Monday, May 6, 2013

||ಶ್ರೀಗುರುಚರಿತ್ರೆ - ಮುವ್ವತ್ತೈದನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
 ||ಶ್ರೀಗುರುಭ್ಯೋನಮಃ||

ನಾಮಧಾರಕ ವಿನಯದಿಂದ ಸಿದ್ಧಮುನಿಯನ್ನು ಕೇಳಿದನು. "ಶ್ರೀಗುರುವು ಹಿಂದೆ ಯುವ ದಂಪತಿಗಳಿಗೆ ಹೇಳಿದ ರುದ್ರಾಧ್ಯಾಯವನ್ನು ತಿಳಿಸಿದರಲ್ಲವೇ? ಆ ನಂತರದ ಕಥೆಯನ್ನು ಹೇಳಬೇಕೆಂದು ಕೋರುತ್ತೇನೆ" ಅದಕ್ಕೆ ಸಿದ್ಧಮುನಿ ಹೇಳಿದರು.

"ಅಯ್ಯಾ, ನಾಮಧಾರಕ, ಕೇಳು. ಆ ಪತಿವ್ರತಾ ಯುವತಿ ಶ್ರೀಗುರುವಿನ ಮುಂದೆ ಕೈಜೋಡಿಸಿ ನಿಂತು, "ಗುರುದೇವ ಮುಂದೆ ನಮ್ಮ ಗತಿ ಏನು? ಇನ್ನು ಮುಂದೆ ನಾವು ಹೇಗಿರಬೇಕು? ಹೇ ಭಗವಾನ್, ನನಗೊಂದು ಮಂತ್ರವನ್ನು ಉಪದೇಶ ಮಾಡಿ. ಅದರೊಡನೆ ನಿಮ್ಮ ಈ ಸನಾತನವಾದ ಚರಣಗಳನ್ನು ಸ್ಮರಿಸಿಕೊಂಡಿರುತ್ತೇನೆ" ಎಂದು ಕೋರಿದಳು. ಅದಕ್ಕೆ ಶ್ರೀಗುರುವು, "ಸ್ತ್ರೀಯರಿಗೆ ಪತಿ ಸೇವೆಯೊಂದೇ ಸಾಧನವು. ಮಂತ್ರೋಪದೇಶ ಮಾಡಿದರೆ ಸ್ತ್ರೀಯರಿಗೆ ಹಾನಿಯೇ! ಮಂತ್ರ ದಾತನಿಗೂ, ಆ ಮಂತ್ರದ ಮಹಿಮೆಗೂ ಕೂಡ ಹಾನಿಯುಂಟಾಗುತ್ತದೆ. ಅಮ್ಮ, ಪತಿವ್ರತೆ, ಪೂರ್ವದಲ್ಲಿ ಶುಕ್ರಾಚಾರ್ಯನಿಗೆ ಹಾಗಾಯಿತು" ಎಂದು ಹೇಳಿದರು. ಅದಕ್ಕೆ ಅವಳು, "ಸ್ವಾಮಿ, ಸ್ತ್ರೀಯರಿಗೆ ಏಕೆ ಮಂತ್ರೋಪದೇಶ ಮಾಡಬಾರದು? ಶುಕ್ರನಿಗೆ ಏನಾಯಿತು?" ಎಂದು ಶ್ರೀಗುರು ಚರಣಗಳನ್ನು ಹಿಡಿದು ಕೇಳಿದಳು.

ಅದಕ್ಕೆ ಶ್ರೀಗುರುವು ಹೇಳಿದರು, "ಅಮ್ಮ, ಹಿಂದೆ ನಡೆದ ಕಥೆಯನ್ನು ಕೇಳು. ಒಮ್ಮೆ ಸುರಾಸುರರಿಗೆ ಯುದ್ಧ ಸಂಭವಿಸಿತು. ಸುರರು ಅಸುರ ಸೇನೆಯನ್ನು ಸಂಹರಿಸುತ್ತಾ ಹೋದರು. ಆದರೆ ಶುಕ್ರಾಚಾರ್ಯನು ಹಾಗೆ ಸತ್ತ ದೈತ್ಯ ಸೈನಿಕರನ್ನು ಮಂತ್ರ ಪ್ರಭಾವದಿಂದ ಪುನರ್ಜೀವಿತರನ್ನಾಗಿ ಮಾಡಿ ಮತ್ತೆ ಮತ್ತೆ ರಣಭೂಮಿಗೆ ಕಳುಹಿಸುತ್ತಿದ್ದನು. ಹಾಗೆ ನಡೆಯುತ್ತಿದ್ದುದರಿಂದ ದೇವೇಂದ್ರನು ಅಸಹಾಯನಾಗಿ ಕೈಲಾಸಕ್ಕೆ ಹೋಗಿ ಪರಮೇಶ್ವರನಿಗೆ ಶುಕ್ರ ಮಂತ್ರ ಪ್ರಭಾವವನ್ನು ವಿವರಿಸಿದನು. ಈಶ್ವರನು ಕೋಪಗೊಂಡು ನಂದಿಯನ್ನು ಕರೆದು, "ನೀನು ಈಗಲೇ ಹೋಗಿ, ಶುಕ್ರನನ್ನು ಹಿಡಿದುಕೊಂಡು ಬಾ" ಎಂದು ಆಜ್ಞಾಪಿಸಿದನು. ತನ್ನ ಸ್ವಾಮಿಯ ಆಜ್ಞೆಯನ್ನು ಕೇಳಿದ ನಂದಿ, ತಕ್ಷಣವೇ ಹೋಗಿ ಧ್ಯಾನಸ್ಥನಾಗಿದ್ದ ಶುಕ್ರಾಚಾರ್ಯನನ್ನು ಹಿಡಿದು ಶಿವನ ಬಳಿಗೆ ಕರೆತಂದನು. ಅಸುರ ಗಣದಲ್ಲಿ ಕೋಲಾಹಲ ವುಂಟಾಯಿತು. ಅಗಸ್ತ್ಯನು ಸಮುದ್ರವನ್ನು ನುಂಗಿದಂತೆ ಪರಮಶಿವನು ಶುಕ್ರಾಚಾರ್ಯನನ್ನು ನುಂಗಿಬಿಟ್ಟನು. ಕೆಲವು ಕಾಲ ಶುಕ್ರನು ಶಿವನ ಜಠರದಲ್ಲೇ ಇದ್ದನು. ಒಂದು ಸಲ ಶಿವನು ಅನ್ಯಮನಸ್ಕನಾಗಿದ್ದಾಗ ಶುಕ್ರನು ಶಿವನ ಮೂತ್ರ ದ್ವಾರದಿಂದ ಹೊರ ಬಿದ್ದನು. ಹಿಂದೆ ಅವನಿಗೆ ಭಾರ್ಗವನೆಂಬ ಹೆಸರಿದ್ದರೂ ಶಿವನ ಶುಕ್ರ ಸಂಪರ್ಕದಿಂದ ಅವನಿಗೆ ಶುಕ್ರನೆಂದೇ ಹೆಸರಾಯಿತು. ಹಾಗೆ ಈಚೆಗೆ ಬಂದ ಶುಕ್ರನು ಮತ್ತೆ ಅಸುರರನ್ನು ಮಂತ್ರದಿಂದ ಪುನರ್ಜೀವಿತರಾಗುವಂತೆ ಮಾಡುತ್ತಿದ್ದನು. ಆಗ ದೇವೇಂದ್ರನು ಪುರೋಹಿತನಾದ ಬೃಹಸ್ಪತಿಯನ್ನು ಕರೆಸಿ, "ಹೇ ಬೃಹಸ್ಪತಿ, ನೀನು ನಮ್ಮ ಪುರೋಹಿತನು. ನೀನು ನಿನ್ನ ಬುದ್ಧಿಯಿಂದ ಯೋಚಿಸಿ ಆ ಶುಕ್ರನ ಕಾರ್ಯಕ್ಕೆ ವಿಘ್ನವನ್ನು ಉಂಟು ಮಾಡು. ಆ ಶುಕ್ರನಿಗಿಂತಲೂ ನೀನು ಬುದ್ಧಿ ವಿವೇಕಗಳಲ್ಲಿ ಅಧಿಕನು. ರಾಕ್ಷಸರ ಭಾಗ್ಯವನ್ನು ನೋಡು. ಅವರಿಗೆ ಶುಕ್ರನು ಹಿತಕರವಾದ ಗುರುವಾಗಿದ್ದಾನೆ. ಸತ್ತವರೂ ಮತ್ತೆ (ಹುಟ್ಟಿ) ನಮ್ಮ ಮೇಲೆ ಯುದ್ಧಕ್ಕೆ ಬರುತ್ತಿದ್ದಾರೆ. ನೀನು ನಮ್ಮನ್ನೇಕೆ ಉಪೇಕ್ಷಿಸುತ್ತಿದ್ದೀಯೆ? ತ್ವರೆಯಾಗಿ ಏನಾದರೂ ಉಪಾಯ ಮಾಡು. ದೇವತೆಗಳಿಗೆಲ್ಲ ನೀನು ಪೂಜ್ಯನು. ನೀನು ದಯೆ ತೋರಿ ಯಾವುದಾದರೂ ಉಪಾಯವನ್ನು ಕಲ್ಪಿಸು" ಎಂದು ಬೃಹಸ್ಪತಿಯನ್ನು ಪ್ರಶಂಸೆ ಮಾಡಿ, ಉಪಚಾರಾದಿಗಳಿಂದ ಸಂತೋಷಗೊಳಿಸಿದನು. ಬೃಹಸ್ಪತಿಯು ಕರುಣೆಯಿಂದ ದೇವೇಂದ್ರನಿಗೆ, "ವಜ್ರಪಾಣಿ, ಮಂತ್ರವು ಆರು ಕಿವಿಗಳಲ್ಲಿ ಪ್ರವೇಶಿಸಿದರೆ (ಬಿದ್ದರೆ) ಅದರ ಸಾಮರ್ಥ್ಯವು ನಾಶವಾಗುವುದು. ಶುಕ್ರನ ಬಳಿಗೆ ಯಾರಾದರೂ ಒಬ್ಬ ಧೂರ್ತನನ್ನು ಕಳುಹಿಸ ಬೇಕು. ಅವನು ವಿದ್ಯಾರ್ಥಿ ರೂಪದಿಂದ ಶುಕ್ರನನ್ನು ಸೇರಿ ಮಂತ್ರಕ್ಕೆ ವಿಘ್ನವನ್ನುಂಟು ಮಾಡಬೇಕು. ವಿದ್ಯಾರ್ಥಿಯಾಗಿ ನನ್ನ ಮಗ ಕಚನನ್ನು ಕಳುಹಿಸುತ್ತೇನೆ. ಅವನು ಆ ಮಂತ್ರವನ್ನು ಪಡೆಯುತ್ತಾನೆ" ಎಂದು ಹೇಳಿ, ಕಚನನ್ನು ಕರೆದು ಅವನಿಗೆ, "ನೀನು ವಿದ್ಯಾರ್ಥಿ ರೂಪದಲ್ಲಿ ಶುಕ್ರನ ಬಳಿಗೆ ಹೋಗು. ಅಲ್ಲಿ ನಮ್ಮನ್ನು ನಿಂದಿಸಿಯಾದರೂ ಅವನನ್ನು ಸೇವಿಸುತ್ತಾ ಸಂಜೀವನಿ ವಿದ್ಯೆಯನ್ನು ಸಾಧಿಸಿಕೊಂಡು ಬಾ" ಎಂದು ಆದೇಶಕೊಟ್ಟನು. ಇಂದ್ರಾದಿಗಳ ಅನುಮತಿಯನ್ನು ಪಡೆದು ಕಚನು ಶುಕ್ರಾಚಾರ್ಯನನ್ನು ಸೇರಿ ಕೊಂಡನು.

ಕಚನು ಶುಕ್ರಾಚಾರ್ಯನಿಗೆ ನಮಸ್ಕರಿಸಿ, "ನಾನೊಬ್ಬ ಬ್ರಾಹ್ಮಣನ ಮಗ. ನಿಮ್ಮ ಅಪಾರವಾದ ಕೀರ್ತಿಯನ್ನು ಕೇಳಿದ್ದೇನೆ. ನಿಮ್ಮಲ್ಲಿ ವಿದ್ಯಾರ್ಥಿಯಾಗಿದ್ದು ಕೊಂಡು ನಿಮ್ಮ ಸೇವೆ ಮಾಡಿಕೊಂಡಿರಬೇಕೆಂದು ಬಂದಿದ್ದೇನೆ. ಭಕ್ತ ಚಿಂತಾಮಣಿಯಾದ ನೀವು ಅನಾಥ ಪರಿಪಾಲಕರು" ಎಂದು ಕರುಣೆ ಹುಟ್ಟುವಂತೆ ಮಾತನಾಡುತ್ತಾ ವಿನಯ ವಿಧೇಯತೆಗಳಿಂದ ಕೋರಿಕೊಂಡನು. ಅಲ್ಲಿಯೇ ಇದ್ದ ಶುಕ್ರನ ಮಗಳು, ದೇವಯಾನಿ, ತನ್ನ ತಂದೆಗೆ, "ಇವನು ಬ್ರಾಹ್ಮಣನಾಗಿಯೇ ಕಾಣಿಸುತ್ತಿದ್ದಾನೆ. ತಂದೆ ಇವನನ್ನು ಶಿಷ್ಯನನ್ನಾಗಿ ಸ್ವೀಕರಿಸು" ಎಂದು ಹೇಳಿದಳು. ತನ್ನಲ್ಲಿ ತಾನು ಅವಳು, "ಈ ಕಚನು ಅಂದವಾಗಿದ್ದಾನೆ. ನನ್ನ ಗಂಡನಾದರೆ ಚೆನ್ನಾಗಿರುತ್ತದೆ" ಎಂದು ಯೋಚಿಸಿದಳು. ಅಂತಹ ಯೋಚನೆ ಬಂದ ಕೂಡಲೇ ಅವಳು ತನ್ನ ತಂದೆಯನ್ನು ಮತ್ತೊಮ್ಮೆ ಪ್ರಾರ್ಥಿಸಿದಳು. ಮಗಳ ಮೇಲಿನ ವಾತ್ಸಲ್ಯದಿಂದ ಶುಕ್ರಾಚಾರ್ಯನು ಕಚನನ್ನು ಶಿಷ್ಯನನ್ನಾಗಿ ಸ್ವೀಕರಿಸಿದನು.

ವಿದ್ಯಾಭ್ಯಾಸ ನಿರತನಾದ ಕಚನನ್ನು ರಾಕ್ಷಸರು ಧೂರ್ತನೆಂದು ತಿಳಿದು, "ಇವನು ದೇವತೆಗಳ ಪಕ್ಷಕ್ಕೆ ಸೇರಿದವನು. ಕಪಟದಿಂದ ವಿದ್ಯೆಯನ್ನು ಕಲಿತು ಅದನ್ನು ದೇವತೆಗಳಿಗೆ ಹೇಳುತ್ತಾನೆ. ಅದರಿಂದ ನಮಗೆ ಕೇಡುಂಟಾಗುತ್ತದೆ" ಎಂದು ಯೋಚಿಸಿದರು. ಒಂದುದಿನ ಕಚನು ಸಮಿತ್ತುಗಳನ್ನು ತರಲು ಕಾಡಿಗೆ ಹೋದನು. ದುಷ್ಟ ಬುದ್ಧಿಯಿಂದ ದೈತ್ಯರೂ ಅವನೊಡನೆ ಕಾಡಿಗೆ ಹೋಗಿ, ಅಲ್ಲಿ ಅವನನ್ನು ಕೊಂದು, ಸಮಿತ್ತುಗಳನ್ನು ತೆಗೆದು ಕೊಂಡು ಮನೆಗೆ ಹಿಂತಿರುಗಿದರು. ಕಚನು ಹಿಂತಿರುಗಿ ಬರಲಿಲ್ಲವೆಂಬುದನ್ನು ಕಂಡ ದೇವಯಾನಿ, ತನ್ನ ತಂದೆಗೆ, "ಇನ್ನೂ ನಿನ್ನ ಪ್ರಿಯ ಶಿಷ್ಯ ಮನೆಗೆ ಹಿಂತಿರುಗಲಿಲ್ಲ. ಅವನು ಬರುವವರೆಗೂ ನಾನು ಊಟಮಾಡುವುದಿಲ್ಲ" ಎಂದು ಹೇಳಿದಳು. ಅವಳ ಮಾತನ್ನು ಕೇಳಿದ ಭಾರ್ಗವನು ಚಿಂತೆಗೊಂಡು ಧ್ಯಾನ ಮಗ್ನನಾಗಿ ಕಚನು ಕಾಡಿನಲ್ಲಿ ಮೃತನಾಗಿದ್ದಾನೆಂದು ತಿಳಿದು ಕೊಂಡು, ಸಂಜೀವನಿ ಮಂತ್ರದಿಂದ ಅವನನ್ನು ಬದುಕಿಸಿ ಮನೆಗೆ ತಂದನು. ಸ್ವಲ್ಪಕಾಲವಾದ ಮೇಲೆ ಮತ್ತೆ ಆ ದುಷ್ಟಬುದ್ಧಿ ರಾಕ್ಷಸರು ಕಚನನ್ನು ಕೊಂದು, ಶುಕ್ರಾಚಾರ್ಯನು ಅವನನ್ನು ಮತ್ತೆ ಬದುಕಿಸುತ್ತಾನೆಂಬ ಭಯದಿಂದ ಅವನ ಶವವನ್ನು ಚೂರ್ಣ ಮಾಡಿ ಹತ್ತು ದಿಕ್ಕುಗಳಲ್ಲೂ ಚೆಲ್ಲಿ ತಮ್ಮ ತಮ್ಮ ಮನೆಗಳಿಗೆ ಹೊರಟು ಹೋದರು. ಸೂರ್ಯಾಸ್ತವಾದರೂ ಕಚನು ಮನೆಗೆ ಬರದಿದ್ದುದರಿಂದ ದೇವಯಾನಿ ಮತ್ತೆ ತಂದೆಗೆ, "ತಂದೆ, ನನ್ನ ಪ್ರಿಯನು ಇನ್ನೂ ಏಕೆ ಮನೆಗೆ ಬರಲಿಲ್ಲ? ಕಚನು ನನ್ನ ಪ್ರಾಣ ಸಖ. ಅವನು ಬರದಿದ್ದರೆ ನಾನು ವಿಷ ಕುಡಿಯುತ್ತೇನೆ. ಆದ್ದರಿಂದ ತಂದೆ ಕಚ ಮನೆಗೆ ಬರುವಂತೆ ಮಾಡು" ಎಂದು ಹೇಳಿದಳು. ಅವಳ ಮೇಲಿನ ವಾತ್ಸಲ್ಯದಿಂದ ಶುಕ್ರನು ಮತ್ತೆ ಧ್ಯಾನಸ್ಥನಾಗಿ, ಕಚನು ಮೃತನಾಗಿ ಚೂರ್ಣ ರೂಪದಲ್ಲಿ ಭಿನ್ನಾವಯವಗಳಿಂದ ಕೂಡಿ ಬಿದ್ದಿರುವುದನ್ನು ತಿಳಿದು, ಮತ್ತೊಮ್ಮೆ ಮಂತ್ರ ಜಪದಿಂದ ಅವನನ್ನು ಬದುಕಿಸಿ ಮನೆಗೆ ಬರುವಂತೆ ಮಾಡಿದನು. ದೇವಯಾನಿ ಸಂತೋಷಗೊಂಡಳು.

ರಾಕ್ಷಸರು ಮತ್ತೆ ತಮ್ಮಲ್ಲೇ ವಿಚಾರ ಮಡುತ್ತಾ ಶುಕ್ರನು ಮಗಳ ಮೇಲಿನ ಪ್ರೀತಿಯಿಂದ ಕಚನನ್ನು ಮತ್ತೆ ಮತ್ತೆ ಬದುಕಿಸುತ್ತಿದ್ದಾನೆ. ನಾವು ಇದಕ್ಕೆ ತಕ್ಕ ಉಪಾಯ ಮಾಡಬೇಕು. ಕಚನನ್ನು ಕೊಂದು ಅವನನ್ನು ಸುಟ್ಟು ಬೂದಿ ಮಾಡಿ ಆ ಬೂದಿಯನ್ನು ಪಾನೀಯಗಳಲ್ಲಿ ಕಲಸಿ ಶುಕ್ರನು ಕುಡಿಯುವಂತೆ ಮಾಡ ಬೇಕು" ಎಂದು ನಿರ್ಧರಿಸಿಕೊಂಡು, ಮಾರನೆಯ ದಿನ, ಏಕಾದಶಿ ತಿಥಿಯಂದು, ಕಚನನ್ನು ಕೊಂದು, ಅವನ ಶರೀರವನ್ನು ಸುಟ್ಟು, ಅ ಬೂದಿಯನ್ನು ಪಾನೀಯದಲ್ಲಿ ಕಲಸಿ, ಅದು ಶುದ್ಧ ಪಾನೀಯವೆಂದು ಶುಕ್ರನನ್ನು ನಂಬಿಸಿ, ಅವನಿಗೆ ಕೊಟ್ಟರು. ಅದನ್ನು ಶುಕ್ರನು ಕುಡಿದು ಬಿಟ್ಟನು. ದೇವಯಾನಿಯು ಕಚನನ್ನು ಕಾಣದೆ, ಮತ್ತೆ ತಂದೆಗೆ, "ತಂದೆ, ನನ್ನ ಮಿತ್ರನು ಎಲ್ಲಿದ್ದಾನೆ?" ಎಂದು ಅಳುತ್ತಾ ಕೇಳಿದಳು. ಶುಕ್ರನು ಮತ್ತೆ ಧ್ಯಾನಸ್ಥನಾಗಿ, ತನ್ನ ದಿವ್ಯ ದೃಷ್ಟಿಯಿಂದ ನೋಡಲು, ಕಚನು ಎಲ್ಲಿಯೂ ಕಾಣಲಿಲ್ಲ. ದೇವಯಾನಿ ಬಹು ದುಃಖಿತಳಾದಳು. ಅವಳ ದುಃಖವನ್ನು ಕಂಡು ಶುಕ್ರನೂ ದುಃಖಿತನಾದನು. ಮತ್ತೊಮ್ಮೆ ಶುಕ್ರನು ತನ್ನ ದಿವ್ಯ ದೃಷ್ಟಿಯನ್ನು ಪ್ರಸರಿಸಿ, ತನ್ನ ಹೊಟ್ಟೆಯಲ್ಲಿಯೇ ಇದ್ದ ಕಚನನ್ನು ಕಂಡನು. ತನ್ನ ಮಗಳಿಗೆ, "ಅಮ್ಮ ದೇವಯಾನಿ, ಕಚನು ನನ್ನ ಹೊಟ್ಟೆಯಲ್ಲಿದ್ದಾನೆ. ಈ ರಾಕ್ಷಸರು ಅವನನ್ನು ನನ್ನ ಹೊಟ್ಟೆಯೊಳಕ್ಕೆ ಸೇರಿಸಿ ಬಿಟ್ಟಿದ್ದಾರೆ. ಅವನನ್ನು ನನ್ನ ಹೊಟ್ಟೆಯಿಂದ ಹೇಗೆ ಹೊರಕ್ಕೆ ತರಬೇಕು? ಅವನು ಹೊರಗೆ ಬರಬೇಕೆಂದರೆ ನಾನು ಸಾಯ ಬೇಕು. ಹೇ ಕಲ್ಯಾಣಿ, ಅದರಿಂದ ನಿನಗೇನು ಪ್ರಯೋಜನ ಹೇಳು?" ಎಂದನು. ಅದನ್ನು ಕೇಳಿದ ದೇವಯಾನಿ, "ಅವನೇ ನನ್ನ ಗಂಡನಾಗಬೇಕೆಂದು ನನ್ನ ಸಂಕಲ್ಪ. ತಂದೆ, ನೀನು ಅವನನ್ನು ಬದುಕಿಸದಿದ್ದರೆ ನಾನಿ ನಿಮ್ಮೆದುರಿಗೇ ಪ್ರಾಣ ಬಿಡುತ್ತೇನೆ" ಎಂದು ಹೇಳಿದಳು. ಅವಳ ಮಾತಿನಿಂದ ಸಂದಿಗ್ಧದಲ್ಲಿ ಬಿದ್ದ ಶುಕ್ರನು ಮತ್ತೆ ಮಗಳಿಗೆ, "ಅಮ್ಮ, ಅವನನ್ನು ಈಚೆಗೆ ಬರುವಂತೆ ಮಾಡಿದರೆ ನಿನ್ನ ತಂದೆಯಾದ ನಾನು ಸಾಯುವುದು ಖಂಡಿತ" ಎಂದು ಹೇಳಿದನು. ಅದಕ್ಕೆ ದೇವಯಾನಿ, "ತಂದೆ, ಎಲ್ಲರನ್ನೂ ನೀನೇ ಬದುಕಿಸುತ್ತೀಯಲ್ಲವೇ? ಹಾಗಿರುವಾಗ ನಿನ್ನ ಪ್ರಾಣ ಹೇಗೆ ಹೋಗುವುದು ಎಂಬುದು ನನಗೆ ವಿಚಿತ್ರವಾಗಿ ತೋರುತ್ತಿದೆ" ಎಂದಳು. ಅದಕ್ಕೆ ಶುಕ್ರನು, "ಮಗಳೇ, ಕಚನು ನನ್ನ ಹೊಟ್ಟೆಯನ್ನು ಸೀಳಿ ಕೊಂಡು ಬಂದಮೇಲೆ ನನ್ನನ್ನು ಬದುಕಿಸುವವರು ಯಾರು? ಈ ಮಂತ್ರವನ್ನು ಇನ್ನಾರಿಗೂ ಹೇಳಬಾರದು. ಅದು ಆರು ಕಿವಿಗಳಲ್ಲಿ ಬಿದ್ದ ಕೂಡಲೇ ನಿಸ್ಸಾರವಾಗಿ ಹೋಗುತ್ತದೆ. ಕಚನಿಂದ ನನ್ನ ಮರಣ ಸಂಭವಿಸುತ್ತದೆ" ಎಂದನು. ಅದಕ್ಕೆ ಅವಳು, "ತಂದೆ, ಆ ಮಂತ್ರವನ್ನು ನೀನು ನನಗೆ ಉಪದೇಶಿಸು. ನಂತರ ಕಚನನ್ನು ಬದುಕಿಸು. ನೀನು ಮರಣಿಸಿದರೆ ನಾನು ನಿನ್ನನ್ನು ಬದುಕಿಸುತ್ತೇನೆ" ಎಂದು ತಂದೆಯ ಪಾದಗಳನ್ನು ಹಿಡಿದು ಪ್ರಾರ್ಥಿಸಿದಳು.

ಶುಕ್ರನು, "ಅಮ್ಮ, ಸ್ತ್ರೀಯರಿಗೆ ಮಂತ್ರೋಪದೇಶ ಮಾಡಬಾರದು. ಹಾಗೆ ಸ್ತ್ರೀಯರಿಗೆ ಮಂತ್ರ ದಾನ ಮಾಡಿದರೆ ಮಂತ್ರ ದಾತನಿಗೆ ಮಂತ್ರಶಕ್ತಿ ನಾಶವಾಗುವುದು" ಎಂದು ಶುಕ್ರನು ಮಗಳಿಗೆ ವಿವರಿಸಿದನು. ದೇವಯಾನಿ ಅದನ್ನು ಕೇಳಿ, "ಹಾಗಾದರೆ ನಾನು ಪ್ರಾಣ ಬಿಡುತ್ತೇನೆ" ಎಂದು ಹೇಳುತ್ತಾ ಮೂರ್ಛಿತಳಾಗಿ ಬಿದ್ದು ಹೋದಳು. ಶುಕ್ರನು ಪುತ್ರಿಕಾ ವಾತ್ಸಲ್ಯದಿಂದ, ಅವಳನ್ನೆಬ್ಬಿಸಿ, ಓದಾರಿಸಿ, ಅವಳಿಗೆ ಮಂತ್ರದಾನ ಮಾಡಿದನು. ದೈವ ವಶದಿಂದಾಗಿ ಶುಕ್ರನ ಹೊಟ್ಟೆಯಲ್ಲಿದ್ದ ಕಚನೂ ಕೂಡಾ ಪುನರ್ಜೀವಿತನಾಗಿ, ಆ ಮಂತ್ರವನ್ನು ಕೇಳಿದನು. ಹಾಗೆ ಆ ಸಂಜೀವನಿ ಮಂತ್ರ ಆರು ಕಿವಿಗಳಲ್ಲಿ ಬಿತ್ತು. ಹೀಗೆ ಕಚ ದೇವಯಾನಿಗಳಿಗೆ, ಶುಕ್ರನಿಗೆ ತಿಳಿಯದಂತೆಯೇ, ಮಂತ್ರವು ತಿಳಿದು, ಮುವ್ವರು -ಆರುಕಿವಿಗಳು- ಮಂತ್ರವನ್ನು ಕೇಳಿದಂತಾಯಿತು. ಅಂದರೆ ಆ ಮಂತ್ರವು ಷಟ್ಕರ್ಣವಾಯಿತು. ಶುಕ್ರನ ಹೊಟ್ಟೆಯನ್ನು ಸೀಳಿ ಕೊಂಡು ಕಚನು ಹೊರ ಬಿದ್ದನು. ಶುಕ್ರನು ಮರಣಿಸಿದನು. ದೇವಯಾನಿ ಮಂತ್ರ ಜಪದಿಂದ ಶುಕ್ರನನ್ನು ಬದುಕಿಸಿದಳು. ಮೇಧಾವಿಯಾದ ಆ ಕಚನು, ಮಂತ್ರವನ್ನು ಮೂರು ಸಲ ಕೇಳಿದ್ದರಿಂದ, ಅದನ್ನು ಅವನು ಧಾರಣ ಮಾಡಿದನು. ಬಂದ ಕಾರ್ಯ ಸಿದ್ಧಿಸಿತು ಎಂದು ಕಚನು ಸಂತೋಷ ಗೊಂಡನು. ನಂತರ ಕಚನು ಶುಕ್ರನಿಗೆ ಪ್ರಣಾಮ ಮಾಡಿ, ಕೈಜೋಡಿಸಿ ನಿಂತು, "ಗುರುದೇವ, ಅಸುರರು ದ್ವೇಷದಿಂದ ನನ್ನನ್ನು ಸಂಹರಿಸುತ್ತಿದ್ದಾರೆ. ಅದರಿಂದ ನನಗೆ ಅನುಮತಿ ಕೊಡಿ. ನಿಮ್ಮ ಅನುಗ್ರಹದಿಂದ ನನಗೆ ವಿದ್ಯೆ ಲಭ್ಯವಾಯಿತು" ಎಂದು ಅವರ ಚರಣಗಳನ್ನು ಹಿಡಿದನು. ಶುಕ್ರನು, ಅವನ ಮಾತುಗಳಿಗೆ ಸಂತುಷ್ಟನಾಗಿ, ಅವನಿಗೆ ಹೊರಡಲು ಅನುಮತಿ ಕೊಟ್ಟನು. ದೇವಯಾನಿ, ತನ್ನ ಗಂಡನಾಗುವಂತೆ ಕಚನನ್ನು ಕೋರಿದಳು. "ನಿನ್ನನ್ನು ಮೂರುಸಲ ರಾಕ್ಷಸರು ಸಾಯಿಸಿದರು. ನಾನು ನಿನ್ನ ಪ್ರಾಣ ಕಾಪಾಡಿದೆ. ನನ್ನ ತಂದೆಯಿಂದ ನಿನಗೆ ವಿದ್ಯೆಯನ್ನು ಕೊಡಿಸಿದೆ. ಆದ್ದರಿಂದ ನೀನು ತಪ್ಪದೇ ನನ್ನನ್ನು ಮದುವೆ ಮಾಡಿಕೊಳ್ಳಬೇಕು" ಎಂದು ಅವನನ್ನು ಪ್ರಾರ್ಥಿಸಿದಳು. ಅದಕ್ಕೆ ಕಚನು, "ಹೇ ಬಾಲೆ, ನೀನು ನನ್ನ ಗುರುಪುತ್ರಿ. ಆದ್ದರಿಂದ ನನಗೆ ಸಹೋದರಿ. ನನ್ನ ಪ್ರಾಣಗಳನ್ನು ರಕ್ಷಿಸಿದೆ. ಆದ್ದರಿಂದ ತಾಯಿಯಾದೆ. ಹೇ ಸುವ್ರತೆ, ಹಾಗೆ ನೀನು ನನಗೆ ತಾಯಿಯೂ, ಸೋದರಿಯೂ ಆದೆ. ಆದ್ದರಿಂದ ನಿನ್ನನ್ನು ನಾನು ಮದುವೆಯಾಗುವುದು ಮಹಾ ದೋಷವು" ಎಂದು ದೇವಯಾನಿಯನ್ನು ಬೇಡಿ ಕೊಂಡನು. ಅವಳು ಅವನ ಮಾತುಗಳಿಂದ ಕೋಪ ಗೊಂಡು, "ನಿನ್ನ ಈ ವಿದ್ಯಾ ಶ್ರಮವೆಲ್ಲವೂ ವ್ಯರ್ಥವಾಗಲಿ. ನಿನಗೆ ವಿದ್ಯಾಲೇಶವೂ ಕೈಗೂಡದಂತಾಗಲಿ" ಎಂದು ವಿಲಪಿಸುತ್ತಾ, ಅವನಿಗೆ ಶಾಪ ಕೊಟ್ಟಳು. ಅವಳ ಮಾತುಗಳಿಗೆ ಅಸಹ್ಯಗೊಂಡ ಕಚನು, " ಹೇ ಅಂಜುಕುಳಿ, ಅನವಶ್ಯವಾಗಿ ನೀನು ನನ್ನನ್ನು ಶಪಿಸಿದೆ. ಆದ್ದರಿಂದ ನನ್ನ ಮಾತಿನಂತೆ ನಿನಗೆ ಬ್ರಾಹ್ಮಣೇತರನೇ ಗಂಡನಾಗುತ್ತಾನೆ. ಬ್ರಹ್ಮಜ್ಞಾನಿಯಾದ ನಿನ್ನ ತಂದೆ ನಿನಗೂ ಮೃತ ಸಂಜೀವನಿ ವಿದ್ಯೆಯನ್ನು ಕೊಟ್ಟಿದ್ದಾನಲ್ಲವೇ? ಇನ್ನು ಮುಂದೆ ನಿನ್ನ ಆ ವಿದ್ಯೆಯು ನಾಶವಾಗಲಿ" ಎಂದು ಕಚನು ದೇವಯಾನಿಯನ್ನು ಶಪಿಸಿ ತನ್ನ ಮನೆಗೆ ಹೊರಟು ಹೋದನು. ಅದಾದನಂತರ ರಾಕ್ಷಸರು ಯಾರೂ ಪುನರ್ಜೀವಿತರಾಗಲಿಲ್ಲ. ದೇವತೆಗಳು ಸಂತೋಷಗೊಂಡರು. ಅಪಾತ್ರದಾನದಿಂದಾಗಿ ಮಂತ್ರವು ನಿಸ್ಸಾರವಾಯಿತು.

ಆದ್ದರಿಂದ ಅಮ್ಮಾ, ಸಾಧ್ವಿ, ಸ್ತ್ರೀಯರಿಗೆ ಮಂತ್ರೋಪದೇಶ ಮಾಡಬಾರದು. ಸ್ತ್ರೀಯರಿಗೆ ಪತಿ ಸೇವೆಯೊಂದೇ ಧರ್ಮವು. ಇನ್ನು ಮಂತ್ರಗಳೇಕೆ? ಗುರುಗಳ(?) (ಪತಿಯ?) ಅನುಮತಿಯಿಂದ ವ್ರತೋಪವಾಸಗಳನ್ನು ಮಾಡಬೇಕು" ಎಂದು ಶ್ರೀಗುರುವು ಹೇಳಲು, ಆ ಯುವ ಪತಿವ್ರತೆ, "ಶ್ರೀಗುರುವೇ, ನೀವು ಹೇಳಿದ ಮಾತುಗಳು ನನಗೆ ಸಮ್ಮತವೇ! ನಿಮ್ಮ ಪಾದ ಪದ್ಮಗಳನ್ನು ಸದಾ ಸ್ಮರಿಸಿಕೊಳ್ಳುತ್ತಿರುವುದಕ್ಕೆ ಅನುಕೂಲವಾಗುವಂತಹ ವ್ರತವೊಂದನ್ನು ಉಪದೇಶಿಸಿ. ನಿಮ್ಮ ಪಾದ ಸೇವೆಯೇ ನನ್ನ ವ್ರತವು. ಆದರೂ ನಿಮ್ಮ ಪಾದ ಪಂಕಜಗಳಲ್ಲಿ ನನ್ನ ಭಕ್ತಿ ಧೃಢವಾಗಿರುವುದಕ್ಕೆ ನನಗೆ ಅನುಮತಿ ಕೊಡಿ" ಎಂದು ಶ್ರೀಗುರುವಿನ ಪಾದಗಳಲ್ಲಿ ಬಿದ್ದು ‘ದಯೆತೋರಿಸಿ’ ಎಂದು ಪ್ರಾರ್ಥಿಸಿದಳು. ಶ್ರೀಗುರುವು ಅದನ್ನು ಕೇಳಿ ಸಂತೋಷಗೊಂಡು, "ನಿನಗೆ ಒಂದು ವ್ರತವನ್ನು ಹೇಳುತ್ತೇವೆ. ಅದು ನಿನ್ನ ಸೌಭಾಗ್ಯವನ್ನು ಸ್ಥಿರವಾಗಿ ನಿಲ್ಲಿಸುವುದು. ನಿನಗೂ ನಿನ್ನ ಗಂಡನಿಗೂ ಆ ವ್ರತವು ರಾಜ ಸುಖಗಳನ್ನು ಕೊಡುವುದು" ಎಂದು ಹೇಳಿದರು. ಆ ದಂಪತಿಗಳು, "ಸ್ವಾಮಿ, ಗುರು ವಾಕ್ಯಗಳನ್ನು ಪಾಲಿಸದ ನರನು ಘೋರ ನರಕಕ್ಕೆ ಹೋಗುವನು. ನಿಮ್ಮ ಮಾತೇ ನಮಗೆ ಪ್ರಮಾಣವು" ಎಂದು ಹೇಳಿ, ಗುರು ಪಾದಗಳನ್ನು ಆಶ್ರಯಿಸಿದರು. ಆಗ ಶ್ರೀಗುರುವು, ವಿಶ್ವತಾರಕ ವಾದಂತಹ ವ್ರತವೊಂದನ್ನು ಸಂತೋಷದಿಂದ ಆ ದಂಪತಿಗಳಿಗೆ ಅನುಗ್ರಹಿಸಿ, ಈ ರೀತಿಯಲ್ಲಿ ಉಪದೇಶಿಸಿದರು.

ಹಿಂದೆ ಋಷಿಗಳು ಸೂತರನ್ನು ಪ್ರಶ್ನಿಸಲು, ಸೂತರು ಮುನೀಶ್ವರರಿಗೆ ತಿಳಿಸಿದ ವ್ರತವನ್ನು ನಾನು ನಿಮಗೆ ಹೇಳುತ್ತೇನೆ. ಸ್ತ್ರೀ ಪುರುಷರಿಬ್ಬರಿಗೂ ಈ ವ್ರತವು ಪರಮ ಪಾವನವಾದದ್ದು. ಈಶ್ವರನನ್ನು ಅರ್ಚಿಸಿದ ನರನು ಸರ್ವಾಭೀಷ್ಟಗಳನ್ನು ಪಡೆಯ ಬಲ್ಲನು. ವಿರಕ್ತನಾದರೂ, ಕಾಮ ಯುಕ್ತನಾದರೂ, ವಿಷಯಾಸಕ್ತ ನಾದರೂ ಮಾನವನು ಭಕ್ತಿಯಿಂದ ಈಶ್ವರನನ್ನು ಪೂಜಿಸಿದರೆ, ಈಶ್ವರನು ಅನುಗ್ರಹಿಸುತ್ತಾನೆ. ದಂಪತಿಗಳು ಈ ಶಿವವ್ರತವನ್ನು ಸೋಮವಾರ ವ್ರತವೆನ್ನುವ ಹೆಸರಿನಲ್ಲಿ ಮಾಡಬೇಕು. ವೇದಶಾಸನವಾದದ್ದರಿಂದ ಈ ವ್ರತವನ್ನು ಮಾಡಿದವರು ಪರಮ ಪದವನ್ನು ಸೇರಬಲ್ಲರು. ಈಶ್ವರಾರ್ಚನೆಯಿಂದ ಸಕಲಾಭೀಷ್ಟಗಳೂ ಸಿದ್ಧಿಯಾಗುತ್ತವೆ. ಇದು ಪುಣ್ಯಪ್ರದವಾದ ಸೋಮವಾರವ್ರತವು. ವ್ರತಗಳಲ್ಲಿ ಉತ್ತಮವಾದದ್ದು. ಸಕಲಾಭೀಷ್ಟ ಸಾಧಕವಾದ ಈಶ್ವರಾರ್ಚನೆಯೇ ಈ ವ್ರತರೂಪವು. ವ್ರತ ಮಾಡುವವರು ಜಿತೇಂದ್ರಿಯರಾಗಿ, ಉಪವಾಸದಿಂದ ಇರುತ್ತಾ, ಇಲ್ಲದಿದ್ದರೆ ರಾತ್ರಿಯ ಹೊತ್ತು ಮಾತ್ರ ಭುಜಿಸುತ್ತಾ, ಯಥಾವಿಧಿಯಗಿ ಮಾಡಬೇಕು. ಬ್ರಹ್ಮಚಾರಿಯಾಗಲೀ, ಗೃಹಸ್ಥನಾಗಲೀ, ಪುಣ್ಯಸ್ತ್ರೀಯಾಗಲೀ, ಕನ್ಯೆಯಾಗಲೀ, ಭರ್ತೃಹೀನಳಾದ ವಿಧವೆಯಾಗಲೀ ಈ ವ್ರತವನ್ನು ಮಾಡಬಹುದು. ನಿಮಗೆ ಪ್ರಾಚೀನವಾದ ಕಥೆಯೊಂದನ್ನು ಹೇಳುತ್ತೇನೆ. ಈ ಕಥೆ ಸ್ಕಾಂದಪುರಾಣದಲ್ಲಿದೆ. ಈ ಕಥೆಯನ್ನು ಕೇಳಿದರೂ ಅಭೀಷ್ಟ ಸಿದ್ಧಿಯಾಗುತ್ತದೆ.

ಹಿಂದೆ ಆರ್ಯಾವರ್ತದಲ್ಲಿ ಚಿತ್ರವರ್ಮನೆಂಬ ರಾಜನೊಬ್ಬನಿದ್ದನು. ಅವನು ಧರ್ಮಾತ್ಮನು. ಪುಣ್ಯರಾಶಿ. ಧಾರ್ಮಿಕರಿಗೆ ರಕ್ಷಕ. ಅಧಾರ್ಮಿಕರಿಗೆ ಶಿಕ್ಷಕ. ಆ ರಾಜ ಶೂರ. ಪರಾಕ್ರಮವಂತ. ಅವನು ತನ್ನ ಧರ್ಮಪತ್ನಿಯೊಡನೆ ಪುತ್ರಾರ್ಥಿಯಾಗಿ ಬಹಳಕಾಲ ಶಿವನನ್ನು ಪೂಜಿಸುತ್ತಿದ್ದನು. ದೈವವಶಾತ್ ಅವನಿಗೆ ಮಗಳೊಬ್ಬಳು ಹುಟ್ಟಿದಳು. ಆ ಮಗು ರೂಪ ಲಕ್ಷಣ ಸಂಪನ್ನೆ. ಸುಂದರಿ. ರಾಜ ಅವಳ ಜಾತಕವನ್ನು ತಿಳಿಯಲು ಜ್ಯೋತಿಶ್ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿದ ಜ್ಯೋತಿಷ್ಕರನ್ನು ಕರೆಯಿಸಿ, ಅವಳ ಜಾತಕವನ್ನು ಪರಿಶೀಲಿಸಲು ಹೇಳಿದ. ಅವಳ ಜಾತಕವನ್ನು ಪರಿಶೀಲಿಸಿದ ಅವರು ರಾಜನಿಗೆ, "ಈ ಕನ್ಯೆ ಸುಲಕ್ಷಣೆಯಾಗಿ, ಸೀಮಂತಿನಿ ಎಂಬ ಹೆಸರಿನಿಂದ ಬೆಳೆಯುತ್ತಾಳೆ. ಗಂಡನೊಡನೆ ಕೂಡಿ ಹತ್ತು ಸಾವಿರ ವರ್ಷಗಳು ರಾಜ್ಯ ಭೋಗಗಳನ್ನನುಭವಿಸುತ್ತಾಳೆ" ಎಂದು ಅವಳ ಜಾತಕ ಫಲವನ್ನು ಹೇಳಿದರು. ಅದನ್ನು ಕೇಳಿ ಸಂತೋಷ ಗೊಂಡ ರಾಜ ಬ್ರಾಹ್ಮಣರಿಗೆ ಅಪಾರವಾದ ಧನ ದಾನ ಮಾಡಿದನು.
          

No comments:

Post a Comment