Monday, May 6, 2013

||ಶ್ರೀಗುರುಚರಿತ್ರೆ - ಮೂವತ್ತುನಾಲ್ಕನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
 ||ಶ್ರೀಗುರುಭ್ಯೋನಮಃ||

ಸಂತೋಷಗೊಂಡ ಮಹಾರಾಜ ಮಹರ್ಷಿಯ ಪಾದಗಳಿಗೆ ನಮಸ್ಕರಿಸಿ, ಅವರ ಎದುರು ಕೈಜೋಡಿಸಿ ನಿಂತು, " ಸ್ವಾಮಿ, ಇವರು ಪೂರ್ವ ಜನ್ಮದಲ್ಲಿ ತಿಳಿಯದೆಯೇ ರುದ್ರಾಕ್ಷಿಗಳನ್ನು ಧರಿಸಿದರೂ ಆ ಪುಣ್ಯ ವಿಶೇಷದಿಂದ ರಾಜಕುಮಾರರಾದರು. ಈಗ ಜ್ಞಾನ ಯುಕ್ತರಾಗಿ ರುದ್ರಾಕ್ಷ ಧಾರಣೆ ಮಾಡುತ್ತಿದ್ದಾರೆಯಲ್ಲವೇ? ಭವಿಷ್ಯದಲ್ಲಿ ಇವರಿಗೇನಾಗುತ್ತದೆಯೋ ತಿಳಿಸ ಬೇಕೆಂದು ಕೋರುತ್ತಿದ್ದೇನೆ. ನೀವು ತ್ರಿಕಾಲಜ್ಞರು. ಈ ಕುಮಾರರ ಭವಿಷ್ಯತ್ತು ಹೇಗಿದೆಯೋ ತಿಳಿಸಿ" ಎಂದು ಕೇಳಿದನು. ಅವನ ಪ್ರಶ್ನೆಯನ್ನು ಕೇಳಿದ ಮಹರ್ಷಿಯು, "ರಾಜ, ಇವರ ಭವಿಷ್ಯತ್ತು ಚೆನ್ನಾಗಿಯೇ ಇದೆ. ಆದರೆ ನಿನ್ನ ಕುಮಾರನ ಭವಿಷ್ಯವು ಮಾತ್ರ ದುಃಖಕಾರಕವು. ಅದನ್ನು ಕೇಳಿದರೆ ನೀನು ದುಃಖ ಪಡುತ್ತೀಯೆ" ಎಂದು ಹೇಳಿದನು. ಅದನ್ನು ಕೇಳಿದ ರಾಜ ಮತ್ತೆ ವಿನೀತನಾಗಿ, "ಸ್ವಾಮಿ, ಎಲ್ಲವನ್ನೂ ಹೇಳಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಉಂಟಾಗುವ ದುಃಖಕ್ಕೆ ಪ್ರತಿಯಾಗಿ ಏನು ಮಾಡಬೇಕು ಎಂಬುದನ್ನೂ ನೀವೇ ಬಲ್ಲಿರಿ" ಎಂದು ಪ್ರಾರ್ಥಿಸಿದನು. ಅದಕ್ಕೆ ಆ ಮಹರ್ಷಿಯು, "ಮಹಾತ್ಮರಿಗೆ ಹೇಳಲಾರದ್ದೇನಿದೆ. ರಾಜ, ಕೇಳು. ನಿನ್ನ ಮಗನಿಗೆ ಆಯುಸ್ಸು ಹನ್ನೆರಡು ವರ್ಷ ಮಾತ್ರವೇ! ಅದರಲ್ಲೂ ಈಗ ಇನ್ನು ಏಳು ದಿನಗಳು ಮಾತ್ರ ಮಿಕ್ಕಿವೆ! ಎಂಟನೆಯ ದಿನ ನಿನ್ನ ಮಗನಿಗೆ ಮೃತ್ಯುವು ಬರುವುದು" ಎಂದು ಹೇಳಲು, ರಾಜನು ಅದನ್ನು ಕೇಳಿದ ತಕ್ಷಣವೇ ಕ್ಷಣಕಾಲ ಮೂರ್ಛಿತನಾಗಿ, ಮತ್ತೆ ಎದ್ದು ದುಃಖಿಸುತ್ತಾ, ಪರಾಶರ ಮಹರ್ಷಿಯ ಚರಣಗಳಲ್ಲಿ ಬಿದ್ದು, "ಹೇ ತಪಸ್ವಿ, ನನ್ನನ್ನು ರಕ್ಷಿಸು. ನಾನು ನಿನ್ನನ್ನೇ ಶರಣು ಹೊಂದಿದ್ದೇನೆ. ನಾವು ಈಗ ಏನು ಮಾಡಬೇಕು?" ಎಂದು ಭಾರ್ಯಾ ಸಮೇತನಾಗಿ ಅವನ ಚರಣಗಳನ್ನು ಹಿಡಿದು ಬೇಡಿ ಕೊಂಡನು. ಅದಕ್ಕೆ ಆ ದಯಾಸಮುದ್ರನಾದ ಮಹರ್ಷಿಯು, ರಾಜನನ್ನು ಸಾಂತ್ವನ ಗೊಳಿಸುತ್ತಾ, "ಜಗದ್ಗುರುವಾದ ಆ ಪಾರ್ವತೀಪತಿಯನ್ನು ಶರಣು ಹೋಗು. ಭಕ್ತಿ ಶ್ರದ್ಧೆಗಳಿಂದ ಅವನನ್ನು ಆರಾಧಿಸು. ಆ ಶೂಲಪಾಣಿಯೇ ನಿನ್ನನ್ನು ರಕ್ಷಿಸುತ್ತಾನೆ. ಅಜೇಯನಾದ ಕಾಲನನ್ನು ಜಯಿಸಲು ಒಳ್ಳೆಯ ಉಪಾಯ ಇದೊಂದೇ! ಆ ವ್ಯೋಮಕೇಶನೊಬ್ಬನೇ ದೇವನು. ಸ್ವರ್ಗ ಮರ್ತ್ಯ ಪಾತಾಳ ಲೋಕಗಳಲ್ಲಿ ಭಗವಂತನಾದ ಸಚ್ಚಿದಾನಂದ ಸ್ವರೂಪನು ಆ ಶಿವನೊಬ್ಬನೇ! ಅವನು ಮಾಯಾ ಗುಣರಹಿತನು. ಆ ದೇವನೇ ಮೂರ್ತಿಮಂತನಾದ ಬ್ರಹ್ಮನನ್ನು ತನ್ನ ರಜೋ ಗುಣದಿಂದ ಸೃಷ್ಟಿಸಿದನು. ನಂತರ ಸೃಷ್ಟಿ ಕ್ರಮವನ್ನು ತಿಳಿಸುವುದಕ್ಕೋಸ್ಕರ ಚತುರ್ವೇದಗಳನ್ನು ಸೃಜಿಸಿದನು. ಆ ವೇದಗಳನ್ನು ಬ್ರಹ್ಮನಿಗೆ ಕೊಟ್ಟನು. ಆ ವೇದಗಳಲ್ಲಿರುವ ಉಪನಿಷತ್ತುಗಳಿಂದಲೇ ಆ ಮಹಾತ್ಮನು ಆತ್ಮ ತತ್ತ್ವವನ್ನು ಸಂಗ್ರಹ ಮಾಡಿ ವ್ಯಾಖ್ಯಾನಿಸಿದನು. ಸರ್ವೇಶ್ವರನು ರುದ್ರಾಧ್ಯಾಯವೆಂದು ಹೆಸರಿರುವ ವೇದ ಸಾರವಾಗಿ ಪ್ರಸಿದ್ಧವಾಗಿರುವ ಉಪನಿಷತ್ತನ್ನು ಕೂಡಾ ಬ್ರಹ್ಮ ದೇವನಿಗೆ ಸಂತೋಷದಿಂದ ಕೊಟ್ಟನು. ಆ ರುದ್ರಾಧ್ಯಾಯಕ್ಕಿರುವ ಮಹಿಮೆ ಅಪಾರವಾದದ್ದು. ಅನುಪಮವಾದದ್ದು. ರುದ್ರನು ಅವ್ಯಯನಾಗಿ ಪ್ರಸಿದ್ಧನು. ಶ್ರೀರುದ್ರನಿಗೆ ಎಂದಿಗೂ ನಾಶವೆನ್ನುವುದು ಇಲ್ಲ. ರುದ್ರಾಧ್ಯಾಯವು ಪರತತ್ತ್ವವೇ! ಅದಕ್ಕೆ ಶಿವಾಖ್ಯಾನವೂ ಉಂಟು. ಬ್ರಹ್ಮ ಚತುರ್ಮುಖಗಳಿಂದ ಚತುರ್ವೇದಗಳನ್ನು ಪ್ರಕಟ ಗೊಳಿಸಿದನು. ಪೂರ್ವ ದಿಕ್ಕಿನ ಮುಖದಿಂದ ಮೊದಲುಗೊಂಡು ನಾಲ್ಕು ವೇದಗಳೂ ಕ್ರಮವಾಗಿ ಬ್ರಹ್ಮನಿಂದ ಹೊರಬಿದ್ದವು. ಅದರಲ್ಲಿ ದಕ್ಷಿಣ ಮುಖದಿಂದ ಯಜುರ್ವೇದವು ಈಚೆಗೆ ಬಂತು. ರುದ್ರಾಧ್ಯಾಯ ಉಪನಿಷತ್ತುಗಳಿಗೆ ಸಾರಭೂತವು. ಕಾಮದವು. ಬ್ರಹ್ಮದೇವನು ಯಜುರ್ವೇದಾಂತರ್ಗತವಾದ ಈ ರುದ್ರಾಧ್ಯಾಯವನ್ನು ಮುನಿ ಶ್ರೇಷ್ಠರಾದ ಮರೀಚಿ, ಅತ್ರಿ ಮೊದಲಾದವರಿಗೆ ಯಥಾ ವಿಧಿಯಾಗಿ ಉಪದೇಶಿಸಿದನು. ಆ ದೇವರ್ಷಿಗಳು ರುದ್ರಾಧ್ಯಾಯವನ್ನು ಅನುಕ್ರಮವಾಗಿ ಋಷಿಗಳಿಗೆ ಉಪದೇಶಿಸಿದರು. ಈ ವಿಧವಾಗಿ ರುದ್ರಾಧ್ಯಾಯವು ಭೂಮಿಯಲ್ಲಿ ಪ್ರಸಾರವಾಯಿತು. ಶೀಘ್ರವಾಗಿ ಸಿದ್ಧಿ ಪ್ರದವಾಗುವಂತಹ ಮಂತ್ರವು ಶ್ರೀ ರುದ್ರವನ್ನು ಬಿಟ್ಟರೆ ಬೇರೊಂದಿಲ್ಲ. ಅದು ಚತುರ್ವಿಧ ಪುರುಷಾರ್ಥಗಳನ್ನು ಕೊಡ ತಕ್ಕಂತಹುದು. ಮಹಾ ದೋಷಗಳಿಂದ ಕೂಡಿದ್ದರೂ, ಮಹಾ ಪಾತಕಿಯಾಗಿದ್ದರೂ ಮನುಷ್ಯನು ಶ್ರೀರುದ್ರ ಜಪದಿಂದ ಪರಿಶುದ್ಧನಾಗಿ ಪರಮ ಪದವನ್ನು ಸೇರುತ್ತಾನೆ. ಬ್ರಹ್ಮದೇವನು ಸೃಷ್ಟಿಸಿದ ರುದ್ರದೇವ ತೀರ್ಥವೇ ಅದ್ಭುತವಾದದ್ದು. ಅದರಲ್ಲಿ ಸ್ನಾನ, ಆ ತೀರ್ಥವನ್ನು ಸೇವಿಸುವುದು ಕೂಡಾ ಮಾನವನನ್ನು ತರಿಸ ಬಲ್ಲುದು. ಶ್ರೀಗುರುಗಳು ಬೋಧಿಸಿದ ರೀತಿಯಲ್ಲಿ ಸೇವಿಸಿದರೆ ಭವ ಸಾಗರದಿಂದ ಮಾನವನು ಪಾರಾಗಬಲ್ಲನು. ಪೂರ್ವ ಜನ್ಮದಲ್ಲಿ ಮಾಡಿದ ಸುಕೃತ ದುಷ್ಕೃತಗಳ ಫಲವು ಈ ಜನ್ಮದಲ್ಲಿ ಉಂಟಾಗುತ್ತದೆ.

ಹಿಂದೆ ಬ್ರಹ್ಮದೇವನು ಸೃಷ್ಟಿ ಪ್ರವೃತ್ತಿಗೆ ತನ್ನ ವಕ್ಷ ಸ್ಥಲದಿಂದ ಧರ್ಮ, ಪ್ರುಷ್ಟದಿಂದ ಅಧರ್ಮವನ್ನು ನಿರ್ಮಿಸಿದನು. ಅದರಲ್ಲಿ ಧರ್ಮವನ್ನು ಸೇವಿಸುವವರಿಗೆ ಇಹ-ಪರಗಳಲ್ಲಿ ಸೌಖ್ಯ-ಸದ್ಗತಿಗಳು ಲಭ್ಯವಾಗುತ್ತವೆ. ಅಧರ್ಮ ಸೇವಕನು ಪಾಪಿಯಾಗಿ ಇಹ-ಪರಗಳಲ್ಲಿ ದುಃಖವನ್ನನುಭವಿಸುತ್ತಾನೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಮುಂತಾದ ಮಹಾ ಭಯಕಾರಕರು ಅಧರ್ಮಕ್ಕೆ ಸುತರು. ಇವರೆಲ್ಲರೂ ನರಕಕ್ಕೆ ನಾಯಕರು. ಗುರು ತಲ್ಪಗಮನ, ಜಾರ ಕರ್ಮ ಮುಂತಾದವು ಕೂಡಾ ನರಕ ನಾಯಕರೇ! ಕಾಮುಕರು, ಪಾತಕಿಗಳು ಕಾಮನ ಪುತ್ರರು. ಕಾಮದಿಂದ ಸಂಭವಿಸಿದ್ದು ಕಾಮ ಸುತರೆಂದು ಪ್ರಸಿದ್ಧವು. ಕ್ರೋಧದಿಂದ ಸಂಭವಿಸಿದ್ದು ಕ್ರೋಧ ಸುತರಾಗುತ್ತಾರೆ. ಮಾತಾ ಪಿತರ ವಧೆ, ಬ್ರಹ್ಮಹತ್ಯೆ ಮಾಡಿದಂತಹವರು ಕ್ರೋಧ ಸುತರು. ಇಂತಹವರ ತಾಪವು ಹೆಚ್ಚಾಗಿರುತ್ತದೆ. ದೇವ ಬ್ರಾಹ್ಮಣ ದ್ರವ್ಯವನ್ನು ಅಪಹರಿಸುವುದು, ಸ್ವರ್ಣಚೌರ್ಯ, ಕನ್ಯಾವಿಕ್ರಯ, ಪ್ರಾಪ್ತಿಯಾದ ಧನವನ್ನು ಮುಚ್ಚಿಡುವುದು ಮುಂತಾದುವನ್ನು ಮಾಡುವವರು ಲೋಭಿ ಪುತ್ರರಾಗಿ ಪರಿಗಣಿಸಲ್ಪಡುತ್ತಾರೆ. ಇವರೆಲ್ಲರಿಗೆ ಯಮನು, "ಭೂತಲವನ್ನು ಸೇರಿ ಜನರನ್ನು ನಿಮ್ಮ ನಿಮ್ಮ ಗುಣಗಳಿಂದ ಕೂಡಿದವರನ್ನಾಗಿ ಮಾಡಿ. ಆಲಸ್ಯ ಮಾಡಬೇಡಿ" ಎಂದು ಹೇಳುತ್ತಾ ಉಪಪಾಪಗಳು, ಪಾಪಿಗಳನ್ನು ಅವರಿಗೆ ಸೇವಕರಾಗಿ ಕಳುಹಿಸಿ, ‘ನೀವೆಲ್ಲರೂ ಭೂಮಿಯಲ್ಲಿ ಸಂಸಾರಮಾಡುತ್ತಿರಿ’ ಎಂದು ಆಜ್ಞೆಮಾಡಿದನು. ಯಮನ ಆಜ್ಞೆಯಂತೆ, ಆ ಪಾಪ ಜಾತರೆಲ್ಲರೂ ಭೂಲೋಕಕ್ಕೆ ಬಂದು ಇಲ್ಲಿ ರುದ್ರವನ್ನು ಜಪಿಸುವವರನ್ನು ಕಂಡು, ಭಯಪಟ್ಟು ಓಡಿ ಹೋಗಿ ಯಮನ ಬಳಿ ಸೇರಿ, ಭೀತರಾದ ಅವರು, "ಸ್ವಾಮಿ ನಿಮ್ಮ ಆಜ್ಞೆಯನ್ನು ಶಿರಸಾವಹಿಸಿ ನಾವು ಭೂಲೋಕಕ್ಕೆ ಹೋದೆವು. ನಾವು ನಿನ್ನ ಕಿಂಕರರು. ಆದರೂ ಭೂತಲವು ನಮಗೆ ಭಯವನ್ನುಂಟು ಮಾಡುತ್ತಿದೆ. ಅದರ ಸುತ್ತ ಮುತ್ತಲೆಲ್ಲವೂ ಅಗ್ನಿಯಿಂದ ಆವರಿಸಿದಂತಿದೆ. ರುದ್ರಾಗ್ನಿಯಲ್ಲಿ ನಾವು ದಹಿಸಲ್ಪಟ್ಟೆವು. ಆ ರುದ್ರಜಪ ಮಾಡುವವರನ್ನು ನೋಡಿದ ಕೂಡಲೇ ನಮಗೆ ಉರಿಯ ಮಧ್ಯೆ ಇರುವ ಹಾಗಾಗುತ್ತದೆ. ಸ್ವಾಮಿ, ನಾವು ರುದ್ರಾಗ್ನಿ ದಗ್ಧರು. ನಮ್ಮ ಶಕ್ತಿಯೆಲ್ಲಾ ಉಡುಗಿ ಹೋಗಿದೆ. ನಮ್ಮ ಗತಿ ಏನು? ನಮಗೆ ಭೂಮಿಯನ್ನು ಸೇರುವ ಶಕ್ತಿಯೇ ಇಲ್ಲ. ಶ್ರೀ ರುದ್ರ ಜಪದಿಂದ ವಿಪ್ರರೆಲ್ಲರೂ ಪುಣ್ಯಾತ್ಮರಾಗುತ್ತಿದ್ದಾರೆ. ಭಕ್ತಿಯಿಂದ ಯಾವಾಗಲೋ ಒಂದು ಸಲ ರುದ್ರಾಧ್ಯಾಯವನ್ನು ಓದಿದವನೂ ಕೂಡಾ ಪುಣ್ಯಾತ್ಮನಾಗುತ್ತಿದ್ದಾನೆ. ಘೋರ ಪಾಪಗಳನ್ನು ಮಾಡಿದವರೂ ಕೂಡಾ ಈ ರುದ್ರದಿಂದ ಪುಣ್ಯಾತ್ಮರಾಗಿ ಹೋಗುತ್ತಿದ್ದಾರೆ. ನಮಗೆ ಭೂಸಂಚಾರ ಹೇಗೆ? ಎಷ್ಟೇ ಕಷ್ಟ ಪಟ್ಟರೂ ನಮಗೆ ಭೂಲೋಕ ಗತಿ ಇರದೇ ಹೋಗುತ್ತಿದೆ. ಹೇ ಯಮರಾಜ, ರುದ್ರನು ಕಾಲಕೂಟ ವಿಷದಂತೆ ಇದ್ದಾನೆ. ಬ್ರಹ್ಮ ಕೊಟ್ಟ ಮಹಾರುದ್ರವೆನ್ನುವ ವಿಷವನ್ನು ಶಾಂತಿಗೊಳಿಸು. ನಮ್ಮನ್ನು ರಕ್ಷಿಸು" ಎಂದು ಯಮಕಿಂಕರರು ಬಾಧಾಪೀಡಿತರಾಗಿ ಕಳಕಳಿಯಿಂದ ಯಮನನ್ನು ಪ್ರಾರ್ಥಿಸಿದರು.

ಹಾಗೆ ತನ್ನ ಭೃತ್ಯರು ಪ್ರಾರ್ಥಿಸಲು, ಅವರೊಡನೆ ಯಮರಾಜ ಬ್ರಹ್ಮಲೋಕಕ್ಕೆ ಹೋಗಿ, ವಿನಯದಿಂದ, "ಹೇ ಚತುರ್ಮುಖ, ಪದ್ಮಾಸನ, ನಾವೀಗ ನಿನ್ನಲ್ಲಿ ಶರಣು ಬಂದಿದ್ದೇವೆ. ಇದುವರೆಗೂ ನಾನು ಪಾಪಿಗಳನ್ನು ನರಕಕ್ಕೆ ತೆಗೆದು ಕೊಂಡು ಹೋಗುತ್ತಿದ್ದೆ. ಈ ಸಲ ಪಾಪಾತ್ಮರನ್ನು ಕರೆತರಲು ಸೇವಕರನ್ನು ಭೂಲೋಕಕ್ಕೆ ಕಳುಹಿಸಲು ನಮ್ಮವರು ರುದ್ರನಿಂದ ಪರಾಜಿತರಾದರು. ಮಹಾ ಪಾಪಿಯಾದವನೂ ಕೂಡಾ ರುದ್ರದಿಂದ ಪವಿತ್ರನಾಗಿ ಸ್ವರ್ಗ ಸೇರುತ್ತಿದ್ದಾನೆ. ನರಕವು ಇಂದು ಶೂನ್ಯವಾಗಿದೆ. ನನ್ನ ರಾಜ್ಯವೇ ನಿರರ್ಥಕವಾಯಿತು. ಎಲ್ಲರೂ ಮೋಕ್ಷವನ್ನೇ ಸೇರಿದರೆ ಸೃಷ್ಟಿ ಕಾರ್ಯ ಹೇಗೆ ನಡೆಯುತ್ತದೆ? ದೇವಾ, ಇದಕ್ಕೆ ಏನಾದರೂ ಉಪಾಯವನ್ನು ಆಲೋಚಿಸು. ನಮ್ಮನ್ನು, ಕ್ರಮಸೃಷ್ಟಿಯನ್ನು ರಕ್ಷಿಸು. ನಮ್ಮ ರಾಜ್ಯವು ಹೇಗೂ ನಾಶವಾಯಿತು. ಸ್ವಾಮಿ, ಈ ರುದ್ರಾಧ್ಯಾಯವೆನ್ನುವ ನಿಧಿಯನ್ನು ಮಾನವರಿಗೆ ಹೇಗೆ ದಯಪಾಲಿಸಿದೆ?" ಎಂದೆಲ್ಲ ಯಮನು ಪ್ರಾರ್ಥಿಸಲು, ಆ ಚತುರ್ಮುಖನು ಸ್ವಲ್ಪ ಹೊತ್ತು ಆಲೋಚನೆ ಮಾಡಿ, "ಮದಾಂಧರು, ಭಕ್ತಿಹೀನರು, ಅಜ್ಞಾನಿಗಳು, ತಾಮಸಿಗಳು, ಮಲಗಿರುವವರು, ನಿಂತಿರುವವರು, ನಡೆಯುತ್ತಿರುವವರು, ಅಪರಿಶುದ್ಧರಾಗಿ ಶ್ರೀ ರುದ್ರಾಧ್ಯಾಯವನ್ನು ಜಪಿಸುವವರೆಲ್ಲರೂ ನಿನ್ನ ದಂಡನೆಗೆ ತಗುನಾದವರೇ! ಯಥಾ ವಿಧಿಯಾಗಿ, ಉಪವಿಷ್ಟರಾಗಿ, ಭಕ್ತಿಯಿಂದ ಶ್ರೀ ರುದ್ರವನ್ನು ಜಪಿಸುವವರು ನಿನಗೆ ವಂದ್ಯರು. ಅವರು ಪಾಪ ರಹಿತರು. ನಿನ್ನ ದೂತರಿಗೆ ಈ ಮಾತುಗಳನ್ನು ಸ್ಪಷ್ಟವಾಗಿ ತಿಳಿಸು. ಅಲ್ಪಾಯುವು, ಪಾಪಿಯಾದ ಮಾನವನು ಭಕ್ತಿಯಿಂದ ಶ್ರೀ ರುದ್ರಾಧ್ಯಾಯವನ್ನು ಜಪಿಸಿದರೆ ಸರ್ವ ಪಾಪಗಳಿಂದ ಬಿಡುಗಡೆ ಹೊಂದಿ, ದೀರ್ಘಾಯುಷ್ಮಂತನಾಗಿ ಸುಖವಾಗಿ ಇರಬಲ್ಲನು. ಧರ್ಮರಾಜ, ಕೇಳು. ಸಂಪತ್ತಿ, ಜ್ಞಾನ, ಆರೋಗ್ಯ, ತೇಜಸ್ಸು, ವರ್ಚಸ್ಸು, ಬಲ, ಧೈರ್ಯ, ಈ ರುದ್ರ ಜಪದಿಂದ ವೃದ್ಧಿಯಾಗುತ್ತದೆ. ಭಕ್ತಿಯಿಂದ ರುದ್ರ ತೀರ್ಥವನ್ನು ಶ್ರೀರುದ್ರದಿಂದ ಈಶ್ವರನಿಗೆ ಅಭಿಷೇಕ ಮಾಡಿ, ಆ ರುದ್ರ ತೀರ್ಥವನ್ನು ಸೇವಿಸಿದ ಮಾನವರು, ಸ್ನಾನ ಮಾಡಿದವರು ಪವಿತ್ರರಾಗಬಲ್ಲರು. ಅಂತಹವರಿಗೆ ಮೃತ್ಯು ಭಯವಿರುವುದಿಲ್ಲ. ಶ್ರೀರುದ್ರದಿಂದ ಅಭಿಮಂತ್ರಿಸಿದ ಜಲದಿಂದ ಸ್ನಾನ ಮಾಡಿದ ನರನು ಮೃತ್ಯು ಭೀತಿಯನ್ನು ಕಳೆದುಕೊಂಡು ಭವಸಾಗರವನ್ನು ದಾಟಬಲ್ಲನು. ಶತರುದ್ರೀಯದಿಂದ ಶಿವನಿಗೆ ಅಭಿಷೇಕ ಮಾಡಿದ ಮಾನವರು ಪಾಪ ನಿರ್ಮುಕ್ತರಾಗಿ ಶತಾಯುಷಿಗಳಾಗುತ್ತಾರೆ" ಎಂದು ಬ್ರಹ್ಮ ಮಾಡಿದ ಉಪದೇಶವನ್ನು ಕೇಳಿದ ಯಮನು ತನ್ನ ಸ್ವಸ್ಥಾನಕ್ಕೆ ಹಿಂತಿರುಗಿ, ತನ್ನವರಿಗೆಲ್ಲರಿಗೂ ಅದೇ ರೀತಿ ಆದೇಶವನ್ನು ಕೊಟ್ಟನು" ಎಂದು ಪರಾಶರ ಮಹರ್ಷಿ ರಾಜನಿಗೆ ಹೇಳಿದನು.

ಮತ್ತೆ, "ಹೇ ರಾಜ, ನಿನ್ನ ಮಗನ ಆಯು ವೃದ್ಧಿಗಾಗಿ ನಿನಗೆ ಉಪಾಯವನ್ನು ಹೇಳುತ್ತೇನೆ ಕೇಳು. ಶಿವನನ್ನು ರುದ್ರ ಸೂಕ್ತಗಳಿಂದ ಕ್ಷೀರ ಧಾರೆಗಳೊಡನೆ ಅಭಿಷೇಕ ಮಾಡು. ಅದರಿಂದ ನಿನ್ನ ಮಗ ನೂರು ಸಾವಿರ ವರ್ಷ ಜೀವಿಸುತ್ತಾನೆ. ದೇವ ಲೋಕದಲ್ಲಿನ ದೇವನಾಥನಂತೆ ಆತನು ರಾಜ್ಯವನ್ನಾಳುತ್ತಾ ಭೂಲೋಕದಲ್ಲಿರುತ್ತಾನೆ. ಕಾಮ ಕ್ರೋಧ ಲೋಭಗಳನ್ನು ವರ್ಜಿಸಿದ ಬ್ರಾಹ್ಮಣರನ್ನು ನೂರು ನೂರು ಸಂಖ್ಯೆಯಲ್ಲಿ ಕರೆಸಿ, ಅವರಿಂದ ಶಿವಾಭಿಷೇಕವನ್ನು ಯಥಾ ವಿಧಿಯಾಗಿ ಮಾಡಿಸು. ನೀನು ಕರೆಸುವ ವಿಪ್ರರು ವಿದ್ವಾಂಸರು, ಜ್ಞಾನತತ್ಪರರು, ಸ್ವಧರ್ಮಾಚರಣ ನಿರತರು ಆಗಿರಬೇಕು. ಹಾಗೆ ಮಾಡಿದರೆ ನಿನ್ನ ಮಗನಿಗೆ ತಕ್ಷಣವೇ ಆಯುವೃದ್ಧಿ-ಶ್ರೇಯಸ್ಸು ಉಂಟಾಗುತ್ತದೆ" ಎಂದು ಹೇಳಿದನು.

ಪರಾಶರ ಮಹರ್ಷಿಯ ಮಾತುಗಳನ್ನು ಆಲಿಸಿದ ರಾಜ, ಸಂತೋಷಗೊಂಡು, ಅಭಿಷೇಕಕ್ಕೆ ಬೇಕಾದ ಪದಾರ್ಥಗಳನ್ನೆಲ್ಲಾ ಕೂಡಿಸಿ, ಯಥೋಕ್ತವಾಗಿ ಸಾವಿರಾರು ಸಂಖ್ಯೆಯಲ್ಲಿ ಬ್ರಾಹ್ಮಣರನ್ನು ಕರೆಸಿ, ಪರಾಶರ ಮಹರ್ಷಿ ಆದೇಶಿಸಿದ್ದಂತೆ ಅಭಿಷೇಕವನ್ನು ಆರಂಭಿಸಿದನು. ನೂರಾರು ಕಲಶಗಳಲ್ಲಿ ಹಾಲು, ಕಬ್ಬಿನರಸ, ನೀರು ತುಂಬಿ, ಶಿವಾಭಿಷೇಕವನ್ನು ಯಥಾ ವಿಧಿಯಾಗಿ ಭಕ್ತಿ ಪೂರ್ವಕವಾಗಿ ಆರಂಭಿಸಿದನು. ಆ ತೀರ್ಥೋದಕದಿಂದ ಮಗನಿಗೆ ಸ್ನಾನ ಮಾಡಿಸಿದನು. ಹೀಗೆ ಏಳು ದಿನಗಳು ಆ ರಾಜ ಶಿವನನ್ನು ಆರಾಧಿಸಿದನು. ಏಳನೆಯ ದಿನದ ಕೊನೆಯಲ್ಲಿ ಆ ರಾಜಕುಮಾರನು ಮೂರ್ಛೆಗೊಂಡು ಒಂದು ಕ್ಷಣ ಭೂಮಿಯ ಮೇಲೆ ಬಿದ್ದನು. ತಕ್ಷಣವೇ ಪರಾಶರ ಮಹರ್ಷಿ ಅವನನ್ನು ರಕ್ಷಿಸಿದನು. ಅಷ್ಟರಲ್ಲಿ ಯಮದೂತರು ಅಲ್ಲಿಗೆ ಬಂದರು. ಅವರು ನೋಡುತ್ತಿರುವಂತೆಯೇ ರುದ್ರಜಪವನ್ನು ಮಾಡುತ್ತಿದ್ದ ಬ್ರಾಹ್ಮಣರು ಆ ರಾಜಕುಮಾರನಿಗೆ ಮಂತ್ರಾಕ್ಷತೆಗಳನ್ನು ಕೊಟ್ಟರು. ಅದರಿಂದ ಆ ಯಮಕಿಂಕರರು ಆ ರಾಜಕುಮಾರನ ಬಳಿಗೆ ಹೋಗಲಾರದೆ ದೂರವಾಗಿ ನಿಂತಿದ್ದರು. ಹಾಗೆ ದೂರ ನಿಂತೇ ಅವರು ಪಾಶಗಳನ್ನು ರಾಜಕುಮಾರನ ಮೇಲೆ ಬೀಸಿದರು. ಆ ಕ್ಷಣದಲ್ಲಿ ಶಿವದೂತರು ಆ ಯಮ ಭಟರನ್ನು ಹೊಡೆಯಲು ಬಂದು, ಅವರ ಹಿಂದೆ ಬಿದ್ದು ಅವರನ್ನು ಹೊರಗಟ್ಟಿದರು. ಹೀಗೆ ಆ ರಾಜಕುಮಾರ ವಿಪ್ರರಿಂದ ರಕ್ಷಣೆ ಪಡೆದನು. ರಾಜನು ಆನಂದ ಭರಿತನಾಗಿ ಮಹೋತ್ಸವವನ್ನು ಮಾಡಿಸಿದನು. ಪರಾಶರ ಮಹರ್ಷಿಯನ್ನು ಪೂಜೆ ಮಾಡಿ, ಬಂದಿದ್ದ ವಿಪ್ರರೆಲ್ಲರನ್ನೂ ಸಂತೋಷ ಗೊಳಿಸಿದನು. ಮಹಾಸಭೆಯೊಂದನ್ನು ನಡೆಸಿ, ಆ ಮಹಾರಾಜ, ಪರಾಶರ ಮಹರ್ಷಿಯನ್ನು ಸಿಂಹಾಸನದ ಮೇಲೆ ಕೂಡಿಸಿ, ಮಿಕ್ಕ ಬ್ರಾಹ್ಮಣರನ್ನು ಯಥಾ ಯೋಗ್ಯವಾಗಿ ಕೂಡಿಸಿ, ತಾನೂ ಮಹದಾನಂದ ಭರಿತನಾಗಿ ಮಹಾಸಭೆಯಲ್ಲಿ ಆಸೀನನಾದನು. ಆ ಸಮಯದಲ್ಲಿ ಆ ಮಹಾಸಭೆಗೆ ಬ್ರಹ್ಮಪುತ್ರನಾದ ನಾರದ ಮಹಾಮುನಿಯು ಬಂದನು. ನಾರದನನ್ನು ನೋಡುತ್ತಲೇ, ಹೋದ ಪ್ರಾಣ ಬಂದಂತವನಂತಾಗಿ, ಆ ರಾಜ ಅವನನ್ನು ಎದುರ್ಗೊಂಡು, ಕರೆತಂದು, ಪೂಜಿಸಿ, ಎರಡೂ ಕೈಗಳನ್ನು ಜೋಡಿಸಿ, ನಮಸ್ಕರಿಸಿದನು. ನಂತರ ನಾರದನನ್ನುದ್ದೇಶಿಸಿ, " ಹೇ ಮಹಾಮುನಿ, ನೀನು ನೋಡಿದ ಅಪೂರ್ವವಾದ ವಿಷಯವೇನು? ಎಂಬುದನ್ನು ತಿಳಿಸು" ಎಂದು ಕೇಳಿದನು.

ಅದಕ್ಕೆ ನಾರದನು ರಾಜನಿಗೆ, "ಹೇ ರಾಜ, ನಾನೀಗ ಕೈಲಾಸದಿಂದ ಬರುತ್ತಿದ್ದೇನೆ. ಮಾರ್ಗ ಮಧ್ಯದಲ್ಲಿ ನಾನೊಂದು ವಿಚಿತ್ರವನ್ನು ಕಂಡೆ. ಕೇಳು. ಮಹಾ ಮೃತ್ಯುವು ದೂತರೊಡನೆ ನಿನ್ನ ಕುಮಾರನನ್ನು ಅಪಹರಿಸಲು ಬಂದನು. ಆ ಕ್ಷಣದಲ್ಲೇ ಅಲ್ಲಿಗೆ ಬಂದ ಶಿವ ದೂತರಿಂದ ಆ ಮಹಾ ಮೃತ್ಯುವು ಪರಾಭವ ಹೊಂದಿದನು. ಹಾಗೆ ಪರಾಭವಗೊಂಡ ಯಮದೂತರು ಯಮನ ಬಳಿಗೆ ಹೋಗಿ ಅವನಲ್ಲಿ ಮೊರೆಯಿಟ್ಟುಕೊಂಡರು. ಕೋಪಗೊಂಡ ಯಮನು ವೀರಭದ್ರನ ಬಳಿಗೆ ಹೋಗಿ, "ನನ್ನ ಕಿಂಕರರನ್ನು ನಿನ್ನ ಸೇವಕರು ಏಕೆ ಹೊಡೆಯುತ್ತಿದ್ದಾರೆ? ಕರ್ಮಾನುಸಾರವಾಗಿ ಗತಾಯುಷ್ಯನಾದ ರಾಜಕುಮಾರನನ್ನು ತೆಗೆದುಕೊಂಡು ಬರಲು ಹೋದ ನನ್ನ ದೂತರನ್ನು ನಿನ್ನವರು ಹೊಡೆಯುವುದೇತಕ್ಕೆ? ಹೇಳು" ಎಂದು ಕೇಳಲು, ವೀರಭದ್ರನು ಕ್ರುದ್ಧನಾಗಿ, "ಯಮರಾಜ, ಕೇಳು. ಆ ರಾಜಕುಮಾರನ ಆಯುಸ್ಸು ಹತ್ತು ಸಾವಿರ ವರ್ಷಗಳೆಂದು ನಿಶ್ಚಿತವಾಗಿದೆ. ಚಿತ್ರಗುಪ್ತನನ್ನು ಕೇಳದೆಯೇ ನೀನು ನಿನ್ನ ದೂತರನ್ನು ಏಕೆ ಕಳುಹಿಸಿದೆ?" ಎಂದು ಕೇಳಿದನು. ಯಮನು ಚಿತ್ರಗುಪ್ತನನ್ನು ಕರೆಸಿ ಕೇಳಿದನು. ಚಿತ್ರಗುಪ್ತನು ತನ್ನಲ್ಲಿದ್ದ ಖಾತಾ ಪುಸ್ತಕವನ್ನು ತೆಗೆದು ನೋಡಿದನು. ಅದರಲ್ಲಿ ರಾಜಕುಮಾರನಿಗೆ ಹನ್ನೆರಡನೆಯ ವಯಸ್ಸಿನಲ್ಲಿ ಅಪಮೃತ್ಯುವಿರುವುದೇ ಅಲ್ಲದೆ, ಆ ಅಪಮೃತ್ಯುವು ಕಳೆದು ಅವನು ಹತ್ತುಸಾವಿರ ವರ್ಷಗಳು ಜೀವಿಸಿರುತ್ತಾನೆ ಎಂದಿತ್ತು. ಅದನ್ನು ನೋಡಿದ ಯಮನು ನಾಚಿ, "ಅಪ್ಪಾ ವೀರಭದ್ರ, ನನ್ನ ತಪ್ಪನ್ನು ಕ್ಷಮಿಸು" ಎಂದು ಹೇಳಿ, ತನ್ನ ಲೋಕಕ್ಕೆ ಹಿಂತಿರುಗಿದನು. ಈ ವಿಚಿತ್ರವನ್ನು ನಾನು ಮಾರ್ಗ ಮಧ್ಯದಲ್ಲಿ ನೋಡಿದೆ. ಮಹಾರಾಜ, ಶ್ರೀ ರುದ್ರಾನುಷ್ಠಾನದಿಂದ ದೊರೆತ ಪುಣ್ಯದಿಂದ ನಿನ್ನ ಮಗನ ಆಯುಸ್ಸು ವೃದ್ಧಿಗೊಂಡಿತು. ಪರಾಶ ಮಹರ್ಷಿ ಮೃತ್ಯು ದೇವತೆಯನ್ನು ಜಯಿಸಿದನು" ಎಂದು ಹೇಳಿ ರಾಜನಿಂದ ಬೀಳ್ಕೊಂಡು ನಾರದ ಮುನಿಯು ಸ್ವರ್ಗಲೋಕಕ್ಕೆ ಹೊರಟು ಹೋದನು. ಪರಾಶರ ಮಹರ್ಷಿಯೂ ತನ್ನ ಆಶ್ರಮಕ್ಕೆ ಹಿಂತಿರುಗಿದನು. ಆ ರಾಜಪುತ್ರ ನಿಷ್ಕಂಟಕವಾಗಿ ಹತ್ತುಸಾವಿರ ವರ್ಷಗಳು ರಾಜ್ಯವನ್ನು ಪರಿಪಾಲಿಸಿದನು. ರುದ್ರ ಮಹಿಮೆ ಅಂತಹುದು. ಎಂದು ಶ್ರೀಗುರುವು ಆ ದಂಪತಿಗಳಿಗೆ ರುದ್ರಾಧ್ಯಾಯ ಮಹಿಮೆಯನ್ನು ವಿಸ್ತಾರವಾಗಿ ತಿಳಿಸಿದರು. ಹೇ ನಾಮಧಾರಕ, ರುದ್ರಾಧ್ಯಾಯಕ್ಕೆ ಅಂತಹ ಮಾಹಾತ್ಮ್ಯೆಯಿದೆ. ಆದ್ದರಿಂದಲೇ ಶ್ರೀಗುರುವು ರುದ್ರಾಧ್ಯಾಯವನ್ನು ಬಹುವಾಗಿ ಪ್ರೀತಿಸುತ್ತಾರೆ. ಆದ್ದರಿಂದ ನೀನೂ ಸದಾ ರುದ್ರಾಧ್ಯಾಯದಿಂದ ಶ್ರೀಗುರುವನ್ನು ಪೂಜಿಸಬೇಕು" ಎಂದು ನಾಮಧಾರಕನಿಗೆ ಸಿದ್ಧಮುನಿ ಹೇಳಿದರು. 

ಇಲ್ಲಿಗೆ ಮುವ್ವತ್ತ ನಾಲ್ಕನೆಯ ಅಧ್ಯಾಯ ಮುಗಿಯಿತು.   

No comments:

Post a Comment