Friday, June 28, 2013

||ಶ್ರೀಗುರುಚರಿತ್ರೆ - ಮುವ್ವತ್ತಾರನೆಯ ಅಧ್ಯಾಯ||


||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| ||ಶ್ರೀಗುರುಭ್ಯೋನಮಃ||

ಶಿಷ್ಯನಾದ ನಾಮಧಾರಕನು ಸಿದ್ಧಮುನಿಯನ್ನು, "ಹೇ ಸಿದ್ಧಮುನಿಯೇ, ನೀನೇ ಭವಸಾಗರತಾರಕನು. ಬ್ರಹ್ಮಜ್ಞಾನಿಯು. ಮಾಯೆಯಿಂದ ಧೃಢವಾಗಿ ಮುಚ್ಚಿ ಹೋಗಿದ್ದ ನನ್ನನ್ನು ಶ್ರೀಗುರುಲೀಲೆಗಳೆಂಬ ಮಹಾಭೇರಿಯಿಂದ ಸುಬೋಧೆ ಮಾಡಿ ಎಬ್ಬಿಸಿದೆ. ಅಜ್ಞಾನಾಂಧಕಾರಕ್ಕೆ ಭಾಸ್ಕರನು ನೀನು. ಸದ್ಗುರುರೂಪದಲ್ಲಿ ನನಗೆ ಸಂಗಾತಿಯಾಗಿ ನನ್ನನ್ನು ದಡಕ್ಕೆ ಸೇರಿಸಿದೆ" ಎಂದು ಭಕ್ತಿಯಿಂದ ಸ್ತುತಿಸಿದನು. ಸಿದ್ಧಮುನಿಯು ಹರ್ಷಗೊಂಡು, ಸಾಕ್ಷಾತ್ತು ಗುರುವೇ ಆಗಿ ಅಭಯ ನೀಡಿದನು. ನಂತರ ಶಿಷ್ಯನು ಮುಂದಿನ ಕಥೆಯನ್ನು ಹೇಳಬೇಕೆಂದು ಪ್ರಾರ್ಥಿಸಿದನು.

ಆಗ ಸಿದ್ಧಮುನಿಯು, "ನಾಮಧಾರಕ, ಮುಂದಿನ ಕಥೆಯನ್ನು ಹೇಳುತ್ತೇನೆ. ಕೇಳು. ಶ್ರೀಗುರುವು ಗಂಧರ್ವಪುರದಲ್ಲಿ ವಾಸಮಾಡುತ್ತಿದ್ದಾಗ, ಶ್ರೀಹರಿಯ ಮಹಿಮೆ ಬಹಳ ಹಿರಿದಾಗಿತ್ತು. ಅದರಲ್ಲಿ ಸಾರಭೂತವಾದದ್ದನ್ನು ನಾನು ಹೇಳುತ್ತೇನೆ. ಸಾಕ್ಷಾತ್ತು ವಿಷ್ಣು ಅವತಾರವಾದ ಶ್ರೀಗುರುವಿನ ಲೀಲೆಗಳನ್ನು ಹೇಳಬಲ್ಲಂತಹ ಸಮರ್ಥನಾರು? ಗಂಧರ್ವನಗರದಲ್ಲಿ ಒಬ್ಬ ವೈದಿಕ ಬ್ರಾಹ್ಮಣನಿದ್ದನು. ಅವನು ಬಹುಶ್ರುತನು. ವಿರಕ್ತನು. ಆದರೂ ಅವನು ಕರ್ಮಮಾರ್ಗ ವಿಶಾರದನು. ಅವನು ಎಂದೂ ದಾನವನ್ನು ಸ್ವೀಕರಿಸುತ್ತಿರಲಿಲ್ಲ. ಪರಾನ್ನವನ್ನು ತಿನ್ನುತ್ತಿರಲಿಲ್ಲ. ಅಸತ್ಯವನ್ನು ನುಡಿಯುತ್ತಿರಲಿಲ್ಲ. ಭಿಕ್ಷಾವೃತ್ತಿಯಿಂದಲೇ ಜೀವನ ಸಾಗಿಸುತ್ತಾ ಸಂತೋಷದಿಂದಿದ್ದನು. ಆವನು ಭಿಕ್ಷುಕವೃತ್ತಿಯನ್ನೇ ಆಚರಿಸುತ್ತಿದ್ದರೂ ಅತಿಥಿಗಳಿಲ್ಲದೆ ತಾನು ಊಟಮಾಡುತ್ತಿರಲಿಲ್ಲ. ಆದರೆ ಅವನ ಹೆಂಡತಿಗೆ ಗಂಡನ ಈ ಚರ್ಯೆಗಳು ಸಹನೆಯಾಗುತ್ತಿರಲಿಲ್ಲ.

ಆ ಗ್ರಾಮದಲ್ಲಿ ಪ್ರತಿದಿನವೂ ಬ್ರಾಹ್ಮಣರಿಗೆ ಮೃಷ್ಟಾನ್ನ ಭೋಜನವಾಗುತ್ತಿತ್ತು. ಜನರೆಲ್ಲರೂ ಆ ಭೋಜನಗಳನ್ನೇ ಕುರಿತು ಮಾತನಾಡಿಕೊಳ್ಳುತ್ತಿದ್ದರು. ಈ ವಿಷಯವು ಆ ಬ್ರಾಹ್ಮಣನ ಹೆಂಡತಿಯ ಕಿವಿಗೆ ಬಿತ್ತು. ದೀನಳಾದ ಅವಳು ಖಿನ್ನ ಮನಸ್ಕಳಾಗಿ, "ಹೇ ದೈವವೇ, ಪರಮೇಶ್ವರ, ಸ್ವಪ್ನದಲ್ಲಿಯೂ ಕೂಡ ನಾನು ಅಂತಹ ಮೃಷ್ಟಾನ್ನವನ್ನು ಕಾಣಲಾಗದು. ನಾನೆಂತಹ ದುರದೃಷ್ಟವಂತಳು! ವಿಪ್ರರೆಲ್ಲರೂ ತಮ್ಮ ತಮ್ಮ ಹೆಂಡಂದಿರೊಡನೆ ಪ್ರತಿದಿನವೂ ಮೃಷ್ಟಾನ್ನ ಭೋಜನ ಮಾಡುತ್ತಿದ್ದಾರೆ. ಅವರು ಪುಣ್ಯ ಮಾಡಿದ್ದರು. ಹಿಂದಿನ ಜನ್ಮಗಳಲ್ಲಿ ಮಾಡಿದ್ದ ಪುಣ್ಯದಿಂದಲೇ ಅವರಿಗೆ ಇಂತಹುದು ಲಭ್ಯವಾಗಿದೆ. ನನ್ನ ಗಂಡ ಅದೃಷ್ಟಹೀನನು. ಕರೆದರೂ ಅವನು ಅಂತಹ ಸ್ಥಳಗಳಿಗೆ ಹೋಗುವುದಿಲ್ಲ" ಎಂದು ಚಿಂತಾಕ್ರಾಂತಳಾಗಿದ್ದಳು.

ಒಂದು ದಿನ ಮಹಾಧನಿಕನಾದ ಬ್ರಾಹ್ಮಣನೊಬ್ಬನು ಅವಳನ್ನು ಗಂಡನ ಜೊತೆಯಲ್ಲಿ ಸಂತರ್ಪಣೆಯ ಊಟಕ್ಕೆ ಬರಬೇಕೆಂದು ಕರೆದನು. ಅವಳು ಅದರಿಂದ ಅತೀವ ಸಂತಸಗೊಂಡು, ತನ್ನ ಗಂಡನ ಬಳಿಗೆ ಹೋಗಿ, "ನಿನ್ನೊಡನೆ ನನ್ನನ್ನು ಊಟಕ್ಕೆ ಕರೆದಿದ್ದಾರೆ. ಭೂರಿಭೋಜನವಿಟ್ಟು, ದಕ್ಷಿಣೆ, ಅಮೂಲ್ಯವಾದ ವಸ್ತ್ರಗಳು ಕೂಡಾ ಕೊಡುತ್ತಾರಂತೆ. ಈ ಆಹ್ವಾನವನ್ನು ಸ್ವೀಕರಿಸು. ಇಲ್ಲದಿದ್ದರೆ ನಾನಾದರೂ ಹೋಗಲು ಅನುಮತಿ ಕೊಡು" ಎಂದು ಅವನನ್ನು ಬಲವಂತ ಪಡಿಸಿದಳು. ಗಂಡನು ಅವಳು ಹೋಗಲು ಅನುಮತಿ ಕೊಡಲು, ಅಬಲೆಯೂ, ಮೂಢಳೂ ಆದ ಆ ಹೆಂಗಸು ಆ ಧನಿಕ ಬ್ರಾಹ್ಮಣ ಬಳಿಗೆ ಹೋಗಿ, "ನನ್ನ ಗಂಡ ಬರಲಾರ. ನಾನು ಬರುತ್ತೇನೆ" ಎಂದು ಹೇಳಲು, ಅವನು, "ಅಮ್ಮ, ನಾನು ದಂಪತಿಗಳ ಅರ್ಚನೆ ಮಾಡಬೇಕೆಂದು ಸಂಕಲ್ಪಿಸಿಕೊಂಡಿದ್ದೇನೆ. ಆದ್ದರಿಂದ ನಿನ್ನ ಗಂಡ ಬಂದರೆ ಮಾತ್ರ ನೀನು ನಮ್ಮ ಮನೆಗೆ ಊಟಕ್ಕೆ ಬರಬಹುದು’ ಎಂದು ಹೇಳಲು, ಅವಳು ಖಿನ್ನಳಾಗಿ, "ಅಯ್ಯೋ, ನಾರಾಯಣ, ನಾನೇನು ಮಾಡಲಿ? ಇದೆಲ್ಲವೂ ನನ್ನ ದುರದೃಷ್ಟವೇ! ಗಂಡನ ದುರ್ಯೋಗದಿಂದ ನನಗೆ ರುಚಿಕರವಾದ ಊಟ ಸ್ವಪ್ನದಲ್ಲೂ ದುರ್ಲಭವಾಗಿದೆ" ಎಂದು ಕೊಳ್ಳುತ್ತಾ, ಶ್ರೀಗುರು ನೃಸಿಂಹ ಸರಸ್ವತಿಯವರ ಬಳಿಗೆ ಹೋಗಿ, "ಸ್ವಾಮಿ, ಆ ಬ್ರಾಹ್ಮಣನ ಮನೆಯ ಊಟಕ್ಕೆ ಹೋಗುವಂತೆ ನನ್ನ ಗಂಡನಿಗೆ ಹೇಳಿ. ಆ ಬ್ರಾಹ್ಮಣ ದಂಪತಿಗಳನ್ನು ಮಾತ್ರ ಆಹ್ವಾನಿಸುತ್ತಿದ್ದಾನೆ. ನನ್ನ ಗಂಡ ನನ್ನ ಮಾತು ಕೇಳುವುದಿಲ್ಲ. ನಾನೇನು ಮಾಡಲಿ? ಪರಾನ್ನವನ್ನು ನನ್ನ ಗಂಡ ಎಂದೂ ತಿನ್ನುವುದಿಲ್ಲ. ಸ್ವಾಮಿ, ನನ್ನ ಮೇಲೆ ದಯೆತೋರಿ, ಏನಾದರೂ ಮಾಡಿ ನನ್ನ ಗಂಡ ಅಲ್ಲಿಗೆ ಬರುವಂತೆ ಮಾಡಿ. ಇದು ಒಳ್ಳೆಯ ಆಹ್ವಾನ. ಒಳ್ಳೆಯ ವಸ್ತ್ರಗಳು, ರುಚಿಕರವಾದ ಊಟ ಎಲ್ಲವೂ ಸಿಕ್ಕುತ್ತದೆ" ಎಂದು ಪ್ರಾರ್ಥಿಸಿಕೊಂಡಳು.

ಆಕೆಯ ಮಾತುಗಳನ್ನು ಕೇಳಿದ ಶ್ರೀಗುರುವು ನಗುತ್ತಾ, ಆಕೆಯ ಗಂಡನನ್ನು ಕರೆದು, "ಅಯ್ಯಾ, ಬ್ರಾಹ್ಮಣ, ನಿನ್ನನ್ನು ಅಹ್ವಾನಿಸಿರುವ ದ್ವಿಜನ ಮನೆಗೆ ಊಟಕ್ಕೆ ಹೋಗು. ಅದು ನಿನ್ನ ಹೆಂಡತಿಯ ಅಭೀಷ್ಟ. ಗಂಡನಾದವನು ಹೆಂಡತಿಯ ಅಭೀಷ್ಟವನ್ನು ಪೂರೈಸಬೇಕು. ಕುಲಸ್ತ್ರೀಯ ಮನಸ್ಸನ್ನು ನೋಯಿಸಬಾರದು" ಎಂದು ಹೇಳಿದರು. ಅದಕ್ಕೆ ಆ ಬ್ರಾಹ್ಮಣ ಶ್ರೀಗುರುವಿಗೆ ನಮಸ್ಕರಿಸಿ, "ಪರಾನ್ನವನ್ನು ಗ್ರಹಿಸಬಾರದು ಎನ್ನುವುದು ನನ್ನ ನಿಯಮ. ಆದರೂ ಗುರುವಾಕ್ಯವನ್ನು ಪಾಲಿಸದವನು ರೌರವ ನರಕಕ್ಕೆ ಹೋಗುತ್ತಾನೆ ಆಲ್ಲವೇ? ನಿಮ್ಮ ಆಜ್ಞೆಯನ್ನು ಶಿರಸಾವಹಿಸಿ ಪರಗೃಹಕ್ಕೆ ಊಟಕ್ಕೆ ಹೋಗುತ್ತೇನೆ" ಎಂದು ಶ್ರೀಗುರುವಿನಲ್ಲಿ ಬಿನ್ನವಿಸಿಕೊಂಡನು. ಅವನ ಹೆಂಡತಿ ಸಂತಸಗೊಂಡಳು. ಅದರಂತೆ ಅವರಿಬ್ಬರೂ ಬ್ರಾಹ್ಮಣನ ಮನೆಗೆ ಊಟಕ್ಕೆ ಹೋದರು. ಆ ಹೆಂಗಸು ಊಟದ ಸಮಯದಲ್ಲಿ ಒಂದು ವಿಪರೀತವಾದದ್ದನ್ನು ಕಂಡಳು. ಅವಳಿಗೆ ತನ್ನ ಎಲೆಯಲ್ಲಿ ತನ್ನ ಜೊತೆಗೆ ನಾಯಿಗಳು, ಹಂದಿಗಳು ತಿನ್ನುತ್ತಿರುವಂತೆ ಅವಳಿಗೆ ಕಾಣಿಸಿತು. ಅವಳು ಎದ್ದುಹೋಗಿ ಊಟಮಾಡುತ್ತಿದ್ದ ಬ್ರಾಹ್ಮಣರಿಗೆ ತಾನು ಕಂಡ ವಿಪರೀತವನ್ನು ಗಟ್ಟಿಯಾಗಿ ಕೂಗಿ ಹೇಳಿ, ತನ್ನ ಗಂಡನ ಹತ್ತಿರಕ್ಕೆ ಬಂದು ಅವನಿಗೂ ಆ ವಿಷಯವನ್ನು ಗಟ್ಟಿಯಾಗಿ ಹೇಳಿದಳು. "ಇದು ನಾಯಿಗಳು ಹಂದಿಗಳು ತಿಂದು ಉಚ್ಚಿಷ್ಟ ಮಾಡಿದ ಆನ್ನ" ಎಂದು ಅವಳು ಹೇಳಲು, ಅವಳ ಗಂಡ, "ನಿನ್ನಿಂದ ನನ್ನ ಭಾಗ್ಯವೆಲ್ಲಾ ಹಾಳಾಯಿತು. ಪರಾನ್ನವನ್ನು ಬಿಟ್ಟರೂ ಈಗ ನಾಯಿ ಎಂಜಲನ್ನು ತಿಂದೆನಲ್ಲವೇ?" ಎಂದು ಹೇಳುತ್ತಾ ಎದ್ದು, ಹೆಂಡತಿಯನ್ನು ಕರೆದುಕೊಂಡು ಶ್ರೀಗುರುವಿನ ಬಳಿಗೆ ಹೋದನು. ಅಲ್ಲಿ ಶ್ರೀಗುರುವಿಗೆ ಪರಮಭಕ್ತಿಯಿಂದ ನಮಸ್ಕರಿಸಿದನು. ನಾಮಧಾರಕ, ಶ್ರೀಗುರುವು ಅವನ ಹೆಂಡತಿಯನ್ನು ನೋಡಿ, "ನೀನು ಪರಾನ್ನದಿಂದುಂಟಾದ ಸುಖವನ್ನು ನೋಡಿದೆಯಲ್ಲವೇ? ನೀನು ಸದಾ ನಿನ್ನ ಗಂಡನನ್ನು ಪೀಡಿಸುತ್ತಿದ್ದೆ. ನಿನ್ನ ಕೋರಿಕೆ ಇಂದು ತೀರಿತು" ಎಂದು ಹೇಳಲು, ಅವಳು ಶ್ರೀಗುರುವಿನ ಪಾದಗಳಲ್ಲಿ ಬಿದ್ದು, ಕೈಜೋಡಿಸಿ, ದೀನಳಾಗಿ, "ಸ್ವಾಮಿ, ಪರಾನ್ನಕ್ಕೆಂದು ನನ್ನ ಗಂಡನನ್ನು ಬಲಾತ್ಕಾರವಾಗಿ ಕರೆದುಕೊಂಡು ಹೋದೆ. ನನ್ನ ತಪ್ಪನ್ನು ಕ್ಷಮಿಸಿ" ಎಂದು ಬೇಡಿಕೊಂಡಳು. "ಸ್ವಾಮಿ, ನನ್ನ ಪೂಜ್ಯವಾದ ವ್ರತ ಭಂಗವಾಯಿತು. ಪರಾನ್ನವನ್ನು ಗ್ರಹಿಸಬಾರದು ಎನ್ನುವ ನನ್ನ ಸಂಕಲ್ಪ ಇವಳಿಂದ ಭಗ್ನವಾಯಿತು. ನಾನು ಬಹು ದೋಷಗಳನ್ನು ಮಾಡಿದವನಾದೆ" ಎಂದು ಬಹು ಪರಿತಪ್ತನಾಗಿ ಹೇಳಿಕೊಂಡ ಆ ಬ್ರಾಹ್ಮಣನಿಗೆ ಶ್ರೀಗುರುವು, "ಅಯ್ಯಾ, ಈಕೆಯ ಕೋರಿಕೆ ತೀರಿತಲ್ಲವೇ? ಈಕೆಗೆ ಈಗ ತೃಪ್ತಿಯಾಗಿದೆ. ಪರಾನ್ನವನ್ನು ತಿನ್ನಬಾರದೆನ್ನುವ ನಿನ್ನ ಸಂಕಲ್ಪವು ಸತ್ಯವಾಗಿದೆ. ದುಃಖಿಸಬೇಡ. ಇದು ದೋಷವಲ್ಲ. ಇನ್ನೂ ಒಂದು ಮಾತು ಹೇಳುತ್ತೇನೆ. ಅದು ಸಹಜ ಧರ್ಮವೇ! ಪರಾನ್ನವನ್ನು ತಿನ್ನುವುದಿಲ್ಲ ಎಂದರೆ ಪಿತೃಕಾರ್ಯಗಳಿಗೆ ವಿಪ್ರರಾರೂ ಸಿಕ್ಕುವುದಿಲ್ಲ, ಅಲ್ಲವೇ? ಕರ್ಮಲೋಪವಾಗದಿದ್ದಲ್ಲಿ ಅಂತಹ ಕಡೆಗಳಿಗೆ ಹೋಗಿ ಊಟಮಾಡು" ಎಂದು ನಗುತ್ತಾ ಹೇಳಿದ ಶ್ರೀಗುರುವಿನ ಮಾತುಗಳನ್ನು ಕೇಳಿ ಆ ಬ್ರಾಹ್ಮಣನು ಶ್ರೀಗುರುವನ್ನು ಕೇಳಿದನು.

"ಸ್ವಾಮಿ, ಯಾರ ಅನ್ನವನ್ನು ಪರಿಗ್ರಹಿಸಬಹುದು? ದೋಷಗಳು ಯಾವಾಗ ಉಂಟಾಗುತ್ತವೆ? ಯಾರ ಮನೆಯ ಬಾಗಿಲಿಗೆ ಹೋಗಬಾರದು? ಇದೆಲ್ಲವನ್ನು ನನಗೆ ವಿಸ್ತಾರವಾಗಿ ಹೇಳಿ" ಎಂದು ಕೇಳಿದ ಬ್ರಾಹ್ಮಣನ ಮಾತುಗಳನ್ನು ಕೇಳಿ ಶ್ರೀಗುರುವು ಹೇಳಿದರು. "ಅಯ್ಯಾ ಬ್ರಾಹ್ಮಣ, ಗ್ರಹಿಸಬಹುದಾದಂತಹ ಅನ್ನವನ್ನು ಹೇಳುತ್ತೇನೆ, ಕೇಳು. ಶಿಷ್ಯನು ಗುರುವಿನ ಮನೆಯಲ್ಲಿ ನಿಸ್ಸಂಶಯವಾಗಿ ಅನ್ನವನ್ನು ಪರಿಗ್ರಹಿಸಬಹುದು. ವಿದ್ವಾಂಸನು, ವೈದಿಕನು, ಸೋದರಮಾವ, ಮಾವ, ಸಾಧುಗಳು, ಸೋದರರ ಮನೆಯಲ್ಲಿ ಅನ್ನವನ್ನು ಗ್ರಹಿಸಬಹುದು. ಬ್ರಾಹ್ಮಣರ ಅಭಾವದಿಂದ ಕರ್ಮ ಲೋಪವುಂಟಾದಾಗ, ಅನ್ನವನ್ನು ಸ್ವೀಕರಿಸಬಹುದು. ನಂತರ ಗಾಯತ್ರಿ ಜಪದಿಂದ ಅದರಿಂಟಾದ ದೋಷವು ಕಳೆಯುವುದು. ಮಾತಾಪಿತರ ಮನೆಯ ಹತ್ತಿರ ಸೇವೆ ಮಾಡುವವರ ಮನೆಯಲ್ಲಿ, ಲೋಭಿಗಳ ಮನೆಯಲ್ಲಿ ಅನ್ನ ಸ್ವೀಕಾರವನ್ನು ಹೇಗಾದರೂ ಮಾಡಿ ಬಿಡಬೇಕು. ಹೆಂಡತಿ ಮಕ್ಕಳನ್ನು ಪೀಡಿಸಿ ಧರ್ಮ ಮಾಡುವವರ ಮನೆಯಲ್ಲಿ ಅನ್ನವನ್ನು ತಿಂದರೆ ಮಹಾ ದೋಷವುಂಟಾಗುತ್ತದೆ. ಗರ್ವಿಷ್ಠನ ಮನೆಯಲ್ಲಿ, ಮಲ್ಲಯುದ್ಧದಲ್ಲಿ ಆಸಕ್ತಿಯುಳ್ಳವನ ಮನೆಯಲ್ಲಿ, ವಾದ್ಯಗಳಲ್ಲಿ ಅತಿ ಹೆಚ್ಚಿನ ಆಸಕ್ತಿಯುಳ್ಳವರ ಮನೆಯಲ್ಲೂ ಊಟಮಾಡಬಾರದು. ಬಹಿಷ್ಕೃತನಾದ ಬ್ರಾಹ್ಮಣ ಮನೆಯಾಲಿ, ಯಾಚನಾ ಜೀವಿಯ ಮನೆಯಲ್ಲಿ, ವೈಶ್ವದೇವವನ್ನಿಡದಿರುವವರ ಮನೆಯಲ್ಲಿ, ಅನ್ನ ತಿನ್ನಬಾರದು. ಒಂದೇ ಕಡೆಯಲ್ಲಿ ಬಹಳ ಜನರ ಊಟಕ್ಕೆಂದು ಮಾಡಿದ ಅನ್ನದಿಂದ ಬೇರೆಯಾಗಿ ವೈಶ್ವದೇವ ಮಾಡಲು ಸಾಧ್ಯವಾಗದು. ಆದ್ದರಿಂದ ಅಂತಹ ಅನ್ನವನ್ನು ವರ್ಜಿಸಬೇಕು. ಧನದಾಸೆಯಿಂದ ಮಂತ್ರ ಹೇಳುವವರ ಮನೆಯಲ್ಲಿ, ಶಿಷ್ಯ ಸಂಗ್ರಹದಲ್ಲಿ ಇಚ್ಛೆಯುಳ್ಳವರ ಮನೆಯಲ್ಲಿಯೂ ಅನ್ನವು ವರ್ಜನೀಯವೇ! ಕ್ರೋಧಿ, ಬ್ರಾಹ್ಮಣ ದ್ವೇಷಿ, ಕುಲಸ್ತ್ರೀಯನ್ನು ಬಿಟ್ಟವನ ಮನೆಯಲ್ಲಿಯೂ ಅನ್ನವನ್ನು ಪರಿತ್ಯಜಿಸಬೇಕು. ಗಂಡನನ್ನು, ಮಕ್ಕಳನ್ನು ಬಿಟ್ಟುಬಿಟ್ಟ ಬ್ರಾಹ್ಮಣ ಸ್ತ್ರೀಯ ಮನೆಯಲ್ಲೂ ಅನ್ನವನ್ನು ಬಿಡಬೇಕು. ವಿಪ್ರನಾದರೂ, ಸ್ವರ್ಣಕಾರಿಯ ಮನೆಯಲ್ಲಿ, ಯಾಚಕನ ಮನೆಯಲ್ಲಿ, ಹೆಂಗಸಿನಿಂದ ಸೋಲಿಸಲ್ಪಟ್ಟವನ ಮನೆಯಲ್ಲಿ ಅನ್ನವನ್ನು ವರ್ಜಿಸಬೇಕು. ಕಳ್ಳ, ಪರದಾರರತ, ಅಶ್ವ ವಿಕ್ರಯ ಮಾಡುವವನು, ಅಂತಹವನು ಬ್ರಾಹ್ಮಣನಾದರೂ ಅವನ ಮನೆಯಲ್ಲಿ ಊಟ ಮಾಡಬಾರದು. ಧನದಾಸೆಯಿಂದ ವೇದ ಹೇಳುವವನು, ದ್ಯೂತಕಾರಿ, ನಿಷ್ಠೂರವಾಗಿ ಮಾತನಾಡುವವನು, ಸ್ನಾನಮಾಡದೆ ಊಟ ಮಾಡುವವನು, ಭಗವತ್ಕೀರ್ತನೆ ಮಾಡದವನು, ಅಂತಹವರ ಮನೆಯಲ್ಲಿಯೂ ಊಟ ಮಾಡಬಾರದು. ಸಂಧ್ಯಾವಂದನೆ ಮಾಡದವನ, ದಾನ ಮಾಡದವನ, ಪಿತೃಕರ್ಮ ಮಾಡದವನ ಮನೆಯಲ್ಲಿ ಊಟಮಾಡಬಾರದು. ಧನದಾಸೆಯಿಂದ ಮಂತ್ರಜಪ ಮಾಡುವವನ, ಡಂಭ ಪ್ರದರ್ಶನಕ್ಕೋಸ್ಕರ ಜಪ ಮಾಡುವವನ, ಸಾಲಕೊಟ್ಟು ಹಣ ಸಂಪಾದಿಸುವವನ, ಮನೆಯಲ್ಲಿಯೂ ಅನ್ನವನ್ನು ತಿನ್ನಬಾರದು.

ವಿಶ್ವಾಸಘಾತುಕ, ಪಕ್ಷಪಾತಿ, ಅನೀತಿಪರ, ಸ್ವಧರ್ಮವನ್ನು ಬಿಟ್ಟವನು, ಇವರ ಮನೆಯಲ್ಲಿಯೂ ಅನ್ನವು ವರ್ಜ್ಯವು. ಸಾಧುಗಳನ್ನು ದ್ವೇಷಿಸುವವನು, ಗುರುನಿಂದಕನು, ಕುಲದೈವವನ್ನು ಬಿಟ್ಟವನು, ಇವರ ಮನೆಯಲ್ಲೂ ಅನ್ನ ವರ್ಜ್ಯವು. ಗೋ-ವಿಪ್ರ-ಸ್ತ್ರೀ ಘಾತುಕ, ತನ್ನ ಅನ್ನವನ್ನೇ ದೂಷಿಸುವವನ, ಪರಾನ್ನವನ್ನು ಹೊಗಳುವವನ ಮನೆಯಲ್ಲಿಯೂ ಅನ್ನ ವರ್ಜ್ಯವು. ಆಶಾಬದ್ಧನ, ಒಂದೇ ಮನೆಯಲ್ಲಿ ಸದಾಕಾಲ ಇರುವವನ, ದಾತನನ್ನು ಅಪಹರಿಸುವವನ ಅನ್ನವೂ ನಿಷಿದ್ಧವು. ಎಲ್ಲರನ್ನೂ ಶರಣು ಬೇಡುವವನು ಚಂಡಾಲನಾಗುತ್ತಾನೆ. ಅವನ ಅನ್ನ ತಿನ್ನಬಾರದು. ಸರ್ವವನ್ನೂ ತಿನ್ನುವವನ ಅನ್ನವು ವರ್ಜ್ಯವು. ಮಗಳು-ಅಳಿಯರನ್ನು ಭಯಪಡಿಸುವವನ, ಪುತ್ರಹೀನನ ಅನ್ನವು ತ್ಯಾಜ್ಯವು. ವಿವಾಹದ ನಂತರ ಹೋಮಾದಿಗಳನ್ನು ಮಾಡದೆ ಸದಾ ಪರಗೃಹದಲ್ಲಿ ಊಟ ಮಾಡುವವನ, ಅನ್ನವು ದೋಷಪೂರಿತವು. ಆಶ್ರಮ ಧರ್ಮಗಳನ್ನನುಸರಿಸದೆ ಅದ್ವೈತಾನುಭವವಿಲ್ಲದೆ ಇರುವವನ ಅನ್ನವು ನಿಂದ್ಯವು. ಹೊಟ್ಟೆಬಾಕನ ಅನ್ನವನ್ನು ತಿನ್ನುವುದರಿಂದ ಅಂಧತ್ವ, ಆಯುರ್ದಾಯ ಹಾನಿ, ಕಿವುಡು, ಸ್ಮೃತಿ, ಬುದ್ಧಿ, ಧೈರ್ಯಗಳಿಗೆ ಹಾನಿಯುಂಟಾಗುವುದು. ಪರಗೃಹದಲ್ಲೇ ನಿತ್ಯವೂ ಇರುತ್ತಾ ಅಲ್ಲಿಯೇ ಊಟ ಮಾಡುವವನು ತಾನು ಆರ್ಜಿಸಿದ ಪುಣ್ಯವನ್ನೆಲ್ಲಾ ಯಜಮಾನನಿಗೆ ಕೊಟ್ಟವನಾಗುತ್ತಾನೆ. ಆ ಯಜಮಾನನ ದೋಷಗಳನ್ನು ತಾನು ಪಡೆದುಕೊಳ್ಳುತ್ತಾನೆ. ಪರಾನ್ನದಿಂದ ಉಂಟಾಗುವ ದೋಷ, ಪರಸ್ತ್ರೀ ಸಂಗದಿಂದ ಉಂಟಾಗುವ ದೋಷ, ಗೋವು, ಭೂಮಿ, ಸ್ವರ್ಣ, ಗಜ, ರತ್ನ, ಕುದುರೆಗಳಂತಹವನ್ನು ಸ್ವೀಕರಿಸುವುದರಿಂದ ಉಂಟಾಗುವ ದೋಷಗಳು ಅಧಿಕವಾದದ್ದು. ದಿನವೂ ಪರಗೃಹದಲ್ಲಿ ವಾಸಿಸುವವನನ್ನು ಲಕ್ಷ್ಮಿ ಬಿಟ್ಟು ಹೋಗುತ್ತಾಳೆ. ಅಮಾವಾಸ್ಯೆಯಂದು ಪರಾನ್ನವನ್ನು ತಿನ್ನುವುದರಿಂದ ಆ ಮಾಸದಲ್ಲಿ ಮಾಡಿದ ಪುಣ್ಯವೆಲ್ಲವೂ ಬಿಟ್ಟು ಹೋಗುವುದು. ಊಟಕ್ಕೆಂದು ಆಹ್ವಾನ ಬಂದರೆ ಹೋಗಬಹುದು. ಆಹ್ವಾನ ಬರದಿದ್ದರೆ ಆಪತ್ತಿನಲ್ಲಲ್ಲದೇ ಹೋಗಬಾರದು. ದ್ವಿಜರ ಮನೆಗಳಿಗೆ ಆಹ್ವಾನವಿಲ್ಲದೆ ಹೋಗಬಾರದು. ಸೇವಕನ ಮೂಲಕ ಆಹ್ವಾನ ಬಂದರೆ ದ್ವಿಜಗೃಹಕ್ಕೂ ಹೋಗಬಾರದು.

ಮಗಳಿಗೆ ಮಗನು ಹುಟ್ಟುವವರೆಗೂ ಅವಳ ಮನೆಯಲ್ಲಿ ಊಟಮಾಡಬಾರದು. ಮೊಮ್ಮಗನಾದಮೇಲೆ ಈ ದೋಷವಿರುವುದಿಲ್ಲ. ಸೂರ್ಯ ಚಂದ್ರ ಗ್ರಹಣ ಸಮಯದಲ್ಲಿ, ಪುರುಡುಂಟಾದಾಗ, ಅಶೌಚವಾದಾಗ, ತೀರ್ಥಾದಿಗಳಲ್ಲಿ, ದಾನ ಸ್ವೀಕಾರಮಾಡಬಾರದು. ದುಷ್ಟನಾದ ರಾಜ, ಸೇವಕ, ಅಗಸರವನು, ಕಮ್ಮಾರ, ಸೌದೆ ಮಾರುವವನು, ಚಿನ್ನ ಕದ್ದವನು, ಶೂದ್ರ ಸ್ತ್ರೀ, ಮದ್ಯವ್ಯಸನಿ, ಇವರೆಲ್ಲರ ದಾನಗಳನ್ನು ವರ್ಜಿಸಬೇಕು. ಈ ಧರ್ಮಗಳ ವಿಷಯವಾಗಿ ತಮ್ಮ ತಮ್ಮ ಆಚಾರಗಳನ್ನು, ಇಷ್ಟವಿಲ್ಲದಿದ್ದರೂ, ಆಚರಣೆಯಲ್ಲಿಟ್ಟ ಬ್ರಾಹ್ಮಣರಿಗೆ ದೈನ್ಯವೆಂಬುದಿರುವುದಿಲ್ಲ. ಅವರು ಸುಖಾನುಭವಿಗಳಾಗಿರುತ್ತಾರೆ. ಅಂತಹವರ ಮನೆಯಲ್ಲಿ ದೇವತೆಗಳು ಕಾಮಧೇನುವು ವಾಸಮಾಡುತ್ತಾರೆ. ಅಷ್ಟಸಿದ್ಧಿಗಳು ಅವರ ಮನೆಯಲ್ಲಿ ಸದಾ ಇರುತ್ತವೆ. ಮದಾಂಧರಾಗಿ ಸ್ವಧರ್ಮಾಚಾರಗಳನ್ನು ಬಿಟ್ಟ ಬ್ರಾಹ್ಮಣರು ಪಾಪಗಳಿಂದಾಗಿ, ದರಿದ್ರರೂ, ದೀನರೂ ಆಗಿ ಪತನ ಹೊಂದುತ್ತಾರೆ". 

ಹೀಗೆ ಶ್ರೀಗುರುವು ಬೋಧಿಸಲಾಗಿ, ಆ ಬ್ರಾಹ್ಮಣ, "ಸ್ವಾಮಿ, ಸ್ವ ಆಚಾರಗಳನ್ನು ಹೇಳಬೇಕೆಂದು ಕೋರುತ್ತೇನೆ. ನೀವು ತ್ರಿಮೂರ್ತಿಗಳ ಅವತಾರವು. ಶ್ರೀಗುರುವು, ಕರುಣಾಕರನು, ನೀವೇ!" ಎಂದು ಕೋರಲು, ಶ್ರೀಗುರುವು ಬ್ರಾಹ್ಮಣನಿಗೆ, "ಅಯ್ಯಾ ಬ್ರಾಹ್ಮಣ, ನೀನು ಒಳ್ಳೆಯದನ್ನೇ ಕೇಳಿದೆ. ಋಷಿಗಳು ಹಿಂದೆ ಹೇಳಿದ ಸದಾಚಾರಗಳನ್ನು ಹೇಳುತ್ತೇನೆ. ಕೇಳು. ಹಿಂದೆ ನೈಮಿಶಾರಣ್ಯದಲ್ಲಿ, ಪರಾಶರಮುನಿಯು ಮುನಿಗಳಿದ್ದ ಕಡೆಗೆ ಅನಿರೀಕ್ಷಿತವಾಗಿ ಬಂದನು. ಮುನಿಗಳು ಹಾಗೆ ಬಂದ ವೃದ್ಧ ಮಹರ್ಷಿಗೆ, ಆದರದಿಂದ ಸತ್ಕಾರಮಾಡಿ, ಅಭಿವಂದಿಸಿ, ಆಚಾರಗಳನ್ನೆಲ್ಲಾ ತಿಳಿಸಬೇಕೆಂದು ಕೋರುತ್ತಾ, "ನೀನು ಬ್ರಹ್ಮರ್ಷಿ. ನಿನ್ನ ಉಪದೇಶವು ಶ್ರೇಷ್ಠವು. ಗುರುವಿಲ್ಲದೆ ಆಚಾರಗಳನ್ನಾಗಲೀ, ಮಂತ್ರಗಳನ್ನಾಗಲೀ ಸ್ವೀಕರಿಸಬಾರದು. ನಮಗೆ ಆಚಾರಗಳನ್ನೆಲ್ಲಾ ಉಪದೇಶಿಸು" ಎಂದು ಪ್ರಾರ್ಥಿಸಿದರು. ಹಾಗೆ ಅವರಿಂದ ಪ್ರಾರ್ಥಿಸಲ್ಪಟ್ಟ ಪರಾಶರ ಮಹರ್ಷಿ, ಅವರಿಗೆ ಉಪದೇಶಿಸಿದನು.

ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಭಕ್ತಿಯಿಂದ ಗುರುಸ್ಮರಣೆ ಮಾಡಬೇಕು. ಬ್ರಹ್ಮ, ವಿಷ್ಣು, ಮಹೇಶ್ವರರ ಧ್ಯಾನ ಮಾಡಬೇಕು. ಸನಕ, ಸನಂದನ, ಸನತ್ಕುಮಾರ, ಸನಾತನ, ನಾರದ, ಸಿದ್ಧರು, ಯೋಗಿಗಳು, ಪಿತೃದೇವತೆಗಳನ್ನು ಸ್ಮರಿಸಬೇಕು. ಸಪ್ತ ಸಮುದ್ರಗಳಿಗೆ, ಸಪ್ತದ್ವೀಪಗಳಿಗೆ, ಸಪ್ತರ್ಷಿಗಳಿಗೆ, ನಮಸ್ಕರಿಸಬೇಕು. ನಂತರ ಹಾಸಿಗೆಯಿಂದೆದ್ದು ಮೂತ್ರವಿಸರ್ಜನಾದಿ ಕಾರ್ಯಗಳನ್ನು ಮುಗಿಸಿ, ಆಚಮನ ಮಾಡಬೇಕು. ಸ್ನಾನಕ್ಕೆ ಮುಂಚೆ, ಸ್ನಾನವಾದ ಮೇಲೆ, ಅಧೋವಾಯುವನ್ನು ಬಿಟ್ಟಾಗ, ಮಲಗಿ ಎದ್ದ ಮೇಲೆ, ಯಥಾವಿಧಿಯಾಗಿ ಕೂತು, ಬ್ರಾಹ್ಮಣನಾದವನು ಆಚಮನ ಮಾಡಬೇಕು. ಊಟಕ್ಕೆ ಮುಂಚೆ, ಊಟವಾದಮೇಲೆ, ಕೆಮ್ಮಿದಾಗ, ಆವಳಿಸಿದಾಗ, ಮಲಮೂತ್ರ ವಿಸರ್ಜನೆ ಮಾಡಿದಮೇಲೆ, ದ್ವಿಜನಾದವನು ಆಚಮನ ಮಾಡಬೇಕು. ಅಪಾನ ವಾಯುವು ಹೊರಬಂದಾಗ, ದುಷ್ಟ ಶಬ್ದಗಳನ್ನುಚ್ಚರಿಸಿದಾಗ, ಕೆಟ್ಟದ್ದನ್ನು ನೋಡಿದಾಗ, ಕರ್ಮಾರಂಭ ಅಂತ್ಯಗಳಲ್ಲೂ ಆಚಮನ ಮಾಡಬೇಕು. ಅಂತಹ ಸಂದರ್ಭಗಳಲ್ಲಿ ಆಚಮನ ಮಾಡಲು ನೀರು ಸಿಕ್ಕದಿದ್ದರೆ ಕಿವಿಗಳನ್ನು ಸ್ಪರ್ಶಿಸಬೇಕು. ಬಲಕಿವಿಯಲ್ಲಿ ಸಪ್ತ ದೇವತೆಗಳಿದ್ದಾರೆ. ಆದ್ದರಿಂದ ಅದನ್ನು ಮುಟ್ಟಿಕೊಂಡರೆ ಆಚಮನವಾಗುತ್ತದೆ. ಅಗ್ನಿ, ಜಲ, ವಾಯು, ವರುಣ, ಸೂರ್ಯ, ಚಂದ್ರ, ಇಂದ್ರ ಇವರು ವಿಪ್ರನ ದಕ್ಷಿಣ ಕರ್ಣದಲ್ಲಿ ದಿನವೂ ಇರುತ್ತಾರೆ. ಮೂತ್ರೋತ್ಸರ್ಜನದ ನಂತರ ಶುಚಿಯಾಗಿ ಮಾನಸ ಸ್ನಾನ ಮಾಡಿ ಅರುಣೋದಯದವರೆಗೂ, ಗಾಯತ್ರಿಯನ್ನು ಬಿಟ್ಟು, ಜಪ ವೇದ ಪಠನಗಳನ್ನು ಮಾಡಬೇಕು. ಅರುಣೋದಯದ ನಂತರ ಹೊರಗೆ ಹೋಗಿ ಮಲ ವಿಸರ್ಜನೆ ಮಾಡಬೇಕು. ಉಪವೀತವನ್ನು ಹಿಂದಕ್ಕೆ (ಬೆನ್ನಮೇಲೆ) ಹಾಕಿಕೊಂಡು, ನೈರುತ್ಯದಿಕ್ಕಿನಲ್ಲಿ ಕೂತು, ಮುಖವನ್ನು ಕೆಳಕ್ಕೆ ಬಾಗಿಸಿ, ತಲೆಯಮೇಲೆ ಬಟ್ಟೆ ಹಾಕಿಕೊಂಡು, ಬೆಳಗ್ಗೆ ಉತ್ತರಾಭಿಮುಖವಾಗಿ, ರಾತ್ರಿಯ ಹೊತ್ತು ದಕ್ಷಿಣಾಭಿಮುಖವಾಗಿ, ಮೌನದಿಂದ, ಸುತ್ತಮುತ್ತ ನೋಡದೆ, ಸೂರ್ಯ ಚಂದ್ರ ನಕ್ಷತ್ರಗಳು ಜನರನ್ನು ನೋಡದೆ, ದ್ವಿಜನಾದವನು ಮಲಮೂತ್ರ ವಿಸರ್ಜನೆ ಮಾಡಬೇಕು. ನಿಂತು ಮೂತ್ರ ವಿಸರ್ಜನೆ ಮಾಡುವ ವಿಪ್ರನು ಅವನ ಮೈಮೇಲೆ ಎಷ್ಟು ಕೂದಲುಗಳಿವೆಯೋ ಅಷ್ಟು ವರ್ಷಗಳು ನರಕದಲ್ಲಿರುತ್ತಾನೆ. ಕೌಪೀನವನ್ನು ಬಿಚ್ಚದೆ ಮೂತ್ರ ವಿಸರ್ಜನೆ ಮಾಡಿದರೂ, ಶೌಚ ಮಾಡದೆಯೇ ಕೌಪೀನವನ್ನು ಹಾಕಿಕೊಂಡರೂ ಮೇಲೆ ಹೇಳಿದಂತೆ ನರಕವಾಸಿಯಾಗುತ್ತಾನೆ. ಯಾವಾಗಲಾದರೂ ಜಲಾಭಾವವಾದರೆ ಗಂಗೆಯನ್ನು ಸ್ಮರಿಸಿ ಮಣ್ಣು ಮುಂತಾದುವುಗಳಿಂದ ಶೌಚವಾಚರಿಸಬೇಕು. ಭೂಮಿಯ ಮೇಲಾಗಲೀ, ಹುಲ್ಲಿನ ಮೇಲಾಗಲೀ ಮಲ ವಿಸರ್ಜನೆ ಮಾಡಬಾರದು. ಒಣಗಿದ ಎಲೆಗಳ ಮೇಲೆ ಮಲ ವಿಸರ್ಜನೆ ಮಾಡಬೇಕು. ನಂತರ ಶುಚಿಯಾಗದೆ ಏನನ್ನೂ ತಿನ್ನಬಾರದು. ಪವಿತ್ರವಾದ ವೃಕ್ಷಗಳ, ದೇವಸ್ಥಾನಗಳ ಹತ್ತಿರದಲ್ಲಿ ಮಲ ವಿಸರ್ಜನೆ ಮಾಡಬಾರದು. ನೀರಿರುವ ಕಡೆಗೆ ಹೋಗಿ ಶೌಚಾದಿಗಳನ್ನು ಮಾಡಿಕೊಳ್ಳಬೇಕು. ಶೌಚ ಮಾಡಿಕೊಳ್ಳಲು ಮಣ್ಣು ತೆಗೆದುಕೊಳ್ಳಬೇಕು. ಹುತ್ತದ ಮಣ್ಣು, ಇಲಿತೋಡಿದ ಮಣ್ಣು, ನದಿ ಮಧ್ಯದ ಮಣ್ಣನ್ನು ಉಪಯೋಗಿಸಬಾರದು. ದಾರಿಯಲ್ಲಿ ಬಿದ್ದಿರುವ ಮಣ್ಣು, ಗಿಡದ ಕೆಳಗಿರುವ ಮಣ್ಣು, ದೇವಸ್ಥಾನದ ಪ್ರದೇಶಗಳಲ್ಲಿರುವ ಮಣ್ಣು, ತೀರ್ಥಾದಿಗಳಲ್ಲಿರುವ ಮಣ್ಣು, ಶೌಚಕ್ಕೆ ನಿಷಿದ್ಧವು. ಭಾವಿ, ಕೆರೆ, ಕಾಲುವೆಗಳಲ್ಲಿರುವ ಮಣ್ಣು ಪ್ರಶಸ್ತವಾದದ್ದು. ಶೌಚಕ್ಕಾಗಿ ನೀರು ಚುಮುಕಿಸಿ ಮಣ್ಣನ್ನು ಶೇಖರಿಸಬೇಕು. ಎಂದು ತಿಳಿದವರು ಹೇಳುತ್ತಾರೆ. ಒಂದು ಹಸಿರು (ಬೆಟ್ಟದ) ನೆಲ್ಲಿಕಾಯಿಯ ಪ್ರಮಾಣದಷ್ಟು ಮಣ್ಣನ್ನು ಲಿಂಗದ ಮೇಲಿಡಬೇಕು. ಐದು ಕಾಯಿಗಳ ಪ್ರಮಾಣದಷ್ಟು ಮಣ್ಣನ್ನು ಗುದದ್ವಾರದಲ್ಲಿ, ಮೂರು ಕಾಯಿಗಳಷ್ಟು ಉಂಡೆ ಮಾಡಿ ಎರಡೂ ಕೈಗಳಲ್ಲಿ, ಹಾಗೆಯೇ ಎರಡು ಪಾದಗಳ ಮೇಲೂ, ಮೂತ್ರ ಶೌಚಕ್ಕೆ ಉಪಯೋಗಿಸಬೇಕು. ಮಲ ವಿಸರ್ಜನೆ ಮಾಡಿದಾಗ ಮೇಲೆ ಹೇಳಿದ್ದಕ್ಕೆ ಎರಡರಷ್ಟು, ವೀರ್ಯ ವಿಸರ್ಜನಾನಂತರ ಮೂರರಷ್ಟು ಮಣ್ಣನ್ನು ಉಪಯೋಗಿಸಬೇಕು.

ಮೇಲೆ ಹೇಳಿದ ಶೌಚವಿಧಿ ಗೃಹಸ್ಥರಿಗೆ. ಇದರ ಎರಡರಷ್ಟು ಬ್ರಹ್ಮಚಾರಿಗಳಿಗೆ. ವನವಾಸಿಗಳಿಗೆ, ಮೂರರಷ್ಟು. ಯತಿಗಳಿಗೆ ನಾಲ್ಕರಷ್ಟು ಶೌಚವಿಧಿ ಎಂದು ಹೇಳಲಾಗಿದೆ. ರಾತ್ರಿಯಲ್ಲಾದರೆ ಇದರಲ್ಲಿ ಅರ್ಧದಷ್ಟು ಸಾಕು. ಶೌಚ ಆಚರಿಸುವುದರಿಂದ ಮಾನವರಿಗೆ ಶೀಘ್ರವಾಗಿ ಧರ್ಮಸಿದ್ಧಿಯಾಗುತ್ತದೆ. ಉಪನಯನವಾದ ನಂತರ ದ್ವಿಜನು ಈ ಆಚಾರವನ್ನು ಪಾಲಿಸಬೇಕು. ಸ್ತ್ರೀಯರು, ಶೂದ್ರಬಾಲರಿಗೆ ವಾಸನೆ ಹೋಗುವವರೆಗೆ ಶೌಚವಿಧಿ ಮಾಡಿದರೂ ಸಾಕು. ಬ್ರಾಹ್ಮಣನು ಶೌಚಾನಂತರ ಎಂಟುಸಲ ಗಂಡೂಷ (ಪುಕ್ಕಳಿಸುವುದು) ಮಾಡಬೇಕು. ಕ್ಷತ್ರಿಯರು ಆರುಸಲ, ವೈಶ್ಯರು ನಾಲ್ಕುಸಲ. ಶೂದ್ರರು ಎರಡುಸಲ, ಗಂಡೂಷ ಮಾಡಬೇಕು. ಪುಕ್ಕಳಿಸಿದ ನೀರನ್ನು ಎಡಗಡೆಗೆ ಬಿಡಬಾರದು (ಉಗುಳಬಾರದು). ಪುಕ್ಕಳಿಸಿದ ಮೇಲೆ ಶುಚಿಸ್ಥಾನದಲ್ಲಿ ಎರಡುಸಲ ಕುಲದೈವವನ್ನು ಸ್ಮರಿಸಬೇಕು. 

ಇನ್ನು ದ್ವಿಜರಿಗೆ ಆಚಮನ ಪದ್ಧತಿಯನ್ನು ಹೇಳುತ್ತೇನೆ. ಕೇಳಿ. ವಿಪ್ರನ ಬಲಗೈಯಲ್ಲಿ ತೀರ್ಥಪಂಚಕಗಳಿವೆ(ಐದು ತೀರ್ಥಗಳು). ಕೈ ಮಧ್ಯದಲ್ಲಿ ವಹ್ನಿ(ಅಗ್ನಿ)ತೀರ್ಥ, ಹಸ್ತ ಮೂಲದಲ್ಲಿ ಬ್ರಹ್ಮ ತೀರ್ಥ, ತರ್ಜನಿ ಅಂಗುಷ್ಠಗಳ ನಡುವೆ ಪಿತೃತೀರ್ಥ, ಅಂಗುಷ್ಠದ ಕೊನೆಯಲ್ಲಿ ದೇವ ತೀರ್ಥ, ಕನಿಷ್ಠಿಕ(ಕಿರುಬೆರಳು)ದ ಮೂಲದಲ್ಲಿ ಆರ್ಷತೀರ್ಥಗಳಿವೆ. ಈ ತೀರ್ಥಗಳಿಂದ ಪ್ರತಿಗ್ರಹ, ಆಚಮನ, ಪಿತೃದೇವತೆಗಳ ಅರ್ಚನೆ, ದೇವತಾರ್ಚನೆ, ಋಷಿಪೂಜೆಗಳನ್ನು ಮಾಡಬೇಕು.

ಬ್ರಹ್ಮತೀರ್ಥದಿಂದ ಕೇಶವ, ನಾರಾಯಣ, ಮಾಧವ ಎಂಬ ಮೂರು ನಾಮಗಳಿಂದ ನೀರು ಕುಡಿಯಬೇಕು. ಗೋವಿಂದ, ವಿಷ್ಣು ಎಂದು ಹೇಳುತ್ತಾ ಎರಡೂ ಕೈಗಳನ್ನು ತೊಳೆದುಕೊಂಡು, ಮಧುಸೂದನ, ತ್ರಿವಿಕ್ರಮ ಎಂದು ಹೇಳುತ್ತಾ ಅಂಗುಷ್ಠಮೂಲದಿಂದ ತುಟಿಗಳನ್ನು ಒರೆಸಿ, ವಾಮನ, ಶ್ರೀಧರ ಎನ್ನುತ್ತಾ ಮುಖದ ಎಡಗಡೆ ಮುಟ್ಟಿ, ಹೃಷೀಕೇಶ ಎನ್ನುತ್ತಾ ಪಾದಗಳನ್ನು ಮುಟ್ಟಿ, ಪದ್ಮನಾಭ ಎನ್ನುತ್ತಾ ಕೆಳಗೆ ಮುಟ್ಟಿ, ದಾಮೋದರ ಎನ್ನುತ್ತಾ ಶಿರಸ್ಸನ್ನು ಮುಟ್ಟಿ, ಮೂರುಬೆರಳುಗಳನ್ನು ಒಟ್ಟಿಗೇ ಸೇರಿಸಿ ಸಂಕರ್ಷಣ ಎನ್ನುತ್ತಾ ಮುಖವನ್ನು ಮುಟ್ಟಿ, ಹೆಬ್ಬೆರಳು ತರ್ಜನಿ ಸೇರಿಸಿ ವಾಸುದೇವ ಎನ್ನುತ್ತಾ ಮೂಗು ಮುಟ್ಟಿ, ಪ್ರದ್ಯುಮ್ನ ಎನ್ನುತ್ತಾ ಹೆಬ್ಬೆರಳು ಅನಾಮಿಕ ಸೇರಿಸಿ ಕಣ್ಣುಗಳನ್ನು ಮುಟ್ಟಿ, ಅನಿರುದ್ಧ, ಪುರುಷೋತ್ತಮ ಅಧೋಕ್ಷಜ, ನೃಸಿಂಹ ಎನ್ನುತ್ತಾ ನಾಭಿಯನ್ನು ಮುಟ್ಟಿ, ಅಚ್ಯುತನಾಮದಿಂದ ಹೆಬ್ಬೆರಳಿನಿಂದ ಹೃದಯವನ್ನು ಕೈಮೂಲದಿಂದ ಮುಟ್ಟಿ, ಜನಾರ್ದನ, ಉಪೇಂದ್ರ ಎನ್ನುತ್ತಾ ಎಲ್ಲ ಬೆರಳುಗಳಿಂದ ತಲೆಯನ್ನು ಮುಟ್ಟಿಕೊಳ್ಳಬೇಕು. ಹರೆ, ಕೃಷ್ಣ ಎನ್ನುತ್ತಾ ಬಾಹುಮೂಲಗಳನ್ನು ಕೈಮೂಲದಿಂದ ಮುಟ್ಟಬೇಕು. ಉಪನಯನವಾದ ದ್ವಿಜಾದಿಗಳಿಗೆ ಇದು ಆಚಮನವಿಧಿ. 

ಇದೇ ರೀತಿಯಲ್ಲಿ ಸಂಧ್ಯಾವಂದನೆ, ಹೋಮ, ಮತ್ತಿತರ ಕರ್ಮಗಳಲ್ಲಿ ಕೇಶವಾದಿ ನಾಮಗಳಿಗೆ ಚತುರ್ಥಿವಿಭಕ್ತಿಯನ್ನು ಸೇರಿಸಿ, ಸಂಬೋಧನಾ ಪ್ರಥಮವಿಭಕ್ತಿಯಲ್ಲಾಗಲೀ (ಕೇಶವಾಯ ಅಥವ ಕೇಶವ) ನಮಃ ಎಂಬುವ ಪದವನ್ನು ಕೊನೆಯಲ್ಲಿ ಸೇರಿಸಿ ಇಪ್ಪತ್ತನಾಲ್ಕು ನಾಮಗಳೊಂದಿಗೆ ಆಚಮನವನ್ನು ಎರಡುಸಲ ಆಚರಿಸಿದರೆ ದ್ವಿರಾಚಮನವಾಗುತ್ತದೆ. ಕರ್ಮಪ್ರಾರಂಭ-ಅಂತ್ಯಗಳಲ್ಲಿ ದ್ವಿರಾಚಮನ ಮಾಡಬೇಕು. ಅದು ಅಸಂಭವವಾದರೆ ಕೇಶವಾದಿ ಮೂರುನಾಮಗಳಿಂದ ನೀರು ಕುಡಿದು, ಎರಡುಸಲ ಕೈತೊಳೆದುಕೊಳ್ಳಬೇಕು. ನಂತರ ಕಿವಿ ಮುಟ್ಟಿಕೊಳ್ಳಬೇಕು. ಹೀಗೆ ಸಂಧ್ಯೆಗಳಿಗೆ ಇತರ ವಿಧಾನಗಳೂ ಹೇಳಲ್ಪಟ್ಟಿವೆ. ಶೂದ್ರಾದಿಗಳನ್ನು ಮುಟ್ಟಿಸಿಕೊಂಡಾಗ, ವಾಂತಿಯಾದಾಗ, ಸ್ನಾನಮಾಡಿದಾಗ, ಊಟ ತಿಂಡಿ ಸ್ವೀಕರಿಸಿದಾಗ, ನೀರುಕುಡಿದಾಗ, ಸ್ಮಶಾನದಿಂದ ಹಿಂತಿರುಗಿದಾಗ, ತನ್ನ ಪಾದಗಳನ್ನಲ್ಲದೆ ಇತರರ ಪಾದಗಳನ್ನು ತೊಳೆದಾಗ, ದ್ವಿರಾಚಮನವನ್ನು ಮಾಡಬೇಕು. ನೀರು ಸಿಕ್ಕದಿರುವ ಕಡೆಗಳಲ್ಲಿ ಕಿವಿಗಳನ್ನು ಸ್ಪರ್ಶಮಾಡಿಕೊಳ್ಳಬೇಕು. ಇತರ ಕರ್ಮಗಳನ್ನೂ ಕೂಡ ಹೀಗೆಯೇ ಮಾಡಬೇಕು. ಆಚಮನವಿಧಿಯನ್ನು ಭಕ್ತಿಯಿಂದ ಮಾಡುವವನಿಗೆ ದೈನ್ಯವೆಂಬುದಿರುವುದಿಲ್ಲ.

ಇನ್ನು ಬಾಯೊಳಗಿನ ದುರ್ಗಂಧವನ್ನು ನಿವಾರಿಸಲು ಮಾಡಬೇಕಾದ ದಂತಧಾವನ ವಿಧಾನವನ್ನು ಹೇಳುತ್ತೇನೆ. ಪರ್ವತಿಥಿಗಳು, (ಅಷ್ಟಮಿ, ಪೌರ್ಣಮಿ, ಅಮಾವಾಸ್ಯೆ), ಷಷ್ಠಿ, ಪಾಡ್ಯಮಿ, ನವಮಿ, ದ್ವಾದಶಿಗಳನ್ನೂ, ಆದಿ ಮಂಗಳವಾರಗಳನ್ನೂ, ಶ್ರಾದ್ಧ ದಿನವನ್ನೂ ಬಿಟ್ಟೂ ಮಿಕ್ಕ ದಿನಗಳಲ್ಲಿ ದಂತಧಾವನ ಮಾಡಿಕೊಳ್ಳಬೇಕು. ಮುಳ್ಳುಗಿಡ, ಕರ್ಜೂರ, ಕೇತಕಿ, ತೆಂಗಿನ ಕಡ್ಡಿಗಳಿಂದ ಹಲ್ಲು ಉಜ್ಜುವವನು ಚಂಡಾಲನಾಗುತ್ತಾನೆ. ಅತ್ತಿ, ಆಲ, ಉತ್ತರೇಣಿ, ಎಕ್ಕ, ಹೊಂಗೆ ಮತ್ತು ಅಂತಹುದೇ ಪುಣ್ಯಪ್ರದವಾದ ಕಡ್ಡಿಗಳಿಂದಲೇ ದಂತಧಾವನ ಮಾಡಿಕೊಳ್ಳಬೇಕು. ಬ್ರಾಹ್ಮಣನು ಹನ್ನೆರಡು ಅಂಗುಲ, ಕ್ಷತ್ರಿಯ ಒಂಭತ್ತು ಅಂಗುಲ, ವೈಶ್ಯ ಶೂದ್ರರು ಆರು ಅಂಗುಲ ಉದ್ದದ ಕಡ್ಡಿಗಳನ್ನು ಉಪಯೋಗಿಸಬೇಕು. "ಆಯುರ್ಬಿಲಂಚ_________" ಎನ್ನುವ ಮಂತ್ರದಿಂದ ಪ್ರಾರ್ಥಿಸಿ, ಮಂತ್ರ ಹೇಳುತ್ತಾ ಕಡ್ಡಿಯನ್ನು ಕೊಯ್ದು, ಅದರ ಕೊನೆಯನ್ನು ಮೃದುವಾಗಿ ಮಾಡಿ, ಹಲ್ಲು ಉಜ್ಜಬೇಕು. "ಮುಖ ದುರ್ಗಂಧಿ_______" ಎನ್ನುವ ಮಂತ್ರದಿಂದ ನೈರುತ್ಯ ಮೂಲೆಯಲ್ಲಿ ಕಡ್ಡಿಯನ್ನು ವಿಸರ್ಜಿಸಬೇಕು. ಹನ್ನೆರಡುಸಲ ಬಾಯಿ ಪುಕ್ಕಳಿಸಿ, ಎರಡುಸಲ ಆಚಮನ ಮಾಡಬೇಕು.

ನಂತರ ಸರ್ವಸಿದ್ಧಿಗಳೂ ಲಭಿಸುವುದಕ್ಕೆ ಪ್ರಾತಃಸ್ನಾನ ಮಾಡಬೇಕು. ಪ್ರಾತಃಸ್ನಾನದಿಂದ ಮಾನವರಿಗೆ ತೇಜಸ್ಸು, ಆಯುಸ್ಸು ವೃದ್ಧಿಯಾಗುತ್ತವೆ. ಪ್ರಜ್ಞೆ ಬೆಳೆಯುತ್ತದೆ. ದುಃಸ್ವಪ್ನ ಫಲಗಳು ನಾಶವಾಗುತ್ತವೆ. ಸರ್ವ ದೇವತೆಗಳೂ ವಶ್ಯರಾಗುತ್ತಾರೆ. ಸೌಭಾಗ್ಯ, ಸುಖ, ಪುಷ್ಟಿ, ಸಂತೋಷಗಳು ಲಭಿಸುತ್ತವೆ. ಸ್ನಾನವು ದಾರಿದ್ರ್ಯ ಚಿಂತನೆ, ಶೋಕಗಳನ್ನು ಹರಿಸುವುದು. ಪಾಪವನ್ನು ನಾಶಮಾಡುವುದು.

ಗೃಹಸ್ಥನು ನಿತ್ಯವೂ ಪ್ರಾತಃಕಾಲದಲ್ಲಿ, ಮಧ್ಯಾಹ್ನಕಾಲದಲ್ಲಿ ಸ್ನಾನಮಾಡಬೇಕು. ಯತಿ, ವ್ರತಮಾಡುವವನು, ವನವಾಸಿ, ತ್ರಿಕಾಲ ಸ್ನಾನವನ್ನಾಚರಿಸಬೇಕು. ಬ್ರಹ್ಮಚಾರಿ ಒಂದುಸಲ ಮಾತ್ರ ಸ್ನಾನ ಮಾಡಬೇಕು. ಸಂಕಟಬಂದಾಗ, ನೀರು ದೊರಕದಿದ್ದಾಗ, ಅಶಕ್ತಿಯಿಂದಿದ್ದಾಗ, ರೋಗದಿಂದಿರುವಾಗ, ವಾಯುಸ್ನಾನವನ್ನು ಗೋಧೂಳಿಯಿಂದ (ಆಗ್ನೇಯ ಭಸ್ಮ) "ಆಪೋಹಿಷ್ಠಾ_____-"ಎನ್ನುವ ಮೂರು ಮಂತ್ರಗಳನ್ನು ಹೇಳುತ್ತಾ ಮೂರುಸ್ನಾನಗಳನ್ನು ಮಾಡಬೇಕು. ಭೌಮ ಸ್ನಾನವೆನ್ನುವುದು ಮಣ್ಣಿನಿಂದ ಮಾಡಬಲ್ಲದಾದದ್ದು. ದಿವ್ಯಸ್ನಾನವು ಬಿಸಿಲುಕೂಡಿದ ಮಳೆಯಲ್ಲಿ ಮಾಡುವ ಸ್ನಾನವು. ಮೌನವಾಗಿ ವಿಷ್ಣುಧ್ಯಾನವನ್ನು ಮಾಡಿದರೂ, ಗುರುದರ್ಶನ ಮಾಡಿದರೂ, ತಂದೆತಾಯಿಗಳ ಪಾದಜಲವನ್ನು ಶರೀರದ ಮೇಲೆ ಚುಮುಕಿಸಿಕೊಂಡರೂ, ತೀರ್ಥಸ್ನಾನ ಫಲವು ಬರುವುದು. ಇವು ಗೌಣ ಸ್ನಾನಗಳು. ಸಂಕಟಪರಿಸ್ಥಿತಿಗಳಲ್ಲಿ ತಿಳಿದವರು ಇಂತಹ ಸ್ನಾನವನ್ನು ಮಾಡಬಹುದು. ಚಂಡಾಲನನ್ನು ತಾಕಿದರೆ ಜಲಸ್ನಾನದಿಂದ ಮಾತ್ರವೇ ಶುದ್ಧಿಯಾಗುತ್ತದೆ. ವಾಂತಿಯಾದಾಗ, ರತಿಕ್ರಿಯಾನಂತರ, ಜಲಸ್ನಾನದಿಂದಲೇ ಶುದ್ಧಿ. ಶೂದ್ರಸ್ಪರ್ಶವಾದರೆ ಮಂತ್ರಸ್ನಾನವನ್ನು ಮಾಡಬಹುದು. ಧೃಢಶರೀರಿಯಾದವನಿಗೆ ಅಂತಹ ಸಂದರ್ಭಗಳಲ್ಲಿ ಜಲಸ್ನಾನವೇ ಮುಖ್ಯ.

ರೋಗಿಗಳು, ಅಶಕ್ತರು ತಮ್ಮ ಶಕ್ತ್ಯಾನುಸಾರ ಗೌಣಸ್ನಾನವನ್ನು ಮಾಡಬಹುದು. ಅಂತಹವರು ಉಷ್ಣೋದಕದಲ್ಲೂ ಸ್ನಾನಮಾಡಬಹುದು. ಸ್ವತಃ ಪವಿತ್ರವೇ ಆದ ನೀರು ಅಗ್ನಿ ಸ್ಪರ್ಶದಿಂದ ವಿಶೇಷ ಪವಿತ್ರವಾಗಿ ಗೃಹಸ್ಥರಿಗೆ ಶ್ರೇಷ್ಠವಾದದ್ದು. ಮನೆಯಲ್ಲಿ ಉಷ್ಣೋದಕ ಸ್ನಾನ ಮಾಡಿದರೆ, ಆಚಮನ, ಅಘಮರ್ಷಣ, ಮಂತ್ರಪಠಣ, ಸಂಕಲ್ಪ, ತರ್ಪಣಗಳು, ಬಟ್ಟೆಯನ್ನು ಹಿಂಡುವುದು ಬೇಕಾಗಿಲ್ಲ. ತಣ್ಣೀರು ಬೆರೆಸಿದ ಬಿಸಿನೀರಿನಲ್ಲಿ ಸ್ನಾನಮಾಡುವುದಾದರೆ, "ಆಪೋಹಿಷ್ಠಾ_________" ಎನ್ನುವ ಮಂತ್ರದಿಂದ, ಗಾಯತ್ರಿ ಮಂತ್ರದಿಂದ ಅಭಿಮಂತ್ರಿಸಿ, ಸ್ನಾನಮಾಡಿ ಕೊನೆಯಲ್ಲಿ ಮಾರ್ಜನ ಮಾಡಿಕೊಳ್ಳಬೇಕು.(ನೀರು ತಲೆಯಮೇಲೆ ಚುಮುಕಿಸಿಕೊಳ್ಳಬೇಕು). ಪುತ್ರಜನನ ಕಾಲದಲ್ಲಿ, ಸಂಕ್ರಾಂತಿಯಂದು, ಅಶೌಚವಾದಾಗ, ಶ್ರಾದ್ಧದಿನದಂದು, ವ್ರತದೀಕ್ಷೆಮಾಡುವಾಗ, ಪರ್ವದಿನಗಳಲ್ಲಿ, ಬಿಸಿನೀರಿನಲ್ಲೂ, ಮಂಗಳ, ಉತ್ಸವಾದಿ ದಿನಗಳಲ್ಲಿ ತಣ್ಣೀರಿನಲ್ಲೂ ಸ್ನಾನ ಮಾಡಬಾರದು. ನದಿಯಲ್ಲಿ ಪ್ರವಾಹಕ್ಕೆದುರಾಗಿ, ಇಲ್ಲವೇ ಪೂರ್ವದಿಕ್ಕಿಗೆ ಮುಖಮಾಡಿ, ಪವಿತ್ರಧರಿಸಿ, ಶಿಖೆಯನ್ನು ಮುಡಿಯಂತೆ ಕಟ್ಟಿ, ಮೌನವಾಗಿ ಸ್ನಾನ ಮಾಡಬೇಕು. ಅಘಮರ್ಷಣ ಜಪ ಮಾಡಿ, ದೇವಾದಿಗಳಿಗೆ ತರ್ಪಣ ನೀಡಿ, ಮಂತ್ರವಿಧಿಯಾಗಿ ಆಚಮನ ಮಾಡಿ, ವಸ್ತ್ರ ಧರಿಸಿ, ಹರಿಸ್ಮರಣೆ ಮಾಡಬೇಕು. "ಅಪವಿತ್ರಃ ಪವಿತ್ರೋವಾ_________" ಎನ್ನುವ ಮಂತ್ರ ಹೇಳಿ, "ಆಪೋಹಿಷ್ಠಾ________" ಎನ್ನುವ ಮಂತ್ರದಿಂದ ತಲೆಯಮೇಲೆ ನೀರು ಚುಮುಕಿಸಿಕೊಳ್ಳಬೇಕು (ಮಾರ್ಜನ). ಭಾನುವಾರ ಅಭ್ಯಂಗನವು ನಿಷಿದ್ಧ. ಹಾಗೆ ಮಾಡಿದರೆ ಜ್ವರ. ಸೋಮವಾರ ಕಾಂತಿಹೀನತೆ. ಮಂಗಳವಾರ ಮರಣ ಪ್ರಾಪ್ತಿಯಾಗುತ್ತದೆ. ಬುಧವಾರ ಶ್ರೀಲಾಭ, ಗುರುವಾರ ಹಾನಿ, ಶುಕ್ರವಾರ ಪುತ್ರಹಾನಿ, ಶನಿವಾರ ಸಂಪತ್ ಲಾಭಗಳೂ ಉಂಟಾಗುವುವು. ಹೀಗೆ ವಿಶೇಷಗಳನ್ನರಿತುಕೊಂಡು ಪುಣ್ಯ ಸ್ತ್ರೀ ತಲೆಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಅಶಕ್ತನಾದರೆ, ನದಿಗೆ ಹೋಗಿ, ನದಿಯನ್ನು ಧ್ಯಾನಿಸಿ, ಬಟ್ಟೆಯನ್ನು ಒದ್ದೆ ಮಾಡಿಕೊಂಡು ಮೈ ಒರೆಸಿಕೊಳ್ಳಬೇಕು. ಅದರಿಂದಲೂ ಸ್ನಾನ ಮಾಡಿದ ಫಲವುಂಟಾಗುತ್ತದೆ. ಕಾಷಾಯಬಣ್ಣ, ರಕ್ತವರ್ಣ, ಮಾಸಿದ, ಹರಿದ, ಸುಟ್ಟ ವಸ್ತ್ರಗಳನ್ನು ಧರಿಸಿದರೂ, ಒಂದೇ ವಸ್ತ್ರವನ್ನು ಧರಿಸಿದರೂ ರಾಕ್ಷಸರು ಅಂತಹವನ ಪುಣ್ಯವನ್ನು ಅಪಹರಿಸುತ್ತಾರೆ. ಬ್ರಾಹ್ಮಣನಿಗೆ ಶ್ವೇತವಸ್ತ್ರವೇ ಮುಖ್ಯವಾದದ್ದು. ಅಂಗವಸ್ತ್ರವೂ ಬಿಳಿಯ ಬಣ್ಣದ್ದೇ ಆಗಿರಬೇಕು. ಅಂಗವಸ್ತ್ರವನ್ನು ಧರಿಸಿದ ನಂತರ ಭಸ್ಮಧಾರಣೆ ಮಾಡಬೇಕು.

ದ್ವಾರವತಿ ಮೃತ್ತಿಕೆಯು ದೊರೆಯದಿದ್ದರೆ ಗಂಗಾ ಮೃತ್ತಿಕೆಯನ್ನು ಭಸ್ಮವಾಗಿ ಧರಿಸಬೇಕು. ಊರ್ಧ್ವಪುಂಡ್ರ ಧಾರಣೆ ಮಾಡಬೇಕು. ಪುಷ್ಟಿಯನ್ನು ಕೋರುವವನು ಅಂಗುಷ್ಟದಿಂದ ವಿಷ್ಣುಸಾಯುಜ್ಯವನ್ನು ಕೊಡುವ ಮೃತ್ತಿಕೆಯನ್ನು ಧರಿಸಬೇಕು. ಆಯುಷ್ಯಕಾಮನು ಮಧ್ಯಮಾಂಗುಳಿಯಿಂದ, ಅನ್ನಕಾಮಿ ಅನಾಮಿಕದಿಂದ, ಮೋಕ್ಷಕಾಮಿ ತರ್ಜನಿಯಿಂದ ಧರಿಸಬೇಕು. ಉಗುರುಗಳಿಂದ ಧರಿಸಿದರೆ ಪಾಪವುಂಟಾಗುತ್ತದೆ. ಹತ್ತು ಅಂಗುಲ ಉದ್ದವಾಗಿರುವಂತೆ ಧರಿಸುವುದು ಉತ್ತಮವು. ಎಂಟು ಅಂಗುಲ ಮಧ್ಯಮ. ಆರು ಅಂಗುಲ ಕನಿಷ್ಠ. ತಮ್ಮ ತಮ್ಮ ಆಚಾರದಂತೆ ಮೃತ್ತಿಕಾಧಾರಣೆ ಮಾಡಬೇಕು. ಕೇಶವ ಎನ್ನುತ್ತಾ ಲಲಾಟದಲ್ಲಿ, ನಾರಾಯಣ ಎನ್ನುತ್ತಾ ನಾಭಿಯಲ್ಲಿ, ಮಾಧವ-ವಕ್ಷಸ್ಥಲ, ಗೋವಿಂದ-ಕಂಠ, ವಿಷ್ಣು ನಾಮದಿಂದ ದಕ್ಷಿಣ ಕುಕ್ಷಿಯಲ್ಲಿ, ಮಧುಸೂದನ ನಾಮದಿಂದ ದಕ್ಷಿಣ ಬಾಹು, ತ್ರಿವಿಕ್ರಮ ನಾಮದಿಂದ ದಕ್ಷಿಣ ಕರ್ಣ, ವಾಮನ ನಾಮದಿಂದ ವಾಮ ಕುಕ್ಷಿ, ಶ್ರೀಧರ ನಾಮದಿಂದ ವಾಮ ಬಾಹು, ಹೃಷೀಕೇಶ ಎಂದು ಎರಡನೆಯ ಕಿವಿ, ಪದ್ಮನಾಭ ಎಂದು ಪೃಷ್ಠ, ದಾಮೋದರ ಎಂದು ಮೂರ್ಧ್ನಿ: ಈ ರೀತಿಯಲ್ಲಿ ಶುಕ್ಲಪಕ್ಷದಲ್ಲಿ ಧರಿಸಬೇಕು. ಹಾಗೆಯೇ ಕೃಷ್ಣಪಕ್ಷದಲ್ಲಿ ಸಂಕರ್ಷಣಾದಿ ನಾಮಗಳಿಂದ ಊರ್ಧ್ವಪುಂಡ್ರವನ್ನು ಮೃತ್ತಿಕೆಯಿಂದ ಧರಿಸಿ, ನಂತರ ಭಸ್ಮವನ್ನೂ ಧರಿಸಬೇಕು. ಹರಿ-ಹರರನ್ನು ಸಂತೋಷಗೊಳಿಸಿದ್ದರಿಂದ ಭಕ್ತಿ-ಮುಕ್ತಿಗಳು ನಿಶ್ಚಯವಾಗಿಯೂ ಲಭಿಸುವುವು. 

ಶ್ರಾದ್ಧಾದಿಗಳು, ದೇವತಾಕಾರ್ಯಗಳಲ್ಲಿ, ವಿವಾಹಾದಿ ದಿನಗಳಲ್ಲಿ, ಶುಭವಾದ ಅಭ್ಯಂಗನವಾದಮೇಲೂ, ಪುರುಡು ದಿನಗಳಲ್ಲೂ ಮೃತ್ತಿಕಾ ಧಾರಣೆ ಮಾಡಬಾರದು. ಬ್ರಹ್ಮ ಯಜ್ಞದ ಸಮಯದಲ್ಲಿ, ತರ್ಪಣ ಕೊಡುವಾಗ, ಯಜ್ಞ ಸಮಯದಲ್ಲಿ, ಸಂಧ್ಯಾದಿ ಕರ್ಮ ಸಮಯಗಳಲ್ಲಿ ದರ್ಭೆಗಳನ್ನು ಸ್ವೀಕರಿಸಬೇಕು. ದರ್ಭೆಗಳಲ್ಲಿ - ಕುಶ, ಕಾಶ, ಯವ, ಉಶಿರ, ಗೋಧೂಮ, ವ್ರೀಹಿ, ಕುಂದರ, ತೃಣ, ಮುಂಜ, ದೂರ್ವ - ಎಂದು ಹತ್ತು ವಿಧ. ದೂರ್ವಗಳನ್ನು ಪ್ರತಿದಿನವೂ ಇಲ್ಲವೇ ಶ್ರಾವಣ ಅಮಾವಾಸ್ಯೆಯ ದಿನಗಳಲ್ಲಿ ತರಬೇಕು. ಅವು ಆಯಾತಯಾಮಗಳು (ಜಾಮ ಹುಟ್ಟುವುದಕ್ಕೆ ಮುಂಚೆ ತಂದವು). ಮಂತ್ರಪೂರ್ವಕವಾಗಿ ಅವನ್ನು ತಂದುಕೊಳ್ಳಬೇಕು. ವಿಪ್ರನು ನಾಲ್ಕು, ಕ್ಷತ್ರಿಯನು ಮೂರು, ವೈಶ್ಯನು ಎರಡು, ಶೂದ್ರನು ಒಂದು ದೂರ್ವೆಯಿಂದ ಪವಿತ್ರವನ್ನು ಮಾಡಿ ಕೈಯಲ್ಲಿ ಧರಿಸಬೇಕು. ದೂರ್ವಗಳ ಮಹಿಮೆ ಅಪಾರ. ಅದರ ಮೂಲದಲ್ಲಿ ರುದ್ರ, ಅಗ್ರದಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು ಇದ್ದಾರೆ. ದೂರ್ವಾ ಪವಿತ್ರವು ಪಾಪ ನಾಶಕರವು. ಕೈಯಲ್ಲಿ ಚಕ್ರ ಹಿಡಿದು ವಿಷ್ಣುವು ದೈತ್ಯರನ್ನು ನಾಶಮಾಡಿದಂತೆ ದೂರ್ವಾ ಪವಿತ್ರ ಧಾರಣೆಯಿಂದ ಪಾತಕಗಳು ನಿಶ್ಶೇಷವಾಗಿ ಪರಿಹರಿಸಲ್ಪಡುವುವು. ಅಗ್ನಿ ಸ್ಪರ್ಶದಿಂದ ತೃಣಪರ್ವತವು ಭಸ್ಮವಾಗಿ ಹೋಗುವಂತೆ ದೂರ್ವಾ ಪವಿತ್ರದಿಂದ ಪಾಪಗಳು ನಾಶವಾಗಿ ಹೋಗುತ್ತವೆ. ಗ್ರಂಥಿ (ಗಂಟು) ಹಾಕಿದ ಪವಿತ್ರವನ್ನು ಧರಿಸಿ ಬ್ರಹ್ಮಯಜ್ಞ, ಗಂಟು ಹಾಕದೆ ಇರುವ ಪವಿತ್ರವನ್ನು ಧರಿಸಿ ಊಟ ಮಾಡಬೇಕು. ಬ್ರಾಹ್ಮಣನು ಎರಡು ಕೈಗಳಲ್ಲಿ ಭಕ್ತಿಯಿಂದ ಪವಿತ್ರ ಧಾರಣೆ ಮಾಡಬೇಕು. ಕರ್ಪೂರವನ್ನು ಬೆಂಕಿ ಸುಟ್ಟಂತೆ, ಪವಿತ್ರವು ಪಾಪ ಸಮೂಹವನ್ನು ಕ್ಷಣದಲ್ಲಿ ಸುಟ್ಟುಹಾಕುವುದು. ಸುಮಾರು ನಾಲ್ಕಂಗುಲ ಉದ್ದವಿರುವ ಎರಡು ದರ್ಭೆಗಳ ಪವಿತ್ರವು ಕರ್ಮಕಾಲದಲ್ಲಿ ವಿಹಿತವು. ದಾನ ಮಾಡುವಾಗ, ಜಪ ಮಾಡುವಾಗ, ಸ್ವಾಧ್ಯಾಯ ಸಮಯದಲ್ಲಿ, ಹೋಮ ಮಾಡುವಾಗ, ಪವಿತ್ರವಾದ ಕರ್ಮಗಳನ್ನು ಮಾಡುವಾಗ ದರ್ಭೆ ಮುದ್ರೆ ಕೂಡಿದ ಬಂಗಾರದ ಪವಿತ್ರಗಳನ್ನು ಧರಿಸಬೇಕು. ದೇವ ಕಾರ್ಯಗಳಲ್ಲಿ ಬಂಗಾರ ಮುದ್ರೆಯಿರುವ ಪವಿತ್ರವನ್ನು, ಪಿತೃಕರ್ಮಗಳಲ್ಲಿ ಬೆಳ್ಳಿ ಮುದ್ರೆಯಿರುವ ಪವಿತ್ರವನ್ನು ಧರಿಸಬೇಕು. ಅನಾಮಿಕದಲ್ಲಿ ಸುವರ್ಣ ಪವಿತ್ರವನ್ನು, ತರ್ಜನಿಯಲ್ಲಿ ಬೆಳ್ಳಿಯ ಪವಿತ್ರವನ್ನು ತೆಗೆದುಕೊಳ್ಳಬೇಕು. ಖಡ್ಗ ಮುದ್ರೆಯದನ್ನು ಕನಿಷ್ಠಿಕೆಯಲ್ಲಿ ಧರಿಸಬೇಕು. ಜೀವಂತ ತಂದೆ ಇರುವವನು ಖಡ್ಗ ಮುದ್ರೆಯದನ್ನು ಹಾಕಿಕೊಳ್ಳಬಾರದು. ಯೋಗ ಪಟ್ಟ, ಉತ್ತರೀಯ, ತರ್ಜನಿಯಲ್ಲಿ ರಜತ ಮುದ್ರಿಕೆ, ಗಯಾಶ್ರಾದ್ಧ ಪಾದುಕೆಗಳನ್ನು ಜೀವಂತ ಪಿತೃವಾದವನು ಧರಿಸಬಾರದು. ಗಯಾ ಶ್ರಾದ್ಧ ಮಾಡಬಾರದು. ನವರತ್ನಗಳ ಮುದ್ರಿಕೆಯನ್ನು ಧರಿಸುವವನಿಗೆ ಪಾತಕಗಳು ತಟ್ಟುವುದಿಲ್ಲ. ದ್ವಿಜನಾದವನು ಸದಾಕಾಲ ಒಂದು ರತ್ನವಿರುವ ಮುದ್ರಿಕೆಯನ್ನು ಧರಿಸಬೇಕು.

ಮುನಿಗಳೇ, ಇನ್ನು ಸಂಧ್ಯಾಕಾಲವನ್ನು ಕುರಿತು ಹೇಳುತ್ತೇನೆ. ಅದು ಮೂರು ವಿಧಗಳು. ನಕ್ಷತ್ರ ಸಹಿತ ಸಂಧ್ಯೆ ಉತ್ತಮವು. ನಕ್ಷತ್ರಗಳು ಅದೃಶ್ಯವಾದ ಸಂಧ್ಯೆ ಮಧ್ಯಮವು. ಸೂರ್ಯ ಸಹಿತವಾದ ಸಂಧ್ಯೆ ಅಧಮವು. ಹೀಗೆ ಪ್ರಾತಸ್ಸಂಧ್ಯೆ ಮೂರುವಿಧ. ಒಂದೂವರೆ ಜಾಮವಾದ ಮೇಲೆ ಸಾಯಂಕಾಲದವರೆಗೂ ಮಧ್ಯಾಹ್ನ ಸಂಧ್ಯೆ. ಶಾಸ್ತ್ರ ವಿಧಾಯಕವಾದ ಕಾಲಕ್ಕೆ ಮುಂಚೆ ಮಾಡುವ ಕರ್ಮಾಚರಣವು ವ್ಯರ್ಥವು. ಶಿಖೆಯನ್ನು ಮುಡಿಯಾಗಿ ಹಾಕಿ, ದರ್ಭಪಾಣಿಯಾಗಿ, ಎರಡು ಸಲ ಆಚಮನ ಮಾಡಿ, ಯಥಾ ವಿಧಿಯಾಗಿ, ಕನಿಷ್ಠಿಕ-ಅನಾಮಿಕ-ಅಂಗುಷ್ಠಗಳಿಂದ ಯತಿಯಾದವನು ಹಾಗೂ ಬ್ರಹ್ಮಚಾರಿಯಾದವನು, ಐದೂ ಬೆರಳುಗಳಿಂದ ಗೃಹಸ್ಥನು, ಮೂಗು ಹಿಡಿದು, ಮೆಲ್ಲಗೆ ಉಸಿರು ತೆಗೆದುಕೊಂಡು, ಕುಂಭನ ಮಾಡಿ, ಓಂಕಾರದಿಂದ ಕೂಡಿದ ವ್ಯಾಹೃತಿಗಳನ್ನು ಏಳು ಸಲ, ಸಶಿರವಾದ ಗಾಯತ್ರಿಯನ್ನು ಮೂರುಸಲ ಜಪಿಸಿ, ನಿಧಾನವಾಗಿ ಪಿಂಗಳೆಯಿಂದ ಹೊರಕ್ಕೆ ಬಿಡಬೇಕು. ಎಡಗೈಯಲ್ಲಿ ಚಿನ್ನ, ಬೆಳ್ಳಿ ಅಥವಾ ಮರದಿಂದ ಮಾಡಿದ ನೀರು ತುಂಬಿದ ಪಾತ್ರೆಯನ್ನು ತೆಗೆದುಕೊಂಡು ಮಾರ್ಜನ ಮಾಡಿಕೊಳ್ಳಬೇಕು. ಒಡೆದು ಹೋದ ಪಾತ್ರೆಯೂ ನಿಂದ್ಯವು. ಎರಡು ಮುಖಗಳಿರುವ ಮಣ್ಣಿನ ಪಾತ್ರೆಯೂ ವ್ಯರ್ಥವೇ! ವರಾಂತಗಳಿಂದ ಮೂರ್ಧ್ನಿಯಲ್ಲಿ; ನಾಂತಗಳಿಂದ ಪಾದಗಳಲ್ಲಿ; ಧಾಂತಗಳಿಂದ ಹೃದಯದಲ್ಲಿ; "ಆಪೋಹಿಷ್ಠಾ--------" ಎನ್ನುವ ಮಂತ್ರದಿಂದ ಮಾರ್ಜನ ಮಾಡಿಕೊಳ್ಳಬೇಕು. ಪ್ರಾತಃಕಾಲದಲ್ಲಿ "ಸೂರ್ಯಶ್ಚ---" ಎನ್ನುವ ಮಂತ್ರ, ಮಾಧ್ಯಾಹ್ನ ಕಾಲದಲ್ಲಿ "ಆಪಃ ಪುನಹ್----" ಎನ್ನುವ ಮಂತ್ರ, ಸಾಯಂಕಾಲದಲ್ಲಿ "ಅಗ್ನಿಶ್ಚ---" ಎನ್ನುವ ಮಂತ್ರದಿಂದ ಮಂತ್ರಾಚಮನ ಮಾಡಿ, ಮತ್ತೆ ಆಚಮನ ಮಾಡಬೇಕು. "ಆಪೋಹಿಷ್ಠಾ----" ಎನ್ನುವ ಸೂಕ್ತದಿಂದ ಮಾರ್ಜನ, "ಋತಂಚ-----"ಎಂದು ಅಘಮರ್ಷಣ ಮಾಡಿ, ಆಚಮನ ಮಾಡಿ, ಗಾಯತ್ರಿ ಮಂತ್ರದಿಂದ ಮೂರುಸಲ ಅರ್ಘ್ಯ ಕೊಡಬೇಕು. ಸೂರ್ಯನಿಗೆ, ಸುಮಾರು ಹನ್ನೆರಡು ಅಂಗುಲ ಮೇಲೆ ಎತ್ತಿ ಹಿಡಿದ ಅಂಜಲಿಯಿಂದ ನೀರು ಬಿಡುವುದು ಅರ್ಘ್ಯವು. ಕಾಲಾತಿಕ್ರಮಣವಾದರೆ ಹೆಚ್ಚಾಗಿ ಒಂದು ಅರ್ಘ್ಯವನ್ನು, ಎಂದರೆ ನಾಲ್ಕು ಅರ್ಘ್ಯಗಳನ್ನು ಕೊಡಬೇಕು. ಮಧ್ಯಾಹ್ನ, "ಹಗ್ಂಸಃ----"ಎನ್ನುವ ಮಂತ್ರದಿಂದ ಬಗ್ಗಿ ನಿಂತು ಒಂದು ಸಲ ಮಾತ್ರ ಅರ್ಘ್ಯ ಕೊಡಬೇಕು. ಸಾಯಂಕಾಲ ಕೂತು ಅರ್ಘ್ಯ ಕೊಡಬೇಕು. ಅರ್ಘ್ಯ ಕೊಡುವುದಕ್ಕೆ ಕಾರಣವನ್ನು ಹೇಳುತ್ತೇನೆ.

ಮಂದೇಹರೆಂಬ ಮುವ್ವತ್ತಮೂರು ಕೋಟಿ ರಾಕ್ಷಸರು ಇದ್ದಾರೆ. ಸೂರ್ಯೋದಯದಲ್ಲಿ ಅವರು ವಿಘ್ನವನ್ನುಂಟು ಮಾಡಿ ಸೂರ್ಯನನ್ನು ಉದಯಿಸಲು ಬಿಡುವುದಿಲ್ಲ. ಅದರಿಂದ ಕರ್ಮಲೋಪವಾಗುತ್ತದೆ. ದೇವತೆಗಳಿಗೆ ಉಪವಾಸವುಂಟಾಗುತ್ತದೆ. ಅದರಿಂದ ಜಗತ್ತು ನಾಶವಾಗುತ್ತದೆ. ಆ ಕಾರಣದಿಂದ ಅರ್ಘ್ಯವನ್ನು ನೀಡಬೇಕು. ಅವು ವಜ್ರಸಮಾನವಾದವು. ಆ ಅರ್ಘ್ಯಗಳು ಬ್ರಹ್ಮ ಕುಲದಿಂದ ಉದ್ಭವಿಸಿದ ದೈತ್ಯರನ್ನು ಪ್ರತಿ ದಿನವೂ ಸಂಹಾರ ಮಾಡುವುದು. ಆ ಬ್ರಹ್ಮಹತ್ಯಾ ಶಾಂತಿಗಾಗಿ ಭೂಪ್ರದಕ್ಷಿಣೆ ಕರ್ತವ್ಯವು. "ಅಸಾವಾದಿತ್ಯೋ ಬ್ರಹ್ಮ" ಎಂಬ ಮಂತ್ರದಿಂದ ಧ್ಯಾನಿಸಿ, ಪ್ರದಕ್ಷಿಣೆಯಾಗಿ ನೀರು ಚೆಲ್ಲಿದರೆ ಬ್ರಹ್ಮಹತ್ಯೆಯಿಂದ ಬ್ರಾಹ್ಮಣನು ಶುಚಿಯಾಗುತ್ತಾನೆ. ಈ ವಿಧದಲ್ಲಿ, ಮನೆಯಲ್ಲಿ ಮಾಡಿದರೆ ಒಂದು ಗುಣ, ಮನೆಯಿಂದಾಚೆ ಮಾಡಿದರೆ ಹತ್ತು ಗುಣ, ನದಿಯಲ್ಲಿ ಮಾಡಿದರೆ ನೂರುಗುಣ, ತೀರ್ಥ ಪುಷ್ಕರಣಿಗಳಲ್ಲಿ ಮಾಡಿದರೆ ಸಹಸ್ರಗುಣ, ಪುಣ್ಯಫಲ ಲಭಿಸುತ್ತದೆ. ಗಂಗೆಯು ಸುರ ನದಿಯಾದದ್ದರಿಂದ ಅಲ್ಲಿ ಸಂಧ್ಯಾವಂದನೆ ಮಾಡಿದರೆ ಅಮಿತವಾದ ಪುಣ್ಯವುಂಟಾಗುತ್ತದೆ. ಬಹಿಃ ಪ್ರದೇಶದಲ್ಲಿ ಸಂಧ್ಯಾವಂದನೆ ಮಾಡಿದರೆ ಹಗಲು ಹೊತ್ತು ರತಿ, ಸುರಾಪಾನ, ಅಸತ್ಯ ಭಾಷಣಗಳಿಂದ ಬರುವಂತಹ ಪಾಪಗಳು ನಾಶವಾಗುತ್ತವೆ. ಬಹಿಃ ಪ್ರದೇಶದಲ್ಲಿ ಮಾಡಿದ ಜಪವೂ ಫಲ ಕೊಡುತ್ತದೆ. ಗೃಹದಲ್ಲಿ ಒಂದು ಗುಣ, ನದಿಯಲ್ಲಿ ಮೂರು ಗುಣ, ವನದಲ್ಲಿ ದಶ ಗುಣ, ಗೋಶಾಲೆಯಲ್ಲಿ ಹಾಗೂ ಅಗ್ನಿಗೇಹದಲ್ಲಿ ನೂರು ಗುಣ, ತೀರ್ಥ-ದೇವಸನ್ನಿಧಿಗಳಲ್ಲಿ ಸಹಸ್ರ ಗುಣ, ಹರಿ ಹರ ಸಮೀಪದಲ್ಲಿ ಅನಂತವಾದ ಪುಣ್ಯ ಲಭಿಸುತ್ತದೆ. ಮರದ ಪೀಠದ ಮೇಲೆ ಕೂತು ಜಪ ಮಾಡಿದರೆ ದುಃಖ, ಯಶೋಹಾನಿ, ಋಣ ಉಂಟಾಗುತ್ತದೆ. ಚಿಗುರೆಲೆಯ ಮೇಲೆ ಕೂತು ಜಪ ಮಾಡಿದರೆ ದಾರಿದ್ರ್ಯ, ಕಲ್ಲಿನ ಮೇಲೆ ವ್ಯಾಧಿ, ಕುಶಾಸನದ ಮೇಲೆ ವಶೀಕರಣ, ರೋಗ ಪಾಪ ವಿನಾಶ ಉಂಟಾಗುತ್ತದೆ. ಪ್ರಜ್ಞೆ ಆಯುಸ್ಸು ವೃದ್ಧಿಯಾಗುತ್ತದೆ. ಭಸ್ಮದಿಂದ ವ್ಯಾಧಿ ನಾಶನ, ಕಂಬಳಿಯ ಮೇಲೆ ಸೌಖ್ಯ, ಅಲ್ಲದೆ ಪೀಠವೂ ಸುಖಕರವಾಗಿರುತ್ತದೆ. ಕೃಷ್ಣಾಜಿನದ ಮೇಲೆ ಮಾಡಿದ ಜಪ ಜ್ಞಾನದಾಯಕವು. ವ್ಯಾಘ್ರ ಚರ್ಮದ ಮೇಲೆ ಸಿರಿ, ಮೋಕ್ಷಗಳುಂಟಾಗುವುವು. ಆಸನದಲ್ಲಿ ಕುಳಿತು, ನಿಯಮವಾಗಿ ಭೂಪ್ರಾರ್ಥನೆ ಮಾಡಿ, ಭೂತೋಚ್ಛಾಟನೆ ಮಾಡಿ, ಅಂಗನ್ಯಾಸ ಪೂರ್ವಕವಾಗಿ ದೇವೀ ರೂಪವನ್ನು ಏಕಾಗ್ರ ಚಿತ್ತದಿಂದ ಭಾವಿಸಿಕೊಳ್ಳಬೇಕು. ಅಕ್ಷರ ಪೂರ್ವಕವಾದ ಆರ್ಷ ದೈವತ ಛಂದಸ್ಸುಗಳನ್ನು ಸ್ಮರಿಸುತ್ತಾ, ನ್ಯಾಸ ಮಾಡಿ, ತತ್ತ್ವ(ಸ್ವರೂಪ) ಮುದ್ರೆಗಳನ್ನು ಪ್ರದರ್ಶಿಸಿ, ಜಪದ ಪ್ರಧಾನ ದೇವತೆಯನ್ನು "ಬಾಲಬಾಲಾದಿತ್ಯ------"ಎನ್ನುವ ಮೂರು ಧ್ಯಾನ ಶ್ಲೋಕಗಳಿಂದ ತ್ರಿಕಾಲದಲ್ಲೂ ಧ್ಯಾನಿಸಿ, "ಅಮ್ಮ ವರದಾಯಿನಿ, ಬಾ" ಎಂದು, ಪೂರ್ವ ಮುಖನಾಗಿ ನಿಂತು, ಏಕಾಗ್ರ ಮನಸ್ಕನಾಗಿ, ಮಂತ್ರಾರ್ಥವನ್ನು ಅನುಸಂಧಾನ ಮಾಡಿಕೊಳ್ಳುತ್ತಾ, ಸಾವಧಾನವಾಗಿ ಜಪ ಮಾಡ ಬೇಕು. ಓಂಕಾರ ವ್ಯಾಹೃತಿಗಳಿಂದ ಗಾಯತ್ರಿ ಮಂತ್ರ ಪಾದಗಳನ್ನು ಬಿಡಿಸಿ, ಮಾಲೆ ಹಿಡಿದು, ವಸ್ತ್ರವನ್ನು ಹೊದೆಸಿ, ಸಮಾಧಾನ ಚಿತ್ತನಾಗಿ, ನಾಸಿಕಾಗ್ರದ ಮೇಲೆ ದೃಷ್ಟಿಯನ್ನು ನಿಲ್ಲಿಸಿ, ನಿಧಾನವಾಗಿ ಗಾಯತ್ರಿಯನ್ನು ಜಪಿಸಬೇಕು. ಜಪ ಪೂರ್ತಿಯಾದ ಮೇಲೆ ಮತ್ತೆ ಅಂಗ ಹೃದಯಾದಿ ನ್ಯಾಸ ಮಾಡಬೇಕು. ಮಕಾರವೆಂದರೆ ಮನಸ್ಸು ಎಂದೂ, ತ್ರ ಎಂದರೆ ತ್ರಾಣ(ರಕ್ಷಣೆ) ಎಂದೂ ಅರ್ಥ. ಈ ಮನೋ ರಕ್ಷಣೆಗಳಿಂದ ಮಂತ್ರವೆಂಬ ಅಕ್ಷರ ದ್ವಯವು ಏರ್ಪಾಡಾಗಿದ್ದು ಪಾಪ ತಾಪಗಳನ್ನು ಹರಿಸುವುದು. ಜಕಾರವು ಜನ್ಮವಿಚ್ಛೇದ ಮಾಡುವುದು. ಪಕಾರವು ಪಾಪ ನಾಶಕವು. ಈ ಎರಡು ಅಕ್ಷರಗಳು ಕಲೆಯುವುದರಿಂದ ಉಂಟಾದ ಜಪವು ಪಾಪ ಜನ್ಮವನ್ನು ನಿವರ್ತಿಸುವಂತೆ ಮಾಡಬಲ್ಲುದು. ಸರ್ವ ವೇದಗಳಿಗೂ ಮೂಲವು ಗಾಯತ್ರಿಯೇ! ಇದು ಸರ್ವ ಸಮ್ಮತವಾದದ್ದು. ಗಾಯತ್ರಿ ಜಪದಿಂದ ವೇದ ಪಾಠಫಲವು ಲಭಿಸುತ್ತದೆ. ಗಾಯತ್ರಿ ಜಪವನ್ನು ಮಾಡದವನ ಜನ್ಮ ಹಂದಿಯ ಜನ್ಮದಂತೆ ವ್ಯರ್ಥ. ಗಾಯತ್ರಿ ಜಪ ಮಾಡುವವರು ಅಭೀಷ್ಟ ಪಲಗಳನ್ನು ಹೊಂದ ಬಲ್ಲರು. ಗಾಯತ್ರಿ ಸಾರವು ಮಾತ್ರವೇ ಸಾರವಾಗುಳ್ಳ ಬ್ರಾಹ್ಮಣನು ಮಾಡಿದರೂ, ಮಾಡದಿದ್ದರೂ ಅದು ಬೇರೆಯ ವಿಷಯವೇ. ಅಂತಹವನು ಮೈತ್ರ ಬ್ರಾಹ್ಮಣನು. ನೀರಿನಲ್ಲಿ ಜಪ ಮಾಡುವವನಿಗೆ ಪ್ರಜ್ಞಾ ಹಾನಿ ಉಂಟಾಗುವುದು. ಶ್ರುತ್ಯುಕ್ತವಾದಂತೆ ಅಗ್ನಿತ್ರಯವು ವಿಶ್ವಕ್ಕೆ ಔಷಧಗಳಾಗಿ ನೀರಿನಲ್ಲಿವೆ. ದಕ್ಷಿಣಾಗ್ನಿ, ಗಾರ್ಹಪತ್ಯಾಗ್ನಿ, ಆಹವನೀಯಾಗ್ನಿ ಎನ್ನುವ ಮೂರು ಅಗ್ನಿಗಳು ಜಲದಲ್ಲಿವೆ. ಆದ್ದರಿಂದ ಅಂತಹ ಜಲದಲ್ಲಿ ಜಪ ಮಾಡಿದರೆ ಮಂತ್ರ ತೇಜಸ್ಸು ನಶಿಸಿ ಹೋಗುವುದು. ಆದ್ದರಿಂದಲೇ ನೀರಿನಲ್ಲಿ ಮಾಡಿದ ಜಪವು ವ್ಯರ್ಥ. ಶುಭಾಸನದಲ್ಲಿ ಕೂತು ನಾಭಿ ದೇಶದಲ್ಲಿ ಮಾಲಧಾರನಾಗಿ ಪ್ರಾತಃಕಾಲದಲ್ಲಿ ಮಂತ್ರ ಜಪ ಮಾಡಬೇಕು. ಮಧ್ಯಾಹ್ನ ಕಾಲದಲ್ಲಿ ಹೃದಯ ಸ್ಥಾನದಲ್ಲಿ ಜಪಮಾಲಾಧರನಾಗಿ ಜಪ ಮಾಡಬೇಕು. ಆಗ ನಿಂತು ಅಥವಾ ಕೂತು ಜಪ ಮಾಡಬೇಕು ಎನ್ನುವ ಎರಡು ಪಕ್ಷಗಳಿವೆ. ಸಾಯಂಕಾಲದಲ್ಲಿ ಕೂತು ವೃಕ್ಷಾಗ್ರವನ್ನು ನೋಡುತ್ತಾ, ವೃಕ್ಷಗಳಿಲ್ಲದಿದ್ದರೆ ನಾಸಾಗ್ರದಲ್ಲಿ ದೃಷ್ಟಿಯನ್ನಿಟ್ಟು ಜಪ ಮಾಡಬೇಕು. ಗೃಹಸ್ಥನು ನೂರೆಂಟು ಸಲ ತ್ರಿಕಾಲದಲ್ಲಿ ಜಪ ಮಾಡಬೇಕು. ವಾನಪ್ರಸ್ಥ, ಸನ್ಯಾಸಿಗಳು ತ್ರಿಕಾಲದಲ್ಲೂ ಸಹಸ್ರ ಗಾಯತ್ರಿ ಮಾಡಬೇಕು. ಆರ್ತನಾಗಿದ್ದರೂ ದ್ವಿಜನಾದವನು ನೂರೆಂಟು ಸಲ ಗಾಯತ್ರಿ ಮಾಡಬೇಕು. ಇಲ್ಲವೇ ಇಪ್ಪತ್ತೆಂಟು ಸಲ ಅಥವಾ ಶಕ್ತಿಯಿದ್ದರೆ ಅದಕ್ಕಿಂತ ಹೆಚ್ಚಾಗಿ ಮಾಡಬೇಕು. ಮಾನಸ ಜಪವು ಉತ್ತಮವು. ಮೆಲ್ಲಗೆ ಉಚ್ಚರಿಸುತ್ತಾ ಮಾಡುವ ಜಪವು ಮಧ್ಯಮವು. ಬೇರೆಯವರಿಗೆ ಕೇಳಿಸುವಂತೆ ಜೋರಾಗಿ ಹೇಳುತ್ತ ಮಾಡುವ ಜಪವು ಅಧಮವು. ವ್ಯಾಹೃತಿಗಳಿಂದ ಕೂಡಿದ ತ್ರಿಪದಿಯಾದ ಗಾಯತ್ರಿಯನ್ನು ಓಂಕಾರ ಸಹಿತವಾಗಿ ಜಪಿಸುವವನ ಮಹಾಪಾಪಗಳು ಎಲ್ಲವೂ ನಾಶವಾಗುತ್ತವೆ. ಪ್ರತಿಪಾದವನ್ನು ಉಚ್ಚರಿಸಿದ ಮೇಲೆ ನಿಲ್ಲಿಸಿ ಮತ್ತೆ ಮುಂದಿನ ಪಾದವನ್ನು ಉಚ್ಚರಿಸಿ ಭಕ್ತಿಯಿಂದ ಜಪ ಮಾಡುವವನ ಮಹಾದೋಷಗಳೂ ನಾಶವಾಗುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದ್ದರಿಂದ ವಿಪ್ರನು ಅವಶ್ಯವಾಗಿ ಗಾಯತ್ರಿ ಜಪವನ್ನು ಮಾಡಿದರೆ ಬ್ರಹ್ಮಹತ್ಯಾದಿ ಪಾತಕಗಳೂ ತೊಲಗಿ ಹೋಗಿ ಅನಂತ ಪುಣ್ಯವು ಲಭಿಸುವುದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಜಪ ಮಾಡುವಾಗ ಕೈಕೊನೆ ಮುಟ್ಟುತ್ತಾ ಲೆಕ್ಕವಿಟ್ಟು ಮಾಡಿದರೆ ಏಕ ಗುಣ ಫಲವು. ಕೈಬೆರಳುಗಳ ಗಿಣ್ಣುಗಳನ್ನೆಣಿಸುತ್ತಾಮಾಡಿದರೆ ದಶ ಗುಣ ಫಲವು. ಶಂಖ ಅಥವಾ ಮಣಿಗಳನ್ನೆಣಿಸಿ ಮಾಡಿದರೆ ನೂರು ಗುಣ ಫಲವು. ಪಗಡೆಗಳಿಂದ ಮಾಡಿದ ಮಾಲೆಯಿಂದ ಎಣಿಸುತ್ತಾ ಮಾಡಿದರೆ ಸಹಸ್ರ ಗುಣ ಫಲವು. ಮುತ್ತುಗಳಿಂದ ಮಾಡಿದ ಮಾಲೆಯಿಂದ ಎಣಿಸುತ್ತಾ ಮಾಡಿದರೆ ಲಕ್ಷ ಗುಣ ಫಲ ಲಭ್ಯ. ಸ್ಫಟಿಕ ಮಣಿಗಳಿಂದ ಎಣಿಸಿದರೆ ಹತ್ತು ಸಾವಿರ ಗುಣ ಫಲ. ಪದ್ಮಗಳಿಂದ ಎಣಿಸಿದರೆ ಹತ್ತು ಲಕ್ಷ ಗುಣ ಫಲ. ಚಿನ್ನದ ಮಣಿಗಳಿಂದ ಕೋಟಿ ಗುಣ. ರುದ್ರಾಕ್ಷಿಗಳಿಂದ ಲೆಕ್ಕ ಮಾಡುತ್ತಾ ಜಪ ಮಾಡಿದರೆ ಅನಂತ ಪುಣ್ಯ ಫಲ ಲಭ್ಯ. ದರ್ಭೆಯ ಗಂಟುಗಳಿಂದ ಕೂಡಿದ ಮಾಲೆಯಿಂದ ಎಣಿಸಿ ಮಾಡಿದ ಜಪವೂ ಕೂಡಾ ಬಹು ಪುಣ್ಯ ಫಲದಾಯಕವು. ನಿಶ್ಚಲನಾಗಿ, ಮಾಲೆಯಿಂದ ಯಾವುದೇ ಶಬ್ದ ಬರದ ಹಾಗೆ ಜಪ ಮಾಡಬೇಕು. ಸರಿಯಾಗಿ ಪೋಣಿಸಿ ಮಾಡಿದ ಮಾಲೆಯನ್ನು ವಸ್ತ್ರದಿಂದ ಮುಚ್ಚಿ ಜಪ ಮಾಡಬೇಕು. ಹೆಬ್ಬೆರಳು ಮಧ್ಯದ ಬೆರಳುಗಳ ಮಧ್ಯೆ ಮಾಲೆಯನ್ನಿಟ್ಟು ಮಣಿಗಳನ್ನು ಒಂದೊಂದಾಗಿ ತಳ್ಳುತ್ತಾ ಮಂತ್ರ ಜಪ ಮಾಡಬೇಕು. ಮಾಲೆಯಲ್ಲಿರುವ ಮೇರು ಮಣಿಯನ್ನು ದಾಟಿ ಜಪ ಮಾಡಬಾರದು. (ಹಾಗೆ ದಾಟಿದರೆ) ಮೂರುಸಲ ಪ್ರಾಣಾಯಾಮ ಮಾಡಿದರೆ ಮೇರು ಮಣಿಯನ್ನು ದಾಟಿದುದರಿಂದ ಉಂಟಾದ ಪಾಪವು ನಾಶವಾಗುವುದು. ಮೂರುದಿನಗಳು ನಿಯಮದಿಂದ ಗಾಯತ್ರಿಜಪ ಮಾಡಿದರೆ ತ್ರಿವಿಧವಾದ ಪಾಪಗಳೂ ನಾಶವಾಗುವುವು. ಸಂಧ್ಯಾವಂದನೆಯ ಸಮಯದಲ್ಲಿ ಅಲ್ಲದೆ ಬೇರೆಯಾಗಿ ನೂರೆಂಟು ಗಾಯತ್ರಿ ಜಪ ಮಾಡಿದರೆ ಲಘು ಪಾಪಗಳು ನಾಶವಾಗುತ್ತವೆ. ಸಹಸ್ರ ಗಾಯತ್ರಿ ಜಪದಿಂದ ಉಪಪಾಪಗಳು ನಾಶವಾಗುತ್ತವೆ. ಕೋಟಿ ಗಾಯತ್ರಿ ಮಹಾದೇವಿ ಜಪದಿಂದ ಮಹಾಪಾಪಗಳೂ ನಾಶವಾಗುತ್ತವೆ. ಜಪ ಮಾಡಿದವನ ಕೋರಿಕೆಗಳೂ ಸಿದ್ಧಿಸುತ್ತವೆ. ಜಪಮಾಡಿ ಹಣ ಪಡೆಯುವವನಿಗೆ ಬಹಳ ದೋಷಗಳುಂಟಾಗುತ್ತವೆ. ದ್ರವ್ಯ ದಾನಕ್ಕಾಗಿ ಜಪ ಮಾಡುವವನು ಚಂಡಾಲ ಸ್ತ್ರೀಯಲ್ಲಿ ಹುಟ್ಟುತ್ತಾನೆ. ಜಪ ಮಾಡುವಾಗ ಅತ್ತಿತ್ತ, ಸುತ್ತ ಮುತ್ತ ನೋಡದೆ, ನಿಶ್ಚಲವಾದ ಮನಸ್ಸಿನಿಂದ ಜಪ ಮಾಡಬೇಕು. ಜಪ ಮಾಡುವಾಗ ಯಾರೊಡನೆಯೂ ಮಾತನಾಡಬಾರದು. ಶೂದ್ರಾದಿಗಳ ಸನ್ನಿಧಿಯಲ್ಲಿ ಜಪ ಮಾಡಬಾರದು. ಜಪ ಕಾಲದಲ್ಲಿ ಎಂದೂ ಉಗುಳುವುದು ಮುಂತಾದ್ದನ್ನು ಮಾಡಬಾರದು. ಅಜ್ಞಾನದಿಂದಾಗಿ ಜಪ ಕಾಲದಲ್ಲಿ ಏನಾದರೂ ಲೋಪವಾದರೆ, ಬಲಕಿವಿಯನ್ನು ಮುಟ್ಟಿ ವಿಷ್ಣುನಾಮ ಸ್ಮರಣೆ ಮಾಡಿದರೆ ದೋಷ ಪರಿಹಾರವಾಗುವುದು. ದಶದೇವತೆಗಳ ನಿವಾಸ ಸ್ಥಾನವಾದ ಬಲಕಿವಿಯನ್ನು ಮುಟ್ಟುವುದರಿಂದಲೇ ಬ್ರಾಹ್ಮಣನ ದೋಷಗಳು ನಾಶವಾಗುವುವು. ಜಪ ಮಾಡುವಾಗ ಚಂಡಾಲನು ದೃಷ್ಟಿಗೆ ಬಿದ್ದರೆ ದ್ವಿರಾಚಮನಗಳಿಂದ ಆ ದೋಷವು ಶುದ್ಧಿಯಾಗುತ್ತದೆ. ಪತಿತರೊಡನೆ ಸಂಭಾಷಣೆ ಮಾಡಿದರೆ ಸ್ನಾನ ಮಾಡುವುದರಿಂದ ಶುದ್ಧಿಯಾಗುತ್ತದೆ. ಆದ್ದರಿಂದ ಎಲ್ಲ ವಿಧದಿಂದಲೂ ಪ್ರಯತ್ನಪಟ್ಟು ಜಪ ಕಾಲದಲ್ಲಿ ಮೌನವಾಗಿರಬೇಕು. ಸ್ವಜಾತಿಯವರೊಡನೆ ಮಾತನಾಡಲೇ ಬೇಕಾದ ಸಂದರ್ಭ ಬಂದರೆ "ತದ್ವಿಷ್ಣೋಃ---------"ಎಂಬ ಮಂತ್ರವನ್ನು ಹೇಳಿಕೊಂಡರೆ / ಪಠಿಸಿದರೆ ಕರ್ಮ ಲೋಪವು ತಟ್ಟುವುದಿಲ್ಲ. ಜಪ ಸಮಯದಲ್ಲಿ ನಿದ್ರೆ ಬಂದರೂ ಅಥವಾ ಅಪಾನವಾಯು ಹೊರಗೆ ಬಂದರೂ ಇಲ್ಲವೇ ಆಕಳಿಕೆ ಬಂದರೂ, ಕೋಪ ಬಂದರೂ, ತಿಳಿದಾಗಲೀ ತಿಳಿಯದೆ ಆಗಲೀ ಏನಾದರೂ ದೋಷವುಂಟಾದರೆ ಶ್ರೋತ್ರಾಚಮನ ಮಾಡಿ ಶುಚಿಯಾಗಿ, ಸೂರ್ಯ/ಗೋವನ್ನು ನೋಡಿ, " ಇದಂ ವಿಷ್ಣುಃ ---------"ಎನ್ನುವ ಮಂತ್ರ ಪಠಣ ಮಾಡಿದರೆ ದೋಷ ನಾಶವಾಗುತ್ತದೆ ಎಂದು ಹಿಂದೆಯೇ ಹೇಳಲ್ಪಟ್ಟಿದೆ. ಈ ರೀತಿಯಲ್ಲಿ ಎಲ್ಲವನ್ನು ತಿಳಿದು ಜಪ ಮಾಡಿದರೆ ಸಿದ್ಧಿಗಳೆಲ್ಲವೂ ಕೈಗೂಡುತ್ತವೆ ಎಂದು ಋಷಿಗಳು ಹೇಳಿದ್ದಾರೆ. ಮೈತ್ರ ಮಂತ್ರಗಳನ್ನು ಪ್ರಾತಃಕಾಲ, ಸೌರಮಂತ್ರಗಳನ್ನು ಮಧ್ಯಾಹ್ನ, ವಾರುಣ ಮಂತ್ರಗಳನ್ನು ಸಾಯಂಕಾಲ, ಸಮಯಗಳಲ್ಲಿ ಸಂಧ್ಯೋಪಾಸನೆಯೊಡನೆ ಜಪಿಸಬೇಕು. ತಮ್ಮ ತಮ್ಮ ಸೂತ್ರಗಳಿಗೆ ವಿಹಿತವಾದ ಮಂತ್ರಗಳನ್ನು ಕೂಡಾ ಯಥಾ ವಿಧಿಯಾಗಿ ಋಷಿಗಳು ಮುಂತಾದವರನ್ನು ಸ್ಮರಿಸಿ ಜಪ ಮಾಡಬೇಕು. ಹಿರಿಯರ ಆಚಾರಗಳನ್ನು ಪ್ರಮಾಣವಾಗಿ ಸ್ವೀಕರಿಸಿ ಗುರುಗಳಿಗೆ ಅಭಿನಂದನೆ ಮಾಡಬೇಕು. ದಿಕ್ಕುಗಳಿಗೆ, ಆಯಾ ದಿಕ್ಪಾಲಕರಿಗೆ ಪ್ರದಕ್ಷಿಣೆ ಮಾಡಿ ದ್ವಿಜನಾದವನು ನಮಸ್ಕಾರ ಮಾಡಬೇಕು. ಗೋತ್ರ ಪ್ರವರಗಳನ್ನುಚ್ಚರಿಸಿ, ಶರ್ಮ/ವರ್ಮ ಮುಂತಾದ ಸಂಪ್ರದಾಯಗಳಿಗೆ ಸೇರಿದ ಹೆಸರು ಹೇಳಿ ನಮಸ್ಕರಿಸಬೇಕು.

ಹೀಗೆ ಸಂಧ್ಯೆಯನ್ನಾಚರಿಸಿ ಗೃಹಸ್ಥನು ಔಪಾಸನೆ/ಉಪಾಸನೆ ಮಾಡಬೇಕು. ವಿವಾಹಾನಂತರ ಪ್ರಾತಃಕಾಲದಲ್ಲಿ/ಸಾಯಂಕಾಲದಲ್ಲಿ ನಿತ್ಯ ನೈಮಿತ್ತಿಕ ಹೋಮಗಳನ್ನು ಮಾಡಬೇಕು. ಸಾಯಂಕಾಲದಲ್ಲಿ ಪ್ರಾರಂಭ ಮಾಡಿ ಎರಡುಸಲ ಹೋಮ ಮಾಡಬೇಕು. ಉದಿತ-ಅನುಪಾಕ ಎನ್ನುವ ಎರಡೂ ಪಕ್ಷಗಳಲ್ಲಿಯೂ ಬೆಳಗ್ಗೆ-ಸಾಯಂಕಾಲ ಎರಡೂ ಹೊತ್ತು ಎರಡುಸಲ ಹೋಮ ಮಾಡಬೇಕು. ನೆಲದ ಮೇಲಾಗಲೀ ಅಥವಾ ಹಲಗೆಯ ಮೇಲಾಗಲೀ ಇರುವ ಅಗ್ನಿಯಲ್ಲಿ ಹೋಮ ಮಾಡಬಾರದು. ಸ್ಥಂಡಿಲ ಅಥವಾ ಹೋಮ ಕುಂಡದಲ್ಲಿ ಅಗ್ನಿಯನ್ನು ಪ್ರತಿಷ್ಠಿಸಿ ಸುತ್ತಲೂ ಜಲಶುದ್ಧಿ ಮಡಿ ಹೋಮ ಮಾಡಬೇಕು. ಸೂರ್ಯೋದಯಕ್ಕೆ / ಸೂರ್ಯಾಸ್ತಮಯಕ್ಕೆ ಮುಂಚೆಯೇ ಅಗ್ನಿಯನ್ನು ಪ್ರಜ್ವಲಿಸಿ, ಸೂರ್ಯ ಉದಯ-ಅಸ್ತಮಾನಗಳಿಗೆ ಮುಂಚೆಯೇ ಉರಿಯುತ್ತಿರುವ ಅಗ್ನಿಯಲ್ಲಿ ಹೋಮ ಮಾಡಬೇಕು. ಮೊರದಿಂದ ಅಗ್ನಿಯನ್ನು ಪ್ರಜ್ವಲಿಸುವಂತೆ ಮಾಡಬಾರದು. ಎಲೆಗಳಿಂದ ಬೀಸಿದರೆ ವ್ಯಾಧಿ, ಮೊರದಿಂದ ಧನಕ್ಷಯ, ಕೈಯಲ್ಲಿ ಬೀಸಿದರೆ ಮೃತ್ಯು, ಮುಖದಿಂದ ಪ್ರಜ್ವಲಿಸಿದರೆ ಆಯು ಕ್ಷಯ ಉಂಟಾಗುವುವು. ಬಿದಿರಿನ ಕೊಳವೆಯಿಂದ ಊದಿ, ಇಲ್ಲದಿದ್ದರೆ ಬೀಸಣಿಗೆಯಿಂದ ಬೀಸಿ ಅಗ್ನಿಯನ್ನು ದೀಪ್ತಗೊಳಿಸಬೇಕು. ಒಣಗಿದ ಕಟ್ಟಿಗೆಯ ತುಂಡುಗಳನ್ನು ಹಾಕಿ ಜ್ವಾಲೆಯನ್ನು ಎಬ್ಬಿಸಿ (ಏಳುವಂತೆ ಮಾಡಿ) ಯಥಾವಿಧಿಯಾಗಿ ಧ್ಯಾನ ಮಾಡಿ, ಜ್ವಾಲೆಗಳು ಚೆನ್ನಾಗಿ ಉರಿಯುತ್ತಿರುವಾಗ ಹೋಮ ಮಾಡುವುದು ಸರಿಯಾದ ರೀತಿ. ಮೊದಲು ಸಮಿತ್ತುಗಳನ್ನು ಹೋಮ ಮಾಡಿ, ನಂತರ ಸಿದ್ಧ ಪಡಿಸಿದ ಹೋಮ ದ್ರವ್ಯಗಳನ್ನು ಹೋಮ ಮಾಡಬೇಕು. ಸಮಿತ್ತುಗಳು, ಪುಷ್ಪಗಳು, ದೂರ್ವೆಗಳು ಮುಂತಾದುವನ್ನು ಶೂದ್ರರು ತಂದಿದ್ದರೆ ಅದು ನಿಂದ್ಯವಾಗುತ್ತದೆ. ಕೊಂಡು ತಂದವೂ ನಿಂದ್ಯವಾದದ್ದೇ!

ಹೋಮಕ್ಕೆ ಬೇಕಾದ ದ್ರವ್ಯಗಳನ್ನು ಹೇಳುತ್ತೇನೆ. ನೀವಾರ, ಬತ್ತ (ಅರವತ್ತು ದಿನಗಳ ಬೆಳೆ-ಸಣ್ಣದಾಗಿರುವುದು), ಅದರಿಂದ ಸಿದ್ಧ ಪಡಿಸಿದ ಅಕ್ಕಿ ಶ್ರೇಷ್ಠ, ಗೋಧಿ, ಯವ, ಜವೆಗೋಧಿ, ಯಾವನಾಳ(ಜೋಳ)ವೂ ಶ್ರೇಷ್ಠ. ಗೋರಸ(ಹಾಲು), ಮಜ್ಜಿಗೆ ಮುಖ್ಯವಾದದ್ದು. ಅರವತ್ತು ದಿನಗಳಲ್ಲಿ ಬೆಳೆದು ಸಿದ್ಧವಾದ ಧಾನ್ಯವನ್ನು ಮೊದಲು ಹೋಮ ಮಾಡಬೇಕು. ತುಪ್ಪದಲ್ಲಿ ನೆನಸಿದ್ದು ಹೆಚ್ಚಾದರೂ ಪರವಾಗಿಲ್ಲ ಆದರೆ ಕಡಮೆಯಾಗದಂತೆ ಎರಡನೆಯ ಆಹುತಿ ಕೊಡಬೇಕು. ತುಪ್ಪವಿಲ್ಲದಿದ್ದಲ್ಲಿ ಎಳ್ಳೆಣ್ಣೆಯೂ ಪ್ರಶಸ್ತವೇ! ಎಳ್ಳು ಕೂಡಾ ಹೋಮ ಮಾಡುವಂತಹುದೇ. ಅದು ಕೂಡಾ ಹೋಮ ಯೋಗ್ಯತೆಯುಳ್ಳದ್ದು ಎಂದು ತಿಳಿದವರು ಹೇಳುತ್ತಾರೆ. ಉಪಸ್ಥಾನ (ಮಂತ್ರಪೂರ್ವಕ ಧ್ಯಾನವು) ಮಾಡಿ, ಮೇಲೆ ಹೇಳಿದಂತೆ ಹೋಮವನ್ನಾಚರಿಸಿ, ನಂತರ ಬ್ರಹ್ಮಯಜ್ಞವನ್ನು, ತರ್ಪಣವನ್ನು ಬಹಿಃ ಪ್ರದೇಶದಲ್ಲಿ ಮಾಡಬೇಕು. ಆ ತರ್ಪಣಾದಿಗಳು ಹೇಗೆ ಎಂಬುದನ್ನು ಹೇಳುತ್ತೇನೆ.

ಮಧ್ಯಾಹ್ನ ಸಂಧ್ಯೆಯಾದ ಮೇಲಾಗಲೀ, ಪ್ರಾತಃ ಹೋಮವಾದ ಮೇಲಾಗಲೀ, ವೈಶ್ವ ದೇವವನ್ನು ಮುಗಿಸಿದ ನಂತರವಾಗಲೀ, ಬ್ರಹ್ಮ ಯಜ್ಞವನ್ನು ಒಂದುಸಲ ಮಾಡಬೇಕು. ಜಲಾಶಯಕ್ಕೆ ಸಮೀಪದಲ್ಲಿ ಬ್ರಹ್ಮ ಯಜ್ಞ ಮಾಡುವುದು ಪ್ರಶಸ್ತವು. ಸ್ನಾನ, ಆಚಮನ, ಪ್ರಾಣಾಯಾಮ ಮಾಡಿ, "ವಿದ್ಯುದಸಿ____" ಎನ್ನುವ ಮಂತ್ರವನ್ನು ಜಪಿಸಬೇಕು. ಎಡ ತೊಡೆಯ ಮೇಲೆ ಬಲಪಾದವನ್ನಿಟ್ಟು ಕೂತು,ಎಡ ಕೈಯಲ್ಲಿ ದೂರ್ವೆ ಹಿಡಿದು, ಬ್ರಾಹ್ಮಣನು ಎರಡೂ ಕೈಗಳನ್ನು ಜೋಡಿಸಿ, ಎರಡನ್ನು ಬಲಪೃಷ್ಠದ ಮೇಲಿಟ್ಟು, ಭೂಮ್ಯಾಕಾಶಾದಿಗಳ ಸಂಧಿಯನ್ನು ನೋಡುತ್ತಾ, ಜಪಿಸಬೇಕು. ಓಂಕಾರವನ್ನು ವ್ಯಾಹೃತಿಗಳೊಡನೆ ಸೇರಿಸಿ ಗಾಯತ್ರಿ ಮಂತ್ರವನ್ನು ಮೂರುಸಲ ಜಪಿಸಬೇಕು. ಪಾದ ಕ್ರಮದಲ್ಲಿ, ಅರ್ಥ ಮಂತ್ರ ಕ್ರಮದಲ್ಲಿ, ಮಂತ್ರ ಕ್ರಮವನ್ನು ಸಾಂಗವಾದ ವೇದವನ್ನು ಕ್ರಮವಾಗಿ ಪಠಿಸಬೇಕು. ಸ್ವಾಧ್ಯಾಯ ದಿನಗಳಲ್ಲಿ ದ್ವಿಜನು ಯಥಾ ಶಕ್ತಿಯಾಗಿ ವೇದವನ್ನು ಜಪಿಸಬೇಕು. ಅನಧ್ಯಯನವು ಬಂದಾಗ ದ್ವಿಜನು ಸ್ವಲ್ಪವಾಗಿ ವೇದ ಜಪ ಮಾಡಬೇಕು. ಅಧ್ಯಾಯವನ್ನಾಗಲೀ, ಸೂಕ್ತವನ್ನಾಗಲೀ, ಅದಕ್ಕೂ ಶಕ್ತಿಯಿಲ್ಲದಿದ್ದರೆ ಋಕ್ಕುಗಳನ್ನಾಗಲೀ ಮಂತ್ರವನ್ನು ಮೂರು ಆವೃತ್ತಿ ಹೇಳಿ, ಕೊನೆಗೆ, "ನಮೋಬ್ರಹ್ಮಣೇ----" ಎನ್ನುವ ಮಂತ್ರವನ್ನೂ, "ವೃಷ್ಟಿರಪಿ-----" ಎನ್ನುವ ಮಂತ್ರವನ್ನೂ ಹೇಳಿ, ಅಂಜಲಿ ಬಿಡಬೇಕು. ಬ್ರಹ್ಮ ಯಜ್ಞವಾದ ಮೇಲೆ, ತರ್ಪಣ ಬಿಡಬೇಕು. ಅದರಲ್ಲಿ ಋಷಿಗಳು ಯಾರು ಯಾರು ಎಂಬುದನ್ನು ಹೇಳುತ್ತೇನೆ. ದೇವತೆಗಳು ವಾಸಿಸುವ ದರ್ಭೆಗಳು ಬ್ರಹ್ಮ ಯಜ್ಞದಲ್ಲಿ ಬಹು ಮುಖ್ಯವಾದವು. ಆ ದರ್ಭೆಗಳಿಂದಲೇ ವಸುಗಳು, ರುದ್ರರು, ಆದಿತ್ಯರು, ದೇವತೆಗಳು, ಪಿತೃ ದೇವತೆಗಳು ತೃಪ್ತಿಗೊಳ್ಳುತ್ತಾರೆ. ಬ್ರಹ್ಮ ಯಜ್ಞವನ್ನು ಹಗಲೇ ಮಾಡಬೇಕು. ಯಾವಾಗಲಾದರೂ ಅವಕಾಶವಿಲ್ಲದೇ ಹೋದರೆ ಗಾಯತ್ರಿಯನ್ನು ಮೂರುಸಲ ಪಠಿಸಿದರೆ ವೇದಪಾಠ ಫಲವು ಲಭಿಸುವುದು. ಕುಶಾಗ್ರಗಳಿಂದ ಜವೆಗೋಧಿ(ಯವ)ಯೊಡನೆ ನೀರು ಬಿಡುತ್ತಾ, ದೇವ ತೀರ್ಥದಿಂದ ದೇವತೆಗಳಿಗೆ, ಋಷಿ ತೀರ್ಥದಿಂದ ಋಷಿಗಳಿಗೆ, ಪಿತೃ ತೀರ್ಥದಿಂದ ಪಿತೃಗಳಿಗೆ, ತರ್ಪಣ ಕೊಡಬೇಕು. ದೇವ-ಋಷಿ-ಪಿತೃ ತೀರ್ಥಗಳೆಂದರೇನು ಎಂಬುದನ್ನು ಹಿಂದೆಯೇ ಹೇಳಲಾಗಿದೆ. ಪಾತ್ರೆಯಲ್ಲಿ, ಜಲಾಶಯದಲ್ಲಿ, ತರ್ಪಣ ಕೊಡಬಾರದು. ಭೂಮಿಯ ಮೇಲೆ, ಮನೆಯಲ್ಲಿಯೂ ಕೂಡಾ ತರ್ಪಣವು ನಿಷಿದ್ಧವೇ! ಭೂಮಿಯ ಮೇಲೆ ದರ್ಭೆಗಳನ್ನು ಹರಡಿ ಅದರ ಮೇಲೆ ತರ್ಪಣ ಕೊಡಬೇಕು. ನಾಮ ಗೋತ್ರಾದಿಗಳನ್ನು ಉಚ್ಚರಿಸಿ, ಭಕ್ತಿ ಪೂರ್ವಕವಾಗಿ ತರ್ಪಣ ಕೊಡಬೇಕು. ಪಿತೃಗಳಿಗೆ ತಿಲಾಂಜಲಿಯಲ್ಲಿ ತರ್ಪಣ ಕೊಡಬೇಕು. ಕಲ್ಲಿನ ಮೇಲೆ, ಮರದ ಪಾತ್ರೆಯಲ್ಲಿ, ಭೂಮಿಯ ಮೇಲೆ ತಿಲಗಳನ್ನು ಇಡಬಾರದು. ಕೂದಲುಗಳು ಮುಂತಾದುವು ತುಂಬಿರುವ ಸ್ಥಳಗಳಲ್ಲಿ ಇಟ್ಟ ತಿಲವು ಕ್ರಿಮಿಗಳಿಗೆ ಸಮಾನವು. ಆದ್ದರಿಂದ ಅವು ನಿಷಿದ್ಧ. ಮನೆಯಲ್ಲಿ ತರ್ಪಣ ಕೊಡುವಾಗ, ಮನೆಯಲ್ಲಿನ ಎಳ್ಳು ಎಂದೂ ತೆಗೆದುಕೊಳ್ಳಬಾರದು. ಹೊರಗಡೆ, ಜಲಾಶಯಗಳಲ್ಲಿ ದಿನವೂ ತಿಲ ತರ್ಪಣ ಮಾಡಬೇಕು. ಬಿಳಿಯ ಎಳ್ಳು ದೇವತೆಗಳಿಗೆ, ಧೂಮ್ರ ವರ್ಣದ್ದು ಋಷಿಗಳಿಗೆ, ಕರಿಯ ಎಳ್ಳು ಪಿತೃಗಳಿಗೆ ಪ್ರಶಸ್ತವಾದವು. ದೇವಕಾರ್ಯ ಮಾಡುವಾಗ ಜನಿವಾರ ದಿನವೂ ಹಾಕಿಕೊಳ್ಳುವ ಹಾಗೆ ಸವ್ಯ ರೀತಿಯಲ್ಲಿ ಇರಬೇಕು. ಋಷಿ ಕಾರ್ಯಗಳಿಗೆ ಮಾಲೆಯಂತೆ, ಪಿತೃ ಕಾರ್ಯಗಳಿಗೆ ಪ್ರಾಚೀನಾವೀತಿ(ಅಪಸವ್ಯ-ಬಲಭುಜದ ಮೇಲೆ ಇರುವ ಹಾಗೆ) ಹಾಕಿಕೊಂಡು ಮಾಡಬೇಕು. ದೇವತೆಗಳಿಗೆ ಒಂದು ಅಂಜಲಿ (ಬೊಗಸೆ), ಋಷಿಗಳಿಗೆ ಎರಡು, ಪಿತೃಗಳಿಗೆ ಮೂರು ಅಂಜಲಿಯಂತೆ ಬ್ರಾಹ್ಮಣನಾದವನು ತರ್ಪಣ ಕೊಡಬೇಕು. ಅನ್ಯಸ್ತ್ರೀಯರಿಗೆ ಒಂದು, ಮಾತೆಯರಿಗೆ ಮೂರು, ಆಚಾರ್ಯಪತ್ನಿಗೆ / ಮಲತಾಯಿಗೆ ಎರಡು ಅಂಜಲಿ ತರ್ಪಣ ಕೊಡಬೇಕು.

ದೇವತೆಗಳಿಗೆ, ಋಷಿಗಳಿಗೆ ತರ್ಪಣ ಮಾಡುವುದಕ್ಕೆ ಮುಖ್ಯವಾಗಿ ಅಕ್ಷತೆಗಳನ್ನೇ ತೆಗೆದುಕೊಳ್ಳಬೇಕು. ಪಿತೃತರ್ಪಣಕ್ಕೆ ಕರಿಎಳ್ಳು. ಇವು ಅಂತ್ಯವಿಲ್ಲದ ಪುಣ್ಯವನ್ನು ಕೊಡುವುದು. ಶುಕ್ರವಾರ, ಭಾನುವಾರ, ಮಂಗಳವಾರಗಳಲ್ಲಿ, ನಂದಾ ತಿಥಿಗಳಲ್ಲಿ, ಜನ್ಮ ನಕ್ಷತ್ರದಂದು, ಮಘಾ ನಕ್ಷತ್ರದಂದು ತಿಲತರ್ಪಣವನ್ನು ಮಾಡಬಾರದು. ವಿವಾಹ, ಉಪನಯನ, ಚೌಲಗಳನ್ನು ಮಾಡುವಾಗ, ತಂದೆ-ತಾತ-ಮುತ್ತಾತ ಅವರ ಸಪಿಂಡೀಖರಣವಾದ ಮೇಲೂ, ವರಸೆಯಾಗಿ ಮೂರುತಿಂಗಳು, ಆರು ತಿಂಗಳು, ವರ್ಷದವರೆಗೆ, ಶ್ರಾದ್ಧಾದಿಗಳನ್ನು ಬಿಟ್ಟು, ತಿಲತರ್ಪಣ ಮಾಡಬಾರದು. ವಿವಾಹದಲ್ಲಿ, ಜನ್ಮ ನಕ್ಷತ್ರದಲ್ಲಿ ತಿಲತರ್ಪಣ ಮಾಡಬಾರದು. ಎಳ್ಳು ನಿಷಿದ್ಧವಾದಾಗ ಜಲತರ್ಪಣ ಮಾಡಬೇಕು. ದರ್ಭೆ, ಪವಿತ್ರ, ಚಿನ್ನದ ಮುದ್ರಿಕೆಯನ್ನು ಕೈಯಲ್ಲಿ ಧರಿಸಿ ತರ್ಪಣ ಮಾಡಬೇಕು. ಕಾಲು ತೊಳೆಯದೆ ಸ್ನಾನ ಮಾಡಬಾರದು. ಎಳ್ಳಿಲ್ಲದ ತರ್ಪಣ, ದಕ್ಷಿಣೆಯಿಲ್ಲದ ಶ್ರಾದ್ಧ ನಿಷ್ಫಲವಾಗುವುದು. ಆದ್ದರಿಂದ ನಿಷೇಧಗಳಿಲ್ಲದ ದಿನಗಳಲ್ಲಿ ತಿಲತರ್ಪಣ ಮಾಡಬೇಕು. ದೀಪಾವಳಿಯ ದಿನ ಯಮನಿಗೆ ತಿಲತರ್ಪಣ ಕೊಡಬೇಕು. ಆಶ್ವಯುಜ ಕೃಷ್ಣ ಪಕ್ಷದಲ್ಲಿ ಚತುರ್ದಶಿಯಂದು ತಿಲತರ್ಪಣ ಕೊಡಬೇಕು. ಸವ್ಯವಾಗಿಯಾದರೂ, ಅಪಸವ್ಯವಾಗಿಯಾದರೂ ಯಮ ತರ್ಪಣ ಮಾಡಬಹುದು. ಯಮನ ಒಂದೊಂದು ಹೆಸರನ್ನೂ ಹೇಳುತ್ತಾ, ಬ್ರಾಹ್ಮಣನು ಮೂರು ಅಂಜಲಿ ಯಮ ತರ್ಪಣ ಕೊಡಬೇಕು. ಯಮನ ಹೆಸರುಗಳನ್ನು ಹೇಳುತ್ತೇನೆ ಕೇಳು. ಯಮಾಯ, ಧರ್ಮರಾಜಾಯ, ಮೃತ್ಯವೇ, ಅಂತಕಾಯ, ವೈವಸ್ವತಾಯ, ಕಾಲಾಯ, ಸರ್ವಭೂತಕ್ಷಯಾಯ, ಔದುಂಬರಾಯ, ದಘ್ನಾಯ, ನೀಲಾಯ, ಪರಮೇಷ್ಠಿನೇ, ವೃಕೋದರಾಯ, ಚಿತ್ರಾಯ, ಚಿತ್ರಗುಪ್ತಾಯ, ಎನ್ನುವ ಹೆಸರುಗಳಿಗೆ ತೇ ನಮಃ ಎನ್ನುವುದನ್ನು ಸೇರಿಸಿ, ಬೇರೆ ಬೇರೆಯಾಗಿ ಒಂದೊಂದು ನಾಮಕ್ಕೂ ಮೂರು ಅಂಜಲಿ ತರ್ಪಣ ಕೊಡಬೇಕು. ಈ ಯಮ ನಾಮಗಳನ್ನು ಮುನೀಶ್ವರರು ಕೀರ್ತಿಸಿದ್ದಾರೆ. ಒಂದೊಂದು ನಾಮದಿಂದಲೂ ನದೀ ತೀರಗಳಲ್ಲಿ ಯಮ ತರ್ಪಣ ಆಚರಿಸಬೇಕು. ಹಾಗೆ ತರ್ಪಣ ಮಾಡಿದರೆ, ಮಾಡಿದವರ ಪಾಪಗಳು ನಾಶವಾಗುತ್ತವೆ. ವ್ಯಾಧಿಗಳು ಅಂತಹವನನ್ನು ಪೀಡಿಸುವುದಿಲ್ಲ. ಅಪಮೃತ್ಯುಗಳು ಯಮ ತರ್ಪಣ ಕೊಟ್ಟವನ ಹತ್ತಿರವೂ ಸುಳಿಯುವುದಿಲ್ಲ. ಮಾಘ ಶುಕ್ಲ ಪಕ್ಷ ಅಷ್ಟಮೀ ತಿಥಿಯಲ್ಲಿ ರಾಜರ್ಷಿ ಶ್ರೇಷ್ಠನಾದ ಭೀಷ್ಮನಿಗೆ ತರ್ಪಣ ಕೊಟ್ಟರೆ ಸಂವತ್ಸರ ಪಾಪವು ನಾಶವಾಗುವುದು. ಬ್ರಹ್ಮ ಯಜ್ಞ ಮಾಡಿ ತರ್ಪಣ ಬಿಡಬೇಕು. ಮಧ್ಯಾಹ್ನ ಸಂಧೆಯಂದು ಯಥಾವಿಧಿಯಾಗಿ ಸೂರ್ಯನಿಗೆ ಅರ್ಘ್ಯಪ್ರದಾನ ಮಾಡಬೇಕು. 

ಹೀಗೆ ಸರ್ತ್ಕರ್ಮ ಯೋಗವನ್ನು ಶ್ರೀಗುರುವು ಬ್ರಾಹ್ಮಣನಿಗೆ ಹೇಳಿದರು ಎಂದು ಸಿದ್ಧಮುನಿಯು ನಾಮಧಾರಕನಿಗೆ ಉಪದೇಶ ಮಾಡಿದರು. 

ಇಲ್ಲಿಗೆ ಮುವ್ವತ್ತಾರನೆಯ ಅಧ್ಯಾಯ ಮುಗಿಯಿತು.