇತರರ ರಹಸ್ಯಗಳನ್ನು ಬಯಲು ಮಾಡಿ, ಅವರ ದುಷ್ಕೃತ್ಯಗಳನ್ನು ಇತರರಿಗೆ ಹೇಳಿ ಸಂತೋಷ ಪಡುವವನು ಜನ್ಮಾಂತರದಲ್ಲಿ ಹೃದ್ರೋಗಿಗಳಾಗಿ ಹುಟ್ಟಿ ಅನೇಕವಾದ ಕಷ್ಟಗಳನ್ನು ಅನುಭವಿಸುತ್ತಾನೆ. ಗರ್ಭಪಾತ ಮಾಡಿಸುವ ಸ್ತ್ರೀ ಜನ್ಮಾಂತರದಲ್ಲಿ ಬಂಜೆಯಗಿ ಹುಟ್ಟುತ್ತಾಳೆ ಅಥವ ಅವಳಿಗೆ ಹುಟ್ಟುವ ಮಕ್ಕಳೆಲ್ಲರೂ ಸಾಯುತ್ತಾರೆ. ವೇದ ಶಾಸ್ತ್ರ ಪುರಾಣಾದಿಗಳನ್ನು ದುಷ್ಟ ಬುದ್ಧಿ, ದುಷ್ಟ ದೃಷ್ಟಿಯಿಂದ ಕಾಣುತ್ತಾ ಅವನ್ನು ಕೇಳುವವನು, ಹೊಟ್ಟೆಬಾಕರು ಊಟ ಮಾಡುವುದನ್ನು ನೋಡುವವನು ಕಿವುಡ, ಮೂಕನಾಗಿ ಹುಟ್ಟುತ್ತಾನೆ. ಪತಿತನ ಸ್ನೇಹ ಮಾಡಿದವನು ಕತ್ತೆಯಾಗುತ್ತಾನೆ. ಸುರಾಪಾನಸಕ್ತರು ಕಪ್ಪು ಹಲ್ಲುಳ್ಳವರಾಗಿ ಹುಟ್ಟುತ್ತಾರೆ. ಚಿನ್ನ ಕದ್ದವನು ವಕ್ರ ನಖಗಳುಳ್ಳವನಾಗಿ ಹುಟ್ಟುತ್ತಾನೆ. ಗುರು ಪತ್ನಿ ಸಂಗ ಮಾಡಿದವನು ಕುಷ್ಠು ರೋಗಿಯಾಗುತ್ತಾನೆ. ಕುದುರೆ ಹಸುಗಳನ್ನು ಕೊಂಡವನು ಸಂತಾನ ಹೀನನಾಗಿ ಹುಟ್ಟುತ್ತಾನೆ.

ನಿಜವಾದ ಪಶ್ಚಾತ್ತಾಪದಿಂದ ಸ್ವಲ್ಪಮಟ್ಟಿಗೆ ಪಾಪ ಹೀನನಾಗಬಹುದು. ಮೊದಲು ನರಕ ಯಾತನೆಗಳನ್ನು ಅನುಭವಿಸಿ ನಂತರ ಭೂಮಿಯಲ್ಲಿ ರೋಗ ಗ್ರಸ್ತರಾಗಿಯೋ, ಅಂಗ ವಿಹೀನರಾಗಿಯೋ ತಮ್ಮ ಕರ್ಮ ಫಲದಂತೆ ಹುಟ್ಟುತ್ತಾರೆ. ವಿಶ್ವಾಸ ಘಾತುಕನು ರೋಗಿಯಾಗಿ ಹುಟ್ಟಿ ವಾಂತಿಗಳಿಂದ ಬಾಧಿಸಲ್ಪಡುತ್ತಾನೆ. ಇತರರ ಸೇವಕರನ್ನು ಬಿಡಿಸಿ ತನ್ನ ಸೇವಕರನ್ನಾಗಿ ಮಾಡಿ ಕೊಳ್ಳುವವನು ಕಾರಾಗಾರ ವಾಸವನ್ನನುಭವಿಸುತ್ತಾ ಘೋರವಾದ ಯಾತನೆಗಳಿಗೆ ಗುರಿಯಾಗುತ್ತಾನೆ. ಪರಸ್ತ್ರೀಯರನ್ನು ಅಪಹರಿಸಿದವನು ದಾರುಣವಾದ ನರಕ ಯಾತನೆಗಳನ್ನನುಭವಿಸಿ ಮತಿಹೀನನಾಗಿ ಹುಟ್ಟಿ ಕಷ್ಟ ಭೋಗಿಯಾಗುತ್ತಾನೆ. ಸರ್ಪಗಳನ್ನು ಕೊಂದವನು ಸರ್ಪವಾಗಿ ಹುಟ್ಟುತ್ತಾನೆ.

ಇನ್ನು ಕಳ್ಳತನ ಮಾಡುವುದರಿಂದ ಉಂಟಾಗುವ ಕಷ್ಟಗಳನ್ನು ಕೇಳು. ಚಿನ್ನ ಕದ್ದವನು ಮಧು ಮೇಹಿಯಾಗುತ್ತಾನೆ. ಪುಸ್ತಕಗಳನ್ನು ಕದ್ದವನು ಹುಟ್ಟು ಕುರುಡನಾಗುತ್ತಾನೆ. ವಸ್ತ್ರಾಪಹಾರಿ ಬಿಳಿತೊನ್ನು ರೋಗಿಯಾಗುತ್ತಾನೆ. ಸಂಘದ ಹಣವನ್ನು ಅಪಹರಿಸಿದವನು ಗಂಡ ಮಾಲೆ ರೋಗದಿಂದ ನರಳುತ್ತಾನೆ. ಶ್ವಾಸ ರೋಗದಿಂದ ನರಳುತ್ತಿರುವವನ ಹಣವನ್ನು ಕದ್ದವನು ಸೆರೆಮನೆ ಸೇರುತ್ತಾನೆ. ಅಡವಿಟ್ಟ ಒಡವೆ ಮುಂತಾದವುಗಳನ್ನು ಅಪಹರಿಸಿದವನು, ಪರಧನಾಪಹಾರಿ, ಇತರರನ್ನು ದ್ವೇಷಿಸುವವನು ಜನ್ಮಾಂತರದಲ್ಲಿ ಅಪುತ್ರರಾಗುತ್ತಾರೆ. ಇತರರ ಅನ್ನವನ್ನು ಅಪಹರಿಸುವವನು ಗುಲ್ಮ ರೋಗಿಯಾಗುತ್ತಾನೆ. ಎಣ್ಣೆ ಕದ್ದವನು ದುರ್ಗಂಧ ಶರೀರಿಯಾಗುತ್ತಾನೆ. ಬ್ರಾಹ್ಮಣನ ಧನ, ಪರ ಭಾರ್ಯೆಯನ್ನು ಆಪಹರಿಸುವವನು ಬ್ರಹ್ಮ ರಾಕ್ಷಸನಾಗುತ್ತಾನೆ. ಮುತ್ತು ರತ್ನ ಮುಂತಾದುವನ್ನು ಕದ್ದವನು ಹೀನ ಜಾತಿಯಲ್ಲಿ ಹುಟ್ಟುತ್ತಾನೆ. ಎಲೆ, ಕಾಯಿ, ಹಣ್ಣು ಹೂಗಳನ್ನು ಕದ್ದವನು ಕಜ್ಜಿಯಿಂದ ನರಳುತ್ತಾನೆ. ರಕ್ತಪಾನ ಮಾಡಿದವನು ಉಣ್ಣಿಯಾಗಿ ಹುಟ್ಟುತ್ತಾನೆ. ಕಂಚು ಇತ್ಯಾದಿ ಲೋಹಗಳು, ಹತ್ತಿ, ಮುಂತಾದುವನ್ನು ಕದ್ದವನು ನರಕದಲ್ಲಿ ಬಿದ್ದು ಕಷ್ಟಗಳನ್ನನುಭವಿಸಿ ಮತ್ತೆ ಕುಷ್ಠು ರೋಗಿಯಾಗಿ ಹುಟ್ಟುತ್ತಾನೆ. ದೇವ ದ್ರವ್ಯವನ್ನು ಅಪಹರಿಸಿದವನು, ದೇವ ಕಾರ್ಯಗಳಿಗೆ ಅಡ್ಡ ತರುವವನು, ನಿಷಿದ್ಧ ಪದಾರ್ಥಗಳನ್ನು ತಿನ್ನುವವನು ಪಾಂಡು ರೋಗಿಯಾಗುತ್ತಾನೆ. ಪರಧನವನ್ನು ಕದ್ದವನು ‘ಉಷ್ಟ್ರ’ವಾಗಿ ಹುಟ್ಟುತ್ತಾನೆ. ಹಣ್ಣು ಕದ್ದವನು ಗೊತ್ತು ಗುರಿಯಿಲ್ಲದೆ ಕಾಡಿನಲ್ಲಿ ಅಲೆಯುವವನಾಗಿ ಹುಟ್ಟುತ್ತಾನೆ. ನೀರನ್ನು ಕದ್ದವನು ಚಾತ ಪಕ್ಷಿಯಾಗಿ ಹುಟ್ಟುತ್ತಾನೆ. ಗೃಹೋಪಯೋಗಿ ವಸ್ತುಗಳನ್ನು ಅಪಹರಿಸಿದವನು ಕಾಗೆಯಾಗಿ ಹುಟ್ಟುತ್ತಾನೆ. ಜೇನು ತುಪ್ಪ ಕದ್ದವನು ಜೇನ್ನೊಣವಾಗಿ ಹುಟ್ಟುತ್ತಾನೆ. ಹಾಲು, ತುಪ್ಪ, ಮೊಸರು, ಬೆಣ್ಣೆ ಮುಂತಾದುವನ್ನು ಕದ್ದವನು ಕುಷ್ಟು ರೋಗಿಯಾಗುತ್ತಾನೆ. ಮೇಲೆ ಹೇಳಿದವೆಲ್ಲವೂ ಜನ್ಮಾಂತರದಲ್ಲಿ ಉಂಟಾಗುವಂತಹವು.

ಶಾಂತಿಪರ್ವದಲ್ಲಿ ವ್ಯಭಿಚಾರದ ಬಗ್ಗೆ ಹೇಳಲ್ಪಟ್ಟಿದೆ. ಪರಸ್ತ್ರೀಯನ್ನು ತಬ್ಬಿ ಕೊಂಡವನು ನೂರು ಜನ್ಮಗಳು ನಾಯಿಯಾಗಿ, ನಂತರ ಹಾವಾಗಿ ಹುಟ್ಟಿ ಅನೇಕ ರೀತಿಯ ದುಃಖಗಳಿಗೆ ಈಡಾಗುತ್ತಾನೆ. ಪರಸ್ತ್ರೀಯನ್ನು ನಗ್ನಳಾಗಿ ನೋಡಿದವನು ಹುಟ್ಟು ಕುರುಡನಾಗುತ್ತಾನೆ. ಬಂಧು ಭಾರ್ಯಾ ಸಂಗ ಮಾಡಿದವನು ಕತ್ತೆಯಾಗಿ, ನಂತರ ಹಾವಾಗಿ ಹುಟ್ಟುತ್ತಾನೆ. ಜಾರನಾದವನು ನಿತ್ಯ ನರಕ ವಾಸಿಯಾಗುತ್ತಾನೆ. ಮಿತ್ರ ಭಾರ್ಯಾ ಸಂಗ ಮಾಡಿದವನು, ಸೋದರ ಮಾವನ ಹೆಂಡತಿಯ ಸಂಗ ಮಾಡಿದವನು, ನಾಯಿಯಾಗುತ್ತಾನೆ. ಇತರರ ಹೆಂಡಂದಿರನ್ನು ದುಷ್ಟ ಬುದ್ಧಿಯಿಂದ ನೋಡಿದವನು ಕಣ್ಣು ರೋಗದಿಂದ ನರಳುತ್ತಾನೆ. ಶೂದ್ರನಾಗಿ ಬ್ರಾಹ್ಮಣ ಸ್ತ್ರೀಯನ್ನು ಕೂಡಿದರೆ ಇಬ್ಬರೂ ಕ್ರಿಮಿಗಳಾಗಿ ಹುಟ್ಟುತ್ತಾರೆ. ಶೂದ್ರನನ್ನು ಕೂಡಿದ ಸ್ತ್ರೀ ದುಷ್ಟಾಚಾರಿಯಾಗಿ ಹೆಣ್ಣು ನಾಯಿಯಾಗಿ ಹುಟ್ಟುತ್ತಾಳೆ.

ಈ ರೀತಿಯಲ್ಲಿ ಶ್ರೀಗುರುವು ದೋಷಗಳು, ಅದರಿಂದ ಪತಿತರಿಗೆ ಉಂಟಾಗುವ ದುಷ್ಫಲಗಳನ್ನು ಬಹಳವಾಗಿ ತಿಳಿಸಿದರು. ಅದನ್ನು ಕೇಳಿದ ತ್ರಿವಿಕ್ರಮ, ಶ್ರೀಗುರುವನ್ನು, "ಸ್ವಾಮಿ, ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳನ್ನು ಹೇಗೆ ನಾಶ ಮಾಡಿಕೊಳ್ಳಬಹುದು?" ಎಂದು ಕೇಳಿದನು. ಅದಕ್ಕೆ ಶ್ರೀಗುರುವು, "ತ್ರಿವಿಕ್ರಮ, ಪ್ರಾಯಶ್ಚಿತ್ತ ಮಾಡಿಕೊಳ್ಳುವುದರಿಂದ ಅವನ್ನು ಕಳೆದು ಕೊಳ್ಳಬಹುದು. ನಿಜವಾಗಿಯೂ ಪಶ್ಚಾತಾಪ ದಗ್ಧನಾದವನ ಪಾಪಗಳೆಲ್ಲವೂ ನಾಶವಾಗುತ್ತವೆ. ಮುನಿಗಳಿಂದ ಹೇಳಲ್ಪಟ್ಟ ಪ್ರಾಯಶ್ಚಿತ್ತ ವಿಧಿ ವಿಧಾನಗಳನ್ನು ಹೇಳುತ್ತೇನೆ ಕೇಳು. ಅವುಗಳು ಅನೇಕ ವಿಧವಾಗಿವೆ. ಬ್ರಾಹ್ಮಣ ಸಭೆಯಲ್ಲಿ ತಪ್ಪೊಪ್ಪಿಕೊಂಡು ಸಭೆಯ ಸದಸ್ಯರು ಹೇಳಿದ ನಿಬಂಧನೆಗಳನ್ನು ತನ್ನ ಶಕ್ತಿ ಮೀರಿ ಒಂದು ವರ್ಷ ಪಾಲಿಸಬೇಕು. ಗೋದಾನ ಮುಂತಾದುವುಗಳನ್ನು ಪಾಲಿಸಲಾಗದಿದ್ದರೆ ಅದರ ಬದಲಾಗಿ ಅದಕ್ಕೆ ಸರಿಯಾದ ಧನವನ್ನು ದಂಡವಾಗಿ ಕಟ್ಟಬೇಕು. ಕೃಚ್ಛವ್ರತವನ್ನು ಆಚರಿಸಬೇಕು. ಅಜ್ಞಾನದಿಂದ ಪಾಪ ಮಾಡಿದ್ದರೆ ನಿಜವಾದ ಪಶ್ಚಾತ್ತಾಪದಿಂದ ಅವು ಕಳೆಯುತ್ತವೆ. ಗುರುಸೇವಾಪರನ ಪಾಪಗಳನ್ನು ಗುರುವು ಮಾತ್ರವೇ ನಿವಾರಿಸಬಲ್ಲನು. ಗುಲಗಂಜಿ ತೂಕದ ಚಿನ್ನ ದಾನ ಮಾಡುವುದು, ತೀರ್ಥ ಯಾತ್ರೆಗಳನ್ನು ಮಾಡುವುದರಿಂದ ಸ್ವಲ್ಪ ಪಾಪ ನಾಶವಾಗುತ್ತದೆ. ಇದೊಂದು ಬ್ರಾಹ್ಮಣರಿಗೆ ವಿಧಿಸಿದ ಪರಿಹಾರ ವಿಧಾನವು. ಗಂಡ-ಹೆಂಡಿರಲ್ಲಿ ಒಬ್ಬರು ಪಾಪ ಮಾಡಿದರೂ ಇಬ್ಬರಿಗೂ ಆ ಪಾಪದ ಫಲವುಂಟಾಗುತ್ತದೆ. ಆದ್ದರಿಂದ ಇಬ್ಬರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಸಾಮಾನ್ಯವಾದ ಪಾಪಗಳನ್ನು ಕಳೆದು ಕೊಳ್ಳುವುದಕ್ಕಾಗಿ ಮುನಿಗಳು ಇನ್ನೊಂದು ವಿಧಾನವನ್ನು ಹೇಳಿದ್ದಾರೆ. ಗಾಯತ್ರಿ ಮಂತ್ರವನ್ನು ೧೦,೦೦೦ ಸಲ ಜಪ ಮಾಡುವುದರಿಂದ ಅದು ಗಾಯತ್ರಿ ಕೃಚ್ಛ ಆಗುತ್ತದೆ. ನಂತರ ತುಪ್ಪದಿಂದ ೧೦೦೦ ಗಾಯತ್ರಿ ಹೋಮ ಮಾಡಬೇಕು. ಸ್ವಶಾಖ ವೇದ ಪಠನದಿಂದಲೂ ಗಾಯತ್ರಿ ಕೃಚ್ಛ ಮಾಡಿದಂತಾಗುತ್ತದೆ. ಮೂರುದಿನ ಬೆಳಗ್ಗೆ ಒಂದು ಹೊತ್ತು, ಮತ್ತೆ ಮೂರುದಿನ ರಾತ್ರಿ ಒಂದು ಹೊತ್ತು, ಊಟ ಮಾಡಿ, ಮುಂದಿನ ಮೂರು ದಿನ ಅಯಾಚಿತವಾಗಿ ಬಂದದ್ದನ್ನು ಮಾತ್ರ ತೆಗೆದುಕೊಂಡು. ಮೂರುದಿನ ಪೂರ್ತಿ ಉಪವಾಸ. ಹೀಗೆ ಹನ್ನೆರಡು ದಿನಗಳು ಗುರು ಸ್ಮರಣೆ ಮಾಡುತ್ತಾ ಕಾಲ ಕಳೆಯಬೇಕು. ಇದನ್ನು ಪ್ರಾಜಾಪತ್ಯ ಕೃಚ್ಛವೆನ್ನುತ್ತಾರೆ. ಇದನ್ನು ಮಾಡುವುದರಿಂದ ಸಾಮಾನ್ಯ ಪಾಪಗಳು ಕಳೆಯುತ್ತವೆ. ಹದಿನೈದು ಹಿಡಿ ಬೆಳಗ್ಗೆ, ಹನ್ನೆರಡು ಹಿಡಿ ರಾತ್ರಿ ಅನ್ನ ತಿನ್ನುತ್ತಾ ಶುದ್ಧನಾಗಿದ್ದುಕೊಂಡು, ಒಂದು ತಿಂಗಳು ವ್ರತವನ್ನಾಚರಿಸಿದರೆ ಸಾಮಾನ್ಯ ಪಾಪಗಳು ಕಳೆಯುತ್ತವೆ. ಮೂರುದಿನ ತುಪ್ಪ, ಮೂರುದಿನ ಹಾಲು, ಮೂರುದಿನ ವಾಯು ಭಕ್ಷಣ ಮಾಡಿ, ನಂತರ ೨೧ ದಿನ ಕ್ಷೀರಪಾನ ಮಾಡಿದರೂ ಪಾಪ ಕ್ಷಾಳನವಾಗುತ್ತದೆ. ಉಪವಾಸ ಮಾಡಲು ಶಕ್ತಿಯಿಲ್ಲದಿದ್ದರೆ ಅವಲಕ್ಕಿ ತಿಂದು ಉಪವಾಸ ಮಾಡ ಬಹುದು. ಶಕ್ತಿಯಿದ್ದವರು ಪರ್ಣಕೃಚ್ಛ ಮಾಡಬಹುದು. ಅಶ್ವತ್ಥ, ಆಲ, ತಾವರೆ, ದರ್ಭೆ, ದೂರ್ವಗಳಿಂದ ಜಾರಿಬಿದ್ದ ನೀರನ್ನು ಮಾತ್ರ ಕುಡಿಯುವುದಕ್ಕೆ ಪರ್ಣಕೃಚ್ಛವೆನ್ನುತ್ತಾರೆ. ಈ ಪರ್ಣ ಕೃಚ್ಛವನ್ನು ಏಳು ದಿನ ಮಾಡಿದರೂ ಪಾಪ ಕ್ಷಾಳನವಾಗುತ್ತದೆ. ಚಾಂದ್ರಾಯಣ ವ್ರತವೆಂಬುದೊಂದುಂಟು. ಶುಕ್ಲ ಪಕ್ಷದ ಮೊದಲದಿನ ಒಂದು ಹಿಡಿಯಿಂದ ಆರಂಭಮಾಡಿ, ದಿನಕ್ಕೆ ಒಂದು ಹಿಡಿಯಂತೆ ಹೆಚ್ಚು ಮಾಡುತ್ತಾ ಪೂರ್ಣಿಮೆಯ ದಿನದಂದು ಹದಿನೈದು ಹಿಡಿ ತಿನ್ನಬೇಕು. ನಂತರ ಕೃಷ್ಣ ಪಕ್ಷದ ಮೊದಲ ದಿನದಿಂದ ಆರಂಭಿಸಿ ಅಮಾವಾಸ್ಯೆಯವರೆಗೂ ಒಂದೊಂದು ಹಿಡಿ ಕಡಮೆ ಮಾಡುತ್ತಾ ಅಮಾವಾಸ್ಯೆಯ ದಿನ ಉಪವಾಸ ಮಾಡಬೇಕು. ಇದನ್ನು ಚಾಂದ್ರಾಯಣ ವ್ರತವೆನ್ನುತ್ತಾರೆ.

ಈ ರೀತಿಯಲ್ಲಿ ಅನೇಕ ವಿಧಾನಗಳಿಂದ ಮಾಡಿದ ಪಾಪಗಳನ್ನು ಕಳೆದುಕೊಳ್ಳಬಹುದು. ಆದರೆ ಯಾವುದಕ್ಕೂ ಮುಂಚೆ ಸಭೆಯಲ್ಲಿ ತಾನು ಮಾಡಿದ ಪಾಪಗಳಿಗೆ ಪಶ್ಚಾತ್ತಾಪ ಪಟ್ಟು, ತಪ್ಪೊಪ್ಪಿಕೊಂಡು, ಸತ್ಯವನ್ನು ಹೇಳಿ, ಶ್ರದ್ಧಾ ಭಕ್ತಿಗಳಿಂದ ಆಚರಿಸಿದ ವ್ರತಗಳು, ಕೃಚ್ಛಗಳು ಫಲ ಕೊಡುತ್ತವೆ. ಇಲ್ಲದಿದ್ದರೆ ಅವುಗಳಿಂದ ಯಾವ ಉಪಯೋಗವೂ ಆಗುವುದಿಲ್ಲ.

ಇನ್ನು ತೀರ್ಥ ಯಾತ್ರೆಗಳಿಂದ ಆಗುವ ಫಲವನ್ನು ಹೇಳುತ್ತೇನೆ ಕೇಳು. ವಾರಣಾಸಿಯಲ್ಲಿ ಗಂಗಾ ಸ್ನಾನ ಮಾತ್ರದಿಂದಲೇ ಸರ್ವ ಪಾಪಗಳೂ ನಾಶವಾಗುತ್ತವೆ. ಬೇರೆ ತೀರ್ಥಗಳಿಗೆ ಹೋದವರು, ಅಗಸ್ತ್ಯ ಮುನಿಗಳು ಹೇಳಿರುವಂತೆ ಅಲ್ಲಿ ಸಹಸ್ರ ಗಾಯತ್ರಿ ಜಪ ಮಾಡಿದರೆ ಪಾಪ ನಾಶವಾಗುತ್ತದೆ. ಸೇತು ಬಂಧದ ಹತ್ತಿರ ಸಮುದ್ರ ಸ್ನಾನ ಮಾಡಿದವರಿಗೆ ಭ್ರೂಣ ಹತ್ಯೆ, ಕೃತಘ್ನತೆಯಂತಹ ಪಾಪಗಳೂ ಕಳೆಯುತ್ತವೆ. ಅಲ್ಲಿ ವಿಧಿ ಪೂರ್ವಕವಾಗಿ ಸ್ನಾನ ಮಾಡಿ ಕೋಟಿ ಗಾಯತ್ರಿ ಜಪ ಮಾಡಿದರೆ ಬ್ರಹ್ಮ ಹತ್ಯೆಯಂತಹ ಪಾಪಗಳೂ ನಾಶವಾಗುತ್ತವೆ. ಲಕ್ಷ ಗಾಯತ್ರಿ ಜಪ ಮಾಡಿದರೆ ಸುರಾಪಾನದಂತಹ ಪಾಪಗಳು ಕಳೆಯುತ್ತವೆ. ಏಳು ಲಕ್ಷ ಜಪ ಮಾಡಿದರೆ ಚಿನ್ನ ಕದ್ದ ಪಾಪ ಕಳೆಯುತ್ತದೆ. ಎಂಟು ಲಕ್ಷ ಜಪ ಮಾಡಿದರೆ ಗುರು ಭಾರ್ಯಾಗಮನದಂತಹ ಮಹಾ ಪಾಪಗಳೂ ಕಳೆಯುತ್ತವೆ.

ಇನ್ನು ವೇದ ಪಠನದಿಂದ ಉಂಟಾಗುವ ಫಲಗಳನ್ನು ಕೇಳು. ‘ಪಾವಮಾನ’ ಮಂತ್ರ, ‘ಇಂದ್ರಮಿತ್ರ’ ಮಂತ್ರ ಜಪದಿಂದ ಬ್ರಹ್ಮ ಹತ್ಯೆಯಂತಹ ಪಾಪಗಳು ಕಳೆಯುತ್ತವೆ. ‘ಶಾಂತಿಸೂಕ್ತ’ ಪಠನದಿಂದ ಸುರಾ ಪಾನದಂತಹ ಪಾಪಗಳು ಕಳೆಯುತ್ತವೆ. ‘ಶೌನಶ್ಶೇಫ ಸೂಕ್ತ’ ಪಠನೆಯಿಂದ ಸ್ವರ್ಣಾಪಹಾರಿ ತನ್ನ ಪಾಪ ಕಳೆದುಕೊಂಡು ಶುದ್ಧನಾಗುತ್ತಾನೆ. ‘ಶಾಂತಿ ಸೂಕ್ತ’ವನ್ನು ಪಠಿಸುತ್ತಾ, ಒಂದು ತಿಂಗಳು ಬರಿಯ ಹವಿಷ್ಯಾನ್ನವನ್ನು ಮಾತ್ರ ಊಟ ಮಾಡಿದರೆ ಗುರುಭಾರ್ಯಾ ಗಮನದಂತಹ ಪಾಪಗಳೂ ನಾಶವಾಗುತ್ತವೆ. ಶ್ರದ್ಧಾ ಭಕ್ತಿಗಳಿಂದ ಕೂಡಿ, ಮಿತಾಹಾರಿಯಾಗಿ, ೬ ತಿಂಗಳು ಪುರುಷಸೂಕ್ತವನ್ನು ಪಠಿಸಿದರೆ, ಜಪಿಸಿದರೆ ಪಂಚ ಮಹಾ ಪಾತಕಗಳೂ ನಾಶವಾಗಿ ಅವನು ಪರಿಶುದ್ಧನಾಗುತ್ತಾನೆ. ಶ್ರದ್ಧೆಯಿಂದ, ಭಕ್ತಿಯಿಟ್ಟು ಮಾಡಿದ, ‘ತ್ರಿಸುಪರ್ಣ’ ಜಪದಿಂದ ಪಂಚ ಮಹಾಪಾತಕಗಳೂ ಕಳೆದು ಹೋಗುತ್ತವೆ. ‘ತ್ರಿಸುಪರ್ಣ’ ಜಪ ಸರ್ವ ಪಾಪ ನಾಶಕರವು. ನಾರಾಯಣೋಪನಿಷತ್ತನ್ನು ಶ್ರದ್ಧಾಭಕ್ತಿಗಳಿಂದ ಕೂಡಿ ಜಪಿಸುವವನು ಪಂಚ ಮಹಾಪಾತಕಗಳಿಂದ ಬಿಡುಗಡೆ ಹೊಂದುವನು. ತ್ರಿಪದಿ ಗಾಯತ್ರಿಯನ್ನು ಜಪಿಸುವವನ ಪಾಪಗಳೆಲ್ಲವೂ ನಾಶವಾಗುತ್ತವೆ. ‘ಅಘಮರ್ಷಣ ಸೂಕ್ತ’ ಜಪದಿಂದ, ‘ವಿಷ್ಣು ಸೂಕ್ತ’ ಜಪದಿಂದ ಏಳು ಜನ್ಮಗಳಲ್ಲಿ ಮಾಡಿದ ಪಾಪಗಳಿಂಡ ಬಿಡುಗಡೆಯಾಗುತ್ತದೆ. ಆದರೆ, ತ್ರಿವಿಕ್ರಮ, ಇವೆಲ್ಲಕ್ಕೂ ಶ್ರದ್ಧಾ ಭಕ್ತಿಗಳು ಬಹು ಮುಖ್ಯ. ಶ್ರದ್ಧಾ ಭಕ್ತಿಗಳಿಲ್ಲದೆ ಮಾಡಿದ ಯಾವ ಜಪವೂ, ಪಠನವೂ ಪಾಪ ನಾಶ ಮಾಡಲಾರದು.

ಇನ್ನು ತಿಳಿಯದೆ ಮಾಡಿದ ಪಾಪಗಳಿಂದ ಬಿಡುಗಡೆ ಹೇಗೆ ಎಂಬುದನ್ನು ಹೇಳುತ್ತೇನೆ. ಸಾವಧಾನವಾಗಿ ಕೇಳು. ಪಂಚ ಗವ್ಯ ಪ್ರಾಶನ ಮಾಡಿ, ನಿಜವಾಗಿಯೂ ಪಶ್ಚಾತ್ತಾಪದಿಂದ ದಗ್ಧನಾದವನು ಶುದ್ಧನಾಗುತ್ತಾನೆ. ಕರಿಯ ಬಣ್ಣದ ಹಸುವಿನಿಂದ ಗೋಮೂತ್ರ, ಗೋಮಯ, ಗೋಘೃತ, ತಾಮ್ರ ಬಣ್ಣದ ಹಸುವಿನಿಂದ ಗೋಕ್ಷೀರ, ಬಿಳಿಯ ಬಣ್ಣದ ಹಸುವಿನಿಂದ ಗೋದಧಿ ಇವನ್ನು ಬೇರೆ ಬೇರೆಯಾಗಿ ಶೇಖರಿಸಿ, ಶಾಸ್ತ್ರೋಕ್ತವಾಗಿ, ನಿರ್ದಿಷ್ಟ ಪ್ರಮಾಣದಲ್ಲಿ ಕಲಸಿದ ಸಮ್ಮಿಶ್ರಣವೇ ಪಂಚಗವ್ಯ. ಇದನ್ನು ದರ್ಭೆಗಳನ್ನಿಟ್ಟ ನೀರಿನೊಡನೆ ಕಲಸಿ ಕುಡಿಯಬೇಕು. ಕುಡಿಯುವುದಕ್ಕೆ ಮುಂಚೆ ಒಂದು ದಿನ ಉಪವಾಸವಿರಬೇಕು. ಆಯಾ ಬಣ್ಣದ ಹಸುಗಳು ಸಿಕ್ಕದಿದ್ದಲ್ಲಿ ಕಪಿಲ ಬಣ್ಣದ ಹಸುವಿನಿಂದ ಎಲ್ಲವನ್ನೂ ಸಂಗ್ರಹಿಸಬೇಕು. ಪಂಚಗವ್ಯವನ್ನು ಮಾಡಿಟ್ಟುಕೊಂಡು, ಇರಾವತಿ, ಇದಂವಿಷ್ಣು, ಮಾನಸ್ತೋಕೆ, ಪ್ರಜಾಪತೇ ಎಂಬ ಮಂತ್ರಗಳಿಂದಲೂ, ಗಾಯತ್ರಿ ಮಂತ್ರದಿಂದಲೂ, ಓಂಕಾರ ಪೂರ್ವಕವಾಗಿ, ವ್ಯಾಹೃತಿಗಳೊಡನೆ ಶಾಸ್ತ್ರೋಕ್ತವಾಗಿ ಹೋಮ ಮಾಡಬೇಕು. ಈ ರೀತಿಯಲ್ಲಿ ಹೋಮ ಮಾಡಿ ತಾನು ಮಾಡಿದ ತಪ್ಪಿನಿಂದ ಪ್ರಾಯಶ್ಚಿತ್ತ ದಗ್ಧನಾಗಿ ಪಂಚಗವ್ಯವನ್ನು ಸೇವಿಸಿ, ಯತ್ವಗಸ್ಥಿ ಎಂಬ ಮಂತ್ರ ಪಠಿಸಿದರೆ ಶುದ್ಧನಾಗುವನು.

ಬ್ರಹ್ಮ ಹತ್ಯೆ, ಸುರಾಪಾನ, ಗುರು ಭಾರ್ಯಾ ಸಂಗ, ಸ್ವರ್ಣ ಚೌರ್ಯ ಇವು ಮಹಾ ಪಾತಕಗಳು. ಇದರಲ್ಲಿ ಯಾವುದಾದರೊಂದನ್ನು ಮಾಡಿದವನನ್ನು ಮಹಾ ಪಾತಕಿಯೆನ್ನುತ್ತಾರೆ. ಅಂತಹ ಮಹಾ ಪಾತಕಿಯ ಸಂಗ ಮಾಡುವುದು ಕೂಡ ಮಹಾ ಪಾತಕವೇ. ಇವೈದನ್ನೂ ಪಂಚ ಮಹಾ ಪಾತಕಗಳೆನ್ನುತ್ತಾರೆ. ಇವು ಪರಿಹಾರವಿಲ್ಲದಂತಹ ಪಾತಕಗಳು. ಬೇರೆಯ ಪಾಪಗಳು ಪ್ರಾಯಶ್ಚಿತ್ತ ಮಾಡಿಕೊಳ್ಳುವುದರಿಂದ ಕಳೆದರೂ, ಪಂಚ ಮಹಾಪಾತಕಗಳು ಸದ್ಗುರುವಿನ ಅನುಗ್ರಹದಿಂದ ಕಳೆಯುತ್ತವೆ. ಸ್ವಧರ್ಮ ನಿರತನಾಗಿ, ಮನೋ ವಾಕ್ಕಾಯಗಳಿಂದ ಶುದ್ಧನಾದ ವೈದ್ಯ ಶಾಸ್ತ್ರನಿಪುಣನ ಅನುಗ್ರಹದಿಂದಲೂ ಪಾಪಿಯಾದವನು ಶುದ್ಧನಾಗಬಲ್ಲನು.

ಈ ರೀತಿಯಲ್ಲಿ ಶ್ರೀಗುರುವು ಅನೇಕ ವಿಧವಾದ ಪ್ರಾಯಶ್ಚಿತ್ತ ವಿಧಾನಗಳನ್ನು ತ್ರಿವಿಕ್ರಮನಿಗೆ ಹೇಳಿದರು. ನಂತರ ಪತಿತನಾಗಿ ಅಲ್ಲಿ ನಿಂತಿದ್ದ ಚಂಡಾಲನ ಕಡೆಗೆ ನೋಡಿ, "ಅಯ್ಯಾ, ನೀನು ಪೂರ್ವ ಜನ್ಮದಲ್ಲಿ ಬ್ರಾಹ್ಮಣನಾಗಿ ನಿನ್ನ ಮಾತಾ ಪಿತರನ್ನು ದ್ವೇಷಿಸಿದ್ದರಿಂದ ಈಗ ಚಂಡಾಲನಾಗಿ ಹುಟ್ಟಿದ್ದೀಯೆ. ನೀನು ಶುದ್ಧಿಯಾಗಬಲ್ಲ ಮಾರ್ಗವನ್ನು ಹೇಳುತ್ತೇನೆ ಕೇಳು. ಒಂದು ತಿಂಗಳು ಸಂಗಮದಲ್ಲಿ ಸ್ನಾನಮಾಡು. ನಿನ್ನ ದೋಷಗಳೆಲ್ಲವೂ ಕಳೆದು ನೀನು ಮತ್ತೆ ಬ್ರಾಹ್ಮಣನಾಗುತ್ತೀಯೆ" ಎಂದು ಹೇಳಿದರು. ಅದಕ್ಕೆ ಅವನು, "ಸ್ವಾಮಿ, ನಿಮ್ಮ ದರ್ಶನದಿಂದ ನಾನು ಶುದ್ಧನಾಗಿದ್ದೇನೆ. ಮಾನಸ ಸರೋವರದಲ್ಲಿ ಮುಳುಗಿದ ಕಾಗೆ ಹಂಸವಾದಂತೆ ನಿಮ್ಮ ದೃಷ್ಟಿ ಬಿದ್ದ ಮಾತ್ರಕ್ಕೇ ನಾನು ಪವಿತ್ರನಾದೆ. ಹಾಗಾದ ನನ್ನನ್ನು ಉದ್ಧರಿಸಿ. ಶರಣಾಗತ ವತ್ಸಲರು, ಜಗದ್ರಕ್ಷಕರು ನೀವು. ಜಗತ್ತಿಗೇ ಗುರುವು. ನಿಮ್ಮ ಅಮೃತ ದೃಷ್ಟಿ ನನ್ನ ಮೇಲೆ ಬಿದ್ದುದರಿಂದಲೇ ನಾನು ಜ್ಞಾನಿಯಾದೆ. ನನ್ನನ್ನು ಮಂತ್ರಗಳಿಂದ ಪುನೀತನನ್ನಾಗಿ ಮಾಡಿ ಮಿಕ್ಕ ಬ್ರಾಹ್ಮಣರ ಜೊತೆ ಸೇರಿಸಿ" ಎಂದು ಕೇಳಿ ಕೊಂಡನು. ಅದನ್ನು ಕೇಳಿದ ಶ್ರೀಗುರುವು ನಗುತ್ತಾ, "ನಿನ್ನ ಈ ದೇಹ ಹೀನ ಜಾತಿಯಲ್ಲಿ ಹುಟ್ಟಿದ್ದು. ಆದ್ದರಿಂದ ನಿನ್ನನ್ನು ಯಾರೂ ವಿಪ್ರನೆಂದು ಒಪ್ಪಿಕೊಳ್ಳುವುದಿಲ್ಲ. ಈ ದೇಹವು ಹೀನವಾದ ಪುರುಷ-ಸ್ತ್ರೀ ಸಂಬಂಧದಿಂದ ಹುಟ್ಟಿದ್ದು. ಅಂತಹ ದೇಹಕ್ಕೆ ವಿಪ್ರತ್ವ ಹೇಗೆ ಬರುತ್ತದೆ? ಹಿಂದೆ ಗಾಧಿ ಪುತ್ರನಾದ ವಿಶ್ವಾಮಿತ್ರನು ವೇದ ಪಠನದಿಂದ ವಿಪ್ರನಾದರೂ, ಸಾವಿರ ವರ್ಷಕಾಲ ತಪಸ್ಸು ಮಾಡಿ, ಬ್ರಹ್ಮರ್ಷಿತ್ವವನ್ನು ದಯ ಪಾಲಿಸ ಬೇಕೆಂದು ಇಂದ್ರಾದಿ ದೇವತೆಗಳನ್ನು ಪ್ರಾರ್ಥಿಸಿದನು. ಆದರೆ ಅವರು ಗುರು ಶ್ರೇಷ್ಠನಾದ ವಸಿಷ್ಠ ಮಹರ್ಷಿಯು ನಿನ್ನನ್ನು ಬ್ರಹ್ಮರ್ಷಿ ಎಂದು ಒಪ್ಪಿಕೊಂಡರೆ ಮಾತ್ರ ನಾವು ನಿನ್ನನ್ನು ಬ್ರಹ್ಮರ್ಷಿ ಎಂದು ಒಪ್ಪಿಕೊಳ್ಳುತ್ತೇವೆ" ಎಂದರು. ವಿಶ್ವಾಮಿತ್ರನು ವಸಿಷ್ಠನ ಬಳಿಗೆ ಹೋಗಿ, "ನಾನು ಬಹಳ ಕಾಲ ತಪಸ್ಸು ಮಾಡಿದ್ದೇನೆ. ನನ್ನನ್ನು ಬ್ರಹ್ಮರ್ಷಿಯಾಗಿ ಮಾಡಿ" ಎಂದು ಕೇಳಲು, ವಸಿಷ್ಠನು, "ಅಯ್ಯಾ, ನೀನು ನಿನ್ನ ಈ ಕ್ಷತ್ರಿಯ ದೇಹವನ್ನು ಬಿಟ್ಟು ಉತ್ತಮ ಜನ್ಮದಲ್ಲಿ ಹುಟ್ಟು. ಆಗ ನಿನಗೆ ಉಪನಯನವಾಗಿ, ಗಾಯತ್ರಿಯ ಉಪದೇಶದಿಂದ ನೀನು ವಿಪ್ರನಾಗಬಲ್ಲೆ. ಈ ದೇಹದಲ್ಲಿ ನೀನು ಬ್ರಹ್ಮರ್ಷಿಯಾಗಲು ಸಾಧ್ಯವಿಲ್ಲ" ಎಂದನು. ಅದರಿಂದ ಕೋಪಗೊಂಡ ವಿಶ್ವಾಮಿತ್ರ ವಸಿಷ್ಠನ ನೂರು ಮಕ್ಕಳನ್ನು ಕೊಂದನು. ಅದರಿಂದ ವಿಚಲಿತನಾಗದ ವಸಿಷ್ಠ ವಿಶ್ವಾಮಿತ್ರನನ್ನು ಬ್ರಹ್ಮರ್ಷಿಯೆಂದು ಮಾತ್ರ ಒಪ್ಪಿಕೊಳ್ಳಲಿಲ್ಲ. ಆಗ್ರಹಗೊಂಡ ವಿಶ್ವಾಮಿತ್ರ ವಸಿಷ್ಠನನ್ನು ಕೊಲ್ಲಲು ಪರ್ವತದಂತಹ ಬಂಡೆಯನ್ನು ಹಿಡಿದು ಬಂದನು. ಆದರೆ ಅವನಿಗೆ ಯೋಚನೆಯಾಯಿತು. ‘ನಾನು ಈಗ ಇವನನ್ನು ಕೊಂದರೆ ನನ್ನನ್ನು ಬ್ರಹ್ಮರ್ಷಿ ಎಂದು ಒಪ್ಪಿಕೊಳ್ಳುವವರು ಬೇರೆ ಯಾರೂ ಇಲ್ಲ. ಮಿಕ್ಕವರೆಲ್ಲರೂ ವಸಿಷ್ಠನ ಮಾತನ್ನೇ ಅನುಸರಿಸುತ್ತಾರೆ. ಅಲ್ಲದೆ ಈ ಮುನಿ ಶ್ರೇಷ್ಠನನ್ನು ಕೊಂದರೆ ನನಗೆ ಮಹಾ ಪಾಪ ಸುತ್ತಿಕೊಳ್ಳುತ್ತದೆ’ ಎಂದೆಲ್ಲ ಯೋಚಿಸಿ, ಪಶ್ಚಾತ್ತಾಪದಿಂದ ವಿಶ್ವಾಮಿತ್ರನು ವಸಿಷ್ಠರನ್ನೇ ಶರಣು ಹೋದನು. ‘ರಾಜರ್ಷಿ’ಎಂದು ತನ್ನನ್ನು ಸಂಬೋಧಿಸಿದ ವಸಿಷ್ಠನನ್ನು, ವಿಶ್ವಾಮಿತ್ರ, "ನನ್ನನ್ನು ಬ್ರಹ್ಮರ್ಷಿಯನ್ನಾಗಿ ಮಾಡಿ ನನ್ನ ಕೈಯಿಂದ ಅನ್ನ ಸ್ವೀಕಾರ ಮಾಡಿ" ಎಂದು ಕೇಳಿ ಕೊಂಡನು. ಆಗ ವಸಿಷ್ಠ, " ನಿನ್ನ ಈ ದೇಹವನ್ನು ಸೂರ್ಯ ಕಿರಣಗಳಿಂದ ಸುಟ್ಟುಹಾಕಿ, ನಿನ್ನ ಹೊಸ ದೇಹದೊಡನೆ ಬಾ" ಎಂದು ಆದೇಶ ಕೊಟ್ಟನು. ಅದರಂತೆ ವಿಶ್ವಾಮಿತ್ರ ಮತ್ತೆ ತಪಸ್ಸು ಮಾಡಿ, ತನ್ನ ತಪೋಬಲದಿಂದ, ಸೂರ್ಯನ ಅನುಗ್ರಹದಿಂದ ತನ್ನ ಹಳೆಯ ದೇಹವನ್ನು ಸುಟ್ಟು ಹೊಸ ದೇಹವನ್ನು ಪಡೆದು ವಸಿಷ್ಠನನ್ನು ಕಂಡು, ಅವನಿಂದ ಬ್ರಹ್ಮರ್ಷಿ ಎಂದು ಕರೆಸಿಕೊಂಡು, ತ್ರಿಲೋಕ ಪೂಜಿತನಾದನು. ಹಾಗಿರುವಾಗ ನಿನ್ನ ಈ ಚಂಡಾಲ ದೇಹದಲ್ಲಿ ನೀನು ವಿಪ್ರತ್ವವನ್ನು ಹೇಗೆ ಪಡೆಯಬಲ್ಲೆ? ಪಶ್ಚಾತ್ತಾಪದಿಂದ ನೀನು ನಾನು ಹೇಳಿದಂತೆ ಮಾಡಿ, ಈ ದೇಹವನ್ನು ಬಿಟ್ಟಮೇಲೆ, ಜನ್ಮಾಂತರದಲ್ಲಿ ವಿಪ್ರನಾಗಬಲ್ಲೆ. ಅಯ್ಯಾ, ಆದ್ದರಿಂದ ಈಗ ನೀನು ನಿನ್ನ ಮನೆಗೆ ಹೋಗು" ಎಂದು ಹೇಳಿದರು. ಆದರೆ ಆ ಚಂಡಾಲ ದೇಹಿ, ಹಣದ ಗಂಟು ಸಿಕ್ಕಿದವನು ಅದನ್ನು ಹೇಗೆ ಬಿಡಲಾರನೋ ಹಾಗೆ ತಾನು ಉತ್ತಮನಾದ ಬ್ರಾಹ್ಮಣ, ಜ್ಞಾನಿ ಎಂದು ಕೊಂಡು ಮನೆಗೆ ಹೋಗದೆ ಅಲ್ಲಿಯೇ ನಿಂತಿದ್ದನು. ಅಷ್ಟರಲ್ಲಿ ಅವನ ಹೆಂಡತಿ ಮಕ್ಕಳು ಅಲ್ಲಿಗೆ ಬಂದರು. ಅವನನ್ನು ಕೈಹಿಡಿದು ಮನೆಗೆ ಕರೆಯಲು ಹೋದ ಅವಳನ್ನು ಆ ಪತಿತ ಹೊಡೆಯಲು ಮುಂದಾದನು. ಅವಳು ಶ್ರೀಗುರುವಿನ ಶರಣು ಹೋಗಿ, "ನನ್ನ ಗಂಡ ನನ್ನನ್ನು ದೂರಮಾಡಲು ಯತ್ನಿಸುತ್ತಿದ್ದಾನೆ. ಅವನಿಗೆ ಬುದ್ಧಿ ಮಾತು ಹೇಳಿ. ಇವನನ್ನು ಬಿಟ್ಟರೆ ನಮಗೆ ಇನ್ನಾರು ಗತಿ? ನೀವೇ ಅವನಿಗೆ ತಿಳಿಯಹೇಳಿ. ಅವನು ನಮ್ಮನ್ನು ತ್ಯಜಿಸಿದರೆ ನಾವು ಇಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತೇವೆ" ಎಂದು ಆರ್ತಳಾಗಿ ಬೇಡಿ ಕೊಂಡಳು. ಅವಳ ಮಾತನ್ನು ಕೇಳಿದ ಶ್ರೀಗುರುವು ಆ ಚಂಡಾಲನನ್ನು ತಮ್ಮ ಹತ್ತಿರಕ್ಕೆ ಕರೆದು, "ಅಯ್ಯಾ, ನಮ್ಮ ಮಾತು ಕೇಳು. ಇವರನ್ನು ಕರೆದುಕೊಂಡು ನಿನ್ನ ಮನೆಗೆ ಹೋಗು. ಅವರನ್ನು ಕ್ಷೋಭೆ ಗೊಳಿಸಿದರೆ ನಿನಗೆ ಸದ್ಗತಿ ಹೇಗೆ ಉಂಟಾಗುತ್ತದೆ? ವಿಧಿ ಪೂರ್ವಕವಾಗಿ ಕೈ ಹಿಡಿದವಳನ್ನು ಬಿಡುವುದು ಮಹಾ ಪಾಪಕರವು. ಅದರಿಂದ ನಿನಗೆ ಒಳ್ಳೆಯದಾಗುವುದಿಲ್ಲ" ಎಂದು ಮತ್ತೆ ಬುದ್ಧಿವಾದ ಹೇಳಿದರು. ಅವನು, ಅಂಜಲಿ ಬದ್ಧನಾಗಿ, "ಸ್ವಾಮಿ, ಜ್ಞಾನಿಯಾದ ನಾನು ಮತ್ತೆ ಹೇಗೆ ಚಂಡಾಲನಾಗುತ್ತೇನೆ?" ಎಂದು ಕೇಳಲು, ಶ್ರೀಗುರುವು, ‘ಅವನ ಮೈಮೇಲಿರುವ ಭಸ್ಮವು ಹೋಗುವವರೆಗೂ ಅವನ ಜ್ಞಾನವು ಹೋಗುವುದಿಲ್ಲ’ ಎಂದು ಯೋಚಿಸಿ, ತಮ್ಮ ಶಿಷ್ಯನೊಬ್ಬನನ್ನು ಕರೆದು, "ಈಗಲೇ ಗ್ರಾಮದೊಳಕ್ಕೆ ಹೋಗಿ, ಪಿಶನಾರಿಯಾದ ಬ್ರಾಹ್ಮಣನೊಬ್ಬನನ್ನು ಕರೆದುಕೊಂಡು ಬಾ" ಎಂದು ಆಜ್ಞೆ ಮಾಡಿದರು.

ತಕ್ಷಣವೇ ಆ ಶಿಷ್ಯ ಊರೊಳಕ್ಕೆ ಹೋಗಿ, ಹಣದಾಸೆಯಿಂದ ವಾಣಿಜ್ಯದಲ್ಲಿ ನಿರತನಾಗಿದ್ದ ಬ್ರಾಹ್ಮಣನೊಬ್ಬನನ್ನು ಕರೆತಂದನು. ಶ್ರೀಗುರುವು ಆ ಬ್ರಾಹ್ಮಣನಿಗೆ, "ಈ ಚಂಡಾಲನಿಗೆ ತಲೆಯಮೇಲೆ ನೀರು ಸುರಿದು ಸ್ನಾನ ಮಾಡಿಸು. ಅದರಿಂದ ಅವನಿಗುಂಟಾಗಿರುವ ಜ್ಞಾನ ಕಳೆದು ಅವನು ಮತ್ತೆ ಸಂಸಾರಾಸಕ್ತ ನಾಗುತ್ತಾನೆ" ಎಂದು ಅಪ್ಪಣೆ ಮಾಡಿದರು. ಅ ಲೋಭಿ ಬ್ರಾಹ್ಮಣ ಶ್ರೀಗುರುವಿನ ಆಪ್ಪಣೆಯಂತೆ, ನೀರನ್ನು ತಂದು ಆ ಚಂಡಾಲನ ತಲೆಯ ಮೇಲೆ ಸುರಿದನು. ಅದರಿಂದ ಚಂಡಾಲನ ಮೈಮೇಲಿದ್ದ ಭಸ್ಮವೆಲ್ಲ ಜಾರಿ ಹೋಗಿ, ಅವನು ಎಲ್ಲವನ್ನೂ ಮರೆತು, ತನ್ನ ಹೆಂಡತಿ ಮಕ್ಕಳನ್ನು ಕಂಡು, ಅವರನ್ನು ಆಲಂಗಿಸಿ, "ಈಗ ಸ್ವಲ್ಪ ಹೊತ್ತು ನನಗೆ ಭ್ರಾಂತಿಯಾಗಿತ್ತು" ಎಂದು ಹೇಳಿ ಅವರೆಲ್ಲರನ್ನು ಕರೆದು ಕೊಂಡು ತನ್ನ ಮನೆಗೆ ಹೋದನು. ಅದನ್ನೆಲ್ಲಾ ಕಂಡು ಅಲ್ಲಿ ಸೇರಿದ್ದವರೆಲ್ಲ ಆಶ್ಚರ್ಯ ಚಕಿತರಾದರು. ತ್ರಿವಿಕ್ರಮನು, "ಸ್ವಾಮಿ, ಆ ಚಂಡಾಲನಿಗೆ ತಲೆಯ ಮೇಲೆ ನೀರು ಸುರಿದುದರಿಂದ ಅವನಿಗುಂಟಾಗಿದ್ದ ಜ್ಞಾನವೆಲ್ಲ ಕಳೆದು ಹೋಯಿತು. ಅದು ಹೇಗಾಯಿತು ಎಂಬುದನ್ನು ದಯೆಯಿಟ್ಟು ತಿಳಿಸುವ ಕೃಪೆಮಾಡಿ" ಎಂದು ಕೇಳಿ ಕೊಳ್ಳಲು, ಶ್ರೀಗುರುವು, "ತ್ರಿವಿಕ್ರಮ, ಅದು ಭಸ್ಮದ ಮಹಿಮೆ. ಭಸ್ಮದಿಂದ ಉಂಟಾದ ಜ್ಞಾನ ಭಸ್ಮದೊಂದಿಗೇ ತೊಳೆದು ಹೋಯಿತು. ಆದ್ದರಿಂದಲೇ ಈಶ್ವರನೂ ಸದಾ ಭಸ್ಮ ಧಾರಿಯಾಗಿರುತ್ತಾನೆ" ಎಂದು ಹೇಳಿದರು. ತ್ರಿವಿಕ್ರಮನು ಮತ್ತೆ, "ಗುರುದೇವ, ಭಸ್ಮ ಮಾಹಾತ್ಮ್ಯೆಯನ್ನು ವಿಶದಗೊಳಿಸುವ ಕೃಪೆ ಮಾಡಿ" ಎಂದು ಕೇಳಿ ಕೊಳ್ಳಲು, ಶ್ರೀಗುರುವು ಅದನ್ನು ತ್ರಿವಿಕ್ರಮನಿಗೆ ಬೋಧಿಸಿದರು, ಎಂದು ಸಿದ್ಧಮುನಿ ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಇಪ್ಪತ್ತೆಂಟನೆಯ ಅಧ್ಯಾಯ ಮುಗಿಯಿತು.