Sunday, January 27, 2013

||ಶ್ರೀ ಗುರು ಚರಿತ್ರೆ - ಸಿದ್ಧನಾಮಧಾರಕ ಸಂವಾದೇ ಅಂಬರೀಷ ವೃತ್ತಾಂತೇ ನಾಮ ತೃತೀಯೋಧ್ಯಾಯಃ||

ಭಕ್ತಿಯುಕ್ತವಾಗಿ, ವಿಸ್ತಾರವಾಗಿ ಹೇಳಿದ ಕಥೆಯನ್ನು ಕೇಳಿದ ನಾಮಧಾರಕ, ಬಹಳ ಸಂತೋಷದಿಂದ, ಸಿದ್ಧಮುನಿಯ ಪಾದಗಳಿಗೆರಗಿ, "ಹೇ ಸಿದ್ಧಮುನಿ, ಜಯವಾಗಲಿ. ನೀವು ಭವಸಾಗರವನ್ನು ದಾಟಿಸುವವರು. ನನ್ನ ಸಂಶಯಗಳೆಲ್ಲ ಈಗ ತೊಲಗಿ, ನಾನು ಆನಂದ ಸಾಗರದಲ್ಲಿ ಮುಳುಗಿದ್ದೇನೆ. ನಿಮ್ಮ ಬಾಯಿಂದ ಹೊರಬಿದ್ದ ಗುರುಮಹಿಮೆಯೆಂಬ ಅಮೃತವನ್ನು ಕುಡಿದು ನನ್ನ ಮನಸ್ಸು ಆನಂದದಿಂದ ತುಂಬಿಹೋಗಿದೆ. ನನ್ನ ಮೇಲೆ ನಿಮ್ಮ ಕೃಪೆಯಾಯಿತು. ನೀವಿರುವುದೆಲ್ಲಿ? ನಿಮ್ಮ ಭೋಜನೇತ್ಯಾದಿಗಳು ಎಲ್ಲಿ?" ಎಂದು ಕೇಳಿದನು. 

ದಯಾಹೃದಯನಾದ ಆ ಸಿದ್ಧಮುನಿ ನಾಮಧಾರಕನನ್ನು ಹಿಡಿದೆಬ್ಬಿಸಿ, ಆಲಂಗಿಸಿ, ಆಶೀರ್ವದಿಸಿ, "ಶ್ರೀ ಗುರುವು ಎಲ್ಲಿರುತ್ತಾರೋ ಅದುವೇ ನನ್ನ ನಿವಾಸ ಸ್ಥಾನ. ಗುರುಸ್ಮರಣೆಯೇ ನನಗೆ ಅಹಾರ. ಗುರು ಮಹಿಮಾ ಪಾನವೇ ನನಗೆ ತೃಪ್ತಿಯನ್ನು ಕೊಡುವ ಪಾನೀಯವು. ಈ ಗ್ರಂಥವನ್ನು ನೋಡು. ಇದನ್ನು ಶ್ರದ್ಧಾ ಭಕ್ತಿಗಳಿಂದ ಪಠಿಸಿದರೆ ಭುಕ್ತಿಮುಕ್ತಿಗಳು ತಪ್ಪದೇ ದೊರೆಯುವವು. ಇದರ ಪಠನದಿಂದ ಧನಾರ್ಥಿಗಳಿಗೆ ಧನ, ಸಂತಾನಾರ್ಥಿಗಳಿಗೆ ಸಂತಾನ, ಜ್ಞಾನಾರ್ಥಿಗಳಿಗೆ ಜ್ಞಾನ, ಪುತ್ರಾರ್ಥಿಗೆ ಪುತ್ರ, ರೋಗಿಗೆ ಆರೋಗ್ಯ, ಯಾರು ಏನು ಕೇಳಿದರೆ ಅದು ಅವರಿಗೆ ಲಭಿಸುವುದು. ಶ್ರದ್ಧಾಭಕ್ತಿಗಳಿಂದ ಮಾಡಿದ ಸಪ್ತಾಹ ಪಾರಾಯಣ ಕೇಳಿದ ಮನೋರಥಗಳನ್ನು ತಪ್ಪದೇ ಈಡೇರಿಸುವುದು. ಗ್ರಹದೋಷಾದಿಗಳಿಂದ ಎಂದಿಗೂ ಕಷ್ಟಗಳುಂಟಾಗುವುದಿಲ್ಲ. ಬಂಧಮೋಚನೆಯಾಗಿ ಮುಕ್ತಿ ಸುಲಭವಾಗುವುದು. ಇದನ್ನು ಮನಸ್ಸಿಟ್ಟು ಶ್ರವಣ ಮಾಡಿದವರಿಗೂ ಕೂಡಾ ಜ್ಞಾನವಂತರಾಗುತ್ತಾರೆ." ಎಂದು ಹೇಳಿದರು. ಅದನ್ನು ಕೇಳಿದ ನಾಮಧಾರಕ, "ಹೇ ಸ್ವಾಮಿ, ದಯಾಸಾಗರ. ಬಾಯಾರಿದವನಿಗೆ ಅಮೃತದಂತೆ ಸಿಕ್ಕಿರುವ ಆ ಮಹಿಮಾಮೃತವನ್ನು ನನಗೆ ಪಾನಮಾಡಿಸಿ ನನ್ನನ್ನು ರಕ್ಷಿಸಿ. ಅಂಧಕಾರವನ್ನು ತೊಲಗಿಸುವ ಸೂರ್ಯನಂತೆ ಗುರುಚರಿತ್ರೆಯನ್ನು ಶ್ರವಣ ಮಾಡಿಸಿ ನನ್ನ ಅಂಧಕಾರವನ್ನು ಹೊಡೆದೋಡಿಸಿ." ಎಂದು ಬೇಡಿಕೊಂಡನು. ಸಿದ್ಧಮುನಿ ಅವನಿಗೆ ಅಭಯವಿತ್ತು, ಅವನ ಕೈಹಿಡಿದು ಸದ್ಗುರುವಿನ ಸಾನ್ನಿಧ್ಯದಿಂದ ಪುನೀತವಾಗಿದ್ದ ಅಶ್ವತ್ಥವೃಕ್ಷದ ಬಳಿಗೆ ಕರೆತಂದು ವೃಕ್ಷದ ಛಾಯೆಯಲ್ಲಿ ಕೂಡಿಸಿದರು. ತಾನೂ ಅವನೆದುರಿಗೆ ಕೂತು ಹೇಳಿದರು. 

"ಶಿಷ್ಯ, ಕೇಳು. ಅಜ್ಞಾನದಿಂದಾಗಿ ನಿನ್ನ ಗುರುಭಕ್ತಿ ಇನ್ನೂ ಪಕ್ವವಾಗಿಲ್ಲ. ಅದರಿಂದಲೇ ಸಂಶಯದಿಂದಕೂಡಿದ ನಿನ್ನ ಮನಸ್ಸಿನಲ್ಲಿ ಚಿಂತೆ ಕ್ಲೇಶಗಳು ಉಂಟಾಗಿವೆ. ಗುರುವಿನಲ್ಲಿ ದೃಢಭಕ್ತಿಯಿಟ್ಟು, ನಿಷ್ಠೆಯಿಂದ ಗುರುವೇ ಸರ್ವಸ್ವವೆಂದು ತಿಳಿದು, ಅದರಂತೆ ನಡೆಯುವವನು ಸಕಲ ಅಭೀಷ್ಟಗಳನ್ನೂ ಪಡೆಯುತ್ತಾನೆ." ಸಿದ್ಧಮುನಿಯ ಮಾತುಗಳನ್ನು ಕೇಳಿ ನಾಮಧಾರಕ, " ಹೇ ಸ್ವಾಮಿ, ಸಂಸಾರಸಾಗರದಲ್ಲಿ ಮುಳುಗಿ, ಅಜ್ಞಾನದಿಂದ ತುಂಬಿ, ಕಾಮಾದಿ ಷಡ್ರಿಪುಗಳಿಂದ ಆವೃತನಾಗಿ, ತಾಪತ್ರಯಗಳ ಬೆಂಕಿಯಲ್ಲಿ ಬೆಂದುಹೋಗುತ್ತಿದ್ದೇನೆ. ನನ್ನನ್ನು ಜ್ಞಾನವೆಂಬ ನೌಕೆಯಲ್ಲಿ ಕೂಡಿಸಿ ಈ ಸಂಸಾರಸಾಗರದ ಅಲ್ಲೋಲಕಲ್ಲೋಲಗಳಿಂದ ಪಾರುಮಾಡಿ ದಡಮುಟ್ಟಿಸುವ ಅಂಬಿಗ ನೀನೇ! ಕೃಪಾ ಕಟಾಕ್ಷವೆಂಬ ನಿನ್ನ ಹವಾಪ್ರಸಾರಮಾಡಿ ನನ್ನನ್ನು ತ್ವರೆಯಾಗಿ ದಡ ಮುಟ್ಟಿಸು." ಎಂದು ಕಳಕಳಿಯಿಂದ ಬೇಡಿಕೊಂಡನು. ಅವನ ಮಾತನ್ನು ಕೇಳಿದ ಸಿದ್ಧಮುನಿ, ದಯಾಹೃದಯನಾಗಿ ಅವನ ತಲೆಯಮೇಲೆ ಕೈಯಿಟ್ಟು, ಆಶೀರ್ವದಿಸಿ ಹೇಳಿದರು. "ಹೇ ನಾಮಧಾರಕ, ಭಯಪಡಬೇಕಾಗಿಲ್ಲ. ಚಿಂತೆಯನ್ನು ಬಿಡು. ದೃಢಭಕ್ತಿಯಿಲ್ಲದೆ ಸದಾ ದೈನ್ಯ ಶೋಕಗಳಲ್ಲಿ ಸಿಕ್ಕಿಕೊಂಡಿರುವ ಸಂಶಯಾತ್ಮಕನನ್ನು ಯಾವ ಗುರುವೂ ರಕ್ಷಿಸಲಾರನು. ನಿನ್ನ ಮನಸ್ಸಿನಲ್ಲಿ ತುಂಬಿಕೊಂಡಿರುವ ಸಂಶಯಗಳನ್ನೆಲ್ಲಾ ಹೊರದೂಡಿ, ಶ್ರದ್ಧಾಭಕ್ತಿಯುಕ್ತನಾಗಿ ಜ್ಞಾನಾರ್ಜನೆಮಾಡಿ, ಸಂಶಯರಹಿತನಾಗಿ ನೀನು ಗುರುವಿನ ಸೇವೆ ಭಜನೆಗಳನ್ನು ಮಾಡಿದರೆ ಗುರುವು ತಪ್ಪದೆ ನಿನ್ನ ಅಭೀಷ್ಟ ಸಿದ್ಧಿಯಾಗುವಂತೆ ಆಶೀರ್ವದಿಸುತ್ತಾನೆ. ಸದಾ ಗುರುಭಜನೆಯಲ್ಲಿ ತಲ್ಲೀನನಾದವನಿಗೆ ಗುರುವು ವಶನಾಗಿರುತ್ತಾನೆ. ಅಂತಹ ಭಕ್ತರನ್ನು ಗುರುವು ಎಂದಿಗೂ ಉಪೇಕ್ಷಿಸುವುದಿಲ್ಲ. ಅವರು ದಯಾಸಮುದ್ರರು ಎಂದು ವೇದಶಾಸ್ತ್ರಗಳೆಲ್ಲಾ ವರ್ಣಿಸಿವೆ. ಗುರುಚರಣಗಳನ್ನು ಆಶ್ರಯಿಸಿದವನಿಗೆ ಈ ಭೂಮಂಡಲದಲ್ಲಿ ದುರ್ಲಭವೆನ್ನುವುದು ಯಾವುದೂ ಇಲ್ಲ. ಮೇಘಗಳು ಯಾವ ತಾರತಮ್ಯವೂ ಇಲ್ಲದೆ ಎಲ್ಲ ಕಡೆಯಲ್ಲೂ ಮಳೆ ಸುರಿಸುತ್ತವೆ. ಮೇಘದಿಂದ ಸಮತಲ ಭೂಮಿಯ ಮೇಲೆ ಬಿದ್ದ ನೀರು ಹರಿದು ಹಳ್ಳ ಕೊಳ್ಳಗಳನ್ನು ಸೇರಿ ಅಲ್ಲಿ ಶೇಖರಗೊಳ್ಳುತ್ತದೆ. ಆದರೆ ಎತ್ತರದಲ್ಲಿ ಬಿದ್ದ ನೀರು ಅಲ್ಲಿ ನಿಲ್ಲದೇ ಕೆಳಕ್ಕೆ ಹರಿದುಹೋಗುತ್ತದೆ. ಹಾಗೆಯೇ ದೃಢಭಕ್ತಿಯುಳ್ಳವನು ಹಳ್ಳ ಕೊಳ್ಳಗಳಂತೆ ಗುರು ಕಟಾಕ್ಷವನ್ನು ಶೇಖರಿಸಿಟ್ಟುಕೊಳ್ಳುತ್ತಾನೆ. ಡಾಂಭಿಕನಾದವನು ಎತ್ತರದಲ್ಲಿ ಬಿದ್ದ ನೀರಿನಂತೆ ಏನನ್ನೂ ಶೇಖರಿಸಿಕೊಳ್ಳದೇ ಹಾಳಾಗುತ್ತಾನೆ. ಇಬ್ಬರಮೇಲೂ ಗುರುವು ತನ್ನ ಅಮೃತವರ್ಷವನ್ನು ಹರಿಸುತ್ತಲೇ ಇರುತ್ತಾನೆ. ಆದರೆ ಶ್ರದ್ಧಾಭಕ್ತಿಯುಳ್ಳವನು ಮಾತ್ರ ಅದನ್ನು ಶೇಖರಿಸಕೊಳ್ಳಬಲ್ಲ. ಡಾಂಭಿಕನಲ್ಲಿ ಅದು ನಿಲ್ಲುವುದಿಲ್ಲ. ಸದ್ಭಕ್ತನಾದರೋ ಪ್ರಪಂಚದಲ್ಲಿದ್ದುಕೊಂಡೇ ಸದ್ಗುರು ಸಂಸ್ಪರ್ಶದಿಂದ ಪರಬ್ರಹ್ಮನನ್ನು ಕಾಣಬಲ್ಲವನಾಗುತ್ತಾನೆ. ಗುರುವನ್ನು ಕಲ್ಪವೃಕ್ಷಕ್ಕೆ ಹೋಲಿಸಲಾಗದು. ಕಲ್ಪವೃಕ್ಷ ಕೇಳಿದ್ದನ್ನು ಮಾತ್ರ ಕೊಡಬಲ್ಲದು. ಆದರೆ ಗುರುವಾದರೋ ಭಕ್ತನು ಕೇಳದಿದ್ದರೂ ಅವನಿಗೇನು ಬೇಕೋ ಅದನ್ನು ಸ್ವತಃ ಅರಿತು ದಯಪಾಲಿಸುತ್ತಾನೆ. ನಿಗಮಾಗಮಗಳಲ್ಲಿ ವಿಶ್ರುತವಾದ ಗುರುಚರಣಗಳನ್ನು ಆಶ್ರಯಿಸಿ ಅವನಿಗೆ ಶರಣಾಗು. ಅವನು ಎಲ್ಲರಿಗೂ ಕಾಮಧೇನು!" 

ಸಿದ್ಧರ ಮಾತುಗಳನ್ನು ಕೇಳಿದ ನಾಮಧಾರಕ, "ಹೇ ಯೋಗಿಪುಂಗವ, ಕೃಪಾಸಿಂಧು, ನೀನೇ ನನ್ನ ಕಾಮಧೇನು. ನಿನ್ನ ಸೇವಕನು ನಾನು. ನನ್ನ ಭವಭೀತಿಯನ್ನು ಹೋಗಲಾಡಿಸಿ ರಕ್ಷಿಸು. ನಿನ್ನ ಮಾತುಗಳನ್ನಾಲಿಸಿದ ನನ್ನ ಮನಸ್ಸು ಗುರುಚರಣಗಳಲ್ಲಿ ಸ್ಥಿರಗೊಂಡಿದೆ. ನಿನ್ನಂದ ಗುರುಲೀಲೆಗಳನ್ನು ಕೇಳಲಿಚ್ಛಿಸುತ್ತೇನೆ. ಗುರುವೇ ತ್ರಿಮೂರ್ತ್ಯಾತ್ಮಕ ಸ್ವರೂಪನಾದರೆ ಅವನು ಭೂಮಿಯಲ್ಲಿ ಅವತರಿಸಲು ಕಾರಣವೇನು? ದಯವಿಟ್ಟು ವಿವರವಾಗಿ ಹೇಳಿ." ಎಂದು ಕೇಳಿಕೊಂಡನು.

ಅದಕ್ಕೆ ಸಿದ್ಧಮುನಿಯು, "ಅಯ್ಯಾ, ನೀನು ಶಿಷ್ಯೋತ್ತಮನು. ನೀನು ಕೇಳಿದ ಪ್ರಶ್ನೆಯಿಂದ ನನ್ನ ಮನಸ್ಸು ಆನಂದಗೊಂಡಿದೆ. ನಿನಗೆ ಬಹು ಶೀಘ್ರವಾಗಿ ಗುರ್ವಾಶೀರ್ವಾದದಿಂದ ಬ್ರಹ್ಮಾನಂದ ದೊರೆಯುವುದು. ನನ್ನ ಪ್ರಪಂಚ ಪರ್ಯಟನೆಯಲ್ಲಿ ನನ್ನನ್ನು ಯಾರೂ ಇಂತಹ ಪ್ರಶ್ನೆ ಕೇಳಿರಲಿಲ್ಲ. ನಿನಗೆ ಗುರು ಲೀಲಾಮೃತವನ್ನು ಪಾನ ಮಾಡಿಸುತ್ತೇನೆ. ಇಹ ಪರಗಳಲ್ಲಿ ಆಸಕ್ತಿಯಿರುವವನಿಗೆ ಅದು ಬಹಳ ರುಚಿಕರವಾದ ಪೇಯ. ತ್ರಿಕರಣಶುದ್ಧರಾಗಿ ಕುಳಿತು ಗುರುಲೀಲಾಮೃತ ಪಾನಮಾಡುವವನಾಗು. ನೀನು ಗುರುಭಕ್ತನಾದದ್ದರಿಂದಲೇ ನಿನಗಿಂತಹ ಕೋರಿಕೆ ಉಂಟಾಗಿದೆ. ಶ್ರೀ ಗುರುಲೀಲಾಮೃತವನ್ನು ಶ್ರದ್ಧಾಭಕ್ತಿಗಳಿಂದ ಪಾನಮಾಡಿದವನಿಗೆ ಪುರುಷಾರ್ಥಗಳು ಲಭಿಸುವುದರಲ್ಲಿ ಸಂಶಯವಿಲ್ಲ. ಇದು ವೇದ ಶಾಸ್ತ್ರ ಸಮ್ಮತವಾದದ್ದು. ನಿರ್ಗುಣರೂಪನಾದ ಪ್ರಭುವು ಸಗುಣರೂಪನಾಗುವುದೂ ಒಂದು ಲೀಲಾ ಪ್ರಸಂಗವೇ! ಭೂಭಾರವನ್ನಿಳಿಸುವುದಕ್ಕೆ, ಭಕ್ತಜನೋದ್ಧಾರಣಾರ್ಥವಾಗಿ, ಗುರುವೇ ಈ ರೂಪ ಧರಿಸಿ ಧರ್ಮ ಸ್ಥಾಪನೆ ಮಾಡಲು ಬರುತ್ತಾನೆ." ಂದು ಹೇಳಲು, ನಾಮಧಾರಕನು, "ಸ್ವಾಮಿ, ಈಶ್ವರಾವತಾರಗಳಿಗೆ ಕಾರಣವೇನು? ಅದನ್ನು ದಯೆಯಿಟ್ಟು ವಿಸ್ತಾರವಾಗಿ ಹೇಳಿ." ಎಂದು ಕೇಳಿದನು.

ಅದಕ್ಕೆ ಸಿದ್ಧಮುನಿಯು, "ಬ್ರಹ್ಮನೇ ಈ ಜಗತ್ತಿಗೆ ಆದಿ. ಅನಾದಿಯಾದದ್ದು ಅದೊಂದೇ! ಅದ್ವಿತೀಯವಾದದ್ದು. ತನ್ನ ಮಾಯಶಕ್ತಿಯಿಂದ ವಿಶ್ವಕ್ಕೆ ಕಾರಣವಾದ ತ್ರಿಗುಣಗಳನ್ನು ರಚಿಸಿದನು. ಅವೇ ಬೇರೆ ಬೇರೆಯಾಗಿ ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ರೂಪಗಳನ್ನು ಧರಿಸಿದವು. ಈ ತ್ರಿಗುಣಗಳೇ ಸತ್ವ-ರಜ-ತಮೋ ಗುಣಗಳಾಗಿ ಸೃಷ್ಟಿ-ಸ್ಥಿತಿ-ಪ್ರಳಯಗಳನ್ನು ಮಾಡುತ್ತವೆ. ಪ್ರಜಾಪತಿಯಲ್ಲಿ ರಜೋಗುಣ ವೃದ್ಧಿಯಾದಾಗ ಸೃಷ್ಟಿಯಾಗುತ್ತದೆ. ಸತ್ವಗುಣ ವೃದ್ಧಿಯಾದಾಗ ಕೇಶವನಾಗಿ ಸಕಲ ಸೃಷ್ಟಿಯನ್ನೂ ಪಾಲಿಸುತ್ತಾನೆ. ತಮೋಗುಣ ವೃದ್ಧಿಯಾದಾಗ ರುದ್ರನಾಗಿ ಸೃಷ್ಟಿಯನ್ನು ಸಂಹರಿಸುತ್ತಾನೆ. ಈ ಮೂವರೂ ತಮ್ಮ ತಮ್ಮ ಕಾರ್ಯಗಳನ್ನು ನೆರವೇರಿಸುವವರೇ ಹೊರತು ಭಿನ್ನರಲ್ಲ. ಸೃಷ್ಟ್ಯಾದಿ ಲೀಲೆಗಳಿಗೆ ಕಾರಣೀಭೂತರಾದ ಇವರು ಶ್ರುತಿ ಪ್ರಸಿದ್ಧರಾದ ಪ್ರಭುಗಳು.

ಸೂರ್ಯವಂಶೀಯನಾದ ಅಂಬರೀಷನೆಂಬುವ ರಾಜನೊಬ್ಬನಿದ್ದನು. ಅವನು ವಿಷ್ಣು ಭಕ್ತ. ದೃಢವ್ರತ. ನಿಷ್ಠೆಯಿಂದ ಏಕಾದಶೀವ್ರತವನ್ನು ಆಚರಿಸುತ್ತಿದ್ದನು. ಅವನು ವಿಷ್ಣುವು ನಾನಾವತಾರಗಳನ್ನು ಎತ್ತುವುದಕ್ಕೆ ಕಾರಣನಾದನು. ಆ ಕಥೆಯನ್ನು ವಿಸ್ತಾರವಾಗಿ ಹೇಳುವೆನು. ಸಮಾಧಾನಚಿತ್ತನಾಗಿ ಕೇಳು. ಅಂಬರೀಷನು ಪ್ರತಿ ಏಕಾದಶಿ ದಿನದಂದು ಉಪವಾಸ ಮಾಡಿ, ಅತಿಥಿಗಳ ಆದರಮಾಡುತ್ತಾ, ಸದಾ ಹರಿಚಿಂತನೆ ಮಾಡುತ್ತಿದ್ದನು. ಹೀಗಿರಲು ಒಂದುಸಲ ದೂರ್ವಾಸ ಮುನಿಯು ಅವನ ಮನೆಗೆ ದಯಮಾಡಿಸಿದನು. ವ್ರತಭಂಗಕ್ಕೆಂದೇ ಸಾಕ್ಷಾತ್ಕರಿಸಿದ ದುರ್ದೈವವೋ ಎಂಬಂತೆ, ಆ ಮುನಿ ಬಂದಾಗ ಅಂದು ದ್ವಾದಶಿ ತಿಥಿ ಒಂದು ಘಳಿಗೆ ಮಾತ್ರ ಉಳಿದಿತ್ತು. ಅತಿಥಿ ಸತ್ಕಾರದಲ್ಲಿ ಲೋಪವಾಗದಂತೆ ಅಂದು ಅತಿಥಿಯಾಗಿ ಆತಿಥ್ಯವನ್ನು ಯಾಚಿಸಿ ಬಂದ ದೂರ್ವಾಸನನ್ನು ಅಂಬರೀಷ ಭೀತನಾಗಿಯೇ ಆಹ್ವಾನಿಸಿದನು. ಮುನಿಗೆ ಪಾದ್ಯಾದಿಗಳನ್ನು ಕೊಟ್ಟು ಪಾದಗಳನ್ನು ಪೂಜಿಸಿ, ನಮಸ್ಕರಿಸಿ, ಕುಶಲ ಪ್ರಶ್ನೆಗಳನ್ನು ಮಾಡಿ, ತ್ವರೆಯಾಗಿ ಅನುಷ್ಠಾನಾದಿಗಳನ್ನು ಮುಗಿಸಿ ಭೋಜನಕ್ಕೆ ದಯಮಾಡಿ. ದ್ವಾದಶಿತಿಥಿ ಇನ್ನು ಬಹಳ ಸ್ವಲ್ಪ ಕಾಲವೇ ಇರುವುದರಿಂದ ಆದಷ್ಟು ತ್ವರೆಯಾಗಿ ಬರಬೇಕೆಂದು ರಾಜ ಮುನಿಯನ್ನು ಕೋರಿಕೊಂಡನು. ಹಾಗೇ ಆಗಲೆಂದು ಹೇಳಿ ಹೇಳಿ ಮುನಿಯು ನದಿಗೆ ಸ್ನಾನಕ್ಕೆ ಹೋಗಿ ಕರ್ಮಾನುಷ್ಠಾನಗಳನ್ನು ಬಹಳ ಕಾಲದವರೆಗೆ ಮಾಡುತ್ತಾ ನಿಂತನು. ದ್ವಾದಶಿ ತಿಥಿ ಮುಗಿದುಹೋದರೆ ವ್ರತಭಂಗವಾಗುವುದೆಂಬ ಭಯದಿಂದ ರಾಜ ಅಂಬರೀಷ ಜಲಪಾನದಿಂದ ಉಭಯ ಸಿದ್ಧಿಯಾಗುವುದೆಂದು ಯೋಚಿಸಿ, ಜಲಪ್ರಾಶನ ಮಡಿದನು. ಆ ಸಮಯಕ್ಕೆ ಸರಿಯಾಗಿ ಹಿಂದಿರುಗಿ ಬಂದ ದೂರ್ವಾಸ ಮುನಿ ಅದನ್ನು ತಿಳಿದು, ಕ್ರುದ್ಧನಾಗಿ, "ಹಸಿದುಗೊಂಡಿದ್ದ ಅತಿಥಿಯನ್ನು ಬಿಟ್ಟು ಜಲಪ್ರಾಶನ ಮಾಡಿದಿಯೇಕೆ?" ಎಂದು ಪ್ರಶ್ನಿಸಿ ಅವನಿಗೆ ಶಾಪಕೊಡಲುದ್ಯುಕ್ತನಾದನು. ಭೀತನಾದ ರಾಜ ಅಂಬರೀಷ, ಭಕ್ತವತ್ಸಲನಾದ ಮಹಾವಿಷ್ಣುವನ್ನು ಸ್ಮರಿಸಿದನು. ಶರಣಾಗತ ರಕ್ಷಕನೂ, ಸ್ಮರಣಮಾತ್ರದಿಂದಲೇ ಪ್ರಿಯನಾಗುವ ಆ ಕರುಣಾಕರನಾದ ಮಹಾವಿಷ್ಣುವು, ಭೀತಗೊಂಡ ತನ್ನ ಕರುವನ್ನು ತಡವಿಲ್ಲದೆ ಸೇರುವ ಹಸುವಿನಂತೆ, ತಕ್ಷಣವೇ ಅಲ್ಲಿ ಪ್ರತ್ಯಕ್ಷನಾದನು. "ನಾನಾ ಯೋನಿಗಳಲ್ಲಿ ಜನಿಸುವವನಾಗು" ಎಂದು ಶಾಪಕೊಡಲು ಸಿದ್ಧನಾಗಿದ್ದ ಮುನಿಯನ್ನು, ಆ ಮುನಿಯ ಶಾಪ ವ್ಯರ್ಥವಾಗಬಾರದೆಂದೂ, ಭೀತನಾಗಿದ್ದ ತನ್ನ ಭಕ್ತನ ರಕ್ಷಣೆಗಾಗಿಯೂ, ಆ ಹೃಷೀಕೇಶನು, ಮುನಿಯನ್ನು ಕುರಿತು "ಹೇ ಮುನಿವರ್ಯ, ನನ್ನ ಈ ಭಕ್ತನನ್ನು ರಕ್ಷಿಸುತ್ತೇನೆ. ನಿನ್ನ ಶಾಪವನ್ನು ನನಗೆ ಕೊಡು. ಇವನು ನಿನ್ನ ಶಾಪವನ್ನು ಭರಿಸಲಾರನು. ನಾನೇ ಆ ಶಾಪವನ್ನು ವಹಿಸುತ್ತೇನೆ." ಎಂದನು. ನಾರಾಯಣನ ಆ ಮಾತುಗಳನ್ನು ಕೇಳಿದ ಈಶ್ವರಾಂಶನಾದ ಆ ದೂರ್ವಾಸ ಮುನಿ, ತನ್ನಲ್ಲೇ ಯೋಚಿಸಿ, "ನನ್ನ ಈ ಶಾಪದಿಂದ ಶ್ರೀಹರಿ ಭೂಮಿಯಲ್ಲಿ ಅವತರಿಸಿ ಭೂಭಾರವನ್ನಿಳಿಸುತ್ತಾನೆ. ಬಹಳ ಕಾಲ ತಪಸ್ಸು ಮಾಡಿದರೂ ಪ್ರಸನ್ನನಾಗದ ಈ ಭಗವಂತನನ್ನು ಕಾಣಲು ಭೂಲೋಕದವರಿಗೆ ಇದೊಂದು ಸದವಕಾಶ. ಅಂಬರೀಶ ಕಾರಣದಿಂದ ಭಗವಂತನು ಸುಲಭವಾಗಿ ಭೂಲೋಕದಲ್ಲಿ ಅವತರಿಸಿ ತನ್ನ ಭಕ್ತರನ್ನು ಉದ್ಧರಿಸುತ್ತಾನೆ. ಅದರಿಂದ ಇದು ಪರೋಪಕಾರವೆಂದು ಪರಿಗಣಿಸಿ ಈ ಶಾಪವನ್ನು ಕೊಡುತ್ತೇನೆ. ಅಂಬರೀಶನು ನಾನಾ ಯೋನಿಗಳಲ್ಲಿ ಜನಿಸಿದರೂ ಅವನು ಭೂಭಾರವನ್ನು ಹೇಗೆ ತಾನೇ ಕಡಮೆಮಾಡಬಲ್ಲ?" ಎಂದು ವಿಚಾರ ಮಾಡಿ, ಶ್ರೀಹರಿಯನ್ನು ಭೂಲೋಕದಲ್ಲಿ ನಾನಾ ಯೋನಿಗಳಲ್ಲಿ ಜನಿಸು ಎಂದು ಕೋರಿಕೊಳ್ಳುತ್ತಾ ಅವನಿಗೆ ಶಾಪ ಕೊಟ್ಟು ಹೀಗೆ ಹೇಳಿದನು. "ಹೇ ದೇವದೇವ, ನೀನು ವಿಶ್ವಾತ್ಮನು. ಸ್ಥೂಲಸೂಕ್ಷ್ಮಗಳೆಲ್ಲವೂ ನಿನ್ನ ನಿವಾಸ ಸ್ಥಾನಗಳೇ! ಜನ್ಮ ರಹಿತನು ನೀನು! ಹಾಗಿದ್ದರೂ ಮತ್ಸ್ಯಾದಿ ರೂಪಗಳಲ್ಲಿ ಹತ್ತು ಸಲ ಕ್ಷಿತಿಯಲ್ಲವತರಿಸಿ, ದುಷ್ಟ ಸಂಹಾರಕನಾಗಿ, ಶಿಷ್ಟರಕ್ಷಕನಾಗಿ, ಲೋಕವನ್ನು ಪರಿಪಾಲಿಸು." ಮುನಿ ಹೇಳಿದ ಮಾತುಗಳನ್ನು ಕೇಳಿದ, ಕಾರಣಾತ್ಮಕನಾದ ಆ ನಾರಾಯಣನು, ಭಕ್ತವತ್ಸಲನಾಗಿ ಆ ಶಾಪವನ್ನು ಗ್ರಹಿಸಿದನು. ಆ ಮಹಾಮಹಿಮ, ಅನಂತರೂಪನಾದ ಭಗವಂತನ ಮತ್ಸ್ಯಾದಿರೂಪಗಳು ಭಾಗವತಪುರಾಣದಲ್ಲಿ ವಿಸ್ತಾರವಾಗಿ ಉಲ್ಲೇಖಿಸಲ್ಪಟ್ಟಿವೆ.

ಆ ಭಕ್ತವತ್ಸಲನ ಅವತಾರಗಳು ಕೆಲವು ಸ್ಪಷ್ಟವಾದರೂ ಕೆಲವು ಗುಪ್ತವಾಗಿವೆ ಎಂದು ಬ್ರಹ್ಮವಾದಿಗಳು ಹೇಳುತ್ತಾರೆ. ಅವತಾರಗಳನ್ನು ಗುರುತಿಸುವುದರಲ್ಲಿ ವೇದಗಳೇ ಸಫಲವಾಗದಿರುವಾಗ, ಇನ್ನು ಮೂಢರು ಹೇಗೆ ತಾನೇ ಅರ್ಥಮಾಡಿಕೊಂಡಾರು? ಇನ್ನೂ ಒಂದು ಚಮತ್ಕಾರವಿದೆ. ಪತಿವ್ರತಾ ಶಿರೋಮಣಿಯಾದ ಅನಸೂಯೆ ಶೃತಿ ಪ್ರಸಿದ್ಧ. ಒಂದು ದಿನ ಮಧ್ಯಾಹ್ನ ಅತಿಥಿ ರೂಪದಲ್ಲಿ ಆ ಮಹಾತಾಯಿಯ ಗೃಹಕ್ಕೆ ತ್ರಿಮೂರ್ತಿಗಳು ಬಂದು, ಅತ್ರಿಭಾರ್ಯೆಯಾದ ಆಕೆಗೆ ಮಕ್ಕಳಾದರು. ಎಂದು ಹೇಳಿದ ಸಿದ್ಧಮುನಿಯ ಮಾತನ್ನು ಕೇಳಿದ ನಾಮಧಾರಕ ಅವರಿಗೆ ನಮಸ್ಕರಿಸಿ, "ಸ್ವಾಮಿ, ಆಶ್ಚರ್ಯಕರವಾದ ಮಾತನ್ನು ಹೇಳಿದಿರಿ. ತ್ರಿಮೂರ್ತಿಗಳು ಆಕೆಗೆ ಪುತ್ರರಾಗಿ ಏಕೆ ಅವತರಿಸಿದರು? ಅ ಅತ್ರಿ ಮಹರ್ಷಿ ಎಂತಹ ಧನ್ಯನೋ, ಆತನ ಪ್ರಭಾವವೆಂತಹುದೋ, ಆ ಅನಸೂಯಾ ಮಾತೆಯ ಮಹಿಮೆ ಎಂತಹುದೋ, ಎಲ್ಲವನ್ನೂ ನನಗೆ ವಿಸ್ತಾರವಾಗಿ ತಿಳಿಯ ಹೇಳಿ." ಎಂದು ಪ್ರಾರ್ಥಿಸಿದನು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಸಿದ್ಧನಾಮಧಾರಕ ಸಂವಾದೇ ಅಂಬರೀಷ ವೃತ್ತಾಂತೇ ನಾಮ ತೃತೀಯೋಧ್ಯಾಯಃ||


No comments:

Post a Comment