Monday, January 28, 2013

||ಶ್ರೀ ಗುರು ಚರಿತ್ರೆ - ಸಿದ್ಧನಾಮಧಾರಕ ಸಂವಾದೇ ಶ್ರೀದತ್ತಾವತಾರೋ ನಾಮ ಚತುರ್ಥೋಧ್ಯಾಯಃ||

ಸಿದ್ಧಮುನಿ ನಾಮಧಾರಕನ ಮಾತನ್ನು ಕೇಳಿ, " ಮಗು, ನೀನು ಕೇಳಿದ ಪ್ರಶ್ನೆ ಬಹಳ ಯೋಗ್ಯವಾಗಿದೆ. ನಿನಗೆ ಗುರುಚರಣಗಳಲ್ಲಿ ಭಕ್ತಿಯುಂಟಾಗಿದೆ. ಮಾನ್ಯವಾದ ನಿನ್ನ ಮಾತುಗಳನ್ನು ಕೇಳಿ ನನಗೆ ಗುರುಲೀಲೆಗಳೆಲ್ಲ ಆರಂಭದಿಂದ ನೆನಪಿಗೆ ಬರುತ್ತಿವೆ. ಬಹು ತಗುನಾದ ಪ್ರಶ್ನೆಯನ್ನು ಕೇಳಿದೆ. ಸೃಷ್ಟ್ಯಾದಿಯಿಂದ ಅತ್ರಿಜನ್ಮದವರೆಗೆ ನೀನು ಕೇಳಿದ್ದೀಯೆ. ಇನ್ನು ಮುಂದೆ ಕೇಳು.

ಹಿಂದಿನ ಕಲ್ಪದಲ್ಲಿನ ಸೃಷ್ಟಿಯೆಲ್ಲವೂ ಸಮುದ್ರದಲ್ಲಿ ಲೀನವಾಗಿ ಹೋದವು. ಆಗ ವೇದ ಸಮ್ಮತನಾದ ನಾರಾಯಣ ಆ ಸಮುದ್ರದ ಮೇಲೆ ಪವಡಿಸಿದ್ದನು. ಆ ದೇವಾಧಿದೇವ ತನ್ನ ಮನಸ್ಸಂಕಲ್ಪದಿಂದ ತೇಜೋರೂಪವಾದ ಅಂಡವನ್ನು ಸೃಷ್ಟಿಸಿದನು. ಹಿಂದಿನ ಕಲ್ಪದ ಪ್ರಾಣವಾಸನೆಗಳೆಲ್ಲಾ ಅದರಲ್ಲಿ ಅಡಗಿದ್ದವು. ಹಿರಣ್ಯಗರ್ಭನ ಸಂಕೇತವಾದ ಆ ಬ್ರಹ್ಮಾಂಡವು ಒಂದು ದೇವ ಸಂವತ್ಸರದವರೆಗೂ ಅಂಡ ರೂಪದಲ್ಲಿದ್ದು ನಂತರ ಭಿನ್ನವಾಯಿತು. ಹಾಗೆ ಭಿನ್ನವಾದ ಬ್ರಹ್ಮಾಂಡದಲ್ಲಿ ಶೃತ್ಯೋಕ್ತವಾದಂತೆ ಸೃಷ್ಟಿಯಾಗಿ, ಸರ್ವ ಜೀವಿಗಳ ಉತ್ಪನ್ನವಾಯಿತು. ಸ್ವರ್ಗ-ಭೂತಲಗಳೆಂದು ಎರಡು ಭಾಗಗಳಲ್ಲಿ ಬ್ರಹ್ಮಾಂಡವನ್ನು ನಿರ್ಮಿಸಿದನು. ಭೂಮಿಯ ಕೆಳಗೆ ಏಳು ಲೋಕಗಳು, ಭೂಮಿಯ ಮೇಲೆ ತೇಜೋರೂಪಗಳಾದ ಸಪ್ತಲೋಕಗಳು ಏರ್ಪಾಡಾದವು. ವಿಷ್ಣುವಿನ ನಾಭಿಯಿಂದ ಹೊರಬಿದ್ದ ಬ್ರಹ್ಮ ಚತುರ್ದಶ ಲೋಕಗಳನ್ನು ಸೃಷ್ಟಿಸಿದನು. ಅವನು ಮಾನಸಿಕವಾಗಿಯೂ, ದೈಹಿಕವಾಗಿಯೂ ದಿಕ್ಕಾಲಗಳನ್ನು ಸೃಜಿಸಿದನು. ವಿಷ್ಣುವಿನ ಆಜ್ಞೆಯಂತೆ ಸೃಷ್ಟಿಯನ್ನು ಬೆಳೆಸುವುದಕ್ಕೆ ತಪವನ್ನಾಚರಿಸಿ ಸನಕಾದಿ ನಾಲ್ವರು ಪುತ್ರರನ್ನೂ, ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠರೆನ್ನುವ ಮಾನಸ ಪುತ್ರರಾದ ಸಪ್ತರ್ಷಿಗಳನ್ನು ಸೃಷ್ಟಿಮಾಡಿದನು. ಬ್ರಹ್ಮ ಸಂತಾನವಾಗಿ ಶತರೂಪ, ಮನು ಎಂಬ ಇಬ್ಬರು ಜನಿಸಿದರು. ಅವರ ಮಗಳು ದೇವಹೂತಿ. ಛಾಯಾ ಪುತ್ರನಾದ ಕರ್ದಮ ಆ ದೇವಹೂತಿಯ ಕೈ ಹಿಡಿದನು. ಅವರ ಪುತ್ರಿಯರು ಬ್ರಹ್ಮ ಸುತರನ್ನು ಮದುವೆಯಾದರು. ವಿಧಾತನ ನೇತ್ರದಿಂದ ಜನಿಸಿದ ಅತ್ರಿ ಮಹಷಿಗೆ ಅನಸೂಯ ಪತ್ನಿಯಾದಳು. ಆಕೆ ಮಹಾ ಪತಿವ್ರತೆ. ಜಗದಂಬೆಯೇ ಆಕೆ! ಸುಲಕ್ಷಣೆಯಾದ ಆಕೆಯ ಸೌಂದರ್ಯವನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ವೇದಗಳೂ ಅಕೆಯ ಪ್ರಶಂಸೆ ಮಾಡಿದವು. ಆಕೆಯ ಮಗನಾದ ಚಂದ್ರನು ನಕ್ಷತ್ರರಾಜನಾಗಿ ಪ್ರಸಿದ್ಧನಾದನು.

ಆ ಸಾಧ್ವಿ ಅನಸೂಯ ಪತಿಸೇವಾಪರಾಯಣಳು. ಆಕೆಯ ಮಹಿಮೆಯನ್ನರಿತ ಇಂದ್ರಾದಿ ದೇವತೆಗಳು ಆಕೆಯಿಂದ ತಮಗೆ ಸ್ವರ್ಗ ಸಂಪದ ಹರಣವಾಗುವುದೇನೋ ಎಂದು ಹೆದರಿ ತ್ರಿಮೂರ್ತಿಗಳಲ್ಲಿ ಶರಣು ಬೇಡಿ, ಆ ಸಾಧ್ವೀಮಣಿಯ ಮಹಿಮೆಯನ್ನು ನಿವೇದಿಸಿದರು. " ಹೇ ತ್ರಿಮೂರ್ತಿಗಳೇ, ಅತ್ರಿಪತ್ನಿ ಮಹಾಪತಿವ್ರತೆ. ಆಕೆಯ ಸದಾಚಾರಗಳು ನಮಗೆ ಭಯವನ್ನುಂಟು ಮಾಡುತ್ತಿವೆ. ನಾವು ಸ್ಥಾನಭ್ರಷ್ಠರಾಗುತ್ತೇವೇನೋ ಎಂಬ ಸಂದೇಹ ಬರುತ್ತಿದೆ. ಆಕೆ ಕಾಯಾ, ವಾಚಾ, ಮನಸಾ, ಶ್ರದ್ಧಾ ಭಕ್ತಿಯುಕ್ತವಾಗಿ ಕೂಡಿ ಮಾಡಿದ ಕರ್ಮಗಳಿಂದ, ತನ್ನ ಪತಿಸೇವೆಯನ್ನು ಮಾಡುತ್ತಿದ್ದಾಳೆ. ಅತಿಥಿಗಳನ್ನು ಆದರಿಸುವುದರಲ್ಲಿ ಕನಸಿನಲ್ಲಿಯೂ ಆಕೆ ವಿಮುಖಳಾಗುವುದಿಲ್ಲ. ಸೂರ್ಯನು ತನ್ನ ಕಿರಣತಾಪದಿಂದ ಅಕೆಗೆ ತಪನವಾಗುವುದೇನೋ ಎಂದು ಹೆದರಿ ಅವರ ಆಶ್ರಮ ಪ್ರದೇಶದಲ್ಲಿ ತನ್ನ ತಾಪವನ್ನು ತಗ್ಗಿಸಿ ಬೆಳಗುತ್ತಾನೆ. ಅಗ್ನಿಯೂ ಭೀತನಾಗಿ ತನ್ನ ಶಾಖವನ್ನು ತಗ್ಗಿಸಿಕೊಂಡು ಜ್ವಲಿಸುತ್ತಾನೆ. ವಾಯುವು ಮಂದಮಾರುತನಾಗಿ ಚಲಿಸುತ್ತಾನೆ. ಆಕೆಯ ಪಾದಗಳಿಗೆ ನೋವುಂಟಾಗುವುದೇನೋ ಎಂಬ ಭಯದಿಂದ ಭೂಮಿ ಮೃದುವಾಗುತ್ತದೆ. ಆಕೆ ನಮಗೆ ಶಾಪಕೊಟ್ಟಾಳು ಎಂಬ ಭೀತಿಯಿಂದ ನಾವೆಲ್ಲರೂ ಆಕೆಯಲ್ಲಿ ವಿನಯ ವಿಧೇಯತೆಗಳಿಂದ ನಡೆದುಕೊಳ್ಳುತ್ತಿದ್ದೇವೆ. ಆಕೆ ತನ್ನ ತಪಃಪ್ರಭಾವದಿಂದ ನಮ್ಮಲ್ಲಿನ ಯಾರ ಸ್ಥಾನವನ್ನಾದರೂ ಆಕ್ರಮಿಸಬಲ್ಲಳು. ಆಕೆಯಿಂದ ಅನುಗ್ರಹಿಸಲ್ಪಟ್ಟ ದರಿದ್ರನೂ ಕೂಡಾ ನಮ್ಮನ್ನು ಜಯಿಸಬಲ್ಲನು. ಹೇ ತ್ರಿಮೂರ್ತಿಗಳೇ, ನೀವು ನಮ್ಮ ಈ ಭಯವನ್ನು ನಿವಾರಿಸುವ ಯಾವುದಾದರೂ ಉಪಾಯವನ್ನು ಯೋಚಿಸಿ ನಮ್ಮನ್ನು ಅಪಾಯದಿಂದ ಪಾರುಮಾಡಿ. ನೀವು ನಮ್ಮನ್ನು ಅನುಗ್ರಹಿಸದಿದ್ದರೆ ನಾವೆಲ್ಲರೂ ಆಕೆಯ ಆಶ್ರಮದ ಬಾಗಿಲಲ್ಲಿ ದಾಸರಾಗಿ ನಿಲ್ಲಬೇಕಾಗುತ್ತದೆ."

ಇಂದ್ರನಾಡಿದ ಮಾತುಗಳನ್ನು ಕೇಳಿ ತ್ರಿಮೂರ್ತಿಗಳು ಕೃದ್ಧರಾಗಿ, "ಆಹಾ, ಆ ಪತಿವ್ರತೆ ಅಂತಹ ಮಹಿಮಾನ್ವಿತಳೇ? ನಾವು ಈಗಲೇ ಹೋಗಿ, ಆಕೆಯ ವ್ರತಭಂಗಮಾಡಿಯೋ, ಇಲವೇ ಮೃತ್ಯು ಸದನಕ್ಕೆ ಕಳುಹಿಸಿಯೋ ಏನಾದರೂ ಮಾಡಿ ಹಿಂತಿರುಗುತ್ತೇವೆ. ನೀವು ಹೋಗಿ."ಎಂದು ದೇವತೆಗಳನ್ನು ಕಳುಹಿಸಿಕೊಟ್ಟು. ತಕ್ಷಣವೇ ಅತ್ರಿ ಮಹರ್ಷಿಯ ಆಶ್ರಮಕ್ಕೆ ಅತಿಥಿಗಳ ರೂಪದಲ್ಲಿ ಬಂದರು. ಆಗ ಅತ್ರಿಮುನಿ ಅನುಷ್ಠಾನಕ್ಕೆಂದು ನದಿಗೆ ಹೋಗಿದ್ದರು. ಆ ಅತಿಥಿವೇಷದಲ್ಲಿ ಬಂದ ಮೂವರೂ ಆಶ್ರಮ ಪ್ರವೇಶಮಾಡಿ, ಅನಸೂಯಾದೇವಿಯನ್ನು ಕಂಡು, "ಹೇ ಮಾತೆ, ನಾವು ಹಸಿದುಕೊಂಡು ಬಂದಿದ್ದೇವೆ. ಬೇಗ ನಮಗೆ ಅನ್ನವನ್ನು ನೀಡು. ಅನ್ನ ನೀಡಲು ಸಾಧ್ಯವಿಲ್ಲದಿದ್ದರೆ ಹೇಳು. ನಾವು ಇನ್ನೆಲ್ಲಿಯಾದರೂ ಹೋಗುತ್ತೇವೆ. ಪ್ರತಿನಿತ್ಯವೂ ನಿಮ್ಮ ಈ ಆಶ್ರಮದಲ್ಲಿ ಅತಿಥಿಗಳಿಗೆ ಅದ್ಧೂರಿಯಾದ ಆತಿಥ್ಯ ನಡೆಯುತ್ತದೆ ಎಂಬ ಕೀರ್ತಿ ಕೇಳಿ, ನಾವು ಕೋರಿದಹಾಗೆ ಆತಿಥ್ಯ ದೊರೆಯುತ್ತದೆ ಎಂಬ ಆಸೆಯಿಂದ ಬಹಳ ದೂರದಿಂದ ಬಳಲಿ ಇಲ್ಲಿಗೆ ಬಂದಿದ್ದೇವೆ. ನೀನು ಅತಿಥಿ ಪರಾಯಣಳು ಎಂಬ ನಿನ್ನ ಯಶಸ್ಸನ್ನು ಬಹಳವಾಗಿ ಕೇಳಿದ್ದೇವೆ." ಎಂದು ಹೇಳಿದರು. ಅವರು ಹೇಳಿದ್ದನ್ನೂ ಕೇಳಿ ಅನಸೂಯಾಮಾತೆ, ಅವರಿಗೆ ನಮಸ್ಕರಿಸಿ, ಅವರ ಪಾದಗಳನ್ನು ತೊಳೆದು, ಪೀಠಗಳಮೇಲೆ ಕೂಡಿಸಿ, ಅರ್ಘ್ಯ ಕೊಟ್ಟು, ಗಂಧ ಪುಷ್ಪಾದಿಗಳಿಂದ ಪೂಜಿಸಿ, "ನೀವು ನಿಮ್ಮ ಆಹ್ನೀಕವನ್ನು ಮುಗಿಸಿ. ಅಷ್ಟರಲ್ಲಿ ನಾನು ನಿಮ್ಮ ಭೋಜನಕ್ಕೆ ಏರ್ಪಾಡುಮಾಡುತ್ತೇನೆ." ಎಂದಳು. ಅದಕ್ಕೆ ಆ ವೇಷಧಾರಿಗಳು, "ಮಹರ್ಷಿಗಳು ಅನುಷ್ಠಾನಕ್ಕೆ ಹೋಗಿರುವಂತೆ ಕಾಣುತ್ತದೆ. ಅವರು ಬರುವುದು ತಡವಾಗಬಹುದು. ನಮಗೆ ಈಗಲೇ ಭೋಜನವಿಡು." ಎಂದರು. ಅದಕ್ಕೆ ಒಪ್ಪಿ ಆಕೆ ಅವರನ್ನು ಭೋಜನಗೃಹಕ್ಕೆ ಕರೆದುಕೊಂಡುಹೋಗಿ, ಆಸನಗಳನ್ನು ಕೊಟ್ಟು, ಎಲೆ ಹಾಕಿ, ರಂಗೋಲಿಯಿಟ್ಟು, ಅಭಿಗಾರಮಾಡಿ, ಅನ್ನವನ್ನು ಬಡಿಸಲು ಸಿದ್ಧಳಾದಳು. ಆಗ ಅತಿಥಿವೇಷದಲ್ಲಿ ಬಂದಿದ್ದ ಆ ತ್ರಿಮೂರ್ತಿಗಳು, "ಹೇ ಸಾಧ್ವಿಮಣಿ, ನೀನು ನಮ್ಮ ಅಭೀಷ್ಟವನ್ನು ಪಾಲಿಸುವುದಾರೆ ನಮ್ಮ ಯಾಚನೆಯನ್ನೂ ಪಾಲಿಸಬೇಕು. ಅದೇನೆಂದರೆ ನೀನು ದಿಗಂಬರೆಯಾಗಿ ನಮಗೆ ಅನ್ನವನ್ನು ಬಡಿಸಬೇಕು. ಅದು ಸಾಧ್ಯವಾಗದಿದ್ದರೆ ಹೇಳು. ನಾವು ಮತ್ತೊಂದೆಡೆಗೆ ಹೋಗುತ್ತೇವೆ." ಎಂದರು. ಅವರ ಮಾತುಗಳನ್ನು ಕೇಳಿದ ಆ ಪತಿವ್ರತೆ, ತನ್ನಲ್ಲಿ ತಾನು "ಈ ಅತಿಥಿಗಳು ನಮ್ಮ ಆಶ್ರಮದಿಂದ ವಿಮುಖರಾಗಿ ಹೊರಟುಹೋದರೆ ಈ ಗೃಹ ವನವಾಗಿಹೋಗುತ್ತದೆ. ಅವರ ಮಾತನ್ನು ಪಾಲಿಸಬೇಕೆಂದರೆ ನನ್ನ ಪಾತಿವ್ರತ್ಯಕ್ಕೆ ಭಂಗಬರುತ್ತದೆ. ಆದರೆ ನನ್ನ ಮನಸ್ಸು ನಿರ್ಮಲವಾಗಿದೆ. ಇವರ ಕಾಮದಾಟ ನನಗೇಕೆ? ನನ್ನ ಭರ್ತೃವಿನ ತಪೋಬಲವೇ ನನ್ನನ್ನು ಈ ಆಪತ್ತಿನಿಂದ ಪಾರುಮಾಡುತ್ತದೆ. ನನಗೆ ಯಾವ ಚಿಂತೆಯೂ ಬೇಡ." ಎಂದು ಯೋಚಿಸಿ, ಆ ಪತಿವ್ರತೆ ಅನಸೂಯದೇವಿ, "ಆಗಲಿ. ನೀವು ಕೇಳಿದಂತೆ ನಿಮಗೆ ಭೋಜನವಿಡುತ್ತೇನೆ. ಸಾವಧಾನಚಿತ್ತರಾಗಿ ನೀವು ಊಟಮಾಡಿ." ಎಂದು ಹೇಳಿ, ಪೂಜಾಗೃಹದೊಳಕ್ಕೆ ಹೋಗಿ ಅತ್ರಿಮಹರ್ಷಿಯ ಪಾದಗಳಿಗೆ ನಮಸ್ಕರಿಸಿ, "ಹೇ ಪತಿದೇವ, ಈ ಐವರೂ ನನ್ನ ಮಕ್ಕಳೇ ಅಲ್ಲವೇ?" ಎಂದು ಬಿನ್ನವಿಸಿಕೊಂಡು ವಿವಸ್ತ್ರಳಾಗಿ ಅನ್ನವನ್ನು ಹಿಡಿದು ಬರುವಷ್ಟರಲ್ಲಿ, ಆ ತ್ರಿಮೂರ್ತಿಗಳೂ, ಜಗನ್ನಾಥರೇ ಆದರೂ, ಹಸುಗೂಸುಗಳಾಗಿ ಹೋದರು. ಆ ಮಕ್ಕಳನ್ನು ನೋಡಿ, ಆಕೆಗೆ ಸ್ವಲ್ಪ ಭಯ ಎನಿಸಿದರೂ, ಅವರ ಬಳಿಗೆ ಬಂದು ಆ ಮಾತೆ ಅವರನ್ನೆತ್ತಿಕೊಂಡು ಮುದ್ದಾಡಿ ಸಂತಸಪಟ್ಟಳು. ಅಳುತ್ತಿದ್ದ ಆ ಮಕ್ಕಳನ್ನು ಬಾರಿಬಾರಿಗೂ ಎತ್ತಿ ಮುದ್ದಾಡಿ ಹಸಿದಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಆಕೆಯ ಸ್ತನಗಳಿಂದ ಹಾಲು ಸುರಿಯಲು ಮೊದಲಾಯಿತು. ಒಬ್ಬೊಬ್ಬರಾಗಿ ಆ ಮೂವರಿಗೂ ಆಕೆ ಸ್ತನ್ಯಪಾನ ಮಾಡಿಸಿದಳು. ಅನೇಕ ಯಜ್ಞಗಳಿಂದ ತೃಪ್ತಿಗೊಳ್ಳದ ಆ ಮೂವರೂ ಆಕೆಯ ಸ್ತನ್ಯಪಾನದಿಂದ ತೃಪ್ತಿಗೊಂಡು ಸುಪ್ತರಾದರು.

ಅತ್ರಿಪತ್ನಿಯಾದ ಆ ಅನಸೂಯೆಯ ಭಾಗ್ಯವೆಂತಹುದೋ! ಆಕೆಯ ತಪಃಫಲವೆಂತಹುದೋ! ತ್ರಿಮೂರ್ತಿಗಳು ಆಕೆಯ ಸ್ತನ್ಯಪಾನದಿಂದ ತೃಪ್ತರಾಗಿ ಹೋದರು. ಚತುರ್ದಶ ಭುವನಗಳನ್ನು ತನ್ನ ಉದರದಲ್ಲಿಟ್ಟುಕೊಂಡು ಪಾಲಿಸಿ ಅಲಸಿಹೋದವನಂತೆ ಆ ಮಹಾವಿಷ್ಣುವು ಆಕೆಯ ಸ್ತನ್ಯಪಾನಮಾಡಿ ತೃಪ್ತಿಯಿಂದ ಮಲಗಿದನು. ಹಗಲು ರಾತ್ರಿಯೆನ್ನದೆ ಸೃಷ್ಟಿಕಾರ್ಯದಲ್ಲಿ ನಿರತನಾದ ಬ್ರಹ್ಮನು ವಿಶ್ರಾಂತಿಯಿಲ್ಲದೆ ಬಳಲಿಹೋದವನಂತೆ ಆಕೆಯ ಸ್ತನಕ್ಷೀರಪಾನಮಾಡಿ ನಿದ್ರಾಪರವಶನಾದನು. ಕರ್ಪೂರದಂತೆ ಧವಳವರ್ಣನೂ, ಪಂಚಮುಖನೂ, ಫಾಲಾಕ್ಷನೂ ಆದ ರುದ್ರ ಆ ಸಾಧ್ವಿಯ ಸ್ತನಗಳಿಂದ ಹಾಲು ಕುಡಿದು ತೃಪ್ತನಾಗಿ ಸುಪ್ತ ಚೇತನನಾದನು. ಆ ಮಹಾಸತಿಗೆ ಸಮಾನರಾದ ಮತ್ತೊಬ್ಬರು ಭುವನತ್ರಯಗಳಲ್ಲಿ ಯಾರೂ ಇಲ್ಲ. ತ್ರಿಮೂರ್ತಿಗಳಿಗೆ ಮಾತೆಯಾಗಿ ಆಕೆ ಪ್ರಖ್ಯಾತಳಾದಳು.

ಅನಸೂಯ ಮಕ್ಕಳನ್ನು ಎತ್ತಿ ಲಾಲಿಸಿ ಪಕ್ಕದಲ್ಲಿ ಮಲಗಿಸಿಕೊಂಡು ಮಧುರವಾಗಿ, ಸರ್ವೋಪನಿಷತ್ತುಗಳ ಸಾರಭೂತವಾದ ಗೀತೆಗಳನ್ನು ಸಪ್ತಸ್ವರಗಳದೊಡನೆ ಮೇಳವಿಸಿ, ತ್ರಿಮೂರ್ತಿಗಳ ಯಶಸ್ಸನ್ನು ಸುಶ್ರಾವ್ಯವಾಗಿ ಹಾಡಿದಳು. ಅಷ್ಟರಲ್ಲಿ ಮಧ್ಯಾಹ್ನವಾಯಿತು. ತಪೋನುಷ್ಠಾನ ಪೂರ್ಣಗೊಳಿಸಿ ಅತ್ರಿ ಮಹರ್ಷಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಆಶ್ರಮಕ್ಕೆ ಹಿಂತಿರುಗಿದರು. ಮನೋಹರವಾಗಿ ಅನಸೂಯ ಗಾನಮಾಡುತ್ತಿರುವುದನ್ನು ಕೇಳುತ್ತಾ, ಮಕ್ಕಳು ಮಲಗಿರುವುದನ್ನು ನೋಡಿದರು. ಅದನ್ನು ಕಂಡು ತಮ್ಮ ಗೃಹಿಣಿಯನ್ನು ತಾನು ನೋಡುತ್ತಿರುವುದೇನು ಎಂದು ಸಾದರೋಕ್ತಿಗಳಿಂದ ಪ್ರಶ್ನಿಸಿದರು. ಆಕೆ ಆರಂಭದಿಂದ ನಡೆದದ್ದೆಲ್ಲವನ್ನೂ ವಿಸ್ತಾರವಾಗಿ ಹೇಳಿದಳು. ಅದೆಲ್ಲವನ್ನೂ ಕೇಳಿದ ಅತ್ರಿ ಮಹರ್ಷಿ ಸ್ವಲ್ಪಹೊತ್ತು ಧ್ಯಾನದಲ್ಲಿದ್ದು, ತನ್ನ ತಪಃಪ್ರಭಾವದಿಂದ ಅಲ್ಲಿ ಮಲಗಿರುವ ಮಕ್ಕಳು ತ್ರಿಮೂರ್ತಿಗಳು ಎಂದು ಗುರುತಿಸಿ ಅವರಿಗೆ ನಮಸ್ಕರಿಸಿದರು. ಆ ದಂಪತಿಯರ ಅಂತರ್ಭಾವವನ್ನು ತಿಳಿದ ತ್ರಿಮೂರ್ತಿಗಳು ಪ್ರಸನ್ನರಾಗಿ ಸ್ವಸ್ವರೂಪದಿಂದ ಪ್ರತ್ಯಕ್ಷರಾದರು. ಆ ದಂಪತಿಗಳು ಹರ್ಷಿತರಾಗಿ ಅವರನ್ನು ಸ್ತೋತ್ರ ಮಾಡಿದರು. ತ್ರಿಮೂರ್ತಿಗಳು "ನಿಮ್ಮ ಭಕ್ತಿಗೆ ಮೆಚ್ಚಿಕೊಂಡಿದ್ದೇವೆ. ನಿಮ್ಮ ವಾಂಛೆಯೇನೋ ಹೇಳಿ. ನೆರವೇರಿಸುತ್ತೇವೆ." ಎಂದರು. ಅತ್ರಿ ಮಹರ್ಷಿಯು ತನ್ನ ಪತ್ನಿಯನ್ನು ಆಕೆಗೆ ನಿನಗೇನು ಬೇಕೋ ಕೇಳಿಕೋ ಎಂದು ಅನುಮತಿ ಕೊಟ್ಟರು. ಆಕೆ, "ಸ್ವಾಮಿ, ನಿಮ್ಮ ಭಕ್ತಿ ಸಾಮರ್ಥ್ಯಗಳಿಂದಲೇ ಪ್ರಾದುರ್ಭವಿಸಿದ ಈ ಸುತಸದೃಶರನ್ನು ನಿಜಸುತರನ್ನಾಗಿ ಪಡೆಯಲು ಇಚ್ಚಿಸುತ್ತೇನೆ." ಎಂದಳು. ಆ ಮುನಿವರ್ಯ ತನ್ನ ಪತ್ನಿಯ ಕೋರಿಕೆಗೆ ಸಮ್ಮತಿಸಿ, ತ್ರಿಮೂರ್ತಿಗಳನ್ನು ತಮ್ಮ ಸುತರಾಗಿ ಬರುವಂತೆ ಕೋರಿದನು.

"ಹೇ ಮುನೀಶ್ವರ, ನಿನ್ನ ಅಭೀಷ್ಟ ಸಿದ್ಧಿಸುತ್ತದೆ. ನಮ್ಮ ಅಂಶಗಳಿಂದ ಜನಿಸಿದ ಬಾಲರು ನಿನ್ನ ಗೃಹಕ್ಕೆ ಬರುತ್ತಾರೆ. ನಮಗೆ ಹೊರಡಲು ಅಪ್ಪಣೆ ಕೊಡು." ಎಂದು ಹೇಳಿ, ಆ ತ್ರಿಮೂರ್ತಿಗಳು, ತಮ್ಮ ತಮ್ಮ ಧಾಮಗಳಿಗೆ ಹಿಂತಿರುಗಿದರು. ನಂತರದಲ್ಲಿ ಅತ್ರಿ ಮಹರ್ಷಿಯ ಆಶ್ರಮದಲ್ಲಿ ತ್ರಿಮೂರ್ತ್ಯಂಶರಾದ ಮೂವರು ಬಾಲರಾದರು. ಅನಸೂಯೆ ಮಾತೆಯಾಗಿ ಆ ಬಾಲರನ್ನು ಪೋಷಿಸಿ ಬೆಳೆಸಿದಳು. ಆ ಮೂವರೂ ಶ್ರೀದತ್ತ, ಚಂದ್ರ, ದೂರ್ವಾಸರೆಂಬ ನಾಮಧೇಯಗಳಿಂದ ಪ್ರಸಿದ್ಧರಾದರು.

ಪ್ರಜ್ಞಾವಂತರಾದ ಚಂದ್ರ ದೂರ್ವಾಸರು ತಮ್ಮ ಗೃಹವನ್ನು ಬಿಟ್ಟು ಹೋಗಲು ನಿಶ್ಚಯಿಸಿ, ತಮ್ಮ ಮಾತೆಯಾದ ಅನಸೂಯೆಯ ಅನುಮತಿ ಬೇಡಿದರು. ದೂರ್ವಾಸ, " ಅಮ್ಮ, ನಾನು ತಪಸ್ಸನ್ನಾಚರಿಸುತ್ತಾ ತೀರ್ಥ ಪರ್ಯಟನೆ ಮಾಡಬೇಕೆಂದಿದ್ದೇನೆ. ಅನುಜ್ಞೆಕೊಡು." ಎಂದು ಹೇಳಿ, ಆಕೆಯ ಅನುಜ್ಞೆ ಪಡೆದು ಹೊರಟುಹೋದನು. ಚಂದ್ರನು, "ನಾನು ಚಂದ್ರಮಂಡಲದಲ್ಲಿ ನೆಲಸುತ್ತೇನೆ. ನನ್ನ ದರ್ಶನ ನಿನಗೆ ನಿತ್ಯವೂ ಆಗುತ್ತದೆ. ದುಃಖಿಸಬೇಡ." ಎಂದು ಹೇಳಿ, " ಈ ಶ್ರೀದತ್ತ ತ್ರಿಮೂರ್ತಿಸ್ವರೂಪನು. ನಿಮ್ಮೊಡನೆ ಸದಾಕಾಲವೂ ಇರುತ್ತಾನೆ. ಅವನೇ ವಿಷ್ಣು ಭಗವಾನನು. ಈ ಜಗತ್ತಿನಲ್ಲಿರುವುದೆಲ್ಲವೂ ವಿಷ್ಣುಮಯವೇ! ನಿಮಗೆ ಇವನ ವಿಯೋಗವಿರುವುದಿಲ್ಲ. ನಿಮ್ಮ ಚಿತ್ತಾನುಸಾರವಾಗಿ ಶ್ರೀದತ್ತನು ನಿಮ್ಮೊಡನಿರುತ್ತಾನೆ." ಎಂದು ಹೇಳಿ, ಚಂದ್ರನು ಮಾತೆಯ ಅಪ್ಪಣೆ ಪಡೆದು ಚಂದ್ರಮಂಡಲ ಸೇರಿದನು. ಚಂದ್ರನು ಹೇಳಿದಂತೆ ಶ್ರೀದತ್ತನು ತನ್ನ ತಾಯಿಯೊಡನೆ ಗೃಹದಲ್ಲೇ ನಿಂತನು. ಗುರುಪರಂಪರೆಯ ಮೂಲವಿದೇ!" ಎಂದು ಸಿದ್ಧಮುನಿ ನಾಮಧಾರಕನಿಗೆ ಅತ್ರಿ ವೃತ್ತಾಂತವನ್ನು ಹೇಳಿದರು.

ನಾಮಧಾರಕ ಸಿದ್ಧಮುನಿಗೆ ಸಾದರವಾಗಿ ನಮಸ್ಕರಿಸಿ, "ಯೋಗೀಶ್ವರ, ಭಕ್ತ ಮನೋಹರ, ಕೃಪಾಮೂರ್ತಿ, ಭವತಾರಕ, ಸಿದ್ಧಪುರುಷ, ನಿನಗೆ ಜಯವಾಗಲಿ. ನಿನ್ನ ಪ್ರಸಾದದಿಂದ ಅನಸೂಯ ಸಾಧ್ವಿಯ ಕಥೆ ತಿಳಿಯಿತು. ನೀನೆ ಉದ್ಧರಿಸಬಲ್ಲ ಯೋಗಿಪುಂಗವ. ನನ್ನ ಪ್ರಾರ್ಥನೆಯನ್ನು ಕೇಳು. ದತ್ತಾತ್ರೇಯರ ಅವತಾರ ಕಥೆಯನ್ನು ನನಗೆ ವಿಸ್ತಾರವಾಗಿ ಹೇಳಿದೆ. ಈ ಮಹೀತಲದಲ್ಲಿ ಶ್ರೀದತ್ತನ ಅವತಾರ ಹೇಗಾಯಿತು? ನನ್ನ ಮೇಲೆ ಪ್ರೇಮವಿಟ್ಟು ವಿಸ್ತರಿಸಿ ಹೇಳು. ತ್ರಿಮೂರ್ತ್ಯವತಾರ ಲೀಲೆಗಳನ್ನು ಎಷ್ಟು ಕೇಳಿದರೂ ಸಾಲದಲ್ಲವೇ?" ಎಂದು ಬಿನ್ನವಿಸಿಕೊಂಡನು. ಅವನ ಮಾತನ್ನು ಕೇಳಿದ ಸಿದ್ಧಮುನಿ ಮತ್ತೆ ಹೇಳಿದರು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಸಿದ್ಧನಾಮಧಾರಕ ಸಂವಾದೇ ಶ್ರೀದತ್ತಾವತಾರೋ ನಾಮ ಚತುರ್ಥೋಧ್ಯಾಯಃ ಸಂಪೂರ್ಣಂ|| 


No comments:

Post a Comment