Friday, February 15, 2013

||ಶ್ರೀ ಗುರು ಚರಿತ್ರೆ - ಹದಿನಾಲ್ಕನೆಯ ಅಧ್ಯಾಯ||

ಸಚ್ಛಿಷ್ಯನಾದ ನಾಮಧಾರಕನು ಸಿದ್ಧಮುನಿಯನ್ನು, "ಯೋಗೀಶ್ವರ, ಜ್ಞಾನಸಾಗರ, ನಿನಗೆ ಜಯವಾಗಲಿ. ಹೊಟ್ಟೆನೋವಿನಿಂದ ನರಳುತ್ತಿದ್ದ ಬ್ರಾಹ್ಮಣನ ರೋಗವನ್ನು ಹೋಗಲಾಡಿಸಿದ ನಂತರದ ವೃತ್ತಾಂತವನ್ನು ಹೇಳಿ" ಎಂದು ಕೇಳಿದನು. ಅದಕ್ಕೆ ಸಿದ್ಧಮುನಿಯು, "ಶ್ರೀಗುರುವು, ಭಿಕ್ಷೆಯನ್ನಿಟ್ಟ ಬ್ರಾಹ್ಮಣ ಸಾಯಂದೇವನನ್ನು ಕರೆದು, "ನಿನ್ನಲ್ಲಿ ಪ್ರಸನ್ನನಾಗಿದ್ದೇವೆ. ನಿನ್ನ ವಂಶಸ್ಥರು ನಮ್ಮ ಭಕ್ತರಾಗುತ್ತಾರೆ" ಎಂದರು. ಅದಕ್ಕೆ ಸಾಯಂದೇವನು ಗುರುವಿಗೆ ಸಾಷ್ಟಾಂಗ ನಮಸ್ಕಾರಮಾಡಿ, "ಸ್ವಾಮಿ, ನೀವು ಮನುಷ್ಯ ರೂಪದಲ್ಲಿರುವ ತ್ರಿಮೂರ್ತಿಗಳ ಅವತಾರವೇ! ನಿಮ್ಮ ಮಹಿಮೆಯನ್ನು ವೇದಗಳೂ ಅರಿಯಲಾರವು. ವಿಶ್ವವ್ಯಾಪಕರಾದ ಬ್ರಹ್ಮ, ವಿಷ್ಣು, ಮಹೇಶ್ವರ ರೂಪಗಳನ್ನು ಮುಚ್ಚಿಟ್ಟು ಈ ರೂಪದಲ್ಲಿ ಭಕ್ತರನ್ನುದ್ಧರಿಸಲು ಬಂದಿದ್ದೀರಿ. ನಿಮ್ಮ ಮಹಿಮೆಯನ್ನು ವರ್ಣಿಸಲು ನನಗೆ ಸಾಧ್ಯವೇ? ನನ್ನದೊಂದು ಪ್ರಾರ್ಥನೆಯಿದೆ. ನನ್ನ ವಂಶದಲ್ಲಿ ಹುಟ್ಟಿದವರಿಗೆ ನಿಮ್ಮಲ್ಲಿ ಭಕ್ತಿ, ಪುತ್ರಪೌತ್ರಾದಿಗಳಿಂದ ಕೂಡಿದ ಸುಖಸಂತೋಷಗಳನ್ನು ಕೊಟ್ಟು, ಕೊನೆಯಲ್ಲಿ ಅವರಿಗೆ ಸದ್ಗತಿಯನ್ನು ಪ್ರಸಾದಿಸಿ. ಕ್ರೂರವಾದ ಯವನನಲ್ಲಿ ಸೇವೆ ಮಾಡುತ್ತಿದ್ದೇನೆ. ಅವನು ರಾಕ್ಷಸನಂತೆ ಪ್ರತಿವರ್ಷವೂ ಒಬ್ಬ ಬ್ರಾಹ್ಮಣನನ್ನು ಸಂಹರಿಸುತ್ತಾನೆ. ಇಂದು ನನ್ನನ್ನು ಸಂಭ್ರಮಾದರಗಳಿಂದ ಆಹ್ವಾನಿಸಿದ್ದಾನೆ. ಅವನ ಬಳಿಗೆ ಹೋದರೆ ಅವನು ನನ್ನನ್ನು ತಪ್ಪದೇ ಸಂಹರಿಸುತ್ತಾನೆ. ನಿಮ್ಮ ಚರಣಗಳನ್ನಾಶ್ರಯಿಸಿದ ನನಗೆ ಅಂತಹ ಮರಣವು ಉಂಟಾಗಬಾರದು" ಎಂದು ಬಿನ್ನವಿಸಿಕೊಳ್ಳಲು, ಶ್ರೀಗುರುವು ಅವನ ತಲೆಯಮೇಲೆ ಕೈಯಿಟ್ಟು, ಅಭಯ ನೀಡಿ, "ಚಿಂತಿಸಬೇಡ. ಕ್ರೂರನಾದ ಆ ಯವನನ ಕಡೆಗೆ ದುಃಖಪಡದೆ ಹೋಗು. ಅವನು ಪ್ರೇಮದಿಂದ ನಿನ್ನನ್ನು ಮತ್ತೆ ನನ್ನೆಡೆಗೆ ಕಳುಹಿಸುತ್ತಾನೆ. ಅಲ್ಲಿಯವರೆಗೂ ನಾವು ಇಲ್ಲಿಯೇ ಇರುತ್ತೇವೆ. ನೀನು ಹಿಂತಿರುಗಿದ ಮೇಲೆ ನಾವು ಸಂತೋಷದಿಂದ ಇಲ್ಲಿಂದ ಹೊರಡುತ್ತೇವೆ. ನಿನ್ನಂತೆಯೇ ನಿನ್ನ ವಂಶಸ್ಥರೆಲ್ಲರೂ ನಮ್ಮ ಭಕ್ತರಾಗುತ್ತಾರೆ. ಪುತ್ರಪೌತ್ರಾದಿಗಳೆಲ್ಲರೂ ಸುಖಸಂತೋಷಗಳುಳ್ಳವರಾಗುವರು. ನಿನ್ನ ಕುಲದಲ್ಲಿ ಎಲ್ಲರಿಗೂ ಆಯುರಾರೋಗ್ಯಗಳು ಇರುತ್ತವೆ" ಎಂದು ಹೇಳಿ ಸಾಯಂದೇವನನ್ನು ಕಳುಹಿಸಿಕೊಟ್ಟರು.

ಅಲ್ಲಿಂದ ಹೊರಟ ಸಾಯಂದೇವನು, ಆ ಯವನ ರಾಜನ ಬಳಿಗೆ ಹೋದನು. ಕಾಲಾಂತಕ ಸದೃಶನಾದ ಆ ಯವನನು ಸಾಯಂದೇವನನ್ನು ನೋಡುತ್ತಲೇ ಅವನಿಗೆ ವಿಮುಖನಾಗಿ, ತನ್ನ ಅಂತರ್ಗೃಹಕ್ಕೆ ಹೊರಟು ಹೋದನು. ಭಯಗೊಂಡ ಸಾಯಂದೇವನು ಮನಸ್ಸಿನಲ್ಲಿಯೇ ಶ್ರೀಗುರುವನ್ನು ಧ್ಯಾನಿಸಿಕೊಂಡನು. ಗುರು ಕೃಪೆಯಿರುವನನ್ನು ಯವನನು ಏನುತಾನೇ ಮಾಡಬಲ್ಲನು? ಹಾವು ಕೄರವಾದರೂ ಗರುಡನನ್ನು ಭಕ್ಷಿಸಬಲ್ಲದೇ? ಐರಾವತವನ್ನು ಸಿಂಹವು ನುಂಗಬಲ್ಲದೇ? ಗುರು ಕೃಪೆಯಿರುವವನಿಗೆ ಕಲಿಯ ಭಯವೂ ಇರುವುದಿಲ್ಲ. ಸದಾ ಮನಸ್ಸಿನಲ್ಲಿ ಗುರು ಧ್ಯಾನಮಾಡುತ್ತಿರುವವನಿಗೆ ಯಾವುದೇ ಭಯವೂ ಇರುವುದಿಲ್ಲ. ಕಾಲಮೃತ್ಯುವು ಕೂಡ ಗುರುಭಕ್ತನನ್ನು ಮುಟ್ಟಲಾರದು. ಅಪಮೃತ್ಯುಭಯವೆಂಬುದು ಅವನಿಗೆ ಇರುವುದಿಲ್ಲ. ಮೃತ್ಯುವಿನ ಭಯವೇ ಇಲ್ಲದವನಿಗೆ ಯವನನ ಭಯ ಹೇಗೆ ಉಂಟಾಗುತ್ತದೆ? ಸಾಯಂದೇವನನ್ನು ಕಂಡ ಆ ಯವನನು ಕಾರಣವೇ ಇಲ್ಲದೆ ಭೀತನಾಗಿ, ಅಂತಃಪುರವನ್ನು ಸೇರಿ, ದುಃಖಿತನಾಗಿ ಗಾಢನಿದ್ರೆಯಲ್ಲಿ ಮುಳುಗಿಹೋದನು. ಎಚ್ಚರಗೊಂಡು, ಹೃದಯವೇದನೆಯಿಂದ ಪ್ರಾಣಾಂತಿಕವಾದ ಬಾಧೆಪಡುತ್ತಾ, ಸ್ವಪ್ನದಲ್ಲಿ ಕಂಡ ದೃಶ್ಯಗಳ ನೆನಪುಗಳು ಬರುತ್ತಿರಲು, "ಆ ಬ್ರಾಹ್ಮಣ ಶಸ್ತ್ರಗಳಿಂದ ನನ್ನ ಅಂಗಾಂಗಗಳನ್ನು ಕತ್ತರಿಸುತ್ತಿದ್ದಾನೆ" ಎಂದು ಹೇಳುತ್ತಾ, ಸಾಯಂದೇವನ ಬಳಿಗೆ ಓಡಿಬಂದು, ನಡುಗುತ್ತಾ, "ಸ್ವಾಮಿ, ನೀನೆ ದಿಕ್ಕು. ನಿನ್ನನ್ನು ಇಲ್ಲಿಗೆ ಯಾರು ಕರೆದರು? ತಕ್ಷಣವೇ ನೀನು ನಿನ್ನ ಮನೆಗೆ ಹಿಂತಿರುಗು" ಎಂದು ಹೇಳಿ, ಅವನಿಗೆ ವಸ್ತ್ರಾದಿಗಳನ್ನು ಅರ್ಪಿಸಿ ಕಳುಹಿಸಿಕೊಟ್ಟನು.

ಸಂತೋಷಗೊಂಡ ಸಾಯಂದೇವನು, ಹಿಂತಿರುಗಿ ಶ್ರೀಗುರುದರ್ಶನ ಕಾತುರನಾಗಿ, ಶ್ರೀಗುರುವು ಇದ್ದ ಗಂಗಾತೀರಕ್ಕೆ ಬಂದನು. ಶ್ರೀಗುರುವನ್ನು ಕಂಡು ಅವರಿಗೆ ನಮಸ್ಕರಿಸಿ, ಸ್ತೋತ್ರಾದಿಗಳಿಂದ ಅವರನ್ನು ಸ್ತುತಿಸಿ, ಅವರಿಗೆ ನಡೆದದ್ದನ್ನೆಲ್ಲಾ ತಿಳಿಸಿದನು. ಶ್ರೀಗುರುವು ಸಂತೃಪ್ತನಾಗಿ, "ನಾವು ದಕ್ಷಿಣದಿಕ್ಕಿನಲ್ಲಿ ಹೊರಟು ಮಾರ್ಗದಲ್ಲಿನ ತೀರ್ಥಗಳನ್ನು ಸಂದರ್ಶಿಸುತ್ತೇವೆ" ಎಂದು ಹೇಳಲು, ಸಾಯಂದೇವನು ವಿನಯದಿಂದ ಕೈಜೋಡಿಸಿ, "ನಾನು ನಿಮ್ಮಪಾದಸೇವಕ. ಪಾಪಹರವಾದ ನಿಮ್ಮ ಚರಣಗಳನ್ನು ಬಿಟ್ಟು ಒಂದು ಕ್ಷಣವೂ ಇರಲಾರೆ. ಸಗರರನ್ನುದ್ಧರಿಸಲು ಗಂಗೆ ಬಂದಂತೆ ನೀವು ನನಗೆ ದರ್ಶನಕೊಡಲೆಂದೇ ಇಲ್ಲಿಗೆ ದಯಮಾಡಿಸಿದಿರಿ. ಭಕ್ತವತ್ಸಲ, ನಿಮ್ಮ ಕೀರ್ತಿ ಯಾರಿಗೆ ಸಂಪೂರ್ಣವಗಿ ತಿಳಿದಿದೆ? ನನ್ನನ್ನು ಬಿಟ್ಟು ಹೋಗಬೇಡಿ. ನಿಮ್ಮಜೊತೆಯಲ್ಲಿಯೇ ಬರುತ್ತೇನೆ" ಎಂದು ಅವರ ಚರಣಗಳಲ್ಲಿ ಬಿದ್ದನು. ಅವನು ವಿನಯದಿಂದ ಮಾಡಿದ ಆ ಪ್ರಾರ್ಥನೆಯನ್ನು ಕೇಳಿದ ಗುರುವು ಸಂತೋಷದಿಂದ, "ಕಾರ್ಯನಿಮಿತ್ತವಾಗಿ ದಕ್ಷಿಣದೇಶಕ್ಕೆ ಹೋಗುತ್ತಿದ್ದೇವೆ. ನಿನಗೆ ಮತ್ತೆ ಹತ್ತು ವರ್ಷಗಳ ನಂತರ ನಮ್ಮ ದರ್ಶನವಾಗುತ್ತದೆ. ಆಗ ನಿನ್ನ ಗ್ರಾಮದ ಹತ್ತಿರದಲ್ಲೇ ಇರುತ್ತೇವೆ. ಆಗ ನೀನು ನಿನ್ನ ಹೆಂಡತಿ ಮಕ್ಕಳೊಡನೆ ಬಂದು ನಮ್ಮನ್ನು ಕಾಣು. ಚಿಂತಿಸಬೇಡ. ನಿನ್ನ ದುರಿತಗಳೆಲ್ಲಾ ನಾಶವಾದವು. ಸುಖವಾಗಿರು" ಎಂದು ಅನುಗ್ರಹ ಮಾಡಿ, ತಲೆಯಮೇಲೆ ಕೈಯಿಟ್ಟು ಆಶೀರ್ವದಿಸಿದರು. ಅಲ್ಲಿಂದ ಹೊರಟ ಶ್ರೀಗುರುವು ಶಿಷ್ಯರೊಡನೆ ವೈದ್ಯನಾಥ ಕ್ಷೇತ್ರವನ್ನು ಸೇರಿದರು. ಅಲ್ಲಿ ಆರೋಗ್ಯಭವಾನಿ ಇದ್ದಾಳೆ. ಶಿಷ್ಯರೊಡನೆ ಕ್ಷೇತ್ರ ಸಂದರ್ಶನ ಮಾಡುತ್ತಾ, ಪ್ರಸಿದ್ಧವಾದ ವೈದ್ಯನಾಥದಲ್ಲಿ ಗುರುವು ರಹಸ್ಯವಾಗಿ ನಿಂತರು" ಎಂದು ಹೇಳಿದ ಸಿದ್ಧಮುನಿಯ ಮಾತನ್ನು ಕೇಳಿ, ನಾಮಧಾರಕ, "ಸ್ವಾಮಿ, ಅಲ್ಲಿ ಶ್ರೀಗುರುವು ರಹಸ್ಯವಾಗಿ ಏಕೆ ನಿಂತರು? ಶಿಷ್ಯರೆಲ್ಲರೂ ಎಲ್ಲಿದ್ದರು?" ಎಂದು ಕೇಳಲು, ಸಿದ್ಧರು ಮುಂದಿನ ಕಥೆಯನ್ನು ಹೇಳಲು ಉಪಕ್ರಮಿಸಿದರು.

ಇಲ್ಲಿಗೆ ಹದಿನಾಲ್ಕನೆಯ ಅಧ್ಯಾಯ ಮುಗಿಯಿತು.


Thursday, February 14, 2013

||ಶ್ರೀ ಗುರು ಚರಿತ್ರೆ - ಹದಿಮೂರನೆಯ ಅಧ್ಯಾಯ||

ನಾಮಧಾರಕ ವಿನಯದಿಂದ ಕೈಜೋಡಿಸಿ ಸಿದ್ಧಮುನಿಯನ್ನು, "ಯೋಗೀಶ್ವರ, ಭವಾರ್ಣವ ತಾರಕರು ನೀವು. ನೀವು ಹೇಳುತ್ತಿರುವ ಗುರುಕಥಾಮೃತವನ್ನು ಕೇಳಿದಷ್ಟೂ, ಇನ್ನೂ ಇನ್ನೂ ಕೇಳಬೇಕೆಂಬ ಅಭಿಲಾಷೆ ಉಂಟಾಗುತ್ತಿದೆ. ಗುರುಚರಿತ್ರೆ ಎನ್ನುವುದು ಕಾಮಧೇನುವು. ಹಸುವಿಗೆ ಹುಲ್ಲು ಕೊಟ್ಟಷ್ಟೂ ಅದರ ಹಸಿವು ಹೆಚ್ಚಾಗುವ ಹಾಗೆ, ನನಗೆ ಗುರುಕಥೆಗಳನ್ನು ಕೇಳುವುದರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಕನಸಿನಲ್ಲೂ ಮಜ್ಜಿಗೆ ಸಿಕ್ಕದಿದ್ದವನಿಗೆ ಎಚ್ಚರದಲ್ಲಿ ಹಾಲಿನಸಮುದ್ರ ದೊರೆತರೆ ಅವನು ಅದನ್ನು ಬಿಟ್ಟು ಹೋಗುತ್ತಾನೆಯೇ? ಹಾಗೆಯೇ ಅಲ್ಪಜ್ಞನಾದ ನನಗೆ ಗುರುಕೀರ್ತಿ ಇದುವರೆಗೆ ತಿಳಿದಿರಲಿಲ್ಲ. ಅವಿದ್ಯೆಯಿಂದ ಭ್ರಷ್ಟನಾದ ನಾನು ಕಷ್ಟಗಳಿಗೀಡಾಗಿದ್ದೆ. ಮೋಹಾಂಧಕಾರದಲ್ಲಿ ಮುಳುಗಿ ಅಜ್ಞನಾಗಿದ್ದ ನನಗೆ ನೀವು ಶ್ರೀಗುರುವೆಂಬ ಆತ್ಮಜ್ಯೋತಿಯನ್ನು ತೋರಿಸಿದಿರಿ. ನೀವು ಮಾಡಿರುವ ಉಪಕಾರಕ್ಕೆ ನಾನು ಎಂತಹ ಪ್ರತ್ಯುಪಕಾರ ಮಾಡಬೇಕೆಂದು ತಿಳಿಯದ ಮೂಢ ನಾನು. ಕಲ್ಪವೃಕ್ಷವನ್ನು ಕೊಟ್ಟವನಿಗೆ ಭೂದಾನ ಮಾಡಿದರೆ ಅದು ಪ್ರತ್ಯುಪಕಾರವಾಗುವುದೇ? ಚಿಂತಾಮಣಿಯನ್ನು ಕೊಟ್ಟವನಿಗೆ ಬದಲಾಗಿ ಏನನ್ನು ತಾನೇ ಕೊಡಬಲ್ಲೆವು? ಅಂತಹ ಕೃಪಾಮೂರ್ತಿಯಾದ ನಿಮಗೆ ನಾನೇನು ಕೊಡಬಲ್ಲೆ? ಭವತಾಪವನ್ನು ಹರಿಸಿದಿರಿ. ನೀವು ಹೇಳಿದ ಧರ್ಮ ನನ್ನನ್ನು ಉದ್ಧರಿಸುತ್ತದೆ. ಸರ್ವಾರ್ಥಗಳನ್ನೂ ಕೊಡಬಲ್ಲ ಗುರುಭಕ್ತಿ ನನ್ನಲ್ಲಿ ನೆಲೆಯಾಯಿತು. ಶ್ರೀಗುರುವು ಪ್ರಯಾಗದಲ್ಲಿ ಮಾಧವನಿಗೆ ದೀಕ್ಷೆ ಕೊಟ್ಟ ಮೇಲೆ ನಡೆದ ವಿಷಯಗಳನ್ನು ವಿವರಿಸಬೇಕೆಂದು ಕೋರುತ್ತೇನೆ" ಎಂದು ವಿನಮ್ರನಾಗಿ ಬಿನ್ನವಿಸಿಕೊಂಡನು.

ಅವನ ಮಾತುಗಳನ್ನು ಕೇಳಿದ ಸಿದ್ಧಮುನಿ, ಅವನ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಹೇಳಿದರು. "ಶಿಷ್ಯೋತ್ತಮ. ನಿನಗೆ ಗುರುಪದ ಲಭ್ಯವಾಯಿತು. ಧನ್ಯನಾದೆ. ಸಂಸಾರಸಾಗರದಿಂದ ಪಾರಾಗುವೆ. ಗುರುವೆಂದರೇನೆಂಬುದು ನಿನಗೆ ತಿಳಿಯಿತು. ಪುಣ್ಯಶ್ರವಣವಾದ ಗುರುಚರಿತ್ರೆಯನ್ನು ಹೇಳುತ್ತೇನೆ. ಮನಸ್ಸಿಟ್ಟು ಕೇಳು.

ಸ್ವಲ್ಪಕಾಲ ಶ್ರೀಗುರುವು ಪ್ರಯಾಗದಲ್ಲಿದ್ದು, ಅಲ್ಲಿ ಲೋಕೋದ್ಧಾರ ಕಾರ್ಯಗಳನ್ನು ಮಾಡಿದರು. ಮಾಧವನಿಗೆ ದೀಕ್ಷೆ ಕೊಟ್ಟು ಪ್ರಸಿದ್ಧರಾಗಿದ್ದ ಗುರುವಿನ ಬಳಿಗೆ ಅನೇಕರು ಬಂದು, ಅವರಿಗೆ ಶಿಷ್ಯರಾಗಿ, ಅವರ ಸೇವೆಯಲ್ಲಿ ನಿಂತರು. ಅವರಲ್ಲೆಲ್ಲಾ ಮಾಧವನು ಮುಖ್ಯನು. ಅವರಲ್ಲಿ ಪ್ರಮುಖರಾದ ಏಳುಜನ ಶಿಷ್ಯರ ಹೆಸರನ್ನು ಮಾತ್ರ ಹೇಳುತ್ತೇನೆ. ಮೊದಲನೆಯವನು ಬಾಲಸರಸ್ವತಿ. ನಂತರ ಕೃಷ್ಣ ಸರಸ್ವತಿ, ಉಪೇಂದ್ರ, ಮಾಧವ ಸರಸ್ವತಿ, ಸದಾನಂದ, ಆರನೆಯವನು ಜ್ಞಾನಜ್ಯೋತಿ ಸರಸ್ವತಿ. ಸಿದ್ಧನಾದ ನಾನು ಏಳನೆಯವನು. ನಮ್ಮೆಲ್ಲರನ್ನೂ ಹಿಂದಿಟ್ಟುಕೊಂಡು ಶ್ರೀಗುರುವು ದಕ್ಷಿಣ ದೇಶದಲ್ಲಿನ ತೀರ್ಥಗಳನ್ನು ಪವಿತ್ರ ಮಾಡುತ್ತಾ, ಕಾರಂಜಿ ನಗರವನ್ನು ಸೇರಿದರು.

ಅಲ್ಲಿ ತಮ್ಮ ಪೂರ್ವಾಶ್ರಮದ ತಂದೆತಾಯಿಗಳನ್ನು ಸಂತುಷ್ಟರನ್ನಾಗಿ ಮಾಡಿ, ತಮ್ಮ ತಮ್ಮಂದಿರನ್ನು ಆದರಿಸಿದರು. ಪುರಜನರು ಶ್ರೀಗುರುವನ್ನು ಕಂಡು ಬಹಳ ಆನಂದದಿಂದ ಅವರ ಪೂಜಾರ್ಚನೆಗಳನ್ನು ಮಾಡಿದರು. ಅಲ್ಲಿನ ವಿಪ್ರರೆಲ್ಲರೂ ಅವರವರ ಮನೆಗಳಿಗೆ ಭಿಕ್ಷೆಗೆಂದು ಅಹ್ವಾನಿಸಿದರೆ, ಶ್ರೀಗುರುವು ಬಹುರೂಪಿಯಾಗಿ ಎಲ್ಲರ ಮನೆಗಳಿಗೂ ಒಂದೇಕಾಲದಲ್ಲಿ ಹೋಗಿ ಭಿಕ್ಷೆ ಸ್ವೀಕರಿಸಿದರು. ಅದನ್ನು ಕೇಳಿದವರೆಲ್ಲರೂ ವಿಸ್ಮಿತರಾಗಿ ತ್ರಿಮೂರ್ತಿಗಳೇ ಈ ಯತಿಯ ವೇಷದಲ್ಲಿ ಬಂದಿದ್ದಾನೆಂದುಕೊಂಡರು. ಶ್ರೀಗುರುವು ತಮ್ಮ ಮಾತಾಪಿತರಿಗೆ ಪೂರ್ವಸ್ಮರಣೆಯುಂಟಾಗುವಂತೆ ಶ್ರೀಪಾದಶ್ರೀವಲ್ಲಭರೂಪದಲ್ಲಿ ದರ್ಶನವಿತ್ತರು. ತಾಯಿ ಆ ಶ್ರೀಪಾದರೂಪವನ್ನು ಕಂಡು, ಅವರ ಪಾದಗಳಲ್ಲಿ ತಲೆಯಿಟ್ಟು, "ನನ್ನ ಪ್ರದೋಷಪೂಜೆ ಫಲಕೊಟ್ಟಿತು. ಚಂದ್ರಮೌಳಿ ಸತ್ಯಸಂಕಲ್ಪನು" ಎಂಬ ಭಾವನೆಯಿಂದ, ತನ್ನ ಗಂಡನಿಗೆ ತನ್ನ ಗತ ಜನ್ಮದ ವೃತ್ತಾಂತವನ್ನೆಲ್ಲ ಹೇಳಿ, "ಗತಜನ್ಮದಲ್ಲಿ ಶ್ರೀಪಾದರಾಗಿದ್ದ ಈ ವಿಶ್ವವಂದ್ಯನನ್ನು ಮಗನಾಗಿ ಪಡೆಯಲು ನಾನು ಮಹಾದೇವನನ್ನು ಆರಾಧಿಸಿದೆ. ಈ ಜನ್ಮದಲ್ಲಿ ನನ್ನ ಅಂದಿನ ಕೋರಿಕೆ ಸಫಲವಾಯಿತು" ಎಂದು ಆನಂದದಿಂದ ಹೇಳಿದಳು. ಅವರಿಬ್ಬರೂ ಶ್ರೀಗುರುವಿಗೆ ಶರಣಾಗಿ, "ಯತಿರಾಜ, ಜಗನ್ನಾಥ, ನಮ್ಮನ್ನು ಈ ಸಂಸಾರಸಾಗರದಿಂದ ಉದ್ಧರಿಸು" ಎಂದು ಬೇಡಿಕೊಂಡರು. ಅದಕ್ಕೆ ಶ್ರೀಗುರುವು, ಸನ್ಯಾಸಿಯಾದವನು ತನ್ನ ನಲವತ್ತೆರಡು ತಲೆಮಾರುಗಳನ್ನು ಉದ್ಧರಿಸುತ್ತಾನೆ. ಅವನ ವಂಶಕ್ಕೆ ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗುವುದು. ಆ ಕುಲದಲ್ಲಿ ಜನಿಸಿದವರೆಲ್ಲರೂ ಶಾಶ್ವತವಾದ ಬ್ರಹ್ಮಪದ ಪಡೆಯುವರು. ಅವರ ಸಂತತಿಗೆ ಯಮನಿಂದಲೂ ಸಹ ಭಯ ದುಃಖಗಳುಂಟಾಗಲಾರವು. ಅವರ ಕುಲದಲ್ಲಿ ಅದಕ್ಕೆ ಮುಂಚೆ ನರಕಕ್ಕೆ ಹೋದವರೂ ಕೂಡಾ ಬ್ರಹ್ಮಲೋಕವನ್ನು ಸೇರಿಕೊಳ್ಳುತ್ತಾರೆ. ಇದಕ್ಕಿಂತ ಹೆಚ್ಚಾಗಿ ನಿಮಗೇನು ಹೇಳಲಿ? ನಿಮ್ಮಿಬ್ಬರಿಗೂ ಅಂತಕನ ಭಯವಿರುವುದಿಲ್ಲ. ಬ್ರಹ್ಮಪದವನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳು ಶತಾಯುಷಿಗಳಾಗಿ, ಅಷ್ಟೈಶ್ವರ್ಯದಿಂದ ಕೂಡಿ, ಪುತ್ರಪೌತ್ರಾದಿಗಳೊಡನೆ ನಿಮ್ಮೊಡನೆ ಇದ್ದುಕೊಂಡು ನಿಮ್ಮನ್ನು ಸಂತೋಷಗೊಳಿಸುತ್ತಾರೆ. ನಿಮಗೆ ನಿಮ್ಮ ಅಂತ್ಯಕಾಲದಲ್ಲಿ ಕಾಶಿಕ್ಷೇತ್ರ ನಿವಾಸ ಲಭಿಸುವುದು. ಕಾಶಿಕ್ಷೇತ್ರ ಮೋಕ್ಷಸ್ಥಾನವೆಂದು ವೇದಾದಿಗಳಲ್ಲಿ ಪ್ರಸಿದ್ಧವಾಗಿದೆ. ಇನ್ನು ಮುಂದೆ ನೀವು ನಿಮ್ಮ ಚಿಂತೆಗಳನ್ನೆಲ್ಲಾ ಬಿಟ್ಟು ಸಂತೋಷದಿಂದ ಬಾಳ್ವೆ ಮಾಡಿ" ಎಂದು ಹೇಳಿದರು.

ಅದೇ ಸಮಯಕ್ಕೆ ಅವರ ಪೂರ್ವಾಶ್ರಮದ ತಂಗಿಯಾದ ರತ್ನ ಅಲ್ಲಿಗೆ ಬಂದು, ಶ್ರೀಗುರುವಿಗೆ ನಮಸ್ಕರಿಸಿ, ವಿನೀತಳಾಗಿ, "ಸ್ವಾಮಿ, ನನ್ನನ್ನು ಉದ್ಧರಿಸಬೇಕು. ಸಂಸಾರಸಾಗರದಲ್ಲಿ ಮುಳುಗಿಹೋಗಿದ್ದೇನೆ. ತಾಪತ್ರಯಗಳೆಂಬ ಬಡಬಾಗ್ನಿ ನನ್ನನ್ನು ದಹಿಸುತ್ತಿದೆ. ಕಾಮಾದಿಗಳೆಂಬ ಮೊಸಳೆಗಳು ನನ್ನನ್ನು ಭಯಪಡಿಸುತ್ತಿವೆ. ಈ ದುರ್ಭರವಾದ ಸಂಸಾರಸಾಗರದಿಂದ ನನ್ನನ್ನು ಉದ್ಧರಿಸಿ" ಎಂದು ಕಳಕಳಿಯಿಂದ ಬೇಡಿಕೊಂಡಳು. ಅದಕ್ಕೆ ಶ್ರೀಗುರುವು, "ಅಮ್ಮಾ, ಸ್ತ್ರೀಯರಿಗೆ ಪತಿಸೇವೆಯೇ ತಪಸ್ಸು. ಬೇರೆ ತಪಸ್ಸೇಕೆ? ಅವರನ್ನು ಭವಾರ್ಣವದಿಂದ ಉದ್ಧರಿಸಬಲ್ಲವನು ಆ ಶಿವನೊಬ್ಬನೇ! ಅವನೇ ಪತಿವ್ರತೆಯರಿಗೆ ಸರ್ವಾಭೀಷ್ಟಗಳನ್ನೂ ದಯಪಾಲಿಸುವವನು. ಇದರಲ್ಲಿ ಸಂಶಯವಿಲ್ಲ. ಭವಸಾಗರವನ್ನು ದಾಟಲು ಪತಿಯೇ ದೈವವೆಂದು ಸ್ಮೃತಿಗಳು ಘೋಷಿಸುತ್ತಿವೆ. ಆದ್ದರಿಂದ ನೀನು ನಿನ್ನ ಮನಸ್ಸನ್ನು ಸ್ಥಿರಗೊಳಿಸಿ ಶಿವಸಮಾನನಾದ ನಿನ್ನ ಪತಿಯನ್ನು ಶ್ರದ್ಧಾಭಕ್ತಿಗಳಿಂದ ಸೇವಿಸು. ವೇದೋಕ್ತಿಗಳು ಹೇಳುವಂತೆ ಅವನೇ ನಿನಗೆ ಗತಿ. ನಿನ್ನನ್ನುದ್ಧರಿಸಬಲ್ಲವನು ಅವನೇ! ನಿನ್ನ ಅಂತಃಕರಣದಲ್ಲಿ ದುಃಖಬೇಡ" ಎಂದು ಅವಳಿಗೆ ಶ್ರೀಗುರುವು ಉಪದೇಶಿಸಿದರು. ರತ್ನಾದೇವಿ ಮತ್ತ್ತೊಮ್ಮೆ ಶ್ರೀಗುರುವಿಗೆ ನಮಸ್ಕರಿಸಿ, "ಸ್ವಾಮಿ, ಗುರುಮೂರ್ತಿಯಾದ ನಿಮಗೆ ನಮಸ್ಕಾರಗಳು. ನೀವು ಬ್ರಹ್ಮಜ್ಞಾನಿಗಳು. ಭೂತಭವಿಷ್ಯತ್ತುಗಳನ್ನರಿತವರು. ನನ್ನ ಪ್ರಾರಬ್ಧ ಹೇಗಿದೆಯೋ ತಿಳಿಸಿ. ನನ್ನ ಗತಿ ಎಂತಹುದು ಎಂಬುದನ್ನು ಹೇಳಿ" ಎಂದು ಕೇಳಿದಳು. ಅವಳ ಪ್ರಾರ್ಥನೆಯನ್ನು ಕೇಳಿ ಶ್ರೀಗುರುವು, "ರತ್ನ, ನಿನ್ನ ಮಾತುಗಳು ತಾಮಸಗುಣದಿಂದ ಕೂಡಿದ್ದು. ನೀನು ಪಾಪಗಳನ್ನು ಸಂಚಯಮಾಡಿದ್ದೀಯೆ. ಅನುಭವಿಸದೇ ಅವು ತೀರುವವಲ್ಲ. ಹಿಂದಿನ ಜನ್ಮದಲ್ಲಿ ನೀನು ಗೋವೊಂದನ್ನು ಕೋಲಿನಿಂದ ಹೊಡೆದಿದ್ದೀಯೆ. ನಿನಗೆ ಹತ್ತಿರವಾಗಿದ್ದ ದಂಪತಿಗಳಲ್ಲಿ ವಿರಸವನ್ನುಂಟು ಮಾಡಿದ್ದೀಯೆ. ಹೀಗೆ ನೀನು ಮಾಡಿರುವ ದೋಷಗಳು ಈ ಜನ್ಮದಲ್ಲಿ ಪರಿಪಾಕಗೊಳ್ಳುತ್ತವೆ. ಹಸುವನ್ನು ಹೊಡೆದ ಪಾಪಕ್ಕೆ ನೀನು ಕುಷ್ಠುರೋಗ ಅನುಭವಿಸಬೇಕು. ದಂಪತಿಗಳ ನಡುವೆ ವಿರಹ ಉಂಟುಮಾಡಿದ್ದಕ್ಕೆ ನಿನ್ನ ಗಂಡ ಸನ್ಯಾಸಿಯಾಗಿ ನಿನ್ನನ್ನು ಬಿಟ್ಟುಹೋಗುತ್ತಾನೆ. ನಿನ್ನ ಪೂರ್ವ ದೋಷಗಳಿಂದ ನಿನಗೆ ಇಂತಹ ಫಲಗಳು ದೊರೆಯಲಿವೆ" ಎಂದು ಹೇಳಿದರು. ಅದನ್ನು ಕೇಳಿ, ಆಕೆ ಅತ್ಯಂತ ದುಃಖಿತಳಾಗಿ, "ಗುರುನಾಥ, ನೀನೇ ನನ್ನನ್ನುದ್ಧರಿಸಬೇಕು" ಎಂದು ಅವರ ಪಾದಗಳನ್ನು ಹಿಡಿದು ಬೇಡಿಕೊಂಡಳು. ಅದಕ್ಕೆ ಅವರು, "ಮಗು, ಸ್ವಲ್ಪ ಕಾಲ ಸುಖವನ್ನನುಭವಿಸು. ನಿನ್ನ ಗಂಡ ವಯಸ್ಸಾದಮೇಲೆಯೇ ಸನ್ಯಾಸಿಯಾಗುತ್ತಾನೆ. ಆ ನಂತರದಲ್ಲಿಯೇ ನಿನಗೆ ಕುಷ್ಠುರೋಗ ಪ್ರಾಪ್ತಿಯಾಗುತ್ತದೆ. ಪಾಪಫಲಗಳನ್ನನುಭವಿಸಿದ ಮೇಲೆ ನಿನಗೆ ಸದ್ಗತಿಯಾಗುತ್ತದೆ. ಕುಷ್ಠುರೋಗವು ಆರಂಭವಾದ ಮೇಲೆ ನಿನಗೆ ನನ್ನ ದರ್ಶನವಾಗುತ್ತದೆ. ನಿನ್ನ ಪಾಪ ಪರಿಹಾರಕ್ಕಾಗಿ ಅನುಗುಣವಾದ ಕ್ಷೇತ್ರವು ಭೀಮಾತಟದ ದಕ್ಷಿಣಕ್ಕಿರುವ ಪಾಪವಿನಾಶನವೆಂಬ ತೀರ್ಥವು. ಕುಷ್ಠುರೋಗ ಬಂದೊಡನೆ ನೀನು ಆ ಕ್ಷೇತ್ರಕ್ಕೆ ಹೋಗು. ಗಂಧರ್ವನಗರವು ಭೀಮಾ-ಅಮರಜಾ ನದಿಗಳ ಸಂಗಮದಲ್ಲಿದೆ. ಅದು ಭೂಮಂಡಲದಲ್ಲಿಯೇ ಅತಿ ಪ್ರಸಿದ್ಧವಾದದ್ದು" ಎಂದು ಆದೇಶ ಕೊಟ್ಟು, ಶಿಷ್ಯರೊಡನೆ ಶ್ರೀಗುರುವು ಅಲ್ಲಿಂದ ಹೊರಟು ತ್ರ್ಯಂಬಕ ಕ್ಷೇತ್ರಕ್ಕೆ ಬಂದರು. ಅದು ಗೌತಮಿ ನದಿಯ ಉಗಮ ಸ್ಥಾನ. ತ್ರ್ಯಂಬಕದಿಂದ ಶ್ರೀಗುರುವು ನಾಸಿಕಕ್ಕೆ ಬಂದರು. ಅಲ್ಲಿ ಪುರಾಣೋಕ್ತವಾದ ಅನೇಕ ಪುಣ್ಯ ಕ್ಷೇತ್ರಗಳಿವೆ. ಅವುಗಳೆಲ್ಲದರ ಮಹಿಮೆಯನ್ನು ವಿಸ್ತರಿಸಿ ಹೇಳಲು ಸಾಧ್ಯವಿಲ್ಲ. ಸಂಕ್ಷೇಪವಾಗಿ ಹೇಳುತ್ತೇನೆ ಕೇಳು. ಗೋದಾವರಿ ಲೋಕದಲ್ಲಿ ಅಪಾರವಾದ ಮಹಿಮೆಯುಳ್ಳ ನದಿ. ಅದನ್ನು ವೃದ್ಧಗಂಗಾ ಎಂದೂ ಕರೆಯುತ್ತಾರೆ. ಅದರಲ್ಲಿ ಅನೇಕ ತೀರ್ಥಗಳಿವೆ. ಆ ನದಿ ಮಹೇಶ್ವರನ ಜಟೆಯಿಂದ ಅವತರಿಸಿದ ನದಿ. ಹಿಂದೆ ಋಷೀಶ್ವರನಾದ ಗೌತಮ ಮಹರ್ಷಿಯು ಪ್ರತಿದಿನವೂ ಧಾನ್ಯವನ್ನು ಹರಡಿ, ತಪಸ್ಸು ಮಾಡುತ್ತಿದ್ದನು. ಅಂದುಹರಡಿದ ಧಾನ್ಯ ಅಂದೇ ಮೊಳೆತು ಫಲಕೊಡುತ್ತಿತ್ತು. ಗೌತಮ ಮಹರ್ಷಿಯ ತಪೋ ಮಹಿಮೆ ಅಂತಹುದು. ಒಂದುಸಲ ಅಲ್ಲಿದ್ದ ಇತರ ಋಷಿಗಳೆಲ್ಲರೂ ಕೂಡಿ, "ಈ ಗೌತಮ ಮಹರ್ಷಿ ಶಿವಭಕ್ತ. ಈತ ಗಂಗೆಯನ್ನು ಇಲ್ಲಿಯ ಭೂಮಿಗೆ ತಂದರೆ ನಮಗೆ ಇಲ್ಲೇ ಗಂಗಾಸ್ನಾನವಾಗುತ್ತದೆ. ಯೋಗಯುಕ್ತರು, ಊರ್ಧ್ವರೇತಸ್ಸು ಗಳಾದ ಮುನಿಗಳಿಗೆ ಲಭಿಸುವ ಸದ್ಗತಿ ಈ ನದಿಯ ತೀರಗಳಲ್ಲಿ ವಾಸಿಸುವ ತಿರ್ಯಗ್ಜಂತುಗಳಿಗೂ ಲಭಿಸುತ್ತದೆ. ಮಹಾಮುನಿಗಳು ಕೋಟಿ ವರ್ಷಗಳು ತಪಸ್ಸು ಮಾಡಿ ಪಡೆಯುವ ತಪೋಫಲಕ್ಕೆ ಸಮನಾದ ಫಲ ಗಂಗಾಸ್ನಾನದಿಂದ ಸಿದ್ಧಿಸುತ್ತದೆ. ಈ ಗೌತಮ ಮುನಿ ಗಂಗೆಯನ್ನು ಭೂಮಿಗೆ ತರುವಂತಹ ಪ್ರಯತ್ನ ಮಾಡಬಹುದಾದ ಪ್ರಯತ್ನಶೀಲನು. ಆದ್ದರಿಂದ ಅವನಿಗೆ ಯಾವುದಾದರೂ ಸಂಕಟವನ್ನುಂಟು ಮಾಡಿದರೆ ನಮಗೆ ಗಂಗಾ ಸ್ನಾನ ಲಭ್ಯವಾಗುತ್ತದೆ" ಎಂದು ಯೋಚಿಸಿ, ದರ್ಭೆಗಳಿಂದ ಒಂದು ಗೋವು ಕರುವನ್ನು ಸೃಷ್ಟಿಸಿ ಅವನ್ನು ಗೌತಮ ಮಹರ್ಷಿ ಧಾನ್ಯ ಹರಡುತ್ತಿದ್ದ ಭೂಮಿಯಲ್ಲಿ ಬಿಟ್ಟರು. ಅವನ್ನು ಕಂಡ ಅ ಮುನಿ ಅವುಗಳನ್ನು ಒಂದು ಧರ್ಭೆಯಿಂದ ಅಟ್ಟಿದನು. ಆ ಧರ್ಭೆಯೇ ವಜ್ರಾಯುಧದಂತೆ ಆ ಪಶುಗಳನ್ನು ಮುಟ್ಟಿತು. ತಕ್ಷಣವೇ ಆ ಗೋವು ಕರುಗಳು ಅಲ್ಲಿಯೇ ಸತ್ತು ಬಿದ್ದವು. ಗೌತಮನಿಗೆ ಗೋಹತ್ಯಾ ಪಾಪ ಉಂಟಾಯಿತು. ಋಷಿಗಳೆಲ್ಲರೂ ಸೇರಿ, ಆ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಗಂಗೆಯನ್ನು ಭೂಮಿಗೆ ತಂದು, ಅದನ್ನು ಆ ಪಶುಗಳ ಮೇಲೆ ಹರಿಯುವಂತೆ ಮಾಡಿದರೆ ಅವನು ಪಾಪರಹಿತನಾಗುತ್ತಾನೆ ಎಂದು ಹೇಳಿದರು. ಹಾಗೇ ಆಗಲೆಂದು ಒಪ್ಪಿ, ಗೌತಮ ಮುನಿಯು, ಸಾವಿರ ವರ್ಷಗಳು ತಪಸ್ಸು ಮಾಡಿದನು. ಸದಾಶಿವನು ಪ್ರತ್ಯಕ್ಷನಾಗಿ, ವರ ಕೇಳೆಂದು ಹೇಳಲು, ಗೌತಮನು, " ಸ್ವಾಮಿ ನೀನು ನನ್ನಲ್ಲಿ ಪ್ರಸನ್ನನಾಗಿದ್ದರೆ ಚರಾಚರಗಳನ್ನೆಲ್ಲ ಉದ್ಧರಿಸಲು ಗಂಗೆಯನ್ನು ಲೋಕಕ್ಕೆ ಕಳುಹಿಸು" ಎಂದನು. ಅವನ ಮಾತಿಗೆ ಒಪ್ಪಿ ಮಹೇಶ್ವರನು ಗಂಗೆಯನ್ನು ಬಿಟ್ಟನು. ಭೂಲೋಕದಲ್ಲಿ ಸರ್ವಹಿತಕ್ಕಾಗಿ, ಗಂಗೆ, ಉತ್ತರದಲ್ಲಿನ ಭಾಗೀರಥಿಯಂತೆ, ದಕ್ಷಿಣದಲ್ಲಿ ಹರಿದು ಬಂದಳು. ಅದೇ ಗೌತಮಿ ನದಿ. ಗೋದಾವರಿ ಎಂಬ ಹೆಸರಿನಿಂದ ಪ್ರಸಿದ್ಧವಾದದ್ದು. ಅದರ ಮಹಿಮೆ ವರ್ಣಿಸಲಸಾಧ್ಯವಾದದ್ದು. ಅದರಿಂದಲೇ, ನಾಮಧಾರಕ, ಶ್ರೀಗುರುವು ಅಲ್ಲಿಗೆ ಬಂದರು. ಅಲ್ಲಿಂದ ಸರ್ವತೀರ್ಥಗಳನ್ನು ಪರ್ಯಟಿಸುತ್ತಾ ಅವರು ಮಂಜರೀ ಕ್ಷೇತ್ರಕ್ಕೆ ಬಂದರು.

ಅಲ್ಲಿ ಮಾಧವಾರಣ್ಯನೆಂಬ ನರಸಿಂಹ ಸ್ವಾಮಿಯ ಅರ್ಚಕನೊಬ್ಬನು ತನ್ನ ಮಾನಸ ಪೂಜೆಯಲ್ಲಿ ಶ್ರೀಗುರುವಿನ ದರ್ಶನಮಾಡುತ್ತಿದ್ದನು. ತಾನು ಮನಸ್ಸಿನಲ್ಲಿ ಧ್ಯಾನಿಸುವ ಶ್ರೀಗುರುವನ್ನು ಪ್ರತ್ಯಕ್ಷವಾಗಿ ಕಂಡ ಆ ಅರ್ಚಕನು ಆಶ್ಚರ್ಯಪಟ್ಟು, ಶ್ರೀಗುರುವನ್ನು ಸ್ತ್ರೋತ್ರಗಳಿಂದ ಸ್ತುತಿಸುತ್ತಾ, "ಶ್ರೀಪಾದರ ಪಾದಯುಗ್ಮಗಳು ದಿವ್ಯನದೀ ತೀರದಲ್ಲಿ ಸ್ಥಾಪಿತವಾಗಿವೆ. ಉತ್ತರ ತೀರ ನಿವಾಸಿಯಾದ ಶ್ರೀನರಸಿಂಹನು ಲಕ್ಷ್ಮೀಸಮೇತನಾಗಿ ಅಲ್ಲಿ ನೆಲೆಸಿದ್ದಾನೆ" ಎಂದು ಹೇಳುತ್ತಾ, ಬಹಳ ಸಂತೋಷದಿಂದ ಶ್ರೀಗುರುವಿಗೆ ನಮಸ್ಕರಿಸಿದನು. ಅದಕ್ಕೆ ಶ್ರೀಗುರುವು, "ಸೇವಾ ಮಾರ್ಗವನ್ನು ಹಿಡಿದು ನೀನು ಸನ್ಮಾರ್ಗದಲ್ಲಿ ಹೆಜ್ಜೆಯಿಟ್ಟಿದ್ದೀಯೆ. ನನ್ನ ದರ್ಶನದಿಂದ ನೀನು ಸಂಸಾರಮಾರ್ಗವನ್ನು ಬಿಟ್ಟು ನನ್ನ ರೂಪವನ್ನು ದರ್ಶನ ಮಾಡಿಕೊಂಡಿರು" ಎಂದು ಹೇಳಿ, ಹರ್ಷಪೂರ್ಣರಾಗಿ ಆ ಅರ್ಚಕನಿಗೆ ತಮ್ಮ ನಿಜ ರೂಪವನ್ನು ತೋರಿಸಲು, ಆ ಅರ್ಚಕನು ಆನಂದ ತುಂಬಿದವನಾಗಿ, ಅವರನ್ನು ಮತ್ತೆ ಮತ್ತೆ ಅನೇಕ ಸ್ತೋತ್ರಗಳಿಂದ ಸ್ತುತಿಸಿದನು.

"ಜಗದ್ಗುರು, ಲೋಕದೃಷ್ಟಿಯಲ್ಲಿ ಮಾನವರಾದರೂ, ನೀವು ಆ ತ್ರಿಮೂರ್ತ್ಯವತಾರವಾದ ಜಗಜ್ಜ್ಯೋತಿಯೇ! ಪರಮಪುರುಷನು. ವಿಶ್ವವನ್ನೇ ಉದ್ಧರಿಸುವಂತಹವನು. ಭೂಲೋಕದಲ್ಲಿ ಅವತರಿಸಿದ ದತ್ತದೇವರು. ನನ್ನನ್ನು ಕೃತಾರ್ಥರನ್ನಾಗಿ ಮಾಡಿ ನಿಮ್ಮ ಚರಣ ದರ್ಶನ ಭಾಗ್ಯವನ್ನು ಕೊಟ್ಟಿರಿ." ಎಂದು ಅನೇಕ ರೀತಿಯಲ್ಲಿ ಸ್ತುತಿಸಿದ, ಅವನ ಸ್ತೋತ್ರಕ್ಕೆ ಹರ್ಷಿತರಾದ ಶ್ರೀಗುರುವು ಅವನಿಗೆ, "ಮಾಧವಾರಣ್ಯ, ನಿನಗೆ ಮಂತ್ರ ಸಿದ್ಧಿಯಾಗಿದೆ. ಅದರಲ್ಲಿ ಸಂಶಯವಿಲ್ಲ. ಸದ್ಗತಿ ಪಡೆದು ಬ್ರಹ್ಮಲೋಕವನ್ನು ಸೇರುತ್ತೀಯೆ. ದಿನವೂ ನೃಸಿಂಹಮೂರ್ತಿರೂಪದಲ್ಲಿ ನಮ್ಮನ್ನೇ ಮನಸಾ ಪೂಜೆಮಾಡಿದೆ. ಅದರಿಂದಲೇ ನಿನಗೆ ಪ್ರತ್ಯಕ್ಷ ದರ್ಶನ ಕೊಟ್ಟೆವು" ಎಂದು ಹೇಳಿ, ಅವನಿಂದ ಬೀಳ್ಕೊಂಡು, ಶ್ರೀಗುರುವು ಅಲ್ಲಿಂದ ಹೊರಟು ವಾಸರ ಬ್ರಹ್ಮಕ್ಷೇತ್ರವನ್ನು ಸೇರಿದರು. ಅಲ್ಲಿ ಶಿಷ್ಯರೊಡನೆ ಸ್ನಾನಕ್ಕೆಂದು ನದಿಗೆ ಬಂದಾಗ, ಸಾಯಲು ಸಿದ್ಧನಾಗಿ ಬಂದಿದ್ದ ಬ್ರಾಹ್ಮಣನೊಬ್ಬನನ್ನು ಕಂಡರು. ಅವನು ಹೊಟ್ಟೆನೋವಿನಿಂದ ಬಹಳವಾಗಿ ನರಳುತ್ತಾ, ಆ ವೇದನೆಯನ್ನು ಸಹಿಸಲಾರದೆ ಪ್ರಾಣಬಿಡಬೇಕೆಂದು ಬಂದಿದ್ದನು. ಅವನಿಗೆ ಊಟ ಮಾಡಿದರೆ ಪ್ರಾಣಾಂತಿಕವಾದ ನೋವುಂಟಾಗುತ್ತಿತ್ತು. ಆ ನೋವನ್ನು ಸಹಿಸಲಾಗದೆ ಅವನು ಊಟ ಮಾಡುವುದನ್ನೇ ಬಿಟ್ಟಿದ್ದನು. ಅನ್ನ ದ್ವೇಷವಾಗಿದ್ದುದರಿಂದ ಅವನು ಪಕ್ಷಕ್ಕೋ, ತಿಂಗಳಿಗೋ ಒಂದುಸಲ ಊಟ ಮಾಡುತ್ತಿದ್ದನು. ಹೀಗೆ, ಕಷ್ಟವನ್ನನುಭವಿಸುತ್ತಾ ಅವನು ಮಹಾನವಮಿಗೆ ಮುಂಚಿನ ದಿನ ಊಟ ಮಾಡಿದನು. ಅದರಿಂದುಂಟಾದ ನೋವನ್ನು ಭರಿಸಲಾರದೆ ಪ್ರಾಣತ್ಯಾಗಮಾಡಲುದ್ಯುಕ್ತನಾಗಿ, "ಈ ಪ್ರಪಂಚದಲ್ಲಿ ನನ್ನಂತಹ ಪಾಪಾತ್ಮ ಬದುಕಿರಬಾರದು. ಅನ್ನವಿಲ್ಲದೆ ಬದುಕುವುದಾದರೂ ಹೇಗೆ ಸಾಧ್ಯ? ಅನ್ನಕ್ಕೆ ನಾನು ದ್ವೇಷಿಯಾದೆ. ಅದಕ್ಕಿಂತ ಮರಣವೇ ಲೇಸು" ಎಂದು ನಿಶ್ಚಯ ಮಾಡಿಕೊಂಡು, ಕತ್ತಿಗೆ ದೊಡ್ಡ ಕಲ್ಲೊಂದನ್ನು ಕಟ್ಟಿಕೊಂಡು ನದಿಯಲ್ಲಿ ಮುಳುಗಿ ಸಾಯಲು ಬಂದಿದ್ದ ಆ ಬ್ರಾಹ್ಮಣ, ಶಿವ ಸ್ಮರಣೆ ಮಾಡುತ್ತಾ, "ಹಿಂದಿನ ಜನ್ಮದಲ್ಲಿ ನಾನು ಅನ್ನದಾನವೇ ಮುಂತಾದ ಪುಣ್ಯಕಾರ್ಯಗಳನ್ನು ಮಾಡಲಿಲ್ಲವೆಂದು ತೋರುತ್ತದೆ. ಅಥವಾ ಬ್ರಾಹ್ಮಣನ ಭೋಜನವನ್ನೋ ಇಲ್ಲ ಗೋಗ್ರಾಸವನ್ನೋ ಅಪಹರಿಸಿದ್ದಿರಬೇಕು. ಇಲ್ಲವೇ ವಿಶ್ವಾಸಘಾತ ಮಾಡಿದ್ದೆನೋ ಏನೋ? ಅದಕ್ಕೇ ಇಂತಹ ಫಲ ಉಂಟಾಗಿದೆ. ಸದ್ಗುರುವನ್ನು ನಿಂದಿಸಿದ್ದೆನೇನೋ? ಅತಿಥಿಗಳನ್ನು ಆದರಿಸಿ ಭೋಜನವಿಡಲಿಲ್ಲವೇನೋ? ಮಾತಾಪಿತರನ್ನು ಆದರದಿಂದ ಕಾಣದೆ, ಅವರನ್ನು ಹಸಿವಿಟ್ಟು ನಾನು ಮೃಷ್ಟಾನ್ನ ಭೋಜನಮಾಡಿ, ಅವಮಾನಿಸಿದ್ದೆನೇನೋ? ಅಂತಹ ಯಾವುದೋ ಅಕಾರ್ಯ ಮಾಡಿದ್ದಿದುದರಿಂದಲೇ ಈ ಜನ್ಮದಲ್ಲಿ ನಾನು ಇಂತಹ ಯಾತನೆಯನ್ನನುಭವಿಸುತ್ತಿದ್ದೇನೆ" ಎಂದು ವ್ಯಥೆಪಡುತ್ತಾ ನದಿಯಲ್ಲಿ ಪ್ರವೇಶಮಾಡಿದನು. ಅದನ್ನು ಕಂಡ ಶ್ರೀಗುರುವು ಶಿಷ್ಯರನ್ನು ಕರೆದು ತಕ್ಷಣವೇ ಅವನನ್ನು ಕರೆತರಲು ಹೇಳಿದರು. ಶಿಷ್ಯರು ಬೇಗನೇ ಹೋಗಿ ನೀರಿನಲ್ಲಿಳಿದಿದ್ದ ಆ ಬ್ರಾಹ್ಮಣನನ್ನು ಗುರುವಿನ ಬಳಿಗೆ ಕರೆದುತಂದರು. ದುಃಖಿತರಿಗೆ ದಯಾಳುವಾದ ಆ ಗುರುವು, "ಹೇ ಬ್ರಾಹ್ಮಣ, ನೀನೇಕೆ ಪ್ರಾಣತ್ಯಾಗ ಮಾಡಲು ಹೊರಟಿದ್ದೀಯೆ? ಆತ್ಮಹತ್ಯೆ ಮಹಾಪಾಪವಲ್ಲವೇ?" ಎಂದು ಕೇಳಲು, ಆ ಬ್ರಾಹ್ಮಣ, "ಯತೀಶ್ವರ, ನಾನು ಹೇಳಿದ್ದನ್ನು ಕೇಳಿ ನೀವೇನು ಮಾಡಬಲ್ಲಿರಿ? ನನ್ನ ಜನ್ಮವೇ ವ್ಯರ್ಥವಾಗಿದೆ. ಪಕ್ಷಕ್ಕೊಂದುಸಲವೋ ಮಾಸಕ್ಕೊಂದುಸಲವೋ ಊಟಮಾಡಿದರೂ ತಡೆಯಲಾಗದ ಉದರ ಶೂಲೆಯುಂಟಾಗುತ್ತದೆ. ಅದನ್ನು ಸಹಿಸಲಾಗದೆ ಪ್ರಾಣತ್ಯಾಗಮಾಡಲು ನಿಶ್ಚಯಿಸಿದೆ. ಶರೀರವು ಅನ್ನಮಯವು. ಅಂತಹ ಅನ್ನವೇ ನನಗೆ ವೈರಿಯಾಗಿದೆ. ಗುರುನಾಥ, ಅನ್ನವಿಲ್ಲದೆ ಜೀವಿಸುವ ರೀತಿಯನ್ನು ನೀವೇ ತಿಳಿಸಿ" ಎಂದನು. ಅದನ್ನು ಕೇಳಿದ ಶ್ರೀಗುರುವು, "ನಿನ್ನ ಬಾಧೆಯನ್ನು ಒಂದು ನಿಮಿಷದಲ್ಲಿ ಹೊರಗಟ್ಟುವಂತಹ ಔಷಧವನ್ನು ಹೇಳುತ್ತೇನೆ. ಸಂಶಯಪಡಬೇಡ. ನಿನ್ನ ವ್ಯಾಧಿ ಭೂಮಿಯಲ್ಲಿ ಕಲೆತುಹೋಯಿತೆಂದು ತಿಳಿ. ನಿನಗಿಷ್ಟವಾದ ಮೃಷ್ಟಾನ್ನ ಭೋಜನ ಮಾಡು" ಎಂದರು. ಅವರ ಮಾತನ್ನು ಕೇಳಿದ ಆ ಬ್ರಾಹ್ಮಣ ದಿಕ್ಕು ತೋರದೆ, ಮೌನವಾಗಿ ಶ್ರೀಗುರುವಿನ ಪಾದಗಳಲ್ಲಿ ಶಿರವಿಟ್ಟು ನಮಸ್ಕರಿಸಿದನು.

ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಅಲ್ಲಿನ ಗ್ರಾಮಾಧಿಕಾರಿ ಸ್ನಾನಕ್ಕೆ ಬಂದನು. ಶ್ರೀಗುರುವನ್ನು ನೋಡಿದ ತಕ್ಷಣವೇ ಅ ಬ್ರಾಹ್ಮಣ. ಅವರ ಬಳಿಗೆ ಬಂದು ಶ್ರೀಗುರುವಿನ ಪಾದಗಳಿಗೆ ನಮಸ್ಕಾರ ಮಾಡಿ, ಭಕ್ತಿಯುಕ್ತನಾಗಿ ಅವರನ್ನು ಪ್ರಾರ್ಥಿಸುತ್ತಾ ನಿಂತನು. ಅವನನ್ನು ಕಂಡು ಶ್ರೀಗುರುವು ಆದರದಿಂದ, "ಅಯ್ಯಾ, ನೀನು ಎಲ್ಲಿಯವನು? ನಿನ್ನ ಹೆಸರೇನು? ಎಲ್ಲವನ್ನು ತಿಳಿಸು" ಎಂದರು. ಅದಕ್ಕೆ ಅವನು, "ನಾನು ಆಪಸ್ತಂಭ ಶಾಖೀಯನು. ಕೌಂಡಿನ್ಯಸ ಗೋತ್ರದವನು. ನನ್ನನ್ನು ಸಾಯಂದೇವನೆನ್ನುವರು. ಕಾಂಚಿಪುರ ನನ್ನ ನಿವಾಸಸ್ಥಾನ. ಉದರಭರಣಕ್ಕಾಗಿ ಯವನೇಶ್ವರನಿಗೆ ಸೇವಕನಾಗಿ, ಇಲ್ಲಿ ಗ್ರಾಮಾಧಿಕಾರಿಯಾಗಿ ಒಂದು ವರ್ಷದಿಂದ ಇದ್ದೇನೆ. ಇಂದು ನಾನು ಧನ್ಯನಾದೆ. ನಿಮ್ಮ ದರ್ಶನವನ್ನು ಮಾಡಿದವನಾದೆ. ಕೃತಾರ್ಥನಾದೆ. ನೀವು ವಿಶ್ವೋದ್ಧಾರಕರು. ಜನ್ಮಜನ್ಮಾಂತರಗಳಲ್ಲಿ ನಾನು ಮಾಡಿದ ಪಾಪಫಲಗಳೆಲ್ಲವೂ ಇಂದು ನಾಶವಾದವು. ನಿಮ್ಮ ಅನುಗ್ರಹ ಪಡೆದವನು ಭವಸಾಗರವನ್ನು ದಾಟುತ್ತಾನೆ. ಅಪ್ರಯತ್ನವಾಗಿ ನಿಮ್ಮ ದರ್ಶನ ನನಗೆ ಲಭ್ಯವಾಯಿತು. ಗಂಗೆ ಪಾಪಗಳನ್ನು, ಚಂದ್ರ ತಾಪವನ್ನು, ಕಲ್ಪವೃಕ್ಷ ದೈನ್ಯವನ್ನು ಹೋಗಲಾಡಿಸುತ್ತವೆ. ಆದರೆ ಶ್ರೀಗುರು ದರ್ಶನವು ಪಾಪ ತಾಪ ದೈನ್ಯಗಳನ್ನು ತಕ್ಷಣವೇ ಪರಿಹರಿಸುತ್ತದೆ. ಗಂಗೆಯಲ್ಲಿ ಸ್ನಾನಮಾಡಿದರೇನೇ ಪಾಪ ಪರಿಹಾರವಾಗುತ್ತದೆ. ಚಂದ್ರನು ರಾತ್ರಿಹೊತ್ತಿನಲ್ಲಿ ಮಾತ್ರ ತಾಪವನ್ನು ಕಳೆಯುತ್ತಾನೆ. ಕಲ್ಪವೃಕ್ಷ ತನ್ನ ನೆರಳಿಗೆ ಬಂದವನಿಗೆ ಮಾತ್ರವೇ ದೈನ್ಯ ಪರಿಹಾರಕವಾಗುತ್ತದೆ. ಹಾಗಲ್ಲದೆ ನಿಮ್ಮ ದರ್ಶನ ಮಾತ್ರದಿಂದಲೇ ಪಾಪ, ತಾಪ, ದೈನ್ಯಗಳು ನಶಿಸಿಹೋಗುತ್ತವೆ. ಚತುರ್ವರ್ಗಫಲಪ್ರದವಾದ ನಿಮ್ಮ ದರ್ಶನವಂತಹದು" ಎಂದು ಸ್ತೋತ್ರಮಾಡುತ್ತಾ ಮತ್ತೆ ಅವರ ಕಾಲಿಗೆರಗಿದನು.

ಶ್ರೀಗುರುವು ಅವನನ್ನು ಮೇಲಕ್ಕೆತ್ತಿ, ಪಕ್ಕದಲ್ಲಿ ಕೂಡಿಸಿಕೊಂಡು, "ಅಯ್ಯಾ, ನನ್ನ ಮಾತು ಕೇಳು. ಈ ಬ್ರಾಹ್ಮಣ ಉದರಶೂಲೆಯಿಂದ ನರಳುತ್ತಿದ್ದಾನೆ. ವ್ಯಾಧಿ ಉಪಶಮನವಾಗಲು ಇವನಿಗೆ ಒಂದು ಔಷಧವನ್ನು ಹೇಳಿದ್ದೇನೆ. ಇವನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗಿ ಅವನಿಗೆ ಬಹು ಇಷ್ಟವಾದ ಭೋಜನವನ್ನು ನೀಡು. ಅನ್ನ ಊಟಮಾಡುವುದರಿಂದ ಅವನ ವ್ಯಾಧಿಪೀಡೆ ನಾಶವಾಗಿಹೋಗುವುದು. ಇವನು ಹಸಿದುಗೊಂಡಿದ್ದಾನೆ. ಆದ್ದರಿಂದ ತ್ವರೆಯಾಗಿ ಅವನನ್ನು ಕರೆದುಕೊಂಡುಹೋಗಿ ಊಟಮಾಡಿಸು" ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿದ ಸಾಯಂದೇವ, ವಿನಯದಿಂದ, "ಸ್ವಾಮಿ, ಇವನು ಊಟಮಾಡಿ ಪ್ರಾಣ ಬಿಡುತ್ತಾನೇನೋ? ತಿಂಗಳಿಗೊಂದು ಸಲದಂತೆ ನಿನ್ನೆ ಊಟಮಾಡಿ ಆ ಬಾಧೆ ತಡೆಯಲಾರದೆ ಪ್ರಾಣ ತ್ಯಾಗಕ್ಕೆ ಸಿದ್ಧನಾದನು. ಇವನಿಗೆ ಅನ್ನ ದಾನಮಾಡಿದರೆ ನನಗೆ ಬ್ರಹ್ಮಹತ್ಯಾ ಪಾಪ ಬರುವುದು" ಎಂದು ಸಂದೇಹ ಪೂರ್ವಕವಾಗಿ ಹೇಳಿದನು. ಅದಕ್ಕೆ ಶ್ರೀಗುರುವು, "ಅಯ್ಯಾ, ಇವನಿಗೆ ಔಷಧವನ್ನು ಹೇಳುತ್ತೇನೆ. ಮಾಷಾನ್ನ, ಪರಮಾನ್ನ, ಕಜ್ಜಾಯಗಳು ಇವನಿಗೆ ಪರಮೌಷಧ. ಅವನ್ನು ತಿಂದರೆ ಇವನ ವ್ಯಾಧಿ ನಾಶವಾಗುತ್ತದೆ. ಸಂದೇಹಪಡದೆ ತಕ್ಷಣವೇ ಕರೆದುಕೊಂಡು ಹೋಗಿ, ಅತಿತ್ವರೆಯಾಗಿ ಇವನಿಗೆ ಭೋಜನ ಮಾಡಿಸು" ಎಂದು ಆದೇಶಕೊಟ್ಟರು. ಸಾಯಂದೇವನು ಓಂ ಎಂದು ಹೇಳುತ್ತಾ, ಶ್ರೀಗುರುವನ್ನೂ ಶಿಷ್ಯರೊಡನೆ ತನ್ನ ಮನೆಗೆ ಭಿಕ್ಷೆಗೆ ಬರಬೇಕೆಂದು ಪ್ರಾರ್ಥಿಸಿಕೊಂಡನು. ಶ್ರೀಗುರುವು ಅವನ ಪ್ರಾರ್ಥನೆಯನ್ನು ಮನ್ನಿಸಿದರು. ಸಾಯಂದೇವನು ಬಹಳ ಸಂತೋಷಗೊಂಡನು. ನಾನು, ಇತರಶಿಷ್ಯರು, ಅ ರೋಗಿಯಾಗಿದ್ದ ಬ್ರಾಹ್ಮಣ, ಎಲ್ಲರೂ ಶ್ರೀಗುರುವಿನೊಡನೆ ಸಾಯಂದೇವನ ಮನೆಗೆ ಹೋದೆವು. ಪತಿವ್ರತೆಯಾದ ಅವನ ಪತ್ನಿ, ಬಹಳ ಸಂತೋಷದಿಂದ ನಮ್ಮನ್ನು ಸ್ವಾಗತಿಸಿದಳು. ಶಿಷ್ಯರ ಸಹಿತ, ಆ ದಂಪತಿಗಳು, ಗುರುವಿಗೆ ಷೋಡಶೋಪಚಾರಗಳಿಂದ ಸತ್ಕರಿಸಿದರು. ಅವರು ಮಾಡಿದ ಗುರುಪೂಜಾ ವಿಧಾನವೇ ನನಗೆ ವಿಚಿತ್ರವಾಗಿ ತೋರಿತು. ರಂಗವಲ್ಲಿಯಿಂದ ಒಂದು ಮಂಟಪವನ್ನು ರಚಿಸಿ, ನಾನಾ ವರ್ಣಗಳಿಂದ ಅಷ್ಟದಳಪದ್ಮಗಳನ್ನು ಬರೆದು, ಐದು ಬಣ್ಣಗಳಿಂದ ಚಿತ್ರಚಿತ್ರವಾಗಿ ಆ ಸ್ಥಳವನ್ನು ಅಲಂಕರಿಸಿ, ನಂತರ ಸಂಕಲ್ಪ ಮಾಡಿ, ಸಾಷ್ಟಾಂಗ ನಮಸ್ಕಾರ ಮಾಡಿ, ಸಾಯಂದೇವ ವಿನಯದಿಂದ, ಶಾಸ್ತ್ರೀಯವಾಗಿ ಚಿತ್ರಾಸನದಲ್ಲಿ ಶ್ರೀಗುರುವನ್ನೂ, ಶಿಷ್ಯರನ್ನೂ ಒಂದೊಂದು ಮಂಡಲದಲ್ಲಿ ಕೂಡಿಸಿ, ಕ್ರಮವಾಗಿ ಉಪಚಾರಗಳನ್ನು ಮಾಡಿ, ಪಂಚಾಮೃತವೇ ಮುಂತಾದುವುಗಳಿಂದ, ರುದ್ರಸೂಕ್ತಗಳನ್ನು ಹೇಳುತ್ತಾ ಅವರೆಲ್ಲರ ಪಾದಗಳಿಗೆ ಅಭಿಷೇಕ ಮಾಡಿದರು. ಭಕ್ತಿಯಿಂದ ಮಾಲ್ಯಾದಿಗಳನ್ನು ಶ್ರೀಗುರುವಿಗೆ ಅರ್ಪಿಸಿ, ಜ್ಞಾನಿಯಾದ ಸಾಯಂದೇವನು ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ ಸ್ವೀಕರಿಸಿದನು. ಅ ಪಾದೋದಕಕ್ಕೆ ಮತ್ತೆ ಪೂಜಾದಿಗಳನ್ನು ಮಾಡಿ, ಸದ್ಗುರುವಿಗೆ ನೀರಾಜನ ಕೊಟ್ಟು, ಗೀತವಾದ್ಯಗಳಿಂದ ಸಂತಸಗೊಳಿಸಿದನು. ನಂತರ ಶಿಷ್ಯರಿಗೂ ಅದೇವಿಧದಲ್ಲಿ ಷೋಡಶೋಪಚಾರ ಪೂಜಾದಿಗಳನ್ನು ಮಾಡಿದರು. ವೇದಮಂತ್ರಘೋಷಗಳಿಂದ ಪುಷ್ಪಾಂಜಲಿಯನ್ನು ಕೊಟ್ಟು ಶ್ರೀಗುರುವನ್ನು ಗೀತೋಪಚಾರ ನಮಸ್ಕಾರಗಳಿಂದ ಸಂತೋಷಗೊಳಿಸಿದರು. ಪತಿವ್ರತೆಯಾದ ಪತ್ನಿಯೊಡನೆ ಸಾಯಂದೇವನು ಈ ರೀತಿಯಾಗಿ ಗುರುವನ್ನು ಪೂಜಿಸಿ, ಪರಮಾದರದಿಂದ ಎಲ್ಲರಿಗೂ ನಮಸ್ಕರಿಸಿದನು. ಅವನ ಪೂಜಾದಿಗಳಿಂದ ಸಂತುಷ್ಟನಾದ ಶ್ರೀಗುರುವು, "ನಿನ್ನ ಸಂತತಿಯೆಲ್ಲವೂ ನನ್ನಲ್ಲಿ ಭಕ್ತಿಯಿಂದಿದ್ದು ನಿನ್ನ ಕುಲವನ್ನು ವೃದ್ಧಿಗೊಳಿಸುತ್ತಾರೆ. ನಿನಗೆ ಗುರುಮಹಿಮೆಯ ಅರಿವಾಗಿದೆ. ಪುತ್ರಪೌತ್ರಾದಿಗಳಿಂದ ಕೂಡಿ ನಿನ್ನ ವಂಶವು ವೃದ್ಧಿಯಾಗಲಿ" ಎಂದು ಅವನನ್ನು ಅನುಗ್ರಹಿಸಿದರು. ಆ ನಂತರ ಸಾಯಂದೇವನು ಮಂಡಲಗಳನ್ನು ರಚಿಸಿ, ಪಾತ್ರೆಗಳನ್ನಿಟ್ಟು, ಕ್ರಮವಾಗಿ ಪಾಯಸಾನ್ನ, ಪಕ್ವಾನ್ನ, ಮಾಷಾನ್ನ, ವಿಧವಿಧವಾದ ಭಕ್ಷ್ಯಗಳು, ಸಿಹಿಪದಾರ್ಥಗಳು, ನಾನಾ ವಿಧವಾದ ಪಲ್ಯಗಳು, ಉತ್ತಮವಾಗಿ ತಯಾರಿಸಿದ ವ್ಯಂಜನಗಳು ಮುಂತಾದುವೆಲ್ಲವನ್ನೂ ಬಡಿಸಿ, ಎಲ್ಲರಿಗೂ ಸಾದರವಾಗಿ ಭೋಜನ ಮಾಡಿಸಿದನು. ಉದರಶೂಲೆಯಿಂದ ನರಳುತ್ತಿದ್ದ ಬ್ರಾಹ್ಮಣನು ಯಥೇಷ್ಟವಾಗಿ ಊಟಮಾಡಿದನು. ಆಗ ಒಂದು ವಿಚಿತ್ರವಾಯಿತು. ಸದ್ಗುರು ಕೃಪಾದೃಷ್ಟಿಯಿಂದ ಅವನ ರೋಗವು ಆ ಕ್ಷಣದಲ್ಲೇ ಮಾಯವಾಗಿ ಹೋಯಿತು. ಚಿಂತಾಮಣಿಯ ಸ್ಪರ್ಶಮಾತ್ರದಿಂದ ಕಬ್ಬಿಣ ಚಿನ್ನವಾಗುವಂತೆ ಆ ಉದರಶೂಲಾ ಬಾಧಿತನಾದ ಬ್ರಾಹ್ಮಣ ರೋಗವಿಹೀನನಾದನು. ಸೂರ್ಯೋದಯದಿಂದ ಅಂಧಕಾರವು ತೊಲಗಿ ಹೋಗುವಂತೆ, ಶ್ರೀಗುರುವಿನ ಕೃಪೆಯಿದ್ದರೆ ದೈನ್ಯವೇಕುಂಟಾಗುವುದು? ಶ್ರೀಗುರು, ಅವರ ಶಿಷ್ಯರೊಡನೆ ಸಹಪಂಕ್ತಿ ಭೋಜನ ಮಾಡಿದ ಆ ವಿಪ್ರ ಬಹು ಸಂತುಷ್ಟನಾದನು. ಆ ವಿಚಿತ್ರವನ್ನು ಕಂಡ ಎಲ್ಲರೂ ವಿಸ್ಮಿತರಾದರು. ಆಹಾ! ಅವನಿಗೆ ಶತ್ರುವಾಗಿದ್ದ ಆನ್ನವೇ ಅವನಿಗೆ ದಿವ್ಯೌಷಧವಾಗಿ ಅವನ ರೋಗವು ನಾಶವಾಯಿತು!

ನಾಮಧಾರಕ, ಏನು ಹೇಳಲಿ? ಗುರುಕೃಪೆಯಿಂದ ಜನ್ಮಾಂತರ ಪಾಪಗಳೂ ಕೂಡಾ ನಾಶವಾಗಬಲ್ಲವು. ಇದೊಂದು ವ್ಯಾಧಿಯ ವಿಷಯವೇನು ದೊಡ್ಡದು? ಗುರುಚರಿತ್ರೆಯಲ್ಲಿನ ಈ ಪವಿತ್ರವಾದ ಆಖ್ಯಾನವನ್ನು ಭಕ್ತಿಯಿಂದ ಪಠಿಸಿದವನು, ಕೇಳುವವನು ಇಬ್ಬರಿಗೂ, ಅವರವರ ಮನೆಗಳಲ್ಲಿ ರೋಗ ಭಯವಿರುವುದಿಲ್ಲ." 

ಇಲ್ಲಿಗೆ ಹದಿಮೂರನೆಯ ಅಧ್ಯಾಯ ಮುಗಿಯಿತು.



Monday, February 11, 2013

||ಶ್ರೀ ಗುರು ಚರಿತ್ರೆ - ಹನ್ನೆರಡನೆಯ ಅಧ್ಯಾಯ||

"ನಾಮಧಾರಕ, ಶ್ರೀಗುರುವು ತನ್ನ ತಾಯಿಗೆ ತಿಳಿಸಿದ ತತ್ತ್ವವನ್ನು ಹೇಳುತ್ತೇನೆ ಕೇಳು. ಶ್ರೀ ಗುರುವು ಹೇಳಿದರು."ಅಮ್ಮಾ, ನೀನು ಹೀಗೆ ಆಣತಿ ಮಾಡುತ್ತಿದ್ದೀಯೆ. ಆದರೆ ದೇಹವು ಅನಿತ್ಯವಾದುದು. ಈ ಭೌತಿಕ ಶರೀರದ ಜೀವಿತಕಾಲ ಕ್ಷಣಭಂಗುರವಾದದ್ದು. ವೈಭವಗಳು ಶಾಶ್ವತವಲ್ಲ. ಮೃತ್ಯುವು ನಿತ್ಯವೂ ಹತ್ತಿರವಾಗುತ್ತಲೇ ಇದೆ. ಎಲ್ಲಿಯಾದರೂ ಯಾರಾದರೂ ಚಿರಂಜೀವಿಯಾಗಿದ್ದರೆ ಅವನಿಗೆ ನಿನ್ನ ಉಪದೇಶವನ್ನು ಕೊಡು. ಹಗಲು ರಾತ್ರಿಗಳೆನ್ನದೆ ಆಯುಸ್ಸು ಕ್ಷೀಣವಾಗುತ್ತಲೇ ಇರುತ್ತದೆ. ಅದರಿಂದಲೇ ಸಣ್ಣವನಾಗಿರುವಾಗಲಿಂದಲೇ ಧರ್ಮಾಚರಣೆಯನ್ನು ಮಾಡಲುಪಕ್ರಮಿಸಬೇಕು. ಸ್ವಲ್ಪವೇ ಆದ ನೀರಿನಲ್ಲಿ ಮೀನುಗಳು ಕಷ್ಟಪಡುವಂತೆ, ಮಾನವನು ಅಲ್ಪಾಯುಷಿಯಾಗಿ ಕಷ್ಟಪಡುತ್ತಿರುತ್ತಾನೆ. ಆದ್ದರಿಂದ ಮನುಷ್ಯನಿಗೆ ಧರ್ಮ ಸಂಗ್ರಹಣವು ಆದ್ಯ ಕರ್ತವ್ಯ. ಸೂರ್ಯರಥವು ಧಾವಿಸುತ್ತಾ, ಒಂದು ನಿಮಿಷಕಾಲದಲ್ಲಿ ನೂರಾರು ಯೋಜನೆಗಳನ್ನು ದಾಟುವಂತೆ, ಮನುಷ್ಯನ ಆಯುಸ್ಸು ಧಾವಿಸುತ್ತಿರುತ್ತದೆ. ಆದ್ದರಿಂದ ಕ್ಷಣಭಂಗುರವಾದ ಈ ದೇಹ ಇನ್ನೂ ಧೃಢವಾಗಿರುವಾಗಲೇ ಪುಣ್ಯವನ್ನು ಆಚರಿಸಬೇಕು. ವೃಕ್ಷದ ಕೊನೆಯಲ್ಲಿರುವ ಎಲೆಯಮೇಲೆ ಬಿದ್ದ ನೀರಿನ ಹನಿ ಜಾರಿ ಕೆಳಗೆ ಬೀಳುವಂತೆ, ಈ ಶರೀರವು ಪತನವಾಗುವುದು. ಆಕಸ್ಮಿಕವಾಗಿ ಮರಣವು ಆಸನ್ನವಾಗುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯಗಳಲ್ಲಿ ಎಂದಾದರೂ ಮರಣ ಉಂಟಾಗಿ, ಈ ಶರೀರ ನಾಶವಾಗಬಹುದು. ಅದರಿಂದಲೇ ಈ ನಶ್ವರವಾದ ಶರೀರವನ್ನು ನಂಬಬಾರದು. ಮೃತ್ಯುವು ಮಾನವನ ಬೆನ್ನಂಟಿಯೇ ಇರುತ್ತದೆ. ಅದರಿಂದ ಧರ್ಮವನ್ನು ಸಣ್ಣತನದಿಂದಲೇ ಆಚರಿಸಬೇಕು. ಒಣಗಿದ ಎಲೆ ಗಿಡದಿಂದ ಉದುರಿಹೋಗುವಂತೆ ಈ ದೇಹವು ಎಂದು ಬಿದ್ದುಹೋಗುವುದೋ ತಿಳಿಯದು. ಸಾಲವನ್ನು ಕೊಟ್ಟವನು ಸದಾ ಹೇಗೆ ದಿನಗಳನ್ನೆಣಿಸುತ್ತಿರುತ್ತಾನೋ ಹಾಗೆ ಮೃತ್ಯುವು ಮಾನವನ ಆಯುಸ್ಸಿನ ಲೆಕ್ಕ ಮಾಡುತ್ತಿರುತ್ತಾನೆ. ನದಿಗಳು ನೀರು ಹೊತ್ತು ಸಮುದ್ರವನ್ನು ಸೇರಿದಮೇಲೆ ಹೇಗೆ ಹಿಂದಿರುಗಲಾರವೋ, ಹಾಗೆ ಮನುಷ್ಯನ ಆಯುಸ್ಸು ಹಿಂತಿರುಗಿ ಬರುವುದಿಲ್ಲ. ಆಯುಸ್ಸನ್ನು ಹಿಂದೆ ಹಾಕಿ, ಹಗಲು ರಾತ್ರಿಗಳು ಮುಂದುಮುಂದಕ್ಕೆ ಓಡುತ್ತಿರುತ್ತವೆಯೇ ಹೊರತು, ಹಿಂತಿರುಗಿ ನೋಡುವುದಿಲ್ಲ. ಆದ್ದರಿಂದ ಜೀವಿತಕಾಲದಲ್ಲಿ ಪುಣ್ಯವನ್ನಾಚರಿಸದವನು ಪಶು ಸಮಾನನೇ! ಪುಣ್ಯಮಾಡದ ದಿನಗಳು ವ್ಯರ್ಥವಾದಂತೆಯೇ! ಯಮನಿಗೆ ದಯೆಯಿಲ್ಲ. ಆದ್ದರಿಂದ, ಈಗಲೇ, ಇಲ್ಲೇ, ಪುಣ್ಯಮಾಡಬೇಕು. ಹೆಂಡತಿ, ಮಕ್ಕಳು, ಮನೆ, ಸಂಪತ್ತು ಆಯುಸ್ಸು ಎಲ್ಲವೂ ಶಾಶ್ವತ ಎಂದು ನಂಬಿದವನು ಪಶುವಿಗೆ ಸಮಾನನು! ದುಸ್ತರವಾದ ಈ ಸಂಸಾರದಲ್ಲಿ ಮುದಿತನ, ಮೊಸಳೆಗಳಂತೆ ಕಾದು ಕೂತಿದೆ. ಅದರಿಂದ ಯೌವನದಲ್ಲಿಯೇ ಪುಣ್ಯಾರ್ಜನೆಯ ಕಾರ್ಯಗಳನ್ನು ಮಾಡಬೇಕು".

ಹೀಗೆ ಶ್ರೀಗುರುವು ತಾಯಿಗೆ ಉಪದೇಶಕೊಟ್ಟು, "ಅಮ್ಮಾ, ನನ್ನನ್ನು ತಡೆಯಬೇಡ. ಶಠ, ಅಮರ್ತ್ಯ, ಇಲ್ಲವೇ ಯಮನ ಶಿಷ್ಯನಾದವನು ಮಾತ್ರವೇ ಧರ್ಮಾಚರಣೆಯನ್ನು ಮುಂದೆಂದಾದರೂ ಮಾಡೋಣ ಎಂದು ಆಲಸ್ಯ ಮಾಡುವವನು. ಈ ಸಂಸಾರ ಸಾರವಿಲ್ಲದ್ದು. ಜೀವನವೆಲ್ಲಾ ಸ್ವಪ್ನದಂತೆ. ಮಾಲತಿ ಪುಷ್ಪ ಬಹಳ ಬೇಗ ಬಾಡಿಹೋಗುವಂತೆ, ಈ ಜನ್ಮವೂ ಬಹು ಬೇಗ ಅಂತರಿಸಿಹೋಗುವುದು. ಮಿಂಚು ಕ್ಷಣಕಾಲ ಮೆರೆದು ಮರೆಯಾಗುವಂತೆ, ನೋಡುತ್ತಿರುವಂತೆಯೇ ಮರೆಯಾಗಿ ಹೋಗುವ ಈ ದೇಹವೂ ಸ್ಥಿರವಲ್ಲ" ಎಂದು ಅನೇಕ ವಿಧಗಳಲ್ಲಿ ಶ್ರೀಗುರುವು ತನ್ನ ತಾಯಿಗೆ ಉಪದೇಶಮಾಡಿದರೂ, ಆಕೆ ಆತನ ಉಪದೇಶಾಮೃತವನ್ನು ಕೇಳಿ, "ಪ್ರಭು, ನೀನು ಅನೇಕ ರೀತಿಗಳಲ್ಲಿ ಜ್ಞಾನೋಪದೇಶಮಾಡಿದೆ. ಆದರೂ ನನ್ನ ಬಿನ್ನಪವನ್ನು ಕೇಳು. ನೀನು ಹೇಳಿದ್ದೆಲ್ಲವೂ ಒಳ್ಳೆಯದೇ. ಆದರೂ, ನನಗೆ ಇನ್ನೂ ಮಕ್ಕಳು ಜನಿಸುತ್ತಾರೆ ಎಂದು ನೀನು ಹೇಳಿದೆ. ನನಗೆ ಇನ್ನೊಂದು ಮಗುವಾಗುವವರೆಗೂ ನೀನು ನಮ್ಮೊಡನೆ ಇರಬೇಕು. ನಂತರ ನಾನು ನಿನಗೆ ಅನುಮತಿ ಕೊಡುತ್ತೇನೆ. ಇದು ನನ್ನ ಬಿನ್ನಪ. ನನ್ನ ಮಾತನ್ನು ಮೀರಿ ನೀನು ಹೊರಟು ಹೋದರೆ, ನಾನು ಆ ಕ್ಷಣದಲ್ಲೆ ಪ್ರಾಣ ತ್ಯಜಿಸುತ್ತೇನೆ. ನೀನು ಕೇವಲ ನನ್ನ ಮಗ ಮಾತ್ರವಲ್ಲ. ನಮ್ಮ ಕುಲದೀಪಕನು. ರಕ್ಷಕನು" ಎಂದ ತಾಯಿಯ ಮಾತುಗಳನ್ನು ಕೇಳಿ ಶ್ರೀಗುರುವು, ನಗುತ್ತಾ, "ಅಮ್ಮಾ, ನನ್ನ ಮಾತುಗಳು ಸತ್ಯವಾದವು. ನೀನೂ ನಿನ್ನ ಮಾತನ್ನು ಸತ್ಯಮಾಡು. ನಾನು ಇನ್ನೊಂದು ವರ್ಷ ಈ ಮನೆಯಲ್ಲಿ ಇರುತ್ತೇನೆ. ಅಷ್ಟರಲ್ಲಿ ನಿನಗೆ ಇಬ್ಬರು ಮಕ್ಕಳಾಗುತ್ತಾರೆ. ಆ ಇಬ್ಬರು ಮಕ್ಕಳನ್ನು ಕಂಡು ನೀನು ನನಗೆ ಸಂತೋಷದಿಂದ ಹೊರಡಲು ಅನುಮತಿ ಕೊಡಬೇಕು. ನಿನ್ನ ಮಾತನ್ನು ನಿಲ್ಲಿಸಿಕೋ. ನಾನು ಆ ನಂತರ ಈ ಮನೆಯಲ್ಲಿರುವುದಿಲ್ಲ" ಎಂದು ಹೇಳಿದರು.

ತಮ್ಮ ಮಾತಿನಂತೆ ಶ್ರೀಗುರುವು, ಶಿಷ್ಯರಿಗೆ ವೇದೋಪದೇಶಮಾಡುತ್ತಾ ಮನೆಯಲ್ಲಿಯೇ ನಿಂತರು. ಊರಿನ ಜನರು ಕುತೂಹಲಿಗಳಾಗಿ ಅವರು ಪಾಠ ಹೇಳುತ್ತಿದ್ದಲ್ಲಿಗೆ ಬಂದು, ಅವರು ಹೇಳುತ್ತಿದ್ದ ಪಾಠಪ್ರವಚನಗಳನ್ನು ಕೇಳಿ, "ಆಹಾ, ಈ ಪಂಡಿತನು ಶಿಷ್ಯರಿಗೆ ಸಾಂಗೋಪಾಂಗವಾಗಿ ಚತುರ್ವೇದಗಳನ್ನೂ ಉಪದೇಶಿಸುತ್ತಿದ್ದಾನೆ" ಎಂದು ಆಶ್ಚರ್ಯಪಟ್ಟರು. ವಿದ್ವಾಂಸರು, ತ್ರಿವೇದಿಗಳು, ಷಟ್ಶಾಸ್ತ್ರನಿಪುಣರೂ ಕೂಡಾ ಶ್ರೀಗುರುವಿನ ಬಳಿಗೆ ವಿದ್ಯಾರ್ಥಿಗಳಾಗಿ ಬಂದು ವಿದ್ಯಾರ್ಜನೆ ಮಾಡಿದರು. ತಾಯಿತಂದೆಗಳನ್ನು ಸಂತೋಷಪಡಿಸುತ್ತಾ ಶ್ರೀಗುರುವು ಗೃಹನಿವಾಸಿಯಾಗಿ ಒಂದು ವರ್ಷ ಕಳೆದರು. ತನ್ನ ಮಾತಿನಂತೆ ಮನೆಯಲ್ಲಿದ್ದ ಮಗನನ್ನು ದೇವಭಾವದಿಂದ ಅರ್ಚಿಸುತ್ತಾ, ಸಂತೋಷದಿಂದಿದ್ದ ಅಂಬ ಆ ಸಮಯದಲ್ಲಿ ಗರ್ಭ ಧರಿಸಿದಳು. ನವಮಾಸ ತುಂಬಿದಮೇಲೆ ಆಕೆ ಅವಳಿ ಮಕ್ಕಳಿಗೆ ಜನ್ಮವಿತ್ತಳು. ಸುಂದರರಾಗಿದ್ದ ಆ ಮಕ್ಕಳನ್ನು ಕಂಡು ಮಾತಾಪಿತರು ಸಂತಸಗೊಂಡರು. ಶ್ರೀಗುರುವಿನ ಆಶೀರ್ವಾದ ವ್ಯರ್ಥವಾಗುವುದಾದರೂ ಹೇಗೆ? ತಾಯಿಯ ಪಾಲನೆಯಲ್ಲಿ ಆ ಮಕ್ಕಳು ಬೆಳೆದು, ಮೂರುತಿಂಗಳು ತುಂಬಿದವರಾದರು. ಆಗ ಶ್ರೀಗುರುವು ತಾಯಿಗೆ, "ಅಮ್ಮ, ನಿನ್ನ ಕೋರಿಕೆ ನೆರವೇರಿತಲ್ಲವೇ? ಈ ಮಕ್ಕಳಿಬ್ಬರೂ ಪೂರ್ಣಾಯುಷಿಗಳಾಗಿ ಸುಖ ಸಂಪತ್ತುಗಳನ್ನು ಪಡೆಯುತ್ತಾರೆ. ನಿನಗಿನ್ನೂ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಕೂಡಾ ಹುಟ್ಟುತ್ತಾರೆ. ನೆರವೇರಿದ ಕೋರಿಕೆಯುಳ್ಳವಳಾಗಿ ನೀನು ಸಂತೋಷದಿಂದಿರು. ನಾನು ನನ್ನ ಮಾತನ್ನು ನಿಲ್ಲಿಸಿಕೊಂಡಿದ್ದೇನೆ. ಇನ್ನು ನನಗೆ ನಿನ್ನ ಅನುಮತಿ ಕೊಡು. ನಾನು ಹೊರಡುತ್ತೇನೆ. ಸಂತೋಷದಿಂದ ನನ್ನನ್ನು ಕಳುಹಿಸಿಕೊಡು" ಎಂದು ಹೇಳಿದರು. ಅದನ್ನು ಕೇಳಿ ತಾಯಿತಂದೆಗಳು, ಅವರಿಗೆ ನಮಸ್ಕಾರಮಾಡಿ, "ಸ್ವಾಮಿ, ನೀನು ನಮ್ಮ ಕುಲದೈವ. ನಾವು ನಿನಗೆ ಹೇಳುವುದೇನಿದೆ? ಮಾಯಾಮೋಹ ಬದ್ಧರಾದ ನಾವು, ನಿನ್ನ ಮಹಿಮೆಯನ್ನು ಹೇಗೆ ತಾನೇ ತಿಳಿಯಬಲ್ಲೆವು? ನೀನು ನಮ್ಮ ಮಗನೆಂದು ಭ್ರಮಿತರಾಗಿದ್ದ ನಾವು, ನಿನ್ನೊಡನೆ ಏನಾದರೂ ನಿಷ್ಠುರ ಮಾತುಗಳನ್ನಾಡಿದ್ದರೆ ಅದೆಲ್ಲವನ್ನು ಕ್ಷಮಿಸು. ನಮ್ಮಿಂದ ನಿನಗೆ ಊಟೋಪಚಾರಗಳಲ್ಲಿ ಕೊರತೆಯುಂಟಾಗಿರಬಹುದು. ನಿನ್ನನ್ನು ಎತ್ತಿ, ಆಡಿಸಿ, ಲಾಲಿಸಿ, ಪಾಲಿಸಲಿಲ್ಲ. ನಾವು ಏನೇ ಪಾಪಗಳನ್ನು ಮಾಡಿದ್ದರೂ ಅದೆಲ್ಲವನ್ನೂ ಕ್ಷಮಿಸಿ ನಮ್ಮನ್ನನುಗ್ರಹಿಸು. ನೀನು ನಮ್ಮ ವಂಶೋದ್ಧಾರಕನಾಗಿ ಅವತರಿಸಿದ್ದೀಯೆ. ನಮ್ಮ ಪ್ರದೋಷ ಪೂಜೆಗಳು ನಿಸ್ಸಂಶಯವಾಗಿ ಫಲಕೊಟ್ಟಿವೆ. ಇನ್ನು ಮುಂದೆ ನಮ್ಮ ಗತಿಯೇನು? ನಮ್ಮನ್ನು ಈ ಜನನ ಮರಣ ದುಃಖಗಳಿಂದ ದೂರಮಾಡು. ನಾವು, ನಮ್ಮ ಎರಡೂ ವಂಶಗಳೂ, ನೀನು ನಮಗೆ ಮಗನಾಗಿ ಬಂದಿದ್ದರಿಂದ, ಪಾವನವಾದವು. ಸ್ವಾಮಿ, ಈ ದುಸ್ತರವಾದ ಸಂಸಾರದಲ್ಲಿ ನಮ್ಮನ್ನು ಇನ್ನೂ ಏಕೆ ನಿಲ್ಲಿಸಿದ್ದೀಯೆ? ನಿನ್ನ ದರ್ಶನವಿಲ್ಲದೆ ನಾವು ಹೇಗೆತಾನೇ ಜೀವಿಸಿರಬಲ್ಲೆವು?" ಎಂದು ಮುಂತಾಗಿ ಕಳಕಳಿಯಿಂದ ಮೊರೆಯಿಟ್ಟರು.

ಅವರ ಮಾತುಗಳನ್ನು ಕೇಳಿ ಶ್ರೀಗುರುವು, ನಗುತ್ತಾ, "ನಿಮಗೆ ನನ್ನ ದರ್ಶನವಾಗಬೇಕೆಂಬ ಇಚ್ಛೆಯಾದರೆ, ನನ್ನನ್ನು ಸ್ಮರಿಸಿ. ತಕ್ಷಣವೇ ನಾನು ನಿಮಗೆ ದರ್ಶನ ಕೊಡುತ್ತೇನೆ. ಚಿಂತಿಸಬೇಡಿ. ನಿಮ್ಮ ಮನೆಯಲ್ಲಿ ಇನ್ನು ಮೇಲೆ ದೈನ್ಯವೆಂಬುದು ಎಂದಿಗೂ ಇರುವುದಿಲ್ಲ. ಪ್ರತಿದಿನವೂ ಲಕ್ಷ್ಮಿ ಈ ಮನೆಯಲ್ಲಿ ಕಲಕಲವಾಡುತ್ತಾ ಓಡಾಡುತ್ತಾಳೆ. ಹಿಂದಿನ ಜನ್ಮದಲ್ಲಿ ನೀವು ಮಾಡಿದ ಪ್ರದೋಷ ಪೂಜೆಯ ಫಲವಿದು. ನಿಮ್ಮ ವಂಶವೂ ಶ್ರೀಮಂತಗೊಳ್ಳುತ್ತದೆ. ಇಹದಲ್ಲಿ ಸೌಖ್ಯ, ದೇಹಾಂತದಲ್ಲಿ ಪರಲೋಕಗಳನ್ನು ಪಡೆದು ನೀವು ಪುನರ್ಜನ್ಮ ರಹಿತರಾಗುತ್ತೀರಿ. ಅಮ್ಮಾ, ನೀನು ಶಂಕರನನ್ನಾರಾಧಿಸಿ ನನ್ನನ್ನು ಅವತರಿಸಿಕೊಂಡು, ಪೂರ್ಣಕಾಮಳಾದೆ. ಇನ್ನು ನನಗೆ ಅನುಮತಿ ಕೊಟ್ಟರೆ ನಾನು ಹೊರಡುತ್ತೇನೆ. ಮುವ್ವತ್ತು ವರ್ಷಗಳ ನಂತರ ಮತ್ತೆ ನಿಮಗೆ ನನ್ನ ದರ್ಶನವಾಗುತ್ತದೆ. ಬದರಿವನಕ್ಕೆ ಹೊರಡುತ್ತಿದ್ದೇನೆ" ಎಂದು ಹೇಳಿ ಶ್ರೀಗುರುವು ಪಯಣಕ್ಕೆ ಸಿದ್ಧರಾದರು.

ಹಾಗೆ ಹೊರಟ ಶ್ರೀಗುರುವಿನ ಹಿಂದೆ ಗುಂಪುಗುಂಪಾಗಿ ಜನ ಹೊರಟರು. "ಈ ಬ್ರಹ್ಮಚಾರಿ ತಪಸ್ಸು ಮಾಡಲು ಹೊರಟಿದ್ದಾನೆ. ಇವನು ಮಾನವನಂತೆ ಕಂಡರೂ, ಪುರಾಣ ಪುರುಷನೇ!’ ಎಂದು ಕೆಲವರು ಹೇಳುತ್ತಿದ್ದರು. "ಈ ವಿಚಿತ್ರವನ್ನು ನೋಡು. ಈ ಸಣ್ಣ ಬಾಲಕ ತಪಸ್ಸಿಗೆಂದು ಹೊರಡುತ್ತಿದ್ದರೆ ಅವನ ತಂದೆತಾಯಿಗಳು ಅವನನ್ನು ಸಂತೋಷದಿಂದ ಕಳುಹಿಸಿಕೊಡುತ್ತಿದ್ದಾರೆ" ಎಂದು ಇನ್ನು ಕೆಲವರು ಹೇಳುತ್ತಿದ್ದರು. "ಅವರ ಹೃದಯ ಕಲ್ಲಾಗಿರಬೇಕು. ಅಷ್ಟು ಸಣ್ಣ ಮಗನನ್ನು ಸನ್ಯಾಸಿಯಾಗಲು ಕಳುಹಿಸಿಕೊಡುವವರೂ ಇದ್ದಾರೆಯೇ?" ಎಂದು ಮತ್ತೆ ಕೆಲವರು ಹೇಳುತ್ತಿದ್ದರು. "ಇವನು ಪರಮಾತ್ಮನೇ! ಹೀಗೆ ಅವತರಿಸಿದ್ದಾನೆ. ಅದರಲ್ಲಿ ಸಂಶಯವೇ ಇಲ್ಲ. ಸಕಲ ವೇದಗಳನ್ನೂ ಅಧ್ಯಯನಮಾಡಿರುವ ಈ ಏಳು ವರ್ಷದ ಬಾಲಕ, ಅಶೇಷವಾಗಿ ವೇದಗಳನ್ನು ಪಠಿಸಿರುವ ಇವನು, ಸಾಮಾನ್ಯ ಮನುಷ್ಯನಾಗಿರಲು ಹೇಗೆ ಸಾಧ್ಯ?" ಎಂದು ಇನ್ನೂ ಕೆಲವರು ಹೇಳುತ್ತಿದ್ದರು. ಹೀಗೆ ಅನೇಕರು, ಅನೇಕ ರೀತಿಗಳಲ್ಲಿ ಮಾತನಾಡುತ್ತಾ ಶ್ರೀಗುರುವಿಗೆ ಪ್ರಣಾಮಗಳನ್ನು ಅರ್ಪಿಸಿ, ಅವರ ಸ್ತೋತ್ರಮಾಡಿದರು. ಹಾಗೆ ಶ್ರೀಗುರುವಿನ ಸ್ತೋತ್ರ ಮಾಡುತಿದ್ದ ಜನರನ್ನು ಅಲ್ಲಿಯೇ ತಟಸ್ಥಿಸಿ, ಗುರುವು ಮುಂದಕ್ಕೆ ಪ್ರಯಾಣ ಮಾಡಿದರು. ಜನರೆಲ್ಲರೂ ಹೊರಟುಹೋದಮೇಲೆ, ತಂದೆತಾಯಿಗಳು ಇನ್ನೂ ಸ್ವಲ್ಪದೂರ ಶ್ರೀಗುರುವಿನ ಜೊತೆಯಲ್ಲಿ ಮುಂದುವರೆದರು. ಆಗ ಶ್ರೀಗುರುವು, ಅವರಿಗೆ ತ್ರಿಮೂರ್ತಿಸ್ವರೂಪದಲ್ಲಿ ತನ್ನ ದರ್ಶನ ದಯಪಾಲಿಸಿದರು. ಏಂದರೆ, ದತ್ತಾತ್ತ್ರೇಯರೇ ಅವರಿಗೆ ಶ್ರೀಪಾದ ಶ್ರೀವಲ್ಲಭರಾಗಿ ಕಾಣಿಸಿಕೊಂಡರು. ನಿಜರೂಪದಿಂದ ಕಂಡ, ಕರ್ಪೂರಗೌರನಾದ ನರಹರಿಯನ್ನು ನೋಡಿದ ಅವರು, ಸಾಷ್ಟಾಂಗ ನಮಸ್ಕಾರಮಾಡಿ, ಅವರ ಸ್ತೋತ್ರಮಾಡಿದರು. "ಹೇ ತ್ರಿಮೂರ್ತಿ, ನಿನಗೆ ಜಯವಾಗಲಿ. ಜಯವಾಗಲಿ. ಜಗದ್ಗುರು ನಿನ್ನ ದರ್ಶನದಿಂದ ನಮಗಿಂದು ಮಹಾಪುಣ್ಯ ಲಭ್ಯವಾಯಿತು. ಹೇ ವಿಶ್ವೋದ್ಧಾರಕ, ನಮ್ಮನ್ನು ಈ ಭವಾರ್ಣವದಿಂದ ಪಾರುಮಾಡಿದೆ. ಮತ್ತೆ ನಮಗೆ ನಿನ್ನ ದರ್ಶನ ಕೊಡು" ಎಂದು ಕಳಕಳಿಯಿಂದ ಬೇಡಿಕೊಳ್ಳುತ್ತಾ ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟು ನಮಸ್ಕರಿಸಿದರು. ಗುರುನಾಥನು ಅವರನ್ನು ಪ್ರೇಮದಿಂದ ಹಿಡಿದು ಮೇಲಕ್ಕೆತ್ತಿ, ಆಲಂಗಿಸಿ, ಸಂತುಷ್ಟನಾಗಿ, "ನಿಮಗೆ ತಪ್ಪದೇ ಮತ್ತೆ ದರ್ಶನ ಕೊಡುತ್ತೇನೆ" ಎಂದು ಮಾತು ಕೊಟ್ಟು, ಅವರನ್ನು ಹಿಂತಿರುಗುವಂತೆ ಹೇಳಿ, ತಾವು ಮುಂದಕ್ಕೆ ಹೊರಟರು. ಆ ಮಾತಾಪಿತರು ಶ್ರೀಗುರುವು ಹೋದ ದಾರಿಯನ್ನೇ ಮತ್ತೆ ಮತ್ತೆ ನೋಡುತ್ತಾ ತಮ್ಮ ಮನೆಗೆ ಹಿಂದಿರುಗಿದರು.

ಅಲ್ಲಿಂದ ಹೊರಟ ಶ್ರೀಗುರುವು, ಬದರಿನಾಥ, ಆನಂದ ಕಾನನವಾದ ಕಾಶಿಕ್ಷೇತ್ರವನ್ನು ದರ್ಶಿಸಿದರು. ವಾರಣಾಸಿಯಲ್ಲಿ ವಿಶ್ವೇಶ್ವರನು ಸ್ವಯಂ ನೆಲೆಸಿದ್ದಾನೆ. ಅದರಿಂದಲೇ ಅದು ತ್ರಿಲೋಕಗಳಲ್ಲೂ ಸಾಟಿಯಿಲ್ಲದ್ದು. ಶ್ರೀಗುರುವು ತ್ರಿಕಾಲದಲ್ಲೂ ಅನುಷ್ಠಾನ ಮಾಡಿಕೊಳ್ಳುತ್ತಾ, ವಿಶ್ವೇಶ್ವರನ ದರ್ಶನ ಮಾಡುತ್ತಾ ಕಾಶಿಯಲ್ಲಿ ಸ್ವಲ್ಪಕಾಲ ನಿಂತರು. ಅಲ್ಲಿ ಅಷ್ಟಾಂಗ ಯೋಗದಿಂದ ತಪಸ್ಸನ್ನಾಚರಿಸಿದರು. ಕಾಶಿಯಲ್ಲಿ ಬಹಳ ಜನ ತಪಸ್ವಿಗಳಿದ್ದರು. ಕೆಲವರು ಸನ್ಯಾಸಿಗಳು. ಕೆಲವರು ಅವಧೂತರು. ಅವರೆಲ್ಲರೂ ತಪೋನಿರತರೇ! ಯೊಗಾಭ್ಯಾಸ ನಿರತನಾದ ಈ ಬ್ರಹ್ಮಚಾರಿಯೇ ನಮಗಿಂತ ಉತ್ತಮ ಎಂದು ಭಾವಿಸಿದ ಅವರೆಲ್ಲರೂ, "ಈ ಬ್ರಹ್ಮಚಾರಿ ನಮ್ಮೆಲ್ಲರಿಗಿಂತ ದುಷ್ಕರವಾದ ತಪಸ್ಸನ್ನು ಆಚರಿಸುತ್ತಿದ್ದಾನೆ. ಇವನ ವೈರಾಗ್ಯವು ಅದ್ಭುತವಾಗಿದೆ. ದೇಹಾಭಿಮಾನವಿಲ್ಲದವನು. ಯೋಗ್ಯ, ಉತ್ತಮ ಸನ್ಯಾಸಿ. ತ್ರಿಕಾಲದಲ್ಲೂ ಮಣಿಕರ್ಣಿಕೆಯಲ್ಲಿ ಸ್ನಾನವಾಚರಿಸುತ್ತಾನೆ" ಎಂದು ಮಾತನಾಡಿಕೊಳ್ಳುತ್ತಿದ್ದರು.

ಅಲ್ಲಿದ್ದವರೆಲ್ಲರಲ್ಲಿ, ಮಹಾಮತಿಯಾದ ಕೃಷ್ಣ ಸರಸ್ವತಿ ಎನ್ನುವವರು ಬ್ರಹ್ಮಜ್ಞಾನಿ. ವೃದ್ಧ ತಪಸ್ವಿ. ಮಹಾಮುನಿ. ಆ ಯತಿವರ್ಯರು, ಶ್ರೀಗುರುವನ್ನು, ಸದಾ ಪ್ರೀತಿವಿಶ್ವಾಸಗಳಿಂದ ಕಾಣುತ್ತಾ, ಅವರಲ್ಲಿ ಭಕ್ತಿತತ್ಪರರಾದರು. ಕೃಷ್ಣ ಸರಸ್ವತಿ ಒಂದುಸಲ ಅಲ್ಲಿದ್ದ ಇತರ ಯತಿಗಳಿಗೆ, "ನೀವು ಈ ಬ್ರಹ್ಮಚಾರಿಯನ್ನು ಮಾನವ ಮಾತ್ರನೆಂದು ತಿಳಿಯಬೇಡಿ. ಈ ಪುರುಷ ಆ ವಿಶ್ವವಂದ್ಯನ ಅವತಾರವೇ! ವಯಸ್ಸಿನಲ್ಲಿ ಸಣ್ಣವನಾದರೂ, ಇವನಿಗೆ ನೀವು ಭಕ್ತಿಯಿಂದ ನಮಸ್ಕರಿಸಿಕೊಳ್ಳಬೇಕು. ತ್ರಿಭುವನ ವಂದ್ಯರಾದ ತ್ರಿಮೂರ್ತಿಗಳ ಅವತಾರವೇ ಇವನು. ವಯೋಜ್ಯೇಷ್ಠರು ಕನಿಷ್ಠರಿಗೆ ನಮಸ್ಕರಿಸಬಾರದು ಎಂಬುದು ಮೂರ್ಖ ದೃಷ್ಟಿ. ವಿದ್ವಾಂಸರಿಗೆ, ಇವನು ವಿಶ್ವವಂದ್ಯನೆಂಬ ಅರಿವಿದೆ. ಸನ್ಯಾಸವನ್ನು ಮತ್ತೆ ಸ್ಥಾಪಿಸುವುದರಿಂದ ನಮ್ಮ ಭಕ್ತಿ ಸ್ಥಿರವಾಗುವುದು. ಶರೀರಧಾರಿಗಳೆಲ್ಲರಿಗೂ ಅನುಗ್ರಹ ಮಾಡಲು ಇವನೇ ಸಮರ್ಥ. ಈ ಗುರುವಿನ ದರ್ಶನ ಮಾತ್ರದಿಂದಲೇ ಪತಿತನೂ ಪವಿತ್ರನಾಗುತ್ತಾನೆ. ಆದ್ದರಿಂದ ಈ ಬಾಲಕನನ್ನು ನಾವು ಪ್ರಾರ್ಥಿಸಿಕೊಳ್ಳೋಣ. ಇವನಿಗೆ ಸನ್ಯಾಸ ಕೊಟ್ಟು ನಾವು ಕೃತಾರ್ಥರಾಗೋಣ" ಎಂದು ಹೇಳಿದರು. ಯತಿಗಳೆಲ್ಲರೂ ಅವರು ಹೇಳಿದಂತೆ, ಆ ಬಾಲಬ್ರಹ್ಮಚಾರಿಯ ಬಳಿಗೆ ಹೋಗಿ, "ಹೇ ತಾಪಸ ಶ್ರೇಷ್ಠ, ನಮ್ಮ ಪ್ರಾರ್ಥನೆಯನ್ನು ಆಲಿಸಿ, ನೀನು ಲೋಕಾನುಗ್ರಹಾರ್ಥವಾಗಿ ಸನ್ಯಾಸ ಸ್ವೀಕಾರಮಾಡು. ನಮ್ಮ ಪೂಜಾದಿಗಳನ್ನು ಕೈಕೊಂಡು ನಮ್ಮನ್ನು ಉದ್ಧರಿಸು. ಈ ಕಲಿಯುಗದಲ್ಲಿ ಜನರು ಸನ್ಯಾಸಾಶ್ರಮವನ್ನು ನಿಂದಿಸುತ್ತಾರೆ. ಭೂಮಿಯಲ್ಲಿ ಸನ್ಯಾಸಮಾರ್ಗವನ್ನು ಸ್ಥಾಪಿಸುವಂತಹ ಸಮರ್ಥರು ಯಾರೂ ಇಲ್ಲ. ಅಗ್ನಿಹೋತ್ರ, ಗೋವಧೆ, ಸನ್ಯಾಸ, ಮಾಂಸಶ್ರಾದ್ಧ, ಮೈದುನನಿಂದ ಸಂತಾನೋತ್ಪತ್ತಿ, ಎನ್ನುವ ಐದನ್ನು ವಿಸರ್ಜಿಸಬೇಕೆಂಬುದನ್ನು ಶ್ರುತಿವಚನವಾಗಿ ಗ್ರಹಿಸಿ, ಕಲಿಯುಗದಲ್ಲಿ, ಜನರು ಸನ್ಯಾಸವನ್ನು ನಿಷೇಧಿಸುತ್ತಿದ್ದಾರೆ. ಆದರೆ ವೇದಗಳಲ್ಲಿ ಸನ್ಯಾಸವೆಂಬುದು ಪ್ರಸಿದ್ಧಾವಾಗಿದೆ. ಹಿಂದೆ ಅದನ್ನು ನಿಷೇಧಮಾಡಿದ್ದುದು ದುರ್ಬಲರಿಗೆ ಮಾತ್ರ. ವರ್ಣ ಬೇಧಗಳಿರುವವರೆಗೂ, ವೇದಗಳು ಆಚಾರದಲ್ಲಿರುವವರೆಗೂ, ಕಲಿಯುಗದಲ್ಲೂ ಸಹ ಅಗ್ನಿಹೋತ್ರ ಸನ್ಯಾಸಗಳನ್ನು ಪರಿತ್ಯಜಿಸಬಾರದು ಎಂದು ಶಂಕರಾಚಾರ್ಯರು ಸನಾತನ ಮತಸ್ಥಾಪನೆ ಮಾಡಿದರು. ಅಂದಿನಿಂದ ಇಂದಿನವರೆಗೂ ಸನ್ಯಾಸಾಶ್ರಮ ಮುಂದುವರೆಯುತ್ತಲೇ ಇದೆ. ಆದರೆ ಈ ಕಲಿಕಾಲದಲ್ಲಿ, ಪಾಮರರು ಅದನ್ನು ನಿಂದಿಸುತ್ತಿದ್ದಾರೆ. ಈ ಸನ್ಯಾಸಾಶ್ರಮವನ್ನು ಉದ್ಧರಿಸಿ, ಜನರಿಗೆ ಉಪಕಾರ ಮಾಡು. ಹೇ ಮುನೀಶ್ವರ, ನೀನು ಕೃಪಾಸಾಗರನು. ನಮ್ಮನ್ನು ಈ ಸಂಸಾರ ಕೂಪದಿಂದ ಉದ್ಧರಿಸು" ಏಂದು ಪ್ರಾರ್ಥಿಸಿದರು. ಅವರ ಮಾತನ್ನು ಕೇಳಿದ ಶ್ರೀಗುರುವು ಸನ್ಯಾಸವನ್ನು ಸ್ವೀಕರಿಸಲು ನಿಶ್ಚಯಿಸಿ, ವೃದ್ಧರಾದ ಕೃಷ್ಣ ಸರಸ್ವತಿ ಅವರಿಂದ ಶಾಸ್ತ್ರೋಕ್ತವಾಗಿ ಸನ್ಯಾಸ ದೀಕ್ಷೆ ಪಡೆದರು.

ಸಿದ್ಧಮುನಿಯ ಈ ಮಾತುಗಳನ್ನು ಕೇಳಿದ ನಾಮಧಾರಕ, "ಸ್ವಾಮಿ, ಜಗತ್ತಿಗೇ ಗುರುವಾದ ಅವರಿಗೆ ಇನ್ನೊಬ್ಬರು ಹೇಗೆ ಗುರುವಾಗುತ್ತಾರೆ? ತ್ರಿಮೂರ್ತ್ಯವತಾರವಾದ ಶ್ರೀಗುರುವಿಗೆ ಮತ್ತೊಬ್ಬ ಗುರುವಿನ ಅವಶ್ಯಕತೆಯಾದರೂ ಏನು?" ಎಂದು ತನ್ನ ಸಂದೇಹವನ್ನು ವ್ಯಕ್ತಪಡಿಸಿದನು. ಅದಕ್ಕೆ ಸಿದ್ಧರು, "ಹಿಂದೆ ಶ್ರೀರಾಮ ವಸಿಷ್ಠರನ್ನು ಗುರುವಾಗಿ ಸ್ವೀಕರಿಸಿದ್ದನಲ್ಲವೆ? ಭಗವಂತನು, ತನ್ನ ಎಂಟನೆಯ ಅವತಾರದಲ್ಲಿ ಶ್ರೀ ಕೃಷ್ಣನಾಗಿ, ಸಾಂದೀಪನಿ ಮುನಿಯನ್ನು ಗುರುವಾಗಿ, ಮಾನವ ಧರ್ಮಾನುಸಾರವಾಗಿ, ಸ್ವೀಕರಿಸಿದ್ದನಲ್ಲವೆ? ಅದೇ ರೀತಿಯಲ್ಲಿ ಶ್ರೀಗುರುವು ಕೂಡ ಜ್ಞಾನವೃದ್ಧರಾದ ಕೃಷ್ಣ ಸರಸ್ವತಿಯನ್ನು ಗುರುವಾಗಿ ಸ್ವೀಕರಿಸಿದರು" ಎಂದು ಹೇಳಿದರು. ಅದಕ್ಕೆ ನಾಮಧಾರಕ, "ಅಲ್ಲಿ ಬಹಳ ಜನ ಯತೀಶ್ವರರಿದ್ದರೂ, ಶ್ರೀಗುರುವು ಕೃಷ್ಣ ಸರಸ್ವತಿಯನ್ನೇ ಗುರುವಾಗಿ ಆರಿಸಿಕೊಳ್ಳಲು ಕಾರಣವೇನು? ಅದನ್ನು ನನಗೆ ವಿಸ್ತಾರವಾಗಿ ಹೇಳಿ" ಎಂದು ಕೇಳಲು, ಸಿದ್ಧಮುನಿ ಮೂಲದಿಂದ ಆರಂಭಿಸಿ, ಗುರು ಪರಂಪರೆಯನ್ನು ಹೇಳಿದರು. "ಗುರು ಪರಂಪರೆಗೆ ಮೂಲವಾದವನು ಶಂಕರ. ಶಂಕರನ ಶಿಷ್ಯ ವಿಷ್ಣು. ವಿಷ್ಣುವಿಗೆ ಬ್ರಹ್ಮ ಶಿಷ್ಯ. ಬ್ರಹ್ಮನಿಗೆ ವಸಿಷ್ಠ, ವಸಿಷ್ಠರಿಗೆ ಶಕ್ತಿ, ಶಕ್ತಿಗೆ ಪರಾಶರ, ಪರಾಶರರೇ ಸ್ವಯಂ ನಾರಾಯಣನಾದ ವ್ಯಾಸ, ವ್ಯಾಸರಿಗೆ ಶುಕ, ಶುಕರಿಗೆ ಗೌಡಪಾದ, ಗೌಡಪಾದರಿಗೆ ಗೋವಿಂದಾಚಾರ್ಯ, ಅವರಿಗೆ ಶಂಕರಾಚಾರ್ಯ, ಶಂಕರಾಚಾರ್ಯರಿಗೆ ಬೋಧಜ್ಞಾನಗಿರಿ, ಅವರಿಗೆ ಸಿಂಹಗಿರಿ, ಸಿಂಹಗಿರಿಗೆ ಈಶ್ವರತೀರ್ಥ, ಅವರಿಗೆ ನೃಸಿಂಹತೀರ್ಥ ಹಾಗೂ ಸರ್ವವಿದ್ಯಾ ವಿಶಾರದರಾದ ವಿದ್ಯಾರಣ್ಯ, ಅವರಿಗೆ ಮಲಯಾನಂದ, ಅವರಿಗೆ ದೈವತೀರ್ಥ, ಅವರಿಗೆ ಯಾದವೇಂದ್ರ ಸರಸ್ವತಿ, ಅವರ ಶಿಷ್ಯ ಈ ಕೃಷ್ಣ ಸರಸ್ವತಿ. ಹೀಗೆ, ಈ ಗುರು ಪರಂಪರೆ ಶ್ರೀಗುರುವಿಗೆ ಸಮ್ಮತವಾದದ್ದರಿಂದ ಅವರು ಕೃಷ್ಣ ಸರಸ್ವತಿಯನ್ನು ತಮ್ಮ ಗುರುವಾಗಿ ಅಂಗೀಕರಿಸಿದರು. ಅವರ ಸನ್ಯಾಸಾಶ್ರಮದ ಹೆಸರು ನೃಸಿಂಹ ಸರಸ್ವತಿ ಎಂದಾಯಿತು" ಎಂದು ಗುರುಪರಂಪರೆಯನ್ನು ವಿಸ್ತರವಾಗಿ ತಿಳಿಸಿದರು.

ಹೀಗೆ ಸನ್ಯಾಸಮಾರ್ಗ ಸ್ಥಾಪನೆಗೆಂದು, ತಾವು ಸನ್ಯಾಸವನ್ನು ಸ್ವೀಕರಿಸಿ, ಶ್ರೀ ಗುರುವು ಗುರುನಾಥನಾಗಿ ಕಾಶಿಯಲ್ಲಿ ಶಿಷ್ಯರಿಗೆ ವೇದೋಪದೇಶಮಾಡಿದರು. ವಯಸ್ಸಿನಲ್ಲಿ ಸಣ್ಣವರಾದರೂ, ಕಾಶಿಯಲ್ಲಿ ಇವರನ್ನು ಎಲ್ಲರೂ ಪೂಜಿಸಿದರು. ವಿಶೇಷವಾಗಿ, ಕಾಶಿಯಲ್ಲಿದ್ದ ಎಲ್ಲ ವಿದ್ವಾಂಸರೂ, ಯತಿಗಳೂ, ಶ್ರೀ ನೃಸಿಂಹ ಸರಸ್ವತಿಯವರನ್ನು ಆರಾಧಿಸುತ್ತಿದ್ದರು. ಶ್ರೀಗುರುವು ಕಾಶಿಯಲ್ಲಿ ಅನೇಕ ಶಿಷ್ಯರನ್ನು ಸೇರಿಸಿ, ಅಲ್ಲಿಂದ ಬದರಿಕಾವನವೇ ಮೊದಲಾದ ಅನೇಕ ತೀರ್ಥಗಳನ್ನು ಸಂದರ್ಶಿಸುತ್ತಾ, ಲೋಕಾನುಗ್ರಹಕ್ಕಾಗಿ ಪರ್ಯಟನೆ ಮಾಡುತ್ತಾ, ಮೇರು ಪರ್ವತವನ್ನು ಸೇರಿದರು. ಆ ಪರ್ವತಕ್ಕೆ ಪ್ರದಕ್ಷಿಣೆ ಮಾಡಿ, ಶಿಷ್ಯರೊಡನೆ ಸರ್ವ ತೀರ್ಥಗಳ ದರ್ಶನ ಮಾಡುತ್ತಾ, ಭೂಪ್ರದಕ್ಷಿಣೆ ಮಾಡಿ, ಗಂಗಾಸಾಗರ ಸಂಗಮ ಪ್ರದೇಶಕ್ಕೆ ಬಂದರು. ಪರ್ಯಟನಕಾಲದಲ್ಲಿ ಅವರು ನೆರವೇರಿಸಿದ ಲೋಕೋದ್ಧಾರ ಕಾರ್ಯಗಳನ್ನೆಲ್ಲ ತಿಳಿದವರು ಯಾರೂ ಇಲ್ಲ. ಅಲ್ಲದೆ ಶ್ರೀಗುರುವಿನ ಲೀಲೆಗಳನ್ನೆಲ್ಲ ವಿವರಿಸುತಾ ಹೋದರೆ ಗ್ರಂಥ ಬಹಳ ದೊಡ್ಡದಾಗುವುದು. ಆದ್ದರಿಂದ ಹೇ ನಾಮಧಾರಕ, ನನಗೆ ತಿಳಿದಮಟ್ಟಿಗೆ ಮಾತ್ರ ನಾನು ಎಲ್ಲವನ್ನೂ ತಿಳಿಸುತ್ತೇನೆ. ಗಂಗಾತೀರ್ಥ ಪರ್ಯಟನೆ ಮಾಡಿ, ಅವರು ಪ್ರಯಾಗವನ್ನು ಸೇರಿದರು. ಅಲ್ಲಿ ಮಾಧವನೆಂಬ ಬ್ರಾಹ್ಮಣ ಶ್ರೇಷ್ಠನೊಬ್ಬನು, ಗುರುದರ್ಶನಾಭಿಲಾಷಿಯಾಗಿ ಅವರಲ್ಲಿಗೆ ಬಂದನು. ಅವನಿಗೆ ಶ್ರೀಗುರುವು ಸನ್ಯಾಸ ಕೊಟ್ಟು , ಅದ್ವೈತವನ್ನು ಉಪದೇಶಿಸಿದರು. ಅವರ ಶಿಷ್ಯಗಣದಲ್ಲಿ, ಶ್ರೀಗುರುವಿಗೆ ಮಾಧವನನ್ನು ಕಂಡರೆ ಅತಿಶಯ ಪ್ರೀತಿ. ಶಿಷ್ಯರೆಲ್ಲರನ್ನೂ ಹಿಂದಿಟ್ಟುಕೊಂಡು ಶ್ರೀಗುರುವು ಪ್ರಯಾಗವನ್ನು ಬಿಟ್ಟು ಹೊರಟರು." 

ಇಲ್ಲಿಗೆ ಹನ್ನೆರಡನೆಯ ಅಧ್ಯಾಯ ಮುಗಿಯಿತು.


||ಶ್ರೀ ಗುರು ಚರಿತ್ರೆ - ಹನ್ನೊಂದನೆಯ ಅಧ್ಯಾಯ||

"ಸ್ವಾಮಿ, ಶ್ರೀಪಾದರು ತಮ್ಮ ಮುಂದಿನ ಅವತಾರ ಎಲ್ಲಿ ಮಾಡಿದರು? ಆ ಅವತಾರದ ವಿಶೇಷಗಳೇನು? ಆ ಅವತಾರದಲ್ಲಿ ಅವರೇನು ಮಾಡಿದರು? ಎಂಬುದನ್ನು ದಯವಿಟ್ಟು ವಿಸ್ತಾರವಾಗಿ ತಿಳಿಸಿ" ಎಂದು ನಾಮಧಾರಕನು ಕೇಳಲು, ಸಿದ್ಧಮುನಿ ಹೇಳಿದರು. "ಮಗು, ಶ್ರೀಪಾದರು, ಹಿಂದೆ, ತಾವು ಅಂಬಿಕೆಗೆ ವರಕೊಟ್ಟಿದ್ದಂತೆ ಅವಳ ಮರುಜನ್ಮದಲ್ಲಿ ಅವಳಿಗೆ ಮಗನಾಗಿ ಜನಿಸಿದರು. ಅಂಬಿಕ, ಗುರೂಪದೇಶವನ್ನು ಪಾಲಿಸುತ್ತಾ, ಶ್ರದ್ಧಾಭಕ್ತಿಗಳಿಂದ ಮಾಡಿದ ಪ್ರದೋಷಪೂಜೆಗಳಿಂದ ವಿಶ್ವೇಶ್ವರನನ್ನು ಅರ್ಚಿಸುತ್ತಾ, ಮರಣಹೊಂದಿದವಳಾಗಿ, ತನ್ನ ಮರುಜನ್ಮದಲ್ಲಿ ಉತ್ತರದೇಶದಲ್ಲಿ ಕಾರಂಜಿನಗರದಲ್ಲಿ, ವಾಜಸನೇಯ ಬ್ರಾಹ್ಮಣನೊಬ್ಬನಿಗೆ ಮಗಳಾಗಿ ಜನಿಸಿದಳು. ಅವಳ ತಂದೆ ಅವಳಿಗೆ ವಿಧ್ಯುಕ್ತವಾಗಿ ಜಾತಕರ್ಮಗಳನ್ನು ಮಾಡಿ, ಅಂಬ ಎಂಬ ಹೆಸರಿಟ್ಟನು. ತಂದೆತಾಯಿಗಳ ಪ್ರೀತಿಪಾತ್ರಳಾಗಿ ದೊಡ್ಡವಳಾದ ಆಕೆಯನ್ನು, ಅವಳ ತಂದೆ, ಶಿವಪೂಜಾನಿರತನಾದ ಮಾಧವ ಎಂಬ ಬ್ರಾಹ್ಮಣನಿಗೆ, ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟನು. ಅವಳ ಗಂಡನ ಮನೆಯಲ್ಲಿ ಕೂಡಾ ಎಲ್ಲರೂ ಸದಾಚಾರಸಂಪನ್ನರು. ಆ ಸಾಧ್ವಿ, ತನ್ನ ಪೂರ್ವಜನ್ಮ ಸಂಸ್ಕಾರಗಳಿಂದ, ಈ ಜನ್ಮದಲ್ಲೂ ಈಶ್ವರೋಪಾಸನೆಯಲ್ಲಿ ನಿರತಳಾಗಿದ್ದಳು. ಆ ದಂಪತಿಗಳು ಪ್ರದೋಷಕಾಲದಲ್ಲಿ ಶ್ರದ್ಧಾಭಕ್ತಿಗಳಿಂದ, ನಿಯಮಬದ್ಧರಾಗಿ, ನಿರಂತರವಾಗಿ ಶಿವಪೂಜೆಯನ್ನು ಮಾಡುತ್ತಿದ್ದರು. ಶನಿತ್ರಯೋದಶಿಯ ದಿನ ಶಿವನನ್ನು ವಿಶೇಷಪೂಜೆಗಳಿಂದ ಅರ್ಚಿಸುತ್ತಿದ್ದರು.

ಹೀಗೆ ೧೬ವರ್ಷಗಳು ಕಳೆದ ಬಳಿಕ ಅಂಬ ಗರ್ಭಧರಿಸಿದಳು. ಪುಂಸವನಾದಿಗಳನ್ನು ಯಥಾಕಾಲದಲ್ಲಿ ನಡೆಸಿದ ಅವಳ ಗಂಡ ಮಾಧವ, ಅವಳ ಲಕ್ಷಣಗಳನ್ನು ಈಕ್ಷಿಸಿ, ಅವಳಿಗೆ ಜ್ಞಾನೋಪದೇಶಮಾಡಿದ. ಸೀಮಂತಕಾಲದಲ್ಲಿ ಅವಳು ಕೊಟ್ಟ ಬಾಗಿನಗಳನ್ನು ಸ್ವೀಕರಿಸಿದ ಸುವಾಸಿನಿಯರು ಆಕೆಗೆ ಆರತಿ ಮಾಡಿ ಅಶೀರ್ವದಿಸಿದರು. ಒಂಭತ್ತು ತಿಂಗಳು ತುಂಬಿದ ಅಂಬ ಒಂದು ಶುಭ ಮುಹೂರ್ತದಲ್ಲಿ, ಗಂಡು ಮಗುವೊಂದಕ್ಕೆ ಜನ್ಮ ನೀಡಿದಳು. ಮಗನನ್ನು ಕಂಡ ಮಾಧವನ ಮನಸ್ಸು ಸಂತಸಗೊಂಡಿತು. ತನ್ನ ಅವತಾರವನ್ನು ಗುರುತಿಸುವುದಕ್ಕೋ ಎಂಬಂತೆ ಆ ಮಗುವು ಹುಟ್ಟುತ್ತಲೇ ಅಳುವುದಕ್ಕೆ ಬದಲು ಪ್ರಣವೋಚ್ಚಾರಣೆ ಮಾಡಿತು. ಅದನ್ನು ಕಂಡವರೂ, ಕೇಳಿದವರೂ ಆಶ್ಚರ್ಯಪಟ್ಟರು. ಜಾತಕರ್ಮಾದಿಗಳನ್ನು ಮಾಡಿದ ಮೇಲೆ, ಜ್ಯೋತಿಷ್ಕರು ಅವನ ಜನ್ಮಕುಂಡಲಿಯನ್ನು ನೋಡಿ, "ಈ ಹುಡುಗನ ಜಾತಕ ಬಹಳ ವಿಶೇಷವಾಗಿದೆ. ಇವನು ಗುರುಗಳಿಗೆ ಗುರುವಾಗುತ್ತಾನೆ. ಇವನ ಅನುಗ್ರಹ ಪಡೆದವನು ವಿಶ್ವವಂದ್ಯನಾಗುತ್ತಾನೆ. ಇವನ ಮಾತು ವೇದವಾಕ್ಯವಾಗುತ್ತದೆ. ಇವನ ಪಾದವು ಚಿಂತಾಮಣಿ ಸದೃಶವಾದದ್ದು. ಇವನ ಇರುವಿಕೆಯಿಂದ ದೇಶದಲ್ಲಿ ಸಮೃದ್ಧಿಯಿರುತ್ತದೆ. ಅಯ್ಯಾ, ಮಾಧವ, ಇವನು ನೆಲೆಸಿರುವ ಮನೆಯಲ್ಲಿ ನವನಿಧಿಗಳೂ ಲಾಸ್ಯವಾಡುತ್ತವೆ. ಇವನು ಗೃಹಸ್ಥನಾಗುವುದಿಲ್ಲ. ತ್ರಿಭುವನ ಪೂಜಿತನಾಗಿ ತನ್ನ ದೃಷ್ಟಿಯಿಂದಲೇ ಪತಿತರನ್ನು ಪುನೀತರನ್ನಾಗಿ ಮಾಡುತ್ತಾನೆ. ಇವನು ನಿಶ್ಚಯವಾಗಿಯೂ ಪರಮೇಶ್ವರನ ಅವತಾರವೇ!" ಎಂದು ಭವಿಷ್ಯ ನುಡಿದರು. ಅವರು ಮುಂದುವರೆದು, "ಅಷ್ಟೇಅಲ್ಲ. ಈತನ ಅನುಗ್ರಹದಿಂದ ಕಲಿಕಾಲಭಯಗಳೂ ಉಪಸಂಹರಿಸಲ್ಪಡುತ್ತವೆ. ನಿಮ್ಮ ಕೋರಿಕೆಗಳೆಲ್ಲವೂ ಅಪ್ರಯತ್ನವಾಗಿ ಸಿದ್ಧಿಯಾಗುತ್ತವೆ. ಮನೆಗೆ ಬಂದಿರುವ ಈ ಸುಪುತ್ರನನ್ನು ಜಾಗ್ರತೆಯಿಂದ ಬೆಳೆಸು" ಎಂದೂ ಹೇಳಿದರು. ಅದನ್ನು ಕೇಳಿದ ಆ ಬಾಲಕನ ಮಾತಾಪಿತೃಗಳು ಅತ್ಯಂತ ಸಂತೋಷಗೊಂಡು ಅಂತಹ ಭವಿಷ್ಯವನ್ನು ನುಡಿದ ಬ್ರಾಹ್ಮಣೋತ್ತಮರಿಗೆ ಯೋಗ್ಯವಾದ ಸತ್ಕಾರವನ್ನು ಮಾಡಿದರು. ಅವರೆಲ್ಲರೂ ಆ ಮಗುವಿಗೆ ಅಶೀರ್ವಾದಗಳನ್ನು ಮಾಡಿ ಹೊರಟು ಹೋದರು.

ಆ ದಂಪತಿಗಳು, ಮಗುವನ್ನು ಬಹು ಜಾಗ್ರತೆಯಿಂದ ಕಾಪಾಡುತ್ತಿದ್ದರು. ಹುಟ್ಟುತ್ತಲೇ ಪ್ರಣವೋಚ್ಚಾರಣೆ ಮಾಡಿತು ಎಂಬ ವಾರ್ತೆ ಊರೆಲ್ಲಾ ಹರಡಿ, ಆ ಮಗುವನ್ನು ನೋಡಲು ಜನ ಗುಂಪುಗುಂಪಾಗಿ ಮಾಧವನ ಮನೆಗೆ ಬರುತ್ತಿದ್ದರು. ಜನರ ದೃಷ್ಟಿ ತಗುಲಿ ಆ ಮಗುವಿಗೆ ತೊಂದರೆಯಾಗುವುದೇನೋ ಎಂದು, ಅಂಬ ಮಗುವನ್ನು ಯಾರಿಗೂ ತೋರಿಸುತ್ತಿರಲಿಲ್ಲ. ಆದರೂ ಅಂಬ ಮಗುವಿಗೆ ಆಗಾಗ ದೃಷ್ಟಿ ನಿವಾರಣೆ ಮಾಡುತ್ತಿದ್ದಳು. ಮಂತ್ರಿಸಿದ ತಾಯಿತವನ್ನು ಕಟ್ಟಿದರು. ಪರಮಾತ್ಮನ ಅವತಾರವಾದ ಆ ಮಗುವಿಗೆ ದೃಷ್ಟಿ ತಗುಲುವುದೆಂದರೇನು? ಆದರೂ ಆ ತಾಯಿತಂದೆಗಳು ಲೋಕರೀತಿಯನ್ನನುಸರಿಸಿ ಮಗುವನ್ನು ಹಾಗೆ ಕಾಪಾಡುತ್ತಿದ್ದರು. ಸಕಾಲದಲ್ಲಿ ಮಾಧವನು ನಾಮಕರಣ ಮಾಡಿ, ಜನರ ತಾಪ ದೈನ್ಯಗಳನ್ನು ಹರಿಸುವವನಾಗಲಿ ಎಂಬ ಇಚ್ಛೆಯಿಂದ, ಆ ಮಗುವಿಗೆ "ನರಹರಿ" ಎಂದು ಹೆಸರಿಟ್ಟನು.

ಮಹಾಪ್ರೀತಿಯಿಂದ ಮಗುವನ್ನು ಸಾಕುತ್ತಿದ್ದ ಅಂಬ, ಮಗುವಿಗೆ ಸ್ತನ್ಯ ಸಾಕಾಗುವುದಿಲ್ಲವೇನೊ ಎಂದು ಸಂದೇಹಪಟ್ಟು, ದಾದಿಯೊಬ್ಬಳನ್ನು ನೇಮಿಸಬೇಕೆಂದು ಮಾಧವನನ್ನು ಕೋರಿದಳು. ಆ ಮಾತು ಕೇಳಿಸಿಕೊಂಡ ಆ ಶಿಶುವು, ತನ್ನ ಚಿನ್ನಾರಿ ಕೈಗಳಿಂದ ತಾಯಿಯ ಸ್ತನಗಳನ್ನು ಸ್ಪರ್ಶಿಸಿದನು. ಆ ಸ್ಪರ್ಶಮಾತ್ರದಿಂದಲೇ ತಾಯಿಯ ಸ್ತನಗಳಿಂದ ಹನ್ನೆರಡು ಧಾರೆಗಳಲ್ಲಿ ಮಧುವಿನಂತಹ ಕ್ಷೀರ ಸುರಿಯಲು ಆರಂಭವಾಯಿತು. ಆ ಹಾಲು ಭೂಮಿಯಮೇಲೆ ಬೀಳುತ್ತಿದ್ದಂತೆಯೇ ಆ ತಾಯಿ ದೃಷ್ಟಿದೋಷದ ಭಯದಿಂದ, ಮಗುವನ್ನು ಉಡಿಯಲ್ಲಿ ತೆಗೆದುಕೊಂಡು ಅದಕ್ಕೆ ಹಾಲೂಡಿಸಲು ಪ್ರಾರಂಭಿಸಿದಳು. ಆ ಮಗುವು ತಾಯಿಯ ತೊಡೆಯ ಮೇಲೆ ಮಲಗದೆ ಸದಾ ನೆಲದಮೇಲೆ ಮಲಗಿ ಆಡುತ್ತಿತ್ತು. ಹೀಗೆ ಬೆಳೆಯುತ್ತಿದ್ದ ಆ ಮಗು, ಮಾತನಾಡುವ ವಯಸ್ಸು ಬಂದರೂ, ಓಂಕಾರವೊಂದನ್ನು ಬಿಟ್ಟು ಮತ್ತಾವ ಮಾತನ್ನೂ ಆಡಲಿಲ್ಲ. ತಂದೆತಾಯಿಗಳು ಇದರಿಂದ ಬಹಳ ಖಿನ್ನರಾಗಿ ಎಷ್ಟೇ ಪ್ರಯತ್ನಮಾಡಿದರೂ ಆ ಮಗುವು, ಅವರ ಮಾತುಗಳನ್ನು ಕೇಳಿಸಿಕೊಂಡು ಓಂಕಾರವನ್ನು ಹೇಳುತ್ತಿತ್ತೇ ಹೊರತು, ಮತ್ತಾವ ಮಾತನ್ನೂ ಆಡುತ್ತಿರಲಿಲ್ಲ. ಇವನು ಮೂಗನಾಗಿಹೋಗುತ್ತಾನೇನೋ ಎಂಬ ಭಯ ತಂದೆತಾಯಿಗಳನ್ನು ಕಾಡಿತು. ಇದಕ್ಕೆ ಕಾರಣವೇನಿರಬಹುದೆಂದು ಜ್ಯೋತಿಷಿಗಳನ್ನು ಕೇಳಲು ಅವರು, "ಕುಲದೇವತೆಯ ಪೂಜೆ ಮಾಡಿ, ಶನಿವಾರ ಭಾನುವಾರಗಳಲ್ಲಿ ಅಶ್ವತ್ಥದ ಎಲೆಯಮೇಲೆ ಊಟ ಮಾಡಿಸಿ" ಎಂದರು. ಕೆಲವರು ಅವನನ್ನು ಹೆಸರಿಟ್ಟು ಕರೆದು ಮಾತನಾಡಿಸಿ ಎಂದರು. ಯಾರು ಏನು ಹೇಳಿದರೂ ಆ ತಂದೆತಾಯಿಗಳು ಅದನ್ನೆಲ್ಲಾ ಮಾಡುತ್ತಿದ್ದರು. ಅದೆಲ್ಲವನ್ನೂ ಕೇಳಿಸಿಕೊಂಡ ನರಹರಿ ಮಾತ್ರ ಏನೂ ಹೇಳದೆ ಪ್ರಣವೋಚ್ಚಾರ ಮಾಡುತ್ತಿದ್ದನು. ಅದನ್ನು ಕೇಳಿದವರೆಲ್ಲ ಆಶ್ಚರ್ಯಪಟ್ಟು, "ಇವನು ಕಿವುಡನಲ್ಲ. ಎಲ್ಲರೂ ಹೇಳಿದ್ದನ್ನು ಕೇಳಿಸಿಕೊಂಡರೂ ಮಾತನಾಡುತ್ತಿಲ್ಲ. ಅದಕ್ಕೆ ಕಾರಣವೇನೋ ತಿಳಿಯುತ್ತಿಲ್ಲ" ಎಂದರು. ಈ ರೀತಿಯಲ್ಲಿ ಆ ಹುಡುಗನಿಗೆ ಏಳು ವರ್ಷವಾಯಿತು. ಆದರೂ ಮಾತನಾಡದೇ ಇದ್ದ ಆ ಬಾಲಕನನ್ನು ಕಂಡು ಆ ಜನನಿಜನಕರು, "ಇದು ನಮ್ಮ ದುರದೃಷ್ಟ. ಈ ಮೂಕ ಬಾಲಕ ಉಪನಯನಯೋಗ್ಯನಾಗಿದ್ದಾನೆ. ಆದರೆ ಅವನಿಗೆ ಹೇಗೆ ಮುಂಜಿಮಾಡುವುದು?" ಎಂದು ಯೋಚಿಸುತ್ತಾ, ಬ್ರಾಹ್ಮಣ ಪಂಡಿತರನ್ನು ಕೇಳಿದರು. ಅವರು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದಾನಾದ್ದರಿಂದ ಎಂಟುವರ್ಷವಾದ ಮೇಲೆ ಮುಂಜಿಮಾಡಿ ಎಂದು ಹೇಳಿದರು. ಈ ಮೂಕ ಬಾಲಕನಿಗೆ ಬ್ರಹ್ಮೋಪದೇಶ ಮಾಡುವುದು ಹೇಗೆ ಎಂದು ಅಂಬ ಮಾಧವರು ಚಿಂತಿಸುತ್ತಿದ್ದರು. "ಮಹಾದೇವನನ್ನು ಆರಾಧಿಸಿದೆವು. ವಿಶೇಷವಾಗಿ ತ್ರಯೋದಶಿಯಂದು ಶಿವಪೂಜಾವ್ರತ ಮಾಡಿದೆವು. ಅವೆಲ್ಲವೂ ವ್ಯರ್ಥವಾಯಿತೇ? ಸುಗುಣನಾದ ಮಗನಾಗುತ್ತಾನೆಂದು ಶಿವ ಅನುಗ್ರಹಿಸಿದ್ದನು. ಆದರೆ ಈ ಬಾಲಕ ಮಾತೇ ಆಡುವುದಿಲ್ಲ. ಈಗೇನು ಮಾಡಬೇಕು? ನಾವು ಈ ಬಾಲಕನೊಬ್ಬನೇ ನಮಗೆ ಆಸರೆ ಎಂದು ನಂಬಿ, ಬೇರೆ ಏನನ್ನೂ ಕಾಣಲಿಲ್ಲ. ಇವನು ನಮ್ಮನ್ನು ವೃದ್ಧಾಪ್ಯದಲ್ಲಿ ಹೇಗೆ ರಕ್ಷಿಸುತ್ತಾನೆ? ಇವನು ಹೀಗಾಗಿರುವುದರಿಂದ ನಮ್ಮ ಕೋರಿಕೆಗಳು ತೀರಲಿಲ್ಲ. ಶನಿತ್ರಯೋದಶಿಯಂದು ಅರ್ಚಿಸಲ್ಪಟ್ಟ ಆ ಶಿವ ನಮಗೆ ಇಂತಹ ವರವನ್ನು ಕೊಟ್ಟನೇ?" ಎಂದು ನಾನಾಪ್ರಕಾರವಾಗಿ ದುಃಖಿಸುತ್ತಿದ್ದ, ಆ ತಂದೆತಾಯಿಗಳನ್ನು ಆ ಪಶುಬಾಲಕ ಸಮೀಪಿಸಿ, ಅವರನ್ನು ಸಂಜ್ಞೆಗಳಿಂದ ಸಮಾಧಾನಪಡಿಸಿದನು. ಆದರೂ ತಾಯಿಯಾದ ಅಂಬ ಇನ್ನೂ ದುಃಖಿಸುತ್ತಿರಲು, ಆ ಬಾಲಕ ಒಂದು ಲೋಹದ ತುಂಡನ್ನು ತಂದು ಅದನ್ನು ಸ್ಪರ್ಶಮಾತ್ರದಿಂದಲೇ ಚಿನ್ನವನ್ನಾಗಿ ಮಾಡಿ, ತಾಯಿಗೆ ಕೊಟ್ಟ. ಅದನ್ನು ಕಂಡ ಅಂಬ ಆಶ್ಚರ್ಯಪಟ್ಟು, ತನ್ನ ಗಂಡನನ್ನು ಕರೆದು ಆ ಚಿನ್ನದ ತುಂಡನ್ನು ತೋರಿಸಿದಳು. ಅವರು ಇನ್ನೊಂದು ಚೂರು ಲೋಹವನ್ನು ತಂದು ಅವನ ಕೈಲಿಟ್ಟರು. ಅದು ಕೂಡಾ ಚಿನ್ನವಾಯಿತು. ಹೀಗೆ ಮನೆಯಲ್ಲಿ ಸ್ವರ್ಣಾಭಿವೃದ್ಧಿಯನ್ನು ಕಂಡ ಅವರು, ಆ ಬಾಲಕ ಅವತಾರಪುರುಷನೆಂದು ಅವನಲ್ಲಿ ಹೆಚ್ಚಿನ ವಿಶ್ವಾಸ ತೋರಿದರು. ಆ ಬಾಲಕನನ್ನು ತಬ್ಬಿಕೊಂಡು ಅಂಬ, "ತಂದೆ, ನರಹರಿ, ನೀನು ದಯಾಳು. ಕುಲದೀಪಕ. ನಮಗೆ ಸಕಲ ಸುಖಗಳನ್ನೂ ಕೊಟ್ಟಿದ್ದೀಯೆ. ಆದರೂ ನಿನ್ನ ಈ ಮೌನಕ್ಕೆ ಕಾರಣವೇನು? ಮಾಯಾಮೋಹಿತರಾಗಿ, ಅಜ್ಞಾನವೆಂಬ ಕತ್ತಲೆಯಲ್ಲಿ ಬಿದ್ದಿರುವ ನಮ್ಮ ಕೋರಿಕೆಯನ್ನು ಮನ್ನಿಸಿ, ನಿನ್ನ ಅಮೃತತುಲ್ಯವಾದ ಮಾತುಗಳಿಂದ ನಮ್ಮನ್ನು ಸಂತೋಷಗೊಳಿಸು" ಎಂದು ಪ್ರಾರ್ಥಿಸಿದಳು. ಅದಕ್ಕೆ ನರಹರಿ, "ಮೌಂಜಿ ಬಂಧನ ಉಪವೀತಧಾರಣೆಗಳಾದ ಮೇಲೆ ನಿನ್ನೊಡನೆಯೇ ಮೊದಲ ಮಾತು ಆಡುತ್ತೇನೆ" ಎಂದು ತಾಯಿಗೆ ಸಂಜ್ಞಾಪೂರ್ವಕವಾಗಿ ತಿಳಿಸಿದನು.

ತಕ್ಷಣವೇ ಮಾಧವ ವಿದ್ವಾಂಸರಾದ ಜ್ಯೋತಿಷ್ಕರನ್ನು ಕರೆಸಿ, ಆ ಹುಡುಗನ ಉಪನಯನ ಮುಹೂರ್ತವನ್ನು ನಿಶ್ಚಯಮಾಡಿದನು. ಎಲ್ಲ ಏರ್ಪಾಡುಗಳನ್ನೂ ಮಾಡಿಕೊಂಡು, ಬಂಧುಬಾಂಧವರನ್ನೆಲ್ಲಾ ಆಹ್ವಾನಿಸಿ, ಬ್ರಾಹ್ಮಣೋತ್ತರಮನ್ನು ಕರೆಸಿ, ಮಂಟಪಾದಿಗಳನ್ನು ನಿರ್ಮಿಸಿ, ಎಲ್ಲವನ್ನೂ ಸಿದ್ಧಪಡಿಸಿದನು. ನೆಂಟರಿಷ್ಟರೆಲ್ಲರೂ ಸೇರಿದರು. ಮಾಡಿದ್ದ ಏರ್ಪಾಡುಗಳನ್ನು ಕಂಡು ಎಲ್ಲರೂ ಸಂತೋಷಗೊಂಡರು. ಅಷ್ಟೊಂದು ಅದ್ಧೂರಿಯಾಗಿ ಎಲ್ಲವನ್ನೂ ಮಾಡುತ್ತಿರುವ ಮಾಧವನನ್ನು ಕಂಡ ಆ ಊರಿನ ಜನ, "ಹುಡುಗ ಮೂಕನಲ್ಲವೇ? ಅವನ ತಂದೆ ಭ್ರಾಂತಿಯಿಂದ ಇಷ್ಟೆಲ್ಲಾ ಖರ್ಚು ವ್ಯರ್ಥವಾಗಿ ಮಾಡುತ್ತಿದ್ದಾನೆ. ಅವನ ಮಗ ಬ್ರಹ್ಮೋಪದೇಶವನ್ನು ಹೇಗೆ ಪಡೆಯಬಲ್ಲ? ಅವನ ತಂದೆ ಅವನಿಗೆ ಸಾವಿತ್ರಿ ಮಂತ್ರವನ್ನು ಹೇಗೆ ಉಪದೇಶಿಸಬಲ್ಲ?" ಎಂದು ನಾನಾವಿಧವಾಗಿ ಮಾತನಾಡಿಕೊಳ್ಳುತ್ತಿದ್ದರು. ಕೆಲವರು, "ಅವನಿಗೆ ಮಂತ್ರೋಪದೇಶವಾದರೆಷ್ಟು ಬಿಟ್ಟರೆಷ್ಟು? ಅದರಿಂದ ನಮಗೇನಾಗಬೇಕಾಗಿದೆ? ನಮಗೆ ಮೃಷ್ಟಾನ್ನ ಭೋಜನ, ದಾನ ದಕ್ಷಿಣೆಗಳು ಹೇರಳವಾಗಿ ಸಿಕ್ಕುವುದಲ್ಲವೇ? ಅಷ್ಟೇ ಸಾಕು" ಎನ್ನುತ್ತಿದ್ದರು. ಹೀಗೆ ಅಲ್ಲಿ ಸೇರಿದ್ದ ಅನೇಕರು ಅನೇಕ ರೀತಿಯಾಗಿ ಮಾತನಾಡಿಕೊಳ್ಳುತ್ತಿದ್ದರು. ಆದರೆ, "ಈ ಬಾಲಕ ದೈವಾಂಶಸಂಭೂತನು" ಎಂಬ ಸದ್ಬುದ್ಧಿಯಿಂದ ಅವನ ತಂದೆ ತಾಯಿಗಳು, ಶಾಸ್ತ್ರೋಕ್ತವಾಗಿ ಎಲ್ಲ ವಿಧಿಗಳನ್ನೂ ಮುಗಿಸಿದರು. ನಂತರ, ಅವನ ತಂದೆ ವಟುವನ್ನು, ತಾಯಿಯೊಡನೆ ಭೋಜನ ಮಾಡೆಂದು ಹೇಳಿದನು. ತಂದೆಯ ಮಾತಿನಂತೆ, ವಟುವು ತಾಯಿಯೊಡನೆ ಭೋಜನ ಮುಗಿಸಿ, ತಾಯಿಯ ಆಣತಿಯಂತೆ ಮೌಂಜಿಧಾರಣೆ ಮಾಡಿ, ಮತ್ತೆ ತಂದೆಯ ಬಳಿಗೆ ಬಳಿಗೆ ಬಂದನು. ಸುಮುಹೂರ್ತದಲ್ಲಿ ಯಥಾವಿಧಿಯಾಗಿ ಉಪವೀತ ಧಾರಣೆ ಮಾಡಿ, ಮಂತ್ರೋಪದೇಶದ ಮೂಲಕ ಮೌಂಜಿಯನ್ನು ಕಟಿಯಲ್ಲಿ ಬಂಧಿಸಿದನು. ವಟುವು ಗಾಯತ್ರಿ ಉಪದೇಶವನ್ನು ಪಡೆದರೂ, ಮಂತ್ರವನ್ನು ಮೌನವಾಗಿ ಜಪಿಸಿದನೇ ಹೊರತು, ಒಂದು ಮಾತೂ ಅವನ ಬಾಯಿಂದ ಈಚೆಗೆ ಬರಲಿಲ್ಲ.

ತಾಯಿ, ಭಿಕ್ಷೆಯೊಡನೆ ಬಂದು, ಮಗನ ಮಾತುಗಳನ್ನು ಕೇಳುವ ಆಸೆಯಿಂದ, ಅವನನ್ನು ಅಶೀರ್ವದಿಸಿ, ಮೊದಲ ಭಿಕ್ಷೆಯನ್ನು ನೀಡಿದಳು. ಅದನ್ನು ಸ್ವೀಕರಿಸಿ, ವಟುವು, "ಅಗ್ನಿಮೀಳೇ....ಎಂದು ಪ್ರಾರಂಭಿಸಿ, ಋಗ್ವೇದವನ್ನು ಹೇಳಿದನು. ಮತ್ತೆ ತಾಯಿ ಎರಡನೆಯ ಭಿಕ್ಷೆ ನೀಡುತ್ತಲೂ, ಅವನು "ಇಷೇತ್ವಾ.....ಎಂದು ಪ್ರಾರಂಭಿಸಿ, ಯಜುರ್ವೇದವನ್ನು ಹೇಳಿದನು. ಅದನ್ನು ಕೇಳಿ ಜನರೆಲ್ಲಾ ಬೆರಗಾಗಿಹೋದರು. ತಾಯಿ ಮೂರನೆಯ ಭಿಕ್ಷೆ ಕೊಡಲು, ಅವನು "ಅಗ್ನ ಆಯಾಹಿ....ಎಂದು ಪ್ರಾರಂಭಿಸಿ ವೇದಪ್ರವರ್ತಕನಂತೆ ಸಾಮವೇದ ಗಾನಮಾಡಿದನು. ಆ ಸಮಾರಂಭದಲ್ಲಿ ನೆರೆದಿದ್ದ ಜನರೆಲ್ಲಾ, ಮೂಕವಿಸ್ಮಿತರಾಗಿ, "ಈ ಮೂಗ ಹೇಗೆ ವೇದಗಳನ್ನು ಹೇಳಿದನು?" ಎಂದು ದಂಗಾಗಿ ಹೋದರು."ಇವನು ನಿಜವಾಗಿಯೂ ಪರಮಾತ್ಮನೇ! ದೇವರ ಅವತಾರವೇ! ನರನಲ್ಲ. ಜಗದ್ಗುರುವು" ಎಂದು ಭಾವಿಸಿ, ಎಲ್ಲರೂ ಅವನಿಗೆ ನಮಸ್ಕರಿಸಿದರು. ಮಾಧವನು ಬಹಳ ಸಂತುಷ್ಟನಾದನು.

ವಟುವಾದ ನರಹರಿ ತಾಯಿಯ ಬಳಿಗೆ ಹೋಗಿ, ’ಅಮ್ಮ, ನೀನು ನನಗೆ ಭಿಕ್ಷೆಯನ್ನು ಗ್ರಹಿಸು ಎಂದು ಆಜ್ಞೆ ಕೊಟ್ಟೆ. ನಿನ್ನಮಾತು ಅಸತ್ಯವಾಗಬಾರದು. ನನಗೆ ಅನುಮತಿ ಕೊಡು. ನಾನು ಭಿಕ್ಷುವಾಗಿ, ಬ್ರಹ್ಮಚಾರಿಯಾಗಿ, ಗೃಹಸ್ಥರ ಮನೆಗಳಲ್ಲಿ ಭಿಕ್ಷೆಯೆತ್ತುತ್ತಾ, ವೇದಾಂತನಿರತನಾಗಿ ಲೋಕಾನುಗ್ರಹಕ್ಕಾಗಿ ಲೋಕಸಂಚಾರ ಮಾಡುತ್ತೇನೆ" ಎಂದನು. ಅದನ್ನು ಕೇಳಿದ ಅಂಬ, ದುಃಖದಿಂದ ಮೂರ್ಛಿತಳಾಗಿ ಕೆಳಗೆ ಬಿದ್ದಳು. ಒಂದುಕ್ಷಣಕಾಲ ಮೃತಪ್ರಾಯಳಾಗಿ ಕಂಡ ಅವಳು ಎದ್ದು, ಬಹು ದುಃಖದಿಂದ ಕಣ್ಣೀರು ಸುರಿಸುತ್ತಾ, ಮಗನನ್ನು ಮತ್ತೆ ಮತ್ತೆ ನೋಡುತ್ತಾ, "ಮಗು, ನೀನು ವೃದ್ಧಾಪ್ಯದಲ್ಲಿ ನಮ್ಮನ್ನು ರಕ್ಷಿಸುತ್ತೀಯೆ ಎಂದು ಬಹಳ ಆಸೆಯಿಂದಿದ್ದ ನಮ್ಮ ಆಸೆಯಲ್ಲ ಚೂರುಚೂರಾಗಿ ಹೋಯಿತು. ನೀನು ನಿನ್ನ ಶೈಶವದಲ್ಲಿ ಮೌನಿಯಾಗಿ ಒಂದು ಮಾತೂ ಆಡಲಿಲ್ಲ. ಇದುವರೆಗೂ ನಿನ್ನ ಮಾತುಗಳನ್ನೇ ಕೇಳಿರಲಿಲ್ಲ. ಈಗ ಮಾತನಾಡಿ ನಮಗೆ ಅಮೃತವನ್ನು ಕುಡಿಸಿದೆ. ನನ್ನ ಈಶ್ವರಪೂಜೆಯೆಲ್ಲಾ ಸಫಲವಾಯಿತು ಎಂದುಕೊಳ್ಳುತ್ತಿರುವಾಗಲೇ ನಿನ್ನಿಂದ ನಾನು ಕೇಳುತ್ತಿರುವುದೇನು?" ಎಂದು ಮುಂತಾಗಿ ಪ್ರಲಾಪಿಸುತ್ತಾ ಕೇಳಿದಳು.

ಆಗ ನರಹರಿ ತನ್ನ ತಾಯಿಯನ್ನು ಸಮಾಧಾನಗೊಳಿಸಲು, "ಅಮ್ಮಾ, ನನ್ನ ಮಾತು ಕೇಳು. ಬ್ರಹ್ಮಜ್ಞಾನಿಯಾದ ನೀನು ಹೀಗೆ ದುಃಖಿಸಬಾರದು. ಧರ್ಮ ರಕ್ಷಣೆಗಾಗಿ ನಾನು ಭೂಮಿಯಲ್ಲಿ ಅವತರಿಸಿದ್ದೇನೆ. ನಿನಗೆ ಇನ್ನೂ ನಾಲ್ಕು ಪುತ್ರರು ಜನಿಸುತ್ತಾರೆ. ಅವರೆಲ್ಲರೂ ನಿಮ್ಮ ಸೇವೆಯಲ್ಲಿರುತ್ತಾರೆ. ಹಿಂದಿನ ಜನ್ಮದಲ್ಲಿ ನೀನು ಶ್ರದ್ಧಾಭಕ್ತಿಗಳಿಂದ ಶಿವಪೂಜೆಯನ್ನು ಮಾಡಿದ್ದೀಯೆ" ಎಂದು ಆಕೆಯ ತಲೆಯಮೇಲೆ ಕೈಯಿಟ್ಟನು. ಆ ಕರಸ್ಪರ್ಶದಿಂದ ಆಕೆಗೆ ಪೂರ್ವಜನ್ಮ ಸ್ಮೃತಿಗೆ ಬಂದು, ಆ ಜನ್ಮದಲ್ಲಿ ನಡೆದ ವಿಷಯವೆಲ್ಲಾ ಗೋಚರವಾಯಿತು. ತನ್ನ ಮಗನೇ ಹಿಂದಿನ ಶ್ರೀಪಾದ ಶ್ರೀವಲ್ಲಭರೆಂದು ಆಕೆ ಗುರುತಿಸಿ, ಅವನ ಪಾದಾಭಿವಂದನೆ ಮಾಡಿದಳು. ನರಹರಿ ತಾಯಿಯನ್ನು ಹಿಡಿದು ಮೇಲಕ್ಕೆಬ್ಬಿಸಿ, "ಅಮ್ಮಾ ನನ್ನ ಮಾತು ಕೇಳು. ಈ ವಿಷಯವನ್ನು ರಹಸ್ಯವಾಗಿಡು. ನಾನು ಈ ಸಂಸಾರದಲ್ಲಿ ಇರುವುದಿಲ್ಲ. ನನ್ನನ್ನು ಸನ್ಯಾಸಿಯೆಂದು ತಿಳಿದುಕೋ. ಆದ್ದರಿಂದ ನಾನು ತೀರ್ಥಯಾತ್ರೆಗೆ ಹೋಗಲು ಅನುಮತಿ ಕೊಡು" ಎಂದು ಹೇಳಿದನು.

ಸ್ವಲ್ಪಕಾಲ ಮೌನವಾಗಿದ್ದ ಅಂಬ, "ನೀನು ನಮ್ಮನ್ನು ಬಿಟ್ಟು ಹೊರಟುಹೋದರೆ ನಾನು ಮಗನಿಲ್ಲದವಳಾಗುತ್ತೇನೆ. ಮಗನಿಲ್ಲದೆ ನಾನು ಹೇಗೆ ಜೀವಿಸಲಿ? ನಿನಗಿದು ಧರ್ಮವಲ್ಲ. ಬಾಲ್ಯದಿಂದಲೇ ತಪೋವೃತ್ತಿ ಧರ್ಮವೆಂದು ಹೇಗೆ ಹೇಳುತ್ತೀಯೆ? ಗುರುಕುಲದಲ್ಲಿ ಬ್ರಹ್ಮಚರ್ಯೆ ಮಾಡುವುದೇ ನಿನ್ನ ಧರ್ಮ. ಹನ್ನೆರಡು ವರ್ಷ ಬ್ರಹ್ಮಚಾರಿಯಾಗಿದ್ದು ಆ ನಂತರ ಗೃಹಸ್ಥನಾಗಿ, ಪುಣ್ಯಕಾರ್ಯಗಳನ್ನೆಸಗಬೇಕು. ಗೃಹಸ್ಥಾಶ್ರಮವು ಬಹಳ ಮುಖ್ಯವಾದದ್ದು. ಅದರ ಆಚರಣೆಯಿಂದಲೇ ನರನು ಮುಂದಿನ ಆಶ್ರಮಗಳಿಗೆ ಸಮರ್ಥನಾಗುತ್ತಾನೆ. ಅದಾದನಂತರ ಈಷಣತ್ರಯಗಳನ್ನು ಬಿಟ್ಟು ಪರಿವ್ರಾಜಕನಾಗಬೇಕು. ಅದು ಧರ್ಮ. ಋಷಿಋಣ ತೀರಿಸಲು ವೇದಾಧ್ಯಯನ. ಆಮೇಲೆ ಅನುರೂಪಳಾದ ಕನ್ಯೆಯನ್ನು ವಿವಾಹವಾಗಿ. ಗೃಹಸ್ಥನಾಗಿ, ಪುತ್ರವಂತನಾಗಿ, ಪಿತೃಋಣವನ್ನು ತೀರಿಸಿ, ಯಜ್ಞ ಯಾಗಾದಿಗಳನ್ನು ಮಾಡಿ ಸನ್ಯಾಸಿಯಾಗಬೇಕು. ಬುದ್ಧಿವಂತನಾದವನು ಹಾಗೆ ಮಾಡದೆ ಮೊದಲೇ ಸನ್ಯಾಸಿಯಾದರೆ ಪತನವಾಗುತ್ತಾನೆ. ಇಂದ್ರಿಯವಾಸನೆಗಳು ತೃಪ್ತಿಗೊಂಡಮೇಲೆ ಸನ್ಯಾಸಿಯಾಗಬೇಕು" ಎಂದು ಹೇಳಿದಳು. ಅದನ್ನು ಕೇಳಿ ಶ್ರೀಗುರುವು ನಗುತ್ತಾ ಅವಳಿಗೆ ತತ್ತ್ವೋಪದೇಶ ಮಾಡಿದನು. 

ಇಲ್ಲಿಗೆ ಹನ್ನೊಂದನೆಯ ಅಧ್ಯಾಯ ಮುಗಿಯಿತು.



||ಶ್ರೀ ಗುರು ಚರಿತ್ರೆ - ಹತ್ತನೆಯ ಅಧ್ಯಾಯ||

ನಾಮಧಾರಕನು, "ಸ್ವಾಮಿ ಕುರುವರಪುರದಲ್ಲಿ ಶ್ರೀಪಾದರು ಮತ್ತೊಂದು ಅವತಾರವೆತ್ತಲುದ್ಯುಕ್ತರಾದರು ಎಂದು ಹೇಳಿದಿರಿ. ಹಾಗಿದ್ದರೆ ಅವರು ಈಗ ಕುರವರಪುರದಲ್ಲಿ ಇಲ್ಲವೇ? ಅವರ ಮತ್ತೊಂದು ಅವತಾರವು ಎಲ್ಲಿ, ಹೇಗಾಯಿತು? ಎಂಬುದನ್ನು ವಿಸ್ತರಿಸಿ ಹೇಳುವ ಕೃಪೆಮಾಡಿ " ಎಂದು ಕೇಳಿದನು. ಅದಕ್ಕೆ ಶ್ರೀಪಾದರು ಹೇಳಿದರು. "ಅಯ್ಯಾ, ನಾಮಧಾರಕ, ಶ್ರೀಪಾದರ ಮಹಿಮೆಯನ್ನು ಹೇಗೆ ತಾನೇ ವರ್ಣಿಸಬಲ್ಲೆ? ಅವರು ವಿಶ್ವವ್ಯಾಪಿ. ಪರಮಾತ್ಮ ಸ್ವರೂಪರು. ನಾನಾ ರೂಪ ಧರಿಸಿದ ನಾರಾಯಣನೇ ಅವರು. ಕಾರ್ಯಾರ್ಥವಾಗಿ ಬೇರೆಡೆ ಅವತರಿಸಿದರೂ, ಅವರು ಕುರುವರಪುರದಲ್ಲಿ ಗುಪ್ತವಾಗಿದ್ದುಕೊಂಡು ಭಕ್ತರ ಅಭೀಷ್ಟಗಳನ್ನು ನಡೆಸಿಕೊಡುತ್ತಿದ್ದಾರೆ. ಭಾರ್ಗವ ರಾಮನು ಚಿರಂಜೀವಿಯಾಗಿ ಈಗಲೂ ಇದ್ದಾನೆ ಎಂದು ಕೇಳಿದ್ದೀಯಲ್ಲವೆ? ಅದೇ ರೀತಿಯಲ್ಲಿ ಶ್ರೀಪಾದರು ಅಲ್ಲಿ ಈಗಲೂ ಇದ್ದಾರೆ.

ಕುರುವರಪುರ ತ್ರಿಮೂರ್ತಿ ನಿವಾಸ ಸ್ಥಾನ. ಆ ಕ್ಷೇತ್ರದರ್ಶನ ಮಾಡುವುದರಿಂದ ಮಾನವರ ಚಿಂತೆಗಳೆಲ್ಲ ತೀರಿಹೋಗುತ್ತವೆ. ಶ್ರೀಗುರುವಿನ ವಾಸಸ್ಥಾನವೇ ಕಾಮಧೇನು! ಅಂತಹ ವಾಸಸ್ಥಾನ ಮಹಿಮೆಯನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ನೀನು ಗುರುವಿನಲ್ಲಿ ಧೃಢಭಕ್ತಿಯುಳ್ಳವನು. ಋಜುಮಾರ್ಗವನ್ನು ತೋರಿಸಿ ಎಂದು ಕೇಳುತ್ತಿದ್ದೀಯೆ. ನಿನ್ನಂತಹ ಭಕ್ತರನ್ನು ಉಪೇಕ್ಷಿಸಬಾರದು. ಧೃಢಭಕ್ತಿಯುಳ್ಳವನು ಇಹದಲ್ಲಿ ಸುಖವನ್ನನುಭವಿಸಿ, ಪರದಲ್ಲೂ ಉದ್ಧರಿಸಲ್ಪಡುತ್ತಾನೆ" ಎಂದರು. ಅದಕ್ಕೆ ನಾಮಧಾರಕ, "ಸ್ವಾಮಿ, ಅವರು ಈಗಲೂ ಕುರುವರಪುರದಲ್ಲಿ ಇದ್ದಾರೆ ಎಂಬುದಕ್ಕೆ ನಿದರ್ಶನಗಳಿವೆಯೇ?" ಎಂದು ಕೇಳಿದನು.

ಅದಕ್ಕೆ ಸಿದ್ಧಮುನಿ, "ಇದಕ್ಕೊಂದು ನಿದರ್ಶನವಾಗಿ ಅಲ್ಲಿ ನಡೆದ ಘಟನೆಯೊಂದನ್ನು ಹೇಳುತ್ತೇನೆ. ಸಾವಧಾನವಾಗಿ ಕೇಳು. ಕಾಶ್ಯಪಗೋತ್ರಕ್ಕೆಸೇರಿದ, ಆಚಾರವಂತ, ಸುಶೀಲ, ವಲ್ಲಭೇಶನೆಂಬ ಬ್ರಾಹ್ಮಣೊಬ್ಬನಿದ್ದನು. ವ್ಯಾಪಾರವನ್ನು ವೃತ್ತಿಯಾಗಿ ಅವಲಂಬಿಸಿದ್ದ ಆ ಬ್ರಾಹ್ಮಣ, ಪ್ರತಿವರ್ಷವೂ ಶ್ರೀಪಾದರು ಅಂತರ್ಧಾನರಾದಮೇಲೂ, ಅವರ ದರ್ಶನಕ್ಕೆ ಕುರುವರಪುರಕ್ಕೆ ಬರುತ್ತಿದ್ದನು. ಒಂದುಸಲ ಅವನು ವ್ಯಾಪಾರಕ್ಕೆ ಹೊರಡುವ ಮುಂಚೆ, ತನ್ನ ಕಾರ್ಯ ಸಿದ್ಧಿಯಾದರೆ ಕುರುವರಪುರಕ್ಕೆ ಬಂದು ಒಂದು ಸಾವಿರ ಬ್ರಾಹ್ಮಣರಿಗೆ ಊಟವಿಡುತ್ತೇನೆ ಎಂದು ಸಂಕಲ್ಪಮಾಡಿಕೊಂಡು ವ್ಯಾಪಾರಕ್ಕಾಗಿ ಹೊರಟನು. ಶ್ರೀಪಾದಶ್ರೀವಲ್ಲಭರ ಧ್ಯಾನಮಾಡುತ್ತಾ ಅವನು ಹೋದಕಡೆಯಲ್ಲೆಲ್ಲಾ ಅವನಿಗೆ ಬಹಳ ಲಾಭವಾಯಿತು. ತನ್ನ ಊಹೆಗೂ ಮೀರಿ, ಅವನೆಂದುಕೊಂಡದ್ದಕ್ಕಿಂತ ಹೆಚ್ಚಾದ ಲಾಭ ದೊರೆಯಿತು. ಊರಿಗೆ ಹಿಂತಿರುಗಿದಮೇಲೆ, ತಾನು ಮುಂಚೆ ಸಂಕಲ್ಪಮಾಡಿಕೊಂಡಿದ್ದಂತೆ ಅವನು ಬ್ರಾಹ್ಮಣ ಭೋಜನಕ್ಕೆ ಬೇಕಾದ ಹಣವನ್ನು ತೆಗೆದುಕೊಂಡು ಕುರುವರಪುರಕ್ಕೆ ಹೊರಟನು.

ದಾರಿಯಲ್ಲಿ, ಅವನ ಹತ್ತಿರ ಬಹಳ ಹಣವಿದೆಯೆಂಬುದನ್ನು ಹೇಗೋ ಅರಿತುಕೊಂಡ ಕೆಲವರು ಕಳ್ಳರು, ತಾವೂ ಕುರುವರಪುರಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ, ಅವನ ಸ್ನೇಹ ಸಂಪಾದಿಸಿ, ಅವನ ಜೊತೆಗಾರರಾದರು. ಅವರ ಮಾತುಗಳನ್ನು ನಂಬಿದ ವಲ್ಲಭೇಶ ಅವರೊಡನೆ ಪ್ರಯಾಣ ಮುಂದುವರೆಸಿದ. ಸ್ವಲ್ಪ ಕಾಲ ಹಾಗೆ ಪ್ರಯಾಣಮಾಡುತ್ತಾ, ಅವನಲ್ಲಿ ನಂಬಿಕೆ ಹುಟ್ಟಿಸಿದ ಆ ಕಳ್ಳರು, ದಾರಿಯಲ್ಲಿ ನಿರ್ಜನಪ್ರದೇಶವೊಂದನ್ನು ಸೇರಿದಾಗ, ಅವನ ತಲೆಕಡಿದು ಅವನಲ್ಲಿದ್ದ ಹಣವನ್ನೆಲ್ಲಾ ಅಪಹರಿಸಿದರು. ವಲ್ಲಭೇಶ ಸಾಯುವುದಕ್ಕೆ ಮುಂಚೆ, ಶರಣ್ಯರಕ್ಷಕನೂ, ಭಕ್ತವತ್ಸಲನೂ ಆದ ಶ್ರೀಪಾದರನ್ನು ನೆನಸಿಕೊಂಡನು. ಆ ಪ್ರಭುವು ತಕ್ಷಣವೇ ಅಲ್ಲಿ ತ್ರಿಶೂಲ ಖಡ್ಗ ಧಾರಿಯಾಗಿ ಕಾಣಿಸಿಕೊಂಡು, ಆ ಕಳ್ಳರನ್ನು ಸಂಹರಿಸಿದನು. ಅವರಲ್ಲಿ ಒಬ್ಬ, ಭಕ್ತರಕ್ಷಕನಾದ ಶ್ರೀಪಾದರ ಪಾದಗಳನ್ನು ಹಿಡಿದು, ಅವರಿಗೆ ಶರಣಾಗಿ, "ಸ್ವಾಮಿ, ನಾನು ನಿರಪರಾಧಿ. ನನಗೆ ಕಳ್ಳತನವೆಂದರೇನು ಎಂದು ತಿಳಿಯದು. ಅಜ್ಞಾನದಿಂದಾಗಿ ನಾನು ಈ ಕಳ್ಳರ ಜೊತೆ ಸೇರಿದೆ. ನನ್ನನ್ನು ಮನ್ನಿಸಿ" ಎಂದು ಬೇಡಿಕೊಂಡ. ಶ್ರೀಪಾದರು ಅವನಿಗೆ ಅಭಯನೀಡಿ, "ಈ ಭಸ್ಮವನ್ನು ತೆಗೆದುಕೊಂಡು ಆ ಸತ್ತ ಬ್ರಾಹ್ಮಣನ ಮೇಲೆ ಚುಮುಕಿಸಿ, ಅವನ ಶಿರವನ್ನು ಶರೀರಕ್ಕೆ ಜೋಡಿಸು" ಎಂದು ಆಜ್ಞಾಪಿಸಿದರು. ಅವನು ಶ್ರೀಪಾದರು ಹೇಳಿದಂತೆ ಮಾಡಲು, ಅವರು ಆ ಮೃತದೇಹವನ್ನು ಒಮ್ಮೆ ತಮ್ಮ ಅಮೃತದೃಷ್ಟಿಯಿಂದ ನೋಡಿ, ಅಂತರ್ಧಾನರಾದರು. ಅವರ ದೃಷ್ಟಿ ತಾಕುತ್ತಲೇ ವಲ್ಲಭೇಶನು ಪುನರ್ಜೀವಿತನಾದನು.

ಇಷ್ಟೆಲ್ಲಾ ಆಗುವುದರಲ್ಲಿ ಸೂರ್ಯೋದಯವಾಯಿತು. ಕಳ್ಳರಲ್ಲಿ ಉಳಿದಿದ್ದವನೊಬ್ಬನು ಮಾತ್ರ ಅಲ್ಲಿದ್ದನು. ನಿದ್ರೆಯಿಂದೆದ್ದವನಂತೆ ಎಚ್ಚೆತ್ತು ಕುಳಿತ ವಲ್ಲಭೇಶನು, ಸುತ್ತಲೂ ನೋಡಿ, ಅಲ್ಲಿದ್ದ ಆ ಉಳಿದವನನ್ನು, "ಅಯ್ಯಾ, ಇವರನ್ನು ಯಾರು ಕೊಂದರು? ನೀನು ನನ್ನನ್ನೇಕೆ ಕಾಪಾಡುತ್ತಿದ್ದೀಯೆ?" ಎಂದು ಕೇಳಲು, ಆವನು "ಅಯ್ಯಾ, ಬ್ರಾಹ್ಮಣೋತ್ತಮ, ಈಗ ಇಲ್ಲೊಂದು ವಿಚಿತ್ರ ಘಟನೆ ನಡೆಯಿತು. ನಮ್ಮ ಜೊತೆಯಲ್ಲಿ ಬಂದ ಇವರೆಲ್ಲರೂ ಕಳ್ಳರು. ನಿನ್ನನ್ನು ಕೊಂದು ನಿನ್ನ ಹಣವನ್ನು ಅಪಹರಿಸಿದರು. ಅಷ್ಟರಲ್ಲಿ ಒಬ್ಬ ತಪಸ್ವಿ ಬಂದು ಆ ಕಳ್ಳರನ್ನು ತನ್ನ ತ್ರಿಶೂಲದಿಂದ ತಿವಿದು ಕೊಂದನು. ಆ ತಪಸ್ವಿ ಯಾರೋ ಗೊತ್ತಿಲ್ಲ. ಅವನು ನಿನ್ನನ್ನು ಮಂತ್ರ ಭಸ್ಮದಿಂದ ಜೀವಿಸುವಂತೆ ಮಾಡಿ, ನನ್ನನ್ನು ನಿನಗೆ ಕಾವಲಾಗಿಟ್ಟು ಹೋದನು. ಇದುವರೆಗೂ ಇಲ್ಲೇ ಇದ್ದ ಆತ ಈಗತಾನೇ ಅದೃಶ್ಯನಾದನು. ಆ ತಪಸ್ವಿ ತ್ರಿಪುರಾಂತಕನಾದ ಪರಮೇಶ್ವರನೇ ಇರಬೇಕು. ನಿನ್ನ ಪ್ರಾಣ ರಕ್ಷಣೆ ಮಾಡಲು, ಜಟಾಧಾರಿಯಾಗಿ, ಭಸ್ಮಲಿಪ್ತನಾಗಿ, ತ್ರಿಶೂಲ ಹಿಡಿದು ಬಂದನು. ನೀನು ಮಹಾಭಕ್ತನೆಂದು ತೋರುತ್ತಿದೆ" ಎಂದು ಹೇಳಿದನು.

ಅವನ ಮಾತುಗಳನ್ನು ಕೇಳಿದ ವಲ್ಲಭೇಶ, ಬಹು ಖಿನ್ನನಾಗಿ, ಶ್ರೀಪಾದರ ದರ್ಶನ ಭಾಗ್ಯ ತನಗಾಗಲಿಲ್ಲವೆಂದು ಬಹು ದುಃಖಪಟ್ಟನು. ಕಳ್ಳರು ಅಪಹರಿಸಿದ್ದ ಹಣವನ್ನೆಲ್ಲಾ ತೆಗೆದುಕೊಂಡು, ಗುರುಸ್ಥಾನವಾದ ಕುರುವರಪುರಕ್ಕೆ ಹೊರಟನು. ಅಲ್ಲಿ ವಲ್ಲಭೇಶ, ಶ್ರೀಪಾದರ ಪಾದುಕೆಗಳಿಗೆ ನಾನಾವಿಧವಾದ ಪೂಜೋಪಚಾರಗಳನ್ನು ಮಾಡಿ, ತಾನು ಸಂಕಲ್ಪಿಸಿದ್ದ ಸಾವಿರ ಬ್ರಾಹ್ಮಣರಿಗೆ ಬದಲಾಗಿ ನಾಲ್ಕು ಸಾವಿರ ಬ್ರಾಹ್ಮಣರಿಗೆ ಭೋಜನವಿತ್ತನು.

ಅದೇ ರೀತಿಯಲ್ಲಿ ಕುರುವರಪುರದಲ್ಲಿ ಅನೇಕ ಸದ್ಭಕ್ತರು ಶ್ರೀಪಾದರ ಪಾದುಕೆಗಳಿಗೆ ಪೂಜಾರ್ಚನೆಗಳನ್ನು ಮಾಡಿ ಸಿದ್ಧ ಸಂಕಲ್ಪರಾದರು. ಕುರುವರಪುರದಲ್ಲಿ ಶ್ರೀಪಾದರ ಕೀರ್ತಿ ಈ ರೀತಿಯಲ್ಲಿ ಪ್ರಖ್ಯಾತವಾಯಿತು. ನಾಮಧಾರಕ, ಅದೃಶ್ಯರೂಪದಲ್ಲಿ ಶ್ರೀಪಾದರು, ಅಲ್ಲಿ ನೆಲೆಸಿದ್ದಾರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆ ಸರ್ವಾಂತರ್ಯಾಮಿಯಾದ ನಾರಾಯಣ, ಇಲ್ಲಿದ್ದುಕೊಂಡೂ, ಬೇರೆಡೆಯಲ್ಲಿ ಅವತರಿಸಬಲ್ಲನು. ಶ್ರೀಪಾದರು, ಕುರುವರಪುರದಲ್ಲಿ ಲೋಕರ ದೃಷ್ಟಿಗೆ ಕಾಣದೇ ಹೋದರೂ, ಗುಪ್ತರೂಪದಲ್ಲಿ ಅಲ್ಲಿ ಸರ್ವಕಾಲದಲ್ಲೂ ಇದ್ದಾರೆ. ಇರುತ್ತಾರೆ. ಅವರ ನಂತರದ ಅವತಾರವೇ ಶ್ರೀ ನೃಸಿಂಹ ಸರಸ್ವತಿ ಯತಿಗಳು" 

ಇಲ್ಲಿಗೆ ಹತ್ತನೆಯ ಅಧ್ಯಾಯ ಮುಗಿಯಿತು.


Sunday, February 10, 2013

||ಶ್ರೀ ಗುರು ಚರಿತ್ರೆ - ಒಂಭತ್ತನೆಯ ಅಧ್ಯಾಯ||

ನಾಮಧಾರಕನು ಮತ್ತೆ ಪ್ರಣಾಮ ಮಾಡಿ, ಸಿದ್ಧಮುನಿಯನ್ನು, "ಶ್ರೀಪಾದರು ಕುರುವರಪುರದಲ್ಲಿದ್ದಾಗ ನಡೆದ ಕಥೆಯೊಂದನ್ನು ವಿಸ್ತಾರವಾಗಿ ಕೇಳಬೇಕೆಂದಿದ್ದೇನೆ" ಎನ್ನಲು, ಸಿದ್ಧರು ಹೇಳಿದರು. "ನಾಮಧಾರಕ, ಶ್ರೀಪಾದರು ಕುರುವರಪುರದಲ್ಲಿದ್ದಾಗ ನಡೆದ ಕಥೆಯೊಂದನ್ನು ಹೇಳುತ್ತೇನೆ. ಕೇಳು.

ಕುರುವರಪುರದಲ್ಲಿ ರಜಕನೊಬ್ಬನಿದ್ದನು. ಶ್ರೀಪಾದರ ಸೇವಕನಾಗಿದ್ದ ಅವನು ತ್ರಿಕಾಲದಲ್ಲೂ ಭಕ್ತಿಯಿಂದ ಶ್ರೀಪಾದರಿಗೆ ನಮಸ್ಕಾರ ಮಾಡುತ್ತಿದ್ದನು. ಮನೋವಾಕ್ಕಾಯಗಳಲ್ಲಿ ಶ್ರದ್ಧೆಭಕ್ತಿ ತುಂಬಿ ಅವನು ಮಾಡುತ್ತಿದ್ದ ಸೇವೆ ಬಹಳಕಾಲದಿಂದ ನಡೆಯುತ್ತಿತ್ತು. ಕೃತಾರ್ಥರಾಗಿದ್ದರೂ, ಲೋಕಾನುಗ್ರಹಕ್ಕಾಗಿ ಶ್ರೀಪಾದರು ಪ್ರತಿದಿನವೂ ಕೃಷ್ಣಾನದಿಗೆ ಸ್ನಾನಕ್ಕೆ ಹೋಗುತ್ತಿದ್ದರು. ಒಂದು ದಿನ ಶ್ರೀಪಾದರು ಸ್ನಾನಮಾಡುತ್ತಿದ್ದಾಗ ಆ ರಜಕನು ಅಲ್ಲಿ ಬಟ್ಟೆ ಒಗೆಯುತ್ತಿದ್ದನು. ಅವನಲ್ಲಿ ಪ್ರಸನ್ನರಾಗಿದ್ದ ಶ್ರೀಪಾದರು, "ಅಯ್ಯಾ ರಜಕ, ಪ್ರತಿದಿನವೂ ನೀನು ನನಗೆ ನಮಸ್ಕಾರ ಮಾಡಿಕೊಳ್ಳುತ್ತಿದ್ದೀಯೆ. ಅದರಿಂದ ನನಗೆ ಸಂತೋಷವಾಗಿದೆ. ಅದರಿಂದ ನಿನಗೆ ರಾಜ್ಯವನ್ನು ದಯಪಾಲಿಸುತ್ತಿದ್ದೇನೆ" ಎಂದರು. ಅವರ ಮಾತಿನಿಂದ ಚಕಿತನಾದ ಆ ರಜಕ, ಮುಸಿನಕ್ಕು, ಕೈಜೋಡಿಸಿ, "ಸ್ವಾಮಿ, ನೀವು ಈಶ್ವರನು. ಸತ್ಸಂಕಲ್ಪರು" ಎಂದು ಉತ್ತರ ಕೊಟ್ಟ. ಅಂದಿನಿಂದ ಅವನಿಗೆ ಸಂಸಾರ ಚಿಂತೆ ಬಿಟ್ಟುಹೋಗಿ ಶ್ರೀಪಾದರ ಸೇವೆಯಲ್ಲೇ ನಿರತನಾಗಿ ಹೋದ. ಪ್ರತಿದಿನವೂ ಗುರುವಿನ ಗುಡಿಸಿಲಿನ ಮುಂದೆ ಗುಡಿಸಿ, ನೀರು ಚೆಲ್ಲಿ, ಶುದ್ಧಿಮಾಡುತ್ತಿದ್ದನು. ಹೀಗೇ ಬಹಳಕಾಲ ಕಳೆಯಿತು.

ಒಂದು ಸಲ ವಸಂತ ಋತು, ವೈಶಾಖಮಾಸದಲ್ಲಿ, ಒಬ್ಬ ಯವನರಾಜ, ಸರ್ವಾಭರಣಾಲಂಕೃತನಾಗಿ, ತನ್ನ ಸಖೀಜನರೊಡನೆ, ನದಿಗೆ ಜಲಕ್ರೀಡೆಗೆಂದು ಬಂದನು. ಆ ರಾಜ, ನೌಕೆಯೊಂದರಲ್ಲಿ ತನ್ನ ಸ್ತ್ರೀಜನರೊಡನೆ, ವಾದ್ಯವೃಂದಗಳು ಸುಶ್ರಾವ್ಯವಾಗಿ ನುಡಿಯುತ್ತಿರಲು, ಸಂತೋಷದಿಂದ, ಉನ್ಮತ್ತನಾಗಿ ವಿಹರಿಸುತ್ತಿದ್ದನು. ಅವನನ್ನು ರಕ್ಷಿಸಲು ನದಿಯ ಎರಡೂ ತೀರಗಳಲ್ಲಿ ಅವನ ಸೈನಿಕರು ಕಾವಲು ಕಾಯುತ್ತಿದ್ದರು. ಅದನ್ನು ಕಂಡ ರಜಕ, ತಾನು ಸತತವಾಗಿ ಮಾಡಿಕೊಳ್ಳುತ್ತಿದ್ದ ಶ್ರೀಗುರುವಿನ ನಾಮಜಪವನ್ನೂ ಮರೆತು, ಆ ವಿಹಾರ ಲೀಲೆಯನ್ನು ನೋಡುತ್ತಾ ನಿಂತನು. "ಈ ಸಂಸಾರದಲ್ಲಿ ಜನಿಸಿ ಇಂತಹ ವೈಭವ ಸುಖಗಳನ್ನು ಪಡೆಯದಿದ್ದರೆ ಜನ್ಮವೇ ವ್ಯರ್ಥ. ಅಲಂಕಾರ ಶೋಭಿತರಾದ ಆ ಸ್ತ್ರೀಜನರು ಅವನ ಸೇವೆಯನ್ನು ಮಾಡುತ್ತಿದ್ದಾರೆ. ಆಹಾ! ಆ ರಾಜ ಅದೆಂತಹ ಪುಣ್ಯ ಮಾಡಿದ್ದನೋ! ಅವನು ಗುರುಸೇವೆಯನ್ನು ಹೇಗೆ ಮಾಡಿದ್ದನೋ! ಇಂತಹ ಮಹಾದೆಶೆ ಅವನಿಗೆ ಹೇಗೆ ಉಂಟಾಯಿತೋ!" ಎಂದು ಮನಸ್ಸಿನಲ್ಲಿ ಚಿಂತಿಸುತ್ತಾ, ಹಿಂದಿರುಗಿ ಬಂದು ತನ್ನ ಗುರುವನ್ನು ಕಂಡು ದಂಡ ಪ್ರಣಾಮ ಮಾಡಿ ಅವರೆದುರಿಗೆ ನಿಂತನು. ಅವನ ಮನಸ್ಸಿನ ಆಸೆಯನ್ನರಿತ ಶ್ರೀಪಾದರು, ಅವನನ್ನು ಕರೆದು,"ಏನು ಯೋಚನೆಮಾಡುತ್ತಿದ್ದೀಯೆ?" ಎಂದು ಕೇಳಿದರು. ಅದಕ್ಕೆ ಅವನು, "ಸ್ವಾಮಿ, ಆ ರಾಜನ ವೈಭವವನ್ನು ನೋಡಿದೆ. ಆ ರಾಜ ಶ್ರೀಗುರುವಿಗೆ ದಾಸನಾಗಿ, ಗುರುಸೇವೆಯನ್ನು ಏಕಾಗ್ರಚಿತ್ತನಾಗಿ ಮಾಡಿ ಇಂತಹ ಮಹಾದೆಶೆಯನ್ನು ಪಡೆದಿದ್ದಾನೆ ಎಂದು ಮನಸ್ಸಿಗೆ ತೋಚಿ, ಬಹಳ ಸಂತೋಷವಾಯಿತು" ಎಂದು ವಿನಮ್ರನಾಗಿ ಹೇಳಿದನು. ಮತ್ತೆ ಅವನೇ, "ಹೇ ಗುರುವರ, ಅವಿದ್ಯಾವಶದಿಂದ ಇಂತಹ ವಾಸನೆಗಳು ಹುಟ್ಟುತ್ತವೆ. ಈ ಇಂದ್ರಿಯ ಸುಖಗಳು ನನಗೆ ಬೇಕಾಗಿಲ್ಲ. ನಿಮ್ಮ ಪಾದಗಳಲ್ಲಿಯೇ ನನಗೆ ಹೆಚ್ಚಿನ ಸುಖವಿದೆ ಎಂದು ನನಗೆ ಈಗ ತೋರುತ್ತಿದೆ" ಎಂದು ಹೇಳಿದನು. ಅದಕ್ಕೆ ಶ್ರೀಗುರುವು, "ಜನ್ಮಾರಭ್ಯ ನೀನು ಕಷ್ಟದಲ್ಲೇ ಜೀವಿಸುತ್ತಿದ್ದೀಯೆ. ಅದರಿಂದಲೇ ನಿನಗೆ ರಾಜ್ಯಭೋಗದಲ್ಲಿ ಆಸೆಯುಂಟಾಗಿದೆ. ಇಂದ್ರಿಯಗಳು ತೃಪ್ತಿಹೊಂದದೆ ಮನಸ್ಸು ನಿರ್ಮಲವಾಗುವುದಿಲ್ಲ. ವಾಸನೆಗಳು ತೀರದಿದ್ದರೆ ಜನ್ಮಾಂತರಗಳಲ್ಲಿ ಅವು ನಿನ್ನನ್ನು ಕಷ್ಟಕ್ಕೀಡು ಮಾಡಬಲ್ಲವು" ಎಂದು ಶ್ರೀಪಾದರು ಹೇಳಿದರು. ಅದಕ್ಕೆ ಆ ರಜಕನು ಕೈಜೋಡಿಸಿ, "ಸ್ವಾಮಿ, ದಯಾನಿಧಿ, ದಯೆತೋರಿಸಿ. ನನ್ನನ್ನು ಉಪೇಕ್ಷಿಸಬೇಡಿ" ಎಂದು ಕೇಳಿಕೊಂಡನು. "ನಿನಗೆ ರಾಜ್ಯಭೋಗಗಳಲ್ಲಿ ಕಾಂಕ್ಷೆಯುಂಟಾಗಿದೆ. ಆದ್ದರಿಂದ ಇಂದ್ರಿಯ ತೃಪ್ತಿಗೋಸ್ಕರ ತ್ವರೆಯಲ್ಲೇ ನೀನು ಮ್ಲೇಚ್ಛನಾಗಿ ಜನಿಸಿ ರಾಜನಾಗುತ್ತೀಯೆ. ಆದರೆ, ಅಯ್ಯಾ ರಜಕ, ನಿನ್ನ ಆಸೆಯನ್ನು ಈ ಜನ್ಮದಲ್ಲೇ ತೀರಿಸಿಕೊಳ್ಳಲು ಇಷ್ಟಪಡುತ್ತೀಯೋ, ಇಲ್ಲ ಮತ್ತೊಂದು ಜನ್ಮದಲ್ಲಿ ಇದನ್ನು ಅನುಭವಿಸುತ್ತೀಯೋ ಹೇಳು" ಎಂದು ಕೇಳಿದರು. ಅದಕ್ಕೆ ರಜಕನು, "ಗುರುವೇ, ಈಗ ನಾನು ವೃದ್ಧನಾದೆ. ಶರೀರವು ಶಿಥಿಲವಾಗಿದೆ. ಇಂತಹ ಭೊಗಗಳನ್ನು ಈಗ ಅನುಭವಿಸಲಾರೆ. ಇನ್ನೊಂದು ಜನ್ಮದಲ್ಲಿ ಅವುಗಳನ್ನು ಅನುಭವಿಸುತ್ತೇನೆ" ಎಂದು ಬಿನ್ನವಿಸಿಕೊಂಡನು. ಅದಕ್ಕೆ ಶ್ರೀಪಾದರು, "ಹಾಗಾದರೆ ಶೀಘ್ರದಲ್ಲೇ ಮತ್ತೊಂದು ಜನ್ಮವೆತ್ತಿ ನಿಷ್ಕಂಟಕವಾಗಿ ರಾಜ್ಯಸುಖಗಳನ್ನು ಅನುಭವಿಸು" ಎಂದು ಹೇಳಿದರು. ಅದಕ್ಕೆ ಆ ರಜಕನು, "ಸ್ವಾಮಿ, ನಿಮ್ಮ ಚರಣ ವಿಯೋಗ ಸಹಿಸಲಸಾಧ್ಯವಾದದ್ದು. ನಿಮ್ಮ ಪುನರ್ದರ್ಶನವಾಗುವಂತೆ ಅನುಗ್ರಹಿಸಿ" ಎಂದು ಬೇಡಿಕೊಂಡನು. ಅದಕ್ಕೆ ಶ್ರೀಪಾದರು, "ನೀನು ವೈಡೂರ್ಯನಗರದಲ್ಲಿ ರಾಜನಾಗಿ ಜನಿಸುತ್ತೀಯೆ. ಅಂತ್ಯಕಾಲದಲ್ಲಿ ನಿನಗೆ ಮತ್ತೆ ನಮ್ಮ ದರ್ಶನವಾಗಿ, ನಿನಗೆ ಜ್ಞಾನೋದಯವಾಗುತ್ತದೆ. ಚಿಂತಿಸಬೇಡ. ನಾನು ಆಗ ನೃಸಿಂಹ ಸರಸ್ವತಿ ಎಂಬ ಹೆಸರಿನಿಂದ ಯತಿಯಾಗಿ ಅವತರಿಸಿರುತ್ತೇನೆ" ಎಂದು ಹೇಳಿದರು. ಗುರುವಿನ ಅನುಗ್ರಹ ಪಡೆದು ಹೊರಟ ರಜಕನು ಸ್ವಲ್ಪ ದೂರಹೋಗುವುದರಲ್ಲಿಯೇ ಕೆಳಗೆ ಬಿದ್ದು ಮರಣ ಹೊಂದಿದನು.

ನಾಮಧಾರಕ, ಆ ರಜಕನ ಕಥೆ ವಿಚಿತ್ರವಾದದ್ದು. ಮುಂದೆ ಪ್ರಸಂಗವಶಾತ್ ಆ ಕಥೆಯನ್ನು ವಿಸ್ತರಿಸಿ ಹೇಳುತ್ತೇನೆ. ಶ್ರಿಗುರುವು ಕುರುವರಪುರದಲ್ಲಿ ಶ್ರೀಪಾದ ಮಹಿಮೆಯನ್ನು ಲೋಕದಲ್ಲಿ ಪ್ರಸರಿಸಲೋ ಎಂಬಂತೆ ಸ್ವಲ್ಪಕಾಲ ಪ್ರತ್ಯಕ್ಷವಾಗಿ ನೆಲೆಸಿದ್ದರು. ಅವರ ಎಲ್ಲ ಮಹಿಮೆಗಳನ್ನೂ ಹೇಳಬೇಕೆಂದರೆ ಗ್ರಂಥ ಬಹಳ ದೊಡ್ಡದಾಗುತ್ತದೆ. ಅದರಿಂದ ಶ್ರೀಪಾದರ ಅವತಾರವನ್ನು ಸಂಕ್ಷೇಪವಾಗಿ ಹೇಳುತ್ತೇನೆ. ಅಮೃತದೃಷ್ಟಿಯ ಆ ಸ್ವಾಮಿ ನೆಲೆಯಾಗಿದ್ದ ಆ ಸ್ಥಾನದ ಮಹಿಮೆ ಯಾರು ತಾನೇ ವರ್ಣಿಸಬಲ್ಲರು? ಅಲ್ಲಿ ಅವರು ನೆಲಸಿದ್ದರು ಎನ್ನುವುದರಿಂದಲೇ, ಅವರ ಭಕ್ತವಾತ್ಸಲ್ಯಕ್ಕೆ ಗುರುತಾಗಿ, ಈಗಲೂ ಜನರ ಸರ್ವ ಕಾಮನೆಗಳೂ ತ್ವರೆಯಾಗಿ ನೆರವೇರುತ್ತವೆ. 

ಶ್ರೀಪಾದರು ಕುರುವರಪುರದಲ್ಲಿ ಸ್ವಲ್ಪಕಾಲವಿದ್ದು, ಲೋಕಾನುಗ್ರಹದೃಷ್ಟಿಯಿಂದ ಇನ್ನೊಂದೆಡೆಯಲ್ಲಿ ಅವತರಿಸಲು ನಿರ್ಧರಿಸಿ, ಆಶ್ವಯುಜ, ಕೃಷ್ಣ ದ್ವಾದಶಿಯಂದು, ಹಸ್ತಾನಕ್ಷತ್ರದಲ್ಲಿ ಕೃಷ್ಣಾನದಿಯಲ್ಲಿ ಮುಳುಗಿ ಅಂತರ್ಧಾನರಾದರು. ಅವರು ಈಗ ಅಲ್ಲಿ ಪ್ರತ್ಯಕ್ಷವಾಗಿ ಇಲ್ಲದಿದ್ದರೂ, ಇಂದಿಗೂ ಭಕ್ತರ ವಾಂಚಿತಾರ್ಥಗಳನ್ನು ಪೂರಯಿಸುತ್ತಾ ಅದೃಶ್ಯರಾಗಿ ನೆಲಸಿದ್ದಾರೆ. ಅವರು ಅಲ್ಲಿ ಹಾಗೆ ಅಪ್ರತ್ಯಕ್ಷವಾಗಿ ಇದ್ದಾರೆ ಎಂಬುದಕ್ಕೆ ನಿದರ್ಶನಗಳು ಬಹಳವಾಗಿವೆ. ಭಕ್ತಿಯಿಂದ ಅಲ್ಲಿಗೆ ಹೋಗಿ ಅವರನ್ನು ಧ್ಯಾನಿಸಿದವರಿಗೆ ಅವರು ತಪ್ಪದೇ ಪ್ರತ್ಯಕ್ಷರಾಗುತ್ತಾರೆ. ಅದರಿಂದಲೇ ಕುರುವರಪುರ ಭೂತಲದಲ್ಲಿ ಪ್ರಸಿದ್ಧಿಯಾಗಿದೆ. 

ಇಲ್ಲಿಗೆ ಒಂಭತ್ತನೆಯ ಅಧ್ಯಾಯ ಮುಗಿಯಿತು. 



Saturday, February 9, 2013

||ಶ್ರೀ ಗುರು ಚರಿತ್ರೆ - ಎಂಟನೆಯ ಅಧ್ಯಾಯ||

ಸಿದ್ಧರು ಹೇಳಿದ ಗೋಕರ್ಣ ಕ್ಷೇತ್ರದ ಮಹಿಮೆಯನ್ನು ಕೇಳಿದ ನಾಮಧಾರಕ, "ಸ್ವಾಮಿ, ಶ್ರೀಪಾದರು ಗೋಕರ್ಣದಲ್ಲಿ ಎಷ್ಟುಕಾಲ ಇದ್ದರು? ಅವರ ಚರಿತ್ರೆಯನ್ನು ಕೇಳುವುದು ಆನಂದಕರವಾಗಿದೆ." ಎಂದು ಕೇಳಿದನು. ಆಗ ಸಿದ್ಧರು ಮತ್ತೆ ಹೇಳಿದರು.
ಗೋಕರ್ಣ ಕ್ಷೇತ್ರದಲ್ಲಿ ಶ್ರೀಪಾದ ಶ್ರೀವಲ್ಲಭರು ಮೂರು ವರ್ಷಗಳಿದ್ದರು. ಮತ್ತೆ ಲೋಕಾನುಗ್ರಹಕ್ಕಾಗಿ ಅವರು ಅಲ್ಲಿಂದ ಹೊರಟು ಶ್ರೀಶೈಲಕ್ಷೇತ್ರವನ್ನು ಸೇರಿದರು. ಶ್ರೀಪಾದರ ಚರಣ ದರ್ಶನದಿಂದ ಜನಸಾಮಾನ್ಯರಿಗೆ ಸರ್ವತೀರ್ಥ ದರ್ಶನ ಫಲ ದೊರೆಯುತ್ತದೆ. "ಚರಣಂ ಪವಿತ್ರಂ ವಿತತಂ" ಎಂದು ಶೃತಿ ಅವರ ಚರಣ ಮಹಿಮೆಯನ್ನು ವಿವರಿಸುತ್ತದೆ. ಅವರ ಪಾದಗಳಲ್ಲಿ ಸರ್ವ ತೀರ್ಥಗಳೂ ನೆಲೆಸಿವೆ. ಮಹಾತ್ಮರು ಪರ್ಯಟನೆಮಾಡುವುದು ಲೋಕಾನುಗ್ರಹಕ್ಕಾಗಿಯೇ!

ಶ್ರೀಶೈಲ ಪರ್ವತವನ್ನು ಸೇರಿದ ಶ್ರೀಪಾದರು, ಅಲ್ಲಿ ನಾಲ್ಕು ತಿಂಗಳಿದ್ದು, ಭಕ್ತರಿಗೆ ತಮ್ಮ ದರ್ಶನಭಾಗ್ಯವನ್ನೊದಗಿಸಿ, ನಿವೃತ್ತಿಸಂಗಮದಲ್ಲಿ ಸ್ನಾನವಾಚರಿಸಿ ಕುರುಪುರವನ್ನು ಸೇರಿದರು. ಅಲ್ಲಿ ಕೃಷ್ಣಾನದಿ ವೇಣಿನದಿಯೊಡನೆ ಕಲೆತು ಹರಿಯುತ್ತದೆ. ಭೂತಲದಲ್ಲಿ ಅದರಂತಹ ಇನ್ನೊಂದು ಮಹಿಮಾನ್ವಿತ ಪ್ರದೇಶ ದುರ್ಲಭ. ಆ ಮಹಿಮೆಯನ್ನು ವರ್ಣಿಸಬೇಕೆಂದರೆ ಗ್ರಂಥಬಾಹುಳ್ಯವಾಗುತ್ತದೆ. ಅದರಿಂದ ಸ್ವಲ್ಪವಾಗಿ ತಿಳಿಸುತ್ತೇನೆ. ಭೂಮಿಯಮೇಲೆ ಶ್ರೀಪಾದಶ್ರೀವಲ್ಲಭರಿಗೆ ಅಧಿಷ್ಠಾನ ಸ್ಥಾನವಾಗಿ ಖ್ಯಾತಿಗೊಂಡ ’ಕುರುಗಡ್ಡ’ ಎನ್ನುವ ಪ್ರದೇಶ, ಈಗಲೂ ಇದೆ. ಅಲ್ಲಿ ಶ್ರೀಪಾದರನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿ ಅರ್ಚಿಸಿ ಭಜಿಸಿದವರು ಪುತ್ರಪೌತ್ರಾದಿಯಾದ ಸಕಲ ಸಂಪತ್ತುಗಳನ್ನು ಪಡೆಯುವರು. ಶ್ರೀಪಾದರ ಮಹಿಮೆ ಅಶೇಷವಾದದ್ದರಿಂದ ಅದನ್ನು ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ. ಸಂಕ್ಷಿಪ್ತವಾಗಿ ತಿಳಿಸುತ್ತೇನೆ. ಶ್ರೀಪಾದಶ್ರೀವಲ್ಲಭರು ಕುರುಪುರದಲ್ಲಿ ರಹಸ್ಯವಾಗಿದ್ದುಕೊಂಡು ತಮ್ಮ ಎರಡನೆಯ ಅವತಾರವೆತ್ತಲು ಉದ್ಯುಕ್ತರಾದರು.

ಕುರುಗಡ್ದ ಗ್ರಾಮದಲ್ಲಿ ವೇದಶಾಸ್ತ್ರಪಾರಂಗತನಾದ ಬ್ರಾಹ್ಮಣನೊಬ್ಬನಿದ್ದನು. ಅವನ ಹೆಂಡತಿ ಅಂಬಿಕ. ಪತಿಯೇ ದೈವವೆಂದು ತಿಳಿದ, ಆ ಸದಾಚಾರ ತತ್ಪರಳಾದ ಪತಿವ್ರತೆ, ಸುಶೀಲೆ. ಪತಿಸೇವಾಪರಾಯಣಳು. ಆಕೆಗೆ ಅನೇಕ ಮಕ್ಕಳಾಗಿ ಎಲ್ಲರೂ ಅತ್ಯಲ್ಪ ವಯಸ್ಸಿನಲ್ಲೇ ಮರಣಿಸಿದರು. ಆಕೆ ಅನೇಕ ತೀರ್ಥಗಳನ್ನು ದರ್ಶಿಸುತ್ತಾ, ಅಲ್ಲಿನ ದೇವರುಗಳ ಸೇವೆಮಾಡುತ್ತಾ, ಕೊನೆಗೆ ದೈವ ಕೃಪೆಯಿಂದ ಒಬ್ಬ ಮಗನನ್ನು ಪಡೆದಳು. ದುರದೃಷ್ಟದಿಂದ ಅವನು ಮಂದಮತಿಯಾದನು. ಅನೇಕ ಮಕ್ಕಳನ್ನು ಹೆತ್ತು, ಎಲ್ಲರನ್ನೂ ಕಳೆದುಕೊಂಡು, ಉಳಿದವನು ಇವನೊಬ್ಬನೇ ಎಂಬ ಅತಿಶಯ ಪ್ರೀತಿಯಿಂದ ಅವನನ್ನು ಬೆಳೆಸಿದಳು. ಅವನು ಬೆಳೆದು ಉಪನಯನದ ವಯಸ್ಸು ಬಂತು. ತಂದೆ ಅವನಿಗೆ ಉಪನಯನ ಮಾಡಿದರೂ, ಮೂಢನಾಗಿದ್ದುದರಿಂದ ಅವನಿಗೆ ಉಪದೇಶಮಾಡಿದ ಯಾವ ಮಂತ್ರವೂ ಕೈಗೂಡಲಿಲ್ಲ. ಅದರಿಂದ ಚಿಂತಾಕುಲನಾಗಿ, ಶ್ರೋತ್ರೀಯನಾದ ಅವನ ತಂದೆ ಬಹು ದುಃಖಿತನಾದನು. "ದೈವಾರಾಧನೆಯಿಂದ ಹುಟ್ಟಿದ ಇವನು ಹೀಗೆ ಮತಿಹೀನನಾಗಿ ಕುಲನಾಶಕನಾದನು. ಹಿಂದೆ ಮಾಡಿದ ಕರ್ಮಫಲವು ತಪ್ಪುವುದಿಲ್ಲವಲ್ಲ!" ಎಂದು ಯೋಚಿಸುತ್ತಾ, ಆ ಬ್ರಾಹ್ಮಣ ತನ್ನ ಮಗನನ್ನು ಹೊಡೆಯುತ್ತಿದ್ದನು. ಹಾಗೆ ಹೊಡೆಯುತ್ತಿದ್ದ ಗಂಡನನ್ನು, ದುಃಖಿತಳಾದ ಅಂಬಿಕ ಒಂದುಸಲ ತಡೆದು, "ಸ್ವಾಮಿ, ಅವನನ್ನು ಹೊಡೆಯಬೇಡ. ದಯೆಯಿಂದ ಕಾಣು. ಮಹಾಕಷ್ಟಗಳನ್ನನುಭವಿಸಿದ ನಮಗೆ ಕೊನೆಗೆ ಉಳಿದವನು ಈ ಮಗನೊಬ್ಬನೇ! ಅವನಿಗೆ ವಿದ್ಯೆ ಬರುವುದಿಲ್ಲ. ಹುಟ್ಟಿಸಿದ ಆ ದೈವವೇ ಇವನನ್ನು ಕಾಪಾಡುವುದು. ಅವನ ಹಿಂದಿನ ಕರ್ಮಗಳನ್ನು ನಾವು ಹೇಗೆ ತಪ್ಪಿಸಬಲ್ಲೆವು? ಇಷ್ಟಾದರೂ ನೀನು ಅವನನ್ನು ಹೊಡೆದರೆ ನಾನು ನಿನ್ನ ಮುಂದೆಯೇ ಪ್ರಾಣಕಳೆದುಕೊಳ್ಳುತ್ತೇನೆ" ಎಂದು ನಿಶ್ಚಿತವಾಗಿ ಹೇಳಿದಳು. ಅವಳ ಮಾತುಗಳನ್ನು ಕೇಳಿದ ಆ ಬ್ರಾಹ್ಮಣ, ’ನನ್ನ ಅದೃಷ್ಟವೇ ಹೀನವಾದರೆ ನಾನಾದರೂ ಮಾಡುವುದೇನು? ಆದದ್ದಾಗಲಿ’ ಎಂದು ಉದಾಸೀನನಾಗಿ ಸುಮ್ಮನಾದನು.

ಸ್ವಲ್ಪಕಾಲದಲ್ಲೇ ಆ ಬ್ರಾಹ್ಮಣ, ಆ ದುಃಖದಿಂದಲೇ ಮರಣಿಸಿದನು. ವಿಧವೆಯಾದ ಅಂಬಿಕ ತನ್ನ ಮೂರ್ಖ ಮಗನೊಡನೆ ದುಃಖದಿಂದ ಜೀವಿಸುತ್ತಿದ್ದಳು. ವಿವಾಹವಯಸ್ಕನಾದರೂ ಆ ಮತಿಹೀನನಿಗೆ ಯಾರೂ ಹೆಣ್ಣು ಕೊಡದೆ, "ತಾಯಿ ತಂದ ಭಿಕ್ಷೆ ತಿಂದು ಬದುಕುತ್ತಿದ್ದಾನೆ" ಎಂದು ಹೀಯಾಳಿಸುತ್ತಿದ್ದರು. ಕೆಲವರು ಅವನನ್ನು, " ಮೂರ್ಖ ಶಿಖಾಮಣಿ, ತಲೆಯಮೇಲೆ ಮಡಕೆಯನ್ನಿಟ್ಟುಕೊಂಡು ಮನೆಗಳಿಗೆ ನದಿಯಿಂದ ನೀರು ತಂದುಹಾಕು. ಕಲ್ಲಿನಂತೆ ನಿನ್ನ ಜನ್ಮವೂ ವ್ಯರ್ಥ. ಕುಲಕಂಟಕ. ನಿನ್ನ ಜನ್ಮದಿಂದ ಕುಲಕ್ಕೇ ಕಲಂಕ ತಂದೆ. ನಿನ್ನ ತಂದೆ ಶಾಸ್ತ್ರಜ್ಞನಾಗಿ, ಸದಾಚಾರ ಪ್ರವೃತ್ತನಾಗಿ ಪ್ರಸಿದ್ಧಿಯಾಗಿದ್ದವನು. ನಿನ್ನ ಹುಟ್ಟಿನಿಂದ ಅವನು ಕಲಂಕಿತನಾದನು. ನೀನು ನಿನ್ನ ತಾಯಿ ಭಿಕ್ಷೆ ಬೇಡಿ ತಂದ ಅನ್ನದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೀಯೆ. ನಾಚಿಕೆಯಾಗುವುದಿಲ್ಲವೇ? ನಿನ್ನಿಂದಾಗಿ ನಿನ್ನ ಪಿತೃದೇವತೆಗಳೂ ಅಧೋಗತಿಗೆ ಹೋಗಿದ್ದಾರೆ. ಪಶುಪ್ರಾಯನಾದ ನಿನಗೆ ಈ ವ್ಯರ್ಥಜನ್ಮವೇತಕ್ಕೆ? ಹೋಗಿ ನದಿಯಲ್ಲಿ ಮುಳುಗಿ ಸಾಯಬಾರದೇ? " ಎಂದು ಅನೇಕ ರೀತಿಗಳಲ್ಲಿ ಅವನನ್ನು ನಿಂದಿಸುತ್ತಿದ್ದರು.

ಜನರ ಮಾತುಗಳನ್ನು ಕೇಳಿದ ಅ ಹುಡುಗ ಬಹು ದುಃಖಪಟ್ಟು, "ಅಮ್ಮ, ಎಲ್ಲರೂ ನನ್ನನ್ನು ಮೂರ್ಖ, ಮೂಢ ಎಂದು ಹೀಯಾಳಿಸುತ್ತಿದ್ದಾರೆ. ಇನ್ನು ನಾನು ಅಂತಹ ಮಾತುಗಳನ್ನು ಕೇಳಲಾರೆ. ನನ್ನನ್ನು ಪೋಷಿಸಲು ನೀನು ಕಷ್ಟಪಡುತ್ತಿದ್ದೀಯೆ. ಇಂತಹ ಈ ಜನ್ಮದಿಂದ ಪ್ರಯೋಜನವಾದರೂ ಏನು? ಅದರಿಂದ ನಾನು ಪ್ರಾಣ ಬಿಡಲು ನಿರ್ಧರಿಸಿ ಹೋಗುತ್ತಿದ್ದೇನೆ." ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿದ ಅಂಬಿಕ, ಅತಿದುಃಖಿತಳಾಗಿ, ಕಣ್ಣೀರು ಕೋಡಿ ಹರಿಸುತ್ತಾ, ಅವನ ಜೊತೆಯಲ್ಲಿಯೇ ತಾನೂ ಕೃಷ್ಣಾ ನದಿಯಲ್ಲಿ ಮುಳುಗಿ ಸಾಯಲು ಹೊರಟಳು. ಅವರು ನದಿಯ ತೀರಕ್ಕೆ ಬಂದಾಗ, ಅಲ್ಲಿಗೆ ಸರ್ವಾಪತ್ತುಗಳನ್ನು ಹರಿಸುವ, ಸ್ನಾನಕ್ಕೆಂದು ಬಂದ, ಶ್ರೀಪಾದ ಶ್ರೀವಲ್ಲಭರನ್ನು ಕಂಡರು. ಆ ತಾಯಿ, ಮಗ ಇಬ್ಬರೂ ಶ್ರೀಪಾದರನ್ನು ಕಂಡು ಅವರ ಚರಣಗಳಿಗೆ ನಮಸ್ಕರಿಸಿ, "ನಾವು ಆತ್ಮಹತ್ಯೆ ಮಾಡಿಕೊಳ್ಳಲು ಇಲ್ಲಿಗೆ ಬಂದಿದ್ದೇವೆ. ನಮಗೆ ನಿಮ್ಮ ಅನುಜ್ಞೆ ಕೊಡಿ. ಆತ್ಮಹತ್ಯೆ ಎನ್ನುವುದು ಮಹಾಪಾಪವಾದದ್ದು. ನಿಮ್ಮ ಅಪ್ಪಣೆ ಬೇಡುತ್ತಿದ್ದೇವೆ. ಅದರಿಂದ ನಮಗೆ ಸದ್ಗತಿಯಾಗುವುದು" ಎಂದು ಬೇಡಿಕೊಂಡರು.

ದಯಾರ್ದ್ರಹೃದಯರಾದ ಶ್ರೀಪಾದರು, ಅವರ ಪ್ರಾರ್ಥನೆಯನ್ನು ಆಲಿಸಿ, " ನಿಮಗೆ ಪ್ರಾಣತ್ಯಾಗ ಮಾಡುವಂತಹ ಆಪತ್ತೇನು ಬಂದಿದೆ?" ಎಂದು ಕೇಳಲು, ಆ ಬ್ರಾಹ್ಮಣ ಸ್ತ್ರೀ, ತಮಗೆ ಉಂಟಾಗಿರುವ ದುಃಖವನ್ನೆಲ್ಲಾ ಅವರೊಡನೆ ಹೇಳಿಕೊಂಡು, "ಹೇ ಭಕ್ತವತ್ಸಲ, ನಮ್ಮನ್ನು ಈ ಕಷ್ಟದಿಂದ ಪಾರುಮಾಡು. ಅನೇಕ ತೀರ್ಥಯಾತ್ರೆಗಳನ್ನೂ, ಉಪವಾಸ ವ್ರತಗಳನ್ನೂ, ದೇವತಾರ್ಚನೆಗಳನ್ನೂ ಮಾಡಿದ ಮೇಲೆ ಹುಟ್ಟಿದ ಈ ಮಗನೊಬ್ಬನು ಬದುಕುಳಿದ. ಆದರೆ ಇವನು ಮಂದಮತಿಯಾಗಿ ಜನರ ನಿಂದೆಗೆ ಗುರಿಯಾಗಿದ್ದಾನೆ. ನನ್ನ ಗಂಡ ವೇದಶಾಸ್ತ್ರಪಾರಂಗತನಾದ ಬ್ರಾಹ್ಮಣೋತ್ತಮನಾಗಿದ್ದವನು. ಆದರೆ ನಮಗೆ ಇಂತಹ ಮೂರ್ಖ ಮಗನಾಗಿ ಹುಟ್ಟಿದ. ಹೇ ಸ್ವಾಮಿ, ಇಂತಹ ಮಗ ಜನ್ಮಜನ್ಮಾಂತರಗಳಲ್ಲೂ ಬೇಡ. ಹಾಗಾಗುವಂತೆ ಏನಾದರೂ ಉಪಾಯವನ್ನು ಸೂಚಿಸು. ಹೇ ದಯಾಸಮುದ್ರ. ದೈನ್ಯಹರ. ನಿಮ್ಮ ಚರಣಗಳಲ್ಲಿ ಬಿದ್ದಿದ್ದೇನೆ. ನನ್ನನ್ನು ಅನುಗ್ರಹಿಸು. ನನ್ನ ಸೌಭಾಗ್ಯದಿಂದಲೇ ನಿಮ್ಮ ದರ್ಶನವಾಯಿತು. ಶರಣಾಗತರನ್ನು ನಿಮ್ಮ ಚರಣಗಳೇ ರಕ್ಷಿಸುತ್ತವೆ. ಈ ಜನ್ಮದಲ್ಲಿ ಹುಟ್ಟಿ ನಾನು ಬಹು ಕಷ್ಟಗಳನ್ನು ಅನುಭವಿಸಿದೆ. ಈ ಮೂರ್ಖನಿಂದ ನನ್ನ ಕಷ್ಟಗಳು ಇನ್ನೂ ಹೆಚ್ಚಿವೆ. ಅಜಾಗಳಸ್ತನನಂತೆ ಇವನು ಇನ್ನೂ ಬದುಕಿದ್ದಾನೆ. ಇವನ ಜನ್ಮ ವ್ಯರ್ಥ. ಗುರುವೇ ನನ್ನ ಬೇಡಿಕೆಯನ್ನು ಕೇಳು. ಮುಂದಿನ ಜನ್ಮದಲ್ಲಾದರೂ ನನಗೆ ನಿನ್ನಂತಹ ಪುತ್ರ ಹುಟ್ಟುವಂತೆ ಆಶೀರ್ವದಿಸು. ಎಲ್ಲರಿಂದ ಪಾದಾಭಿವಂದನೆಗಳನ್ನು ಪಡೆಯುವಂತಹ ಪುತ್ರನಾಗಲೆಂದು ನನ್ನನ್ನು ಹರಸು" ಎಂದು ಆರ್ತಳಾಗಿ ಪ್ರಾರ್ಥಿಸುತ್ತಾ, ಶ್ರೀಪಾದರ ಚರಣಗಳಲ್ಲಿ ಬಿದ್ದಳು. "ಹೇ ಕರುಣಾಸಿಂಧು, ಮುಂದಿನ ಜನ್ಮದಲ್ಲಿ ನನಗಾಗುವ ಪುತ್ರನಿಂದ ನಮಗೆ ಜನ್ಮರಾಹಿತ್ಯವೂ, ಅವನ ಪಿತೃದೇವತೆಗಳಿಗೆ ಶಾಶ್ವತ ಸ್ವರ್ಗಲೋಕ ವಾಸವೂ, ಆಗುವಂತೆ ಅನುಗ್ರಹಿಸು" ಎಂದು ಮತ್ತೆ ಮತ್ತೆ ಬೇಡಿಕೊಂಡಳು. "ಯುವಕನಾಗಿರುವಾಗಲೇ ಅವನು ಬ್ರಹ್ಮಜ್ಞಾನಿಯಾಗಿ, ನಿಮ್ಮಂತೆ ಸರ್ವತ್ರ ಪೂಜನೀಯನಾಗುವ ಪುತ್ರನನ್ನು ಪ್ರಸಾದಿಸು" ಎಂದು ಇನ್ನೊಮ್ಮೆ ಕೇಳಿಕೊಂಡಳು. ಆ ಸ್ತ್ರೀಯ ಮಾತನ್ನು ಕೇಳಿದ ಶ್ರೀಪಾದರು, "ಈಶ್ವರಾರಾಧನೆ ಮಾಡು. ಶ್ರೀಹರಿಯಂತಹ ಪುತ್ರ ನಿನಗೆ ಜನಿಸುತ್ತಾನೆ. ಹಿಂದೆ ಗೋಪಿಕಾವ್ರತ ಮಾಡಿದ್ದರಿಂದಲೇ ಗೋಪಗೃಹದಲ್ಲಿ ಕೃಷ್ಣನು ದಯಾಕರಿಸಿದನು. ಹಾಗೆ ನೀನು ಶಿವಾರಾಧನೆ ಮಾಡುವುದರಿಂದ ನಿನಗೆ ಸುಪುತ್ರನು ಜನಿಸುತ್ತಾನೆ. ನಿನ್ನ ಮುಂದಿನ ಜನ್ಮದಲ್ಲಿ ಶಿವಪ್ರಸಾದದಿಂದ ಪ್ರಾಜ್ಞನಾದ ಪುತ್ರನಾಗುತ್ತಾನೆ" ಎಂದು ಅಭಯಕೊಟ್ಟರು.

ಶ್ರೀಪಾದರ ಆದೇಶವನ್ನು ಕೇಳಿದ ಆ ಬ್ರಾಹ್ಮಣ ಸ್ತ್ರೀ, "ಸ್ವಾಮಿ, ಗೋಪಿಕ ಯಾವ ವ್ರತವನ್ನು ಆಚರಿಸಿದಳು. ಚಂದ್ರಮೌಳಿಯನ್ನು ಹೇಗೆ ಪೂಜಿಸಿದಳು ಎಂಬುದನ್ನು ವಿವರಿಸಿ ಹೇಳಿ. ಅದರಂತೆ ನಾನು ವ್ರತಾಚರಣೆ ಮಾಡುತ್ತೇನೆ" ಎಂದು ಪ್ರಾರ್ಥಿಸಿದಳು. ಅದಕ್ಕೆ ಆ ಕೃಪಾಮೂರ್ತಿ ಶ್ರೀಪಾದರು, "ಶನಿವಾರದಂದು ಭಕ್ತಿಪುರಸ್ಸರವಾಗಿಮಾಡುತ್ತಿದ್ದ ಪೂಜೆಯನ್ನು ಗೋಪಿಕೆ ವೀಕ್ಷಿಸಿದಳು" ಎಂದು ಸ್ಕಾಂದಪುರಾಣದಲ್ಲಿ ಸ್ಪಷ್ಟವಾಗಿ ಹೇಳಿರುವ ಸಗುಣರೂಪನಾದ ಶಿವನ ಕಥೆಯನ್ನು ಅಂಬಿಕೆಗೆ ಹೇಳಿದರು. ಶ್ರೀಗುರುವಿನ ಮಾತುಗಳನ್ನು ಕೇಳಿ ಸಂತುಷ್ಟಳಾದ ಅಂಬಿಕ ಗುರುಚರಣಗಳಿಗೆ ನಮಸ್ಕರಿಸಿ, "ಹೇ ಗುರುವೇ, ರಮ್ಯವಾದ ಕಥೆಯನ್ನು ಹೇಳಿದಿರಿ. ಪ್ರದೋಷಸಮಯದಲ್ಲಿ ಈಶ್ವರಾರ್ಚನೆಯನ್ನು ನೋಡಿದ ಮಾತ್ರಕ್ಕೇ ಕೃಷ್ಣನನ್ನು ಮಗನಾಗಿ ಪಡೆದ ಗೋಪಿಯ ಜನ್ಮ ಧನ್ಯ. ಅಂತಹ ಶಿವಪೂಜಾ ವಿಶೇಷಗಳನ್ನು ತಿಳಿಸಿ" ಎಂದು ಮತ್ತೆ ಕೇಳಿಕೊಂಡಳು. ಶ್ರೀಪಾದರು ಹೇಳಿದರು. "ಅದೂ ಸ್ಕಾಂದಪುರಾಣದಲ್ಲಿರುವ ಕಥೆಯೇ! ಉಜ್ಜಯಿನಿ ಎಂಬ ಸುಂದರವಾದ ನಗರವೊಂದಿತ್ತು. ಅಲ್ಲಿ ಬಹು ಧಾರ್ಮಿಕನಾದ ಚಿತ್ರಸೇನನೆಂಬುವ ರಾಜನಿದ್ದನು. ಅವನಿಗೆ ಮಣಿಭದ್ರನೆಂಬ, ಈಶ್ವರ ಭಕ್ತಿಸಂಪನ್ನನಾದ ಮಿತ್ರನಿದ್ದನು. ಮಣಿಭದ್ರ ಈಶ್ವರ ಪೂಜಾಪರಾಯಣನು. ಶಿವನನ್ನು ಪ್ರಸನ್ನಮಾಡಿಕೊಂಡ ಅವನಿಗೆ ಈಶ್ವರ, ಚಿಂತಾಮಣಿಯೆಂಬ ರತ್ನವೊಂದನ್ನು ಕೊಟ್ಟಿದ್ದನು. ಆ ಮಣಿ, ಕೋಟಿಸೂರ್ಯಪ್ರಭೆಯಿಂದ ಮೆರೆಯುತ್ತಿತ್ತು. ಮಣಿಭದ್ರನು ಅದನ್ನು ಸದಾಕಾಲ ಧರಿಸಿರುತ್ತಿದ್ದನು. ಅ ಮಣಿಯ ತೇಜಸ್ಸು ತಗುಲಿದ ಲೋಹಗಳು ಚಿನ್ನವಾಗಿ ಪರಿವರ್ತಿತವಾಗುತ್ತಿದ್ದವು. ಆ ಮಣಿಯನ್ನು ಹಿಡಿದು ಸ್ಮರಿಸಿದ ಮಾತ್ರಕ್ಕೇ ಕೋರಿದವರಿಗೆ ಕೋರಿದ ವಸ್ತು ದೊರೆಯುತ್ತಿತ್ತು. ಆ ಮಣಿಯ ಖ್ಯಾತಿಯನ್ನು ಕೇಳಿದ ಅನೇಕ ರಾಜಮಹಾರಾಜರು ಅದನ್ನು ಪಡೆಯಬೇಕೆಂಬ ಆಸೆಯಿಂದ ಬಲಾನ್ವಿತರಾಗಿ ಉಜ್ಜಯನಿಯನ್ನು ಸುತ್ತುಗಟ್ಟಿದರು. ಒಂದು ತ್ರಯೋದಶಿ ಶನಿವಾರ ಪ್ರದೋಷದಲ್ಲಿ ರಾಜನು ಶಾಸ್ತ್ರೋಕ್ತವಾಗಿ ಶಿವಪೂಜೆಮಾಡಲು ಕುಳಿತಿದ್ದನು. ಅವನು ಪೂಜೆ ಮಾಡುತ್ತಿದ್ದ ಸಮಯದಲ್ಲಿ ಕೆಲವರು ಗೋಪಬಾಲಕರು ಅಲ್ಲಿಗೆ ಬಂದು ರಾಜನ ಪೂಜಾವಿಧಾನವನ್ನು ನೋಡಿದರು. ತಾವೂ ಲಿಂಗಪೂಜೆ ಮಾಡಬೇಕೆಂಬ ಮನಸ್ಸಿನಿಂದ, ತಮ್ಮ ತಮ್ಮ ಮನೆಗಳಿಗೆ ಹೋಗಿ ಅಲ್ಲಿ ಲಿಂಗವೊಂದನ್ನು ಮಾಡಿ, ಅದನ್ನು ಭಕ್ತಿಶ್ರದ್ಧೆಗಳಿಂದ, ತಮಗೆ ದೊರೆತ ಪತ್ರಪುಷ್ಪಗಳನ್ನು ತಂದು ಕಲ್ಪಿತೋಪಚಾರಗಳಿಂದ ಅರ್ಚಿಸಿದರು. ಅವರು ಪೂಜೆ ಮಾಡುತ್ತಿದ್ದ ಸಮಯದಲ್ಲಿ, ಗೋಪಸ್ತ್ರೀಯರು ಅಲ್ಲಿಗೆ ಬಂದು ತಮ್ಮ ಮಕ್ಕಳನ್ನು ಊಟಕ್ಕೆಂದು ಕರೆದುಕೊಂಡು ಹೋದರು. ಒಬ್ಬ ಹುಡುಗ ಮಾತ್ರ ಪೂಜೆಯಲ್ಲಿ ಬಹಳ ಆಸಕ್ತನಾಗಿ ಮನೆಗೆ ಹೋಗಲು ಇಷ್ಟಪಡಲಿಲ್ಲ. ಅವನ ತಾಯಿ ಅವನನ್ನು ಹೊಡೆಯುತ್ತಾ, "ಇದು ಊಟದ ಸಮಯ. ರಾತ್ರಿ ಕತ್ತಲಿನಲ್ಲಿ ನೀನೇನು ಮಾಡುತ್ತಿದ್ದೀಯೆ?" ಎಂದು ಕೇಳಲು, ಆ ಹುಡುಗ ಏನೂ ಉತ್ತರ ಕೊಡಲಿಲ್ಲ. ಅದರಿಂದ ಕೋಪಗೊಂಡ ಗೋಪಿಕ, ಅಲ್ಲಿ ನಡೆಯುತ್ತಿದ್ದ ಪೂಜೆಯನ್ನೆಲ್ಲಾ ಹಾಳುಮಾಡಿ ಆ ಲಿಂಗವನ್ನು ತೆಗೆದು ಬಿಸುಟು, ಮನೆಗೆ ಹೊರಟು ಹೋದಳು. ತನ್ನ ಪೂಜೆ ಹಾಳಾಗಿದ್ದಕ್ಕೆ ಬಹಳ ದುಃಖಿತನಾಗಿ, ಮನಸ್ಸಿನಲ್ಲೇ ಲಿಂಗ ಧ್ಯಾನವನ್ನು ಮಾಡುತ್ತಾ ಪ್ರಾಣ ಬಿಡಲು ಉದ್ಯುಕ್ತನಾದ ಆ ಹುಡುಗನಿಗೆ ಸದಾಶಿವನು ಪ್ರತ್ಯಕ್ಷನಾದನು.

ಆ ಪೂಜಾಸ್ಥಳವೇ ಶಿವಾಲಯವಾಯಿತು. ಅ ಲಿಂಗ ರತ್ನಮಯವಾಗಿ, ಸೂರ್ಯತೇಜಸ್ಸನ್ನು ಪಡೆದು ಪ್ರಕಾಶಿಸಿತು. ಎಚ್ಚೆತ್ತ ಬಾಲಕನನ್ನು ಪಾರ್ವತಿಪತಿಯು ಮೇಲೆತ್ತಿ, "ನಿನ್ನ ಅಭೀಷ್ಟವೇನು ಕೇಳಿಕೋ" ಎಂದನು. ಅದಕ್ಕೆ ಆ ಬಾಲಕ, "ಶಂಭೋ, ನನ್ನ ತಾಯಿ ಪೂಜೆಯನ್ನು ಹಾಳುಮಾಡಿದಳು. ಅವಳನ್ನು ಕ್ಷಮಿಸಿ ದಯೆತೋರು" ಎಂದು ಕೇಳಲು, ದಯಾಮೂರ್ತಿಯಾದ ಆ ಸಾಂಬಶಿವನು ಪ್ರೀತಿಯಿಂದ, "ಪ್ರದೋಷ ಸಮಯದಲ್ಲಿ ಅವಳು ನನ್ನ ಪೂಜೆಯನ್ನು ನೋಡಿದ್ದಾಳೆ. ಆದ್ದರಿಂದ ಅವಳು ದೇವಮಾತೆಯಾಗುತ್ತಾಳೆ. ಜನ್ಮಾಂತರದಲ್ಲಿ ಆಕೆಗೆ ವಿಷ್ಣುವು ಕುಮಾರನಾಗಿ, ಕೃಷ್ಣನಾಗಿ, ಬರುತ್ತಾನೆ" ಎಂದು ಹೇಳಿ, ಮತ್ತೆ "ಹೇ ಬಾಲಕ ನೀನು ಕೋರಿದ್ದೆಲ್ಲವೂ ನಿನಗೆ ಲಭಿಸುತ್ತದೆ. ಸರ್ವ ಸುಖಗಳನ್ನೂ ಅನುಭವಿಸುತ್ತೀಯೆ. ನಿನ್ನ ವಂಶವೆಲ್ಲವೂ ನಿನ್ನಂತೆಯೇ ಆಗುತ್ತದೆ" ಎಂದು ಆ ಬಾಲಕನಿಗೆ ವರಗಳನ್ನನುಗ್ರಹಿಸಿ ಅವನು ತನ್ನ ಚರಣಗಳಲ್ಲಿ ನಮಸ್ಕರಿಸುತ್ತಿದ್ದಂತೆಯೇ ಅಂತರ್ಧಾನನಾದನು.

ಆ ಬಾಲನು ಸ್ಥಾಪಿಸಿದ್ದ ಲಿಂಗವು ರತ್ನಮಯವಾಗಿ ಕೋಟಿಸೂರ್ಯಪ್ರಭೆಯಿಂದ ಬೆಳಗುತ್ತಿತ್ತು. ಜನರೆಲ್ಲರೂ ಅಲ್ಲಿ ಸೂರ್ಯನೇ ಉದಯಿಸಿದ್ದಾನೆ ಎಂದುಕೊಂಡರು. ಯುದ್ಧಸಿದ್ಧರಾಗಿ ಬಂದಿದ್ದ ರಾಜರೆಲ್ಲರೂ, ಸಂದೇಹಗ್ರಸ್ತರಾಗಿ, "ಇಲ್ಲಿನ ರಾಜ ಪವಿತ್ರನು. ಈ ನಗರದಲ್ಲಿ ರಾತ್ರಿವೇಳೆಯೂ ಸೂರ್ಯ ಉದಯಿಸುತ್ತಾನೆ. ಇಂತಹ ರಾಜನ ಮೇಲೆ ದ್ವೇಷದಿಂದ ಯುದ್ಧಮಾಡುವುದು ತರವಲ್ಲ. ಅವನೊಡನೆ ದ್ವೇಷ ಮಾಡಬಾರದು. ಬದಲಾಗಿ ಅವನಲ್ಲಿ ಸ್ನೇಹವಿರಬೇಕು" ಎಂದು ಯೋಚಿಸುತ್ತಾ ಅವರೆಲ್ಲರೂ ರಾಜನನ್ನು ಕಾಣಲು ಹೋಗಿ, ರಾಜನ ದರ್ಶನ ಮಾಡಲು ಬಂದೆವೆಂದು ಹೇಳಿಕಳುಹಿಸಿದರು. ಅದರಿಂದ ಸಂತೋಷಗೊಂಡ ರಾಜನು ತಾನೇ ಸ್ವತಃ ಬಂದು ಅವರೆಲ್ಲರನ್ನೂ ಒಳಕ್ಕೆ ಕರೆದೊಯ್ದನು. ಅವರು ಆ ರಾಜನನ್ನು, "ನಿಮ್ಮ ರಾಜ್ಯದಲ್ಲಿ ರಾತ್ರಿಯೂ ಸೂರ್ಯ ಹೇಗೆ ಉದಯಿಸುತ್ತಾನೆ?" ಎಂದು ಕೇಳಲಾಗಿ, ರಾಜನು ಆಶ್ಚರ್ಯಗೊಂಡು, ಅವರೊಡನೆ ರತ್ನಮಯವಾಗಿದ್ದ ಲಿಂಗವಿದ್ದ ಶಿವಾಲಯಕ್ಕೆ ಹೋದನು. ಅಲ್ಲಿದ್ದ ಹುಡುಗನಿಂದ ನಡೆದ ಕಥೆಯನ್ನೆಲ್ಲ ಕೇಳಿ, ಬಹು ಸಂತೋಷಪಟ್ಟು, ಅ ಹುಡುಗನಿಗೆ ಗೋಪಾಲಕ ಆಧಿಪತ್ಯವನ್ನೂ, ಸಂಪತ್ತನ್ನೂ ಕೊಟ್ಟರು. ನಂತರ ಅಲ್ಲಿಗೆ ಬಂದು ಸೇರಿದ್ದ ರಾಜರೆಲ್ಲರೂ ತಮ್ಮ ತಮ್ಮ ದೇಶಗಳಿಗೆ ಹಿಂತಿರುಗಿದರು. ಆ ರೀತಿಯಲ್ಲಿ ಚಿತ್ರಸೇನನಿಗೆ ಬಂದಿದ್ದ ಯುದ್ಧದ ಭಯ ನಿವಾರಣೆಯಾಯಿತು.

ಶನಿಪ್ರದೋಷ ವೇಳೆಯಲ್ಲಿ ಮಾಡಿದ ಶಿವಪೂಜಾ ಫಲವಂತಹುದು. ಶಿವಾರಾಧಕನಾದ ಆ ಬಾಲಕ ತನ್ನ ಮನೆಗೆ ಹಿಂತಿರುಗಿ, "ಪ್ರದೋಷ ಸಮಯದಲ್ಲಿ ನೀನು ಶಿವನ ಪೂಜೆಯನ್ನು ನೋಡಿದ್ದರಿಂದ ಶಿವನು ನಿನ್ನಲ್ಲಿ ಪ್ರಸನ್ನನಾದನು. ಸಂತುಷ್ಟನಾದ ಸದಾಶಿವನು, ಜನ್ಮಾಂತರದಲ್ಲಿ ನೀನು ವಿಷ್ಣುವಿಗೆ ತಾಯಿಯಾಗುತ್ತೀಯೆ, ಎಂಬ ವರವನ್ನು ನಿನಗೆ ದಯಪಾಲಿಸಿದನು. ಶಿವಪೂಜೆಗೆ ಅಡ್ಡಮಾಡಿದ ನಿನ್ನನ್ನು ಕ್ಷಮಿಸುವಂತೆ ನಾನು ಶಿವನನ್ನು ಬೇಡಿಕೊಂಡೆನು. ಆ ಪರಮೇಶ್ವರನು ನಿನ್ನನ್ನು ಕ್ಷಮಿಸಿ, ನನಗೂ ವರಗಳನ್ನು ಕೊಟ್ಟನು" ಎಂದು ತನ್ನ ತಾಯಿಗೆ ನಡೆದ ವೃತ್ತಾಂತವೆಲ್ಲವನ್ನೂ ಹೇಳಿದನು. ಈಶ್ವರನು ಪ್ರಸನ್ನನಾದರೆ ಯಾರಿಗೆ ಯಾವುದು ದುರ್ಲಭ? 

"ಅಂಬಿಕ, ನಿನ್ನ ಮನಸ್ಸಿನಲ್ಲಿ ಸತ್ಪುತ್ರನಾಗಬೇಕೆಂಬ ಆಸೆಯಿದೆ. ಆದ್ದರಿಂದ ನೀನು ಪ್ರದೋಷ ಸಮಯದಲ್ಲಿ ಶಿವನ ಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಮಾಡು. ನಿಶ್ಚಯವಾಗಿಯೂ ನಿನಗೆ ಜನ್ಮಾಂತರದಲ್ಲಿ ನನ್ನಂತಹ ಪುತ್ರನೇ ಜನಿಸುತ್ತಾನೆ" ಎಂದು ಶ್ರೀಪಾದರು ಅಂಬಿಕೆಗೆ ಅಭಯ ಕೊಟ್ಟರು. ಆದರೂ ಅವಳ ದುಃಖ ತೀರಲಿಲ್ಲವೆಂಬುದನ್ನು ಗಮನಿಸಿದ ಭಕ್ತವತ್ಸಲನಾದ ಶ್ರೀಗುರುವು, ಅವಳ ಮಗನನ್ನು ಕರೆದು, ಅವನ ತಲೆಯಮೇಲೆ ಕೈಯಿಟ್ಟು ಅವನನ್ನು ಆಶೀರ್ವದಿಸಿದರು. ತಕ್ಷಣವೇ ಆ ಹುಡುಗ ಜ್ಞಾನಿಯಾಗಿ, ಮೂರುವೇದಗಳನ್ನು ಬಲ್ಲವನಾದನು. ಅಲ್ಲಿಯವರೆಗೂ ಮತಿಹೀನನಾಗಿದ್ದ ಅವನು ಆ ಕ್ಷಣದಲ್ಲಿ ವೇದಶಾಸ್ತ್ರಪಾರಂಗತನಾಗಿ, ವೇದಪಠನ ಮಾಡುವುದನ್ನು ಕಂಡ ಆ ತಾಯಿ, ಆಶ್ಚರ್ಯಚಕಿತಳಾದಳು.

ಅದರಿಂದಲೇ ಶ್ರೀಪಾದರು ನಿಸ್ಸಂದೇಹವಾಗಿ ಈಶ್ವರನೇ! ಲೋಕ ಕಾರ್ಯಾರ್ಥವಾಗಿ ಮಾನವರೂಪದಲ್ಲಿ ಅವತರಿಸಿದ್ದಾರೆ. ತನ್ನ ಪೂರ್ವಕೃತ ಪುಣ್ಯಫಲವಾಗಿ ಅಂಬಿಕ, ಆ ಗುರುನಾಥನನ್ನು ಕಾಣಬಲ್ಲವಳಾದೆನೆಂದು ಅತ್ಯಂತ ಸಂತೋಷಪಟ್ಟವಳಾಗಿ, ಮತ್ತೆ ಮತ್ತೆ ಶ್ರೀಗುರುವಿನ ಚರಣಗಳಲ್ಲಿ ನಮಸ್ಕರಿಸುತ್ತಾ, "ಸ್ವಾಮಿ, ನೀವೇ ಶಿವ. ಪ್ರದೋಷದಲ್ಲಿ ನಿಮ್ಮನ್ನೇ ಅರ್ಚಿಸುತ್ತೇನೆ. ನಿಮ್ಮ ಮಾತು ಎಂದಿಗೂ ಸುಳ್ಳಾಗುವುದಿಲ್ಲ. ನನಗೆ ನಿಮ್ಮಂತಹ ಮಗನೇ ಹುಟ್ಟುತ್ತಾನೆ" ಎಂದು ಅವರನ್ನು ಪೂಜಿಸಿ ತನ್ನ ಊರಿಗೆ ಹಿಂತಿರುಗಿದಳು. ಅಂದಿನಿಂದ ತಪ್ಪದೇ ಅವಳು ಶಿವಪ್ರದೋಷ ಪೂಜೆ ಮಾಡಲಾರಂಭಿಸಿದಳು. ಶ್ರೀಗುರುವಿನಿಂದ ಅನುಗ್ರಹೀತನಾದ ಅವಳ ಮಗ, ವೇದಶಾಸ್ತ್ರ, ಪುರಾಣ, ಪಾರಂಗತನಾಗಿ, ವಿನಯವಂತನಾಗಿ, ಎಲ್ಲರಿಂದಲೂ, ಎಲ್ಲೆಡೆಯಲ್ಲಿಯೂ ಪೂಜೆಗೊಳ್ಳುವವನಾಗಿ, ಸ್ವಾಮಿಯ ಅನುಗ್ರಹದಿಂದ ವಿವಾಹಿತನಾಗಿ ಪುತ್ರಪೌತ್ರಾದಿಗಳಿಂದ ಕೂಡಿ, ಸ್ವಗ್ರಾಮದಲ್ಲಿ ಸಂತೋಷದಿಂದ ಬಾಳಿದನು.

ಗುರುಕೃಪೆ ಭಕ್ತಜನರಿಗೆ ಸರ್ವಾರ್ಥಗಳನ್ನು ತಂದುಕೊಡಬಲ್ಲದು. ಕೃಪಾಸಿಂಧುವಾದ ಶ್ರೀಗುರುವು ಭಕ್ತರಿಗೆ ಸದಾನಂದಕಾರಕನಾಗಿ, ಸುಖ ಸಂಪತ್ತುಗಳನ್ನು ನೀಡುವನು" ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು. 

ಇಲ್ಲಿಗೆ ಎಂಟನೆಯ ಅಧ್ಯಾಯ ಮುಗಿಯಿತು.