Saturday, March 9, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತೇಳನೆಯ ಅಧ್ಯಾಯ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| 
||ಶ್ರೀಗುರುಭ್ಯೋನಮಃ||

ಸಿದ್ಧಮುನಿಯ ಚರಣಾಶ್ರಯವನ್ನು ಪಡೆದ ನಾಮಧಾರಕ, "ಸಿದ್ಧಮುನಿ, ಜಯವಾಗಲಿ. ಜಯವಾಗಲಿ. ಯೋಗೀಶ್ವರರಾದ ನೀವು ನಿಮ್ಮ ಪಾದ ದರ್ಶನದಿಂದಲೇ ನನ್ನಲ್ಲಿ ಜ್ಞಾನ ದೀಪವನ್ನು ಬೆಳಗಿಸಿದಿರಿ. ಆ ವಿಪ್ರರಿಬ್ಬರ ಕಥೆ ಹೇಗೆ ಮುಂದುವರೆಯಿತು ಎಂಬುದನ್ನು ಹೇಳುವ ಕೃಪೆಮಾಡಿ" ಎಂದು ಕೇಳಿಕೊಂಡನು.

ಅದಕ್ಕೆ ಸಿದ್ಧಮುನಿ. "ಗುರು ಮಹಿಮೆಯೆನ್ನುವುದು ಸಾಟಿಯಿಲ್ಲದ್ದು. ಆ ನಂತರದಲ್ಲಿ ಏನು ನಡೆಯಿತು ಎಂಬುದನ್ನು ಹೇಳುತ್ತೇನೆ ಕೇಳು. ಶ್ರೀಗುರುವು ಆ ‘ಪಂಡಿತ’ರಿಬ್ಬರಿಗೂ ಅನೇಕ ರೀತಿಗಳಲ್ಲಿ ತಿಳಿಯ ಹೇಳಿದರೂ, ಅವರಿಬ್ಬರೂ ಅವರ ಮಾತಿಗೆ ಬೆಲೆಕೊಡದೆ, ‘ನಮ್ಮೊಡನೆ ವಾದಮಾಡಿ. ಇಲ್ಲವೇ ಜಯಪತ್ರ ಬರೆದುಕೊಡಿ’ ಎಂದು ಶ್ರೀಗುರುವನ್ನು ನಿರ್ಬಂಧಿಸಿದರು. ಅದರಿಂದ ಸ್ವಲ್ಪ ಕ್ರುದ್ಧರಾದ ಶ್ರೀಗುರುವು, "ನಿಮ್ಮಿಷ್ಟದಂತೆಯೇ ಆಗಲಿ. ದೈವೇಚ್ಛೆ ಏನಿದೆಯೋ ಅದೇ ನಡೆಯುತ್ತದೆ" ಎಂದು ಹೇಳಿದರು. ಮೂಷಕವು ಸರ್ಪೋದರವನ್ನು ಇಚ್ಛಿಸಿದಂತೆ ಆ ದ್ವಿಜರಿಬ್ಬರೂ ಶ್ರೀಗುರುವೇನೆಂದು ಅರಿಯದೆ ತಮ್ಮ ಅಂತ್ಯವನ್ನು ತಾವೇ ಬರ ಮಾಡಿಕೊಂಡರು.

ಆ ಸಮಯದಲ್ಲಿ ಹತ್ತಿರದಲ್ಲಿ ಹೋಗುತ್ತಿದ್ದ ಒಬ್ಬನನ್ನು ಕಂಡ ಶ್ರೀಗುರುವು ತಮ್ಮ ಶಿಷ್ಯನನ್ನು ಕರೆದು, ತಕ್ಷಣವೇ ಹೋಗಿ ಅವನನ್ನು ಕರೆ ತರಲು ಅಪ್ಪಣೆ ಮಾಡಿದರು. ಶಿಷ್ಯನು ಅವನನ್ನು ಶ್ರೀಗುರುವಿನ ಬಳಿಗೆ ಕರೆ ತರುತ್ತಲೇ ಅವರು ಅವನನ್ನು, "ಅಯ್ಯಾ, ನೀನು ಯಾರು? ನಿನ್ನ ಜಾತಿ ಯಾವುದು? ಎಲ್ಲಿಗೆ ಹೋಗುತ್ತಿದ್ದೀಯೆ?" ಎಂದು ಕೇಳಿದರು. ಅವನು ಕೈಜೋಡಿಸಿ, "ಅಯ್ಯಾ, ನಾನೊಬ್ಬ ಅಂತ್ಯಜ. ನನ್ನ ಹೆಸರು ಮಾತಂಗ. ಈ ಗ್ರಾಮದ ಆಚೆ ವಾಸ ಮಾಡುತ್ತಿದ್ದೇನೆ. ದಯಾಳುವಾದ ನೀವು ಇಂದು ನನ್ನನ್ನು ಕರೆದು ನನ್ನ ಬಗ್ಗೆ ಕೇಳಿದಿರಿ. ನಾನು ಕೃತಾರ್ಥನಾದೆ" ಎಂದು ಹೇಳಿ ದಂಡ ಪ್ರಣಾಮ ಮಾಡಿದನು. ಶ್ರೀಗುರುವು ಅವನ ಮೇಲೆ ತಮ್ಮ ಕೃಪಾ ದೃಷ್ಟಿಯನ್ನು ಹರಿಸಿ, ಶಿಷ್ಯನೊಬ್ಬನನ್ನು ಕರೆದು, ಅವನಿಗೆ ತಮ್ಮ ದಂಡವನ್ನು ಕೊಟ್ಟು, ಅದರಿಂದ ನೆಲದ ಮೇಲೆ ಏಳು ಗೆರೆಗಳನ್ನು ಬರೆಯುವಂತೆ ಹೇಳಿದರು. ಶಿಷ್ಯನು ಹಾಗೆ ಮಾಡಿದ ಮೇಲೆ. ಶ್ರೀಗುರುವು ಆ ಅಂತ್ಯಜನನ್ನು ಒಂದೊಂದಾಗಿ ಆ ಗೆರೆಗಳನ್ನು ದಾಟಿ ಮುಂದೆ ಬರುವಂತೆ ಅಪ್ಪಣೆ ಮಾಡಿದರು. ಅದರಂತೆ ಅವನು ಮೊದಲನೆಯ ಗೆರೆಯನ್ನು ದಾಟುತ್ತಲೇ, ಅವನನ್ನು , "ನೀನು ಯಾರು?" ಎಂದು ಕೇಳಿದರು. ಅದಕ್ಕೆ ಅವನು, "ನಾನು ಬೈಂದನೆನ್ನುವವನು" ಎಂದು ಉತ್ತರ ಕೊಟ್ಟನು. ಎರಡನೆಯ ಗೆರೆಯನ್ನು ದಾಟಿ, "ನಾನು ಕಿರಾತ ವಂಶಕ್ಕೆ ಸೇರಿದವನು" ಎಂದನು. ಮೂರನೆಯ ಗೆರೆಯನ್ನು ದಾಟಿ, "ನಾನು ಗಂಗಾತೀರವಾಸಿಯಾದ ಗಂಗಾ ಪುತ್ರನೆಂಬುವವನು" ಎಂದ. ನಾಲ್ಕನೆಯ ಗೆರೆಯನ್ನು ದಾಟಿ, " ನಾನೊಬ್ಬ ವೃತ್ತಿ ನಿರತನಾದ ಶೂದ್ರ" ಎಂದನು. ಐದನೆಯ ಗೆರೆಯನ್ನು ದಾಟಿ, "ನಾನು ಸೋಮ ದತ್ತನೆಂಬುವ ವೈಶ್ಯ" ಎಂದನು. ಆರನೆಯ ಗೆರೆ ದಾಟಿ, "ನಾನೊಬ್ಬ ಕ್ಷತ್ರಿಯ" ಎಂದನು. ಏಳನೆಯ ಗೆರೆ ದಾಟಿ, "ನಾನೊಬ್ಬ ವೇದಶಾಸ್ತ್ರ ಪಾರಂಗತನಾದ ಬ್ರಾಹ್ಮಣ" ಎಂದನು. ಅವನು ಹಾಗೆ ಹೇಳುತ್ತಲೇ, ಶ್ರೀಗುರುವು, "ನೀನು ವೇದಶಾಸ್ತ್ರ ಪಾರಂಗತನೇ ಆದರೆ, ಇವರಿಬ್ಬರೊಡನೆ ವಾದ ಮಾಡಿ ಇವರನ್ನು ಜಯಿಸು" ಎಂದು ಹೇಳಿ ಅವನ ಮೇಲೆ ಭಸ್ಮವನ್ನು ಹಾಕಿದರು. ತಕ್ಷಣವೇ ಅವನಲ್ಲಿ ಜ್ಞಾನ ಉದ್ದೀಪನಗೊಂಡು, ಶ್ರೀಗುರುವಿನ ಕೃಪೆಯಿಂದ ಜ್ಞಾನಿಯಾಗಿ, ವೇದ ಪಠನೆ ಮಾಡಿ ವಾದಕ್ಕೆ ಸಿದ್ಧನಾದನು. ಇದೆಲ್ಲವನ್ನೂ ಕಂದ ಆ ಬ್ರಾಹ್ಮಣರು ಆಶ್ಚರ್ಯಪಟ್ಟು, ಅಧೀರರಾಗಿ, ನಾಲಗೆ ಕಟ್ಟಿ ಘೋದವರಂತೆ ಮೂಗರಾಗಿ ಹೋದರು. ಇಬ್ಬರೂ, ನಡುಗುತ್ತಾ, ಶ್ರೀಗುರುವಿನ ಪಾದಗಳಲ್ಲಿ ಬಿದ್ದು, "ಸ್ವಾಮಿ, ನಾವು ಗುರುದ್ರೋಹಿಗಳು. ಸದ್ಬ್ರಾಹ್ಮಣರನ್ನು ಧಿಕ್ಕರಿಸಿ ಅವಮಾನಗೊಳಿಸಿದೆವು. ನೀವು ಈಶ್ವರಾವತಾರವೆಂದು ತಿಳಿಯದೆ ನಿಮ್ಮ ಮಾತನ್ನು ಧಿಕ್ಕರಿಸಿ ಮಾತನಾಡಿದೆವು. ನಮ್ಮಲ್ಲಿ ದಯೆರ್ತೋರಿ, ನಮ್ಮನ್ನು ಕ್ಷಮಿಸಿ, ಉದ್ಧರಿಸಿ. ಮಾಯಾ ಮೋಹಿತರಾದ ನಾವು ನೀವು ಯಾರೆಂದು ಗುರುತಿಸಲಾರದೆ ಹೋದೆವು. ಹೇ ಗುರುವರ್ಯ, ಹುಲ್ಲನ್ನು ಬೆಟ್ಟವನ್ನಾಗಿ, ಬೆಟ್ಟವನ್ನು ಹುಲ್ಲಾಗಿ ಮಾಡಬಲ್ಲ, ನಿಮ್ಮ ಸಾಮರ್ಥ್ಯವನ್ನು ಅರಿಯಲಿಲ್ಲ. ನಿಮ್ಮ ಲೀಲೆಗಳು ಅನಂತವಾದವು. ತ್ರಿಗುಣಗಳಿಂದ ಕೂಡಿ, ಸೃಷ್ಟಿ, ಪಾಲನ, ಸಂಹಾರ ಮಾಡಬಲ್ಲ ಜಗದ್ಗುರುವೇ ನೀವು! ಹೇ ತ್ರಿಮೂರ್ತಿ ಸ್ವರೂಪ, ನಿಮ್ಮ ಮಾಹಾತ್ಮ್ಯೆಯನ್ನು ವರ್ಣಿಸಲು ನಮ್ಮಂತಹ ಬುದ್ಧಿಹೀನರಿಗೆ ಹೇಗೆ ಸಾಧ್ಯ? ನಮ್ಮನ್ನು ಕಾಪಾಡಿ. ಅನುಗ್ರಹಿಸಿ" ಎಂದು ಸ್ತೋತ್ರ ಪೂರ್ವಕವಾಗಿ ಬೇಡಿಕೊಂಡರು.

ಅದಕ್ಕೆ ಶ್ರೀಗುರುವು, "ನೀವು ವಿನಾಕಾರಣವಾಗಿ ಬ್ರಾಹ್ಮಣರನ್ನು ದೂಷಿಸಿ, ಅವಮಾನ ಗೊಳಿಸಿದಿರಿ. ಅದರಿಂದ ನಿಮಗೆ ಅಪರಿಮಿತ ಪಾಪಗಳು ಉಂಟಾಗಿವೆ. ಅದರ ಫಲವನ್ನು ಅನುಭವಿಸಲೇ ಬೇಕು. ಪಾಪ ಫಲಗಳನ್ನು ಅನುಭವಿಸಿಯೇ ಪಾಪ ಕ್ಷಾಳನ ಮಾಡಿಕೊಳ್ಳಬೇಕು. ಪಾಪವಾಗಲೀ, ಪುಣ್ಯವಾಗಲೀ, ಅದರ ಫಲವನ್ನು ಮಾಡಿದವನೇ ಅನುಭವಿಸಬೇಕಲ್ಲವೇ? ನಿಮ್ಮ ಈ ಪಾಪ ಫಲದಿಂದಾಗಿ ನೀವು ಬ್ರಹ್ಮರಾಕ್ಷಸರಾಗಿ ಹುಟ್ಟುತ್ತೀರಿ" ಎಂದು ಶ್ರೀಗುರುವು ಹೇಳಿದರು. ದುಃಖಿತರಾದ ಅವರಿಬ್ಬರೂ ಶ್ರೀಗುರುವಿನ ಪಾದಗಳನ್ನು ಬಿಡದೆ, "ಸ್ವಾಮಿ, ನಮಗೆ ಈ ರಾಕ್ಷಸ ಜನ್ಮದಿಂದ ಬಿಡುಗಡೆ ಎಂದು?" ಎಂದು ಆರ್ತರಾಗಿ ಕೇಳಿದರು. ಅದಕ್ಕೆ ಶ್ರೀಗುರುವು, "ನೀವು ಈ ರಾಕ್ಷಸತ್ವವನ್ನು ಹನ್ನೆರಡು ವರ್ಷ ಅನುಭವಿಸಬೇಕು. ನಿಮಗೆ ನಿಮ್ಮ ಕಾರ್ಯದಿಂದ ಪಶ್ಚಾತ್ತಾಪವುಂಟಾಗಿದೆಯಾಗಿ, ಪಾಪ ಪರಿಹಾರವಾಗುವ ಕಾಲಕ್ಕೆ, ಬ್ರಾಹ್ಮಣನೊಬ್ಬನು ನಾರಾಯಣಾನುವಾಕವನ್ನು ಪಠಿಸುತ್ತ ಬರುವನು. ಅವನಿಂದ ನಿಮಗೆ ಸದ್ಗತಿಯಾಗುವುದು. ನೀವು ಗಂಗಾತೀರಕ್ಕೆ ಹೋಗಿ ಅಲ್ಲಿ ನಿವಾಸ ಮಾಡಿ" ಎಂದು ಅಪ್ಪಣೆ ಕೊಟ್ಟರು. ಅದರಂತೆ ಅವರಿಬ್ಬರೂ ಅಲ್ಲಿಂದ ಹೊರಟು ಗ್ರಾಮದ ಸರಹದ್ದಿಗೆ ಬರುತ್ತಲೇ, ಅವರಿಗೆ ಹೃದಯಾಘಾತವಾಗಿ, ನದೀ ತೀರ ಸೇರುತ್ತಲೇ ಮೃತರಾಗಿ ಬಿದ್ದರು. ಇಬ್ಬರೂ ಹನ್ನೆರಡು ವರ್ಷ ರಾಕ್ಷಸರಾಗಿ, ನಂತರ ಶ್ರೀಗುರುವು ಹೇಳಿದ್ದಂತೆ ನಾರಾಯಣಾನುವಾಕವನ್ನು ಹೇಳುತ್ತಾ ಬಂದ ಒಬ್ಬ ಬ್ರಾಹ್ಮಣನ ದೆಸೆಯಿಂದ ರಾಕ್ಷಸತ್ವದಿಂದ ಬಿಡುಗಡೆ ಹೊಂದಿದರು.

ನಾಮಧಾರಕ, ಗುರುವಿನ ಮಾತು ಸದಾ ಸತ್ಯವೇ! ಅನ್ಯಥಾ ಹೇಗೆ ಆಗುವುದು? ಅನಂತರ ನಡೆದ ಕಥೆಯನ್ನು ಹೇಳುತ್ತೇನೆ, ಕೇಳು. ಶ್ರೀಗುರುವಿನ ಅನುಗ್ರಹದಿಂದ ವೇದಶಾಸ್ತ್ರ ಪಾರಂಗತನಾದ ಬ್ರಾಹ್ಮಣನಾದ ಆ ಅಂತ್ಯಜ, ಶ್ರೀಗುರುವನ್ನು ನಮಸ್ಕಾರ ಪೂರ್ವಕವಾಗಿ ಸಂಬೋಧಿಸಿ, "ಗುರುವರ್ಯ, ವೇದಶಾಸ್ತ್ರ ಪಾರಂಗತನಾಗಿ ವಿಪ್ರನಾಗಿದ್ದ ನಾನು ಅಂತ್ಯಜ ಹೇಗಾದೆ? ನಾನು ಮಾಡಿದ್ದ ಪಾಪಗಳೇನು? ನೀವು ತ್ರಿಕಾಲಜ್ಞರು. ಹೇ ಗುರು, ನೃಸಿಂಹ ಸರಸ್ವತಿ ಸ್ವಾಮಿ, ದಯೆಯಿಟ್ಟು ಅದನ್ನು ಹೇಳುವ ಕೃಪೆಮಾಡಿ" ಎಂದು ಕೋರಿಕೊಂಡ ಅವನ ಕೋರಿಕೆಯನ್ನು ಮನ್ನಿಸಿ, ಶ್ರೀಗುರುವು ಅವನಿಗೆ ಅವನ ಪೂರ್ವ ವೃತ್ತಾಂತವನ್ನು ಹೇಳಿದರು" ಎಂದು ಸಿದ್ಧಮುನಿ ಹೇಳಿದರು. 

ಇಲ್ಲಿಗೆ ಇಪ್ಪತ್ತೇಳನೆಯ ಅಧ್ಯಾಯ ಮುಗಿಯಿತು.


Wednesday, February 20, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತಾರನೆಯ ಅಧ್ಯಾಯ||

ಶ್ರೀಗುರುವು ಆ ಬ್ರಾಹ್ಮಣರಿಗೆ ಹೇಳಿದರು. "ಅಯ್ಯಾ ವಿಪ್ರರೇ, ವೇದಗಳು ಅನಂತವಾದವು. ಸ್ವಯಂ ನಾರಾಯಣನೇ ವೇದವ್ಯಾಸನಾಗಿ ಅವತರಿಸಿ ಅವುಗಳನ್ನು ವಿಭಾಗಿಸಿದನು. ಅದನ್ನು ‘ವ್ಯಾಸ’ ಮಾಡಿದನು ಎಂಬುದರಿಂದಲೇ ಅವನಿಗೆ ವ್ಯಾಸನೆಂದು ಹೆಸರಾಯಿತು. ಅವನಲ್ಲಿ, ಪೈಲ, ವೈಶಂಪಾಯನ, ಜೈಮಿನಿ, ಸುಮಂತರೆಂಬ ನಾಲ್ಕು ಜನ ಶಿಷ್ಯರು ವೇದಾಭ್ಯಾಸ ಮಾಡುತ್ತಿದ್ದರು.

ವ್ಯಾಸನು ವಿಭಜಿಸಿದ ಒಂದೊಂದು ವೇದವನ್ನು ಆದ್ಯಂತವಾಗಿ ತಿಳಿದು ಕೊಳ್ಳಲು ಕಲ್ಪಾಂತದವರೆಗೂ ಅಭ್ಯಾಸ ಮಾಡಿದರೂ ಸಾಧ್ಯವಾಗುವುದಿಲ್ಲ. ಪೂರ್ವದಲ್ಲಿ ಮಹಾಮಹಾ ಋಷಿಗಳೂ ಅವುಗಳನ್ನು ಸಂಪೂರ್ಣವಾಗಿ ತಿಳಿಯಲಾರದಾಗಿದ್ದರು. ಅಂತಹ ವೇದಗಳನ್ನು ನೀವು ಆದ್ಯಂತವಾಗಿ ಬಲ್ಲೆವು ಎಂದು ಹೇಳಿಕೊಳ್ಳುವುದು ಎಂಥ ವಿಪರ್ಯಾಸ!

ಹಿಂದೆ ಭಾರದ್ವಾಜ ಮುನಿ ವೇದಗಳನ್ನು ಅಶೇಷವಾಗಿ ತಿಳಿದುಕೊಳ್ಳಬೇಕೆಂದು ಬಹಳ ಕಾಲ ಬ್ರಹ್ಮಚರ್ಯದಲ್ಲಿದ್ದುಕೊಂಡು ಅವುಗಳನ್ನು ಅಭ್ಯಾಸ ಮಾಡಿದರೂ ಅವನು ಅವುಗಳನ್ನು ಪೂರ್ಣವಾಗಿ ತಿಳಿಯಲಾರದೇ ಹೋದನು. ಅದರಿಂದ ಅವನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಬ್ರಹ್ಮ ಪ್ರತ್ಯಕ್ಷನಾದಾಗ ಅವನನ್ನು, "ನಾನು ಬ್ರಹ್ಮಚರ್ಯದಲ್ಲಿದ್ದುಕೊಂಡು, ವೇದಗಳನ್ನೆಲ್ಲವನ್ನೂ ಸಂಪೂರ್ಣವಾಗಿ ತಿಳಿದು, ವೇದ ಪಾರಂಗತನಾಗುವಂತೆ ನನಗೆ ವರವನ್ನು ಕೊಡು" ಎಂದು ಪ್ರಾರ್ಥಿಸಿದನು. ಅದಕ್ಕೆ ಬ್ರಹ್ಮ, "ಭಾರದ್ವಾಜ, ವೇದಗಳು ಅಪಾರ, ಅನಂತ, ಅಪರಿಮಿತವಾದವು. ನನಗೇ ಎಲ್ಲವೂ ಸಂಪೂರ್ಣವಾಗಿ ತಿಳಿಯದು. ಇನ್ನು ನೀನು ಅವುಗಳನ್ನು ಹೇಗೆ ತಿಳಿಯಬಲ್ಲೆ?" ಎಂದು ಮೇರು ಸಮಾನವಾದ ವೇದ ರಾಶಿಗಳನ್ನು ಅವನಿಗೆ ತೋರಿಸಿದನು. ಆ ವೇದ ರಾಶಿಗಳನ್ನು ಕಂಡ ಭಾರದ್ವಾಜ ಭಯಪಟ್ಟು, "ಪರ್ವತಗಳಂತೆ ರಾಶಿಯಾಗಿರುವ ಇವುಗಳನ್ನು ನಾನು ಹೇಗೆ ತಿಳಿಯಬಲ್ಲೆ? ನಾನಿದುವರೆಗೂ ತಿಳಿದಿರುವುದು ಇದಕ್ಕೆ ಹೋಲಿಸಿದರೆ ಅತ್ಯಲ್ಪ! ಇನ್ನು ಇವುಗಳೆಲ್ಲವನ್ನು ಹೇಗೆ ಅಭ್ಯಾಸಮಾಡಬಲ್ಲೆ?" ಎಂದು ಭೀತನಾಗಿ ಬ್ರಹ್ಮ ಚರಣಕ್ಕೆರಗಿ, "ಪ್ರಭು, ಇವಿಷ್ಟನ್ನು ಅಭ್ಯಸಿಸಿ ಅವುಗಳನ್ನು ತಿಳಿಯುವ ಶಕ್ತಿ ನನಗಿಲ್ಲ. ಅವುಗಳನ್ನು ಆದ್ಯಂತವಾಗಿ ನೋಡುವ ಶಕ್ತಿಯೂ ನನಗಿಲ್ಲ. ನೀನೇ ಕೃಪೆಮಾಡಿ, ಅಂತಹ ಆಸೆಯನ್ನಿಟ್ಟುಕೊಂಡು ಬಂದ ನನಗೆ, ಏನು ಸಾಧ್ಯವೋ ಅದನ್ನು ದಯಪಾಲಿಸು" ಎಂದು ಪ್ರಾರ್ಥಿಸಿಕೊಂಡನು.

ಭಾರದ್ವಾಜನ ಮಾತುಗಳನ್ನು ಆಲಿಸಿದ ಬ್ರಹ್ಮ, ಆ ವೇದ ರಾಶಿಗಳಿಂದ ಮೂರು ಹಿಡಿಯಷ್ಟು ವೇದಗಳನ್ನು ತೆಗೆದು ಭಾರದ್ವಾಜನಿಗೆ ಕೊಟ್ಟು, "ಇವೆಲ್ಲವನ್ನೂ ಸಂಪೂರ್ಣವಾಗಿ ತಿಳಿಯುವವರೆಗೂ ಜೀವಿಸಿರು" ಎಂದು ಆಶೀರ್ವದಿಸಿದನು. ಭಾರದ್ವಾಜನು ಈವರೆಗೂ ಅವುಗಳೆಲ್ಲವನ್ನು ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗಿಲ್ಲ. ಹಾಗಿರುವಾಗ ನೀವು ‘ನಾವು ಚತುರ್ವೇದ ಪಾರಂಗತರು’ ಎಂದು ಹೇಗೆ ಹೇಳಿಕೊಳ್ಳುತ್ತಿದ್ದೀರಿ?

"ವೇದಗಳಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳು. ಅವುಗಳಲ್ಲಿ ಅನೇಕ ಶಾಖೆ, ಉಪಶಾಖೆಗಳಿವೆ" ಎಂದು ಹೇಳಿದ ವ್ಯಾಸನ ಮಾತುಗಳನ್ನು ಕೇಳಿದ ಅವನ ಶಿಷ್ಯರು, "ಹೇ ಮುನಿವರ್ಯ, ಅವನ್ನು ನಮಗೆ ಬೋಧಿಸು. ನಾವು ನಮ್ಮ ಶಕ್ತ್ಯಾನುಸಾರ ಅವುಗಳನ್ನು ಅಭ್ಯಸಿಸುತ್ತೇವೆ" ಎಂದು ಕೇಳಿಕೊಂಡರು.

ವ್ಯಾಸನು ಮೊದಲ ಶಿಷ್ಯನಾದ ಪೈಲನನ್ನು ಕರೆದು, "ಪೈಲ, ಋಗ್ವೇದಕ್ಕೆ ಆಯುರ್ವೇದ ಉಪವೇದ. ಆತ್ರೇಯಸ ಗೋತ್ರ. ಬ್ರಹ್ಮ ದೇವತೆ. ಗಾಯತ್ರಿ ಛಂದಸ್ಸು. ರಕ್ತ ವರ್ಣ. ಪದ್ಮ ಪತ್ರದಂತೆ ಅಗಲವಾದ ಕಣ್ಣುಗಳು. ಎರಡು ಮೊಳದುದ್ದ ದೇಹ. ಪೊದೆಯಂತಹ ಕೂದಲು, ಗಡ್ಡ. ಈ ಸ್ವರೂಪದಲ್ಲಿ ಋಗ್ವೇದವನ್ನು ನೀನು ಏಕಾಗ್ರ ಚಿತ್ತನಾಗಿ ಧ್ಯಾನಮಾಡು. ಋಗ್ವೇದಕ್ಕೆ ಚರ್ಚ, ಶ್ರಾವಕ, ಚರ್ಚಕ, ಶ್ರವಣೀಯ ಪಾಠ, ಕ್ರಮ ಪಾಠ, ಜಟಾ, ರಥಕ್ರಮ, ದಂಡಕ್ರಮ ಎಂಬ ಎಂಟು ಬೇಧಗಳು. ಇವುಗಳ ಪಾರಾಯಣವು ಪುಣ್ಯ ಪ್ರದವಾದದ್ದು. ಇದಕ್ಕೆ ಸಂಬಂಧಿಸಿದಂತೆ ಆಶ್ವಲಾಯನಿ, ಸಾಂಖ್ಯಾಯನಿ, ಶಾಕಲ, ಬಾಷ್ಕಲ, ಮಾಂಡುಕೇಯ ಎಂಬ ಐದು ಶಾಖೆಗಳಿವೆ" ಎಂದು ಪೈಲನಿಗೆ ಋಗ್ವೇದವನ್ನು ಬೋಧಿಸಿದನು.

ಮತ್ತೆ ವ್ಯಾಸನು ವೈಶಂಪಾಯನನನ್ನು ಕರೆದು ಅವನಿಗೆ ಯಜುರ್ವೇದವನ್ನು ಬೋಧಿಸಿದನು. "ಯಜುರ್ವೇದಕ್ಕೆ ಧನುರ್ವೇದವು ಉಪವೇದ. ಭಾರದ್ವಾಜ ಗೋತ್ರ. ರುದ್ರ ಅಧಿದೇವತೆ. ತ್ರಿಷ್ಟುಪ್ ಛಂದಸ್ಸು. ಸಣ್ಣಗೆ ನೀಳವಾದ ದೇಹ. ಕೈಯಲ್ಲಿ ಕಪಾಲ. ಕಮಲದೆಲೆಯಂತೆ ವಿಶಾಲವಾಗಿರುವ, ಸ್ವರ್ಣ ವರ್ಣದ ಕಣ್ಣುಗಳು, ಐದು ಮೊಳದ ದೇಹ, ತಾಮ್ರ ಬಣ್ಣದಿಂದ ಕೂಡಿದ ಯಜುರ್ವೇದವನ್ನು ಏಕಾಗ್ರ ಚಿತ್ತನಾಗಿ ಧ್ಯಾನಿಸು. ಯಜುರ್ವೇದದಲ್ಲಿ ೮೬ ಶಾಖೆಗಳಿವೆ. ಅವುಗಳಲ್ಲಿ ಚರಕ, ಆಹ್ಯಾರ್ಕ, ಕಠ, ಪ್ರಾಪ್ಯಕತ, ಕಪಿಷ್ಠಲ, ಶಾರಾಯಣೀಯ, ನಾರಾಯಣೀಯ, ವರ್ತಾಂತವೇಯ, ಶ್ವೇತತರ, ಮೈತ್ರಾಯಣೀಯ, ಎನ್ನುವ ಹತ್ತು ಶಾಖೆಗಳು ಪ್ರಸಿದ್ಧವಾದವು. ಅದರಲ್ಲಿ ಮೈತ್ರಾಯಣೀಯದಲ್ಲಿ, ಮಾನವ, ದುಂದುಭ, ಐಷೇಯ, ವಾರಾಹ, ಹರಿದ್ರವೇಯ, ಶ್ಯಾಮ, ಶ್ಯಾಮಾಯಣಿ, ಎಂಬ ಹತ್ತು ಉಪಶಾಖೆಗಳಿವೆ. ಹೀಗೆಯೇ ವಾಜಸನೇಯದಲ್ಲೂ ವಾಜಸನೇಯದ ಜೊತೆಗೆ, ಬೋಧೇಯ, ಜಾಬಾಲಕ, ಕಾಣ್ವ, ಮಾಧ್ಯಂದಿನ, ಶಾಪೇಯ, ತಾಪನೀಯ, ಕಾಪಾಲ, ಪೌಂಡ್ರ, ವತ್ಸ, ಅವಟಿಕ, ಪರಮಾವಟಿಕ, ಪಾರಾಶರ್ಯ, ವೈನೇಯ, ಮೈಥೇಯ, ಔಧೇಯ, ಗಾಲವ, ಬೈಜವ, ಕಾತ್ಯಾಯನೀಯ, ಎಂದು, ಹದಿನೆಂಟು ಉಪಶಾಖೆಗಳಿವೆ.

ತೈತ್ತರೀಯದಲ್ಲಿ ಔಖ್ಯ, ಕಾಂಡಿಕೇಯ ಎಂದು ಎರಡು ಶಾಖೆಗಳಿವೆ. ಕಾಂಡಿಕೇಯದಲ್ಲಿ ಮತ್ತೆ ಐದು ಉಪಶಾಖೆಗಳಿವೆ, ಅದರಲ್ಲಿ ಆಪಸ್ತಂಭ ಶಾಖೆ ಪ್ರಸಿದ್ಧವಾದುದು. ಇದರಲ್ಲಿ ಸಕಲ ಯಜ್ಞ ವಿಧಾನಗಳು ವಿಸ್ತಾರವಾಗಿ ಹೇಳಲ್ಪಟ್ಟಿವೆ. ಆ ನಂತರ ಬೋಧಾಯನ, ಸತ್ಯಾಷಾಢಿ, ಹಿರಣ್ಯಕೇಶಿ, ಔಧೇಯ ಎಂಬ ಶಾಖೆಗಳು ಕೂಡಾ ಪ್ರಸಿದ್ಧವು. ಹೀಗೆ ಪ್ರತಿಯೊಂದರ ವಿಶೇಷವನ್ನೂ ತಿಳಿದುಕೋ ಎಂದು ವ್ಯಾಸರು ವೈಶಂಪಾಯನಿಗೆ ಹೇಳಿದರು.

ಮೇಲೆ ಹೇಳಿದ ವೇದಾಂಗಗಳಿಗೆಲ್ಲಾ ಪ್ರತಿಪದ, ಅನುಪದ, ಛಂದಸ್ಸು, ಭಾಷೆ, ಧರ್ಮ, ಮೀಮಾಂಸ, ನ್ಯಾಯ, ತರ್ಕ ಎನ್ನುವ ಎಂಟು ಉಪಾಂಗಗಳಿವೆ. ವೇದಗಳಿಗೆ ಜ್ಯೋತಿಷ, ವ್ಯಾಕರಣ, ಶಿಕ್ಷ, ಕಲ್ಪ, ಛಂದಸ್ಸು, ನಿರುಕ್ತ ಎನ್ನುವ ಷಡಂಗಗಳು. ಪರಿಶಿಷ್ಟಗಳು ಹದಿನೆಂಟು. ಮಾನವರು ವೇದಗಳನ್ನು ಸಂಪೂರ್ಣವಾಗಿ ತಿಳಿದು ಕೊಳ್ಳಲಾರರು. ಮಂದ ಬುದ್ಧಿಗಳೂ ತಿಳಿದು ಕೊಳ್ಳಲು ಅನುಕೂಲವಾಗುವಂತೆ, ಅವರವರ ಶಕ್ತ್ಯಾನುಸಾರವಾಗಿ, ಅವರವರ ಇಷ್ಟದಂತೆ ಅವುಗಳನ್ನು ಅಧ್ಯಯನ ಮಾಡಿಕೊಳ್ಳಲು, ಪ್ರಮಾಣಸಿದ್ಧವಾಗಿ ಅವುಗಳನ್ನು ಶಾಖೆಗಳಾಗಿ ವಿಂಗಡಿಸಿದ್ದಾರೆ" ಎಂದು ವ್ಯಾಸನು ವೈಶಂಪಾಯನಿಗೆ ಹೇಳಲು, ಅವನು, ವಿನಯದಿಂದ, "ಸ್ವಾಮಿ, ಯಜುರ್ವೇದವನ್ನು ಶಾಖಾ ಬೇಧಗಳ ಕ್ರಮದಂತೆ ನೀವು ನನಗೆ ವಿಸ್ತಾರವಾಗಿ ಹೇಳಿದಿರಿ. ಆದರೆ ನನಗೊಂದು ಸಂದೇಹವಿದೆ. ಇದರ ಮೂಲಶಾಖೆ ಯಾವುದು? ಅದನ್ನು ವಿಸ್ತರಿಸಿ ಹೇಳಿ" ಎಂದು ಕೇಳಿದನು. ಅದಕ್ಕೆ ವ್ಯಾಸಮುನಿ, "ಮಗು, ನಿನ್ನ ಪ್ರಶ್ನೆ ಬಹು ಯುಕ್ತವಾಗಿದೆ. ಯಜುರ್ವೇದಕ್ಕೆ ಮೂಲ ಬ್ರಾಹ್ಮಣ ಸಂಹಿತೆಗಳು ಎಂದು ಋಷಿಗಳು ಹೇಳುತ್ತಾರೆ. ಇದು ನಿಶ್ಚಿತವಾದದ್ದು. ಬ್ರಾಹ್ಮಣ ಕಾಂಡದಲ್ಲಿ ಅಂತರ್ಗತವಾದದ್ದು ಅರಣ್ಯಕವು. ಈ ಮೂಲವೇ ಯಜ್ಞಾದಿಗಳಲ್ಲಿ ಉಪಯೋಗಿಸುವಂತಹವು. ಅವನ್ನು ಹೆಚ್ಚಿನ ಪ್ರಯತ್ನದಿಂದ ಅಭ್ಯಾಸ ಮಾಡಬೇಕು" ಎಂದು ವ್ಯಾಸಮುನಿ ಹೇಳಲು, ವೈಶಂಪಾಯನು ಅವರನ್ನು ಮತ್ತೊಮ್ಮೆ ಅವೆಲ್ಲವನ್ನೂ ವಿಸ್ತರಿಸಿ ಹೇಳ ಬೇಕೆಂದು ಕೇಳಿಕೊಳ್ಳಲು ವ್ಯಾಸರು ಅವನಿಗೆ ಅದೆಲ್ಲವನ್ನೂ ವಿಸ್ತರಿಸಿ ಹೇಳಿದರು.

"ಈ ಕಲಿಯುಗದಲ್ಲಿ ಚತುರ್ವೇದಗಳನ್ನು ಅಧ್ಯಯನ ಮಾಡುವಂತಹರು ಯಾರಿದ್ದಾರೆ? ಸಾಂಗವಾಗಿ ಒಂದು ವೇದವನ್ನು ಅಧ್ಯಯನ ಮಾಡಿರುವಂತಹ ಒಬ್ಬನೂ ಇಲ್ಲ. ಅಂತಹುದರಲ್ಲಿ ನೀವು ನಾಲ್ಕೂ ವೇದಗಳನ್ನು ಹೇಗೆ ಅಧ್ಯಯನ ಮಾಡಬಲ್ಲವರಾದಿರಿ? ನಾರಾಯಣಾವತಾರನಾದ ವ್ಯಾಸ ಮುನಿಯನ್ನು ಬಿಟ್ಟರೆ ಮಿಕ್ಕವರು ಯಾರಿಗೂ ಎಲ್ಲ ವೇದಗಳೂ ತಿಳಿಯವು" ಎಂದು ಶ್ರೀಗುರುವು ಆ ಬ್ರಾಹ್ಮಣರಿಗೆ ಮತ್ತೆ ಹೇಳಿದರು.

ನಂತರ ವ್ಯಾಸಮುನಿ ತನ್ನ ಶಿಷ್ಯನಾದ ಜೈಮಿನಿಯನ್ನು ಕರೆದು, ಅವನಿಗೆ ಸಾಮವೇದವನ್ನು ಉಪದೇಶಿಸಿದರು. "ಸಾಮ ವೇದಕ್ಕೆ ಗಾಂಧರ್ವ ಉಪವೇದ. ವಿಷ್ಣು ದೇವತೆ. ಜಗತಿ ಛಂದಸ್ಸು. ಕಾಶ್ಯಪ ಗೋತ್ರ. ಪುಷ್ಪಮಾಲಾಧರ. ಕ್ಷಮಾಶಾಲಿ. ಶುದ್ಧವಸ್ತ್ರವನ್ನು ಉತ್ತರೀಯವಾಗಿ ಹೊದ್ದು ಕೊಂಡು, ಶುಚಿರ್ಭೂತನಾಗಿ. ದಾಂತನಾಗಿ, ಚರ್ಮ ದಂಡವನ್ನು ಹಿಡಿದು, ಸ್ವರ್ಣ ವರ್ಣ ನೇತ್ರಗಳಿಂದ ಕೂಡಿದ ರೂಪವುಳ್ಳ, ಆರು ಮೊಳ ಉದ್ದ, ಶ್ವೇತ ವರ್ಣ ದೇಹವುಳ್ಳ ಸಾಮ ರೂಪವನ್ನು ಧ್ಯಾನಿಸು. ಇದರಲ್ಲಿ ಸಹಸ್ರ ಶಾಖೆಗಳಿವೆ. ಅದೆಲ್ಲವನೂ ತಿಳಿದು ಕೊಳ್ಳುವ ಸಾಮರ್ಥ್ಯವುಳ್ಳವನು ಯಾರೂ ಇಲ್ಲ. ನಾರಾಯಣನೊಬ್ಬನೇ ಅದೆಲ್ಲವನ್ನೂ ತಿಳಿದವನು" ಎಂದು ವ್ಯಾಸನು ಜೈಮಿನಿಗೆ ಹೇಳಿದನು.

ಸಾಮ ವೇದದಲ್ಲಿ ಆಸುರಾಯಣೀಯ, ವಾರ್ತಾಂತವೇಯ, ವಾಸುರಾಯಣೀಯ, ಪ್ರಾಂಜಲ, ಋಗ್ವಿಧಾನ, ಪ್ರಾಚೀನಯೋಗ್ಯ, ಜ್ಞಾನಯೋಗ್ಯ ಎಂದು ಏಳು ಬೇಧಗಳು. ನಂತರ ರಾಣಾಯನೀಯದಲ್ಲಿ ರಾಣಾಯನೀಯ, ಶಾಟ್ಯಾಯನೀಯ, ಶಾಟ್ಯ, ಮುದ್ಗಲ, ಖಲ್ವಲ, ಮಹಾ ಖಲ್ವಲ, ಲಾಂಗಲ, ಕೌಥುಮ, ಗೌತುಮ, ಜೈಮಿನೀಯ ಎಂದು ಪ್ರಮುಖವಾದ ಒಂಭತ್ತು ಬೇಧಗಳು" ಎಂದು ವ್ಯಾಸನು ಹೇಳಿದ್ದನ್ನು, ಶ್ರೀಗುರುವು ಆ ಇಬ್ಬರು ವಿಪ್ರರಿಗೆ ಹೇಳಿ, ಭೂಮಂಡಲದಲ್ಲಿ ಯಾವ ಬ್ರಾಹ್ಮಣನಿಗೂ ಸಾಮ ವೇದವು ಆರಂಭದಿಂದ ತಿಳಿಯದು. ಆದರೂ ನೀವು ವೇದಜ್ಞರು ಎಂದು ಹೇಗೆ ಹೇಳಿಕೊಳ್ಳುತ್ತಿದ್ದೀರಿ! ಹಾಗೆ ಹೇಳಿ ಕೊಳ್ಳುವುದು ನಿಮ್ಮ ಹುಚ್ಚು ಪ್ರಲಾಪವೇ ಹೊರತು ಮತ್ತಿನ್ನೇನೂ ಅಲ್ಲ" ಎಂದು ಹೇಳಿ, ಶ್ರೀಗುರುವು ಮುಂದುವರೆಸಿದರು.

ನಂತರ ವ್ಯಾಸಮುನಿ, ತನ್ನ ನಾಲ್ಕನೆಯ ಶಿಷ್ಯನಾದ ಸುಮಂತನನ್ನು ಕರೆದು ಅವನಿಗೆ, "ಅಥರ್ವ ವೇದಕ್ಕೆ ಧನುರ್ವೇದ ಉಪವೇದ. ಇಂದ್ರ ದೇವತೆ. ಬೈಜಾನಗೋತ್ರ. ತ್ರಿಷ್ಟುಪ್ ಛಂದಸ್ಸು. ಕೃಷ್ಣವರ್ಣ. ಕಾಮ ರೂಪಿ. ಕ್ಷುದ್ರ ಕರ್ಮಿ. ಏಳುಮೊಳ ಉದ್ದ ದೇಹ. ಅಥರ್ವ ವೇದದಲ್ಲಿ, ಪೈಪ್ಪಲ, ದಾಂತ, ಪ್ರದಾಂತ, ಸ್ತೋತ, ಔತ, ಬ್ರಹ್ಮದಾವಲ, ಶೌನಕೀಯ, ದೇವರ್ಷ, ಚರಣವಿದ್ಯ ಎನ್ನುವ ಒಂಭತ್ತು ಶಾಖೆಗಳು. ಇವುಗಳಲ್ಲಿ ವಿಧಾನ ಕಲ್ಪ, ನಕ್ಷತ್ರ ಕಲ್ಪ, ಸಂಹಿತಾ ಕಲ್ಪ, ಶಾಂತಿ ಕಲ್ಪ, ವಿಧಿವಿಧಾನ ಕಲ್ಪ ಎಂಬುವ ಐದು ಕಲ್ಪಗಳಿವೆ" ಎಂದು ಅಥರ್ವ ವೇದವನ್ನು ಉಪದೇಶಿಸಿದನು.

ಹಿಂದೆ ಭರತ ಖಂಡದಲ್ಲಿ ವರ್ಣಾಶ್ರಮ ಆಚಾರಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದ ಪುಣ್ಯ ಪುರುಷರಿಂದ ವೇದಗಳು ಸುಪ್ರತಿಷ್ಠವಾಗಿದ್ದವು. ಈ ಕಲಿಯುಗದಲ್ಲಿ ಬ್ರಾಹ್ಮಣರು ತಮ್ಮ ಕರ್ಮ, ಕರ್ತವ್ಯಗಳನ್ನು ಪರಿತ್ಯಜಿಸಿದರು. ಅದರಿಂದ ವೇದಗಳು ಲುಪ್ತವಾದವು. ಕರ್ಮ ಭ್ರಷ್ಟರಾದ ದ್ವಿಜರು ಮ್ಲೇಚ್ಛರೆದುರಿಗೆ ವೇದಗಳ ಪಠನದಿಂದ ಜಾತಿ ಭ್ರಷ್ಟರೂ ಆದರು. ಅಂತಹವರಿಂದ ವೇದಮಂತ್ರಗಳ ಬಲವೂ ನಾಶವಾಯಿತು. ಹಿಂದೆ ಬ್ರಾಹ್ಮಣರಿಗೆ ದೇವತ್ವ, ಮಹತ್ವಗಳಿದ್ದುದರಿಂದಲೇ ಅವರು ಭೂಸುರರಾಗಿ, ಮಾನ್ಯರಾಗಿದ್ದರು. ರಾಜ ಮಹಾರಾಜರು ಬ್ರಾಹ್ಮಣರನ್ನು ಪೂಜಿಸಿ, ತಮ್ಮ ಸರ್ವಸ್ವವನ್ನೂ ಅವರಿಗೆ ಅರ್ಪಿಸುತ್ತಿದ್ದರು. ಆದರೆ ಆ ಬ್ರಾಹ್ಮಣರು ಧನ ಸಂಪಾದನೆಯಲ್ಲಿ ಆಸಕ್ತಿಯಿಲ್ಲದೆ ರಾಜರು ಕೊಟ್ಟ, ಅರ್ಪಿಸಿದ ಧನ ಕನಕಾದಿಗಳನ್ನು ನಿರಾಕರಿಸುತ್ತಿದ್ದರು. ಅವರಲ್ಲಿದ್ದ ವೇದ ಮಂತ್ರಗಳ ಬಲದಿಂದಲೇ ತ್ರಿಮೂರ್ತಿಗಳೂ ಅವರ ವಶರಾಗಿದ್ದರು. ಅವರನ್ನು ಕಂಡು ಇಂದ್ರಾದಿ ದೇವತೆಗಳೂ ಭೀತರಾಗಿ ಅವರಿಗೆ ನಮಸ್ಕರಿಸುತ್ತಿದ್ದರು. ಅಂತಹವರ ಆಶೀರ್ವಚನಗಳಿಂದಲೇ ಇಷ್ಟಾರ್ಥಗಳು ಸಿದ್ಧಿಸುತ್ತಿದ್ದವು. ಅಂತಹ ದ್ವಿಜರು ಬೆಟ್ಟವನ್ನು ಹುಲ್ಲಾಗಿ, ಹುಲ್ಲನ್ನು ಬೆಟ್ಟವಾಗಿ ಪರಿವರ್ತಿಸ ಬಲ್ಲವರಾಗಿದ್ದರು. ವೇದ ಪ್ರಭಾವಿತರಾದ ವಿಪ್ರರನ್ನು ವಿಷ್ಣು ಸಹಿತರಾದ ದೇವತೆಗಳು ದೈವವೆಂದು ಪೂಜಿಸುತ್ತಿದ್ದರು. ಜಗತ್ತೆಲ್ಲವೂ ದೈವಾಧೀನವು. ದೇವತೆಗಳು ಮಂತ್ರಾಧೀನರು. ಮಂತ್ರಗಳು ಬ್ರಾಹ್ಮಣರ ಅಧೀನವು. ಅದರಿಂದಲೇ ವಿಪ್ರರನ್ನು ದೈವವೆಂದು ವಿಷ್ಣುವು ಹೇಳಿದನು. ಆದರೆ ಇಂದು, ಬ್ರಾಹ್ಮಣರು ವೇದ ಮಾರ್ಗಗಳನ್ನತಿಕ್ರಮಿಸಿ, ದುಷ್ಟ ಮಾರ್ಗಗಳಲ್ಲಿ ಹೋಗುತ್ತಿದ್ದಾರೆ. ಅದರಿಂದಲೇ ಅವರು ಸತ್ವ ಹೀನರಾಗಿ, ಹೀನ ಜಾತಿಯವರ ಸೇವೆ ಮಾಡುತ್ತಿದ್ದಾರೆ. ವೇದ ವಿಕ್ರಯವನ್ನು ಮಾಡುತ್ತಿರುವುದಲ್ಲದೆ, ಹೀನ ಜಾತಿಯವರ ಮುಂದೆಯೂ ವೇದ ಪಠನ ಮಾಡುತ್ತಿದ್ದಾರೆ. ಅಂತಹ ಬ್ರಾಹ್ಮಣಾಧಮರ ಮುಖವನ್ನೂ ನೋಡಬಾರದು. ಅವರು ಬ್ರಹ್ಮ ರಾಕ್ಷಸರಾಗುವುದರಲ್ಲಿ ಸಂಶಯವಿಲ್ಲ.

ಚತುರ್ವೇದಗಳು ಬಹು ವಿಸ್ತಾರವಾದವು. ಎಲ್ಲವನ್ನೂ ತಿಳಿದವನು ಭೂಮಂಡಲದಲ್ಲಿ ಒಬ್ಬನೂ ಇಲ್ಲ. ಸಾಮಾನ್ಯವಾಗಿ ಅವು ಗೋಪ್ಯವಾದವು. ಸಾಮಾನ್ಯರಿಗೆ ಅವು ದೊರಕುವಂತಹುವವಲ್ಲ. ಹಾಗಿರುವಾಗ ನೀವು ಚತುರ್ವೇದ ಪಾರಂಗತರು ಹೇಗಾದಿರಿ? ಮಿಕ್ಕ ಬ್ರಾಹ್ಮಣರನ್ನು ಅವಮಾನಿಸುವುದರಿಂದ ನಿಮಗೆ ಆಗುವ ಲಾಭವೇನು? ನಿಮ್ಮನ್ನು ನೀವೇ ಹೊಗಳಿ ಕೊಳ್ಳುತ್ತಾ, ಜಯಪತ್ರಗಳ ಪ್ರದರ್ಶನ ಮಾಡುತ್ತಾ, ತ್ರಿವಿಕ್ರಮನನ್ನು ಜಯಪತ್ರ ಕೊಡು ಎಂದು ಕೇಳುವುದರಲ್ಲಿ ಅರ್ಥವೇನಿದೆ? ನನ್ನ ಮಾತು ಕೇಳಿ ಈ ದುರಾಗ್ರಹವನ್ನು ಬಿಡಿ. ಇಂತಹ ಭ್ರಮೆಯಲ್ಲಿ ಬಿದ್ದು ನೀವು ಪ್ರಾಣ ಕಳೆದು ಕೊಳ್ಳುತ್ತೀರಿ" ಎಂದು ಆ ಬ್ರಾಹ್ಮಣರಿಬ್ಬರಿಗೆ ಶ್ರೀಗುರುವು ಹಿತ ವಚನಗಳನ್ನು ಹೇಳಿದರು.

ಆದರೆ ಆ ತಾಮಸಿಗಳಿಬ್ಬರೂ ಶ್ರೀಗುರುವಿನ ಮಾತುಗಳಿಗೆ ಇಂಬು ಕೊಡದೆ, "ನಿಮ್ಮಿಬ್ಬರಲ್ಲಿ ಯಾರಾದರೂ ನಮ್ಮೊಡನೆ ವಾದ ಮಾಡಿ. ಇಲ್ಲದಿದ್ದರೆ ಜಯಪತ್ರವನ್ನಾದರೂ ಕೊಡಿ. ವಾದ ಮಾಡದಿದ್ದರೆ ಜಯಪತ್ರವನ್ನಾದರೂ ತೋರಿಸದಿದ್ದರೆ ರಾಜನೆದುರಿಗೆ ನಾವು ಹೇಗೆ ಶ್ರೇಷ್ಠರಾಗುತ್ತೀವಿ?" ಎಂದು ಆಗ್ರಹ ಮಾಡಿ ಸ್ವಹಿತವನ್ನು ಅರಿಯದೆ ಮೃತ್ಯುವನ್ನು ಆಹ್ವಾನಿಸಿಕೊಂಡರು" ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಇಪ್ಪತ್ತಾರನೆಯ ಅಧ್ಯಾಯ ಮುಗಿಯಿತು.


||ಶ್ರೀ ಗುರು ಚರಿತ್ರೆ - ಇಪ್ಪತ್ತೈದನೆಯ ಅಧ್ಯಾಯ||

||ಕರ್ಮ ಕಾಂಡ||

"ಹೇ ಯೋಗಿರಾಜ, ಸಿದ್ಧಮುನಿ, ಸದ್ಗುರುವು ಇಲ್ಲಿ ಅವತರಿಸಿದ್ದರೂ, ಜ್ಞಾನಿಗಳಿಗೆ ಮಾತ್ರ ತನ್ನ ನಿಜ ರೂಪದಲ್ಲಿ ಕಾಣಿಸಿ ಕೊಳ್ಳುತ್ತಾನೆ. ಸಾಮಾನ್ಯರಿಗೆ ಮನುಷ್ಯ ಮಾತ್ರನಾಗಿಯೇ ಕಾಣಿಸಿ ಕೊಳ್ಳುತ್ತಾನೆ. ಶ್ರೀಗುರುವು ತ್ರಿವಿಕ್ರಮನಿಗೆ ಪ್ರತ್ಯಕ್ಷ ದರ್ಶನವನ್ನು ಕೊಟ್ಟ ನಂತರ ನಡೆದ ವಿಷಯಗಳನ್ನು ಸವಿಸ್ತಾರವಾಗಿ ಹೇಳಿ" ಎಂದು ನಾಮಧಾರಕನು ಕೇಳಿದನು. ಅದಕ್ಕೆ ಸಿದ್ಧಮುನಿ, "ಶ್ರೀಗುರು ಲೀಲೆಗಳೆನ್ನುವುದು ಎಲ್ಲವೂ ನನಗೂ ತಿಳಿಯದ ವಿಷಯವೇ! ನನಗೆ ತಿಳಿದ ಮಟ್ಟಿಗೆ ಹೇಳುತ್ತೇನೆ. ಸಾವಧಾನವಾಗಿ ಕೇಳು.

ವೈಢೂರ್ಯ ನಗರವೆಂಬಲ್ಲಿ ಒಬ್ಬ ಯವನ ರಾಜನಿದ್ದನು. ಅವನು ಬ್ರಹ್ಮದ್ವೇಷಿ. ಜೀವ ಹಿಂಸೆ ಮಾಡುವವನು. ‘ವೇದಾರ್ಥಗಳನ್ನು ಹೇಳುವವರು ನನಗೆ ಅತ್ಯಂತ ಪ್ರೀತಿಪಾತ್ರರು’ ಎಂದು ಸದಾ ಹೇಳುತ್ತಿದ್ದ ಅವನು, ಬ್ರಾಹ್ಮಣರನ್ನು ಬಲಾತ್ಕಾರವಾಗಿ ತನ್ನ ಬಳಿಗೆ ಕರೆಸಿ, ಅವರು ಶ್ರುತಿಗಳನ್ನು ಅವನೆದುರಿಗೆ ಓದುವಂತೆ ಆಜ್ಞೆ ಮಾಡುತ್ತಿದ್ದನು. ವೇದ ಶಾಸ್ತ್ರಗಳನ್ನು ಬಲ್ಲವರು ಅವನ ಮುಂದೆ ವೇದಗಳನ್ನು ಓದಲಿಚ್ಚಿಸದೆ ತಾವು ಮಂದ ಬುದ್ಧಿಗಳು, ತಮಗೇನೂ ತಿಳಿಯದು ಎಂದು ಹೇಳುತ್ತಿದ್ದರು. ಆದರೆ ಧನದಾಸೆಯಿಂದ ಹಲವರು ಅವನ ಮುಂದೆ ವೇದ ಪಠನ ಮಾಡುತ್ತಿದ್ದರು. ಆ ಯವನ ರಾಜ ಅಂತಹವರಿಂದ ಯಜ್ಞ ಕಾಂಡವನ್ನು ಓದಿಸಿ ಅದರ ಅರ್ಥವನ್ನು ಕೇಳಿ ತಿಳಿದು ಕೊಂಡು, ‘ಯಜ್ಞಯಾಗಾದಿಗಳನ್ನು ಮಾಡುವವರು ಪ್ರಾಣಿಹಿಂಸೆ ಮಾಡುತ್ತಾರೆ. ಮತ್ತೆ ನಮ್ಮನ್ನು ಏಕೆ ಪಶು ಹಿಂಸಕರೆಂದು ನಿಂದಿಸುತ್ತಾರೆ?’ ಎಂದು ವೇದ ಶಾಸ್ತ್ರಗಳನ್ನು ಅವಹೇಳನ ಮಾಡುತ್ತಾ, ತನ್ನೆದುರಿಗೆ ವೇದಗಳನ್ನು ಪಠಿಸಿದವರಿಗೆ ಧನ ಕನಕಗಳನ್ನು ಕೊಟ್ಟು ಆದರಿಸುತ್ತಿದ್ದನು.

ಒಂದು ದಿನ, ವೇದ ಶಾಸ್ತ್ರ ನಿಪುಣರೆಂದು ಹೇಳಿಕೊಂಡ ಇಬ್ಬರು ಬ್ರಾಹ್ಮಣರು ಅವನ ಬಳಿಗೆ ಬಂದು, ತಮ್ಮ ಪ್ರಶಂಸೆಯನ್ನು ತಾವೇ ಮಾಡಿಕೊಳ್ಳುತ್ತಾ, "ನಾವು ಮೂರು ವೇದಗಳನ್ನು ಆಳವಾಗಿ ಅಭ್ಯಾಸಮಾಡಿದ್ದೇವೆ. ವೇದ ಶಾಸ್ತ್ರಗಳನ್ನು ಅರಿತವರಲ್ಲಿ ನಮ್ಮನ್ನು ಮೀರಿಸಿದವರಿಲ್ಲ. ವೇದ ವಾದಗಳಲ್ಲಿ ನಮ್ಮನ್ನು ಸೋಲಿಸಿದವರಿಲ್ಲ. ನಮ್ಮೊಡನೆ ವಾದ ಮಾಡಿ ಸೋತವರೆಲ್ಲರೂ ನಮಗೆ ಜಯಪತ್ರಗಳನ್ನು ನೀಡಿದ್ದಾರೆ. ನಿಮ್ಮ ದೇಶದಲ್ಲಿ ನಮ್ಮೊಡನೆ ವಾದ ಮಾಡುವ ಅರ್ಹತೆಯುಳ್ಳವರು ಯಾರಾದರೂ ಇದ್ದರೆ ಅವರೊಡನೆ ವಾದಕ್ಕೆ ಏರ್ಪಡಿಸು" ಎಂದು ಅಹಂಕಾರದಿಂದ ತುಂಬಿ ಹೇಳಿದರು. ಅವರ ಮಾತಿನಿಂದ ಸಂತೋಷಗೊಂಡ ಆ ಯವನ ರಾಜ, ಊರಿನಲ್ಲಿ ವೇದ ಶಾಸ್ತ್ರಗಳನ್ನು ತಿಳಿದವರೆಲ್ಲರೂ ಬರಬೇಕೆಂದು ಡಂಗುರ ಹೊಡೆಸಿದನು. ಅದರಂತೆ ಬಂದವರೆಲ್ಲರನ್ನೂ ಒಂದು ಕಡೆ ಸೇರಿಸಿ, "ನಿಮ್ಮಲ್ಲಿ ಯಾರಾದರೂ ಈ ಇಬ್ಬರು ಬ್ರಾಹ್ಮಣರೊಡನೆ ವಾದ ಮಾಡಿ ಅವರನ್ನು ಸೋಲಿಸಿದರೆ ವಿಫುಲವಾದ ಧನವನ್ನು ಕೊಡುತ್ತೇನೆ" ಎಂದು ಹೇಳಿದನು. ಅಲ್ಲಿ ಸೇರಿದ್ದ ಬ್ರಾಹ್ಮಣರು ಯಾರೂ ವಾದ ಮಾಡಲು ಇಚ್ಛಿಸದೆ, "ಹೇ ರಾಜ ನಮ್ಮಲ್ಲಿ ಯಾರಿಗೂ ಅಂತಹ ಯೋಗ್ಯತೆ ಇಲ್ಲ. ಇವರಿಬ್ಬರೂ ನಮಗಿಂತ ಶ್ರೇಷ್ಠರು. ಅವರಿಗೆ ಅದನ್ನು ತಿಳಿಸಿ ಅವರಿಗೆ ತಕ್ಕ ಸನ್ಮಾನವನ್ನು ಮಾಡು" ಎಂದು ಹೇಳಿ, ಆ ದ್ವಿಜರಿಗೆ ಜಯಪತ್ರ ಕೊಟ್ಟರು. ಆ ಯವನರಾಜ ಅವರನ್ನು ಆನೆಯ ಮೇಲೆ ಕೂಡಿಸಿ, ವಾದ್ಯ ಘೋಷಗಳೊಡನೆ ಅವರನ್ನು ಊರಿನಲ್ಲಿ ಮೆರವಣಿಗೆ ಮಾಡಿಸಿದನು. ಆ ರಾಜ, "ಈ ಊರಿನಲ್ಲಿರುವ ಬ್ರಾಹ್ಮಣರೆಲ್ಲರಿಗೂ ಇವರು ರಾಜರು, ಇವರಿಗೆ ನಾನು ರಾಜ" ಎಂದು ಊರಿನಲ್ಲಿ ಪ್ರಕಟಿಸಿದನು. ಅದರಿಂದ ಇನ್ನಷ್ಟು ಮತ್ತರಾದ ಆ ಬ್ರಾಹ್ಮಣರಿಬ್ಬರೂ ಊರಿನಲ್ಲಿದ್ದ ಮಿಕ್ಕ ಬ್ರಾಹ್ಮಣರೆಲ್ಲರನ್ನು ಅವಹೇಳನ ಮಾಡುತ್ತಾ ತಾವೇ ಆ ಊರಿನ ರಾಜರೋ ಎಂಬಂತೆ ವರ್ತಿಸುತ್ತಿದ್ದರು. ಹಾಗೆ ಮದಿಸಿದ ಆನೆಗಳಂತೆ ವರ್ತಿಸುತ್ತಿದ್ದ ಅವರಿಬ್ಬರೂ ಒಂದಿ ದಿನ ರಾಜನಿಗೆ, "ಇಲ್ಲಿ ನಮ್ಮೊಡನೆ ವಾದಿಸುವವರು ಯಾರೂ ಕಾಣುವುದಿಲ್ಲ. ನಾವೇನೆಂದು ಎಲ್ಲ ಕಡೆಯೂ ಪ್ರಖ್ಯಾತವಾಗಿದೆ. ನೀವು ಅನುಮತಿಸಿದರೆ, ನಾವು ಇತರ ರಾಜ್ಯಗಳಲ್ಲಿ ಪಯಣಿಸುತ್ತಾ, ಅಲ್ಲಿನವರೊಡನೆ ವಾದ ಮಾಡಿ ಅವರನ್ನು ಸೋಲಿಸಿ ಜಯಪತ್ರಗಳನ್ನು ತರುತ್ತೇವೆ" ಎಂದು ಹೇಳಿದರು. ಅವರ ಮಾತಿನಿಂದ ಸಂತಸಗೊಂಡ ರಾಜ, "ಹಾಗೇ ಆಗಲಿ. ನಿಮ್ಮಿಚ್ಚೆಯಂತೆ ಹೋಗಿ ಜಯಪತ್ರಗಳನ್ನು ತನ್ನಿ" ಎಂದು ಹೇಳಿ ಅವರನ್ನು ಆನೆಯ ಅಂಬಾರಿಯಲ್ಲಿ ಕೂಡಿಸಿ ಕಳುಹಿಸಿದನು. ಅವರು ಹಾಗೆ ಊರಿಂದೂರಿಗೆ ತಮ್ಮೊಡನೆ ವಾದ ಮಾಡುವವರನ್ನು ಹುಡುಕುತ್ತಾ ಹೊರಟು ದಕ್ಷಿಣದಲ್ಲಿರುವ ಕುಮಸಿ ಎಂಬ ಊರನ್ನು ಸೇರಿದರು. ಅಲ್ಲಿ ತ್ರಿವಿಕ್ರಮನೆಂಬ ವೇದ ಶಾಸ್ತ್ರಗಳನ್ನು ಅರಿತವನೊಬ್ಬನಿದ್ದಾನೆಂದು ಅವರಿಗೆ ತಿಳಿದುಬಂತು.

ಆ ಗರ್ವಗಂಧಿ ಬ್ರಾಹ್ಮಣರು ತ್ರಿವಿಕ್ರಮನನ್ನು ಕಂಡು, "ಅಯ್ಯಾ, ನೀವು ತ್ರಿವೇದಗಳನ್ನು ಬಲ್ಲವರೆಂದು ಎಲ್ಲರೂ ಹೇಳುತ್ತಿದ್ದಾರೆ. ನೀವು ವೇದಗಳನ್ನು ಬಲ್ಲವರೇ ಆದರೆ ನಮ್ಮೊಡನೆ ವಾದ ಮಾಡಿ. ಇಲ್ಲದಿದ್ದರೆ ನಮಗೆ ಜಯಪತ್ರವನ್ನಾದರೂ ನೀಡಿ" ಎಂದರು. ಅದಕ್ಕೆ ತ್ರಿವಿಕ್ರಮನು, "ಅಯ್ಯಾ, ನಾನೊಬ್ಬ ಮೂಢ. ವೇದಗಳನ್ನು ಅರಿತವನಲ್ಲ. ವೇದ ಶಾಸ್ತ್ರಗಳನ್ನು ಅರಿತವನಾಗಿದ್ದರೆ ಈ ಕಾಡಿನಲ್ಲೇಕೆ ವಾಸ ಮಾಡುತ್ತಿದ್ದೆ? ನಾನೂ ನಿಮ್ಮಂತೆ ರಾಜರಿಂದ ಪೂಜಿತನಾಗಿ ಭೋಗ ಭಾಗ್ಯಗಳನ್ನು ಅನುಭವಿಸುತ್ತಿದ್ದೆ. ನಾನೊಬ್ಬ ತಾಪಸಿ. ಇಲ್ಲಿ ತಪಸ್ಸು ಮಾಡುತ್ತಾ, ಭಿಕ್ಷೆ ಮಾಡಿಕೊಂಡು ಜೀವಿಸುತ್ತಿದ್ದೇನೆ. ನಿಮ್ಮೊಡನೆ ವಾದ ಮಾಡಲು ನಾನು ಸಮರ್ಥನಲ್ಲ. ನಿಮ್ಮಂತಹ ವಿದ್ವಾಂಸರೊಡನೆ ನನಗೆ ವಾದಗಳೇತಕ್ಕೆ? ಜಯಾಪಜಯಗಳಿಂದ ನನಗಾಗಬೇಕಾದ್ದೇನು?" ಎಂದನು. ಆದರೆ ಆ ಅಹಂಕಾರಿಗಳು ಅವನ ಮಾತಿಗೆ ಇಂಬು ಕೊಡದೆ, "ದೇಶಗಳನ್ನೆಲ್ಲಾ ಸುತ್ತಾಡಿದರೂ ನಮ್ಮೊಡನೆ ವಾದ ಮಾಡುವವರು ಒಬ್ಬರೂ ಸಿಕ್ಕಲಿಲ್ಲ. ನಾವು ಪಡೆದಿರುವ ಈ ಜಯಪತ್ರಗಳನ್ನು ನೋಡು. ನೀನು ನಮ್ಮೊಡನೆ ವಾದ ಮಾಡು. ಇಲ್ಲವೇ ನಮಗೆ ಜಯಪತ್ರ ಬರೆದು ಕೊಡು" ಎಂದು ಮತ್ತೆ ಗರ್ವದಿಂದ ಹೇಳಿದರು. ತ್ರಿವಿಕ್ರಮನು ತನ್ನ ಮನಸ್ಸಿನಲ್ಲಿ, "ಇವರಿಬ್ಬರೂ ಮದಾಂಧರು. ಬೇರೆಯವರನ್ನು ಅವಮಾನಿಸುವ ಅಹಂಕಾರಿಗಳು. ಇವರಿಗೆ ಸರಿಯಾಗಿ ಬುದ್ಧಿ ಹೇಳಲು ಗಂಧರ್ವ ಪುರದಲ್ಲಿರುವ ಶ್ರೀಗುರುವೇ ಸರಿಯಾದವರು. ಇವರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ" ಎಂದು ಯೋಚಿಸಿ, "ಅಯ್ಯಾ, ನನಗೆ ಗಂಧರ್ವ ಪುರದಲ್ಲಿ ಗುರುಗಳೊಬ್ಬರಿದ್ದಾರೆ. ಅಲ್ಲಿಗೆ ಹೋಗೋಣ ಬನ್ನಿ. ಅವರ ಅಪ್ಪಣೆ ಪಡೆದು ನಿಮ್ಮೊಡನೆ ವಾದವೋ ಇಲ್ಲ ಜಯಪತ್ರವೋ ಕೊಡುತ್ತೇನೆ" ಎಂದು ಹೇಳಿ ಅವರಿಬ್ಬರನ್ನೂ ಕರೆದು ಕೊಂಡು ಶ್ರೀಗುರುವಿದ್ದ ಸ್ಥಳಕ್ಕೆ ಹೊರಟನು. ಆ ಮದಾಂಧರಿಬ್ಬರೂ ಆನೆ ಅಂಬಾರಿಯಲ್ಲಿ ಕೂತು ನಡೆದು ಹೋಗುತ್ತಿದ್ದ ತ್ರಿವಿಕ್ರಮನ ಹಿಂದೆ ಹೊರಟರು. ಗುರು ಸನ್ನಿಧಾನಕ್ಕೆ ಹೇಗೆ ಹೋಗಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಅವರಿಬ್ಬರೂ ಹಾಗೆ ತಮ್ಮ ಮೃತ್ಯುವನ್ನು ತಾವೇ ಆಹ್ವಾನಿಸಿಕೊಂಡರು.

ಗಂಧರ್ವ ಪುರವನ್ನು ಸೇರಿ, ಅವರೆಲ್ಲರೂ ಶ್ರೀಗುರುವಾದ ನೃಸಿಂಹ ಸರಸ್ವತಿಗಳ ಬಳಿಗೆ ಹೋದರು. ತ್ರಿವಿಕ್ರಮನು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, "ಗುರುವರ, ಭಕ್ತವತ್ಸಲ. ಭವಾರ್ಣವ ತಾರಕ, ಜಯವಾಗಲಿ. ಜಯವಾಗಲಿ. ನಿಮ್ಮನ್ನು ಈಶ್ವರನೆಂದು ತಿಳಿಯದವನು ಅಧೋಗತಿಗೆ ಹೋಗುತ್ತಾನೆ" ಮುಂತಾಗಿ ಶ್ರೀಗುರುವನ್ನು ಸ್ತೋತ್ರ ಮಾಡುತ್ತಾ, ಅಶ್ರು ಪೂರ್ಣನಾಗಿ ಮತ್ತೆ ಮತ್ತೆ ನಮಸ್ಕರಿಸಿದನು. ನಮಸ್ಕರಿಸಿದ ಅವನನ್ನು ಶ್ರೀಗುರುವು ಎಬ್ಬಿಸಿ, "ಯತೀಶ್ವರ, ನೀನು ಈಗ ಇಲ್ಲಿಗೆ ಬಂದ ಕಾರಣವೇನು? ಏನು ನಿನ್ನ ಇಚ್ಚೆ?’ ಎಂದು ಕೇಳಿದರು. ಅದಕ್ಕೆ ತ್ರಿವಿಕ್ರಮನು, "ಸ್ವಾಮಿ, ಗರ್ವಿತರಾದ ಇಬ್ಬರು ಬ್ರಾಹ್ಮಣರು ನನ್ನ ಬಳಿಗೆ ಬಂದು, ನಾವು ವೇದ ಶಾಸ್ತ್ರ ಪುರಾಣಗಳನ್ನು ಆದ್ಯಂತವಾಗಿ ಬಲ್ಲವರು. ವಾದಾಭಿಲಾಷಿಗಳು. ಚತುರ್ವೇದ ಪಂಡಿತರು. ಜ್ಞಾನಿಗಳು" ಎಂದು ತಮ್ಮ ಪ್ರಶಂಸೆಯನ್ನು ತಾವೇ ಮಾಡಿ ಕೊಳ್ಳುತ್ತಾ, "ನಮ್ಮ್ನೊಡನೆ ವಾದ ಮಾಡು. ಇಲ್ಲವೇ ಜಯಪತ್ರವನ್ನು ಕೊಡು" ಎಂದು ಬಲಾತ್ಕಾರ ಮಾಡುತ್ತಿದ್ದಾರೆ. ಅವರಿಗೆ ಎಷ್ಟು ತಿಳಿಯ ಹೇಳಿದರೂ, ಅವರು ಅದನ್ನು ಗಣನೆಗೆ ತಂದುಕೊಳ್ಳದೆ ಗರ್ವಿತರಾಗಿ ಮಾತನಾಡುತ್ತಿದ್ದಾರೆ. ಅವರಿಗೆ ನಾನು, ‘ನಮ್ಮ ಗುರುಗಳ ಬಳಿಗೆ ಹೋಗೋಣ. ಅವರು ಅಪ್ಪಣೆ ಕೊಟ್ಟಂತೆ ನಾನು ಮಾಡುತ್ತೇನೆ’ ಎಂದು ಹೇಳಿ ಅವರನ್ನು ಇಲ್ಲಿಗೆ ಕರೆತಂದಿದ್ದೇನೆ" ಎಂದು ಹೇಳಿದನು. ಅವನ ಮಾತನ್ನು ಕೇಳಿದ ಶ್ರೀಗುರುವು, ಆ ಬ್ರಾಹ್ಮಣರನ್ನು ಕರೆದು, "ಅಯ್ಯಾ, ವಾದ ವಿವಾದಗಳಿಂದ ನಿಮಗಾಗುವ ಫಲವೇನು? ಇತರ ಬ್ರಾಹ್ಮಣರನ್ನು ಪರಾಭವಗೊಳಿಸಿ ಅವಮಾನಿಸುವುದರಿಂದ ನಿಮಗುಂಟಾಗುವ ಲಾಭವೇನು? ನಮಗೆ ಜಯಾಪಜಯಗಳು ಎರಡೂ ಸಮಾನವೇ! ನಾವು ತಾಪಸಿಗಳು. ನಮ್ಮನ್ನು ಜಯಿಸಿ ನಿಮಗೆ ದೊರೆಯುವ ಪುರುಷಾರ್ಥವೇನು?" ಎಂದು ಕೇಳಿದರು. ಅದಕ್ಕೆ ಅ ಬ್ರಾಹ್ಮಣರು, "ಅಯ್ಯಾ, ಸನ್ಯಾಸಿ, ನಾವು ದೇಶ ದೇಶಗಳನ್ನು ಸುತ್ತುತ್ತಾ, ವಾದಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಇದುವರೆಗೂ ನಮ್ಮನ್ನು ಜಯಿಸಿದವರು ಒಬ್ಬರೂ ಇಲ್ಲ. ವಾದ ಮಾಡದವರು ನಮಗೆ ಜಯಪತ್ರಗಳನ್ನು ನೀಡಿದ್ದಾರೆ. ಹಾಗೆ ಇವನೂ ಕೂಡ ನಮಗೆ ಜಯಪತ್ರವನ್ನು ಕೊಡದೆ, ನಮ್ಮನ್ನು ಇಲ್ಲಿಗೇಕೆ ಕರೆತಂದ? ನಾವು ಚತುರ್ವೇದ ಪಾರಂಗತರು. ನಿಮ್ಮಿಬ್ಬರಲ್ಲಿ ಯಾರಾದರೊಬ್ಬರು ನಮ್ಮೊಡನೆ ವಾದಮಾಡಿ, ಇಲ್ಲವೇ ಜಯಪತ್ರವನ್ನು ಕೊಡಿ"" ಎಂದು ಮದೋನ್ಮತ್ತರಾಗಿ ಹೇಳಿದರು.

ಅದಕ್ಕೆ ಶ್ರೀಗುರುವು, "ಅಯ್ಯಾ, ನಿಮಗೆ ಇಷ್ಟೊಂದು ಗರ್ವವಿರಬಾರದು. ಗರ್ವದಿಂದಲೇ ರಾಕ್ಷಸರು ಹತರಾದರು. ಗರ್ವಿತನಾದ ಬಲಿಯ ಪಾಡೇನಾಯಿತು ಎಂಬುದು ನಿಮಗೆ ತಿಳಿಯದೇ? ಬಾಣಾಸುರನ ಗತಿಯೇನಾಯಿತು ಎಂದು ಗೊತ್ತಿಲ್ಲವೇ? ಗರ್ವೋನ್ಮತ್ತನಾದ ರಾವಣನ ಗತಿ ಏನಾಯಿತು ಎಂದು ಅರಿಯರೇ? ಸಂಪೂರ್ಣವಾಗಿ ವೇದಗಳನ್ನು ಬಲ್ಲವರಾರು? ಬ್ರಹ್ಮಾದಿಗಳಿಗೇ ಈಗಲೂ ವೇದಗಳು ಏನು ಎನ್ನುವುದು ತಿಳಿಯದು. ವೇದಗಳು ಅನಂತವಾದವು. ಅದನ್ನು ಆದ್ಯಂತವಾಗಿ ಬಲ್ಲವರು ಯಾರೂ ಇಲ್ಲ. ನೀವು ವೃಥಾ ಗರ್ವಪಡುತ್ತಿದ್ದೀರಿ. ಇದು ನಿಮಗೆ ಒಳ್ಳೆಯದಲ್ಲ. ವೇದಗಳು ಅನಂತವಾಗಿರುವಾಗ ನೀವು ಚತುರ್ವೇದಗಳನ್ನು ಬಲ್ಲ ಪರಿಣತರೆಂದು ಹೇಳಿಕೊಳ್ಳುವುದು ಎಷ್ಟು ಸಮಂಜಸ?" ಎಂದು ಕೇಳಲು, ಆ ಗರ್ವಗಂಧಿಗಳು, "ನಾವು ನಾಲ್ಕೂ ವೇದಗಳನ್ನು ಸಾಂಗೋಪಾಂಗವಾಗಿ ಅಭ್ಯಾಸಮಾಡಿದ್ದೇವೆ" ಎಂದು ಉನ್ಮತ್ತರಾಗಿ ಹೇಳಿದರು. ಆಗ ಶ್ರೀಗುರುವು, ಅವರಿಗೆ ಚತುರ್ವೇದಗಳ ವಿಸ್ತಾರವನ್ನು ತಿಳಿಯಹೇಳಿದರು. 

ಇಲ್ಲಿಗೆ ಇಪ್ಪತ್ತೈದನೆಯ ಅಧ್ಯಾಯ ಮುಗಿಯಿತು.




||ಶ್ರೀ ಗುರು ಚರಿತ್ರೆ - ಇಪ್ಪತ್ತನಾಲ್ಕನೆಯ ಅಧ್ಯಾಯ||

ನಾಮಧಾರಕ, "ಸ್ವಾಮಿ, ಅಲ್ಲಿ ನಡೆದ ಘಟನೆ ಏನು? ಕೃಪೆಯಿಟ್ಟು ವಿಸ್ತಾರವಾಗಿ ಹೇಳಿ" ಎಂದು ಕಾತರನಾಗಿ ಕೇಳಿದನು.

ಅದಕ್ಕೆ ಸಿದ್ಧಮುನಿ, "ಕುಮಸಿಯಲ್ಲಿದ್ದ ತ್ರಿವಿಕ್ರಮ ಭಾರತಿ ಶ್ರೀಗುರುವನ್ನು ನಿಂದಿಸುತ್ತಿದ್ದಾನೆಂದು ರಾಜನಿಗೆ ತಿಳಿಯಿತು. ಅವನು ಆ ವಿಷಯವನ್ನು ಶ್ರೀಗುರುವಿಗೂ ಹೇಳಿ, ಅವರನ್ನು ಕುಮಸಿಗೆ ಕರೆದು ಕೊಂಡು ಹೋಗಲು ನಿರ್ಧರಿಸಿದನು. ಅವನ ನಿರ್ಧಾರದಂತೆ, ಶ್ರೀಗುರುವಿನ ಅನುಮತಿ ಪಡೆದು, ಆ ರಾಜ ಅಶ್ವ, ಗಜ, ಪದಾತಿಗಳಿಂದ ಕೂಡಿದ ಸೈನ್ಯದೊಡನೆ, ಶ್ರೀಗುರುವನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕೂಡಿಸಿ, ಕರೆದು ಕೊಂಡು ಕುಮಸಿಗೆ ಹೊರಟನು.

ಪ್ರತಿ ದಿನವೂ ನೃಸಿಂಹ ಸ್ವಾಮಿಯ ಮಾನಸಪೂಜೆ ಮಾಡಿಕೊಳ್ಳುತ್ತಿದ್ದ ತ್ರಿವಿಕ್ರಮ ಭಾರತಿಗೆ, ಶ್ರೀಗುರುವು ಕುಮಸಿಗೆ ಹೊರಟ ದಿನ, ಎಂದಿನಂತೆ ಅವನ ಮಾನಸ ಪೂಜೆಯಲ್ಲಿ ನೃಸಿಂಹ ಸ್ವಾಮಿಯ ದರ್ಶನವಾಗಲಿಲ್ಲ. ಅದರಿಂದ ಅವನು ವಿಚಲಿತ ಮನಸ್ಕನಾಗಿ, "ಹೇ ನೃಸಿಂಹ, ಬಹಳ ಕಾಲದಿಂದ ನಿನ್ನನ್ನು ಆರಾಧಿಸುತ್ತಿರುವ ನನ್ನನ್ನು ಇಂದು ಏಕೆ ಉಪೇಕ್ಷಿಸುತ್ತಿದ್ದೀಯೆ? ನನ್ನ ತಪಸ್ಸೆಲ್ಲವೂ ವ್ಯರ್ಥವಾಯಿತು. ಈಗ ನಾನೇನು ಮಾಡಲಿ?" ಎಂದು ಆರ್ತನಾಗಿ ಬೇಡಿಕೊಳ್ಳುತ್ತಿದ್ದ ಅವನ ಮನೋ ಚಕ್ಷುಗಳಿಗೆ, ನೃಸಿಂಹನ ಬದಲು ಶ್ರೀಗುರುವು ಕಾಣಿಸಿ ಕೊಂಡರು. ಅದರಿಂದ ಆಶ್ಚರ್ಯಗೊಂಡ ಅವನು, ತಕ್ಷಣವೇ ಎಚ್ಚರಗೊಂಡು, ದಂಡ ಧಾರಿಯಾಗಿ ಕುಮಸಿಗೆ ಬರುತ್ತಿದ್ದ ಶ್ರೀಗುರುವಿನ ಬಳಿಗೆ ಹೋಗಿ ಅವರಿಗೆ ನಮಸ್ಕರಿಸಿದನು. ಅವನು ನಮಸ್ಕರಿಸಿ ಏಳುತ್ತಿದ್ದಂತೆಯೇ ಅವನಿಗೆ ಶ್ರೀಗುರುವಿನೊಡನೆ ಬಂದಿದ್ದ ಪರಿವಾರವೆಲ್ಲವೂ ಶ್ರೀಗುರುವಿನ ರೂಪದಲ್ಲೇ ಕಾಣಿಸಿದರು. ಆ ಗುರು ರೂಪಿಗಳ ಸಮೂಹದಲ್ಲಿ ನಿಜವಾದ ಶ್ರೀಗುರುವು ಯಾರು ಎಂಬುದನ್ನು ತಿಳಿಯಲಾರದೇ ಹೋದ ತ್ರಿವಿಕ್ರಮ ಭಾರತಿ, ಮತ್ತೆ ದಂಡ ಪ್ರಣಾಮ ಮಾಡಿ, "ಹೇ ಸ್ವಾಮಿ, ಬ್ರಹ್ಮ, ವಿಷ್ಣು, ಮಹೇಶ್ವರ ರೂಪನಾದ ಜಗದ್ಗುರುವೇ, ಮಾಯೆ ಎಂಬ ಅಂಧಕಾರದಲ್ಲಿ ಮುಳುಗಿದ ನಾನು ನಿಮ್ಮನ್ನು ತಿಳಿಯಲಾರದೇ ಹೋದೆ. ನೀವು ಸರ್ವವ್ಯಾಪಕರು. ನೃಸಿಂಹನೇ ನಿಮ್ಮ ರೂಪದಲ್ಲಿದ್ದಾನೆ. ಇಲ್ಲಿ ಎಲ್ಲರಲ್ಲೂ ನೀವೇ ಕಾಣುತ್ತಿರುವಾಗ ನಾನು ಯಾರಿಗೆಂದು ಶರಣಾಗಲಿ? ನೀವೇ ತ್ರಿಮೂರ್ತಿ ಸ್ವರೂಪನೆಂದು ಅರಿಯಲಾರದೇ ಹೋದೆ. ನನ್ನಲ್ಲಿ ದಯೆತೋರಿ ನಿಮ್ಮ ನಿಜರೂಪವನ್ನು ತೋರಿಸುವ ಕೃಪೆಮಾಡಿ. ಇಷ್ಟು ಕಾಲದಿಂದ ನಾನು ಮಾಡಿದ ತಪಸ್ಸು ಇಂದು ಫಲವಾಯಿತು. ಹೇ ವಿಶ್ವೋದ್ಧಾರಕ, ನನ್ನನ್ನು ಉದ್ಧರಿಸಲೆಂದೇ ಮಾನವ ರೂಪದಲ್ಲಿದ್ದುಕೊಂಡೂ, ನೀವು ನಿಮ್ಮ ವಿಶ್ವ ರೂಪವನ್ನು ತೋರಿಸಿದಿರಿ" ಎಂದು ಸ್ತುತಿಸುತ್ತಾ, ಕಳಕಳಿಯಿಂದ ಬೇಡಿಕೊಂಡನು.

ಅವನ ಸ್ತುತಿಯಿಂದ ಪ್ರಸನ್ನನಾದ ಶ್ರೀಗುರುವು, ಅವನಿಗೆ ತಮ್ಮ ನಿಜರೂಪದಿಂದ ದರ್ಶನ ಕೊಟ್ಟು, "ಅಯ್ಯಾ, ನಮ್ಮನ್ನು ಡಾಂಭಿಕರೆಂದು ನಿಂದಿಸುತ್ತಿದ್ದೀಯೇಕೆ? ಅದನ್ನು ಕೇಳ ಬೇಕೆಂದೇ ನಾವು ಇಲ್ಲಿಗೆ ಬಂದೆವು. ನೀನು ನೃಸಿಂಹನ ಪೂಜೆ ಮಾಡುತ್ತಿದ್ದೀಯೆ. ಡಂಭವೆಂದರೆ ಏನು ಎಂಬುದನ್ನು ನಮಗೆ ವಿಸ್ತರಿಸಿ ಹೇಳು" ಎಂದರು. ಅದಕ್ಕೆ ತ್ರಿವಿಕ್ರಮ ಭಾರತಿ ಮತ್ತೆ ಶ್ರೀಗುರುವಿನ ಪಾದಗಳಿಗೆ ನಮಸ್ಕರಿಸಿ, "ಸ್ವಾಮಿ, ನಾನೊಬ್ಬ ಅಜ್ಞಾನಿ. ನನ್ನನ್ನು ಕ್ಷಮಿಸಿ. ಅಜ್ಞಾನಾಂಧಕಾರದಲ್ಲಿ ಮುಳುಗಿರುವ ನಾನು, ಹಗಲು ಕುರುಡಾದ ಗೂಬೆಯಂತೆ, ನಿಮ್ಮನ್ನು ತಿಳಿಯಲಾರದೇ ಹೋದೆ. ನನ್ನ ಅಪರಾಧವನ್ನು ಮನ್ನಿಸಿ, ನನ್ನನ್ನು ರಕ್ಷಿಸಿ, ಕಾಪಾಡಿ. ಪೂರ್ವ ಕೃತ ಕರ್ಮಫಲಗಳೆಂಬ ಭ್ರಮೆಯಲ್ಲಿ ಸಿಲುಕಿ ಒದ್ದಾಡುತ್ತಿರುವ ನಾನು, ನಿಮ್ಮ ನಿಜ ಸ್ವರೂಪವನ್ನು ಅರಿಯಲಾರದೇ ಹೋದೆ. ಕೃಪಾ ಸಾಗರ, ಜ್ಞಾನವೆಂಬ ನಾವೆಯಲ್ಲಿ ಕೂಡಿಸಿ, ಕೃಪೆಯೆಂಬ ಗಾಳಿಯನ್ನು ಬೀಸಿ, ನನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸಿ, ಸೇರ ಬೇಕಾದ ಗುರಿಯನ್ನು ಮುಟ್ಟುವಂತೆ ಮಾಡಿ. ಹೇ ದಯಾನಿಧಿ, ನಿಮ್ಮ ಕೃಪೆಯಿದ್ದವನು ಹೇಗೆತಾನೇ ದೀನನಾಗಬಲ್ಲ? ಅಂತಹವನಲ್ಲಿ ದೈನ್ಯ, ದುಃಖಗಳು ಹೇಗೆ ತಾನೇ ಇರಬಲ್ಲವು? ಅಂದು ಶ್ರೀ ಕೃಷ್ಣ ಅರ್ಜುನನಿಗೆ ವಿಶ್ವರೂಪವನ್ನು ತೋರಿಸಿದಂತೆ, ಇಂದು ನೀವು ನನಗೆ ನಿಮ್ಮ ವಿಶ್ವರೂಪದ ದರ್ಶನ ಮಾಡಿಸಿದಿರಿ. ಭಕ್ತವತ್ಸಲ, ನಿಮ್ಮ ಮಹಿಮೆ ಅಪಾರವಾದುದು. ಹೇ ಜಗದ್ಗುರು, ಜಯವಾಗಲಿ, ಜಯವಾಗಲಿ. ನೃಸಿಂಹ ಸರಸ್ವತಿಯ ರೂಪದಲ್ಲಿ ಬಂದಿರುವ ನೀವು ಆ ತ್ರಿಮೂರ್ತ್ಯವತಾರರೇ! ನೀವೇ ನನ್ನ ಆರಾಧ್ಯದೈವ ನೃಸಿಂಹಸ್ವಾಮಿ! ನಿಮ್ಮ ಪಾದ ದರ್ಶನದಿಂದ ಇಂದು ನಾನು ಕೃತಾರ್ಥನಾದೆ. ವಿದುರನ ಮನೆಗೆ ಶ್ರೀಕೃಷ್ಣ ಹೋದಂತೆ, ಭಕ್ತವತ್ಸಲರಾದ ನೀವೇ ನನ್ನ ಬಳಿಗೆ ಬಂದಿರಿ. ನಿಮ್ಮ ಅನಂತವಾದ ಮಹಿಮೆಯನ್ನು ನನ್ನಂತಹ ಪಾಮರ ಹೇಗೆ ಬಣ್ಣಿಸಬಲ್ಲ?" ಎಂದು ಅನೇಕ ರೀತಿಗಳಲ್ಲಿ ಶ್ರೀಗುರುವಿನ ಸ್ತೋತ್ರ ಮಾಡಿದನು. ಅವನ ಸ್ತೋತ್ರದಿಂದ ಸಂಪ್ರೀತರಾದ ಶ್ರೀಗುರುವು, "ತ್ರಿವಿಕ್ರಮ, ನಿನ್ನ ಭಕ್ತಿಗೆ ಮೆಚ್ಚಿದೆ. ನೀನು ಇಲ್ಲಿಯೇ ನೃಸಿಂಹನ ಪೂಜೆಯಲ್ಲಿ ನಿರತನಾಗಿರು. ನಿನಗೆ ಪುನರ್ಜನ್ಮವಿಲ್ಲದ ಸದ್ಗತಿಯುಂಟಾಗುತ್ತದೆ. ಆ ಪರಮಾತ್ಮನಲ್ಲಿ ಲೀನವಾಗುತ್ತೀಯೆ" ಎಂದು ಆಶೀರ್ವದಿಸಿ, ತಮ್ಮ ಸ್ವಸ್ಥಾನಕ್ಕೆ ಹಿಂತಿರುಗಿದರು.

ನಾಮಧಾರಕ, ಶ್ರೀಗುರುವಿನ ಮಹಿಮೆಗಳು ಅಪರಿಮಿತವಾದವು. ಇಲ್ಲಿ ಮಾನುಷ ರೂಪದಲ್ಲಿರುವ ಶ್ರೀಗುರುವನ್ನು ತ್ರಿಮೂರ್ತಿಗಳ ಅವತಾರ ರೂಪಿಯಲ್ಲವೆಂದು ಅಲ್ಲಗಳೆದವರು, ಏಳೇಳು ಜನ್ಮಗಳಲ್ಲೂ ರೌರವಾದಿ ನರಕಗಳಲ್ಲಿ ಬಿದ್ದು ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಗುರುವೇ ಬ್ರಹ್ಮ, ವಿಷ್ಣು, ಮಹೇಶ್ವರ. ಅದರಿಂದಲೇ ಶ್ರೀಗುರುವಿನ ಪಾದಗಳನ್ನು ಆಶ್ರಯಿಸಿದವರು ತ್ರಿಮೂರ್ತಿಗಳ ಅನುಗ್ರಹವನ್ನು ಪಡೆಯುತ್ತಾರೆ. ಶ್ರೀಗುರು ಕಥೆಗಳೆನ್ನುವ ಅಮೃತವನ್ನು ಸೂಸುವ ಅರವಂಟಿಗೆಗಳಿಂದ ಅಮೃತಪಾನ ಮಾಡಿ, ತರಿಸಿ" ಎಂದು ಹೇಳಿದರು. 

ಇಲ್ಲಿಗೆ ಇಪ್ಪತ್ತನಾಲ್ಕನೆಯ ಅಧ್ಯಾಯ ಮುಗಿಯಿತು. 

||ಜ್ಞಾನಕಾಂ ಸಮಾಪ್ತಿ||



||ಶ್ರೀ ಗುರು ಚರಿತ್ರೆ - ಇಪ್ಪತ್ತಮೂರನೆಯ ಅಧ್ಯಾಯ||

ನಾಮಧಾರಕ ಸಿದ್ಧಮುನಿಗೆ ನಮಸ್ಕರಿಸಿ, "ಸ್ವಾಮಿ, ಗುರು ಮಹಿಮೆಯನ್ನು ತಿಳಿಸುವಂತಹ ಇನ್ನೊಂದು ಗುರು ಕಥೆಯನ್ನು ಹೇಳಿ" ಎಂದು ಪ್ರಾರ್ಥಿಸಿಕೊಂಡನು. ಅದಕ್ಕೆ ಸಿದ್ಧಮುನಿ, "ಗುರು ಮಹಿಮೆಯನ್ನು ತಿಳಿಸುವ ಮತ್ತೊಂದು ಕಥೆಯನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಗೊಡ್ಡೆಮ್ಮೆಯಿಂದ ಹಾಲು ಕರೆಸಿ ಶ್ರೀಗುರುವು ತಮ್ಮ ಮಹಿಮೆಯನ್ನು ಪ್ರಕಟಗೊಳಿಸಿದ್ದರಲ್ಲವೇ? ಅದರ ಮಾರನೆಯ ದಿನ, ಆ ಎಮ್ಮೆಯನ್ನು ಮಣ್ಣು ಹೊರಲು ಕರೆದು ಕೊಂಡು ಹೋಗಲು ಜನ ಬಂದರು. ಆದರೆ ಅ ಬ್ರಾಹ್ಮಣ ಎಮ್ಮೆಯನ್ನು ಕಳುಹಿಸಲು ನಿರಾಕರಿಸಿ, "ಅದು ನಮಗೆ ಈಗ ಹಾಲು ಕೊಡುತ್ತಿದೆ. ಆದ್ದರಿಂದ ಅದನ್ನು ನಾವು ಕಳುಹಿಸುವುದಿಲ್ಲ" ಎಂದು ಹೇಳಿ, ಅದು ಆಂದು ಕೊಟ್ಟಿದ್ದ ಎರಡು ಪಾತ್ರೆ ಹಾಲನ್ನು ತೋರಿಸಿದನು. ಬಂದವರೆಲ್ಲರೂ ವಿಸ್ಮಿತರಾಗಿ, "ನೆನ್ನೆಯವರೆಗೂ ಈ ಎಮ್ಮೆ ಹಲ್ಲಿಲ್ಲದ ಗೋಡ್ಡಾಗಿತ್ತು. ಗರ್ಭ ಧರಿಸಿರಲಿಲ್ಲ. ಕರು ಹಾಕಲಿಲ್ಲ. ಇಂದು ಹೇಗೆ ಹಾಲು ಕೊಟ್ಟಿತು?" ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಾ ಹೊರಟು ಹೋದರು. ಗೊಡ್ಡೆಮ್ಮೆ ಹಾಲು ಕೊಟ್ಟ ವಿಷಯ ಕರ್ಣಾಕರ್ಣಿಕೆಯಾಗಿ, ಒಬ್ಬರಿಂದೊಬ್ಬರ ಕಿವಿಗೆ ಬಿದ್ದು, ಕೊನೆಗೆ ಆ ಊರಿನ ರಾಜನವರೆಗೂ ಹೋಯಿತು. ರಾಜ, ಆಶ್ಚರ್ಯಪಟ್ಟು, ನಿಜವನ್ನು ತಿಳಿಯಲು, ಆ ಬ್ರಾಹ್ಮಣನ ಮನೆಗೆ ಬಂದು, ಅವನಿಗೆ ನಮಸ್ಕರಿಸಿ, ನಿಜವಾದ ವಿಷಯ ಏನೆಂದು ವಿವರಿಸಲು ಅವನನ್ನು ಕೇಳಿಕೊಂಡನು. ಅದಕ್ಕೆ ಆ ಬ್ರಾಹ್ಮಣ, "ಗಂಗಾತಟದಲ್ಲಿ ಸನ್ಯಾಸಿಯೊಬ್ಬರಿದ್ದಾರೆ. ಅವರು ಈಶ್ವರನ ಅವತಾರವೇ! ಇದು ಅವರ ಮಹಿಮೆ. ನೆನ್ನೆಯ ದಿನ ಅವರು ನಮ್ಮ ಮನೆಗೆ ಬಂದು, ನನ್ನ ಹೆಂಡತಿಯನ್ನು ಭಿಕ್ಷೆ ಕೇಳಿ, ಆಕೆ ಸ್ವಲ್ಪ ಸಮಯ ಕಾಯಲು ವಿನಂತಿಸಿಕೊಂಡರೆ, ತಮಗೆ ಕಾಲಾವಕಾಶವಿಲ್ಲವೆಂದು ಹೇಳಿ, ಎದುರಿಗೆ ಕಾಣುತ್ತಿದ್ದ ಎಮ್ಮೆಯಿಂದ ಹಾಲು ಕರೆದು ಕೊಡಲು ಹೇಳಿದರು. ಅದು ಗೊಡ್ಡೆಮ್ಮೆ ಎಂದು ಹೇಳಿದರೂ, ಅವರು ಅದನ್ನು ಕೇಳದೆ, ಹಾಲು ಕರೆದು ತೋರಿಸುವಂತೆ ಆದೇಶ ಕೊಟ್ಟರು. ಆ ಆದೇಶವೇ ಅವರು ಕೊಟ್ಟ ವರದಂತೆ ಕೆಲಸ ಮಾಡಿ, ಆ ಗೊಡ್ಡೆಮ್ಮೆ, ಎರಡು ಪಾತ್ರೆ ತುಂಬಾ ಹಾಲು ಕೊಟ್ಟಿತು" ಎಂದು ಹೇಳಿದನು. ಅದನ್ನು ಕೇಳಿದ ರಾಜ, ತಡಮಾಡದೆ, ತನ್ನ ಪರಿವಾರದವರೊಡನೆ. ತ್ವರೆಯಾಗಿ ಶ್ರೀಗುರುವಿನ ಬಳಿಗೆ ಹೋಗಿ, ಅವರಿಗೆ ದಂಡಪ್ರಣಾಮ ಮಾಡಿ, "ಜಗದ್ಗುರು, ಜಯವಾಗಲಿ. ಜಯವಾಗಲಿ. ಮಾನವ ರೂಪ ಧರಿಸಿದ ತ್ರಿಮೂರ್ತಿಗಳೇ ನೀವು. ಮಾಯಾ ಮೋಹಿತನಾದ ನನ್ನನ್ನು ಉದ್ಧರಿಸಿ. ನಿಮ್ಮ ಚರಣಗಳನ್ನು ಆಶ್ರಯಿಸಿದ್ದೇನೆ. ಮಾನವರಂತೆ ಕಾಣುತ್ತಿರುವ ನಿಮ್ಮ ಮಹಿಮೆಯನ್ನು ನನ್ನಂತಹ ಮಂದಬುದ್ಧಿ ಹೇಗೆ ತಾನೇ ವರ್ಣಿಸಬಲ್ಲ? ನೀವೇ ನನ್ನ ರಕ್ಷಕರಾದ ಸದಾಶಿವನು. ಜಗದ್ರಕ್ಷಕರು ನೀವೇ!" ಎಂದು ಭಕ್ತಿಯಿಂದ ಅವರನ್ನು ಸ್ತುತಿಸಿದನು.

ಅವನ ಸ್ತುತಿಯಿಂದ ಸಂತುಷ್ಟರಾದ ಶ್ರೀಗುರುವು, "ಹೇ ರಾಜ, ನಾವು ತಾಪಸಿಗಳು. ಕಾಡಿನಲ್ಲಿ ವಾಸ ಮಾಡುವವರು. ಪರಿವಾರ ಸಮೇತನಾಗಿ ನಮ್ಮನ್ನು ಕಾಣಲು ನೀನು ಬಂದ ಕಾರಣವೇನು?" ಎಂದು ಕೇಳಿದರು. ಅದಕ್ಕೆ ರಾಜನು ಕೈಜೋಡಿಸಿ, "ಸ್ವಾಮಿ, ನಿಮಗೆ ಈ ಕಾಡಿನಲ್ಲಿ ವಾಸವೇತಕ್ಕೆ? ನೀವು ಭಕ್ತರನ್ನುದ್ಧರಿಸಲು ಬಂದಿರುವ ನಾರಾಯಣ ಸ್ವರೂಪಿಗಳು. ಭಕ್ತರ ಇಷ್ಟಾರ್ಥಗಳನ್ನು ಪೂರ್ಣಗೊಳಿಸಿ, ಅವರಿಗೆ ಆನಂದವನ್ನುಂಟು ಮಾಡುತ್ತೀರಿ. ಭಕ್ತವತ್ಸಲ, ನಿಮ್ಮ ಕೀರ್ತಿ ಎಣೆಯಿಲ್ಲದ್ದು. ನನ್ನ ಮಾತನ್ನು ದಯವಿಟ್ಟು ಆಲಿಸಿ, ಕೃಪೆಮಾಡಿ ಗಂಧರ್ವಪುರಕ್ಕೆ ದಯಮಾಡಿಸಿ. ಅಲ್ಲಿ ನಿಮಗೊಂದು ಮಠವನ್ನು ನಿರ್ಮಿಸಿ ಕೊಡುತ್ತೇನೆ. ನೀವು ಅಲ್ಲಿದ್ದುಕೊಂಡು, ನಿಮ್ಮ ಅನುಷ್ಠಾನಾದಿಗಳನ್ನು ನಿರ್ವಹಿಸುತ್ತಾ, ನಮ್ಮನ್ನು ಕಾಪಾಡಿ. ಅಲ್ಲಿದ್ದುಕೊಂಡು ನಮ್ಮನ್ನುದ್ಧರಿಸಿ" ಎಂದು ಶ್ರದ್ಧಾಭಕ್ತಿಗಳಿಂದ ಕೂಡಿ, ಅವರ ಪಾದಗಳಿಗೆ ನಮಸ್ಕರಿಸಿ, ಬೇಡಿಕೊಂಡನು. ಭಕ್ತ ಜನೋದ್ಧಾರಕಾಗಿ ಅವನ ಕೋರಿಕೆಯನ್ನು ಈಡೇರಿಸಬೇಕು ಎಂದು ಶ್ರೀಗುರುವು ಯೋಚಿಸಿ, "ಹೇ ರಾಜ, ನಿನ್ನ ಭಕ್ತಿಗೆ ಮೆಚ್ಚಿದ್ದೇವೆ. ನಿನ್ನ ಕೋರಿಕೆಯಂತೆ ಆಗಲಿ" ಎಂದು ಅವನ ಮಾತಿಗೆ ತಮ್ಮ ಒಪ್ಪಿಗೆ ಕೊಟ್ಟರು. ಗುರು ವಚನದಿಂದ ಸಂತೋಷಗೊಂಡ ರಾಜ, ಶ್ರೀಗುರುವನ್ನು ಪಲ್ಲಕ್ಕಿಯೊಂದರಲ್ಲಿ ಕೂಡಿಸಿ, ವಾದ್ಯಗಳೊಡನೆ, ಸುಘೋಷಗಳನ್ನು ಮಾಡುತ್ತಾ, ಮಂಗಳ ಗೀತಗಳನ್ನು ಹಾಡುತ್ತಾ, ಅವರನ್ನು ಮೆರವಣಿಗೆಯಲ್ಲಿ ಗಂಧರ್ವಪುರಕ್ಕೆ ಕರೆದು ಕೊಂಡು ಹೊರಟನು.

ಆ ದಾರಿಯಲ್ಲಿ, ಊರಿನ ಪಶ್ಚಿಮಕ್ಕೆ, ದೊಡ್ಡದಾದ ಅಶ್ವತ್ಥ ವೃಕ್ಷವೊಂದಿತ್ತು. ಅದರ ಹತ್ತಿರದಲ್ಲಿ ಇದ್ದ ಮನೆಗಳೆಲ್ಲವೂ ಪಾಳು ಬಿದ್ದಿದ್ದವು. ಆ ಅಶ್ವತ್ಥ ವೃಕ್ಷದಲ್ಲಿ, ಭಯಂಕರವಾದ, ನರಮಾಂಸ ಭಕ್ಷಕನಾದ, ಬ್ರಹ್ಮರಾಕ್ಷಸನೊಬ್ಬನಿದ್ದನು. ಅವನ ಭಯದಿಂದಾಗಿ ಅಲ್ಲಿ ಜನರು ಯಾರೂ ವಾಸ ಮಾಡುತ್ತಿರಲಿಲ್ಲ. ಮೆರವಣಿಗೆ ಆ ವೃಕ್ಷದ ಸಮೀಪಕ್ಕೆ ಬರುತ್ತಲೇ, ಆ ಬ್ರಹ್ಮರಾಕ್ಷಸ ಮರದಿಂದ ಕೆಳಗಿಳಿದು ಬಂದು, ಶ್ರೀಗುರುವಿನ ಪಾದಗಳಲ್ಲಿ ಬಿದ್ದು, ಕೈಜೋಡಿಸಿ, ಭಕ್ತಿಯಿಂದ, "ಹೇ ಸ್ವಾಮಿ, ದಯಮಾಡಿ ನನ್ನನ್ನುದ್ಧರಿಸು. ನಿಮ್ಮ ದರ್ಶನದಿಂದಲೇ ನನ್ನ ಪಾಪಗಳೆಲ್ಲಾ ನಾಶವಾಗಿ ಹೋದವು. ನನ್ನನ್ನು ಈ ಬ್ರಹ್ಮರಾಕ್ಷಸತ್ವದಿಂದ ಬಿಡುಗಡೆ ಮಾಡು" ಎಂದು ಬೇಡಿಕೊಂಡನು. ಶ್ರೀಗುರುವು ಅವನ ತಲೆಯಮೇಲೆ ಕೈಯಿಟ್ಟು ಆಶೀರ್ವದಿಸಿದರು. ತಕ್ಷಣವೇ ಆ ಬ್ರಹ್ಮರಾಕ್ಷಸ ಮಾನವ ರೂಪದಿಂದ ಕಾಣಿಸಿಕೊಂಡು, ಮತ್ತೆ ಶ್ರೀಗುರುವಿನ ಚರಣಗಳಲ್ಲಿ ಬಿದ್ದನು. ಶ್ರೀಗುರುವು ಅವನಿಗೆ, "ಅಯ್ಯಾ, ತಕ್ಷಣವೇ ನೀನು ಸಂಗಮಕ್ಕೆ ಹೋಗಿ ಸ್ನಾನ ಮಾಡು. ಸ್ನಾನ ಮಾತ್ರದಿಂದಲೇ, ನಿನ್ನ ಸರ್ವ ಪಾಪಗಳೂ ನಾಶವಾಗಿ, ನೀನು ಪುನರ್ಜನ್ಮ ರಹಿತನಾಗುತ್ತೀಯೆ" ಎಂದು ಹೇಳಿದರು. ಅವನು ಗುರುವಿನ ಅಪ್ಪಣೆಯಂತೆ, ತಡಮಾಡದೆ ಸಂಗಮಕ್ಕೆ ಹೋಗಿ ಅಲ್ಲಿ ಸ್ನಾನ ಮಾಡಿ ಮುಕ್ತನಾದನು. ಅಲ್ಲಿ ಸೇರಿದ್ದ ಜನರೆಲ್ಲರೂ, "ಈ ಸನ್ಯಾಸಿ ಮನುಷ್ಯ ಮಾತ್ರನಲ್ಲ. ತ್ರಿಮೂರ್ತ್ಯವತಾರನೇ!" ಎಂದು ಮುಕ್ತ ಕಂಠದಿಂದ ಕೊಂಡಾಡಿದರು. ನಂತರ ಶ್ರೀಗುರುವು ರಾಜನಿಗೆ, "ನಾವು ಇಲ್ಲಿಯೇ ನೆಲೆಯಾಗುತ್ತೇವೆ" ಎಂದು ಹೇಳಲು, ರಾಜ ತಕ್ಷಣವೇ ಅಲ್ಲಿದ್ದ ಮನೆಯೊಂದನ್ನು ಮಠದಂತೆ ಪರಿವರ್ತಿಸಿ ಕೊಟ್ಟನು. ಅಲ್ಲಿದ್ದುಕೊಂಡು ಶ್ರೀಗುರುವು ಪ್ರತಿದಿನವೂ ಸಂಗಮಕ್ಕೆ ಹೋಗಿ ಅಲ್ಲಿ ಅನುಷ್ಠಾನಾದಿಗಳನ್ನು ಮಾಡಿಕೊಳ್ಳುತ್ತಾ, ಮಧ್ಯಾಹ್ನದ ವೇಳೆಗೆ ಮಠಕ್ಕೆ ಹಿಂತಿರುಗುತ್ತಿದ್ದರು. ಹಾಗೆ ಅವರು ಸಂಗಮಕ್ಕೆ ಹೋಗಿ ಬರುವಾಗ ರಾಜ ಸಪರಿವಾರ, ಸೈನ್ಯ ಸಮೇತನಾಗಿ ಅವರೊಡನೆ ಹೋಗಿ ಬರುತ್ತಿದ್ದನು. ಭಕ್ತವತ್ಸಲನಾದ ಶ್ರೀಗುರುವು ಅಲ್ಲಿದ್ದುಕೊಂಡೇ ತಮ್ಮ ಭಕ್ತರ ಇಷ್ಟಾರ್ಥಗಳನ್ನು ಪೂರಯಿಸುತ್ತಿದ್ದರು. ನಿತ್ಯ ಸಂತರ್ಪಣೆ ನಡೆಯುತ್ತಿದ್ದ ಆ ಮಠಕ್ಕೆ, ಶ್ರೀಗುರುವಿನ ಕೀರ್ತಿಯನ್ನು ಕೇಳಿದ ಬಹಳ ಜನ ಅವರ ದರ್ಶನಾಕಾಂಕ್ಷಿಗಳಾಗಿ ಬರುತ್ತಿದ್ದರು.

ಅವರಿದ್ದ ಮಠಕ್ಕೆ ಸ್ವಲ್ಪ ದೂರದಲ್ಲಿ ಕುಮಸಿ ಎಂಬ ಹಳ್ಳಿಯೊಂದಿತ್ತು. ಅಲ್ಲಿ ವೇದಶಾಸ್ತ್ರಗಳನ್ನು ಬಲ್ಲ ತ್ರಿವಿಕ್ರಮ ಭಾರತಿ ಎಂಬ ತಾಪಸಿಯೊಬ್ಬನಿದ್ದನು. ಅವನು ಪ್ರತಿದಿನವೂ ನೃಸಿಂಹಸ್ವಾಮಿಯ ಮಾನಸ ಪೂಜೆ ಮಾಡುತ್ತಿದ್ದನು. ಅವನು ಶ್ರೀಗುರುವಿನ ಬಗ್ಗೆ ಕೇಳಿ, "ಆ ಸನ್ಯಾಸಿ ಡಾಂಭಿಕರಬೇಕು. ಇಲ್ಲದಿದ್ದರೆ ಅವನಿಗೆ ಈ ಡಂಭಾಚಾರಗಳೆಲ್ಲಾ ಏಕೆ ಬೇಕು?" ಎಂದು ಶ್ರೀಗುರುವನ್ನು ನಿಂದಿಸುತ್ತಿದ್ದನು. ಸರ್ವಜ್ಞರಾದ ಶ್ರೀಗುರುವು ಅವನು ಮಾಡುತ್ತಿದ್ದ ನಿಂದೆಗಳನ್ನು ತಿಳಿದರು. ಆಗ ಅಲ್ಲಿ ಒಂದು ಅಪೂರ್ವವಾದ ಘಟನೆ ನಡೆಯಿತು. ನಾಮಧಾರಕ ನಿಶ್ಚಲವಾದ ಮನಸ್ಸಿನಿಂದ ನಾನು ಹೇಳುವುದನ್ನು ಕೇಳು" ಎಂದು ಸಿದ್ಧಮುನಿ ಹೇಳಿದರು. 

ಇಲ್ಲಿಗೆ ಇಪ್ಪತ್ತಮೂರನೆಯ ಅಧ್ಯಾಯ ಮುಗಿಯಿತು.



Tuesday, February 19, 2013

||ಶ್ರೀ ಗುರು ಚರಿತ್ರೆ - ಇಪ್ಪತ್ತೆರಡನೆಯ ಅಧ್ಯಾಯ||

ನಾಮಧಾರಕನು ಮತ್ತೆ ಸಿದ್ಧಮುನಿಗೆ ನಮಸ್ಕರಿಸಿ, ಕೈಜೋಡಿಸಿ, ವಿನಮ್ರನಾಗಿ, "ಯೋಗೀಶ್ವರ, ನನ್ನ ಅಜ್ಞಾನಾಂಧಕಾರವನ್ನು ತೊಲಗಿಸಿದ ಜ್ಯೋತಿಯು ನೀವೇ. ನಿಮ್ಮ ಪಾದ ಸ್ಪರ್ಶದಿಂದಲೇ ನನಗೆ ಜ್ಞಾನೋದಯವಾಯಿತು. ಹೇ ಸಿದ್ಧಪುರುಷ, ಕಾಮಧೇನುವಿನಂತಹ ಗುರುಚರಿತ್ರೆಯನ್ನು ವಿಸ್ತರಿಸಿ ಹೇಳಿದಿರಿ. ಆದರೂ ನನಗೆ ತೃಪ್ತಿಯಾಗಲಿಲ್ಲ. ಇನ್ನೂ ಇನ್ನೂ ಕೇಳಬೇಕೆನಿಸುತ್ತಿದೆ. ಶ್ರೀಗುರುವು ಗಂಧರ್ವಪುರವನ್ನು ಸೇರಿದರು ಎಂದು ಹೇಳಿದಿರಿ. ಅವರು ಅಲ್ಲಿ ನಡೆಸಿದ ಲೀಲಾ ವಿಶೇಷಗಳನ್ನು ವಿಸ್ತಾರವಾಗಿ ಹೇಳುವ ಕೃಪೆಮಾಡಿ" ಎಂದು ಪ್ರಾರ್ಥಿಸಿದನು.

ಅದಕ್ಕೆ ಸಿದ್ಧಮುನಿಯು, "ನಾಮಧಾರಕ, ನಿನಗೆ ಗುರುಕೃಪೆಯಾಯಿತು. ಶ್ರೀಗುರುವಿನ ಚರಿತ್ರೆಯನ್ನು ಹೇಳಲು ನನಗೂ ಬಹಳ ಸಂತಸವೇ! ಅನಂತ ಮಹಿಮೆಯುಳ್ಳ ಈ ಗುರುಚರಿತ್ರೆಯು ಅಪಾರವಾದದ್ದು. ಶ್ರೀಗುರುವು ಗಂಧರ್ವ ಪುರದಲ್ಲಿ ಗುಪ್ತರೂಪಿಗಳಾಗಿ ನಿಂತರೆಂದು ಹೇಳಿದ್ದೆನಲ್ಲವೆ? ಅಲ್ಲಿ ನಡೆದ ಪ್ರಸಂಗವೊಂದನ್ನು ತಿಳಿಸುತ್ತೇನೆ. ಸಮಾಧಾನ ಚಿತ್ತನಾಗಿ ಕೇಳು.

ಉತ್ತರ ವಾಹಿನಿಯಾಗಿರುವ, ಭೀಮಾ-ಅಮರಜಾ ನದಿಗಳ ಆ ಸಂಗಮ ಪ್ರದೇಶ ಪ್ರಯಾಗಕ್ಕೆ ಸಮಾನವಾದ ತೀರ್ಥಕ್ಷೇತ್ರ. ಅದು ಅಶ್ವತ್ಥ ವೃಕ್ಷಗಳಿಂದ ಕೂಡಿದ್ದು, ಅದರ ಮಹಿಮೆ ಅಪಾರವಾದದ್ದು. ಅಲ್ಲಿ ಎಂಟು ತೀರ್ಥಗಳಿವೆ. ಶ್ರೀಗುರುವು ಅಲ್ಲಿ ಭಕ್ತೋದ್ಧಾರಕನಾಗಿ, ತೀರ್ಥ ಮಹಿಮೆಯನ್ನು ಪ್ರಕಟಗೊಳಿಸಲು ನಿಂತರು. ಶ್ರೀಗುರುವಿನ ಪಾದಗಳೇ ಸಕಲ ತೀರ್ಥಗಳು ಎಂಬ ವೇದ ವಚನ ನಿಜವಾದರೆ ತೀರ್ಥ ಕ್ಷೇತ್ರಗಳ ಉಪಯೋಗವೇನು ಎಂದು ಕೇಳಬಹುದು. ಶ್ರೀಗುರುವು ಭಕ್ತ ಜನರ ಉದ್ಧಾರಕ್ಕೆಂದೇ ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ. ಪ್ರಜ್ವಲಿಸುವ ಸೂರ್ಯ ಗುಪ್ತನಾಗಿರಲು ಸಾಧ್ಯವೇ? ಗಂಧರ್ವ ಪುರದಲ್ಲಿ ಗುಪ್ತ ರೂಪದಲ್ಲಿದ್ದ ಶ್ರೀಗುರುವು ಪ್ರತ್ಯಕ್ಷಗೊಳ್ಳಲು ಕಾರಣವೇನು ಎಂದು ಹೇಳುತ್ತೇನೆ ಕೇಳು.

ಶ್ರೀಗುರುವು ಪ್ರತಿದಿನ ಊರೊಳಕ್ಕೆ ಮಧ್ಯಾನ್ಹ ಸಮಯದಲ್ಲಿ ಭಿಕ್ಷೆಗೆಂದು ಹೋಗುತ್ತಿದ್ದರು. ಗಂಧರ್ವ ಪುರದಲ್ಲಿ ಅನೇಕ ಬ್ರಾಹ್ಮಣರ ಮನೆಗಳುಂಟು. ಅವರಲ್ಲಿ ಬಡವನಾದ ಬ್ರಾಹ್ಮಣನೊಬ್ಬನಿದ್ದ. ಅವನ ಮನೆಯಲ್ಲಿ ಮುದಿಯಾದ ಗೊಡ್ಡೆಮ್ಮೆಯೊಂದಿತ್ತು. ಅದರ ಹಲ್ಲುಗಳು ಬಿದ್ದುಹೋಗಿದ್ದವು. ಊರಿನ ಜನ ಅದನ್ನು ಮರಳು ಹೊರುವುದಕ್ಕೆಂದು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆ ಬ್ರಾಹ್ಮಣ ದಂಪತಿಗಳು ಅದರಿಂದ ಬಂದ ಬಾಡಿಗೆಯ ಹಣದಿಂದಲೂ, ಬ್ರಾಹ್ಮಣನು ತಂದ ಭಿಕ್ಷೆಯಿಂದಲೂ ಜೀವನ ಸಾಗಿಸುತ್ತಿದ್ದರು.

ಶ್ರೀಗುರುವು ಆಗಾಗ ಆ ಬಡ ಬ್ರಾಹ್ಮಣನ ಮನೆಗೂ ಭಿಕ್ಷೆಗೆಂದು ಹೋಗುತ್ತಿದ್ದರು. ಆಗೆಲ್ಲಾ, ಇತರ ಬ್ರಾಹ್ಮಣರು, "ಶ್ರೀಗುರುವು ಆ ದರಿದ್ರನ ಮನೆಗೆ ಏಕೆ ಭಿಕ್ಷೆಗೆ ಹೋಗುತ್ತಾರೆ? ಅಲ್ಲಿ ಅವರಿಗೆ ಏನು ಸಿಗುತ್ತದೆ? ನಾವು ಶ್ರೋತ್ರೀಯರು. ನಮ್ಮ ಮನೆಗಳಲ್ಲಿ ನಿತ್ಯವೂ ಷಡ್ರಸೋಪವೇತವಾದ ಮೃಷ್ಟಾನ್ನ ಸಿಗುತ್ತದೆ. ನಮ್ಮನ್ನು ಬಿಟ್ಟು ಅವನ ಮನೆಗೆ ಹೋಗುವುದಾದರೂ ಏತಕ್ಕೆ? " ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು.

ಶ್ರೀ ಕೃಷ್ಣ ದುರ್ಯೋಧನ ರಾಜಭೊಜನವನ್ನೇ ನೀಡಿದರೂ, ಅದನ್ನು ಬಿಟ್ಟು ವಿದುರನ ಮನೆಗೆ ಹೋದನಲ್ಲವೇ? ಹಾಗೇ ಶ್ರೀಗುರುವು ಸಾತ್ವಿಕ ಬುದ್ಧಿಯುಳ್ಳವರಲ್ಲಿ ಅತಿಶಯ ಪ್ರೀತಿಯಿಟ್ಟಿದ್ದರೇ ಹೊರತು ಧನ ಮದದಿಂದ ಕೂಡಿದವರಲ್ಲಲ್ಲ. ಕ್ಷಣ ಮಾತ್ರದಲ್ಲಿ ಅಧನನನ್ನು ಧನಿಕನನ್ನಾಗಿ ಮಾಡಬಲ್ಲ ಅವರಿಗೆ ಧನ ಮದಾಂಧಕಾರಿಗಳಿಂದ ಆಗಬೇಕಾದ್ದೇನು? ಬ್ರಹ್ಮಲಿಪಿಯನ್ನೇ ಬದಲಿಸಬಲ್ಲ ಅವರಿಗೆ ಅಸಾಧ್ಯವಾದದ್ದೇನೂ ಇಲ್ಲ. ಅವರಿಗೆ ಭಿಕ್ಷೆಯನ್ನಿತ್ತ ಜನ ಪುಣ್ಯವಂತರೇ!

ಒಂದುದಿನ ಆ ಬಡ ಬ್ರಾಹ್ಮಣನ ಗೊಡ್ಡೆಮ್ಮೆಯನ್ನು ಯಾರೂ ಬಾಡಿಗೆಗೆ ಕರೆದುಕೊಂಡು ಹೋಗಲಿಲ್ಲ. ಆಗ ಬೇಸಗೆಯ ಕಾಲ. ಮಧ್ಯಾಹ್ನ ಪ್ರಖರವಾದ ಬಿಸಿಲು ತಲೆಯಮೇಲೆ ಸುಡುತ್ತಿತ್ತು. ಅಂದು ಶ್ರೀಗುರುವು ಆ ಬಡವನ ಮನೆಗೆ ಭಿಕ್ಷಕ್ಕೆಂದು ಹೋದರು. ಬ್ರಾಹ್ಮಣನ ಹೆಂಡತಿ ಅವರನ್ನು ಆದರದಿಂದ ಸ್ವಾಗತಿಸಿ, ಪೀಠವನ್ನಿತ್ತು ಕುಳಿತು ಕೊಳ್ಳಲು ಹೇಳಿ, "ನನ್ನ ಗಂಡ ಭಿಕ್ಷೆಗೆಂದು ಊರೊಳಕ್ಕೆ ಹೋಗಿದ್ದಾರೆ. ಇನ್ನೇನು ಬರುವ ಸಮಯವಾಯಿತು. ಅಲ್ಲಿಯವರೆಗೂ ವಿಶ್ರಮಿಸಿಕೊಳ್ಳಿ" ಎಂದು ವಿನಮ್ರಳಾಗಿ ಹೇಳಿದಳು. ಅದಕ್ಕೆ ಶ್ರೀಗುರುವು, "ನಿನ್ನ ಗಂಡ ಬರಲು ಇನ್ನೂ ಎಷ್ಟು ಹೊತ್ತಾಗುತ್ತದೆಯೋ? ನಮಗೆ ಭಿಕ್ಷಾನ್ನವೇ ಆಗಬೇಕೆಂದೇನೂ ಇಲ್ಲ. ನಿಮ್ಮ ಮನೆಯ ಬಾಗಿಲಿನಲ್ಲಿರುವ ಎಮ್ಮೆಯಿಂದ ಸ್ವಲ್ಪ ಹಾಲು ಕರೆದು ಕೊಟ್ಟರೂ ಸಾಕು" ಎಂದು ನಗುತ್ತಾ ಹೇಳಿದರು. ಅದಕ್ಕೆ ಆಕೆ, ವಿನಯದಿಂದ, "ಸ್ವಾಮಿ, ಆ ಎಮ್ಮೆ ಮುದಿಯಾಗಿದೆ. ಗೊಡ್ಡು. ಭೂಮಿ ಉಳುವುದಕ್ಕೆಂದು ಉಪಯೋಗಿಸುತ್ತಿದ್ದ ಅದನ್ನು ಈಗ ಮರಳು ಹೊರುವುದಕ್ಕೆಂದು ಊರಿನವರು ಕರೆದು ಕೊಂಡು ಹೋಗುತ್ತಾರೆ. ಹೇ, ಯತೀಶ್ವರ, ಅದರಿಂದ ಬರುವ ಬಾಡಿಗೆಯಿಂದ ನಾವು ಜೀವನ ನಡೆಸುತ್ತಿದ್ದೇವೆ" ಎಂದು ಹೇಳಿದಳು. ಅದಕ್ಕೆ ಶ್ರೀಗುರುವು, "ನನ್ನಲ್ಲಿ ನೀನು ಅಸತ್ಯವಾಡಬಾರದು. ಈಗಲೇ ಆ ಎಮ್ಮೆಯಿಂದ ಹಾಲು ಕರೆದು ನನಗೆ ಕೊಡು" ಎಂದರು. ಅವರ ಮಾತುಗಳನ್ನು ಕೇಳಿದ ಆ ವನಿತೆ, ನಿಜವೇನೋ ಅವರಿಗೆ ತಿಳಿಯಲಿ ಎಂದು ಯೋಚನೆ ಮಾಡುತ್ತಾ, ಪಾತ್ರೆ ಹಿಡಿದು ಹಾಲು ಕರೆಯಲು ಆರಂಭಿಸಿದಳು.

ಚಮತ್ಕಾರವೋ ಎಂಬಂತೆ ಆ ಗೊಡ್ಡೆಮ್ಮೆ ಎರಡು ಪಾತ್ರೆಗಳ ತುಂಬಾ ಹಾಲು ಕೊಟ್ಟಿತು. ಆಶ್ಚರ್ಯಗೊಂಡ ಅವಳು, "ಆಹಾ, ಈ ಯತಿ ಈಶ್ವರನೇ!" ಎಂದು ಕೊಳ್ಳುತ್ತಾ, ಮನೆಯೊಳಕ್ಕೆ ಹೋಗಿ ಹಾಲನ್ನು ಕಾಯಿಸಿ, ಅದನ್ನು ಶ್ರೀಗುರುವಿಗೆ ಭಿಕ್ಷೆಯಾಗಿ ನೀಡಲು ಹೋಗುವಷ್ಟರಲ್ಲಿ, ಶ್ರೀಗುರುವು ಮತ್ತೊಮ್ಮೆ, "ಅಮ್ಮಾ, ತಡ ಮಾಡಬೇಡ. ನಮಗೆ ಸಂಗಮಕ್ಕೆ ತ್ವರೆಯಾಗಿ ಹಿಂತಿರುಗ ಬೇಕಾಗಿದೆ" ಎಂದರು. ತಡ ಮಾಡದೆ ಅವಳು ಕಾಯಿಸಿದ ಹಾಲನ್ನು ತಂದು ಶ್ರೀಗುರುವಿಗೆ ಭಿಕ್ಷೆಯಾಗಿ ಅರ್ಪಿಸಿದಳು. ಶ್ರೀಗುರುವು ಅದನ್ನು ಸ್ವೀಕರಿಸಿ, ಬಹಳ ಸಂತೋಷಗೊಂಡು, "ನಿಮ್ಮ ಮನೆಯಲ್ಲಿ ಲಕ್ಷ್ಮಿ, ಅಖಂಡವಾಗಿ, ನಿರಂತರವಾಗಿ ನೆಲೆಸಲಿ. ನೀವು ಪುತ್ರ ಪೌತ್ರರಿಂದ ಕೂಡಿ, ಸಕಲ ಸಂಪದಗಳನ್ನು ಪಡೆದು, ಸುಖವಾಗಿ ಬಾಳಿ" ಎಂದು ಆಶೀರ್ವದಿಸಿ, ಸಂಗಮಕ್ಕೆ ಹಿಂತಿರುಗಿದರು.

ಭಿಕ್ಷೆಯಿಂದ ಹಿಂತಿರುಗಿದ ಬ್ರಾಹ್ಮಣನಿಗೆ ಅವನ ಹೆಂಡತಿ ನಡೆದ ವಿಷಯವನ್ನೆಲ್ಲಾ ಹೇಳಿದಳು. ಅವಳ ಮಾತುಗಳನ್ನು ಕೇಳಿ ಆಶ್ಚರ್ಯಗೊಂಡ ಆ ಬ್ರಾಹ್ಮಣ, "ಇದು ಬಹಳ ಆಶ್ಚರ್ಯಕರವಾದ ವಿಷಯವೇ! ಸಾಮಾನ್ಯರಂತೆ ಕಾಣುತ್ತಿರುವ ಆ ಸನ್ಯಾಸಿ ನಿಜವಾಗಲೂ ಪರಮಾತ್ಮನೇ!" ಎಂದು ಹೇಳಿ, ತನ್ನ ಹೆಂಡತಿಯೊಡನೆ ಶ್ರೀಗುರುವಿನ ದರ್ಶನಕ್ಕೆ ಹೋದನು. ಭಕ್ತಿಯಿಂದ ಶ್ರೀಗುರುವಿಗೆ ಸ್ತೋತ್ರಾದಿ ಪೂಜೆಗಳನ್ನು ಭಕ್ತಿಯಿಂದ ಅರ್ಪಿಸಿದನು. ಸಂತುಷ್ಟರಾದ ಶ್ರೀಗುರುವು ಅವರನ್ನು ಮತ್ತೊಮ್ಮೆ ಹರಸಿದರು. ಗುರುವಿನಿಂದ ಅನುಗ್ರಹೀತರಾದ ಅವರಿಬ್ಬರೂ ತಮ್ಮ ಮನೆಗೆ ಹಿಂತಿರುಗಿದರು. ಕಾಲಾನಂತರದಲ್ಲಿ ಅವರು ಸಂಪದ್ಭರಿತರಾಗಿ, ಸುಸಂತಾನವನ್ನು ಪಡೆದು, ಪೂರ್ಣಾಯುಷಿಗಳಾಗಿ, ಸುಖವಾಗಿ ಜೀವನ ಮಾಡಿದರು.

ಕೇಳಿದೆಯಾ ನಾಮಧಾರಕ, ಗುರುಕೃಪೆಯೆನ್ನುವುದು ಎಂತಹುದು ಎಂದು! ಶ್ರೀಗುರುವಿನ ದಯೆಯಿದ್ದರೆ ದೈನ್ಯವೆನ್ನುವುದು ಎಲ್ಲಿರುತ್ತದೆ?" ಎಂದು ಹೇಳಿದರು. 

ಇಲ್ಲಿಗೆ ಇಪ್ಪತ್ತೆರಡನೆಯ ಅಧ್ಯಾಯ ಮುಗಿಯಿತು.






||ಶ್ರೀ ಗುರು ಚರಿತ್ರೆ - ಇಪ್ಪತ್ತೊಂದನೆಯ ಅಧ್ಯಾಯ||

ಸಿದ್ಧಮುನಿ ಮುಂದುವರೆಸಿ ಹೇಳಿದರು. "ಆ ಬ್ರಹ್ಮಚಾರಿ ಅವಳಿಗೆ "ಅಮ್ಮಾ, ಮೂರ್ಖಳಂತೆ ದುಃಖಿಸಬೇಡ. ಕ್ಷಣಭಂಗುರವಾದ ಈ ಜೀವನದಲ್ಲಿ ಚಿರಂಜೀವಿಯಾದವನು ಯಾರಿದ್ದಾನೆ? ಹುಟ್ಟಿದವನಾರು? ಸತ್ತವನಾರು? ಜಲಬಿಂದುವಿನಂತೆ, ಹುಟ್ಟಿದ ಮಾನವರು ಅಶಾಶ್ವತರು. ಪಂಚಭೂತಗಳಿಂದಾಗಿ ವ್ಯಕ್ತವಾದ ಈ ದೇಹ, ಅವು ಬೇರೆಗೊಂಡಾಗ ಅವ್ಯಕ್ತವಾಗುತ್ತದೆ. ಅಂತಹ ಪಂಚ ಭೂತಾತ್ಮಕ ಶರೀರಗಳನ್ನು ನಾವು ಮಗ, ಮಗಳು, ಹೆಂಡತಿ, ಮಿತ್ರ ಎಂದು ನೋಡುತ್ತಿದ್ದೇವೆ. ತ್ರಿಗುಣಗಳಿಂದ ಕೂಡಿದ ಮನಸ್ಸು ನಮ್ಮನ್ನು ನಾನು, ನನ್ನದು ಮುಂತಾದ ಭ್ರಮೆಯಲ್ಲಿ ಸಿಲುಕಿಸುತ್ತದೆ. ಸತ್ವ ಗುಣದಿಂದ ದೇವತ್ವ, ರಜೋಗುಣದಿಂದ ಮಾನವತ್ವ, ತಮೋಗುಣದಿಂದ ರಾಕ್ಷಸತ್ವ, ಕರ್ಮಾನುಸಾರವಾಗಿ ಏರ್ಪಡುತ್ತದೆ. ತಮ್ಮ ಸುಕೃತ ದುಷ್ಕೃತಗಳಿಂದ ಪುಣ್ಯ ಪಾಪ ಫಲಗಳುಂಟಾಗಿ ಮಾನವರು ಆ ಫಲಗಳನ್ನು ತಾವೇ ಅನುಭವಿಸ ಬೇಕಾಗುತ್ತದೆ. ಇಂದ್ರಿಯಗಳೂ ಈ ಗುಣಗಳನ್ನನುಸರಿಸಿ ಪ್ರವರ್ತಿಸುತ್ತವೆ. ಅದರಿಂದುಂಟಾದ ಸುಖ ದುಃಖಗಳನ್ನೆಲ್ಲ ಜೀವಿಯು ಅನುಭವಿಸಲೇಬೇಕು. ಹುಟ್ಟಿದ ಮನುಷ್ಯರೆಲ್ಲರೂ ಈ ಗುಣಗಳಿಂದುಂಟಾದ ಕರ್ಮ ಫಲವಾಗಿ ಬರುವ ಸುಖ-ದುಃಖಗಳನ್ನು ಪಡೆಯುತ್ತಾರೆ. ಕಲ್ಪಾಂತದವರೆಗೂ ಆಯುಸ್ಸುಳ್ಳ ದೇವತೆಗಳೂ ಇದರಿಂದ ತಪ್ಪಿಸಿ ಕೊಳ್ಳಲಾರರು. ಇನ್ನು ಮಾನವರ ಮಾತೇನು? ದೇಹಕ್ಕೆ ಹುಟ್ಟುವುದು, ಇರುವುದು, ಬೆಳೆಯುವುದು, ಬದಲಾಗುವುದು, ಕ್ಷೀಣಿಸುವುದು, ನಾಶವಾಗುವುದು ಎನ್ನುವ ಆರು ವಿಕಾರಗಳು ಕ್ರಮವಾಗಿ ಉಂಟಾಗುತ್ತದೆ. ದೇಹವು ಸ್ಥಿರ ಎನ್ನುವುದು ಎಲ್ಲಿದೆ? ಅದು ನಿಶ್ಚಯವಾಗಿಯೂ ಕಾಲಾಧೀನವೇ! ಅದರಿಂದಲೇ ಜ್ಞಾನಿಗಳು ಹುಟ್ಟಿದರೆ ಸಂತೋಷಪಡುವುದಿಲ್ಲ. ಸತ್ತರೆ ದುಃಖಪಡುವುದಿಲ್ಲ. ನೀರಿನಲ್ಲಿರುವ ಗಾಳಿ ಗುಳ್ಳೆಗಳಂತೆ ಈ ದೇಹವು ನಾಶವಾಗುವಂತಹುದೇ! ಕೆಲವರು ಬಾಲ್ಯದಲ್ಲಿ, ಕೆಲವರು ಯೌವನದಲ್ಲಿ, ಕೆಲವರು ವಾರ್ಧಕ್ಯದಲ್ಲಿ ಸಾಯುವರು. ಕರ್ಮಫಲ ಇರುವವರೆಗೆ ಈ ದೇಹವು ಫಲಾನುಭವಕ್ಕಾಗಿ ಇರುತ್ತದೆ. ತಂದೆ, ತಾಯಿ, ಮಗ, ಮಗಳು, ಅಣ್ಣ, ತಂಗಿ, ಬಂಧು ಬಾಂಧವರು ಎಲ್ಲರೂ ತಮ್ಮವರು ಏಂಬ ಭ್ರಮೆಯಿಂದ ಮೂಢರು ಮಾಯಾ ಮೋಹಿತರಾಗಿ ಹಾಳಾಗುತ್ತಿದ್ದಾರೆ. ಮಾಂಸ, ಮೂಳೆ, ರಕ್ತ, ಶ್ಲೇಷ್ಮ, ಮಲ ಮೂತ್ರಾದಿಗಳಿಂದ ತುಂಬಿದೆ ಈ ದೇಹ. ದೇಹಿಯಾದವನು ಬ್ರಹ್ಮಲಿಪಿಯನ್ನನುಸರಿಸಿ ಸುಖ ದುಃಖಗಳನ್ನು ಅನುಭವಿಸುತ್ತಾನೆ. ಕಾಲ ಕರ್ಮಗಳನ್ನು ಜಯಿಸಿದವರಾರು? ಅದರಿಂದಲೇ ಈ ದೇಹ ಶಾಶ್ವತವಲ್ಲ. ಕನಸಿನಲ್ಲಿ ಕಂಡ ಗಂಟು ಎಚ್ಚರಗೊಂಡಮೇಲೆ ಎಲ್ಲಿರುತ್ತದೆ? ಸಂಬಂಧಗಳೇ ನಿಜವಾದರೆ ಹಿಂದಿನ ಜನ್ಮದಲ್ಲಿ ನೀನೇನಾಗಿದ್ದೆ ಎಂದು ಹೇಳಬಲ್ಲೆಯಾ? ನಿನ್ನ ತಂದೆ ತಾಯಿಗಳು ಯಾರಾಗಿದ್ದರು ಎಂಬುದನ್ನು ಹೇಳಬಲ್ಲೆಯಾ? ಮುಂದಿನ ಜನ್ಮದಲ್ಲಿ ನೀನೇನಾಗುತ್ತೀಯೆಂದು ಹೇಳಬಲ್ಲೆಯಾ? ಪುತ್ರ ಶೋಕದಿಂದ ನೀನು ಅನವಶ್ಯಕವಾಗಿ ವ್ಯಥೆ ಪಡುತ್ತಿದ್ದೀಯೆ. ಅಸ್ಥಿ ಚರ್ಮಗಳಿಂದಾದ ಈ ದೇಹದ ಮೇಲೆ ಮಮಕಾರವು ಸಲ್ಲದು. ಮಗನಾರು? ಸಾವೆಲ್ಲಿಂದ ಬಂತು? ನೀನು ಭ್ರಮೆಯಿಂದ ದುಃಖಿಸುತ್ತಿದ್ದೀಯೆ. ಅದನ್ನು ಬಿಟ್ಟು ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡಲು ಶವವನ್ನು ಅವರಿಗೆ ಕೊಡು" ಎಂದು ಆ ಬ್ರಹ್ಮಚಾರಿ ಅವಳಿಗೆ ಉಪದೇಶ ಮಾಡಿದನು.

ಅದಕ್ಕೆ ಅವಳು, "ಸ್ವಾಮಿ, ನೀವು ನನ್ನಲ್ಲಿ ಕರುಣೆ ತೋರಿ ಉಪದೇಶ ಮಾಡಿದಿರಿ. ಆದರೂ ನನ್ನ ಮನಸ್ಸು ಸಮಾಧಾನಗೊಳ್ಳುತ್ತಿಲ್ಲ. ಪ್ರಾರಬ್ಧವೇ ಪ್ರಮಾಣ ಎನ್ನುವುದಾದರೆ ಪೂಜೆ ಪುನಸ್ಕಾರಗಳೇಕೆ? ಚಿಂತಾಮಣಿಯ ಸ್ಪರ್ಶದಿಂದಲೇ ಲೋಹ ಚಿನ್ನವಾಗುತ್ತದೆಯಲ್ಲವೇ? ಅದೃಷ್ಟ ಹೀನಳೆಂದು ತಿಳಿದೇ ನಾನು ಶ್ರೀಗುರುವನ್ನು ಆಶ್ರಯಿಸಿದೆ. ಶ್ರೀಗುರುವು ನನಗೆ ಅಭಯಕೊಟ್ಟು, ಈಗ ನನ್ನನ್ನು ಏಕೆ ಹೀಗೆ ದೂರ ಮಾಡಿದ್ದಾರೆ? ಜ್ವರ ಪೀಡಿತನಿಗೆ ವೈದ್ಯ ಕೊಟ್ಟ ಔಷಧದಿಂದ ಗುಣವಾಗುತ್ತದೆ. ಹಾಗೆ ನಾನು ತ್ರಿಮೂರ್ತಿ ಸ್ವರೂಪನಾದ ಶ್ರೀಗುರುವನ್ನು ಆಶ್ರಯಿಸಿದೆ. ಅವರು ಕೊಟ್ಟ ಫಲ ವಿಫಲ ಹೇಗಾಗುತ್ತದೆ? ಅವರನ್ನು ನಂಬಿದ ನಾನು ಮೂರ್ಖಳೇ? ಅದರಿಂದಲೇ ನಾನು ಅವರ ಎದುರಿಗೇ ಪ್ರಾಣ ಬಿಡುತ್ತೇನೆ" ಎಂದು ನಿಶ್ಚಿತವಾಗಿ ಹೇಳಿದಳು. ಅವಳ ದೃಢ ನಿರ್ಧಾರವನ್ನು ಅರಿತ ಬ್ರಹ್ಮಚಾರಿ ವೇಷದ ಶ್ರೀಗುರುವು ಅವಳಿಗೆ, " ಶ್ರೀಗುರುವಿನಲ್ಲಿ ನಿನಗೆ ಅಷ್ಟು ನಂಬಿಕೆಯಿದ್ದರೆ, ನಿನ್ನ ಮಗನ ಶವವನ್ನು, ಎಲ್ಲಿ ನಿನಗೆ ಗುರುವಿನ ಅನುಗ್ರಹವಾಯಿತೋ ಅಲ್ಲಿಗೆ ತೆಗೆದುಕೊಂಡು ಹೋಗಿ, ಅಲ್ಲಿಯೇ ದಹನಮಾಡು. ಕೃಷ್ಣಾನದಿ ತಟದಲ್ಲಿರುವ ಔದುಂಬರವು ಕಲ್ಪವೃಕ್ಷವೇ!" ಎಂದು ಹೇಳಿದರು.

ಅವನ ಮಾತಿನಂತೆ ಅವಳು ತನ್ನ ಮಗನ ಶವವನ್ನು ಆತುಕೊಂಡು, ಆ ಔದುಂಬರ ವೃಕ್ಷದ ಬಳಿಗೆ ಹೋದಳು. ಅಲ್ಲಿರುವ ಶ್ರೀಗುರುವಿನ ಪಾದುಕೆಗಳಿಗೆ ತನ್ನ ತಲೆಯನ್ನು ಚಚ್ಚಿಕೊಳ್ಳುತ್ತಾ, ತನ್ನ ರಕ್ತದಿಂದ ಆ ಪಾದುಕೆಗಳನ್ನು ತೋಯಿಸಿದಳು. ಎಲ್ಲ ಶೋಕಗಳಿಗಿಂತಲೂ ಪುತ್ರ ಶೋಕವೆನ್ನುವುದು ಬಹಳ ದೊಡ್ಡದು. ಆ ರೀತಿಯಲ್ಲಿ ಅವಳು ದುಃಖಿಸುತ್ತಾ, ಸೂರ್ಯಾಸ್ತವಾದರೂ ಶವವನ್ನು ದಹನಕ್ಕಾಗಿ ಕೊಡಲಿಲ್ಲ. ಬ್ರಾಹ್ಮಣರು ಸಂಸ್ಕಾರ ಮಾಡಲು ಶವವನ್ನು ಕೊಡು ಎಂದು ಎಷ್ಟು ಕೇಳಿದರೂ ಅವಳು ಒಪ್ಪದೆ ಕಣ್ಣಿರು ಸುರಿಸುತ್ತಾ ಪಾದುಕೆಗಳಮೇಲೆ ಬಿದ್ದಳು. ಬಂದಿದ್ದ ಬ್ರಾಹ್ಮಣರು, "ರಾತ್ರಿಯಾಯಿತು, ಇನ್ನು ನಾವಿಲ್ಲಿರಬಾರದು. ಇಲ್ಲಿ ಕಳ್ಳರ ಬಾಧೆಯೂ ಹೆಚ್ಚು. ನಾವು ಮನೆಗೆ ಹಿಂತಿರುಗಿ ಮತ್ತೆ ಬೆಳಗ್ಗೆ ಬರೋಣ. ಶವದಿಂದ ದುರ್ವಾಸನೆ ಬಂದಾಗಲಾದರೂ ಅವಳೇ ಶವವನ್ನು ನಮಗೆ ಒಪ್ಪಿಸುತ್ತಾಳೆ" ಎಂದು ತಮ್ಮಲ್ಲೇ ಯೋಚಿಸಿ, ಅವಳಿಗೆ, "ಅಮ್ಮಾ, ರಾತ್ರಿ ಹೊತ್ತಿನಲ್ಲಿ ಇಲ್ಲಿ ಗಂಡಸರೇ ಇರಲು ಹೆದರುತ್ತಾರೆ. ಇಲ್ಲಿ ಕಳ್ಳರ ಕಾಟವೂ ಜಾಸ್ತಿ. ನೀವು ಇಲ್ಲಿರಬಾರದು" ಎಂದು ಹೇಳಿ ಹೊರಟು ಹೋದರು. ರಾತ್ರಿ ಶವದೊಂದಿಗೆ ಅಲ್ಲಿ ತಾಯಿ ತಂದೆಗಳು ಮಾತ್ರವಿದ್ದರು.

ಎರಡು ದಿನಗಳಿಂದ ನಿದ್ರೆಯಿಲ್ಲದೆ, ಕಣ್ಣಿರು ಸುರಿಸುತ್ತಾ ಶವದೊಂದಿಗೆ ಕುಳಿತಿದ್ದ ಸುಶೀಲಳಿಗೆ ಕುಳಿತಿದ್ದ ಹಾಗೇ ನಿದ್ರೆ ಬಂದಿತು. ಕನಸಿನಲ್ಲಿ ಅವಳಿಗೆ ತೇಜಃಪುಂಜವಾದ ಆಕೃತಿಯೊಂದು ಕಾಣಿಸಿತು. ಜಟಾಧಾರಿಯಾಗಿ, ಚರ್ಮಾಂಬರ ಧರಿಸಿ, ಭಸ್ಮ ಧೂಳಿತನಾಗಿ, ರುದ್ರಾಕ್ಷಮಾಲೆ ಕಂಠದಲ್ಲಿ ಧರಿಸಿ, ಕೈಯ್ಯಲ್ಲಿ ತ್ರಿಶೂಲ ಹಿಡಿದಿದ್ದ ಆ ಆಕೃತಿ ಅವಳನ್ನು ಸಂಬೋಧಿಸಿ, "ಅಮ್ಮಾ, ನನ್ನನ್ನು ಏಕೆ ನಿಂದಿಸುತ್ತೀಯೆ? ಈಗಲೇ ನಿನ್ನ ಮಗನ ಪ್ರಾಣ ಹಿಂತಿರುಗಿಸುತ್ತೇನೆ" ಎಂದು ಹೇಳಿ, ಶವಕ್ಕೆ ಭಸ್ಮ ಹಚ್ಚಿ, ಅವನ ಮೂಗಿನಲ್ಲಿ ಗಾಳಿ ಊದಿ, "ಇವನ ಹೋಗಿದ್ದ ಪ್ರಾಣವನ್ನು ಮತ್ತೆ ಕೊಟ್ಟಿದ್ದೇನೆ. ಇನ್ನು ನಿನ್ನ ಶೋಕವನ್ನು ಬಿಟ್ಟು ಸಮಾಧಾನ ಚಿತ್ತಳಾಗು" ಎಂದು ಹೇಳಿದನು. ಆ ಕನಸಿನಿಂದ ಎಚ್ಚರಗೊಂಡ ಸುಶೀಲ, "ಇದು ನನ್ನ ಭ್ರಾಂತಿಯಿರಬೇಕು. ಸತ್ತವನು ಹೇಗೆ ಮತ್ತೆ ಬದುಕಿ ಬರುತ್ತಾನೆ? ಅದನ್ನೇ ಯೋಚಿಸುತ್ತಾ ನಿದ್ರಿಸಿದ ನನಗೆ ಅದೇ ಕನಸಿನಲ್ಲೂ ಕಾಣಿಸಿತು. ನನ್ನ ಅದೃಷ್ಟವೇ ಹಾಗಿದ್ದರೆ ದೈವವೇನು ಮಾಡಬಲ್ಲುದು? ಮೂರ್ಖಳಾಗಿ ಗುರುವಿನಲ್ಲಿ ದೋಷಾರೋಪಣೆ ಮಾಡಿದೆ" ಎಂದು ಕೊಳ್ಳುತ್ತಿರಲು, ಶವವು ಅಲುಗಾಡಿದಂತಾಯಿತು. ಇದರಲ್ಲಿ ಭೂತ ಪ್ರವೇಶವಾಯಿತೋ ಏನೋ ಎಂದು ಹೆದರಿದ ಅವಳು ಆ ಶವವನ್ನು ದೂರ ತಳ್ಳಿದಳು. ಆ ಕ್ಷಣದಲ್ಲೇ ಆ ಬಾಲಕ ಎದ್ದು ಕುಳಿತು, "ಅಮ್ಮಾ, ನನಗೆ ಹಸಿವೆಯಾಗುತ್ತಿದೆ. ಬೇಗ ಏನಾದರೂ ಕೊಡು" ಎಂದು ಕೇಳುತ್ತ, ಅವಳ ಹತ್ತಿರಕ್ಕೆ ಬಂದನು. ಅವನು ಹಾಗೆ ಹತ್ತಿರಕ್ಕೆ ಬರುತ್ತಿದ್ದ ಹಾಗೆಯೇ ಅವಳ ಸ್ತನಗಳಿಂದ ಹಾಲು ಧಾರೆಯಾಗಿ ಸುರಿಯಲು ಆರಂಭವಾಯಿತು. ವಿಸ್ಮಿತಳಾದ ಅವಳು ಅವನಿಗೆ ಸ್ತನ್ಯ ಪಾನ ಮಾಡಿಸಿ, ಸಂತೋಷದಿಂದ ಮಗನ ಜೊತೆಯಲ್ಲಿ ಗಂಡನ ಬಳಿಗೆ ಹೋಗಿ ಅವನನ್ನು ಎಬ್ಬಿಸಿ ನಡೆದ ವಿಷಯವನ್ನೆಲ್ಲಾ ವಿವರವಾಗಿ ಅವನಿಗೆ ತಿಳಿಸಿದಳು. ವಿಷಯವೆಲ್ಲಾ ತಿಳಿದ ಅವನೂ ಬಹಳ ಸಂತೋಷಗೊಂಡು, "ಇದೆಲ್ಲವೂ ಆ ಸದ್ಗುರುವಿನ ಲೀಲೆಯೇ!" ಎಂದು ಶ್ರೀಗುರುವಿನ ಗುಣಗಾನ ಮಾಡಿದನು.

ದಂಪತಿಗಳು ಬದುಕಿದ ಮಗನೊಡನೆ ಔದುಂಬರ ವೃಕ್ಷಕ್ಕೆ ಬಂದು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ, "ಹೇ ತ್ರಿಮೂರ್ತಿ ಸ್ವರೂಪ, ಮಾನವ ರೂಪದಲ್ಲಿ ಬಂದಿರುವ ನಿನ್ನ ಲೀಲೆಗಳನ್ನು ವರ್ಣಿಸುವುದು ಅಸಾಧ್ಯ. ಹೇ ಗುರುದೇವ ನಿನಗೆ ಜಯವಾಗಲಿ. ಜಯವಾಗಲಿ. ನಿನ್ನನ್ನು ಆಶ್ರಯಿಸಿದವರ ಕೈಬಿಡದೆ ಅವರನ್ನು ಕಾಪಾಡುತ್ತೀಯೆ. ನಿನ್ನ ಸೇವೆ ಮಾಡಿದವರನ್ನು ನೀನು ಎಂದು ಉಪೇಕ್ಷಿಸುವುದಿಲ್ಲ. ನಿನ್ನ ಮಹಿಮೆಗಳನ್ನು ವರ್ಣಿಸುವವರು ಯಾರು ಸ್ವಾಮಿ? ನಮ್ಮಿಂದ ಅಪರಾಧವಾಯಿತು. ನಮ್ಮನ್ನು ಕ್ಷಮಿಸಿ, ನಮ್ಮಲ್ಲಿ ದಯೆತೋರು. ಮಕ್ಕಳು ನಿಷ್ಠೂರವಾದ ಮಾತುಗಳನ್ನಾಡಿದರೂ ಹೇಗೆ ತಾಯಿಯಾದವಳು ಅವರನ್ನು ಬಿಟ್ಟು ಬಿಡುವುದಿಲ್ಲವೋ ಹಾಗೆ ನಮ್ಮನ್ನು ಬಿಟ್ಟು ಬಿಡಬೇಡ. ನಿನ್ನ ಮಾಯೆಯಿಂದಲೇ ನಾವು ನಿನ್ನ ಬಗ್ಗೆ ಅನುಚಿತ ಮಾತುಗಳನ್ನಾಡಿದೆವು. ಶರಣಾಗತರಾಗಿ ಬಂದಿರುವ ನಮ್ಮನ್ನು ಕ್ಷಮಿಸಿ, ಉದ್ಧರಿಸು" ಎಂದು ಶ್ರೀಗುರುವನ್ನು ಮತ್ತೆ ಮತ್ತೆ ಬೇಡಿಕೊಳ್ಳುತ್ತಾ, ಶ್ರೀಗುರುವಿನ ಪಾದುಕೆಗಳಿಗೆ ನಮಸ್ಕರಿಸಿದರು. ಅಲ್ಲಿಂದ ಸಂಗಮಕ್ಕೆ ಹೋಗಿ, ಸ್ನಾನಮಾಡಿ, ನೀರು ತಂದು ರಕ್ತಸಿಕ್ತವಾಗಿದ್ದ ಶ್ರೀಗುರುವಿನ ಪಾದುಕೆಗಳನ್ನು ತೊಳೆದು, ಅದಕ್ಕೆ ಪೂಜಾದಿಗಳನ್ನು ಆಚರಿಸಿ, ಗುರುಸ್ತೋತ್ರ ಮಾಡಿದರು.

ಅಷ್ಟರಲ್ಲಿ ಬೆಳಗಾಯಿತು. ಊರಿನ ಬ್ರಾಹ್ಮಣರು ಶವ ಸಂಸ್ಕಾರ ಮಾಡಲೆಂದು ಅಲ್ಲಿಗೆ ಬಂದರು. ಅವರು ಅಲ್ಲಿ ಪುನರ್ಜೀವಿತನಾಗಿದ್ದ ಹುಡುಗನನ್ನು ನೋಡಿ ಆಶ್ಚರ್ಯಗೊಂಡು ಮೂಕರಾಗಿ ಹೋದರು. ಆ ದಂಪತಿಗಳು ಎಲ್ಲರಿಗೂ ಭೋಜನಾದಿಗಳನ್ನು ಮಾಡಿಸಿದರು. ಊಟೋಪಚಾರಗಳಾದ ಮೇಲೆ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು.

ಶಿಷ್ಯ, ನಾಮಧಾರಕ, ಗುರುವಿನ ಮಹಿಮೆ ಇಂತಹುದು. ಅವರ ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದವರಾರು? ಆ ಔದುಂಬರ ವೃಕ್ಷ ಮೂಲದಲ್ಲಿ ಶ್ರೀಗುರುವು ಸದಾ ನೆಲಸಿರುತ್ತಾನೆ. ಅಲ್ಲಿರುವ ಗುರು ಪಾದುಕೆಗಳನ್ನು ಸ್ಥಿರ ಮನಸ್ಕರಾಗಿ, ನಂಬಿಕೆಯಿಟ್ಟು ಪೂಜಿಸಿದವರ ಇಷ್ಟಾರ್ಥಗಳು ತಪ್ಪದೇ ನೆರವೇರುತ್ತವೆ. ಅದರಲ್ಲಿ ಸಂಶಯವೇ ಇಲ್ಲ! ಅಲ್ಲಿ ಪೂಜೆ ಮಾಡಿದ ಮತಿಹೀನರು ಮತಿವಂತರಾಗುತ್ತಾರೆ. ಅಧನರು ಧನವಂತರಾಗುತ್ತಾರೆ. ಬಂಜೆಯರು ಪುತ್ರವಂತರಾಗುತ್ತಾರೆ. ರೋಗಿಗಳು ನಿರೋಗಿಗಳಾಗುತ್ತಾರೆ. ಅಂಗಹೀನರು ದೃಢ ಶರೀರಿಗಳಾಗುತ್ತಾರೆ. ಚತುರ್ವಿಧ ಪುರುಷಾರ್ಥಗಳೂ ಅಲ್ಲಿ ನಿಸ್ಸಂದೇಹವಾಗಿ ಸಿದ್ಧಿಸುತ್ತವೆ. ಶ್ರದ್ಧಾಭಕ್ತಿಗಳಿಂದ ಪೂಜಿಸುವವರಿಗೆ ಆ ಔದುಂಬರವು ಕಲ್ಪವೃಕ್ಷವೇ!" ಎಂದು ಹೇಳಿದರು. 

ಇಲ್ಲಿಗೆ ಇಪ್ಪತ್ತೊಂದನೆಯ ಅಧ್ಯಾಯ ಮುಗಿಯಿತು.